ನಮ್ಮ ಇಂದಿನ ಬದುಕು ಈಗ ಇರುವುದಕ್ಕಿಂತ ಇನ್ನಷ್ಟು ಸುಂದರವಾಗಿ ಸುಖಮಯವಾಗಿ ಮತ್ತು ವೈಚಾರಿಕವಾಗಿ ರೂಪುಗೊಳ್ಳಬೇಕು ಅನ್ನುವುದು ಕವಿ ಕಲೆಗಾರ-ವಿಜ್ಞಾನಿ ಮತ್ತು ನಿಜವಾದ ಜೀವನ ಪ್ರೀತಿಯನ್ನುಳ್ಳ ಎಲ್ಲ ಪ್ರಜ್ಞಾವಂತರ ತುಡಿತವಾಗಿದೆ. ಆದರೆ ನಮ್ಮ ಸಮಕಾಲೀನ ವಾಸ್ತವ ಇದಕ್ಕೆ ವ್ಯತಿರಿಕ್ತವಾಗಿ, ಅತ್ಯಂತ ಕುರೂಪವೂ ಅಸ್ವಸ್ಥವೂ ಅವೈಚಾರಿಕವೂ ಆದ ರೀತಿಯಲ್ಲಿ ರೂಪುಗೊಳ್ಳುತ್ತಿದೆಯಲ್ಲ ಅನ್ನುವುದೆ ನಮ್ಮೆಲ್ಲರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಾವೀಗ ಒಂದು ಅಸ್ವಸ್ಥ ಪರಿಸ್ಥಿತಿಯ ನಡುವೆ ಬದುಕುತ್ತಿದ್ದೇವೆ. ಹಾಗೆ ನೋಡಿದರೆ ನಾವಿರುವ ಈ ದೇಶ ವಾಸ್ತವವಾಗಿ ಅತ್ಯಂತ ಅಸ್ವಸ್ಥವಾದ ಜಗತ್ತಿನ ಒಂದು ಭಾಗವಾಗಿದೆ. ದಿನವೂ ಜಗತ್ತಿನಾದ್ಯಂತ ಸಂಭವಿಸುತ್ತಿರುವ ವಿದ್ಯಮಾನಗಳನ್ನು ವಿವಿಧ ಮಾಧ್ಯಮಗಳ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗಿರುವ ಈ ನಾವು, ಏಕಕಾಲಕ್ಕೆ ವೈಯಕ್ತಿಕವೂ ಹಾಗೂ ಸಾರ್ವತ್ರಿಕವೂ ಆದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅನಕ್ಷರತೆ, ದಾರಿದ್ರ , ಮೂಢನಂಬಿಕೆಗಳು, ಪರಿಸರ ಮಾಲಿನ್ಯ, ಧಾರ್ಮಿಕ ಮೂಲಭೂತವಾದಿಗಳಿಂದ ಸಹಬಾಳ್ವೆಗೆ ಒದಗುತ್ತಿರುವ ಅಪಾಯಗಳು, ಮೇಲು ವರ್ಗದವರಿಂದ ಕೆಳವರ್ಗದವರ ಮೇಲೆ ನಡೆಯುತ್ತಿರುವ ಆಕ್ರಮಣಗಳು, ಶೋಷಿತರ ಮತ್ತು ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ, ಸಾರ್ವತ್ರಿಕವಾದ ಭ್ರಷ್ಟಾಚಾರ, ಬುದ್ಧಿವಂತರೆನಿಸಿಕೊಂಡ ವರ್ಗದವರ  ಅಪ್ರಾಮಾಣಿಕತೆ, ಮುಗ್ಧತೆ ಹಾಗೂ ಸಾಚಾತನಗಳನ್ನು ಅಪಮೌಲ್ಯೀಕರಣಕ್ಕೆ ಒಳಗುಪಡಿಸಿ ವಿಜೃಂಭಿಸುವ ಪಟ್ಟಭದ್ರರ ಪಿತೂರಿಗಳು, ನಮ್ಮದಲ್ಲದ ಭಾಷೆಯ ಶಿಕ್ಷಣ ಮಾಧ್ಯಮದ ಭದ್ರ ಕೋಟೆಗಳನ್ನು ನಿರ್ಮಿಸುತ್ತ ಈ ದೇಶದ ಈ ಮಣ್ಣಿನಲ್ಲಿ ನಮ್ಮ ಮಕ್ಕಳು ಬೇರೂರಿ ಬೆಳೆಯದಂತೆ ನೋಡಿಕೊಳ್ಳುತ್ತಿರುವ ನಮ್ಮ ಶೈಕ್ಷಣಿಕ ನೀತಿಗಳು ಮತ್ತು ಇಡೀ ಶಿಕ್ಷಣವನ್ನು ಒಂದು ಸಮರ್ಥವಾದ ವ್ಯಾಪಾರೋದ್ಯಮವಾಗಿ ಪರಿವರ್ತಿಸುತ್ತ ತಮ್ಮ ಬೊಕ್ಕಸವನ್ನು ಭರ್ತಿ ಮಾಡಿಕೊಳ್ಳುವ ಗುತ್ತಿಗೆದಾರರು, ನಮ್ಮ ರಾಷ್ಟ್ರದ ದೈನಂದಿನ ನೆಮ್ಮದಿಯನ್ನು ಛಿದ್ರಗೊಳಿಸುತ್ತಿರುವ ಭಯೋತ್ಪಾದಕರ ಪಿಡುಗುಗಳು, ವಿಘಟನೆಗೊಂಡ ಹಾಗೂ ವಿಘಟನೆಯ ಆತಂಕದಲ್ಲಿರುವ ಜಗತ್ತಿನ ಅನೇಕ ದೇಶಗಳನ್ನು ತನ್ನ ಅಂಕೆ ಹಾಗೂ ಪ್ರಭಾವದೊಳಗೆ ಇರಿಸಿಕೊಳ್ಳಬೇಕೆಂದು ಆಶಿಸುವ ಬಂಡವಾಳಷಾಹೀ ಪ್ರಭುತ್ವಗಳ ಒಳಸಂಚುಗಳು ಇತ್ಯಾದಿ ಅನೇಕಾನೇಕ ಸಂಗತಿಗಳು ನಮ್ಮ ಸಮಕಾಲೀನ ಬದುಕನ್ನು  ಅಸ್ವಸ್ಥಗೊಳಿಸುತ್ತಿವೆ. ಈ ಅಸ್ವಸ್ಥತೆ ಈ ಹೊತ್ತಿನ ಕಲೆ ಸಾಹಿತ್ಯ-ಶಿಕ್ಷಣ-ವಿಜ್ಞಾನ-ಸಂಸ್ಕೃತಿಗಳಿಗೆ ಒಂದು ದೊಡ್ಡ ಸವಾಲೂ ಹಾಗೂ ಆತಂಕವೂ ಆಗಿದೆ.

ನಮ್ಮ ಇಂದಿನ ಬದುಕು ಅನ್ನುವುದು ಕೇವಲ ನಮ್ಮ ವರ್ತಮಾನಕ್ಕೆ ಸೀಮಿತವಾದುದಲ್ಲ. ಅದರ ಹಿಂದೆ ಒಂದು ಭೂತಕಾಲವಿದೆ, ಅದಕ್ಕೊಂದು ಚರಿತ್ರೆಯಿದೆ, ಒಂದು ಪರಂಪರೆಯಿದೆ. ಅದು ನಮ್ಮ ವರ್ತಮಾನದ ಬದುಕನ್ನು ಪ್ರಭಾವಿಸುತ್ತಿದೆ, ಎಷ್ಟೋ ವೇಳೆ ನಿಯಂತ್ರಿಸುತ್ತಿದೆ. ಹೀಗಾಗಿ ನಮ್ಮ ಹಿಂದಿನ ಆ ‘ಗತ’ (Past) ಕಾಲವೆನ್ನುವುದು ಜಡವೂ ನಿಷ್ಕಿ ಯವೂ ನಿರ್ಜೀವವೂ ಆದೊಂದು ‘ವಸ್ತು’ ಅಲ್ಲ; ಅದೊಂದು ಜೀವಂತವಾದ ಶಕ್ತಿಸಮುಚ್ಚಯವೂ ಹೌದು. ಹಾಗೆಯೆ, ನಮ್ಮ ಮುಂದೆ ಒಂದು ಭವಿಷ್ಯವಿದೆ. ಅದರ ಕನಸುಗಳೂ ಹಾಗೂ ಅಲ್ಲಿ ಪೂರ್ಣಗೊಳ್ಳಬೇಕಾದ ಆಶಯಗಳೂ ನಮ್ಮನ್ನು ಕಾಡುತ್ತವೆ. ವರ್ತಮಾನದಲ್ಲಿರುವ ನಮಗೆ ಗತಕಾಲದ ನೆನಪುಗಳು ಎಷ್ಟು ಮುಖ್ಯವೋ ಹಾಗೆಯೆ ಭವಿಷ್ಯತ್ತಿನ ಕನಸುಗಳೂ ಅಷ್ಟೇ ಮುಖ್ಯ. ಕೇವಲ ಗತಕಾಲದ ನೆನಪುಗಳಿಗೆ ಜೋತುಬೀಳುವವರು ತಮ್ಮ ವರ್ತಮಾನದಲ್ಲಿ ಸರಿಯಾಗಿ ಬದುಕಲಾರರು; ಹಾಗೆಯೆ, ಭವಿಷ್ಯದ ಕನಸುಗಳನ್ನೇ ಅವಲಂಬಿಸುವವರೂ ತಮ್ಮ ವರ್ತಮಾನದಲ್ಲಿ ಸರಿಯಾಗಿ ಬದುಕಲಾರರು. ಆದ ಕಾರಣ ಹಿಂದು-ಮುಂದುಗಳ ನಡುವಣ ಬಿಂದುವಾದ ವರ್ತಮಾನದಲ್ಲಿ ಬದುಕುವ ನಾವು ಈ ಎರಡೂ ದಿಕ್ಕುಗಳಿಗೂ ತೋರುವ ಪ್ರತಿಕ್ರಿಯೆಗಳೇನು ಅನ್ನುವುದು ಬಹು ಮುಖ್ಯವಾದ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ಮಹಾ ಅನುಭಾವಿ ಅಲ್ಲಮಪ್ರಭುವಿನ ಉಕ್ತಿಯೊಂದು ನೆನಪಿಗೆ ಬರುತ್ತದೆ. ‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು’ ಅನ್ನುತ್ತಾರೆ ಅಲ್ಲಮಪ್ರಭು ತಮ್ಮದೊಂದು ವಚನದೊಳಗೆ. ಈ ನಿಂದ ಹೆಜ್ಜೆಗಳನ್ನು ಅಥವಾ ನಮ್ಮ ವರ್ತಮಾನವನ್ನು ಅರ್ಥಮಾಡಿಕೊಳ್ಳಬೇಕಾದರೆ, ನಮ್ಮ ‘ಹಿಂದಣ ಹೆಜ್ಜೆ’ಗಳನ್ನು ಅರಿತುಕೊಳ್ಳಬೇಕು. ಆದ ಕಾರಣ ನಮ್ಮ ‘ಹಿಂದಣ ಹೆಜ್ಜೆ’ಗಳನ್ನೂ ಅಥವಾ ಪೂರ್ವ ಪರಂಪರೆಯನ್ನು ಅರ್ಥ ಮಾಡಿಕೊಂಡಲ್ಲದೆ, ನಾವು ‘ನಿಂದ ಹೆಜ್ಜೆ’ ಅಥವಾ ವರ್ತಮಾನವನ್ನು ತಿಳಿದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದರೆ ಬಹುಜನಕ್ಕೆ ‘ಹಿಂದಣ ಹೆಜ್ಜೆ’ ಅಥವಾ ಗತಕಾಲ ಎನ್ನುವುದು ಕೇವಲ ವೈಭವೀಕರಣಗೊಂಡ ಹಾಗೂ ಪ್ರಶ್ನೆ ಮಾಡದೆ ಅವಿಚಾರಿತವಾಗಿ ಒಪ್ಪಿಕೊಳ್ಳುವಂಥ ಒಂದು ‘ಅಧಿಕಾರ’ (Authority)ವಾಗಿ ತೋರುತ್ತದೆ. ಇಂಥವರ ಪಾಲಿಗೆ ಹಳೆಯದೆಲ್ಲ ಹೊನ್ನು. ಅದೆಲ್ಲವೂ ಪ್ರಾತಃಸ್ಮರಣೀಯವಾದ್ದು. ಈ ಬಗೆಯಾಗಿ ಪ್ರಾಚೀನವಾದುದೆಲ್ಲವೂ ಪವಿತ್ರವಾದುದೆಂದು ಆರಾಧಿಸುವ ಪ್ರವೃತ್ತಿಗೆ, ಆ ಪ್ರಾಚೀನವಾದುದರಲ್ಲಿರುವ ಅವೈಚಾರಿಕವೂ, ಜೀವವಿರೋಧಿಯೂ ಆದ ಸಂಗತಿಗಳು ಗೋಚರಿಸವುದಿಲ್ಲ; ಹಾಗೆಯೇ ಆ ಪ್ರಾಚೀನವಾದುದರಲ್ಲಿರುವ ಮೌಲಿಕವಾದ ಅಂಶಗಳು ನಮ್ಮವರ್ತಮಾನದ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಇಳಿದು ಬಂದಿವೆ ಅಥವಾ ಇಳಿದು ಬಂದಿಲ್ಲ ಎಂಬ ವಿಷಯವೂ ಗೋಚರಿಸುವುದಿಲ್ಲ. ಅದರ ಬದಲು ನಮ್ಮಲ್ಲಿ ವೇದಗಳಿವೆ, ಉಪನಿಷತ್ತುಗಳಿವೆ, ಋಷಿ-ಮುನಿಗಳು ಮಹಾ ಆಚಾರ್ಯರುಗಳೂ ಇದ್ದಾರೆ. ಮಹತ್ತಾದ ತತ್ವಗಳಿವೆ, ದರ್ಶನಗಳಿವೆ, ಸಂತರು, ಸಿದ್ಧರು, ಅವತಾರಪುರುಷರು ಇದ್ದಾರೆ-ಎಂದು‘ಇತ್ತು’ಗಳ ಕಡೆ ಬೆರಳು ತೋರಿಸುತ್ತಾ, ಅದನ್ನೇ ಹಾಡಿ ಹೊಗಳುತ್ತಾ,  ಗತವೈಭವಗಳಲ್ಲಿ ಬದುಕುವ ಪ್ರವೃತ್ತಿಯೊಂದು ಪ್ರಬಲವಾಗಿದೆ. ನಿಜ, ಇವೆಲ್ಲ ಇವೆ; ನಮ್ಮ ಹಿಂದೆ ಇಂಥ ಉದಾತ್ತವೂ ಹಾಗೂ ಉಜ್ವಲವೂ ಆದ ಪರಂಪರೆಯಿದೆ. ಆದರೆ ಅಷ್ಟಿದ್ದೂ ಯಾಕೆ ನಮ್ಮ ವರ್ತಮಾನದ ಬದುಕು, ಆ ಉದಾತ್ತ ತತ್ವಗಳಿಗೂ ತನಗೂ  ಏನೇನೂ ಸಂಬಂಧವಿಲ್ಲವೆಂಬಂತೆ ರೂಪುಗೊಂಡಿದೆ? -ಎಂಬ ಪ್ರಶ್ನೆಗೆ ಉತ್ತರ ಕೊಡಬಲ್ಲವರು ಯಾರು? ಮುಖ್ಯವಾದ ಮಾತೆಂದರೆ ಆ ಗತ ಪರಂಪರೆಯನ್ನು ನಮ್ಮ ವಿವೇಚನೆಗೆ ಒಳಗುಪಡಿಸುತ್ತ, ನಮಗೆ ಪ್ರಸ್ತುತವಾದುದನ್ನು ಉಪಯೋಗಿಸಿಕೊಳ್ಳುವ ವಿವೇಕವೇ ನಮ್ಮಲ್ಲಿ ಇಲ್ಲವೆಂದು ತೋರುತ್ತದೆ. ಅದರ ಬದಲು ಹಿಂದಿನದನ್ನು ಕೇವಲ ಆರಾಧಿಸುವುದರ ಮೂಲಕ, ನಮಗೂ ಅದಕ್ಕೂ ಇರುವ ಅಂತರವನ್ನು ಕಾಯ್ದುಕೊಳ್ಳುವ ‘ಜಾಣತನ’ವೋ ಅಥವಾ ಅದರ ವ್ಯಕ್ತವಾಗುವುದರ ಮೂಲಕ ಬರಬಹುದಾದ ಪ್ರತಿಷ್ಠೆಯನ್ನು ಪ್ರದರ್ಶಿಸುವ ಚಾಪಲ್ಯವೋ ಪ್ರಧಾನವಾಗಿರುವಂತೆ ತೋರುತ್ತದೆ. ಸಾರಾಂಶವೇನೆಂದರೆ, ವೈಚಾರಿಕತೆಗಿಂತ ಕುರುಡು ನಂಬಿಕೆಗಳೇ ನಮ್ಮ ಬದುಕನ್ನು ನಿಯಂತ್ರಿಸುತ್ತಿವೆ.

ಈ ನಮ್ಮಕಾಲಮಾನವಾದ ಇಪ್ಪತ್ತನೆಯ ಶತಮಾನವನ್ನು ಮನುಷ್ಯನ ನಾಗರಿಕ ಚರಿತ್ರೆಯಲ್ಲಿ ಅನೇಕ ಮಹತ್ಸಾಧನೆಗಳ ಹಾಗೂ ಆವಿಷ್ಕಾರಗಳ ಕಾಲ ಎಂದು ಕರೆಯಬಹುದು. ಈ ಸಾಧನೆ ಮತ್ತು ಆವಿಷ್ಕಾರಗಳಿಗೆ ಕಾರಣವಾದದ್ದರಲ್ಲಿ ಮುಖ್ಯವಾದದ್ದು ವಿಜ್ಞಾನ. ಒಂದು ರೀತಿಯಲ್ಲಿ ಈ ಕಾಲವನ್ನು ವಿಜ್ಞಾನ ಯುಗ ಎಂದು ಕರೆಯಲೂಬಹುದು. ವೈಜ್ಞಾನಿಕವಾದ ಮಹತ್ಸಾಧನೆಗಳ ಮೂಲಕ  ಮನುಷ್ಯತ್ವ ತನ್ನ ವೈಚಾರಿಕತೆಯನ್ನೂ ಸಾಹಸವನ್ನೂ ಏಕಕಾಲಕ್ಕೆ ಪ್ರಕಟಿಸಿಕೊಂಡಿದೆ. ವಿಜ್ಞಾನದ ವಿವಿಧ ಆವಿಷ್ಕಾರಗಳಿಂದಾಗಿ ಮನುಷ್ಯನ ನಾಗರಿಕ ಜೀವನ ಅನೇಕ ಬಗೆಯ ಸವಲತ್ತುಗಳನ್ನು ಪಡೆದುಕೊಂಡಿದೆ. ವಿಜ್ಞಾನ ತಂದ ಈ ಸವಲತ್ತುಗಳನ್ನು ಬಳಸಿಕೊಳ್ಳುವುದರಲ್ಲಿ ಆಸಕ್ತಿ ವಹಿಸಿದ ನಮ್ಮ ಬದುಕು ವೈಜ್ಞಾನಿಕ ಮನೋಧರ್ಮವನ್ನು ನಮ್ಮ ಜೀವನ ಕ್ರಮದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಅಂತಹ ಆಸಕ್ತಿಯನ್ನೇನೂ ತೋರಿಸದಿರುವುದು ಒಂದು ವಿಪರ‍್ಯಾಸವಾಗಿದೆ. ವೈಜ್ಞಾನಿಕ ಮನೋಧರ್ಮ ಎಂದರೆ ನಮ್ಮ ವಿಚಾರ ಬುದ್ಧಿಯನ್ನು ತುಕ್ಕು ಹಿಡಿಯದಂತೆ ಉಳಿಸಿಕೊಳ್ಳುವ ಒಂದು ಸಾಮರ್ಥ್ಯ; ಪ್ರತಿಯೊಂದನ್ನು ಪ್ರಶ್ನಿಸುತ್ತ, ಪರೀಕ್ಷೆಗೆ ಒಳಗುಪಡಿಸುತ್ತ, ಅದರ ಸತ್ಯಾಸತ್ಯತೆಗಳನ್ನು ಪರೀಶೀಲಿಸುವ ದಿಟ್ಟತನ ಹಾಗೂ ವಿವೇಚನೆ. ಈ ಬಗೆಯ ವೈಚಾರಿಕತೆಯ ಕೊರತೆಯಿಂದಾಗಿ ನಾವು ನಮ್ಮ ಚರಿತ್ರೆಯನ್ನಾಗಲಿ, ಧರ್ಮವನ್ನಾಗಲಿ, ಸಂಸ್ಕೃತಿಯನ್ನಾಗಲಿ ಸರಿಯಾಗಿ ಅರ್ಥ ಮಾಡಿಕೊಳ್ಳದೆ ನಮ್ಮ ಸಮಕಾಲೀನತೆಯಲ್ಲಿ ಸಂಭವಿಸಿದ ಎಷ್ಟೋ ಅನರ್ಥಗಳಿಗೆ ಕಾರಣರಾಗಿದ್ದೇವೆ.

