ಕಾವ್ಯವಾಚನ ಕೇಳಿಸಿಕೊಳ್ಳಲು ಕ್ಯೂ ನಿಲ್ಲಬೇಕಾಗಿ ಬಂದ ಅಪೂರ್ವ ಅನುಭವ ನನಗಾಗಿದ್ದು ಅಲೆನ್ ಗಿನ್ಸ್‌ ಬರ್ಗ್‌ನನ್ನು ಕೇಳಿಸಿಕೊಳ್ಳಲೆಂದು ಚಿಕಾಗೋನಲ್ಲಿ ಒಂದು ರಾತ್ರಿ ಸಮಕಾಲೀನ ಕಲೆಯ ಮ್ಯೂಸಿಯಂಗೆ ಹೋದಾಗ. ರಾತ್ರಿಯ ಕ್ರೂರವಾದ ಚಳಿಗಾಳಿ, ಭಾರವಾದ ಉಲ್ಲನ್, ಕೋಟು, ಗ್ಲೌಸು, ಮಫ್ಲರ್ ತೊಟ್ಟೂ ಮೈ ಬೆತ್ತಲಯಾಗಿದ್ದಂತೆ ಥರಗುಟ್ಟುವ ಅನುಭವ. ಬೀದಿ ದೀಪದ ಬೆಳಕಿನಲ್ಲಿ ಎದುರಿಗಿಂತ ನಮ್ಮ ಹಿಂದೆ ಇನ್ನೂ ಉದ್ದದ ಕ್ಯೂ ನೋಡಿ ನಾವು ನೆಮ್ಮದಿ ಪಡಬೇಕಾಯಿತು.

‘ಈ ವಾಚನಕ್ಕೆ ಜಾಗ ಸಿಕ್ಕಲಿಲ್ಲ’, ಮುಂದೆ ನಿಂತವನೊಬ್ಬ ಹೇಳಿದ,

‘ಹಾಗಾದರೆ ಇನ್ನೊಂದು ವಾಚನ ಏರ್ಪಡಿಸಬಹುದು’ – ಮತ್ತೊಬ್ಬ ಸಿಗರೇಟ್ ಹಚ್ಚಿ ತಾಳ್ಮೆಯಿಂದ ನುಡಿದ.

ಹೆಚ್ಚು ಮಂದಿ ನೀಲಿಜೀನ್ಸ್ ತೊಟ್ಟವರೆ. ಕಳೆದ ದಶಕದ ಗಿನ್ಸ್‌ ಬರ್ಗ್ ಉತ್ಸಾಹಿಗಳು. ಕೆಲವರ ಕತ್ತಿನಲ್ಲಿ ಮಣಿಸರ, ಹಲವರು ಉದ್ದಕೂದಲು ಗಡ್ಡ ಬಿಟ್ಟವರು. ಚಳಿಯಲ್ಲೂ ಕೈಕೂಸನ್ನು ಎತ್ತಿಕೊಂಡವಳೊಬ್ಬಳು. ಕ್ಯೂನಲ್ಲಿ ಕಾದು ನಿಂತವರ ಆಡುವ ಮಕ್ಕಳು.

‘ನೀವು ಬರೆಯುವ ರೀತಿಯ ಕಾವ್ಯ ಕೇಳಿಸಿಕೊಳ್ಳಲು ಹೀಗೆ ಜನ ಎಂದಾದರೂ ಕ್ಯೂ ನಿಂತಾರ?’ ನಾನು ರಾಮಾನುಜನರನ್ನು ಕೇಳಿದೆ. ಕ್ಯೂ ನಿಲ್ಲಿಸಬಲ್ಲ ಕಾವ್ಯ ಬೇರೆ; ಸಾಹಿತ್ಯ ವಿದ್ಯಾರ್ಥಿಗಳು ಮೆಚ್ಚುವ ಕಾವ್ಯ ಬೇರೆ. ಅವುಗಳ ಹಿಂದಿರುವ ಪ್ರೇರಣೆ, ಅವು ಮಾತಾಗುವ ಕ್ರಮ, ಯಾವ ಪರಿಣಾಮ ಅಪೇಕ್ಷಿಸಿ ಅವು ಹುಟ್ಟುತ್ತವೆ – ಎಲ್ಲ ಬೇರೆ ಬೇರೆ.

ಗಿನ್ಸ್‌ ಬರ್ಗ್‌ನನ್ನು ಕೇಳಿಸಿಕೊಳ್ಳಲು ನಿಂತಿದ್ದ ಬಹು ಮಂದಿ ವಿಯಟ್‌ನಾಂ ಯುದ್ಧದ ವಿರೋಧಿಗಳು, ಪಾಟ್ ಸೇದುವುದು ಕಾನೂನು ಸಮ್ಮತವಾಗತಕ್ಕದ್ದೆಂದು ವಾದಿಸುವವರು. ಗಿನ್ಸ್‌ ಬರ್ಗ್ ಹೋಮೋಸೆಕ್ಸುಯಲ್ ಎಂಬುದರಿಂದ ವಿಚಲಿತರಾಗದವರು. ಅಮೆರಿಕಾದ ಜೀವನಕ್ರಮದಿಂದ ಬೋರಾದವರು. ಉಡಿಗೆ ತೊಡಿಗೆಯಿಂದ ಪರಸ್ಪರ ಗುರುತಿಸಿಕೊಳ್ಳಬಲ್ಲ ಒಳಸಂಸ್ಕೃತಿಯೊಂದನ್ನು ನಿರ್ಮಿಸಿಕೊಂಡವರು. ಗಿನ್ಸ್‌ ಬರ್ಗ್ ಬರೆಯುವ ಕಾವ್ಯ ಇವರನ್ನು ಗೆಲ್ಲಲು, ಒಲಿಸಿಕೊಳ್ಳಲು ಸರ್ವಸ್ಸಾಗಿ ವಿಶಿಷ್ಟವಾಗಬೇಕಾಗಿಲ್ಲ; ಬೆನ್ನು ತಟ್ಟಿ ತನ್ನ ಪಾಡಿಗೆ ನಡೆದುಬಿಡುವ ಸ್ನೇಹಿತನಂತೆ ಆರಾಮದ ಸಂಬಂಧ ಕಾವ್ಯಕ್ಕೂ ಇವರಿಗೂ ‘cool’ ಇವರಿಗೆ ಪ್ರಿಯವಾದ ಶಬ್ದ.

ಇಪ್ಪತ್ತರ ದಶಕದ ಬಂಡಾಯಗಾರ ತರುಣರಿಗೆ ಎಲಿಯಟ್, ಪೌಂಡ್, ಜಾಯ್ಸ್‌ ನಂಥವರು ಹೀರೋಗಳಾದರೆ ಇವರಿಗೆ ಗಿನ್ಸ್‌ ಬರ್ಗ್, ಕರುವಾಕ್ ಹೀರೋಗಳು. ನಿಧಾನವಾಗಿ ಓದಿಸಿಕೊಳ್ಳಲಿಕ್ಕೆ ಏನೇನು ಉಪಾಯ ಬೇಕೋ ಎಲ್ಲವನ್ನೂ ಪೌಂಡ್ ರೀತಿಯ ಕಾವ್ಯ ಬಳಸುತ್ತದೆ. ಓದುಗನ ಗಮನವನ್ನು ಕಾವ್ಯದಲ್ಲಿ ಬಿಗಿಯಲೆಂದು ಮಾಧ್ಯಮವನ್ನು ಸಾಂದ್ರಗೊಳಿಸುವ ಉಪಾಯಗಳು ಇವು. ಕಾದಂಬರಿಯಲ್ಲಿ ಹೆನ್ರಿ ಜೇಮ್ಸ್, ಜಾಯ್ಸ್ ಹೀಗೇ ವೇಗದ ವಿರೋಧಿಗಳು. ಇವರ ಲಯ, ಪ್ರತೀಕ, ಅರ್ಥದ ತೊಡಕುಗಳು, ವಾಕ್ಯ ರಚನೆ – ಎಲ್ಲವೂ ಓದುವ ಕ್ರಿಯೆಯನ್ನು ನಿಧಾನಗೊಳಿಸುವಂಥವು. ಸರಾಗವೆಂದರೆ ಇಂಥ ಲೇಖಕರಿಗೆ ಅನುಮಾನ; ಉತ್ಸಾಹವೆಂದರೆ ಸಂಕೋಚ. ಪದಕ್ಕೂ ಓದುಗನಿಗೂ ನಡುವಿನ ಸಂಬಂಧ ಸರಳವಾಗಕೂಡದೆಂಬ ಕಾರಣಕ್ಕಾಗಿ ಹರಿಯುವ ಮನಸ್ಸನ್ನೂ ಅಡ್ಡಕಟ್ಟಿ ಹಿಡಿದಿಡಬಲ್ಲ ಉಪಾಯಗಳನ್ನು ಈ ಮೇಲಿನ ಲೇಖಕರೆಲ್ಲ ಹುಡುಕಿದ್ದಾರೆ.

ಓದುಗನ ಜೊತೆ ಸಾಹಿತ್ಯ ಪಡೆಯುವ ಈ ಸಂಬಂಧಗಳ ವ್ಯತ್ಯಾಸಕ್ಕೂ ಲೇಖಕರ ರಾಜಕೀಯ ಧೋರಣೆಗಳಿಗೂ ಇರುವ ನಂಟನ್ನು ನಾನು ಚಿಂತಿಸುತ್ತ ನಿಂತೆ. ಎರಡು ಮೂರು ದಿನಗಳ ಹಿಂದೆ ಗಿನ್ಸ್‌ ಬರ್ಗ್ ಜೊತೆಗೆ ರಾಮಾನುಜನ್ ಊಟ ಮಾಡುತ್ತಿದ್ದಾಗ ನಡೆದ ಸಂಭಾಷಣೆಯನ್ನು ಅವರು ನನಗೆ ಹೇಳಿದ್ದರು. ಭಾರತದ ಬಗ್ಗೆ ಆಸಕ್ತರಾದ ಹಲವರು ರಾಮಾನುಜನ್ನರ ಭಾಷಾಂತರಗಳನ್ನು ತುಂಬ ಮೆಚ್ಚಿಕೊಂಡಿದ್ದಾರೆ. ಶಿವಶರಣರ ವಚನಗಳ ಭಾಷಾಂತರ Speaking of Siva ಮತ್ತು ತಮಿಳು ಸಂಗಂ ಕಾವ್ಯದ ಭಾಷಾಂತರ Interior Landscape ಅನೇಕ ಕವಿಗಳ ಮೇಲೂ ಪ್ರಭಾವ ಮಾಡಿವೆ. ನನ್ನ ಗೆಳೆಯ ಕವಿ ಡ್ಯಾನಿ ವೈಸ್ ಬೋರ್ಟ್‌ಗೆ Speaking of siva ಅವನು ಓದಿದ ಕೆಲವೇ ಮುಖ್ಯಪುಸ್ತಕಗಳಲ್ಲಿ ಒಂದು. ಅವನ ಗೆಳೆಯ ಟೆಡ್ ಹ್ಯೂಸನೂ Speaking of siva ಓದಿ ತುಂಬ ಖುಷಿಯಾಗಿ ಅವನಿಗೆ ಕಾಗದ ಬರೆದಿದ್ದ. ಗಿನ್ಸ್‌ ಬರ್ಗ್ ಭಾರತೀಯ ಕಾವ್ಯದ ಬಗ್ಗೆ ರಾಮಾನುಜನ್ ಜೊತೆ ಆಸಕ್ತಿಯಿಂದ ಮಾತನಾಡಿದನಂತೆ. ಗಿಂಡಿಯಿಂದ ಗಿಂಡಿಗೆ ತೈಲ ಇಳಿಯುವ ರೀತಿಯಲ್ಲಿ ಹಿಂದಿನ ಪದ್ಯದ ಕೊನೆಯ ಮಾತು ಮುಂದಿನ ಪದ್ಯದ ಮೊದಲ ಮಾತಾಗಿ ಹರಿಯುವ ಕಾವ್ಯದ ಕ್ರಮ ಗಿನ್ಸ್‌ ಬರ್ಗ್ ನ ಕುತೂಹಲವನ್ನು ಹೇಗೆ ಕೆರಳಿಸಿತು ಎಂದು ರಾಮಾನುಜನ್ ನನಗೆ ವಿವರಿಸಿದ್ದರು. ಎಲಿಯಟ್ ಉಪನಿಷತ್ತ, ಗೀತೆಗಳಿಂದ ಆಕರ್ಷಿತನಾದರೆ, ಗಿನ್ಸ್‌ ಬರ್ಗ್ ಬೌದ್ಧಧರ್ಮ ಮತ್ತು ನಮ್ಮ ಜಾನಪದಗಳಿಂದ ನಮ್ಮ ‘ಓರಲ್’ ಸಂಪ್ರದಾಯಗಳಿಂದ ಆಕರ್ಷಿತನಾಗುವುದು ನನಗೆ ಅರ್ಥಪೂರ್ಣ ಎನ್ನಿಸಿತು.

