ಹನ್ನೆರಡನೆಯ ಸಂಧಿ

ಸೂ. ಕಾಲ ಪಾಶಾಕರುಷದಲಿ ಭೂ
ಪಾಲನಿಂದ್ರಪ್ರಸ್ಥ ನಗರಿಯ
ಬೀಳುಕೊಂಡನು ಬಂದು ಹೊಕ್ಕನು ಹಸ್ತಿನಾಪುರವ

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ರಾಯನಿತ್ತಲು
ಮೇಲು ಮುಸುಕಿನ ಹೊತ್ತ ದುಗುಡದ ಹೊಗರ ಹೊಗೆಮೊಗದ
ತಾಳಿಗೆಯ ನಿರ್ದ್ರವದ ಮತ್ಸರ
ದೇಳಿಗೆಯಲಿಕ್ಕಡಿಯ ಮನದ ನೃ
ಪಾಲ ಹೊಕ್ಕನು ನಡುವಿರುಳು ನಿಜ ರಾಜ ಮಂದಿರವ ೧

ಆರತಿಯ ಗಣಿಕೆಯರ ಸುಳಿವು
ಪ್ಪಾರತಿಯ ದಾದಿಯರ ಪಾಯವ
ಧಾರು ಸೂಳಾಯತರ ಮಂಗಳ ವಚನದೈದೆಯರ
ದೂರದಲಿ ನಿಲಿಸಿದನು ಭಂಗದ
ಭಾರಣೆಯ ಬಿಸುಸುಯ್ಲ ಸೂರೆಯ
ಸೈರಣೆಯ ಸೀವಟದ ಸಿರಿ ಮಂಚದಲಿ ಪವಡಿಸಿದ ೨

ಭಾನುಮತಿ ಬರೆ ಮುರಿದ ಮುಸುಕಿನ
ಮೌನಿ ನೂಕಿದನಿರುಳನುದಯದ
ನೂನ ಮಂಗಳ ಪಟಹ ಶಂಖಧ್ವನಿಯ ಮಾಣಿಸಿದ
ಭಾನುವಿಂಗರ್ಘ್ಯಾದಿ ಕೃತ್ಯವ
ನೇನುವನು ಮನ್ನಿಸದೆ ಚಿತ್ತದೊ
ಳೇನ ನೆನೆದನೊ ಭೂಪನಿದ್ದನು ಖತಿಯ ಭಾರದಲಿ ೩

ಬೇಟೆ ನಿಂದುದು ಗಜ ತುರಗದೇ
ರಾಟ ಮಾದುದು ಕೇಳಮೇಳದ
ತೋಟಿಯಲ್ಲಿಯದಲ್ಲಿ ಕವಡಿಕೆ ನೆತ್ತ ಮೊದಲಾದ
ನಾಟಕದ ಮೊಗರಂಬವೆನಿಪ ಕ
ವಾಟ ತೆರೆಯದು ಹೊಕ್ಕ ಸೂಯದ
ಕೋಟಲೆಯ ಕಡುಹೂಟ ಕವರಿತು ನೃಪನ ತನುಮನವ ೪

ದ್ರೋಣ ಭೀಷ್ಮಾದಿಗಳು ಸಮಯವ
ಕಾಣರುಳಿದ ಪಸಾಯ್ತ ಸಚಿವ
ಶ್ರೇಣಿ ಬಾಗಿಲ ಹೊರಗೆ ನಿಂದುದು ಮತ್ತೆ ಮನೆಗಳಲಿ
ಕಾಣೆನೊಳಪೈಕದ ಸುವೇಣಿಯ
ರಾಣಿಯರ ದುರ್ಮನದ ಬೆಳಸಿನ
ಕೇಣಿಯನು ಕೈಕೊಂಡನೊಬ್ಬನೆ ಕೌರವರರಾಯ ೫

ಸಮಯವಿಲ್ಲೋರಂತೆ ಮೌನ
ಭ್ರಮೆಯ ಬಿಗುಹಿನ ಕೇರಿ ಕೇರಿಯ
ಕುಮತಿಗಳ ಗುಜುಗುಜಿನ ಗುಪ್ತದ ಮುಸುಕುಗೈದುಗಳ
ತಮ ತಮಗೆ ಬಿರುದುಗಳ ಗಣಿಕಾ
ರಮಣ ವೈರದ ಹೆಚ್ಚು ಕುಂದಿನ
ಸಮರ ಭಟರಿರಿದಾಡಿದರು ನಿರ್ನಾಮ ಭಾವದಲಿ ೬

