ಸದಾಶಿವ ಮತ್ತು ನಾನು ಇಪ್ಪತ್ತು ವರ್ಷಕ್ಕೂ ಹೆಚ್ಚಿನ ಗೆಳೆಯರು. ಎಳೆಹರೆಯದ ಗೆಳತನ ಮಧ್ಯವಯಸ್ಸಿನ ತನಕ ಉಳಿದು ಬರಲು ಅದೃಷ್ಟವಂತರಾಗಿರಬೇಕು. ಆಸಕ್ತಿಗಳು ಬೇರೆಯಾಗುತ್ತವೆ; ಜೀವನ ಕವಲೊಡೆಯುತ್ತ ಬೇರೆ ಬಗೆಯ ಆತ್ಮೀಯತೆ ಹುಡುಕುತ್ತವೆ; ಅಥವಾ ನಮ್ಮ ಹೃದಯವನ್ನು ಒಂದು ಕಾಲದಲ್ಲಿ ಮಿಡಿದವರು ಸಪ್ಪೆಯಾಗಿಯೋ ಕೃತಕರಾಗಿಯೋ ಸ್ವಾರ್ಥಿಗಳಾಗಿಯೋ ಬದಲಾಗಿಬಿಟ್ಟಂತೆ ನಮಗೆ ಕಾಣತ್ತಾರೆ. ಆದರೆ ನನ್ನ ಸೊಕ್ಕಿನ ಪೇಚುಗಳ ಎಳೆಹರೆಯವನ್ನು ನನಗೆ ಮತ್ತೆ ಕೊಡುತ್ತಿದ್ದ ಸುಖ, ನನ್ನ ಪ್ರೀತಿಯ ಸದಾಶಿವ. ಇವತ್ತಿನ ನನಗೆ ಸಂಗಾತಿಯಾಗಿದ್ದೂ ಹಿಂದಿನದನ್ನು ನನಗೆ ಉಳಿಸಿದವ. ಅವನು ಗೊಡ್ಡಾಗಿದ್ದಾನೆ, ಸೆಟೆದಿದ್ದಾನೆ ಎಂದು ನನ್ನ ಬಗ್ಗೆಯೇ ನನಗಿರುವ ಸಂಶಯಗಳನ್ನು ಅವನಿಗೆ ಅಂಟಿಸಿ, ಅವನ ಬತ್ತಿದ ಮುಖ ನೋಡಿದರೆ ಅವನ ಕಣ್ಣುಗಳು ತುಂಟಾಗಿ ನಗುತ್ತಿದ್ದುವು – ಸಾಯುವ ತನಕ ನನ್ನ ಪಾಲಿಗೆ ಚೇಷ್ಟೆ ಮಾಡುತ್ತ ಇಬ್ಬರೂ ಹುಡುಗರಾಗಿ ಬಿಡುತ್ತಿದ್ದೆವು.

ನಗಲು ಕಾರಣ ಬೇಕೆ? ವಾರದ ಹಿಂದೆ ಕ್ಷೌರ ಮಾಡಿಸಿಕೊಳ್ಳಲು ಹೊರಟಾಗ ಸದಾಶಿವ ಬಂದ. ಗಂಭೀರ ಮುಖದ ಕ್ಷೌರಿಕನಿಗೆ ಹೇಳಿದ: ‘ಇವನು ನನ್ನ ತಮ್ಮ, ಸಣ್ಣಗೆ ಹಜಾಮತ್ತು ಮಾಡಿ.’ ಹೊರಡುವಾಗ ನಾನು ಹೇಳಿದೆ: ‘ನನ್ನ ಅಣ್ಣನ ಹತ್ತಿರ ಹಣ ಇಸಕೊಳ್ಳಿ’ ಹಳೆಯ ಜೋಕಿಗೆ ನಾವು ಕೊಟ್ಟ ಪೆದ್ದು ತಿರುವಿನಲ್ಲಿ ನಗುವಂಥದೇನೊ ಇರದಿದ್ದರೂ ನಮ್ಮ ಪಿತೂರಿಯಿಂದ ನಮಗೇ ಖುಷಿ. ಸೊಕ್ಕಿದ ನನ್ನನ್ನು ಯಾವನೋ ಅಪರಿಚಿತನ ಎದುರು ಸಣ್ಣವನಾಗಿ ಮಾಡಿದ ಸಂಭ್ರಮ ಸದಾಶಿವನಿಗೆ. ಇದು ಆಟಕ್ಕೆ ಆಹ್ವಾನ.

