ಪ್ರಿಯ ಅಧ್ಯಕ್ಷರೇ ಮತ್ತು ಸ್ನೇಹಿತರೇ,

ನಾನು ಇವತ್ತು ಮೊದಲು ಮಾತಾಡುವವನು ಅಂತ ತಿಳಿದಿರಲಿಲ್ಲ. ಅಧ್ಯಕ್ಷರ ಎದುರು ಒಂದು ಕಾಗದ ನೋಡಿದೆ. ಅದರಲ್ಲಿ ನನ್ನ ಹೆಸರು ಕೊನೇದಾಗಿತ್ತು. ಆದ್ದರಿಂದ ಸಮಾಧಾನದಿಂದ ಕೂತಿದ್ದೆ ನಾನು; ಎಲ್ಲರೂ ಮಾತಾಡ್ತಾರೆ, ಆಮೇಲೆ ಏನಾದರೂ ಉಳಿದರೆ ಮಾತಾಡಿದರಾಯಿತು ಅಥವಾ ಸಣ್ಣ ಭಾಷಣ ಮಾಡಿ ಮುಗಿಸಿದರೆ ಆಯಿತು ಅಂತ. ಆದರೆ ನಾನೇ ಮೊದಲು ಮಾತಾಡಬೇಕಾಗಿದೆ ಅಂತ ಈಗ ಅವರು ಹೇಳಿದಾಗ ಗೊತ್ತಾಗಿದೆ.

ಇವತ್ತು ಪ್ರಾಯಶಃ ನನ್ನ ಭಾಷಣ ರಸದೌತಣ ಆಗಲಾರದು. ನಾನು ಕನ್ನಡದಲ್ಲಿ ಬರೀತೀನಿ ಮತ್ತು ಅಧ್ಯಾಪಕನಾಗಿದೀನಿ. ಇವೆರಡನ್ನು ಗಮನದಲ್ಲಿಟ್ಟುಕೊಂಡು ಒಟ್ಟು ಭಾರತದ ಇವತ್ತಿನ ಪರಿಸ್ಥಿತಿಯಲ್ಲಿ ನನ್ನ ಹಾಗೆ ಬರೆಯುವವರು, ನಿಮ್ಮ ಹಾಗೆ ಓದುವವರು ಯಾವ ರೀತಿಯಿಂದ ವರ್ತಿಸಿದರೆ ಅಥವಾ ಈಗಿನ ಪರಿಸ್ಥಿತಿಗೆ ಪ್ರತಿಸ್ಪಂದಿಸಿದರೆ ನಮ್ಮ ಜೀವನ ಸೃಷ್ಟಿಶೀಲವಾಗಿ ಉಳಿದೀತು ಅನ್ನೋದನ್ನ ಯೋಚಿಸಲಿಕ್ಕೆ ಅಂತ ನಾನು ಬಂದಿದೀನಿ.

ಇವತ್ತು ಪೇಪರಿನಲ್ಲಿ ನೋಡಿದೆ, ಎರಡು ಮಾತುಗಳು: ಅದು ನನಗೆ ಬಹಳ ಗಮನಾರ್ಹ ಅನ್ನಿಸಿತು. ಮೊದಲನೆಯದು – ನಮ್ಮ ದೇಶದ ಉಪಾಧ್ಯಕ್ಷರಾದ ಸನ್ಮಾನ್ಯ ಶ್ರೀ ಜತ್ತಿಯವರು ಹೇಳಿದ ಮಾತು. ನಮ್ಮ ಮಾನವೀಯ ಮೌಲ್ಯಗಳ ಮಾಧ್ಯಮ ಸಾಹಿತ್ಯ ಆಗಬೇಕು ಅನ್ನುವ ಮಾತನ್ನು ಅವರಾಡಿದ್ದಾರೆ. ಅದರ ಜತೆಗೇನೆ ಪೇಪರ್ ನಲ್ಲಿ ಕಣ್ ಹಾಯಿಸುತ್ತ ಶ್ರೀ ಹನುಮಂತಯ್ಯನವರು ಆಡಿದ ಮತ್ತೊಂದು ಮಾತನ್ನ ನೋಡಿದೆ. ಕನ್ನಡ ದೇಶದ ಒಬ್ಬ ವ್ಯಕ್ತಿ ಈ ದೇಶದ ಪ್ರಧಾನಿಯಾಗೋದು ಸಾಧ್ಯವಾಗಬೇಕು ಅಂತ ಅಂದಿದ್ದಾರೆ. ಇವೆರಡೂ ಪ್ರಾಯಶಃ ಅಪಾಯಕಾರಿಯಾದ ಮಾತುಗಳು – ನಮ್ಮ ಈ ತುರ್ತು ಪರಿಸ್ಥಿತಿಯಲ್ಲಿ.