ಸ್ತ್ರೈಣ ಚೇಷ್ಟಿತನೆಂದು ಕೆಲಬರು
ಕಾಣೆವರಸನನೆಂದು ಕೆಲರ
ಕ್ಷೀಣ ರೋಗಿತನೆಂದು ಕೆಲರು ವಿಷ ಪ್ರಯೋಗದಲಿ
ಪ್ರಾಣ ಶೋಷಿತನೆಂದು ಕೆಲಬರು
ಜಾಣಿನೂಹೆಯ ಜನದ ನೆನಹಿನ
ಸಾಣೆಯಲಿ ಸವೆಯಿತ್ತು ಕೌರವ ನೃಪನ ನಿರ್ದೇಶ ೭

ಅಕಟ ಕೌರವರಾಯ ರಾಜ
ನ್ಯಕ ಶಿರೋಮಣಿಯಿರಲು ಧರೆ ರಾ
ಜಕ ವಿಹೀನ ವಿಡಂಬವಾಯ್ತೇ ಶಿವಶಿವಾಯೆನುತ
ಸಕಲ ದಳ ನಾಯಕರು ಮಂತ್ರಿ
ಪ್ರಕರ ಚಿಂತಾಂಬುಧಿಯೊಳದ್ದಿರೆ
ಶಕುನಿ ಬಂದನು ಕೌರವೇಂದ್ರನ ರಾಜಮಂದಿರಕೆ ೮

ಕರೆದು ಬಾಗಿಲವರಿಗೆ ತನ್ನಯ
ಬರವನರುಹಿಸಲವರು ರಾಯನ
ಹೊರಗೆ ಬಂದರು ನುಡಿದರಂಗೈ ತಳದ ಬಾಯ್ಗಳಲಿ
ಅರಸ ಬಿನ್ನಹ ಮಾವದೇವರು
ದರುಶನಾರ್ಥಿಗಳೆನಲು ಮನದಲಿ
ಕುರು ನೃಪತಿ ಚಿಂತಿಸುತ ಬರಹೇಳೆಂದು ನೇಮಿಸಿದ ೯

ಹೊಕ್ಕನೀತನು ಕೌರವೇಂದ್ರನ
ನೆಕ್ಕಟಿಯೊಳಿರೆ ಕಂಡು ನುಡಿಸಿದ
ನಕ್ಕಜದ ರುಜೆಯೇನು ಮಾನಸವೋ ಶರೀರಜವೊ
ಮುಕ್ಕುಳಿಸಿ ಕೊಂಡಿರದಿರಾರಿಗೆ
ಸಿಕ್ಕಿದಿಯೊ ಸೀಮಂತಿನಿಯರಿಗೆ
ಮಕ್ಕಳಾಟಿಕೆ ಬೇಡ ನುಡಿ ಧೃತರಾಷ್ಟ್ರನಾಣೆಂದ ೧೦

ಮಾವ ನೀವ್ ಮರುಳಾದಿರೇ ನನ
ಗಾವ ರುಜೆಯಿಲ್ಲಂಗನೆಯರುಪ
ಜೀವಿಯೇ ನೀವರಿಯಿರೇ ಹಿಂದೀಸು ಕಾಲದಲಿ
ನೋವು ಬೇರಿಲ್ಲೆನಗೆ ನಿಳಯಕೆ
ನೀವು ಬಿಜಯಂಗೈವುದಂತ
ರ್ಭಾವ ವಹ್ನಿಯನೇಕೆ ಬೆದಕುವಿರೆಂದನಾ ಭೂಪ ೧೧

ಏನು ನಿನ್ನಂತಸ್ಥ ಹೃದಯ ಕೃ
ಶಾನು ಸಂಭವವೇಕೆ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ನೃಪನ
ಏನು ಭಯ ಬೇಡೆಂದೆನಲು ಯಮ
ಸೂನು ವೈಭವ ವಹ್ನಿದಗ್ಧ ಮ
ನೋನುಭಾವವನೇಕೆ ನುಡಿಸುವಿರೆಂದನಾ ಭೂಪ ೧೨

