ನಾನು ಮೈಸೂರಿನಲ್ಲಿ ನಡೆದ ಜಾತಿವಿನಾಶ ಸಮ್ಮೇಳನದಲ್ಲಿ ೧೯೭೩ನೇ ಇಸವಿಯಲ್ಲಿ ಮಾಡಿದ ಭಾಷಣದ ಪೂರ್ಣಪಾಠ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದಾಗ ನನಗೊಂದು ಕಾಗದ ಬಂತು. – ಅಪರಿಚಿತರೊಬ್ಬರಿಂದ. ಕ್ಷೌರಿಕ ಜನಾಂಗದ ತರುಣರಾದ ಅವರು ತಮ್ಮ ಜನಾಂಗದ ಒಂದು ಸಂಘದ ಕಾರ್ಯದರ್ಶಿಯೆಂದು ಪರಿಚಯ ಮಾಡಿಕೊಂಡಿದ್ದರು. ಅವರು ಬರೆದ ಕಾಗದವನ್ನು ನಾನು ಎಂದೂ ಮರೆಯಲಾರೆ. ಕಾಗದ ಬರೆದ ತರುಣರಿಗೆ ಅಲ್ಪಸ್ವಲ್ಪ ವಿದ್ಯಾಭ್ಯಾಸ ಸಿಕ್ಕಿರಬೇಕೆಂದು ಅವರು ಬಳಸಿದ ಇಂಗ್ಲಿಷ್ ಪದಗಳಿಂದಲೂ ಆ ಪದಗಳ ತಪ್ಪು ಕಾಗುಣಿತದಿಂದಲೂ ತಿಳಿಯುತ್ತಿತ್ತು. ಕಾಗದದ ತಾತ್ಪರ್ಯ ಹೀಗಿತ್ತು: ‘ನಮ್ಮ ಜನಾಂಗದ ಹಿರಿಯರಿಗೆ ತಮ್ಮ ಕ್ಷೌರಿಕವೃತ್ತಿ ಬಿಟ್ಟು ಯುವಕರು ಬೇರೆ ವೃತ್ತಿ ಹಿಡಿಯುವುದು ಇಷ್ಟವಿಲ್ಲ. ನನ್ನಂತಹ ತರುಣರನ್ನು ಅವರು ತಲೆಹರಟೆಗಳೆಂದೇ ತಿಳಿಯುತ್ತಾರೆ. ವಿದ್ಯಾಭ್ಯಾಸ ಪಡೆದು ಮುಂದುವರಿಯಬೇಕೆಂಬ ಉತ್ಸಾಹವೇ ಅವರಲ್ಲಿಲ್ಲ. ನಮ್ಮ ಜನರ ಜೊತೆ ಹೋರಾಡಿ ಬೇಸತ್ತಿದ್ದೇನೆ. ಇದಕ್ಕೆ ಕಾರಣ ನಮ್ಮ ಜನಕ್ಕೆ inferiorituy complex ಎನ್ನುವುದು professional necessity ಆಗಿದೆ ಎಂದು ನನಗನ್ನಿಸುತ್ತದೆ’ ಅವರು ಬಳಸಿದ ಮೇಲಿನೆರಡು ಇಂಗ್ಲಿಷ್ ಪದಗಳ ಕಾಗುಣಿತದಲ್ಲಿ ತಪ್ಪಿದ್ದುದನ್ನುಗಮನಿಸಿದಾಗ ನನಗೆ ಈ ತರುಣ ತನ್ನ ವಿದ್ಯಾಭ್ಯಾಸದ ಮಿತಿಗಳನ್ನು ಮೀರಿ ಪಡೆದ ತೀಕ್ಷ್ಣವಾದ ದೃಷ್ಟಿ, ವಿಚಾರದಲ್ಲಿನ ಸ್ವಂತಿಕೆ, ತುಂಬ ಮನಸ್ಸನ್ನು ಕಲಕಿತು. ತನ್ನ ಜನರ ವೃತ್ತಿಧರ್ಮವೇ ತನ್ನವರ ಮನೋವೃತ್ತಿಯನ್ನು ಕಟ್ಟುವ ಬಗೆಯನ್ನು ಆ ತರುಣ ವಿವರಿಸಿದ್ದ ರೀತಿ ನಾನು ಕಂಡಿದ್ದ ಹಲವು ಕ್ಷೌರಿಕರ ವರ್ತನೆಯನ್ನು ಥಟ್ಟನೆ ಆಳವಾಗಿ ಅರಿಯುವಂತೆ ಮಾಡಿತು.

ಒಂದು ಸಣ್ಣ ಊರಿನ ಕಾಲೇಜಿನಲ್ಲಿ ಸುಮಾರು ೨೧ ವರ್ಷಗಳ ಕೆಳಗೆ ನಾನು ಅಧ್ಯಾಪಕನಾಗಿದ್ದಾಗ ಕ್ಷೌರಿಕ ಜನಾಂಗದ ಸಹ ಅಧ್ಯಾಪಕನೊಬ್ಬ ನನಗೆ ಅತ್ಯಂತ ಪ್ರಿಯ ಸ್ನೇಹಿತನಾಗಿದ್ದ. ಈತ ಜಾತಿ ಯಾವುದೆಂದು ಹೇಳಿಕೊಳ್ಳಲು ಅಂಜುವುದನ್ನು ನಾನು ಕಂಡಿದ್ದೆ. ಆ ಊರಿನಲ್ಲಿ ಈತನ ಸಂಬಂಧಿಗಳು ಕೆಲವರು ತಮ್ಮ ಜಾತಿಯನ್ನು ಮುಚ್ಚಿಟ್ಟು ವ್ಯಾಪಾರಿಗಳಾಗಿದ್ದರು. ಇವರಂತೂ ನನ್ನ ಮಿತ್ರನನ್ನು ಜಾತಿಯನ್ನು ಬಹಿರಂಗಪಡಿಸಬೇಡವೆಂದು ಬೇಡಿಕೊಂಡಿದ್ದರು. ತುಂಬ ಸೂಕ್ಷ್ಮ ಮನಸ್ಸಿನ ನನ್ನ ಅಧ್ಯಾಪಕ ಸ್ನೇಹಿತನನ್ನು ಒಂದು ದಿನ ಒಬ್ಬ ಬ್ರಾಹ್ಮಣ ಜಾತಿಯವ ಕೇಳಿದಾಗ (ಅವನದು ಪತ್ತೆಯಾಗದಂತಹ ಬ್ರಾಹ್ಮಣ ಹೆಸರು) ‘ನಾನು ಕ್ಷೌರಿಕ’ ಎಂದು ಹೇಳಿದ. ಅವತ್ತು ನನ್ನ ಮಿತ್ರನ ಬಿಡುಗಡೆಯ ಪ್ರಾರಂಭದ ದಿನವಿರಬಹುದು ಎಂದು ನನಗನ್ನಿಸುತ್ತದೆ. ಆ ಮೇಲಿಂದ ಕ್ಷೌರಿಕ ವೃತ್ತಿಯಲ್ಲಿದ್ದ ಅವನ ಅಣ್ಣಂದಿರು ತನ್ನನ್ನು ನೋಡಲು ಬಂದರೆ ನನ್ನ ಮಿತ್ರ ಮುಜುಗರ ಪಡುತ್ತಿರಲಿಲ್ಲ.

ವರ್ಗಭೇದಗಳಿರುವ ಎಲ್ಲ ಸಮಾಜಗಳಲ್ಲೂ ತನ್ನ ಪೂರ್ವಿಕರ ವೃತ್ತಿಯ ಬಗ್ಗೆ, ಸಾಮಾಜಿಕ ಸ್ಥಾನದ ಬಗ್ಗೆ ವಿದ್ಯಾವಂತರಾದ ಜನಾಂಗಗಳಲ್ಲಿ ಈ ಬಗೆಯ ಮುಜುಗರಗಳು ಇರುವುದು ಸಾಧ್ಯ. ಆದರೆ ನಮ್ಮ ದೇಶದಲ್ಲಿ ಮಾತ್ರ ತನ್ನ ಜಾತಿಗೆ ಸಂಬಂಧಿಸಿದ ವೃತ್ತಿಯನ್ನು ಬಿಟ್ಟಾಗಲೂ ಜಾತಿಯ ಬಗ್ಗೆ ಅವಮಾನ ಉಳಿದೇ ಇರುತ್ತದೆ. ಒಬ್ಬ ಮನುಷ್ಯನ ಇಡೀ ವ್ಯಕ್ತಿತ್ವವನ್ನು ಅವನು ಹುಟ್ಟಿದ ಜಾತಿಯಿಂದಲೇ ಬ್ರಾಹ್ಮಣರು ಹೇಗೆ ಅಳೆಯುತ್ತಾರೆಂಬುದು ನನಗೆ ಗೊತ್ತು. ಈ ಪ್ರವೃತ್ತಿ ಉಳಿದ ಜಾತಿಗಳಲ್ಲೂ ಇದೆ – ನಿಜ ಆದರೆ ಅಂಥ ಭಾವನೆಗಳ ಉಗಮವಿರುವುದು ಬ್ರಾಹ್ಮಣತ್ವದ ಅಭಿಮಾನದಲ್ಲಿ.