ಈ ಅನರ್ಥಗಳಲ್ಲಿ ನಾವು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾದದ್ದು ಇತ್ತೀಚೆಗೆ ಹೆಚ್ಚುತ್ತಿರುವ ಧಾರ್ಮಿಕ ಮೂಲಭೂತವಾದಿಗಳಿಂದ ನಡೆದ ಚರಿತ್ರೆಯ ಅಪವ್ಯಾಖ್ಯಾನಗಳನ್ನು. ಬಾಬರೀಮಸೀದಿ ಧ್ವಂಸದ ಪ್ರಕರಣವೇ ಇದಕ್ಕೆ ಒಂದು ಸಾಕ್ಷಿ. ‘ಮತಗಳೆಲ್ಲವೂ ಪಥಗಳು’ ಎಂಬ ಶ್ರೀ ರಾಮಕೃಷ್ಣ ಪರಮಹಂಸರ ಮಹಾವಾಕ್ಯವನ್ನು ಮರೆತು, ಮತಧರ್ಮ-ದೇವಾಲಯಾದಿಗಳನ್ನು ವಿಭಜಕ ಶಕ್ತಿಗಳನ್ನಾಗಿ ಮಾಡಿಕೊಂಡು, ನಮ್ಮ ಸಮಕಾಲೀನ ಬದುಕನ್ನು ಛಿದ್ರಗೊಳಿಸಲು ಪ್ರಯತ್ನಿಸಿದ ‘ಧಾರ್ಮಿಕ ರಾಜಕಾರಣ’ದ ದುಷ್ಪರಿಣಾಮಗಳನ್ನು ನಾವೆಲ್ಲಾ ಬಲ್ಲೆವು. ಒಬ್ಬ ಬರೆಹಗಾರನಾಗಿ ನನಗೆ ಧರ್ಮದಲ್ಲಾಗಲಿ, ದೇವಸ್ಥಾನಗಳಲ್ಲಾಗಲೀ, ದೇವಾಲಯಗಳಲ್ಲಾಗಲೀ ಮೊದಲ ಆಸಕ್ತಿ ಇಲ್ಲ. ನನ್ನ ಮೊದಲ ಆಸಕ್ತಿ ಮನುಷ್ಯನನ್ನು ಕುರಿತು, ಈ ಮನುಷ್ಯರನ್ನು ಒಳಗೊಂಡ ಸಾಮಾಜಿಕ ಸ್ವಾಸ್ಥ  ಹಾಗೂ ಕ್ಷೇಮವನ್ನು ಕುರಿತು. ಯಾಕೆಂದರೆ ದೇವರಾಗಲಿ, ದೇವಸ್ಥಾನಗಳಾಲಿ, ಧರ್ಮವಾಗಲೀ ಇರುವುದು ಮನುಷ್ಯರಿಗಾಗಿ ಮತ್ತು ಮನುಷ್ಯರಿಂದ. ದೇವರು, ಧರ್ಮ ಹಾಗೂ ದೇವಾಲಯಗಳು ಒಟ್ಟು ಮನುಷ್ಯ ಸಂಸ್ಕೃತಿಯಲ್ಲಿ ಮಹತ್ವದ ಘಟಕಗಳೆಂಬುದನ್ನು ನಾನು ತಿಳಿದಿದ್ದೇನೆ. ಹಾಗೂ ಸಂಸ್ಕೃತಿ ಎಂಬ ಪದದ ನಿಜವಾದ ಅರ್ಥವೆಂದರೆ ಯಾವುದು ನಮ್ಮೆಲ್ಲರನ್ನೂ ಹಿಡಿದು ಕೂಡಿಸುತ್ತದೆಯೋ ಅಂತಹ ಸಂಯೋಜಕ ಶಕ್ತಿ ಎನ್ನುವುದು. ಯಾವ್ಯಾವುದು ನಮ್ಮನ್ನು ಹಿಡಿದು ಕೂಡಿಸುವುದೋ ಅದು ಸಂಸ್ಕೃತಿ; ಯಾವುದು ನಮ್ಮನ್ನು ಒಡೆಯುತ್ತದೆಯೋ ಅದು ವಿಕೃತಿ. ಹಾಗೆಯೇ ಭಾರತೀಯ ಸಂಸ್ಕೃತಿ ಅನ್ನುವುದು ಅನೇಕ ವೈವಿಧ್ಯತೆಗಳನ್ನು ತನ್ನಲ್ಲಿ ಒಳಕೊಳ್ಳುವ ಬಹುಮುಖತ್ವದ ಲಕ್ಷಣ ಉಳ್ಳದ್ದು. ಅನೇಕ ಪರಕೀಯ ಸಂಸ್ಕೃತಿಗಳನ್ನು ಅದು ಬರಮಾಡಿಕೊಂಡೂ, ತನ್ನತನವನ್ನು