ಅಕ್ಷರ ಪ್ರಕಾಶನದ ಶ್ರೀ ಕೆ.ವಿ. ಸುಬ್ಬಣ್ಣನ ಅಭಿಮಾನದಿಂದಾಗಿ ಸಮಕ್ಷಮ ಎರಡನೇ ಮುದ್ರಣ ಕಾಣುತ್ತಿದೆ. ಮೊದಲ ಮುದ್ರಣದಲ್ಲಿ ಉಳಿದುಹೋಗಿದ್ದ ಹಲವು ತಪ್ಪುಗಳನ್ನು ತಿದ್ದಿದ್ದೇನೆ. ಕೆಲವು ಬರಹಗಳನ್ನು ಅಲ್ಲಿ ಇಲ್ಲಿ ತಿದ್ದಬೇಕೆಂದು ಅನ್ನಿಸಿದರೂ ನನ್ನ ಈಗಿನ ಅಭಿಪ್ರಾಯಗಳನ್ನು ಅವುಗಳ ಮೇಲೆ ಹೇರಬಾರದೆಂದು ಹಿಂದೆಗೆದಿದ್ದೇನೆ. ಆವತ್ತಿನ ನನ್ನ ಭಾವನೆಯ ಸತ್ಯಕ್ಕೆ ಅಪಚಾರವಾಗಬಾರದು ಎಂಬುದೇ ಇದಕ್ಕೆ ಕಾರಣ. ಆದರೆ ಮೂಲಭೂತವಾಗಿ, ನನ್ನ ವಿಚಾರದಲ್ಲಿ ಈ ಇಪ್ಪತ್ತು ವರ್ಷಗಳಲ್ಲಿ ಬದಲಾವಣೆಯಾಗಿಲ್ಲ. ಇವತ್ತು ನಾನೇನಾದರೂ ‘ಬೂಸಾ ಪ್ರಕರಣ’ದ ಬಗ್ಗೆ ಬರೆದರೆ, ಶ್ರೀ ಬಸವಲಿಂಗಪ್ಪನವರ ಬಗ್ಗೆ ಕಡಿಮೆ ಉಮೇದಿನಿಂದ ಮಾತಾಡುತ್ತಿದ್ದೆ – ಅಷ್ಟೆ. ಆದರೆ ಆ ದಿನಗಳಲ್ಲಿ ಅವರು ನನಗೆ ಹಾಗೆ ಕಂಡದ್ದೇ ಸರಿ ಎಂದುಕೊಂಡಿದ್ದೇನೆ. ಜೊತೆಗೇ ಕನ್ನಡ ಸಾಹಿತ್ಯ ಮತೀಯವಾದ್ದು ಎಂಬ ಕಾರಣದಿಂದ ಆವತ್ತಾಗಲೀ ಈಗಾಗಲೀ ನಾನು ಅದನ್ನು ‘ಬೂಸಾ’ ಎಂದು ಜರೆಯಲಾರೆ; ಆದರೆ ಹಾಗೆನ್ನಬೇಕೆಂಬ ದಲಿತನೊಬ್ಬನ ನೋವಿನ ಪ್ರತಿಕ್ರಿಯೆಯನ್ನು ಆವತ್ತಿನಂತೆ ಇಂದೂ ನಾನು ಗೌರವದಿಂದ ಕಂಡು ಅವನ ಮೇಲಾಗುವ ದಾಳಿಯನ್ನು ಪ್ರತಿಭಟಿಸಿಯೇನು.

ಎಪ್ಪತ್ತರ ದಶಕ ಮಹತ್ವದ್ದು – ಪ್ರಜಾತಂತ್ರ ಉಳಿಸಿಕೊಳ್ಳಬೇಕೆನ್ನುವ ನನ್ನಂತಹವರ ಪಾಲಿಗೆ, ಈ ಪುಸ್ತಕದ ಲೇಖನಗಳಲ್ಲಿ, ದಾಖಲೆಗಳಲ್ಲಿ ಅಂಥದೊಂದು ತುಯಿತ ವ್ಯಕ್ತವಾಗಿದೆ ಎಂದು ನಾನು ತಿಳಿದಿದ್ದೇನೆ. ಇಲ್ಲಿನ ಹೆಚ್ಚಿನ ಬರಹಗಳು ಎಪ್ಪತ್ತರ ದಶಕದ ಉತ್ತರಾರ್ಧದವು. ಕೆಲವು ಕಡೆ ಬರೆದ ತಾರೀಖನ್ನು ಗುರುತಿಸುವುದು ಅಸಾಧ್ಯವಾಯಿತು. ಓದುಗರು ಕ್ಷಮಿಸಬೇಕು.

ಪುಸ್ತಕದಲ್ಲಿನ ಬಹುಪಾಲು ಬರವಣಿಗೆ ಲೇಖಕನಾಗಿ ನನ್ನ ಓದುಗರ ಜೊತೆ ನಾನು ನಡೆಸುತ್ತಿರುವ ಸಂವಾದಕ್ಕೆ ಈಗಲೂ ಅಗತ್ಯವೆಂದು ನನಗನ್ನಿಸಿದೆ. ಓದುಗರೂ ಹಾಗೆಂದುಕೊಂಡರೆ ನನಗೆ ಸಂತೋಷ.

ಸುಂದರವಾಗಿ ಮುದ್ರಿಸಿದ ಶೋಭಾ ಪ್ರೊಸೆಸ್‌ ಪ್ರಿಂಟರ್ಸ್, ಪುತ್ತೂರು – ಇದರ ಮಾಲೀಕರಿಗೆ ಕೃತಜ್ಞ.

ಯು.ಆರ್. ಅನಂತಮೂರ್ತಿ
ಚೇರಮನ್‌, ನ್ಯಾಷನಲ್ ಬುಕ್‌ ಟ್ರಸ್ಟ್‌
೧೯೯೨
ಎ೫ – ಗ್ರೀನ್‌ ಪಾರ್ಕ್, ನವದೆಹಲಿ – ೧೬