ನಾವು ಊಹಿಸಿದ್ದಂತೆ ನಮಗೆ ಮೊದಲನೇ ವಾಚನದಲ್ಲಿ ಜಾಗವಿರಲಿಲ್ಲ. ಬಾಗಿಲಲ್ಲಿ ನಿಂತು ಒಳಬಿಡುತ್ತಿದ್ದಾತ ಮುಂದಿನ ವಾಚನಕ್ಕೆ ವಿನಂತಿ ಮಾಡಿಕೊಂಡ. ನಾನು, ರಾಮಾನುಜನ್, ಮಾಲಿ, ಅಂಜಿ – ಚಳಿಯಲ್ಲಿ ನಿಲ್ಲುವುದು ಬೇಸರವಾಗಿ ಬಾರ್ ಹುಡುಕಿಕೊಂಡು ಹೋದೆವು. ಇನ್ನೊಂದು ವಾಚನಕ್ಕಾಗಿ ಕಾದಿದ್ದ ಕ್ಯೂನಲ್ಲಿ ನಮ್ಮ ಜಾಗ ಕಳೆದುಕೊಳ್ಳಬಹುದೆಂಬ ಆತಂಕವನ್ನು ಚಳಿ ಮತ್ತು ಬಾಯಾರಿಕೆ ಗೆದ್ದಿತ್ತು. ಎಲ್ಲ ಬಾರುಗಳೂ ಭರ್ತಿ, ಇಲ್ಲವೇ ಸಂಗೀತ, ಗದ್ದಲ, ಕೊನೆಗೊಂದು ಬಾರ್ ಸಿಕ್ಕಿತು. ಬೋರ್ಬನ್ ಆರ್ಡರ್ ಮಾಡಿ ಕೂತೆವು. ಮಾಲಿ ತುಂಬ ಗೆಲುವಾಗಿ ಸಾಹಿತ್ಯದ ಬಗ್ಗೆ ಮಾತಾಡಲು ಪ್ರಾರಂಭಿಸಿದರು. ಆಂಜಿ – ಚೀನಿ ಹುಡುಗಿ – ಮೌನವಾಗಿ ಕೂತಿದ್ದಳು. ನಾನು ಗಿನ್ಸ್‌ ಬರ್ಗ್ ಬಗ್ಗೆ ಕೇಳಿದ್ದ ಒಂದು ಘಟನೆಯನ್ನು ಹೇಳಿದೆ.

ಆಯೋವಾದಲ್ಲಿ ಚರಿತ್ರೆಯ ಪ್ರಾಧ್ಯಾಪಕನಾದ ಪಾಲ್ ಗ್ರೀನೋ ಬಂಗಾಳದಲ್ಲಿ ಕೆಲವು ಕಾಲ ಇದ್ದ. ಟರಾಕೋಟಾ ದೇವಾಲಯಗಳನ್ನು ನೋಡಲೆಂದು ಹಳ್ಳಿಗಳನ್ನು ಸಂಚರಿಸುತ್ತ ಒಂದು ಕಾಡು ಕೊಂಪೆಗೆ ಹೋಗಿದ್ದ. ಅಲ್ಲಿಯ ಹಳ್ಳಿಗರು ಆತನನ್ನು ತುಂಬ ಪ್ರೀತಿಯಿಂದ ಕಂಡರಂತೆ. ಜೊತೆಗಿದ್ದ ಬಂಗಾಳೀ ಬಲ್ಲವನೊಬ್ಬ ಬಿಳಿಯರ ಬಗ್ಗೆ ಈ ಹಳ್ಳಿಗರಿಗೆ ಯಾಕಷ್ಟು ಉತ್ಸಾಹವೆಂದು ವಿಚಾರಿಸಿದಾಗ ಆ ಹಳ್ಳಿಯಲ್ಲಿ ಗಿನ್ಸ್‌ ಬರ್ಗ್ ಕೆಲವು ದಿನಗಳು ಇದ್ದದ್ದು ತಿಳಿಯಿತಂತೆ. ಹಳ್ಳಿಗರಿಗೆ ಗಿನ್ಸ್‌ ಬರ್ಗ್ ಕವಿಯೆಂದು ಗೊತ್ತಿಲ್ಲ. ಆದರೆ ತಮ್ಮ ಹಾಗೆ ಬದುಕಿದ ಗಿನ್ಸ್‌ ಬರ್ಗ್ ಅವರಿಗೆಲ್ಲ ತುಂಬ ಆತ್ಮೀಯ ವ್ಯಕ್ತಿಯಾಗಿದ್ದನಂತೆ. ಪಾಲ್ ಪ್ರಕಾರ ಅಮೆರಿಕಾದ ಯುವಕರಲ್ಲಿ ಭಾರತದ ಬಗ್ಗೆ ತೀವ್ರ ಆಸಕ್ತಿ ಹುಟ್ಟಿಸಲು ಕಾರಣರಾದವರೆಂದರೆ ಗಿನ್ಸ್‌ ಬರ್ಗ್ ಮತ್ತು ರವಿಶಂಕರ್; ರಾಜಕಾರಣಿಗಳಲ್ಲ, ಪ್ರೊಫೆಸರುಗಳಲ್ಲ – ಈ ಇಬ್ಬರು.

ನನಗೂ ಇದು ಅನುಭವಕ್ಕೆ ಬಂದಿತ್ತು. ಅಮೆರಿಕಾದಲ್ಲಿ ಗುಪ್ತವಾಗಿ ಹರಡುತ್ತಿರುವ ಸಂಸ್ಕೃತಿಯೊಂದಿದೆ. ಅಧಿಕ ಸಂಖ್ಯೆಯಲ್ಲಿ ತರುಣರು ಈ ಸಂಸ್ಕೃತಿಗೆ ಸೇರಿದವರು. ನಮ್ಮ ದೇಶದ ‘ಸಾಧು ಸಂತರು’ ‘ಗುರುಗಳು’ ಇಷ್ಟವಾಗುವುದು ಈ ಜನರಿಗೆ. ಮಹರ್ಷಿ ಮಹೇಶ ಯೋಗಿಯ ಭಕ್ತರು ಇವರು. ನಾನು ಪಾಲ್ ಹತ್ತಿರ ತಮಾಷೆ ಮಾಡಿದ್ದೆ; ನಮ್ಮ ದೇಶಗಳನ್ನು ನಿಮ್ಮ ಸಿ.ಐ.ಎ. ದುರ್ಬಲಗೊಳಿಸಲು ಪ್ರಯತ್ನಿಸುತ್ತೆ. ಆದರೆ ನಿಮ್ಮನ್ನು ದುರ್ಬಲಗೊಳಿಸಲು ನಮಗೆ ಸಿ.ಐ.ಎ. ಬೇಡ; ನಮ್ಮ ‘ಗುರು’ಗಳೇ ಆ ಕೆಲಸ ಮಾಡಿಯಾರು. ಇನ್ನೊಂದು ದೊಡ್ಡ ಹಿಂಡು ‘ಗುರು’ಗಳನ್ನು ನಿಮ್ಮ ದೇಶಕ್ಕೆ ಕಳುಹಿಸಿದರೆ ಸಾಕು. ನಿಮ್ಮ ಯುವಕರನ್ನೆಲ್ಲ ಅವರು ಭಜನೆಗೆ ಹಚ್ಚಿ ನಿಮ್ಮ ದೇಶವನ್ನು ಕ್ರಮೇಣ ನಮ್ಮ ದೇಶದ ಹಾಗೆ ಮಾಡಿಯಾರು! ಪಾಲ್ ನಕ್ಕಿರಲಿಲ್ಲ. ಆತ ‘ಭಕ್ತ’ನಲ್ಲದಿದ್ದರೂ ಅಮೆರಿಕಾ ಆಧ್ಯಾತ್ಮಿಕ ಪರಿವರ್ತನೆಗೆ ಯಾಕೆ ಸಿದ್ಧವಾಗುತ್ತಿರಬಹುದು ಎಂದು ವಾದಿಸಿದ್ದ.

ಆಂಜಿ ಚೀನೀ ಹುಡುಗಿ. ಚೈನಾದಿಂದ ಅವಳ ತಾಯಿತಂದೆ ಕ್ರಾಂತಿಯಾದ ನಂತರ ಅಮೆರಿಕಾಕ್ಕೆ ಬಂದು ನೆಲೆಸಿದರು. ಈಚೆಗೆ ಆಂಜಿ ಮಾವೋನಿಂದ ಆಕರ್ಷಿತಳಾಗಿದ್ದಳು. ಅವಳು ಈ ಗುರುಭಕ್ತಿ, ಆಧ್ಯಾತ್ಮ ಎಂದರೆ ಕೆರಳುತ್ತಾಳೆ, ಇದು ಇನ್ನೊಂದು ಅಮೆರಿಕಾದ Craze ಅಷ್ಟೆ ಎನ್ನುತ್ತಾಳೆ. ನಿಕ್ಸ್‌ ನ್‌ ಚೈನಾಕ್ಕೆ ಹೋದಾಗ ಅವನಿಗೆ ಪೀಕಿಂಗ್ ಡಕ್ ಅಡಿಗೆ ಬಡಿಸಿದರು ಎಂಬುದನ್ನು ಓದಿ ಇದ್ದಕ್ಕಿದ್ದಂತೆ ಹೇಗೆ ಎಲ್ಲ ಅಮೆರಿಕನ್ನರೂ ಚೈನೀ ರೆಸ್ಟೋರೆಂಟುಗಳಲ್ಲಿ ಪೀಕಿಂಗ್ ಡಕ್‌ನ್ನು ತಿನ್ನಲು ಅಪೇಕ್ಷಿಸಿದರು ಎಂದು ಅವಳು ನಗೆಯಾಡಿದ್ದಳು. ಎರಡನೇ ವಾಚನಕ್ಕೆ ನಮಗೆ ಜಾಗ ಸಿಕ್ಕಿತು. ಮ್ಯೂಸಿಯಂನಲ್ಲಿದ್ದ ಅನೇಕ ಬತ್ತಲೆ ವಿಗ್ರಹಗಳ ಜೊತೆ ನಾವು ನೆಲದ ಮೇಲೆ ಕೂತೆವು. ಎದುರು ಸ್ವಲ್ಪ ಎತ್ತರದ ವೇದಿಕೆಯ ಮೇಲೆ ಗಿನ್ಸ್‌ ಬರ್ಗ್ ಮೃದುವಾಗಿ ನಗುತ್ತ ಕೂತಿದ್ದ. ಅಷ್ಟು ಎತ್ತರದ ಆಳಲ್ಲ ಎನ್ನಿಸಿತು. ಉದ್ದ ಗಡ್ಡ ಮತ್ತು ಕೂದಲಿನಿಂದಾಗಿ ಭಾರತೀಯ ಋಷಿಯಂತೆಯೂ ಕಾಣುತ್ತಿದ್ದ; ಹಳೆ ಒಂಡಬಡಿಕೆ ಯಹೂದ್ಯ ಪ್ರವಾದಿಯಂತೆಯೂ ಕಾಣುತ್ತಿದ್ದ. ಆದರೆ ಆಶ್ಚರ್ಯವೆಂದರೆ ಗಿನ್ಸ್‌ ಬರ್ಗ್ ಬಿಸಿನೆಸ್ ಸೂಟ್ ತೊಟ್ಟಿದ್ದ; ಕೈ ಕಟ್ಟಿದ್ದ. ಮೇಲೆ ರುದ್ರಾಕ್ಷಿ ಸರವನ್ನೂ ಹಾಕಿಕೊಂಡಿದ್ದ. ಇದನ್ನು ಆಮೇಲೆ ಪಾಲ್ ಗಮನಕ್ಕೆ ತಂದಾಗ ಅವನು ಅದರಲ್ಲಿ ಆಶ್ಚರ್ಯವಿಲ್ಲ, ಗಿನ್ಸ್‌ ಬರ್ಗ್ ಈಗ ಮರ್ಯಾದಸ್ಥ ವ್ಯಕ್ತಿ, ಅವನಿಗೆ ಗುಗನ್ ಹೈಮ್ ಅವಾರ್ಡ್‌ ಕೂಡ ಸಿಕ್ಕಿದೆ. ಎಸ್ಟಾಬ್ಲಿಶ್‌ಮೆಂಟನ್ನು ಅವನು ಸೇರಿಯಾಗಿದೆ ಎಂದು ನಕ್ಕ. ಆಗಿನ ಹಿಪ್ಪಿಗಳು ಈಗ ಎಲೆಕ್ಟ್ರಿಕ್ ಬಾಚಣಿಗೆಗಳಲ್ಲಿ ತಲೆ ಬಾಚಿಕೊಳ್ಳುತ್ತಾರೆ ಎಂದ.