ಈ ಜಾತಿಯೆಂಬುದು ಅತ್ಯಂತ ಸೂಕ್ಷ್ಮವಾಗಿ ಕೆಲಸ ಮಾಡುತ್ತದೆಂಬುದು ಅನೇಕ ಸಾರಿ ನನಗೆ ಸಂಬಂಧಪಟ್ಟಂತೆಯೇ ನನ್ನ ಗಮನಕ್ಕೆ ಬಂದಿದೆ. ನಾನು ಹುಟ್ಟಿನಿಂದ ಬ್ರಾಹ್ಮಣ; ಆದರೆ ನನ್ನ ಹೆಂಡತಿ ಕ್ರೈಸ್ತಳು. ನನ್ನ ಮಕ್ಕಳಿಗೆ ಜಾತಿಯಿಲ್ಲ. ಆದರೂ ನನಗೆ ನನ್ನ ಜಾತಿಯ ಮುದ್ರೆಯಿಂದ ನನ್ನ ವ್ಯಕ್ತಿತ್ವವನ್ನು ಕಳಚಿಕೊಳ್ಳುವುದು ಸಾಧ್ಯವಾಗಿಲ್ಲ. ನಾನು ಹೇಗೆ ಯೋಚಿಸಿದರೂ ಬೇರೆಯವರು ಹಾಗೆ ನನ್ನನ್ನು ಗುರುತಿಸುವುದರಿಂದಲೂ ಜಾತಿ ನನಗೆ ಅಂಟಿಕೊಳ್ಳಬಹುದು. ಆದ್ದರಿಂದ ಜಾತಿ ಎಂಬುದು ಬಿಡಲಾಗಲೀ ಹಿಡಿಯಲಾಗಲೀ ಸಂಪೂರ್ಣ ನಮ್ಮ ವಶದಲ್ಲಿರುವ ಸತ್ಯವಲ್ಲ. ಇದಕ್ಕೆ ಉದಾಹರಣೆಯಾಗಿ ನನ್ನದೊಂದು ಅನುಭವ ಹೇಳುವೆ. ನಾನು ಒಂದು ದಿನ ತರಕಾರಿ ಕೊಳ್ಳುತ್ತ ಒಂದು ಅಂಗಡಿ ಎದುರು ನಿಂತಿದ್ದೆ. ನಮ್ಮ ಮನೆಗೆ ಹಪ್ಪಳ ಸಂಡಿಗೆಗಳನ್ನು ಮಾಡಿ ಮಾರುತ್ತಿದ್ದ ಅಡಿಗೆ ಭಟ್ಟರೊಬ್ಬರು ನನ್ನನ್ನು ಕಂಡು ಸೈಕಲ್ ನಿಲ್ಲಿಸಿ ನಮಸ್ಕರಿಸಿದರು. ನಾನು ಅವರ ಕುಶಲ ಪ್ರಶ್ನೆ ಮಾಡಿದಾಗ ತಮ್ಮ ಗೋಳನ್ನು ತೋಡಿಕೊಂಡರು. ಅವರು ಇದ್ದದ್ದು ಬಿಲದಂತಹ ಒಂದು ಸಣ್ಣ ಮನೆಯಲ್ಲಿ. ಅದನ್ನವರು ಬಿಡಲೇಬೇಕಾಗಿ ಬಂದ ಕಥೆಯನ್ನು ನನಗೆ ಹೇಳಿದ ಕ್ರಮ ಕುತೂಹಲವಾಗಿತ್ತು. ಮನೆಯ ಯಜಮಾನನೂ ಅಂಥದ್ದೇ ಇನ್ನೊಂದು ಬಿಲದಲ್ಲಿ ವಾಸವಾಗಿದ್ದವನು. ಆತ ಮನೆ ಬಿಡಿಸಲು ಒಂದು ಉಪಾಯ ಹೂಡಿದ್ದ: ತನ್ನ ಹೆಂಡತಿ ಮಕ್ಕಳ ಪಾತ್ರೆ ಪರಟೆ ಸಹಿತವಾಗಿ ಬಂದು ಅವರಿದ್ದ ಮನೆಯಲ್ಲಿ ಬಿಡಾರ ಹೂಡಿದ್ದ: ಈ ಘಟನೆ ತಿಳಿಸುವಾಗ ಭಟ್ಟರು ಸ್ಟಾಂಡ್ ಹಾಕಿ ಸೈಕಲ್ ನಿಲ್ಲಿಸಿ ನನ್ನ ಹತ್ತಿರ ಬಂದರು. ಒಳಸಂಚು ಮಾಡುವ ಹಾವಭಾವದಲ್ಲಿ ನನ್ನ ಹತ್ತಿರ ಮುಖವಿಟ್ಟು ‘ಅವನು ಎನ್.ಬಿ. ಮಹಾರಾಯರೇ’ ಎಂದರು. ನನಗೆ ಅರ್ಥವಾಗಲಿಲ್ಲ. ‘ಅಂದರೆ’? ಎಂದೆ ‘ದೇವಾಂಗದವನು’ ಎಂದು ನಿಟ್ಟುಸಿರಿಟ್ಟರು. ಕಾಲದ ಮಹಿಮೆ ಈ ಭಟ್ಟರ ಬಾಯಿಂದ ‘ಶೂದ್ರ’ ಶಬ್ದದ ಬದಲು ಹೆಚ್ಚು ಮರ್ಯಾದೆಯ ಇಂಗ್ಲಿಷಿನ ‘ನಾನ್ ಬ್ರಾಹ್ಮಿನ್’ – ಪದದ ಇನಿಶಿಯಲ್‌ಗಳನ್ನು ಬಳಸುವಂತೆ ಮಾಡಿತ್ತು. ದೇವಾಂಗದವನ ಸಂಸಾರ ಬಂದು ಮನೆಯಲ್ಲೇ ಟಿಕಾಣಿ ಹೂಡಿದಾಗ ಭಟ್ಟರ ಹೆಂಡತಿ ಮಕ್ಕಳ ಮಡಿಮೈಲಿಗೆಗಳ ಗತಿಯೇನು? ಆದರೆ, ಭಟ್ಟರು ಸಮಾಧಾನ ನಿಟ್ಟುಸಿರಿಟ್ಟು ಅಂದರು – ‘ಅವನೇನೋ ಅಷ್ಟು ಮರ್ಯಾದೆ ಬಿಟ್ಟವನಲ್ಲ ಎನ್ನಿ. ನಮ್ಮ ಅಡಿಗೆಮನೆ ಹತ್ತಿರ ಅವನು ಸುಳಿದಿಲ್ಲ. ಸುಳಿಯದಂತೆ ಮಕ್ಕಳನ್ನೂ ತಡೆದಿದ್ದಾನೆ. ಆದರೂ ನಾವು ಅಲ್ಲಿರೋದು ಹೇಗೆ ಹೇಳಿ. ಈಗ ನಾನೊಂದು ಮನೆ ಹುಡುಕಿ ಹೊರಟಿದ್ದೇನೆ.’

ಈ ಘಟನೆಯಲ್ಲಿ ಭಟ್ಟರು ನನ್ನ ಸಹಾನುಭೂತಿ ನಿರೀಕ್ಷಿಸಿ, ಅದು ಸಿಕ್ಕೇ ಸಿಗುವುದೆಂದು ಭಾವಿಸಿ ನಿಂತಾಗ, ನನ್ನ ಮುಖದಲ್ಲೂ ಅವರಿಗೆ ತೋರಿಕೆಯ ಸಹಾನುಭೂತಿಯಾದರೂ ಸಿಕ್ಕಿರಬೇಕು. ನನ್ನ ನಿಲುವು, ಬರವಣಿಗೆ ಅಷ್ಟಿಷ್ಟು ಗೊತ್ತಿದ್ದ ಅವರಿಗೆ ಈ ಪ್ರಸಂಗದಲ್ಲಿ ಮಾತ್ರ ನನ್ನ ಸಹಾನುಭೂತಿ ಬ್ರಾಹ್ಮಣನ ಕಡೆಗೇ ಎಂಬುದು ಎಷ್ಟು ನಿಶ್ಚಿತವಾಗಿತ್ತೆಂದರೆ – ಇಂಥ  ಭಾವನೆಯ ಹಿಂದೆ ಎಷ್ಟು ದಟ್ಟವೂ ದೀರ್ಘವೂ ಆದ ಚರಿತ್ರೆ ಇದೆಯೆಂದರೆ – ನಾನು ಒಂದು ಕ್ಷಣವಾದರೂ ಭಟ್ಟರ ಮಾನಸಿಕ ಆಹ್ವಾನಕ್ಕೆ ಸಮ್ಮತಿಸಿರಲೇಬೇಕು. ಭಟ್ಟರ ಮಾನವೀಯವಾದ, ಮನೆಯಿಲ್ಲದೆ ಪೇಚಿಗೆ ದೊರೆಯಲೇಬೇಕಾದ ಸಹಾನುಭೂತಿಗೂ ಹೆಚ್ಚಿನ ಸಹಾನುಭೂತಿಯೊಂದು, ಅವರ ಜಾತಿಯಿಂದಾಗಿ ನನ್ನಿಂದ ಮಾತ್ರವಲ್ಲ, ಬೇರೆ ಬ್ರಾಹ್ಮಣೇತರರಿಂದಲೂ ಅವರು ಪಡೆಯುವುದು ಸಾಧ್ಯ. ಅಂತೂ ದೇವಾಂಗದವನ ಬಗ್ಗೆ ಈ ಭಟ್ಟರಿಗಿದ್ದ ಅಸ್ಪೃಶ್ಯ ಭಾವನೆಯನ್ನು ಆ ಕ್ಷಣದಲ್ಲಿ ವಿರೋಧಿಸಿ ಮಾತಾಡುವುದು ನನಗೆ ಅರ್ಥಹೀನ ಎನಿಸಿತ್ತಲ್ಲವೇ? – ಅಂಥ ಅನಿಸಿಕೆಗಳಲ್ಲೂ ಜಾತಿಪದ್ಧತಿಯ ದುರಂತವಿದೆ.

