ಓದುಗನ ನೈತಿಕ ತಿಳುವಳಿಕೆಯನ್ನು ಕಾದಂಬರಿ ಹೇಗೆ ಬದಲಾಯಿಸುತ್ತದೆ?

ನಾನು ಹುಡುಗನಾಗಿದ್ದಾಗ ಕಾದಂಬರಿಯನ್ನು ಓದುವ ಅನುಭವ  ಹೇಗಿರುತ್ತಿತ್ತೆಂದು ಈಗಲೂ ನೆನಪಿಸಿಕೊಳ್ಳಬಲ್ಲೆ. ನನಗೆ ಕಾದಂಬರಿಯನ್ನು ಓದುವ ಹುಚ್ಚು ಹಿಡಿಸಿದ್ದು ಶರಶ್ಚಂದ್ರರ ಕೃತಿಗಳು – ನನ್ನ ವಾರಗೆಯ ಹಲವು ಲೇಖಕರ ಬಗ್ಗೆಯೂ ಇದು ನಿಜವಿರಬಹುದು. ಹಳ್ಳಿಯಲ್ಲಿದ್ದ ನನ್ನ ಮನೆಯ ಮೂಲೆಯಲ್ಲಿ ಕುಳಿತು ಮಂತ್ರಮುಗ್ಧನಾಗಿ ಓದುತ್ತಿದ್ದೆ. ಹಳೆಮಾದರಿಯ ಕನ್ನಡ ಗದ್ಯದ ಭಾಷಾಂತರವೂ ಈ ಪರವಶತೆಗೆ ಪೋಷಕವಾಗುತ್ತಿತ್ತು. ಶರಶ್ಚಂದ್ರರ ಕಾದಂಬರಿಗಳನ್ನು ನಾನು ಮತ್ತೆ ಓದಿಲ್ಲ. ಓದಿದರೆ ಈಗ ನನಗೆ ಅವು ಅತೀ ಭಾವುಕವಾಗಿ ಕಾಣಬಹುದು. ಆದರೆ ಹೊಸದಾದ ನೈತಿಕ ಪ್ರಜ್ಞೆಯನ್ನು ಒಂದು ಕಾದಂಬರಿ ಮೂಡಿಸಬೇಕಾದರೆ, ಅದು ನನ್ನನ್ನು ಹೀಗೆ ಪರವಶಗೊಳಿಸುವಂತಹದ್ದಾಗಿರಬೇಕು ಎಂಬುದು ಮಾತ್ರ ಈಗಲೂ ನನ್ನ ಪಾಲಿಗೆ ಸತ್ಯವಾಗಿಯೇ ಉಳಿದಿದೆ. ಖಚಿತವಾದ ನೀತಿ ಮತ್ತು ನಡೆತೆಯ ಧೋರಣೆಗಳನ್ನು ಹೊಂದಿದ್ದ ಸಂಪ್ರದಾಯಸ್ಥ ಸಮಾಜದಲ್ಲಿ ಬೆಳೆಯುತ್ತಿದ್ದ ಹುಡುಗ ನಾನು. ಆದರೆ ಕಾದಂಬರಿ ಓದುವಾಗ ಮಾತ್ರ ನಾನು ಒಂದು ಪಂಗಡದ ಬರೀ ಒಬ್ಬ ಸದಸ್ಯನಾಗದೇ ಒಬ್ಬ ಖಾಸಗೀ ಮನುಸ್ಸನು ಆಗಿಬಿಡುತ್ತಿದ್ದೆ. ಹೀಗೆ ನನ್ನನ್ನು ಖಾಸಗಿ ಮನುಸ್ಸನಾಗಿಸಿಬಿಡುತ್ತಿದ್ದ ಕಾದಂಬರಿ, ನಿತ್ಯ ವ್ಯವಹಾರದ ಜಗತ್ತಿನಿಂದ ಪ್ರತ್ಯೇಕವಾದ ನೀತಿನಿಯಮಗಳಿವೆ ಎಂಬುದನ್ನು ಗುಪ್ತವಾಗಿ, ನಿರ್ಭಯವಾಗಿ ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತಿತ್ತು. ತಮ್ಮ ಹೃದಯವನ್ನು ನನಗೆ ತೆರೆದು ತೋರಿಸುತ್ತಿದ್ದ ಪಾತ್ರಗಳೊಡನೆ ನಾನೂ ಒಬ್ಬ ಸಹಪಿತೂರಿಗಾರನಾಗಿಯೋ ಸಹಭಾಗಿಯಾಗಿಯೋ ಆಪ್ತನಾಗಿಯೋ ಗುಪ್ತವಾಗಿ ವ್ಯವಹರಿಸುವಂತೆ ಆಹ್ವಾನಿಸುತ್ತಿದ್ದ ಕಾದಂಬರಿಯ ಈ ಇನ್ನೊಂದು ಪ್ರಪಂಚ ನನ್ನ ನೀತಿ ನಡತೆಯ ಧೋರಣೆಯನ್ನೆಲ್ಲಾ ಬದಲಾಯಿಸಿಬಿಡುತ್ತಿತ್ತು.

ಆರ್ಟಿಗಾ ಗ್ಯಾಸೆ ಎಂಬುವವನು ಇಂಥ ಅನುಭವವನ್ನು ಇನ್ನೂ ಚುರುಕಾಗಿ ಗುರುತಿಸಿದ್ದಾನೆ(the Dehumanisation of Art). ಒಂದು ಉತ್ಕ್ರಷ್ಟ ಕಾದಂಬರಿಯನ್ನು ಓದಿದ ಬಳಿಕ ನಮಗೇನು ಅನ್ನಿಸುತ್ತದೆ? – ‘ಇಲ್ಲಿನ ಸಂಪರ್ಕಗಳನ್ನೆಲ್ಲ ಕಳೆದುಕೊಂಡು ಇನ್ನೊಂದು ಪ್ರಪಂಚದಲ್ಲಿ ವಾಸವಾಗಿದ್ದು, ಅಲ್ಲಿಂದ ಹೊರಬರುತ್ತಿದ್ದಂತೆ ಭಾಸವಾಗುತ್ತದೆ. ಅಲ್ಲವೇ?’ (ಪು. ೮೪)ಕಾದಂಬರಿ ಕಲೆ, ‘ನಮ್ಮ ಒಂಟಿ ಬದುಕನ್ನು ಬಹುರೂಪಿಯಾಗಿ ಗಣಿಸಿ, ನಮ್ಮ ವ್ಯಕ್ತಿತ್ವದಿಂದಲೇ ಪಾರುಮಾಡಿ, ಪರಕಾಯ ಪ್ರವೇಶದ ಶಕ್ತಿಯನ್ನು ನಮ್ಮಲ್ಲಿ ಧಾರಾಳಗೊಳಿಸುತ್ತದೆ.’ (ಪು.೮೪) ‘ಮೆಚ್ಚಿದ ತನ್ನ ಪ್ರಪಂಚದೊಳಕ್ಕೆ ಹೀಗೆ ನಮ್ಮನ್ನು ಆಕರ್ಷಿಸಿ, ಸೆಳೆದು, ನಾವು ಹಿಂದೆ ಬಿಟ್ಟುಬಂದ ನಮ್ಮ ಜಗತ್ತಿನ ನೈಜ ಜಾಗಗಳಿಗೆ ನಾವು ಹೋಗಗೊಡದಂತೆ ಉಳಿಸಿಕೊಳ್ಳುವುದರ ಮುಖಾಂತರ’ ಕಾದಂಬರಿಕಾರ ಇದನ್ನು ಸಾಧಿಸುತ್ತಾನೆ. ಹೀಗೆ ಸಾಧಿಸಬೇಕಾದರೆ, ‘ಕಾದಂಬರಿಕಾರ ನಮ್ಮ ಸುತ್ತ ಗೋಡೆಯನ್ನು ಕಟ್ಟಬೇಕು; ಹೊರಜಗತ್ತನ್ನು ಇಣುಕಿ ನೋಡಲು ಕೂಡ ಈ ಗೋಡೆಗಳಲ್ಲಿ ಬಿರುಕುಗಳು ಇರಕೂಡದು.’ ಇಂಥ ಬಿರುಕುಗಳು ಬಹಳ ಅಪಾಯ. ‘ನಾವು ತೋಟದಲ್ಲಿ ಕೂತು ತೋಟದ ಚಿತ್ರ ನೋಡಿದಂತೆ – ಬಿರುಕುಗಳಿದ್ದರೆ ಚಿತ್ರಿತ ತೋಟ ನಿಜವಾಗಿ ಅರಳುವುದು ಮನೆಯ ಒಳಗೆ ತಟಸ್ಥವಾದ ಗೋಡೆಯ ಮೇಲೆ ಇದ್ದಾಗ ಮಾತ್ರ. ಹಾಗಿದ್ದಾಗಲೇ ಅದು ಒಂದು ಕಾಲ್ಪನಿಕ ಲೋಕಕ್ಕೆ ಬಾಗಿಲು ತೆರೆಯುವ ಕಿಟಕಿಯೋ ಕಿಂಡಿಯೋ ಆಗಲು ಸಾಧ್ಯ.’ (ಪು ೮೪ – ೮೫)

