ಈ ಹತ್ತು ವರ್ಷಗಳಿಂದ ಈಚೆಗೆ ಕನ್ನಡ ಸಾಹಿತ್ಯದಲ್ಲಿ ಒಂದು ನಿಜವಾದ ತೊಡಕಿನ ಸಮಸ್ಯೆ ಎದ್ದಿದೆ. ಹತ್ತು ವರ್ಷಗಳ ಹಿಂದೆ ಒಂದು ಸಾಹಿತ್ಯ ಕೃತಿ ನಮ್ಮ ಪಾಲಿಗೆ ಅತ್ಯುತ್ತಮವೆನಿಸಿದರೆ ಅದು ಸರ್ವಸಾಮಾನ್ಯವಾಗುವುದರಲ್ಲಿ ನಮಗೆ ಸಂಶಯವಿರಲಿಲ್ಲ. ಆದರೆ ಈ ಹತ್ತು ವರ್ಷಗಳ ಈಚೆಗೆ, ಅದೂ ಈ ಮೂರು ನಾಲ್ಕು ವರ್ಷಗಳಲ್ಲಿ, ಸಾಹಿತ್ಯದ ಸಾರ್ವಕಾಲಿಕ ಮೌಲ್ಯಗಳ ಬಗ್ಗೆ ಕರ್ನಾಟಕದಲ್ಲಿ ಕೆಲವರು ಅನುಮಾನಗಳನ್ನು ಎತ್ತುತ್ತಿದ್ದಾರೆ. ಹೀಗೆ ಅನುಮಾನ ಪಡುವ ಜನ ದುಷ್ಟರೆಂದೋ ಫುಡಾರಿಗಳೆಂದೋ ಹೇಳಿ ಕೈತೊಳೆದುಕೊಂಡು ಬಿಡಬಹುದು. ಆದರೆ ನಾನು ಹಾಗೆ ತಿಳಿದುಕೊಂಡಿಲ್ಲ. ಅವರ ಅನುಮಾನದ ಹಿಂದೆ ಯಾವ ರೀತಿಯ ತಾತ್ವಿಕ ತಿಳುವಳಿಕೆ ಅರಿತೋ ಅರಿಯದೆಯೋ ಕೆಲಸ ಮಾಡುತ್ತಿರಬಹುದು ಎಂಬುದನ್ನು ನಾವು ಪತ್ತೆ ಮಾಡಬೇಕು ಎನ್ನುವುದು ನನ್ನ ನಿಲುವು. ಏಕೆಂದರೆ, ಕೆಲವರು ರಾಜಕೀಯ ಮಾಡುವುದಕ್ಕೋಸ್ಕರ ಮಾತ್ರ ಬಂಡಾಯ ಸಮ್ಮೇಳನ ಮಾಡುತ್ತ ಇದ್ದಾರೆ ಎಂದಾಗಲೀ ಬರಹಗಾರರ ಒಕ್ಕೂಟ ಮಾಡಿದರು ಎಂದಾಗಲೀ ಹೇಳಿದರೆ, ಅವರ ಜೊತೆ ಸಮಕಾಲೀನವಾಗಿ ಬದುಕುತ್ತಿರುವಂಥ ನಾನು ಎದುರಿಸಬೇಕಾದ ಸವಾಲು ಎದುರಿಸಿದಂತೆ ಅಲ್ಲ. ನನಗೆ ಅವರ ದೃಷ್ಟಿಕೋನ, ಕಾರ್ಯಕ್ರಮ, ಬರವಣಿಗೆಗಳಲ್ಲಿ ಹಲವು ತೀವ್ರ ಭಿನ್ನಾಭಿಪ್ರಾಯಗಳಿವೆ. ಆದರೂ ತಾತ್ವಿಕವಾಗಿ ಈ ಆಂದೋಲನಗಳ ಹಿಂದಿರುವ ಪ್ರೇರಣೆಯನ್ನು, ವ್ಯಕ್ತಿಗತವಾದ ದ್ವೇಷಾಸೂಯೆಗಳನ್ನು ಮೀರಿಯೂ ಇರುವ ಉದ್ದೇಶವನ್ನು ನಾನು ಲೇಖಕನಾಗಿ ಗ್ರಹಿಸಲೇಬೇಕು.

ಮೊದಲು ಹೇಳಬೇಕಾದ್ದು: ಇಂಥ ಚಳವಳಿ ಕರ್ನಾಟಕಕ್ಕೆ ಮಾತ್ರ ಸೀಮಿತವಾದ್ದಲ್ಲ. ಮಹಾರಾಷ್ಟ್ರದಲ್ಲೂ ದಲಿತರು ಹೇಳುತ್ತಾರೆ ಬ್ರಾಹ್ಮಣನೊಬ್ಬ ಬರೆದ ಕೃತಿ ಬ್ರಾಹ್ಮಣನದು ಮಾತ್ರ. ಒಮ್ಮೆ ನನ್ನ ಮಿತ್ರರೊಬ್ಬರು ನನಗೆ ಬರೆದರು: ‘ನೀವು ಪುಳಕಗೊಳ್ಳುವ ‘ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ’ ಅನ್ನುವ ಸಾಲು ಬ್ರಾಹ್ಮಣನಾಗಿ ಹುಟ್ಟದೇ ಇರುವ ನನ್ನ ಮನಸ್ಸನ್ನು ಮುಟ್ಟುವುದಿಲ್ಲ. ಯಾಕೆಂದರೆ ಅದು ನನ್ನಂಥವನ ಹಿನ್ನೆಲೆಯಿಂದ ಹುಟ್ಟಿದ ಪ್ರತಿಮೆಯಲ್ಲ’ ಅವರ ಮಾತಿನಲ್ಲಿ ಉತ್ಪ್ರೇಕ್ಷೆಯಿದ್ದರೂ ನಮ್ಮ ಧರ್ಮ ಮತ್ತು ಪುರಾಣಗಳಿಂದ ಹುಟ್ಟಿದ ಪ್ರತಿಮೆಗಳನ್ನು ಅವರು ಯಾಕೆ ತಿರಸ್ಕರಿಸುತ್ತಿದ್ದಾರೆ ಅಥವಾ ಯಾಕೆ ಅವರಿಗೆ ತಿರಸ್ಕರಿಸಬೇಕು ಎಂದು ಅನ್ನಿಸುತ್ತದೆ ಎಂಬುದನ್ನು ವಿಶ್ಲೇಷಿಸಬೇಕು.

ಈ ಪ್ರಶ್ನೆ ಅಮೆರಿಕಾದಲ್ಲೂ ಎದ್ದಿದೆ ಎನ್ನುವುದು ನನ್ನ ಅನುಭವಕ್ಕೆ ಬಂದದ್ದು ಅಯೋವಾದಲ್ಲಿ ನಡೆದ ಒಂದು ಘಟನೆಯಿಂದ. ಅಯೋವಾದಲ್ಲಿ ಬೇರೆ ಬೇರೆ ದೇಶಗಳಿಂದ ಬಂದ ಲೇಖಕರು ಹತ್ತು ತಿಂಗಳ ಕಾಲ ಒಟ್ಟಿಗೆ ಇರುತ್ತಾರೆ. ನಾನು ಅಲ್ಲಿದ್ದ ಕಾಲದಲ್ಲಿ ಒಬ್ಬ ಅಮೆರಿಕನ್ ಯುವಕ ಕವಿ ಮಾತಾಡುವುದಕ್ಕೆ ಬಂದ – ಆತ ಬಿಳಿಕವಿ. ಯಾರು ಇತ್ತೀಚೆಗೆ ಚೆನ್ನಾಗಿ ಬರೀತ ಇದಾರೆ ಅಂತ ಮಾತಾಡಿದ. ಅವನು ಮಾತಾಡುವಾಗ ನಮ್ಮ ಜೊತೆಗೆ ಒಬ್ಬ ಕವಿ ಕಪ್ಪುಲೇಖಕ – ದಕ್ಷಿಣ ಆಫ್ರಿಕಾದವ – ಇದ್ದ. ವರ್ಣಭೇದ ನೀತಿಯ ದೇಶದಿಂದ ಅಮೆರಿಕಾಕ್ಕೆ ಬಂದು ಅವನು ಬಹಳ ಆಶ್ಚರ್ಯಪಟ್ಟಿದ್ದ: ಒಬ್ಬ ಬಿಳಿಯನ ಜೊತೆ ತಾನು ಕೂತು ಊಟ ಮಾಡಬಹುದಲ್ಲ, ಬಿಯರ್ ಕುಡಿಯಬಹುದಲ್ಲ ಎಂಬುದರಿಂದಲೇ ಆತ ಪುಳಕಿತನಾಗಿದ್ದ. ಬಿಳಿಕವಿಯ ಭಾಷಣ ಮುಗಿದ ಮೇಲೆ ಈ ನನ್ನ ಗೆಳೆಯ ಆರ್ನಾಲ್ಡ್ ಕೇಳಿದ ‘ಯಾಕೆ ನಿನ್ನ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಕಪ್ಪುಕವಿಯೂ ಇಲ್ಲ? ಬರೀ ಬಿಳಿಕವಿಗಳ ಮೇಲೆ ಮಾತ್ರ ಯಾಕೆ ಮಾತಾಡಿದಿ?’ ಅದಕ್ಕೆ ಬಿಳಿಕಿವಿ ಹೇಳಿದ: ‘ನಾವು ಕಪ್ಪು ಜನರ ಕಾವ್ಯ ಕುರಿತು ಮಾತ್ನಾಡೋದು ಅವರಿಗೆ ಇಷ್ಟವಾಗಲ್ಲ; ಅಮೆರಿಕಾದಲ್ಲಿ ಒಂದಲ್ಲ ಕಾವ್ಯವಿರೋದು ಎರಡು. ಕಪ್ಪುಜನರ ಕಾವ್ಯವೇ ಬೇರೆ; ನಮ್ಮದೇ ಬೇರೆ’ ಸಭೆ ಮುಗಿದ ನಂತರ ಕಾಕ್ಟೈಲ್ಸ್ ಗೆ ಸೇರಿದಾಗ ನಾನು ಅವನನ್ನು ಕೇಳಿದೆ: ‘ನೀವು ಮತ್ತು ಕಪ್ಪುಜನರು ಬರಿಯೋದು ಒಂದೇ ಭಾಷೆಯಲ್ಲಿ ಅಲ್ಲವೆ? ನಿಜವಾಗಿ ನಿನಗೆ ಅವರ ಕಾವ್ಯದ ಬಗೆಗೆ ಏನೆನ್ನಿಸುತ್ತೆ ಹೇಳು?’ ಆತ ನನ್ನ ಜೊತೆ ಒಂಟಿಯಾಗಿ ಇದ್ದಿದ್ದರಿಂದ ಹೇಳಿದ: ‘ಅವರ ಕಾವ್ಯ ನನಗೆ ಶುದ್ಧ ಎಳಸು, ಬೋರ್ ಎನ್ನಿಸುತ್ತೆ. ನನ್ನದೂ ಅವರಿಗೆ ಹಾಗೇ ಅನ್ನಿಸಬಹುದು.’ ಅವನು ಹೇಳಿದ ಮಾತನ್ನು ಪ್ರಾಯಶಃ ಅವನ ಸಾಹಿತ್ಯಲೋಕದ ಹಿರಿಯರಾದ ಮೆಲ್ವಿರ್ ಆಗಲೀ, ಎಮರ್ ಸನ್ ಆಗಲೀ ಹೇಳುತ್ತಿರಲಿಲ್ಲ.

