ಮೂಲತಃ ಗ್ರಾಫಿಕ್‌ ಕಲಾವಿದರಾಗಿರುವ ಶ್ಯಾಮಸುಂದರ್ ಹಲವು ಶಿಲ್ಪಗಳನ್ನೂ ರಚಿಸಿರುವರು. ಕಲ್ಲು ಮತ್ತು ಮರ ಮಾಧ್ಯಮಗಳನ್ನು ಬಳಸಿಕೊಂಡು ಸೃಷ್ಟಿಗೊಂಡ ಇವರ ಶಿಲ್ಪಗಳಲ್ಲಿ ಬದುಕಿನ ವಿಕೃತ ಸೌಂದರ್ಯ ಅರಳಿದೆ. ಇವರ Mocking faces ಶೀರ್ಷಿಕೆಯ ಶಿಲ್ಪಗಳು ಮರ ಮತ್ತು ಅಲ್ಯೂಮಿನಿಯಂ ಮಾಧ್ಯಮಗಳಲ್ಲಿ ಸೃಷ್ಟಿಗೊಂಡಿದ್ದು ವಿಕೃತ ಸೌಂದರ್ಯವನ್ನು ಬಿಂಬಿಸುತ್ತವೆ. ಬದುಕಿನ ಭೀಕರ ಅನುಭವಗಳು ‘ಕಬಾಬ್‌’ ಶಿಲ್ಪಗಳಲ್ಲಿ ಮೂಡಿಬಂದಿವೆ. ಕೆಲವೊಮ್ಮೆ ಅತ್ಯಂತ ಒರಟು, ವಿಕೃತ ಎನಿಸಿದರೂ ತೀವ್ರ ಸಂವೇದನೆಯಿಂದಾಗಿ ತುಂಬ ಪರಿಣಾಮಕಾರಿ ಎನಿಸುತ್ತವೆ.

ಬಂಟನೂರ ಅವರ ಅಭಿವ್ಯಕ್ತಿ. ‘ಇಂಡಿಯನ್ ಬ್ರಷ್ ಫಾರ್ ಮಲ್ಟಿನ್ಯಾಷನಲ್ ಕಂಪನಿ ಶೂಷ್’. ಮಾಧ್ಯಮ: ಮರ ಮತ್ತು ಬ್ರಷ್.

ಬಂಟನೂರ ಅವರ ಅಭಿವ್ಯಕ್ತಿ. ‘ಇಂಡಿಯನ್ ಬ್ರಷ್ ಫಾರ್ ಮಲ್ಟಿನ್ಯಾಷನಲ್ ಕಂಪನಿ ಶೂಷ್’. ಮಾಧ್ಯಮ: ಮರ ಮತ್ತು ಬ್ರಷ್.

ಸಾಮಾಜಿಕ ವ್ಯವಸ್ಥೆಯ ಬಗೆಗೆ ತೀವ್ರವಾಗಿ ಸ್ಪಂದಿಸಿ, ಎಡಪಂಥೀಯ ಧೋರಣೆಯನ್ನು ಮುಖ್ಯವಾಗಿ ಹೊಂದಿ, ದೊಡ್ಡ ಅಳತೆಯ ಶಿಲ್ಪಗಳನ್ನು ರಚಿಸಿದವರು ಜಾನ್‌ ದೇವರಾಜ್ ಅವರು. ವ್ಯವಸ್ಥೆಯಲ್ಲಿನ ಸಂಕಟ, ತಳಮಳ ನೋವು – ನಲಿವುಗಳನ್ನು ಬಂಡಾಯದ ನೆಲೆಯಲ್ಲಿ ಅದರಲ್ಲೂ ವಿಕೃತ ರೂಪದಲ್ಲಿ ಅಭಿವ್ಯಕ್ತಿಸುವ ಮೂಲಕ ತಮ್ಮ ಛಾಪು ಮೂಡಿಸಿದವರು. ತಮ್ಮದೇ ಆದ ವಿಶಿಷ್ಟ ರೀತಿಯ ಅಭಿವ್ಯಕ್ತಿಗೆ ಮರ, ಶಿಲೆ, ಗಾಜು, ಟೆರಾಕೊಟ್ಟ, ಸೆರಾಮಿಕ್ಸ್‌ ಮೊದಲಾದ ಮಾಧ್ಯಮಗಳನ್ನು ದೇವರಾಜ್‌ ದುಡಿಸಿಕೊಂಡಿರುವರು.

ಅರ್ಕಸಾಲಿ ಅವರ ರಚನೆ. ಮಾಧ್ಯಮ: ಮೃದುಶಿಲೆ

ಅರ್ಕಸಾಲಿ ಅವರ ರಚನೆ. ಮಾಧ್ಯಮ: ಮೃದುಶಿಲೆ

ಈ ಮಧ್ಯೆ ನಮ್ಮ ಕೆಲವು ಪ್ರಸಿದ್ಧ ಹಿರಿಯ ಚಿತ್ರ ಕಲಾವಿದರಲ್ಲಿ ಕೆಲವರು ಆಗಾಗ ಗಂಭೀರ ನೆಲೆಯ ಶಿಲ್ಪಕಲಾಕೃತಿಗಳನ್ನು ರಚಿಸಿರುವುದುಂಟು. ಆರ್.ಎಂ. ಹಡಪದ, ನಟರಾಜ ಶರ್ಮ, ವಿ.ಜಿ. ಅಂದಾನಿ, ರಾಮದಾಸ ಆಡ್ಯಂತಾಯ, ಮಣಿ, ಯೂಸುಫ್‌ ಅರಕ್ಕಲ್‌, ಎಲ್‌. ಶಿವಲಿಂಗಪ್ಪ, ಎಂ.ಎಸ್‌.ಮೂರ್ತಿ, ರಾಜು, ಕೆ.ಜಿ. ಅರುಣ್‌, ಬಾಬು ಈಶ್ವರ್ ಪ್ರಸಾದ, ವಿವ್ಯಾನ್‌ಸುಂದರಂ, ರಾಜೇಶ್‌ದೇವಣಗಾಂ, ಶಿವಾನಂದ ಅವಟೆ ಮೊದಲಾದವರು ಈ ನಿಟ್ಟಿನಲ್ಲಿ ಪ್ರಮುಖರಾಗಿರುತ್ತಾರೆ. ಇವರೆಲ್ಲ ಬಹುಪಾಲು ಮಣ್ಣು, ಮರ, ಪ್ಲಾಸ್ಟರ್, ಫೈಬರ್, ಮಿಶ್ರ ಮತ್ತು ಕ್ವಚಿತ್ತಾಗಿ ಕಲ್ಲು ಮಾಧ್ಯಮಗಳಲ್ಲಿ ಶಿಲ್ಪಗಳನ್ನು ಸೃಷ್ಟಿಸಿರುವರು.