ಜಾತಿವಿನಾಶ ಸಮ್ಮೇಳನದ ಹಿಂದೆ ಮುಂದೆ ಕನ್ನಡ ಸಾಹಿತ್ಯ ಲೋಕದಲ್ಲಿ ನಡೆದ ಇನ್ನೊಂದು ಆಂದೋಳನಕ್ಕೂ ಹುಟ್ಟಿನಿಂದ ಬ್ರಾಹ್ಮಣನಾದ ನನಗೂ ನಡುವೆ ಉಂಟಾದ ಕೆಲವು ಬಿಕ್ಕಟ್ಟುಗಳು ಕೂಡ ಮೇಲೆ ನಾನು ಹೇಳಲು ಪ್ರಯತ್ನಿಸುತ್ತಿರುವುದನ್ನು ಸ್ಪಷ್ಟಪಡಿಸೀತು. ಈ ಕಾಲದಲ್ಲಿ ಪ್ರಾರಂಭವಾದ ಲೇಖಕರ ಒಕ್ಕೂಟ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಎಲ್ಲ ಲೇಖಕರನ್ನೂ ಸಂಶಯದಿಂದ ಕಾಣಲು ಪ್ರಾರಂಭಿಸಿತು. ನನ್ನಂಥವರು ಒಂದೋ ವಂಚಕರಾಗಿ, ಅಥವಾ ಶೂದ್ರರ ನಡುವೆ ಜನಪ್ರಿಯ ಹೀರೋಗಳಾಗುವ ಹವಣಿಕೆಯಿಂದ ಪ್ರಗತಿಪರ ಮಾತುಗಳನ್ನಾಡುವ ಜಾಣರಾಗಿ ಕಂಡರು. ಒಕ್ಕೂಟದ ಮೈಸೂರಿನ ಸಭೆಯೊಂದರಲ್ಲಿ ಶಿವರಾಮ ಕಾರಂತರನ್ನೂ ವೈದಿಕ ವಂಚಕರೆಂದು ಖಂಡಿಸಲಾಯಿತು. ನನ್ನ ಪಾಲಿಗೆ ಈ ಸಾಹಿತ್ಯಕ ಸಂದರ್ಭ ಒಂದು ನೈತಿಕ ಸವಾಲಾಗಿ ಪರಿಣಮಿಸಿತು. ಒಕ್ಕೂಟದಲ್ಲಿ ನಾನು ಮೆಚ್ಚಿಕೊಂಡ ಶಕ್ತರಾದ ಕೆಲವರಿದ್ದರಂತೆಯೇ, ಹಲವು ಸಮಯಸಾಧಕರೂ ಇದ್ದರು. ಮೈಸೂರು, ಧಾರವಾಡಗಳಂತಹ ಯುನಿವರ್ಸಿಟಿ ನಗರಗಳಲ್ಲಿ ಬ್ರಾಹ್ಮಣ ನಿಂದೆಯಿಂದ ಏಕಕಾಲದಲ್ಲಿ ಕ್ರಾಂತಿಕಾರಿಯೂ ಸಂಸ್ಥಾನಿಕ ಬೆಂಬಲಿಗನೂ ಆಗುವುದು ಸಾಧ್ಯವಿದ್ದುದರಿಂದ ಹಲವರು ಈ ಒಕ್ಕೂಟ ಸೇರಿಕೊಂಡರು. ಒಕ್ಕೂಟದ ನಿರ್ಮಾಪಕರಲ್ಲಿ ಕೆಲವರು ನನ್ನ ಸ್ನೇಹಿತರು ಇದ್ದರು ಎಂದ. ಇವರಲ್ಲಿ ಒಬ್ಬರು ನನ್ನ ಬಳಿ ಬಂದು ಆತ್ಮೀಯವಾಗಿ ನನ್ನೊಡನೆ ಮಾತನಾಡುತ್ತ ಹೇಳಿದರು. ‘ಇದು ಕಷ್ಟದ ಸಂದರ್ಭ ನಿಮಗೆ. ನೀವು ನಮ್ಮವರ ಗುಂಪಿನ ಖಂಡನೆಯಿಂದ ಹತಾಶರಾಗಿ ಬ್ರಾಹ್ಮಣವಾದಿಗಳಾಗಬೇಡಿ’. ಹೀಗೆ ಹೇಳಿದವರು ಲಿಂಗಾಯತ ಜಾತಿಗೆ ಸೇರಿದವರು. ನಮ್ಮ ಜನಾಂಗದ ಅತ್ಯಂತ ಶಕ್ತ ಲೇಖಕರಲ್ಲೊಬ್ಬರು. ಅವರಿಗೆ ನಾನು ಹೇಳಿದೆ: ‘ಜಾತೀಯ ವಾದಿಯಾಗಲು ಹರಿಜನರಿಗೆ ನೂರಕ್ಕೆ ನೂರು ಅಧಿಕಾರವಿದೆ. ಲಿಂಗಾಯತರಿಗೂ ಒಕ್ಕಲಿಗರಿಗೂ ಶೇಕಡಾ ಹತ್ತೋ ಇಪ್ಪತ್ತೋ ಅಧಿಕಾರವಿದ್ದೀತು. ಆದರೆ ಬ್ರಾಹ್ಮಣಿಗೆ ನೂರಕ್ಕೆ ನೂರು ಅಧಿಕಾರವಿಲ್ಲ. ಆದ್ದರಿಂದ ನಾನು ಈ ಸವಾಲಿಗೆ ಅಂಜಿ ಜಾತೀಯ ವಾದಿಯಾಗಿಲ್ಲ’ ನಾನು ಮಾನನಷ್ಟ ಮೊಕದ್ದಮೆ ಹೂಡಬಹುದಾದಂತಹ ಹೀಯಾಳಿಕೆಗೆ ಒಕ್ಕೂಟದ ಕೆಲವರಿಂದ ಗುರಿಯಾದಾಗಲೂ ನನ್ನ ವಿಚಾರ ಬದಲಾಗಲಿಲ್ಲ; ಆದರೆ ಇದನ್ನೊಂದು ಹೆಚ್ಚುಗಾರಿಕೆಯೆಂದು ನಾನು ಎಣಿಸಿಲ್ಲ. ಒಕ್ಕೂಟದಲ್ಲಿ ಪ್ರಮುಖರಾಗಿದ್ದ ಒಕ್ಕಲಿಗರು ಮತ್ತು ಲಿಂಗಾಯತರು ಕೂಡ ತಾವು ಬದುಕುತ್ತಿರುವ ಕ್ರಮದಲ್ಲಿ – ಎಂಬ ಅರಿವು ಒಕ್ಕೂಟದ ನಾಯಕರಾದಿ ಲೇಖಕರಿಗೆ ಇದ್ದಿದ್ದರೆ ಒಕ್ಕೂಟ ನಮ್ಮ ನಡುವೆ ಹೆಚ್ಚು ಆರೋಗ್ಯಕರವಾದ ಅರಿವನ್ನು ಉಂಟುಮಾಡಬಹುದಿತ್ತು.

ಹಲವು ಬ್ರಾಹ್ಮಣೇತರ ಲೇಖಕರಿಗೆ ಈ ಚಳುವಳಿ ತಮ್ಮ ಅನುಭವವನ್ನೂ ಬರೆದುಕೊಳ್ಳಬಹುದೆಂಬ ಆತ್ಮವಿಶ್ವಾಸ ತಂದುಕೊಟ್ಟಿರಬಹುದು ಎನ್ನಿಸುತ್ತದೆ – ಹಾಗೆ ನೋಡಿದರೆ ಒಕ್ಕೂಟ ಮುಂದುವರಿಸಿದ ಈ ಕೆಲಸ ಪ್ರಾರಂಭವಾದದ್ದು ನವ್ಯ ಸಾಹಿತ್ಯ ಚಳುವಳಿಯಲ್ಲೆ; ಅದರ ಸ್ವಾನುಭವ ನಿಷ್ಠೆಯಲ್ಲೆ. ಒಕ್ಕೂಟ ಮತ್ತು ಆ ಕಾಲದ ಸವಾಲಿನಿಂದಾಗಿ ಅದರ ಹೊರಗಿದ್ದವರ ಗಮನವು ಸಾಮಾಜಿಕ ವಿಷಮತೆಯ ಕಡೆ ತಿರುಗಿತು. ಈ ಗಮನ ಎಷ್ಟೇ ಸರಳ ವ್ಯಾಖ್ಯೆಗಳಿಗೆ ಎಡೆ ಮಾಡಿಕೊಟ್ಟಿದ್ದರೂ ಒಟ್ಟು ಪರಿಣಾಮದಲ್ಲಿ ನವ್ಯ ಸಾಹಿತ್ಯ ಚಳುವಳಿಗೆ ಒಂದು ಹೊಸ ತಿರುವು ಕೊಟ್ಟು ಆರೋಗ್ಯಕರ ಪ್ರಭಾವ ಮಾಡಿತೆಂಬುದನ್ನು ಹೇಳಲೇಬೇಕು. ಆದರೆ ಲೇಖಕರ ಪ್ರತಿಷ್ಠೆಯ ತಿಕ್ಕಾಟವಾಗದಿದ್ದಲ್ಲಿ ಈ ಒಕ್ಕೂಟ ನಮ್ಮ ಜಾತಿ ಸಮಸ್ಯೆಯನ್ನು ಇನ್ನಷ್ಟು ಆಳವಾಗಿ, ವ್ಯಕ್ತಿನಿಂದೆಗೆ ಅವಕಾಶವಿಲ್ಲದಂತೆ ಸತ್ಯನಿಷ್ಠುರವಾಗಿ ವಿಶ್ಲೇಷಿಸಬಹುದಿತ್ತು.