ಹೆಚ್ಚು ಕಡಿಮೆ ನಾವು ಅದೇ ರೀತಿಯ ಒಂದು ಸಮಸ್ಯೆಯನ್ನು ಈಗ ಕನ್ನಡದಲ್ಲೂ ಎದುರಿಸಬೇಕಾಗಿ ಬಂದಿದೆ. ‘ನಿಮ್ಮ ಲೋಕವೇ ಬೇರೆ, ನಮ್ಮ ಲೋಕವೇ ಬೇರೆ. ನಿಮ್ಮ ಲೋಕದಿಂದ ನಮ್ಮನ್ನು ಹೊರಗಿಟ್ಟಿದ್ದೀರಿ. ಆದ್ದರಿಂದ ಆ ಲೋಕದ ಪ್ರತೀಕಗಳ ಮುಖಾಂತರ, ಪುರಾಣಗಳ ಮುಖಾಂತರ, ವಿವರಗಳ ಮುಖಾಂತರ ನೀವು ಹೇಳಿದ್ದು ಯಾವುದೂ ನಮಗೆ ತಟ್ಟುವುದಿಲ್ಲ. ನಮಗದು ಅವಮಾನಕಾರಕವಾಗುತ್ತೆ’ ಅಂತ ದಲಿತರು ಹೇಳಿದರೆ ಆ ಮಾತುಗಳ ಹಿಂದೆ ಇರುವ ವಾಸ್ತವತೆಯನ್ನು ಗ್ರಹಿಸಬೇಕು ಅಂತ ನಾನು ಹೇಳುತ್ತ ಇದ್ದೇನೆ. ಈ ವಾಸ್ತವದ ಹಿಂದೆ ಅತ್ಯಂತ ಅವಮಾನಕರವಾದ ಹಿಂದೂ ಧರ್ಮದ ಚರಿತ್ರೆಯಿದೆ.

ಅಮೆರಿಕನ್ ಸಾಹಿತ್ಯದಿಂದಲೇ ಇನ್ನೊಂದು ಉದಾಹರಣೆ ತೆಗೆದುಕೊಂಡು ನನ್ನ ಹೇಳಿಕೆಯಲ್ಲಿ ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಬಾಸ್ಟನ್ನಿನ ಟಿಫ್ಸ್‌ ವಿಶ್ವವಿದ್ಯಾಲಯದಲ್ಲಿ ನಾನು ಪಾಠ ಮಾಡುತ್ತಿದ್ದಾಗ ಲೆರಾಯ್ ಜೋನ್ಸ್ ಎಂಬ ಒಬ್ಬ ಪ್ರಸಿದ್ಧ ಕಪ್ಪು ಲೇಖಕನನ್ನು ಭೇಟಿಯಾದೆ. ನಾನು ಭೇಟಿಯಾದ ಅವನ ಹೆಸರು ಲೆರಾನ್ ಜೋನ್ಸ್ ಆಗಿರಲಿಲ್ಲ. ಆದರೆ ಆ ಹೆಸರಿನಲ್ಲಿ ತುಂಬ ಪ್ರಸಿದ್ಧವಾದ ಮೇಲೆ ಅವನು ಕ್ರಿಶ್ಚಿಯನ್ ಧರ್ಮವನ್ನು ತ್ಯಜಿಸಿ ಮುಸ್ಲಿಂ ಆಗಿ ಬ್ಲಾಕ್ ಫ್ಯಾಂಥರ್ಸ್ ಚಳವಳಿ ಸೇರಿದ. ತನ್ನ ಹೆಸರನ್ನು ಆಮೀರಿ ಬರಾಕ ಎಂದು ಬದಲಾಯಿಸಿಕೊಂಡ. ಈ ಮುಸ್ಲಿಂ ಚಳುವಳಿಯೂ ದಲಿತರ ಬಿಡುಗಡೆಗೆ ಅಸಮರ್ಥ ಎಂದು ತಿಳಿದು – ನಾನು ಆತನನ್ನು ಭೇಟಿಯಾದಾಗ – ಮಾರ್ಕ್ಸ್ ವಾದಿಯಾಗಿದ್ದ. ಆತ ಬಹಳ ಸಮರ್ಥ ಕವಿ, ತುಂಬ ಶಕ್ತಿಯುತ ನಾಟಕಕಾರ. ತುಂಬ ಜನ ಸೇರಿದ್ದ ಸಭೆಯೊಂದರಲ್ಲಿ ಅವನು ಹೇಳಿದ: ‘ನಿಮ್ಮ ದೊಡ್ಡ ಕವಿಗಳಾದ ಪೌಂಡ್ ಮತ್ತು ಎಲಿಯಟ್ಟರನ್ನು ಬಹಳ ಸೊಗಸಾದ ಶೈಲಿಯಲ್ಲಿ ಬರೀತಾರ ಅಂತ ಇಷ್ಟಪಟ್ಟರೆ ಅದರ ಪರಿಣಾಮ ನನ್ನಂಥವರ ಮೇಲೆ ಏನಾಗುತ್ತೆ ಗೊತ್ತ? ನನ್ನನ್ನೇ ನಾನು ಅವಮಾನಪಡಿಸಿಕೊಂಡಂತೆ ಆಗುತ್ತೆ. ಯಾಕೆಂದರೆ ಅವರು ಬಳಸುವ ಸಾಂಸ್ಕೃತಿ ಸರಕೆಲ್ಲವು ನನ್ನಂಥ ಜನರು ಗುಲಾಮರಾಗಲು ಮಾತ್ರ ಯೋಗ್ಯರು ಎಂದು ಬಹಳ ಹಳೇ ಕಾಲದಿಂದ ಹೇಳಿಕೊಂಡು ಬಂದಂಥವು. ಆ ಸರಕಿನ ಹಿಂದೆ ಅಂಥದೇ ಜನಾಂಗ ಭೇದದ ಸೂಕ್ಷ್ಮದೃಷ್ಟಿಕೋನವಿದೆ. ಅಂಥದನ್ನು ಶೈಲಿಗಾಗಿ ಮೆಚ್ಚಿ ನನ್ನನ್ನು ನಾನು ದ್ವೇಷಿಸಿಕೊಳ್ಳುವಂತಾಗಬೇಕೆ? ಆದ್ದರಿಂದ ಈ ಇಡೀ ಸಾಹಿತ್ಯ ಪರಂಪರೆಯನ್ನು ನಾನು ತಿರಸ್ಕರಿಸುತ್ತೇನೆ.’

ಅವನು ಹಾಗೆ ಹೇಳಿದಾಗ ಸಾಹಿತ್ಯದ ಧರ್ಮ ಸಾರ್ವತ್ರಿಕವಾದದ್ದು ಅನ್ನುವ ವಾದದಿಂದ ಕೂಡಲೇ ಅವನಿಗೆ ತೃಪ್ತಿಕರವಾದ ಉತ್ತರ ಕೊಡಲು ಸಾಧ್ಯಾಗುವುದಿಲ್ಲ. ಇದು ಸಾಹಿತ್ಯದಲ್ಲಿ ಮಾತ್ರ ಏಳುವ ಪ್ರಶ್ನೆಯಲ್ಲ. ಗಾಂಧೀಜಿಯೂ ಈ ಪ್ರಶ್ನೆಯನ್ನು ಎದುರಿಸಬೇಕಾಯಿತು. ಅವರಿಗೆ ದಲಿತ ಎಂದರೆ ಒಬ್ಬ ಭಂಗಿಯಾಗಿದ್ದ. ಒಬ್ಬ ದಲಿತನನ್ನು ಭಂಗಿಯೆಂದು ಕಂಡಾಗ ಅವನನ್ನು ಪ್ರೀತಿಸೋದು ಸುಲಭ. ಅದೇನೆ ಈ ದಲಿತ ಅಂಬೇಡ್ಕರ್ ರಂತಹ ಮಹರ್ ಆಗಿ ನಮ್ಮೆದುರು ಇದ್ದಾಗ ಅವನನ್ನು ಪ್ರೀತಿಸೋದು ಕಷ್ಟ. ನಮ್ಮ ಲಿಬರಲ್ ಮಾನವತಾವಾದಕ್ಕವನು ಸವಾಲಾಗುತ್ತಾನೆ. ಅಂಬೇಡ್ಕರ್ ನ ಮಹರ್ ಆಗಲೇ ಹೋರಾಡಲು ಪ್ರಾರಂಭಿಸಿದ್ದ. ಗಾಂಧೀಜಿ ತನ್ನನ್ನೂ ಒಬ್ಬ ಕರುಣೆಗೆ ಪಾತ್ರನಾದ ಭಂಗಿಯೆಂದು ಕಾಣುವುದು ಅಂಬೇಡ್ಕರ್ ಗೆ ಖಂಡಿತ ಅಪ್ರಿಯವಾಗಿತ್ತು. ಅಂಬೇಡ್ಕರ್ ಎದುರು ಇದ್ದವನು ಹೋರಾಡಬಲ್ಲ ಹರಿಜನ, ಬರೀ ಮಾನವೀಯ ದಯೆ ಬೇಡುವ ಹರಿಜನವಲ್ಲ. ಆದರೆ ಅಂಥವನನ್ನು ಪ್ರೀತಿಸೋದು ನಮಗೂ ನಿಮಗೂ ಕಷ್ಟ ಅನ್ನುವುದನ್ನು ಒಪ್ಪಿಕೊಳ್ಳೋಣ. ನಾವು ಎಷ್ಟೇ ಮಾನವೀಯವಾದಿಗಳು ಅಂತ ತಿಳಿದುಕೊಂಡರೂ ಈ ಜನ ಹೋರಾಡಲು ಶುರು ಮಾಡಿದಾಗ ಅವರನ್ನು ಪ್ರೀತಿಸೋದು ನಮಗೆ ಕಷ್ಟವಾಗಬಹುದು. ಆಗ ಅಂಥ ಹೋರಾಟದ ದ್ರವ್ಯವಾಗಿ ಸಾಹಿತ್ಯ ಬಂದಾಗ ಕೆಲವು ಸಮಸ್ಯೆಗಳು ಎದ್ದೇ ಏಳುತ್ತವೆ. ಅವು ನಮ್ಮ ಲಿಬರಲ್ ಧೋರಣೆಗೆ, ನಮ್ಮ ಮಾನವತಾವಾದಕ್ಕೆ ನಿಜವಾದ ಸವಾಲಾಗುತ್ತವೆ. ಈ ಸವಾಲು ಇಲ್ಲ ಎಂದು ನಾವು ಭ್ರಮಿಸಿದಾಗ ನಾವು ಭೋಳೆಗಳಾಗುತ್ತೇವೆ. ಬದಲಾಗಿ ಈ ಸವಾಲನ್ನು ಸ್ವೀಕರಿಸಿದಾಗ ನಾವು ನಂಬಿದ ಮೌಲ್ಯಗಳನ್ನು ನಿಜವಾದ ಪರೀಕ್ಷೆಗೆ ಗುರಿಮಾಡಬೇಕಾಗಿ ಬರುತ್ತದೆ – ಗಾಂಧೀಜಿ ತಮ್ಮ ಜೀವಿತಕಾಲದಲ್ಲಿ ಮಾಡಿದಂತೆ.

