ಕನ್ನಡ ಲೇಖಕರಲ್ಲಿ ಹೆಚ್ಚು ಜನ ಸಾಹಿತ್ಯದ ವಿದ್ಯಾರ್ಥಿಗಳು. ಆದರೆ ಕನ್ನಡದ ಒಬ್ಬ ಪ್ರಮುಖ ಕಥೆಗಾರರಾದ ಸದಾಶಿವರು ಜೀವಶಾಸ್ತ್ರದ ವಿದ್ಯಾರ್ಥಿಯಾಗಿರುವುದು ಅವರ ಬರವಣಿಗೆಯ ದೃಷ್ಟಿಯಂದ ಆರೋಗ್ಯಕರವಾಗಿ ಪರಿಣಮಿಸಿದೆ ಎಂದು ನಾನು ತಿಳಿದಿದ್ದೇನೆ. ಸಾಹಿತ್ಯ ಹೇಗಿರಬೇಕು ಎನ್ನುವ ಬಗ್ಗೆ ಫ್ಯಾಶನ್ನಿಗಾಗಿ, ಉದ್ಯೋಗದ ಒತ್ತಾಯಕ್ಕಾಗಿ ತಲೆಯ ತುಂಬ ಅಭಿಪ್ರಾಯಗಳನ್ನು ತುಂಬಿಕೊಂಡು ತಮ್ಮ ಸ್ವಧರ್ಮದಿಂದ ವಂಚಿತರಾಗುವ: ವ್ಯಕ್ತಿ ಸದಾಶಿವರಲ್ಲ. ಗುಪ್ತವಾಗಿ ಒಳಗಿನಿಂದಲೇ ಬೆಳೆಯುವ, ಬರೆಯುವ ಕ್ರಿಯೆಯಲ್ಲಿಯೇ ತನ್ನೊಳಗೇನು ಅಡಗಿದೆಯೆಂಬುದನ್ನು ಪತ್ತೆಮಾಡಿಕೊಳ್ಳುತ್ತಾ ಹೋಗಬಲ್ಲ ಶಕ್ತಿ ಈ ಲೇಖಕರಿಗಿದೆ. ನಾವಿಬ್ಬರೂ ಬಹಳ ಕಾಲದಿಂದ ಆತ್ಮೀಯ ಸ್ನೇಹಿತರು ಎನ್ನುವ ಕಾರಣದಿಂದ ನಾನು ಇನ್ನೊಂದು ಮಾತನ್ನು ಇಲ್ಲಿ ಹೇಳಬಹುದು. ಸದಾಶಿವರಿಗೆ ಕಥೆಗಾರನಿಗೆ ಬೇಕಾದ ವೈವಿಧ್ಯಪೂರ್ಣವಾದ ಜೀವನದ ಅನುಭವವಿದೆ. ಮಲೆನಾಡಿನ ಹಳ್ಳಿಯ ವಾತಾವರಣ, ಬಡ ಮಧ್ಯಮ ವರ್ಗದ ನಗರ ಜೀವನ – ಎಲ್ಲವನ್ನೂ ಅತ್ಯಂತ ಸಮೀಪದಿಂದ ಕಂಡವರು ಇವರು. ನಮ್ಮ ಚಳುವಳಿಗೆ ಸೇರಿದವರಾಗಿ ಸದಾಶಿವ ಬರೆಯದೆ, ಪ್ರಗತಿಶೀಲ ಲೇಖಕರಾಗಿದ್ದ ಪಕ್ಷದಲ್ಲಿ ಈ ತನಕ ಇವರು ಹತ್ತಾರು ಕಾದಂಬರಿಗಳಲ್ಲಿ ತಮ್ಮ ಅನುಭವವಗಳನ್ನೆಲ್ಲ ನೀರು ನೀರಾಗಿ ಹಂಚುವುದು ಸುಲಭಸಾಧ್ಯವಿತ್ತೆಂದು ನನ್ನ ಊಹೆ. ತನಗೆ ವಿಶಿಷ್ಟವಾದ ಜೀವನ ದ್ರವ್ಯ ಯಾವುದು, ಅದಕ್ಕೆ ಯಾವ ರೂಪ ಕೊಟ್ಟರೆ ತಾನು ಹೇಳಬೇಕಾದ್ದು ಅರ್ಥಪೂರ್ಣವಾಗುತ್ತದೆ ಎಂಬುದನ್ನು ಹುಡುಕುವ ನವ್ಯ ಸಾಹಿತ್ಯದ ಸಂದರ್ಭ ಸದಾಶಿವರ ಪ್ರತಿಭೆಗೆ ಅತ್ಯಂತ ಅವಶ್ಯವಾದ ಶಿಸ್ತಾಗಿ ಪರಿಣಮಿಸಿತು ಎಂಬುದು ಇವರ ಕಥೆಗಳುದ್ದಕ್ಕೂ ಕಾಣುತ್ತದೆ.