ಹೇಳು ಹೇಳೇನೇನು ಪಾಂಡು ನೃ
ಪಾಲ ಪುತ್ರರ ವಿಭವ ವಹ್ನಿ
ಜ್ವಾಲೆಯಲಿ ಮನ ಬೆಂದುದೇ ಹರಹರ ವಿಚಿತ್ರವಲ
ಪಾಲಕನು ಧರ್ಮಜನು ಸಲೆ ಕ
ಟ್ಟಾಳುಗಳು ಭೀಮಾರ್ಜುನರು ಬೆ
ಳ್ಳಾಳ ಹಬ್ಬುಗೆಯೈಸಲೇ ಪಾಂಡವರ ಸಿರಿಯೆಂದ ೧೩

ಅವರು ಪಿತ್ರಾರ್ಜಿತದ ರಾಜ್ಯ
ಪ್ರವರ ಪಾತ್ರರು ನಿನ್ನಸೂಯೆಯ
ಕವಲು ಮನದ ಕುಠಾರ ಬುದ್ಧಿಯ ಕಲುಷ ಭಾವನೆಯ
ವಿವರಣೆಯನವರೆತ್ತ ಬಲ್ಲರು
ಶಿವ ಶಿವಾ ಭುವನೈಕ ಮಾನ್ಯರ
ನವಗಡಿಸಲಂಗೈಸಿದೈ ಮಾಣೆಂದನಾ ಶಕುನಿ ೧೪

ಲೇಸು ಬಿಜಯಂಗೈಯಿ ನೀವೆ
ನ್ನಾಸರಾಗ್ನಿಯನೇಕೆ ಕೆಣಕುವಿ
ರಾಸುರವಿದೇಕೆನ್ನೊಡನೆ ಸೈರಿಸುವುದುಪಹತಿಯ
ಈಸು ನುಡಿವರೆ ಮಾವಯೆನುತ ಮ
ಹೀಶ ಕಂಬನಿದುಂಬಿ ನೆನಹಿನ
ಬೀಸರಕೆ ಬಿಸುಸುಯ್ದು ಧೊಪ್ಪನೆ ಕೆಡದನವನಿಯಲಿ ೧೫

ಎತ್ತಿದನು ಕಣ್ಣೆವೆಯ ಕಿರುವನಿ
ಮುತ್ತುಗಳ ಕೇವಣಿಯ ಶಕುನಿ ನೃ
ಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
ಕಿತ್ತು ಬಿಸುಡುವೆನಹಿತರನು ನಿನ
ಗಿತ್ತೆನಿಂದ್ರಪ್ರಸ್ಥಪುರವನು
ಹೆತ್ತ ತಾಯ್ ಗಾಂಧಾರಿ ಸಂತೋಷಿಸಲಿ ಬಳಿಕೆಂದ ೧೬

ಮಾವ ಕೇಳತಿ ಬಲರು ಫಲಗುಣ
ಪಾವಮಾನಿಗಳೈವರಿಗೆ ತಾ
ಜೀವಸಖ ಗೋವಿಂದನನಿಬರ ಗೆಲವು ಗೋಚರವೆ
ಸಾವುದಲ್ಲದೆ ತನಗೆ ಬೇರಿ
ನ್ನಾವ ಪರಿಯಲಿ ಸಮತೆ ಸೇರದು
ಜೀವಿತವ್ಯವನಮರ ನಿಕರದೊಳರಸಿಕೊಳ್ಳೆಂದ ೧೭

ಗೆಲುವೆ ನಾನಂಜದಿರು ಪಾಂಡವ
ರಳವಳವ ನಾನರಿವೆ ನೃಪನ
ಗ್ಗಳದ ಧರ್ಮಜ್ಞನು ವಿಶೇಷ ದ್ಯೂತ ಲೋಲುಪನು
ಗೆಲುವ ಮೋಡಿಯನರಿಯನಾತನ
ನೆಲೆಯ ಬಲ್ಲೆನು ಜೂಜುಗಾರರ
ಕುಲಶಿರೋಮಣಿ ತಾನೆಯೆಂದನು ಶಕುನಿ ಕೌರವಗೆ ೧೮