ಈಚೆಗೆ ನಾನು ಥೋರಟ್ ಎನ್ನುವ ಮಹರ್ ಜನಾಂಗದ ಒಬ್ಬ ಸಮಾಜಶಾಸ್ತ್ರಜ್ಞ ಬರೆದ ಒಂದು ಲೇಖನವನ್ನು ಓದಿದೆ. (Identity and Adulthood, Ed. by Kakar, O.U.P.) ಹಳ್ಳಿಯೊಂದರಲ್ಲಿ ಮಹರ್ ಜನಾಂಗದವನಾಗಿ ಹುಟ್ಟಿ ಬೆಳೆಯುವುದು ಅಂದರೆ ಏನು ಅನ್ನುವುದನ್ನು ಆತ ಬರೆಯುತ್ತಾನೆ. ಬೆಳೆಯುವಾಗ ಏಳುವ ತನ್ನತನದ ಸಮಸ್ಯೆಗಳ ಬಗ್ಗೆ ಆತ ಸಮಾಜ ಶಾಸ್ತ್ರಜ್ಞನಾಗಿ ಬರೆದಿದ್ದಾನೆ. ಅವನ ಪ್ರಕಾರ ಅಸ್ಪೃಶ್ಯತೆ ಎನ್ನುವ ಅನುಭವ ಎಷ್ಟು ವಿಚಿತ್ರವಾದ ಅನುಭವ ಅನ್ನುವುದನ್ನು ಅಸ್ಪೃಶ್ಯನಾಗಿ ಹುಟ್ಟದೇ ಇರುವವ ತಿಳಿಯಲಾರ. ಹುಟ್ಟಿನಿಂದಾಗಿ ಅಸ್ಪೃಶ್ಯನಾಗುವುದೆಂದರೆ ಏನೆಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಆರ್ಥಿಕ, ಸಾಮಾಜಿಕ ಸುಲಿಗೆಯನ್ನು ಮಾತ್ರ ಅರಿತ ಮಾರ್ಕ್ಸ್‌ ವಾದಕ್ಕೂ ಸಾಧ್ಯವಿಲ್ಲವೆಂದು ನನಗೂ ಅನ್ನಿಸಿದ್ದಿದೆ. ಆದ್ದರಿಂದಲೇ ಪ್ರಾಯಶಃ ಒಬ್ಬ ಹರಿಜನ ಲೇಖಕನಿಗೆ ತನ್ನ ಪಾಡನ್ನು ಅರಿಯಲು ಮಾರ್ಕ್ಸ್ ವಾದ ಎಷ್ಟು ಮುಖ್ಯವೋ ಅಸ್ತಿತ್ವವಾದವೂ ಅಷ್ಟೇ ಮುಖ್ಯವಾದೀತು ಎಂದು ನಾನು ಈ ಹಿಂದೆ ಹೇಳಿದ್ದಿದೆ. ಏಕೆಂದರೆ ಹೊರಗಿನ ಹೇಯ ದೃಷ್ಟಿಯನ್ನು ಒಳಪಡಿಸಿಕೊಂಡ ತನ್ನ ಮನಸ್ಸಿನ ಯಾತನೆಯನ್ನು ಅರ್ಥಮಾಡಿಕೊಂಡು ಪ್ರಜ್ಞೆಯ ಸ್ತರದಲ್ಲೇ ಮೀರಬೇಕಾದ ಹೊರೆ ಅವನ ಮೇಲಿದೆ. ಆದ್ದರಿಂದಲೇ ಪ್ರಾಯಶಃ ಮಾರ್ಕ್ಸಿಸ್ಟ್ ಬರಹಗಾರರಿಗಿಂತ ದಲಿತ ಪ್ಯಾಂಥರ್ಸ್ ಲೇಖಕರು ಹೆಚ್ಚು ದಟ್ಟವಾಗಿ, ಕಾಂಪ್ಲೆಕ್ಸಾಗಿ ಬರೆದಿರುವುದು; ಬರೆಯಬೇಕಾಗಿ ಅವರಿಗೆ ಬಂದಿರುವುದು.

