ಬರಹಗಾರರ ಒಕ್ಕೂಟ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಹೊಸ ಚಳುವಳಿಯಾಗಲಿಲ್ಲ. ಲೇಖಕರ ನಡುವೆ ಕೀರ್ತಿ ಪ್ರತಿಷ್ಟೆಗಳ ಜಗಳವಾಗಿ ವ್ಯರ್ಥವಾಯಿತು. ಬ್ರಾಹ್ಮಣ ಆದರ್ಶಗಳ ವಿರುದ್ಧದ ಬಂಡಾಯ ಹೊಸವಸ್ತು ಹೊಸ ಶೈಲಿಗಳ ಹುಡುಕಾಟವಾಗಿಬೇಕಿತ್ತು. ಆದರೆ ಯಾಕಾಗಲಿಲ್ಲವೆನ್ನುವುದನ್ನು ಯೋಚಿಸಬೇಕು. ಚೋಮನ ದುಡಿ ಚಿತ್ರದಲ್ಲಿ ಜಾತಿ ವ್ಯವಸ್ಥೆ ಸಮಸ್ಯೆಯಾಗಿ ಬಂದಿದೆ; ಆದರೆ ಪಲ್ಲವಿಯ ಪಾತ್ರಗಳ ಜಾತಿ ಯಾವುದು ಎನ್ನುವುದು ತೀರಾ ಅಮುಖ್ಯವಾಗುತ್ತದೆ. ಜಾತಿ ವ್ಯವಸ್ಥೆಯ ಬಗ್ಗೆ ಲಂಕೇಶರು ಕೋಪದಿಂದ ಬರೆಯುತ್ತಾರೆ ಎನ್ನುವುದು ನಿಜವಿದ್ದರೂ ಅವರು ಸೃಜನಶೀಲರಾದಾಗ ಅವರ ಕೃತಿಗಳಲ್ಲಿ ಈ ಜಾತಿ ವ್ಯವಸ್ಥೆ ಯಾಕೆ ವಸ್ತುವಾಗುವುದಿಲ್ಲ ಎಂಬುದು ಕುತೂಹಲದ ವಿಷಯ. ತೇಜಸ್ವಿಯವರ ಅತ್ಯುತ್ತಮ ಬರಹದಲ್ಲಿಯೂ ಜಾತಿ ವ್ಯವಸ್ಥೆಯೇ ಗಾಢವಾದ ವಸ್ತುವಾಗುವುದಿಲ್ಲ. ದೇವನೂರು ಮಹಾದೇವರು ನವ್ಯ ಸಾಹಿತ್ಯದ ಸಂದರ್ಭದಲ್ಲೆ ಬರೆಯುತ್ತಾರೆ ಎನ್ನಿಸುತ್ತದೆ. ಶ್ರೀಕೃಷ್ಣ ಆಲನಹಳ್ಳಿಯ ಕೃತಿಗಳಲ್ಲಿ ಶೂದ್ರ ಪಾತ್ರಗಳು ಸಜೀವವಾಗಿ, ಶಕ್ತಿಯುತವಾಗಿ ಬರುತ್ತವೆ; ಆದರೆ ಒಕ್ಕೂಟದ ಜಾತಿ ಸಮಸ್ಯೆಯ ವಿಶ್ಲೇಷಣೆಯ ಪ್ರಜ್ಞೆ ಈ ಕೃತಿಗಳಲ್ಲಿ ಕೆಲಸ ಮಾಡುವಂತೆ ಕಾಣುವುದಿಲ್ಲ. ಆದ್ದರಿಂದ ಲೇಖಕರ ಪ್ರತಿಷ್ಠೆಯ ಜಗಳವಾಗಿ ಮಾತ್ರ ಒಕ್ಕೂಟ ಕೊನೆಯಾಯಿತು ಎಂದು ನನಗೆ ಅನ್ನಿಸುತ್ತದೆ. (ಅಲ್ಲದೆ ಈ ಲೇಖಕರು ಮತ್ತು ಚಂದ್ರಶೇಖರ ಪಾಟೀಲರು ಒಕ್ಕೂಟಕ್ಕೂ ಮುಂಚಿನಿಂದ ಈಗ ಬರೆಯುವಂತೆಯೇ ಬರೆಯುತ್ತಿದ್ದವರು).