ನಮ್ಮ ಜೊತೆ ಕಾವ್ಯವಾಚನ ಕೇಳಿಸಿಕೊಳ್ಳಲು ಕೂತ ಬಹು ಮಂದಿ ಈಗ ಸಂಸಾರಿಗಳಾದ ಹಿಂದಿನ ದಶಕದ ಹಿಪ್ಪಿಗಳು. ಅರವತ್ತರ ದಶಕದ ಕ್ರಾಂತಿಯನ್ನು ನೆನೆದು ಈಗ ಹಳಹಳಿಸುವವರು. ಆಗ ಯುನಿವರ್ಸಿಟಿಗಳು ಕ್ರಾಂತಿಕಾರಕ ಕೇಂದ್ರಗಳಾಗಿದ್ದುವು. ವಿಯಟ್‌ನಾಂ ಯುದ್ಧದ ವಿರುದ್ದ, ಅಮೆರಿಕಾದ ಗೊಡ್ಡು ಸಂಪ್ರದಾಯಸ್ಥರ ವಿರುದ್ಧ, ಅರ್ಥಹೀನ ವಿದ್ಯಾಭ್ಯಾಸ ಪದ್ಧತಿಯ ವಿರುದ್ಧ, ಕಾಮ ಜೀವನದ ಸಂಕೋಚಗಳ ವಿರುದ್ಧ ದೊಡ್ಡದೊಂದು ಚಳುವಳಿ ಅಮೆರಿಕಾದಲ್ಲಿ ನಡೆದಿತ್ತು. ಆದರೆ ನಾನು ನೋಡಿದ ೨೦ – ೨೫ರ ಅಮೆರಿಕಾದ ಬಹುಪಾಲು ಯುವಕರು ರಾಜಕೀಯದಿಂದ ವಿಮುಖರಾದವರು. ನನಗೆ ಗೊತ್ತಿದ್ದ ಕೆಲವು ಗ್ರಾಜುಯೇಟ್ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾತ್ವಿಕ ಕಾರಣಗಳಿಗಾಗಿ ಕಷ್ಟಕ್ಕೊಳಗುಮಾಡುವಂಥವರಾಗಿರಲಿಲ್ಲ. ಚರಿತ್ರೆಯ ವಿಭಾಗದಲ್ಲಿ ಚೈನಾ ಇತಿಹಾಸದ ಎಂ.ಎ. ವಿದ್ಯಾರ್ಥಿಯೊಬ್ಬ ಮಾವೋನ್ನ ಮೆಚ್ಚಿಕೊಂಡಿದ್ದ; ಅದು ಗೊತ್ತಾಗಕೊಡದೆಂದು ನನಗೆ ಹೇಳಿದ. ಅವನು ಟೀಚಿಂಗ್ ಅಸಿಸ್ಟೆಂಟ್ ಆಗಿದ್ದ; ಅದರಿಂದ ಬರುತ್ತಿದ್ದ ಸಂಬಳ ಅವನಿಗೆ ಅಗತ್ಯವಿತ್ತು. ಆತ ಪ್ರಾಮಾಣಿಕ ಕೂಡ. ಸ್ವಾತಂತ್ರ್ಯದ ಮಾತಾಡುವಾಗ ನಾವು ಬಹಳ ಮುಖ್ಯ ಸಂಗತಿಯೊಂದನ್ನು ಮರೆಯತ್ತೇವೆ. ಅಮೆರಿಕಾದ ಯುವಕರಿಗೆ ದೇಶದ ಅಧ್ಯಕ್ಷ ಫೋರ್ಡ್‌ನನ್ನು ಟೀಕಿಸುವ ಸ್ವಾತಂತ್ರ್ಯವಿದೆ. ಆದರೆ ತಾನು ಕೆಲಸ ಮಾಡುವ ಇಲಾಖೆಯ ಮುಖ್ಯಸ್ಥನನ್ನು ಟೀಕಿಸುವ ಸ್ವಾತಂತ್ರ್ಯವಿರುವುದಿಲ್ಲ. ಇದ್ದರೂ ಸ್ವಾತಂತ್ರ್ಯ ಚಲಾಯಿಸಿದಾಗ ತೊಂದರೆಯಾಗುತ್ತದೆ. ಅಂದರೆ ಅಮೂರ್ತ ಸ್ವಾತಂತ್ರ್ಯ ಇದೆ; ಮೂರ್ತ ಸ್ವರೂಪದ ಸ್ವಾತಂತ್ರ್ಯ ಇಲ್ಲ. ಆದರೆ ಅರವತ್ತರ ದಶಕದಲ್ಲಿ ಮೂರ್ತ ಸ್ವಾತಂತ್ರ್ಯಕ್ಕಾಗಿಯೂ ಯುವಕರು ಬಂಡಾಯವೆದ್ದರು. ಆ ಬಂಡಾಯ ಸಂಪೂರ್ಣ ನಾಶವಾಯಿತೆಂದು ನಾನು ಹೇಳುತ್ತಿಲ್ಲ. ಈಗಲೂ ಅಮೆರಿಕಾದಲ್ಲಿ ಸ್ತ್ರೀ ಸ್ವಾತಂತ್ರ್ಯದ ಚಳವಳಿ ನಡೆಯುತ್ತಿದೆ – ತುಂಬ ಬಿರುಸಾಗಿಯೆ.