ಸ್ವತಃ ಸಾಹಿತಿಗಳಾದವರ ಕಸುಬುಗಾರಿಕೆಯ ಕುತುಹೂಲಕ್ಕಾಗಿಯೇ ಅಲ್ಲದೇ, ಸಾಹಿತಿಗಳಲ್ಲದವರಿಗೂ ಗಂಭೀರವಾಗಿ ಬೇಕೆನ್ನಿಸಬಲ್ಲ ಕೃತಿಗಳನ್ನೂ ಕೊಡುವ ಶಕ್ತಿ ಸದಾಶಿವರಿಗಿದೆ. ಆದ್ದರಿಂದ ಸದಾಶಿವರಿಗೆ ತನ್ನ ಆವರಣ ಮತ್ತು ಭಾಷೆಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಕಾರಂತರಿಂದ ಕಲಿಯುವುದು ಸಾಧ್ಯವಾಯಿತು ಅನ್ನಿಸುತ್ತದೆ. ಕಾರಂತರ ಪ್ರಭಾವ, ನವ್ಯ ಚಳುವಳಿಯ ಪ್ರೇರಣೆ ಎರಡಕ್ಕೂ ಒಟ್ಟಿಗೆ ಒಳಗಾದ ಸದಾಶಿವರಿಗೆ ತುಂಬ ಜನಪ್ರಿಯವಾಗುವಂತೆ ಸ್ವಾರಸ್ಯಪೂರ್ಣವಾಗಿ ಕಥೆ ಹೇಳುವ ಸಾಮರ್ಥ್ಯವೂ ಇದೆ. ಆದ್ದರಿಂದಲೇ ತಮಗಿರುವ ಕಲೆಗಾರಿಕೆಯನ್ನು ಅರ್ಥಪೂರ್ಣವಾಗುವಂತೆ ದುಡಿಸಿಕೊಳ್ಳಲೆಂದು ಸದಾಶಿವ ಎಷ್ಟು ಸಂಯಮದಿಂದ ಬರೆಯುತ್ತ ಬಂದಿದ್ದಾರೆ ಎಂಬುದು ಮೆಚ್ಚಬೇಕಾದ ವಿಷಯ.

ಸದಾಶಿವರನ್ನು ಪ್ರಸಿದ್ಧಿಗೆ ತಂದ ಕಥೆ – ‘‘ನಲ್ಲಿಯಲ್ಲಿ ನೀರು ಬಂದಿತು.’’ ಆದರೆ ಈ ಕಥೆಯಲ್ಲಿ ಬರುವ ನಲ್ಲಿಯ ಸಂಕೇತ ಕೃತಕವೆನಿಸುತ್ತದೆ. ಮುಖ್ಯ ಕಥೆಯ ಜೊತೆ ನಲ್ಲಿಯ ಕಥೆ ಹೆಣೆದುಕೊಂಡು ಬಂದಿದ್ದರೂ ಸಹ ನಲ್ಲಿಯಲ್ಲಿ ನೀರು ಅಕಸ್ಮಾತ್ ಬರುವ ಘಟನೆ, ಕಥೆಯ ಕೊನೆಯಲ್ಲಿ ಹೃದಯ ಪರಿವರ್ತನೆಯನ್ನು ಪ್ರಕಟಿಸುವ ರೀತಿ ಪೂರ್ವಯೋಜಿತವಾದ್ದು, ಸುಲಭವಾದ್ದು ಎಂದು ಅನ್ನಿಸುತ್ತದೆ. (‘‘ಅಪರಿಚಿತರು’’ ಮತ್ತು ‘‘ಹುಲಿಯ ಕರೆ’’ ಕಥೆಗಳಲ್ಲೂ ಕಥೆಯ ಅರ್ಥವ್ಯಾಪ್ತಿಯನ್ನು ಹಿಗ್ಗಿಸಲೆಂದು ಬರುವ ಸಂಕೇತಗಳು ಗೌಪ್ಯವಾಗಿ ಕೆಲಸ ಮಾಡುವುದಿಲ್ಲ.)

