ಪಾವೆಂ ಬಗ್ಗೆ ಕೆಲವು ಮಾತುಗಳನ್ನು ಬರೆಯಲೆ ಎಂದು ನಾನಾಗಿಯೇ ಜಿ.ಟಿ. ನಾರಾಯಣರಾಯರನ್ನು ಕೇಳಿಕೊಂಡೆ. ಅವರು ಸಂತೋಷದಿಂದ ಒಪ್ಪಿದರು. ಈಗ ಬರೆಯಲು ಕೂತಾಗ ಅನ್ನಿಸುತ್ತೆ: ನಾನು ಪಾವೆಂ ಆಚಾರ್ಯರನ್ನು ಭೆಟ್ಟಿಯಾದದ್ದು ಮೂರೋ ನಾಲ್ಕೋ ಬಾರಿ ಮಾತ್ರ. ಹೆಚ್ಚಾಗಿ ಅವರ ಬರವಣಿಗೆಯಿಂದ ನನಗೆ ಅವರ ಪರಿಚಯ. ಆದರೂ ಯಾಕೆ ವೈಯಕ್ತಿಕವಾಗಿ ಅವರ ಬಗ್ಗೆ ಬರೆಯಬೇಕೆಂದು ನನಗೆ ಅನ್ನಿಸಿತೆಂದರೆ ನನಗೆ ಅವರ ಬಗ್ಗೆ ಇರುವ ಗೌರವ. ಕನ್ನಡದ ಪತ್ರಕರ್ತರಲ್ಲಿ ನಾನು ಪ್ರೀತಿಸುವ ಉತ್ಸಾಹ ಪಡುವ ಎರಡು ಮೂರು ಜನರಲ್ಲಿ ಪಾವೆಂ ಮೊದಲನೆಯವರು.

ಪಾವೆಂ ಬಿಚ್ಚುಮನಸ್ಸಿನ ಮನುಷ್ಯ ಎನ್ನುವುದು ನನಗೆ ಖಾತ್ರಿಯಾದ್ದು ಅವರು ಬ್ರಾಹ್ಮಣ ಬಗ್ಗೆ ‘ಕಸ್ತೂರಿ’ಯಲ್ಲಿ ಹಿಂದೊಮ್ಮೆ ಬರೆದಿದ್ದನ್ನು ಓದಿದಾಗ. ಕನ್ನಡದ ಕೆಲವು ಲೇಖಕರು ಜಾತಿಯ ಬಗ್ಗೆ ಪ್ರಶ್ನೆಯನ್ನು ಎತ್ತಿದ ಕ್ರಮ ಸಮಾಜಶಾಸ್ತ್ರದ ದೃಷ್ಟಿಯಿಂದಲೂ ಸಾಹಿತ್ಯದ ದೃಷ್ಟಿಯಿಂದಲೂ ಉಪಯೋಗಕ್ಕೆ ಬಾರದಂತೆ ವ್ಯಕ್ತಿನಿಂದೆ ಮತ್ತು ಅಪಪ್ರಚಾರಗಳಲ್ಲಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ಪಾವೆಂ ಆಚಾರ್ಯರು ವಿಚಲಿತರಾಗದೆ ಬ್ರಾಹ್ಮಣರನ್ನು ಹೇಗೆ ಎಸೆದರೂ ಕಾಲಿನ ಮೇಲೆ ನೆಲ ತಲುಪುವ ಬೆಕ್ಕಿಗೆ ಹೋಲಿಸಿ ತಮ್ಮನ್ನು ತಾವೇ ಪರೀಕ್ಷಿಸಿಕೊಂಡಿದ್ದರು. ಈಚೆಗೆ ಅವರು ಅಡಿಗರ ಕಾವ್ಯದ ಮೇಲೆ ಬರೆದ ಲೇಖನ ಅಡಿಗರ ಕಾವ್ಯದ ವಿಮರ್ಶೆಯನ್ನು ಹೊಸ ದಿಕ್ಕಿಗೆ ತಿರುಗಿಸಬಲ್ಲ ಸೂಚನೆಗಳನ್ನು ಒಳಗೊಂಡಿದೆ. ಬಿಚ್ಚುಮನಸ್ಸಿನ ಜೊತೆ ಸೂಕ್ಷ್ಮತೆಯಿದ್ದವರು ಮಾತ್ರ ಬರೆಯಬಲ್ಲ ಲೇಖನಗಳು ಇವು. ಅಲ್ಲದೆ, ಬರೆಯುವುದಕ್ಕೆ ಕಲಿತ ಮೇಲೆ ಪ್ರತಿದಿನವೂ ಏನನ್ನಾದರೂ ಹೊಸೆಯುತ್ತಲೇ ಇರಬೇಕಾದ ಪತ್ರಕರ್ತನೊಬ್ಬ ಎಚ್ಚರಿಕೆಯಿಂದ ಬರೆಯುವ, ತನ್ನ ಮನಸ್ಸನ್ನು ನೋಡಿಕೊಳ್ಳುವ, ಸೂಕ್ಷ್ಮಗಳನ್ನು ಕಾಣಿಸುವ ಶಕ್ತಿಯನ್ನು ಪಾವೆಂ ಈ ವಯಸ್ಸಿನಲ್ಲೂ ಉಳಿಸಿಕೊಂಡಿರುವುದು ಆಶ್ಚರ್ಯವಲ್ಲವೆ?