ಇದು ನಿಜವಾದರೆ ಕಾದಂಬರಿ ನಮ್ಮಲ್ಲಿ ಹೊಸದಾದ ನೈತಿಕ ಪ್ರಜ್ಞೆ ಹೇಗೆ ತರಲು ಸಾಧ್ಯ? ಆರ್ಟಿಗಾ ಗ್ಯಾಸೆಯ ಪ್ರಕಾರ – ನಿದ್ದೆಯಲ್ಲಿ ಚುರುಕಾಗಿ ನಡೆಯುವವನಂತೆ, ನಾವು ಕಾದಂಬರಿಯಲ್ಲಿ ಬದುಕದ ಹೊರತು ಕಾದಂಬರಿ ನಮ್ಮ ಮೇಲೆ ಶಕ್ತಿಯುತವಾದ ಯಾವ ಹೊಸ ಪ್ರೇರಣೆಯನ್ನು ಬೀರುವುದಿಲ್ಲ. (ಪು. ೮೭)

ನಾವೆಲ್ಲ ಇದನ್ನು ಗಮನಿಸಿಯೇ ಇರುತ್ತೆವೆ. ನಾವು ನಮ್ಮ ನಿತ್ಯ ಜಗತ್ತಿನಲ್ಲಿ ನಾವು ತಂದೆ, ತಾಯಿ, ಗಂಡ, ಹೆಂಡತಿ ಅಥವಾ ಉಪಾಧ್ಯಾಯರಾಗಿ ತೋರಿಸುವ ಸಹಾನುಭೂತಿಗಿಂತಲೂ ಹೆಚ್ಚಿನದನ್ನು, ಕಾದಬಂರಿ ಓದುಗರಾಗಿ ಮುಕ್ತವಾಗಿ ನಾವು ತೋರಿಸುವುದಿಲ್ಲವೇ? ನಾವು ನಿಜಪ್ರಪಂಚದಲ್ಲಿ ಬದುಕುವಂತೆ ಕಾದಂಬರಿಯ ತನ್ನದೇ ಆದ ಪ್ರಪಂಚದಲ್ಲಿಯೂ ಬದುಕುತ್ತೇವೆ, ಆದರೆ ಇನ್ನಷ್ಟು ನಿಕಟವಾಗಿ. ಆದುದರಿಂದಲೇ ನಮ್ಮ ಗಮನವನ್ನು ತನ್ನಲ್ಲಿ ಕ್ರೋಢೀಕರಿಸಿಕೊಳ್ಳುವ ಶಕ್ತಿ ಕಾದಂಬರಿಗೆ ಎಷ್ಟು ಹೆಚ್ಚಿರುತ್ತದೆಯೋ ಅಷ್ಟರ ಮಟ್ಟಿಗೆ ಅದು ನಮ್ಮ ಪರಿಮಿತ ನೈತಿಕ ದೃಷ್ಟಿಯನ್ನು ಆ ಕ್ಷಣದಲ್ಲಿ ತಡೆಹಿಡಿದು, ನಮ್ಮಲ್ಲಿ ಹೊಸ ರೀತಿಯ ಸಹಾನುಭೂತಿಯ ಶಕ್ತಿಯನ್ನು ಹುಟ್ಟಿಸುತ್ತದೆ. ಕಾದಂಬರಿ ಹೀಗೆ ತನ್ನ ಬಾಹುಳ್ಯದ ಪ್ರಪಂಚದಲ್ಲಿ  ಬದುಕಲು ನಮ್ಮನ್ನು ಆಹ್ವಾನಿಸುವ, ವಾಸ್ತವಿಕ ವಿವರಗಳಿಂದ ಕಟ್ಟಿದ ಪ್ರತಿಪ್ರಪಂಚವಾಗದೇ ಹೋದರೆ, ಅದಕ್ಕೆ ಇಂಥ ಶಕ್ತಿಯ ಅಗತ್ಯವೂ ಇರುತ್ತಿರಲಿಲ್ಲ, ಸಾಧ್ಯವು ಆಗುತ್ತಿರಲಿಲ್ಲ.

