ಈ ಸಂಕಲನವನ್ನು ಸಿದ್ಧಪಡಿಸುವಾಗ ನನ್ನೆದುರು ಇದ್ದವರು ಕನ್ನಡವನ್ನು ಕಲಿತ ಕನ್ನಡೇತರ ಓದುಗರು. ದೇವನಾಗರಿ ಲಿಪಿಯಲ್ಲಿ ಈ ಸಂಕಲನ ಅಚ್ಚಾಗುವುದರಿಂದ ಲಿಪಿಯ ತೊಡಕು ಇರುವುದಿಲ್ಲವಾದರೂ ಹಳಗನ್ನಡದ ಭಾಗಗಳನ್ನು ಅರ್ಥಮಾಡಿಕೊಳ್ಳಲು ಕನ್ನಡವನ್ನು ಕಲಿತ ಓದುಗ ವಿಶೇಷ ಶ್ರಮಪಡಬೇಕಾಗುತ್ತದೆಂಬುದನ್ನು ಸಂಕಲನಕಾರ ಮರೆಯುವಂತಿಲ್ಲ. ಕೇವಲ ಪಾಂಡಿತ್ಯಕ್ಕಾಗಿ ಶ್ರಮಪಡಲು ಸಿದ್ಧನಾದ ಓದುಗನನ್ನು ಊಹಿಸಿ ಈ ಭಾಗಗಳನ್ನು ಆರಿಸುವುದಕ್ಕಿಂತ, ಓದುಗ ಪಡುವ ಶ್ರಮ ಸಾಹಿತ್ಯಾನುಭವದ ದೃಷ್ಟಿಯಿಂದ ಸಫಲವಾಗಬೇಕೆಂಬ ದೃಷ್ಟಿಯೇ ಹೆಚ್ಚು ಯೋಗ್ಯವೆಂಬ ತಿಳಿವಳಿಕೆಯಿಂದ ಹಳಗನ್ನಡದ ಬಹುಪಾಲು ಭಾಗಗಳನ್ನು ಆರಿಸಿದ್ದೇನೆ. ಈ ಎಚ್ಚರ ಅನಾವಶ್ಯಕವಾದ ಸಂಕೋಚಕ್ಕೆ ಎಡೆ ಕೊಟ್ಟಿರಬಹುದಾದರೂ ಇಂಥ ಸಂಕಲನದಲ್ಲಿ ಹೊಸಗನ್ನಡ ಸಾಹಿತ್ಯಕ್ಕೆ ಹೆಚ್ಚು ಪ್ರಾತಿನಿಧ್ಯ ಕೊಡುವುದು ಸರಿ ಎಂದೇ ನನ್ನ ಭಾವನೆ. ಈಗ ಬದುಕುತ್ತಿರುವ ಕನ್ನಡ ಸಾಹಿತ್ಯದ ಬೇರುಗಳನ್ನು ಅದರ ಹಿಂದಿನ ಇತಿಹಾಸದಲ್ಲಿ ಗುರುತಿಸುವುದು ಹಳಗನ್ನಡ ಸಾಹಿತ್ಯದಿಂದ ನಾನು ಆರಿಸಿದ ಭಾಗಗಳಲ್ಲಿ ಸಾಧ್ಯವಾದರೆ ನನ್ನ ಮುಖ್ಯ ಉದ್ದೇಶ ಸಫಲವಾದಂತೆ.

ಸಂಕಲನದ ಆಯ್ಕೆ ಸಂಕಲನಕಾರನ ಸಾಹಿತ್ಯಾಭಿರುಚಿಯನ್ನು ಪ್ರತಿಬಿಂಬಿಸುತ್ತದೆ ಎಂಬುದು ನಿಜ; ಆದರೆ ಗಂಭೀರ ಸಾಹಿತ್ಯ ವಿದ್ಯಾರ್ಥಿಯೊಬ್ಬನ ಅಭಿರುಚಿ ಕೇವಲ ವೈಯಕ್ತಿಕ ಮಟ್ಟದಲ್ಲಿ ಉಳಿಯಲಾರದು ಎಂಬುದೂ ಅಷ್ಟೇ ನಿಜ. ತನ್ನ ಅಭಿರುಚಿಯನ್ನು ಕಟ್ಟಿದ, ತಿದ್ದಿದ ಸಾಹಿತ್ಯದ ಪರಂಪರೆಯ ಆ ಸಾಹಿತ್ಯವನ್ನು ಅಧ್ಯಯನ ಮಾಡಿದ ಇತರ ವಿದ್ಯಾರ್ಥಿಗಳ ಮೇಲೂ ನನ್ನ ಮೇಲೆ ಮಾಡಿದ ಪರಿಣಾಮವನ್ನೇ ಮಾಡಬಹುದೆಂದು ತಿಳಿಯುವುದರಿಂದಲೇ ವಿಮರ್ಶೆಯ ಸಂವಾದ ಸಾಧ್ಯವಾಗುವುದು. ಇದನ್ನು ಬೇರೆ ಮಾತಿನಲ್ಲಿ ಹೇಳಬಹುದಾದರೆ, ವೈಯಕ್ತಿಕ ಅನುಭವವಾಗಿ ಮೂಡುವ ಅಭಿರುಚಿ ಸಾರ್ವತ್ರಿಕ ಒಪ್ಪಿಗೆಯನ್ನು ಅಪೇಕ್ಷಿಸುವುದು ಒಂದು ಸಂಸ್ಕೃತಿಯಲ್ಲಿ ಪಾಲುದಾರರಾದ ಸಾಮಾಜಿಕರ ಸಾಹಿತ್ಯಾನುಭವದಲ್ಲೇ ಅಡಗಿರುವ ಸಹಜ ಗುಣವೆನ್ನಬಹುದು. ಇಂಥ ಒಂದು ಪ್ರೇರಣೆ ಎಷ್ಟು ಸಮರ್ಥವಾಗಿ ಒಂದು ಸಂಕಲನದ ಆಯ್ಕೆಯಲ್ಲಿ ಕೆಲಸ ಮಾಡಿದೆ ಎಂಬುದು ಸಂಕಲನದ ಗುಣದೋಷಗಳನ್ನು ನಿರ್ಧರಿಸುತ್ತದೆ.

ಆದರೆ ಕನ್ನಡ ಸಾಹಿತ್ಯವನ್ನು ಅದರ ಐತಿಹಾಸಿಕ ಬೆಳವಣಿಗೆಯ ವಿವಿಧ ಘಟ್ಟಗಳಲ್ಲೂ ಪರಿಚಯ ಮಾಡಿಸಿದ ಸಂಕಲನ ಇದಾಗಬೇಕಾದ್ದರಿಂದ ಶ್ರೇಷ್ಠತೆಯೊಂದನ್ನು ನಿಯಮವಾಗಿಟ್ಟುಕೊಳ್ಳುವುದು ಸಾಲದಾಗುತ್ತದೆ. ಅಲ್ಲದೆ ಕಥ, ಕಾದಂಬರಿ, ಪ್ರಬಂಧ, ಕಾವ್ಯ, ನಾಟಕ ಹೀಗೆ ಬೇರೆ ಬೇರೆ ಪ್ರಕಾರಗಳಿಗೂ ಇಂಥ ಸಂಕಲನದಲ್ಲಿ ಪ್ರಾತಿನಿಧ್ಯ ಅಗತ್ಯ. ಆದರೆ ಶ್ರೇಷ್ಠತೆ, ಐತಿಹಾಸಿಕ ಬೆಳವಣಿಗೆ, ವೈವಿಧ್ಯ – ಈ ಮೂರು ಅಂಶಗಳನ್ನೂ ವಿರೋಧವಿಲ್ಲದಂತೆ ಒಳಗೊಳ್ಳುವುದು ಕಷ್ಟ. ಇದರಲ್ಲಿ ನಾನು ಗೆದ್ದಿದ್ದೇನೆಂದು ಹೇಳಿಕೊಳ್ಳಲಾರೆನಾದರೂ ಪ್ರಯತ್ನಿಸಿದ್ದೇನೆಂದು ಹೇಳಬಲ್ಲೆ. ಸಾವಿರ ವರ್ಷಕ್ಕೂ ಹೆಚ್ಚಿನ ಕನ್ನಡ ಸಾಹಿತ್ಯದ ಇತಿಹಾಸವನ್ನು ಒಂದು ಜೀವಂತ ಪರಂಪರೆ ಎಂದು ಕಲ್ಪಿಸಿಕೊಳ್ಳಬೇಕಾದರೆ, ಮೊದಲಿನಿಂದಲೂ ಈ ತನಕ ಈ ಸಾಹಿತ್ಯದಲ್ಲಿ ಹರಿದು ಬಂದ ಶಕ್ತಿ ಯಾವುದು ಎಂಬುದನ್ನು ಹುಡುಕಬೇಕಾಗುತ್ತದೆ. ಈ ಸಾಹಿತ್ಯದ ಹಿಂದಿರುವ ಆಸಕ್ತಿಗಳೇನು, ಯಾವ ಬಗೆಯ ಭಾಷೆ ಪ್ರಯೋಗಗಳು ಲೇಖಕರ ಅಭಿವ್ಯಕ್ತಿಯನ್ನು ಎಲ್ಲ ಕಾಲಗಳಲ್ಲೂ ಜಡವಾಗದಂತೆ ಚುರುಕಾಗಿ ಉಳಿಸಿತು, ಈ ಭಾಷೆಯ ಮತ್ತು ಈ ಭಾಷೆಯಲ್ಲಿ ವ್ಯಕ್ತವಾಗುತ್ತ ಹೋದ ಮನಸ್ಸಿನ ಜಾಯಮಾನ ಯಾವುದು – ಇಂಥ ಪ್ರಶ್ನೆಗಳು ಸಂಕಲನಕಾರನಿಗೂ ಮುಖ್ಯವಾದವು. ಕೇವಲ ಪಂಡಿತನಾಗಿ ಅಲ್ಲ, ಸಮಕಾಲೀನ ಬದುಕಿಗೆ ಸ್ಪಂದಿಸುವ ವ್ಯಕ್ತಿಯಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಇವು.

