ಪ್ರಶ್ನೆ : ಸ್ವಾತಂತ್ರ್ಯಕ್ಕಿಂತ ಅನ್ನ ಮುಖ್ಯ ಎಂಬುದು ತುರ್ತುಪರಿಸ್ಥಿತಿಯ ಖ್ಯಾತ ಹೇಳಿಕೆ. ನಿಮ್ಮ ಪ್ರತಿಕ್ರಿಯೆ?

ಉತ್ತರ : ಸ್ವಾತಂತ್ರ್ಯಕ್ಕಿಂತ ಅನ್ನ ಮುಖ್ಯ ಎನ್ನುವುದು ಎಲ್ಲ ದೇಶಗಳಲ್ಲೂ ಎಲ್ಲ ಕಾಲದಲ್ಲೂ ಸರ್ವಾಧಿಕಾರಿಗಳ ವಾದ. ಇಂಥ ವಾದಗಳು ಚರ್ಚೆಗೆ ಅರ್ಹವಲ್ಲ. ಬಡಜನರು, ಹಿಂದುಳಿದ ವರ್ಗಗಳು ಪ್ರಜಾತಂತ್ರ ಸಾಧ್ಯಮಾಡುವ ಹೋರಾಟದ ಮೂಲಕ ಮಾತ್ರ ನಮ್ಮ ಜೀವನ ಮಟ್ಟವನ್ನು ಹೆಚ್ಚಿಸಿಕೊಳ್ಳಬಲ್ಲರು. ಬದುಕಿನಿಂದ ನಾನು ಅಪೇಕ್ಷಿಸುವುದು ಹೆಚ್ಚುತ್ತ ಹೋದಂತೆ ಸಮಾಜ ಚಲಿಸುತ್ತದೆ, ಸೃಜನಶೀಲವಾಗುತ್ತದೆ. ಮನುಷ್ಯನ ಮೂಲಭೂತ ಅಗತ್ಯ, ಸ್ವಭಾವ, ವರ್ತನೆ ಯಾವುದನ್ನು ಪರೀಕ್ಷಿಸಿದರೂ ಚರಿತ್ರೆಯುದ್ಧಕ್ಕೂ ಅವನು ‘ಸ್ವಾತಂತ್ರ್ಯ’ ಮತ್ತು ‘ಅನ್ನ’ ಇವುಗಳಲ್ಲಿ ಒಂದರ ಮೂಲಕ ಇನ್ನೊಂದನ್ನು ಪಡೆಯುತ್ತ ಬಂದುದನ್ನು ನೋಡುತ್ತೇವೆ.

ಪ್ರಶ್ನೆ : ತುರ್ತುಪರಿಸ್ಥಿತಿಯನ್ನು ಜನ ಮೌನವಾಗಿ ಸಹಿಸಿದರು – ಏಕೆ? ನಿಮಗೆ ಅನಿಸುವ ಕಾರಣಗಳು.

ಉತ್ತರ : ನಮ್ಮ ಜನರ ಪರಂಪರಾನುಗತವಾದ ತಾಳ್ಮೆ – ಪ್ರಾಯಶಃ, ಅಥವಾ ಇಂದಿರಾ ಗಾಂಧಿ ಏನನ್ನಾದರೂ ಮಾಡಿಯಾರೆಂಬ ನಿರೀಕ್ಷೆ. ಈ ಭ್ರಮೆಯನ್ನು ಪೋಷಿಸುವಂತೆ ಮೊದಲ ಕೆಲವು ತಿಂಗಳುಗಳ ಋಣ ವಿಮುಕ್ತಿ, ಜೀತಪದ್ಧತಿ ಬಹಿಷ್ಕಾರ ಇತ್ಯಾದಿ ಸರ್ಕಾರ ಕೈಗೊಂಡ ಕ್ರಮಗಳು. ಅಥವಾ ಪ್ರತಿನಿತ್ಯ ಕ್ಷುಲ್ಲಕವಾದ ಕಾರಣಗಳಿಗಾಗಿ ನಡೆಯುತ್ತಿದ್ದ ವಿದ್ಯಾರ್ಥಿ ಮುಷ್ಕರ, ಧರಣಿ ಇತ್ಯಾದಿಗಳಿಂದ ರೋಸಿಹೋಗಿದ್ದ ಜನತೆಯ ಮನಸ್ಥಿತಿ.