ಎಷ್ಟೋ ವರ್ಷಗಳ ಹಿಂದೆ ಇಂಥ ಎಷ್ಟು ಆಟಗಳನ್ನು ನಾವು ಆಡಿಲ್ಲ! ನಾವಿಬ್ಬರೂ ಕಾಫಿ ಕುಡಿಯುತ್ತ ಕೂತಿದ್ದೆವು. ಜೊತೆಗೊಬ್ಬ ಪ್ರಗತಿಶೀಲ ಭಾವಜೀವಿಯಿದ್ದಾನೆ. ನಾನು ಇದ್ದಕ್ಕಿದ್ದಂತೆ ಪ್ರಾರಂಭಿಸುತ್ತೇನೆ – ಇದೊಂದು ಗುಟ್ಟು ಎನ್ನುವ ಹಾಗೆ; ‘ಪಾಪ, ನೀನು ಬಹಳ ಕಷ್ಟಪಟ್ಟಿರಬೇಕು ಸದಾಶಿವ’. ‘ಅದೇನು ಮಹಾ ಬಿಡೊ’ – ಸದಾಶಿವ ಸೂಚನೆಯನ್ನು ಎತ್ತಿಕೊಳ್ಳುತ್ತಾನೆ. ಅವನು ಮಾಣಿಯಾಗುತ್ತಾನೆ. ಸಿನೆಮಾ ಗೇಟ್ ಕೀಪರ್ ಆಗುತ್ತಾನೆ. ಸನ್ಯಾಸಿಯ ಶಿಷ್ಯ ಆಗ್ತಾನೆ. ಪಿಕ್ – ಪಾಕೆಟ್ ಮಾಡ್ತಾನೆ. ಹಿಮಾಲಯಕ್ಕೆ ಹೋಗ್ತಾನೆ. ಅವನಿಗೆ ಪೋಲೀಸರು ಬರೆ ಹಾಕ್ತಾರೆ. ಕಥೆಯನ್ನು ನಿಜ ಮಾಡಲು ಸದಾಶಿವ ಕೆಲವು ಘಟನೆಗಳು ಸುಳ್ಳೆಂದು ಉದ್ರೇಕದಿಂದ ವಾದಿಸುತ್ತಾನೆ. ಇಲ್ಲ – ತಾನು ಖಂಡಿತ ಮುಂಬಯಿಯಲ್ಲಿ ಪಿಂಪ್ ಆಗಿರಲಿಲ್ಲ. ಭಾವಜೀವಿಯ ಕಣ್ಣುಗಳು ತೇವಗೊಂಡಂತೆ ನಮಗೆ ಹಿಗ್ಗೋ ಹಿಗ್ಗು. ಇದು ನಾವಿಬ್ಬರೂ ಬರೆದಿದ್ದ ಕೃತಕ ಪ್ರಗತಿಶೀಲ ಕತೆಗಳ ಅಣಕ; ನಾವು ನಿಜವಾಗಿಯೂ ಅನುಭವಿಸುತ್ತಿದ್ದ ಬಡತನವನ್ನು ಸಹ್ಯ ಮಾಡಿಕೊಳ್ಳುವ ಉಪಾಯ; ನಾವು ಕಳೆದುಕೊಳ್ಳಲು ಪ್ರಾರಂಭಿಸಿದ್ದ ಆತ್ಮ ಮರುಕವನ್ನು ಇನ್ನೂ ಉಳಿಸಿಕೊಂಡಿದ್ದ ಭಾವಜೀವಿ ಗೆಳೆಯನ ಪೆದ್ದುತನಕ್ಕೆ ನಮ್ಮ ತಿರಸ್ಕಾರ.