ವಿಜಯರಾವ್ ಅವರ ಸೃಷ್ಟಿ. ಮಾಧ್ಯಮ: ಕೃಷ್ಣಶಿಲೆ

ವಿಜಯರಾವ್ ಅವರ ಸೃಷ್ಟಿ. ಮಾಧ್ಯಮ: ಕೃಷ್ಣಶಿಲೆ

ಚಿತ್ರಕಲೆಯಲ್ಲಿ ಗಂಭೀರ ಹೆಜ್ಜೆಗಳನ್ನು ಮೂಡಿಸಿರುವ ಯೂಸೂಫ್‌ ಅರಕ್ಕಲ್‌ ಟೆರಾಕೊಟ್ಟ, ಸೆರಾಮಿಕ್‌ ಮತ್ತು ಲೋಹ ಮಾಧ್ಯಮಗಳಲ್ಲಿ ಶಕ್ತಿಯುತ ಅಭಿವ್ಯಕ್ತಿಯಿಂದ ಕೂಡಿದ ಹಲವು ಶಿಲ್ಪಗಳನ್ನು ರಚಿಸಿರುವರು. ವಿಶೇಷವಾಗಿ ಟೆರಾಕೊಟ್ಟ ಮಾಧ್ಯಮದ ಶಿಲ್ಪಗಳಲ್ಲಿ ವಿಕೃತಿಯ ವೈಭವೀಕರಣವನ್ನು ಕಾಣಬಹುದು. ‘ಹಸಿವಿನ ಮುಖಗಳು’ ಶೀರ್ಷಿಕೆಯ ಶಿಲ್ಪಗಳು ನೀಡುವ ನೋವಿನ ಒಳನೋಟಗಳು ಅನನ್ಯ. ತೀರ ಈಚೆಗೆ ದೊಡ್ಡ ಅಳತೆಯ ಪರಿಸರ ಶಿಲ್ಪಗಳನ್ನು ಯೂಸುಪ್‌ ರಚಿಸಿರುವರು.

ಬಾಬು ಈಶ್ವರಪ್ರಸಾದ್‌ ಚಿತ್ರಕಲೆಯಲ್ಲಿ ಮಿಂಚುತ್ತಿರುವ ಹೆಸರು. ಆದರೂ ವಿಶಿಷ್ಠ ಚಿಂತನೆಗಳಿಂದ ಕೂಡಿದ ಶಿಲ್ಪಗಳನ್ನು ರಚಿಸಿರುವರು. ಮನುಷ್ಯನ ಅಸಹಾಯಕತೆ, ಸಾವು – ನೋವಿನ ಅನುಭವಗಳಿಂದ ಕೂಡಿದ ಶಿಲ್ಪಗಳು ಇವರಿಂದ ಆಗಾಗ ರಚನೆಗೊಂಡದ್ದಿದೆ. ಹೆನ್ರಿಮೂರ್ ನಂತಹ ಶಿಲ್ಪಿಯ ಕಲಾಕೃತಿಗಳ ಪ್ರಭಾವಲಯಕ್ಕೆ ಸಿಲುಕಿ ನಂತರ ಸ್ವಂತಿಕೆ ತೋರ್ಪಡಿಸಿದ ಕೆ.ಜಿ. ಅರುಣ್‌ಆರಂಭದಲ್ಲಿ ಮರ ಮತ್ತು ಫೈಬರ್ ಮಾಧ್ಯಮಗಳಲ್ಲಿ ಅಭಿವ್ಯಕ್ತಿಸಿದರು. ಅನಂತರ ಕಬ್ಬಿಣ, ಕಂಚುಗಳನ್ನು ಮರದೊಂದಿಗೆ ಅಗತ್ಯ ಕಂಡಲ್ಲಿ ಸಂಯೋಜಿಸಿ ಶಿಲ್ಪಗಳನ್ನು ಸೃಷ್ಟಿಸಿರುವರು.

ಬಂಟನೂರ ಅವರ ಕಲಾಕೃತಿ. ‘ಋತುಮತಿ’. ಮಾಧ್ಯಮ: ಮರ

ಬಂಟನೂರ ಅವರ ಕಲಾಕೃತಿ. ‘ಋತುಮತಿ’. ಮಾಧ್ಯಮ: ಮರ

ಎಂ.ಎಸ್‌. ಮೂರ್ತಿ ಚಿತ್ರಕಲೆ, ಕಲಾ ಬರೆಹ ಮತ್ತು ಸಂಘಟನೆಗಳೊಂದಿಗೆ ಆಗಾಗ ಗಮನಾರ್ಹ ಶಿಲ್ಪಗಳನ್ನು ರಚಿಸಿರುವುದುಂಟು. ಅಭಿವ್ಯಕ್ತಿಗೆ ಶಿಲೆ, ಮತ್ತು ಮರಗಳನ್ನು ದುಡಿಸಿಕೊಂಡಿರುವರು. ಎಲ್‌. ಶಿವಲಿಂಗಪ್ಪ