ನಮ್ಮ ಜನ ಎಷ್ಟು ಅವಮಾನಿತರು, ಹೀರು ಎಂದರೆ ಆಳುವ ಜನ ಎಸೆಯುವ ರೊಟ್ಟಿ ಚೂರಿಗೂ ಕೃತಜ್ಞರಾಗುತ್ತಾರೆ. ಈ ಜನರ ಅಷ್ಟೊಂದು ಪ್ರೀತಿ ಕೃತಜ್ಞತೆಗಳನ್ನು ಗಳಿಸಿದ್ದ ಇಂದಿರಾಗಾಂಧಿ, ಈ ಪ್ರೀತಿಗೆ ಕಿಂಚಿತ್ತಾದರೂ ಅರ್ಹಳಾಗಲು ಪ್ರಯತ್ನಿಸದೆ ತನ್ನ ಮಗನನ್ನು ಸಿಂಹಾಸನಕ್ಕೆ ತರಲು ಮಾತ್ರ ಶ್ರಮಿಸಿದ್ದು ಮನುಷ್ಯನ ಒಳ್ಳೆತನದಲ್ಲಿ ಶ್ರದ್ಧೆಯಿರುವ ನನ್ನಂಥವರಿಗೆ ಈ ಕಾಲದ ಮಹದಾಶ್ಚರ್ಯ. ಆಕೆ ತುರ್ತುಪರಿಸ್ಥಿತಿಯನ್ನು ಸಾಮಾಜಿಕ ನ್ಯಾಯ ತರಲು ಬಳಸಿದ್ದಲ್ಲಿ ಆಕೆ ಖಂಡಿತ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ; ಅಂಥ ಕ್ರಮಕ್ಕೆ ಸ್ವಾತಂತ್ರ್ಯ ಹತ್ತಿಕ್ಕುವ ಅಗತ್ಯವೂ ಇರುತ್ತಿರಲಿಲ್ಲ. ಹಿಟ್ಲರ್ ಅಧಿಕಾರಕ್ಕೆ ಬಂದ ಕಾಲದಲ್ಲಿ ತನ್ನ ದೇಶದ ಸಮಸ್ಯೆಗಳನ್ನು ಬಗೆಹರಿಸುವಂತೆ ಕಾಣಲಿಲ್ಲವೆ? ಹಾಗೆಯೇ ಇಂದಿರಾ ಗಾಂಧಿಯೂ ಬಡಜನರಲ್ಲಿ ಭ್ರಮೆಯನ್ನು ಉಂಟುಮಾಡಿದ್ದರು. ಕೆಲವು ಕಾಲ ಅಷ್ಟೆ. ಈ ಸಮಯದಲ್ಲೂ ಎಲ್ಲರೂ ಮೌನವಾಗಿ ಸಹಿಸಿಕೊಂಡಿದ್ದರೆಂಬುದೂ ನಿಜವಲ್ಲ, ತಗ್ಗಿ ನಡೆಯಿರಿ ಎಂದರೆ ತೆವಳಲೂ ಸಿದ್ಧರಾದ ನಮ್ಮ ಪತ್ರಿಕೆಗಳು ಯಾವ ಸುದ್ದಿಯನ್ನೂ ನಮಗೆ ಕೊಡುತ್ತಿರಲಿಲ್ಲ – ಅಲ್ಲವೆ?

ಪ್ರಶ್ನೆ : ತುರ್ತುಪರಿಸ್ಥಿತಿ ಅವಧಿಯಲ್ಲಿ ನಿಮ್ಮ ನಿಲುವೇನಾಗಿತ್ತು? ಸ್ವಾತಂತ್ರ್ಯ ಹರಣದ ವಿರುದ್ಧ ನೀವು ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದಿರಿ?