ಆದರೆ ಈ ಸಂಗ್ರಹದ ಕೊನೆಯ ಕಥೆಯಾದ ‘‘ಹಾವು’’ ಈ ದೃಷ್ಟಿಯಿಂದ ಸದಾಶಿವರ ಕಥನ ಶಕ್ತಿಯಲ್ಲಾದ ಬೆಳವಣಿಗೆಯನ್ನು ತೋರಿಸುತ್ತದೆ. ಈ ಕಥೆಯಲ್ಲಿ ಹಾವು ಸಾಂಕೇತಿಕವೇ? ಆಗಿದ್ದರೆ ಹೇಗೆ? ಯಾಕೆ? ಎಂಬುದು ಎಲ್ಲೂ ನಿಶ್ಚಿತವಾಗಿ ಪತ್ತೆಯಾಗದಂತೆ ಕಥೆಯೊಳಗೆ ಗುಪ್ತವಾಗಿ ಕೆಲಸ ಮಾಡುತ್ತದೆ. ಹಾವಿನ ಪ್ರಸಂಗ ಒಂದು ಅಸಂಬದ್ಧ ಘಟನೆ; ಕಥೆ ಹೇಳುವವನ ಮನಸ್ಸನ್ನು ಪ್ರಚೋದಿಸುವ ಒಂದು ಸಂಗತಿ. ಪ್ರಾಸಂಗಿಕವಾಗಿ ಹಾವಿನ ಕಥೆ ಹೇಳುತ್ತ, ಆದರೆ ತನ್ನ ನಿಜವಾದ ಕಥೆಯನ್ನು ಹೇಳಲು ಪ್ರಯತ್ನಿಸುತ್ತ ಈ ಪ್ರಯತ್ನದಲ್ಲಿ ವಿಫಲನಾಗುತ್ತ. ಈ ವಿಫಲತೆಗೆ ಕಾರಣ ಹುಡುಕುತ್ತ, ಮತ್ತೆ ಪ್ರಯತ್ನಿಸುತ್ತ ಕೊನೆಯಲ್ಲಿ ನಿಲ್ಲುವ ಕಥೆಯ ನಾಯಕ ಸದಾಶಿವರ ಈಚಿನ ಕಲೆ ಎದುರಿಸುತ್ತಿರುವ ಅಭಿವ್ಯಕ್ತಿ ಹೋರಾಟಕ್ಕೆ ಕುರುಹಾಗಿ ನಿಲ್ಲುತ್ತಾನೆ:

ಬರೆಯುವುದು ಬರೆಯಬೇಕು ಎನ್ನುವಷ್ಟು ಸುಲಭವಲ್ಲ. ಅದರಲ್ಲೂ ನಾನೇ ಒಂದಲ್ಲ ಒಂದು ರೀತಿ ಭಾಗಿಯಾಗಿರುವಾಗ ಅಥವಾ ಕಾರಣನಾಗಿರುವಾಗ ಇನ್ನೂ ಕಷ್ಟವೆನ್ನಿಸುತ್ತದೆ. ಅದರಿಂದ ಹೊರನಿಂತು ನೋಡುವುದು ಅದಕ್ಕೊಂದು ಅರ್ಥವಿಟ್ಟು ಬರೆಯುವುದು ಎಂದಾಗ ಕರುಳನ್ನು ಕಿತ್ತಿಟ್ಟಂತೆ ಆಗುತ್ತದೆಯಲ್ಲ? ಬರೆಯುವುದು ನೋವಿನ ಕೆಲಸ ಅನ್ನಿಸುತ್ತದೆ ಇತ್ತೀಚಿಗೆ. ಈ ಹುಡುಕುವ ಪ್ರಯತ್ನ ಹಾವಿನ ಕಥೆಯ ಜೊತೆಗೆ ಉದ್ದಕ್ಕೂ ಬರುತ್ತದೆ. ವರ್ಣಿಸುವ ಕ್ರಮದಲ್ಲೇ ವರ್ಣಿಸದ್ದರ ಒಳಗುಟ್ಟನ್ನು ತಿಳಿಯುವಂತೆ ‘‘ರಂಪ’’ದ ಬಗ್ಗೆ ಸದಾಶಿವರು ಹೇಗೆ ಬರೆಯಬಲ್ಲರು ಎಂಬುದಕ್ಕೆ ಈ ಕಥೆಯ ಉದ್ದಕ್ಕೂ ಒಳ್ಳೆಯ ಉದಾಹರಣೆಗಳು ಸಿಗುತ್ತವೆ. ‘‘ರಂಪ’’ ಸದಾಶಿವರು ಮತ್ತೆ ಮತ್ತೆ ಕಥೆಗಳಲ್ಲಿ ಬಳಸುವ ವಿಷಯವೆಂಬುದನ್ನು ಗಮನಿಸಬೇಕು. ಪ್ರಗತಿಶೀಲ ಲೇಖಕರಾಗಲೀ ಭಾವಾತಿರೇಕ ಮಾರ್ಗದ ರೋಮ್ಯಾಂಟಿಕ್‌ಲೇಖಕರಾಗಲೀ ಮೆಲೋಡ್ರಾಮಾದ ಹುಮ್ಮಸ್ಸನ್ನು ಬಿಟ್ಟುಕೊಟ್ಟು ‘ರಂಪ’ ವನ್ನು ಹೀಗೆ ಹೀಗೆ ವರ್ಣಿಸುತ್ತಿರಲಿಲ್ಲ. ಸದಾಶಿವರ ಭಾಷೆಯ ಧಾಟಿ ಇಲ್ಲಿ ರಂಪದ ನಿಜಸ್ವರೂಪವನ್ನು ಹಿಡಿಯುತ್ತದೆ.