ಶ್ರೀ ಜತ್ತಿಯವರು ‘ನಮ್ಮ ಮಾನವೀಯ ಮೌಲ್ಯಗಳ ಮಾಧ್ಯಮ ಸಾಹಿತ್ಯ ಆಗಬೇಕು’ ಎಂದಿದ್ದಾರೆ. ಸಾಹಿತಿಯಾದ ನನಗೆ ಈ ಮಾನವೀಯ ಮೌಲ್ಯಗಳೆಲ್ಲವೂ ನಿಂತಿರೋದು ಸ್ವಾತಂತ್ರ್ಯದ ಮೇಲೆ. ಆದ್ದರಿಂದ ಮಾನವೀಯ ಮೌಲ್ಯಗಳ ಮಾಧ್ಯಮ ಸಾಹಿತ್ಯ ಆಗಬೇಕಾದರೆ, ಈ ಮೌಲ್ಯಗಳ ಶೋಧನೆಯನ್ನು ಸದಾ ಕಾಲವೂ ಮಾಡ್ತಾ ಹೋಗುವ ಸ್ವಾತಂತ್ರ್ಯ – ಸಾಹಿತಿಗೆ, ಪತ್ರಕರ್ತನಿಗೆ, ಸಿನಿಮಾದವನಿಗೆ, ಜಾಹೀರಾತುದಾರನಿಗೆ, ರಾಜಕಾರಣಿಗೆ, ನಾಗರಿಕನಿಗೆ ಇರಬೇಕಾಗುತ್ತದೆ.

ಈ ಸ್ವಾತಂತ್ರ್ಯಎನ್ನುವ ಮೌಲ್ಯ ಚಲಾವಣೆಗೆ ಬರೋದು ಕೂಡ ಪ್ರಜಾತಂತ್ರದ ಮುಖಾಂತರ. ಅದು ಚಲಾವಣೆಯಲ್ಲಿದ್ರೆ ಇಲ್ಲಿ ಕೂತಿರುವ ಯಾವ ಒಂದು ಮಗುವಾದರೂ ಈ ದೇಶದ ಪ್ರಧಾನಿಯಾಗೋದು ಸಾಧ್ಯ. ಆದರೆ ಪ್ರಧಾನಿ ಪಟ್ಟ ಅನುವಂಶಿಕವಾದರೆ ಇದು ಸಾಧ್ಯವಾಗೋದಿಲ್ಲ. ಆದ್ದರಿಂದಲೇ ಇವತ್ತು ಈ ದೇಶವನ್ನು ಆಳ್ತಾ ಇರುವ ಪಕ್ಷದ ಇಬ್ಬರು ಈ ಮಾತುಗಳನ್ನಾಡಿದ್ದು ಸಾಹಿತಿಯಾದ ನನಗೆ ಅತ್ಯಂತ ಸಂತೋಷವನ್ನು ತಂದಿದೆ.