ಉತ್ತರ : ಅದೊಂದು ದುಃಸ್ವಪ್ನದಂತಹ ಅನುಭವ. ತುರ್ತುಪರಿಸ್ಥಿತಿ ಘೋಷಿಸುವುದಕ್ಕೆ ವಾರದ ಹಿಂದೆ ನಾನು ದಕ್ಷಿಣ ಕೋರಿಯಾದ ರಾಜಧಾನಿ ಸೋಲ್‌ನಲ್ಲಿದ್ದೆ. ಅಲ್ಲಿ ನನ್ನ ಗೆಳೆಯರಾದ ಲೇಖಕರು, ಬುದ್ಧಿಜೀವಿಗಳು ಪಿಸುಮಾತಿನಲ್ಲೂ ತಮ್ಮ ಸರ್ಕಾರವನ್ನು ಟೀಕಿಸಲು ಹೆದರುತ್ತ, ಹೀಗೆ ಹೆದರುವುದರಿಂದ ತಮ್ಮನ್ನೇ ತಾವು ದ್ವೇಷಿಸಿಕೊಳ್ಳುತ್ತ ಇರುವುದನ್ನು ಕಂಡೆ. ಸರ್ವಾಧಿಕಾರಿಯ ತುಳಿತಕ್ಕೆ ಸಿಕ್ಕ ಜನ ತೀವ್ರವಾಗಿ ಅವಮಾನಿತರಾಗುತ್ತಾರೆ. ಅವರು ಎಷ್ಟು ಹೆಚ್ಚು ಕುಗ್ಗಬೇಕಾಗುತ್ತೋ ಅಷ್ಟ ಹೆಚ್ಚು ಸರ್ವಾಧಿಕಾರಿಯನ್ನು ದ್ವೇಷಿಸುತ್ತಾರೆ. ಜೀವನದ ಸುಖಕ್ಕೆ ಅಗತ್ಯವಾದ ಆತ್ಮಾಭಿಮಾನ ನಾಶವಾಗುತ್ತ ಹೋದಂತೆ ತಮ್ಮ ಸೃಷ್ಟಿಶೀಲತೆ ಕಳೆದುಕೊಂಡು ಸರ್ವನಾಶವನ್ನು ಅಪೇಕ್ಷಿಸುವ ಖಿನ್ನ ಮನಸ್ಥಿತಿ ತಲುಪುತ್ತಾರೆ. ಇದನ್ನೆಲ್ಲ ಕಂಡ ನನಗೆ ಅಲ್ಲಿ ಅಧ್ಯಾಪಕ ಮಿತ್ರರೊಬ್ಬರು ಭಾರತದ ಪ್ರಜಾಸತ್ತೆಯನ್ನು, ಜಯಪ್ರಕಾಶರ ಹೋರಾಟವನ್ನು ಏಷ್ಯಾಕ್ಕಿರುವ ಏಕೈಕ ಮಾರ್ಗವೆಂದು ಅಭಿಮಾನದಿಂದ ಹೊಗಳಿದರು. ಕೊರಿಯಾದ ಕ್ರಾಂತಿಕಾರಿ ಯುವಕ ಕವಿ ಕಿಮ್ ಜೈಲಿನಲ್ಲಿರುವ ವಿಷಯವನ್ನು ನನಗೆ ಇವರು ಹೇಳಿದರು. ಆತನ ಹೆಸರನ್ನು ಬಹಿರಂಗವಾಗಿ ಹೇಳುವುದೂ ಅಪಾಯವಾದ್ದರಿಂದ ಅವತ್ತು ನಾನು ಮಾತಾಡಿದ ವಿದ್ಯಾರ್ಥಿ ಸಭೆಯಲ್ಲಿ, ಈ ಅಧ್ಯಾಪಕರ ಸೂಚನೆಯಂತೆ, ನಾನು ಆತನನ್ನು ಸ್ಮರಿಸಿದೆ. ವಿದ್ಯಾರ್ಥಿಗಳ ಪ್ರತಿಕ್ರಿಯೆ ಕುತೂಹಲಕಾರಿಯಾಗಿತ್ತು. ಒಂದು ಕ್ಷಣ ಭಯಚಕಿತರಾದರು; ಮರುಕ್ಷಣ ‘ಕಿಮ್’ ಎನ್ನುವ ಶಬ್ದದಲ್ಲೆ ಮಂತ್ರಶಕ್ತಿಯಿರುವ ಥರ ಅವರ ಮುಖಗಳು ಅರಳಿದವು. ಕಣ್ಣುಗಳು ಹೊಳೆದವು. (ತುರ್ತು ಪರಿಸ್ಥಿತಿ ಬಂದ ಮೇಲೆ ನಮ್ಮ ವಿದ್ಯಾರ್ಥಿಗಳ ನಡುವೆ ಜಯಪ್ರಕಾಶರ ಒಂದು ಸಾಮಾನ್ಯ ಚಿತ್ರವನ್ನು ಅತ್ಯಂತ ಒರಟಾಗಿ ಅಚ್ಚುಮಾಡಿ ನಾವು ಹಂಚಿದಾಗಲೂ ಇಂಥದೇ ಭಯ, ಹರ್ಷ ಚಿಮ್ಮಿದ್ದನ್ನು ನೋಡಿದಾಗ ‘ಅಭಯ’ಕ್ಕಿಂತ ಹೆಚ್ಚಿನದೇನೂ ಇಲ್ಲವೆಂಬುದು ಮನದಟ್ಟಾಯಿತು ನನಗೆ).

ಇದನ್ನೆಲ್ಲ ಕಂಡು ಅಲಹಾಬಾದ್ ತೀರ್ಮಾನದ ಬಗ್ಗೆ ಹೆಮ್ಮೆ ಪಡುತ್ತ ಇಂಡಿಯಾಕ್ಕೆ ನಾನು ಬಂದೆ. ದೆಹಲಿಯ ಪ್ರೆಸ್ ಕ್ಲಬ್ಬಿನಲ್ಲಿ ತುರ್ತುಪರಿಸ್ಥಿತಿ ಘೋಷಿತವಾಗುವ ಹಿಂದಿನ ದಿನ ಮುಂದೇನು ಆದೀತೆಂದು ಚರ್ಚೆ ನಡೆದಿತ್ತು. ವಯೋವೃದ್ಧರಾದ ಗಾಂಧೀವಾದಿ ಪತ್ರಕರ್ತರೊಬ್ಬರಿಗೆ ಇಂದಿರಾಗಾಂಧಿ ಸರ್ವಾಧಿಕಾರಿಯಾಗಬಹುದೆಂದು ನಾನು ಸೂಚಿಸಿದೆ.

ಇಂದಿರಾಗಾಂಧಿಯನ್ನು ಟೀಕಿಸುತ್ತಿದ್ದ ಅವರೂ ಕೂಡ ನನ್ನ ಮಾತಿನಿಂದ ತುಂಬ ಕೋಪಗೊಂಡರು. ಮಹಾತ್ಮಾಜಿ, ನಹರೂ ಬೆಳೆಸಿದ ಪ್ರಿಯದರ್ಶಿನಿ ಅಂಥ ಕುಕೃತ್ಯಕ್ಕೆ ಖಂಡಿತಾ ಇಳಿಯಲಾರಳು.ಈ ದೇಶದ ಪರಂಪರೆ ತಿಳಿಯದ ನನ್ನಂಥ ಯುವಕರು ಸಿನಿಕರೇ ಸರಿ – ಹೀಗೆ ಅವರು ಕೂಗಾಡಿದಾಗ ಅವರ ಸಾತ್ವಿಕ  ಕೋಪದಿಂದ ನಾನು ತಣ್ಣಗಾದೆ. ಮಾರನೇ ಬೆಳಿಗ್ಗೆ ಪೇಪರ್ ಓದುವಾಗ ನನಗೆ ಅನ್ನಿಸಿದ ಮೊದಲನೇ ವಿಚಾರ; ಇನ್ನೂ ಗಾಂಧಿ ಯುಗದಲ್ಲಿ ತಾವು ಇದ್ದೇವೆ ಎಂದು ತಿಳಿದಿದ್ದ ಈ ವೃದ್ಧರಿಗೆ ಎಂಥ ಆಘಾತವಾಗಿರಬೇಕು! ಅವರು ಮಾತ್ರವಲ್ಲ – ಜಯಪ್ರಕಾಶರೂ ಕೂಡ ತಾವು ಇನ್ನೂ ಗಾಂಧಿಯುಗದಲ್ಲಿ ಇದ್ದೇನೆ ಎಂದು ತಿಳಿದೇ ಸೈನಿಕರಿಗೆ, ಪೋಲೀಸರಿಗೆ ಅಕ್ರಮವಾದ ಆಜ್ಞೆ ಮಾಡಬೇಡಿರೆಂದು ಹೇಳಿದ್ದಿರಬೇಕು. ಹಿಂದೆ ಮಹಾತ್ಮ ಗಾಂಧಿ ಇಂಥ ಮಾತುಗಳನ್ನು ಆಡಿದಾಗ ರಾಜದ್ರೋಹದ ಅಪರಾಧಕ್ಕಾಗಿ ವಿಚಾರಣೆಗೆ ಗುರಿಯಾಗುತ್ತಿದ್ದರು ಅಲ್ಲವೆ? ಈ ವಿಚಾರಣೆಯೂ ಅವರಿಗೆ ವೇದಿಕೆಯಾಗುತ್ತಿತ್ತು ಅಲ್ಲವೆ? ಅಂತೂ ಎಮರ್ಜೆನ್ಸಿಯ ಮೊದಲ ದಿನ ನನಗನ್ನಿಸಿದ್ದು: ಗಾಂಧಿಯುಗ ಮುಗಿಯಿತು ಎಂದು. ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಮತ್ತೆ ನನಗನ್ನಿಸಿದ್ದು ಇಲ್ಲ ನಾನು ತಿಳಿದದ್ದು ತಪ್ಪು, ಜಯಪ್ರಕಾಶರು ಮಹಾತ್ಮ ಗಾಂಧಿಯನ್ನು ಮತ್ತೆ ನಮಗೆ ನಿಜ ಮಾಡಿದರು ಎಂದು. ಉತ್ತರ ಭಾರತದ ನಿರಕ್ಷರ ದಟ್ಟದರಿದ್ರ ಹೃದಯದಲ್ಲಿ ಮತ್ತೆ ಗಾಂಧೀಜಿಯ ಅವತಾರವಾಗುತ್ತದೆಂದು ಯಾರು ಊಹಿಸಿದ್ದರು?

ನಾವೆಲ್ಲರೂ ಆಗ ತಬ್ಬಿಬ್ಬಾದೆವು. ಬರೆಯುವುದು, ಪಾಠ ಹೇಳುವುದು ಎಲ್ಲ ಅರ್ಥಹೀನವೆನ್ನಿಸಿತು. ನಾಗರೀಕತೆಗೆ, ಸಾಹಿತ್ಯ ಸೃಷ್ಟಿಗೆ ಅಗತ್ಯವಾದ ಒಳನೋಟ, ದ್ವಂದ್ವ ದೃಷ್ಟಿ, ಸ್ವವಿಮರ್ಶೆ ಇತ್ಯಾದಿ ಜೀವನವನ್ನು ಅದರ ಸಂಕೀರ್ಣತೆಯಲ್ಲಿ ಒಳಗಿಂದ ತಿಳಿಯುವ ಮಾರ್ಗಗಳು, ಬರಿ ಪುಕ್ಕಲಾಗಿಯೋ ಡೊಂಬರಾಟವಾಗಿಯೋ ಕಂಡವು. ಹಿಟ್ಲರ್, ಸ್ಟಾಲಿನ್, ಮೆಕಾರ್ತಿಯಂಥ ಮೂರು ಬಗೆಯ ಸರ್ವಾಧಿಕಾರಿಗಳನ್ನು ಹುಟ್ಟಿಸುವ ತತ್ತ್ವಗಳೂ ತಿರಸ್ಕಾರದಿಂದ ಕಾಣುವ ಅಂತರ್ಮುಖತೆ, ನಮಗೂ ಹೇಡಿತನವಾಗಿ ಕಾಣಬಾರದಿತ್ತು – ಆದರೆ ಕಂಡಿತು. ಭ್ರಮರ – ಕೀಟ ನ್ಯಾಯದಂತೆ ಇದು. ಎಮರ್ಜೆನ್ಸಿಯನ್ನು ವಿರೋಧಿಸುವುದು ಬಿಟ್ಟು ಬೇರೆ ಏನು ಮಾಡುವುದೂ ಅನೈತಿಕವೆನ್ನಿಸುತ್ತಿದ್ದುದು ಆರೋಗ್ಯದ ಲಕ್ಷಣವಲ್ಲ. ಬದುಕಿನ ವೈವಿಧ್ಯಮಯ ಆಸಕ್ತಿಗಳನ್ನೆಲ್ಲ ಹೀಗೆ ರಾಜಕೀಯ ನುಂಗಿಬಿಡುವುದು ಅನೈಸರ್ಗಿಕ. ಸರ್ವಾಧಿಕಾರದಲ್ಲಿ ಮಾತ್ರ ಹೀಗಾಗುತ್ತದೆ. ಪ್ರಾಯಕ್ಕೆ ಕಾಲಿಟ್ಟ ಹೆಣ್ಣಿನ ನಾಚಿಕೆ, ಮಗುವಿನ ನಗು, ವೃದ್ಧ ದಂಪತಿಗಳ ಅನ್ಯೋನ್ಯ, ಚಿಗುರುವ ಮರ, ಎಳೆ ಬಿಸಿಲು, ಸರಸ ಸಂಭಾಷಣೆ, ಹೊಸ ಶೈಲಿಯಿಂದ ಹುಟ್ಟುವ ಹೊಸ ದೃಷ್ಟಿ – ಇತ್ಯಾದಿ ಜೀವನದ ಅದ್ಭುತ ಸೌಂದರ್ಯವನ್ನೆಲ್ಲ ಕ್ಷುಲ್ಲಕವಾಗಿ ಕಾಣುವಂತೆ ಮಾಡಿದ ಇಂದಿರಾ ಗಾಂಧಿಯವರ ಮಸಲತ್ತನ್ನು ಈ ದೇಶ ಎಂದಾದರೂ ಕ್ಷಮಿಸುವುದು ಸಾಧ್ಯವೇ?

