ಇಂದಿನ ಶಕ್ತಿ – ರಾಜಕೀಯದ ಹಿಂದೆ ಯಾವ ತತ್ತ್ವವಾಗಲೀ ಆದರ್ಶವಾಗಲೀ ಇರುವಂತೆ ಕಾಣುವುದಿಲ್ಲ. ಜಯಪ್ರಕಾಶರ ಚಳುವಳಿ ಸೃಷ್ಟಿಸಿದ ಜನಶಕ್ತಿಯನ್ನು ಜನತಾ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಉಪಯೋಗಿಸಿಕೊಳ್ಳಲಾರದೆ ಹೋಯಿತು. ಜನತಾ ನಾಯಕರಲ್ಲಿ ಕೆಲವರು ಘೋಷಿಸುವಂತೆ ಇಂದಿರಾ ಗಾಂಧಿ ಪಕ್ಷ ಮತ್ತು ಆರೆಸ್ಸೆಸ್ – ಈ ಎರಡೂ ಪ್ರಜಾತಂತ್ರ ವಿರೋಧಿಗಳೆಂಬುದು ಅವರಿಗೆ ಮನದಟ್ಟಾಗಿದ್ದಲ್ಲಿ, ಎರಡನ್ನೂ ಬಿಟ್ಟುಕೊಟ್ಟ ಬಣವೊಂದನ್ನು ಪಾರ್ಲಿಮೆಂಟಿನಲ್ಲಿ ಸೃಷ್ಟಿಸಬಹುದಿತ್ತು. ಶ್ರೀ ಚರಣ್‌ಸಿಂಗ್ ಮತ್ತು ಶ್ರೀ ಜಗಜೀವನರಾಂರಲ್ಲಿ ಯಾರಾದರೂ ಒಬ್ಬರು ಎರಡನೆಯವರಾಗಲು ತಯಾರಿದ್ದಲ್ಲಿ ಇಂಥ ಬಣದ ಸೃಷ್ಟಿ ಈಗಲೂ ಸಾಧ್ಯ. ಆದರೆ ನಮ್ಮ ಇಂದಿನ ರಾಜಕೀಯದಲ್ಲಿ ಜನಶಕ್ತಿಯನ್ನು ದುಡಿಸಿಕೊಳ್ಳಬಲ್ಲ ಆದರ್ಶಪ್ರಿಯತೆಯಾಗಲೀ ತಾತ್ತ್ವಿಕ ಕಾಳಜಿಯಾಗಲೀ ಕಂಡುಬರುತ್ತಿಲ್ಲ.

ಆರೆಸ್ಸೆಸ್ ಹಿಂದೂ ಮತೀಯತೆಯನ್ನು ಪ್ರತಿನಿಧಿಸುತ್ತದೆ ಅನ್ನುವುದಾದರೆ, ಶ್ರೀ ಚರಣ್‌ಸಿಂಗ್ ರಂಥವರು ಹಿಂದೂ ಜಾತೀಯತೆಯ ಬೆಂಬಲದಿಂದ ನಾಯಕರಾದವರು. ಹಳ್ಳಿಯಲ್ಲಿರುವ ಹರಿಜನರ ದೃಷ್ಟಿಯಿಂದ, ನನ್ನ ಒಬ್ಬ ಲೇಖಕ ಮಿತ್ರರು ವರ್ಣಿಸಿದಂತೆ, ಆರೆಸ್ಸೆಸ್ ನ ಮತೀಯತೆ ನಿಧಾನವಾಗಿ ಕೊಲ್ಲುವ ವಿಷವಾದರೆ, ಭೂಮಾಲೀಕ ವರ್ಗಗಳ ಜಾತೀಯತೆ ಹರಿಜನರ ಕೈಕಾಲುಗಳನ್ನು ಸದ್ಯದಲ್ಲೇ ಕತ್ತರಿಸುತ್ತದೆ. ಹರಿಜನರು ಮತ್ತು ಹಿಂದುಳಿದ ವರ್ಗಗಳ ಪ್ರೇಮಿಗಳೆಂದು ಹೇಳಿಕೊಳ್ಳುವ ಶ್ರೀಮತಿ ಗಾಂಧಿಯವರಂಥವರು, ಓಟಿಗಾಗಿ ಮಾತ್ರ ಅವರನ್ನು ಬಳಸಿಕೊಳ್ಳಲೆಂದು ಅವರ ರಾಜಕೀಯ ಪ್ರಜ್ಞೆಯನ್ನು ಶೈಶವ ಸ್ಥಿತಿಯಲ್ಲೇ ಉಳಿಸಿಬಿಡುವ ಹೊಂಚಿನವರು.

