ಕರ್ನಾಟಕ ಲಲಿತಕಲಾ ಅಕಾಡೆಮಿಯು ತನ್ನ ಬೆಳ್ಳಿಹಬ್ಬದ ನಿಮಿತ್ತ ನಿರ್ಮಿಸಿದ ಸಮೂಹ ಶಿಲ್ಪ ಅತ್ಯಂತ ಗಮನಾರ್ಹವಾದುದು. ಈ ಸಮೂಹ ಶಿಲ್ಪಕಲಾಕೃತಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಶಿಲ್ಪವನದಲ್ಲಿದೆ. ಮೈಸೂರಿನ ಕಾವಾದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೇಯ ನೆರವಿನೊಂದಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಹಲವಾರು (ಬಾದಾಮಿಯಲ್ಲಿ ೨೦೦೯) ಶಿಲ್ಪಕಲಾ ಶಿಬಿರಗಳು ಉಲ್ಲೇಖಾರ್ಹವಾದವುಗಳಾಗಿವೆ.
ಗುಲ್ಬರ್ಗಾದಲ್ಲಿ ಸಮಕಾಲೀನ ಶಿಲ್ಪಕಲೆಗೆ ಸಂಬಂಧಿಸಿದಂತೆ ಬೃಹತ್ ಪ್ರಮಾಣದ ಎರಡು ಅಂತರ್ ರಾಷ್ಟ್ರೀಯ ಶಿಬಿರಗಳು ನಡೆದಿವೆ. ಒಂದು ದಿ ಐಡಿಯಲ್ ಫೈನ್ ಆರ್ಟ್ ಸಂಸ್ಥೆಯಲ್ಲಿ ಅಂದಾನಿಯವರ ನೇತೃತ್ವದಲ್ಲಿ ನಡೆದ ಸಿಂಪೋಷಿಯಂ, ಇನ್ನೊಂದು ಎಸ್.ಬಿ. ಉಪ್ಪಿನ್ ಅವರ ಸಂಚಾಲಕತ್ವದಲ್ಲಿ ಅವರ ತೋಟದ ಮನೆಯಲ್ಲಿ ನಡೆದುದು. ಸರ್ಕಾರ ಮಾಡದಿರುವ ಇಂತಹ ಕೆಲಸಗಳನ್ನು ಖಾಸಗಿಯಾಗಿ ಇವರುಗಳು ಮಾಡಿದ್ದು ಪ್ರಶಂಶನೀಯ, ದಾಖಲಾರ್ಹ ಸಾಧನೆಯಾಗಿದೆಯೆಂದರೆ ತಪ್ಪಲ್ಲ.
ಈಚೆಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಆಧುನಿಕ – ಸಮಕಾಲೀನ ಶಿಲ್ಪಕಲಾ ಶಿಬಿರಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೆಡೆಸಿದುದು ಸಮಕಾಲೀನ ಶಿಲ್ಪಕಲೆಯ ಬೆಳವಣಿಗೆಗೆ ಒತ್ತು ನೀಡಿದಂತಾಗಿದೆ. ಜೊತೆಗೆ ಅಕಾಡೆಮಿ ನಡೆಸುವ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಮತ್ತು ಪ್ರಶಸ್ತಿಗಳೂ ಪರೋಕ್ಷವಾಗಿ ಪರಿಣಾಮ ಬೀರಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ೧೯೯೫ರಲ್ಲಿ ನಡೆಸಿದ ಅಂತಾರಾಷ್ಟ್ರೀಯ ಶಿಲ್ಪಕಲಾ ಶಿಬಿರ ಹಾಗೂ ಅಕ್ಟೋಬರ್ ೨೦೧೦ ರಲ್ಲಿ ನಡೆಸಿದ ರಾಷ್ಟ್ರೀಯ ಶಿಲ್ಪಕಲಾ ಶಿಬಿರಗಳು[3] ದಾಖಲಾರ್ಹವಾದ ಸಾಧನೆಗಳೇ ಆಗಿವೆ.