ತುರ್ತುಪರಿಸ್ಥಿತಿಯಲ್ಲಿ ನಮ್ಮ ರೂಢಿಗತ ವಿಚಾರಗಳೆಲ್ಲ ಬದಲಾಗಬೇಕಾಗಿ ಬಂದವು. ಪಾಕಿಸ್ತಾನವನ್ನು ಒಡೆದ, ಮುಸ್ಲಿಂ ಜನಕ್ಕೆ ‘ಪಾಠ’ ಕಲಿಸಿದ, ಸಿಕ್ಕಿಂ ಅನ್ನು ಸೇರಿಸಿಕೊಂಡ, ಅಣುಬಾಂಬು ಹಾರಿಸಿದ, ಆರ್ಯವಿರೋಧಿ ಡಿಎಂಕೆಯನ್ನು ಹತ್ತಿಕ್ಕಿದ ಇಂದಿರಾಗಾಂಧಿ ವಿರುದ್ಧ ಆರೆಸ್ಸೆಸ್ ಯಾಕೆ ಹೋರಾಡಿತು? ಇದೇ ಜನಸಂಘ ಕಾರ್ಯಕ್ರಮವೆಂದು ನಾವು ತಿಳಿದದ್ದು ತಪ್ಪೆ? ಅಥವಾ ಜನಸಂಘದ ಮನಸ್ಸಿನಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕಾಗಿ ಬಂತೆ? ವೈಜ್ಞಾನಿಕವಾದ ಮಾರ್ಕ್ಸ್ ವಾದ ಸರ್ಕಾರದ ಪರವಾದ ಒಂದು ಬಣಕ್ಕೂ ವಿರುದ್ಧವಾದ ಇನ್ನೊಂದಕ್ಕೂ ಅಗತ್ಯವಾದ ಸಮರ್ಥನೆಯನ್ನು ಕೊಡುವುದು ಹೇಗೆ ಸಾಧ್ಯವಾಯಿತು? ಹಾಗೆಯೇ ವಿನೋಬ – ಜಯಪ್ರಕಾಶರಲ್ಲಿ ಒಡೆದುಕೊಂಡ ಗಾಂಧೀವಾದ ಕೂಡ?

ತುರ್ತುಪರಿಸ್ಥಿತಿಯ ಸಮಯದಲ್ಲಿ ಲೋಹಿಯಾ ವಾದಿಗಳಾದ ಇಬ್ಬರ ಪ್ರತಿಕ್ರಿಯೆ ನನಗೆ ಮುಖ್ಯವಾಗಿ ಕಂಡವು. ಜಾರ್ಜ್ ಫರ್ನಾಂಡಿಸ್ ತಮ್ಮ ಜೀವನವನ್ನೆ ಪಣ ಇಟ್ಟು, ರಾಜ್ಯಾಂಗವನ್ನು ಸಬೋಟಾಜ್ ಮಾಡಿದ ಇಂದಿರಾಗಾಂಧಿಯ ಸರ್ಕಾರವನ್ನು ಸ್ಥಗಿತಗೊಳಿಸುವ ಮಾರ್ಗಗಳನ್ನು ಹುಡುಕಿದರು. ಹಾಗೆಯೇ ಪಾರ್ಲಿಮೆಂಟರಿಗೆ ರಾಜೀನಾಮೆ ಕೊಟ್ಟ ಮಧುಲಿಮಯೆ ಪ್ರಜಾತಂತ್ರದ ಭ್ರಮೆ ಹುಟ್ಟಿಸುವ ಇಂದಿರಾಗಾಂಧಿ ನಾಟಕವನ್ನು ಬಯಲು ಮಾಡಿದರು. ಇಂಥ ಸಮಯದಲ್ಲಿ ವೃತ್ತಪತ್ರಿಕೆಗಳು ಸೆನ್ಸಾರ್ ವಿರೋಧಿಸಿ ಮುಷ್ಕರ ಹೂಡಿದ್ದರೆ, ವಿರೋಧ ಪಕ್ಷದ ಶಾಸಕರೆಲ್ಲರೂ ರಾಜೀನಾಮೆ ಕೊಟ್ಟಿದ್ದರೆ… ಆದರೆ ಆಳುವ ವರ್ಗಕ್ಕೆ ಸೇರಿದವರ ದೌರ್ಬಲ್ಯವೇ ಇಂದಿರಾ ಗಾಂಧಿಯ ಆಯುಧವಾಗಿತ್ತಾದ್ದರಿಂದ ಇಂಥ ವರ್ತನೆಯನ್ನು ಅವರಿಂದ ಅಪೇಕ್ಷಿಸುವುದೇ ನಮ್ಮ ಮೂರ್ಖತನವಿರಬಹುದು.