ಇಪ್ಪತ್ತು ವರ್ಷಗಳ ಕೆಳಗೆ ಒಕ್ಕಲಿಗ, ಲಿಂಗಾಯತ ಜಾತಿಗಳಿಗೆ ಬ್ರಾಹ್ಮಣರನ್ನು ಖಂಡಿಸಲು ಇದ್ದಿರಬಹುದಾದ ಅಧಿಕಾರ ಈಗ ಕಡಿಮೆಯಾಗಿದೆ ಎಂದು ನಾನೊಮ್ಮೆ ಹೇಳಿದಾಗ ಒಕ್ಕೂಟದ ಇನ್ನೊಬ್ಬ ಲೇಖಕ ಮಿತ್ರರು ನನಗೆ ಅಂದರು: ‘ಈಗ ಬ್ರಾಹ್ಮಣರನ್ನು ಎದುರಿಸುವ ಶಕ್ತಿ ಇರೋದು ಒಕ್ಕಲಿಗ ಲಿಂಗಾಯತರಿಗೆ ಮಾತ್ರ; ಆದ್ದರಿಂದ ಅವರನ್ನು ಖಂಡಿಸುತ್ತ ಅವರ ಆತ್ಮವಿಶ್ವಾಸಕ್ಕೆ ಧಕ್ಕೆ ತರುವುದರಿಂದ ಬ್ರಾಹ್ಮಣರು ಗಟ್ಟಿಯಾಗಿ ಉಳಿದು ಬಿಡುತ್ತಾರೆಂದು ನಿಮಗೆ ಅನಿಸುವುದಿಲ್ಲವೆ?: ನೀವು ಹುಟ್ಟಿನಿಂದ ಬ್ರಾಹ್ಮಣರಾಗಿದ್ದರಿಂದ ಜಾತಿವಿನಾಶದ ನೆವದಲ್ಲಿ ಇಂಥ ಉಪಾಯ ಹೂಡಿರಬಹುದಲ್ಲವೆ? ಬೀಸುವ ದೊಣ್ಣೆ ತಪ್ಪಿದರೆ ಸಾಕು ಎನ್ನುವ ಹಾಗೆ ಇದು.’ ನನ್ನ ಮನಸ್ಸು ಪರಿಶುದ್ಧವಾಗಿದೆ ಎಂದು ಸಾರಿ ಈ ಸವಾಲಿನಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆಂದೂ ನನಗೆ ಗೊತ್ತು. ನನ್ನ ಲೇಖಕ ಮಿತ್ರರು ಒಡ್ಡಿದ ಸಂಶಯದಲ್ಲೂ ತಥ್ಯವಿದೆಯೆಂಬುದು ಕೆಲವು ತಿಂಗಳುಗಳ ಹಿಂದೆ ನನಗೆ ಮನದಟ್ಟಾಯಿತು. ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪನವರು ಕುವೆಂಪು ಬಗ್ಗೆ ಬೆಂಗಳೂರಿನಲ್ಲಿ ನಡೆದ ಸೆಮಿನಾರ್ ಒಂದರಲ್ಲಿ ಕುವೆಂಪು ಬ್ರಾಹ್ಮಣ ವಿರೋಧಿಯಾದರೂ ಅಸ್ಪೃಶ್ಯ ಜಾತಿಯವರ ಬಗ್ಗೆ ಬರೆಯುವಾಗ ಹೀಗೆ ಸವರ್ಣೀಯರ ಧೋರಣೆಯನ್ನೇ ತಾಳುತ್ತಾರೆಂದು ವಿಶ್ಲೇಷಿಸಿ ಒಂದು ಲೇಖನ ಓದಿದರು. ಹಿಂದೊಮ್ಮೆ ಸೆಮಿನಾರ್ ನಲ್ಲಿ ಬೇಂದ್ರೆಯವರನ್ನು ವೈದಿಕರೆಂದು ಒಕ್ಕೂಟದ ವಿಮರ್ಶಕರು ಖಂಡಿಸಿದ್ದನ್ನು ಕೇಳಿಸಿಕೊಂಡು ಕುಪಿತರಾಗಿದ್ದ ಹಲವು ಬ್ರಾಹ್ಮಣರು ಈ ಸಭೆಯಲ್ಲಿದ್ದರು. ಅವರಿಗೆ ಹರಿಜನ ವಿಮರ್ಶಕರೊಬ್ಬರು ಒಕ್ಕಲಿಗ ಲೇಖಕರನ್ನು ಟೀಕಿಸಿದಾಗ ಪರಮಾನಂದವಾದದ್ದನ್ನು ಅವರ ಮುಖದಿಂದಲೇ ತಿಳಿಯಬಹುದಿತ್ತು. ‘ನನಗೆ ಒದೆಯುತ್ತೀಯಾ? ನೋಡು, ನಿನಗೂ ಒದೆಯುವವನಿದ್ದಾನೆ’. – ಇಂಥ ತೃಪ್ತಿ ಅಲ್ಪವಾದದ್ದು. ಜಾತಿಪದ್ದತಿಯಿಂದ ಕಲುಷಿತವಾದ ಮನಸ್ಸಿನಿಂದ ಬಿಡುಗಡೆ ಹೊಂದಲು ಎಷ್ಟು ಎಚ್ಚರವಾಗಿದ್ದರೂ ಸಾಲದೆಂಬುದಕ್ಕೆ ಇವೆಲ್ಲ ನಿದರ್ಶನಗಳು.

ನಾನು ‘ಜಾತಿ ವಿನಾಶ’ ಭಾಷಣವನ್ನು ಓದಿದ್ದು ಶ್ರೀ ಹಾವನೂರರ ಅಧ್ಯಕ್ಷತೆಯಲ್ಲಿ. ಅವರು ಹಿಂದುಳಿದ ಜಾತಿಗಳ ಬಗ್ಗೆ ಆಗ ತಯಾರಿಸುತ್ತಿದ್ದ ವರದಿ ಅತ್ಯಂತ ಮುಖ್ಯವಾದ, ಇಡೀ ಭಾರತದ ದೃಷ್ಟಿಯಿಂದಲೂ ಗಮನಾರ್ಹವಾದ – ದಾಖಲೆಯೆನ್ನಬಹುದು. ಅವರು ಈ ವರದಿ ತಯಾರಿಸುವಲ್ಲಿ ಪಟ್ಟ ಕಷ್ಟ, ಸಹಿಸಿದ ನಿಂದನೆ ಎಲ್ಲರಿಗೂ ಗೊತ್ತಿರುವ ಸಂಗತಿಗಳು. ಶ್ರೀ ಹಾವನೂರರು ತಮ್ಮ ಕೆಲಸವನ್ನು ಇಂದಿರಾ ಗಾಂಧಿಯವರ ನಾಯಕತ್ವದ ಪಕ್ಷದ ಆಶ್ರಯದಲ್ಲಿ ಮಾಡಬೇಕಾಗಿ ಬಂದಿದ್ದರಿಂದ ಅನೇಕ ವಿಪರ್ಯಾಸಗಳನ್ನು ನಾವೆಲ್ಲ ಎದುರಿಸಬೇಕಾಯಿತು. ಅವರ ಬಗ್ಗೆ ಸಹಾನುಭೂತಿಯಿದ್ದ ನನ್ನಂಥ ಹಲವರಿಗೆ ಅವರನ್ನು ಬೆಂಬಲಿಸುವುದು ಮುಜುಗರದ ಸಂಗತಿಯಾಯಿತು. ಲೇಖಕರ ಒಕ್ಕೂಟದ ಜಾತಿ ವಿರೋಧಿ ಆಶಯದಲ್ಲಿ ಸಹಾನುಭೂತಿಯಿದ್ದೂ ಒಕ್ಕೂಟದ ಕಾರ್ಯನೀತಿಯನ್ನು ವಿರೋಧಿಸಬೇಕಾಗಿ ಬಂದ ನನ್ನಂಥವರ ಕಷ್ಟಕ್ಕೂ ಮೀರಿದ ಹಲವು ವಿಚಿತ್ರ ಘಟನೆಗಳು ಆಮೇಲಿನ ದಿನಗಳಲ್ಲಿ ನಮ್ಮ ರಾಜಕೀಯದಲ್ಲಿ ನಡೆದುಹೋದವು. ಶ್ರೀಮತಿ ಗಾಂಧಿ ತನ್ನ ಮತ್ತು ಮಗನ ಸ್ವಾರ್ಥಕ್ಕಾಗಿ ಇಡೀ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಹಾವನೂರರು ಅವರ ಜೊತೆಗಿದ್ದರು. ನಮ್ಮನ್ನೆಲ್ಲ – ಬ್ರಾಹ್ಮಣ ವಿರೋಧಿ ಒಕ್ಕೂಟದ ಸದಸ್ಯರನ್ನೂ ಸಹ ಅತ್ಯಂತ ಮುಜುಗರದ ಪರಿಸ್ಥಿತಿಗೆ ತಂದೊಡ್ಡಿದ ದೇಶದ ಈ ರಾಜಕೀಯ ಸಂದರ್ಭದಲ್ಲಿ ಸರ್ವಾಧಿಕಾರ ವಿರೋಧಿಸಲೆಂದು ನಾವೆಲ್ಲ ಸನಾತನಿಗಳಾದ ಆರೆಸ್ಸೆಸ್ಸಿನ ಜೊತೆ ನಿಲ್ಲಬೇಕಾಯಿತು. ಒಕ್ಕೂಟದ ಉಗ್ರಗಾಮಿಗಳು ಇದರಿಂದ ತುಂಬ ತಬ್ಬಿಬ್ಬಾಗಿರಬೇಕೆಂದು ನನ್ನ ಊಹೆ. ಲೋಹಿಯಾವಾದಿಗಳಾದ ಜಾತಿ ವಿರೋಧಿಗಳು, ಆರೆಸ್ಸೆಸ್ಸಿನವರು ಮತ್ತು ಜಮೀನ್ದಾರಿಕೆ ಅಲುಗಾಡಿಸಬಲ್ಲ ಶಕ್ತಿಯಿದ್ದವರು, ಶ್ರೀಮತಿ ಗಾಂಧಿಯ ಚಮಚಾಗಳು. ಮತ್ತು ದುಷ್ಟಶಕ್ತಿಗಳು ಇನ್ನೊಂದು ಕಡೆಯಾಗಿ ನಿಂತದ್ದು – ಹಾಗೆ ನಿಲ್ಲಿಸುವಂತೆ ಮಾಡಿದ ರಾಜಕೀಯ ಬೆಳವಣಿಗೆಗೆಳು ನಮ್ಮೆಲ್ಲರಿಗೂ ನಮ್ಮ ಅಳಿವಿನ ಆಳಕ್ಕೂ ಮೀರಿದ ಸಂಗತಿಯಾಯ್ತು.

ತುರ್ತು ಪರಿಸ್ಥಿತಿ ಕೊನೆಯಾದ ಮೇಲೆ ಶ್ರೀಮತಿ ಗಾಂಧಿಯ ವಿರುದ್ಧ ಚಿಕ್ಕಮಗಳೂರಿನಲ್ಲಿ ಪ್ರಚಾರ ಮಾಡಹೋದ ನನ್ನಂಥವನಿಗೆ ಇನ್ನೊಂದು ಸತ್ಯವನ್ನು ಎದುರಿಸಬೇಕಾಯಿತು. ಇ.ಎಂ.ಎಸ್., ಏ.ಕೆ.ಜಿಯಂಥ ಹಿರಿಯ ಮಾರ್ಕ್ಸಿಸ್ಟರ ನೇತೃತ್ವದಲ್ಲಿ ಬೆಳೆದ ಕೇರಳದ ರಾಜಕೀಯದಲ್ಲಿ ವರ್ಗಕಲಹ ವಿಚಾರ ಬೇರೂರಬೇಕಿತ್ತು; ಆದರೆ ಬದಲಾಗಿ ಅಲ್ಲಿ ನಾವು ಈಗ ಕಾಣುತ್ತಿರುವುದು ನಾಯರ್, ಶಿಯಾ, ಕ್ರಿಶ್ಚಿಯನ್, ಮುಸ್ಲಿಂ ಇತ್ಯಾದಿ ಜಾತಿಗಳ ಪಕ್ಷ. ಆದರೆ ಕರ್ಣಾಟಕದಲ್ಲಾದರೋ ನೇರವಾಗಿ ಜಾತಿ ರಾಜಕೀಯವನ್ನೇ ಮಾಡಿಕೊಂಡು ಬಂದ ಪರಂಪರೆಯಲ್ಲಿ ಶ್ರೀ ಅರಸರು ಮತ್ತು ಹಾವನೂರರು ಜಾತಿಯ ಮೂಲಕವೇ ವರ್ಗಪ್ರಜ್ಞೆಯನ್ನು ಅಲ್ಪಸ್ವಲ್ಪವಾದರೂ ಜನರ ನಡುವೆ ಬೇರೂರುವಂತೆ ಮಾಡಿದ್ದರು. ಆದರೆ ಇದರ ಫಲವನ್ನು ಅವರು ಅರ್ಪಣೆ ಮಾಡುತ್ತಿದ್ದುದು – ಈ ದೇಶದ ವ್ಯವಸ್ಥೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತ ಬಂದಿರುವ ಶ್ರೀಮತಿ ಗಾಂಧಿಯವರಂತಹ ಕುಟಿಲ ನೀತಿಯ ರಾಜಕಾರಣಿಗೆ. ಈ ವಿಪರ್ಯಾಸ ಕೂಡ ನನ್ನನ್ನು ತಬ್ಬಿಬ್ಬು ಮಾಡುವಂಥದಾಗಿತ್ತು.