ಕಳೆದುಕೊಳ್ಳದೆ, ಅವುಗಳೆಲ್ಲದರ ಸಹಬಾಳ್ವೆಗೆ ಅವಕಾಶ ಮಾಡಿಕೊಟ್ಟಿರುವ ಒಂದು ಉದಾರವಾದೀ ಸ್ವರೂಪ ಉಳ್ಳದ್ದು. ಭಾರತೀಯ ಸಂಸ್ಕೃತಿಗೆ ಅನ್ಯಧರ್ಮಗಳು ಕೊಟ್ಟ ಕೊಡುಗೆಯನ್ನೂ ನಾವು ಮರೆಯುವಂತಿಲ್ಲ. ಜಗತ್ತಿನ ಬಹು ದೊಡ್ಡ ಧರ್ಮಗಳು ಇಲ್ಲಿ ಬಂದು ನೆಲಸಿವೆ. ಪ್ರಾಚೀನ ಹಿಂದೂ ಧರ್ಮದ ಜತೆಗೆ ಕೆಸ್ತ, ಮಹಮದೀಯ, ಬೌದ್ಧ, ಜೈನ, ಸಿಖ್, ಪಾರಸೀ, ಸೂಫೀ ಹೀಗೆ ವಿವಿಧ ಧಾರ್ಮಿಕ ಧಾರೆಗಳು ಇಲ್ಲಿ ಪ್ರವಹಿಸಿವೆ. ಭಾರತದ ಬಹುಮುಖೀ ಸಂಸ್ಕೃತಿಯನ್ನು ಇವು ರೂಪಿಸಿವೆ. ಚಿತ್ರ, ಶಿಲ್ಪ, ಸಂಗೀತ ಸಾಹಿತ್ಯ ಹಾಗೂ ವಿವಿಧ ವೈಚಾರಿಕ ಪ್ರಣಾಲಿಗಳು, ಈ ವಿವಿಧ ಧರ್ಮಗಳವರಿಂದ ಇಲ್ಲಿ ಸೇರ್ಪಡೆಯಾಗಿವೆ. ಆಸ್ತಿಕತೆಯಂತೆಯೆ, ನಾಸ್ತಿಕ್ಯವೂ, ದೇವಾಲಯ ನಿರ್ಮಾಣದಂತೆ, ದೇವಸ್ಥಾನಗಳ ನಿರಾಕರಣೆಯ ನಿಲುವುಗಳೂ ಇಲ್ಲಿನ ಚರಿತ್ರೆಯಲ್ಲಿ ಕಾಣಿಸಿಕೊಂಡಿವೆ. ಇದರ ಜತೆಗೆ ಅನೇಕ ಪ್ರಾದೇಶಿಕ ಉಪಸಂಸ್ಕೃತಿಯ ವೈಶಿಷ್ಟ ಗಳೂ ವಿವಿಧ ಪ್ರಾಂತೀಯ ಭಾಷೆ-ಸಾಹಿತ್ಯಗಳ ಮೂಲಕ ಅಭಿವ್ಯಕ್ತಿಯನ್ನು ಪಡೆದಿವೆ. ಇವುಗಳೆಲ್ಲದರ ಮೊತ್ತವೂ, ಬಹು ಸಂಕೀರ್ಣವೂ ಅದರ ಭಾರತೀಯ ಸಂಸ್ಕೃತಿಯ ಬಹುಮುಖತ್ವವನ್ನು ಅರ್ಥ ಮಾಡಿಕೊಳ್ಳದೆ, ಇಂಡಿಯಾದಲ್ಲಿರುವುದೆಲ್ಲವೂ ‘ಹಿಂದೂ ಸಂಸ್ಕೃತಿ’ ಎಂದು ವ್ಯಾಖ್ಯಾನ ಮಾಡುವುದು ಅತ್ಯಂತ ಅವೈಚಾರಿಕವಾದದ್ದು ಮಾತ್ರವಲ್ಲ, ಅಪಾಯಕಾರಿಯಾದದ್ದೂ ಹೌದು. ಆದ ಕಾರಣ ಭಾರತೀಯ ಸಂಸ್ಕೃತಿ ಎಂದರೆ ಹಿಂದೂಧರ್ಮದವರ ಸಂಸ್ಕೃತಿ ಎಂದೂ, ಭಾರತೀಯ ಧಾರ್ಮಿಕ ಪರಂಪರೆ ಎಂದರೆ ಹಿಂದೂ ಧರ್ಮದ ಪರಂಪರೆ ಎಂದೂ ಅರ್ಥವಲ್ಲ. ನಮ್ಮ ಸಂಸ್ಕೃತಿಯ ಬಹುಮುಖತ್ವವನ್ನು ನಿರಾಕರಿಸುತ್ತ, ಏಕಮುಖ ಸಂಸ್ಕೃತಿಯ ಪ್ರತಿಪಾದನೆ ಮಾಡುವ ಅವೈಚಾರಿಕ ನಿಲುವುಗಳನ್ನು ನಾವು ಎದುರಿಸಬೇಕಾಗಿದೆ.