ಹೊಸಬಗೆಯಲ್ಲಿ ಗ್ರಹಿಸುವುದನ್ನು ಒತ್ತಾಯಿಸುವುದರ ಮುಖಾಂತರ ಕಾದಂಬರಿ ಹೊಸ ನೈತಿಕ ಮೌಲ್ಯಗಳನ್ನು ಸೃಷ್ಟಿ ಮಾಡಬಲ್ಲದು – ಎಂಬುಂದೇ ಮೇಲಿನ ಗ್ರಹಿಕೆಯ ಸಾರಾಂಶ.’ ಪ್ರತಿಸೃಷ್ಟಿ ಎನ್ನಿಸುವ ತನ್ನ ಪ್ರಪಂಚದಲ್ಲಿ ಕಾದಂಬರಿಕಾರ, ಅಮೂರ್ತ ತತ್ವಗಳ ದಾರ್ಶನಿಕನಿಗೆ ಸಾಧ್ಯವಾಗದ ರೀತಿಯಲ್ಲಿ, ಚೈತನ್ಯಭರಿತವಾಗಿ, ತೋರಿಕೆ ಮತ್ತು ನೈಜತೆಯ ದ್ವಂದ್ವವನ್ನು ಒಂದಕ್ಕೊಂದು ವಿರೋಧವಾಗಿ ನಿಲ್ಲಿಸುತ್ತಾನೆ. ವಿಶಿಷ್ಟಗೊಳಿಸುವ ವಿವರಗಳ ದಟ್ಟತೆಯಲ್ಲಿ ಹೀಗೆ ನಮ್ಮ ಒಪ್ಪಿಗೆಯನ್ನು ಪಡೆಯುವ ಕಾದಂಬರಿಕಾರ ಕಾಲ್ಪನಿಕ ಸತ್ಯಕ್ಕೂ ವಾಸ್ತವಕ್ಕೂ ವ್ಯತ್ಯಾಸ ಮಾಡದೇ ಕಲ್ಪತವನ್ನೇ ಅಕ್ಷರಶಃ ಸತ್ಯವೆಂದು ತಿಳಿಯುವನು. ಕಥೆಗಾರರನನ್ನು ನಂಬಬೇಡ, ಕಥೆಯನ್ನು ನಂಬು ಎನ್ನುತ್ತಾರೆ ಲಾರೆನ್ಸ್. ಯಾಕೆಂದರೆ ಕಥೆಗಾರ ಸುಳ್ಳನಾದರೂ ಕಥೆ ಸತ್ವಯುತವಾಗಿದ್ದರೆ ಸುಳ್ಳನ್ನು ಬಯಲು ಮಾಡುತ್ತದೆ. ಕಾದಂಬರಿಯ ಒಳಗೆ ಸ್ವಯಂಪೂರ್ಣ ಎನ್ನಿಸುವಂತೆ ಅಲ್ಲಿನ ಜಗತ್ತು ಮೂರ್ತ ಸ್ವರೂಪವನ್ನು ಪಡೆದಿದ್ದಲ್ಲಿ ಮಾತ್ರ ಬದುಕಿನಲ್ಲಿರುವ ತೋರಿಕೆಯ ಸತ್ಯಕ್ಕೂ ನಿಜಕ್ಕೂ ನಡುವಿನ ದ್ವಂದ್ವಗಳನ್ನು ಶೋಧಿಸುವಂತೆ ಕಾದಂಬರಿಕಾರನನ್ನು ಕೃತಿ ಒತ್ತಾಯಿಸುತ್ತದೆ. ಬೇರೆ ಸಾಹಿತ್ಯ ಪ್ರಕಾರಗಳಿಗಿಂತ ಕಾದಂಬರಿಯಲ್ಲಿ ಮಾತ್ರ ಇಂತಹ ಸ್ವಯಂಪೂರ್ಣ ಜಗತ್ತಿನ ನಿರ್ಮಾಣ ಮತ್ತು ಹೀಗೆ ನಿರ್ಮಿತವಾದ ಜಗತ್ತಿನಲ್ಲಿ ತೋರಿಕೆ ಮತ್ತು ನಿಜ ಮುಖಾಮುಖಿಯಾಗುವುದರ ಮೂಲಕ ನಡೆಯುವ ಹೊಸ ಮೌಲ್ಯಗಳ ಸಾಧನೆ ಸಾಧ್ಯವೆಂದು ಹೇಳಬಹುದು. ತನ್ನ ಕೃತಿಯ ಒಳಜಗತ್ತಿನ ಧರ್ಮಕ್ಕೆ ವಿರೋಧವಾಗಿ ಹೊರಗಿನ ಪ್ರಪಂಚದೊಡನೆ ಒಪ್ಪಂದ ಮಾಡಿಕೊಳ್ಳುವಂತೆ ಕಾದಂಬರಿಕಾರ ಪ್ರಯತ್ನಿಸಿದರೆ ಕಾದಂಬರಿಕಾರ ಸಿಕ್ಕಿಬೀಳುತ್ತಾನೆ. ಆದ್ದರಿಂದ ಕಾದಂಬರಿ ಸೃಷ್ಟಿಸುವ ಹೊಸ ಮೌಲ್ಯವು ಜೀವನ ಕಾಣಲು ಹೇಗಿರುತ್ತದೆ? ಆದರೆ ನೈಜವಾಗಿ ಹೇಗಿದೆ? ಎಂಬವುಗಳ ನಡುವೆ ಇರುವ ವಿರೋಧವನ್ನು ಎಷ್ಟು ಶಕ್ತಿಯುತವಾಗಿ ನಿರೂಪಿಸುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ನಾವು ನಿತ್ಯ ಬದುಕುವ ಪ್ರಪಂಚದಲ್ಲಿ ನಾನು ಮೇಲೆ ಹೇಳಿದ ವೈರುಧ್ಯಗಳನ್ನು ಅನುಭವಿಸುವುದು ಅಗತ್ಯವಾಗುತ್ತದೆ. ಈ ಮೂಲಕ ನಮ್ಮ ಮಾನವೀಯ ಸಹಾನುಭೂತಿಗಳು ಹೊಸ ದಿಕ್ಕಿನಲ್ಲಿ ಹರಿಯುವುದು ಶಕ್ಯವಾಗುತ್ತದೆ.

ತಮ್ಮ ಕಾಲದ ವ್ಯವಸ್ಥೆಗಳನ್ನು ವಿರೋಧಿಸಿ ಹೊಸ ನೈತಿಕ ಮೌಲ್ಯಗಳನ್ನು ಸೃಷ್ಟಿಸಿದ ಐರೋಪ್ಯ ಕಾದಂಬರಿಕಾರರಿಗೆ, ಅವರ ಬೆನ್ನ ಹಿಂದೆ ಇಂಥ ಕೆಲಸವನ್ನು ಸುಲಭಮಾಡಿದ ದಾರ್ಶನಿಕ ಚಿಂತಕರಿದ್ದರು. ಫ್ರೆಂಚ್ ಕ್ರಾಂತಿಯ ತಾತ್ವಿಕರು, ನಮ್ಮ ಕಾಲದವರೇ ಆದ ಫ್ರಾಯ್ಡ್‌, ಮಾರ್ಕ್ಸ್, ನೀಟ್ಸೆ, ಯೂಂಗ್ ಮತ್ತು ಅಸ್ತಿತ್ವವಾದ ಚಿಂತಕರು ತಮ್ಮ ತಮ್ಮ ಲೇಖಕರನ್ನು ಹೊಸ ದಿಕ್ಕುಗಳಲ್ಲಿ ಮನುಷ್ಯ ಪ್ರಜ್ಞೆಯನ್ನು ಮತ್ತು ಹೊಸ ಸಾಮಾಜಿಕ ವಾಸ್ತವಗಳನ್ನು ಶೋಧಿಸಿ ಹೊಸ ಸತ್ಯಗಳನ್ನು ಕಂಡುಕೊಳ್ಳುವಂತೆ ಪ್ರೇರೇಪಿಸಿದ್ದರು. ಡಾಸ್ಟೋವಸ್ಕಿ ಮತ್ತು ಕಮೂರಂತಹ ಲೇಖಕರಂತೂ ಈ ತತ್ವಚಿಂತಕರಿಗಿಂತಲೂ ಮುಂದೆ ಹೋದರೆಂದು ಹೇಳಬಹುದು.

ಭಾರತೀಯ ಕಾದಂಬರಿಕಾರನಾದರೋ ತನ್ನ ದಾರಿಯ ನಕ್ಷೆಯನ್ನು ತಾನೇ ಸಿದ್ಧಪಡಿಸಿಕೊಳ್ಳುವ ಮೊದಲಿಗನೋ ಅಥವಾ ಐರೋಪ್ಯ ತತ್ವಜ್ಞಾನಿಗಳಿಂದ ವಿಚಾರಗಳನ್ನು ಪಡೆಯುವವನೋ ಆಗಬೇಕಾಗಿ ಬಂದಿದೆ. ಇದಕ್ಕಾಗಿ ನಾವು ಅವನನ್ನು ಟೀಕಿಸಿ ಪ್ರಯೋಜನವಿಲ್ಲ. ಭಾರತೀಯವಲ್ಲದ ಮೂಲಗಳಿಂದ ವಿಚಾರಗಳನ್ನು ಪಡೆದನೆಂಬ ಕಾರಣಕ್ಕಾಗಿಯೇ ಅವನು ಸುಳ್ಳಾಗುವುದಿಲ್ಲ. ಯಾಕೆಂದರೆ ನಾವು ಮೊದಲು ಹೇಳಿದಂತೆ ನಮ್ಮ ಒಪ್ಪಿಗೆಯನ್ನು ಪಡೆಯಲು ಅವನು, ತನ್ನ ಕೃತಿಯ ಪ್ರಪಂಚವನ್ನು ದಟ್ಟವೂ ನೈಜವೂ ಪರ್ಯಾಯಸೃಷ್ಟಿಯೂ ಆಗಿರುವಂತೆ ಮಾಡಬೇಕಾಗುತ್ತದೆ. ತನ್ನ ಕೃತಿಯ ವಿವರಗಳ ಬಾಹುಳ್ಯದಲ್ಲಿ ನೈಜವಾಗಿಲ್ಲದ ವಿಚಾರಗಳನ್ನು ಅವನು ಎತ್ತಿ ಹಿಡಿಯಲಾರ.

