ಅನಂತಮೂರ್ತಿ : ಕಾರಂತರೇ, ನಿಮ್ಮ ಆಸಕ್ತಿಗಳು ಹಲವಾರು. ವಿಜ್ಞಾನ, ರಾಜಕೀಯ, ಸಾಹಿತ್ಯ, ಮಕ್ಕಳ ಶಿಕ್ಷಣ, ಯಕ್ಷಗಾನ, ಚಿತ್ರಕಲೆ – ಹೀಗೆ ಹಲವಾರು ವಿಷಯಗಳಲ್ಲಿ ಆಸಕ್ತರಾದ ನಿಮ್ಮನ್ನು ಬರೀ ಸಾಹಿತ್ಯದ ಬಗ್ಗೆ ಪ್ರಶ್ನೆ ಕೇಳೋದು ಸರಿಯಲ್ಲ ಅಂತ ನನಗೆ ಅನ್ನಿಸುತ್ತೆ. ಅದೂ ಅಲ್ಲದೆ ನೀವು ಈ ಸುಮಾರು ಹದಿನೆಂಟು ತಿಂಗಳಲ್ಲಿ – ಎಮರ್ಜೆನ್ಸಿ ಕಾಲದಲ್ಲಿ – ವಹಿಸಿದ ಸಕ್ರಿಯ ಪಾತ್ರ ಎಲ್ಲರಿಗೂ ತಿಳಿದದ್ದೆ. ಈಗ ನಿಮಗೆ ನಮ್ಮ ದೇಶದ ಸ್ಥಿತಿ ಆಶಾದಾಯಕ ಅಂತ ಅನ್ನಿಸುತ್ತದೆಯೋ?

ಶಿವರಾಮ ಕಾರಂತ : ಬಂದ ಆಪತ್ತು ತೊಲಗಿತು ಅಂತ ಅನ್ನಿಸುತ್ತೆ. ಆಶಾದಾಯಕ ಆಗಬೇಕಾದ್ರೆ, ದೇಶದಲ್ಲಿ ಒಂದು ಶುಚಿಯಾದ ಸರ್ಕಾರ ಬಂದು, ಈ ದೇಶದ ಸಮಸ್ಯೆಗಳ ಬಗ್ಗೆ ಸರಿಯಾದ ಯೋಜನೆ ಮಾಡಿ, ಆ ಯೋಜನೆಗಳನ್ನು ಆ ಸರ್ಕಾರ ನಿರ್ವಹಿಸುವಂಥ ಅವಧಿಯನ್ನು ನೋಡಿದ ಮೇಲೆ ಹೇಳಬಹುದಾಗುತ್ತೇ ಹೊರತು ಅದಕ್ಕೆ ಮೊದಲು ಅಲ್ಲ. ಯಾಕಂದ್ರೆ ೧೯೪೭ರಲ್ಲಿ ಸ್ವಾತಂತ್ರ್ಯ ಬಂದಾಗ ಅದೇ ಭಾವನೆ ನನ್ನ ಮನಸ್ಸಿನಲ್ಲಿ ಇತ್ತು. ಆಶಾದಾಯಕವಾಗೇ ಇತ್ತು. ಆದರೆ ಮುಂದೆ ಕ್ರಮೇಣ ಅದು ಕುಂಟುತ್ತಾ ಬಂತು.

ಅನಂತಮೂರ್ತಿ : ಈ ಪ್ರಶ್ನೆ ಕೇಳೋದರಲ್ಲಿ ನನಗಿರೋ ಆಸಕ್ತಿ ಏನು ಅಂದ್ರೆ – ನೀವು ಕಾದಂಬರಿಕಾರರಾಗಿರೋದಕ್ಕೂ ದೇಶದಲ್ಲಿ ಪ್ರಜಾತಂತ್ರ ಅತ್ಯಂತ ಅಗತ್ಯ ಅಂತ ನಿಮಗೆ ಅನ್ನಿಸೋದಕ್ಕೂ ಏನು ಸಂಬಂಧ ಇರಬಹುದು?

ಕಾರಂತ : ನಾನು ಕಾದಂಬರಿಕಾರ ಅಂದ ಕೂಡ್ಲೇ ಒಂದು ಬೇರೆ ಜಾತಿಗೆ ಸೇರೋದಿಲ್ಲ. ಬರಹಗಾರ ಅಂತ ತಕ್ಕೊಂಡ್ರೆ ಅಗಬಹುದು. ಬರಹಗಾರ ದೇಶದಲ್ಲೇ ಬದುಕೋ ಒಬ್ಬ ವ್ಯಕ್ತಿ. ಆ ಬದುಕೇ ನನ್ನ ಅನುಭವದ ಸಾಮಗ್ರಿ ಅದರ ಮೇಲೆ ಆಗೋ ಪರಿಣಾಮ ನನ್ನ ಮೇಲೆ ಆಗುತ್ತೆ. ಅದರ ಸುಖ – ದುಃಖ, ಎಲ್ಲ ನನ್ನನ್ನು ಬಾಧಿಸುತ್ತೆ. ಆದ್ದರಿಂದ ಆ ಸುಖ – ದುಃಖಕ್ಕೆ ಸಂಬಂಧ ಪಟ್ಟ ಸಾಹಿತ್ಯವನ್ನೇ ನಾನು ಸೃಷ್ಟಿಸೋನಾದ್ದರಿಂದ ಮೂಲಭೂತವಾಗಿ ಅದಕ್ಕೇನು ಬೇಕೋ ಅದು ನನಗೂ ಬೇಕು. ಅದಕ್ಕೆ ಬಂದ ವಿಪತ್ತು ನನ್ನ ಪಾಲಿಗೂ ವಿಪತ್ತು. ನಾನು ಅದರಿಂದ ಹೊರಗುಳಿದು ಯಾವ ಸೃಷ್ಟಿಯನ್ನೂ ಮಾಡಲಿಕ್ಕೆ ಸಾಧ್ಯವಿಲ್ಲ.

ಅನಂತಮೂರ್ತಿ : ಆದರೆ ಸಾರ್, ಈಗ ನಮ್ಮಲ್ಲಿ ಚಿತ್ರಕಾರರಿದ್ದಾರೆ, ಸಂಗೀತಗಾರರಿದ್ದಾರೆ. ಈ ವರ್ಗದ ಜನ, ನಮ್ಮ ದೇಶದ ಸಾಮಾಜಿಕ, ರಾಜಕೀಯ ವಿಷಯದಲ್ಲಿ ಸಾಹಿತಿಗಳು ತೋರಿಸುವ ಕಳಕಳಿಯನ್ನು ತೋರಿಸುವುದಿಲ್ಲ. ಆದ್ದರಿಂದ ಇವರ ಕೆಲಸ ಮಾಡೋ ಮಾಧ್ಯಮಕ್ಕೂ ಮತ್ತು ಈ ಆಸಕ್ತಿಗಳು ಮುಖ್ಯ ಆಗೋದಕ್ಕೂ ಏನಾದ್ರೂ ಸಂಬಂಧ ಇದೆಯೋ? ಅಂತ ನನ್ನ ಪ್ರಶ್ನೆ.

ಕಾರಂತ : ಇಲ್ಲಿ ಸ್ವಾತಂತ್ರ್ಯಪ್ರಶ್ನೆ – ವ್ಯಕ್ತಿ ಸ್ವಾತಂತ್ರ್ಯ ಪ್ರಶ್ನೆ – ಬರುವಾಗ, ಇತರ ಮಾಧ್ಯಮಗಳಿಗೂ ಇದ್ಕೂ ಸಂಬಂಧ ಬರೋದು ಸಾಧ್ಯವಿದೆ. ಅಲ್ಲಿ ವಿಚಾರಕ್ಕೆ ಸಂಬಂಧಪಟ್ಟಂತಹ ವಿಷಯಗಳನ್ನ ನೀವು ಹೇಳೋದಿಲ್ಲ, ಭಾವನೆಗಳಿಗೆ ಸಂಬಂಧಪಟ್ಟಂತಹ ವಿಷಯಗಳನ್ನು ಮಾತ್ರ ಹೇಳ್ತೀರಿ – ಚಿತ್ರಕಲಾ ಮಾಧ್ಯಮದಲ್ಲಿ, ನೃತ್ಯ ಮಾಧ್ಯಮದಲ್ಲಿ. ಆದರೆ ಅದರಲ್ಲಿ ವಿಚಾರಕ್ಕೆ ಸಂಬಂಧಪಟ್ಟ ಸ್ವಾತಂತ್ರ್ಯ ಹೇಳಲಿಕ್ಕೆ ಬರೋದಿಲ್ವೇ ಅಂತ ಪ್ರಶ್ನೆ ಬಂದಾಗ, ಒಂದು ಸಂಪ್ರದಾಯ ಒಬ್ಬ ಚಿತ್ರಗಾರನನ್ನ ಒಂದು ಕಟ್ಟಿಗೆ ಸಳೆದ ಕಾಲದಲ್ಲಿ ಹೆಜ್ಜೆ ಹೆಜ್ಜೆಗೂ ಫ್ರಾನ್ಸ್‌ ದಲ್ಲಿ ಆ ಕಟ್ಟನ್ನು ಹರಿದು ತಾನು ತನಗೆ ಅನಿಸಿದ್ದನ್ನು ಹೇಳಬೇಕು ಎನ್ನುವಂತಹ ಸ್ವಾತಂತ್ರ್ಯದ ಪ್ರಶ್ನೆ ಬಂದಿದೆ. ಬೇರೆ ಕಡೆ ಉಳಿದವರಿಗೆ ಅದು ಜೀವನವನ್ನು ಮಿತಗೊಳಿಸುವ ಅಥವಾ ವಾಕ್ ಸ್ವಾತಂತ್ರ್ಯವನ್ನು ಕಟ್ಟಿಹಾಕುವ, ಅಪಹರಿಸುವ ಪ್ರಶ್ನೆಗಳ ರೂಪದಲ್ಲಿ ಕಾಣದಿದ್ದರೂ ಕೂಡ ತನ್ನ ಬದುಕಿನ ದೃಷ್ಟಿಯನ್ನು, ತನ್ನ ಕಲಾಮಾಧ್ಯಮದ ದೃಷ್ಟಿಯನ್ನು ಕಟ್ಟಿಹಾಕುವ ಬಂಧನವಾಗಿ ಕಾಣುತ್ತೆ. ಅದಕ್ಕೆ ಅವರೂ ಹೋರಾಡಿದ್ದಾರೆ.

ಅನಂತಮೂರ್ತಿ : ಹೌದು. ಪಿಕಾಸೋ ಉದಾಹರಣೆಗೆ….

ಕಾರಂತ : ಪಿಕಾಸೋ ಮಾತ್ರ ಅಲ್ಲ, Renaissance ಕಾಲದಿಂದ ಆದಂಥ ಎಲ್ಲಾ ವ್ಯತ್ಯಾಸಗಳೂ ಇಂಥ ಹೋರಾಟದ ಕಥೆಯೇ ಆಗಿದೆ; ಅಂದರೆ – ನಮ್ಮನೋಟವನ್ನು ಇಂದಿನ ಪರಂಪರೆಗಿಂತ ಭಿನ್ನವಾಗಿ ಹೊಂದಿಸಿಕೊಂಡು ಹೋಗತಕ್ಕಂಥ ವ್ಯಕ್ತಿಗಳಿಗೆ ಬಂದಂಥ ಅಡಚಣೆ – ಸಂಪ್ರದಾಯವನ್ನು ಮೀರಲೇಬೇಕಾದಂಥ ಅಡಚಣೆ – ಅದಕ್ಕೆ ಜನ ಕೊಡದಿದ್ದ ಮನ್ನಣೆ – ಅದನ್ನ ಧಿಕ್ಕರಿಸುವಂಥ ಬಾಳು, ಹೀಗೆ…. ವಿಚಾರವೇ ಪ್ರಧಾನವಾದಂಥ ಮಾತುಗಾರಿಕೆಯಲ್ಲಿ – ಅಂದರೆ ಬರಹದಲ್ಲಿ – ಅದಕ್ಕೆ ಸಂಬಂಧಪಟ್ಟಂತಹ ಚಾರಿತ್ರಿಕ ಹಿನ್ನೆಲೆ, ಸಾಮಾಜಿಕ ಹಿನ್ನೆಲೆ ತೋರಿಸುವಾಗ ಬೇಕಾಗುವ ಒತ್ತಡ, ಸ್ವಾತಂತ್ರ್ಯಗಳ ಅವಶ್ಯಕತೆಯಿಂದಾಗಿ ಚಿತ್ರಕ್ಕೂ ಬರಹಕ್ಕೂ ರೂಪಭೇದ ಕಾಣುತ್ತೆ – ಆಯಾಯಾ ಮಾಧ್ಯಮದ ಮಿತಿಯಿಂದಾಗಿ ಕೇವಲ ಭಾವನಾಲೋಕದ ಮಾಧ್ಯಮ ಅದಾಗಬಹುದು. ಇದು ವಿಚಾರ ಮತ್ತು ಬದುಕಿನ ಯಾವ ರೂಪವನ್ನೂ ಹಿಡಿಯತಕ್ಕಂಥ ಮಾಧ್ಯಮವಾಗುತ್ತೆ, ಒಬ್ಬ ಶಿಲ್ಪಿಗೂ ಕೂಡ… ಉದಾಹರಣೆಗೆ ಒಬ್ಬ slave – “Trearing of Bondage” – ವಸ್ತುವಾಗಿದ್ದು ಕಾಣಬಹುದು. – ರೋಡಿನ್‌ಗೆ. ಜನಸಾಮಾನ್ಯರಿಗೆ ಅದನ್ನು ನೋಡಿದ ಕೂಡಲೇ ಸಾಮಾನ್ಯ ವಿಷಯ ಅನ್ನಸಬಹುದು – ಆದರೆ ನಾವು ದೊಡ್ಡ ಬರವಣಿಗೆಯಲ್ಲಿ ಹೇಳಬಹುದಾದಷ್ಟೇ ಸ್ಪಂದನೆಯನ್ನು ಆ ಶಿಲ್ಪ, ಆ ವಿಷಯದಲ್ಲಿ ಭಾವನೆ ತಳೆದ ಒಬ್ಬ ಶಿಲ್ಪಿಗೆ, ಆ ಶಿಲ್ಪದಿಂದ ಪರಿಣಾಮಗೊಳ್ಳುವ ಮನಸ್ಸುಳ್ಳಂಥ ವ್ಯಕ್ತಿಗಳಿಗೆ ಉಂಟುಮಾಡುತ್ತೆ.

ಅನಂತಮೂರ್ತಿ : ಆದರೆ ಸಾರ್, ನಮ್ಮಲ್ಲಿ ಚಿತ್ರಕಲೆ ಮತ್ತು ಶಿಲ್ಪಕಲೆ ಹೀಗೆ – ಯುರೋಪ್‌ನಲ್ಲಿ ಆದ ಹಾಗೆ – ಹೆಚ್ಚು ವಿಷಯಗಳನ್ನು ಒಳಗೊಳ್ಳುವ ಪ್ರಯತ್ನ ಮಾಡಲಿಲ್ಲ. ಆದ್ದರಿಂದಲೇ ನಮ್ಮ ಚಿತ್ರ – ಶಿಲ್ಪಕಲಾವಿದರು ಅಲ್ಲಿನವರಂತೆ – ಸ್ವಾತಂತ್ರ್ಯದ ಅವಶ್ಯಕತೆಯ ಬಗ್ಗೆ ಅಷ್ಟು ಆಸಕ್ತರಾಗಲಿಲ್ಲ ಅಂತ ತಮ್ಮ ಅಭಿಪ್ರಾಯವೇ… ತಾವು ಹೇಳಿದ್ದರಲ್ಲಿ?

ಕಾರಂತ : ಮಾಧ್ಯಮ ಏನು ಕೆಲಸ ಮಾಡಬಲ್ಲದು ಅನ್ನುವ ವಿಚಾರದಲ್ಲಿ ನಮ್ಮಲ್ಲಿ ಹೆಚ್ಚಿನ ಯಾವ ಪ್ರಯತ್ನವೂ ಆಗಿಲ್ಲ. ನಮ್ಮದೇನಾದ್ರೂ ಪ್ರಯತ್ನ ಆಗಿದ್ರೆ ಅದು ಇಷ್ಟೇ: ನಮಗೆ ಇರತಕ್ಕಂಥ ಸಂಪ್ರದಾಯ ಕೆಲವು ಕಾಲ ಉಳಿದಿರುತ್ತೆ – ದೀರ್ಘ ಕಾಲ ಅದನ್ನು ಬೆಳೆಸಿಕೊಂಡು ಹೋಗ್ತೇವೆ – ಇನ್ನೊಂದು ಯಾವುದೋ ಜನ ಬಂದ್ರು ಅನ್ನಿ – ಅವರದನ್ನ ನೋಡಿಕೊಂಡು, ಅದಾ ಚೆಂದ ಎನ್ನಿಸಿ ಅದನ್ನ ಸೇರಿಸ್ಕೊಂಡಿರಬಹುದು. ಈಗ ನಮ್ಮ ದೇಶೀಯ ರಾಜ್‌ಪುತ್ ಚಿತ್ರಕಲೆಯ ಮೇಲೆ – ಖಿಲ್ಜಿ ಅರಸರು ಬಂದ ಮೇಲೆ –ಪರ್ಶಿಯನ್ ಚಿತ್ರಕಲೆಯ ಪ್ರಭಾವ ಬಿತ್ತು. ಅಂದರೆ ಚೆಂದ, ಪ್ರಭಾವ ನೋಡ್ಕೊಂಡು ನಾವು ಹಿಂಬಾಲಿಸಿದೆವೆಯೇ ಹೊರತು ನಮ್ಮ ಮನಸ್ಸಿನ ಭಾವನೆಗಳನ್ನು ತೋಡಿಕೊಳ್ಳುವುದಕ್ಕೆ ಈ ಒಂದು ಮಾಧ್ಯಮ ಏನು ಮಾಡಬಲ್ಲದು, ಈ ಮಾಧ್ಯಮದಲ್ಲಿ ಏನಿದೆ, ಯಾವ ಯಾವ ವಸ್ತುಗಳಿಂದ ಇದನ್ನು ತೋರಿಸಬಹುದು – ಎನ್ನುವ ಅವಶ್ಯಕತೆ ಕಂಡು, ಅದನ್ನ ಸಾಧಿಸಲು ಹೊರಟಂಥ ವ್ಯಕ್ತಿಗಳ ಸಂಖ್ಯೆ ಕಡಿಮೆ, (ಇತಿಹಾಸ ಏನೋ ಸಿಕ್ಕೋದಿಲ್ಲ) – ಪ್ರಯೋಗದ ದೃಷ್ಟಿಯಿಂದ – ಹೊರಗೆ ಆದಂಥ ಪ್ರಯೋಗಗಳನ್ನು ನೋಡುವಾಗ – ನಮ್ಮಲ್ಲಿ ಏನು ಪ್ರಯೋಗವೇ ಆಗಿಲ್ಲ ಅಂತ ಹೇಳಬಹುದಾಗುತ್ತೆ. ಒಂದು ಥರದ ಮಾಧ್ಯಮ ಬೇಸರ ಬಂತು, ಅದಕ್ಕೋಸ್ಕರ ಇನ್ನೇನೋ ಮಾಡ್ಕೊಂಡು ಹೋದೆ ಅನ್ನೋ ರೀತೀನೆ ಯಾವತ್ತೂ, ಆ ಒಂದು ಧಾರ್ಷ್ಟ್ಯ ಇಂದಿನ ಸಂಪ್ರದಾಯಕ್ಕಾಗ್ಲೀ ಮಾಧ್ಯಮದ possibilityಗಾಗ್ಲೀ ಇಲ್ಲಿ ಬೆಳೆದು ಬಂದ ಹಾಗೆ ನನಗೆ ಅನ್ನಿಸೋದಿಲ್ಲ.

