‘ಪ್ರಶ್ನೆ’ ಸಂಕಲನದ ಕಥೆಗಳನ್ನು ನಾನು ಸುಮಾರು ಹದಿನೈದು – ಹದಿನಾರು ವರ್ಷಗಳ ಹಿಂದೆ ಬರೆದದ್ದು. ಇಂಥ ಕಥೆಗಳಿಗೆ ಆ ಕಾಲದಲ್ಲಿ ಇದ್ದ ಓದುಗರ ಸಂಖ್ಯೆ ಬಹಳ ಕಡಿಮೆ. ನನ್ನ ಕೆಲವೇ ಕೆಲವು ಮಿತ್ರರಿಗಾಗಿ – ಮುಖ್ಯವಾಗಿ ನನ್ನ ಗೆಳೆಯ, ರಾಜೀವ ತಾರಾನಾಥರಿಗಾಗಿ – ಈ ಕಥೆಗಳನ್ನು ನಾನು ಬರೆದದ್ದು ಎನ್ನಬಹುದು. ಆತ್ಮ ಮಂಥನದ ಚಟ ಬೆಳೆಸಿಕೊಂಡ ನನ್ನ ಬರವಣಿಗೆಯನ್ನು ಟೀಕಿಸುತ್ತಿದ್ದ ತಾರಾನಾಥರು ನನ್ನ ‘‘ಘಟಶ್ರಾದ್ಧ’’ ಓದಿ, ಅದರ ತಿಳಿಯಾದ ನಿರೂಪಣೆಯಲ್ಲಿ ಹುದುಗಿದ ಅರ್ಥದ ಒಳಸುಳಿಯನ್ನು ಮೆಚ್ಚಿಕೊಂಡರು. ‘‘ಘಟಶ್ರಾದ್ಧ’’ ಈ ದೃಷ್ಟಿಯಿಂದ ನನ್ನ ಬರವಣಿಗೆಯಲ್ಲಿ ಒಂದು ಘಟ್ಟವನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಯ ಒಳ ಜೀವನದ ಪ್ರಸಂಗದಲ್ಲಿ ಸಮುದಾಯದ ಅನುಭವವನ್ನು ಸೂಚಿಸುವ ನನ್ನ ಮುಂದಿನ ‘‘ಸಂಸ್ಕಾರ’’, ‘‘ಮೌನಿ’’ ಕಥೆಗಳ ಪ್ರಯತ್ನದ ಪ್ರಾರಂಭ ‘‘ಘಟಶ್ರಾದ್ಧ’’ದಲ್ಲಿದೆ.

ಇಂಥ ಕಥೆಗಳನ್ನು ಮೆಚ್ಚುವರು ಹತ್ತಾರು ಜನ ಮಾತ್ರ ಎನ್ನಿಸುತ್ತಿದ್ದ ಆ ಕಾಲದಲ್ಲಿ ಈ ಕಥೆ ಸಿನಿಮಾ ಆದೀತು ಎಂದು ಊಹಿಸುವುದೂ ಸಾಧ್ಯವಿರಲಿಲ್ಲ. ಆದರೆ ದೃಶ್ಯಗಳನ್ನು ಕಣ್ಣಿಗೆ ಕಟ್ಟಿಸುವಂತೆ, ಹೆಚ್ಚೇನೂ ಸಿನಿಮಾ ನೋಡದ ನಾನು ಆ ಕಾಲದಲ್ಲೇ ಬರೆಯುತ್ತಿದ್ದೆನೆಂಬುದು ಈಗ ನನಗೆ ಆಶ್ಚರ್ಯ. ‘‘ಘಟಶ್ರಾದ್ಧ’’ಕ್ಕೂ ಹಿಂದೆ ನಾನು ಬರೆದ ‘‘ಹುಲಿಯ ಹೆಂಗರಳು’’ ಎಂಬ ಕಥೆ ಮಾತಿನಲ್ಲಿ ಸೊಕ್ಕಿದ್ದರೂ ಸಿನಿಮಾದ ಚಲಿಸುವ ದೃಶ್ಯಗಳನ್ನು ಹೋಲುತ್ತದೆ. ಕೆಲವೇ ಬುದ್ಧಿವಂತರ ಮೋಜಿಗಾಗಿ ಸೃಷ್ಟಿಯಾದ್ದೆಂಬ ಅಪವಾದಕ್ಕೆ ಹಿಂದಿನಿಂದ ಈ ತನಕ ಗುರಿಯಾಗಿರುವ ‘‘ನವ್ಯ’’ ತಲೆಪಟ್ಟಿ ಹೊತ್ತ ಈ ಸಾಹಿತ್ಯ, ಸಿನಿಮಾ, ನಾಟಕದಂಥ, ಸಮೂಹ ಮಾಧ್ಯಮಗಳಲ್ಲೂ ಹೊಸ ಚೈತನ್ಯದ ಕೃತಿಗಳಿಗೆ ಕಾರಣವಾದದ್ದನ್ನು ಯಾರು ಸ್ಪಷ್ಟವಾಗಿ ಗಮನಿಸಿ ಚರ್ಚಿಸಿದಂತೆ ಕಾಣಿಸುವುದಿಲ್ಲ.