[1] ಅವರೂ ಚಿತ್ರಕಲೆಯೊಂದಿಗೆ ಬರೆವಣಿಗೆಯನ್ನು ನಿರಂತರವಾಗಿ ರೂಢಿಸಿಕೊಂಡವರು. ಹಾಗಿದ್ದೂ ಆಗಾಗ ಶಿಲ್ಪಗಳನ್ನು ಸೃಷ್ಟಿಸುತ್ತ ಬಂದಿರುವರು. ಕಂಚು ಹಾಗೂ ಮರಳು ಶಿಲೆಯ ನವ್ಯಶಿಲ್ಪಗಳು ಅವರಿಂದ ಮೂಡಿ ಬಂದಿವೆ. ಚಿತ್ರ ಕಲಾವಿದರೆಂದು ಪರಿಚಿತರಾಗಿರುವ ರಾಮ್‌ದಾಸ್‌ ಆಡ್ಯಂತಾಯರು ದಕ್ಷಿಣ ಕನ್ನಡದ ಭೂತಾರಾಧನಾ ಮೂಲದ ಶಿಲ್ಪಗಳು ಹಾಗೂ ಶೃಂಗಾರ ಸುಂದರಿಯಂತಹ ಆಧುನಿಕ ಸಂವೇದನೆಗಳ ಶಿಲ್ಪಗಳನ್ನು ರಚಿಸಿರುವರು. ವಿ.ಆರ್.ಸಿ. ಶೇಖರ್ ಚಿತ್ರದುರ್ಗದ ಕೋಟೆಯ ಹಲವು ಭೂದೃಶ್ಯ ಶಿಲ್ಪಗಳನ್ನು ಕಂಚಿನಲ್ಲಿ ರೂಪಿಸಿರುವುದು ವಿಶಿಷ್ಟ ರೀತಿಯದು.

 

ಗೌತಮ ವಿ.ಎ. ಅವರ ಕೆತ್ತನೆ. ಮಾದ್ಯಮ: ಮರ

ಗೌತಮ ವಿ.ಎ. ಅವರ ಕೆತ್ತನೆ. ಮಾದ್ಯಮ: ಮರ

ಎಂ. ರಾಮಮೂರ್ತಿ ಅವರು ತಮ್ಮ ಸಮಕಾಲೀನ ಅನುಭವಗಳನ್ನು ಟೆರಾಕೊಟ್ಟ, ಮರ ಮಾಧ್ಯಮಗಳಲ್ಲಿ ಅಭಿವ್ಯಕ್ತಿಸಿರುವುದು ಗಮನಾರ್ಹ. ರಾಜಕೀಯ ಬ್ರಷ್ಟಾಚಾರ, ಶೋಷಿತರ ನೋವು ಮತ್ತು ಬರದ ಮುಖಗಳು ಅವರ ಶಿಲ್ಪಗಳಲ್ಲಿ ಮೈತಳೆದಿವೆ. ತಮ್ಮ ಗ್ರಾಫಿಕ್‌, ಚಿತ್ರಕಲೆಯೊಂದಿಗೆ ಪರಿಚಿತರಾದ ಎನ್‌. ಮರಿಶಾಮಾಚಾರ್ ಶಿಲ್ಪಗಳನ್ನೂ ಸೃಷ್ಟಿಸಿರುವರು.

ದಕ್ಷಿಣ ಕನ್ನಡದ ಭೂತಗಳ ಮುಖವಾಡಗಳನ್ನು ತಮ್ಮದೇ ಆದ ರೀತಿಯಿಂದ ಸೃಷ್ಟಿಸಿರುವವರು ಎಲ್‌.ಪಿ. ಅಂಚನ್‌. ಲೋಹದ ಹಾಳೆಗಳಲ್ಲಿ ಕ್ಯೂಬಿಸಂಗೆ ಹತ್ತಿರವಾದ ಹಲವು ಮುಖವಾಡಗಳು ಮತ್ತು ಜಾನಪದ ಆಶಯಗಳ ಶಿಲ್ಪಗಳು ಅವರಿಂದ ಮೂಡಿಬಂದಿವೆ. ಪ್ರಸಿದ್ಧ ಚಿತ್ರಕಲಾವಿದ ಎಸ್‌.ಜಿ. ವಾಸುದೇವ್‌ ಅವರೂ ಲೋಹದ ಫಲಕಗಳ ಉಬ್ಬು ಶಿಲ್ಪಗಳಲ್ಲಿ ಜನಪದ ಕಲ್ಪನೆಗಳಿಂದ ಸ್ಪೂರ್ತಿಗೊಂಡು ಅಭಿವ್ಯಕ್ತಿಸಿರುವರು. ಸಮಕಾಲೀನ ಸ್ಪಂದನೆಯ ಸೆಳಕುಗಳೂ ಅವರು ಇಂತಹ ಶಿಲ್ಪಗಳಲ್ಲಿ ತೂರಿಕೊಂಡಿವೆ. ಮೈಥುನ, ಅವನು ಅವಳು ಇತ್ಯಾದಿ ಕಲಾಕೃತಿಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಗ್ರಾಫಿಕ್‌ಕಲಾವಿದರಾದ ಕೃಷ್ಣ ದೇವಾಡಿಗ ಟೆರಾಕೊಟ್ಟ ಮಾಧ್ಯಮದಲ್ಲಿ ಶಿಲ್ಪಗಳನ್ನು ಸೃಷ್ಟಿಸಿರುವರು.

 

ಬಂಟನೂರ ಅವರ ಅಭಿವ್ಯಕ್ತಿ. ಮಾಧ್ಯಮ: ಮರ

ಬಂಟನೂರ ಅವರ ಅಭಿವ್ಯಕ್ತಿ. ಮಾಧ್ಯಮ: ಮರ

 