ಆದರೆ ಭಾರತ ಚಲನಶೀಲವಾಗಿದೆ, ನಾನು ಈ ಲೇಖನ ಬರೆಯುತ್ತಿರುವ ಈ ಹೊತ್ತಿನಲ್ಲಿ ಶ್ರೀ ಅರಸರು ಮತ್ತು ಹಾವನೂರರು ಶ್ರೀಮತಿ ಗಾಂಧಿಯ ವಿರುದ್ಧ ಬಂಡಾಯವೆದ್ದಿದ್ದಾರೆ. ದೇಶದ ಸ್ವಾತಂತ್ರ್ಯವನ್ನು ಕಾಪಾಡಿದ ಜನತಾ ಪಕ್ಷದಲ್ಲಿ ಲೋಹಿಯಾವಾದಿಗಳ ಜೊತೆ ಸನಾತನಿಗಳೂ ಜಮೀನ್ದಾರರೂ ಇದ್ದಾರೆ. ಶ್ರೀ ಹಾವನೂರರ ಜೊತೆ ನಿನ್ನೆ ಮೊನ್ನೆಯ ತನಕ ಶ್ರೀಮತಿ ಗಾಂಧಿಗಾಗಿ ಪುಂಡಾಟ ನಡೆಸಿದವರಿದ್ದಾರೆ. ಇಂಥ ರಾಜಕೀಯದ ಗೊಂದಲದಲ್ಲೂ ಶ್ರೀ ಹಾವನೂರರಂಥವರು ಹಿಂದುಳಿದ ಜಾತಿಗಳನ್ನು ಮೈಲೆತ್ತುವ ಉಪಾಯಗಳನ್ನು ಯೋಚಿಸಬೇಕಾಗಿದೆ.

ಈವರೆಗೆ ನಾನು ಜಾತಿಪದ್ಧತಿಯ ವಿರುದ್ಧದ ಹೋರಾಟವನ್ನು ವೈಯಕ್ತಿಕ ಮತ್ತು ರಾಜಕೀಯ ಆಯಾಮಗಳಲ್ಲಿಟ್ಟು ನೋಡಲು ಪ್ರಯತ್ನಿಸಿದ್ದೇನೆ. ನನ್ನ ದೃಷ್ಟಿ ಸಮಾಜ ವಿಜ್ಞಾನಿಯ ನಿಖರವಾದ ವಿಶ್ಲೇಷಕ ಪ್ರವೃತ್ತಿಯಿಂದ ಹುಟ್ಟಿದ್ದಲ್ಲ – ಅದು ಒಬ್ಬ ಸಾಹಿತಿಯದು. ಆದರೆ ನನ್ನ ದೃಷ್ಟಿಯ ಮಿತಿಯಲ್ಲೇ ಹಾವನೂರು ಕಾರ್ಯ ವಿಧಾನದ ಬಗ್ಗೆ ಕೆಲವು ಅನುಮಾನಗಳನ್ನೂ ಎತ್ತಿ ಈ ಲೇಖನ ಮುಗಿಸಬೇಕೆಂದಿದ್ದೇನೆ.

ಕೆಲವು ದಿನಗಳ ಹಿಂದೆ ನಾನೊಂದು ಸಿನಿಮಾ ನೋಡಿದೆ – ‘ಸಿನಿಮಾಯುಗ’ದ ಪ್ರಾರಂಭದಲ್ಲಿ ಪ್ರಾಹರ್ಟಿ ತಯಾರಿಸಿದ್ದು, ಎಸ್ಕಿಮೋ ಸಂಸಾರ ಒಂದರ ಡಾಕ್ಯುಮೆಂಟರಿ ಚಿತ್ರ ಇದು. ‘ನಾನೂಕ್ ಆಫ್ ದಿ ನಾರ್ತ್’ ಇದರ ಹೆಸರು. ನಾನೂಕ್ ಶೀತ ವಲಯದಲ್ಲಿ ವಾಸಿಸುವ ಒಬ್ಬ ಎಸ್ಕಿಮೊ. ಇವನ ಹಿಮ ಜಗತ್ತಿನಲ್ಲಿ ವೈಜ್ಞಾನಿಕ ಆಧುನಿಕ ಬೆಳವಣಿಗೆಗಳೂ ಆಗಿಲ್ಲ. ಗ್ರಾಮಫೋನ್ ರೆಕಾರ್ಡನ್ನು ಅವನಿಗೆ ಹಾಕಿ ತೋರಿಸಿದಾಗ ನಾನೂಕ್ ಅದರಿಂದ ಬರುವ ನಾದಕ್ಕೆ ಬೆರಗಾಗಿ ರೆಕಾರ್ಡನ್ನು ಕಚ್ಚಿ ಅಗಿಯಲು ಪ್ರಯತ್ನಿಸುತ್ತಾನೆ. ಶೀತಕಾಲದಲ್ಲಿ ದಿನಗಟ್ಟಲೆ ಹಸಿದಿರುವ ನಾನೂಕ್, ತನ್ನ ಆಹಾರದ ಸೀಲ್ ಪತ್ತೆಯಾದೊಡನೆ ಅದನ್ನವನು ಬೇಟೆಯಾಡುವುದನ್ನು ನಾವು ನೋಡುತ್ತೇವೆ. ಅವನು ಸೀಲನ್ನು ಜಗ್ಗುವಷ್ಟೇ ಬಲವಾಗಿ ಸೀಲ್ ಕೂಡ ಅವನನ್ನು ಜಗ್ಗುವ ಈ ಹೋರಾಟದಲ್ಲಿ ಮನುಷ್ಯ ಮತ್ತು ಪ್ರಾಣಿ ಸಮಸಮವಾಗಿ ಯಾರಾದರೂ ಗೆದ್ದಾರು ಎಂದು ನಮಗನ್ನಿಸುತ್ತದೆ. ಅವನು ಹಿಡಿದ ಸೀಲನ್ನು, ಅದಕ್ಕಿನ್ನೂ ಜೀವವಿರುವಾಗಲೇ ಹರಿದು ಹಸಿಹಸಿಯಾಗಿ ನಾನೂಕ್, ಅವನು ಹೆಂಡತಿ ಮಕ್ಕಳು ತಿನ್ನುತ್ತಾರೆ. ಅವರು ದುರಾಸೆಯ ಜನವೆಂದು ಅನ್ನಿಸುವುದಿಲ್ಲ. ಬದುಕು ಸಾವಿನ ಅಂಚಿನಲ್ಲಿದ್ದೇ ಅವರು ತಿನ್ನುತ್ತಾರೆ. ನಿದ್ರಿಸುತ್ತಾರೆ, ನಾಯಿಗಳನ್ನು ಮಕ್ಕಳನ್ನು ಪ್ರೀತಿಸುತ್ತಾರೆ, ಸ್ನೇಹದಲ್ಲಿ ಕೊಡುಕೊಳ್ಳುತ್ತಾರೆ. ನಾನೂಕ್ ಹೇಗೆ ಅಸಾಮಾನ್ಯ ಬೇಟೆಗಾರನೋ ಹಾಗೆಯೇ ಪ್ರೀತಿಯ ತಂದೆ, ಗಂಡ, ಕನಸುಗಾರ, ವಾಸ್ತುಶಿಲ್ಪಿ – ಮಂಜಿನಗಡ್ಡೆಗಳಿಂದ ಅವರು ಮನೆ ಕಟ್ಟುವ ಕೌಶಲ್ಯ, ಅವರಿಗೆ ಸಿಗುವ ಅಲ್ಪಸ್ವಲ್ಪ ಸೂರ್ಯನ ಕಿರಣಗಳನ್ನು ಮನೆಯೊಳಗೆ ತರಲು ಅವನು ಮಂಜಿನಿಂದ ತಯಾರಿಸಿರುವ ಕಿಟಕಿಗಳನ್ನು ನೋಡಿದಾಗ ತನ್ನ ವಾತಾವರಣಕ್ಕೆ ಒಗ್ಗಿ ಬಾಳುವ ನಾನೂಕ್ ಹೇಗೆ ಹಿಮಜಗತ್ತಲ್ಲೂ ತನಗೆ ಬೇಕಾದ ಸೌಕರ್ಯಗಳನ್ನು ನಿರ್ಮಿಸಿಕೊಳ್ಳುತ್ತಾನೆಂದು ನಾವು ನೋಡುತ್ತೇವೆ: ನಮ್ಮ ಜಗತ್ತಿನ ಅಸಾಮಾನ್ಯ ತಂತ್ರಜ್ಞನೊಬ್ಬ ತನ್ನ ಪರಿಸರವನ್ನು ದುಡಿಸಿಕೊಳ್ಳುವಷ್ಟೇ ಸಮರ್ಥವಾಗಿ ನಾನೂಕನೂ ತನ್ನದನ್ನು ದುಡಿಸಿಕೊಳ್ಳುತ್ತಾನೆ.

