ಕರ್ನಾಟಕದ ಪಾರಂಪರಿಕ ಶಿಲ್ಪಕಲೆ ಭಾರತೀಯ ಶಿಲ್ಪಕಲೆಯ ಜೊತೆ ಜೊತೆಗೆ ಬೆಳೆದು ಉಳಿದು ಬಂದಿರುವಂತೆ ತನ್ನದೇ ಆದ ಕೊಡುಗೆಯನ್ನೂ ಭಾರತೀಯ ಶಿಲ್ಪಕಲಾ ಪ್ರಪಂಚಕ್ಕೆ ನೀಡಿದೆ.

[1] ಚಾಲುಕ್ಯ, ವಿಜಯನಗರ ಸಾಮ್ರಾಜ್ಯಗಳ ಶಿಲ್ಪಕಲೆಯ ಬೆಳವಣಿಗೆಗಳ ನಡುವೆ ಹಲವು ಸುಂದರ ಪುಟಗಳಿವೆಯಾದರೂ ವಿಜಯನಗರದ ಶಿಲ್ಪಶೈಲಿ ಹಿಂದಿನ ಶಿಲ್ಪಶೈಲಿಗಳ ಕೊಡುಗೆಗಳಿಂದ ಪಡೆದುಕೊಂಡು ನೀಡಿದ ತನ್ನದೇ ಆದ ವಿಶಿಷ್ಟ ಫಲ ಮುಂದಿನ ಶಿಲ್ಪಕಲೆಯ ಬೆಳವಣಿಗೆಗೆ ಸ್ಪೂರ್ತಿ ನೀಡಿದ್ದು ಸಹಜ ಮತ್ತು ಸ್ವಾಭಾವಿಕ. ವಿಜಯನಗರದ ಅಂದಿನ ಶಿಲ್ಪಿಗಳು ಗ್ರಾನೈಟ್‌ ಶಿಲೆಯನ್ನು ದುಡಿಸಿಕೊಂಡು ಮಾಡಿದ ಪ್ರಯೋಗ, ಸರಳತೆ ಮತ್ತು ಸುಂದರತೆಗಳು ಬೆರಗನ್ನುಂಟು ಮಾಡುವಂಥವುಗಳು. ಆ ನಂತರದಲ್ಲಿ ಕೆಲವಾರು ದಶಕಗಳ ಕಾಲ ನಮ್ಮ ಪಾರಂಪರಿಕ ಶಿಲ್ಪಕಲೆ ಯಂತ್ರದ ಚಕ್ರವಾಯಿತೇ ಹೊರತು ಪುಟಿಯುವ ಚಿಲುಮೆಯಾಗಲಿಲ್ಲ.

ನಮ್ಮ ನಾಡನ್ನು ಆಳಿದ ಮೊಗಲ್‌ ಮತ್ತು ಬ್ರಿಟೀಷರ ಆಡಳಿತಾವಧಿಯಲ್ಲಿ ನಮ್ಮ ಪರಂಪರೆ ಅಥವಾ ಸಂಪ್ರದಾಯ ಶಿಲ್ಪಿಗಳು ಅಷ್ಟೇನೂ ಪ್ರೋತ್ಸಾಹಕರ ವಾತಾವರಣದಲ್ಲಿ ಇರಲಿಲ್ಲ. ಆದರೆ ಬ್ರಿಟೀಷರ ಅಂತಿಮ ದಿನಗಳಲ್ಲಿ ಅಕಡೆಮಿಕ್‌ ಆದ ಶಿಲ್ಪಕಲಾ ಸೃಷ್ಟಿಯ ಶೈಲಿ (ವಿಶೇಷವಾಗಿ ಮಾನವಾಕಾರಗಳು) ಅವರು ಆರಂಭಿಸಿದ ಕಲಾ ಶಾಲೆಗಳಲ್ಲಿ ಕಲಿಸಲ್ಪಟ್ಟಿತಾದರೂ ನಮ್ಮ ಶಿಲ್ಪಕಲಾವಿದರಿಗೆ ಭಾರತ ಕಂಡ ಸ್ವಾತಂತ್ಯ್ರದ ಬೆಳಕಲ್ಲಷ್ಟೇ ಆಧುನಿಕ ಅಥವಾ ನವ್ಯದ ಕಲ್ಪನೆಯ ಜ್ಞಾನ ಮೂಡಲು ಸಾಧ್ಯವಾಯಿತೆನ್ನಬೇಕು. ಹತ್ತೊಂಭತ್ತನೆಯ ಶತಮಾನದ ಅಂತಿಮ ವರ್ಷಗಳಲ್ಲಿನ ಚಿತ್ರ – ಶಿಲ್ಪ ಮತ್ತಿತರ ಕಲೆಗಳಲ್ಲಿ (ಇತರೆಲ್ಲ ಕ್ಷೇತ್ರಗಳನ್ನು ಒಳಗೊಂಡಂತೆ) ಬಳಸಲು ಆರಂಭಗೊಂಡ ಆಧುನಿಕ ಎಂಬ ಪದ[2] ಇಡೀ ಇಪ್ಪತ್ತನೆಯ ಶತಮಾನದ ಕಲಾಸೃಷ್ಟಿಗೆ ಪ್ರಮುಖ ಶೀರ್ಷಿಕೆಯೂ ಆಗಿ ಬಳಸಿಕೊಳ್ಳಲ್ಪಟ್ಟಿದ್ದುದು ಗಮನಾರ್ಹ ಅಂಶ. ಆಧುನಿಕ ಅಥವಾ ನವ್ಯಕಲೆ ಎಂಬ ಪದಗಳನ್ನು ಪ್ರಸ್ತಾಪಿಸುವಾಗ ನಮ್ಮಲ್ಲಿ ಪಾಶ್ಚಾತ್ಯ ಕಲೆಯ ಪ್ರಭಾವ ಅಥವಾ ಅನುಕರಣೆ ದಟ್ಟವಾಗಿ ಕಾಣುತ್ತದೆ, ಕಾಡುತ್ತದೆ.[3] ಅದು ಸಹಜವೂ ಕೂಡ. ಪಾಶ್ಚಾತ್ಯ ಕಲೆಯ ಸಂಪರ್ಕದಿಂದಾಗಿಯೇ ನಮ್ಮ ದೇಶದ ದೃಶ್ಯ ಕಲೆಯಲ್ಲೂ ಹೊಸತನ ಮೂಡಲಾರಂಭಿಸಿತು (ಅನಿವಾರ್ಯವಾಗಿ ಹೀಗೆ ಹೇಳಲೇಬೇಕಾಗಿದೆ.) ಆರಂಭದಲ್ಲಿ ಆಧುನಿಕ ಚಿತ್ರಕಲಾವಿದರು ಎದುರಿಸಿದ ವಿವಾದಗಳು, ವೈರುಧ್ಯಗಳು ಏನೇನಿವೆಯೋ ಅವೆಲ್ಲ ಶಿಲ್ಪಕಲೆಯಲ್ಲೂ ಕಾಣಿಸಿಕೊಂಡವು, ಅದು ಸಹಜವೂ ಕೂಡ ಆಗಿತ್ತು.