ಅನಂತಮೂರ್ತಿ : ಸರ್, ನನ್ನ ದೃಷ್ಟಿಯಲ್ಲಿ ನೀವು ಯುರೋಪ್‌ನ ಈಗಿನ ಯಾವ ದೊಡ್ಡ ಲೇಖಕನಿಗೂ ಕಡಿಮೆ ಅಲ್ಲ….

ಕಾರಂತ : ಅದ್ಯಾರಿಗೆ ಗೊತ್ತು! (ನಗು)

ಅನಂತಮೂರ್ತಿ : ಅಲ್ಲದೇ ನಿಮಗೆ ಯಕ್ಷಗಾನದಲ್ಲಿ ತುಂಬ ಆಸಕ್ತಿ ಇದೆ. ಯಕ್ಷಗಾನ ಸಾಮಾನ್ಯವಾಗಿ ನಮ್ಮ ಪುರಾಣಗಳ ಕಥೆಗಳನ್ನು ಹೇಳುತ್ತ. ಕಾದಂಬರಿ ಮಾಧ್ಯಮವನ್ನು ನಿಮ್ಮ ವಿಚಾರಕ್ಕೆ, ನಿಮ್ಮ ಆಧುನಿಕ ಚಿಂತನೆಗಳಿಗೆ ಬಳಸಿಕೊಂಡಹಾಗೆ, ಈ ಯಕ್ಷಗಾನದಂಥ ಮಾಧ್ಯಮವನ್ನೂ ಬಳಸಿಕೋಬೇಕು ಅಂತ ನಿಮಗೆ ಅನ್ನಿಸಿದೆಯಾ ಸಾರ್? ಅಥವಾ ಹಳೆ ಕಥೆ, ಪುರಾಣಗಳನ್ನ ಹೇಳುವ ಮಟ್ಟಿಗೆ ಮಾತ್ರ ಅದು ಉತ್ತಮ ಮಾಧ್ಯಮ, ಹೊಸ ವಿಚಾರಗಳಿಗೆ ಉಪಯೋಗವಾಗಲಿಕ್ಕಿಲ್ಲ ಅಂತೇನಾದ್ರೂ ಅನ್ನಿಸಿದೆಯಾ ನಿಮಗೆ?

ಕಾರಂತ : ಇಲ್ಲಿ ಪ್ರಶ್ನೆ ಬರೋದು – ಒಂದು ಮಾಧ್ಯಮದಲ್ಲಿ ಏನೆಲ್ಲಾ ಸಾಧ್ಯತೆ ಇದೆ? ಉದಾಹರಣೆಗೆ – ಇದು ಕುಣಿತ. ಈ ಕುಣಿತ, ಇದರ ವೇಷಭೂಷಣ, ಇದರ ಸಂಗೀತ ಬೆಳೆದದ್ದು ಒಂದು fantasy medium ಬೆಳವಣಿಗೆಗೋಸ್ಕರ, ನಾನು ಇದೇ ಕುಣಿತವನ್ನು ಇನ್ನೊಂದಕ್ಕೆ ಉಪಯೋಗಿಸಲಾರೆನೇ? ನಾನು ಉಪಯೋಗಿಸಿ, ಪ್ರಯೋಗಿಸಿ, ನೋಡಿದ್ದೇನೆ. ಅಗ ಅದಕ್ಕೆ ಬೇಕಾಗುವ ಉಡಿಗೆ ವಾಸ್ತವಿಕವಾಗಬಹುದು. ‘ಹಗಲು ರಾತ್ರಿ’ ಅಂತ ಒಂದು dance ಮಾಡಿದ್ದೇನೆ; ‘ನದೀತರಂಗ’ ಅಂತ ಮಾಡಿದ್ದೇನೆ. ಅಲ್ಲಿ ವಿಷಯವೇ ಸಂಪೂರ್ಣವಾಗಿ ಬೇರೆ. ಅದರಿಂದ ಅದಕ್ಕೆ ಬೇಕಾದ ಆಕಾರ ಬೇರೆಯಾಗುತ್ತೆ. ಸಂಗೀತದ್ದೂ ರೂಪ ಬೇರೆಯಾಗುತ್ತೆ. ಆವಾಗ ಅದು ಯಕ್ಷಗಾನ ಆಗಲಾರದು. ಪ್ರತಿಯೊಂದು ಮಾಧ್ಯಮದ ಮೂಲಕವಾಗಿಯೂ ಯಕ್ಷಗಾನಕ್ಕೆ ಬರತಕ್ಕಂಥ ಕುಣಿತ ವೇಷಭೂಷಣ, ಸಂಗೀತ – ಈ ಮೂರರಲ್ಲಿಯೂ ‘ಆ ವಸ್ತುವಿಗೂ ಇದಕ್ಕೂ ಏನು ಸಂಬಂಧ?’ ಈ ದೃಷ್ಟಿಯಿಂದಲೇ ನಾನು ಅವನ್ನ ಉಪಯೋಗಿಸ್ತೇನೆ. ಬೆಳೆದು ಬಂದಂಥ ಒಂದು ಸಂಪ್ರದಾಯದಿಂದ ತೆಕ್ಕೊಂಡಂಥ ಮಾಧ್ಯಮ – ಯಕ್ಷಗಾನ. ಅದು ಭಾವಜೀವನಕ್ಕೆ ವಸ್ತು ಅದರಲ್ಲಿದೆ. ಅದು ಬೆಳೆದುಕೊಂಡು ಬಂದಿದೆ, ಅದನ್ನ ಹ್ಯಾಗೆ ಉಪಯೋಗಿಸಬಹುದು, ಎಷ್ಟು ಸಾಧ್ಯತೆ ಇದೆ ಅಂತ ತೋರಿಸಲಿಕ್ಕಾಗಿ ಯಾವುದೋ ಆಧುನಿಕ ಸಮಸ್ಯೆ ತೆಗೆದುಕೊಂಡೆ ಅನ್ನಿ – ಆಗ ಅದರ ಉಡಿಗೆ ತೊಡಿಗೆ ಬೇರೆಯಾಗುತ್ತೆ. ಈ ಸಂಗೀತ ಸಾಲದಾಗಬಹುದೋ ಏನೋ? ಮಾಡಲಿಕ್ಕೆ ಬರೋದಿಲ್ಲ ಅಂತ ಚೂರು ಚೂರು ಪ್ರಯತ್ನ ಮಾಡಿಯೂ ನೋಡಿದ್ದೇನೆ.

ಅನಂತಮೂರ್ತಿ : ಅಂದರೆ ಯಕ್ಷಗಾನ ಆ ದಿಕ್ಕಿನಲ್ಲೂ ಬೆಳೀಬಹುದು ಅಂತ ಅನ್ಸುತ್ತಾ ಸಾರ್ ನಿಮಗೆ?

ಕಾರಂತ : ನೃತ್ಯ ಮಾಧ್ಯಮ ಬೆಳೀಬಹುದು. ಯಕ್ಷಗಾನ – ಸಂಗೀತ ವಿಷಯದಲ್ಲಿ ಬೆಳೀಬಹುದೇ ಬೆಳೀಬಾರ್ದೆ ಅಂತ ಕೇಳಿದ್ರೆ, ಸಂಗೀತ ಪ್ರಬಂಧಕಾರನಾಗಿ musicನಲ್ಲಿ ಸೃಷ್ಟಿ ಮಾಡಲಿಕ್ಕೆ ಕಲ್ತ ಮೇಲೆ ನಾನು ಉತ್ತರಿಸಬಲ್ಲೆನೇ ಹೊರತು ಅಲ್ಲಿವರೆಗೆ ನಾನು ಏನೂ ಹೇಳಲಾರೆ. ಹಾಗೇ ಇದು ಬೆಳೆದ ಕಾಲಕ್ಕೇ ಸಾಂಪ್ರದಾಯಿಕತನಗಳಾಗಲೀ ಇನ್ನೊಂದಾಗಲೀ ಅಥವಾ ಪದ್ಯದ ರೂಪಗಳಾಗಲೀ ಇದೇ ರೀತಿ ಇರಲಾರದು.

ಅನಂತಮೂರ್ತಿ : ನಾನು ಯಾಕೆ ಈ ಪ್ರಶ್ನೆ ಕೇಳ್ತಾ ಇದ್ದೇನೆ ಅಂದ್ರೆ, ಜನರನ್ನ ಮುಟ್ಟೋ ಮಾಧ್ಯಮ ಆಗಿರೋದ್ರಿಂದ ಯಕ್ಷಗಾನ ಬೇರೆ ಬೇರೇದನ್ನ ಹೇಳಲಿಕ್ಕೆ ಸಾಧ್ಯವಾದ್ರೆ….

ಕಾರಂತ : ಜನಾನ್ನ ಮುಟ್ಟೋ ಮಾಧ್ಯಮ ಅನ್ನೋದು ವಸ್ತುವಿನ ದೃಷ್ಟಿಯಿಂದ, ಅವ್ರಿಗೆಲ್ಲ ಈ ಕಥೆ ಗೊತ್ತಿದೆ. ನಾನು ಅದನ್ನ ಮಾತಿನಿಂದ ವಿವರಿಸದೆ ಇದ್ರೂ ಗೊತ್ತಿದ್ದ ಕಥೆ ಆದದ್ರಿಂದ ಅದರಲ್ಲಿಯ ಸುಖದುಃಖಗಳ ಅನುಭವ ಅವರಿಗೆ ಇರೋದ್ರಿಂದ ಅವರು ಅದರಲ್ಲಿ ಮುಳುಗಬಲ್ರು. ವಿಷಯವೇ ಹೊಸದಾದ ಕಾಲದಲ್ಲಿ – ಉದಾಹರಣೆಗೆ ಒಂದು ಕಾಲದಲ್ಲಿ ‘ಶೀಲಭಂಗ’ ಅಂತ ಒಂದು ಕಥೆ ನೃತ್ಯ ಮಾಧ್ಯಮದಲ್ಲಿ ನಾನು ರೂಪಿಸಿದ ವಸ್ತು ಇಷ್ಟೆ: ಉಳ್ಸೂರು ಸರೋವರಕ್ಕೆ ಹೋದಾಗ ನನ್ನ ಸ್ನೇಹಿತರು ಕೆಲವರು ನೈದಿಲೆ ಹೂವುಗಳನ್ನು ತಕ್ಕೊಂಡು ಬಂದ್ರು. ನಾನೂ ಸಂತೋಷವಾಗಿ ಅದನ್ನ ನೋಡಿದಾಗ ಆ ಹೂವಿನ ಶೀಲಭಂಗವಾಯ್ತು ಅನ್ನೋ ಭಾವನೆ ಬಂತು. ಅದನ್ನು ಸಾಂಕೇತಿಕವಾಗಿ ವ್ಯಕ್ತಿಯ ಶೀಲಭಂಗ – ಒಂದು ಹುಡುಗಿಯ ಶೀಲಭಂಗ – ಅಂತ ತಿಳ್ಕೊಂಡ ಅರ್ಥದಲ್ಲಿ ಒಂದು ನೃತ್ಯ ರೂಪಿಸಿದೆ. ಅದಕ್ಕೆ ಬೇಕಾದ ಹಾಡನ್ನು ನಾನೇ ಹೇಳ್ದೆ. ಬೇಕಾದ ಕುಣಿತ ನಾನೇ ಮಾಡ್ದೆ. ಆದರೆ ಅದನ್ನ ತಿಳ್ಕೊಳ್ಲಿಕ್ಕೆ ಬೇಕಾದಂಥ ಮಾನಸಿಕ ಹಿನ್ನೆಲೆ ನನ್ನ ಜನಕ್ಕೆ ಮೊದಲು ಬೇಕಾಗುತ್ತದೆ. ನನಗೆ ಸ್ಫೂರ್ತಿಕೊಟ್ಟಂಥ ಹಿನ್ನೆಲೆ ಅವರಿಗೆ ಏನೇನೂ ಇಲ್ಲದೇ ಹೋದ ಕಾಲದಲ್ಲಿ, ನಾನು ಮಾಡಿದ ಪ್ರಯೋಗದಲ್ಲಿ ಆ ಭಿನ್ನತೆಯ ಹೆಜ್ಜೆಯಾಗಲಿ, ಇನ್ನೊಂದಾಗಲಿ (ನಾನು ಎಷ್ಟರ ಮಟ್ಟಿಗೆ ಸಾಧಿಸಿದೆ ಅಂತ –ನನಗೆ ನೆನಪಾಗೋದಿಲ್ಲ) ಅವರು ತಿಳಿದಂತೆ ಕಾಣಲಿಲ್ಲ. ಯಕ್ಷಗಾನ – ಇಲ್ಲಿ ಅವರಿಗೆ ಗೊತ್ತಿರುವ ಹಿನ್ನೆಲೆಯಿದೆ. ಯಾವುದೇ ಕಲೆ, ಆ ಮಾಧ್ಯಮದ ಪರಿಚಯವಿಲ್ಲದ ವ್ಯಕ್ತಿಯ ಮೇಲೆ ಯಾವ ಪರಿಣಾಮವನ್ನೂ ಉಂಟು ಮಾಡಲಾರದು. ಈ ದೃಷ್ಟಿಯಿಂದ ಯಕ್ಷಗಾನವೂ ಪರಿಚಯವಿಲ್ಲದ ಮಾಧ್ಯಮವಾದ್ರೆ ಅಷ್ಟೇ ಕಷ್ಟವಾಗಬಹುದು. ಅವರಿಗೆ – ಅರ್ಥ ಮಾಡಿಕೊಳ್ಲಿಕ್ಕೆ. ಆವಾಗ ನಾನು successful ಹೌದೋ ಅಲ್ವೋ ಅನ್ನೋದು ನನ್ನ ಮನಸ್ಸಿನ ಸಮಾಧಾನಕ್ಕೆ ತಿಳೀಬಹುದು, ಅಷ್ಟೇ ಹೊರತು ವಿಮರ್ಶಕ ಕೂಡ ಹೇಳಲಾರ. ಯಾಕೆಂದರೆ ವಿಮರ್ಶಕನಿಗೂ ಆ ಮಾಧ್ಯಮದ ಪರಿಚಯ ಬೇಕಾಗುತ್ತೆ.

ಅನಂತಮೂರ್ತಿ : ಇನ್ನೊಂದು ಪ್ರಶ್ನೆ ಕೇಳೋದಕ್ಕಿಂತ ಮೊದಲು ನನಗೆ ಈ ಮಾತು ಹೇಳಲೇಬೇಕು ಅನ್ನಿಸುತ್ತೆ ಸಾರ್. ನಿಮ್ಮ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಾಗಿದ್ದು, ನೀವು ‘ಪದ್ಮಭೂಷಣ’ ಬಿರುದು ಬಿಟ್ಟಾಗ. ಇದಕ್ಕೂ ನಿಮ್ಮ ಬರವಣಿಗೆಗೂ ಸಂಬಂಧ ಇದೆ ಅಂತ ನನಗೆ ಅನ್ನಿಸುತ್ತೆ. ಯಾಕೆಂದ್ರೆ ನಮ್ಮ ಲೇಖಕರೆಲ್ಲೆಲ್ಲಾ, ನಿಮ್ಮ ಪೀಳಿಗೆಯಲ್ಲಿ ನೀವು ಬಹಳ ಮುಖ್ಯವಾಗಿ, ಮನಸ್ಸಿನ ಸ್ವಾತಂತ್ರ್ಯ ಮತ್ತು ಅದನ್ನು ಶುದ್ಧವಾಗಿಟ್ಟುಕೊಳ್ಳೋದು, ನಿಮಗೆ ಅನ್ನಿಸದೇ ಇರೋದನ್ನ ಹೇಳದೇ ಇರೋದು, ಪ್ರಾಮಾಣಿಕವಾಗಿರೋದು ನಿಮ್ಮ ಬರವಣಿಗೆಗೆ ಅತ್ಯಂತ ಅಗತ್ಯ ಅನ್ನೋ ಹಾಗೆ ನೀವು ನಡ್ಕೊಂಡು ಬಂದಿದ್ದೀರಿ.

