ಶ್ರೀ ಬಸವಲಿಂಗಪ್ಪನವರನ್ನು ಬೆಂಬಲಿಸಿ ಈ ಎರಡೂ ಪತ್ರಗಳನ್ನು ನಾನು ಬರೆದದ್ದು. ಮೊದಲನೇ ಪತ್ರವನ್ನು ಪ್ರಕಟಣೆಗೆಂದು ‘ಪ್ರಜಾವಾಣಿ’ಗೆ ಕಳುಹಿಸಿದೆ. ಆದರೆ ಅದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಲಿಲ್ಲ. ಕೆಲವು ದಿನಗಳ ನಂತರ ಮಡಿಕೇರಿಯಲ್ಲಿ ನಡೆದ ಲಯನ್ಸ್ ಸಂಸ್ಥೆಯ ರೀಜನಲ್ ಸಮ್ಮೇಳನವನ್ನು ಉದ್ಘಾಟಿಸಲು ನನ್ನನ್ನು ಕರೆಯಲಾಯಿತು. ನಾನು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಶ್ರೀ ಬಸವಲಿಂಗಪ್ಪನವರನ್ನು ಬೆಂಬಲಿಸಿ ಮಾತಾಡಿದೆ. ಈ ಮಾತುಗಳು ಎಲ್ಲ ಪತ್ರಿಕೆಗಳಲ್ಲೂ ವರದಿಯಾದುವು. ಆಗ ನನ್ನನ್ನು ಖಂಡಿಸಿ ಪ್ರಕಟವಾದ ಪತ್ರಗಳಿಗೆ ಉತ್ತರವಾಗಿ ಬರೆದ ಎರಡನೇ ಪತ್ರ ಸಂಕ್ಷೇಪ ರೂಪದಲ್ಲಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಯಿತು.

ಈ ಬೂಸಾ ಪ್ರಕರಣದ ಹಿನ್ನೆಲೆಯನ್ನಿಲ್ಲಿ ನಾನು ದೀರ್ಘವಾಗಿ ಕೊಡಬೇಕಿಲ್ಲವೆಂದು ಭಾವಿಸುವೆ. ಕನ್ನಡದ ಹೆಚ್ಚಿನ ಸಾಹಿತ್ಯವೆಲ್ಲವೂ ಮತ ಧರ್ಮಕ್ಕೆ ಸೇರಿದ್ದು. ಆದ್ದರಿಂದ ಈ ಸಾಹಿತ್ಯ ಬೂಸಾ ಇದ್ದಂತೆ ಎಂದು ಬಸವಲಿಂಗಪ್ಪ ಮೈಸೂರಿನ ಸಭೆಯೊಂದರಲ್ಲಿ ಹೇಳಿದರೆಂದು ಪ್ರಕಟವಾದ ಸುದ್ದಿಯಿಂದ ಇಡೀ ಕರ್ನಾಟಕದಲ್ಲಿ ದೊಡ್ಡ ಚಳವಳಿ ನಡೆಯಿತು. ಪರಿಣಾಮವಾಗಿ ಶ್ರೀ ಬಸವಲಿಂಗಪ್ಪ ಮಂತ್ರಿ ಪದವಿ ಕಳೆದುಕೊಂಡರು; ದಲಿತ ಯುವಕರಲ್ಲಿ ಈ ಪ್ರಕರಣ ಜಾಗೃತಿಗೆ ಕಾರಣವಾಯಿತು.

ಮುಂದೆ ಪ್ರಕಟವಾಗಿರುವ ‘ಸಮಾಜ ಕ್ರಾಂತಿ ಮತ್ತು ಕನ್ನಡ ಸಾಹಿತ್ಯ’ – ಎಂಬ ನನ್ನ ಭಾಷಣವನ್ನು ಕೂಡ ಈ ಹಿನ್ನೆಲೆಯಲ್ಲಿ ಓದಬೇಕು.