೧೯೯೦ ರ ದಶಕದಿಂದ ಈಚೆಗೆ ಹಲವಾರು ಗಂಭೀರ ಯುವಶಿಲ್ಪಿಗಳನ್ನು ಕಾಣುತ್ತೇವೆ. ಶಾಂತಿನಿಕೇತನ, ಬರೋಡ ಕಲಾಶಾಲೆಗಳಲ್ಲಿ (ನಮ್ಮ ರಾಜ್ಯದೊಳಗಿನ ಕಲಾಶಾಲೆಗಳನ್ನೂ ಒಳಗೊಂಡು) ಶಿಲ್ಪಕಲೆಯನ್ನು ಕಲಿತು ಹೊರ ಬಂದು ಅಭಿವ್ಯಕ್ತಿಸುತ್ತಿರುವವರಲ್ಲಿ ಹಲವಾರು ಪ್ರತಿಭಾವಂತರಿದ್ದಾರೆ. ಇವರೆಲ್ಲರೂ ಶಿಲ್ಪವನ್ನೇ ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ದುಡಿಸಿಕೊಳ್ಳುತ್ತಿರುವವರು. ಗ್ರಾಫಿಕ್‌, ವರ್ಣಚಿತ್ರ ಗಳೊಂದಿಗೆ ಆಗಾಗ ಶಿಲ್ಪಗಳನ್ನು ಸೃಷ್ಟಿಸುತ್ತಿರುವ ಯುವ ಕಲಾವಿದರೂ ಕೆಲವರು ಇದ್ದಾರೆ. ನಾರಾಯಣ ಸೂತ್ರದಾರ, ಭೌನಿ, ಎಂ.ಸಿ. ರಮೇಶ್‌, ಉಮೇಶ್‌, ರಮೇಶ್‌ ಚಂದ್ರ, ಓಂ ಪ್ರಕಾಶ್‌, ಸುರೇಶ್‌, ನಾಗಪ್ಪ ಪ್ರಧಾನಿ, ವಿಜಯರಾವ್‌, ವೀರಣ್ಣ ಅರ್ಕಸಾಲಿ, ಶಿವಾನಂದ ಬಂಟನೂರ, ರೇಣುಕ ಕೇಸರಮಡು, ರಾಜು ಮೊದಲಾದವರು ಗಂಭೀರವಾದ ಶಿಲ್ಪಗಳನ್ನು ಸೃಷ್ಟಿಸಿದ್ದಾರೆ.

 

ದೇವಣಗಾಂವ್ ಅವರ ರಚನೆ. ಮಿಶ್ರ ಮಾಧ್ಯಮ

ದೇವಣಗಾಂವ್ ಅವರ ರಚನೆ. ಮಿಶ್ರ ಮಾಧ್ಯಮ

 

ನಾರಾಯಣ ಸೂತ್ರದಾರ ಮತ್ತು ಬೌನಿ ಅವರುಗಳು ಹೊರ ರಾಜ್ಯದಿಂದ ಬಂದು ಬೆಂಗಳೂರಲ್ಲಿ ನೆಲೆಸಿರುವವರು. ಬೌನಿ ಮರ, ಲೋಹ, ಫೈಬರ್ ಮೊದಲಾದ ಮಾಧ್ಯಮಗಳಲ್ಲಿ ಶಿಲ್ಪಗಳನ್ನು ಸೃಷ್ಟಿಸುತ್ತಾರೆ. ಮಧ್ಯ ಪ್ರದೇಶದ ಮೂಲದ ಇವರು ಶಾಂತಿನಿಕೇತನದಲ್ಲಿ ಶಿಲ್ಪಕಲೆಯನ್ನು ಕಲಿತವರು. ಇಂದು ಶಿಲ್ಪಕಲೆಗೆ ತಮ್ಮನ್ನು ಒಪ್ಪಿಸಿಕೊಂಡಿರುವ ಬೌನಿ ಚಿಕ್ಕವಯಸ್ಸಿನಲ್ಲೇ ಗಮನಾರ್ಹ ಸೃಷ್ಟಿಗಳಿಗೆ ಕಾರಣರಾಗಿದ್ದರಂತೆ. ಬೃಹತ್‌ ಆಕಾರದ ವ್ಯಕ್ತಿ ಶಿಲ್ಪಗಳ ರಚನೆಗೆ ಬೌನ ಮುಂಚೂಣಿಯಲ್ಲಿದ್ದಾರೆ. ನಾರಾಯಣ ಸೂತ್ರದಾರ್ ಮರ, ಕಲ್ಲು ಮತ್ತು ಲೋಹ ಮಾಧ್ಯಮಗಳಲ್ಲಿ ಶಿಲ್ಪಗಳನ್ನು ಸೃಷ್ಟಿಸುತ್ತಾರೆ. ಮಧ್ಯ ಪ್ರದೇಶದ ಮೂಲದ ಇವರು ಶಾಂತಿನಿಕೇತನದಲ್ಲಿ ಶಿಲ್ಪಕಲೆಯನ್ನು ಕಲಿತವರು. ಇಂದು ಶಿಲ್ಪಕಲೆಗೆ ತಮ್ಮನ್ನು ಒಪ್ಪಿಸಿಕೊಂಡಿರುವ ಬೌನಿ ಚಿಕ್ಕವಯಸ್ಸಿನಲ್ಲೇ ಗಮನಾರ್ಹ ಸೃಷ್ಟಿಗಳಿಗೆ ಕಾರಣರಾಗಿದ್ದರಂತೆ.. ಬೃಹತ್‌ ಆಕಾರದ ವ್ಯಕ್ತಿ ಶಿಲ್ಪಗಳ ರಚನೆಗೆ ಬೌನಿ ಮುಂಚೂಣಿಯಲ್ಲಿದ್ದಾರೆ. ನಾರಾಯಣ ಸೂತ್ರದಾರ್ ಮರ, ಕಲ್ಲು ಮತ್ತು ಲೋಹ ಮಾಧ್ಯಮಗಳಲ್ಲಿ ಅಮೂರ್ತ ಶೈಲಿಯ ಹಲವಾರು ಗಮನಾರ್ಹ ಶಿಲ್ಪಗಳನ್ನು ರಚಿಸಿರುವರು.

 

ಜಕ್ಕೇಪಳ್ಳಿ ಅವರ ಕೃತಿ. ಮಾಧ್ಯಮ: ಮೃದುಶಿಲೆ

ಜಕ್ಕೇಪಳ್ಳಿ ಅವರ ಕೃತಿ. ಮಾಧ್ಯಮ: ಮೃದುಶಿಲೆ

 