ರಷ್ಯನ್‌ ಕ್ರಾಂತಿಕಾಲದ ಅಲೆಕ್ಸ್ ಟಾಲ್‌ಸ್ಟಾಯ್‌ಎಂಬ ಲೇಖಕನಿಗೆ ರಷ್ಯನ್‌ ಭಾಷೆಯನ್ನು ತಾನು ಹೇಗೆ ಉಪಯೋಗಿಸಬೇಕು ಎಂಬ ಸಮಸ್ಯೆಗೆ ಹಂದಿನೆಂಟನೇ ಶತಮಾನದ ಒಂದು ಗ್ರಂಥದಲ್ಲಿ ಉತ್ತರ ಸಿಕ್ಕಿತಂತೆ. ದಂಡನೆಗೆ ಒಳಗಾದ ಅಪರಾಧಿಗಳಿಗೆ ಕ್ರೂರವಾದ ಶಿಕ್ಷೆ ಕೊಟ್ಟು ಬಾಯಿ ಬಿಡಿಸುವಾಗ ಅವರು ಆಡಿದ ಮಾತುಗಳನ್ನು ಆಡಿದಂತೆಯೇ ಬರೆದಿಟ್ಟ ವರದಿಗ್ರಂಥ ಅದು. ರಷ್ಯಾದ ಗ್ರಾಂಥಿಕ ಭಾಷೆ ಚರ್ಚ್‌ಪ್ರಭಾವದಲ್ಲಿ ಬೆಳೆದ ಕೃತಕ ಗದ್ಯವಾಗಿತ್ತು. ಆದರೆ ದಂಡೆನಗೆ ಒಳಗಾದವರು ಅಸಹನೀಯ ನೋವಿನಲ್ಲಿ ಆಡಿದ ಈ ಭಾಷೆಯಲ್ಲಿ ಅತ್ಯಂತ ಪರಿಶುದ್ಧವೂ ಸಶಕ್ತವೂ ಆದ ರಷ್ಯನ್ ಭಾಷೆಯ ಜೀವಾಳನ್ನು ಅಲೆಕ್ಸ್‌ ಟಾಲ್‌ಸ್ಟಾಯ್‌ ಕಂಡುಕೊಂಡ. ಪ್ರಥಮ ಬಾರಿಗೆ ಬರವಣಿಗೆಯಲ್ಲಿ ದಾಖಲಾದ, ಆದರೆ ಜನರ ಮಾತಿನಲ್ಲಿ ಸಾವಿರ ವರ್ಷಗಳಿಂದಲೂ ಜೀವಂತವಾಗಿದ್ದ ರಷ್ಯನ್ ಇದಾಗಿತ್ತು. ಹೀಗೆ ಪ್ರತಿ ಲೇಖಕನೂ ತನ್ನ ಹಿಂದಿನ ಸಾಹಿತ್ಯದಲ್ಲಿ ತನಗೆ ಪ್ರೇರಕವಾಗಬಲ್ಲ ಭಾಷಾ ಪ್ರಯೋಗವನ್ನು ಹುಡುಕುತ್ತಾನೆ. ನಮ್ಮ ತಲೆಮಾರಿನ ಲೇಖಕರಿಗೆ ಕನ್ನಡ ಸಾಹಿತ್ಯದ ೧೨ನೇ ಶತಮಾನದ ವಚನಕಾರರು ಮತ್ತು ಜಾನಪದ ಸಾಹಿತ್ಯದ ಮೇಲೆ ಕನ್ನಡ ಹೀಗೆಯೇ ಅಗತ್ಯವಾಗಿ ಕಂಡವು. ಸಾಹಿತ್ಯ ಬರೆಯಬೇಕೆಂದು ಉದ್ದೇಶಪೂರ್ವಕವಾಗಿ ಹೊರಟ ವಚನಕಾರರ ನಂತರದ ಕನ್ನಡದ ಕವಿಗಳು ಕೂಡ ಸಾಹಿತ್ಯಕ್ಕೆ ಎಂದೇ ಸಿದ್ಧವಾದ ಕೃತಕ ಭಾಷೆಯಲ್ಲಿ ಬರೆದಿದ್ದಾರೆ ಎಂಬುದು ಗಮನಾರ್ಹ. ವಚನಕಾರರ ಭಾಷೆ ಮಾತ್ರ ಎಂಟುನೂರು ವರ್ಷಗಳ ನಂತರವೂ ನಮ್ಮ ಇಂದಿನ ಭಾಷೆಯಂತೆಯೇ ಇದೆ. ನಮ್ಮ ಅಂತರಂಗದ ಹೋರಾಟಗಳನ್ನು ಅಭಿವ್ಯಕ್ತಿಸಲು, ಸಾಮಾಜಿಕ ಕ್ರಾಂತಿಯೊಂದರ ಸಮಯದಲ್ಲಿ ಸೃಷ್ಟಿಯಾದ ವಚನ ಸಾಹಿತ್ಯ ಹೆಚ್ಚು ಹತ್ತಿರವಾಗಿ ಕಂಡದ್ದು ಆಶ್ಚರ್ಯವಲ್ಲ. ಈ ಸಂಕಲನದ ವಚನಕಾರರಿಗೆ ಹಳೆಗನ್ನಡದ ಇತರರಿಗಿಂತ ಹೆಚ್ಚು ಪ್ರಾಶಸ್ತ್ಯವಿರುವಂತೆ ಕಂಡರೆ ಅದಕ್ಕೆ ಕಾರಣ ನಮಗೆ ಇದರ ಜೊತೆಗಿರುವ ಈ ಅನುಭವ – ಅಭಿವ್ಯಕ್ತಿಗಳ ಸಾಮೀಪ್ಯವೇ ಆಗಿದೆ.