ಅಮ್ಮನಿಲ್ಲದಿದ್ದಾಗ ಅವಳ ಕಾಲಿಗೆ ಬಿದ್ದು ಕೇಳಿಕೊಂಡೆ – ದಯವಿಟ್ಟು ಕೂಗಬೇಡ. ನಾಲ್ಕು ಮನೆಗೆ ಕೇಳಿಸಿದರೆ ನನ್ನ ಮರ್ಯಾದೆ ಏನು ಉಳಿದೀತು – ಇತ್ಯಾದಿಯಾಗಿ. ನನ್ನ ಮುಂದೆ ಯಾಕೆ ಬೀಳ್ತೀರಿ, ದೇವರ ಮುಂದೆ ಬೀಳಿ, ಮುದುಕಿ ಯಾಕೆ ಇನ್ನೂ ಸಾಯಲಿಲ್ಲಾಂತ ಕೇಳಿ, ಎಂದಳು ಕಾಲನ್ನು ಎಳೆದುಕೊಳ್ಳುತ್ತ. ಕೋಪ ನೆತ್ತಿಗೇರಿತು. ಕಪಾಲಕ್ಕೆರಡು ಬಿಟ್ಟೆ. ತಲೆ ಜಜ್ಜಿಕೊಂಡಳು. ತಾಯಿ ಮಗ ಕೂಡಿಯೇ ತನ್ನನ್ನು ಸಾಯಿಸುತ್ತಿದ್ದಾರೆ ಎಂದು ಬೊಬ್ಬೆಯಿಟ್ಟಳು. ಗೌಜು ಕೇಳಿ ಪಕ್ಕದ ಮನೆಯವಳು ಬಂದಳು. ಸೈಕಲ್ ಹಿಡಿದು ಮನೆಯಿಂದ ಓಡಿದೆ.

ರಂಪದ ಸೈಕಾಲಜಿ ಬಹಳ ವಿಚಿತ್ರವಾದುದು. ಜೀವನಕ್ಕೆ ಸೂಕ್ಷ್ಮವಾಗಿ ತೆರೆದುಕೊಂಡಿರುವ ಮನೋಧರ್ಮ ಅನುಭವದಿಂದ ಆಘಾತಗೊಳ್ಳುತ್ತದೆ; ಕಲಿಯುತ್ತದೆ; ನಿಜವಾಗಿ ನೋಯುತ್ತದೆ; ಬದಲಾಗುತ್ತದೆ. ಆದರೆ ರಂಪಕ್ಕೆ ಒಗ್ಗಿಹೋದ ಮನಸ್ಸು ನೋಯುವುದರಿಂದ ಏನೂ ಕಲಿಯುವುದಿಲ್ಲ. ಇದು ಒಂದು ಬಗೆಯ ನರವಾಗುವುದನ್ನು ಸದಾಶಿವರು ಅತ್ಯಂತ ತೀವ್ರವಾಗಿ ‘‘ಹಾವು’’ ಕಥೆಯಲ್ಲಿ ಸೂಚಿಸಿದ್ದಾರೆ. ಭಾವಾತಿರೇಕತೆಯ ಆಕರ್ಷಕ ಮಾರ್ಗವನ್ನು ಸುಳ್ಳುಗಳನ್ನು ಬಿಟ್ಟು ಇನ್ನೂ ಹೊರಬರದ ಸದಾಶಿವರ ಮೊದಲನೆ ಸಂಗ್ರಹದ ಕೆಲವು ಕಥೆಗಳನ್ನು ಓದಿದಾಗ, ಇವರು ಕಥೆಗಳ ಕೊನೆಗಳನ್ನು ತುಂಬ ಮೃದು ಮಾಡುತ್ತಾರೆ ಎಂದು ನನಗೆ ಅನ್ನಿಸಿದ್ದುಂಟು. ಬಿಡಿಸಲಾರದ ಗಂಟಾಗಿ ಉಳಿಯಬೇಕಾದ್ದನ್ನೆಲ್ಲ ಇವರು ತಮ್ಮ ಪಾತ್ರಗಳ ಮನಸ್ಸನ್ನು ಮೃದುಗೊಳಿಸುವುದರ ಮೂಲಕ ಆ ಕಥೆಗಳಲ್ಲಿ ಪರಿಹರಿಸಿಕೊಂಡು ಬಿಡುತ್ತಿದ್ದರು. ಆದರೆ ಈ ಸಂಗ್ರಹದ ಬಹುಪಾಲು ಕಥೆಗಳು ಬದುಕು ಇನ್ನೂ ಸಂಕೀರ್ಣವಾದುದು ಎನ್ನುವ ದೃಷ್ಟಿಯನ್ನು ಒಳಗೊಂಡಿವೆ. ‘‘ನೋಡಿದೆಯಾ ಅಮ್ಮ ಅವಳ ಧಿಮಾಕು’’ ಕಥೆಯಲ್ಲಿ ಒಮ್ಮೆ ಕರಗಿದರೂ ಮತ್ತೆ ದೃಢವಾಗುವ ಪದ್ಮಳ ಮನಸ್ಸು, ಗಂಡನ ಬಗ್ಗೆ ಅವಳಲ್ಲಿ ಬದಲಾಗದೆ ಉಳಿಯುವ ಅಸಹ್ಯಭಾವ ಸದಾಶಿವರ ಪ್ರಬುದ್ಧತೆಗೆ ಒಂದು ಉದಾಹರಣೆ.