ಮನುಷ್ಯ ಬರೇ ಅನ್ನ ಬಟ್ಟೆಯಷ್ಟಕ್ಕೇ ಪರದಾಡ್ತಾ ಇದ್ದಿದ್ದರೆ, ಭಾಷೆಯಲ್ಲಿ ಇಷ್ಟು ಶಬ್ದಗಳು ಇರ್ತಿರಲಿಲ್ಲ. ಯಾವ ಒಂದು ಭಾಷೆಯಲ್ಲಿಯೇ ಆಗಲಿ ವಿಫುಲವಾದ ಶಬ್ದಗಳ ಇರುವುದಕ್ಕೆ ಅರ್ಥ ಏನೆಂದರೆ, ಆ ಭಾಷೆಯನ್ನಾಡುವ ಜನ ಊಟ ಮಾಡ್ತಾರೆ, ಮಲಗ್ತಾರೆ, ಹಾಗೇನೇ ಯೋಚನೆ ಮಾಡ್ತಾರೆ, ಕನಸು ಕಾಣ್ತಾರೆ ಅಂತ. ಯಾವ ದೇಶದ ಜನರ ಬುದ್ಧಿ ಬೆಳೆಯುತ್ತೋ ಕೆಲಸ ಮಾಡುತ್ತೋ ಆ ದೇಶದ ಜನರಲ್ಲಿ ಅತ್ಯುತ್ತಮವಾದ ಭಾಷೆ ಸೃಷ್ಟಿಯಾಗುತ್ತೆ. ಇಂಗ್ಲಿಷ್ ಸಾಹಿತ್ಯ ವಿಮರ್ಶಕನೊಬ್ಬ, ಶೇಕ್ಸ್‌ಪಿಯರ್ ಬರಿಯೋದಕ್ಕೆ ಸಾಧ್ಯವಾಗಿದ್ದು ಯಾಕೆ ಅಂದ್ರೆ, ಇಂಗ್ಲಿಷ್ ಭಾಷೆ ಅದನ್ನ ಸಾಧ್ಯ ಮಾಡಿದ್ದರಿಂದ ಎಂದು ಹೇಳುತ್ತಾನೆ. ಆ renaissance ಕಾಲದಲ್ಲಿ ಅವತ್ತಿನ ಜೀವನ ವಿಧಾನ ಮತ್ತು ಬದುಕಿನ ರೀತಿ ಎಷ್ಟು ಕ್ರಿಯಾತ್ಮಕವಾಗಿತ್ತು ಅಂದ್ರೆ, ಭಾಷೆಯೂ ಅಷ್ಟೇ ಕ್ರಿಯಾತ್ಮಕವಾಗಿ ಬೆಳೆದು, ಒಬ್ಬ ಸೃಜನಶೀಲ ಬರಹಗಾರನಿಗೆ ಒದಗಿ ಬಂತು. ಅನ್ನ ಬಟ್ಟೆ ಇಷ್ಟೇ ನಮ್ಮ ಮೌಲ್ಯಗಳಾದರೆ, ಅದಕ್ಕಾಗಿ ಉಳಿದ ಎಲ್ಲ ಮೌಲ್ಯಗಳನ್ನು ನಾವು ಬಲಿಕೊಡಬೇಕು ಅಂತ ಅನ್ನೋದಾದ್ರೆ ಪ್ರಾಯಶಃ ಭಾಷೆಯಲ್ಲಿ ಕೆಲವೇ ಶಬ್ದಗಳಿದ್ದರೂ ಸಾಕು ಅಂತ ಕಾಣುತ್ತೆ. ಕೆಲವೇ ಶಬ್ದಗಳಿರುವ ಭಾಷೆಯಲ್ಲಿ ಯಾವ ಕಾವ್ಯವೇ ಆಗಲಿ, ಯಾವ ದೊಡ್ಡ ಕೃತಿಯಾಗಲಿ ಬರೋದಕ್ಕೆ ಸಾಧ್ಯವಿಲ್ಲ. ಹೇಗೆ ರೈತ ಭೂಮಿಯ ಮೇಲೆ ಬೀಜದ ಮೇಲೆ ಅವಲಂಬಿಸಿದ್ದಾನೋ ಹಾಗೆ ಒಬ್ಬ ಸಾಹಿತಿ ಭಾಷೆಯ ಮೇಲೆ ಅವಲಂಬಿಸಿರೋದ್ರಿಂದ, ಮತ್ತು ಮೌಲ್ಯಗಳೂ ನಿಜವಾಗಿ ಉಳಿದಾಗ ಮಾತ್ರವೇ ಸಾಹಿತಿಗೆ ಭಾಷೆ ಒದಗಿ ಬರೋದ್ರಿಂದ ಮತ್ತು ಮನುಷ್ಯನಿಗೆ ಬರಿಯ ಅನ್ನ ಬಟ್ಟೆ ಮುಖ್ಯ ಅಲ್ಲದೆ ಇರೋದ್ರಿಂದ, ಈ ಅನ್ನಬಟ್ಟೆಯ ಹುಡುಕಾಟದಲ್ಲಿ ಉಳಿದ ಎಲ್ಲ ಮೌಲ್ಯಗಳನ್ನೂ ಬಲಿ ಕೊಡಬೇಕು ಎನ್ನುವ ವ್ಯವಸ್ಥೆಯ ವಿರುದ್ಧ ಸದಾ ಹೋರಾಡುತ್ತಲೇ ಇರಬೇಕಾಗುತ್ತದೆ. ಇದು