ಇಪ್ಪತ್ತನೆಯ ಶತಮಾನದ ಭಾರತದ ಶಿಲ್ಪಕಲೆಯ ಆಧುನಿಕ ಧ್ವನಿ ಮೊದಲೆರಡು ದಶಕಗಳಲ್ಲಿ ಕಾಣಿಸಿಕೊಂಡು ಅನಂತರದ ದಶಕಗಳಲ್ಲಿ ಅದು ಗಂಭೀರವಾಗಿ ಕೇಳಿಬಂತು. ದೇವಿಪ್ರಸಾದ ರಾಯ್ ಚೌಧರಿ, ಪ್ರದೋಷ್‌ ದಾಸ್‌ಗುಪ್ತ, ಶಂಕೋ ಚೌಧರಿ, ರಾಮ ಕಿಂಕರ್‌ಬೈಯ್ಸ್‌ (ಎಲ್ಲರೂ ರಾಜ್ಯದ ಹೊರಗಿನವರು) ಮೊದಲಾದವರ ಶಿಲ್ಪಗಳು ಎತ್ತರದ ಧ್ವನಿಯಲ್ಲಿ ಸದ್ದುಮಾಡಿ, ಜೀವದುಂಬಿ ಇತರ ಶಿಲ್ಪಿಗಳಿಗೂ ಸ್ಪೂರ್ತಿ ನೀಡುವಲ್ಲಿ ಯಶಸ್ಸು ಪಡೆದವು.

ನಮ್ಮ ಅಂದಿನ ರಾಜ್ಯದ ಆಧುನಿಕ ಶಿಲ್ಪ ಕಲೆಯ ಚರಿತ್ರೆಯ ಆರಂಭದ ಪುಟಗಳು (೨೦ನೇ ಶತಮಾನದ ೨ – ೩ ದಶಕಗಳು) ಅಷ್ಟೇನೂ ರೋಚಕವಾಗಿಲ್ಲ. ಕಾರಣ ಪಶ್ಚಾತ್ಯ ಆಧುನಿಕ ಸಮಕಾಲೀನ ದೃಶ್ಯ ಕಲೆಯಂತೆ ನಮ್ಮ ಆಧುನಿಕ ಸಮಕಾಲ ಈನ ದೃಶ್ಯ ಕಲೆ ತನ್ನ ಆ ಹಿಂದಿನ ಕಲಾ ಸಂಪ್ರದಾಯಕ್ಕೆ ತಿರುಗೇಟು ನೀಡಲು ಅಥವಾ ದಿಕ್ಕರಿಸಲು ಹುಟ್ಟಿಕೊಂಡುದಲ್ಲ. ಹೊಸ ಅನುಭವಗಳ ಅಭಿವ್ಯಕ್ತಿಗಾಗಿ, ದರ್ಶನಕ್ಕಾಗಿ ಬ್ರಿಟೀಷ್‌ ಅಕಾಡೆಮಿಕ್‌ ಶೈಲಿಯನ್ನು ನಮ್ಮ ಮೂಲ (ದೇಶೀ) ನೆಲೆಯ ಸ್ತ್ವಗಳೊಂದಿಗೆ ಸಂಯೋಜಿಸಿ, ಮಗೆ ಬೇಕಾದಂಥೆ ಸೃಷ್ಟಿಸಿಕೊಂಡುದಾಗಿತ್ತು.[4] (ಈ ನಡುವೆ ಸಾಂಪ್ರದಾಯಿಕ ಶಿಲ್ಪಗಳೂ ಸೃಷ್ಟಿಯಾಗುತ್ತಲೇ ಇವೆ.) ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಅಂದು ನಮ್ಮನ್ನು ಆಳುತ್ತಿದ್ದ ಬ್ರಿಟೀಷ್‌ ವಸಹಾತುಶಾಹಿ ವ್ಯವಸ್ಥೆಯಲ್ಲಿ ಅವರ ಕಲಾಶೈಲಿಯನ್ನು[5] ನಮ್ಮ ದೇಶೀ ಕಲಾವಿದರು (ಬ್ರಿಟೀಷ್‌ ವಿಕ್ಟೋರಿಯನ್‌ ಶೈಲಿ ಅಥವಾ ಆಧುನಿಕ ವಾಸ್ತವ ಶೈಲಿ[6]) ನೇರವಾಗಿ ಹಸಿಹಸಿಯಾಗಿ ಅನುಸರಿಸಿದರು. ಹೀಗೆ ಅನುಕರಿಸಿ, ಅನುಸರಿಸಿದ್ದರಿಂದಾಗಿ ಆರಂಭದ ದಶಕಗಳ ಶಿಲ್ಪಕಲಾಕೃತಿಗಳಲ್ಲಿ ಆಂತರಿಕ ಒತ್ತಡ, ಅಭಿವ್ಯಕ್ತಿಯ ತುಡಿತಗಳ ಹಾಜರಿಯಲ್ಲಿ ನಿರಂತರತೆ ಕಂಡುಬರುವುದಿಲ್ಲ. ಆದರೆ ಇವರ ಪ್ರಯತ್ನಗಳು ಮುಂದಿನ ಯುವಶಿಲ್ಪಿಗಳಿಗೆ ಹೊಸ ಸ್ಪೂರ್ತಿ ನೀಡಿದ್ದಂತೂ ಸತ್ಯ. ಈ ಮಾತುಗಳಿಗೆ ಉದಾಹರಣೆಯಾಗಿ ಕೆ. ವೆಂಕಟಪ್ಪ,[7] ರೂಪಶಿಲ್ಪಿ ಬಸವಯ್ಯ, ಆರ್.ಎಸ್‌. ನಾಯ್ಡು, ಧನಂಜಯ ಶಿಲ್ಪಿ, ವೀರಪ್ಪ ಕುಂಬಾರ, ಶ್ರೀ ಶಂಕರ, ವಾದಿರಾಜ, ಎ.ಸಿ.ಎಚ್‌. ಆಚಾರ್ಯ ಮೊದಲಾದ ಶಿಲ್ಪಿಗಳು ಹಾಗೂ ಅವರ ಶಿಲ್ಪಗಳನ್ನು ನೆನಪಿಸಿಕೊಳ್ಳುಬಹುದು.