ಕಪಟವನು ನೆರೆ ಮಾಡಿ ಜೂಜಿನೊ
ಳುಪರಿಕಾರ್ಯವ ಜೈಸಿ ಕೊಡುವೆನು
ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ
ಅಪದೆಸೆಗೆ ಭಯಗೊಳ್ಳದಿರು ನಿ
ಷ್ಕೃಪೆಯಲಿರು ಗುರು ಭೀಷ್ಮ ವಿದುರಾ
ದ್ಯಪಸರರ ಕೈಕೊಳ್ಳದಿರು ನೀನೆಂದನಾ ಶಕುನಿ ೧೯

ಎನ್ನ ಬಹುಮಾನಾವಮಾನವು
ನಿನ್ನದೈಸಲೆ ಮಾವ ನೀ ಸಂ
ಪನ್ನ ಕೃತ್ರಿಮ ವಿದ್ಯನಾದರೆ ತೊಡಚು ಸಾಕದನು
ಅನ್ನಿಗರಿಗರುಹದಿರು ನಮ್ಮವ
ರೆನ್ನದಿರು ವಿದುರಾದಿಗಳನುಪ
ಪನ್ನ ಮಂತ್ರವನರುಹು ಬೊಪ್ಪಂಗೆಂದನವನೀಶ ೨೦

ನೀನರುಹು ನಿಮ್ಮಯ್ಯ ಮನಗೊ
ಟ್ಟಾ ನರೇಂದ್ರರ ಕರೆಸಿ ಕೊಟ್ಟರೆ
ಮಾನನಿಧಿಯೇ ಸಕಲ ಧರೆಯನು ಸೇರಿಸುವೆ ನಿನಗೆ
ನೀನೆ ಹೋಗಿಯೆ ನಿನ್ನ ಕಡು ದು
ಮ್ಮಾನವನು ಬೊಪ್ಪಂಗೆ ನುಡಿದರೆ
ತಾನೆ ಕರೆಸುವನರುಹುವೆನು ಜನಕಂಗೆ ನಿಜಮತವ ೨೧

ಅಹುದು ಬಳಿಕೇನೆನುತ ಬಂದನು
ಕುಹಕಮತಿ ಧೃತರಾಷ್ಟ್ರನರಮನೆ
ಗಿಹ ಸಮಯದಲಿ ಹೊಕ್ಕನಂದೇಕಾಂತ ಮಂದಿರವ
ಬಹಳ ಖೇದವ್ಯಸನದಲಿ ದು
ಸ್ಸಹ ಮನೋವ್ಯಥೆಯಲಿ ಕುಮಾರಕ
ನಿಹುದನರಿಯಿರೆ ನೀವೆನುತ ಬಿಸುಸುಯ್ದನಾ ಶಕುನಿ ೨೨

ಏನು ಶಕುನಿ ಮಗಂಗೆ ದುಗುಡವ
ದೇನು ಕಾರಣವಾರ ದೆಸೆಯಿಂ
ದೇನಸಾಧ್ಯವದೇನು ಭಯ ಮೇಣಾವುದಭಿಲಾಷೆ
ಏನುವನು ವಂಚಿಸದೆ ಹೇಳೆ
ನ್ನಾನೆಗೇಕೈ ಮರುಕವೆನೆ ನಿಜ
ಸೂನುವನು ನೀ ಕರೆಸಿ ಬೆಸಗೊಳ್ಳೆಂದನಾ ಶಕುನಿ ೨೩

ಕರೆಸಿದನು ದುರಿಯೋಧನನನಾ
ದರಿಸಿ ಕಟ್ಟೇಕಾಂತದಲಿ ಮು
ವ್ವರು ವಿಚಾರಿಸಿದರು ನಿಜಾನ್ವಯ ಮೂಲ ನಾಶನವ
ಭರತಕುಲ ನಿರ್ವಾಹಕನೆ ಬಾ
ಕುರುಕುಲಾನ್ವಯದೀಪ ಬಾ ಎ
ನ್ನರಸ ಬಾ ಎನ್ನಾನೆ ಬಾಯೆಂದಪ್ಪಿದನು ಮಗನ ೨೪