ನನ್ನ ಮಟ್ಟಿಗೆ ಹೇಳುವುದಾದರೆ ಜೈಲಿಗೆ ಹೋಗಲೇಬೇಕಾಗಿ ಬಂದರೆ ಹೋಗುವುದೆಂಬ ಅಳುಕನ್ನು ಗೆಲ್ಲುವ ನಿರ್ಧಾರ ನಾನು ಮಾಡಲೇಬೇಕಾಯಿತು. ಸರ್ವಾಧಿಕಾರದ ಅಡಿಯಲ್ಲಿ ಬದುಕುವ ಅವಮಾನ ಅಷ್ಟು ಅಸಹ್ಯವಾಗಿತ್ತು. ತುರ್ತುಪರಿಸ್ಥಿತಿಗೆ ಮೊದಲು ಹಾರಾಡುತ್ತಿದ್ದ, ಆಮೇಲೆ ಬಾಯಿಮುಚ್ಚಿಕೊಂಡಿದ್ದರ ದಿಗಿಲನ್ನೂ ನನ್ನ ಒಳಗೇ ಗುರುತು ಮಾಡಿಕೊಂಡಿದ್ದರಿಂದ ಸರ್ವಾಧಿಕಾರದ ಸ್ವರೂಪ ನನಗೆ ಸ್ಪಷ್ಟವಾಯಿತು. ಅಸಾಮಾನ್ಯ ಶೌರ್ಯವನ್ನು ಅಗತ್ಯ ಮಾಡುವ ವ್ಯವಸ್ಥೆಯೇ ಜೀವ ವಿರೋಧಿಯಾದದ್ದು. ಜೈಲಿಗೆ ಹೋಗುವುದೂ ನಿಷ್ಪ್ರಯೋಜಕವೆನ್ನಿಸುವ ಸಂದರ್ಭದಲ್ಲಿ, ನನ್ನನ್ನು ಸರ್ಕಾರ ಜೈಲಿಗೆ ಹಾಕಬಹುದಾದಂತೆ ವರ್ತಿಸಿದೆ ಎಂದಷ್ಟು ಮಾತ್ರ ನಾನು ಹೇಳಬಲ್ಲೆ. ರಾಜಕೀಯವನ್ನೇ ಉದ್ಯೋಗ ಮಾಡಿಕೊಳ್ಳದ ನನ್ನಂಥವನ ದಿಗಿಲು, ಈ ನಿರ್ಧಾರ – ಎರಡೂ ದೇಶದ ಒಟ್ಟುಪರಿಸ್ಥಿತಿ ಅರಿತುಕೊಳ್ಳಲು ಸಹಾಯಕವಾದೀತೆಂದು ಹೇಳುತ್ತಿದ್ದೇನೆ – ಅಷ್ಟೆ.