01_245_SS-KUH

ರಾಜಾರಾಂ ಅವರ ಶಿಲ್ಪ. ‘ತಾಯಿ – ಮಗು’ ಮಾಧ್ಯಮ: ಮರ

 

ಆರಂಭದಲ್ಲಿ ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ, ನಂತರ ಕಲಕತ್ತಾದ ಕಲಾಶಾಲೆಯಲ್ಲಿ ಶಿಕ್ಷಣ ಪಡೆದು ಮೈಸೂರಿಗೆ ಮರಳಿದ್ದ ಕೆ.ವೆಂಕಟಪ್ಪ (೧೮೮೭ – ೧೯೬೨) ಪಾಶ್ಚಾತ್ಯ ಚಿತ್ರ – ಶಿಲ್ಪಕಲೆಯ ಬಗೆಗಿನ ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಂಡಿದ್ದರು. ಮಾತ್ರವಲ್ಲ ಕೆಲವೇ ದಿನಗಳಲ್ಲಿ ಆ ಹಾದಿಯ ವರ್ಣಚಿತ್ರ ಹಾಗೂ ಶಿಲ್ಪಗಳನ್ನು ಸೃಷ್ಟಿಸಿದರು. ಹೊಸ ಭಾವ ವೈಭವಗಳಿಂದ ಕೂಡಿದ ‘ರವೀಂದ್ರರ ಭಾವಶಿಲ್ಪ’, ‘ಹೋಟೆಲ್‌ ಮಾಣಿ’ಯ ಶಿಲ್ಪಗಳು ಮೇಲಿನ ಮಾತುಗಳಿಗೆ ಪುಷ್ಟಿ ನೀಡುವಂತಹವುಗಳಾಗಿವೆ.

ಹೀಗೆ ನಮ್ಮ ರಾಜ್ಯದ ಶಿಲ್ಪಕಲೆಯಲ್ಲಿನ ಆಧುನಿಕತೆ ವೆಂಕಟಪ್ಪನವರ ಕಾಲದಿಂದಲೇ ಅಂಕುರಿಸಿತೆಂದರೆ ತಪ್ಪಾಗಲಾರದು. ರೂಪಶಿಲ್ಪಿ ಎಂದೇ ಖ್ಯಾತರಾಗಿರುವ ಬಸವಯ್ಯ (೧೯೦೦ – ೧೯೭೪) ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಶಾಲೆಯಲ್ಲಿ ಕಲಿತವರು. ನಂತರದ ದಿನಗಳಲ್ಲಿ ಮುಂಬೈಯ ಶಿಲ್ಪಿಗಳ ಹಲವು ಸ್ಟೂಡಿಯೋಗಳಲ್ಲಿ ಕಲಿತು ರೂಪಶಿಲ್ಪದ ಉನ್ನತ ಹಂತಗಳನ್ನು ಮುಟ್ಟಿದವರು. ಮೈಸೂರಿಗೆ ಹಿಂದಿರುಗಿದ ಮೇಲೆ (೧೯೨೫ ರಿಂದ ೧೯೪೦ರ ಅವಧಿಯಲ್ಲಿ) ಹಲವು ವ್ಯಕ್ತಿಗಳ ಭಾವಶಿಲ್ಪ ಹಾಗೂ ರೂಪಶಿಲ್ಪಗಳನ್ನು ರಚಿಸಿದರು.

ಶಿಲ್ಪ ಹಾಗೂ ಚಿತ್ರಕಲೆಗಳೆರಡನ್ನೂ ಕರಗತ ಮಾಡಿಕೊಂಡಿದ್ದ ಆರ್.ಎಸ್‌. ನಾಯ್ಡು ಸ್ವಯಂ ಕಲಿಕೆಯವರು. ೧೯೫೦ ಹಾಗೂ ೧೯೫೭ರ ಸುಮಾರಿನಲ್ಲಿ ಕ್ರಮವಾಗಿ ಬೆಂಗಳೂರು – ಮೈಸೂರುಗಳಲ್ಲಿ ವಾಸವಾಗಿದ್ದ ಅವರು ಪಾಶ್ಚಾತ್ಯ೮ ಕಲೆಯ ವಿವಿಧ ಮಗ್ಗುಲುಗಳನ್ನು ಪರಿಚಯ ಮಾಡಿಕೊಂಡಿದ್ದರು. ಒಮ್ಮೆ ಲಂಡನ್ನಿಗೂ ಹೋಗಿ ಬಂದಿದ್ದರು. ಪ್ಲಾಸ್ಟರ್ ಮಾಧ್ಯಮದಲ್ಲಿ ಹಲವಾರು ಭಾವಶಿಲ್ಪಗಳನ್ನು ಅಲ್ಲದೆ ಭಾವತೀವ್ರತೆ, ವ್ಯಂಗ್ಯ, ವಿಡಂಬನೆಯುಳ್ಳ ಉಬ್ಬು ಶಿಲ್ಪಗಳನ್ನು ಸೃಷ್ಟಿಸಿದರು. ನಾಯ್ಡು ತಮ್ಮ ಬದುಕಿನ ವಿಕ್ಷಿಪ್ತತೆಯ ಒತ್ತಡಗಳನ್ನು ಶಿಲ್ಪಸೃಷ್ಟಿ ಪ್ರಕ್ರಿಯೆಯಲ್ಲಿ ಹಗುರಗೊಳಿಸಿಕೊಳ್ಳಲು ಯತ್ನಿಸಿದರು. ಅಸಾಮಾನ್ಯ ಸಂವೇದನಾಶೀಲ, ತೀವ್ರ ಚಡಪಡಿಕೆಯುಳ್ಳ ಇವರು ಮಾರ್ಕ್ಸವಾದಿ ತತ್ವಗಳನ್ನು ತಮ್ಮ ಶಿಲ್ಪಗಳಲ್ಲಿ ಅನಾವರಣಗೊಳಿಸಲು ಶ್ರಮಿಸಿದರು. ಪ್ಲಾಸ್ಟರ್ ಮಾಧ್ಯಮದ ಪುಟ್ಟ ಪುಟ್ಟ ಶಿಲ್ಪಗಳು ಅವರ ಶಿಲ್ಪಸೃಷ್ಟಿಯ ಸೂಕ್ಷ್ಮ ದೃಷ್ಟಿಯನ್ನು ಸಾರುವಂತಹ ರಚನೆಗಳಾಗಿವೆ. ಅವರ ಜೀವನವೇ ರೋಚಕತೆಯಿಂದ ಕೂಡಿದುದು. ಬ್ರಿಟೀರ ವಿರುದ್ಧ ಬಂಡಾಯ, ಸೆರೆಮನೆ ವಾಸ, ಲೆನಿನ್‌ರ ಶಿಲ್ಪ ಸೃಷ್ಟಿ, ಆತ್ಮಹತ್ಯಾ ಯತ್ನ, ಇಂತಹ ಹಲವಾರು ಘಟನೆಗಳು ವಿಸ್ಮೃತಿಗೆ ಒಳಗಾಗದಂತಹವುಗಳಾಗಿವೆ.