ಥೋರಟ್ ಹೇಳುತ್ತಾನೆ: ಮಗು ತನ್ನ ಕಾಲಿನ ಮೇಲೆ ಓಡಾಡಲು ಕಲಿತ ಕೂಡಲೆ ಅದಕ್ಕೆ ಗೊತ್ತಾಗುತ್ತದೆ, ತಾನು ಅಸ್ಪೃಶ್ಯ ಎಂದು. ತನಗೇ ಆದ ಒಂದು ಅನುಭವ ಅವನು ಹೇಳುತ್ತಾನೆ. ಒಂದು ದಿನ ಅವನು ಆಡುತ್ತಿದ್ದ ಚೆಂಡು ಊರಿನ ಬಾವಿ ಬಳಿ ಬಿತ್ತು. ಆ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಅಲ್ಲಿದ್ದ ಪಟೇಲನ ಮಗ ಥೋರಟ್‌ನನ್ನು ಹೊಡೆದ. ಯಾಕೆಂದು ಮಗು ಕಕ್ಕಾಬಿಕ್ಕಿಯಾದಾಗ ಅವನ ತಾಯಿ ಹೇಳಿದಳು. ‘ನೀನು ಅಸ್ಪೃಶ್ಯ’. ಆಮೇಲೆ ತನ್ನ ಹದಿನಾರರಿಂದ ಇಪ್ಪತ್ತನೇ ವಯಸ್ಸಿನ ತನಕ ತಾನು ಈ ಒಳಗುದಿಯನ್ನು ಹೇಗೆ ಮೀರಲು ಪ್ರಯತ್ನಿಸಿದೆ ಎಂದು ಥೋರಟ್ ವಿವರಿಸುತ್ತಾನೆ. ತಂದೆ ತಾಯಿಯರು ನಂಬಿದ್ದ ಹಿಂದೂ ಧರ್ಮವನ್ನು ಅವನು ಪೂರ್ಣ ತಿರಸ್ಕರಿಸಿದ. ಅವನು ತಾಯಿ ಪೂಜೆ ಮಾಡುತ್ತಿದ್ದ ವಿಗ್ರಹಗಳನ್ನು ಕರಗಿಸಿ ಅವನು ಮತ್ತೆ ಅವನ ಒಬ್ಬ ಅಣ್ಣ ತಾಳ ಮಾಡಿಕೊಂಡು ಬೌದ್ಧಭಜನೆಯ ಗುಂಪುಗಳನ್ನು ಸೇರಿದರು. ಇದರಿಂದಾಗಿ ತಾಯಿ ಕುಪಿತಳಾದ್ದರಿಂದ ಕೆಲವು ದಿನ ಅವರು ಮನೆಯನ್ನೂ ಬಿಡಬೇಕಾಯಿತು. ಥೋರಟ್‌ನಲ್ಲಿ ಸ್ವಮರ್ಯಾದೆ ಮತ್ತು ತನ್ನತನದ ಅರಿವು ಮೂಡಿದ್ದು ಹೀಗೆ.

ಹಿಂದೂ ಧರ್ಮದ ಚೌಕಟ್ಟಿನೊಳಗೇ ಹರಿಜನರನ್ನು ಒಳಗೊಳ್ಳಬೇಕೆಂಬ ಗಾಂಧೀಜಿಗೂ ಈ ಸಮಸ್ಯೆ ಅರಿವಿತ್ತೆಂಬುದನ್ನು ಈಚೆಗೆ ಪ್ರೊ. ಎ.ಬಿ.ಷಾ ಅವರು ನನಗೆ ಹೇಳಿದ ಒಂದು ಘಟನೆಯಿಂದ ತಿಳಿಯಬಹುದು. ಗಾಂಧೀಜಿ ಒಮ್ಮೆ ದೊಡ್ಡ ಪಂಡಿತರನ್ನೆಲ್ಲ ಕರೆಸಿ ಹಿಂದೂ ಧರ್ಮ ಅಸ್ಪೃಶ್ಯತೆಯನ್ನು ಮಾನ್ಯ ಮಾಡುತ್ತದೊ ಎಂದು ಕೇಳಿದರಂತೆ. ಪಂಡಿತರು ‘ಸರ್ವೇ ಜನಾಃ ಸುಖಿನೋ ಭವಂತು’ ಎನ್ನುವ ಹಿಂದೂ ದರ್ಮದಲ್ಲಿ ಅಸ್ಪೃಶ್ಯತೆಗೆ ಸ್ಥಾನವಿಲ್ಲವೆಂದರಂತೆ. ಆಗ ಗಾಂಧೀಜಿ ತರ್ಕ ತೀರ್ಥ ಲಕ್ಷ್ಮಣಶಾಸ್ತ್ರಿ ಎಂಬ ಒಬ್ಬ ಘನ ವಿದ್ವಾಂಸರಿಗೆ ಈ ಪ್ರಶ್ನೆ ಹಾಕಿದರಂತೆ. ಅದಕ್ಕವರು ಧರ್ಮ ಎಂದರೆ ಆಚರಣೆಯಲ್ಲಿ ಇರುವ ಧರ್ಮ ಎನ್ನುವುದಾದಲ್ಲಿ ಮೊದಲಿನಿಂದಲೂ ಹಿಂದೂ ಧರ್ಮ ಅಸ್ಪೃಶ್ಯತೆಯನ್ನು ಮಾನ್ಯ ಮಾಡುತ್ತ ಬಂದಿದೆ ಎಂದರಂತೆ. ಅದನ್ನು ಕೇಳಿದ ಗಾಂಧೀಜಿ ಹಾಗಿದ್ದಲ್ಲಿ ತಾನು ಹಿಂದೂ ಧರ್ಮವೇ ತಪ್ಪು ಎಂದು ಹೇಳಬೇಕಾಗುತ್ತದೆ ಎಂದು ಅಂದರಂತೆ. ಶಾಸ್ತ್ರಿಗಳ ಆತ್ಮಚರಿತ್ರೆಯನ್ನು ಹಿಂದೂ ಧರ್ಮದ ಚೌಕಟ್ಟಿನಲ್ಲೇ ನಿವಾರಿಸಲು ಯತ್ನಿಸಿದ ಗಾಂಧೀಜಿಗೂ ಹೀಗೆನ್ನಿಸಿತ್ತು ಎನ್ನುವುದು ಮುಖ್ಯ.