ಸುಮಾರು ೭ನೇ ಶತಮಾನದ ಬಾದಾಮಿ ಶಾಸನದಲ್ಲಿ ಕನ್ನಡ ಭಾಷೆಯ ಉಪಯೋಗವಾದ ಕ್ರಮ, ಶಬ್ದಗಳು ಹೊಂದಿಕೊಳ್ಳುವ ಲಯ ಈ ಬರೆಯುವ ಪ್ರತಿ ಒಬ್ಬ ಕವಿಯಲ್ಲೂ ಕಾಣಬಹುದಾದ್ದು. ಸೃಜನಶೀಲ ಲೇಖಕ ಘಟನೆಯ ಬರಿ ಬಣ್ಣನೆಯಲ್ಲಿ ತೃಪ್ತನಾಗಲಾರ: ಘಟನೆಯ ಅಂತರ ಬಹಿರಂಗಗಳನ್ನು ಒಟ್ಟಿಗೇ ಭಾಷೆಯಲ್ಲಿ ಹಿಡಿಯಲು ಪ್ರಯತ್ನಿಸುವ ಲೇಖಕ ತಾನು ಹೇಳುವುದು ಆಗುವಂತೆ ಮಾಡುತ್ತಾನೆ. ನಾವು ಓದುತ್ತಿರುವುದು ಹೇಗೆ ಚಲಿಸುವ ನಾಟಕವಾಗುತ್ತದೆ ಎಂಬುದಕ್ಕೆ ಪಂಪನ ‘ವಿಕ್ರಮಾರ್ಜುನ ವಿಜಯ’ದ ಪಾಂಡು – ಮಾದ್ರಿ ಸನ್ನಿವೇಶದ ಕಾವ್ಯೋದಯದ ವರ್ಣನೆ ಉತ್ತಮ ಉದಾಹರಣೆ. ಮಾರ್ಗ ಮತ್ತು ದೇಸಿಗಳನ್ನು ಪಂಪ ಹೆಣೆಯುವ ಕ್ರಮ ಇವತ್ತಿನ ಬರಹಗಾರನಿಗೂ ತನ್ನ ಬರವಣಿಗೆಯ ಸಂದರ್ಭದಲ್ಲಿ ಏಳಬಹುದಾದ ಸಮಸ್ಯೆಗೆ ಉತ್ತರವನ್ನು ಸೂಚಿಸಿಬಲ್ಲದು. ಮನಸ್ಸಿನ ಸೂಕ್ಷ್ಮ ಭಾವನೆಗಳನ್ನು ಅಂತ್ಯಂತ ಮೂರ್ತವಾಗಿ ಹೇಳುವ ೧೨ನೇ ಶತಮಾನದ ವಚನಕಾರರಾದ ಅಲ್ಲಮ, ಈಗಿನ ನವ್ಯ ಕವಿಯೊಬ್ಬನಿಗೆ ಸಮಕಾಲೀನವೆನ್ನಿಸುವುದು ಸಾಧ್ಯ. ಬೇಂದ್ರೆಯ ಉತ್ಕಟತೆ, ಸಾಂಕೇತಿಕತೆ, ಭಾಷೆಯ ಸಹಜತೆ ವಚನಕಾರರಲ್ಲೂ ಜಾನಪದದಲ್ಲೂ ಬೇರುಬಿಟ್ಟಿದ್ದಾಗಿವೆ. ಅಚ್ಚುಕಟ್ಟಾದ ಮಾರ್ಗಕವಿ ಪಂಪನೂ ಇದ್ದಾನೆ. ಹತ್ತನೇ ಶತಮಾನದ ವಡ್ಡಾರಾಧನೆಯ ಗದ್ಯ, ಅಪೂರ್ವ ಚಿತ್ರಕಶಕ್ತಿ ಪಡೆದ ಕೆ.ವಿ. ಪುಟ್ಟಪ್ಪಣವರ (ಕುವೆಂಪು) ಗದ್ಯ, ಪಾತ್ರಗಳ ಉಸಿರಾಟವನ್ನೂ ಕೇಳಿಸಬಲ್ಲಂಥ ನಿರಾಡಂಬರದ ಶಿವರಾಮ ಕಾರಂತರ ಗದ್ಯ, ಈಚಿನ ಕೆಲವು ನವ್ಯ ಲೇಖಕರ ಗದ್ಯ – ಇವುಗಳ ಭಾಷೆಯ ಉಪಯೋಗದಲ್ಲಿ ಒಂದು ಜೀವನಕ್ರಮವನ್ನು ಸೂಚಿಸಬಲ್ಲ ಶಕ್ತಿ ಎಷ್ಟು ಸಮರ್ಥವಾಗಿ ಕಾಣಿಸಿಕೊಳ್ಳುತ್ತದೆ ಎಂಬುದು ಅಭ್ಯಾಸಯೋಗ್ಯವಾದದ್ದು. ಮನಸ್ಸಿನ ವ್ಯಾಪಾರಕ್ಕೂ ಹೊರ ಪ್ರಪಂಚದ ವರ್ಣನೆಗೂ ಒಟ್ಟಾಗಿ ಕನ್ನಡ ಗದ್ಯವನ್ನು ದುಡಿಸಿಕೊಳ್ಳುವ ಕನ್ನಡ ಲೇಖಕರ ಕಲೆಗೆ ಇತ್ತೀಚಿನ ಉದಾಹರಣೆಯಾಗಿ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಹುಟ್ಟಿದ ದೇವನೂರ ಮಹಾದೇವರ ಕಥೆ ಈ ಸಂಕಲನದಲ್ಲಿದೆ. ಕನ್ನಡದ ಹಿರಿಯ ಕಥೆಗಾರರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರನ್ನು ಓದುವಾಗ ಈ ಲೇಖಕರ ಆಪ್ತತೆ, ತಾಳಿಕೆ, ಅನುಕಂಪ ಎಷ್ಟು ವೈಯಕ್ತಿಕವಾದ ಸಾಧನೆಯೋ ಅಷ್ಟೇ ಕನ್ನಡ ಭಾಷೆ ಸಾಧ್ಯವಾಗಿಸಿದ ಗುಣ ಎಂದೂ ಅನ್ನಿಸುತ್ತದೆ.