ಈ ಸಾಕ್ಷ್ಯಚಿತ್ರ ನೋಡುತ್ತಿದ್ದಂತೆ ನಮಗೆ ಒಂದು ವಿಷಯ ಮನದಟ್ಟಾಗುತ್ತದೆ; ಮನುಷ್ಯ ಅವನ ನಾಗರೀಕತೆಯ, ತಂತ್ರಜ್ಞತೆಯ ಯಾವ ಮಟ್ಟದಲ್ಲೇ ಇರಲಿ, ತನಗೆ ಸಹಜವಾದ, ಸಾಧ್ಯವಾದ ಮಾನವೀಯತೆಯನ್ನೂ ಬದುಕಿನ ಘನತೆಯನ್ನೂ ಪಡೆಯಬಲ್ಲ, ವೈಜ್ಞಾನಿಕ ತಂತ್ರಜ್ಞತೆಯಲ್ಲಿ ಬೆಳೆದವರು ಮಾತ್ರ ಸ್ವಾತಂತ್ರ್ಯ ಮತ್ತು ಘನತೆಗಳಿಗೆ ಅರ್ಹರೆಂದೋ ಅಥವಾ ಅವರಿಗೆ ಮಾತ್ರ ಅದು ಸಾಧ್ಯವೆಂದೋ ನಾವು ತಿಳಿದದ್ದನ್ನು ತನ್ನ ಜಗತ್ತಿನ ‘ಲಿಯೋನಾರ್ಡೋ ಡಾ ವಿಂಚಿ’ಯಾದ ನಾನೂಕ್ ಸುಳ್ಳೆಂದು ಸಾರುವಂತೆ ತನ್ನ ಬದುಕಿನ ಉಗ್ರನಿಷ್ಠುರ ಹೋರಾಟ ನಡೆಸುತ್ತಾನೆ. ಆದರೂ ನಾನೂಕ್ ಜಗತ್ತಿಗೆ ನಮ್ಮ ಜಗತ್ತಿನ ಬಂದೂಕು ಧಾರಿಯೊಬ್ಬ ಪ್ರವೇಶಿಸಿದ ಎನ್ನಿ. ಆಗ ರಾಬಿನ್‌ಸನ್ ಕ್ರೂಸೋ ಹೊಕ್ಕ ಜಗತ್ತು ಬದಲಾದಂತೆ ನಾನೂಕ್‌ನ ಪ್ರಪಂಚದ ಸ್ವಯಂಪೂರ್ಣತೆಯಲ್ಲಿ ಅಸ್ಥಿರತೆ ತಲೆ ಹಾಕುತ್ತದೆ. ತನ್ನ ಜೀವವನ್ನೇ ಪಣಕ್ಕಿಟ್ಟು ನಾನೂಕ್ ಸೀಲನ್ನು ಬೇಟೆಯಾಡಬೇಕು. ಆದರೆ ಬಂದೂಕುಧಾರಿ ಒಂದೇ ಗುಂಡಿನಿಂದ ಅದನ್ನು ಶ್ರಮವಿಲ್ಲದೆ ಕೊಲ್ಲಬಲ್ಲ. ಆದ್ದರಿಂದ ಬಂದೂಕುಧಾರಿ, ನಾನೂಕ್‌ಗಿಂತ ಮೇಲಿನವನಾಗುತ್ತಾನೆ. ಸ್ವತಂತ್ರ ವ್ಯಕ್ತಿಯಾದ ನಾನೂಕ್ ಮ್ಯಾನ್ ಪ್ರೈಡೆಯಾಗುತ್ತಾನೆ. ಸಾಮ್ರಾಜ್ಯಶಾಹಿಗೂ ಅದರ ಆಡಳಿತಕ್ಕೊಳಗಾದ ವಸಾಹತುಶಾಹಿಗಳಿಗೂ ಇರುವ ಸಂಬಂಧ ಕೂಡ ಇದೆ ಆದ್ದರಿಂದಲೇ  ನಮ್ಮ ನಾಡಿನ ಅಸ್ಪೃಶ್ಯರು ಮತ್ತು ಅತಿ ಶೂದ್ರರು ನಾನೂಕ್‌ಗಿಂತ ತಂತ್ರಜ್ಞತೆಯಲ್ಲಿ ಮುಂದಿದ್ದರೂ ತಮ್ಮ ಘನತೆ, ಸ್ವಾತಂತ್ರ್ಯ ಮತ್ತು ಮಾನವೀಯತೆಗಳನ್ನು ಪಡೆದುಕೊಳ್ಳಲಾರದೆ ಹೋಗಿದ್ದಾರೆ. ಈ ಜಾತಿಗಳು ಶೋಷಣೆಗೆ ಒಳಪಡುವುದರಿಂದ, ಶೋಷಣೆಯೂ ಒಂದು ಬಗೆಯ ಹೀನ ಸಂಬಂಧವಾದ್ದರಿಂದ, ಮೇಲುಕೀಳಿನ ಕಲ್ಪನೆಗಳು ಈ ಸಂಬಂಧದಿಂದಾಗಿ ಹುಟ್ಟುವುದರಿಂದ ನಮ್ಮ ದೇಶದ ದಲಿತರು ಚರಿತ್ರೆಯುದ್ದಕ್ಕೂ ತಮ್ಮ ಮಾನವೀಯ ಸಾಧ್ಯತೆಗಳಿಂದ ವಂಚಿತರಾಗಿದ್ದಾರೆ. ದಲಿತರು ಸ್ವಲ್ಪ ಮುಂದುವರಿಯುವ ಹೊತ್ತಿನಲ್ಲೇ ಮುಂದುವರಿದ ಜನಾಂಗ ಈಗಿರುವುದಕ್ಕಿಂತ ಇನ್ನಷ್ಟು ಮುಂದೆ ಹೋಗಿರುತ್ತದೆ. ಆದ್ದರಿಂದ ಇಬ್ಬರ ಸಂಬಂಧ ಮತ್ತೆ ಹಿಂದಿನಂತೆಯೇ ಉಳಿಯುತ್ತದೆ – ಅಮೆರಿಕಾದ ಕಪ್ಪುಜನ ಕಾರು, ರೇಡಿಯೋ, ಟೆಲಿವಿಷನ್ ಇತ್ಯಾದಿಗಳನ್ನು ಪಡೆದೂ ವಿಷಣ್ಣರಾಗಿಯೇ ಉಳಿದಿರುವಂತೆ, ಅಂತರ ರಾಷ್ಟ್ರೀಯವಾಗಿ ಹೇಳುವುದಾದರೆ ನಮ್ಮ ಬಡರಾಷ್ಟ್ರಗಳು ಮುನ್ನಡೆಯುವ ಹೊತ್ತಿನಲ್ಲೇ ಅಮೆರಿಕಾ ಯುರೋಪ್ ದೇಶಗಳು ಇನ್ನಷ್ಟು ಮುಂದೆ ಹೋಗಿರುವಂತೆ.

ನಾನು ಈ ನಿದರ್ಶನವನ್ನು ಇಷ್ಟು ವಿವರಿಸಲು ಕಾರಣವಿದೆ. ಈ ನಮ್ಮ ದೌರ್ಭಾಗ್ಯದ ದೇಶದಲ್ಲಿ ಮೀಸಲಾತಿಯನ್ನು ಜಾರಿಗೆ ತಂದವನು ಪ್ರಾಯಶಃ ಮನುವೇ ಇರಬೇಕು. ನೂರಕ್ಕೆ ನೂರು ಮೀಸಲಾತಿಯ ವಿಧಾನ ಅದು. ಪೌರೋಹಿತ್ಯ ನೂರಕ್ಕೆ ನೂರು ಬ್ರಾಹ್ಮಣರಿಗೆ, ಕಕ್ಕಸ್ಸನ್ನು ಶುಚಿಮಾಡುವುದು ನೂರಕ್ಕೆ ನೂರು ಪಂಚಮರಿಗೆ. ಈಗ ನಾವಿದನ್ನು ರಿಪೇರಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇದು ರಿಪೇರಿಯಷ್ಟೇ. ಹಾವನೂರ್ ಮಾಡಿರುವ ಮೀಸಲಾತಿಯ ಪೂರ್ಣ ಅನ್ವಯವಾದಾಗಲೂ ವ್ಯತ್ಯಾಸಗಳು ಉಳಿದೇ ಇರುತ್ತವೆ. ಯಾಕೆಂದರೆ ದೇಶದ ಪ್ರಜೆಗಳಲ್ಲಿ ಅಸಮಾನತೆಯನ್ನು ಹೆಚ್ಚಿಸುವ ಸಾಮಾಜಿಕ ಏರ್ಪಾಟುಗಳನ್ನೇನೂ ನಾವು ಕದಲಿಸುತ್ತಿಲ್ಲ, ಈಗಿರುವ ಸ್ಕೂಲ್ ಪದ್ಧತಿಯಿಂದ ಇನ್ನಷ್ಟು ಅಸಮಾನತೆಗಳು ಬೆಳೆಯುತ್ತವೆ. ಒಳ್ಳೆಯ ಇಂಗ್ಲಿಷ್ ಜ್ಞಾನ ಸಿಗಲು ಮಕ್ಕಳನ್ನು ನಾವು ಖಾಸಗಿ ವಿದ್ಯಾಸಂಸ್ಥೆಗಳಿಗೆ ಕಳಿಸಬೇಕಾಗುತ್ತದೆ. ದೇಶಾದ್ಯಂತ ಒಂದೇ ದರ್ಜೆಯ ಶಾಲೆಗಳಿರತಕ್ಕದ್ದು ಎಂಬ ಶಾಸನ ಜಾರಿಗೆ ಬರದ ಹೊರತು ಅಸಮಾನತೆಗಳು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗಲಾರವು; ಅಂದರೆ ದೀನದಲಿತರು ತಮ್ಮ ಮಾನವತೆಯ ಪೂರ್ಣತೆಯನ್ನು ಈ ದೇಶದಲ್ಲಿ ನಾನೂಕ್‌ನಂತೆ ಪಡೆಯಲಾರರು.