ನನ್ನ ವಾದದ ಉದ್ದೇಶ: ಹಿಂದೂ ಧರ್ಮವನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಥೋರಟ್‌ನ ಪ್ರಜ್ಞಾಸ್ಫೋಟಕ್ಕೆ ಯಾಕೆ ಅಗತ್ಯವಾಯಿತು ಎಂಬುದು. ಗಾಂಧೀಜಿಯ ವಿನೀತ ಭಂಗಿಯ ದಾರಿಯಲ್ಲಿ ನಡೆಯುವವರಿಗೆ ಅರಿವಿನ ಸ್ಫೋಟ ಆಗುವುದಕ್ಕಿಂತ ಮೊದಲೇ ಬಹುಶಃ ಇನ್ನಷ್ಟು ಹೆಚ್ಚು ತ್ವರಿತವಾಗಿ, ಚೈತನ್ಯಪೂರ್ಣವಾಗಿ ಹಿಂದೂ ಧರ್ಮವನ್ನು ತಿರಸ್ಕರಿಸುವವರ ಅರಿವಿನ ಸ್ಫೋಟವಾಗಿರುತ್ತದೆ. ಅಂಥ ಅರಿವಿನ ಸ್ಫೋಟದಿಂದ ಹುಟ್ಟುವ ಸಾಹಿತ್ಯದ ಸವಾಲು ಈ ನಮ್ಮ ಜಡವಾದ, ಭೋಳೆತನದಿಂದ ನಿಷ್ಕ್ರಿಯವಾದ ದೇಶಕ್ಕೆ ಅಗತ್ಯವಾದ ಚಿಕಿತ್ಸೆಯನ್ನು ಮಾಡಬಹುದೆ ಎಂಬುದೇ ನನ್ನಂಥವರ ಬಯಕೆ.

ಅಮೆರಿಕಾದ ಮಾರ್ಟಿನ್ ಲೂಥರ್ ಕಿಂಗ್ ಬಹಳ ದೊಡ್ಡಮನುಷ್ಯ. ಆದರೆ ಅವನ ಹಿಂಬಾಲಕರಾದವರಿಗೆ ಒಂದು ಸಮಸ್ಯೆ ಇತ್ತು. ಕಿಂಗ್ ಒಬ್ಬ ಕ್ರೈಸ್ತ ಪಾದ್ರಿ. ಚೈತನ್ಯಪೂರ್ಣ ಮನುಷ್ಯ. ಎಲ್ಲರ ಒಳಿತನ್ನು ಬಯಸುತ್ತಿದ್ದ ಗಾಂಧೀವಾದಿ. ಆದ್ದರಿಂದ ಅವನನ್ನು ಅನುಸರಿಸುವ ಒಬ್ಬ ಕಪ್ಪು ಮನುಷ್ಯ ಒಳ್ಳೆಯವನು ಎನ್ನಿಸಿಕೊಳ್ಳಬೇಕಾದರೆ ಬಿಳಿಯನಿಗಿಂತ ಹೆಚ್ಚು ಸಭ್ಯನಾಗಬೇಕಿತ್ತು. ನೋಡಿ, ಈತ ಕಪ್ಪು ಮನುಷ್ಯನಾದರೂ ಎಷ್ಟು ಸಭ್ಯನಾಗಿದ್ದಾನೆ ಎಂದು ಆಗ ಬಿಳಿಯರು ಹೇಳಬಹುದಲ್ಲವೆ? ನಾವು ಕೂಡ ಹೇಳುವುದಿಲ್ಲವೆ? ಅವನು ಹೊಲೆಯನಾಗಿ ಹುಟ್ಟಿದ್ದರೂ ಎಷ್ಟು ಒಳ್ಳೆ ಮನುಷ್ಯ ಎಂದು? ಕಿಂಗ್‌ನ ಹಿಂಬಾಲಕರಿಗೆ ತಾವು ಬಿಳಿಯರಿಗಿಂತ ಹೆಚ್ಚು ಕಷ್ಟಸಹಿಷ್ಣುಗಳೂ ಸಭ್ಯರೂ ಒಳ್ಳೆಯವರೂ ಆಗಬೇಕಾಗಿ ಬರುತ್ತಿದ್ದುದರಿಂದ ಆ ಪ್ರಯತ್ನದಲ್ಲೇ ಅವರು ಹ್ಯಾಪರಾಗಿ ಉಳಿದುಬಿಡುತ್ತಿದ್ದವರು. ಆದರೆ ಬಿಳಿಯರ ಸಭ್ಯತೆಯ ಆದರ್ಶವನ್ನು ಸಂಪೂರ್ಣ ತಿರಸ್ಕರಿಸುತ್ತೇವೆಂಬ ಬ್ಲಾಕ್ ಪ್ಯಾಂಥರ್ಸ್ ಮಾರ್ಗ ಹಿಡಿದ ಮಾಲ್ಕಂ ಎಕ್ಸ್‌ ನ ಹಿಂಬಾಲಕರು ಬಿಳಿಯರ ಸರ್ಟಿಫಿಕೇಟು ಪಡೆಯುವ ವ್ಯರ್ಥ ಪ್ರಯತ್ನದಲ್ಲಿ ಕಾಲಹರಣ ಮಾಡದೆ ತಮ್ಮ ಮಾನವತೆಯ ಅರಿವನ್ನು ಹೆಮ್ಮೆಯಲ್ಲಿ ಪಡೆದುಕೊಂಡರು.