ಎನ್.ಎಚ್. ಕುಲಕರ್ಣಿ ಅವರ ಶಿಲ್ಪ. ಮಾಧ್ಯಮ: ಲೋಹ

ಎನ್.ಎಚ್. ಕುಲಕರ್ಣಿ ಅವರ ಶಿಲ್ಪ. ಮಾಧ್ಯಮ: ಲೋಹ

ಪ್ರಾಯಶಃ ಇದೇ ಕಾಲಘಟ್ಟದಲ್ಲಿ ಮುಂಬೈಯಲ್ಲಿ ಕಾಣಿಸಿಕೊಂಡ ಹೊಸ ಎಚ್ಚರ, ಬದಲಾವಣೆಗಳು ಉತ್ತರ ಕರ್ನಾಟಕದ ಹಲವು ಶಿಲ್ಪಕಲಾವಿದರನ್ನು (ಚಿತ್ರಕಲಾವಿದರನ್ನೂ ಒಳಗೊಂಡಂತೆ) ಪ್ರಭಾವಿಸಿದವು. ಗುಲಬರ್ಗದ ದನಂಜಯ ಶಿಲ್ಪಿ ಅಂತಹವರಲ್ಲೊಬ್ಬರು. ಅವರ ಹಲವು ಭಾವಶಿಲ್ಪಗಳು, ವ್ಯಕ್ತಿಶಿಲ್ಪಗಳು ಆಕರ್ಷಕವಾದ ರಚನೆಗಳಾಗಿವೆ. ‘ತಾಯಿ – ಮಗು’ ಅಮೃತ ಶಿಲೆಯ ಶಿಲ್ಪವು ಶಿಲ್ಪಿಯವರ ಸೃಷ್ಟಿಸಾಮರ್ಥ್ಯದ ಅತ್ಯುತ್ತಮ ಉದಾಹರಣೆಯಾಗಿದೆ. ವಿಜಾಪುರ ಜಿಲ್ಲೆಯ ನಾಗರಾಳದ ಶಿಲ್ಪಿ ವೀರಪ್ಪ ಕುಂಬಾರ ಕೂಡ ಅಮೃತ ಶಿಲೆಯಲ್ಲಿ ಹಲವಾರು ಭಾವಶಿಲ್ಪಗಳನ್ನು ಸೃಷ್ಟಿಸಿರುವರು. ಇವರ ಕೆಲವು ಶಿಲ್ಪಗಳನ್ನು ಮಹಾರಾಷ್ಟ್ರದ ಔಂದ್‌ ಮ್ಯೂಸಿಯಂನಲ್ಲಿ ಕಾಣಬಹುದು.

 

ಧನಂಜಯ ಶಿಲ್ಪಿ ಅವರ ಕಲಾಕೃತಿ. ಮಾಧ್ಯಮ: ಸಿಮೆಂಟ್

ಧನಂಜಯ ಶಿಲ್ಪಿ ಅವರ ಕಲಾಕೃತಿ. ಮಾಧ್ಯಮ: ಸಿಮೆಂಟ್

 

ಮೂಲತಃ ಸಾಂಪ್ರದಾಯಿಕ ಶಿಲ್ಪಿಯಾಗಿರುವ ದೇವನಹಳ್ಳಿಯ ಎ.ಸಿ.ಎಚ್‌. ಆಚಾರ್ಯ ಅವರು ಅಪರೂಪಕ್ಕೆ ಕಲೆವು ನವ್ಯ ಶಿಲ್ಪಗಳನ್ನು ರಚಿಸಿರುವರು. ಪ್ಲಾಸ್ಟರ್ ಮಾಧ್ಯಮದಲ್ಲಿ ರಚಿಸಿರುವ ಕ್ಯುಬಿಸಂ ಶೈಲಿಯ ಈ ಶಿಲ್ಪಕಲಾಕೃತಿಗಳು ಅಂದಿನ ಸಂದರ್ಭದಲ್ಲಿ ಹೊಸ ಅನುಭವವನ್ನೇ ನೀಡಿದವು.

ನಂತರದ ದಶಕಗಳಲ್ಲಿ (ಸ್ವಾತಂತ್ರೋತ್ಯರ ಕಾಲ) ಬಂದ ಹೊಸ ಪೀಳಿಗೆಯಿಂದ ಕರ್ನಾಟಕದ ಆಧುನಿಕ ಶಿಲ್ಪಕಲೆ ಹೆಚ್ಚು ಗಾಂಭೀರ್ಯತೆ ಮತ್ತು ಸ್ವಂತಿಕೆಗಳನ್ನು ಮೈಗೂಡಿಸಿಕೊಂಡು ಸೃಷ್ಟಿಗೊಂಡಿತೆನ್ನಬೇಕು.[8]

ವೆಂಕಟಾಚಲಪತಿ ಅವರ ಶಿಲ್ಪ. ಮಾಧ್ಯಮ: ಕಂಚು

ವೆಂಕಟಾಚಲಪತಿ ಅವರ ಶಿಲ್ಪ. ಮಾಧ್ಯಮ: ಕಂಚು

ಈ ಹಿನ್ನೆಲೆಯಲ್ಲಿ ಮುಖ್ಯರಾಗುವ ಪೊನ್ನಪ್ಪ ರಾಜಾರಾಮ, ಎನ್‌.ಎಚ್‌. ಕುಲಕರ್ಣಿ, ಎಲ್‌. ಪಿ. ಅಂಚನ್‌, ವೆಂಕಟಾಚಲಪತಿ, ಬಾಲನ್‌ ನಂಬಿಯಾರ್, ವಿ.ಎ. ದೇಶಪಾಂಡೆ, ಎನ್‌. ಪುಷ್ಪಮಾಲಾ, ಭಾಸ್ಕರ ರಾವ್‌, ಶ್ಯಾಮಸುಂದರ, ಜಾನ್‌ ದೇವರಾಜ್‌ ಮೊದಲಾದವರು ಸೃಷ್ಟಿಸಿರುವ ವಿವಿಧ ಮಾಧ್ಯಮದ ಆಧುನಿಕ – ಸಮಕಾಲೀನ ಶೈಲಿಯ ಶಿಲ್ಪಕಲಾಕೃತಿಗಳು ನಿಜವಾಗಿಯೂ ಗಮನಾರ್ಹವಾಗುತ್ತವೆ.

 

ವಿ.ಎ. ದೇಶಪಾಂಡೆ ಅವರ ಕಲಾಕೃತಿ. ಮಾಧ್ಯಮ: ಕಲ್ಲು

ವಿ.ಎ. ದೇಶಪಾಂಡೆ ಅವರ ಕಲಾಕೃತಿ. ಮಾಧ್ಯಮ: ಕಲ್ಲು

 

ಕೊಡಗಿನ ಮೂಲದವರಾದ ಪೊನ್ನಪ್ಪ ರಾಜಾರಾಮ್‌ (೧೯೨೭ – ೧೯೬೧) ಮೂಲತಃ ಸೈನಿಕ ವೃತ್ತಿಯಲ್ಲಿದ್ದವರು. ಆ ಸಂದರ್ಭದಲ್ಲಿ ಅವರು ನೂರಾರು ನವ್ಯಶೈಲಿಯ ಶಿಲ್ಪಗಳನ್ನು ಸೃಷ್ಟಿಸಿದರು. ಮರದ ಬೇರು – ಬೊಡ್ಡೆಗಳಲ್ಲಿ ಸಹಜವಾಗಿ ಕಂಡುಬರುವ ಆಕಾರಗಳನ್ನು ಯಥಾವತ್ತಾಗಿ, ಕೆಲವೊಮ್ಮೆ ಅಲ್ಪಸ್ವಲ್ಪ ಬದಲಿಸಿ, ಹೊಂದಿಸಿ ಶಿಲ್ಪಗಳನ್ನು ರಚಿಸಿರುವರು. ಮತ್ತು ದೇಶ – ವಿದೇಶಗಳಲ್ಲಿ ಅವುಗಳ ಪ್ರದರ್ಶನಗಳನ್ನೂ ಏರ್ಪಡಿಸಿರುವರು.