ಬರಿ ರಾಜಕೀಯ ಅಲ್ಲ; ತಾನು ಬರೀತಾ ಹೋಗೋದಕ್ಕೆ ಸಾಧ್ಯವಾಗಬಹುದಾದ ವಾತಾವರಣಕ್ಕೆ ಸಾಹಿತಿ ಮಾಡುವ ಹೋರಾಟ. ಹಾಗೇನೇ ಸಿನಿಮಾ ಮಾಧ್ಯಮ. ಈ ಮಾಧ್ಯಮದಲ್ಲಿನ ಯಾವುದೋ ಒಂದು ಕೆಲಸ ಮಾತ್ರ ನೀನು ಹಾಡು, ಯಾವುದೋ ಪ್ರಚಾರದ ಮಟ್ಟಿಗಷ್ಟೆ – ಎಂದರೆ ಆ ಮಾಧ್ಯಮದ ಎಲ್ಲ ಸಾಧ್ಯತೆಗಳನ್ನು ಶೋಧನೆ ಮಾಡೋದಕ್ಕೆ ಆಗೋದಿಲ್ಲ. ಚಿತ್ರಕಲೆಯೂ ಹಾಗೇ. ಎಲ್ಲ ಮಾಧ್ಯಮಗಳೂ ಸ್ವಾತಂತ್ರ್ಯದ ಸ್ಥಿತಿಯಲ್ಲಿ ಮಾತ್ರ ವಿಕಸಿತವಾಗುತ್ತವೆ. ಭಾಷೆಯಂತೂ ಸ್ವಾತಂತ್ರ್ಯದ ಸ್ಥಿತಿಯಲ್ಲಿ ಮಾತ್ರ ಬೆಳೆಯುತ್ತೆ; ಬೆಳೆದು ಶೇಕ್ಸ್‌ಪಿಯರ್ ನಂಥ ಒಬ್ಬ ಸಾಹಿತಿಗೆ ಒದಗಿ ಬರುತ್ತೆ.

ಅನ್ನ ಬಟ್ಟೆ ವಿಷಯಾನೂ ಅಷ್ಟೇನು ಸರಳ ಅಲ್ಲ. ಈ ಅನ್ನದ ಮಟ್ಟಿಗೆ ಹೋರಾಡುವವರಿಗೂ ಕೂಡ ಭಾವುಕತೆ ಅನ್ನೋದು ಇರುತ್ತೆ. ಜೇನುಕರುಬರು ಕಾಡಿನಲ್ಲಿ ಹೋಗಿ ಗೆಣಸನ್ನು ತಿಂದು ಬರುತ್ತಾರೆ. They are food gatherers. ಅವರು ಬೆಳೆಯೋರಲ್ಲ. ಆರಿಸಿ ತಿನ್ನೋರು. ಅವರು ಕೂಡ ಈ ಗೆಣಸನ್ನು ಅಗೀವಾಗ ಅರ್ಧ ಗೆಣಸನ್ನಗಿದು ನೆಲದಲ್ಲಿ ಬಿಟ್ಟು ಬರ್ತಾರಂತೆ. ಯಾಕೆಂದರೆ ಅವರಿಗೂ ಭಾವುಕತೆ ಇದೆ. ಇನ್ನೊಂದು ಬಾರಿಗೆ ಗೆಣಸು ಸಿಗಲಿ ಅನ್ನುವ ಕಾರಣಕ್ಕಾಗಿಯೂ ಭಾವುಕರಾದ ಸಂಬಂಧವನ್ನು ಅವರು ಕಾಡಿನ ಜೊತೆ ಬೆಳೆಸಿಕೊಂಡಿದ್ದಾರೆ. ಹಾಗೇ ನಾವೂ ಕೂಡ. ಅನ್ನ ಬಟ್ಟೆ ಅನ್ನೋದ್ರಿಂದ ಪ್ರಾರಂಭವಾಗಿ ಉಳಿದೆಲ್ಲ ಮೌಲ್ಯಗಳೂ ಸ್ವಾತಂತ್ರ್ಯದ ಮುಖಾಂತರವೇ ಮನುಷ್ಯನಲ್ಲಿ ಬಂದು ಸೇರಿಕೊಳ್ಳುವುದರಿಂದ, ಅವನು ಸದಾ ಸ್ವಾತಂತ್ರ್ಯಕ್ಕಾಗಿ ಮತ್ತು ಈ ಸ್ವಾತಂತ್ರ್ಯವನ್ನು ಚಲಾವಣೆ ಮಾಡಬಲ್ಲಂಥ ಪ್ರಜಾತಂತ್ರಕ್ಕಾಗಿ ಹೋರಾಡುತ್ತಲೇ ಇರಬೇಕಾಗುತ್ತದೆ. ಅದರಲ್ಲಂತೂ ಸಾಹಿತಿಗೆ ಇದು ಅತ್ಯಂತ ಅಗತ್ಯವಾದದ್ದು. ಈಗ ನಾನು ಹೇಳಿದ್ದಕ್ಕೆ ಪೂರಕವಾಗಿ ಕೆಲವು ಮಾತುಗಳನ್ನು ಬರಹಗಾರನಾಗಿ ಇಲ್ಲಿ ಹೇಳಬೇಕು ಅಂತ ಇದ್ದೇನೆ.