ಭಾಷೆ ವಸ್ತು ಪ್ರಪಂಚವನ್ನು ಹೆಸರಿಸುವುದರ ಜೊತೆಗೇ ಈ ಪ್ರಪಂಚ ಒಪ್ಪಿಕೊಂಡ ಪ್ರಜ್ಞೆಯ ಒಳಗೆ ಉಂಟಾಗುವ ಅನುಭವಗಳನ್ನೂ ಹೇಳಬಲ್ಲ ಸಾಧನ. ಆಂತರಿಕ ಮತ್ತು ಬಾಹ್ಯ ಚಲನೆಗಳನ್ನು ಒಳಗೊಂಡ ಜೆಶ್ಚರ್ ಮಾತಿಗೆ ಮೂಲ ಎಂದು ಅಲೆಕ್ಸ್ ಟಾಲ್‌ಸ್ಟಾಯ್ ಹೇಳುತ್ತಾನೆ. ಲಯ ಮತ್ತು ಶಬ್ದಕೋಶಗಳ ಮೂಲಕ ಜೆಶ್ಚರ್ ಉತ್ಪನ್ನವಾಗುತ್ತದೆ. ಒಳಹೊರ ಚಲನೆಯುಳ್ಳ ಭಾವನೆಗಳನ್ನು ನೇರವಾಗಿ ವಿವರಿಸದಿದ್ದಾಗಲೂ ನಮಗೆ ತೋಚುವಂತೆ ಮಾಡುವ ಶಕ್ತಿ ಭಾಷೆಗೆ ಬರುವುದು ಅದು ಹೀಗೆ ಜೆಶ್ಚರ್ ಆದಾಗ. ಈ ದೃಷ್ಟಿಯಿಂದ ಕೃತಕ ಭಾಷೆ ಗ್ರಂಥಸ್ಥವಾಗಿ ಸೆಟೆದುಕೊಂಡಿರುತ್ತದೆ. ಜೀವಂತ ಮಾತೆನ್ನಿಸುವ ಸೃಜನಶೀಲ ಭಾಷೆ ಭಾವನೆಗಳ ಎಲ್ಲ ಅಂಕುಡೊಂಕುಗಳನ್ನೂ ಜೆಶ್ಚರ್‌ಗಳಾಗಿ ಒಳಗೊಂಡು ನಮ್ಮನ್ನು ತಟ್ಟುತ್ತದೆ. ಆಗಲೇ ಭಾಷೆ ಭಾವದ ಅಭಿನಯವಾಗುವುದು. ತಮ್ಮ ಪಾತ್ರಗಳು ಮಾತಾಡುವಾಗ ಹೇಗೆ ಕಂಡರು ಎಂಬುದನ್ನು ಲೇಖಕರು ನೇರವಾಗಿ ಹೇಳದೇ ಇರುವಾಗಲೂ ಅವರು ಉಪಯೋಗಿಸುವ ಭಾಷೆಯಿಂದ ನಾವು ಊಹಿಸಬಲ್ಲೆವಾದರೆ ಆಗ ಭಾಷೆಯ ಉಪಯೋಗ ನಿಜವಾಗಿ ಸೃಜನಶೀಲವೆನ್ನಬಹುದು. ಹೀಗೆ ಭಾಷೆ ಹಾವಭಾವಯುಕ್ತವಾಗುವುದನ್ನು ಗೋಪಾಲಕೃಷ್ಣ ಅಡಿಗ, ದ.ರಾ. ಬೇಂದ್ರೆ, ಬಸವಣ್ಣ, ಪಂಪರ ಕಾವ್ಯದಲ್ಲೂ ಕಾಣಬಹುದು. ಭಾಷೆ ತನ್ನ ಲಯದಲ್ಲಿ ಸಾಧಿಸುವ ಈ ಗುಣ ಕನ್ನಡ ಭಾಷೆಯ ಛಂದೋ ವೈವಿಧ್ಯಗಳಲ್ಲಿ ಎಷ್ಟರಮಟ್ಟಿಗೆ ಸಫಲವಾಗುತ್ತದೆಂಬುದನ್ನು ಹುಡುಕುವ ವಿದ್ಯಾರ್ಥಿಗೆ ಹರಿಹರನಲ್ಲಿ, ಜನಪದ ತ್ರಿಪದಿಗಳಲ್ಲಿ, ಬೇಂದ್ರೆಯಲ್ಲಿ, ನಮ್ಮ ಅಂಶ ಮತ್ತು ಮಾತ್ರಾಲಯಗಳ ವೈವಿಧ್ಯವನ್ನು ದುಡಿಸಿಕೊಂಡ ಇಂಥ ಹಲವರಲ್ಲಿ ಯಥೇಚ್ಛ ಸಾಮಗ್ರಿ ಸಿಗುತ್ತದೆ.