(ಅಪ್ರಕಟಿತ ಪತ್ರ)
ಪ್ರಜಾವಾಣಿ ಸಂಪಾದಕರಿಗೆ –

ಸ್ವಾಮಿ,

ಕನ್ನಡ ಸಾಹಿತ್ಯದ ಹಲವು ಕೃತಿಗಳ ಬಗ್ಗೆ ಸಾಹಿತ್ಯ ವಿಮರ್ಶಕನಾಗಿ ಶ್ರೀ ಬಸವಲಿಂಗಪ್ಪನವರು ಮಾಡಿದರೆನ್ನುವ ಟೀಕೆಯನ್ನು ಮಾಡಬಹುದಿತ್ತು; ಮಾಡಿದ್ದೇನೆ ಕೂಡ. ಆದರೆ ಬಸವಲಿಂಗಪ್ಪನವರ ಬಗ್ಗೆ ಯಾವ ಈ ಆಕ್ರೋಶ? ಪಂಚಮರಿಗೆ ಸಂಸ್ಕೃತಿಯ ಬಗ್ಗೆ ಮಾತನ್ನಾಡುವ ಅಧಿಕಾರವಿಲ್ಲವೆನ್ನುವ ಭಾವನೆ ನಮ್ಮಲ್ಲಿನ್ನೂ ಅಡಗಿದೆಯೆ?

ಮುಸ್ಲಿಮರು ನಮ್ಮ ದೇಶದ ಪ್ರಜೆಗಳಾದರೂ ಸಹ ಭಾರತೀಯ ಸಂಸ್ಕೃತಿಯನ್ನು ನಿರ್ಭಯವಾಗಿ ಅವರು ಟೀಕಿಸುವುದಿಲ್ಲ. ಇದಕ್ಕೆ ಪ್ರಾಯಶಃ ಕಾರಣ ತಾವು ಹೊರಗಿನವರು ಎಂಬ ಭಾವನೆ ಅವರಿಗಿನ್ನೂ ಇದೆ ಎಂಬುದು. ಈ ಭಾವನೆಗೆ ನಾವೆಷ್ಟು ಕಾರಣ, ಅವರೆಷ್ಟು ಕಾರಣ ಎಂಬುದು ಈಗ ಅಪ್ರಸ್ತುತ. ಮುಖ್ಯವಾದ ವಿಷಯ: ನಮ್ಮ ಒಳಗಿನವನು ತಾನು ಬದುಕುತ್ತಿರುವ ಪರಿಸರಕ್ಕೆ ಪ್ರತಿಕ್ರಿಯಿಸುತ್ತಾನೆ; ಟೀಕೆ ಕೂಡ ಇಂಥ ಪ್ರತಿಕ್ರಿಯೆ. ಪಂಚಮರು ನಮ್ಮ ಒಳಗಿನವರು; ಹಾಗೆಯೇ ಅವರು ವರ್ತಿಸುತ್ತಿದ್ದಾರೆ; ಅವರ ಈ ಬಂಡಾಯ ಸೃಜನಶೀಲವಾಗಲು ಅವಶ್ಯ. ಪಂಚಮರಿಗೆ ಈ ದೇಶ ಬಿಟ್ಟರೆ ಬೇರೆ ದೇಶವಿಲ್ಲ. ತಮಗೊಂದು ಪ್ರತ್ಯೇಕ ದೇಶ ಬೇಕೆಂದು ಕೂಡ ಅವರು ಕೇಳುತ್ತಿಲ್ಲ. ಸವರ್ಣೀಯರ ನಡುವೆ ನಿಂತು ಸಮಾನತೆಗಾಗಿ ಹೋರಾಡುತ್ತಿದ್ದಾರೆ. ಅವರ ಸಿಟ್ಟು, ಅವರ ನೋವು, ಅವರ ಟೀಕೆ ಇನ್ನೂ ಬಂಧುಗಳ ನಡುವಿನ ಜಗಳದಂತೆಯೇ ಇದೆ. ಆದರೆ ಸವರ್ಣೀಯರ ಸಣ್ಣತನ ಶೂದ್ರರಿಗೆ ವೇದಾಧಿಕಾರವಿಲ್ಲವೆನ್ನುವ ಗೊಡ್ಡುತನವನ್ನು ನೆನಪಿಗೆ ತರುವಂತಿದೆ.

ಪ್ರಸ್ತುತ ವ್ಯವಸ್ಥೆ ಅಧಿಕಾರಕ್ಕೆ ತಂದ ಮಂತ್ರಿಮಂಡಳದಲ್ಲಿದ್ದು ಬಸವಲಿಂಗಪ್ಪನವರು ಆಡುವ ಮಾತುಕತೆಗಳು ಬಾಯಿ ಚಪಲ ತೀರಿಸಿಕೊಳ್ಳುವ ಕ್ರಿಯೆಯಾಗಿಬಿಡುವ ಅಪಾಯವಿದೆ. ಆದರೆ ಇಡೀ ಮಂತ್ರಿಮಂಡಳದಲ್ಲಿ ಅವರಷ್ಟು ಧೈರ್ಯವಾಗಿ ಮೂಲಭೂತ ಪ್ರಶ್ನೆಗಳನ್ನು ಎತ್ತಬಲ್ಲವರು ಯಾರು ಇದ್ದಾರೆ?

ನಿಮ್ಮವ,
ಯು.ಆರ್. ಅನಂತಮೂರ್ತಿ

ವಾಚಕರ ವಾಣಿ ವಿಭಾಗಗಳು

ಸ್ವಾಮಿ,

ನಾನು ಮಡಿಕೇರಿಯಲ್ಲಿ ಮಾಡಿದ ಭಾಷಣದ ಸಾರಾಂಶ ಮತ್ತು ಈ ಬಗ್ಗೆ ನನ್ನ ವಿವರಣೆಯನ್ನು ವರದಿಯ ಆಧಾರದ ಮೇಲೆ ಬಂದ ಟೀಕೆಗಳಿಗೆ ಉತ್ತರವಾಗಿ ಕೊಡುತ್ತಿದ್ದೇನೆ.

ಇತಿಹಾಸ ಚಕ್ರವಿದ್ದಂತೆ ಈ ಚಕ್ರದ ಮೇಲಿನ ತುದಿಯಲ್ಲಿ ಶ್ರೀಮಂತರಿದ್ದಾರೆ. ಬುಡದಲ್ಲಿ ಏನೂ ಇರದವರು ಇದ್ದಾರೆ. ನಡುವಿನ ಭಾಗಗಳಲ್ಲಿ ನಮ್ಮಂತ ಮಧ್ಯಮ ವರ್ಗಿಗಳು ಇದ್ದೇವೆ. ಹೇಗೆ ಚಕ್ರ ಉರುಳಿದರೂ ಬುಡದಲ್ಲಿರುವವರು ಮೇಲಕ್ಕೇರುತ್ತಾರೆ; ಮೇಲಿನವರು ಕೆಳಗಿಳಿಯುತ್ತಾರೆ. ಆದ್ದರಿಂದ ಸಹಜವಾಗಿ ಈ ಚಕ್ರದ ಚಲನೆಗೆ ಕೆಳಗಿರುವವರು ಸಿದ್ಧರಾಗುತ್ತಾರೆ; ಮೇಲಿನವರು ಚಲನೆಯಾಗದಂತೆ ರಾಜಕೀಯ ಮಾಡುತ್ತಾರೆ. ಚಕ್ರ ಚಲಿಸಿದಲ್ಲಿ ಮಧ್ಯೆ ಇರುವ ನಮ್ಮಂಥದವರು ಮೇಲಾಗಲೀ ಕೆಳಗಾಗಲೀ ಹೋಗಬಹುದಾದ್ದರಿಂದ ಚಲನೆಯೆಂದರೆ ನಮಗೆ ದಿಗಿಲು. ಆದರೆ ತಮ್ಮ ವರ್ಗಹಿತವನ್ನು ಕಡೆಗಣಿಸಿ ನಿರ್ಲಿಪ್ತ ಧೈರ್ಯದಿಂದ ಇತಿಹಾಸ ಚಕ್ರದ ಚಲನೆಗೆ ಕೈಹಚ್ಚಬಲ್ಲ ಮಧ್ಯಮ ವರ್ಗವಿದ್ದರೆ ಮಾತ್ರ ಲಿಬರಲ್ ಮನೋಧರ್ಮದ ಪ್ರಜಾತಂತ್ರ ಯಶಸ್ವಿಯಾದೀತು. ಇಲ್ಲವಾದಲ್ಲಿ ಚಕ್ರದ ಬುಡದಲ್ಲಿರುವವರು ಉಗ್ರಗಾಮಿಗಳಾಗಲೇಬೇಕಾಗುತ್ತದೆ. ಯಾಕೆಂದರೆ ಚಲನೆಯಿಲ್ಲದೆ ಜೀವಂತಿಕೆಯಿಲ್ಲ; ಬದುಕು ಸೃಷ್ಟಿಶೀಲವಾಗುವುದಿಲ್ಲ.

ನಮ್ಮ ಇತಿಹಾಸದುದ್ದಕ್ಕೂ ದನಮಕ್ಕೊಳಗಾದ ಪಂಚಮರು ಈಗ ಎಚ್ಚರಾಗುತ್ತಿದ್ದಾರೆ. ಉದ್ವಿಗ್ನರಾಗಿ ಮಾತಾಡುತ್ತಿದ್ದಾರೆ. ಇದನ್ನು ಸಹಿಸುವುದಕ್ಕೆ ಕೂಡ ಸವರ್ಣೀಯರು ಸಿದ್ಧರಿಲ್ಲ. ಆದರೆ ಪಂಚಮರ ಉದ್ವಿಗ್ನತೆಯಲ್ಲಿ ಅವರ ವಿಮೋಚನೆ ಮಾತ್ರವಲ್ಲದೆ ನಮ್ಮ ವಿಮೋಚನೆಯನ್ನು ಸಾಧಿಸಬಲ್ಲ ಶಕ್ತಿ ಅಡಗಿದೆ. ಬಹುಪಾಲು ಶೂದ್ರರನ್ನು ಪಡೆದ ನಮ್ಮ ಸಮಾಜದ ಬ್ರಾಹ್ಮಣರು ಅಂತರಾಷ್ಟ್ರೀಯ ವಲಯದಲ್ಲಿ ಶೂದ್ರರೆಂಬುದನ್ನು ಮರೆಯಕೂಡದು. ಮಾನವಶಕ್ತಿಯ ಅಪವ್ಯಯ, ನಮ್ಮ ಇಡೀ ದೇಶದ ಬಡತನಕ್ಕೆ ಕಾರಣ ಜಾತಿ ಪದ್ಧತಿ ನಮ್ಮೆಲ್ಲರ ಸೃಷ್ಟಿಶೀಲತೆಗೆ ಕಟ್ಟುಗಳನ್ನು ಹಾಕಿರುವುದೇ ಆಗಿದೆ. ಅಂದರೆ ಜಾತಿ ಪದ್ಧತಿ ನಾಶವಾದರೆ ಮಾತ್ರವೇ ದೇಶಕ್ಕೆ ಹೊರಗಡೆ ಗೌರವವೂ ದೇಶದ ಒಳಗಡೆ ವಿಕಾಸವೂ ಸಾಧ್ಯ.

ನಮ್ಮದು ಎರಡು ಬಗೆಯ ಮನೋವೃತ್ತಿ. ಅಮೂರ್ತ ತತ್ತ್ವವಾದ ಬಂಡಾಯವನ್ನು ನಾವು ಒಪ್ಪುತ್ತೇವೆ. ಬಸವಲಿಂಗಪ್ಪನವರಂಥ ಪರಿಮಿತ ರಾಜಕಾರಣದ ಬಂಡಾಯಗಾರರನ್ನು ಕೂಡಾ ನಿಜ ಜೀವನದಲ್ಲಿ ಕಂಡಾಗ ಮಾತ್ರ ನಾವು ಸಹಿಸಲಾರೆವು. ನಮ್ಮ ಅನೇಕ ತಾತ್ತ್ವಿಕ ಬಂಡಾಯಗಾರರ ಗತಿ ಇದು.