ಒಕ್ಕೂಟದ ಜಾತಿ ವಿಶ್ಲೇಷಣೆ ಕೂಡ ಅಲ್ಪವಾದ ಆಪಾದನೆಗಳಿಂದ ಕಲುಷಿತವಾಯಿತು. ಮೈಸೂರಿನ ಒಕ್ಕೂಟದ ಸಭೆಯಲ್ಲಿ ಶಿವರಾಮ ಕಾರಂತರ ಬಗ್ಗೆ ಓದಿದ ಒಂದು ಲೇಖನ ಇದಕ್ಕೆ ಉದಾಹರಣೆ. ಲೇಖನದ ತುಂಬ ಸುಳ್ಳುಗಳಿದ್ದವು. ಮುಂದೆ ಶಿವರಾಮ ಕಾರಂತರು ತಮಗೆ ಬಂದ ಪದ್ಮಭೂಷಣವನ್ನು ಎಮರ್ಜೆನ್ಸಿಯಲ್ಲಿ ಕಿತ್ತೊಗೆದದ್ದು, ವರ್ಣಾಶ್ರಮ ವಿರೋಧಿಗಳು ತಮ್ಮ ಬಿರುದುಗಳನ್ನು ಉಳಿಸಿಕೊಂಡಿದ್ದು – ಒಕ್ಕೂಟದ ಸದಸ್ಯರನ್ನು ಬಾಧಿಸಿದಂತೆ ಕಾಣುವುದಿಲ್ಲ. ಒಕ್ಕೂಟದ ಅಪ್ರಮಾಣಿಕ ನಡತೆಗಳ ಬಗ್ಗೆ ಹೀಗೆಲ್ಲ ಮಾತಾಡುವುದು ಕಷ್ಟ; ಯಾಕೆಂದರೆ ಇದರ ಕೆಲವು ಸದಸ್ಯರ ಹಾಗೆ ಇದರ ವಿರೋಧಿಗಳು ಕೂಡ ಅಲ್ಪರಾಗಬೇಕಾಗುತ್ತದೆ – ಅವರಿಗೆ ಸರಿಸಮನಾಗಿ ಉತ್ತರ ಕೊಡಲು ಹೋದಾಗ ಪರಸ್ಪರ ನಿಂದೆಯ ಪಾಡೇ ಅದು. ಇದರಿಂದ ಪ್ರಯೋಜನವೂ ಇಲ್ಲ. ಒಬ್ಬ ದೊಡ್ಡ ಲೇಖಕನ ವೈಯಕ್ತಿಕ ಜೀವನದಲ್ಲಿರುವ ವಿರೋಧಿಗಳೂ ಅವನ ಕೃತಿಗಳ ಪ್ರೇರಕಶಕ್ತಿಗಳಾಗಿ ಕೆಲಸ ಮಾಡುತ್ತವೆ. ಆದರೆ ದುರ್ಬಲ ಲೇಖಕನೊಬ್ಬ ಸಾಚಾತನವೂ ನಿಷ್ಟ್ರಯೋಜಕವಾಗಿ ಬಿಡುತ್ತದೆ. ಪರನಿಂದನೆಯನ್ನೇ ಬಂಡವಾಳ ಮಾಡಿಕೊಂಡ ದುರ್ಬಲ ಲೇಖಕರ ಗತ್ತಂತೂ ತೀರಾ ಹಾಸ್ಯಾಸ್ಪದ.