ಎಂ.ಸಿ. ರಮೇಶ ಅವರು ಮರ ಮತ್ತು ಶಿಲಾ ಮಾಧ್ಯಮಗಳಲ್ಲಿ ಗಂಭೀರ ಶಿಲ್ಪಗಳನ್ನು ಸೃಷ್ಟಿಸುವಲ್ಲಿ ತೊಡಗಿಕೊಂಡಿರುವವರು. ಬದುಕಿನ ವಿಕೃತ ಮತ್ತು ಉಸಿರುಗಟ್ಟಿಸುವ ಸಂದರ್ಭಗಳಿಂದ ತಳಮಳಗೊಂಡು ಆ ಅನುಭವಗಳನ್ನು ಶಿಲ್ಪಗಳಲ್ಲಿ ಅಭಿವ್ಯಕ್ತಿಸಿರುವ ರೀತಿ ಗಮನಾರ್ಹವಾದುದು. ಇವರು ತಮ್ಮ ಶಿಲ್ಪಗಳಿಗಾಗಿಯೇ ೧೯೯೩ನೇ ಸಾಲಿನ ಬೇಂದ್ರೆ – ಹುಸೇನ್‌ ಶಿಷ್ಯವೇತನ ಪಡೆದಿರುವರು. ಪ್ರಯೋಗ ಶೀಲತೆಯನ್ನೇ ಪ್ರಧಾನವಾಗಿ ಮೆರೆದಿರುವ ಉಮೇಶ್‌ ಅವರು ಸುತ್ತಮುತ್ತ ಬಿಸುಟ ವಸ್ತುಗಳನ್ನು ಆರಿಸಿ ತಂದು ಶಿಲ್ಪಗಳನ್ನು ಸೃಷ್ಟಿಸಿರುವುದು ವಿಶಿಷ್ಟವಾದುದು. ಹಾಗೇ ಓಂಪ್ರಕಾಶ ಅವರು ಬೃಹತ್ತಾದ ಗಂಭೀರ ಅಭಿವ್ಯಕ್ತಿಯಿಂದ ಕೂಡಿರುವ ಶಿಲ್ಪಗಳನ್ನು ರಚಿಸುವವರಲ್ಲಿ ಪ್ರಮುಖರು. ಮನುಷ್ಯನಲ್ಲಿ ಆಳವಾಗಿ ಬೇರೂರಿರುವ ಅತಿ ಮಹತ್ವಾಕಾಂಕ್ಷೆ, ಕಪಟತೆ, ದುರಾಸೆ, ಸ್ವಾರ್ಥ ಮನೋಭಾವಗಳನ್ನು ಪ್ರಶ್ನಿಸುವ ದೃಷ್ಟಿಯ ಇವರ ಶಿಲ್ಪಗಳು ಉತ್ತರಗಳನ್ನು ಅನ್ವೇಷಿಸುವ ಸೃಷ್ಟಿಗಳಾಗಿವೆ. ವಿಶೇಷವಾಗಿ ಮರ, ಫೈಬರ್ ಗಾಜು ಮಾಧ್ಯಮಗಳನ್ನಿವರು ದುಡಿಸಿಕೊಡಿರುವುದು ವಿಶೇಷವಾಗಿದೆ.

ಲೋಹ ಮತ್ತು ಶಿಲಾ ಮಾಧ್ಯಮಗಳಲ್ಲಿ ಹಲವು ಗಮನಾರ್ಹ ಶಿಲ್ಪಗಳನ್ನು ರಚಿಸಿದವರು ನಾಗಪ್ಪ ಪ್ರದಾನಿಯವರು. ತಾಯಿ – ಮಗು, ಹಲವು ಭಾವಶಿಲ್ಪಗಳು ಸರಣಿಯಾಗಿ ಇವರಿಂದ ಸೃಷ್ಟಿಗೊಂಡಿವೆ. ಭಾವಶಿಲ್ಪಗಳು ರೂಪದರ್ಶಿಯ ಹೊರ ಚಹರೆಯೊಂದಿಗೆ ಒಳನೋಟಗಳನ್ನು ಬಿಂಬಿಸಿದವುಗಳಾಗಿವೆ. ರಮೇಶ್‌ಚಂದ್ರ ಕೂಡ ಚಿತ್ರಕಲೆಯೊಂದಿಗೆ ಹಲವು ಗಂಭೀರ ನೆಲೆಯ ಶಿಲ್ಪಗಳನ್ನು ರಚಿಸಿರುವರು. ಲಲಿತಾಶಂಕರ್ ಅವರ ಶಿಲ್ಪಗಳೂ ಗಮನಾರ್ಹ. ಮೈಸೂರಿನ ಕಾವಾದಲ್ಲಿರುವ ವೀರಣ್ಣ ಅರ್ಕಸಾಲಿ ಅವರು ಶಿಲೆ ಮತ್ತು ಲೋಹ ಮಾಧ್ಯಮಗಳನ್ನು ದುಡಿಸಿಕೊಂಡು ಹಲವು ಗಮನಾರ್ಹ ಶಿಲ್ಪಗಳನ್ನು ರಚಿಸಿರುವರು.

ಮಂಜುನಾಥರ ರಚನೆ. ಮಾಧ್ಯಮ: ಚಪ್ಪಡಿಕಲ್ಲು

ಮಂಜುನಾಥರ ರಚನೆ. ಮಾಧ್ಯಮ: ಚಪ್ಪಡಿಕಲ್ಲು

 

ನಟರಾಜ ಶರ್ಮ ವರ್ಣಚಿತ್ರಗಳ ಜೊತೆಗೆ ಹಲವು ಮಾಧ್ಯಮಗಳಲ್ಲಿ ಗಂಭೀರ ನೆಲೆಯ ಶಿಲ್ಪಗಳನ್ನೂ ಸೃಷ್ಟಿಸಿರುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿರುವ ಡಾ. ಶಿವಾನಂದ ಬಂಟನೂರ ಮರ ಮತ್ತು ಶಿಲಾ ಮಾಧ್ಯಮಗಳಲ್ಲಿ ಬಹುಕಾಲ ಕಾಡುವಂತಹ ಹಲವು ಗಮನಾರ್ಹ ಶಿಲ್ಪಗಳನ್ನು ಸೃಷ್ಟಿಸಿರುವರು. ‘ಪಶ್ಚಿಮದ ದಟ್ಟ ನೆರಳಿನಲ್ಲಿ ಹುಟ್ಟಿಬಂದ ಬಂಟನೂಋ ಅವರ ಪ್ರಾರಂಭದ ಶಿಲ್ಪಗಳು ಅನಂತರ ಸುತ್ತಲಿನ ಪ್ರಭಾವಗಳನ್ನು ಅರಗಿಸಿಕೊಂಡು ಸ್ವಂತಿಕೆ ಮೆರೆದಿರುವುದನ್ನು ಗುರುತಿಸಬಹುದು; ಹಲವು ವಸ್ತುಗಳನ್ನು ಅಸೇಂಬಲ್‌ ಮಾಡಿ ಸಂಯೋಜಿಸಿ ರಚಿಸಿರುವ ಇವರ ಕೆಲವು ಶಿಲ್ಪಗಳು ವಸ್ತುವಿನ ಹೊಸತನ, ಆಕರ್ಷಕ ನಿರ್ವಹಣೆಗಳಿಂದ ಗಮನಾರ್ಹವಾಗಿವೆ.[2] ಇವರ ಶೀರ್ಷಿಕೆ ರಹಿತವಾದ ಹಲವು ಶಿಲ್ಪಗಳು ಭಾವಪ್ರಚೋದಕವಾಗಿದ್ದರೆ, ಬುದ್ದ ಮತ್ತು ಅವನ ತತ್ವಗಳು, ‘ಇಂಡಿಯನ್‌ಬ್ರಶ್‌ಫಾರ್ ಮಲ್ಟಿನ್ಯಾಷನಲ್‌ಕಂಪನಿ ಶೂ‌’, ಗ್ಯಾಟ್‌, ‘ಆಕಾಶದ ರೊಟ್ಟಿ’ಯಂತಹ ಶೀರ್ಷಿಕೆಯ ಶಿಲ್ಪಗಳು ತೀವ್ರ ವೈಚಾರಿಕ ಸ್ಪಂದನೆಯಿಂದ ಕೂಡಿದವುಗಳಾಗಿವೆ.