ಭಾರತೀಯ ಕಾದಂಬರಿಕಾರ ನಮ್ಮ ಸಮಾಜಶಾಸ್ತ್ರಜ್ಞರು, ತಾತ್ವಿಕರು, ಮನೋವಿಜ್ಞಾನಿಗಳಿಗಿಂತ ಮುಂದಿದ್ದಾನೆಂದೇ ಹೇಳಬೇಕು. ಈ ಕ್ಷೇತ್ರಗಳಲ್ಲಿ, ನಮ್ಮ ಕಾದಂಬರಿಕಾರರಿಗೆ ಸರಿಸಾಟಿಯಾದ ದೊಡ್ಡ ಹೆಸರುಗಳು ಇಲ್ಲ ಎನ್ನಬಹುದು. ಉದಾಹರಣೆಗೆ – ಪಥೇರ್ ಪಾಂಚಾಲಿ, ಪಪ್ಟೆಲ್ಸ್ ಟೇ‌ಲ್, ಗ್ರಾಮಾಯಣ; ಕಾರಂತರ ಕಾದಂಬರಿಗಳು, ಕುವೆಂಪುರವರ ಮಲೆಗಳಲ್ಲಿ ಮದುಮಗಳು – ಇವುಗಳನ್ನೇ ತೆಗೆದುಕೊಳ್ಳಬಹುದು. ನಮ್ಮ ತಾತ್ತ್ವಿಕ ಚಿಂತಕರಿಗೆ ಸಾಧ್ಯವಾಗದೆ ಹೋದ, ಹೊಸ ಅರಿವಿನ ಸ್ಥಿತಿಯೊಂದರ ಮುಖಾಂತರ ನಮ್ಮ ಜಗತ್ತನ್ನು ನೋಡುವಂತೆ ಈ ಕೃತಿಗಳು ನಮ್ಮನ್ನು ಒತ್ತಾಯಿಸುತ್ತವೆ. ಡಾ/ಸರ್ವೇಪಲ್ಲಿ ರಾಧಾಕೃಷ್ಣನ್‌ರಂಥವರು ಕೂಡ ದೊಡ್ಡ ವ್ಯಾಖ್ಯಾನಕಾರರೇ ಹೊರತು ಸ್ವಾತಂತ್ರ್ಯ ಚಿಂತಕರಲ್ಲ.

ಮೇಲಿನ ಮಾತುಗಳನ್ನು ಹೇಳುವಲ್ಲಿ ನಾನು ಉತ್ರೇಕ್ಷೆ ಮಾಡಿದ್ದೇನೆ ಎಂಬುದು ನನಗೆ ಗೊತ್ತಿದೆ. ಏಕೆಂದರೆ ನನ್ನ ಬಗ್ಗೆಯೇ ನಾನು ಹೇಳುವುದಾದರೆ, ನಮ್ಮ ಶತಮಾನದ ಮೂವರು ಭಾರತೀಯರು ನನ್ನ ಬರವಣಿಗೆಯ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ – ನಮ್ಮಲ್ಲಿ ಹೊಸ ಬಗೆಯ ಸಾಮಾಜಿಕ ಅಂತಃಕರಣ ಮೂಡಿಸಿದ ಮಹಾತ್ಮ ಗಾಂಧೀಜಿ, ಗಾಂಧೀಜಿಯವರ ವಿಚಾರಗಳನ್ನು ಪ್ರಸ್ತುತಕ್ಕೆ ಹರಿತಗೊಳಿಸಿದ ಲೋಹಿಯಾ ಮತ್ತು ಇವರಿಬ್ಬರಿಗೂ ಭಿನ್ನವಾಗಿರುವ ಜಿಡ್ಡು ಕೃಷ್ಣಮೂರ್ತಿ. ಹೀಗಿದ್ದರೂ ಇಲ್ಲಿ ನಾನು ಮುಖ್ಯವಾಗಿ ಹೇಳಬೇಕೆಂದಿರುವುದು – ಹೊಸ ನೈತಿಕ ಪ್ರೇರಣೆಗಳನ್ನು ಹುಟ್ಟಿಸುವಲ್ಲಿ ಚಿಂತಕರಿಗಿಂತಲೂ ಕಾದಂಬರಿಕಾರನೇ ಭಾರತದಲ್ಲಿ ಮುಂದಿದ್ದಾನೆ ಎಂದು ಮತ್ತು ಈ ನೈತಿಕ ಪ್ರೇರಣೆ ಮುಖ್ಯವಾಗಿ ಕರುಣೆಯಿಂದ ಹುಟ್ಟುವಂತಹದು ಎಂದು.

ವಿಚಾರಗಳಲ್ಲಿ ಗಡಿಗಳಿಲ್ಲವಾದ್ದರಿಂದ ಇದಕ್ಕಿಂತ ಹೆಚ್ಚು ಹೇಳುವುದು ಅನಗತ್ಯ. ಆದರೆ ನಾನು ಒತ್ತಿ ಹೇಳಬೇಕಾಗಿರುವುದು ಏನೆಂದರೆ – ಹೊಸ ವಿಚಾರಗಳು ಹೊಸ ನೈತಿಕ ಪ್ರಜ್ಞೆ ಮೂಡಿಸುತ್ತವೆ ಎಂಬುದು ನಿಜವಾದರೂ ಕಾದಂಬರಿಯಲ್ಲಿ ಈ ಕೆಲಸ ಸಾಧ್ಯವಾಗುವುದು ಅದರ ನೈಜ ವಿವರಗಳ ದಟ್ಟತೆಯಲ್ಲಿ ಮತ್ತು ಈ ವಿವರಗಳ ಲೋಕದಲ್ಲಿ ನಮ್ಮನ್ನು ಮಗ್ನಗೊಳಿಸಬಲ್ಲ ಕಾದಂಬರಿಕಾರನ ಪ್ರತಿಸೃಷ್ಟಿ ಶಕ್ತಿಯಲ್ಲಿ. ಇಲ್ಲವಾದರೆ ವಿಚಾರಗಳು ಎಷ್ಟೇ ಹೊಸದಾಗದ್ದರೂ ಪೊಳ್ಳಾಗಿ ಬಿಡುತ್ತವೆ. ಆದ್ದರಿಂದ ವಿಚಾರಗಳು ದೇಶಿಯವೇ ಅಥವಾ ವಿದೇಶಿಯವೇ ಎಂದು ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ.