ಕಾರಂತ : ನಾನು ಬಿರುದನ್ನು ಬಿಟ್ಟದ್ದು ಒಂದು ಬಹಳ ದೊಡ್ಡ ವಿಷಯ ಅಂತ ನನಗೆ ಅನ್ನಿಸೋದಿಲ್ಲ. ಯಾಕೆಂದ್ರೆ ನಾನು ಶಾಲೆ ಬಿಟ್ಟುಕೊಂಡು ಹೋದದ್ದೇ ಈ ದೇಶದ ಪ್ರಶ್ನೆಯ ಮೇಲೆ. ನನ್ನ ತಂದೆ – ತಾಯಿಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೊರಟುಹೋದೆ. ಆಮೇಲೆ ನನ್ನ ಬದುಕಿನಲ್ಲಿ ಸಾಂಪ್ರದಾಯಿಕ ನಂಬಿಕೆಗಳನ್ನು ಮರೆಯಲಿಕ್ಕೆ ಕಾಲ ಬಂತು – ಇನ್ನೊಬ್ಬರ ಪ್ರೇರಣೆಯಿಂದ – ಗಾಂಧೀಜಿ ಪ್ರೇರಣೆಯಿಂದ. ಮುಂದೆ ಅವರು ಹೇಳಿದ ನಂಬಿಕೆಗಳನ್ನೇ ಕಣ್ಣುಮುಚ್ಚಿ ನಂಬಿಕೊಂಡು ಕೂತಾಗ, ನನ್ನ ಜೀವನದಲ್ಲಿ, ತಿಳುವಳಿಕೆಯಲ್ಲಿ, ಅನುಭವದಲ್ಲಿ ಅವು ಸಮ್ಮತವಲ್ಲ ಅಂತ ಕಂಡುಬಂದವು. ಆವಾಗಿನಿಂದ ನಾನು ನನ್ನ ಸ್ವತಂತ್ರ ವಿಚಾರ ಶಕ್ತಿಯನ್ನೇ ಬೆಳೆಸಿಕೋತಾ ಬಂದಿದ್ದೇನೆ. ಸ್ವಾತಂತ್ರ್ಯದ ಪ್ರಶ್ನೆ ಬಂದ ಕಾಲದಲ್ಲಿ ಈ ಆಪತ್ತು ಮೂವತ್ತು ವರ್ಷಗಳ ಮೇಲೆ ಮರುಕಳಿಸುವ ಪ್ರಸಂಗದಲ್ಲಿ –ನನಗೆ ಬದುಕು, ಆ ಒಂದು ಮೌಲ್ಯ ಏನಿದೆ, ಏನಿರಲಾರದು ಅಂತ ಅನ್ನಿಸಿತು. ಆದರೆ ನೇರವಾಗಿ ನಾನು ಇಂಥಾದ್ದು ಯಾವುದಕ್ಕಾದ್ರೂ ಧುಮುಕಬಲ್ಲೆನೇ ಅಂತ ಕೇಳಿದ್ರೆ ನನ್ನ ಇತಿ – ಮಿತಿ ನನಗೆ ಗೊತ್ತಿದೆ. ನನ್ನ ಪ್ರಶ್ನೆ ಆವಾಗ ಉಳಿದದ್ದು – ನನ್ನ ಆತ್ಮಸಾಕ್ಷಿಗೂ ಒಂದು ತಣಿವು ಕೊಡುವಂಥಾದ್ದು ನಾನು ಮಾಡಬೇಕು. ಆ ತೃಪ್ತಿಗೋಸ್ಕರ ಹಾಗೆ ಮಾಡ್ದೆ. ಅದೊಂದು ಮಹಾ ಕೆಲಸ ಅಂತ ಅನ್ನಿಸಲೇ ಇಲ್ಲ ನನಗೆ. ಯಾಕೆಂದ್ರೆ ನನಗೆ ಯಾವುದು ನ್ಯಾಯ ಅಂತ ಕಾಣುತ್ತೋ ಅದು ಮಾಡತಕ್ಕದ್ದು. ಆದಷ್ಟು ಮಟ್ಟಿಗೆ ನನ್ನ ಬದುಕಿನಲ್ಲಿ ಪ್ರಾಮಾಣಿಕವಾಗಿ ಬದುಕಬೇಕು ಅಂತ ಎಲ್ಲ ವಿಚಾರದಲ್ಲಿಯೂ ಪ್ರಯತ್ನ ಮಾಡ್ತಾ ಬಂದಿದ್ರಿಂದ. ಇದೂ ಒಂದು ಅದರ ಸಾಲಿಗೆ ವಿಷಯವಾಯ್ತು ಅಷ್ಟೇ.

ಅನಂತಮೂರ್ತಿ : ಬರಹಗಾರರಾಗಿ ನಿಮಗೆ, ಒಬ್ಬ ಲೇಖಕ ಅಪ್ರಾಮಾಣಿಕವಾಗಿದ್ದೂ ಪ್ರಾಮಾಣಿಕವಾದ ಬರವಣಿಗೆ ಬರೀಲಿಕ್ಕೆ ಸಾಧ್ಯ ಅಂತ ಅನ್ಸುತ್ತಾ ಸಾರ್? ನಿಮಗೆ ಅನ್ಸೋದಿಲ್ಲ ಅಂತ ನನಗೆ ಅನ್ನಿಸುತ್ತೆ.

ಕಾರಂತ : ನಾನು ಯಾರಿಗೋಸ್ಕರ ಹೇಳ್ತಿದೇನೆ ಅಂತ ಪ್ರಶ್ನೆ ನನಗೆ ಬರೋದು. ನಾನು ಇನ್ನೊಬ್ಬರಿಗೆ ಹೇಳ್ತಾ ಇದ್ದೇನೆ ಅಂತಾದ್ರೆ ನಾನು ತಯಾರಿಲ್ಲದಂಥ ಯಾವ ಉಪದೇಶವನ್ನೂ ಇನ್ನೊಬ್ಬರಿಗೆ ಹೇಳಲಿಕ್ಕೆ ನಾನು ತಯಾರಿಲ್ಲ. ನಾನು ಒಂದು ಸಂಗತಿಯಲ್ಲಿ ಅಪ್ರಮಾಣಿಕನಾದ್ರೆ ಬಾಯ್ಮುಚ್ಚಿಕೊಂಡು ಕೂತ್ಕೋಬೇಕು. ನನಗೆ ಹೇಳುವ ಅಧಿಕಾರ ಇಲ್ಲ. ಈ ದೃಷ್ಟಿ ನಂದು. … ಇಲ್ಲಿ ಇನ್ನೊಂದು ದೃಷ್ಟಿಯನ್ನೂ ನಾನು ಹೇಳಬೇಕಾಗುತ್ತೆ. ಸಾಹಿತಿಯಾದ ನಾನು ನನ್ನ ಕಣ್ಣಿಂದ ಜಗತ್ತು ನೋಡ್ತೇನೆ, ಬರೀತೇನೆ, ಇದು ಒಂದು ತರಹದ್ದು, ಎರಡ್ನೇದು – ನನ್ನ ಪ್ರಯತ್ನದಲ್ಲಿ ನನಗಿಂತ ಭಿನ್ನಭಾವದ ಜೀವಿಗಳಾಗಿದ್ದಾರೆ, ಬದುಕ್ತಾರೆ, objective ಆಗಿ ಅವರನ್ನ ನೋಡಲಿಕ್ಕೆ ಪ್ರಯತ್ನ ಮಾಡ್ತೇನೆ. ಆಗ ನನ್ನ ಸ್ವಂತ ಬದುಕಿನಲ್ಲಿ ಒಪ್ಪದ ಅನೇಕ ವಿಚಾರಗಳನ್ನ ನಾನು ಅವರಲ್ಲಿ ಕಂಡೂ ಮೆಚ್ಚಬಲ್ಲೆ, ಅವರು ಪ್ರಾಮಾಣಿಕವಾಗಿದ್ದಾರೆ ಅನ್ನೋದ್ರಿಂದ. ಹಾಗಾಗಿ ಎಷ್ಟೋ ಸಾರಿ ಮುದುಕಿಯರನ್ನು ನಾನು ಕಾದಂಬರಿಯಲ್ಲಿ ತಕ್ಕೊಂಡು ಬರ್ತೇನೆ, ನನ್ನ ನಂಬಿಕೆಗಳು ಯಾವುವೂ ಅವರವಲ್ಲ. ಅವರನ್ನ ಅವರ ನಿಷ್ಠೆ ತೆಗೆದುಕೊಂಡು ಹೋಗ್ತಾ ಇದೆ. ಇದೇ ನನಗೆ ಚೆಲುವು, ನನಗೆ ಆ ನಿಷ್ಠೆ ಇಲ್ಲದೇ ಇರಬಹುದು – ಈ ದೃಷ್ಟಿ objectivity ನನ್ನದು. expressionಗೆ ತೀವ್ರತೆ ಕೊಡಬೇಕಾದ್ರೆ, ಭಾವಾವೇಶ ಕೊಡಬೇಕಾದ್ರೆ, ಅದು ಒತ್ತಡವಾಗಿ ಹರೀಬೇಕಾದ್ರೆ, sincerity ಬೇಕೇಬೇಕಾಗುತ್ತೆ ಅಂತ ನನಗೆ ಅನ್ನಿಸುತ್ತೆ.

ಅನಂತಮೂರ್ತಿ : ನನ್ನ ಮೊದಲನೆ ಪ್ರಶ್ನೆಗೆ ಇದು ಇನ್ನಷ್ಟು ಖಚಿತವಾದ ಉತ್ತರವಾಯ್ತು. ಇಲ್ಲಿ ನೀವು ಇದನ್ನು ಹೇಳುವಾಗ ನನಗೊಂದು ಅನ್ನಿಸುತ್ತೆ ಕಾರಂತರೆ; ನಮ್ಮ ಲೇಖಕರೆಲ್ಲೆಲ್ಲಾ ನಿಮಗೆ ಒಂದು delined readership ಇದೆ ಅಂತ. ಅಂದರೆ ನಿಮ್ಮನ್ನ ಓದೋ ಒಂದಷ್ಟು ಜನ ಇದ್ದಾರೆ. ಅವರು ಎಲ್ಲಾ ವರ್ಗದಲ್ಲಿ ಇದ್ದಾರೆ, ಬಹುಶಃ ಕರ್ನಾಟಕದ ಎಲ್ಲಾ ಕಡೆ ಇದ್ದಾರೆ. ಅವ್ರು ನಮ್ಮಿಂದ ಏನನ್ನೋ ಅಪೇಕ್ಷಿಸುತ್ತಾರೆ ಮತ್ತು ಅವರ ಅಪೇಕ್ಷೆಯ ಮಟ್ಟವನ್ನು ನಿಮ್ಮ ಕೃತಿಗಳು ಏರಿಸ್ತಾನೂ ಹೋಗಿವೆ. ನಿಮಗೆ ಇರೋದು mass readership ಅಲ್ಲ – ಆದರೆ ಒಂದು defined readership ಅಂತ, ಅದಕ್ಕೂ ನಿಮ್ಮ ಬರವಣಿಗೆಯ ಕ್ರಮಕ್ಕೂ ಸಂಬಂಧ ಇದೆಯಾ?

ಕಾರಂತ : Defined reader ಅಂತ, ಅವರಿಗೂ ನನಗೂ ಸಂಬಂಧ ಬೇಕಾದ್ರೆ ಆ ಆಸಾಮಿಗಳು ಯಾರು ಅಂತ ನನಗೆ ಗೊತ್ತಿರಬೇಕು. ಪುಸ್ತಕ ಖರ್ಚಾಗುವ ಸಂಖ್ಯೆಯಲ್ಲಿ, ಕೆಲವರು ಎಲ್ಲಿಯಾದ್ರೂ ಅಪರೂಪಕ್ಕೆ ಹೊಗಳಿ ಬರೆದ ಕಾಗದದಲ್ಲಿ, ಇದ್ದಾರೆ ಅಂತ ನಾನು ಊಹಿಸಬೇಕಾಗುತ್ತದೆಯೇ ಹೊರತು, ಎಲ್ಲೀವರೆಗೆ ಆ ವ್ಯಕ್ತಿಗಳು ಯಾರು ಅಂತ ನನಗೆ ಗೊತ್ತಿಲ್ಲವೋ ಅಲ್ಲೀವರೆಗೆ ನಾನು cater ಮಾಡಲಿಕ್ಕೆ ಸಾಧ್ಯವಿದೆಯೋ?

ಅನಂತಮೂರ್ತಿ : ಅಂದ್ರೆ ಅಷ್ಟು ಸ್ಪಷ್ಟವಾಗಿ ಗೊತ್ತಿರಬೇಕು ಅಂತಲ್ಲ ಸಾರ್ ನಾನು ಹೇಳೋದು. ಯಾವ seriousnessನಲ್ಲಿ ಓದೋ ಒಂದು ವರ್ಗ ನಿಮಗಿದೆ ಅಂತ ನಿಮಗೆ ಗೊತ್ತು, ಅಂದರೆ ನಿಮಗೂ ಅವರಿಗೂ ನಡುವೆ ಒಂದು common ground ಇದೆ ಅಂತ…

ಕಾರಂತ : ಆ seriousness ಇದ್ದಾತನಿಗೆ ಮೆಚ್ಚಿಗೆಯಾಗಬಹುದು. ಅಲ್ಲಿಯೂ ಕೂಡ ಕೆಲವು ಬಾರಿ ಪರಿಚಿತವಾದ ಒಬ್ಬರು – ಇಬ್ಬರು ಸ್ನೇಹಿತರು ಸಿಗ್ತಾರೆ, ಈಗ ನಾನು ‘ಮೂಕಜ್ಜಿಯ ಕನಸುಗಳು’ ಬರ್ದಿದ್ದೇನೆ. ನನ್ನ ಸ್ನೇಹಿತ್ರು (ಹೆಸರು ಅಸ್ಪಷ್ಟ) ಹತ್ತಿರ ಕಳಿಸ್ಕೊಡ್ತೇನೆ. ಆಗ ಅವರು ಒಂದೊಂದು ಸಾರಿ ‘ಹೀಗಲ್ಲಪ್ಪಾ, ಅಯ್ಯೋ.. ಅಯ್ಯೋ… ಹೀಗೆ ಬರೆದುಬಿಟ್ಟಿದ್ದೀರಲ್ಲ’ ಅಂತ ನನ್ನ ಹತ್ತಿರ ಗೊಣಗಿದ್ದೂ ಇದೆ. ಆದದ್ರಿಂದ ಅವರೂ ಕೂಡ ಕೆಲವೊಮ್ಮೆ upset ಆಗ್ತಾರೆ. ಅಂದ್ರೆ ಬೇರೆ ಬೇರೆ ವಿಷಯಕ್ಕೆ ಸಂಬಂಧಪಟ್ಟು ಬರೆಯುವಾಗ, ಅದರಲ್ಲಿಯೂ ಲೈಂಗಿಕ ಪ್ರಶ್ನೆಗಳಿಗೆ ಸಂಬಂಧಪಟ್ಟ ಹಾಗೆ ಅಥವಾ ಮತೀಯ ಭಾವನೆಗಳಿಗೆ ಸಂಬಂಧಪಟ್ಟ ಹಾಗೆ, ಕೆಲವು ಸಾರಿ ಅವರು ಆರಾಧಿಸುವ ದೇವತೆಗಳನ್ನು ನಾನು ಸುಲಭದಲ್ಲಿ ತಳ್ಳಿ ಕೆಳಗೆ ಒತ್ತಿಹಾಕುವಂತಹ ಸಂದರ್ಭ ಬಂದ ಕೂಡಲೇ, ಅವರೂ ಕಷ್ಟಕ್ಕೆ ಗುರಿಯಾಗುತ್ತಾರೆ. ಆದರೆ ಒಟ್ಟಿಗೆ ಅವರು ನನ್ನ ಮೇಲೆ ಇರಿಸಿಕೊಂಡ ಪ್ರೀತಿಯಿಂದ ‘ಈತ ಉದ್ದೇಶದಿಂದ ಹೀಗೆ ಮಾಡತಕ್ಕದ್ದಲ್ಲ, ಇವನ ಮನಸ್ಸಿನ ಅನ್ನಿಸಿಕೆಗಳ ದೆಸೆಯಿಂದ ಹಾಗೆ ಮಾಡ್ತಾನೆ’ ಅಂತ ರಿಯಾಯಿತಿ ತೋರಿಸಿದ್ದಾರೆ, ಅಷ್ಟೇ (ನಗು)

ಅನಂತಮೂರ್ತಿ : ಆದರೆ ಈ ಲೈಂಗಿಕ ಪ್ರಶ್ನೆಗಳು ಅಂತ ಅಂದ್ರಲ್ಲ ಸಾರ್, ನಿಮ್ಮ ‘ಸರಸಮ್ಮನ ಸಮಾಧಿ’ಯಲ್ಲೇ, ಆ ಬಗ್ಗೆ ನಿಮ್ಮ ಆಸಕ್ತಿ ಪ್ರಾರಂಭ ಆಗ್ತದೆ. ಆಗಿನ ಕಾಲದಲ್ಲಿ ‘ಸರಸಮ್ಮನ ಸಮಾಧಿ’ ಬರೆದಾಗ ಬಹಳ ಜನರಿಗೆ ಶಾಕಾಗಿರಬಹುದು, ನಿಮ್ಮನ್ನು ಓದುವಂಥವ್ರಿಗೆ.