ಸಾಹಿತ್ಯ
ಸಮಕಾಲೀನ ಶಿಲ್ಪಕಲೆಯ ಕುರಿತು (ಕನ್ನಡದಲ್ಲಿ) ಪ್ರಕಟಗೊಂಡಿರುವ ಸಾಹಿತ್ಯ ಬಹಳ ಕಡಿಮೆ. ಡಾ. ಶಿವರಾಮ ಕಾರಂತರು ಬರೆದ ಕಲಾಪ್ರಪಂಚವೇ ಆದಿ ಗ್ರಂಥವೆನ್ನಬೇಕು. ಆಧುನಿಕ ಶಿಲ್ಪಕಲೆಯ ಕುರಿತು (ಅದೂ ಪಾಶ್ಚಿಮಾತ್ಯ ಶಿಲ್ಪಕುರಿತು) ಈ ಪುಸ್ತಕದಲ್ಲಿ ಆಂಶಿಕವಾಗಿ ಮಾತ್ರ ಪ್ರಸ್ತಾಪವಿದೆ. ಕೆ.ವಿ. ಸುಬ್ರಹ್ಮಣ್ಯಂ ಅವರು ಬರೆದಿರುವ ಕರ್ನಾಟಕದ ಆಧುನಿಕ ಶಿಲ್ಪಕಲೆ, ಸಿ.ಪಿ. ರಾಜರಾಮ್, ಆರ್.ಎಸ್. ನಾಯ್ಡು, ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ, ಪ್ರತಿಷ್ಠಾಪನ ಕಲೆ, ಮೊದಲಾದ ಪುಸ್ತಕಗಳೇ ನಿಜವಾಗಿ ಆಧುನಿಕ – ಸಮಕಾಲೀನ ಶಿಲ್ಪಕಲೆಯ ಕುರಿತಾಗಿ ಬಂದಿರುವ ಅಪರೂಪದ ಕೊಡುಗೆಗಳೆನ್ನಬೇಕು.
ಕೆ.ವಿ. ಸುಬ್ರಹ್ಮಹ್ಮಣ್ಯಂ ಅವರನ್ನು ಒಳಗೊಂಡಂತೆ, ಮರಿಶಾಮಾಚಾರ್, ಎಚ್.ಎ. ಅನೀಲ್ಕುಮಾರ್, ಎಸ್.ಎನ್. ಚಂದ್ರಶೇಖರ, ಅ.ಲ.ನರಸಿಂಹನ್, ಎಲ್. ಶಿವಲಿಂಗಪ್ಪ, ಚಿ.ಸು. ಕೃಷ್ಣಸೆಟ್ಟಿ, ವಿಜಯರಾವ್, ವೆಂಕಟಾಚಲಪತಿ, ಪ್ರೊ. ಎಂ.ಎಚ್. ಕೃಷ್ಣಯ್ಯ, ರವಿಕುಮಾರ ಕಾಶಿ, ಡಾ. ಶಿವಾನಂದ ಎಚ್..ಬಂಟನೂರ, ಎಂ.ಎಸ್. ಮೂರ್ತಿ ಮೊದಲಾದ ವರು ಆಧುನಿಕ – ಸಮಕಾಲೀನ ಶಿಲ್ಪಕಲೆಯ ಕುರಿತು ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿರುವುದನ್ನು ಗಮನಿಸಬಹುದು. ಕೆ.