೧೯೫೭ರಲ್ಲಿ ಇಂಗ್ಲೆಂಡ್‌, ಸ್ಕಾಟ್‌ಲ್ಯಾಂಡ್‌, ಬೆಲ್ಜಿಯಂ, ಜರ್ಮನಿ, ಇಟಲಿ ದೇಶಗಳನ್ನು ಸುತ್ತಾಡಿ ಅಲ್ಲಿನ ಮ್ಯೂಸಿಯಂ, ಗ್ಯಾಲರಿ ಮತ್ತು ಪ್ರದರ್ಶನಗಳಲ್ಲಿ ವಿಖ್ಯಾತರಾಗಿರುವ ಅಂದಿನ ಶಿಲ್ಪಿಗಳನೇಕರ ಶಿಲ್ಪಗಳನ್ನು ಗಮನಿಸಿದ ರಾಜಾರಾಮ್‌ ಅವರು ಆ ಪ್ರಭಾವದ ನೆರಳಿನಲ್ಲಿ ಹಲವು ಶಿಲ್ಪಗಳನ್ನು ರಚಿಸಿದರು. ೧೯೫೮ ರಲ್ಲಿ ದೆಹಲಿಯಲ್ಲಿ ತಮ್ಮ ಇಂತಹ ಶಿಲ್ಪಗಳ ಪ್ರದರ್ಶನವೊಂದನ್ನು ಏರ್ಪಡಿಸಿ ಗಮನಸೆಳೆದರು. ವಿಶೇಷವಾಗಿ ಹೇನ್ರಿಮೂರ್, ಬರ್ ಬರಾ ಹೆಪವೊರ್ಥ್ ಮೊದಲಾದ ಪಾಶ್ಚಾತ್ಯ ನವ್ಯ ಶಿಲ್ಪಿಗಳ ಪ್ರಭಾವಗಳನ್ನು ಅರಗಿಸಿಕೊಂಡು ಮರದ ಮಾಧ್ಯಮದಲ್ಲಿ ಸಮಕಾಲೀನ ಶೈಲಿಯ ಶಿಲ್ಪಗಳನ್ನು ಇವರು ಸೃಷ್ಟಿಸಿರುವರು. ೧೯೫೯ರಲ್ಲಿ ಮುಬೈಯಲ್ಲಿ ತಮ್ಮ ಶಿಲ್ಪಗಳನ್ನು (ರಾಜಾರಾಂ) ಪ್ರದರ್ಶಿಸಿದರು. ಮದರ್ ಅಂಡ್‌ ಚೈಲ್ಡ್‌, ಡ್ರಮ್ಮರ್, ಹೊರೆಹೊತ್ತವ, ಗುಟ್ಟು ಮುಂತಾಗಿ ಶೀರ್ಷಿಕೆ ಹೊಂದಿರುವ ಶಿಲ್ಪಗಳು ಸಾಂಕೇತಿಕ, ಅಮೂರ್ತ ನೆರಳು ಬೆಳಕುಗಳನ್ನು ಬಹುತೇಕ ಶಿಲ್ಪಗಳು ದುಡಿಸಿಕೊಂಡಿವೆ. ಇವರ ಶಿಲ್ಪಗಳನ್ನು ಮೆಚ್ಚಿಕೊಂಡಿದ್ದ ಕಲಾವಿದ ಸತೀಶ್‌ ಗುಜ್ರಾಲರು ರಾಜಾರಾಮರ ಹೆಸರಿನಲ್ಲಿ ಒಂದು ‘ಮ್ಯೂಸಿಯಂ ಆಫ್‌ ಮಾಡರ್ನ ಆರ್ಟ’ ಸ್ಥಾಪಿಸಲು ಇಚ್ಚಿಸಿ ರಾಜಾರಾಮರ ತಂದೆ ಬ್ರಿಗೇಡಿಯರ್ ಪೊನ್ನಪ್ಪ ಅವರಿಗೆ ಪತ್ರವೊಂದನ್ನು ಬರೆದಿದ್ದರಂತೆ. ಇದರಿಂದ ರಾಜಾರಾಮರ ಶಿಲ್ಪಗಳ ಮಹತ್ವದ ಅರಿವು ನಮಗಾಗುತ್ತದಲ್ಲವೇ.[9] ಹಾಗೆ ನೋಡಿದರೆ ನಮ್ಮ ರಾಜ್ಯದ ನಿಜವಾದ ಆಧುನಿಕ ಸಮಕಾಲೀನ ಶಿಲ್ಪಕಲೆಯ ಚರಿತ್ರೆ ಆರಂಭವಾಗುವುದೇ ರಾಜಾರಾಮ ಅವರಿಂದ ಎನ್ನಬೇಕಾಗುತ್ತದೆ.

 

ಯುಸುಫ್ ಅವರ ಶಿಲ್ಪ. ಮಾಧ್ಯಮ: ಲೋಹ

ಯುಸುಫ್ ಅವರ ಶಿಲ್ಪ. ಮಾಧ್ಯಮ: ಲೋಹ

 

ಅನಂತರದಲ್ಲಿ ಬಾದಾಮಿ ಮೂಲದ ಎನ್‌.ಎಚ್‌. ಕುಲಕರ್ಣಿ ಅವರು ಬರೋಡದಲ್ಲಿ ಶಿಲ್ಪಕಲೆಯನ್ನು ಕಲಿತು ಬಂದು ವಿವಿಧ ಮಾಧ್ಯಮಗಳಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದರು. ತತ್ಪರಿಣಾಮವಾಗಿ ಗಮನಾರ್ಹವಾದ ಸಮಕಾಲೀನ ಶೈಲಿಯ ಶಿಲ್ಪಗಳು ಅವರಿಂದ ರಚನೆಗೊಂಡವು. ಭಾರತೀಯ ಜನಪದ ಹಾಗೂ ಸಾಂಪ್ರದಾಯಿಕ ಕಲೆಗಳೆರಡನ್ನು ಪಾಶ್ಚಾತ್ಯ ಆಧುನಿಕ ಶೈಲಿಗಳೊಡನೆ ಸಮೀಕರಣಗೊಳಿಸಿ ಸಮಕಾಲೀನ ಶಿಲ್ಪಗಳನ್ನು ಸೃಷ್ಟಿಸಿರುವುದಾಗಿ ಕುಲಕರ್ಣಿ ಹೇಳಿದೊಂಡಿರುವರು. ‘ಅಶ್ವ’ ಸರಣಿಯ ಲೋಹಶಿಲ್ಪಗಳಂತೂ ಇವರಿಗೆ ಜಗತ್ ಪ್ರಸಿದ್ಧಿಯನ್ನೇ ತಂದುಕೊಟ್ಟಿವೆ. ಬೃಹತ್ತಾಗಿರುವ ಅನೇಕ ಪರಿಸರ ಶಿಲ್ಪಗಳನ್ನು ವಿವಿಧ ಮಾಧ್ಯಮಗಳಲ್ಲಿ ನಿರ್ಮಿಸಿರುವುದು.[10] ಅವರ ಬಹುದೊಡ್ಡ ಕೊಡುಗೆ. ತಮ್ಮ ಬದುಕಿನ ಬಹುಭಾಗವನ್ನು ದೆಹಲಿಯಲ್ಲೇ ಸವೆಸಿದ ಈ ಶಿಲ್ಪಿ ಕನ್ನಡಿಗ ಎಂಬುದು ನಾವು ಹೆಮ್ಮೆಪಡುವ ಸಂಗತಿಯೆಂದು ಬೇರೆ ಹೇಳಬೇಕಿಲ್ಲ.