ನಮ್ಮ ಕಥೆಗಾರರ ನಡುವೆ ಸದಾಶಿವರಿಗೆ ಜನಪ್ರಿಯವಾಗುವಂತೆಯೂ ಬರೆಯುವ ಶಕ್ತಿಯಿದೆ ಎಂದು ನಾನು ಈ ಮೊದಲು ಹೇಳಿದ್ದಕ್ಕೆ ‘‘ಸರಳುಗಳ ನಡುವೆ’’ ಎಂಬ ಕಥೆ ಒಂದು ಒಳ್ಳೆಯ ಉದಾಹರಣೆ. ‘ಜನಪ್ರಿಯ’ ಎನ್ನುವ ಶಬ್ದವನ್ನು ನಾನು ಇಲ್ಲಿ ಹೊಗಳಲು ಬಳಸುತ್ತಿಲ್ಲವೆಂಬುದನ್ನು ಹೇಳಬೇಕಾಗಿಲ್ಲ. ಆದರೂ ‘‘ಸರಳುಗಳ ನಡುವೆ’’ ಎನ್ನುವಂತಹ ಕಥೆಯನ್ನು ನಾವೆಲ್ಲರೂ ಅತ್ಯಂತ ಆಸಕ್ತಿಯಿಂದ ಓದಿ ಮುಗಿಸುತ್ತೇವೆಂಬುದೂ ನಿಜವೆ. ಈ ಕಥೆಯಲ್ಲಿ ಸದಾಶಿವರು ಅತ್ಯಂತ ಸ್ವಾರಸ್ಯವಾಗಿ ಸಿನಿಮೀಯವಾಗಿ ವಿವರಗಳನ್ನು ಜೋಡಿಸುತ್ತಾರೆ. ಆದರೆ ನಮ್ಮ ಆಸಕ್ತಿಯನ್ನು ಕೆರಳಿಸಲೆಂದು ಬರುವ ಭಾವನೆಗಳು (ಕಳ್ಳ ಒಳಹೊಕ್ಕಾಗ ಶುರುವಾಗುವ ರಾಧಳ ಹೆರಿಗೆ ನೋವು, ದಿಗಿಲು ಇತ್ಯಾದಿ) ಓದುಗನ ಭಾವನೆಗಳನ್ನು ಕಥೆಯ ಲಾಭಕ್ಕಾಗಿ, ಕೆರಳಿಸುವ ಸಲುವಾಗಿ ಮಾತ್ರ ಬರುತ್ತವೆ. ನಾವು ತುಂಬಾ ಬೆಲೆ ಕೊಡುವ ಭಾವನೆಗಳನ್ನು ತಾವು ಹೇಳುವ ಕಥೆಯಲ್ಲಿ ಆಸಕ್ತಿಯನ್ನು ಹುಟ್ಟಿಸಲೆಂದು ಹೀಗೆ ಒಬ್ಬ ಕಥೆಗಾರ ದುರುಪಯೋಗಪಡಿಸಿಕೊಂಡಾಗ ಕಥೆಯ ಕಡೆಯಲ್ಲಿ ನಾವು ಪೆಚ್ಚಾಗುತ್ತೇವೆ. ಈ ರೀತಿಯ ಪ್ರಚೋದನೆ ಚಟವಾದಾಗ ನಮ್ಮ ಸಂವೇದನೆ ಜಡ್ಡಾಗುತ್ತದೆ. ‘‘ಮಗು ಮಲಗಿತ್ತು’’ ಕಥೆ ಕೂಡ ಈ ಬಗೆಯದೆ. ‘‘ತೋಳ ಬಂತು ತೋಳ’’ ಎಂಬ ಕಥೆಯಲ್ಲಿ ಆದಂತೆ ಇಂತಹ ಕಥೆಗಳ ರುಚಿ ಹತ್ತಿದ ಓದುಗ ನಿಜವಾದ ಭಾವನಗಳಿಗೆ ಪ್ರತಿಕ್ರಿಯೆ ತೋರಿಸದೇ ಹೋಗಬಹುದು. ಭಾವನಾವಶವಾಗುವ ಓದುಗನ ಶಕ್ತಿಯನ್ನು ಕಥೆಗಾಗಿ ದೋಚುತ್ತಾ ಹೋಗುವುದು ಅಪಾಯಕರ ಮಾರ್ಗವೆನ್ನುವುದಕ್ಕೆ ಇಂತಹ ಕಥೆಗಳು ಉದಾಹರಣೆ.