‘ಬ್ರಾಹ್ಮಣ’ ಲೇಖಕರೆಲ್ಲರೂ ವ್ಯವಸ್ಥೆಯನ್ನು ಎತ್ತಿಹಿಡಿಯುವವರಾಗಿಯೂ ‘ಶೂದ್ರ’ ಲೇಖಕರಲ್ಲಿ ವ್ಯವಸ್ಥೆಯ ವಿರೋಧಿಗಳಾಗಿಯೂ ಇದ್ದಿದ್ದ ಪಕ್ಷದಲ್ಲಿ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಕಾರಣಕ್ಕಾಗಿಯೇ ಬ್ರಾಹ್ಮಣ ಲೇಖಕರನ್ನು ನಿಂದಿಸುವುದು ಸಮರ್ಪಕವಾಗುತ್ತಿತ್ತು. ಆದರೆ ಜೀವಂತವಾದ ಸಾಹಿತ್ಯವನ್ನು ದ್ವೇಷಿಸುವವರಲ್ಲಿ ಬಲಿಷ್ಠ ಬ್ರಾಹ್ಮಣರೂ ಇದ್ದಾರೆ. ಸಾಹಿತ್ಯ ತಿಳಿಯದೆ ಎಲ್ಲ ಜಾತಿಯ ದಡ್ಡರೂ ಇದ್ದಾರೆ. ಈ ಶೂದ್ರರಾದರೂ ಹೆಸರಿಗೆ ಮಾತ್ರ ಶೂದ್ರರು ಅಷ್ಟೆ; ಪಠ್ಯಪುಸ್ತಕಗಳನ್ನು ಬರೆಯುವ ಈ ಶೂದ್ರರ ಪ್ರಕಾಶಕರೆಲ್ಲರೂ ಅವರಷ್ಟೆ ಆಸೆಬುರುಕರಾದ ಬ್ರಾಹ್ಮಣರಲ್ಲವೆ? ಇವರಿಗೆ ವಿಶ್ವವಿದ್ಯಾಲಯಗಳ ಅಧಿಕಾರದಲ್ಲಿ ಇರುವವರ ಬೆಂಬಲವಿಲ್ಲವೆ? ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ ಸದಸ್ಯರಾಗಲು ಕೂಡ ಹಿಂಜರಿಯುವ, ಅಧಿಕಾರದಲ್ಲಿರುವವರೆಗೆ ಸಾಕಿದ ನಾಯಿಗಳಂತೆ ವರ್ತಿಸುವ ಇವರಲ್ಲಿ ಕೆಲವರು ಒಕ್ಕೂಟದ ವೈದಿಕ ವಿರೋಧಿ ಮಾತುಗಳನ್ನು ಆಡುತ್ತ ಯಾವ ಅಪಾಯವೂ ಇಲ್ಲದೆ ಮೆರೆಯುವುದನ್ನು ಕಂಡಾಗ ಪ್ರಾಮಾಣಿಕವಾಗಿ ಒಕ್ಕೂಟ ನಂಬಿದವರಿಗೆ ಕೂಡ ಮುಜುಗರವಾಗುತ್ತೆಂಬುದು ನನಗೆ ಗೊತ್ತು. ಅಂತೂ ಈ ನಮ್ಮ ಶುಷ್ಕ ಜಗಳದಲ್ಲಿ ವೈದಿಕ ಸಂಸ್ಕೃತಿಯಿಂದ ಮಾನಸಿಕವಾಗಿ ನರಳುತ್ತಿರುವ ಹರಿಜನರನ್ನು ಬ್ರಾಹ್ಮಣೇತರರು ಕೊಲ್ಲುತ್ತಿರುವ ವಿಷಯ ನಮಗೆ ಮರೆತೇ ಹೋಗುತ್ತದೆ. ನಿಜವಾಗಿ ಯಾರು ಯಾರ ವೈರಿ?