ಈವರೆಗೆ ನಾವು ಕಾಣುತ್ತಿದ್ದುದು ಬ್ರಾಹ್ಮಣ – ಅಬ್ರಾಹ್ಮಣ ಎನ್ನುವ ವಿಂಗಡಣೆಯ ರಾಜಕಾರಣ. ಆದರೆ ಈ ವಿರೋಧ ಮುಖ್ಯವಾಗಿ ನೌಕರಿ ಸವಲತ್ತುಗಳಿಗೆ ಪರಿಮಿತವಾದದ್ದು. ವಿದ್ಯೆ ಮತ್ತು ಆಸ್ತಿಯನ್ನು ಪಡೆದ ಅಬ್ರಾಹ್ಮಣರೆಲ್ಲರೂ ಪ್ರಚ್ಛನ್ನ ಬ್ರಾಹ್ಮಣರೇ ಆಗಿರುತ್ತಾರೆ. ನಿಜವಾದ ಶೂದ್ರರೆಂದರೆ ಪಂಚಮರು, ತೀರಾ ಹಿಂದುಳಿದ ಅನೇಕ ಜಾತಿಗಳು; ಮತ್ತು ಹಿಂದೂ ಸಮಾಜದಲ್ಲಿ ಮ್ಲೇಚ್ಛರೆನಿಸಿದವರು. ಬಸವಲಿಂಗಪ್ಪ ಪ್ರಕರಣದಿಂದ ಹೊರಬಂದ ಕ್ರೂರ ಸತ್ಯವೆಂದರೆ ಜಾತಿ ಪದ್ಧತಿಯ ವಿರುದ್ಧ ನಿಜವಾಗಿಯೂ ಹೋರಾಟ ಪ್ರಾರಂಭವಾದಾಗ ತಮ್ಮೊಳಗಿನ ವಿರೋಧಗಳನ್ನು ಮರೆತು ಸುವರ್ಣೀಯರಾದ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣರೆಲ್ಲ ಒಟ್ಟಾಗಿ ಪಂಚಮರ ಮೇಲೆ ಬೀಳಬಹುದು ಎಂಬುದು. ಹೀಗೆ ಬರೀ ಮತೀಯ ಸ್ವರೂಪ ಪಡೆಯುವ ಹೋರಾಟದಿಂದ ವಿನಾಶಕಾರಿ ಶಕ್ತಿಗಳೇ ಎರಡು ಪಂಗಡಗಳಲ್ಲೂ ಬೆಳೆಯಬಹುದು, ಅಥವಾ ಸವರ್ಣೀಯರಲ್ಲೂ ಪ್ರಗತಿಶೀಲವಾದ ಶಕ್ತಿಗಳು ಪಂಚಮರ ಜೊತೆ ನಿಂತಲ್ಲಿ ಈ ಹೋರಾಟ ಅರ್ಥಪೂರ್ಣ ಬದಲಾವಣೆಗಳಿಗೂ ಕಾರಣವಾಗಬಹುದು. ಹೋರಾಟ ಅರ್ಥಪೂರ್ಣವಾಗುವಂತೆ ಮತೀಯವಾದ್ದನ್ನು ವಾರ್ಗಿಕ ಸಂಘರ್ಷವಾಗಿ ಪರಿವರ್ತಿಸುವ ನಮ್ಮೆಲ್ಲರ ಜವಾಬ್ದಾರಿಯಾಗುತ್ತದೆ. ಇದನ್ನು ಅರ್ಥಮಾಡಿಕೊಳ್ಳಲಾರದ ಮಂದ ದೃಷ್ಟಿಯ ಜನ ಫ್ಯಾಸಿಸ್ಟ್ ಶಕ್ತಿಗಳ ಬೆಳವಣಿಗೆಗೆ ಕಾರಣರಾಗುತ್ತಾರೆ.