ದುಗುಡವೇಕೈ ಮಗನೆ ಹಿರಿಯೋ
ಲಗವನೀಯೆ ಗಡೇಕೆ ವೈಹಾ
ಳಿಗಳ ಬೇಟೆಗಳವನಿಪಾಲ ವಿನೋದ ಕೇಳಿಗಳ
ಬಗೆಯೆ ಗಡ ಬಾಂಧವರ ಸಚಿವರ
ಹೊಗಿಸೆ ಗಡ ನಿನ್ನರಮನೆಯನೀ
ಹಗಲು ನಿನಗೇಕಾಯ್ತು ಕತ್ತಲೆಯೆಂದನಂಧ ನೃಪ ೨೫

ಹೇಳಲೆಮ್ಮೆನು ನೀವು ಧರ್ಮದ
ಕೂಳಿಯಲಿ ಸಿಲುಕಿದವರೆನ್ನನು
ಖೂಳನೆಂಬಿರಿ ಕಷ್ಟನೆಂಬಿರಸೂಯನೆಂಬಿರಲೆ
ಸಾಲ ಭಂಜಿಕೆಯಾಯ್ತು ತನ್ನಯ
ಬಾಳಿಕೆಯ ಬೇಳಂಬವೇತಕೆ
ಕೇಳುವಿರಿ ನೀವೆಂದು ಸುಯ್ದನು ತುಂಬಿ ಕಂಬನಿಯ ೨೬

ಮುನಿಚರಿತ್ರರು ನೀವು ರಾಜಸ
ತನದ ಮದದಲಿ ಲೋಕ ಯಾತ್ರೆಯ
ನನುಸರಿಸುವವರಾವು ನೀವೇ ಭೋಗ ನಿಸ್ಪೃಹರು
ಅನುದಿವಸ ರಾಗಿಗಳು ನಾವೆ
ಮ್ಮನುಮತವ ಪಾಲಿಸುವರಾರೆಂ
ದೆನುತ ಸುಯ್ದನು ಮರುಗಿ ಬೈದನು ತನ್ನ ದುಷ್ಕೃತವ ೨೭

ಈಸು ಕಳವಳವೇನು ಚಿತ್ತದ
ಬೈಸಿಕೆಗೆ ಡೊಳ್ಳಾಸವೇಕೆ ವಿ
ಳಾಸಕೂಣೆಯವೇನು ಹೇಳಾ ನೆನಹಿನಭಿರುಚಿಯ
ವಾಸಿಗಳ ಪೈಸರವನೆನ್ನಲಿ
ಸೂಸಬಾರದೆ ನಿನ್ನ ಹರುಷಕೆ
ವೈಸರವದೇನೆಂದು ಬೆಸಗೊಂಡನು ಸುಯೋಧನನ ೨೮

ಏನನೆಂಬೆನು ಬೊಪ್ಪ ಕುಂತೀ
ಸೂನುಗಳ ಸಾಮರ್ಥ್ಯ ಪಣವನು
ದಾನವಾರಿಯ ಹಾಸು ಹೊಕ್ಕಿನ ಸೌಖ್ಯಸಂಗತಿಯ
ತಾ ನಪುಂಸಕನಾದ ಪರಿಯನ
ದೇನ ವಿಸ್ತರಿಸುವೆನು ಲಜ್ಜಾ
ಮಾನಿನಿಗೆ ತನ್ನೊಕ್ಕತನವಿಂದಿಳಿದು ಹೋಯ್ತೆಂದ ೨೯

ನೆಗೆದ ಬುಗುಟದೆ ಹಣೆಯಲವರೋ
ಲಗದ ಸಭೆಯಲಿ ನನೆದ ಸೀರೆಯ
ತೆಗೆಸಿ ಕೊಟ್ಟರು ತಮ್ಮ ಮಡಿವರ್ಗದ ನವಾಂಬರವ
ಬೆಗಡುಗೊಳಿಸಿದರೆನ್ನನವರೋ
ಲಗದ ಸೂಳೆಯರವರ ಸೂಳಿನ
ನಗೆಯ ನೆನೆ ನೆನೆದೆನ್ನ ಮನ ಜರ್ಝರಿತವಾಯ್ತೆಂದ ೩೦