‘ಮತ್ತೆ ಮಳೆ ಹೊಯ್ಯುತ್ತಿದೆ, ಎಲ್ಲ ನೆನಪಾಗುತಿದೆ’ – ಬಹಳ ಜನ ಓದುಗರಿಗೆ ಪ್ರಿಯವಾಗಬಲ್ಲ ಕಥೆ. ನರಹರಿಯ ದೃಷ್ಟಿಯಿಂದ ಕೆಲವು ಕಡೆ ಕಥೆ ಹೇಳುವುದು ಅನವಶ್ಯವೆನಿಸುತ್ತದೆ. ಪ್ರೊ.ರಂಗನಾಥರ ಸ್ವಗತ ಕೆಲವು ಕಡೆ ತನ್ನ ಮೃದತ್ವಕ್ಕೇ ಮನಸೋತವನೊಬ್ಬನ ತೋರುಗಾಣಿಕೆಯಾಗಿ ಕಾಣುತ್ತದೆ. ಆದರೆ ರಂಗನಾಥರ ವಿವೇಕ, ಪ್ರಬುದ್ಧತೆಗಳನ್ನೂ ಪೇಚಿಗೆ ಸಿಕ್ಕಿಸುವ ನರಹರಿಯ ಪ್ರೇಮದ ಯಶಸ್ಸು ಕಥೆಯ ಅತ್ಯುತ್ತಮ ತಿರುವು. ಈ ದೃಷ್ಟಿಯಿಂದ ಕಥೆಯ ಕೊನೆಯಲ್ಲಿ ಬರುವ ವ್ಯಾಕುಲ ಅರ್ಥವತ್ತಾಗಿದೆ.

ಸುಲಭವಾಗಿ ವಿಶ್ಲೇಷಣೆಗೆ ಸಿಗಲಾರದಂತಹ ಜೀವನದ ದುರಂತವನ್ನು ಹೇಳುವಾಗ ಸದಾಶಿವರು ತುಂಬ ಮನೋಜ್ಞವಾಗಿ ಬರೆಯಬಲ್ಲರು ಎಂಬುದಕ್ಕೆ ‘ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ’ – ಒಳ್ಳೆಯ ಉದಾಹರಣೆ. ಬರವಣಿಗೆಯ ಧಾಟಿಯಲ್ಲಿ ಇರುವ ಸೂಕ್ಷ್ಮತೆಯಿಂದಾಗಿ ಮಾತ್ರ ಇಂತಹ ಕಥೆಗಳು ಯಶಸ್ವಿಯಾಗುತ್ತವೆ. ಪ್ರೇಮ, ದಾಂಪತ್ಯ, ಭಗ್ನ ಪ್ರಣಯ ಇತ್ಯಾದಿ ಸಂಗತಿಗಳನ್ನು ಇಷ್ಟೊಂದು ಹದವಾಗಿ ವ್ಯಾಕುಲಪೂರ್ಣವಾಗಿ ಬರೆಯುವುದು ನಿಜಕ್ಕೂ ಕಷ್ಟದ ಸಂಗತಿ. ಸದಾಶಿವರು ಒಂದು ಪ್ರಬುದ್ಧವಾದ ಜೀವನದ ದೃಷ್ಟಿಯ ಕಡೆಗೆ ತಮ್ಮ ಕಥೆಗಾರಿಕೆಯಲ್ಲಿ ಬೆಳೆಯುತ್ತಿದ್ದಾರೆ ಎಂಬುದನ್ನು ಇಂಥಹ ಕಥೆಗಳು ಸೂಚಿಸುತ್ತವೆ. ಈ ಕಥೆಯಲ್ಲಿ ಕಾಣುವ ಗುಣ ಇನ್ನಷ್ಟು ಸ್ಪಷ್ಟವಾಗುವುದು ‘ನೆರಳು ಬೆಳಕಿನಾಟದಲ್ಲಿ ಕಂಡಿದ್ದೇನು’ ಎಂಬ ಕಥೆಯಲ್ಲಿ. ತನ್ನ ನಿಸ್ಸಹಾಯಕತೆಯನ್ನು ಅರಿತವನ ದೃಷ್ಟಿಕೋನದಿಂದ ಈ ಕಥೆಗಳನ್ನು ಸದಾಶಿವ ಬರೆದಿದ್ದಾರೆ ಎಂಬುದು ಗಮನಾರ್ಹ. ಆದ್ದರಿಂದ ಏನನ್ನೂ ನಿರ್ಣಾಯಕವಾಗಿ ಹೇಳಲಾರೆನೆಂಬ ಬಿಚ್ಚು ಮನಸ್ಸು ಕಥೆಯ ಧಾಟಿಯನ್ನು ನಿರ್ಧರಿಸುತ್ತದೆ. ವ್ಯಾಕುಲಪೂರ್ಣವಾದ ಈ ಧಾಟಿ ಸದಾಶಿವರ ಮನೋಧರ್ಮಕ್ಕೆ ಅತ್ಯಂತ ಸಹಜವಾದ ಅಭಿವ್ಯಕ್ತಿಯೆನಿಸುತ್ತದೆ; ಪ್ರಾಯಶಃ ಸದಾಶಿವರು ಕಥೆಗಾರರಾಗಿ ಕೊಡಬಹುದಾದ ಅತ್ಯುತ್ತಮವಾದದ್ದು ಈ ವ್ಯಾಕುಲದ ಧಾಟಿ ಹಿಡಿದೇ ಬಂದೀತು:

ಬಾಲ್ಯದ ಈ ನೆನವರಿಕೆಗಳು ನೋವು ಕೊಡುವಾಗಲೇ ಇವುಗಳಲ್ಲಿ ಏನೋ ಅರ್ಥವಿದೆಯೆಂದು ಅನ್ನಿಸುತ್ತಿದೆಯಲ್ಲ –

ಆ ಅನ್ನಿಸುವಿಕೆಯೇ ನನಗೆ ಕೊಡುವ ಸಮಾಧಾನ. ಇದನ್ನು ಚಿಕ್ಕಪ್ಪನಿಗೆ ಹೇಳಿದರೆ, ಅವರಿಗೆ ಅರ್ಥವಾಗುತ್ತದೆ ಎನ್ನುವುದು ಯಾವ ಖಾತ್ರಿ? ಬದಲು, ಅಸಡ್ಡೆಯಿಂದ ನಕ್ಕುಬಿಟ್ಟಾರು. ಅವರ ಕಣ್ಣಿಗೆ ನಾನಿನ್ನೂ ಹುಡುಗನಷ್ಟೇ.