ಇಬ್ಬರೇ ಇದ್ದಾಗ ಒಬ್ಬರನ್ನೊಬ್ಬರು ಜಾಲಾಡುವುದು; ಮತ್ತೊಬ್ಬ ಸಿಕ್ಕಿದನೆಂದರೆ ನಾವು ಪಿತೂರಿಗಾರರು. ಬೋಡು ತಲೆಯ ಗೆಳೆಯನನ್ನು ಕಂಡಕೂಡಲೇ ನನಗೆ ಹಠಾತ್ ಸ್ಫೂರ್ತಿ: ‘ಅಲ್ಲೋ ಸದಾಶಿವ ಎಷ್ಟು ಚೆನ್ನಾಗಿ ಮಾಡಿಸಿಕೊಂಡಿದೀಯೋ – ಗೊತ್ತೇ ಆಗಲ್ಲ.’ ಬೋಡನಿಗೆ ನಾವೇನು ಮಾತಾಡುವುದೆಂದು ಕುತೂಹಲ ಉಲ್ಬಣಿಸುವಂತೆ ನಮ್ಮ ಮಾತು ಸಾಗುತ್ತದೆ. ಸದಾಶಿವನದು ನಿಜವಾದ ಕೂದಲಲ್ಲ – ಟೋಫನ್ ಎಂದು ನಂಬಿಕೆ ಸುಟ್ಟಿಸುತ್ತೇವೆ. ಬೋಡ ಸುಮಾರು ಒಂದು ತಿಂಗಳು ಕೂದಲಿನ ಕನಸನ್ನು ಬೆಳೆಸಿಕೊಳ್ಳುತ್ತ ಹೋಗುವುದನ್ನು ನಾವು ಬೆಂಬಲಿಸುತ್ತೇವೆ. ಒಂದು ದಿನ ಗೆಳೆಯ ಹಠಾತ್ತನೆ ಸದಾಶಿವನ ಕೂದಲನ್ನು ಎಳೆದೇ ನೋಡುತ್ತಾನೆ; ನಿಜವಾದ ಸಿಟ್ಟು ಹತಾಶೆಗಳಲ್ಲಿ ಕೂಗಾಡುತ್ತಾನೆ. ಎಂಥ ನರಕದಲ್ಲಿದ್ದಾಗಲೂ ಸದಾಶಿವ ನಾನು ಇದನ್ನು ನೆನೆದು ನಕ್ಕಿದ್ದೇವೆ. ನಾನು ಊರಲ್ಲಿ ಇಲ್ಲದಾಗ ಸದಾಶಿವ ಥೇಟು ಹುಚ್ಚನಂತೆ ನಟಿಸಿ ಗೆಳೆಯರನ್ನು ಪೆಚ್ಚು ಮಾಡಿದ ಇನ್ನೊಂದು ಕಥೆಯಿದೆ.

ಇಬ್ಬರಿಗೂ ನಲವತ್ತು ಮೀರಿದ್ದರೂ ಅವನು ನನಗೆ ಹುಡುಗ, ನಾನು ಅವನಿಗೆ ಹುಡುಗ.