ಉದಾಹರಣೆಗೆ: ಬಸವಲಿಂಗಪ್ಪನವರು ಕನ್ನಡ ಸಾಹಿತ್ಯವನ್ನು ಬೂಸಾ ಎಂದು ಕರೆದಾಗ ಹಾಗೇಕೆ ಕರೆದರೆಂಬ ಪ್ರಶ್ನೆಯನ್ನು ನಮಗೆ ನಾವು ಕೇಳಿಕೊಳ್ಳಬೇಕು. ನಮ್ಮ ಮತಧರ್ಮಗಳಿಂದ ಮೊದಲಿನಿಂದಲೂ ವಂಚಿತರಾಗಿ ಹೊರಗುಳಿದ ಪಂಚಮರಿಗೆ ಮತೀಯ ಸಾಹಿತ್ಯದಿಂದ ತುಂಬಿದ ಕನ್ನಡ ಸಾಹಿತ್ಯ ಅರ್ಥಹೀನವಾಗಿ ಕಂಡರೆ ಅದರಲ್ಲೇನು ಆಶ್ಚರ್ಯವಿದೆ? ಅಲ್ಲದೆ ಪಂಚಮರು ಕನ್ನಡ ಸಾಹಿತ್ಯದ ಇಂಥ ಮತೀಯ ಪರಂಪರೆಯನ್ನು ಉದ್ವಿಗ್ನತೆಯಲ್ಲಿ ತ್ಯಜಿಸಿದಾಗ ಮಹಾರಾಷ್ಟ್ರದ ಮಹರ್ ಜನಾಂಗದ ಲೇಖಕರಂತೆ (ದಲಿತ ಪ್ಯಾಂಥರ್ಸ್) ಇವರೂ ಕನ್ನಡಕ್ಕೆ ನಿಜವಾಗಿಯೂ ಹೊಸದಾದ್ದನ್ನು ಸೇರಿಸುವ ಸಾಧ್ಯತೆಯಿಲ್ಲವೇ?

ಆದರೆ ಪಂಚಮರು ಕನ್ನಡ ಸಾಹಿತ್ಯದ ಬಗ್ಗೆ ತಾಳಬಹುದಾದ ಈ ಧೋರಣೆ ಕನ್ನಡಭಾಷೆಗೆ ಅನ್ವಯಿಸುವುದಿಲ್ಲ. ಬಸವಲಿಂಗಪ್ಪನವರು ಪಂಚಮರನ್ನು ಸಂಘಟಿಸಿ ಹೋರಾಟಕ್ಕೆ ಕಳಿಸಬೇಕಾದರೆ ಕನ್ನಡದಿಂದಲೇ ಸಾಧ್ಯ – ಅಂದರೆ ಪ್ರಜಾಪ್ರಭುತ್ವದ ಹೋರಾಟಕ್ಕೆ ಪ್ರಜಾಭಾಷೆ ಅಗತ್ಯವಾದ ಆಯುಧ. ಆದರೆ ವಿದ್ಯಾವಂತ ಮೇಲುವರ್ಗದ ಒಳಗೆ ಒತ್ತಡ ತರುವಂಥ ರಾಜಕಾರಣ ಯಾವ ಜಾತಿಯವರು ಮಾಡಿದರೂ ಅದಕ್ಕೆ ಇಂಗ್ಲಿಷ್ ಸಾಕು. ಈ ಅಂಶವನ್ನು ಬಸವಲಿಂಗಪ್ಪನವರು ಗಮನಿಸಿದಂತಿಲ್ಲ. ಅದು ಇಲ್ಲಿ ಅಪ್ರಕೃತ. ಏಕೆಂದರೆ ನಾವು ಚರ್ಚಿಸುತ್ತಿರುವುದು ಹಿಂದುಳಿದ ವರ್ಗದ ಮನುಷ್ಯನಿಗೆ ಮತೀಯ ಸಾಹಿತ್ಯದಲ್ಲಿ ಏನು ದೊರೆಯುತ್ತದೆ, ದೊರೆಯುವುದಿಲ್ಲ ಎಂಬುದನ್ನು.