ವಿ. ಸುಬ್ರಹ್ಮಣ್ಯಂ ಅವರ ಕರ್ನಾಟಕದ ಆಧುನಿಕ ಶಿಲ್ಪಕಲೆ ಗ್ರಂಥವು ಕರ್ನಾಟಕದಲ್ಲಿ ಆಧುನಿಕ ಶಿಲ್ಪಕಲೆಯ ಉಗಮ, ಬೆಳವಣಿಗೆ, ಪ್ರಮುಖ ಕಲಾವಿದರು, ಅವರ ಸಂವೇದನೆ, ಅಭಿವ್ಯಕ್ತಿ ಇತ್ಯಾದಿಗಳನ್ನು ಕುರಿತು ಸಂಕ್ಷಿಪ್ತವಾಗಿ, ಅಷ್ಟೇ ಅರ್ಥಪೂರ್ಣವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದೆ. ‘ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ’ ಗ್ರಂಥವಂತೂ ಸಮಗ್ರತೆಯಿಂದ ಕೂಡಿ ಮಾಹಿತಿ ಪೂರ್ಣವಾಗಿದೆ. ಇದರಲ್ಲೂ ಆಧುನಿಕ ಶಿಲ್ಪಕಲೆಯ ಹುಟ್ಟು, ಬೆಳವಣಿಗೆ ಪ್ರಮುಖ ಕಲಾವಿದರು, ಅವರ ಸಂವೇದನೆಗಳೊಟ್ಟಿಗೆ ಆಧುನಿಕೋತ್ತರ ಶಿಲ್ಪಗಳ ಕುರಿತು ಹಲವಾರು ಒಳನೋಟಗಳನ್ನು ಅನಾವರಣ ಮಾಡಿದೆ. ಸಾಕಷ್ಟು ಕಲಾಕೃತಿಗಳ ಛಾಯಾಚಿತ್ರಗಳನ್ನು ಅಚ್ಚು ಹಾಕಲಾಗಿದ್ದು ಅಭ್ಯಾಸಿಗಳಿಗೆ ಒಂದು ಮಹತ್ವದ ಆಕರ ಗ್ರಂಥವೂ ಆಗಿದೆ. ಕರ್ನಾಟಕ ಲಲಿತಕಲಾ ಅಕಾಡೆಮಿಯು ಪ್ರಕಟಿಸಿರುವ ಶಿಲ್ಪಕಲಾ ಪ್ರಪಂಚದಲ್ಲೂ ಸಮಕಾಲೀನ ಶಿಲ್ಪಕಲೆಯ ಕುರಿತು ಕೆಲವು ಲೇಖನಗಳು ಸ್ಥಾನ ಪಡೆದಿವೆ.
ಕರ್ನಾಟಕದ ಸಮಕಾಲೀನ ಶಿಲ್ಪಕಲೆಯ ಕುರಿತು, ಅದರ ಒಳನೋಟಗಳ ಕುರಿತು ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಸಾಹಿತ್ಯ ಸೃಷ್ಟಿಯಾಗಬೇಕಿದೆ. ಮುಖ್ಯವಾಗಿ ಸಮಕಾಲೀನ ಶೀಲ್ಪ ಕಲಾವಿದರ ಕುರಿತಂತೆ ಒಬ್ಬೊಬ್ಬ ಕಲಾವಿದನ ಸಮಗ್ರ ಜೀವನ ಮತ್ತು ಸಾಧನೆಗಳನ್ನು ಹಿಡಿದಿಡುವ ನಿಟ್ಟಿನಲ್ಲಿ, ಪುಸ್ತಕ ರೂಪದಲ್ಲಿ ಬರಬೇಕಿದೆ. ಸಂಶೋಧನೆಗಳೂ ನಡೆಯಬೇಕಿವೆ.