ಓದುಗ, ಲೇಖಕ ಮತ್ತು ಸಾಹಿತ್ಯದ ಅನುಭವ ದೃವ್ಯವನ್ನು ತ್ರಿಕೋಣದ ಮೂರು ಬಿಂದುಗಳಿಗೆ ಹೋಲಿಸಿದ್ದನ್ನು ಎಲ್ಲಿಯೋ ಓದಿದ್ದು ನೆನಪಾಗುತ್ತದೆ. ಈ ತ್ರಿಕೋಣದಲ್ಲಿ ಲೇಖಕ, ಓದುಗನಿಗೆ ಹತ್ತಿರವಾಗಿ ತನ್ನ ಅನುಭವ ದ್ರವ್ಯಕ್ಕೆ ದೂರವಾಗಬಹುದು. ಆಗ ಓದುಗನ ನಿಯಂತ್ರಿತ ಮನಸ್ಸು ಬಯಸುವುದನ್ನೇ ಅವನಿಗೆ ಪ್ರಿಯವಾಗುವಂತೆ ಹೇಳುತ್ತ ಲೇಖಕ ತನ್ನ ಅಧಿಕೃತತ್ವವನ್ನು ಕಳೆದುಕೊಂಡು, ತನ್ನ ದ್ರವ್ಯಕ್ಕೆ ಅಪಚಾರ ಮಾಡಿ ಜನಪ್ರಿಯನಾಗುತ್ತಾನೆ. ಅಥವಾ ಈ ತ್ರಿಕೋಣದಲ್ಲಿ ಲೇಖಕ ತನ್ನ ಅನುಭವ ದ್ರವ್ಯಕ್ಕೆ ನಿಕಟವಾಗಿರುವುದರಿಂದ, ಅಪ್ರಿಯವಾದ್ದನ್ನು ಎದುರಿಸಲು ಇಚ್ಛಿಸದ, ರಂಜಕವಾದ್ದನ್ನು ಮಾತ್ರ ಬಯಸುವ ಓದುಗನಿಗೆ ದೂರವಾಗಬಹುದು. ಇಂಥ ಸಂದರ್ಭದಲ್ಲಿ ಸಾಹಿತ್ಯ ಜನಪ್ರಿಯವಾಗಿರದಿದ್ದರೂ ಶಕ್ತಿ ಮತ್ತು ನೈಜತೆಯನ್ನು ಪಡೆದಿರುತ್ತದೆ. ಸೃಷ್ಟಿಶೀಲನಾದ ಲೇಖಕ ಆರಿಸಿಕೊಳ್ಳಬೇಕಾದರೆ ಎರಡನೇ ಸಂದರ್ಭವನ್ನೇ ಆರಿಸಿಕೊಳ್ಳುತ್ತಾನೆ. ತನ್ನ ಓದುಗನಿಗಾಗಿ ಕಾಯುತ್ತಾನೆ. ಈ ಎರಡು ಸಂದರ್ಭಗಳನ್ನೂ ಬಿಟ್ಟು ಆದರ್ಶವಾಗಿ ಲೇಖಕ ಮತ್ತು ಓದುಗರ ಸಂಬಂಧಗಳು ಅನ್ಯೋನ್ಯವಾದಾಗ ರಂಜಕವಾದ ಉಪಾಯಗಳನ್ನು ಬಳಸದೇ ಓದುಗನ ಜೊತೆ ಲೇಖಕ ಅನುಭವ ದ್ರವ್ಯವನ್ನು ಪ್ರವೇಶಿಸುವುದು ಸಾಧ್ಯವಾಗುತ್ತದೆ. ಇದನ್ನು ಸಾಧ್ಯವಾಗಿಸುವುದು ಓದುಗನ ಅಭಿರುಚಿಯನ್ನು ತಿದ್ದುವ ವಿಮರ್ಶಕನ ಜವಾಬ್ದಾರಿ. ಸಾಹಿತ್ಯದಲ್ಲಿಯಂತೆ ಸಿನಿಮಾಕ್ಕೂ ಈ ಮಾತು ನಿಜ.

ಆದರೆ ಆರ್ಥಿಕ ಕಾರಣಗಳಿಂದಾಗಿ ಸಿನಿಮಾ ಪ್ರೇಕ್ಷಕರನ್ನು ಕಡೆಗಾಣಿಸುವುದು ಕಷ್ಟ. ಆದ್ದರಿಂದಲೇ ಅನುಭವದ ತೀವ್ರ ನೈಜ ಅನ್ವೇಷಣೆಯಲ್ಲಿ ಸಿನಿಮಾಕ್ಕಿಂತ ಸಾಹಿತ್ಯ ಮುಂದಿರುತ್ತದೆ. ಆದರೆ ಕನ್ನಡದ ಕೆಲವು ಸಿನಿಮಾಗಳಲ್ಲಾದರೂ ಪ್ರೇಕ್ಷಕನಿಗೆ ಪೂಸಿ ಹೊಡೆಯದಂತೆ ಚಿತ್ರ ನಿರ್ಮಿಸುವುದು ಸಾಧ್ಯವಾಗಿರುವುದು ನಮ್ಮ ಸಂಸ್ಕೃತಿಯ ಆರೋಗ್ಯ ದೃಷ್ಟಿಯಿಂದ ಸಂತೋಷಪಡಬೇಕಾದ್ದು. ಈ ಪ್ರೇರಣೆ ಸಿನಿಮಾಕ್ಕೆ ಸಾಹಿತ್ಯದಿಂದ ಬಂದಿರುವುದ – ಸಿನಿಮಾಕ್ಕೆಂದೇ ಬರೆಯದ ಸಾಹಿತ್ಯದಿಂದ ಬರೆಯದ ಸಾಹಿತ್ಯದಿಂದ ಬಂದಿರುವುದು – ನನ್ನ ಈ ಲೇಖನದ ದೃಷ್ಟಿಯಿಂದ ಮುಖ್ಯ.