ಇದಕೆ ಕಾರಣವೇನು ಹಣೆ ನೊಂ
ದುದಕದೇನು ನಿಮಿತ್ತವೆನಲಾ
ಸದನದಲಿ ಮಯನಿತ್ತ ಸಭೆಯನು ದೇವರರಿಯಿರಲೆ
ಮುದದಿನಾ ಧರ್ಮಜನು ಘನ ಸಂ
ಪದದಲೋಲಗವಿತ್ತನಾ ದ್ರೌ
ಪದಿ ನಿಜಾನುಜ ಮಂತ್ರಿ ಸಚಿವ ಪಸಾಯಿತರು ಸಹಿತ ೩೧

ಆ ಮಹಾಸಭೆ ದೇವ ನಿರ್ಮಿತ
ರಾಮಣೀಯಕ ವಿವಿಧ ರತ್ನ
ಸ್ತೋಮ ತೇಜಃ ಪುಂಜ ಭಂಜಿತ ನಯನ ವೀಧಿಯಲಿ
ಸಾಮದಲಿ ನಮ್ಮನು ಯುಧಿಷ್ಠಿರ
ಭೂಮಿಪತಿ ಕರೆಸಿದನು ತನ್ನು
ದ್ದಾಮ ವಿಭವವನೆನಗೆ ತೋರಲು ತತ್ಸಭಾಸ್ಥಳಕೆ ೩೨

ಹರಹಿನಲಿ ಹಿರಿದಾಯ್ತು ಕೆಂದಾ
ವರೆಯ ವನ ಬೇರೊಂದು ತಾಣದೊ
ಳುರವಣಿಯ ಬೆಳದಿಂಗಳೌಕಿದುದೊಂದು ತಾಣದಲಿ
ಹರಿವ ಯಮುನಾ ನದಿಯನಲ್ಲಿಗೆ
ಷಿರಸಿದವರಾರೆನಲು ಮಣಿ ಬಂ
ಧುರದ ಬೆಳಗಿನ ಲಹರಿ ಮುರಿದುದು ತನ್ನ ಜಾಣುಮೆಯ ೩೩

ಹೊಕ್ಕ ಸಾಲಲಿ ಹೊಳೆವ ಮಣಿರುಚಿ
ಮುಕ್ಕುಳಿಸಿದವು ಕಂಗಳನು ನಡೆ
ದಿಕ್ಕೆಲನ ನೋಡಿದರೆ ಮುರಿದೊಳಸರಿದವಾಲಿಗಳು
ಉಕ್ಕು ವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ
ಡೊಕ್ಕರಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು ೩೪

ಹಿಡಿದವೆನ್ನೂಹೆಯಮ ಮಣಿ ರುಚಿ
ಯೆಡತರದೊಳಿಕ್ಕಿದವು ಭಿತ್ತಿಯ
ಬಿಡೆಯದಲಿ ಝಳುಪಿಸುವ ನೀಲದ ಲಳಿಯ ಲಹರಿಯಲಿ
ತಡಿಯ ಕಾಣೆನು ತಳಿತ ಕಾಂತಿಯ
ಕಡಲ ವಿಮಲ ಸ್ಫಟಿಕ ಜಲದಲಿ
ಮಿಡುಕಲಂಜಿದವಂಘ್ರಿಗಳು ನರನಾಥ ಕೇಳೆಂದ ೩೫

ಸ್ಥಳವೆ ಜಲರೂಪದಲಿ ಜಲವೇ
ಸ್ಥಳದ ಪಾಡಿನಲ್ಲಿದ್ದು ದದು ಕೆಲ
ಬಲನ ಭಿತ್ತಿಯ ಕಂಬ ಕಂಬದ ನಡುವೆ ಭಿತ್ತಿಗಳು
ಹೊಳಹನೇ ಕಂಡೆನು ವಿವೇಕದ
ಕಳಿವು ಚಿತ್ತದ ಸೆರೆದುಹಾರದೊ
ಳಿಳಿದವಕ್ಷಿಗಳಿಂತು ಸೋತೆನು ತಂದೆ ಕೇಳೆಂದ ೩೬