ಮಾಲಿ ಸಿಗರೇಟ್ ಹಚ್ಚಿದರು. ನಾನೂ ಹಚ್ಚಿದೆ. ಕಾರ್ಯಕ್ರಮದ ನಿರ್ವಾಹಕ ಸಿಗರೇಟು ಸೇದುವಂತಿಲ್ಲ ಎಂದು ನಮಗೆ ಹೇಳಿದರು. ವೇದಿಕೆಯ ಮೇಲೆ ಗಿನ್ಸ್‌ ಬರ್ಗ್ ಜೊತೆ ಕೂತಿದ್ದ ‘Naked Lunch’ ಕಾದಂಬರಿ ಬರೆದ ಲೇಖಕ ಸಿಗರೇಟು ಸೇದುತ್ತಿದ್ದ. ಅವನ ಕಡೆ ನೋಡಿದಾಗ ನಿರ್ವಾಹಕ ‘ಆತನಿಗೆ ಅನುಮತಿ ಕೊಡಲಾಗಿದೆ’ ಎಂದ. ನಾವು ವಾಚನಕ್ಕೆ ಕಾದೆವು. ಪ್ರೇಕ್ಷಕರಲ್ಲಿ ಹಲವರು ಗಿನ್ಸ್‌ ಬರ್ಗ್ ನನ್ನು ಸುತ್ತುವರಿದು ಮಾತನಾಡುತ್ತಿದ್ದರು. ಗಿನ್ಸ್‌ ಬರ್ಗ್ ಮೃದುವಾಗಿ ಹಿತವಾಗಿ ಆತ್ಮೀಯವಾಗಿ ನಗುತ್ತ ಅವರ ಹತ್ತಿರ ಮಾತಾಡುತ್ತಿದ್ದ. ಅವನ ಮೃದು ಸ್ವಭಾವದ ಬಗ್ಗೆ ಗೆಳೆಯ ಶ್ರೀನಿವಾಸ ಹೇಳಿದ್ದು ನೆನಪಾಯಿತು. ಗಿನ್ಸ್‌ ಬರ್ಗ್ ನನ್ನು ಅವನು ಭೇಟಿಯಾದಾಗ ಗಿನ್ಸ್‌ ಬರ್ಗ್ ಜೊತೆ ಅವನ ಮುದಿ ತಂದೆಯೂ ಇದ್ದನಂತೆ. ತಂದೆಯ ಜೊತೆ ಅವನು ವ್ಯವಹರಿಸುತ್ತಿದ್ದ ರೀತಿಯಿಂದ ಗಿನ್ಸ್‌ ಬರ್ಗ್ ತುಂಬ ಅಂತಃಕರಣದ ಮನುಷ್ಯ ಎನ್ನಿಸುತ್ತಿತ್ತು. ಅವನು ಹೋದಲ್ಲಿ ತಂದೆಯನ್ನೂ ಕರೆದುಕೊಂಡು ಹೋಗುತ್ತಾನೆ. ಆತ ಬರೆದ ಕವನಗಳನ್ನು ಓದಿಸುತ್ತಾನಂತೆ…..

ಶ್ರುತಿಪೆಟ್ಟಿಗೆಯ ಸದ್ದಾಯಿತು. ‘ಓಂ’ ಗಿನ್ಸ್‌ ಬರ್ಗ್ ನ ಕಂಠ ಹಿತವಾಗಿತ್ತು. ಶ್ರುತಿಗೆ ಕಂಠ ಕೂಡಿಸಿ ಕಣ್ಣುಮುಚ್ಚಿ ‘ಓಂ’ ಅನ್ನು ಸುಮಾರು ಒಂದು ನಿಮಿಷ ಮುಂದುವರಿಸಿದ. ಪ್ರೇಕ್ಷಕರಲ್ಲಿ ಕೆಲವರು ಧ್ಯಾನಶೀಲರಾದರು. ಕತ್ತು ಬಗ್ಗಿಸಿ ಕೂತರು. ಗಿನ್ಸ್‌ ಬರ್ಗ್ ಕವನಗಳನ್ನು ಓದಲು ಪ್ರಾರಂಭಿಸಿದ.

ಓಂ ಮಣಿ ಪದ್ಮೇ ಹುಂ.ಗುಂಗು ಸೃಷ್ಟಿಸುವಂಥ ‘ಓಂ’ನ್ನು ‘ಹಂ’ನ್ನು ಗಿನ್ಸ್‌ ಬರ್ಗ್ ಎಳೆದ. ಪ್ರತಿ ಪದ್ಯದ ಮೊದಲ ಸಾಲು ಇದಾಗಿತ್ತು. ಪದ್ಯದ ತುಂಬ ‘ಶಿಟ್‌’, ‘ಪಿಸ್’, ‘ಫಕ್’ ‘ಸ್ಕೂ’ಗಳಿದ್ದುವು. ಚೈನೀ ಹುಡುಗಿ ಆಂಜಿ ಹೇಸಿಕೊಂಡಳು. ಪದ್ಯದ ವಸ್ತು ಅಮೆರಿಕಾದ ಪೆಂಟಗನ್ನಿನ ಖಂಡನೆ. ಅಮೆರಿಕಾದ ಯಹೂದ್ಯರು ತೀರಾ ಪ್ರಭಾವಶಾಲಿಗಳಾಗುತ್ತಿದ್ದಾರೆ ಎಂದು ಪೆಂಟಗನ್ನಿನ ಮಿಲಿಟರಿ ಮುಖ್ಯಸ್ಥ ಹೇಳಿದ್ದು ಗಿನ್ಸ್‌ ಬರ್ಗ್ಗ ಗೆ ಕೋಪ ಬಂದಿರಬೇಕು. ಓಂಕಾರಗಳ ನಡುವೆ ಶ್ರುತಿಪೆಟ್ಟಿಗೆ ನಾದದಲ್ಲಿ ಅದ್ದಿದ ಕ್ರೂರವಾದ ವಿಡಂಬನೆ ಗಿನ್ಸ್‌ ಬರ್ಗ್ ನ ಕಂಠದಿಂದ ಹರಿಯಿತು, ಸುಮಾರು ಒಂದು ಗಂಟೆ ಕಾಲ.