ಸ್ವತಃ ಒಬ್ಬ ಕೃತಿಕಾರನಾಗಿ ನನ್ನನ್ನು ಬಹಳವಾಗಿ ಭಾದಿಸುತ್ತಿರುವ ಪ್ರಶ್ನೆಯೊಂದನ್ನು ಇಲ್ಲಿ ಕೇಳಬಯಸುತ್ತೇನೆ. ಒಬ್ಬ ಬರಹಗಾರನ ಆಸಕ್ತಿಯ ವಸ್ತುವಿಗೂ ಅದಕ್ಕೆ ಅವನು ಕೊಡುವ ಸಾಹಿತ್ಯಕ ಬಂಧಕ್ಕೂ ಇರುವ ಸಂಬಂಧ ಯಾವ ರೀತಿಯದು? ನಿಮ್ಮ ಆಸಕ್ತಿ ಮುಖ್ಯವಾಗಿ ಸಾಮಾಜಿಕ, ಧಾರ್ಮಿಕವೂ ಆಗಿದ್ದರೆ ನೀವು ಸೃಷ್ಟಿಸುವ ಸಂಬಂಧ ಸಡಿಲವಾಗಿರುತ್ತದೆಯೇ? ಏಕೆಂದರೆ ಸಡಿಲವಾದ ಬಂಧವನ್ನು ಸೃಷ್ಟಿಸುವ ಮುಖಾಂತರ ಕೃತಿಯ ಒಳಲೋಕಕ್ಕೂ ಹೊರಗಿನದಕ್ಕೂ ಹೆಚ್ಚು ಸಂಪರ್ಕಗಳನ್ನು ಕಲ್ಪಿಸುವುದು ಸಾಧ್ಯ. ಆದ್ದರಿಂದ ಸಾಮಾಜಿಕ ರಾಜಕೀಯ ಧೋರಣೆ ಇರುವ ಲೇಖಕರಿಗೆ ಈ ಬಂಧವೇ ಹೆಚ್ಚು ಉತ್ತಮವೇ? ಇದರ ಬದಲಾಗಿ, ನಿಮ್ಮ ಆಸಕ್ತಿ ಹೆಚ್ಚು ವೈಯಕ್ತಿಕವೋ ಅಸ್ತಿತ್ವ ಸಂಬಂಧಿಯೋ ಆಗಿದ್ದರೆ, ಕಾದಂಬರಿಯ ಒಳಗೆ ಸ್ವಯಂಪೂರ್ಣವಾದ, ಬಿಗಿಯಾಗಿ ಕಟ್ಟಿದ ಲೋಕವನ್ನು ಸೃಷ್ಟಿಸುವುದು ಹೆಚ್ಚು ಅಗತ್ಯವೇ? ಕಲಾವಿದನಾಗಿ ಯಾವುದನ್ನು ಮೆಚ್ಚುತ್ತೇನೆಂದು ಈ ಮೊದಲೇ ಹೇಳಿರುವ ನನ್ನ ಮಾತುಗಳಿಂದ ಸ್ಪಷ್ಟವಾಗಿರಬೇಕು. ಆದರೆ ಈಚಿನ ನನ್ನ ಆಸಕ್ತಿಗಳು ನನ್ನ ಧೋರಣೆಗಳನ್ನು ಹೆಚ್ಚು ಸಂದಿಗ್ಧಗೊಳಿಸಿವೆ.

ನನ್ನ ಭಾಷೆಯಲ್ಲಿ ಬರೆಯುವ ಕಾರಂತರೆಂದರೆ ನನಗೆ ಇಷ್ಟ. ಕಾರಂತರ ಪ್ರಬುದ್ಧ ಕಾದಂಬರಿಗಳು ಸ್ವಾತಂತ್ರ್ಯ ಪೂರ್ವದ ಭಾರತದಲ್ಲೇ ಸೃಷ್ಟಿಯಾದವು. ಕಾರಂತರು ದೊಡ್ಡ ವಾಸ್ತವವಾದಿಗಳು. ಪ್ರಾಮಾಣಿಕವಾಗಿ ತಮ್ಮ ಕಾದಂಬರಿಯಲ್ಲಿ ಸಮಾಜ ಮತ್ತು ಕುಟುಂಬದ ಸಂದರ್ಭದಲ್ಲಿ ವ್ಯಕ್ತಿಯ ಉಪಯುಕ್ತತೆಯನ್ನು ಹುಡುಕುವುದೇ ಇವರ ಮುಖ್ಯ ಕಾಳಜಿ ಎನ್ನಬಹುದು. ಹೆಚ್ಚಿನ ಕಾದಂಬರಿಗಳಲ್ಲಿ ಅವರು ಕೇಳುವುದು ಈ ಪ್ರಶ್ನೆಯನ್ನು: ‘ಈ ಸಮಾಜ ನಿನಗೆ ಇಷ್ಟನ್ನು ನೀಡಿದೆ. ನೀನೇನು ಬದಲಾಗಿ ಅದಕ್ಕೆ ಕೊಟ್ಟಿದ್ದೀಯಾ?’ ಅವರ ಆಸಕ್ತಿಗಳಲ್ಲಿ ನಾನಿಲ್ಲಿ ಸರಳಗೊಳ್ಳುತ್ತಿರಬಹುದು. ಆದರೆ ಅವರ ಬರವಣಿಗೆಯ ಆಳದಲ್ಲಿರುವ ಪ್ರಶ್ನೆ ಇದು. ಆದ್ದರಿಂದ ಅವರ ನೈತಿಕತೆ ಮುಖ್ಯವಾಗಿ ಧಾರ್ಮಿಕ ಮತ್ತು ಸಾಮಾಜಿಕ. ಈ ಕಾರಣದಿಂದಲೇ ಅವರ ಕಾದಂಬರಿಗಳು ಅದರ ಪರಿಮಿತ ಅರ್ಥದಲ್ಲೂ ವಾಸ್ತವಿಕ ಹಾಗೂ ರಚನೆಯಲ್ಲಿ ಸರಳ ರೇಖಾತ್ಮಕ. ತನ್ನ ಪ್ರಪಂಚದ ಧೋರಣೆ, ಅನಿಸಿಕೆಗಳನ್ನು ಹೋಲಿಸಿಕೊಳ್ಳುವ ಅವಕಾಶ ನೀಡುತ್ತಾರೆ; ಹೊರ ಪ್ರಪಂಚದೊಂದಿಗೆ ಈ ಹೊಂದಾಣಿಕೆಯನ್ನು ಸಾಧ್ಯವಾದಷ್ಟು ಸ್ಪಷ್ಟವಾಗಿ ಉಳಿಸಿಕೊಂಡಿರುತ್ತಾರೆ. ‘‘ಮರಳಿ ಮಣ್ಣಿಗೆ’’ಯತಂಹ ಅವರ ಕಾದಂಬರಿಗಳು ಒಂದು ದಟ್ಟ ಪ್ರಪಂಚವನ್ನೇ ಸೃಷ್ಟಿಸಿ ತನ್ನ ಶ್ರೀಮಂತ ವಿವರಗಳಲ್ಲಿ ಓದುಗನನ್ನು ತನ್ಮಯಗೊಳಿಸುತ್ತದೆ. ನಿಜ; ಆದರೆ ಇವು ನಮ್ಮ ನೈತಿಕ ಧೋರಣೆಗಳನ್ನು ಮೂಲಭೂತವಾಗಿ ಬದಲಿಸುವಂತಹುದಲ್ಲ. ಅವರ ಕಾದಂಬರಿಗಳು ನಮ್ಮ ಪರಂಪರಾನುಗತ ಶ್ರದ್ಧೆಗಳನ್ನು ವಿಸ್ತರಿಸುತ್ತವೆ, ಆಳವಾಗಿಸುತ್ತವೆ, ತಿದ್ದುತ್ತವೆ; ಆದರೆ ಅವುಗಳನ್ನು ಆಳವಾಗಿ ಪ್ರಶ್ನಿಸುವುದಿಲ್ಲ. ಅವರು ನಮ್ಮ ಭಾಷೆಯ ಶ್ರೇಷ್ಟ ಬರಹಗಾರರು, ನಿಜ. ಆದರೆ ಅವರ ಕೃತಿಯಿಂದ ಹೊರಬರುವಾಗ ನಮಗೆ ಇನ್ನೊಂದು ಅನನ್ಯ ಲೋಕದಿಂದ ಹಿಂತಿರುಗಿ ಬಂದ ಅನುಭವವಾಗುವುದಿಲ್ಲ.