ಮುಂದೆ ವಿಮಲಸ್ಫಟಿಕಭೂಮಿಯ
ದೊಂದು ಠಾವಿನೊಳೀಕ್ಷಿಸುತೆ ಕೊಳ
ನೆಂದು ಬಗೆದೆನು ನಿಂದು ಸಂವರಿಸಿದೆನು ಮುಂಜೆರೆಗ
ಅಂದು ದ್ರೌಪದಿ ಸಹಿತ ನಾರೀ
ವೃಂದ ಕೈಗಳ ಹೊಯ್ದು ಮಿಗೆ ಗೊ
ಲ್ಳೆಂದು ನಕ್ಕುದು ನೊಂದು ತಲೆವಾಗಿದೆನು ಲಜ್ಜೆಯಲಿ ೩೭

ಊಹೆಯಲಿ ತಡವರಿಸಿ ಹಜ್ಜೆಯ
ಗಾಹುಗತಕದೊಳಿಡುತ ಕಾಂತಿಯ
ಸೋಹೆಯರಿಯದೆ ಬೀದಿಯಲಿ ಕಂಡೆನು ಸರೋವರವ
ಆ ಹರಿಬವನು ಮುರಿವೆನೆಂದಿದ
ನೂಹಿಸದೆನಾ ಸ್ಫಟಿಕವೆಂದು
ತ್ಸಾಹಿಸಲು ನೀರಾಯ್ತು ನನೆದೆನು ನಾಭಿದಘ್ನದಲಿ ೩೮

ಮತ್ತೆ ಗೊಳ್ಳೆಂದುದು ನೃಪಾಲನ
ಮತ್ತ ಕಾಶಿನಿಯರು ಯುಧಿಷ್ಠಿರ
ನಿತ್ಯದಿವ್ಯ ದುಕೂಲವನು ತಡಿಗಡರಿ ತೊಡಚಿದೆನು
ಬತ್ತಿತೆನ್ನಭಿಮಾನ ಜಲನಿಧಿ
ಮತ್ತೆ ಮಾರಿಯ ಮಸಕವನು ನೀ
ವ್ಚಿತ್ತವಿಸಿರೇ ಬೊಪ್ಪಯೆಂದನು ಕೌರವರ ರಾಯ ೩೯

ನಂಬಿಸಿದುದೊಂದೆಡೆಯ ಬಾಗಿಲು
ಬಿಂಬಿಸಿತು ಭಿತ್ತಿಯಲಿ ತತ್ಪ್ರತಿ
ಬಿಂಬವೆಂದಾನರಿಯದೊಡ ಹಾಯಿದೆನು ಚೌಕಿಗೆಯ
ಎಂಬೆನೇನನು ಹೊರಳಿ ನಗುವ ನಿ
ತಂಬಿನಿಯರನು ಭೀಮ ಪಾರ್ಥರ
ಡಂಬರವ ಕಂಡಸುವ ಹಿಡಿದೆನು ನೋಡಿಕೊಳ್ಳೆಂದ ೪೦

ನೊಂದುದೇ ಹಣೆ ಮನದೊಳಗೆ ಕಡು
ನೊಂದೆನವದಿರ ನಗೆಗೆ ನಡೆದೆನು
ಮುಂದಣೋವರಿ ಬಾಗಿಲನು ಕಂಡೆನ್ನ ಮನದೊಳಗೆ
ಹಿಂದೆ ಹೇರಿದ ಭಂಗವೇ ಸಾ
ಕೆಂದು ಸುಪ್ರೌಢಿಯಲಿ ಬಾಗಿಲ
ನೊಂದು ಠಾವಿನೊಳರಸಿ ತಡವರಿಸಿದೆನು ಭಿತ್ತಿಗಳ ೪೧

ನಗೆಗೆ ನಗೆ ಕುಂಟಣಿ ವಿವೇಕದ
ಹೊಗೆಗೆ ಹೊಗೆ ಸಖಿಯಾದುದಲ್ಲಿಯ
ಹಗರಣಿಗ ನಾನಾದೆನದು ನೋಟಕದ ಜನವಾಯ್ತು
ನಗುವವರ ಜರೆದನೆ ಯುಧಿಷ್ಠಿರ
ನಗೆಯ ಮರೆದನೆ ಬೊಪ್ಪ ನಿಮ್ಮಯ
ಮಗನವಸ್ಥಾರೂಪವಿದು ಚಿತ್ತವಿಸಿ ನೀವೆಂದ ೪೨