ಸಭಿಕರೂ ಕವಿಯೂ ಒಂದಾಗಿದ್ದರು ಎಂದು ನನಗನ್ನಿಸಿತು. ಗಿನ್ಸ್‌ ಬರ್ಗ್ ನ ಕಾವ್ಯದ ಮಾತುಗಳು ಕೇಳುವವರಿಗಾಗಿ ಅರ್ಧ ದೂರ ಕೂಡ ಬರುವ ಅಗತ್ಯವಿರಲಿಲ್ಲ. ಸಭಿಕರು ಆ ಮಾತುಗಳಿಗೆ ಸಿದ್ಧವಾಗಿಯೇ ಬಂದಿದ್ದರು. ಕಣ್ಣಿನ ಸನ್ನೆಯೊಂದು ಸಾಕು – ಅರ್ಥವಾಗಲು – ಎನ್ನಿಸುವಂಥ ವಾತಾವರಣ ಏರ್ಪಟ್ಟಿತ್ತು. ಸಭಿಕರ ಸಿಟ್ಟು, ದ್ವೇಷ, ತಾಪ, ಸಂಕಟ, ಖುಷಿ ಎಲ್ಲವೂ ಗಿನ್ಸ್‌ ಬರ್ಗ್ ಕಾವ್ಯದ ಮಾತುಗಳಾಗಿದ್ದವು. ಅನ್ಯೋನ್ಯ ಭಾವನೆಯ ಗೆಳೆಯರು ಕೂಡಿದಾಗ ಹೇಳಬೇಕೆನ್ನಿಸಿದ್ದನ್ನು ನಿಜವೆನ್ನಿಸುವಂತೆ ಹೇಳುವ ಅಗತ್ಯವಿರುವುದಿಲ್ಲ. ಮಾತಿನಲ್ಲಿ ರಂಜಕ ಗುಣವಿದ್ದರೆ ಅದು ಮಾತಾಡುವವನ ಖುಷಿ ಅಷ್ಟೇ; ಸ್ನೇಹಿತರು ಜೊತೆಗಿದ್ದಾರೆಂಬ ಖುಷಿ – ಅದರಿಂದ ಹೊಮ್ಮುವ ಈ ಮಾತಿನ ಗುಣ ಆಡಿದ ಮಾತು ಕೇಳುವವನನ್ನು ಮುಟ್ಟಬೇಕು ಎನ್ನುವುದಕ್ಕಾಗಿ ಪ್ರಯತ್ನಪೂರ್ವಕವಾಗಿ ಸೃಷ್ಟಿಸುವ ಕಲೆ ಅಲ್ಲ. ಅನ್ಯೋನ್ಯದಿಂದ ಹುಟ್ಟುವ ಗಮ್ಮತ್ತು ಅದು. ಗಿನ್ಸ್‌ ಬರ್ಗ್ ಕಾವ್ಯದ ರೀತಿ ಹೀಗೆ ಹಂಚಿಕೊಳ್ಳುವ ಆ ಗುಂಪಿನ ಖುಷಿ ಎನ್ನಿಸಿತು ನನಗೆ. ನಾನು ಮಾತ್ರ ಅದರಿಂದ ಹೊರಗಿದ್ದೆ.

ನನ್ನ ಭಾವನೆಗೆ ನಾನು ಕೊಡುವ ಶಬ್ದ ದೇಹ ನನ್ನನ್ನು ಬಿಟ್ಟು ನಿಲ್ಲುವ ಶಕ್ತಿಯುಳ್ಳದ್ದಾಗಿರಬೇಕೆಂದು ನಂಬಿದವ ನಾನು. ಆದರೂ ಕೆಲವು ದಿನಗಳ ಹಿಂದೆ ನನ್ನ ಥಿಯರಿಗೆ ವಿರುದ್ಧವಾಗಿ ನನಗೆ ಅಪೂರ್ವ ಅನುಭವವಾಗಿತ್ತು. ಗಿನ್ಸ್‌ ಬರ್ಗ್ ಕಾವ್ಯದ ಬಗ್ಗೆ ಶ್ರೀನಿವಾಸ್ ಜೊತೆ ಫಿಲಡೆಲ್ಫಿಯಾದಲ್ಲಿ ಮಾತಾಡುತ್ತಾ ಕೂತಿದ್ದೆ – ಒಂದು ಸಾಯಂಕಾಲ. ಶ್ರೀನಿವಾಸ ಟೆಲಿವಿಷನ್ ಆರಿಸಿ ಗಿನ್ಸ್‌ ಬರ್ಗ್ ನ ಕವನ ಒಂದನ್ನು ನನಗೆ ಓದಿದ. ಎಂಥದೋ ಸೂತ್ರ ಎಂದು ಕವನದ ಹೆಸರು. ಅಮೆರಿಕಾದ ಭೂ ಪ್ರದೇಶದ ಕೇಂದ್ರದಲ್ಲಿರುವ ಊರಿನ ಹೆಸರು ಹೊತ್ತ ಸೂತ್ರ – ಕವನದ ಟೈಟಲ್ ಈಗ ಮರೆತಿದ್ದೇನೆ. ವಿಯಟ್‌ನಾಂ ಯುದ್ಧದ ಬಗ್ಗೆ ಪದ್ಯ. ಧಾರಾಳವಾಗಿ ಮಾತು ಉಕ್ಕುತ್ತ ಪದ್ಯ ಬೆಳೆಯುತ್ತದೆ. ಅಮೆರಿಕಾದ ಈ ಭೂಕೇಂದ್ರದಿಂದ ವಿಷ ಇಡೀ ದೇಶಕ್ಕೆ ಹಬ್ಬುತ್ತದೆ. ರೋಷ, ಅಸಹನೆಯಲ್ಲಿ ತನ್ನ ಅಳವಿಗೆ ಮೀರಿದ ಪ್ರಪಂಚವನ್ನು ಕವಿ ವರ್ಣಿಸುತ್ತಾನೆ. ಆದರೆ ಪದ್ಯದಲ್ಲಿ ಕೊನೆಗೆ ಗಿನ್ಸ್‌ ಬರ್ಗ್ ವಿಯಟ್‌ನಾಂ ಯುದ್ಧವನ್ನು ತಾನೇ ಕೊನೆಗಾಣಿಸುತ್ತಾನೆ. ಅಂದರೆ ದುಷ್ಟರು ಹುಚ್ಚರು ನಿಲ್ಲಿಸದ ಯುದ್ಧವನ್ನು ಕವಿ ತನ್ನ ಪಾಲಿಗೆ ಇನ್ನು ನಿಂತಂತೆ ಎಂದು ಘೋಷಿಸುತ್ತಾನೆ. ತನ್ನ ಹೊರಗಿನ ವಾಸ್ತವವನ್ನು ಅಲ್ಲಗಳೆದು ಈ ಶಾಂತಿ ಘೋಷ ಮಾಡುತ್ತಾನೆ. ‘ಇದೇನು ಹುಚ್ಚೆ’ ಎನ್ನಿಸುವಂತೆ ತನ್ನ ಪಾಡಿಗೆ ವಿಯಟ್‌ನಾಂ ಯುದ್ಧವನ್ನು ಕೊನೆಗಾಣಿಸುವ ಗಿನ್ಸ್‌ ಬರ್ಗ್ ನ ನಿರ್ಧಾರ ನನ್ನನ್ನು ಆಳವಾಗಿ ಒಂದು ಕ್ಷಣ ಕಲಕಿತು. ನಮ್ಮ ಕೈಮೀರಿದ ಪ್ರಪಂಚದಲ್ಲಿ ‘ಇಕೋ ನಾನು ನಿನ್ನಿಂದ  ಮುಖ ತಿರುಗಿಸಿದೆ. ಇನ್ನು ನೀನೇ ನನಗೆ ನಿಜವಲ್ಲ’. ಎನ್ನುವ ಕವಿಯ ನಿರ್ಲಕ್ಷ್ಯದ ಮಾತು ನನಗೆ ವಿಲಕ್ಷಣವಾದ ಸಂತೋಷ, ಉತ್ಸಾಹ ತಂದಿತ್ತು. ಘೋಷಿಸುವ ಕ್ರಮದಲ್ಲಿ ವ್ಯಂಗ್ಯವಿಲ್ಲದಿದ್ದರೂ ಒಟ್ಟು ಪರಿಣಾಮದಲ್ಲಿ ವ್ಯಂಗ್ಯವಿತ್ತು. ಮಾನವೀಯತೆಯಿತ್ತು. ಮನುಷ್ಯತ್ವದಲ್ಲಿ ಹೆಮ್ಮೆಯಿತ್ತು. ಎಲ್ಲ ನಿರರ್ಥಕವೆನ್ನಿಸುವ ವಾತಾವರಣದಲ್ಲೂ ಈ ಭಾವನೆಯನ್ನು ಗೆಲ್ಲಬಲ್ಲ ಪ್ರೇಮವೊ, ವೈರಾಗ್ಯವೊ, ನಿರ್ಲಕ್ಷ್ಯವೊ – ಅಂತೂ ಯುದ್ಧಗಳನ್ನು ಮೀರಬಲ್ಲ ಸಾಧ್ಯತೆ ಮನುಷ್ಯನಿಗಿದೆ ಎನ್ನುವ ನಂಬಿಕೆಯನ್ನು ಓದುಗನಲ್ಲಿ ಪದ್ಯ ಕುದುರಿಸುವಂತಿತ್ತು. ನನ್ನ ಮನಸ್ಸನ್ನು ಈಚೆಗೆ ಯಾವ ಪದ್ಯವೂ ಅಲ್ಲಾಡಿಸದ ರೀತಿಯಲ್ಲಿ ಈ ಪದ್ಯ ಕಲಕಿತ್ತು. ಆದರೂ ನನಗೆ ಆ ಪದ್ಯವನ್ನು ಮತ್ತೊಮ್ಮೆ ಓದಬೇಕೆನ್ನಿಸಿಲ್ಲ.