ಕಾರಂತರ ಅನಂತರ, ಐರೋಪ್ಯ ಸಾಹಿತ್ಯದಿಂದ ಪ್ರೇರಿತರಾಗಿ ಬರೆಯುತ್ತಿರುವ ಕನ್ನಡ ನವ್ಯ ಲೇಖಕರಲ್ಲಿ ನಾವೊಂದು ಬದಲಾವಣೆಯನ್ನು ಕಾಣುತ್ತೇವೆ. ಈ ಬದಲಾವಣೆಯನ್ನು ನಾವು ಇವರು ರಚಿಸುವ ಕಾದಂಬರಿ ಆಕಾರದಲ್ಲೂ ಇವರ ಆಸಕ್ತಿಗಳಲ್ಲೂ ಕಾಣಬಹುದು. ಇವರ ಕಾದಂಬರಿಗಳಲ್ಲಿ ನಾವು ಮಗ್ನರಾಗಿರುವ ತನಕ ಕೃತಿಯ ಒಳಪ್ರಪಂಚ, ಹೊರಜಗತ್ತಿನೊಡನೆ ಸಾಂಗತ್ಯ ಹೊಂದಿದೆಯೇ ಇಲ್ಲವೇ? ಎಂಬ ಪ್ರಶ್ನೆ ನಮ್ಮನ್ನು ಭಾಧಿಸುವುದಿಲ್ಲ. ತನ್ನಲ್ಲಿಯೇ ಪರಿಪೂರ್ಣ ಜಗತ್ತನ್ನು ಪಡೆದ ಈ ಕಾದಂಬರಿಗಳು, ತಮ್ಮ ವಿಶಿಷ್ಟತೆಗೆ ತಮ್ಮಲ್ಲಿಯೇ ಸಮರ್ಥನೆ ಪಡೆದಿರುತ್ತವೆ. ಕಾರಂತರು ತಮ್ಮ ಸಡಿಲವಾದ ಬಂಧದಲ್ಲಿ ಸಾಮಾಜಿಕವಾದ, ಧಾರ್ಮಿಕವಾದ ಪ್ರಶ್ನೆಗಳನ್ನು ಕೇಳಿದರೆ, ಈ ಹೊಸ ಕಾದಂಬರಿಕಾರರು ಅಸ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ, ಇವರು ಎತ್ತುವ ಪ್ರಶ್ನೆ ನೀವು ಪರಿಶುದ್ಧರೋ ದಯಾಳುಗಳೋ ಅಥವಾ ಸಮಾಜದ ದೃಷ್ಟಿಯಲ್ಲಿ ಒಳ್ಳೆಯವರೋ, ಜನೋಪಕಾರಿಗಳೋ, ಉದಾತ್ತರೋ ಎಂಬುದಲ್ಲ; ನಿಮಗೇ ನೀವು ಅಧಿಕೃತ ವ್ಯಕ್ತಿಗಳಾಗಿದ್ದೀರೋ ಎಂಬುದು. ನೀವು ಪ್ರಾಮಾಣಿಕರಾಗಿದ್ದೀರೋ ಎಂದು ಮಾತ್ರವಲ್ಲದೆ, ನೀವು ಅಧಿಕೃತರೋ ಎಂದು ಕೇಳುವ ಈ ಬಗೆಯ ಪ್ರಶ್ನೆ, ಕಾದಂಬರಿಯ ಬಿಗಿಯಾದ ಬಂಧದಲ್ಲಿ ಮೂಡಿ ಬಂದದ್ದೇ ಆದಲ್ಲಿ, ನಮ್ಮ ನೈತಿಕ ನಿಲುವುಗಳನ್ನು ಅಂತಹ ಕೃತಿ ಬದಲಾಯಿಸಲು ಸಮರ್ಥವಾಗುತ್ತದೆ.

ಆದರೆ ಒಬ್ಬ ಲೇಖಕ ಕಲಾಕಾರನಾಗಿ ಬಿಗಿಯಾದ ಬಂಧವನ್ನು ರಚಿಸುವ ಆಸೆಯನ್ನು ಹೊಂದಿದವನಾಗಿ, ಜೊತೆಗೇ ಹೊರ ಪ್ರಪಂಚದ ಬದಲಾವಣೆಯ ಕ್ರಿಯೆಯಲ್ಲಿ ಪಾಲುಗಾರನು ಆಗಬೇಕೆಂದು ಬಯಸಿದಾಗ ಏನಾಗುತ್ತದೆ? ಅಂದರೆ, ಕೃತಿಯಲ್ಲಿ ಮನುಷ್ಯಪ್ರಜ್ಞೆಯ ಆಳವಾದ ಶೋಧದ ಬಿಗಿ ರಚನೆಯ ಜೊತೆಗೆ ಸಾಮಾಜಿಕ ಉದ್ದೇಶಪೂರ್ವಕತೆಯನ್ನು ಸಾಧಿಸುವುದು ಸಾಧ್ಯವೇ? ಇಂದಿನ ಭಾರತದ ಐತಿಹಾಸಿಕ ಸ್ಥಿತಿಯೇ ಹೀಗಿದೆ; ನಮ್ಮ ಸಾಮಾಜಿಕ ರಾಜಕೀಯ ಪ್ರಶ್ನೆಗಳು ನಮ್ಮ  ವೈಯಕ್ತಿಕ ಸಂಬಂಧಗಳಿಗಿಂತ ಹೆಚ್ಚು ಮುಖ್ಯವಾಗಿ ಕಾಣುತ್ತವೆ. ತುರ್ತುಪರಿಸ್ಥಿತಿಯ ಕಾಲದಲ್ಲಿ ನಮ್ಮಲ್ಲಿ ಹಲವರಿಗೆ ಖಾಸಗಿ ಸಮಸ್ಯೆಗಳ ಬಿಗಿಯಾದ ಬಂಧದ ಕೃತಿಗಳನ್ನು ರಚಿಸುವುದು ನಿಷ್ಪ್ರಯೋಜಕ ಎನಿಸಿರಲಿಲ್ಲವೆ? ಚರಿತ್ರೆಯ ಇಂತಹ ಕೆಲವು ಸಂದರ್ಭಗಳಲ್ಲಿ ಹೊರಗಿನ ಸಾಮಾಜಿಕ ರಾಜಕೀಯ ವಾಸ್ತವಗಳನ್ನು ನಮ್ಮ ನೈತಿಕ ಪ್ರಜ್ಞೆಯಿಂದ ದಟ್ಟವಾಗಿ ತೋರಿಸುವುದು ಅತ್ಯಂತ ಅಗತ್ಯವೆನಿಸುತ್ತದೆ. ಯಾಕೆಂದರೆ ಯಾವುದನ್ನು ಹೊರಗಿನದೆಂದು ಭಾವಿಸಿರುತ್ತೇವೋ ಅದು ನಮ್ಮ ಅತ್ಯಂತ ಆಪ್ತ ಒಳಜೀವನದ ಪ್ರಶ್ನೆಯು ಆಗಿಬಿಡಬಹುದು. ಆದರೂ ಆರ್ಟಿಗಾ ಗ್ಯಾಸೆ ನಮಗೆಚ್ಚರಿಸುವಂತೆ ಉದ್ದೇಶಪೂರ್ವಕತೆ ಕಾದಂಬರಿ  ಬಂಧವನ್ನು ನಾಶ ಮಾಡಿಬಿಡಬಹುದು. ‘ಕಾದಂಬರಿ ಪ್ರಕಾರದ ಮುಖ್ಯ ಲಕ್ಷಣವೇ ಅದರ ಸ್ವಯಂಪೂರ್ಣತೆಯಲ್ಲಿದೆ. ತಾನೊಬ್ಬ ಕಲಾಕಾರನಿಗಿಂತಲೂ ಹೆಚ್ಚಿನವನಾಗಬೇಕೆಂದು ಬಯಸುವವನ ಮೇಲೆ ಕಲೆ ಸೇಡು ತೀರಿಸಿಕೊಳ್ಳುತ್ತದೆ; ಕಲೆಯಾಗಿಯೂ ಕೃತಿ ಸೋಲುವಂತೆ ಮಾಡುತ್ತದೆ.’ (ಪು ೮೬ – ೮೭)