ಆದ್ದರಿಂದ ಈ ದೇಶದಲ್ಲಿ ಸರ್ವಾಧಿಕಾರಿ ಪ್ರವೃತ್ತಿ, ಹಿಂಸಾತ್ಮಕವಾದ ಫ್ಯಾಸಿಸಂ ಅಥವಾ ವರ್ಣನೀತಿಗಳನ್ನು ಆರೆಸ್ಸೆಸ್ ಮಾತ್ರ ಬೆಳೆಸುತ್ತಿರುವುದಲ್ಲ; ಜನತಾಪಕ್ಷ, ಕಾಂಗೈಗಳ ಹಿಂದೆಯೂ ಈ ಧೋರಣೆಗಳು ಇವೆ.

ತನ್ನ ಪರಿಮಿತ ವಲಯದಲ್ಲೂ ಆರೆಸ್ಸೆಸ್ ತೀವ್ರವಾದ ಆದರ್ಶವಾದಿಯಲ್ಲ. ಹಿಂದೂ ರಾಷ್ಟ್ರ, ಹಿಂದುತ್ವಗಳು ಅವರಿಗೆ ಮುಖ್ಯವಾಗಿದ್ದಲ್ಲಿ ಹಿಂದೂ ಜನಾಂಗವನ್ನು ನುಚ್ಚು ನೂರಾಗಿ ಒಡೆದಿರುವ ಜಾತೀಯತೆಯ ವಿರುದ್ಧ ಅವರು ಹೋರಾಡುತ್ತಿದ್ದರು: ಹಿಂದೂ ಜನರನ್ನು ಮೌಢ್ಯದಲ್ಲಿಟ್ಟಿರುವ ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಗಳನ್ನು ತರಲು ಅವರು ಇಚ್ಛಿಸಿದಲ್ಲಿ ಅಸ್ಪೃಶ್ಶತೆಯ ನಿವಾರಣೆಗೆ ಅಗತ್ಯವಾದ ಹಿಂದೂ ಮನಸ್ಸಿನ ಬದಲಾವಣೆ ಅವರಿಗೆ ಅತ್ಯಂತ ಮುಖ್ಯವಾಗಬೇಕಿತ್ತು. ನಮ್ಮ ಸಂತ ಕವಿಗಳಾದ ಬಸವಣ್ಣ, ತುಕಾರಾಂ, ಕಬೀರ್, ನಾನಕ್ ಅಥವಾ ವಿವೇಕಾನಂದರಂಥವರಲ್ಲಿ ಕಾಣುವ ಹಿಂದೂ ಕ್ರಾಂತಿಕಾರಕತೆ ಆರೆಸ್ಸೆಸ್ ಸಂಸ್ಥೆಯಲ್ಲಿಲ್ಲ. ಹಿಂದೂ ಸಮಾಜವನ್ನು ಜಡವಾಗಿಸಿದ ಅಂತರ್ ವಿರೋಧಗಳ ವಿಷಯದಲ್ಲಿ ಆರೆಸ್ಸೆಸ್ ನಾಯಕರಿಗೆ ಆರ್ತವಾದ ಯಾವ ಕಾಳಜಿಯೂ ಇಲ್ಲ. ಅವರ ಪ್ರಭಾವಕ್ಕೆ ಸಿಕ್ಕಿರುವ ಯುವಕರು ಇಂಥ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಜಯಪ್ರಕಾಶರ ಚಳುವಳಿ ಮೂಲಕ ಜನಜೀವನಕ್ಕೆ ಹತ್ತಿರವಾದಾಗಲೂ ಆರೆಸ್ಸೆಸ್‌ ಮನಸ್ಸು ಬದಲಾಗಲಿಲ್ಲ. ಹಿಂದೂ ಸಮಾಜದ ಒಳಗಿರುವ ಅನ್ಯಾಯದ ವಿರುದ್ದ ಅವರ ಸಂಘಟನೆ ಕ್ರಿಯಾಶಾಲಿಯಾಗಿ ಕೆಲಸ ಮಾಡುತ್ತಿಲ್ಲವಾದ್ದರಿಂದ, ಅವರ ಶಿಸ್ತು ಬೇರೆಯವರಲ್ಲಿ ಭಯವನ್ನು ಮಾತ್ರ ಹುಟ್ಟಿಸುತ್ತದೆ.