ನಾನು ಆಯ್ದ ಭಾಗಗಳನ್ನೆಲ್ಲ  ಹೀಗೆ ವಿವರಿಸುತ್ತ ಹೋಗುವುದು ನನ್ನ ಉದ್ದೇಶವಲ್ಲವಾದ್ದರಿಂದ ಈ ಸಂಕಲನದ ಓದುಗರಲ್ಲಿ ಮುಖ್ಯವಾಗಿ ಕೆಲವು ವಿಚಾರಗಳನ್ನು ಹಂಚಿಕೊಳ್ಳಬೇಕೆಂದಿದ್ದೇನೆ. ಒಂದರ್ಥದಲ್ಲಿ ಕನ್ನಡ ಸಾಹಿತ್ಯ ಹಿಂದೆ ಸಂಸ್ಕೃತದ ನೆರಳಿನಲ್ಲಿ, ಈಗ ಐರೋಪ್ಯ ಸಾಹಿತ್ಯದ ನೆರಳಿನಲ್ಲಿ ಬೆಳದದ್ದೆನ್ನಬಹುದು. ಆದರೆ ಜೊತೆಗೇ ಸಂಸ್ಕೃತ ಮತ್ತು ಐರೋಪ್ಯ ಸಾಹಿತ್ಯಗಳ ಪ್ರೇರಣೆ ಪ್ರಭಾವಗಳನ್ನು ದಕ್ಕಿಸಿಕೊಂಡು ತನ್ನ ಸ್ವಂತಿಕೆಯನ್ನು ಸಂಪಾದಿಸಿಕೊಂಡ ಸಾಹಿತ್ಯವೆಂದೂ ಒಟ್ಟಿನಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಹೇಳಬಹುದು. ಈಚೆಗೆ ಬರೆಯುತ್ತಿರುವ ನಮ್ಮೆಲ್ಲನೇಕರಿಗೆ ಕನ್ನಡ ಸಾಹಿತ್ಯ ಎಷ್ಟು ಅನನ್ಯ, ಎಷ್ಟು ಶ್ರೇಷ್ಠ ಎಂಬ ಪ್ರಶ್ನೆ ಮುಖ್ಯವೆನ್ನಿಸುವುದರಿಂದ, ಈ ಪ್ರಶ್ನೆಯನ್ನು ಎದುರಿಗಿಟ್ಟುಕೊಂಡು ಇಲ್ಲಿ ಆಯ್ದ ಭಾಗಗಳನ್ನು ಓದುವುದು ಅರ್ಥಪೂರ್ಣವಾಗಬಹುದು. ಈ ಪ್ರಶ್ನೆಗೆ ಉತ್ತರ ಸುಲಭವಲ್ಲ; ಆದರೆ ಹಳೆಗನ್ನಡ ಸಾಹಿತ್ಯದ ಪ್ರೇರಣೆಯಿದ್ದರೂ ಮತಧರ್ಮಗಳ ಉಕ್ಕಿನ ಚೌಕಟ್ಟಿನಲ್ಲಿ ಅದರ ಆಸಕ್ತಿಗಳು ಸಂಕುಚಿತವಾಯಿತೆನ್ನಿಸಿದರೂ ನಮ್ಮ ಸಾಹಿತ್ಯದ ಪ್ರತಿ ಮುಖ್ಯ ಘಟ್ಟವೂ ವೈದಿಕ ಸಂಸ್ಕೃತಿಯನ್ನು ಪ್ರತಿಭಟಿಸುತ್ತ ಬೆಳೆದದ್ದು ಎಂಬುದು ಗಮನಾರ್ಹ. ಹಾಗೆಯೇ ಐರೋಪ್ಯ ಸಾಹಿತ್ಯದಿಂದ ಪ್ರಚೋದನೆ ಪಡೆದ ನಮ್ಮ ಈಚಿನ ಬರಹಗಾರರು ತಮ್ಮ ಸಮಕಾಲೀನ ಜೀವನದ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ಶಕ್ತಿಯನ್ನು ಪಡೆದುಕೊಂಡವರೆಂಬುದು, ಮತ್ತು ಕನ್ನಡ ಗದ್ಯದ ಸಾಧ್ಯತೆಯನ್ನು ಹಿಗ್ಗಿಸುತ್ತ ಹೋಗಿರುವರೆಂಬುದು – ಈ ಲೇಖಕರು ಆಂಗ್ಲ ಸಾಹಿತ್ಯದಿಂದ ಪ್ರಭಾವಿತರಾದವರು ಎಂಬುದಕ್ಕಿಂತ ಹೆಚ್ಚು ಮುಖ್ಯ. ಪ್ರತಿ ಆಂಗ್ಲ ಸಾಹಿತ್ಯ ಚಳುವಳಿಯ ಹಿಂದೆಯೂ ಫ್ರೆಂಚ್ ಸಾಹಿತ್ಯದ ಪ್ರೇರಣೆಯಿಲ್ಲವೆ? ನಾವೂ ಅನ್ಯ ಸಾಹಿತ್ಯಗಳ ಪ್ರೇರಣೆಯನ್ನು ಸಮಾನಿಗಳ ನಡುವಿನ ಕೊಡುಕೊಳ್ಳುವಿಕೆಯಂತೆ ಕಾಣಬಹುದಾದ ಪ್ರಬುದ್ಧತೆಯ ದಿಕ್ಕಿನಲ್ಲಿ ಖಂಡಿತ ಚಲಿಸುತ್ತಿದ್ದೇವೆ.