ಸಮಕಾಲೀನತೆಯ ಇಂತಹ ಸಂದಿಗ್ಧ ಸ್ಥಿತಿಯಲ್ಲಿ, ನಮ್ಮ ತರುಣ ಜನಾಂಗ ಅಥವಾ ಯುವಕರು ವಹಿಸುತ್ತಿರುವ ಪಾತ್ರವೇನು ಅನ್ನುವುದನ್ನು ಕುರಿತು ಯೋಚಿಸುವುದು ನಮ್ಮಲ್ಲಿ ಇನ್ನೂ ಹೆಚ್ಚಿನ ಆತಂಕಗಳನ್ನು ಹುಟ್ಟಿಸುತ್ತದೆ. ಯೌವನ ಅನ್ನುವುದು ಉತ್ಸಾಹಕ್ಕೆ, ಕ್ರಿಯಾಶೀಲತೆಗೆ ಹಾಗೂ ಕಲ್ಪಾನಶಕ್ತಿಗೆ ಒಂದು ಸಂಕೇತವಾಗಿದೆ ಎಂದು ಅಂದುಕೊಂಡರೂ, ಈ ಹೊತ್ತಿನ ಯುವಕರು, ನಾವು ಈವರೆಗೂ ಪ್ರಸ್ತಾಪಿಸಿದ ಅಸ್ವಸ್ಥ ಪರಿಸರದ ಒಂದು ಅನಿವಾರ‍್ಯ ಭಾಗವಾಗಿದ್ದಾರೆ. ಹಾಗೆ ನೋಡಿದರೆ ಜಗತ್ತಿನಲ್ಲಿ ಸಂಭವಿಸಿರುವ ಎಲ್ಲ ಮಹತ್ವದ ಬದಲಾವಣೆಗಳಾಗಿರುವುದೂ ಯುವಶಕ್ತಿಯ ಸಾಮೂಹಿಕ ಬೆಂಬಲಗಳಿಂದ. ಈ ಮಾತು ಭಾರತೀಯ ಸ್ವಾತಂತ್ರ  ಸಂಗ್ರಾಮದ ದೃಷ್ಟಿಯಿಂದಲೂ ನಿಜವಾಗಿದೆ. ಆದರೆ, ಈಗ ಸ್ವಾತಂತ್ರೊ ತ್ತರ ಪರಿಸರದ ಯುವಕರು, ಯಾಕಿಷ್ಟು ದುರ್ಬಲರಾಗಿದ್ದಾರೆ? ಯಾಕಿಷ್ಟು ಅವೈಚಾರಿಕವಾಗಿದ್ದಾರೆ? ಯಾಕೆ ಯಾವ ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸಲಾರದವರಾಗಿದ್ದಾರೆ? ಯಾಕೆ ಸ್ವಂತ ವ್ಯಕ್ತಿತ್ವ ಹಾಗೂ ವಿವೇಚನೆಗಳಿಲ್ಲದೆ, ಎಷ್ಟೋ ವೇಳೆ ಪಟ್ಟಭದ್ರ ಹಿತಾಸಕ್ತಿಗಳ ಕೈಯ್ಯ ಸ್ಫೋಟಕ ಸಾಮಗ್ರಿಗಳಂತೆ ಬಳಕೆಯಾಗುತ್ತಾರೆ? ಯಾಕೆ, ಮದುವೆಯ ಮಾರ್ಕೆಟ್ಟುಗಳಲ್ಲಿ ವರದಕ್ಷಿಣೆಯ ಹರಾಜಿಗೆ ಸಿದ್ಧವಾದ ವಸ್ತುಗಳಂತೆ ವರ್ತಿಸುತ್ತಾರೆ?

ನಮ್ಮ ಯುವಕರು ಒಂದು ನಿಶ್ಚಿತವಾದ ಪ್ರಜ್ಞೆಯಲ್ಲಿ ಬೇರೂರದೆ, ಹಲವು ಹತ್ತು ಪ್ರಭಾವಗಳಿಗೆ ಸುತ್ತಿಕೊಳ್ಳುವ ಬಂದಳಿಕೆಗಳಾಗಿ ಮಾರ್ಪಟ್ಟಿರುವುದಕ್ಕೆ ಮುಖ್ಯ ಕಾರಣ, ಅವರು ಈ ದೇಶದ ಚರಿತ್ರೆಗೆ, ಹಾಗೂ ವರ್ತಮಾನದ ನಿಜವಾದ ವಾಸ್ತವಗಳಿಗೆ ನೇರವಾಗಿ ಸಂಬಂಧ ಪಡದೆ ಇರುವ ಒಂದು ಪರಕೀಯ ಸ್ಥಿತಿಯೆ ಎಂದು ತೋರುತ್ತದೆ.  ಅವರು ತಮ್ಮ ಸುತ್ತ ಕಾಣುವ ರಾಜಕಾರಣವು, ಸಾಧ್ಯವಾದಷ್ಟು ಬೇಗ ಹೇಗೋ ಮೇಲೇರಿ, ಸ್ಥಾನ-ಮಾನಗಳನ್ನು ಗಳಿಸಿಕೊಳ್ಳುವ ಅನೇಕ ಮಾರ್ಗಗಳನ್ನು ಮಾದರಿಯಾಗಿ ಒಡ್ಡುವಂತೆ ತೋರುತ್ತದೆ. ಮತ್ತು ಸ್ವಾತಂತ್ರ  ಪೂರ್ವದಲ್ಲಿ ಮಾರ್ಗದರ್ಶಕ ಸತ್ವಗಳು ನಮ್ಮ ಪರಿಸರದಲ್ಲಿ ಇಲ್ಲದಿರುವುದೂ ಈ ಪರಿಸ್ಥಿತಿಗೆ ಕಾರಣವಾಗಿರಬಹುದು. ಜತೆಗೆ ಈ ಹೊತ್ತಿನ ನಮ್ಮ ಶಿಕ್ಷಣವು ಅವರಲ್ಲಿ ನಿಜವಾದ ವೈಜ್ಞಾನಿಕ ಮನೋಧರ್ಮವನ್ನಾಗಲೀ, ಪರಂಪರೆಯ ಸತ್ವವನ್ನಾಗಲೀ, ಮೌಲ್ಯಪ್ರಜ್ಞೆಯನ್ನಾಗಲೀ ಪ್ರಚೋದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂದು ಧೈರ್ಯವಾಗಿ ಹೇಳಲು ಬರುವುದಿಲ್ಲ. ಪ್ರಸ್ತುತ ಶಿಕ್ಷಣವು ಈ ಯುವಕರನ್ನು, ತಾವು ನಿಂತ ನೆಲಕ್ಕೆ ತಮ್ಮ ಪರಂಪರೆಗೆ, ತಾವು ಹುಟ್ಟಿ ಬೆಳೆದ ಗ್ರಾಮಾಂತರ ಪರಿಸರಕ್ಕೆ ಬಹುಮಟ್ಟಿಗೆ ಪರಕೀಯರನ್ನಾಗಿ ಮಾಡುತ್ತದೆ. ಈ ಕಾರಣದಿಂದಲೆ, ಒಮ್ಮೆ ಶಿಕ್ಷಣ ಪಡೆದ ಯುವಕರು, ಈ ದೇಶದ ಲಕ್ಷಾಂತರ ಗ್ರಾಮೀಣ ಬಡಜನತೆಯ ದುಡಿಮೆಯ ಬಲದಿಂದಾಗಿಯೆ, ತಾವು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿದೆ ಎಂಬ ಸಂಗತಿಯನ್ನು ಥಣ್ಣಗೆ ಮರೆತು, ತಾವು ಪಡೆದ ಶಿಕ್ಷಣದ ಪ್ರಯೋಜನವು ತಮ್ಮ ಊರಿಗೆ, ಕೇರಿಗೆ ಹಾಗೂ ಸಮಾಜಕ್ಕೆ ಯಾವುದೇ ರೀತಿಯಲ್ಲಾದರೂ ಸಲ್ಲುವುದು ಅಗತ್ಯವೆಂಬ ಬಗ್ಗೆ ಕಿಂಚಿತ್ತೂ ಯೋಚನೆ ಮಾಡಲಾರದವರಾಗಿದ್ದಾರೆ. ಯಾವ ಶಿಕ್ಷಣ ನಮ್ಮ ಯುವಕರಲ್ಲಿ ಸಾಮಾಜಿಕ ಪ್ರಜ್ಞೆಯನ್ನೂ, ವೈಚಾರಿಕತೆಯನ್ನೂ, ಸೇವಾ ಮನೋಧರ್ಮವನ್ನೂ ಎಚ್ಚರಿಸುವುದರ ಮೂಲಕ ಅವರನ್ನು ಹೃದಯವಂತ ಮನುಷ್ಯರನ್ನಾಗಿ ಮಾಡಲಾರದೋ ಅಂತಹ ವ್ಯವಸ್ಥೆಯಿಂದ ಏನು ಪ್ರಯೋಜನ-ಎಂದು ಪ್ರಶ್ನಿಸುವುದು ಅನಿವಾರ್ಯವಾಗಿದೆ.

ಚದುರಿದ ಚಿಂತನೆಗಳು : ೨೦೦೦