ಎರಡು ಬಾರಿ ನಾನು ಜಾರ್ಜ್‌ ಫರ್ನಾಂಡಿಸರನ್ನು ಭೇಟಿಯಾದೆ – ಬೆಂಗಳೂರಲ್ಲಿ ಮತ್ತು ದೆಹಲಿಯಲ್ಲಿ. ಸುಭಾಷ್ ಚಂದ್ರಬೋಸರ ನಂತರ ಅದೇ ಧೈರ್ಯವನ್ನು, ಸಾಹಸವನ್ನು ತೋರಿಸಿದ ಜಾರ್ಜ್‌ ಈ ಕಾಲದ ದೊಡ್ಡ ಶೂರ. ಅವರು ಅಪೇಕ್ಷಿಸಿದಂತೆ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಬೇಕಾದ ಸ್ವಭಾವ ನನ್ನದಲ್ಲವಾದ್ದರಿಂದ ಅವರು ಕೊಟ್ಟ ಕೆಲವು ಸೂಚನೆಗಳನ್ನು ಪಾಲಿಸಿದೆ. ಭೂಗತ ಪತ್ರಿಕೆಗಳಿಗೆ ಬರೆದೆ. ಎಲ್ಲ ವೇದಿಕೆಗಳಿಂದಲೂ ನಿರ್ಭಯವಾಗಿ ತುರ್ತುಪರಿಸ್ಥಿತಿ ವಿರೋಧಿಸಿ ಮಾತಾಡಿದೆ. ಎಐಸಿಸಿಯ ಕಾರ್ಯಕಾರೀ ಸಮಿತಿ ಪರವಾಗಿ ಅವರ ‘ಕ್ಯಾಂಪೈನ್ ಕಮಿಟಿ’ಯ ಸಭೆಗೆ ದೆಹಲಿಗೆ ಬರಬೇಕೆಂದು ಕರೆ ಬಂದಾಗ ರಾಜಕೀಯ ಕಾರಣಗಳಿಂದಾಗಿ ನಾನು ಬರುವುದಿಲ್ಲ ಎಂದು ಅವರಿಗೆ ತಿಳಿಸಿದೆ. ನನ್ನ ಗೆಳೆಯರು ಕೆಲವರು ‘ನೀನು ಹೋಗು, ಆದರೆ ನಿನ್ನ ಅಭಿಪ್ರಾಯವನ್ನು ತಿಳಿಸು’ ಎಂದು ಸೂಚಿಸಿದಾಗ, ನಾನು ಹೋದದ್ದು ಮಾತ್ರ ಪ್ರಕಟವಾಗುತ್ತೆ, ಹೇಳಿದ್ದು ಆಗುವುದಿಲ್ಲ ಎಂದು ತಿಳಿದ ನಾನು ‘ಆಮಂತ್ರಣ’ ನಿರಾಕರಿಸಿ ಮುಂದಿನದಕ್ಕೆ ಕಾದೆ. ನನ್ನ ಹೆಂಡತಿ ಪ್ರೈಮರಿ ಸ್ಕೂಲಿನ ಉಪಾಧ್ಯಾಯಿನಿಯಾಗಿರದಿದ್ದರೆ ನಾನು ಇಷ್ಟಕ್ಕೆ ತಯಾರಾಗುವುದು ಕೂಡ ಇನ್ನೂ ಕಷ್ಟದ ಸಂಗತಿಯಾಗಬಹುದಿತ್ತು. ಆಕಾಶವಾಣಿ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಲಿಲ್ಲ. ರಾಜ್ಯದ ಸಾಹಿತ್ಯ ಅಕಾಡೆಮಿಗೆ ರಾಜೀನಾಮೆ ಕೊಟ್ಟೆ, ಎಲ್ಲಕ್ಕಿಂತ ಮುಖ್ಯವಾಗಿ ನನ್ನ ದೊಡ್ಡ ಅನುಭವವೆಂದರೆ ಚುನಾವಣೆಗೆ ಮುಂಚೆ ಮಂಡ್ಯ ಮತ್ತು ಶಿವಮೊಗ್ಗದಲ್ಲಿ ನಾನು ಮಾಡಿದ ಎರಡು ಭಾಷಣಗಳು. ವೇದಿಕೆ ಹತ್ತುವ ಮುಂಚೆ ಸಿಕ್ಕಿಬೀಳದಂತೆ ಜಾಗರೂಕತೆಯಿಂದ ಮಾತನಾಡಬೇಕೆಂದುಕೊಂಡರೂ ನನ್ನ ಎದುರು ಕೂತವರ ಮುಖನೋಡಿ ನನ್ನನ್ನು ನಾನು ಮರೆತು ಮಾತಾಡಿದ್ದು ನನಗೆ ಮರೆಯಲಾರದ ಅನುಭವ. ಅಂದರೆ ಅಂಥ ಪ್ರೇರಣೆ ನನ್ನೊಳಗಿಂದ ಕೆಲಸ ಮಾಡುವುದು ಸಾಧ್ಯವಾಯಿತಲ್ಲ ಎಂದು ನನಗೆ ಅಭಿಮಾನವೆನ್ನಿಸುತ್ತದೆ.

ಏನೂ ಮಾಡದೆ ಮೌನವಾಗಿ ಸಂಕಟಪಟ್ಟವರನ್ನು ನಾವು ಕೀಳಾಗಿ ಕಾಣಕೂಡದು. ಕೀಳು ಜನರೆಂದರೆ ತುರ್ತುಪರಿಸ್ಥಿತಿಯ ಲಾಭಕ್ಕೆ ಕೈಯೊಡ್ಡಿದವರು ಮಾತ್ರ.

ಜಾರ್ಜ್‌ ನನಗೆ ಹೇಳಿದ್ದರು: ನಿನ್ನ ಸುತ್ತಮುತ್ತ ನಿರ್ಭಯ ವಾತಾವರಣವಿರುವಂತೆ ನೋಡಿಕೋ ಎಂದು. ಅಷ್ಟನ್ನು ನಾನು ನನ್ನ ಕೈಲಾದ ಮಟ್ಟಿಗೆ ಮಾಡಿದೆ. ಅದರೆ ಜೈಲಿಗೆ ಹೋದ ನನ್ನ ಗೆಳೆಯರಾದ ಎಸ್. ವೆಂಕಟರಾಂ, ಬಂದಗದ್ದೆ ರಮೇಶ್, ಜೆ.ಎಚ್. ಪಟೇಲ್, ಕಮಲೇಶ್, ತನ್ನಜೀವವನ್ನೇ ಕೊಟ್ಟ ಸ್ನೇಹಲತಾ, ಸಿ.ಜಿ.ಕೆ.ರೆಡ್ಡಿ – ಇಂಥ ನನ್ನ ಆಪ್ತರನ್ನು ನೆನೆದಾಗ ನಾನು ಮಾಡಿದ್ದು ಏನೂ ಸಾಲದು ಎಂದೂ ಅನ್ನಿಸುತ್ತದೆ. ಇದು ಬರಿ ವಿನಯಲ್ಲ. ಉತ್ತರ ಭಾರತದ ದಟ್ಟದರಿದ್ರರು ಇಂದಿರಾ ಸರ್ಕಾರವನ್ನು ಸೋಲಿಸದಿದ್ದಲ್ಲಿ ನಾವೆಲ್ಲರೂ ತಲೆತಗ್ಗಿಸಿ ಅವಮಾನದಲ್ಲಿ ಬದುಕಬೇಕಾಗಿತ್ತು. ಬಿಹಾರದಂತಹ ಬರಗಾಲದ ನಾಡಿನಿಂದ ಶ್ರೀರಾಮಚಂದ್ರ, ಗೌತಮಬುದ್ಧ, ಜಯಪ್ರಕಾಶ ಮತ್ತು ಇಂದಿರಾ ಸರ್ಕಾರವನ್ನು ಮಣ್ಣು ಮಾಡಿದ ಜನ ಹುಟ್ಟಿ ಬಂದಿರುವುದನ್ನು ಈ ದೇಶದಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರೆಲ್ಲರೂ ಗಮನಿಸಬೇಕು.