ಕಾರಂತ : ಆ ಬಗ್ಗೆ ಯಾರೂ ಹೆಚ್ಚು ಪ್ರಶ್ನೆ ನನ್ನನ್ನೆ contact ಮಾಡಿ ಕೇಳಿದವರಿಲ್ಲ, ಅದನ್ನ ಬರೆದ ಕಾಲದಲ್ಲಿ. ಆದರೆ ನನಗೆ morality – amorality ಈ ಒಂದು ಪ್ರಶ್ನೆ ಉದ್ದಕ್ಕೂ ಕಾಡ್ತಿದ್ದ ವಿಷಯ. ಇದರ ಬಗ್ಗೆ ನನ್ನ ದೇಶದಲ್ಲಿ ಏನು evidence ಇದೆ, ಮ್ಯಾಲಿನೋಸ್ಕಿ, ಹ್ಯಾವ್‌ಲಾಕ್ ಎಲ್ಲಿಸ್…. ಇವರ ಹಾಗೆ ಏನೆಲ್ಲಾ ತಕ್ಕೊಂಡಿದ್ದಾರೆ ಎನ್ನೋದು – ಇದು ನನಗೆ ಆಮೇಲೆ ಬಂದಂಥ ಭಾವನೆ. ಅದು ಬಂದ ಮೇಲೆ, Studies in animal life behaviour… ಇದಕ್ಕೆ ಸಂಬಂಧಪಟ್ಟದ್ದನ್ನ ನೋಡ್ದೆ – ಇದನ್ನೆಲ್ಲಾ ತಕ್ಕೊಂಡ ಕಾಲಕ್ಕೆ ಸಾಮಾನ್ಯವಾಗಿ ನಾನು ಮನುಷ್ಯ ಒಂದು ಪ್ರಾಣಿ ಎನ್ನುವ ದೃಷ್ಟಿಯಿಂದ ತಕ್ಕೊಂಡು ನೋಡಲಿಕ್ಕೆ ಶುರುಮಾಡಿದೆ. Cultural bounds ಬಿಟ್ಟು ನಾನು ಯೋಚನೆ ಮಾಡಲಿಕ್ಕೆ ತೊಡಗಿದೆ. ಆದರೆ ಮನುಷ್ಯ more developed ಬುದ್ಧಿಜೀವಿ, ಮನೋದೇಹಿ ಅನ್ನೋ ದೃಷ್ಟಿಯಲ್ಲಿ ಆಮೇಲೆ ಈ ವಿಷಯ ತಕ್ಕೊಂಡೆ. Finally ನಾನು ನನಗೆ ತೋಚಿದಂಥ ಉತ್ತರವನ್ನು ಆ ಸಮಸ್ಯೆಯನ್ನ ಯಾರ ಚಪಲಕ್ಕೂ ಅಲ್ಲದೇ ನನಗೆ ತೋಚಿದ ದೃಷ್ಟಿಯಿಂದ – ಸಂಪೂರ್ಣವಾಗಿ ‘ಮೈ – ಮನಗಳ ಸುಳಿಯಲ್ಲಿ’ ನಾನು ಬರೆದೆ, ಇದೂ ಕೂಡ ಹದಿನೈದು – ಇಪ್ಪತ್ತು ವರ್ಷಗಳ ಅನಂತರ, ನನ್ನ ಖಚಿತ ಅಭಿಪ್ರಾಯ ಮೊದಲೇ ಬೆಳೆದಿದ್ರೂ ಕೂಡ, ಇದನ್ನು ಅಗಕ್ಕೆ ಸಮಸ್ಯೆಯಾಗಿ ನಾನು ತಕ್ಕೊಳ್ಬಾರದು, ಇದು ಜೀವನವನ್ನು ಕುಲುಕಾಡುವಂಥ ಒಂದು ಗಂಭೀರವಾದ ಸಮಸ್ಯೆ, ಏನನ್ನು ಹೇಳಬೇಕಾದ್ರೂ ತೂಕದಿಂದ ನಾನು ಹೇಳಬೇಕು ಅನ್ನುವ ಜವಾಬ್ದಾರಿ ಹೊತ್ತು ಬರೆದ ಬರವಣಿಗೆ. ಅದು ಅನೇಕರ ಮೇಲೆ ಒಳ್ಳೆ ಪರಿಣಾಮ ಬೀರಿದೆಯೋ ಅಥವಾ ಅನೇಕರ ಒಪ್ಪಿಗೆಯನ್ನು ಪಡೆದಿದೆಯೋ ಅಂತ ನಾನು ಅಷ್ಟು ಮಾತ್ರ ಕೇಳ್ತೇನೆ. ಆದ್ರೆ ಈ ತೀರ್ಮಾನಕ್ಕೆ ಅವರು ಸಿದ್ಧವೋ ಇಲ್ಲವೋ ಆ ದೃಷ್ಟಿಯನ್ನು ಅವರು ಬೆಳೆಸಿಕೊಳ್ಳಬಲ್ಲರೋ ಅದು ಬೇರೆ.

ಅನಂತಮೂರ್ತಿ : ನಿಮಗೆ ಬರೆಯುವಾಗ ನಿಮ್ಮ ಓದುಗರ ಭ್ರಮೆಗಳನ್ನು ಹರೀಬೇಕು ಅನ್ನೋದು ಬಹಳ ಮುಖ್ಯವಾಗಿ ಕೆಲಸ ಮಾಡುತ್ತಾ ಸಾರ್?

ಕಾರಂತ : ಇದು ಇಲ್ಲವೇ ಇಲ್ಲ. ಇದು ಇದ್ದ ಕಾಲ ಒಂದಿತ್ತು. ಆರಂಭದಲ್ಲಿ ನಾವು social reformerನ attitude ತೆಕ್ಕೊಂಡಾಗ, ನಮ್ಮದೂ gross ನಂಬಿಕೆ. ಅದನ್ನೇ ಧ್ವಂಸ ಮಾಡಲಿಕ್ಕೆ ಹೊರಟಿದ್ದು. ಅದಕ್ಕಾಗಿ ಭ್ರಮೆ ಹರೀತಕ್ಕಂಥ ಒಂದು technique. ಇದನ್ನ ನಾನು ವ್ಯಂಗ್ಯ ಸಾಹಿತ್ಯದಲ್ಲೇ ಮುಗಿಸ್ಕೊಂಬಿಟ್ಟಿದ್ದೇನೆ. ‘ಗ್ನಾನಾ’ ಆಗ್ಲಿ, ‘ದೇವದೂತರು’ ಆಗ್ಲಿ ಅಲ್ಲಿನ aim – destruction…. not this, not this. ಅದಾದ ಮೇಲೆ ನನ್ನ ಬದುಕನ್ನ ಕಾಡತೊಡಗಿದ್ದು not this ಅಂತ ನನಗೆ ಒಪ್ಪದ ವಿಚಾರಗಳು ಯಾವುವು, ಅವಕ್ಕೆ ಹಾಗಾದರೆ positive ಇದೆಯೇ? ಇದನ್ನ ನಾನು ಮುಂದಿನ ಎಷ್ಟೋ ಕಾದಂಬರಿಗಳನ್ನು ಬರೆಯುವಾಗ ಇನ್ನೊಂದು more standing value, ಮತ್ತಷ್ಟು ಬದುಕಿಗೆ ಸೊಗಸು ಕೊಡಬಹುದಾದಂಥ ಇನ್ನೊಂದು ಮೌಲ್ಯ ಇದೆಯೆ – ಅಂತ ಜೊತೆ ಜೊತೆಯಲ್ಲೇ ತೋರಿಸಲಿಕ್ಕೆ ಒದ್ದಾಡ್ತಾ ಬಂದಿದ್ದೇನೆ. ಯಾಕೆಂದ್ರೆ destroy ಮಾಡಲಿಕ್ಕೆ ಏನೂ ಕಷ್ಟ ಇಲ್ಲ. ಇನ್ನೊಬ್ಬನ opinion ನಿರಾಕರಿಸ್ಲಿಕ್ಕೆ ಕಷ್ಟ ಇಲ್ಲ. ಆದರೆ ಅದರ ಸ್ಥಾನದಲ್ಲಿ ಏನಿದೆ? ಹಾಗಾದರೆ ಎಲ್ಲವು destructible ಆದ್ರೆ ಬದುಕಬೇಕಾದ ಪ್ರಶ್ನೆಯೇ ಇಲ್ಲ. ನಾವು ಯಾಕೆ ಬದುಕ್ಲಿಕ್ಕೆ ಹಿಡೀತೇವೆ? ಯಾವುದೋ ಒಂದು ವಿಶ್ವಾಸ ಇದೆ – ಏನೋ ಒಂದು ಸೌಂದರ್ಯ ಇದೆ – ಯಾವುದೋ ಒಂದು ಇದೆ – ಅಂತ ವಿಶ್ವಾಸದಿಂದ ಬದುಕು persist ಮಾಡಬೇಕಾದರೆ, ಆ value ಯಾವುದು ಅಂತ ಅದನ್ನು ಗುರುತಿಸಿಕೊಂಡು ಜೊತೆಯಲ್ಲೇ ಇಟ್ಟುಕೊಂಡು ಹೋಗ್ತೇನೆ ನಾನು.

ಅನಂತಮೂರ್ತಿ : ಇಷ್ಟು ಸಹಾನುಭೂತಿ ನಿಮ್ಮೆಲ್ಲ ಕಾದಂಬರಿಗಳಲ್ಲೂ ಕಾಣುತ್ತೆ, ಆದರೆ ಸನ್ಯಾಸಿಗಳ ವಿಷಯ ಬಂದಾಗ ಮಟ್ಟಿಗೆ ನೀವು ಅಂಥ ಸಹಾನುಭೂತಿಯನ್ನು ತೋರಿದ್ದೇ ಇಲ್ಲ. ಇದಕ್ಕೇನಾದ್ರೂ ಕಾರಣ ಇರಬಹುದೋ?

ಕಾರಂತ : ಅದರಲ್ಲಿಯೂ ಕೂಡ, ಒಂದೆರಡು ಕಾದಂಬರಿ ತಕ್ಕೊಂಡಾಗ ನಿಮಗೆ ಸಹಾನುಭೂತಿ ಇದೆ. ‘ಸನ್ಯಾಸಿಯ ಬದುಕು’ – ಅಲ್ಲೇ ಆರಂಭದಲ್ಲಿ ಹೊರಟ ಸನ್ಯಾಸಿಯ ಬಗ್ಗೆ ನನಗೆ ಸಹಾನುಭೂತಿ ಇದೆ. ಯಾಕೆಂದ್ರೆ ಅವನ ಆರಂಭದ ಅನ್ವೇಷಣೆ ಪ್ರಾಮಾಣಿಕವಾಗಿಯೇ ಇತ್ತು. ನನ್ನ ನಂಬಿಕೆಯಿಂದಲ್ಲ. ನನ್ನ ಆ ಸನ್ಯಾಸಕ್ಕೆ ಸಂಬಂಧಪಟ್ಟ ಅನುಭವ – ರಾಮಕೃಷ್ಣ ಪರಮಹಂಸರನ್ನು ಓದಿದ್ದರಿಂದ, ನನ್ನ ಸ್ವಂತ ಪ್ರಯತ್ನದಿಂದ ಉತ್ಪನ್ನವಾದದ್ದು. ಆಮೇಲೆ ನಾನು ಎಲ್ಲೆಲ್ಲಿ ಈ ಆಸಾಮಿಗಳನ್ನು ಕಂಡಿದ್ದೇನೋ – ನಾನು ಬದುಕಿನಿಂದ ಹೆಕ್ಕಿದವ, ಊಹೆಯಿಂದಲ್ಲ – ಅಪ್ರಮಾಣಿಕ ವರ್ಗವೇ ನನಗೆ ಕಂಡು ಬಂದದ್ದು ಸನ್ಯಾಸಿ ಆಗಿರಲಿ, ಆಗಿಲ್ದೆಯೂ ಇರಲಿ, ಈಗ ನಾನು ಪ್ರಾಮಾಣಿಕವಾಗಿ ಹೇಳಬಹುದಾದ್ರೆ ಒಬ್ಬನೇ ವ್ಯಕ್ತಿಯನ್ನು ನಾನು ಕಂಡಿದ್ದೇನೆ ಸಾಧು ವಾಸ್ವಾನಿ. ಆತ mystic. ಅಲ್ಲಿ, ಆತನ ಬದುಕಿನಲ್ಲಿ ಪ್ರೇಮ ಮೂರ್ತಿಮತ್ತಾಗಿ ಇದೆ ಅಂತ ನಾನು ಗುರ್ತಿಸಿ ಸಂತೋಷಪಟ್ಟೆ. ಅಂಥ ವ್ಯಕ್ತಿ ಆತ. ಆದರೆ ಇದರಿಂದ ಬರತಕ್ಕಂಥ ಜನಾದರಕ್ಕೆ ಮರುಳಾಗಿ, ಅದನ್ನೇ ಒಂದು ವಂಚನೆಯ ಸಾಧನೆಯಾಗಿ ಅಡ್ಡಹಾದಿಗಿಳಿದವರೂ ಹಾಗೆಯೇ ಇದ್ದಾರೆ. ಅದು ಸನ್ಯಾಸಕ್ಕೆ ಮಾತ್ರ ಇಲ್ಲ. ಇವತ್ತು ರಾಜಕೀಯದಲ್ಲೂ ಹಾಗೆ. ದೇಶ ಉದ್ಧಾರಕ್ಕೆ ಅಂತ ಹೊರಟಿರುತ್ತಾರೆ. ಅದರಿಂದ ಅವರು ಮೇಲಕ್ಕೆ ಏರತಕ್ಕಂಥ ಸ್ಥಿತಿ ಕಂಡ ಹಾಗೆ ಈ ಒಳ್ಳೆಯ ವ್ಯಕ್ತಿಗಳೇ ಕೊನೆಗೆ exploiters ಆಗ್ತಾರೆ, dictators ಆಗ್ತಾರೆ.

ಅನಂತಮೂರ್ತಿ : ಅಂದ್ರೆ ಸಾರ್, ಮೊದಲಿನಿಂದಲೂ ನಿಮ್ಮೆಲ್ಲ ಕೃತಿಗಳಲ್ಲೂ ‘ಆದರ್ಶವಾದ’ದ ಬಗ್ಗೆ ನೀವು ಯೋಚನೆ ಮಾಡ್ತಾನೆ ಬಂದಿದ್ದೀರಿ. ಅದಕ್ಕೆ ಕಾರಣವೆ ನೀವು ಆದರ್ಶವಾದಿಗಳ ಹಾಗೆ….

ಕಾರಂತ : ನಾನು ಬುಡದಲ್ಲಿ ಆದರ್ಶವಾದಿಯಾಗೇ ಹೊರಟದ್ದು. ಆ ಆದರ್ಶ ಸಾಧ್ಯವೇ ಅಲ್ಲವೇ ಅಂತ ಮುಂದೆ ಬದುಕಿನಲ್ಲಿ ಅದರ limitation, human limitationಗೂ ಅದಕ್ಕೂ ಏನು ಸಂಬಂಧ ಅಂತ ಕಂಡ ಮೇಲೆ, dis-illusionment ನನಗೆ ಬಂದದ್ದು. ಗಾಂಧೀಜಿಯಿಂದ, ಅವರ ಆದರ್ಶ ನಂದು ಅಂತ ತಕ್ಕೊಂಡೆ. ಅದು ನಂದಲ್ಲ ಅಂತ ಅನಂತರ ಕಂಡಿತು. ಆಮೇಲೆ ಮನುಷ್ಯನ limitation ಏನು ಅಂತ ತಿಳಿಯದೆ ನಾನು ಯಾರಿಗೂ ಯಾವ ಆದರ್ಶ ಹೇಳಿ ಪ್ರಯೋಜನವಿಲ್ಲ. ಇದನ್ನು ಪುಸ್ತಕದಲ್ಲಿ ಬರೆದಿಡಬಹುದು. ಬದುಕಿನಲ್ಲಿ ಉಳಿಯೋದಿಲ್ಲ ಅನ್ನುವ ತೀರ್ಮಾನಕ್ಕೆ ಬಂದೆ. ಆದ್ದರಿಂದ human limitations ಏನು, possibilities ಏನು – ಈ ಎರಡನ್ನು ಇಟ್ಟುಕೊಂಡು ನಾನು ನೋಡಬೇಕಾಯ್ತು. ಇದು ಅನಿವಾರ್ಯ. ಇಲ್ಲದೇ ಇದ್ರೆ ನಾನು ಜೀವನವನ್ನು ಅನುಭವಿಸಿದ್ದೂ ಪ್ರಯೋಜನವಿಲ್ಲ. ಅಥವಾ ನನ್ನ reaction ನೂ ಪ್ರಯೋಜನವಿಲ್ಲ ಅಂತ ನನಗೆ ಅನ್ನಿಸುತ್ತೆ.

ಅನಂತಮೂರ್ತಿ : ನಿಮ್ಮ ಕಾದಂಬರಿಗಳಲ್ಲಿ ಬರುವ ನಾಯಕರಲ್ಲೆಲ್ಲಾ ಈ ರೀತಿ ‘ಆದರ್ಶ’ ಮತ್ತು ‘ಮಿತಿ’ – ಇವೆರಡನ್ನೂ ಬಹಳ ತೀವ್ರವಾಗಿ ಅನುಭವಿಸಿದ ನಾಯಕ ಯಾವ ಕಾದಂಬರಿಯವನಿರಬಹುದು. ಸಾರ್? ನಿಮ್ಮ ಜೊತೆ ಜೊತೆಗೆ ಯೋಚನೆ ಮಾಡಬೇಕು, ಯಾಕೆಂದ್ರೆ ನಿಮಗೆ ಈಗ ಸಂಪೂರ್ಣ ನೆನಪಿರ್ಲಿಕ್ಕಿಲ್ಲ.

ಕಾರಂತ : ನೆನಪೂ… ‘ಮರಳಿ ಮಣ್ಣಿಗೆ’….

ಅನಂತಮೂರ್ತಿ : ರಾಮ?

ಕಾರಂತ : ‘ಮರಳಿ ಮಣ್ಣಿಗೆ’ಯ ರಾಮ, ಒಂದು pointಗೆ ಮಾತ್ರ ಬರ್ತಾನೆ. Creative artಗೆ ಸಂಬಂಧಪಟ್ಟ ಹಾಗೆ. ಆ creative artಗೆ ವಾಯೋಲಿನ್‌ಗೆ nature ಕಡಲು – ಏನು possibility ಕೊಡಬಹುದು? ಇದೊಂದು particular programme of art – ಇದಕ್ಕೆ ಅವನು ಸಂಬಂಧಪಡ್ತಾನೆ. ನಿರಾಶೆಯಲ್ಲಿ ಹಳ್ಳಿಗೆ ಹೋಗ್ತಾನೆ. ಕಡಲು, estern musicನ ಹಾಗೆ ನಮ್ಮ music ಏನು ಕೊಡಬಲ್ಲದು ಅಂತ. ಈ angleನಲ್ಲಿ ಅವ ನನಗೆ ಬೇಕಾಗ್ತಾನೆ, ಉಳಿದಿದ್ದಕ್ಕಲ್ಲ.