ಕರ್ನಾಟಕದಲ್ಲಿ ಈಚೆಗೆ ಹಲವಾರು ಯುವ ಶಿಲ್ಪಕಲಾವಿದರು ತಮ್ಮ ರಚನೆಗಳಿಂದ ಸಮಕಾಲೀನ ಶಿಲ್ಪಕಲಾ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುವ ಭರವಸೆ ಮೂಡಿಸಿರುವರು. ಕೆ. ರಾಘವೇಂದ್ರ, ಬಿ.ಎಮ್‌. ರವಿಕುಮಾರ, ರಾಜೇಶ್‌ ದೇವಣಗಾಂವ, ಜಗನ್ನಾಥ ಜಕ್ಕೇಪಳ್ಳಿ, ಎಂ. ವಿಶ್ವನಾಥ, ಎನ್‌.ಎಸ್‌. ಪ್ರದೀಪಕುಮಾರ, ಮಹಾಂತೇಶ ಪಲದಿನ್ನಿ, ಸುರೇಂದ್ರ ವಿಶ್ವಕರ್ಮ, ಈರಣ್ಣ ಕಂಬಾರ, ಗುರುರಾಜ ನಾಯಕ್‌, ವಿವೇಕ್‌ರಾವ್‌, ಡಿ.ರಂಗಸ್ವಾಮಿ, ಆರ್. ಜಗದೀಶ್‌, ಅರ್ಚನಾ ಸಿಂಗ್‌, ರವಿ ಷಾ, ಶಶಿಧರ ಪತ್ತಾರ, ಬಿ.ಕೆ. ಶಿವಕುಮಾರ, ರಘುರಾಮ್‌, ಶರಣಕುಮಾರ ಹೆಡೆ, ವಿಪಿನ್‌ಸಿಂಗ್‌ ಬದೂರಿಯಾ, ಬಿ.ಆರ್. ಗೀತಾಂಜಲಿ, ಮಂಜುನಾಥ, ಗೋಪಾಲ ಕಮ್ಮಾರ, ಆನಂದ ಬಾಬು, ಗೌತಮ ಅಂದಾನಿ, ಮಹಾಂತೇಶ್‌ ಗುತ್ತೇದಾರ, ಉಮೇಶ್‌, ಎಸ್‌. ಮೊದಲಾದವರನ್ನು ಹೆಸರಿಸಬಹುದು.

 

ರವಿಕುಮಾರ ಅವರ ರಚನೆ ‘ಅರ್ಬನ್ ಕೌವ್’ ಮಿಶ್ರ ಮಾಧ್ಯಮ

ರವಿಕುಮಾರ ಅವರ ರಚನೆ ‘ಅರ್ಬನ್ ಕೌವ್’ ಮಿಶ್ರ ಮಾಧ್ಯಮ

 

ಆನಂದ್‌ ಬಾಬು ಲೋಹ ಮತ್ತು ಟೆರಾಕೊಟ್ಟ ಮಾಧ್ಯಮಗಳಲ್ಲಿ ಸೃಜನಾತ್ಮಕವಾದ ಹಲವು ಶಿಲ್ಪಕಲಾಕೃತಿಗಳನ್ನು ರಚಿಸಿರುವರು. ಗೌತಮ ಅಂದಾನಿ ಮರ ಮತ್ತು ಲೋಹ ಮಾಧ್ಯಮಗಳಲ್ಲಿ ಕುತೂಹಲಕರವಾದ ಶಿಲ್ಪಗಳನ್ನು ರಚಿಸಿರುವರು; ಲೋಹಫಲಕಗಳಲ್ಲಿ ಆಕಾರಗಳನ್ನು ಕೊರೆದು, ಒಂದನ್ನೊಂದು ಬೆಸೆದು ರಚಿಸಿರುವ ಇವರ ಕೆಲವು ಶಿಲ್ಪಗಳು ವಿಶೇಷವಾದವುಗಳು. ವಿಪಿನ್‌ಸಿಂಗ್‌ ಬದೂರಿಯ ಶಿಲಾಮಾಧ್ಯಮದಲ್ಲಿ ರಚಿಸಿರುವ ಶಿಲ್ಪಗಳು ಗಮನಾರ್ಹವಾಗಿವೆ. ಶರಣಕುಮಾರ ಹೆಡೆ ಮತ್ತು ಗೋಪಾಲ ಕಮ್ಮಾರ ಅವರುಗಳ ಶಿಲಾ ಶಿಲ್ಪಗಳೂ ಸಮಕಾಲೀನವಾಗಿ ಗಮನಾರ್ಹವಾದವುಗಳು. ಮಹೇಶ್‌ಕುಮಾರ, ವಿಶ್ವೇಶ್ವರಯ್ಯ ಮೊದಲಾದವರೂ ಸಮಕಾಲೀನ ಶಿಲ್ಪ ಸೃಷ್ಟಿಯಲ್ಲಿ ಭರವಸೆ ಮೂಡಿಸಿರುವ ಯುವ ಕಲಾವಿದರು. ಜಕ್ಕೇಪಳ್ಳಿಯವರು ಹಲವು ಭಾವಶಿಲ್ಪ, ಪೂರ್ಣಶಿಲ್ಪಗಳನ್ನೂ ಸೃಷ್ಟಿಸಿರುವರು. ಬುದ್ಧಿ ಮತ್ತು ಭಾವಗಳನ್ನು ಬೆಸೆದ ಗ್ರಹಿಕೆ ಇವರ ಶಿಲ್ಪಗಳಲ್ಲಿ ಕಾಣಬಹುದು. ‘ಮೈ ಕಂಪ್ಯೂಟರ್’, ‘ಥಿಂಕಿಂಗ್‌’ ಶೀರ್ಷಿಕೆಯ ಶಿಲ್ಪಗಳು ಗಮನ ಸೆಳೆಯುತ್ತವೆ. ಬಿ.ಎಂ. ರವಿಕುಮಾರ ಅವರು ಹಲವು ಬುದ್ದಿಗಮ್ಯ, ವಿಚಾರಪೂರ್ಣವಾದ ಶಿಲ್ಪಗಳನ್ನು ಸೃಷ್ಟಿಸಿರುವರು. ಫೈಬರ್ ಮಾಧ್ಯಮದ ಇವರ ‘ಅರ್ಬನ್‌ಕೌ‌’ ಎಂಬ ಶೀರ್ಷಿಕೆಯ ಶಿಲ್ಪ ಅತ್ಯಂತ ಗಮನ ಸೆಳೆದ ಕಲಾಕೃತಿಯಾಗಿದೆ.