ಒಬ್ಬರನ್ನೊಬ್ಬರು ಕಿಚಾಯಿಸಿಕೊಳ್ಳುತ್ತ ಇದ್ದಂತೆಯೇ, ಯಾವ ಪ್ರಯತ್ನವೂ ಇಲ್ಲದೆ, ದೊಡ್ಡವರಾಗಿ ಬಿಡುತ್ತಿದ್ದೆವು. ಕ್ಷೌರದ ಅಂಗಡಿಯಿಂದ ಹೊರಗೆ ಬರುವಾಗ ಹೇಳಿದ; ‘ಪ್ರಾಣಿಶಾಸ್ತ್ರದ ಬಗ್ಗೆ ಒಂದು ಒಳ್ಳೆ ಸಿನಿಮಾ ಮಾಡಬೇಕಲ್ಲೊ’ ಜೆ.ಎಸ್‌.ಎಸ್‌. ಕಾಲೇಜಿನಲ್ಲಿ ಅವನು ಕಟ್ಟಿದ ಮ್ಯೂಸಿಯಂ ಎಂದರೆ ಅವನಿಗೆ ತುಂಬ ಹೆಮ್ಮೆ. ತಾನು ಬರೆದ ಮ್ಯೂಸಿಯಂ ನೋಡಿ ಯಾರೋ ಹೊಗಳಿದ್ದು – ಇವೆಲ್ಲ ಅವನಿಗೆ ಬಲು ಖುಷಿ. ಅವನ ಕಣ್ಣಿಗೆ ಚೆನ್ನಾಗಿ ಕಂಡದ್ದೆಲ್ಲ ಅವನ ಆಫೀಸಿನಲ್ಲಿರಬೇಕು – ಪೆನ್ನಿನ ಸ್ಟ್ಯಾಂಡು, ಕ್ಯಾಲೆಂಡರ್, ಟೈಪ್‌ರೈಟರು, ಸ್ಕಚ್‌ಪೆನ್ನುಗಳು. ಪ್ರಾಣಿಗಳೆಂದರೆ ಸದಾಶಿವನಿಗೆ ತುಂಬ ಪ್ರೀತಿ, ಒಂದು ಚಿಪ್ಪಿನ ಹಂದಿಯನ್ನು ಮ್ಯೂಜಿಯಂಗೆ ಸಂಪಾದಿಸಲು ಅವನು ಏನೆಲ್ಲ ಶ್ರಮಪಟ್ಟ! ಬಸ್ಸಿನಲ್ಲಿ ತರುವಾಗ ಇದು ಪತ್ತೆಯಾಗದಂತೆ ಡ್ರೈವರ್ ಹತ್ತಿರ ನುಸುಳಿ ಹೋಗಿ ಅವನನ್ನು ಗಾಬರಿಪಡಿಸಿತ್ತು. ಬಸ್ಸಿನಲ್ಲಿದ್ದವರೆಲ್ಲ ಕಂಗಾಲಾಗಿ ಅದನ್ನೂ ಅದರ ಹುಚ್ಚು ಹಿಡಿದ ಸದಾಶಿವನನ್ನೂ ಶಪಿಸಿದರು. ಮಾರನೇ ರಾತ್ರಿ ಅದು ಅದರ ಸ್ವಧರ್ಮಕ್ಕೆ ತಕ್ಕಂತೆ ಲ್ಯಾಬೋರೇಟರಿಯ ಒಳ ಕೊಠಡಿಯಿಂದ ಬಾಗಿಲುಗಳನ್ನೆಲ್ಲ ತಳ್ಳಿ, ನುಗ್ಗಿ, ಗಾಜಿನ ಕಪಾಟುಗಳನ್ನೆಲ್ಲ ಕೆಡವಿ, ನೂರಾರು ರೂಪಾಯಿಗಳ ನಷ್ಟದ ಮಧ್ಯೆ ಯಾವುದರ ಪರಿವೆ ಇಲ್ಲದ ಅದು ತಾಳಿದ್ದ ಸ್ಥಿತಪ್ರಜ್ಞ ನಿಲುವನ್ನು ಬಾಗಿಲು ತೆರೆದಾಗ ನೋಡಿದ ಸದಾಶಿವ ಸೋಜಿಗದಿಂದ ನನಗೆ ವರ್ಣಿಸಿದ್ದ. ಬದುಕಿನ ರಂಪ, ನರಕಗಳ ನಡುವೆಯೂ ಈ ಹುಚ್ಚುಗಳಿಂದಾಗಿ ಅವನು ಮೀರಿ ನಿಲ್ಲುತ್ತಿದ್ದ. ಇವನು ದಿಕ್ಕೆಟ್ಟು ಮಂಕಾಗಿಬಿಟ್ಟಿದ್ದಾನೆ ಎಂದುಕೊಂಡರೆ ಏನಾದರೂ ಚುರುಕಾದ ಕೆಲಸ ಮಾಡಿಬಿಡುತ್ತಿದ್ದ. ಅಧಿಕಾರದಲ್ಲಿರುವವರಿಗೆ ಅಪ್ರಿಯವಾಗುವಂತೆ ನಡೆದುಕೊಳ್ಳುವ ಧೈರ್ಯವನ್ನು ಅವನು ಯಾವತ್ತೂ ಕಳೆದುಕೊಂಡಿರಲಿಲ್ಲ. ಎಮರ್ಜೆನ್ಸಿ ಬಗ್ಗೆ, ವಿಶ್ವವಿದ್ಯಾಲಯದ ಹಿರಿಯ ಸ್ಥಾನದಲ್ಲಿರುವ ಅವನ ಮಿತ್ರರಾಗಿದ್ದವರೊಬ್ಬರು ಆಡಿದ ಉಡಾಫೆ ಮಾತಿನ ಬಗ್ಗೆ, ಅವನು ಯಾವ ಎಗ್ಗಿಲ್ಲದೆ ಪ್ರತಿಭಟಿಸಿದ ರೀತಿ ಸದಾಶಿವನ ಮಾನಸಿಕ ಪರಿಸ್ಥಿತಿ ಗೊತ್ತಿದ್ದವರಿಗೆ ಆಶ್ಚರ್ಯದ ಘಟನೆಗಳು.

ತನ್ನಿಂದ ತಾನೇ ಬೆರಗಾಗಬಲ್ಲ ಲೇಖಕ ಸದಾಶಿವ. ಅವನು ಬರೆದ ‘ರಾಮನ ಸವಾರಿ ಸಂತೆಗೆ ಹೋದದ್ದು’ ಎಂಬ ಕಥೆಯಲ್ಲಿ (ಅಪರಿಚಿತರು ಸಂಕಲನ) ವಯಸ್ಕರ ರಂಪ ನರಕಗಳ ಮಧ್ಯೆ ತಬ್ಬಿಬ್ಬಾದ ಬಾಲಕ ರಾಮ ಇದ್ದಕ್ಕಿದ್ದಂತೆ ಗುಡ್ಡ ಇಳಿದು ಬರುವ ಜಿಂಕೆಯ ಹಿಂಡೊಂದನ್ನು ಕಂಡು ಮೈಮರೆಯುತ್ತಾನೆ. ಹೀಗೆ ‘ಇಹ’ವನ್ನು ಮೀರುವ ಘಳಿಗೆಗಳನ್ನು ಅನುರಣಿಸುವ ವಿವರಗಳನ್ನು ಎಷ್ಟು ಗಾಢವಾದ ಸಂಕಟದಲ್ಲೂ ಸದಾಶಿವ ಸಂಪಾದಿಸುತ್ತಾನೆಂದು ಗಮನಿಸಿದಾಗ ಸದಾಶಿವನ ಸಾಹಿತ್ಯ ವ್ಯಕ್ತಿತ್ವದ ರಹಸ್ಯ ಗೋಚರವಾಗುತ್ತದೆ. ಮೊದಮೊದಲು ಅವನ ಬರವಣಿಗೆಯಲ್ಲಿ ಪಾತ್ರಗಳು ಸುಲಭವಾಗಿ ಮೃದುವಾಗುವುದೇ ಕಥೆಯ ಬಿಕ್ಕಟ್ಟುಗಳಿಗೆಲ್ಲ ಪರಿಹಾರವಾಗಿ ಬಿಡುತ್ತಿತ್ತು. ಆದರೆ ಕ್ರಮೇಣ ಸದಾಶಿವ ಗಟ್ಟಿಯಾಗುತ್ತಾ, ಹೆಚ್ಚು ಗ್ರಹಿಸುತ್ತ ಜಟಿಲವಾಗುತ್ತಾ ಹೋದ – ಒರಟಾಗದೆ, ಮಾರ್ದವ ಕಳೆದುಕೊಳ್ಳದೆ, ಅವನ ‘ಹಾವು’ ‘ಪೋಸ್ಟ್‌ ಮಾರ್ಟಂ’ನಂಥ ಕಥೆಗಳನ್ನು ಉದ್ರೇಕವಿಲ್ಲದೆ, ಕಹಿಯಿಲ್ಲದೆ, ಕ್ರೂರವಾಗದೆ ಇದು ಬರಿ ಗೋಳು ಎನ್ನಿಸದಂತೆ ಬರೆಯಬಲ್ಲ ಸಮಕಾಲೀನ ಲೇಖಕರು ಅತ್ಯಂತ ವಿರಳ. ರಾಜಕೀಯವಾಗಿಯಾಗಲೀ ಪರಿಹಾರವೇ ಇಲ್ಲದಂತೆ ಬದುಕು ನರಕವಾಗಬಹುದು ಎಂಬುದನ್ನು ಕಾಣುವ ಎದೆಗಾರಿಕೆ ಅವನ ಬರವಣಿಗೆಯಲ್ಲಿ ಮಾತ್ರ ಇದೆ. ಅತ್ಯಂತ ಕ್ಷುಲ್ಲಕವಾದ್ದು ಈ ನಮ್ಮ ದೈವಿಕ ಸಾಧ್ಯತೆಯ ಮನುಷ್ಯ ಸಂಬಂಧಗಳಲ್ಲೆ ಹುಟ್ಟಿ, ಇದು ಯಾರ ತಪ್ಪೆಂದೂ ವಿವರಿಸಲಾರದ ರೀತಿಯಲ್ಲಿ ಇಡೀ ಬದುಕನ್ನೇ ಶುಷ್ಕಗೊಳಿಸಬಲ್ಲುದೆಂಬುದನ್ನು ಹೆಚ್ಚು ಹೆಚ್ಚು ತೀವ್ರವಾಗಿ ನೋಡುತ್ತ ಅವನು ಬದುಕಿದ – ಬರೆದ. ಇದನ್ನೆಲ್ಲ ನುಂಗಿ ಆಚಿನದನ್ನು ಕಾಣಿಸುವ ಹವಣಿಕೆಯಲ್ಲಿದ್ದಾಗಲೇ ಸತ್ತ. ಎಂಥ ಕಷ್ಟದಲ್ಲೂ ಇಂಗಿ ಹೋಗದ ಅವನ ಹುಡುಗಾಟವನ್ನು ಬಲ್ಲ ನನಗೆ ಸದಾಶಿವ ದಾಟಬಲ್ಲ, ಕಂಡದ್ದಕ್ಕಿಂತಲೂ ಆಚೆ ಕ್ರಮಿಸಬಲ್ಲ ಲೇಖಕನೆಂದು ನಂಬಿಕೆಯಿತ್ತು.

ಇಪ್ಪತ್ತು ವರ್ಷಗಳ ಹಿಂದೆ ಅವನ ಉಡುಪು, ಬಿಳಿಯ ಜುಬ್ಬ ಪೈಜಾಮ. ಅಡಿಗರು, ಆನಂದ, ಚದುರಂಗ, ಎಚ್‌.ಎಸ್‌.ಕೆ., ಸುಜನಾ, ರಾಘವ ಇತ್ಯಾದಿ ಸಾಹಿತಿಗಳನ್ನು ದಾಸಪ್ರಕಾಶದಲ್ಲಿ ಸೇರಿಸುತ್ತಿದ್ದ ಸಾಹಿತ್ಯ ಸಂಘದ ಕಾರ್ಯದರ್ಶಿ ಅವನು. ನನಗೆ ತುಂಬ ಕೊಬ್ಬು ಎಂದು ಅವನಿಗೆ ಅನುಮಾನ. ಈತ ಪತ್ರಕರ್ತನಂತೆ ಬರೆಯುತ್ತಾನೆ ಎಂದು ನನಗೆ ತಿರಸ್ಕಾರ. ನಿಜವೆಂದರೆ ಆಗ ನಾನು ಬರೆಯುತ್ತ ಇದ್ದದ್ದು ಕೃತಕವಾದ ಕಾವ್ಯಮಯ ಕಥೆಗಳನ್ನೇ: ಸದಾಶಿವ, ‘ನಲ್ಲಿಯಲ್ಲಿ ನೀರು ಬಂದಿತು’ ಎನ್ನುವಂಥ ಗಟ್ಟಿ ವಾಸ್ತವದ ಬೆನ್ನುಳ್ಳ ಕತೆಗಳನ್ನ. ಸದಾಶಿವನ ಮೆಚ್ಚಿನ ಲೇಖಕರು ಅಡಿಗ ಮತ್ತು ಕಾರಂತ. ಅಡಿಗರು ಸದಾಶಿವನ ಪ್ರತಿಭೆಯನ್ನು ಮೊದಲು ಗುರುತಿಸಿದವರು; ಅಭಿಮಾನದಿಂದ ನಂತರ ಅದನ್ನು ಬೆಳೆಸಿದವರು. ವೆಎನ್‌ಕೆ ‘ಪ್ರಶ್ನೆ’ಯ ಕಥೆಗಳನ್ನು ಬರೆಯುವಾಗ ಸದಾಶಿವನಲ್ಲಿ ನಾನು ಮನಸ್ಸಿಲ್ಲದ ಮನಸ್ಸಿನಿಂದ ಮೆಚ್ಚಿದ್ದನ್ನು ನನ್ನ ರೀತಿಯಲ್ಲೇ ಒಳಗೊಳ್ಳುವ ಪ್ರಯತ್ನ ಮಾಡಿದೆ. ಕಥನ ಕ್ರಿಯೆಗೆ ಕಾವ್ಯದ ಬಿಗಿ, ಆಳ ತರಬೇಕೆನ್ನುವ ನನ್ನ ಪ್ರಯತ್ನವನ್ನು ಸದಾಶಿವನಲ್ಲೂ ಆಮೇಲಿಂದ ಕಾಣಬಹುದು. ಕಾವ್ಯದ ಧ್ವನಿಯಾಗಲೀ ಒಳ ತಿರುವಾಗಲೀ ಇಲ್ಲದ ಕಥೆಗಳ ಶಕ್ತಿ ಅತ್ಯಂತ ಕಳಪೆಯಾದ ಕಲೆಯೆಂದು ನನಗಿರುವ ತಿರಸ್ಕಾರದ ದೃಷ್ಟಿ ಸದಾಶಿವನಿಗೂ ಇತ್ತು. ಬರಿದೇ ಕಥೆ ಕಟ್ಟುತ್ತ ಹೋಗುವುದೇ ದೊಡ್ಡ ಸಾಧನೆಯೆಂದು ತಿಳಿಯುವ ವಿಮರ್ಶಕರಿಗೆ ಸದಾಶಿವರಂಥವರ ಸಂಯಮದ ಬರವಣಿಗೆಯ ಬೆಲೆ ತಿಳಿಯಲಾರದು.

ಅನುಭವದ ದ್ರವ್ಯಕ್ಕೆ ಕಲೆ ಕೊಡುವ ರೂಪದಲ್ಲೆ ಬರಹಗಾರನ ಜೀವನದ ದೃಷ್ಟಿ ವ್ಯಂಜಿಸುತ್ತವೆ ಎಂಬುದನ್ನು ಸದಾಶಿವ, ಸಾಹಿತ್ಯವನ್ನು ವಿಶೇಷವಾಗಿ ಅಭ್ಯಾಸ ಮಾಡದೇ ಮೌನವಾಗಿ ತಿಳಿದಿದ್ದ. ಮಲೆನಾಡಿನ ಬಾಲ್ಯ ವಠಾರಗಳ ಬಡ ಮಧ್ಯಮ ವರ್ಗದ ಪರದಾಟ, ಸಣ್ಣತನ, ಔದರ್ಯ, ರಂಪ – ಇವು ಇನ್ನೂ ಹೆಚ್ಚನ್ನು ಹೊಳೆಯಿಸುವ ಕಂಪನ ಶಕ್ತಿ ಪಡೆಯುವಂತೆ ಸದಾಶಿವ ಹೆಣಗುತ್ತಿದ್ದ. ಅವನು ಮಾಡಿದ್ದಕ್ಕಿಂತ ಏನು ಮಾಡಬಲ್ಲವನಾಗಿದ್ದ ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡಾಗ ಆತನ ಸಾವಿನ ನಷ್ಟ ಇನ್ನಷ್ಟು ನಮ್ಮನ್ನು ನೋಯಿಸುತ್ತದೆ.