 

ಸೂತ್ರಧಾರ ಅವರ ಅಭಿವ್ಯಕ್ತಿ. ಮಾದ್ಯಮ: ಕಲ್ಲು

ಸೂತ್ರಧಾರ ಅವರ ಅಭಿವ್ಯಕ್ತಿ. ಮಾದ್ಯಮ: ಕಲ್ಲು

 

ಜನಪದೀಯ ಅಂಶಗಳನ್ನು ತಮ್ಮ ಶಿಲ್ಪಗಳಲ್ಲಿ ತಂದಿರುವ ಎಲ್‌.ಪಿ. ಅಂಚನ್‌ ಅವರು ವಿವಿಧ ಮಾಧ್ಯಮಗಳಲ್ಲಿ ಆಧುನಿಕ ಶಿಲ್ಪಗಳನ್ನು ರಚಿಸಿರುವರು. ವಿಶೇಷವಾಗಿ ಇವರ ಲೋಹದ ಹಾಳೆಯ ಶಿಲ್ಪಕಲಾಕೃತಿಗಳು ಗಮನಾರ್ಹವಾಗಿವೆ. ಬಹುತೇಕ ಶಿಲ್ಪಕಲಾಕೃತಿಗಳು ಘನಾಕೃತಿ ಶೈಲಿಯವು. ಇವರ ‘ಗಿರಿಕನ್ಯೆ’ ಶಿಲ್ಪಕ್ಕೆ ೧೯೮೪ರಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಶಸ್ತಿಯೂ ಸಂದಿರುವುದು ಉಲ್ಲೇಖಾರ್ಹ ಸಂಗತಿಯಾಗಿದೆ. ದೇವನಹಳ್ಳಿಯ ಶಿಲ್ಪಿ ಎ.ಸಿ.ಎಚ್‌. ಆಚಾರ್ಯರಲ್ಲಿ ಶಿಲ್ಪಕಲೆಯನ್ನು ಕಲಿತ ವೆಂಕಟಾಚಲಪತಿ ಮೂಲತಃ ಸಾಂಪ್ರದಾಯಿಕ ನೆಲೆಯಿಂದ ಬಂದು ಆಧುನಿಕ ಶೈಲಿಗೆ ಜಿಗಿದವರು. ನಮ್ಮ ಸಂದರ್ಭದ ಹಿರಿಯ ಪ್ರಮುಖ ಶಿಲ್ಪಿ ಇವರು. ಶಿಲ್ಪಕಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಕಳೆದ ಮೂರ್ನಾಲ್ಕು ದಶಕಗಳಿಂದ ಲೋಹ, ಟೆರಾಕೊಟ್ಟ, ಫೈಬರ್, ಕಲ್ಲು ಮುಂತಾದ ಮಾಧ್ಯಮಗಳಲ್ಲಿ ಪರಿಣಾಮಕಾರಿಯಾದಂತಹ ಶಿಲ್ಪಕಲಾಕೃತಿಗಳನ್ನು ಸೃಷ್ಟಿಸುತ್ತ ಬಂದಿರುವರು. ನೋವು – ನಲಿವುಗಳಿಗೆ ಸಂಬಂದಿಸಿದಂತೆ ವಿಕೃತಿಯನ್ನು ದುಡಿಸಿಕೊಂಡ ಚಲಪತಿಯವರು ರೊಮ್ಯಾಂಟಿಕ್‌ ನೆಲೆಯಲ್ಲೂ ಹಲವು ಶಿಲ್ಪಗಳನ್ನು ರಚಿಸಿ ಗಮನ ಸೆಳೆದಿರುವರು. ಇವರ ಲೋಹಶಿಲ್ಪವೊಂದಕ್ಕೆ ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ದಕ್ಕಿರುವುದು ಕನ್ನಡ ಶಿಲ್ಪ ಸಂವೇದನೆಗೆ ಸಂದ ಗೌರವವಾಗಿದೆ.

 

ವೆಂಕಟಾಚಲಪತಿ ಅವರ ಶಿಲ್ಪ. ಮಾಧ್ಯಮ: ಮರಳು ಶಿಲೆ

ವೆಂಕಟಾಚಲಪತಿ ಅವರ ಶಿಲ್ಪ. ಮಾಧ್ಯಮ: ಮರಳು ಶಿಲೆ

ಬೆಂಗಳೂರಲ್ಲಿ ನೆಲೆಸಿರುವ ಕೇರಳ ಮೂಲದ ಬಾಲನ್‌ ನಂಬಿಯಾರ್ ಕೂಡ ಹಲವಾರು ಶಿಲ್ಪಗಳನ್ನು ರಚಿಸಿರುವರು. ಆಳೆತ್ತರಕ್ಕೂ ಮಿಗಿಲಾಗಿರುವ ಇವರ ಲೋಹ ಶಿಲ್ಪಗಳು ಸರಳೀಕೃತ ಆಕಾರಗಳಿಂದ ಕೂಡಿದ ಸೃಷ್ಟಿಗಳು. ಲೋಹವಲ್ಲದೆ ಸಿಮೆಂಟ್‌, ಫೈಬರ್ ಮುಂತಾದ ಮಾಧ್ಯಮಗಳನ್ನು ಇವರು ದುಡಿಸಿಕೊಂಡಿರುವರು. ಈಚೆಗೆ ನೆಲದ ಮೇಲೆ ಹರಡಿದಂತೆ ಕಾಣುವ ಶೈಲಿಯ (ಆರ್ಕಿಟೆಕ್ಟೊನಿಕ್‌) ಶಿಲ್ಪಕಲಾಕೃತಿಗಳನ್ನು ರಚಿಸುತ್ತಲಿದ್ದಾರೆ. ಕರ್ನಾಟಕದ ಮಟ್ಟಿಗೆ ನವ್ಯ ಶೈಲಿಯ ಶಿಲ್ಪವೊಂದಕ್ಕೆ ಕೇಂದ್ರ ಲಲಿತಕಲಾ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿ ತಂದುಕೊಂಡವರಲ್ಲಿ ಬಾಲನ್‌ ನಂಬಿಯಾರ್ ಮೊದಲಿಗರು.