ವಿಸ್ಮಯ ಮತ್ತು ಅನುಮಾನ – ಈ ಎರಡು ಶಕ್ತಿಗಳನ್ನೂ ಕೂಡಿಸಿಕೊಂಡವರನ್ನು ಕಂಡರೆ ನನಗೆ ಆಶ್ಚರ್ಯ. ಬರಿ ವಿಸ್ಮಯದ ಭೋಳೆ ಸ್ವಭಾವದ ಜನ ತಮ್ಮ ಶಕ್ತಿ ಉತ್ಕಟವಾಗಿದ್ದಾಗ ಅನುಭವದ ತನ್ಮಯತೆಯನ್ನು ಉಂಟುಮಾಡಬಲ್ಲ ಕೃತಿಗಳನ್ನು ಕೊಟ್ಟಾರು; ಉಳಿದ ಸಮಯ ಇವರ ಮಾತುಗಳು ಬರೀ ಊದಿಕೊಂಡಿರುತ್ತವೆ. ಅನುಮಾನ ಮಾತ್ರ ಸಾಧ್ಯವಿರುವ ಸಿನಿಕರು ಭಾಷೆಯನ್ನು ಕುಹಕಕ್ಕಾಗಿ ಬಳಸುವಾಗ ಚುರುಕಾಗಿ ರುಚಿಯಾಗಿ ಬರೆಯುತ್ತಾರೆ ಜನ. ಆದರೆ ಇಂಥವರು ಏನನ್ನು ಕಂಡಾರು? ಕಾಣಿಸಿಯಾರು? ಪರಚುವ, ಪರಚಿಕೊಳ್ಳುವ ಇವರ ಸುಖ ಕೊನೆಗೂ ದೊಡ್ಡ ಬೋರೇ ಸರಿ. ನನ್ನ ವಾರಿಗೆಯವರಿಗೆ ತಂದೆಯಾಗಬಹುದಾದ ವಯಸ್ಸಿನ ಪಾವೆಂ ತಮ್ಮ ವಿಚಾರದಲ್ಲಿ ಬರವಣಿಗೆಯಲ್ಲಿ ವಿಸ್ಮಯ ಮತ್ತು ಅನುಮಾನ, ಗಾಂಭೀರ್ಯ ಮತ್ತು ಹಾಸ್ಯ ಒಟ್ಟಾಗಿ ಉಳಿಸಿಕೊಂಡು ಬಂದದ್ದು ನೋಡಿದರೆ ನನಗೆ ಅವರ ಬಗ್ಗೆ ತುಂಬ ಅಭಿಮಾನವೆನ್ನಿಸುತ್ತದೆ. ಪಾಂಪಸ್ ಆಗದಂತೆ ಪಕ್ವವಾಗುತ್ತ ಹೋಗುವ ಗದ್ಯ ಬರೆಯಬಲ್ಲ ಪಾವೆಂ ಆಚಾರ್ಯರಂಥವರು ಮಾತ್ರ ಹಿರಿಯರಾದರೂ ನಮಗೆ ಗೆಳೆಯರಾಗಿ ಉಳಿಯಬಲ್ಲ ಸೋಜಿಗದ ವ್ಯಕ್ತಿಗಳಾಗುತ್ತಾರೆ.

ಪಾ.ವೆಂ. ಕಸ್ತೂರಿ; ಸನ್ಮಾನ ಸಂಚಿಕೆ ೧೯೭೭

* * *