ನೈಸರ್ಗಿಕವಾಗಿ ಮನುಷ್ಯ ಒಟ್ಟು ಯೋಗ್ಯತೆಯ ನಡುವೆ ಅಸಮಾನತೆಗಳು ಪ್ರಾಯಶಃ ಉಳಿದೇ ಇರುತ್ತವೆ ಎಂಬ ವಾದವನ್ನು ಬೇಕಾದರೆ ಒಪ್ಪಿಕೊಳ್ಳೋಣ. ಸಾಮಾಜಿಕ ಆರ್ಥಿಕ ಅಸಮಾನತೆಯ ಪ್ರಮಾಣಕ್ಕಿಂತ ಹೆಚ್ಚಿನ ಸಾಮಾಜಿಕ, ಆರ್ಥಿಕ ಅಸಮಾನತೆಗಳು ನಮ್ಮ ಜನರ ನಡುವೆ ಇವೆ. ಹೀಗಾಗಿ ಎಷ್ಟೋ ಪ್ರತಿಭಾವಂತರು ಕತ್ತಲಲ್ಲೆ ಉಳಿದು ಬಿಡುತ್ತಾರೆ. ಆದ್ದರಿಂದ ದೇಶ ಹಿಂದುಳಿದೆ ಇರುತ್ತದೆ. ಹಿಂದುಳಿದ ವರ್ಗಗಳಿಗೆ ನೌಕರಿಯಲ್ಲಿ ಜಾಗಗಳನ್ನು ಮೀಸಲಿಡುವ ಹಾವನೂರ್ ಮಾರ್ಗ ಕೂಡ ದೇಶದ ಅಸಮಾನತೆಯನ್ನು ನಿವಾರಿಸಲಾರದು ಎಂದೆ, ಜಾತಿ ಪ್ರಜ್ಞೆಯನ್ನು ಬಳಸಿಕೊಂಡೇ ಜಾತಿಗಳನ್ನು ವಿನಾಶ ಮಾಡುವುದು ಸಾಧ್ಯವೇ? ಹಾವನೂರ್, ಜಾತಿಗಳನ್ನು ನಾಶ ಮಾಡಲು ಹೊರಟವರೆ? ಅಥವಾ ಜಾತಿಗಳು ಉಳಿದರೂ ಚಿಂತೆಯಿಲ್ಲ, ಉಳಿಯುವುದು ಈ ದೇಶದಲ್ಲಿ ಪ್ರಾಯಶಃ ಅನಿವಾರ್ಯ, ಆದ್ದರಿಂದ ಜಾತಿಗಳಲ್ಲಿ ಸಮಾನತೆ ಬಂದರೆ ಸಾಕು ಎಂಬ ಪರಿಮಿತ ಉದ್ದೇಶ ಉಳ್ಳವರೆ?

ಈ ಅನುಮಾನಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಆದರೆ ಬ್ರಾಹ್ಮಣರಾಗಿ ಹುಟ್ಟಿ ಬೆಳೆದ ನನ್ನಂಥವರು ಪ್ರಾಯಶಃ ಲಿಂಗಾಯುತರು ಕೂಡ – ಕೇಳಿಕೊಳ್ಳಬೇಕಾದ ಮುಖ್ಯ ಪ್ರಶ್ನೆ ಇದು: ಈಗಿಂದೀಗಲೇ ಜಾತಿಯ ಅನ್ಯಾಯದ ವಿರುದ್ಧ ಹೋರಾಡಲು ಹಾವನೂರ್ ಕ್ರಮಕ್ಕಿಂತ ಉತ್ತಮ ವಿಧಾನವನ್ನು ನಾವು ಸೂಚಿಸಬಲ್ಲೆವೇ? ನಮ್ಮ ಸಂವಿಧಾನದ ಪರಿಮಿತಿಯಲ್ಲೇ ಇನ್ನೇನು ಮಾಡಲು ಸಾಧ್ಯ? ಯಾಕೆಂದರೆ ಅಮೂರ್ತವಾಗಿ ಕ್ರಾಂತಿಕಾರಕ ಸಮಾನತೆ ಬಗ್ಗೆ ಮಾತಾಡುವುದು ಖದೀಮತನವಾಗುತ್ತದೆ. ಮನುಷ್ಯ ದೇವರಿಗೆ ಸಮ ಎನ್ನುವ ಪರಮ ಕ್ರಾಂತಿಕಾರಕ ತತ್ವದ ನೆರಳಲ್ಲೇ ಜಾತಿಯ ಅಸಮಾನತೆಯನ್ನು ಘೋಷಿಸಿದ ಈ ದೇಶಕ್ಕೆ ವರ್ಗಪ್ರಜ್ಞೆಯ ಕ್ರಾಂತಿಗೆ ಕಾಯುತ್ತ ಈ ವ್ಯವಸ್ಥೆಯನ್ನು ಈಗಿರುವಂತೆಯೇ ಕಾಯ್ದುಕೊಂಡು ಹೋಗುವ ಉಪಾಯವನ್ನು ಯಾರೂ ಹೇಳಿಕೊಡಬೇಕಿಲ್ಲ. ಜಾತಿಗಳನ್ನು ಉಳಿಸಿಕೊಂಡೇ ಜಾತಿಗಳಲ್ಲಿ ಸಮಾನತೆಯನ್ನು ತರುವ ಪರಿಮಿತ ಪ್ರಯತ್ನ ಮಾತ್ರ ಹಾವನೂರ ವರದಿಯ ಉದ್ದೇಶವಿರಬಹುದು ಎನ್ನಿಸುತ್ತದೆ. ಯಾಕೆಂದರೆ ಎಲ್ಲ ಜಾತಿಗಳಿಗೂ – ಪ್ರಾಯಶಃ ಪಂಚಮರು, ಅತಿಶೂದ್ರರನ್ನು ಬಿಟ್ಟು – ಉಳಿದೆಲ್ಲರಿಗೂ ಜಾತಿವ್ಯವಸ್ಥೆಯಿಂದ ಕೆಲವು ಉಪಯೋಗಗಳಿವೆ. ಜಾತಿ ಒಂದು ಬಗೆಯ ವಿಕೇಂದ್ರೀಕೃತ ವ್ಯವಸ್ಥೆ: ಕಷ್ಟದಲ್ಲಿ ನಮ್ಮ ಸಹಾಯಕ್ಕೆ ಯಾರೂ ಬರದಿದ್ದರೂ ಜಾತಿಯವರಾದರೂ ಇರುತ್ತಾರೆ. ಇತ್ಯಾದಿ ಭರವಸೆಗಳನ್ನು ಅದು ನಮಗೆ ಕೊಡುತ್ತದೆ. ಮದುವೆಯಲ್ಲಿ ಜಾತಿಯ ಕಟ್ಟು ಮುರಿದು ಹೊರಬರುವಾಗ, ಹಾಗೆ ಹೊರಬಂದ ಮೇಲೂ ಜಾತಿ ಅಂಟಿಕೊಳ್ಳುವಾಗ ಆಗುವ ದಿಗಿಲನ್ನು, ಎಡಬಿಡಂಗಿತನಗಳನ್ನು ಅನುಭವಿಸಿದವನು ಜಾತಿಯ ಶಕ್ತಿಯನ್ನು ಚೆನ್ನಾಗಿ ಅರಿತಿರುತ್ತಾನೆ. ವಿಪರ್ಯಾಸವೆಂದರೆ ಅದರಲ್ಲೇ ಉಳಿದವನಿಗಿಂತ ಅದನ್ನು ಬಿಡಲು ಪ್ರಯತ್ನಿಸುವವನನ್ನು ಜಾತಿ ಹೆಚ್ಚು ಕಾಡುತ್ತದೆ. ಅಂತರಜಾತಿ ವಿವಾಹ ಮಾಡಿಕೊಂಡವರು, ತಾನು ಮದುವೆಯಾದ ಹೆಂಡತಿಯ ಅಥವಾ ಗಂಡನ ಜಾತಿಯನ್ನು ತೀವ್ರವಾಗಿ ದ್ವೇಷಿಸಬಹುದೆಂಬುದನ್ನು ನಾವೆಲ್ಲ ನೋಡಿದ್ದೇವೆ. ಆದ್ದರಿಂದ ಅಧಿಕಾರ ಮತ್ತು ವಿದ್ಯಾಭ್ಯಾಸಗಳನ್ನು ಹಂಚಿಕೊಂಡ ಮಾತ್ರಕ್ಕೆ ಜಾತಿಯ ಬಿಗಿ, ವ್ಯಕ್ತಿಯ ಮೇಲೆ ಕಡಿಮೆಯಾದೀತು ಎಂದು ತಿಳಿಯುವುದು ತೀರಾ ಸರಳ ರೀತಿಯ ಯೋಚನೆಯಾಗಬಹುದು.