ನಾನು ಮೆಚ್ಚುವ ಕನ್ನಡ ಸಾಹಿತ್ಯದ ಅತ್ಯುತ್ತಮ ಭಾಗಗಳಲ್ಲಿ ನಾನು ಕಾಣುವ ಗುಣ: ಗದ್ದಲವಿಲ್ಲದಂತೆ ಬದುಕನ್ನು ಅವಲೋಕಿಸುವ ಶಕ್ತಿ. ಈ ಶಕ್ತಿಯ ಹಿಂದೆ ಕನ್ನಡಿಗರಿಗೆ ಸಹಜವಾದ ವಿನಯವೂ ಇದೆ. ನಮ್ಮ ಅತ್ಯುತ್ತಮ ಸಾಹಿತ್ಯ, ಪ್ರವಾದಿಯಂತೆ ಕೈಗಳನ್ನೆತ್ತಿ ಏನನ್ನೂ ಘೋಷಿಸುವುದಿಲ್ಲ. ತೋರುಗಾಣಿಕೆಯ ಭಂಗಿಗಳೆಂದರೆ ನಾಚುವ ಲೇಖಕರೇ ನಮ್ಮಲ್ಲಿ ಹೆಚ್ಚು. ತಮ್ಮ ಆಸಕ್ತಿಗಳನ್ನು ಗಂಟಲಲ್ಲಿ ಕೂಗಿಕೊಳ್ಳದೆ ಒಳಗಿನಿಂದ ನೋಡಿಕೊಳ್ಳುವ ಆಪ್ತತೆ, ವೈಯಕ್ತಿಕವಾದ ಒಳನೋಟದ ಎಚ್ಚರ ಕನ್ನಡದಲ್ಲಿ ನನಗೆ ಪ್ರಿಯವಾದ ಗುಣ. ತಾನು ಭಾರತೀಯನಾಗಿದ್ದರೂ ಮೂಲತಃ ಕನ್ನಡಿಗ ಕೂಡ ಎನ್ನುವ ಪ್ರಜ್ಞೆಯಿಂದಾಗಿ ನಮ್ಮ ಸಾಹಿತ್ಯದಲ್ಲಿ ವಿಶಿಷ್ಟವಾದೊಂದು ಗುಣ ಕಾಣಿಸುತ್ತದೆ ಎಂದು ನನ್ನ ಭಾವನೆ. ಒಂದು ಭಾಷೆ ಇಡೀ ಸಂಸ್ಕೃತಿಯ ಹಿಂದಿರುವ ಮನಸ್ಸಿಗೆ ದ್ಯೋತಕವಾಗುವುದರಿಂದ ನಮ್ಮ ಭಾಷೆ ಕನ್ನಡತನವನ್ನು ಕಳೆದುಕೊಳ್ಳದಂತೆ ಸಂಸ್ಕೃತವನ್ನು ಬಳಸಿಕೊಳ್ಳುತ್ತ ಬಂದ ಕ್ರಮ ವಿಶೇಷವಾದ ಅವಗಾಹನೆಗೆ ಅರ್ಹವೆಂದು ನನ್ನ ಭಾವನೆ. ಅಕ್ಕಮಹಾದೇವಿಯ ಈ ಸಾಲನ್ನು ನೋಡಿ:

ತೆರಣಿಯ ಹುಳು ತಮ್ಮ ಸ್ನೇಹಕ್ಕೆ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವಂತೆ –

‘ಸ್ನೇಹ’ ಎನ್ನುವುದು ಮಾತ್ರ ಇಲ್ಲಿರುವ ಸಂಸ್ಕೃತ ಶಬ್ದ. ಸಂಸ್ಕೃತ ಶಬ್ದಗಳನ್ನು ಕನ್ನಡ ಆವರಣದಲ್ಲಿ ಅಕ್ಕನಿಂದ ಹಿಡಿದು ಅಡಿಗರ ತನಕ ಎಷ್ಟು ಅರ್ಥಪೂರ್ಣವಾಗಿ ನಮ್ಮ ಲೇಖಕರು ಬಳಸುತ್ತ ಹೋಗಿದ್ದಾರೆಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ಸ್ನೇಹ ಎನ್ನುವುದಕ್ಕೆ ಅದರ ಸಾಮಾನ್ಯ ಅರ್ಥದ ಜೊತೆ ‘ಅಂಟು’ ಎನ್ನುವ ಅರ್ಥವೂ ಇದೆ. ಈ ಎರಡು ಅರ್ಥಗಳೂ ಒಟ್ಟಿಗೇ ದುಡಿದು ಅಕ್ಕನ ಮನಃಸ್ಥಿತಿಯ ಅರಿವು ನಮಗಾಗುತ್ತದೆ. ಲ್ಯಾಟಿನ್‌ಮತ್ತು ಆಂಗ್ಲೋ ಸ್ಯಾಕ್ಸನ್ ಮೂಲದ ಶಬ್ದಗಳನ್ನು ಇಂಗ್ಲಿಷ್ ಕಾವ್ಯ ಅರ್ಥವಂತಿಕೆಗಾಗಿ ಹೆಣೆಯುವ ಕ್ರಮವನ್ನು ಕನ್ನಡದಲ್ಲೂ ಕಾಣಬಹುದಾಗಿದೆ.