ಅನೇಕ ದೃಷ್ಟಿಗಳಿಂದ ಈ ಸಂಗ್ರಹದ ಸುಂದರವಾದ ಕಥೆ ‘‘ರಾಮನ ಸವಾರಿ ಸಂತೆಗೆ ಹೋದದ್ದು’.’ ಕಥೆಯ ಪ್ರಾರಂಭದಲ್ಲಿ ಬರುವ ಸಂತೆಗೆ ಹೊರಡುವ ಏರ್ಪಾಡುಗಳ ಗಡಿಬಿಡಿ ತುಂಬ ಸುಂದರವಾಗಿ ವರ್ಣಿತವಾಗಿದೆ. ರಾಮ ಸಂತೆಗೆ ಹೊರಡಲು ಸಿದ್ಧವಾಗುವ ವರ್ಣನೆ ಕಣ್ಣಿಗೆ ಕಟ್ಟುವಂತಿದೆ. ಹೀಗೆ ಕಥೆಯ ಪ್ರಾರಂಭದ ಅವಸರವಿಲ್ಲದ ನಿಧಾನ ನಡಿಗೆ, ಮೃದು ಹಾಸ್ಯ, ಆದರೆ ಈ ಸಡಗರಕ್ಕೆ ತದ್ವಿರುದ್ಧವಾಗಿ ಕಥೆಯ ಕೊನೆಯಲ್ಲಿ ಬರುವ ರಂಪ ಒಂದಕ್ಕೊಂದು ಎದುರಾಗಿ ನಿಂತು ನಮ್ಮ ಮೇಲೆ ವಿಚಿತ್ರ ಪರಿಣಾಮವನ್ನುಂಟು ಮಾಡುತ್ತವೆ. ರಾಮನ ತಾಯಿ ಪಾರ್ವತಿ ಯಾಕೆ ತನ್ನ ಗಂಡನ ಜೊತೆ ಬಾಳಲಾರದೆ ಹೋದಳೆಂಬುದು ಸೂಕ್ಷ್ಮವಾಗಿ ಕಥೆಯಲ್ಲಿ ಮೂಡಿದೆ. ಮುಗ್ಧ ದೃಷ್ಟಿಕೋನದಿಂದ ಮೂಡುವ ಈ ಕಥೆ ಸಾಂಸಾರಿಕ ದುರಂತವನ್ನು ತುಂಬ ಶ್ರೀಮಂತವಾಗಿ ತನ್ನೊಳಗೆ ಪ್ರಕಟಿಸಿಕೊಳ್ಳುತ್ತದೆ. ಜೀವನದ ಮೂಕ ನೋವುಗಳನ್ನು, ಅರ್ಥಹೀನ ರಂಪವನ್ನು ಮುಗ್ಧ ಬಾಲಕನಾದ ರಾಮನ ಕಣ್ಣಿಂದ ನೋಡಿರುವುದೇ ಈ ಕಥೆಯ ಗಾಢವಾದ ಸೌಂದರ್ಯಕ್ಕೆ ಕಾರಣ. ಎಲ್ಲ ರಂಪವನ್ನು ಮುಗ್ಧ ಬಾಲಕನಾದ ರಾಮನ ಕಣ್ಣಿಂದ ನೋಡಿರುವುದೇ ಈ ಕಥೆಯ ಗಾಢವಾದ ಸೌಂದರ್ಯಕ್ಕೆ ಕಾರಣ. ಎಲ್ಲ ರಂಪವನ್ನೂ ತನ್ನ ಹುಡುಗತನದ ಜೀವನೋತ್ಸಾಹದಲ್ಲಿ, ಕುತೂಹಲದಲ್ಲಿ ಮೀರಿ ನಿಲ್ಲುವ ರಾಮನಿಂದಾಗಿ ಕಥೆ ತನ್ನ ಮೂಲ ದ್ರವ್ಯವಾದ ನೋವಿನ (ಉದಾಹರಣೆಗೆ: ರಾಮ ನೋಡುವ ೧೨೭) ಕಥೆಯ ಆಕರ್ಷತೆ ದುರಂತವನ್ನು ಇನ್ನಷ್ಟು ಒಡೆದು ತೋರಿಸುತ್ತದೆ.