ಆದ್ದರಿಂದ ಆರೆಸ್ಸೆಸ್‌ನಂಥ ಸಂಸ್ಥೆಗಳ ಶುಷ್ಕ ಮತೀಯತೆ ಮತ್ತು ಚರಣ್, ಚವಾಣ್‌ರಂಥವರ ಹಿಂದಿರುವ ಜಾತೀಯತೆ – ಈ ಎರಡರಲ್ಲಿ ಒಂದನ್ನು ಹೇಗೆ ತಾನೆ ಜಾರ್ಜ್ ಫರ್ನಾಂಡಿಸ್, ಮಧು ಲಿಮಯೆರಂಥ ಸಮಾಜವಾದಿಗಳು ಆಯ್ದುಕೊಳ್ಳಬಲ್ಲರೋ ನನಗೆ ಅರ್ಥವಾಗುತ್ತಿಲ್ಲ. ಎಲ್ಲ ಬಾಬಾಗಳ ಭಕ್ತರಾದ, ಧಾರ್ಮಿಕವಾಗಿ ಮುಂಡನ ಮಾಡಿಸಿಕೊಳ್ಳುವ ರಾಜ್ ನಾರಾಯಣ್‌ರಂಥವರು ಯಾಕೆ ಆರೆಸ್ಸೆಸ್‌ ವಿರೋಧಿಗಳಾಗಬೇಕೆಂಬುದಂತೂ ಆಶ್ಚರ್ಯ.

ಅಂದರೆ ಅರ್ಥ: ಇದು ಕೇವಲ ಶಕ್ತಿರಾಜಕೀಯ. ಇದರ ಹಿಂದೆ ನಿಜವಾದ ತಾತ್ತ್ವಿಕ ಭಿನ್ನಾಭಿಪ್ರಾಯಗಳಿಲ್ಲ. ಬಡತನ, ನಿರಕ್ಷರತೆ, ಹಿಂದೂ ಜನರ ಜಾತೀಯತೆ, ಮೌಢ್ಯ – ಈ ಬಗ್ಗೆ ಆರ್ತವಾಗಿ ಯೋಚಿಸುವ ನಾಯಕರು ಈಗ ನಮ್ಮ ದೇಶದಲ್ಲಿಲ್ಲ. ಆದ್ದರಿಂದ ಜನ ಇಂಥ ರಾಜಕಾರಣದಿಂದ ಹೇಸುತ್ತಾರೆ. ಈ ಹೇಸಿಗೆ ಬೆಳೆಯುತ್ತ ಹೋದಲ್ಲಿ ಅಪಾಯವಿದೆ. ಯಾಕೆಂದರೆ ಇಂಥ ಹೇಸಿಗೆ ಉತ್ಕಟವಾದಾಗಲೇ ದೇಶದಲ್ಲಿ ಸರ್ವಾಧಿಕಾರೀ ಶಕ್ತಿಗಳು ಬಲವಾಗಿ ಅಧಿಕಾರಕ್ಕೆ ಬರುವುದು. ನಾವೆಲ್ಲ ಪ್ರಸ್ತುತ ಅಧಿಕಾರದಲ್ಲಿರುವ ರಾಜಕಾರಣಿಗಳ ಬಗ್ಗೆ ಭ್ರಮನಿರಸನರಾಗುವುದು ಅನಿವಾರ್ಯ. ಆದರೆ ಈ ಭ್ರಮನಿರಸನ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆಯೂ ಜನರಲ್ಲಿ ಅನುಮಾನ ಹುಟ್ಟಿಸಬಹುದು – ಅದು ಅಪಾಯ. ಅಂಥ ಅನುಮಾನ ಬೆಳೆಯದಂತೆ ನಾವೆಲ್ಲ ಏನು ಮಾಡಲು ಸಾಧ್ಯ? ಈ ಹೊಲಸು ರಾಜಕೀಯ ಪಕ್ಷಗಳ ಹೊರಗಿದ್ದುಕೊಂಡು ಏನು ಮಾಡಲು ಸಾಧ್ಯ? – ಇದೇ ನಮ್ಮೆಲ್ಲರ ಮುಂದಿರುವ ಪ್ರಶ್ನೆ.

ಮೈಸೂರಿನ ಆಂದೋಲನ, ಪತ್ರಿಕೆಯ ಆಗಸ್ಟ್ ೧೫, ೧೯೭೯ರಲ್ಲಿ ಪ್ರಕಟಿತ ಲೇಖನ.