ಅನಂತಮೂರ್ತಿ : ‘ಚಿಗುರಿದ ಕನಸಿ’ನ ನಾಯಕ ಸಾರ್?

ಕಾರಂತ : ‘ಚಿಗುರಿದ ಕನಸಿ’ನ ನಾಯಕ ನನ್ನ ಕೃಷಿಯಲ್ಲಿ ಏನೇನು ಮಾಡುವ possibility ಇದೆ, ಎಲ್ಲೆಲ್ಲಿ ಏನೇನು ಮಾಡಿದ್ದಾರೆ – ಈ ಅನುಭವ ಬಂದ ಮೇಲೆ ಬರೆದಿದ್ದು. ಇಷ್ಟು possibilities ಇರುವಾಗ ನಾವು ಕೂತ್ಕೊಂಡಿದ್ದೇವಲ್ಲ ಅಂತ ಬರೆದದ್ದು. ಉಳಿದ ರೀತಿಯಲ್ಲಿ ಬಾಕಿ ಮನುಷ್ಯರ ಹಾಗೆ ಉಳಿದ passion ಇರತಕ್ಕವನೇ, ಅವ. ಈ possibility, ಆದ possibility. ನನ್ನ ಊರಿನಲ್ಲಿಯೇ ಆಗಲಿ, ಇನ್ನೊಂದು ದೇಶದಲ್ಲಿಯೇ ಆಗಲಿ, ಈ possibility ಯನ್ನ ಮನದಟ್ಟು ಮಾಡಲಿಕ್ಕೆ ಅವನ growth ಸಾಧ್ಯ ಮಾಡುತ್ತೆ. ಈ ಇನ್ನೆಷ್ಟೋ ಸಮಸ್ಯೆ ಪ್ರಾಯಶಃ ‘ಇನ್ನೊಂದೇ ದಾರಿ’ಯಲ್ಲಿ –ನಾಳೆ ಈ ಸಮಸ್ಯೆ ಹ್ಯಾಗೆ ಬೆಳೀಬಹುದು ಅಂತ ವಿಚಾರ ಮಾಡಿದ್ದೇನೆ. ಹಾಗೆ ಬೆಳೆದ ವ್ಯಕ್ತಿಗಳೇ ನನಗೆ ಕಂಡಿಲ್ಲಾ, ನನ್ನ ಅನುಭವ ಪ್ರೇರಿಸಿಲ್ಲ. ಹೀಗಾಗಿ ಅವನನ್ನು ಅರ್ಧ ದಾರಿಯಲ್ಲಿಯೇ ನಾನು ಬಿಡಬೇಕಾಗುತ್ತದೆ. ಅಂದರೆ ನಾನು ಯಾವುದನ್ನು ಕಂಡಿಲ್ಲವೋ ಆ ಗ್ಯಾಸಾಲಜೀನ ನಾನು ಊಹೆಯಿಂದ, ಕಲ್ಪನೆಯಿಂದ ಮಾಡಬಲ್ಲೆ. ಆದರೆ ಅದು ಪ್ರಯೋಜನಕ್ಕೆ ಬಂದೀತೂ ಅಂತ ನನಗೆ ಅನ್ನಿಸೋದಿಲ್ಲ.

ಅನಂತಮೂರ್ತಿ : ಈ ಎಲ್ಲಾ ಕಾದಂಬರಿಗಳಿಗಿಂತ ‘ಅಳಿದ ಮೇಲೆ’ಯಲ್ಲಿ ಪ್ರಾಯಶಃ ನಿಮ್ಮ ಸುಮಾರು ವರ್ಷಗಳ ಚಿಂತನೆ ಬಹಳ ಗಟ್ಟಿಯಾಗಿ ಬಂದಿದೆ ಅಂತ ಅನ್ನಿಸುತ್ತದೆ. ಆದರೆ ಆ ಕಾದಂಬರಿ ಬಗ್ಗೆ ಮಾತಾಡೋದಕ್ಕಿಂತ ಮೊದಲು, ಇನ್ನೊಂದು ವಿಷಯಕ್ಕೆ ನಿಮ್ಮನ್ನು ಹಾರಿಸಬೇಕು ಅಂತ ಇದ್ದೀನಿ. ಮತ್ತೆ ಬರೋಣ ಆ ಕಾದಂಬರಿಗೆ ಆ ಮೇಲೆ, ನೆನಪು ಮಾಡಿಕೊಂಡು. ನಾನೊಂದು ಲೇಖನ ನಿಮ್ಮ ಬಗ್ಗೆ ನಿಮ್ಮ ಸಹೋದರರು ಬರೆದಿದ್ದನ್ನು ಓದಿದೆ. – ‘ಅಂದಿನ ಆ ಕೋಟ’ ಅನ್ನೋ ಲೇಖನ, ಕೋ.ಲ. ಕಾರಂತರು ಬರೆದಿರೋದು. ಇದರಲ್ಲಿ ನಿಮ್ಮ ಬಾಲ್ಯ ಜೀವನದ ಬಗ್ಗೆ ಕೆಲವು ಮಾತುಗಳು ಬಹಳ interesting ಅಂತ ಅನ್ನಿಸಿತು. ಅಲ್ಲಿ ಒಂದೆರಡು ವಿಷಯಗಳಿವೆ.

ಒಂದನೆಯದು – ಅವರು ಹೇಳುತ್ತಾರೆ, ನೀವು ಬೆಳೆದ ಜಾಗ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ ಕಾಲದಲ್ಲಿ ಜೀವನ ಒಂಥರಾ ನಿಷ್ಟ್ರೀಯವಾಗಿತ್ತು ಅಂತ. ಬ್ರಿಟಿಷರು ಬಂದ ಮೇಲೆ ಒಂದು ರೀತಿಯ ಹೊಸತು ಮತ್ತು ಹಳತಿಗೆ ಅಲ್ಲಿ ಘರ್ಷಣೆಯುಂಟಾಯಿತು. ಆ ಸಂಧಿಕಾಲದಲ್ಲಿ ನಿಮ್ಮ ಬಾಲ್ಯಜೀವನ ಕಳೆದದ್ದು ಅನ್ನೋದು. ಇದು ನನಗೆ ಬಹಳ important ಅನ್ನಿಸಿತು. ಇನ್ನೊಂದು – ನಿಮ್ಮ ತಂದೆ ಮಕ್ಕಳಿಗೆ ಸಣ್ಣ ಸಣ್ಣ ನಾಟಕ ಬರೆದು ಆಡಿಸ್ತಾ ಇದ್ರು ಅನ್ನೋದು. ಅಂದರೆ ಕಲೆ ನಿಮ್ಮ ಮನೆತನದಲ್ಲಿ ಇದ್ದಿರಬಹುದು ಅನ್ನೋದು. ಆಮೇಲೆ ನಿಮ್ಮ ಜನರ ನಿಷ್ಠೆ. ಯಾವತ್ತು ಸಾಲ ಮಾಡಿದ್ರೂ ಅದನ್ನ ಹಿಂದಕ್ಕೆ ಕೊಡಬೇಕು – ಇತ್ಯಾದಿ ಸಾಮಾನ್ಯ ಮೌಲ್ಯಗಳಲ್ಲಿ ಅವರಿಗೆ ಇದ್ದ ನಿಷ್ಠೆ. ಆಮೇಲೆ ಬಡತನದ ಬಗ್ಗೆ ಅವರು ಹೇಳುತ್ತಾರೆ. ಸುತ್ತಮುತ್ತಲಿನ ಜೀವನದಲ್ಲಿ ತೀರಾ ಬಡತನ ಇತ್ತು, ನೀವು ಬೆಳೆದ ಊರಿನಲ್ಲಿ ಅಂತ. ಜೊತೆಗೆ ನನಗೆ ಇನ್ನೂ ಬಹಳ interesting ಅನ್ನಿಸಿದ್ದು – ನಿಮ್ಮ ಮನೆಯಲ್ಲೇ ಒಬ್ಬರು ಬಾಲಬ್ರಹ್ಮಚಾರಿ ಇದ್ರು, ಅವ್ರು ಕೊನೆವರೆಗೂ ಬ್ರಹ್ಮಚರ್ಯದ ಜೀವನ ಸಾಗಿಸಿದ್ರು ಅನ್ನೋದು. ಇನ್ನೊಂದು – ಮುದುಕಿಯರ ಬಗ್ಗೆ ನಿಮ್ಮ ಕಾದಂಬರಿಯಲ್ಲಿ ಅನೇಕ ಸಾರಿ ಬರೋದ್ರಿಂದ ಹೇಳ್ತಾ ಇದ್ದೀನಿ – ಈ ಲೇಖನದಲ್ಲಿಯೂ ಕೂಡ, ನಿಮ್ಮ ಅಜ್ಜಿ ಅಂತ ಕಾಣುತ್ತೆ, ಬಹಳ ಪರಿಣಾಮವನ್ನು ಅವರ ಮೇಲಂತೂ ಮಾಡಿದ್ದು ಅಂತ ಬರ್ದಿದ್ದಾರೆ. ಇವನ್ನೆಲ್ಲಾ ನೋಡಿದಾಗ ನನಗೆ ನಿಮ್ಮ ಕಾದಂಬರಿಗಳಲ್ಲಿ ಇವತ್ತಿನವರೆಗೂ ಬರುವ ಕೆಲವು ಆರ್ಕಿಟೈಪುಗಳು (archetypes) ನಿಮ್ಮ ಬಾಲ್ಯದ ಸ್ಮೃತಿಯಿಂದಲೇ ಎದ್ದು ಬರುತ್ತವೆ ಎನ್ನಿಸುತ್ತದೆ.

ಕಾರಂತ : Archetypes – ಸಾಮಾನ್ಯವಾಗಿ ಇವತ್ತಿಗೂ ಅಂತಹ ಮುದುಕಿಯರು ಅಲ್ಲಲ್ಲಿ ನನಗೆ ಸಿಗ್ತಾರೆಯಾದ್ರಿಂದ. ಒಂದು ನಿಷ್ಠೆಯಿಂದ ಅದಕ್ಕೋಸ್ಕರವಾಗಿ ಬದುಕನ್ನು devote ಮಾಡಿದ ಅವರು, ಇವತ್ತಿನ ತನಕವೂ ನನ್ನ ಊರಿನ ಬಗ್ಗೆ ಅದಕ್ಕೊಂದು ಮರ್ಯಾದೆ ಕೊಡುವಂತೆ ಮಾಡಿದಂತಹ ವ್ಯಕ್ತಿಗಳು. ಪಾಪ – ಪುಣ್ಯದ value – ನಾನು ಬೇಕಾದ್ದು ತಿಳ್ಕೊಳ್ಳಿ – ಒಬ್ಬನ ಋಣ ತೀರಿಸಬೇಕು ಎನ್ನುವಲ್ಲಿ ಇದೆ. ಎರಡನೆಯದು –ಬಡತನ, ಕಡು ದಾರಿದ್ರ್ಯ ಇತ್ತು – ನಿಜ. ಆದರೆ ಅದರಲ್ಲಿಯೂ ಕೂಡ ನಾಲಿಗೆಯನ್ನ ಮೀರಿದವರನ್ನು ನಾನು ಕಾಣಲಿಲ್ಲ. ಒಬ್ಬಿಬ್ರು ಸುಳ್ಳು ಹೇಳೋದಿಲ್ಲಾ ಅಂತಲ್ಲಾ. ಆದರೆ ಹೆಚ್ಚಿನ ಜನರಲ್ಲಿ ಆ ಮೌಲ್ಯ ಕಂಡಿದ್ದೇನೆ. ಮತ್ತೊಂದು – ಆ changing situation ಬಗ್ಗೆ: ಬ್ರಿಟಿಷರ ಕಾಲದಿಂದ education ಬಂತು… ಆ ಕಾಲದಲ್ಲಿ ನನ್ನ ಇಡೀ ಗ್ರಾಮ ಸಮುದಾಯದಲ್ಲಿ ಒಂದು ಆರೆಂಟು ಮಂದಿ ಇಂಗ್ಲಿಷ್ ಕಲಿಯಲಿಲ್ಲ. ಅದರಲ್ಲಿ ಹಾಗೆ ಕಲತಂತಹ ‘ಲಚ್ಚ’ರೂ ನನ್ನ ಸಹಪಾಠಿಗಳಾಗಿಯೇ ಇದ್ದಿದ್ದನ್ನ ಕಂಡವ ನಾನು. ಆದದ್ದರಿಂದ ಆ ವ್ಯಕ್ತಿ ಆ ಕಾದಂಬರಿಯಲ್ಲಿ ಬರ್ತಾನೆ.

ಅನಂತಮೂರ್ತಿ : ಅವರು ಬಾಲಬ್ರಹ್ಮಚಾರಿ ಇದ್ರು ಅಂತ ಹೇಳ್ತಾರೆ.

ಕಾರಂತ : ಇವರನ್ನ ನಮ್ಮ ಮನೆಯಲ್ಲಿ ನಾವು ಮಾವ ಅಂತ ಕರೀತಿದ್ವಿ.

ಅನಂತಮೂರ್ತಿ : ಅವರು ನಿಮ್ಮ ಮನಸ್ಸಿನ ಮೇಲೆ ಏನಾದ್ರೂ ಪರಿಣಾಮ….

ಕಾರಂತ : ಏನೂ ಇಲ್ಲ. ಅವರು ಅವರ ಪೂಜೆ ಮಾಡ್ಕೊಂಡು ದೇವಸ್ಥಾನಕ್ಕೋದ್ರು, ಬಂದ್ರು, ಮನೆ ಹಿತ್ತಲಲ್ಲಿ ಎಲೆ ಅಡಿಕೆ ಅದು, ಇದು ಮಾಡಿದ್ರು. ಅವರಷ್ಟಕ್ಕೆ ಅವರು ಪೂಜೆ ಮಾಡಿದ್ರು. ಎರಡನೇ ಮನುಷ್ಯರ ಹತ್ತಿರ ಅವರ ಮಾತಾಡಿದ್ದಂತಿಲ್ಲ. ನಾವು ಸಣ್ಣಗಿರುವಾಗ ಅವರ ಮೇಲೊಂದು ಪ್ರೀತಿ ಇರ್ತಿತ್ತು. ಅದಕ್ಕಿಂತ ಹೆಚ್ಚು ಅವರನ್ನು ತಿಳಿಯೋ ಯೋಗ್ಯತೆ ನನ್ನ ಮನಸ್ಸಿಗೆ ಆವಾಗ ಇದ್ದಿಲ್ಲ.

ಅನಂತಮೂರ್ತಿ : ನಿಮ್ಮ ಅಣ್ಣ ಕೊನೆಯಲ್ಲಿ ಒಂದು ಮಾತು ಹೇಳ್ತಾರೆ. ‘ಶಿವರಾಮನ ಬಾಲ್ಯ ಜೀವನದ ಹಿನ್ನೆಲೆಯಲ್ಲಿ ಯಥಾವತ್ತಾಗಿ ಹೇಳಲು ಯತ್ನಿಸಿದ್ದೇನೆ. ಈ ಹಿನ್ನೆಲೆಯಿಂದ ಅವರ ಸಾಹಿತ್ಯ ಹೇಗೆ ಪ್ರಭಾವಿತವಾಯಿತು. ಅಥವಾ ಅವರ ಕಲಾದೃಶ್ಯ ಹೇಗೆ ಕುದುರಿಕೊಂಡಿತು ಎಂದು ನಾನು ವಿಶ್ಲೇಷಿಸಲಾರೆ’ ಕೊನೆ ವಾಕ್ಯ ನನಗೆ ಬಹಳ ಗಮನಾರ್ಹ ಅನ್ನಿಸಿತು. ‘ಎಷ್ಟೋ ಬಾರಿ ಬರಡು ಹಿನ್ನೆಲೆ ರಸಿಕ ಜೀವನಕ್ಕೆ ಪ್ರೇರಕವಾಗುತ್ತದೆ ಎನ್ನುವ ಮನಃಶಾಸ್ತ್ರದ ಮಾತನ್ನು ಇಲ್ಲಿ ಸ್ಮರಿಸಬಹುದಾಗಿದೆ.’ ಇದನ್ನು ಯಾಕೆ ಹೇಳ್ತಾರೆ ಅಂದ್ರೆ ಆ ಊರಲ್ಲಿ ಸ್ವಲ್ಪ ಯಕ್ಷಗಾನ ಬಿಟ್ಟರೆ ಪಿಟೀಲನ್ನೂ ಕೇಳಿದವರಿರಲಿಲ್ಲ. ಈ ತರಹ ಒಂದು ಬರಡು ಜೀವನವೂ ಇತ್ತು ಆಗಿನ ಕಾಲದಲ್ಲಿ. ಅಲ್ಲಿಂದ ನೀವು ಇಷ್ಟು ಕಲಾತ್ಮಕವಾಗಿ…

ಕಾರಂತ : ಅಲ್ಲಿ ಬರಡು ಜೀವನ ಇವತ್ತಿಗೂ ಉಳಿದುಕೊಂಡಿದೆ. ಅತ್ಯಂತ ಚೆಲುವಾದ ನಿಸರ್ಗ ಇದ್ದೂ ಇವತ್ತಿನ ಜನಗಳ ಪಾಲಿಗೆ ಅದು ಬರಡಾಗಿಯೇ ಇದೆ. ನಾನು ಕುಣಿದಿದ್ದೇನೆ, ಹೊಳೆಯಲ್ಲಿ ಆಡಿದ್ದೇನೆ. ಅದೂ ಇದೂ ಮಾಡಿದ್ದೇನೆ. ಆದರೆ ಇವೆಲ್ಲ ಸೌಂದರ್ಯ ಪ್ರಜ್ಞೆಯಿಂದ ಮಾಡಿದ್ದು ಅಂತ ನಾನು ಗಟ್ಟಿ ಹೇಳಲಾರೆ. ಎಲ್ಲ ಮಕ್ಕಳ ಹಾಗೆ ನಾನೂ ಕೆರೆ ಹಳ್ಳ ಹಾರಿದ್ದೇನೆ, ಕಡಲಲ್ಲಿ ಮಿಂದಿದ್ದೇನೆ. ಈ ಸೌಂದರ್ಯ ಪ್ರಜ್ಞೆಯ ಅಂಶ ಅರಿವಿಗೆ ಬಂದಿದ್ದು ಇಪ್ಪತ್ತು ಇಪ್ಪತ್ತೆರಡನೆಯ ಇಸವಿಯ ಮೇಲೆ.