ಒಬ್ಬ ಬರಹಗಾರನಾಗಿ ನನ್ನ ಸಮಸ್ಯೆಯು ಕೂಡ ಇದೇ. ನಾನು ಈ ಹಿಂದೆ ಬರೆದ ಕಾದಂಬರಿ ‘ಭಾರತೀಪುರ’ದಲ್ಲಿ ಎತ್ತಿದ ರಾಜಕೀಯ ಪ್ರಶ್ನೆಗಳು, ಹೊರ ಪ್ರಪಂಚದಲ್ಲೂ ವಿವಾದಾಸ್ಪದ ಸಮಸ್ಯೆಗಳೇ ಆಗಿವೆ. ಇದರ ಪರಿಣಾಮ: ನನ್ನ ಧೋರಣೆಯನ್ನು ಒಪ್ಪುವವರು ಕಾದಂಬರಿಯನ್ನು ಇಷ್ಟಪಟ್ಟರು; ಒಪ್ಪದವರು ಕಾದಂಬರಿಯ ಬಂಧದಲ್ಲಿ, ನಾನು ಎತ್ತಿದ ಸಮಸ್ಯೆಗಳನ್ನಿಟ್ಟು ನೋಡದೆ, ತಮ್ಮ ಧೋರಣೆಗೆ ಅನುಗುಣವಾಗಿ ಈ ಸಮಸ್ಯೆಗಳನ್ನು ಚರ್ಚಿಸಿದರು. ನನ್ನ ಕೃತಿಯಲ್ಲಿ ಒಂದು ಸ್ವಯಂಪೂರ್ಣವಾದ ಜಗತ್ತನ್ನು ಸೃಷ್ಟಿಸಿ, ಅಲ್ಲಿನ ಸಮಸ್ಯೆಗಳನ್ನು ಹೊರಜಗತ್ತಿನವರೊಂದಿಗೆ ಸಮೀಕರಿಸಲು ನಾನು ಪ್ರಯತ್ನಿಸಿದ್ದೆ. ಆದರೆ ಓದುಗನನ್ನು ಮಂತ್ರಮುಗ್ಧನನ್ನಾಗಿಸಲು ಬೇಕಾದ ವಿವರಗಳ ಸಮೃದ್ಧಿ ನನ್ನ ಕೃತಿಯಲ್ಲಿರಲ್ಲಿವೋ? ಅಥವಾ ಬಿಗಿಯಾದ ಬಂಧದಲ್ಲಿ ಸಾಮಾಜಿಕ ರಾಜಕೀಯ ಅರ್ಥಪೂರ್ಣತೆಯನ್ನು ಮೂಡಿಸುವ ಪ್ರಯತ್ನವೇ ವಿಫಲವಾಗುತ್ತದೆಯೋ? – ಅಂದರೆ ವಿರುದ್ಧ ಉದ್ದೇಶಗಳ ಸೆಳೆತದಲ್ಲಿ ನಾನು ಸೋತೆನೆ?

ಗ್ಯಾಸೆ ಹೇಳುವುದು ಸಂಪೂರ್ಣ ಸರಿಯೆಂದು ನಾನು ಒಪ್ಪಿಕೊಳ್ಳಲಾರೆ. ನಮಗೆ ಗೊತ್ತಿರುವ ದೊಡ್ಡ ಲೇಖಕರೆಲ್ಲಾ ಆಳವಾದ ಉದ್ದೇಶಪೂರ್ವಕತೆಯಿಂದಲೇ ಬರೆದವರು; ತಾವು ಬರೆಯುವ ಹೊತ್ತಿನಲ್ಲಿ ಕಲೆಗೂ ಉದ್ದೇಶಬದ್ಧತೆಗೂ ಇರುವ ವಿರೋಧವನ್ನು ತಿಳಿದವರು ಆಗಿದ್ದರು. ಈ ಬಗೆಯ ಕರ್ಷಣೆಯಿಲ್ಲದೆ ದೊಡ್ಡ ಕೃತಿಗಳು ಸೃಷ್ಟಿಯಾಗುವುದಿಲ್ಲವೇನೋ?