ಸಾಯುವ ದಿನ ಸದಾಶಿವ ಆಸ್ಪತ್ರೆ ಸೇರಿದವನೇ ನನಗೆ ಹೇಳಿಕಳಿಸಿದ. ವೈದ್ಯರ ಎಚ್ಚರಿಕೆಯನ್ನು ಉಡಾಫೆ ಮಾಡಿ ಅವನು ಆಸ್ಪತ್ರೆ ಸೇರುವಂತಾಯಿತು. ಅವನೇನಾದರೂ ಬದುಕಿ ಉಳಿದಿದ್ದರೆ ನಾನೂ ಅವನ ಹಿತೈಷಿಗಳೂ ಅವನನ್ನು ಬೈಯುತ್ತಿದ್ದೆವು. ಅವನ ಮೂರ್ಖತನವನ್ನು ಹೀಯಾಳಿಸುತ್ತಿದ್ದೆವು. ಆದರೆ ಎಷ್ಟೊಂದು ಆಸಕ್ತಿಗಳನ್ನು ಇಟ್ಟುಕೊಂಡೂ ಮೂಲತಃ ವ್ಯಾಮೋಹಿಯಾಗಿದ್ದೂ ಅವನು ಸಾವನ್ನು ಕೆಣಕಿದನಲ್ಲವೆ? ತಿಳಿದೂ ತಿಳಿದೂ ನಿರ್ಲಕ್ಷ್ಯದಿಂದ ಸತ್ತನಲ್ಲವೆ? – ಇದು ಸೋಜಿಗವೆನ್ನಿಸುತ್ತದೆ. ಮೊನ್ನೆ ಮೊನ್ನೆ ನಾವು ವಿನಾಕಾರಣ ನಕ್ಕಿದ್ದೆವು; ಒಬ್ಬರನ್ನೊಬ್ಬರು ಅಸೂಯೆ ಪಡಿಸುವ ಆಟವಾಡಿದ್ದೆವು; ಅವನು ಕಟ್ಟಬೇಕೆಂದಿದ್ದ ಮನೆಗೆ ನಾನು ಪ್ಲ್ಯಾನು ಸೂಚಿಸಿದ್ದೆ. ತನ್ನ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಡುವ ತನ್ನ ಮಕ್ಕಳ ಬಗ್ಗೆ ವ್ಯಾಮೋಹದಿಂದ ಮಾತಾಡಿದ್ದ; ತಾಯಿಯ ಖಾಯಿಲೆ ಬಗ್ಗೆ ಖೇದಗೊಂಡಿದ್ದ; ‘ರಾಮನ ಸವಾರಿ ಸಂತೆಗೆ ಹೋದದ್ದು’ ಸಿನಿಮಾ ಆದೀತೆ ಎಂದು ಆಸೆಪಟ್ಟಿದ್ದ – ಇತ್ಯಾದಿ ನೆನಪುಗಳು ನುಗ್ಗಿ ಬರುತ್ತವೆ. ಇಷ್ಟೊಂದು ಬದುಕುವ, ಬರೆಯುವ ಆಸೆ ಇಟ್ಟುಕೊಂಡೂ ಸದಾಶಿವ ಸತ್ತನಲ್ಲ – ಇದರಿಂದ ನಷ್ಟವೆನ್ನಿಸುತ್ತದೆ – ದುಃಖವಾಗುತ್ತದೆ.

ಅವನ ಸಾವಿನಿಂದ ನಾನು ಬಡವಾಗಿದ್ದೇನೆ.

* * *