ಇಂಥ ವಿಕಾರಗಳಿಗೆ ಅವಕಾಶವಿಲ್ಲದಂತೆ ಬರಹಗಾರರ ಒಕ್ಕೂಟ ಜಾತಿ ವ್ಯವಸ್ಥೆಯ ವಿರುದ್ಧ ದಂಗೆಯೇಳುವುದು ಸಾಧ್ಯವಾಗಬೇಕಾದಲ್ಲಿ ತಮ್ಮ ಈವರೆಗಿನ ನಡತೆಯನ್ನು ಒಕ್ಕೂಟದ ನಾಯಕರು ವಿಮರ್ಶಿಸಿಕೊಳ್ಳಬೇಕು. ಅಲ್ಲದೆ ಈ ಒಕ್ಕೂಟ ಬರಹಗಾರರ ಒಕ್ಕೂಟವಾದ್ದರಿಂದ ಕನ್ನಡ ಸಾಹಿತ್ಯದ ಶೈಲಿ ವಸ್ತುಗಳಲ್ಲೆ ಬದಲಾವಣೆಗಳಾಗುವಂತಹ ಚಳುವಳಿಗೆ ಪ್ರೇರಕವಾಗಬಲ್ಲ ಕೃತಿಗಳನ್ನು ರಚಿಸಬೇಕು. ಬರೀ ಕುಚೋದ್ಯ ಬ್ಲಾಕ್‌ಮೇಲ್ ಗಳಿಂದ ಸಾಧ್ಯವಾಗುವ ಕೆಲಸವಲ್ಲ ಇದು.

ಜಾತಿಯ ಜೊತೆ ವರ್ಗಭೇದಗಳೂ ಮುಖ್ಯವೆಂದು ತಿಳಿಯುವವರು ಮಾತ್ರ ಈ ಕೆಲಸ ಮಾಡಬಲ್ಲರು. ಇಲ್ಲವಾದಲ್ಲಿ ಕೀರ್ತಿ ಪ್ರತಿಷ್ಠೆಗಳ ಪರದಾಟವಾಗಿ ಮಾತ್ರ ಕೊನೆಗೊಳ್ಳುವ ಈ ಬ್ರಾಹ್ಮಣ – ಶೂದ್ರ ವ್ಯಾಜ್ಯದಿಂದ ಸಾಹಿತ್ಯ ಕ್ಷೇತ್ರದಲ್ಲಿ ನಡೆಯಬೇಕಾದ ಪೂರ್ವಗ್ರಹ ವಿಮುಕ್ತ ವಿಮರ್ಶೆಯ ಕೆಲಸಕ್ಕೆ ಸಿಗಬೇಕಾದ ಗಮನ ಇನ್ನಷ್ಟು ಕಾಲ ಸಿಗದೇ ಹೋಗುತ್ತದೆ. ಬ್ರಾಹ್ಮಣರಷ್ಟೇ ಬಲಿಷ್ಠರಾದ ಬ್ರಾಹ್ಮಣೇತರರು, ಅದರಲ್ಲೂ ವಿಶ್ವವಿದ್ಯಾಲಯದ ಇಲಾಖೆಗಳನ್ನು ಬೆನ್ನಿಗಿಟ್ಟುಕೊಂಡಿರುವವರು ತಮ್ಮನ್ನು ತಾವೇ ದಲಿತರೆಂದು ತಿಳಿದುಕೊಂಡು ಕಿರುಚಾಡುವುದಂತೂ ಹಾಸ್ಯಾಸ್ಪದವಾಗಿ ಕಾಣುತ್ತದೆ.

..೧೯೭೬ರಆಂದೋಲನಪತ್ರಿಕೆಯಲ್ಲಿ ನಿರಂಜನರು ನವ್ಯಸಾಹಿತ್ಯದಲ್ಲಿ ಅಂತರ್ಮುಖತೆಯನ್ನೂ ಟೀಕಿಸಿ, ಬರೆದದ್ದಕ್ಕೆ ಪ್ರತಿಕ್ರಿಯೆ. ಆಂದೋಲನ: , ಜನವರಿ ೧೯೭೮ರಲ್ಲಿ ಪ್ರಕಟವಾಗಿದೆ.

* * *