ಒಡ್ಡವಿಸಿತೆನ್ನಾಟ ನಗೆಯೊಳ
ಗಡ್ಡ ಬಿದ್ದಳು ಪಾಂಡುಪುತ್ರರ
ಬೊಡ್ಡಿ ಬಿಂಕದಲವರು ಬಿರಿದರು ಭೀಮ ಫಲಗುಣರು
ಖಡ್ಡಿ ಗರುವೆನ್ನಿಂದ ರೋಷದ
ಗೊಡ್ಡು ನಾನಾದೆನು ವಿಘಾತಿಯ
ಬಡ್ಡಿಗಿನ್ನಕ ಬದುಕಿದೆನು ಧೃತರಾಷ್ಟ್ರ ಕೇಳೆಂದ ೪೩

ಸಿಂಗಿಯನು ಬಿತ್ತಿದೆನು ಪಾಂಡವ
ರಂಗದಲಿ ತತ್ಫಲದ ಬೆಳಸಿನ
ಸಿಂಗಿಯಲಿ ತಾ ಸಾವೆನಲ್ಲದೊಡಗ್ನಿ ಕುಂಡದಲಿ
ಭಂಗಿಸುವೆನಾ ಫಲದೊಳೆನ್ನನು
ನುಂಗಬೇಹುದು ವಹ್ನಿ ಮೇಣೀ
ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ ೪೪

ಆ ಯುಧಿಷ್ಠಿರ ಸಹಿತ ನೀನೇ
ರಾಯನಾಗಿರು ಮೇಣು ನಮ್ಮೀ
ತಾಯಿ ಸಂತಸಬಡಲಿ ದುಶ್ಶಾಸನನ ಪಟ್ಟದಲಿ
ರಾಯತನವೆಮಗಿಂದ್ರ ಲೋಕದ
ಲಾಯದಲಿ ದಿಟವೆಂದು ನುಡಿವರು
ಜೋಯಿಸರು ಸಾಕವರ ವಚನ ನಿರರ್ಥವಲ್ಲೆಂದ ೪೫

ಪುರದಲೆಂಬತ್ತೆಂಟು ಸಾವಿರ
ಧರಣಿಯಮರರು ನಿತ್ಯ ಪಡೆಯುವ
ರರಸ ಕೇಳೈ ಹತ್ತು ಸಾವಿರ ಹೊನ್ನತಳಿಗೆಯಲಿ
ವರ ಯತೀಶರು ಹತ್ತು ಸಾವಿರ
ವರಮನೆಯಲುಂಬುದು ನೃಪಾಲಾ
ಧ್ವರದ ಸಿರಿಯನು ನೀವೆ ಕಂಡಿರೆಯೆಂದನಾ ಭೂಪ ೪೬

ಕೇಳಿದನು ಬಿಸುಸುಯ್ದ ನಕಟ ವಿ
ಕಾಳಿಸಿತೆ ಕೌರವನ ಬುದ್ಧಿ ವಿ
ಟಾಳ ಸಂಗತಿಯಾಯ್ತಲಾ ಪಿಸುಣಾರ ಕೆರಳಿಚದು
ಕೇಳು ಮಗನೇ ಧರ್ಮಪುತ್ರನ
ಮೇಲೆ ಮುನಿವರೆ ರಾಜಋಷಿ ನರ
ಪಾಲ ಮಾತ್ರವೆ ಶಿವ ಮಹಾದೇವೆಂದನಾ ಭೂಪ ೪೭

ಸತಿಯರಲಿ ನಿಮ್ಮವ್ವೆ ಸುಪತಿ
ವ್ರತೆ ಮಹಾಖಳ ನೀನು ಬೀಜ
ಸ್ಥಿತಿಯಲೂಣಯವಿಲ್ಲ ನಿನ್ನಯ ಬುದ್ಧಿ ದೋಷವಿದು
ಕೃತಕವೋ ಸಹಜವೋ ನವೀನ
ಸ್ಥಿತಿಯ ಕಂಡೆನು ಶಿವ ಶಿವಾ ದು
ರ್ಮತಿಗಳಾವುದ ನೆನೆಯರೆಂದನು ಸುಯ್ದು ಧೃತರಾಷ್ಟ್ರ ೪೮