ಶಿಲ್ಪ ಸೃಷ್ಟಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮತ್ತೊಬ್ಬ ಕಲಾವಿದ ವಿ.ಎ. ದೇಶಪಾಂಡೆ ಅವರು. ಮೈಸೂರಿನ ಕಾವಾದಲ್ಲಿ (ಜಯಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ) ಅಧ್ಯಾಪಕರಾಗಿರುವ ಇವರು ಬಾದಾಮಿ ಮೂಲದವರು. ಬರೋಡದಲ್ಲಿ ಶಿಲ್ಪಕಲೆ ಕಲಿತು ಬಂದವರು. ಲೋಹ, ಮರ, ಕಲ್ಲು, ಸಿಮೆಂಟ್‌, ಫೈಬರ್, ಮುಂತಾದವುಗಳನ್ನು ಶಿಲ್ಪರಚನೆಗೆ ಬಳಸಿರುವರು. ವಸ್ತುವೊಂದು ದ್ರವೀರ್ಭವಿಸಿ ತಕ್ಷಣಕ್ಕೆ ಘನೀಕೃತಗೊಂಡಾಗ ಕಾಣಿವ ಸ್ಥಿತಿಯನ್ನು ಕೆಲವು ಲೋಹದ ಶಿಲ್ಪಗಳಲ್ಲಿ ಸೊಗಸಾಗಿ ತಂದಿರುವರು. ಹೊಳೆವ ಎದೆಮಟ್ಟದ ಅಳತೆಯ ಕಂಚಿನ ಶಿಲ್ಪಗಳೂ ಆಕರ್ಷಕವಾದ ರಚನೆಗಳಗಿವೆ.

ಟೆರಾಕೊಟ್ಟ ಮಾಧ್ಯಮದ ಶಿಲ್ಪವೊಂದಕ್ಕೆ (ಹಂದಿಗಳು) ಟ್ರಿನಾಲೆ ಪ್ರಶಸ್ತಿ ಪಡೆದಿರುವ ಎನ್‌. ಪುಷ್ಪಮಾಲಾ[11] ಹಲವಾರು ಪರಿಣಾಮಕಾರಿ ಶಿಲ್ಪಕಲಾಕೃತಿಗಳನ್ನು ರಚಿಸಿ ರಾಷ್ಟ್ರದ ಗಮನ ಸೆಳೆದಿರುವರು. ದೃಶ್ಯಕಲಾ ವಲಯದೊಳಗೆ ಜಾನಪದ ಹಾಗೂ ಜನಪ್ರಿಯ ಕಲಾ ಪ್ರಕಾರಗಳನ್ನು ಭಾರತೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಸಿಂಹಾವಲೋಕನ ಮಾಡುವ ಉತ್ಸಾಹವಿದ್ದ ಕಾಲವದು. ಆಗ ಪುಷ್ಪಮಾಲಾ ತಮ್ಮ ಸಮಕಾಲೀನರೊಡನೆ ಅಚ್ಚ ಭಾರತೀಯವಾದುದನ್ನು ಸೃಷ್ಟಿಸುವಲ್ಲಿ ತಲ್ಲಿನರಾದುದು ವಿಶೇಷ. ೧೯೮೩ – ೮೫ರ ನಡುವಿನ ಅವರ ಟೆರಾಕೊಟ್ಟ ರಚನೆಗಳು ಈ ಅಭಿಪ್ರಾಯಕ್ಕೆ ಉದಾಹರಣೆಯಾಗುತ್ತವೆ. ಆದರೂ ಅವು ತಮ್ಮ ಸಮಕಾಲೀನತೆ ಮತ್ತು ಕಲಾವಿದೆಯ ವೈಯಕ್ತಿಕ ದೃಷ್ಟಿಕೋನಗಳೊಂದಿಗೆ (ತಾಂತ್ರಿಕ ಅಂಶಗಳಿಂದಲೂ) ಅನನ್ಯವಾಗಿ ಕಾಣುತ್ತವೆ ಮತ್ತು ಬಹುಕಾಲ ಕಾಡುತ್ತವೆ. ಸಾಮಾಜಿಕ ವ್ಯವಸ್ಥೆ ಮತ್ತು ಶಿಲ್ಪಗಳನ್ನು ಪ್ರಸ್ತುತ ನೋಡುವ ದೃಷ್ಟಿ ಹಾಗೂ ಕಲೆಯ ಬಗೆಗೆ ನಡೆಯುವ ಜಿಜ್ಞಾಸೆಗಳ ಸಾಂಪ್ರದಾಯಿಕ ಕ್ಲೀಷೆಗಳ ವಿರುದ್ದದ ಸಿಟ್ಟನ್ನು ಅವರ ಹಲವು ಶಿಲ್ಪಗಳು ಮೈಗೂಡಿಸಿಕೊಂಡಿವೆ. ಹಾಸ್ಯ, ವಿಡಂಬನೆ, ವ್ಯಂಗ್ಯ ಭಾವಗಳ ಅಭಿವ್ಯಕ್ತಿಗೆ ಟೆರಾಕೊಟ್ಟ ಅಲ್ಲದೆ ಫೈಬರ್, ಪ್ಲಾಸ್ಟರ್ ಮೊದಲಾದ ಮಾಧ್ಯಮಗಳನ್ನು ಈ ಶಿಲ್ಪಿನಿ ದುಡಿಸಿಕೊಂಡಿರುವರು.

ಬಹುವಾಗಿ ಅಮೂರ್ತ ನೆಲೆಯಲ್ಲಿ ಶಿಲ್ಪಕಲಾಕೃತಿಗಳನ್ನು ರಚಿಸುತ್ತ ಗಮನ ಸೆಳೆದವರಲ್ಲಿಯು. ಭಾಸ್ಕರರಾವ್‌ ಒಬ್ಬರು. ಶಿಲೆ ಮತ್ತು ಲೋಹಗಳು ಇವರ ನೆಚ್ಚಿನ ಮಾಧ್ಯಮಗಳಾಗಿದ್ದು ಹಲವು ಗಮನಾರ್ಹ ಶಿಲ್ಪಗಳನ್ನು ಇವರು ರಚಿಸಿರುವುದುಂಟು.

 

ಜಾನ್ ದೇವರಾಜ್ ಅವರ ಒಂದು ಅಭಿವ್ಯಕ್ತಿ. ಮಾಧ್ಯಮ: ಟೆರಾಕೊಟ್ಟ

ಜಾನ್ ದೇವರಾಜ್ ಅವರ ಒಂದು ಅಭಿವ್ಯಕ್ತಿ. ಮಾಧ್ಯಮ: ಟೆರಾಕೊಟ್ಟ

[1] ಕೆ.ವಿ. ಸುಬ್ರಹ್ಮಣ್ಯಂ : ಕರ್ನಾಟಕದ ಆಧುನಿಕ ಶಿಲ್ಪಕಲೆ, ಪುಟ-೫

[2] ಅದೇ.