ಅನಂತಮೂರ್ತಿ : ಅಂದ್ರೆ, ಆವಾಗ ನಿಮಗೆ ಎಷ್ಟು ವಯಸ್ಸು ಸುಮಾರು…

ಕಾರಂತ : ಇಪ್ಪತ್ತೆರಡನೇ ಇಸವಿ ಅಂದ್ರೆ ನನಗೆ ಇಪ್ಪತ್ತೊಂದು ವರ್ಷ, ಇಪ್ಪತ್ತು ವರ್ಷ. ಕಾಲೇಜು ಬಿಟ್ಟ ಮೇಲೆ, ನಾನು ಒಂಟಿಯಾಗಿ ಕುಂದಾಪುರ ತಾಲ್ಲೂಕನ್ನು ತಿರುಗಾಡಲಿಕ್ಕೆ ತೊಡಗಿದೆ. ಬೇಕೆನ್ನುವಷ್ಟು ಗುಡ್ಡ ಹತ್ತಿದೆ, ಇಳಿದೆ. ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕದಲ್ಲೆಲ್ಲಾ ಕಾಂಗ್ರೆಸ್ಸಿನ propagandaಕ್ಕೆ ಬೇರೆ ಬೇರೆ ಕೆಲಸದ ಮೇಲೆ ಸುತ್ತಾಡಿದೆ. ಆ ಕಾಲದಲ್ಲೇ ನಮ್ಮ ದೇಶದ ಶಿಲ್ಪ ಇಂಥಾದನ್ನ ಓದಿಕೊಂಡೆ. ನಾನಾಗಿಯೇ ಒಂಟಿಯಾಗಿ ನಿಸರ್ಗದಲ್ಲಿ ಅಲ್ದಾಡತಕ್ಕಂಥಾದ್ದು ಬಂದ ಕಾಲದಲ್ಲಿ, ಮೊದಲು ಅನಾದರಕ್ಕೆ ಗುರಿಯಾದಂತಹ ಆ ಗುಡ್ಡ ನದಿಗಳು ನನಗೆ ನನ್ನ ಮಾನಸಿಕ ಸಂತೋಷಕ್ಕೆ ಪುಟ ಕೊಡ್ತಾ ಹೋದವು. ಮುಂದೆ ಆ ಬಗ್ಗೆ ಹಸಿವು ಬೆಳೆದ ಹಾಗೆ, ಅದಕ್ಕೆ ಪ್ರೇರಕವಾಗಿ ಓದ್ಕೊಂಡ ಹಾಗೆ, ನೋಡಿದ ಹಾಗೆ ಆಸಕ್ತಿಯೂ ಬೆಳೀತಾ ಹೋಯ್ತು. ಆದರೆ ಆರಂಭದಲ್ಲಿ ಎಲ್ಲಾ ಮಕ್ಕಳಿಗಿದ್ದ ಹಾಗೆನೇ. ಅಲ್ಲೊಂದು ಗುಡ್ಡ ಇದೆ, ಈಜಾಡಲಿಕ್ಕೆ ಕೆರೆಯಿದೆ ಅಥವಾ ಮುಳುಗಿ ಏಳಲಿಕ್ಕೆ ಸಮುದ್ರ ಇದೆ – ಅಂತ ಅಷ್ಟೇ ನಿತ್ಯವೂ ಹೋಗ್ತಿದ್ದೆ. ಆದರೆ ಸಮುದ್ರಕ್ಕೊಂದು mood ಇದೆ – ಎನ್ನುವ ಮಾನಸಿಕ ಬೆಳವಣಿಗೆ ಇರಲೇ ಇಲ್ಲ. Aesthetic ಬೆಳವಣಿಗೆ ಅನ್ನೋ ಅಂಶವೇ ಇಲ್ಲ. ಯಕ್ಷಗಾನ ಇತ್ತು. ನಮಗೇನೋ ಅದ್ಭುತವಾಗಿ ಕಾಣುತ್ತೆ. ಆ ಸಂತೋಷ ಯಾಕೆ ಆಯಿತು ಅಂತ anaiysis ಮಾಡಿಕೊಳ್ಳಲ್ಲ. ಸಂಗೀತ ಇದ್ದಿಲ್ಲ; ಇದ್ಯಾವ್ದೂ ಇದ್ದಿಲ್ಲ. ಅಲ್ಲಿ, ಇಲ್ಲಿ ಒಂದಿಷ್ಟು ಕುಣಿತ ಇರುತ್ತಿತ್ತು. ಆದರೆ ಇದು ಏನು ಪ್ರೇರಿಸಬಲ್ಲದು ಎಂದು ಕೇಳಿಕೊಳ್ಳುವುದಕ್ಕೆ ಮತ್ತೂ more intense thinking ಭಾವನಾತ್ಮಕವಾದ ಹಿನ್ನೆಲೆ motivation example ಇವೆಲ್ಲ ಬೇಕಾಗುತ್ತೆ. ಇವನ್ನೆಲ್ಲಾ ಮುಂದೆ ನಿಸರ್ಗ, ನನ್ನ ತಿರುಗಾಟದಲ್ಲಿ ಪರ್ಯಾಯವಾಗಿ ತಂದೊದಗಿಸಿತ್ತು. ಮುಂದೆ ನಾನಾಗಿ ಅದನ್ನ ಆರಿಸಿಕೊಂಡು, ಅದು ಎಷ್ಟು ಸಾಧ್ಯವೋ ಅದನ್ನು ಹುಡುಕಿಕೊಂಡು ಅಲೆದಾಡಿದ್ರಿಂದ ಅದು ಬೆಳೀಲಿಕ್ಕೆ ಕಾರಣ ಆಯ್ತು.

ಅನಂತಮೂರ್ತಿ : ಆಗಿನ ಕಾಲದಲ್ಲಾದ್ರೂ ಈ ವರದಾಚಾರ್ಯ ಇಂಥವ್ರ ನಾಟಕವನ್ನು ನೋಡಿದ್ದು ಇದೆಯಾ ಸಾರ್…. ನಿಮ್ಮ ಬಾಲ್ಯದಲ್ಲಿ?

ಕಾರಂತ : ಬಾಲ್ಯದಲ್ಲಿ ಹನ್ನೆರಡು ಹದಿಮೂರನೇ ಇಸವಿಯಲ್ಲಿ ಆ ನಾಟಕ ಕಂಪನಿಗಳು ಬಂದಾಗ್ಲೇ ನಾನು ನೋಡಿದ್ದೆ. ಆ ನಾಟಕದ ಗೊಂಬೆಗಳನ್ನೆಲ್ಲಾ ಕತ್ತರಿಸಿಕೊಳ್ಳುತ್ತಿದ್ದೆ. ಲಂಕಾದಹನ, ಅಕ್ರೂರ ಏನು ಕಂಡದ್ದು, ಹನುಮಂತ ಸಮುದ್ರದ ಉಲ್ಲಂಘನೆ ಮಾಡ್ತಿದ್ದಾನೆ, ವಿಮಾನದಲ್ಲಿ ಯಾರು ಬರ್ತಿದ್ದಾರೆ, ಸರ್ಪನ್ನ ಗರುಡ ಹಿಡ್ಕೊಂಡು ಹೋಗ್ತದೆ – ಈ ಅದ್ಭುತ fantasy ಗಳೇ ಮನಸ್ಸನ್ನು ಎಳೆದಿದೆಯೇ ಹೊರತು ನಾಟಕದ ಗಾಢವಾದ ಭಾವ ನನ್ನ ಹನ್ನೆರಡು ವರ್ಷದ ಹದಿಮೂರು ವರ್ಷದ ಹುಡುಗನಿಗೆ ಆಗಿತ್ತಾ ಅಂದ್ರೆ – ಇಲ್ಲ. ಅವರ ಹಾಡುಗಳನ್ನು ನಾನು ಬಾಯಿಪಾಠ, ಇಡೀ ಇಡೀ ಕಲೀತಾ ಇದ್ದೆ. ಅವರು ಬರೆದ ಪದ್ಯಗಳನ್ನ ಇವತ್ತೂ ಕೆಲವನ್ನ ನಾನು ಹಾಡಬಲ್ಲೆ… ಇದು ಹ್ಯಾಗೆ fairy tales ನಲ್ಲಿ appeal ಆಗ್ತದೋ ಹಾಗೆ ಆ ವಯಸ್ಸಿನಲ್ಲಿ, ಆ elements ನನ್ನನ್ನೂ ಆಕರ್ಷಿಸಿತು. ಆ element ಗೆ ಮುಂದೆ ಯಾವ ಯಾವ ಸ್ಥಾನ ಅನ್ನೋದನ್ನ ನಾನು determine ಮಾಡಬೇಕಾಯ್ತು. ಅಂದರೆ – the natural process of child mind. ಇದಕ್ಕೆ ಬೇಕಾದ elements ನನ್ನನ್ನು appeal ಮಾಡಿತು.

ಅನಂತಮೂರ್ತಿ : ಈಗಲೂ ನಿಮ್ಮಲ್ಲಿ ಆ child mind – ಒಳ್ಳೆ ಅರ್ಥದಲ್ಲಿ ಜಾಗೃತವಾಗಿಯೇ ಉಳಿದಿರಬೇಕು. ಇಲ್ಲದೇ ಇದ್ದರೆ ನಿಮಗೆ ಯಕ್ಷಗಾನ – ಇಷ್ಟು ವಿಚಾರಪರವಾದ ನಿಮಗೆ – ಅಷ್ಟು ಆಕರ್ಷಕವಾಗಿ ಉಳೀತಿರ್ಲಿಲ್ಲ, ಅಲ್ಲವಾ ಸಾರ್ ?

ಕಾರಂತ : ಆಕರ್ಷಕವಾಗಿ ಉಳೀತಿರ್ಲಿಲ ಅಂದ್ರೆ ಏನಂತ ?

ಅನಂತಮೂರ್ತಿ : You are considered to be a rationalist. ಆದರೆ ಯಕ್ಷಗಾನದ ಬಗ್ಗೆ ನಿಮಗೆ ಇರುವ ಆಸಕ್ತಿ ನೋಡಿದ್ರೆ ಆ child mind ಕಲಾವಿದನಿಗೆ ಕೊನೆವರೆಗೂ ಅಗತ್ಯ ಅನ್ನಿಸುತ್ತೆ, ಅಲ್ವಾ?

ಕಾರಂತ : child mind ಅಲ್ಲ.

ಅನಂತಮೂರ್ತಿ : ಇನ್ನೇನು ಹೇಳಬಹುದು ಸರ್, ಅದಕ್ಕೆ?

ಕಾರಂತ : A mind capable of forgetting itself in some other object.

ಅನಂತಮೂರ್ತಿ : ಅಥವಾ ವಿಸ್ಮಯ ಸಾಧ್ಯವಾಗಿರುವ mind…?

ಕಾರಂತ : ಯಾವುದೋ ಒಪ್ಪಿಕೊಳ್ಳಿ. ನಾನೊಂದು ಕಲ್ಲು, ನಾನೊಂದು ದಿಬ್ಬ, ನಾನೊಂದು ಹಕ್ಕಿ. ಇದು ನಾಟಕದ ಒಂದು element. ಅದೇ ನಾನಾಗಬೇಕಂತ ಅನ್ನಿಸಿ ಒಮ್ಮೆಗೇ ಆಗಿ ಅದಕ್ಕೆ ಧುಮಿಕಬಲ್ಲಂಥ ಒಂದು capacity. This is an unusual capacity.

ಅನಂತಮೂರ್ತಿ : ಮಕ್ಕಳಲ್ಲಿ ನಾವು ಅದನ್ನು ನೋಡಬಹುದು.

ಕಾರಂತ : ಈಗ ನಾಟಕ ಬರೀತಿದ್ದೇನೆ ನಾನು. ಕಾದಂಬರಿ ಬರೀತಿದ್ದೇನೆ. ಆ ಗಳಿಗೆಗೆ ಆದಾಗಿ ನಾನು ಅವತಾರ ಮಾಡ್ತೇನೆ… ಕಲೆಯಲ್ಲಿ ಬರತಕ್ಕಂಥ pleasure. ಆ pleasure ಒಂದು ಸಾರಿ ಅಂಬೆಯಾಗಬಹುದು, ಇನ್ನೊಂದು ಸಾರಿ ರಾಕ್ಷಸನಾಗಬಹುದು, ಅದು ನನ್ನ ಕಲ್ಪನೆಯ ಅಂಬೆ, ನನ್ನ ಕಲ್ಪನೆಯ ರಾಕ್ಷಸ. ಆದರೆ ಅದು ನಾನು ಅನ್ನುವ identity, completely ಮರೆತು ಮಾಡತಕ್ಕಂಥ ಒಂದು ಸ್ಥಿತಿ ನನಗೆ. ಕಾದಂಬರಿ ಬರೆಯುವಾಗಲೂ ಕೂಡ ನಾನು identity ಮರ್ತೇ ಬರ್ಯೋದು. ಆ ಗಳಿಗೆಯಲ್ಲಿ ನಾನು ನಾನಾಗಿರೋದೇ ಇಲ್ಲ. ಅದಕ್ಕೆ ಏನು disturbance ಬಂದ್ರೂ ನಾನು ಅಲ್ಲಿ ಅದನ್ನ ಬಿಟ್ಟು, ಕೆಲಸದಿಂದ ಹೊರಗೆ ಬರಬೇಕಾಗುತ್ತೆ. ಇದರಿಂದ ಬೇರೆ ಬೇರೆ formsನ possibility ಗಳನ್ನು ನಾವು realise ಮಾಡಲಿಕ್ಕೆ, ನಾವು ಅನುಭವಿಸಲಿಕ್ಕೆ ಸಹಾಯವಾಗುತ್ತೆ.

ಅನಂತಮೂರ್ತಿ : ಆದರೆ ಕಾದಂಬರಿಯನ್ನು ಬರೆಯುವಾಗ ತಾದಾತ್ಮ್ಯ ಎಲ್ಲಾ ಕಾಲದಲ್ಲೂ ಒಂದೇ ರೀತಿಯಲ್ಲಿ ಫಲಿಸುತ್ತೆ ಅಂತ ಹೇಳ್ಲಿಕ್ಕೆ ಆಗುತ್ತದೆಯಾ?

ಕಾರಂತ : ಅದಿಲ್ಲದಿದ್ದರೆ ಇಲ್ಲ… ನನಗೆ ಬರೀಲಿಕ್ಕೆ ಆಗೋದೇ ಇಲ್ಲ.

ಅನಂತಮೂರ್ತಿ : ಆದರೆ ನಿಮ್ಮ ‘ಅಳಿದ ಮೇಲೆ’ ಬಗ್ಗೆ ಕೆಲವು ವಿಮರ್ಶಕರು ಹೇಳುತ್ತಾರೆ ಸಾರ್, ಯಶವಂತನ ಬಗ್ಗೆ ನಿಮಗೇನು ತಾದಾತ್ಮ್ಯ ಇದೆಯೋ ಅದು ಆತನ ಹೆಂಡತಿಯ ಬಗ್ಗೆ…

ಕಾರಂತ : ಇಲ್ಲಿ – ಅವರಿಗೆ ಒಂದು ಸ್ಥಿತಿ ಗೊತ್ತಾಗುವುದಿಲ್ಲ. ಏನಂದ್ರೆ ಯಶವಂತನನ್ನ ಯಾರಿಂದ ನಾನು ಪ್ರೇರಣೆಗೊಂಡೆ, ಅವನ ಹೆಂಡತಿ ನನ್ನ ಕಣ್ಣಿಗೆ ಯಾರಾಗಿ ನಿಲ್ತಿದ್ಲು. ನಾನು ಬರೆಯುವಾಗ – ಅನ್ನೋದು ಇವರೆಲ್ಲ Known objects. ಅವರ ಹೆಂಡತಿ ಯಾರಾಗಿದ್ರು ಅಂತ ಕೇಳಿದ್ರೆ – ಅದೊಂದು ಹೆಂಗಸು. ಒಬ್ಬ – ಇಬ್ಬರು ಅಣ್ಣ ತಮ್ಮಂದಿರಲ್ಲಿ, ತಮ್ಮನ ಹೆಂಡತಿ ಅಣ್ಣನೊಟ್ಟಿಗೆ ಓಡಿಹೋದ ಯಾವ ಯಾವ ತರದ್ದೋ ವ್ಯಕ್ತಿ. ಅದನ್ನು ಜೀವನದಲ್ಲಿ ಕಂಡಿದ್ದೇನೆ. ಹಾಗೇ ಜೀವನದಲ್ಲಿ ಕಂಡಂತಹ ವ್ಯಕ್ತಿ ನನ್ನ ಕಣ್ಣ ಮುಂದೆ ಬರ್ತಾಳೆ. ಅವಳಲ್ಲಿ ಒಂದೇ ಒಂದು – ದೇಹದ ಒಂದು lust ಬಿಟ್ಟರೆ ಎರಡನೇ ಗುಣವನ್ನೇ ನಾನು ಕಾಣಲಾಗಲಿಲ್ಲ… ನೂರು ಜನ ಹೆಂಗಸರ ಮೇಲೆ ಅನುಕಂಪ ಬಂದು ಬರ್ದಿದ್ದೇನೆ. ಈ ವ್ಯಕ್ತಿ ಮೇಲೆ ಅನುಕಂಪ ಪಡಲಿಕ್ಕೆ ನನಗೆ ಸಾಧ್ಯವಾಗಲಿಲ್ಲ. ಯಾಕೆಂದ್ರೆ ಆ ವ್ಯಕ್ತಿ ನನಗೆ ಗೊತ್ತಿತ್ತು. ಅದನ್ನೇ ಬರ್ಯೋದಾದ್ರೆ ಒಂದು ಘೋರ ಶೂರ್ಪನಖಿಯನ್ನೇ ನಾನು ಬರೀಬಹುದು, ಇವರು ನಾನು ಕಲ್ಪಿಸಿದ ವ್ಯಕ್ತಿಗಳಲ್ಲ. ನಾನು ಸಂದರ್ಭಕ್ಕೆ ತಕ್ಕೊಂಡ ವ್ಯಕ್ತಿಗಳು. ಪೂರಾ ಒಂದೇ ವ್ಯಕ್ತಿಯದಲ್ಲ. ಆದರೆ ಇಂಥ ವ್ಯಕ್ತಿಗಳು ನನ್ನ ಬದುಕಿನ ನಿಕಟ ಸಂಬಂಧದಿಂದ ಹುಟ್ಟಿಕೊಂಡ, ಕಂಡುಕೊಂಡ ವ್ಯಕ್ತಿಗಳಾಗಿದ್ದರಿಂದ ಕೆಲವು ವ್ಯಕ್ತಿಗಳಲ್ಲಿ ಅನುಕಂಪಾನ್ನ ನಾನು ಏನು ಮಾಡಿದ್ರೂ ಹಂಚಲಾರೆ.