ಸಂಸ್ಕೃತ ಮತ್ತು ತಮಿಳನ್ನು ಬಿಟ್ಟರೆ ಕನ್ನಡ, ಭಾರತದ ಮೂರನೇ ಅತ್ಯಂತ ಪ್ರಾಚೀನ ಭಾಷೆ ಎನ್ನುತ್ತಾರೆ. ಹೆಮ್ಮೆಗಾಗಿ ಪ್ರಾಚೀನತೆಯನ್ನು ಸಾರಿಕೊಳ್ಳುವುದರಲ್ಲಿ ಅರ್ಥವಿಲ್ಲ. ಆದರೆ ಒಂದು ಜನಾಂಗದ ಸ್ಮೃತಿಯನ್ನು ಕಾದಿರಿಸುವ ಸಾಹಿತ್ಯವಾಗಿ ಒಂದು ಭಾಷೆ ಹೇಗೆ ಕೆಲಸ ಮಾಡಿತು ಎಂಬುದು ಮುಖ್ಯ. ಹಿಂದೆ ಸಂಸ್ಕೃತ ಮತ್ತು ಈಗ ಇಂಗ್ಲಿಷ್ ನಮ್ಮ ಭಾಷೆಯನ್ನು ಮೂಲೆಗೊತ್ತಬಹುದಿತ್ತು. ಆದರೆ ರಾಜಕೀಯ ಆರ್ಥಿಕ ಶಕ್ತಿಗಳನ್ನು ಪಡೆದುಕೊಂಡ ಪ್ರಭುಗಳ ಭಾಷೆಯ ಪ್ರಭಾವವನ್ನು ಮೈಗೂಡಿಸಿಕೊಂಡೂ ಕನ್ನಡ ತನ್ನತನ ಉಳಿಸಿಕೊಂಡಿತು. ತನ್ನ ನೆಲದ ವಾಸನೆಯನ್ನು ಕಳೆದುಕೊಳ್ಳದಂತೆ ಕನ್ನಡ ಸಾಹಿತ್ಯ ಭಾರತೀಯ ಮತ್ತು ಜಾಗತಿಕ ಪ್ರಭಾವಗಳನ್ನು ಹೇಗೆ ಅರಗಿಸಿಕೊಳ್ಳುತ್ತದೆ ಎಂಬುದು ಸಾಹಿತ್ಯದ ವಿದ್ಯಾರ್ಥಿಗೆ ಅತ್ಯಂತ ಕುತೂಹಲ ಕೆರಳಿಸಿ ಕನ್ನಡ ಸಾಹಿತ್ಯದ ಸಮಗ್ರ ಅಧ್ಯಯನಕ್ಕೆ ಪ್ರಚೋದನೆಯನ್ನಿತ್ತರೆ ಈ ಸಂಕಲನದ ಉದ್ದೇಶ ಸಫಲವಾದಂತೆ.

ನಮ್ಮ ಉತ್ಸಾಹಶೀಲ ಧೀಮಂತರಲ್ಲೊಬ್ಬರಾದ, ಭಾರತೀಯ ಭಾಷಾಸಂಸ್ಥಾನದ ನಿರ್ದೇಶಕ ಡಾ. ಡಿ.ಪಿ. ಪಟ್ನಾಯಕರ ಪ್ರೇರಣೆಯಿಂದ ಈ ಸಂಕಲನದ ಕೆಲಸಕ್ಕೆ ನಾನು ಕೈ ಹಾಕಿದ್ದು. ಈ ಸಂಕಲನದ ಸಿದ್ಧತೆಗೆ ಬೇಕಾದ ಎಲ್ಲ ಸಹಕಾರವನ್ನೂ ಅವರು ನಮಗೆ ಕೊಟ್ಟಿದ್ದಾರೆ. ಮುಖ್ಯವಾಗಿ ಶ್ರೀ ವರದಭಟ್ಟಾಚಾರ್ಯರ ಸಹಾಯವನ್ನು ನಾನಿಲ್ಲಿ ನೆನೆಯಬೇಕು. ಸಂಕಲನದ ಭಾಗಗಳನ್ನು ಆರಿಸಿದ್ದರ ಹೊಣೆ ನನ್ನದಾದರೂ ನನ್ನ ಪ್ರಿಯ ಮಿತ್ರರಾದ ಶ್ರೀ ಜಿ.ಎಚ್‌. ನಾಯಕ್‌ರು ಪ್ರತಿ ಹಂತದಲ್ಲೂ ನನಗೆ ಅನೇಕ ಸಲಹೆ ಸೂಚನೆಗಳನ್ನಿತ್ತು ಉಪಕಾರ ಮಾಡಿದ್ದಾರೆ. ಅದನ್ನಿಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಭಾರತೀಯ ಭಾಷಾ ಸಂಸ್ಥಾನದವರು ಪ್ರಕಟಿಸಿದ ಕನ್ನಡ ಸಾಹಿತ್ಯ ಸಂಕಲನಕ್ಕೆ ಬರೆದ ಮುನ್ನುಡಿ, ೧೯೭೬.