ಒಳ್ಳೆಯ ಶಾಲೆ, ಇಂಗ್ಲಿಷ್ ವಿದ್ಯಾಭ್ಯಾಸಗಳ ಸವಲತ್ತುಗಳು ಜನರಲ್ಲಿ ಇನ್ನಷ್ಟು ತೀವ್ರ ಅಸಮಾನತೆಗಳನ್ನು ತರುವ ಸಾಧನಗಳು ಎಂದೆ. ಹೀಗೆ ಹೇಳುವಾಗ ಯಂತ್ರ ನಾಗರೀಕತೆ – ಅಂದರೆ ಐರೋಪ್ಯ ಮಾದರಿಯದು – ಈ ರೀತಿಯ ವಿದ್ಯಾಭ್ಯಾಸವನ್ನು ಅಗತ್ಯ ಮಾಡುತ್ತೆಂಬುದನ್ನೂ ಇಲ್ಲಿ ಮರೆಯಲಾಗದು. ಒಬ್ಬ ಮಡಕೆ ಮಾಡುವ ಕಂಬಾರನ ನಿದರ್ಶನ ತೆಗೆದುಕೊಳ್ಳೋಣ. ಆತ ಮಣ್ಣಿನ ಆಯ್ಕೆಯಿಂದ ಹಿಡಿದು, ಮಡಕೆ ಸುಡುವವರೆಗಿನ ಅನೇಕ ಕ್ರಿಯೆಗಳ ತಂತ್ರಜ್ಞನಾಗಿರುತ್ತಾನೆ. ಅಂದರೆ ಕ್ರಿಯೆಯಲ್ಲಿ ಕೆಲವು ಕೌಶಲ ಬೇಡುವಂಥವು, ಇನ್ನು ಕೆಲವು ಬರೀ ದೈಹಿಕ ಶ್ರಮದವು. ಆದರೆ ಮಡಕೆಯನ್ನು ಐರೋಪ್ಯ ತಾಂತ್ರಿಕತೆಯ ಕಾರ್ಖಾನೆಯೊಂದು ತಯಾರಿಸಲು ಹೊರಟಾಗ, ಅದರಲ್ಲಿ ದುಡಿಯುವವರಲ್ಲಿ ಕೆಲವರು ಬರಿಯ ಕೌಶಲದ ಕೆಲಸವನ್ನೂ ಉಳಿದವರು ಬುದ್ಧಿಯ ಉಪಯೋಗವಿಲ್ಲದ ಯಾಂತ್ರಿಕ ಶ್ರಮದ ಕೆಲಸವನ್ನೂ ಮಾಡುತ್ತಿರುತ್ತಾರೆ. ಕಾರ್ಖಾನೆಯ ರಚನೆಯೇ ಹಾಗಿರುತ್ತದೆ. ಆದ್ದರಿಂದ ಮನುಷ್ಯನಲ್ಲಿ ಅಡಕವಾಗಿರುವ ಹಲವು ಕೌಶಲಗಳನ್ನು ಒಡೆದು, ಕೆಲಸವನ್ನು ಮಾತ್ರ ದುಡಿಸಿಕೊಳ್ಳುವ ಕಾರ್ಖಾನೆ ಕೂಡ ಜಾತಿಗಳನ್ನು ಸೃಷ್ಟಿಸುತ್ತದೆ. ಪ್ರತಿಯೊಬ್ಬನಲ್ಲಿರುವ ಸೃಜನಶೀಲತೆ ಮತ್ತು ದೈಹಿಕ ಶ್ರಮಗಳನ್ನು ಒಟ್ಟಾಗಿ ಬಳಸಬಲ್ಲ ಕಾರ್ಖಾನೆಯ ತಂತ್ರಜ್ಞತೆಯನ್ನು ಇಂಪೀರಿಯಲ್ ಸಂಸ್ಕೃತಿಗಳು ಬೆಳೆಸುವುದಿಲ್ಲ. ಯಾಕೆಂದರೆ ಇಂಥ ಸಂಸ್ಕೃತಿಗಳು ಉತ್ಪಾದನೆಗೋಸ್ಕರವೇ ಅಸಮಾನತೆಯನ್ನು ಹೆಚ್ಚಿಸುತ್ತವೆ; ಕೆಲವರನ್ನು ಸೃಜನಶೀಲರನ್ನಾಗಿಯೂ ಹಲವರನ್ನು ಕೇವಲ ಪಶುಬಲ ಮಾತ್ರದವರನ್ನಾಗಿಯೂ ಮಾಡುತ್ತವೆ. ನಮ್ಮ ಜಾತಿಪದ್ಧತಿ ಕೂಡ ಮಾಡಿರುವುದು ಇದನ್ನೇ ಅಲ್ಲವೇ? ಯಾಕೆಂದರೆ ಜಾತಿಯನ್ನು ಸೃಷ್ಟಿಸಿದ ಭಾರತ ಸಂಸ್ಕೃತಿ ಮುಖ್ಯವಾಗಿ ಇಂಪೀರಿಯಲ್. ಇದನ್ನು ಬಹಳ ಜನ ಸ್ಪಷ್ಟವಾಗಿ ಅರಿಯದಿರುವುದರಿಂದ ಅನೇಕ ಗೊಂದಲಗಳು ನಮ್ಮ ವಿಚಾರದಲ್ಲಿ ಬಿದ್ದಿವೆ.

ಪಾಶ್ಚಾತ್ಯ ತಂತ್ರಜ್ಞಾನ ಕೂಡ – ಅದು ರಷ್ಯಾದ್ದಿರಲಿ, ಅಮೇರಿಕಾದ್ದಿರಲಿ ಮೂಲಭೂತವಾಗಿ ಇಂಪೀರಿಯಲ್. ಆದ್ದರಿಂದಲೇ ಜಗತ್ತಿನಲ್ಲಿ ಕಮ್ಯುನಿಸ್ಟ್ ರಾಷ್ಟ್ರಗಳೂ ತಮ್ಮ ತಮ್ಮ ಸ್ವಾರ್ಥಕ್ಕಾಗಿ ತಮ್ಮ ಬಣಗಳ ಒಳಗೇ ಬಡಿದಾಡುತ್ತಿರುವುದು; ಚೀನ ಕೂಡ ರಷ್ಯಾದ ಹಾದಿ ಹಿಡಿದಿರುವುದು. ಕಂಪ್ಯೂಟರು ವಿಜ್ಞಾನ, ಅಣ್ವಸ್ತ್ರಗಳ ತಯಾರಿಕೆ ಇತ್ಯಾದಿಗಳನ್ನು ನಡೆಸಿಕೊಂಡು ಹೋಗಬಲ್ಲವರನ್ನು ಸೃಷ್ಟಿಸಲು ಐ.ಐ.ಟಿ.ಯಂಥ ಸಂಸ್ಥೆಗಳು, ವಿಶೇಷವಾದ ತರಬೇತಿಗಳು ಅಗತ್ಯವಾಗದೆ ವಿಧಿಯಿಲ್ಲ. ಆಧುನಿಕ ವೈಜ್ಞಾನಿಕ ಸಂಸ್ಕೃತಿಯನ್ನು ಉಳಿಸಲು ಬೆಳೆಸಲು ಇಂಥ ವಿದ್ಯಾಭ್ಯಾಸ ಅನಿವಾರ್ಯ. ಆದ್ದರಿಂದ ಈಗ ನಮ್ಮಲ್ಲಿ ಮುಂದುವರಿದ ಜನ, ಅವರು ಎಷ್ಟೇ ಪ್ರಗತಿಶೀಲರಿರಲಿ, ತಮ್ಮ ಮಕ್ಕಳಿಗೂ ಅಂಥ ವಿದ್ಯೆ ಬಯಸುವುದು ಕೂಡ ಅನಿವಾರ್ಯ.

ಹೀಗೆ ಯೋಚಿಸಿದಾಗ ದಿಗಿಲಾಗುವುದು ಸಹಜ. ಮೇಲಿರುವ ಜಾತಿಗಳು ಮೇಲೆ ಉಳಿದಿರುವುದು ಹಾಗಿದ್ದಲ್ಲಿ ಅನಿವಾರ್ಯವೇ? ಈ ಜಾತಿಗಳ ನಡುವೆ ಆಗೊಮ್ಮೆ ಈಗೊಮ್ಮೆ ಒಬ್ಬ ಅಂತ್ಯಜನೋ ಕುರುಬನೋ ಕ್ಷೌರಿಕನೋ ಅತ್ಯಂತ ಶ್ರಮಪಟ್ಟು ಏರಿ ಬಂದ ಎನ್ನಿ. ಅದರಿಂದ ಮಹತ್ವದ ಬದಲಾವಣೆ ಏನೂ ಆಗುವುದಿಲ್ಲ. ಸರ್ವ ಶಕ್ತಿಯನ್ನು ಪಡೆದ ಕೆಲವರು, ಅವರ ಅಡಿಯಲ್ಲಿ ಚೆನ್ನಾಗಿ ತಿಂದು ಸುಖಿಗಳಾದ ಹಲವು ಪ್ರಜ್ಞಾಹೀನರು – ಇಂಥ ಒಂದು ವ್ಯವಸ್ಥೆ, ಜಾತಿ ಪದ್ಧತಿಯಿಂದು ಸೃಜನತೆ ಕಳೆದುಕೊಂಡಿರುವ ನಮ್ಮ ಸಮಾಜಕ್ಕೆ ಪರ್ಯಾಯವಾಗಲಾರದು.

ಹೀಗೆ ವಾದ ಮಾಡುತ್ತ ವಿಜ್ಞಾನದ ಬೆಳವಣಿಗೆಯನ್ನು ವಿರೋಧಿಸುವ ನಿಲುವಿಗೆ ಬರುವುದು ಕೂಡ ಆತ್ಮಹತ್ಯೆಯ ಮಾರ್ಗವಾಗುತ್ತದೆ. ಆದರೆ ಇನ್ನೊಂದು ಮಾರ್ಗವಿದೆ; ಮನುಷ್ಯನ ವೈಜ್ಞಾನಿಕ ಬೆಳವಣಿಗೆಯ ಜೊತೆಗೇ, ಈ ನಮ್ಮ ಭೂಮಿಯ ಸಾರವನ್ನು ಪೋಲು ಮಾಡದ, ಪರ್ಯಾಯ ತಂತ್ರಜ್ಞಾನವನ್ನು ತರಬಲ್ಲ ಗಾಂಧಿಯ ಮಾರ್ಗ ಅದು.

ಮಾನವ ಸಮುದಾಯದ ಚರಿತ್ರೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಮಾರ್ಕ್ಸ್ ಬೇಕು. ಹಣದ ದುಷ್ಟ ಹಿಡಿತದಿಂದ ಮನುಷ್ಯನ ಕ್ರಿಯಾಶೀಲತೆ ಮುಕ್ತವಾಗುವ ಮಾರ್ಗಗಳನ್ನು ಹುಡುಕಲಂತೂ ಖಂಡಿತ ನಮಗೆ ಮಾರ್ಕ್ಸ್ ಬೇಕು. ಆದರೆ ಈ ಪ್ರಪಂಚದ ಜೊತೆಗಿನ ಸಂಬಂಧದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ನಿಜವಾದ ಹಿತ ಯಾವುದು, ಅವನು ಸಮಗ್ರನಾಗಿ ಉಳಿಯುವುದು ಹೇಗೆ ಎಂದು ತಿಳಿಯಲು ನಮಗೆ ಗಾಂಧಿ ಬೇಕು. ಈ ಎರಡೂ ಬಗೆಯ ಒಳನೋಟಗಳು ಪರಸ್ಪರ ವಿರೊಧಿಗಳಾಗಿ ಉಳಿಯಬೇಕಿಲ್ಲ. ಅವು ಒಟ್ಟಾದಾಗ ಮಾತ್ರ ರಿಪೇರಿಯಂತೆ ಕಾಣುವ ಹಾವನೂರ್ ಬಗೆಯ ಸುಧಾರಣೆಗಳಿಗೂ ಮೀರಿದ ಮೂಲಭೂತ ಬದಲಾವಣೆ ಕ್ರಮಗಳನ್ನು ನಾವು ಹುಡುಕಬಹುದು. ಆದರೆ ಗಾಂಧಿ ಹುಟ್ಟಿದ ಭಾರತ ಕೂಡ ಆ ದಿಕ್ಕಿನಲ್ಲಿಲ್ಲ.

ಹಾವನೂರ್ ವರದಿಯ ಬಗ್ಗೆ ಶ್ರೀ ದೇಸಾಯಿಯವರಿಂದ ಸಂಪಾದಿತ ಪುಸ್ತಕಕ್ಕಾಗಿ ಬರೆದ ಲೇಖನ: ಜುಲೈ ೧೯೭೯.