ನನ್ನ ಸ್ನೇಹಿತರೊಬ್ಬರು ‘‘ಘಟಶ್ರಾದ್ಧ’’ ಸಿನಿಮಾ ನೋಡಿ ಕೇಳಿದರು: ಕಥೆಗಿಂತ ಹೆಚ್ಚೇನು ಈ ಸಿನಿಮಾ ಹೇಳುತ್ತದೆ? ಅರ್ಧ ಘಂಟೆಯಲ್ಲಿ ಕಥೆ ಕೊಡುವ ಅನುಭವವನ್ನು ಪಡೆಯಲು ಇಡೀ ಸಿನಿಮಾವನ್ನು ವಿವರ ವಿವರವಾಗಿ ಯಾಕೆ ನೋಡಬೇಕು? ಲೇಖಕನಾಗಿ ನಾನು ನನ್ನ ಕಥೆಗೆ ಈ ಸಿನಿಮಾ ಸರಿಸಮವಾಗಿದೆ ಎಂದರೆ, ಅಥವಾ ಕಥೆಗೆ ಬಾಧಕವಾಗದಂತೆ ಸಿನಿಮಾ ಬೆಳೆದಿದೆ ಎಂದರೆ ನನ್ನ ಗೆಳೆಯರ ಪ್ರಶ್ನೆಗೆ ಸಮರ್ಪಕ ಉತ್ತರ ಕೊಟ್ಟಂತಲ್ಲ. ಇದು ಗಹನವಾದ ಪ್ರಶ್ನೆ. ಎಲ್ಲ ಕಲೆಯೂ ಅನುಭವವನ್ನು ಅದರ ಸಾರ, ಸಾಂದ್ರರೂಪದಲ್ಲಿ ಕೊಡುತ್ತದೆ. ಆದ್ದರಿಂದ ಹೆಚ್ಚು ಕಾಲ ಮತ್ತು ಹೆಚ್ಚು ಶ್ರಮ ಬೇಡುವ ಮಾಧ್ಯಮ ತನಗೇ ಅನನ್ಯವಾದ ಅನುಭವವನ್ನು ಕೊಟ್ಟಿದೆ ಎಂದು ಸಾಬೀತು ಮಾಡಿ ತೋರಿಸಿದಲ್ಲಿ ಮಾತ್ರ ಈ ಮಾಧ್ಯಮದ ಯಶಸ್ಸನ್ನು ಸ್ಥಾಪಿಸಿದಂತೆ. ಸಿನಿಮಾ ಹೆಚ್ಚು ಜನರನ್ನು ಸೇರುತ್ತದೆ ಎಂಬುದೂ ಅನುಭವದ ಶ್ರೇಷ್ಠತೆಯ ದೃಷ್ಟಿಯಿಂದ ಸಮರ್ಪಕ ವಾದವಲ್ಲ.

ಉದಾಹರಣೆಗೆ ಬರ್ಗ್‌‌ಮನ್‌ನ ‘‘ಸೈಲೆನ್ಸ್’’ ಚಿತ್ರದಲ್ಲಿ ಒಂದು ದೃಶ್ಯವಿದೆ. ಇಬ್ಬರು ಸೋದರಿಯರು ಮತ್ತು ಕಿರಿಯವಳ ಮಗ ಯಾವುದೋ ಹೆಸರಿಲ್ಲದ ಒಂದು ಹೋಟೆಲ್‌ನಲ್ಲಿ ಇಳಿದುಕೊಂಡಿರುತ್ತಾರೆ. ಹುಡುಗ ಹೋಟೆಲ್‌ನ ತನ್ನ ರೂಮಿನ ಕಿಟಕಿ ತೆರೆದ ಕೂಡಲೇ ಕರ್ಕಶವಾದ ಬೀದಿಯ ಶಬ್ದಗಳು ಕೇಳಿಸುತ್ತವೆ. ಮುಚ್ಚಿದ ಕೂಡಲೇ ಆ ಸದ್ದುಗಳು ನಿಂತು ಬಿಡುತ್ತವೆ. ಒಮ್ಮೆ ಹುಡುಗನಿಗೆ ಒಂದು ಟ್ಯಾಂಕ್‌ಚಲಿಸುತ್ತ ಇರುವುದು ಕಾಣಿಸುತ್ತದೆ. ಇನ್ನೊಂದು ದೃಶ್ಯದಲ್ಲಿ ಹುಡುಗ ಹಾಸಿಗೆ ಮೇಲೆ ಮಲಗಿ ವಿಮಾನದ ಚಲನೆಯನ್ನು ಕೈಯಲ್ಲಿ ನಟಿಸುತ್ತ ತನ್ನನ್ನು ತಾನು ರಮಿಸಿಕೊಳ್ಳುವುದನ್ನು ನೋಡುತ್ತೇವೆ. ಮತ್ತೊಂದು ದೃಶ್ಯದಲ್ಲಿ ಹೋಟೆಲಿನ ಕಾರಿಡಾರಿನಲ್ಲಿ ಬಣ್ಣದ ವೇಷಗಳನ್ನು ಧರಿಸಿ ಕುಬ್ಜರು ನಡೆದು ಬರುವುದನ್ನು ನೋಡುತ್ತೇವೆ. ಹಿರಿಯಳನ್ನು ಧಿಕ್ಕರಿಸಿ ಕಿರಿಯವಳು ತನಗೆ ಗೊತ್ತಿರದ ಭಾಷೆ  ಮಾತಾಡುವ ಹೋಟೆಲ್‌ಮಾಣಿಯೊಬ್ಬನ ಜೊತೆ ಸಂಭೋಗಿಸುವುದನ್ನು ನೋಡುತ್ತೇವೆ. ಹಿರಿಯವಳು ತೀವ್ರವಾದ ಅಸೂಯೆಯಲ್ಲಿ ಸಂಕಟಪಡುವುದನ್ನೂ ಮುಷ್ಟಿ ಮೈಥುನ ಮಾಡಿಕೊಳ್ಳುವುದನ್ನೂ ಕುಡಿದು ನರಳುವುದನ್ನೂ ನೋಡುತ್ತೇವೆ. ಹುಡುಗ ಒಂದು ದೃಶ್ಯದಲ್ಲಿ ಕನ್ನಡಕ ಹಾಕಿ ಓದುತ್ತಾನೆ. ಹೀಗೆ ಅಸಂಬದ್ಧವೆನ್ನಿಸುವ ಘಟನೆಗಳ ಜೋಡಣೆಯಲ್ಲಿ ನನಗೆ ‘‘ಸೈಲೆನ್ಸ್‌’’ ಚಿತ್ರ, ವಿವರಣೆಯಲ್ಲಿ ತಿಳಿಯಾಗಿಸಲು ಅಸಾಧ್ಯವಾದ ಅನುಭವವನ್ನು ಕೊಟ್ಟಿದೆ ಎನ್ನಿಸಿತು. ಅಂದರೆ ಇದನ್ನು ಸಂಗ್ರಹಿಸುವಂತಿಲ್ಲ, ಸಂಗ್ರಹಿಸಿ ತಿಳಿಯುವಂತಿಲ್ಲ – ಎನ್ನಿಸುವಂಥ ದೃಶ್ಯ ಚಿತ್ರಗಳನ್ನು ನಮಗೆ ಬರ್ಗ್‌‌ಮನ್‌ಕೊಡುತ್ತಾನೆ. ನೋಡುವಾಗ ನಮ್ಮ ಮನಸ್ಸಿಗೆ ಏನೇನು ಹೊಳೆಯುವುದೋ ಅದಕ್ಕೆ ನಾವು ನೋಡಿದ್ದು, ಕೇಳಿದ್ದು ಬರೀ ನೆವವಲ್ಲ; ಭಾವನೆಯನ್ನು ಮನಸ್ಸಿನಲ್ಲಿ ಉಂಟುಮಾಡಿ ಅನಂತರ ನಿವೃತ್ತವಾಗುವ ಶ್ರವಣ – ದೃಶ್ಯ ವಾಹಕಗಳು ಮಾತ್ರವಲ್ಲ ಅನ್ನಿಸಬೇಕು – ಸಿನಿಮಾದಲ್ಲಿ, ಸಾಹಿತ್ಯದಲ್ಲಿಯಂತೆಯೇ ಪ್ರಾಯಶಃ ಇನ್ನೂ ಹೆಚ್ಚಾಗಿ ಅಂದರೆ ಮೂರ್ತವಾದ್ದಕ್ಕೂ ಅಮೂರ್ತವಾದ್ದಕ್ಕೂ ಅಭಿನ್ನವಾದ, ಒಂದು ಇನ್ನೊಂದರಲ್ಲಿ ಒಳಪಟ್ಟ ಸಂಬಂಧ ಸಿನಿಮಾದಲ್ಲಿರಬೇಕಾಗುತ್ತದೆ – ಈ ಮಾಧ್ಯಮದ ವಿಶಿಷ್ಟ ಗುಣವೇ ಅದು. ಭಾಷೆಯಲ್ಲಾದರೂ ಅನ್ಯೋಕ್ತಿಯಿದೆ; ಕಾವ್ಯದಲ್ಲಿ ‘‘ಓಡಿದೆ’’, ‘‘ಕಣ್ಣುಮುಚ್ಚಿದೆ’’ ಇತ್ಯಾದಿಗಳನ್ನು ರೂಪಕಗಳಾಗಿ ಉಪಯೋಗಿಸಬಹುದು. ‘‘ಓಡಲೆಳಸುತಿಹುದು ಜೀವ’’ ಎಂಬ ಮಾತು ವಾಚ್ಯಾರ್ಥದ ನಿವೃತ್ತಿಯಲ್ಲೇ ಸಾರ್ಥಕವಾಗುವಂಥದು. ನನಗೆ ಬರ್ಗ್‌‌ಮನ್‌ನ ‘‘ಸೈಲೆನ್ಸ್‌’’ನಲ್ಲಿ ಸಭ್ಯ ಗ್ರಹಸ್ಥನಂತೆ ಕಾಣುವ ಉದ್ದ ಮೂಗಿನ ಕನ್ನಡಕ ಹಾಕಿದ ವೈಟರ್ ಈ ಮೂಲಕ ಬರ್ಗ್‌‌ಮನ್‌ ಏನು ಹೇಳುತ್ತಾನೆ ಎಂಬ ಅರ್ಥ ವಿಶೇಷಕ್ಕೆ ಒದಗುವ ರೂಪಕ ಮಾತ್ರವಲ್ಲ; ಅವನ ಮೂಲಕ ನಾವು ಏನು ಕಾಣುತ್ತೇವೋ ಅದರ ಜೊತೆ ಅವನೂ ಕಾಣುತ್ತಲೇ ಇರುತ್ತಾನೆ. (ಉತ್ತಮ ಕಾವ್ಯದಲ್ಲೂ ಹೀಗಾಗಬಹುದು) ಓದುವ ಕಥೆಯಲ್ಲಿ ನೋಡಿದಂತೆ, ಕೇಳಿದಂತೆ ಅನ್ನಿಸುವುದು ಲೇಖಕನ ಶ್ರೇಷ್ಠ ಕಲೆಗಾರಿಕೆಗೆ ನಿದರ್ಶನವಾದರೆ ಸಿನಿಮಾದಲ್ಲಿ ನಾವು ನೋಡುತ್ತೇವೆ. ಕೇಳಿಸಿಕೊಳ್ಳುತ್ತೇವೆ – ಚಿತ್ರ ಎಷ್ಟು ಕಳಪೆಯಾದರೂ ಕಣ್ಣಿನ ಎದುರು ಕಟ್ಟಲೇ ಬೇಕಲ್ಲ! ಸಿನಿಮಾದ ಭಾಷೆಯೇ ಅದಾದ ಮೇಲೆ ನಾವು ನೋಡಿದ್ದು, ಕೇಳಿದ್ದು ಅತ್ಯಂತ ಗಾಢವಾದ ಸಿನಿಮಾ ಶ್ರೇಷ್ಠವಾಗಲಾರದು. ನಾವು ಈಗ ನೋಡಿದ್ದು ಇನ್ನು ಮುಂದೆ ನೋಡುವುದಕ್ಕೆ ಬರಿ ಮೆಟ್ಟಿಲಾದರೆ, ಮುಂದೇನು ಎಂಬ ಕುತೂಹಲ ಕೆರಳಿಸುವ ಸಸ್ಸ್‌ಪೆನ್ಸೇ ಚಿತ್ರದಲ್ಲಿ ಮುಖ್ಯವಾದರೆ (ಕಥೆಯಲ್ಲೂ ಕೂಡ) ಆಗ ಸಿನಿಮಾ ನಮಗೆ ನೋಡಿಸುವುದೆಲ್ಲ ತೆಳವಾಗುತ್ತ ಮುಂದಕ್ಕೆ ಹರಿಯುವ ದೃಶ್ಯಗಳಾಗುತ್ತವೆ ಅಷ್ಟೆ. ಅಲ್ಲಲ್ಲೆ ನಮ್ಮನ್ನು ತಂಗಿಸಿ, ನಮ್ಮ ಮನಸ್ಸು ಹಿಡಿದು ನಮ್ಮನ್ನು ಕಾಡುವ ಚಿತ್ರಗಳಾಗುವುದಿಲ್ಲ. ಪುಸ್ತಕ ಓದುವಾಗ ಮುಚ್ಚಿ ಯೋಚಿಸಬಹುದು. ಪುಟಗಳನ್ನು