ಪ್ರಶ್ನೆ : ಕಾಂಗ್ರೆಸ್ ಸೋಲಿಗೆ ಸ್ವಾತಂತ್ರ್ಯ ಹರಣಕ್ಕಿಂತ ಸಂತಾನಶಕ್ತಿ ಹರಣವೇ ಮುಖ್ಯ ಕಾರಣವಾಗಿತ್ತೆ?
ಉತ್ತರ : ಸಾಮಾನ್ಯ ಜನರ ಧಾರ್ಮಿಕ ಪ್ರಜ್ಞೆಯಿಂದ ಕಾಂಗ್ರೆಸ್ ಸೋತಿತು ಎಂದು ನಾನು ಮುಖ್ಯವಾಗಿ ತಿಳಿದಿದ್ದೇನೆ. ಈ ದೇಶದ ಬಡಜನ ಬದುಕಲು ಅರ್ಹರಲ್ಲವೆಂಬ ಆಳುವ ವರ್ಗದ ಸಂಚು ಅದರ ಸಂತಾನಹರಣ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಯಿತು – ಅಷ್ಟೆ. ಮಲ್ಟಿನ್ಯಾಷನಲ್ ಇತ್ಯಾದಿಗಳ ಮೂಲಕ ಕೊಬ್ಬಲು ಹವಣಿಸಿದವರಿಗೆ ಬೆಳೆದದ್ದನ್ನೆಲ್ಲ ತಿನ್ನಲು ಸಿದ್ಧರಾಗುವ ಬಡಜನರ ಮಕ್ಕಳು ಕಾಲ್ತೊಡಕಾಗಿ ಕಂಡರು. ಬಲಾಚ ಪೃಥಿವೀ ಎನ್ನುವ ಈ ದುಷ್ಟ ಧೋರಣೆ ನಮ್ಮ ಸಾಮಾನ್ಯ ಜನರ ಧಾರ್ಮಿಕ ಭಾವನೆಯನ್ನು ಜಾಗೃತಗೊಳಿಸಿತು. ಸಾವನ್ನು ಎದುರಿಗಿಟ್ಟುಕೊಂಡೂ ಇಡೀ ಸಮುದಾಯದ ಕಲ್ಯಾಣಕ್ಕಾಗಿ ಹೋರಾಡಿದ ಜಯಪ್ರಕಾಶರು ನಮ್ಮ ದೇಶದಲ್ಲಿ ಸೃಜನಶೀಲವಾದ ಸಮಷ್ಟಿ ಪ್ರಜ್ಞೆಯನ್ನು ಮತ್ತೆ ತಂದರು.

ಪ್ರಶ್ನೆ : ಸ್ವಾತಂತ್ರ್ಯ ಮತ್ತು ಅನ್ನ – ಇವೆರಡನ್ನೂ ಸಮನಾಗಿ ಕೊಡುವುದರಲ್ಲಿ ಜನತಾ ಸರ್ಕಾರ ಯಶಸ್ವಿಯಾಗುವುದರ ಬಗೆಗೆ ನಿಮ್ಮ ಅಭಿಪ್ರಾಯ?

ಉತ್ತರ : ಎಲ್ಲರಿಗೂ ಸ್ವಾತಂತ್ರ್ಯ ದಕ್ಕುವಂತೆ ಮಾಡುವುದೆಂದರೆ ದೇಶದಲ್ಲಿ ಸಮಾನತೆಯನ್ನು ತರಬೇಕಾಗುತ್ತದೆ. ಇದನ್ನು ಮಾಡದಿದ್ದಲ್ಲಿ ಈ ಜನತಾ ಸರಕಾರವೂ ಉರುಳುತ್ತದೆ. ಈ ದಿಕ್ಕಿನಲ್ಲಿ ದೇಶ ಚಲಿಸುವಂತೆ ಮಾಡುವುದು ನಮ್ಮ ಮೇಲೆ ಇರುವ ಜವಾಬ್ದಾರಿ. ಅಂದರೆ ಜನತಾ ಸರ್ಕಾರದ ಯಶಸ್ಸು ನಮ್ಮ ಎಚ್ಚರದ ಮೇಲೆ ನಿಂತಿದೆ.

ಪ್ರಜಾವಾಣಿ, ಬೆಂಗಳೂರು ಸ್ವಾತಂತ್ರ್ಯೋತ್ಸವ ಸಂಚಿಕೆಯಲ್ಲಿ ಪ್ರಕಟಿತ ಲೇಖನ ೧೯೭೭.