ಇವತ್ತು ಜಗತ್ತಿನ ಕಡೆ ನೀವು ಕಣ್ಣು ಹಾಯಿಸಿ ನೋಡಿದರೆ, ಇಂಡಿಯಾದಲ್ಲಿ ಮಾತ್ರ ಅಲ್ಲ, ಜಗತ್ತಿನಲ್ಲೆಲ್ಲ ಮನುಷ್ಯ ನಿಧಾನವಾಗಿ ತನ್ನ ಸ್ವಾತಂತ್ರ್ಯವನ್ನೇ ಕಳೆದುಕೊಳ್ತಾ ಇದ್ದಾನೆ ಅನ್ನೋದನ್ನ ಗಮನಿಸಬಹುದು. ನಾನು ಜೂನ್ ೭೫ನೇ ಇಸವಿಯ ಮೊದಲನೇ ವಾರ ಕೊರಿಯಾದಲ್ಲಿದ್ದೆ. ಸೋಲ್ ಎಂಬ ಅದರ ಮುಖ್ಯ ಪಟ್ಟಣದಲ್ಲಿ ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಮಾತಾಡೋದಕ್ಕೆ ನನ್ನ ಕರೆದಿದ್ದರು. ನಾನು ಹೋಗೋದಕ್ಕಿಂತ ಮುಂಚೆ ಕೊರಿಯಾದ ಸಾಹಿತಿಗಳು ಕೆಲವರು ನನ್ನಹತ್ತಿರ ಬಂದು ‘ದಯವಿಟ್ಟು ಇವತ್ತು ನಿನ್ನ ಭಾಷಣದಲ್ಲಿ ಕಿಮ್‌ನ ವಿಚಾರ ಮಾತಾಡಬೇಕು’ – ಎಂದರು. ಕಿಮ್‌ – ಕೊರಿಯಾದ ಕವಿ. ನಾನು ಅವನನ್ನು ಓದಿಕೊಂಡಿದ್ದೆ. ಆತ ಕೊರಿಯಾದ ಜೈಲಿನಲ್ಲಿದ್ದಾನೆ. ಒಮ್ಮೆ ಜೈಲಿನಿಂದ ಅವನನ್ನು ಬಿಟ್ಟಿದ್ದರು. ಬಿಟ್ಟ ನಂತರ ಮತ್ತೆ ಅವನು ತಾನು ಮೊದಲು ಬರೀತಾ ಇದ್ದದ್ದನ್ನೇ ಮತ್ತೆ ಬರಿಯೋಕೆ ಪ್ರಾರಂಭ ಮಾಡಿದ. ಮತ್ತೆ ಅವನನ್ನು ಜೈಲಿಗೆ ಹಾಕಿದರು. ಅಲ್ಲಿನ ಸಾಹಿತಿಗಳು ಯಾರೂ ಕಿಮ್‌ ಅಂತ ಅನ್ನೋ ಹಾಗಿಲ್ಲ. ಅವನ ಬಗ್ಗೆ ಬರಿಯೋ ಹಾಗಿಲ್ಲ. ಅದಕ್ಕೆ ಅವರು ನನ್ನ ಹತ್ತಿರ ಹೇಳಿದರು, ಇಲ್ಲಿ ನಾಲ್ಕೈದು ದಿನ ಮಾತ್ರ ಇರೋದ್ರಿಂದ ಮತ್ತು ನಿನ್ನ ದೇಶದಲ್ಲಿ ಪ್ರಜಾತಂತ್ರ ಇರೋದ್ರಿಂದ ನೀನು ಮಾತಾಡಬಹುದು, ಮಾತಾಡು ಕಿಮ್‌ ಬಗ್ಗೆ ಅಂತ. ನಾನು ಕಿಮ್‌ನ ಕೆಲವು ಕವನಗಳನ್ನು ಓದಿದ್ದೆ – ಇಂಗ್ಲಿಷ್ ಭಾಷಾಂತರದಲ್ಲಿನ ಅವನ ಬಗ್ಗೆ ಮಾತಾಡೋದಕ್ಕೆ ಎದ್ದ ಕೂಡಲೇ ಎರಡು ಮಾತು ಆಡ್ತಾ ಇದ್ದಂತೆಯೇ ಅಲ್ಲಿ ಸೇರಿದ್ದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದರು. ಅವರಿಗೆ ಅಷ್ಟೊಂದು ಸಂತೋಷವಾಗಿತ್ತು. ಕಿಮ್ ಈಗಲೂ ಜೈಲಿನಲ್ಲೇ ಇದ್ದಾನೆ.

ಇಂಡೋನೇಷಿಯಾದ ಬಗ್ಗೆ ನೀವು ಓದಿದ್ದೀರಿ. ಒಂದು ಕಾಲದಲ್ಲಿ ಇದ್ದಕ್ಕಿದ್ದಂತೆ ಸಹಸ್ರಾರು ಜನ ಕಮ್ಯುನಿಸ್ಟರನ್ನು ಅಲ್ಲಿನ ಸರ್ಕಾರ ಜೈಲಿಗೆ ಹಾಕಿತ್ತು. ಅಂದರೆ ಬೇರೆ ಒಂದು ದ್ವೀಪದಲ್ಲಿ ತಗೊಂಡು ಹೋಗಿ ಅವರನ್ನೆಲ್ಲ ಬಿಟ್ಟುಬಿಟ್ಟರು. ಇದನ್ನ ಡಾಮ್ ಮೊರೇಸ್ ಹೇಳ್ತಾ ಇದ್ದರು: ಇಂಡೋನೇಷಿಯಾಕ್ಕೆ ಹೋಗಿ ಅಲ್ಲಿನ ಬಗ್ಗೆ ಕೆಲವು ಲೇಖನಗಳನ್ನು ಅವರು ಬರೀಬೇಕಾಗಿತ್ತಂತೆ, ಯಾವುದೋ ಒಂದು ಪತ್ರಿಕೆಗೆ. ಆಗ ಅಲ್ಲಿಗೆ ಹೋದಾಗ ಅವರು ಅಂತೂ ಆ ದ್ವೀಪಕ್ಕೆ ಹೋಗಿ ಸಾಹಿತ್ಯದಲ್ಲಿ ವೈಚಾರಿಕತೆ ಜನಗಳನ್ನು ಸಂಧಿಸಿ ಇವರ ಬಗ್ಗೆ ಅಮೆರಿಕಾದಲ್ಲಿ ಇಂಗ್ಲೆಂಡಿನಲ್ಲಿ ಪ್ರಚಾರ ಮಾಡಿದರಂತೆ. ಹಾಗೆ ಮಾಡಿದ್ದರಿಂದ ಆಮೇಲೆ ಅಲ್ಲಿನ ಬಂಧನದಿಂದ ವಿಮುಕ್ತಗೊಳಿಸಲಾಯಿತಂತೆ.