ಹಿಂದೆ ಮುಂದೆ ತೆರೆದು ಓದಬಹುದು, ಸಿನಿಮಾದಲ್ಲಾದರೋ ಇದು ಸಾಧ್ಯವಿಲ್ಲ. ಆದ್ದರಿಂದ, ಮುಂದೆ ಹರಿಯುವುದೇ ಸಿನಿಮಾದ ಸಹಜ ಗುಣವಾದದ್ದರಿಂದ ಹೀಗೆ ಮುಂದೆ ಹರಿಯುತ್ತಿರುವಾಗಲೂ ಹರಿಯುತ್ತಿರುವುದು ನಮ್ಮ ಮನಸ್ಸಿನಲ್ಲಿ ನಿಲ್ಲುವಂತೆ ಮಾಡುವ ಶಕ್ತಿ ದೃಶ್ಯ ಘಟಕಗಳಲ್ಲಿ ಅಡಕವಾಗಿರಬೇಕಾಗುತ್ತದೆ. ಕಥೆಯಲ್ಲಿ ಮುನ್ನಡೆಯನ್ನು ನಮ್ಮ ಮನಸ್ಸು ತಡೆಹಿಡಿದು ಚಿಂತಿಸುವುದು ಸಾಧ್ಯವಿರುವಂತೆ, ಸಿನಿಮಾದಲ್ಲಿ ಸಾಧ್ಯವಿಲ್ಲದಿರುವುದರಿಂದಲೇ ಸಿನಿಮಾ ನಮ್ಮ ಚಿಂತನೆಯನ್ನು ಉದ್ದೀಪನಗೊಳಿಸಲು ಮುಂದೆ ಚಲಿಸುವಾಗಲೇ ಹಿಂದಿನದನ್ನೆಲ್ಲ ನಮ್ಮ ಮನಸ್ಸು ಕೂಡಿಟ್ಟುಕೊಂಡು ನೋಡುವಂತೆ ಮಾಡುವ ಹಲವು ಉಪಾಯಗಳನ್ನು ಬಳಸಬೇಕಾಗುತ್ತದೆ.

ಗಿರೀಶ್‌ಕಾಸರವಳ್ಳಿಯ ‘‘ಘಟಶ್ರಾದ್ಧ’’ ನನ್ನ ಕಥೆಯ ಜೊತೆ ಅತ್ಯಂತ ನಿಕಟವಾದ ಸಂಬಂಧ ಇಟ್ಟುಕೊಂಡಿದೆ. ನಾನು ಬೆಳೆದ ಪರಿಸರ, ಗಿರೀಶ್‌ಕಾಸರವಳ್ಳಿ ಬೆಳೆದ ಪರಿಸರಗಳ ನಡುವೆ ಅನೇಕ ಸಾಮ್ಯಗಳಿವೆ. ಒಬ್ಬ ಹುಡುಗ ಬೆಳೆದು ದೊಡ್ಡವನಾಗುವ ಕಷ್ಟ, ಮುಗ್ಧತೆ ಕಳೆದುಕೊಳ್ಳಬೇಕಾದ ಅನಿವಾರ್ಯ, ಅದರ ಸಂಕಟ, ನೈತಿಕ ಪ್ರಜ್ಞೆ ಬೆಳೆಸುವ ಮಾನವೀಯ ಸಂಬಂಧಗಳಲ್ಲಿ ಹುಟ್ಟುವ ತೊಡಕುಗಳು – ಇಂಥ ವಿಷಯಗಳಲ್ಲಿ ನನ್ನ ಅನುಭವಗಳೆಲ್ಲ ತನ್ನ ಸ್ವಂತ ಅನುಭವಗಳು ಎನ್ನುವಂತೆ ಗಿರೀಶ್‌ಕಾಸರವಳ್ಳಿ ‘‘ಘಟಶ್ರಾದ್ಧ’’ ಮಾಡಿದ್ದಾರೆ. ಸಿನಿಮಾ ನೋಡುವಾಗ ನನ್ನ ಕಥೆಯ ಅನುಭವದ ದ್ರವ್ಯವನ್ನು ಪ್ರತ್ಯಕ್ಷ ಕಂಡಂತೆ ನನಗೆ ಅನ್ನಿಸಿತು. ಈ ಮನೆಯಲ್ಲಿ, ಈ ನದಿ ದಡದಲ್ಲಿ, ಈ ಮಗುವಿಗೆ, ಈ ಜನರ ನಡುವೆ ಹೀಗೆಲ್ಲ ಆಯಿತು ಎನ್ನಿಸುವಂಥ ಅಧಿಕೃತ ದಾಖಲೆಯಾಗಿ ‘‘ಘಟಶ್ರಾದ್ಧ’’ ಸಿನಿಮಾ ಬಂದಿದೆ. ಕೆ.ವಿ. ಸುಬ್ಬಣ್ಣ ಪರಿಸರ ನಿರ್ಮಾಣ ಮತ್ತು ಸಂಭಾಷಣೆಗಳಲ್ಲಿ ನನ್ನ ಕಥೆಯ ಒಳದನಿಗಳಿಗೆ ಜೀವಕೊಟ್ಟಿದ್ದಾರೆ. ರಾಮಚಂದ್ರರ ಛಾಯಾಗ್ರಹಣದಲ್ಲಿ ನಾಣಿ ಬಾಲಶಂಕರನಂತೆ ಕಾಣುತ್ತಾನೆ – ಅವರು ಆರಿಸುವ ಕೋನಗಳು ನನ್ನ ಕಥೆಯ ಮೌನವಾದ ಸೂಚನೆಗಳನ್ನೆಲ್ಲ ತುಂಬುತ್ತವೆ. ನನ್ನ ಕಥೆಯ ನಾಣಿ ಘಟನೆಗಳನ್ನು ಬರೀ ಸ್ವೀಕರಿಸುವ ಪ್ರೇಕ್ಷಕನಾಗಿದ್ದವನು ಹಾವನ್ನು ಕಲ್ಲಿನಿಂದ ಹೊಡೆಯುವ ಘಟನೆಯ ಮೂಲಕ ಸಕ್ರಿಯವಾಗಿ ದುರಂತದಲ್ಲಿ ಭಾಗಿಯಾಗುತ್ತಾನೆ. ಅವನಲ್ಲಾಗುವ ಬದಲಾವಣೆಗಳನ್ನು ಉಡುಪಿನ ಮೂಲಕ, ಅವನು ಹಿಡಿಯುವ ಬುಟ್ಟಿ, ಅದನ್ನು ಹೊಳೆಯಲ್ಲಿ ಕಳೆದುಕೊಳ್ಳುವುದು – ಇವುಗಳ ಮೂಲಕ ಗಿರೀಶ್‌ಕಾಸರವಳ್ಳಿ ಸ್ಥಾಪಿಸುತ್ತಾರೆ. ಚಿತ್ರದ ಉದ್ದಕ್ಕೂ ಬರುವ ನಾಣಿ, ಶಾಸ್ತ್ರ ಮತ್ತು ಗಣೇಶ ಚುಡಾಯಿಸುವ ಘಟನೆಗಳು ಹಾಸ್ಯದ ಮಗ್ಗುಲನ್ನು ಉಳಿಸಿಕೊಂಡರೂ ಹಿಂಸೆಯಾಗುತ್ತ ಹೋಗುತ್ತವೆ. ಇದು ಹುಡುಗ ಬೆಳೆಯಲು ಅಗತ್ಯ, ಜೊತೆಗೇ ಕ್ರೂರ ಎನ್ನಿಸುತ್ತದೆ. ಯಮುನಕ್ಕನಿಂದಾಗಿಯೂ ನಾಣಿ ತನ್ನ ಮುಗ್ಧತೆ ಕಳೆದುಕೊಳ್ಳುತ್ತಾನೆ: ಮೊದಲನೆ ಸುಳ್ಳು ಹೇಳಿಸುವವಳು ಅವಳು. ನಂತರ ಎಲ್ಲರೂ ಅವನ ಹತ್ತಿರ ಸುಳ್ಳು ಹೇಳಿಸುತ್ತಾರೆ. ಯಮುನಕ್ಕನಾದಿಯಾಗಿ ಎಲ್ಲರೂ ಅವನನ್ನು ಜಗ್ಗಾಡುತ್ತಾರೆ. ಶಾಸ್ತ್ರಿ ಪರದೇಶಿ: ಯಮುನಕ್ಕ ನಿರ್ಭಾಗ್ಯ ವಿಧವೆ, ದುಃಖಿ – ಈ ಎಲ್ಲರ ಸಂಬಂಧದಲ್ಲೂ ನಾಣಿಯನ್ನು ವಿಕಾರಗೊಳಿಸುವ ಅಂಶಗಳಿವೆ. ಮತ್ತು ಅವನನ್ನು ಪಕ್ವಗೊಳಿಸುವ ಜೀವನ ಸತ್ವಗಳೂ ಇವೆ. ನಾಣಿ ಮತ್ತು ಯಮುನಕ್ಕ ಇಬ್ಬರೂ ಒಂದು ದೃಷ್ಟಿಯಿಂದ ಮುಗ್ಧರೇ – ಇಬ್ಬರ ಮುಗ್ಧತೆಯೂ ಶೋಷಣೆಗೆ ಒಳಗಾಗಿದೆ. ಯಮುನಕ್ಕ ಗರ್ಭವತಿಯಾಗುವ ಮೂಲಕ ಜೀವನ ಪ್ರವೇಶಿಸಿದ್ದಾಳೆ. ಅವಳ ಒಳಗಿನ ಗರ್ಭ, ಹೊರಗಿನ ನಾಣಿ; ಗರ್ಭ ಸೂಚಿಸುವ ಜೀವನದ ಸಮೃದ್ಧಿ, ಈ ಸಮೃದ್ಧಿಯನ್ನು ಸ್ತುತಿ ಮಾಡುವ ವೇದ ಘೋಷಗಳು, ಈ ವೇದ ಹೇಳುವುದರ ವಿರುದ್ಧ ವೈದಿಕರು ಆಚರಿಸುವ (ಜೀವನ ಸಮೃದ್ಧಿಯನ್ನು ನಿರಾಕರಿಸುವ) ವಿಧ್ಯುಕ್ತ ಕ್ರಿಯೆಗಳು – ಇವೆಲ್ಲ ಒಂದು ದಟ್ಟ ಪ್ರಪಂಚವನ್ನು ಸೃಷ್ಟಿಸುತ್ತವೆ.

ನಾಣಿ ಬೆಳೆಯುವ ಹಂತಗಳು ತೀವ್ರವಾಗಿ ಸಿನಿಮಾದಲ್ಲಿ ಚಿತ್ರಿತವಾಗಿವೆ. ಸುಳ್ಳು ಹೇಳುವುದರ ಮೂಲಕ ಪಿತೂರಿಯಲ್ಲಿ ಪಾಲುದಾರನಾಗುತ್ತಾನೆ. ನಿಷೇಧಗಳನ್ನು ಒಂದೊಂದಾಗಿ ಮುರಿಯುತ್ತಾನೆ. ಮೈಲಿಗೆಯಲ್ಲಿ ನಾಗರಕಲ್ಲನ್ನು ಮುಟ್ಟುತ್ತಾನೆ. ಹೊಲೆಯ ಕಟೀರನ್ನು ಮುಟ್ಟಲು ಬಯಸುತ್ತಾನೆ; ಅವನ ಎಲ್ಲ ಭೀತಿಗಳನ್ನು ಪ್ರತಿನಿಧಿಸುವ ಹಾವಿಗೆ ಕಲ್ಲು ಹೊಡೆಯುತ್ತಾನೆ; ಗರ್ಭಪಾತಕ್ಕಾಗಿ ಯಮುನಕ್ಕ ಪರ್ಬು ಹತ್ತಿರ ಹೋದಾಗ ಶೂದ್ರಪ್ರಪಂಚ ನೋಡುತ್ತಾನೆ – ಈ ಪ್ರಕ್ರಿಯೆಯಲ್ಲಿ ಜೀವನ ಪ್ರವೇಶಿಸುತ್ತಾನೆ. ಒಂದು ದೃಷ್ಟಿಯಲ್ಲಿ ಕಳೆಯಲೇಬೇಕಾದ ಅವನ ಮುಗ್ಧತೆ ಕಳೆಯುತ್ತದೆ. ಅದರ ಜೊತೆಗೇ ಅವನ ನೈತಿಕ ಪ್ರಜ್ಞೆ ಬೆಳೆಯುತ್ತದೆ. ತನ್ನ ವೈದಿಕ ಸಂಸ್ಕೃತಿಯಲ್ಲಿ ಅಡಗಿದ ಕ್ರೌರ್ಯದಿಂದ ಮತ್ತು ಪ್ರೇಮ ಸಹಾನುಭೂತಿಗಳ ದಾರಿದ್ರ್ಯದಿಂದಹೇಸುತ್ತಾನೆ. ಇಡೀ ಆಗ್ರಹಾರ ಅವನನ್ನು ಕರೆಯುತ್ತಿದ್ದಾಗ ಅವರನ್ನು ಧಿಕ್ಕರಿಸಿ ನಾಣಿ ಯಮುನಕ್ಕನ ಜೊತೆ ಕೂರುವುದು ಅವನದೇ ಆಯ್ಕೆ. ಇಲ್ಲಿಯ ತನಕ ಅವನು ಬೆಳೆಯುತ್ತಾನೆ.

ಗಿರೀಶ್‌ ಕಾಸರವಳ್ಳಿ ನನ್ನ ಕಥೆಗೆ ಅತ್ಯಂತ ಮಹತ್ವಪೂರ್ಣವಾದ ಒಂದು ವಿವರ ಸೇರಿಸಿದ್ದಾರೆ. ನಾಣಿ ನನ್ನ ಕಥೆಯಲ್ಲಿ ಶಾಸ್ತ್ರೀಯ ಬಲಾತ್ಕಾರಕ್ಕೆ ನಾಗರಕಲ್ಲನ್ನು ಮೈಲಿಗೆಯಲ್ಲಿ ಮುಟ್ಟುತ್ತಾನೆ. ಆದರೆ ಸಿನಿಮಾದಲ್ಲಿ ಹೀಗೆ ಬಲತ್ಕಾರಕ್ಕೆ ಮುಟ್ಟಿದ ನಂತರ, ತನ್ನ ಭಯವನ್ನು ಗೆದ್ದ ಖುಷಿಯಲ್ಲಿ ಮತ್ತೆ ಮತ್ತೆ ಮುಟ್ಟುತ್ತಾನೆ. ಇದು ಕಥೆಯ ಅರ್ಥವನ್ನು ಬೆಳೆಸುತ್ತದೆ ಎಂದು ನನಗೆ ಅನ್ನಿಸಿದೆ.

ಬ್ರಹ್ಮರಾಕ್ಷಸ, ಕೊಳ್ಳಿದೆವ್ವ, ನಾಗರಕಾಟ ಹೀಗೆ ಭಯಾನಕವಾದ ಮೂಢನಂಬಿಕೆಗಳಿಂದ ಹುಟ್ಟಿದ ಅತಿಮಾನುಷದ ಮೂಲಕ ನಾಣಿ ಗ್ರಹಿಸುತ್ತ ಹೋಗುವ ಘಟನೆಗಳು ಪ್ರೇಕ್ಷಕರಿಗೆ ಮಾತ್ರ ವಾಸ್ತವ ಪ್ರಪಂಚದಲ್ಲಿ ನಡೆಯುವ ಪ್ರೇಮ ಪ್ರಕರಣ, ಆ ಬಗ್ಗೆ ಸಂಚು ಇತ್ಯಾದಿ ಸಾಮಾನ್ಯ ಸಂಗತಿಗಳು. ಆದರೆ ನಾಣಿ ಗ್ರಹಿಸುವ ಕ್ರಮವನ್ನು ನನ್ನ ಕಥೆಯಾಗಲೀ ಸಿನಿಮಾವಾಗಲೀ ನಿರಾಕರಿಸುವುದಿಲ್ಲ. ಅವನ ಮುಗ್ಧ ಗ್ರಹಣಕ್ಕೆ ಕಾಣುವ ಸತ್ಯಗಳು ದೊಡ್ಡವರಿಗೆ ಕಾಣದೇ ಹೋಗುತ್ತವೆ. ಕಥೆ ಹೀಗೆ ಏಕಕಾಲದಲ್ಲಿ ವಾಸ್ತವಿಕ ಮತ್ತು ಅತಿಮಾನುಷ – ಎರಡು ಪಾತ್ರಗಳಲ್ಲೂ ಸಂಭವಿಸುತ್ತವೆ. ನಾಣಿಯ ಮುಗ್ಧತೆ ಕಳೆಯುತ್ತ ಹೋದಂತೆ – ಶಾಸ್ತ್ರಿ ಮತ್ತು ಗಣೇಶನ ಮೂಲಕ – ಅವನು ವಾಸ್ತವವನ್ನು ಗ್ರಹಿಸುವ ಶಕ್ತಿ ಪಡೆಯುತ್ತಾ ಹೋಗುತ್ತಾನೆ. ಬೆಳೆಯಲು ಅವನಿಗೆ ಶಾಸ್ತ್ರಿ – ಗಣೇಶ ಬೇಕು. ಆದರೆ ಅವನ ಅಂತಃಕರಣ ಶ್ರೀಮಂತವಾಗಲು ಯಮುನಕ್ಕಳ ದಾರುಣ ವೇದನೆಯಿಂದ ಹುಟ್ಟಿದ ಪ್ರೇಮ ಬೇಕು. ಸಿನಿಮಾದಲ್ಲೂ ಇಂಥ ಇನ್ನೂ ಅನೇಕ ದ್ವಂದ್ವಗಳು ವಿಧ್ಯುಕ್ತ ಕ್ರಿಯೆಗಳ ಮೂಲಕ, ಶೈಲೀಕರಣ ತಂದುಕೊಡುವ ಸ್ವಾತಂತ್ರ್ಯದ ಮೂಲಕ ಕೃತಕವಾಗಿ ಕಾಣದಂತೆ ಗಿರೀಶ್‌ಕಾಸರವಳ್ಳಿ ಚಿತ್ರಿಸಿದ್ದಾರೆ.