ಅನಂತಮೂರ್ತಿ : ಆದರೆ ‘ಅಳಿದ ಮೇಲೆ’ ಇಷ್ಟು ವಾಸ್ತವ ಜೀವನದಿಂದ ಪ್ರಭಾವಿತವಾಗಿದ್ರೂ ಕೂಡ – ಆ ಕೃತಿಯಲ್ಲಿ ಇರುವ form ಇದೆಯಲ್ಲ, ಆ ಕಾರಣದಿಂದ – ಆ ಕೃತಿ ಸಂಪೂರ್ಣ ಸೃಷ್ಟಿಯಾದದ್ದು ಅಂತಾನೇ ಅನ್ನಿಸುತ್ತೆ…

ಕಾರಂತ : ಫಾರಂ ಬಗ್ಗೆ ನಾನು ಯೋಚನೆ ಮಾಡ್ತಾನೇ ಇಲ್ಲ. ಆದರೆ ಅದು ತನ್ನಂತೆಯೇ ರೂಪಗೊಂಡಿದ್ದು ನನ್ನ ಪಾಲಿಗೆ.

ಅನಂತಮೂರ್ತಿ : ಇಲ್ಲಿಯೂ ಕೂಡ – ನಾನೇ ಇದನ್ನು ಒಂದ್ಸಾರಿ ಬರೆದಿದ್ದೆ ಅಂತ ಕಾಣುತ್ತೆ. ‘ಕಾರಂತರಿಗೆ ಚಿತ್ರಕಲೆ – ಇತ್ಯಾದಿಗಳಲ್ಲೂ ಫಾರಂ ಬಗ್ಗೆ ಎಷ್ಟು ಕಾಳಜಿ ಇದೆಯೋ ಅಷ್ಟನ್ನು ಅವರು ಕಾದಂಬರಿ ಪ್ರಕಾರದ ಬಗ್ಗೆ ತೋರ್ಸೋದಿಲ್ಲ’ ನೀವು ಇದನ್ನು ಒಪ್ಕೋಬೇಕು ಅಂತಲ್ಲ….

ಕಾರಂತ : ನಾನು ಇಗೊಳ್ಳಿ ನಾಟಕದ ಬಗ್ಗೆ – ಹತ್ತು ನಾಟಕವನ್ನು – ಪಿರಾಂಡೋಲೋ ಇಬ್ಸೆನ್ – ಇವ್ರದೆಲ್ಲಾ ನೋಡ್ಕೊಂಡು, ಅವುಗಳ ಬಗ್ಗೆ ಎಲ್ಲಾ literary ಪ್ರಯೋಗ ಮಾಡಿದ್ದೇನೆ. ಆ ರೀತಿಯಲ್ಲೆಲ್ಲಾ ಬರೆದು ನೋಡಿದ್ದೇನೆ.

ಅನಂತಮೂರ್ತಿ : ಕಾದಂಬರಿಯಲ್ಲೂ ನೀವು ಮಾಡಿದ್ದೀರಿ.

ಕಾರಂತ : ಕಾದಂಬರಿಯ ಬಗ್ಗೆ ನನಗನ್ನಿಸಿದ್ದೇನು ಅಂದರೆ ನಾನು ಇನ್ನೊಬ್ಬರ ಕಾದಂಬರಿಗಳನ್ನು ಓದಬಾರದು. ಅವರ technique ನನಗ ಬ್ಯಾಡ. ಅವರ ವಿಷಯ ನನಗೆ ಬ್ಯಾಡ. ನಾನು ಬೆಳೀಬೇಕಾದ್ರೆ, ಅದನ್ನ ಆಮೇಲೆ ನೋಡುವ ಅಂತ ಹೇಳಿಕೊಂಡಿದ್ದೂ ಉಂಟು. ಯಾಕೆಂದ್ರೆ ಈ imitation unconsciously ಆಗಿ ಬರಬಾರದು, ಅನ್ನೋದಕ್ಕೋಸ್ಕರವೇ ನಾನು avoid ಮಾಡಿದ್ದು. ಅದು ತನ್ನಂತೆ ಬರೋದೇನಾದ್ರೂ ಬಂದುಕಳ್ಳಲಿ. ಬಾಕಿ ಉಳಿದ ಕಲೆಗಳಲ್ಲಿ from ನ್ನು ನೋಡ್ಕೊಂಡು study ಮಾಡ್ದೆ ನಾನು. ಕಾರಣವನ್ನೂ ನಾನು ಹೇಳಬಲ್ಲೆ painting ವಿಚಾರಕ್ಕೆ ಬರುವಾಗ. ಆದರೆ ಕಾದಂಬರಿಯಲ್ಲಿ ಏನಾಗ್ತದೆ ಅಂದರೆ ನಾವು ಇಲ್ಲಿ ಇಂಥಾದ್ದು ಒಂದ ಇದೆ ಅಂತ ಮಾಡಿ ಬಂದಾಗ, ನನಗೆ ಆಗಿದ್ದು ಒಂದನ್ನ ಬರೀಬೇಕಂತ ಕಂಡಾಗ temptation to imitate ಬಹಳ ಹೆಚ್ಚಾಗುತ್ತೆ. ಇದು ನನ್ನತನ ಕಳೆಯುತ್ತೆ. An imitator cannot be a creator. ಈ ದೃಷ್ಟಿಯಿಂದ ನಾನು avoid ಮಾಡಿದ್ದೇನೆ. ಅದು ತನ್ನಂತೆ ಹುಟ್ಟಿಕೊಂಡು ಬೇರೆ ರೂಪದಲ್ಲಿ ಬಂದರೆ ಆಗ ಅದಕ್ಕಾಗಿ ನನಗೆ credit ಕೊಡಬೇಕೋ ಯಾರಿಗೆ credit ಕೊಡಬೇಕೋ, ಗೊತ್ತಿಲ್ಲ.

ಅನಂತಮೂರ್ತಿ : ಆದರೆ ನಿಮ್ಮ ಕಾದಂಬರಿಗಳನ್ನು ಓದುವ ನನ್ನಂಥ ಓದುಗನಿಗೆ ನೀವು ಎಲ್ಲೆಲ್ಲಿ from ಬಗ್ಗೆ quest ಮಾಡಿದ್ದೀರೋ – ‘ಬೆಟ್ಟದ ಜೀವ’, ‘ಅಳಿದ ಮೇಲೆ’, ಆಮೇಲೆ ‘ಮೂಕಜ್ಜಿಯ ಕನಸುಗಳು’ – ಇನ್ನೂ ಕೆಲವು ಕಾದಂಬರಿಗಳಲ್ಲಿ ನೀವು ವಾಸ್ತವಿಕ ಶೈಲಿಯನ್ನು ಇಟ್ಟುಕೊಂಡೇನೇ ಸಾಂಕೇತಿಕವಾಗಿ ಕಟ್ಟುವಂತಹ ಕೃತಿಗಳಿವು – ಇವೇ ನಿಮ್ಮ ಬಹಳ ಮುಖ್ಯವಾದ ಕೃತಿಗಳು ಅಂತ ನಮ್ಮ ಕೆಲವರಿಗೆ ಅನ್ನಿಸುತ್ತೆ. Fromನ ಬಗ್ಗೆ preoccupation ಇದೆ ನಿಮ್ಮಲ್ಲಿ – ಬುದ್ಧಿಪೂರ್ವಕವಾಗಿ ಅಂತಲ್ಲ. ಆದರೆ ಅನೇಕ ಸಾರಿ ಭಿನ್ನವಾಗಿ ಹೊಸ ರೀತಿಯಲ್ಲಿ ಬರೆದುಬಡ್ತೀರಿ, ಅಂತ ಅನ್ಸುತ್ತೆ.

ಕಾರಂತ : ಅದು ತನ್ನಂತೆಯೇ ಬಂದದ್ದೇ ಹೊರತು ನಾನು ಪ್ರಯತ್ನ ಪಟ್ಟದ್ದಲ್ಲ. ಇಂತಹ Fromನಲ್ಲಿಯೇ ಬರೆಯಬೇಕೆನ್ನುವ ಪ್ರಯತ್ನವೂ ಇಲ್ಲ. ನಾಟಕದಲ್ಲಿ ಪ್ರಯತ್ನ ಮಾಡಿದ್ದೆ ನಾನು. ಆದರೆ ಕಾದಂಬರಿಯಲ್ಲಿ ಇಲ್ಲ.

ಅನಂತಮೂರ್ತಿ : ಇನ್ನೊಂದು ಪ್ರಶ್ನೆ. ಸಿನೆಮಾ ಆಗಿರೋದ್ರಿಂದ ಈಚೆಗೆ ಬಹಳ ಪ್ರಸಿದ್ಧವಾದ ‘ಚೋಮನ ದುಡಿ’ಯ ಬಗ್ಗೆ ಎರಡು ವಾದ ಇದೆ. ನನ್ನ ಸ್ನೇಹಿತರು ಕೆಲವರು ಹೇಳ್ತಾ ಇರ್ತಾರೆ. ಅವರ ಪ್ರಕಾರ – ನಿಮ್ಮ ಚೋಮ ಇದ್ದಾನಲ್ಲ ಅವ ಸಾಮಾನ್ಯ ಹೊಲೆಯ ಅಲ್ಲ, ಅವನು ದುಡಿ ಬಾರಿಸ್ತಾನೆ. ತುಂಬಾ ಭಾವಾವೇಶಿತನಾಗುವ ಶಕ್ತಿ ಇದೆ ಅವನಿಗೆ. ಅಸಾಮಾನ್ಯವಾದ ಭಾವನೆಯುಳ್ಳವನು. ಆದದ್ದರಿಂದ ಅವನ ಮುಖಾಂತರ ನೀವು ಹೇಳುವ ಕಥೆಯಲ್ಲ, ಒಬ್ಬ ವ್ಯಕ್ತಿಯಾಗಿ ‘ಚೋಮ’ ನಮಗೆ ಮುಖ್ಯ ಆಗ್ತಾನೆಯೇ ಹೊರತು ಒಬ್ಬ ಹೊಲೆಯರ ಪ್ರತಿನಿಧಿ ಆಗಿ ಮುಖ್ಯ ಆಗೋದಿಲ್ಲ. ನಿಮ್ಮ ಅಭಿಪ್ರಾಯಕ್ಕಾಗಿ ಕೇಳಿದ್ದಷ್ಟೇ. ಇನ್ನೊಂದು ವಾದ – ಆ ಕೃತಿಯಲ್ಲಿ ನಿಮಗೆ ಅವರ ಬಗ್ಗೆ ಮಾತ್ರ ಸಹಾನುಭೂತಿ ಅಲ್ಲ, ಜಮೀನ್ದಾರನ ಬಗ್ಗೆಯೂ ಬಹಳ ಸಹಾನುಭೂತಿ ಇರೋದ್ರಿಂದ ಅದು ಒಟ್ಟು ಕ್ರಾಂತಿಕಾರಕವಾದ ಕೃತಿಯಾಗೋದಿಲ್ಲ, ಅಂತ.

ಕಾರಂತ : ಅದೂ ಕ್ರಾಂತಿ ಆಗಬೇಕೆಂತಲ್ಲ, ಅವನ ಆಸೆ ಪೂರೈಸ್ದೆ ಇರಲಿಕ್ಕೆ ಕಾರಣನಾದ ಒಬ್ಬ ವ್ಯಕ್ತಿ ಇದ್ದಾನೆ. ಹಾಗಂದ ಮಾತ್ರಕ್ಕೆ ಅವ ರಾಕ್ಷಸ ಆಗೋದಿಲ್ಲ. ನಾವೆಲ್ಲರೂ ಸಂಪ್ರದಾಯದ ಮಕ್ಕಳು. ಚೋಮನ ಆಸೆ ಜಮೀನ್ದಾರನಾಗಬೇಕಾದ್ದು, ಸಂಪ್ರದಾಯ ಮೀರಿದ ಆಸೆ. ಅದೇ ಕ್ರಾಂತಿ. ಅನುಕಂಪ ಇದ್ದರೂ ಜಮೀನ್ದಾರನಿಗೆ ಇನ್ನೊಬ್ರು ಮಾಡ್ಲಿಲ್ಲ, ನಾವು ಹ್ಯಾಗೆ ಮಾಡಲಿಕ್ಕೆ ಬರೋದು ಅನ್ನೋ ಭಾವನೆ ಬರೋದು ಸ್ವಾಭಾವಿಕವಾದದ್ದು ಈ ನಡತೆಯಲ್ಲೇ ಬಂದಿದ್ರೆ ನಾವೂ ಅದೇ ರೀತಿ ಆಗ್ತಿದ್ವು. ಈ ಕ್ರಾಂತಿ ಪ್ರತ್ಯೇಕ ತಕ್ಕೊಂಡು ಊದೋದು ಬೇರೆ, ಒಂದು ಸಂಪ್ರದಾಯದಲ್ಲಿ ಕಟ್ಟು ಬಿದ್ದು ನಾವು ಹ್ಯಾಗೆ think ಮಾಡ್ತೇವೆ ಅನ್ನೋದು ಬೇರೆ. ಇಲ್ಲಿ ಚೋಮನ ಬಗ್ಗೆ, ಅವನ ಆಸೆಯ ಬಗ್ಗೆಯೂ ನನಗೆ sympathy ಇದೆ. ಅವನಿಗೆ ಗದ್ದೆ ಕೊಡೋ ಮನಸ್ಸು ಬಂದ್ರೂ ಕೂಡ, ಜಮೀನ್ದಾರನಿಗೆ ಅಮ್ಮ ಬ್ಯಾಡ ಅಂತ ಹೇಳ್ತಾಳೆ, ಆ ಕೆಲಸ ಕೂಡ ಇನ್ಯಾರೂ ಈವರೆಗೆ ಮಾಡದೇ ಇದ್ದದ್ದು – ಅನ್ನೋದು ಮನಸ್ಸಿನಲ್ಲಿದೆ. ಇನ್ನು ಎರಡನೇದಾಗಿ, ಚೋಮನ ವೇದನೆಗೂ ದುಡಿಗೂ ಸಂಬಂಧ ಇದೆ ನನಗೆ ಅಲ್ಲಿ. ದುಡಿ ಒಂದು ಸರಳ instrument. ಆ ಸರಳ instrument ನಲ್ಲಿ ಒಂದು ಮನೋಯಾತನೆ ತೋರಿಸಬೇಕಾದಂಥ ಒಂದು ತೀಕ್ಷ್ಣತೆ ಸಾಧ್ಯ ಎನ್ನೋದನ್ನ ನಾನು ಕಂಡುಕೊಂಡಿದ್ದೇನೆ. ಅದು ಚಿತ್ರದಲ್ಲಿ ಬರ್ಲಿಲ್ಲ, ಆ ಮಾತು ಬೇರೆ. ಯಾಕಂದ್ರೆ ದುಃಖಿಯಾದ ವ್ಯಕ್ತಿಗೆ, ಬಡ ವ್ಯಕ್ತಿಗೆ – ಅವನ ಸಮಾಜದಲ್ಲಿ ನೋಡಿದಾಗ ಅವನ ಚಿಂತನೆಯನ್ನು ಮರೆಯಲಿಕ್ಕೆ ಒಂದು ಸರಳ ಕುಣಿತ, ಒಂದು ಸರಳ ವಾದ್ಯ ಸಹಾಯ ಮಾಡಿದೆ. ಇತರ ಜನಗಳಿಗೆ gossip ಸಹಾಯ ಮಾಡಿದ ಹಾಗೆ. ಇವನ ಜೀವನದಲ್ಲಿ ಅದು ಹ್ಯಾಗೆ ಆಗುತ್ತೆ, ದುಃಖ ಅಷ್ಟಿದ್ದರೂ ಕೂಡ ಇವರು ಅದನ್ನ ಹ್ಯಾಗೆ ಮರೆಯಬಲ್ಲರು ಎನ್ನೋದಕ್ಕೆ – ಅಲ್ಲಿ ಇಲ್ಲಿ ಸ್ವಲ್ಪ ಕುಡಿಯೋದಿದ್ರೆ ಇರಬಹುದು, ಕೇಕೆ ಹಾಕಿ ಕೂಗೋದಿದ್ರೆ ಇರಬಹುದು – intensely personal emotion ಅನ್ನು ದುಡಿಯಿಂದ ತೋರಿಸಿಕೊಳ್ಳುವಂತೆ ಮಾಡಿದ್ದೇನೆ. ಯಾಕೆಂದ್ರೆ that is the only thing from which he can get can relief. From all these things. ಇದನ್ನೇ ಚಿತ್ರವಾಗಿ ತೆಗೆದುಕೊಂಡಿದ್ದೇನೆ.

ಅನಂತಮೂರ್ತಿ : ಕಾದಂಬರಿಕಾರರಾಗಿ ನಿಮಗೆ ಇನ್ನೊಂದು ಪ್ರಶ್ನೆ, ಆ ಕೃತಿಯ ಬಗ್ಗೆ. ಚೋಮ ತನ್ನ ಧರ್ಮ ಬಿಟ್ಟು ಕೊಡ್ದೇ ಇರೋದು ಒಂದು ಮೌಲ್ಯ ಅಂತ ನಿಮಗೆ ಬರೆಯುವಾಗೇನಾದ್ರೂ ಅನ್ನಿಸಿತ್ತಾ ಸಾರ್ ?