ಇನ್ನೊಂದು ಮುಖ್ಯ ವಿಷಯ

ಬಸವಲಿಂಗಪ್ಪನವರು ನಮ್ಮಲ್ಲೊಬ್ಬರಾಗಿ ನಮ್ಮ ನಡುವೆಯೇ ನಿಂತು ನಮ್ಮ ಸಂಸ್ಕೃತಿಯನ್ನು ಟೀಕಿಸುತ್ತಿದ್ದಾರೆ. ಆದರೆ ಭಾರತದ ಮುಸ್ಲಿಮರು ನಿರ್ಭಯವಾಗಿ ನಮ್ಮ ಸಂಸ್ಕೃತಿಯನ್ನು ಟೀಕಿಸಲಾರದಂಥ ವಾತಾವರಣ ಈ ದೇಶದಲ್ಲಿ ಏರ್ಪಟ್ಟಿದೆ. ಪರಿಣಾಮವಾಗಿ ಬಹಳ ಪಾಲು ಮುಸ್ಲಿಮರು ತಾವು ಎಲ್ಲರಿಗಿಂತ ಹೆಚ್ಚು ದೇಶಭಕ್ತರೆಂದು ತೋರಿಸಿಕೊಳ್ಳಬೇಕಾದ ಕಷ್ಟಕ್ಕೆ ಸಿಕ್ಕಿದ್ದಾರೆ. ನಾವು ಬಸವಲಿಂಗಪ್ಪನವರ ವಿರುದ್ಧ ನಡೆಸುತ್ತಿರುವ ಚಳುವಳಿಯ ರೀತಿ ಪಂಚಮರನ್ನು ಒಂದೋ ಉಗ್ರಗಾಮಿಗಳಾಗುವಂತೆ ಅಥವಾ ಸವರ್ಣೀಯರ ಹೊಗಳು ಭಟ್ಟರಾಗುವಂತೆ ಒತ್ತಾಯಿಸಬಹುದು.

ಬಸವಲಿಂಗಪ್ಪನವರು ಇಂದಿರಾ ಕಾಂಗ್ರೆಸ್ ಚೌಕಟ್ಟಿನಲ್ಲಿ ರಾಜಕಾರಣ ಮಾಡುವವರು. ಆದ್ದರಿಂದ ಅವರು ಈ ಸಂದರ್ಭದಲ್ಲಿ ಹೊರಗೆ ಬಂದ ಕ್ರೂರ ಸತ್ಯಗಳನ್ನು ಹೇಗೆ ಎದುರಿಸುತ್ತಾರೆಂಬುದನ್ನ ನಾವು ಹೇಳಲಾರೆವು. ಆದರೆ ಇಂಥದೊಂದು ಮಹತ್ವಪೂರ್ಣ ಚರ್ಚೆ ಎದ್ದು ನಿಂತಾಗ ಚಿಂತನಶೀಲರಾದವರೆಲ್ಲ ಈ ಸಂದರ್ಭದಲ್ಲಿ ಹೇಗೆ ವರ್ತಿಸುತ್ತಾರೆಂಬುದು ಮುಖ್ಯ. ಪಂಚಮರಿಗೂ ಸವರ್ಣೀಯರಿಗೂ ನಡುವೆ ಇರುವ ವಿರೋಧ ಈಗಿನಂತೆ ಸ್ಪಷ್ಟವಾಗಿ ವ್ಯಕ್ತವಾದಾಗ ನಾವು ನಿಜವಾಗಿ ಯಾವ ಕಡೆಗಿರುತ್ತೇವೆ? – ಇದೇ ಮುಖ್ಯ ಪ್ರಶ್ನೆ.

೧೯೭೪ರಲ್ಲಿ ನಡೆದ ಬಿ. ಬಸವಲಿಂಗಪ್ಪನವರನ್ನು ಕುರಿತ ಬೂಸಾ ಪ್ರಕರಣದ ಸಂದರ್ಭದಲ್ಲಿಪ್ರಜಾವಾಣಿಗೆ ಬರೆದ ಎರಡು ಪತ್ರಗಳು ಇಲ್ಲಿವೆ. ಮೊದಲ ಪತ್ರವನ್ನು ಪ್ರಜಾವಾಣಿ ಪ್ರಕಟಿಸಲಿಲ್ಲ. ಎರಡನೆಯ ಪತ್ರದ ಆಯ್ದ ಭಾಗಗಳನ್ನು ಪ್ರಜಾವಾಣಿ ಪ್ರಕಟಿಸಿತು.