ಇಂಥದು ಕೇವಲ ರಾಜಕೀಯ ಆಂದೋಲನ ಮಾತ್ರವಲ್ಲದೆ ಸಾಂಸ್ಕೃತಿಕ ಆಂದೋಲನ ಅನ್ನುವ ದೃಷ್ಟಿಯಿಂದ ನಾನು ಹೇಳುತ್ತಿದ್ದೇನೆ – ಇಂಥ ಚಳುವಳಿಯಲ್ಲಿ ಬಿಡುಗಡೆ ಪಡೆಯುವ ಮನಸ್ಸು ಸಾಹಿತ್ಯಕವಾಗಿ ಹೆಚ್ಚು ಫಲಪ್ರದವಾಗಬಹುದು ಎಂದು, ಈಗ ಅಮೆರಿಕನ್ ಸಾಹಿತ್ಯದಲ್ಲಿ ಆದಂತೆಯೇ.

ನಮ್ಮ ದೇಶದ ಅಸ್ಪೃಶ್ಯರು ಕೂಡ ಅಂಥ ಅರಿವಿನ ಸ್ಫೋಟಕ್ಕಾಗಿ ಹಿಂದೂ ಸಂಸ್ಕೃತಿಯನ್ನು ಮೂಲತಃ ಪ್ರಶ್ನಿಸುತ್ತಿದ್ದಾರೆ. ಹಾಗೆ ಅವರು ಪ್ರಶ್ನೆ ಮಾಡಿದಾಗ ಇವರು ಕೆಡುಕರು, ಕೊಳಕರು, ನಾವು ಅವರಿಗೆ ಎಷ್ಟು ಉಪಕಾರ ಮಾಡಿದರೂ ಅವರಿಗದರ ಸ್ಮರಣೆಯಿಲ್ಲ ಎಂದು ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದರ ಬದಲು, ಈ ದೇಶದಲ್ಲಿ ಇಂಥ ಬಂಡಾಯ ಯಾಕೆ ಅಗತ್ಯವಾಯಿತು – ಶಂಕರಾಚಾರ್ಯ ಇತ್ಯಾದಿ ಮಹಾನುಭಾವರು ಹುಟ್ಟಿದ ಈ ದೇಶದಲ್ಲೂ – ಎಂದು ನಮ್ಮ ಸಂಸ್ಕೃತಿಯನ್ನು ಅದರ ಭಾಗ್ಯವಂತ ಹಕ್ಕುದಾರರಾದ ನಾವೂ ಪ್ರಶ್ನಿಸಿಕೊಳ್ಳಬೇಕು. ನಾವೆಲ್ಲರೂ ಸೃಷ್ಟಿಶೀಲರಾಗಲು ಕೂಡ ಇದು ಅಗತ್ಯವೆಂಬ ಸ್ವಾರ್ಥದ ಮಾತನ್ನೇ ನಾನು ಹೇಳುತ್ತಿರುವುದು. ಆಗ, ನಾವು ಇವತ್ತು ಸುಲಭವಾಗಿ ನಂಬಿರುವ ಸಾಹಿತ್ಯದ ಸಾರ್ವಕಾಲಿಕತೆಯನ್ನು ಅಗತ್ಯವಾದ ಮರುವಿಮರ್ಶೆಗೆ ಒಡ್ಡಬೇಕಾಗಿ ಬರುತ್ತದೆ; ಬರಿಯ ಘರ್ಷಣೆಯಲ್ಲಿ, ಅಬ್ಬರದ ಹುಸಿ ಭಂಗಗಳಲ್ಲಿ ತೃಪ್ತವಾಗಕೂಡದು. ಮತ್ತೆ ನಮ್ಮ ಸಾರ್ವತ್ರಿಕ ಮೌಲ್ಯಗಳನ್ನ – ಏಕೆಂದರೆ ನಾನು ಕೂಡ ಈ ಮೌಲ್ಯಗಳನ್ನು ಸಾರ್ವತ್ರಿಕ ಎಂದು ತಿಳಿದವನೇ – ದಲಿತರ ಸವಾಲು ಜೀವಂತಗೊಳಿಸಬಹುದೆಂಬ ನಂಬಿಕೆಯಿಂದಲೇ ನಾನು ಇಷ್ಟು ಹೊತ್ತೂ ಮಾತಾಡಿರುವುದು.

ಧರ್ಮಸ್ಥಳದಲ್ಲಿ ೧೯೭೯ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದಸಾಹಿತ್ಯ ಗೋಷ್ಠಿಯಲ್ಲಿ ಮಾಡಿದ ಅಧ್ಯಕ್ಷ ಭಾಷಣದ ಪರಿಷ್ಕೃತ ರೂಪ.

ಟೇಪ್ ರಿಕಾರ್ಡ್ ನಿಂದ ಬರೆದುಕೊಂಡು ಪರಿಷ್ಕರಿಸಲು ಸಹಾಯ ಮಾಡಿದವರು ಸತ್ಯನಾರಾಯಣ.