ಕಾರಂತ : ಈ ಬಗ್ಗೆ ಏನೂ ಆಲೋಚನೆ ಮಾಡೋದಿಲ್ಲ ನಾನು. ಆದರೆ ಸ್ವಾಭಾವಿಕವಾಗಿ ಅವನವನಿಗೆ ಅವನು ನಂಬಿದ ದೇವರು ದೊಡ್ಡದು. ಈ ನಿಷ್ಠೆ ನಮ್ಮ ದೇಶದಲ್ಲಿ ಎಲ್ಲರಿಗೂ ಬಂದಿದ್ದು, ಅದು ಕುರುಡು ನಂಬಿಕೆಯೇ ಆಗಲಿ. ಇನ್ನೊಂದು ಧರ್ಮಕ್ಕೆ ಹೋದ, ಇನ್ನೊಂದು ದೇವರನ್ನು ನಂಬಿದ ಅಂದ್ರೆ ಅವರ ಕಣ್ಣಿನಲ್ಲಿ ಒಂದು ನರಕದ ಯಾತನೆ ಅನುಭವಿಸಿದಂಥ ಕಷ್ಟ ಬರುತ್ತೆ. ಯಾವುದೋ ಒಂದು ಆಸೆಗೆ ಹೋದವ ಹಿಂದೆ ಬರಲಿಕ್ಕೆ ಕಾರಣ – ಅವನ consciousness ಮಾತಾಡ್ತದೆ. ನಿನ್ನ ನಂಬಿದ ಈ ದೇವರನ್ನ ಬಿಟ್ಟು ಹೋಗ್ತೀಯೋ ಅಂತ ಕೇಳಿದ ಹಾಗಾಗುತ್ತೆ. Sincerity ಇದ್ದ ಎಲ್ಲಾ ತರಹದ lifeನಲ್ಲಿ ಇದು ಬರುವಂತಹ ಪ್ರಶ್ನೆ. ಚೋಮನಿಗೆ ಬೊಬ್ಬುರಿಯೇ ಬಂದು ನಿಲ್ಲಬಹುದು. ಪಂಜುರ್ಲಿ ಬಂದು ನಿಲ್ಲಬಹುದ, sincerity ಇದ್ದಲ್ಲೆಲ್ಲಾ loyalty ಪ್ರಶ್ನೆ ಇದ್ದೇ ಇರುತ್ತೆ. ಈ loyalty ಪ್ರಶ್ನೆಯೇ ಬಾಕಿ ಉಳಿದದ್ದಕ್ಕಿಂತ ಮೌಲ್ಯದ ದೃಷ್ಟಿಯಿಂದ ಪರಮ ಮೌಲ್ಯಕ್ಕೆ ಹೋಗುತ್ತೆ.

ಅನಂತಮೂರ್ತಿ : ಅಂದರೆ ಒಬ್ಬನಿಗೆ ಭೂಮಿಯ ಹಸಿವೆಗಿಂತ ಈ ನಂಬಿಕೆ ಮುಖ್ಯ ಆಗಬಹುದು ಅನ್ನೋದನ್ನ. ನೀವು ಇಲ್ಲಿ ಗುರ್ತಿಸಿದ್ದೀರಿ, ಅಲ್ವಾ ಸಾರ್?

ಕಾರಂತ : ಇದು ಸ್ಪಷ್ಟವಾಗಿ ಬರ್ತದೆ. loyalty ಇದ್ದಲ್ಲೇ ತ್ಯಾಗ ಬರಬೇಕಾದ್ರೆ ಇದು ಒಂದೇ ಕಾರಣ. ಇಲ್ದಿದ್ರೆ, ಗಳಿಗೆ ಕುಪ್ಪಳಿಸ್ತಾ ಹೋಗಬಹುದು. ಆಗ ಆತ ಏನೂ cultivate ಮಾಡಲಾರ. ಕೇವಲ ಒಂದು ಸಂದರ್ಭ ಸಾಕು, ಇವತ್ತಿನ politics ಆದೀತು.

ಅನಂತಮೂರ್ತಿ : ಸಾರ್ ‘ಚೋಮನ ದುಡಿ’ ಬರೆಯುವ ಕಾಲದಲ್ಲಿ ನೀವು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ಬಗ್ಗೆ ತೋರಿಸಿದಷ್ಟು ಕಾಳಜಿ ನಿಮ್ಮ ಇತ್ತೀಚಿನ ಕೃತಿಗಳಲ್ಲಿ ಕಣ್ತಾ ಇಲ್ಲ. ಈಗ ಹೆಚ್ಚು ಮಾನಸಿಕವಾದ, ತಾತ್ವಿಕವಾದ ಸಮಸ್ಯೆಗಳ ಕಡೆ ನಿಮ್ಮ ಗಮನ ಹೋಗಿದೆ…. ಅಂದ್ರೆ ಇದು ನಾನು ಟೀಕೆ ಮಾಡ್ತಾ ಇರೋದಲ್ಲ.

ಕಾರಂತ : ಆವಾಗಿನ ಕಾಲದಲ್ಲಿ ಬಡತನದ ಪ್ರಶ್ನೆ – ಇದು ಗಾಂಧಿಯವರಿಂದ ಬಂತು. Intentionally ನಾನು ಮೂವತ್ತು ಗ್ರಾಮಗಳನ್ನು ಸಂಚಾರ ಮಾಡಿ, ನೂರಾರು ಹರಿಜನರ ಮನೆಗಳಿಗೆ ಹೋಗಿ, ಅವರು ಯಾರು, ಎಷ್ಟು ದುಡೀತಾರೆ, ಏನು ಸಾಕ್ತಾರೆ, ಏನು ಕಡಿಯುತ್ತಾರೆ. ಕುಡಿಯೋ ನೀರು – ಪ್ರತಿಯೊಂದು ತಕ್ಕೊಂಡು ಹೊಟ್ಟೆಗೇನಿದೆ, ಸಮಯ ಹ್ಯಾಗೆ ಕಳೀತಾರೆ ಅಂತ intense practical study ಮಾಡಿದಂತಹ ಕಾಲದಲ್ಲಿ ‘ಚೋಮನ ದುಡಿ’ ಬರೆದದ್ದು: ಪ್ರತಿಯೊಂದು ಚಿತ್ರವೂ ನನ್ನ ಕಣ್ಣೆದ್ರಿಗಿದೆ. Economic condition ಚಿತ್ರವೂ ಇದೆ. ಅಭ್ಯಾಸ ಮಾಡಿದಂಥ ಹಿನ್ನೆಲೆಯೂ ಇದೆ. ಮೊದಲು ಊಹೆಯಿಂದ ಬರ್ದಿದ್ದ ನಾಟಕ – Domingoನ ಕಥೆ ಬರ್ದಿದ್ದೆ. ಹೊಲೇರಿದ್ದಾರೆ ಅಂತ ಗೊತ್ತು. ನಾವು ಮುಟ್ಟೋದಿಲ್ಲ ಅಂತ ಗೊತ್ತು. ಸಣ್ಣದಿದ್ದಾಗ ನಾನೂ ಮುಟ್ಟಿಲ್ಲ. ಆದರೆ ಆ ನಾಟಕ ಇಡೀ ನಾನೇ assume ಮಾಡಿದ ಒಂದು situation. ಇಲ್ಲಿ ಹಾಗಲ್ಲ. ಅದಕ್ಕೆ ಬೇಕಾದ paractical ಅನುಭವ ಇದನ್ನೇ study ಮಾಡಲಿಕ್ಕೆ ಹೋಗಿ ಅಲ್ಲಿ – ಪುತ್ತೂರು ತಾಲ್ಲೋಕ್ economic condition ಮತ್ತು cultural condition. ಇದಕ್ಕೋಸ್ಕರ ಮೂರು ತಿಂಗಳ ಕಾಲ ಆರುನೂರು ಮನೆಗಳನ್ನು ಸಂಚರಿಸಿ ಎಲ್ಲ record ಮಾಡಿಕೊಡು ಅಭ್ಯಾಸ ಮಾಡಿದ್ದು. ಹಾಗೆ ಅಭ್ಯಾಸ ಮಾಡಿದ ಕಾಲದಲ್ಲಿ ಇವರ picture ಇಷ್ಟು drastic….

ಅನಂತಮೂರ್ತಿ : ಆ ಕಾಲದಲ್ಲಿ ಕೆಲವು ಹರಿಜನ ವರ್ಗಕ್ಕೆ ಭೂಮಿ ಸಿಗ್ತಿತ್ತಾ ಸಾರ್?

ಕಾರಂತ : ಹರಿಜನ ವರ್ಗಕ್ಕೆ ಇವತ್ತೂ ಕೊಟ್ಟವರಿಲ್ಲ. ಮನೆಗೆ ಜಾಗ ಬಿಟ್ಟು.

ಅನಂತಮೂರ್ತಿ : ಇವತ್ತಿಗೂ ಉಳಿದಿರೋ ಸಮಸ್ಯೆ ಇದು.

ಕಾರಂತ : ಇವತ್ತಿಗೂ ಉಳಿದಿರೋ ಸಮಸ್ಯೆ ಮಾತ್ರವಲ್ಲ ಇದು ನನ್ನ latest ಕಾದಂಬರಿಗಳಲ್ಲಿ ಅದನ್ನೇ ತಿರುಗಿ ಹೇಳಿದ್ದೇನೆ. ಮೊದಲನೇ ಕಾಲದಲ್ಲಿ ಎಂಜಲು ಕೊಡ್ತಿದ್ರು. ನಾನು ಹೊರಗೆ ಬಂದ ಕಾಲದಲ್ಲಿ ಮನೆ ಮನೆಗೆ ಹೋಗಿ ಎಂಜಲು ಕೊಡಬೇಡಿ, ಅನ್ನ ಕೊಡಿ ಅಂತ ಬೇಡಿದ್ದೇನೆ. ಹದಿನೈದು ದಿವಸದ ಹಿಂದೆ ಮಠದಿಂದ ಹೊರಗೆ ಬೀಳುವಾಗ ಎಂಜಲನ್ನು ಅವರು ತಿನ್ನೋದನ್ನ ನೋಡಿದ್ದೇನೆ. ಆದ್ದರಿಂದ ಇವರ ಸಮಸ್ಯೆ ಮುಗ್ದಿಲ್ಲ. ನನಗೆ ‘ಚೋಮ’ನ್ನ ತಕ್ಕೊಂಡು, ಇದನ್ನ ಹೇಳಲಿಕ್ಕೆ ಸಾಧ್ಯ ಇಲ್ಲ. ಚೋಮನಂತಹ ಹರಿಜನರಿಗೆ ನಾಲ್ಕು ಗದ್ದೆಯ ತುಂಡು, ನಾಲ್ಕು ಗಿಡ ನೆಡ್ತಕ್ಕಂಥ ಜಾಗವನ್ನು ಇವತ್ತಿಗೂ ಕೊಟ್ಟಿಲ್ಲ. ಇವರು ಇವತ್ತೇನಾದ್ರೂ ಕೊಟ್ಟಿದ್ದು ಇದ್ರೆ, ಮೊದಲೇ ದುಡೀತಿದ್ದಿದ್ದಕ್ಕಾಗಿ. ಹಾಗೆ ದುಡಿದಂತಹ ವ್ಯಕ್ತಿಗೆ ಕೊಟ್ಟಿದ್ದಾರೇ ಹೊರತು ಹರಿಜನರು ಇವತ್ತು ಕೃಷಿಕರಾಗಿಲ್ಲ. ಆದ ನಿದರ್ಶನ ನನ್ನಕಣ್ಣಿಗಂತೂ ಕಂಡಿಲ್ಲ.

ಅನಂತಮೂರ್ತಿ : ಹಾಗಾದರೆ ನೀವು ಈಗಲೂ ಈ ಬಗ್ಗೆ ಯೋಚನೆ ಮಾಡ್ತೀರಿ, ಮತ್ತು ಬರೀಬೇಕು ಅನ್ನಿಸುತ್ತೆ ನಿಮಗೆ?

ಕಾರಂತ : ಬರೀಬೇಕಂತ ಬರ್ಯೋ ಕಾಲದಲ್ಲಿ ಏನಾಗುತ್ತೋ ಈಗ್ಹೇಳ್ಲಾರೆ. ಯಾಕಂದ್ರ ಬರಿಯೋ ಕಾಲದಲ್ಲಿ ಯಾವ ವಿಷಯ ತಕ್ಕೋಳ್ತೇನೆ ಅಂತ ನಾನು ಬರಿಯಲಿಕ್ಕೆ ತೊಡಗಿದ ಮೇಲೇ ನನಗೆ ಗೊತ್ತಾಗುತ್ತೇ ಹೊರತು ಅದರ ಮೊದಲೇ ಅಲ್ಲ. ಬರೀಬೇಕು ಅಂತ ಇವತ್ತಿಗೆ ಅನ್ನಿಸಬಹುದು. ಅದು ನೂರು ಸಾರಿ ಮರ್ತು ಹೋಗುತ್ತೆ. ಬರಿಯೋ ದಿನ ಬಂದಾಗ ಏನು ಬರೀತೇನೋ ಅದು ನನಗೆ control ಇಲ್ಲ.

ಅನಂತಮೂರ್ತಿ : ಕೊನೇದಾಗಿ ಒಂದು ಪ್ರಶ್ನೆ ಸಾರ್, ನೀವು ಮೊದಲು ಒಂದು ಮಾತು ಹೇಳಿದ್ರಿ: ನೀವು ಒಬ್ಬ mysticನ್ನು ಕಂಡಿದ್ದೀರಿ, ನಿಮಗೆ ಅವರ ಬಗ್ಗೆ ಒಂದು ರೀತಿಯ ಗೌರವವೂ ಉಂಟಾಗಿತ್ತು ಅಂತ. ಕೆಲವರ ಪ್ರಕಾರ ನೀವು retaionalist. ಅವರ ಅನುಮಾನ ಏನಂದ್ರೆ ಕಾರಂತರಿಗೆ ವಿಚಾರಕ್ಕೆ ನಿಲುಕದೇ ಇರುವ ಅಚಿಂತ್ಯವಾದದ್ದು ಮತ್ತು ಅದೃಷ್ಟವಾದ್ದು ಇದೆಯೋ ಇಲ್ವೋ? ಅವರು ಬರೀ ಈ material ಲೋಕಕ್ಕೆ ಬದ್ಧರಾದ ದೃಷ್ಟಿಯುಳ್ಳವರೋ – ಅಂತ?

ಕಾರಂತ : ಈ ಪ್ರಶ್ನೆ ಮಕ್ಕಳ ಪ್ರಶ್ನೆ ಅಂತ ನನಗೆ ಕಾಣುತ್ತೆ. ನನ್ನೂರಿಗಿಂತ ದೊಡ್ಡೂರು ಇದೆಯೋ ಇಲ್ಲವೋ? ವಿಶ್ವ ಇದೆಯೋ ಇಲ್ಲವೋ? ಇಡೀ world ಪೂರಾ ನನಗೆ ತಿಳಿಯಲಾರದ mystery ಯಿಂದಲೇ ತುಂಬಿಕೊಂಡಿದೆ ಅಂತ ನನಗೆ ಚೆನ್ನಾಗಿ ಗೊತ್ತಿದೆ. ನೀವು ಅದಕ್ಕೆ ಯಾವ ಹೆಸರು ಬೇಕಾದ್ರೂ ಕೊಡಿ. ನನಗೆ ತಿಳಿಯದ್ದು ಈ ಲೋಕದಲ್ಲಿ ಎಷ್ಟಿದೆ ಅಂತ ಹೆಜ್ಜೆ ಹೆಜ್ಜೆಗೆ ನಾನು ಆಶ್ಚರ್ಯಪಡ್ತಾ ಇದ್ದೇನೆ. ನಾಮಕರಣ ನೀವು ಯಾವುದೇ ಮಾಡಿ – ಅದು ಆಕಾಶ ಇರಬಹುದು, minute cell ಇರಬಹುದು, ಅಥವಾ parap psychology ಇರಬಹುದು, ಇನ್ನೂ ಸಾವಿರ ವಿಷಯ ಇರಬಹುದು. ಆದ್ದರಿಂದ ಇಂಥಾದ್ದು ನಿನಗೇನು ದೊರೆತಿದೆಯೋ ಇಲ್ವೋ, ಅದರ ಬಗ್ಗೆ ನಿಷ್ಠೆ ಇದೆಯೋ – ಇಲ್ಲವೋ – ದೊರೆತಿದ್ದೋ ಇಲ್ಲವೋ, ನೀನು ಕೇಳಬೇಕೊ ಮಾರಾಯ…? ನಾನು ಇದ್ದದ್ದು ನೋಡ್ಕೊಂಡು ಆಕಾಶ ಎಷ್ಟು ದೂರ ಅಂತ ಕೇಳಿದ್ರೆ ನನ್ನನ್ನು ಆ ಪ್ರಶ್ನೆಗಳೇ baffle ಮಾಡುತ್ತವೆ. ಈ ಉದ್ದ, ಆ ಅಳತೆ, ದೂರ, ಅದರ ಶಕ್ತಿ ಯಾವುದನ್ನೂ ನಾನು conceive ಕೂಡ ಮಾಡಲಾರೆ. ನನ್ನ limitation ತುಂಬಾ ಚೆನ್ನಾಗಿ ನನಗೆ ಗೊತ್ತಿದೆ.

ಅನಂತಮೂರ್ತಿ : Thanks ಸರ್.

(ಆಕಾಶವಾಣಿ, ಮೈಸೂರು ಬಿತ್ತಿರಿಸಿದ ಸಂದರ್ಶನದ ಪೂರ್ಣ ಪಾಠವನ್ನು ಬರೆದುಕೊಂಡು ಸಂಪಾದಿಸಿದವರು: ಶ್ರೀಮತಿ ಮೀನಾಕ್ಷಿ ಮತ್ತು ಶ್ರೀಮತಿ ಸರ್ವಮಂಗಳ. ಸಾಕ್ಷಿ೩೮: ಏಪ್ರಿಲ್ ೭೮ರಲ್ಲಿ ಪ್ರಕಟಿತ.)

* * *