 

ಆನಂದ ಬಾಬು ಅವರ ಶಿಲ್ಪ. ಮಾಧ್ಯಮ: ಮರ ಮತ್ತು ಲೋಹ

ಆನಂದ ಬಾಬು ಅವರ ಶಿಲ್ಪ. ಮಾಧ್ಯಮ: ಮರ ಮತ್ತು ಲೋಹ

ಒಟ್ಟಾರೆ ಈ ಪರಿಮಿತ ಪುಟಗಳಲ್ಲಿ ಕೆಲವೇ ಪ್ರಮುಖ ಕಲಾವಿದರನ್ನು ಮತ್ತು ಅವರ (ಕೆಲವರ) ಕಲಾಕೃತಿಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ ಒಬ್ಬೊಬ್ಬ ಕಲಾವಿದರ ಶಿಲ್ಪಗಳ ಕುರಿತೇ ಸುದೀರ್ಘವಾಗಿ ವಿಶ್ಲೇಷಿಸಲು, ವಿಮರ್ಶಿಸಲು ಸಾಧ್ಯವಿದೆ. ಮಾತ್ರವಲ್ಲ ಪ್ರತ್ಯೇಕ ಪುಸ್ತಕಗಳೂ ಪ್ರಕಟಗೊಳ್ಳಬೇಕಿದೆ. ಶಿಲ್ಪಕಲಾ ಅಕಾಡೆಮಿಯಂತಹ ಸರಕಾರದ ಸ್ವಾಯತ್ತ ಸಂಸ್ಥೆಗಳು ಈ ಕೆಲಸವನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕಿದೆ.

ಕಲಾಶಾಲೆಗಳ ಕೊಡುಗೆ

ಸಮಕಾಲೀನ ಶಿಲ್ಪಕಲೆಯ ಬೆಳವಣಿಗೆಯ ದೃಷ್ಟಿಯಿಂದ ಕರ್ನಾಟಕದಲ್ಲಿನ ಕಲಾಶಾಲೆಗಳ ಕೊಡುಗೆಯೂ ಸ್ಮರಿಸುವಂತಹುದಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಗೊಂಡಿರುವ ಕಲಾಶಾಲೆಗಳಲ್ಲಿ ಕೆಲವೇ ಕೆಲವು ಶಾಲೆಗಳು ವಿದ್ಯಾರ್ಥಿಗಳಿಗೆ ಸಮಕಾಲೀನ ಶಿಲ್ಪಕಲೆಯನ್ನು ವ್ಯಾಸಂಗಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿವೆ. ಪ್ರಮುಖವಾದವುಗಳೆಂದರೆ ಮೈಸೂರಿನ ಕಾವಾ, ಬೆಂಗಳೂರಿನ ಚಿತ್ರಕಲಾ ಪರಿಷತ್ತು, ಗುಲಬರ್ಗದ ಎಂ.ಎಂ.ಕೆ. ಕಾಲೇಜ್‌ ಆಫ್‌ ವಿಜುಯಲ್‌ ಆರ್ಟ್ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಾದಾಮಿ ಶಾಖೆ ಮೊದಲಾದ ಸಂಸ್ಥೆಗಳಲ್ಲಿ ಸಮಕಾಲೀನ ಶಿಲ್ಪಕಲಾ ವ್ಯಾಸಂಗಕ್ಕೆ ಪ್ರತ್ಯೇಕ ವಿಭಾಗಗಳಿದ್ದು ಇಲ್ಲಿಂದ ಈ ವರೆಗೆ ಶಿಲ್ಪಕಲೆಯಲ್ಲಿ ಅನೇಕರು ಪದವಿ, ಸ್ನಾತಕೋತ್ತರ ಪದವಿಗಳನ್ನು ಹೊಂದಿರುವರು. (ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಾದಾಮಿ ಶಾಖೆಯು ಸಾಂಪ್ರದಾಯಿಕ ಮತ್ತು ಸಮಕಾಲೀನ ಶೈಲಿಗಳೆರಡರಲ್ಲೂ ಶಿಲ್ಪ ವ್ಯಾಸಂಗ ಮಾಡುವವರಿಗೆ ಅವಕಾಶ ನೀಡಿದೆ.) ಮಣ್ಣು, ಮರ, ಶಿಲೆ, ಲೋಹ, ಫೈಬರ್ ಮೊದಲಾದ ಮಾಧ್ಯಮಗಳಲ್ಲಿ ಶಿಲ್ಪರಚನೆಯ ವ್ಯಾಸಂಗಕ್ಕೆ ಈ ಎಲ್ಲ ಕೇಂದ್ರಗಳಲ್ಲಿ ಅವಕಾಶವಿರುತ್ತದೆ. ಆದರೆ ನುರಿತ ಉಪನ್ಯಾಸಕರ ಮಾರ್ಗದರ್ಶನದ ಕೊರತೆ ಮಾತ್ರ ಕೆಲವು ಕೇಂದ್ರಗಳಲ್ಲಿ ಎದ್ದು ಕಾಣುತ್ತದೆ.