ಈ ಮಧ್ಯೆ ನವ್ಯ ಶಿಲ್ಪಕಲೆಯ ಪ್ರಭಾವದಿಂದಾಗಿ ಸಾಂಪ್ರದಾಯಿಕ ಶಿಲ್ಪಕಲೆಯ ಬೆಳವಣಿಗೆ ಕುಗ್ಗಿದೆಯೆಂಬುದು ಹಲವು ಸಾಂಪ್ರದಾಯಿಕ ಕಲಾವಿದರ, ಶಿಲ್ಪಿಗಳ ವಾದವಾಗಿದೆ. ಆದರೆ ಇದೊಂದು ಮಿಥ್ಯಾವಾದ ಎನ್ನಬೇಕು. ನವ್ಯ ಶಿಲ್ಪಕಲೆಯ ಪ್ರಭಾವ, ಬೆಳವಣಿಗೆಗಳಿಂದಾಗಿ ನಮ್ಮ ಸಾಂಪ್ರದಾಯಿಕ ಶಿಲ್ಪಕಲೆಯ ಬೆಳವಣಿಗೆ ಕುಗ್ಗಿಲ್ಲ, ಸಾಂಪ್ರದಾಯಿಕ ಶಿಲ್ಪಕಲೆ ಮುಖ್ಯವಾಗಿ ಧಾರ್ಮಿಕ ಹಿನ್ನೆಲೆಯುಳ್ಳದ್ದು. ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಅದರ ಅಗತ್ಯಗಳನ್ನು ಪೂರೈಸುವ ದೃಷ್ಟಿಯಿಂದ ಬೇಡಿಕೆಯ ಹಿನ್ನೆಲೆಯಲ್ಲಿ ಹಲವಾರು ಶಿಲ್ಪಗಳು ಶಿಲ್ಪಿಗಳಿಂದ ರೂಪ ತಳೆಯುತ್ತವೆ. ಈಗಲೂ ಸಾಂಪ್ರದಾಯಿಕ ಶಿಲ್ಪಕಲಾ ಕೃತಿಗಳು ಅಗಾಧ ಪ್ರಮಾಣದಲ್ಲಿ ಸೃಷ್ಟಿಗೊಳ್ಳುತ್ತಲೇ ಇವೆ. ಹೊರದೇಶಗಳಲ್ಲೂ ಇವುಗಳಿಗೆ ಸಾಕಷ್ಟು ಬೇಡಿಕೆ ಇದೆ. ನವ್ಯ ಅಥವಾ ಸಮಕಾಲೀನ ಶಿಲ್ಪ ಸೃಷ್ಟಿಯ ಹಿಂದಿರುವ ಆಶಯ, ಕಾಳಜಿ ಮತ್ತು ಅಗತ್ಯಗಳೇ ಬೇರೆಯಾಗಿದ್ದು, ಅದು ನಿತ್ಯ ಪರಿವರ್ತನ ಶೀಲವಾಗಿದೆ, ಮತ್ತು ಸಮಾಜ ಮುಖಿಯಾಗಿದೆ. ಒಟ್ಟು ಸಂಸ್ಕೃತಿಯ ಜೀವಧ್ವನಿಯಾಗಿ ಹೊರಹೊಮ್ಮುವ ಆಶಯ ಹೊಂದಿದೆ.
