‘ಸಮಕ್ಷಮ’ವು ಮೂರನೆಯ ಮುದ್ರಣವನ್ನು ಕಾಣುವ ಅದೃಷ್ಟ ನನ್ನದಾಗಿದೆ. ಈ ಪುಸ್ತಕದಲ್ಲಿ ನನಗೆ ಮುಖ್ಯವಾದ ಕೆಲವು ಲೇಖನಗಳಿವೆ. ಕಾರಂತರ ಸಂದರ್ಶನವಿದೆ. ರಾಜೀವ ತಾರಾನಾಥರ ಜೊತೆಗಿನ ಮಾತುಕತೆ ಇದೆ.

ಗೆಳೆಯ ಸದಾಶಿವ, ಹಿರಿಯರಾದ ಪಾವೆಂ ಬಗ್ಗೆ ಲೇಖನಗಳಿವೆ. ಹಿರಿಯರಾದ ಮಾಸ್ತಿಯವರ ಬಗ್ಗೆ, ನನಗಿಂತ ವಯಸ್ಸಿನಲ್ಲಿ ಕಿರಿಯರಾದ ಶ್ರೀಕೃಷ್ಣ ಆಲನಹಳ್ಳಿ ಬಗ್ಗೆ, ಜೊತೆಗೆ, ನಮ್ಮ ಕಾಲದ ಸಾಹಿತ್ಯಕ ಚರಿತ್ರೆಯನ್ನು ಬರೆಯಲು ಅಗತ್ಯವಾಗಬಹುದಾದ ಒಕ್ಕೂಟ, ಬೂಸಾ ಪ್ರಕರಣ, ಜಾತಿವಿನಾಶ ಹೀಗೆ ಹಲವಾರು ವಿಷಯಗಳ ಬಗ್ಗೆ ಲೇಖನಗಳು ಇವೆ. ಇಂಥಹ ಲೇಖನಗಳ ಮುಖಾಂತರವೇ ನಾನು ಕೆಲವೊಮ್ಮೆ ಬದಲಾಗುತ್ತಾ, ಕೆಲವೊಮ್ಮೆ ಬೆಳೆಯುತ್ತಾ ಹೋಗಿದ್ದೇನೆಂದು ತಿಳಿಯುತ್ತೇನೆ. ‘ಸಮಕ್ಷಮ’ ಎನಿಸುವಂತಹ, ನೇರವಾದ ಮಾತುಗಳೆನಿಸುವ ವಿಚಾರಗಳನ್ನು ಮಂಡಿಸಲು ಎಂಬತ್ತರ ದಶಕದಲ್ಲಿಯೇ ಕಲಿಯಲು ಶುರುಮಾಡಿದ್ದೆ ಎನ್ನುವುದು ನನಗೇ ದಶಕದಲ್ಲಿಯೇ ಕಲಿಯಲು ಶುರುಮಾಡಿದ್ದೆ ಎನ್ನುವುದು ನನಗೇ ಆಶ್ಚರ್ಯ ತಂದಿದೆ. ಅಷ್ಟೇ ಅಲ್ಲ ಆ ದಿನಗಳ ನೆನಪುಗಳು ಮರುಕಳಿಸುವಂತೆ ಮಾಡಿವೆ.

ಅಕ್ಷರ ವಿನ್ಯಾಸ ಮಾಡಿದ ಶ್ರೀಧರ್ ಅವರನ್ನು, ಅರ್ಥಪೂರ್ಣ ಮುಖಪುಟ ವಿನ್ಯಾಸಗೊಳಿಸಿದ ದೇವರಾಜ್ ಅವರನ್ನು, ಅಚ್ಚಿನ ಮನೆಯ ಹೂವಪ್ಪ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ.

ಯು.ಆರ್.ಅನಂತಮೂರ್ತಿ
ಬೆಂಗಳೂರು.
೧೪ – ೧೧ – ೨೦೦೯