ಗುಲಬರ್ಗಾದ ಐಡಿಯಲ್ ಫೈನ್ ಆರ್ಟ್ ಸಂಸ್ಥೆಯ ಆವರಣ್ಲದಲಿರುವ ಸಿಮೆಂಟ್ ಶಿಲ್ಪ

ಗುಲಬರ್ಗಾದ ಐಡಿಯಲ್ ಫೈನ್ ಆರ್ಟ್ ಸಂಸ್ಥೆಯ ಆವರಣ್ಲದಲಿರುವ ಸಿಮೆಂಟ್ ಶಿಲ್ಪ

ರಾಜಶೇಖರನ್ ಅವರ ಸೃಷ್ಟಿ. ಮಾಧ್ಯಮ: ಮರಳು ಶಿಲೆ.

ರಾಜಶೇಖರನ್ ಅವರ ಸೃಷ್ಟಿ. ಮಾಧ್ಯಮ: ಮರಳು ಶಿಲೆ.

ಗ್ರಿಜೇಶ್‌ಕುಮಾರ ಸಿಂಗ್ ಅವರ ಆಭಿವ್ಯಕ್ತಿ. ಮಾಧ್ಯಮ: ಮರಳು ಶಿಲೆ.

ಗ್ರಿಜೇಶ್‌ಕುಮಾರ ಸಿಂಗ್ ಅವರ ಆಭಿವ್ಯಕ್ತಿ. ಮಾಧ್ಯಮ: ಮರಳು ಶಿಲೆ.

 

ಸಮೂಹ ಚಟುವಟಿಕೆಗಳು

ಆಧುನಿಕ – ಸಮಕಾಲೀನ ಶಿಲ್ಪಕಲೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಸಮೂಹ ಚಟುವಟಿಕೆಗಳು ಅಂದರೆ ಸಾಮೂಹಿಕವಾದ ಏಕ ಅಥವಾ ಸಮೂಹ ಶಿಲ್ಪಗಳ ರಚನೆ, ಕಾರ್ಯಾಗಾರ, ಶಿಲ್ಪಕಲಾ ಶಿಬಿರಗಳು, ಪ್ರದರ್ಶನಗಳು ಅಪರೂಪವೆಂಬಂತೆ ನಡೆದಿರುತ್ತವೆ. ಸಮಕಾಲೀನ ಚಿತ್ರಕಲಾ ಚಟುವಟಿಕೆಗಳಿಗೆ ಹೋಲಿಸಿದರೆ ಸಮೂಹ ಶಿಲ್ಪಕಲಾ ಚಟುವಟಿಕೆಗಳು ತುಂಬ ವಿರಳವಾಗಿ ನಡೆದಿವೆ. ಕೆಲವನ್ನು ಇಲ್ಲಿ ಪ್ರಸ್ತಾಪಿಸಬಹುದು. ೧೯೮೨ರಲ್ಲಿ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ ವತಿಯಿಂದ ಆಯೋಜನೆಗೊಂಡಿದ್ದ ‘ಟೆಕ್ನೋ ಆರ್ಟ ಕ್ಯಾಂಪ್‌’ ಕರ್ನಾಟಕದಲ್ಲಿ ಸಮಕಾಲೀನ ಶಿಲ್ಪಕಲಾ ಬೆಳವಣಿಗೆಯ ದೃಷ್ಟಿಯಿಂದ ಒಂದು ಮೈಲಿಗಲ್ಲು ಎನ್ನಬಹುದು. ಈ ಶಿಬಿರದಲ್ಲಿ ನಮ್ಮ ಅಂದಿನ ಹಲವು ಯುವ ಶಿಲ್ಪಕಲಾವಿದರು ಸಾಕಷ್ಟು ತಾಂತ್ರಿಕ ಅಂಶಗಳನ್ನು ತಿಳಿದುಕೊಳ್ಳುವುದರೊಂದಿಗೆ ಹಲವು ಆಯಾಮಗಳಲ್ಲಿ ಬೆಳವಣಿಗೆಯನ್ನು ಹೊಂದಿದರು. ನಂತರ ಕರ್ನಾಟಕ ಚಿತ್ರಕಲಾ ಪರಿಷತ್ತು ಏರ್ಪಡಿಸಿದ್ದ ಅಖಿಲಭಾರತ ಮಟ್ಟದ ಕೆಲವು ಶಿಲ್ಪಕಲಾ ಶಿಬಿರಗಳೂ ಗಮನಾರ್ಹವೆನಿಸಿದವು.

 

ವೆಂಕಟೇಶ್ ಅವರ ರಚನೆ. ಮಾಧ್ಯಮ: ಮೃದುಶಿಲೆ

ವೆಂಕಟೇಶ್ ಅವರ ರಚನೆ. ಮಾಧ್ಯಮ: ಮೃದುಶಿಲೆ

[1] ಶಿವಲಿಂಗಪ್ಪ ಅವರು ಮೈಸೂರಿನ ಸಂಪ್ರದಾಯ ಶಿಲ್ಪಿ ಸಿದ್ಧಲಿಂಗಸ್ವಾಮಿಗಳ ಗುರುಕುಲದಲ್ಲಿ ಶಿಲ್ಪಕಲೆ ಕಲಿತವರು. ಆದರೂ ಸಮಕಾಲೀನ ಶಿಲ್ಪಗಳನ್ನು ರಚಿಸುವಲ್ಲಿ ಆಸಕ್ತಿ ಹೊಂದಿರುವರು.

[2] ಪಿ.ಆರ್. ತಿಪ್ಪೆಸ್ವಾಮಿ(ಸಂ.) ಶಿಲ್ಪಕಲಾ ಪ್ರಪಂಚ ಪುಟ-೫೩೨, ಕೆ.ವಿ. ಸುಬ್ರಹ್ಮಣ್ಯಂ ಅವರ ಲೇಖನ.