‘‘ಘಟಶ್ರಾದ್ಧ’’ ಅವಸರವಿಲ್ಲದೇ ನಡೆಯುತ್ತದೆ. ಆದ್ದರಿಂದಲೇ ಕವನದ ಶಬ್ದಗಳಂತೆ ಸಿನಿಮಾ ದೃಶ್ಯಗಳು ಒಂದಕ್ಕೊಂದು ಲಗತ್ತಾಗುತ್ತ ಸಾಂದ್ರವಾದ ಪ್ರಪಂಚ ನಿರ್ಮಿಸುತ್ತವೆ. ಮಲೆನಾಡಿನ ಹಳ್ಳಿಯ ಬ್ರಾಹ್ಮಣ ಕುಟುಂಬ ಒಂದರ ಕಥೆ – ಅದರಲ್ಲೂ ಸುಬ್ಬಣ್ಣನವರ ಸಂಭಾಷಣೆಯಿಂದಾಗಿ ವಿಶಿಷ್ಟ ಬ್ರಾಹ್ಮಣ ಪಂಗಡ ಒಂದರ ಕಥೆ – ಒಂದು ಸಾರ್ವತ್ರಿಕ ಅನುಭವವಾಗುತ್ತದೆ. ನನ್ನ ಕಥೆಯಲ್ಲಿ ನಾಣಿ ನೋಡುತ್ತಾನೆ; ಸಿನಿಮಾದಲ್ಲಿ ನಾಣಿಯೂ ಇದ್ದಾನೆ. ಸ್ಕೂಲಿನ ಕಿಟಕಿಯಲ್ಲಿ ನೋಡುತ್ತ ನಿಂತು ಸೀಮೆಎಣ್ಣೆ ಎತ್ತಿಕೊಂಡು ಕಾಡಿನಲ್ಲಿ ಓಡಿಹೋಗುವ ನಾಣಿ, (ಪ್ರಾಯಶಃ ಆ ಸಂದರ್ಭದಲ್ಲಿ ಕಾರಂತರ ಹಿನ್ನೆಲೆ ಸಂಗೀತದಿಂದಾಗಿ) ಯಮುನಕ್ಕನಿಗೆ ಒದ್ದ ನಂತರ ಅವಳ ಗಮನ ಸೆಳೆಯಲು ಪ್ರಯತ್ನಿಸುವ ನಾಣಿ, ನಖಶಿಖಾಂತ ಬಾಲಶಂಕರನಂತೆ ಕಾಣುವ ನಾಣಿ – ಈ ಕಥೆ ನನ್ನದಲ್ಲ ಎನ್ನಿಸುವಷ್ಟು ನನಗೇ ಹೊಸ ಅನುಭವ ತಂದುಕೊಟ್ಟಿದ್ದಾನೆ. ನನ್ನ ಕಥೆಯ ಯಮುನಕ್ಕ ತಲೆ ಬೋಳಿಸಿದ ವಿಧವೆ. ಸಿನಿಮಾದಲ್ಲಿ ಹಾಗೆ ಅವಳನ್ನು ಚಿತ್ರಿಸುವುದು ಗಿರೀಶ್‌ಕಾಸರವಳ್ಳಿಗೆ ಸಾಧ್ಯವಾಗಲಿಲ್ಲ. ಸಾಧ್ಯವಾಗದಿದ್ದನ್ನು ಬೇರೆ ರೀತಿಯಲ್ಲಿ ಅವರು ತುಂಬಿದ್ದಾರೆ ನಿಜ – ಆದರೂ ಪ್ರೇಕ್ಷಕ ಸಿನಿಮಾವನ್ನು ನಿಯಂತ್ರಿಸುತ್ತಾನಲ್ಲ!

ಕನ್ನಡ ಸಿನಿಮಾದಲ್ಲಿ ಕವಿಯ ಮನೋಧರ್ಮವಿರುವ ನಿರ್ದೇಶಕ ಗಿರೀಶ್‌ಕಾಸರವಳ್ಳಿ ಎಂದು ನನಗನ್ನಿಸುತ್ತದೆ. ಅವರ ಪ್ರತಿಭೆ ಇನ್ನಷ್ಟು ಸಾಧಿಸಲು ಸಾಹಿತ್ಯದ ಸುಸಂಬದ್ಧ ನಿರೂಪಣಾ ಕ್ರಮಗಳಿಂದ ಅವರು ಬಿಡುಗಡೆಯಾಗಬೇಕೇನೋ? ಆದರೆ ಸಾಹಿತ್ಯ ಕೃತಿಗಳು ಕೊಡುವ ಅಪ್ಪಟ ಅನುಭವವನ್ನು ಸಿನಿಮಾದಿಂದ ಬಯಸುವಷ್ಟು ಮಾತ್ರ ನಮ್ಮ ಪ್ರೇಕ್ಷಕರು ಬೆಳೆದಿದ್ದಾರೆ. ಅದಕ್ಕೆ ಆಚಿನದನ್ನು – ಸಿನಿಮಾಕ್ಕೆ ಮಾತ್ರ ಸಾಧ್ಯವಾದದ್ದನ್ನು – ಗಿರೀಶ್‌ಸೆಲ್ಯುಲಾಯಿಡ್‌ನಲ್ಲಿ ನಿರ್ವಹಿಸಲು ಪ್ರೇಕ್ಷಕರೂ ಅಂಥದಕ್ಕೆ ಸಿದ್ಧರಾಬೇಕಲ್ಲ!

ವೀಕ್ಷಕ ಫಿಲ್ಮ್ ಅಪ್ರಿಸಿಯೇಶನ್ ಸೊಸ್ಟೆಟಿಯವರು ಪ್ರಕಟಿಸಿದ ಘಟಶ್ರಾದ್ಧದ ವಿಚಾರ ಸಂಕಿರಣ ಸ್ಮರಣ ಸಂಚಿಕೆಯಿಂದ೧೯೭೭