ಜನಪ್ರಿಯವಾಗುವಂತೆ ಆಕರ್ಷಕವಾಗಿ ಕಥೆ ಹೇಳುವ ಶಕ್ತಿಯಿದ್ದೂ ಬರೆಯುವ ಕಷ್ಟವೇನು ಎನ್ನುವುದನ್ನು ಅರಿತ ಲೇಖಕ ಸದಾಶಿವ. ತಾನು ಪ್ರತ್ಯೇಕವಾಗಿ ಹೇಳಲೇಬೇಕಾದ್ದು ಏನಿದೆ, ಇದನ್ನು ಹೇಗೆ ಹೇಳಿದರೆ ಅರ್ಥಪೂರ್ಣವಾಗುತ್ತದೆ, ಯಾಕೆ ಇದನ್ನು ತಾನು ಹೇಳಬೇಕಾಗಿ ಬಂದಿದೆ – ಇವೆಲ್ಲ ನಿಜವಾದ ಲೇಖಕನನ್ನು ಕಾಡುವ ಪ್ರಶ್ನೆಗಳು. ಅನುಭವ ಬೆಳೆಯುತ್ತ ಹೋದಂತೆ ಈ ಪ್ರಶ್ನೆಗಳು ಗಾಢವಾಗುತ್ತವೆ. ಬರೆಯುವುದು ಹವ್ಯಾಸವಾದವನಿಗೆ ಈ ಪ್ರಶ್ನೆಗಳು ಅಮುಖ್ಯವಾಗಬಹುದು. ಆದರೆ ಸಫಲತೆಯನ್ನು ಹುಡುಕುವ ಲೇಖಕ ತನ್ನ ಒಟ್ಟು ಅನುಭವದ ವಾಸ್ತವಿಕತೆಗೂ ತನ್ನ ಬರವಣಿಗೆ ವ್ಯಕ್ತಪಡಿಸುವ ಜೀವನದ ಒಟ್ಟು ಸತ್ವಕ್ಕೂ ಸಂಬಂಧಗಳನ್ನು ಹುಡುಕುತ್ತ ಹೋಗುತ್ತಾನೆ. ಸದಾಶಿವರಂತಹ ಲೇಖಕರಿಗೆ ಈ ಪ್ರಶ್ನೆಗಳೆಲ್ಲ ಮುಖ್ಯ. ಆದ್ದರಿಂದ ಬರೆಯುವುದು ಬಹಳ ಅವಶ್ಯ. ಈ ಸಂಕಲನದ ಕೆಲವು ಕಥೆಗಳು ಒಟ್ಟಿನಲ್ಲಿ ಸೋಲಲಿ, ಗೆಲ್ಲಲಿ – ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವ ನಮ್ಮ ತಲೆಮಾರಿನ ಲೇಖಕರಲ್ಲಿ ಸದಾಶಿವರೂ ಒಬ್ಬರು ಎಂಬುದನ್ನು ಸಿದ್ಧಪಡಿಸುತ್ತವೆ. ನಾವು ಸಾಮಾನ್ಯವಾಗಿ ನೋಡಲು ಹಿಂಜರಿಯುವ ಬದುಕಿನ ನಿಷ್ಠುರ ಸತ್ಯಗಳನ್ನು ಮೃದುಗೊಳಿಸುವಂತೆ ಒಳಗೊಳ್ಳಬಲ್ಲ (ವ್ಯಾಕುಲದ ಧಾಟಿಯಲ್ಲಿ ಒಳಗೊಳ್ಳಬಲ್ಲ) ಇವರ ಸಂವೇದನೆ ಈ ಸಂಕಲನದ ಕಥೆಗಳಲ್ಲಿ ಕಾಣುವುದಕ್ಕಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಪಡೆದುಕೊಳ್ಳಲು ಹವಣಿಸುತ್ತಿದೆ ಎಂಬುದು ಒಟ್ಟಿನಲ್ಲಿ ನಾವು ಸದಾಶಿವರ ಬರವಣಿಗೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು. 

ಕೆ. ಸದಾಶಿವ ಅವರ ‘‘ಅಪರಿಚಿತರು’’ ಪುಸ್ತಕಕ್ಕೆಮುನ್ನುಡಿ ೧೯೭೧