ಒಟ್ಟಾರೆ ವಿಭಿನ್ನ ಸಂಸ್ಕೃತಿಗಳು ಮತ್ತು ಸವಾಲುಗಳ ನಡುವೆಯೂ ನಮ್ಮ ಹಲವು ಹಿರಿ – ಕಿರಿಯ ಶಿಲ್ಪಿಗಳು ಪಾಶ್ಚಾತ್ಯ ಪ್ರಭಾವಗಳನ್ನು ಅರಗಿಸಿಕೊಂಡು ಸ್ವಂತಿಕೆಯನ್ನು ಮೆರೆಯುವುದರೊಂದಿಗೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ನಿಲ್ಲಬಲ್ಲ ಸಾಮರ್ಥ್ಯವನ್ನು ತಮ್ಮ ಶಿಲ್ಪಗಳ ಮೂಲಕ ತೋರ್ಪಡಿಸಿರುವರು. ಆದರೆ ಸಾರ್ವಜನಿಕರು ಮತ್ತು ಸರ್ಕಾರಗಳಿಂದ ದೊಡ್ಡ ಪ್ರಮಾಣದಲ್ಲಿ ನೆರವು, ಪ್ರೋತ್ಸಾಹಗಳು ಸಮಕಾಲೀನ ಶಿಲ್ಪಕಲೆ ಮತ್ತು ಕಲಾವಿದರಿಗೆ ದೊರೆಯಬೇಕಿದೆ. ಸಾರ್ವಜನಿಕ ಸ್ಥಳಗಳು ಮತ್ತು ಉದ್ಯಾನವನಗಳಲ್ಲಿ ಆಧುನಿಕ – ಸಮಕಾಲೀನ ದೃಷ್ಟಿಯ ಶಿಲ್ಪಕಲಾಕೃತಿಗಳನ್ನು ಹೆಚ್ಚು ಹೆಚ್ಚಾಗಿ ಪ್ರತಿಷ್ಠಾಪಿಸುವ ಪ್ರಯತ್ನಗಳು ತೀವ್ರಗೊಳ್ಳಬೇಕಿದೆ. ಅಲ್ಲದೆ ಕಲಾ ಸಂಗ್ರಹಕಾರರು ಸೃಜನಾತ್ಮಕ – ಸಮಕಾಲೀನ ಶಿಲ್ಪಕಲಾಕೃತಿಗಳನ್ನು ಕೊಂಡು ಸಂಗ್ರಹಿಸುವ, ಆರಾಧಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾದುದು ತೀರಾ ಅಗತ್ಯವಾಗಿದೆ.
[1] ವೆಂಕಟಾಚಲಪತಿ, ವಿ.ಎ. ದೇಶಪಾಂಡೆ, ಜಾನ್ದೇವರಾಜ, ಶಿವಾನಂದ ಬಂಟನೂರ, ಯು. ಭಾಷ್ಕರರಾವ್, ನಾರಾಯಣ ಸೂತ್ರದಾರ್, ಎಂ.ಸಿ. ರಮೇಶ್, ನಾಗಪ್ಪ ಪ್ರಧಾನಿ, ಸುರೇಶ್ಮೊದಲಾದವರುಗಳಿಂದ ಮೇಲಿನ ಎರಡೂ ಶಿಬಿರಗಳಲ್ಲಿನ ಶಿಲ್ಪಗಳು ರಚನೆಗೊಂಡಿವೆ.
[2] ಈ ಎರಡೂ ಶಿಬಿರಗಳಲ್ಲಿ ರಾಜ್ಯದ ಪ್ರಮುಖ ಸಮಕಾಲೀನ ಶಿಲ್ಪಿಗಳು ಭಾಗವಹಿಸಿ ಶಿಲ್ಪಗಳನ್ನು ರಚಿಸಿದ್ದರು.
[3] ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದಲ್ಲಿ ನಡೆದ ಈ ಶಿಬಿರದಲ್ಲಿ ಹಿರಿಯ ಶಿಲ್ಪಿ ವೆಂಕಟಾಚಲಪತಿ ಒಳಗೊಂಡಂತೆ ಎಂ.ಸಿ.ರಮೇಶ, ಶಿವಾನಂದ ಬಂಟನೂರ, ಮಂಜುನಾಥ, ಗೀತಾಂಜಲಿ, ರಾಜಶೇಖರನ್ನಾಯರ್ (ಚೆನ್ನೈ), ಎಸ್.ಡಿ. ಹರಿಪ್ರಸಾದ್, ಸ್ವರ್ಣಲತಾ (ವಿಶಾಖಪಟ್ಟಣಂ), ಗ್ರಿಜೇಶ್ಕುಮಾರ್ ಸಿಂಗ್(ಬರೋಡ) ಮೊದಲಾದವರು ಮರಳುಶಿಲಾ ಮಾಧ್ಯಮದಲ್ಲಿ ಸಮಕಾಲೀನ ಶೈಲಿಯ ಶಿಲ್ಪಗಳನ್ನು ರಚಿಸಿದರು.
Leave A Comment