ವಿಲಿಯಂ ಬರ್ರೋಸ್‌ನ ವಾಚನಕ್ಕೆ ನಾವು ನಿಲ್ಲಲಿಲ್ಲ. ಹೊರಗೆ ಬಂದು ಚಳಿಯಲ್ಲಿ ಟ್ಯಾಕ್ಸಿಗೆ ಕಾದೆವು. ರಾತ್ರಿ ಚಿಕಾಗೋದಲ್ಲಿ ಸಂಚರಿಸುವುದು ತುಂಬ ಅಪಾಯವೆಂದು ರಾಮಾನುಜನ್ ಹೇಳಿದರು. ನನ್ನನ್ನೊಂದು ಪ್ರಶ್ನೆ ಕಾಡುತ್ತಿತ್ತು. ಅಮೆರಿಕಾದ ರ್ಯಾಡಿಕಲ್ ಜನ ಕಾಮ, ಡ್ರಗ್ಗುಗಳು, ಮನುಷ್ಯ ಸಂಬಂಧ – ಈ ವಿಷಯಗಳಲ್ಲಿ ಕ್ರಾಂತಿಕಾರರಾಗುತ್ತಾರೆ. ಆದರೆ ಆರ್ಥಿಕ ಸಂಬಂಧಗಳನ್ನೇ, ಬಂಡವಾಳಶಾಹಿ ವ್ಯವಸ್ಥೆಯನ್ನೇ ಬದಲಾಯಿಸಿಕೊಳ್ಳಬೇಕೆನ್ನುವುದರಲ್ಲಿ ಅವರು ಅಷ್ಟೇ ಆತುರ ವ್ಯಕ್ತಪಡಿಸುವುದಿಲ್ಲ. ಆರ್ಥಿಕ ಕ್ರಾಂತಿಯ ಬಗ್ಗೆ ಅವರು ಉದಾಸೀನರಾಗುವುದರಿಂದ ಅವರು ಬಯಸುವ ಇನ್ನೊಂದು ಕ್ರಾಂತಿ ಪದೇ ಪದೇ ವಿಫಲವಾಗುತ್ತಿದೆ. ಹಾಗೆಯೇ ಸಮಾಜವಾದೀ ರಾಷ್ಟ್ರಗಳು ಆರ್ಥಿಕ ಕ್ರಾಂತಿಯ ಬಗ್ಗೆ ರ್ಯಾಡಿಕಲ್ ಆದಷ್ಟು ಮನುಷ್ಯನ ಮನಸ್ಸಿನ, ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕ್ರಾಂತಿಕಾರರಾಗುವುದಿಲ್ಲ. ಒಂದು ವಿಫಲರಾದರೆ, ಇನ್ನೊಂದು ನಿಷ್ಫಲ ಅಲ್ಲವೆ? ಟ್ಯಾಕ್ಸಿಯಲ್ಲಿ ಕೂತು ನಾನು ಇಳಿದುಕೊಂಡಿದ್ದ ಅಡ್ರೆಸ್ಸನ್ನು ಡ್ರೈವರಿಗೆ ಕಂಡಿಯಿಂದ ಕೊಟ್ಟೆ. ಚಾಲಕನ ಹತ್ತಿರ ಇರುವುದು ಇದೇ ಡಾಲರ್ ಚಿಲ್ಲರೆ ಎಂದು ದಪ್ಪಕ್ಷರದಲ್ಲಿ ಬರೆದಿತ್ತು. ಟ್ಯಾಕ್ಸಿ ಹತ್ತಿದ ಮೇಲೆ ಚಾಲಕನಿಗೆ ಗನ್ನು ತೋರಿಸಿ ಹಣ ದೋಚುವವರಿಗೆ ಇದು ಎಚ್ಚರಿಕೆಯಾಗಿತ್ತು. ಟ್ಯಾಕ್ಸಿ ಚಾಲಕನ ಸುತ್ತ ಬುಲೆಟ್ ಪ್ರೂಫ್ ರಕ್ಷಣೆಯಿತ್ತು….

ಇದು ಒಡನಾಡಿ ಮಾಸಿಕ ಪತ್ರಿಕೆ ೧೯೭೫ರಲ್ಲಿ ಪ್ರಕಟಿತ ಲೇಖನ.