[3] ರೂಢಿಗತ ಸಂಪ್ರದಾಯಗಳನ್ನು ಒಡೆಯುವ, ಶೈಲಿಗಳನ್ನು ಹುಟ್ಟುಹಾಕುವ ಹಾಗೂ ಹೊಸ ಯುಗದ ಪ್ರಜ್ಞೆ ಮತ್ತು ಸಂವೇದನೆಗಳಿಗೆ ಸೂಕ್ತವೆನಿಸುವ ಆಕಾರಗಳ ಸೃಷ್ಟಿಯನ್ನು ಆಧುನಿಕ ಎಂದೇ ಕರೆಯಲಾಗುತ್ತದೆ.

[4] ಪಿ.ಆರ್.ತಿಪ್ಪೇಸ್ವಾಮಿ(ಸಂ) ಶಿಲ್ಪಕಲಾ ಪ್ರಪಂಚ: ಪುಟ-೫೧೫ ಕೆ.ವಿ. ಸುಬ್ರಹ್ಮಣ್ಯಂ ಅವರ ಲೇಖನ.

[5] ಚಿತ್ರಕಲೆಯಲ್ಲಿ ರವಿವರ್ಮನು ತಂದುಕೊಂಡದ್ದು ಇಂಥದೇ ಆಧುನಿಕತೆ.

[6] ಬ್ರಿಟೀಷರ ಬೀಳುಗಾಲದ ಕಲಾಶೈಲಿ ಎಂದೂ ಇದನ್ನು ಕರೆಯುವರು.

[7] ವೆಂಕಟಪ್ಪನವರಿಗಿಂತಲೂ ಮುಂಚೆ ಮುಂಬೈನ ಜೆ.ಜೆ.ಸ್ಕೂಲ್‌ಆಫ್‌ಆರ್ಟ್‌ನಲ್ಲಿ ಅಕಾಡೆಮಿಕ್‌ಶೈಲಿಯ ಶಿಲ್ಪಕಲೆಯನ್ನು ಕಲಿತ ಪುಣೆಯ ಗಣಪತಿರಾವ್‌ಮಾತ್ರೆ ಪ್ರಸಿದ್ಧಿಯಲ್ಲಿದ್ದರು. ಇವರ ಖ್ಯಾತಿ ಆಗಿನ ಮೈಸೂರಿನ ಕೃಷ್ಣರಾಜ ಒಡೆಯರಿಗೂ ತಲುಪಿತ್ತು. ಒಡೆಯರ್ ಅವರ ಆಹ್ವಾನದ ಮೇರೆಗೆ ಮೈಸೂರಿಗೆ ಬಂದು ೧೯೧೩ ರಲ್ಲಿ ದಿವಾನ್‌ಶೇಷಾದ್ರಿ ಅಯ್ಯರ್ ಅವರ ಮೂರ್ತಿಶಿಲ್ಪ ಹಾಗೂ ನಂತರ ೧೯೧೬ ರಲ್ಲಿ ಚಾಮರಾಜೇಂದ್ರ ಒಡೆಯರ್ ಅವರ ಭಾವಶಿಲ್ಪಗಳನ್ನು ರಚಿಸಿದ್ದರು. ಕೆ. ವೆಂಕಟಪ್ಪ ಈ ಶಿಲ್ಪಗಳಿಂದ ಪ್ರಭಾವಿತರಾಗಿದ್ದರು.

[8] ೧೯೬೧-೬೨ ರಲ್ಲಿ ಕಲಾ ವಿಮರ್ಶಕ ಜಿ. ವೆಂಕಟಾಚಲಂ ಅವರ ಪ್ರಯತ್ನದಿಂದ ಲಲಿತಕಲಾ ಅಕಾಡೆಮಿ ಪ್ರಾರಂಭಗೊಂಡಿತು. ಇದರಿಂದ ಕಲಾ ಚಟುವಟಿಕೆಗಳಿಗೆ ಹೊಸ ಜೀವ ಬಂದಂತಾಯಿತು. ಚಿತ್ರಕಲೆಯಲ್ಲಿ ಹೊಸತನಕ್ಕೆ ಮೊದಲು ಕಾರಣವಾದದ್ದು ೧೯೬೪ರ ‘ವಿ ಪೋರ್’ ಕಲಾ ಪ್ರದರ್ಶನ. ಶಿಲ್ಪಕಲೆಯ ಮೇಲೂ ಪರೋಕ್ಷವಾಗಿ ಈ ಪ್ರದರ್ಶನ ಪ್ರಭಾವ ಬೀರಿತು.

[9] ರಾಜಾರಾಮರ ಕೆಲವು ಮರಶಿಲ್ಪಗಳನ್ನು ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಶಾಶ್ವತ ಪ್ರದರ್ಶನಕ್ಕೆ ಇಡಲಾಗಿದ್ದುದನ್ನು ಗಮನಿಸಬಹುದು.

[10] ಕಲಾವಿದ ಎಂ.ಬಿ. ಪಾಟೀಲರು ಇವರ ಕೆಲವು ಶಿಲ್ಪಗಳ ಛಾಯಾಚಿತ್ರಗಳನ್ನು ನನಗೆ ತೋರಿಸಿದ್ದರು. ಅವುಗಳಲ್ಲಿ ಬಹುಪಾಲು ಬೃಹತ್‌ಶಿಲ್ಪಕಲಾಕೃತಿಗಳ ನಿರ್ಮಾಣಕ್ಕಾಗಿ ರಚಿಸಿದ ಚಿಕ್ಕ ಅಳತೆಯ ಶಿಲ್ಪಗಳಾಗಿದ್ದವು.

[11] ಬರೋಡದಲ್ಲಿ ಶಿಲ್ಪಕಲೆಯನ್ನು ಕಲಿತ ಪುಷ್ಪಮಾಲಾ ಆರಂಭದಲ್ಲಿ ಬಾಲನ್‌ನಂಬಿಯಾರ್ ಅವರಿಂದ ಚಿತ್ರಕಲೆಯ ಮೂಲ ಪಾಠಗಳನ್ನು ಕಲಿತವರು. ಖ್ಯಾತ ಸಮಕಾಲೀನ ಶಿಲ್ಪಿಗಳಾದ ರವೀಂದ್ರ ರೆಡ್ಡಿ, ಅಲೆಕ್ಸ್‌ಮ್ಯಾಥ್ಯೂ, ಪಟೇಲ್‌ಅವರುಗಳೊಟ್ಟಿಗೆ ಅರಳಿದವರು. ಕೆ.ಜಿ. ಸುಬ್ರಮಣಿಯನ್‌ಮತ್ತು ಭೂಪೇನ್‌ಖಾಖರ್ ಅವರುಗಳ ಪ್ರಭಾವಕ್ಕೆ ಒಳಗಾದವರು.