ಒಂದು ಕೃತಿ ಉದ್ದೇಶಪೂರ್ವಕವಾಗಲೆಂದು ತನ್ನ ಕಲಾತ್ಮಕತೆಯನ್ನು ಬಲಿಕೊಡುವುದು ಅನಿವಾರ್ಯವೆಂದು ನಾನು ತಿಳಿದಿಲ್ಲ. ಆದರೂ ‘ಉದ್ದೇಶ’ ಎಂದರೆ ಏನು ಎಂಬುದರ ಬಗ್ಗೆ ಮೊದಲು ಖಚಿತವಾಗಿರಬೇಕು. ಗ್ಯಾಸೆ ಹೇಳುತ್ತಾನೆ: ‘ಕಾದಂಬರಿಯು ದಾರ್ಶನಿಕ, ರಾಜಕೀಯ, ಸಾಮಾಜಿಕ, ನೈತಿಕ ವಿಚಾರಗಳನ್ನು ಪ್ರಚಾರ ಮಾಡಲಾರದು; ಅದು ಕಾದಂಬರಿ ಮಾತ್ರ ಅದರ ಆಚೆಗೆ ಅದು ಮತ್ತೇನೂ ಅಲ್ಲ’ – (ಪು ೮೭). ಪ್ರಚಾರದ ಬಗಗೆ ಅವನು ಹೇಳಿರುವುದು ಸರಿ. ಆದರೆ ಕಾದಂಬರಿ ನಮ್ಮ ಜೀವನ – ನಮ್ಮ ಜೀವನ ಪ್ರಜ್ಞೆಯನ್ನು ವಿಸ್ತ್ರತವೂ ಆಳವೂ ಮಾಡಬಲ್ಲದು; ಹೀಗೆ ಪ್ರಜ್ಞೆ ಪರಿಷ್ಕ್ರತಗೊಳ್ಳುವುದು ಎಲ್ಲ ರಾಜಕೀಯ, ಸಾಮಾಜಿಕ ಕ್ರಿಯೆಗಳ ಪೂರ್ವಭಾವಿಯಾದ ಸಿದ್ಧತೆಯೂ ಹೌದು. ಕಾದಂಬರಿ ಎಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂಬುದರ ಬಗ್ಗೆ ಟ್ರಿಲ್ಲಿಂಗನು ಗ್ಯಾಸೆಗಿಂತ ಹೆಚ್ಚು ಅರ್ಥಪೂರ್ಣವಾಗಿ ಕೆಲವು ಮಾತಾಡಿದ್ದಾನೆ. ಕಾದಂಬರಿ ನಮ್ಮ ನೈತಿಕ ಬದುಕಿನಲ್ಲಿ ಇರಬಹುದಾದ ಅಪಾಯಗಳ ಬಗ್ಗೆ ನಮ್ಮ ದೃಷ್ಟಿಯನ್ನು ಚುರುಕುಗೊಳಿಸಬಲ್ಲದು. ‘ಈ ನೈತಿಕ ವಾಸ್ತವತೆ’ – ಹಾಗೆಂದು ಟ್ರೆಲ್ಲಿಂಗ್ ಕಾದಂಬರಿಕಾರನ ಮುಖ್ಯ ಕೆಲಸವನ್ನು ಹೆಸರಿಸಿದ್ದಾನೆ – ‘ಹಿಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಯಾಕೆಂದರೆ, ಹಿಂದೆ ಎಂದು ಯಾವ ಕಾಲದಲ್ಲೂ ಈಗಿನಷ್ಟು ಜನ ನೈತಿಕ ಋಜುತ್ವಕ್ಕೆ ತನ್ನ ಮಾರ್ಗವೇ ಸರಿ ಎಂಬ ಅಹಮ್ಮಿಗೆ ಬದ್ಧರಾದದ್ದಿಲ್ಲ’ – (The Liberal Imagination ಪು. ೨೧೩.) ನಮ್ಮ ಈ ಋಜುಧೋರಣೆಗಳ ಹಿಂದಿರುವ ತುಡಿತ ಯಾವುದೆಂದು ಹೇಳಿಕೊಳ್ಳುವುದೂ ಅತ್ಯಗತ್ಯ. ಯಾಕೆಂದರೆ ‘ಮನುಷ್ಯನ ಸ್ವಾರ್ಥಪರತೆಯಿಂದ ಹುಟ್ಟುವ ಒತ್ತಾಸೆಗಳಿಗಿಂತ ಈ ನೈತಿಕ ಅಹಮ್ಮಿನ ಒತ್ತಾಸೆಗಳು ಹೆಚ್ಚು ತಾಳರಹಿತವೂ ಛಲದಿಂದ ಕೂಡಿದ್ದವೂ ನಿರಕುಂಶವೂ ಆಗಿರುವ ಸಾಧ್ಯತೆಗಳಿವೆ.’ (ಪು.೨೧೪). ಆದ್ದರಿಂದಲೇ ಕಾದಂಬರಿ ಅದರ ಓದುಗನನ್ನು ‘ಅವನ ನೈತಿಕತೆಯ ಹಿಂದಿರುವ ಪ್ರೇರಣೆಗಳನ್ನು ಅವನೇ ಈ ಪರೀಕ್ಷೆ ಒಡ್ಡುವಂತೆ ಆಹ್ವಾನಿಸಬೇಕು.’ (ಪು. ೨೧೫). ಪ್ರಾಯಶ: ಈಗ ನಾವು ನಮ್ಮ ಸಾಮಾಜಿಕ ಕಟ್ಟುಪಾಡುಗಳಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ತರಲು ಯತ್ನಿಸುತ್ತಿದ್ದವೆ. ಪ್ರಪಂಚದ ಅಂತಹ ಬದಲಾವಣೆಗಳಿಗೆ ಸಿದ್ಧರಾಗಿ ನಿಂತಿದೆ. ಈ ಬದಲಾವಣೆಗಳು ಸಾಮಾಜಿಕವಾಗಿ ಹೆಚ್ಚು ಉದಾರಪೂರ್ಣವಾದ ಮುನ್ನೋಟದ ದಿಕ್ಕಿನಲ್ಲಿ ಆಗದಿದ್ದ ಪಕ್ಷದಲ್ಲಿ, ಅವು ಸಮಾಜದ ಹಿನ್ನಡೆಗೆ ಅನಿವಾರ್ಯ ಕಾರಣಗಳಾಗಿಬಿಡುತ್ತವೆ… ಬದಲಾವಣೆಗಳನ್ನು ಅಪೇಕ್ಷಿಸಿದರೆ ಸಾಲದು. ಅದಕ್ಕಾಗಿ ದುಡಿದರೂ ಸಾಲದು… ನಮ್ಮ ಅತ್ಯಂತ ಉದಾರವಾದ ಆಕಾಂಕ್ಷೆಗಳಲ್ಲೂ ಇರುವ ಅಪಾಯವನ್ನು ಗುರುತಿಸುವುದು ನಾವು ಕಲಿಯಬೇಕು. ನಮ್ಮ ಸ್ವಭಾವದಲ್ಲಿರುವ ಕೆಲವು ವಿಪರ್ಯಾಸಗಳು ನಮ್ಮನ್ನು ಎತ್ತ ಕೊಂಡೊಯ್ಯುತ್ತವೆಂಬುದನ್ನು ಅರಿತಿರಬೇಕು. ನಮ್ಮ ಸಹಜೀವಿಗಳು ನಮ್ಮ ಲ್ಲಿ ಪ್ರಜ್ಞಾಪೂರ್ಣ ಆಸಕ್ತಿಯ ವಸ್ತುಗಳಾಗಿರುತ್ತಾರೆ. ಆಮೇಲೆ ನಮ್ಮ ಕರುಣೆಗೆ ಕಾರಣವಾಗುತ್ತಾರೆ. ಅದಾದ ಮೇಲೆ ನಮ್ಮ ತಿಳಿವಳಿಕೆಯ ವಸ್ತುಗಳಾಗುತ್ತಾರೆ. ಕೊನೆಗೆ ನಮ್ಮ ಶೋಷಣೆಗೆ ಪಕ್ಕಾಗುತ್ತಾರೆ. ಇದು ಮನುಷ್ಯ ತಿಳಿದಿರುವ ಭ್ರಷ್ಟತೆಗಳಲ್ಲಿಯೇ ಹೆಚ್ಚು ವ್ಯಂಗ್ಯ ಮತ್ತು ದುರಂತಗಳಿಂದ ಕೂಡಿದೆ. ಈ ಭ್ರಷ್ಟತೆಯನ್ನು ತಡೆಹಿಡಿಯಲೆಂದೇ ನಮಗೆ ಕಾದಂಬರಿಯ  ನೈತಿಕ ವಾಸ್ತವಿಕತೆಯ ಅಗತ್ಯವಿರುವುದು. ನೈತಿಕ ಕಲ್ಪನೆಯ ಮುಕ್ತಕ್ರಿಯೆಯಿಂದ ಮಾತ್ರ ಇದು ಸಾಧ್ಯ (ಪು ೨೧೪ – ೨೧೫).

ನಾನು ತಿಳಿದಿರುವಂತೆ ಕಾದಂಬರಿಯ ಮುಖ್ಯ ಕೆಲಸ ಇದು – ವ್ಯಕ್ತಿಯ ಖಾಸಗಿ ವಾಸ್ತವವನ್ನು ಸಮಷ್ಟಿಯ ಜೊತೆ ತೊಡಗಿಸಬಲ್ಲಂಥ ಹೊಸ ನೈತಿಕ ಪ್ರಜ್ಞೆಯನ್ನು ಸೃಷ್ಟಿಸುವುದು. ಈ ಲೇಖಕರ ಪ್ರಾರಂಭದಲ್ಲಿ ವಿವರಿಸುವ ಲಕ್ಷಣಗಳನ್ನುಳ್ಳದ್ದಾದಾಗ ಮಾತ್ರ ಈ ಸಾಹಿತ್ಯ ಪ್ರಕಾರ, ಇಂತಹ ಕೆಲಸವನ್ನು ನಿರ್ವಹಿಸಲು ಅತ್ಯಂತ ಸಮರ್ಥವಾದ್ದು ಎನ್ನಬಹುದು.

ಇಂಡಿಯನ್  ಲಿಟ್ರೇಚರ್ (ಇಂಗ್ಲೀಷ್), ವರ್ಷ೨೧, ಸಂಚಿಕೆ:೧೯೭೮