ಶ್ರೀ ಅನಂತಮೂರ್ತಿ ಅವರ ‘ಸಮಕ್ಷಮ’ ಮತ್ತು ‘ಸನ್ನಿವೇಶ’ ಕೃತಿಗಳನ್ನು ಅಭಿನವ ಪುನರ್ ಮುದ್ರಿಸುತ್ತಿದೆ. ಹಿಂದೆ ಈ ಪುಸ್ತಕಗಳನ್ನು ಹೆಗ್ಗೋಡಿನ ಅಕ್ಷರ ಪ್ರಕಾಶನ ಪ್ರಕಟಿಸಿತ್ತು. ಈ ಕೃತಿಗಳನ್ನು ಪುನಃ ಪ್ರಕಟಿಸಲು ಅನುಮತಿ ನೀಡಿದ ಶ್ರೀ ಯು.ಆರ್. ಅನಂತಮೂರ್ತಿ ಅವರನ್ನು ಮತ್ತು ಕೆ.ವಿ. ಅಕ್ಷರ ಅವರನ್ನು ಕೃತಜ್ಞತಾ ಪೂರ್ವಕವಾಗಿ ವಂದಿಸುತ್ತೇನೆ.

ಸಾಹಿತ್ಯ ಕಲಿಸಬಹುದಾದದ್ದು ಅಥವಾ ಕಲಿಸಬೇಕೆಂದು ಬಯಸುವ ವಿನಯವಂತಿಕೆ ಮತ್ತು ಮಾನವೀಯ ಸ್ಪಂದನಕ್ಕೆ ಸುಬ್ಬಣ್ಣ ಉದಾಹರಣೆಯಾಗಿದ್ದವರು. ಅಷ್ಟೇ ಅಲ್ಲ ತಮ್ಮ ಸುತ್ತಲಿನ ಅನೇಕರನ್ನು ಹಾಗಿರುವಂತೆ ಮಾಡಿದವರು. ಇವರಿಂದ ತರಬೇತಾದ, ಅಥವಾ ಸಂಪರ್ಕಕ್ಕೆ ಬಂದ ಹಲವರು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನಾಟಕ, ಸಂಗೀತ, ಸಿನಿಮಾ, ಸಾಹಿತ್ಯ ಕುರಿತಂತೆ ಸುಬ್ಬಣ್ಣನವರ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪ್ರಕಾಶನದ ಕೆಲಸದಲ್ಲಿ ಅಷ್ಟೆ. ಅಕ್ಷರ ಪ್ರಕಾಶನ ಪುಸ್ತಕ ಪ್ರೀತಿಯನ್ನು ಬೆಳೆಸುವ, ಅಭಿರುಚಿಯನ್ನು ತಿದ್ದುವ ಕೆಲಸವನ್ನು ಮುಂದುವರೆಸಿದೆ. ಅಗ್ಗದ ಜನಪ್ರಿಯತೆಗೆ ಅಥವಾ ಹಣ ಮಾಡುವ ದಂದೆಗೆ ಇಳಿಯದೆ, ಅಧಿನಾಯಕನಂತೆ ಮರೆಯದೆ ತನ್ನ ಕೆಲಸವನ್ನು ತನ್ನ ಪಾಡಿಗೆ ತಾನು ಮುಂದುವರೆಸಿದೆ.

*

ಇಲ್ಲಿನ ಲೇಖನಗಳಲ್ಲಿ ಪ್ರಕಟವಾಗಿರುವ ವಿಚಾರಗಳು, ವಿವರಗಳು ಸಾಕಷ್ಟು ಬದಲಾಗಿವೆ ಅಥವಾ ಹೊಸ ನೆಲೆಗಳಲ್ಲಿ ತನ್ನ ಅರ್ಥವಂತಿಕೆಗಳನ್ನು ಕಂಡುಕೊಂಡಿವೆ. ಆದರೆ ಒಬ್ಬ ಸೃಜನಶೀಲ ಲೇಖಕ ಕಾಲದಿಂದ ಕಾಲಕ್ಕೆ ಬದಲಾಗುತ್ತಾ, ಬೆಳೆಯುತ್ತಾ ಬಂದುದನ್ನು ಅಭ್ಯಾಸಿಸಲು ಈ ಲೇಖನಗಳು ಸಹಾಯಕ. ಹೇಳಿದ್ದನ್ನೇ ಹೇಳುತ್ತಿದ್ದರೆ ‘ಕಿಸುಬಾಯಿ ದಾಸ’ನಂತಲೂ, ಮತ್ತೆ ಮತ್ತೆ ಬದಲಾಗುತ್ತಿದ್ದರೆ ‘ಅವಕಾಶವಾದಿ’ಯಂತಲೂ ಕರೆದುಬಿಡುವ ಈ ಕಾಲದಲ್ಲಿ ತನಗೆ ಅನ್ನಿಸಿದ್ದನ್ನು ಯಾವ ಮುಲಾಜೂ ಇಲ್ಲದೆ ಹೇಳಿಯೇ ಹೇಳುತ್ತೇನೆ ಎನ್ನುವ ಜಾಯಮಾನದ ಲೇಖಕರು ಮಾತ್ರ ತಮ್ಮ ಆತ್ಮನಿಷ್ಠೆಗೆ ಬದ್ಧರಾಗಿರುತ್ತಾರೆ. ಆ ಆತ್ಮನಿಷ್ಠೆ ಎನ್ನುವುದು ಕೂಡಾ ಸ್ಥಾವರವೂ ಜಂಗಮವೂ ಆಗಿರುವಂಥದು. ಹೀಗಾಗಿ ಬರವಣಿಗೆಯನ್ನುವುದು ಕೇವಲ ಆ ಕಾಲದ ಪ್ರತಿಕ್ರಿಯೆ ಮಾತ್ರವಲ್ಲ. ಮನುಕುಲದ ಚರಿತ್ರೆಯನ್ನು ಅರಿಯುವ ಸಾಮಗ್ರಿ ಕೂಡ ಆಗಿರುತ್ತದೆ. ಹೀಗಾಗಿ ಒಬ್ಬ ಲೇಖಕನ ವಿಚಾರಗಳು ಮತ್ತೆ ಮತ್ತೆ ಚರ್ಚೆಗೆ, ವಾಗ್ವಾದಕ್ಕೆ ಒಳಗಾಗುತ್ತಿರಬೇಕಾಗುತ್ತದೆ. ಕೆಲವೊಮ್ಮೆ ದಾರಿಯೂ, ದೀಪವೂ ಆಗಬಹುದು. ಈ ಹಿನ್ನೆಲೆಯಲ್ಲಿ ಅನಂತಮೂರ್ತಿಯಂಥವರ ಕೃತಿಗಳು ಸದಾ ಮಾರುಕಟ್ಟೆಗಳಲ್ಲಿ ಲಭ್ಯವಿರಬೇಕೆಂದು ಹೇಳುತ್ತಾ ಮತ್ತು ನೋಡಿಕೊಂಡ ಸುಬ್ಬಣ್ಣನವರ ಕಳಕಳಿ ಅನುಪಮವಾದುದು. ಅದು ಒಬ್ಬ ಲೇಖಕನ ಭಾಗ್ಯ ಕೂಡ.

ನ. ರವಿಕುಮಾರ
ಅಭಿನವದ ಪರವಾಗಿ