ಈ ಸ್ವಾತಂತ್ರ್ಯ ಅನ್ನೋದು ಎಲ್ಲ ಕಡೆ ಹೋಗ್ತ ಇದೆ. ಅಮೆರಿಕಾದಲ್ಲಿ ಹೋಗಿ ಬಿಡೋದ್ರಲ್ಲಿತ್ತು. ನಿಕ್ಸನ್ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಅಮೆರಿಕಾದಲ್ಲಿ ಏನೇನು ಮಾಡಿದ ಅನ್ನೋದನ್ನ ನಾವು ಓದಿದ್ದೇವೆ. ಇಬ್ಬರು ಪತ್ರಕರ್ತರು ಆ ದೇಶದ ಸ್ವಾತಂತ್ರ್ಯವನ್ನು ಉಳಿಸಿದರು. ಸಾಮಾನ್ಯ ಜನತೆಗೆ ಗೊತ್ತಾಗದೆ ಎಷ್ಟೋ ವರ್ಷಗಳಿಂದ ನಡೀತಾ ಇದ್ದದ್ದನ್ನ ಬಯಲಿಗೆಳೆದರು. ಇವತ್ತು ಅಮೆರಿಕ ತನ್ನೆಲ್ಲ ಕೊಳಕನ್ನೂ ಬೀದಿಯಲ್ಲಿ ಒಗೀತಾ ಇದೆ; ಶುದ್ಧ ಮಾಡಿಕೊಳ್ತಾ ಇದೆ. ಹೀಗೆ ನಡುಬೀದಿಯಲ್ಲಿ ಶುದ್ಧ ಮಾಡಿಕೊಳ್ಳುವ, ಮಾಡಿಸುವ ಅವಕಾಶ ನಮ್ಮೆಲ್ಲರಿಗೂ ಇರಲೇಬೇಕು. ಪ್ರಜಾತಂತ್ರದ ಅತ್ಯಂತ ದೊಡ್ಡ ಆದರ್ಶ ಅಂದರೆ ನಡುಬೀದಿಯಲ್ಲಿ ನಮ್ಮನ್ನು ನಾವು ಶುದ್ಧಮಾಡಿಕೊಳ್ತೇವೆ ಅನ್ನೋ ವಚನವನ್ನು ಸ್ವೀಕರಿಸೋದು. I.A. ಏನು ಮಾಡಿತು ಇತ್ಯಾದಿಗಳನ್ನೆಲ್ಲ ಈಗ ಅಮೆರಿಕ ತೊಳೆತೊಳೆದು ಹಾಕ್ತಾ ಇದೆ. ಅಲ್ಲಿನ ರಾಜಕಾರಣಿಗಳಿಗೆ ಇದು ಒಂದು ನಿಜವಾದ ಶೋಧನೆಯಾಯಿತು. ಅಮೆರಿಕಾದಲ್ಲಿ ಈಗಲೂ ಪ್ರಜಾತಂತ್ರ ಕಳೆದುಹೋಗೋದಿಲ್ಲ ಅಂತಲ್ಲ. ಏಕೆಂದರೆ ಬಂಡವಾಳಶಾಹಿ ವ್ಯವಸ್ಥೆ ಎಷ್ಟು ದಟ್ಟವಾಗಿ ಬೆಳೆದಿದೆ ಎಂದರೆ ಯಾರೋ ಕೆಲವರು ಎಲ್ಲ ಮಾಧ್ಯಮಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು, ತಮಗೆ ಬೇಕಾದ ರೀತಿಯ ಬರವಣಿಗೆ ಅಲ್ಲದೆ ಇನ್ನು ಯಾವ ರೀತಿಯ ಬರವಣಿಗೆಯೂ ಬಾರದೇ ಇರುವಂತೆ ಮಾಡೋದು ಸಾಧ್ಯವಿದೆ – ಆ ದೇಶದಲ್ಲಿ. ಆದ್ದರಿಂದ ಆ ದೇಶದ ನಾಗರಿಕರು ಇವತ್ತಿಗೂ ಎಜ್ಯುಕೇಶನಲ್ ರೇಡಿಯೋ ಅಂತ ಒಂದು ಮಾಧ್ಯಮ ಇಟ್ಟುಕೊಂಡಿದ್ದಾರೆ. ಇದನ್ನ ನಡೆಸೋದಿಕ್ಕೆ ಅಂತ ಅಲ್ಲಿರುವ ನಾಗರಿಕರಿಂದಲೇ ದುಡ್ಡನ್ನು ಬೇಡ್ತಾರೆ – ನೀವು ಯಾವ ಶರತ್ತೂ ಇಲ್ಲದೆ ಹಣಕೊಡಿ, ನಾವು ಎಜ್ಯುಕೇಶನಲ್ ರೇಡಿಯೋನ್ನ ನಡೆಸಬೇಕು ಅಂತ. ಅದು ಸರಕಾರದ ಹಣದಿಂದಲೂ ನಡೆಯೋದಿಲ್ಲ, ಬಂಡವಾಳಶಾಹಿಗಳ ಹಣದಿಂದಲೂ ನಡೆಯೋದಿಲ್ಲ. ನಮ್ಮಂಥ ಅಧ್ಯಾಪಕರು, ವಿದ್ಯಾರ್ಥಿಗಳು, ಪ್ರಜೆಗಳು – ಅಂಥವರ ಹಣದಿಂದ ನಡೆಯುತ್ತದೆ. ಹಾಗೇನೇ ಎಜ್ಯುಕೇಶನಲ್ ಟಿ.ವಿ.ನೂ ಅವರು ಉಳಿಸಿಕೊಂಡಿದ್ದಾರೆ. ಪ್ರತಿದಿನ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕಾದ್ದು ಸ್ವಾತಂತ್ರ್ಯ ಆದ್ದರಿಂದ, ಇಲ್ಲದಿದ್ದರೆ ಅಂತ ದೇಶದಲ್ಲೂ ಕೂಡ ಕಣ್ಣಿಗೆ ಕಾಣದ ಹಾಗೆ ಸ್ವಾತಂತ್ರ್ಯ ಅನ್ನೋದು, ಪ್ರಜಾತಂತ್ರ ಅನ್ನೋದು ಕರಗಿಹೋಗುತ್ತೆ.

ರಷ್ಯಾದಲ್ಲಿ ಕೂಡ ತಾವು ಕೇಳಿರಬಹುದು, ಸಖರೋವ್ ಎಂಬ ದೊಡ್ಡ ಮೇಧಾವಿ ವಿಜ್ಞಾನಿ ಇವತ್ತು ರಷ್ಯಾದಲ್ಲಿರುವ ಪರಿಸ್ಥಿತಿಯ ವಿರುದ್ಧ ಹೋರಾಡ್ತಾ ಇದ್ದಾನೆ. ಅನೇಕ ಕವಿಗಳು, ಮಾರ್ಕ್ಸ್ ವಾದವನ್ನು ನಂಬುವಂತಹ ಕವಿಗಳೂ ಕೂಡ, ರಷ್ಯಾದಲ್ಲಿರುವ ವ್ಯವಸ್ಥೆಯ ವಿರುದ್ಧ ಹೋರಾಡ್ತಾ ಇದ್ದಾರೆ.

ಚೈನಾದಲ್ಲಿ ನೀವು ಕೇಳಿರಬಹುದು – ಈಗ ನಡೀತಾ ಇದೆ ಅನ್ನೋದನ್ನು, ಚೈನಾಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಂಥ ಮಾವೋನ್ನ ಮತ್ತು ಆ ದೇಶದ ಮಾಧ್ಯಮಗಳನ್ನು ಈಗ ಆಳ್ತಾ ಇರೋರು ಹೇಗೆ ದುರುಪಯೋಗ ಮಾಡ್ತಾ ಇದ್ದಾರೆ ನೋಡಿ. ಯಾಕೆಂದರೆ ಮಾಧ್ಯಮಗಳೆಲ್ಲ ಒಬ್ಬರ ಕೈಯಲ್ಲಿ ಇದ್ದಾಗ ಏನೇನು ಅನ್ಯಾಯವಾಗುತ್ತೆ ಅನ್ನೋದಕ್ಕೆ ಚೈನಾನೂ ಒಂದು ನಿದರ್ಶನ. ಮಾವೋ ಹೆಂಡತಿ ಮತ್ತು ಆಕೆಯ ಸಂಗಡಿಗರು gang of four ಹೌದೇ? ಮಾವೋ ಹೇಳಿದ ಮಾತುಗಳೇನು? ಈಗ ಸರ್ಕಾರ ಪ್ರಚಾರ ಮಾಡುತ್ತಿರುವ ಮಾತುಗಳನ್ನು ಮಾತ್ರ ಮಾವೋ ಹೇಳಿದ್ದ, ಇನ್ನೇನಾದರೂ ಹೇಳಿದ್ದಾನೆಯೇ? – ಇವೆಲ್ಲಾ ಚೀನೀ ಜನರಿಗೆ ಗೊತ್ತಾಗೋ ಹಾಗಿಲ್ಲ. ಗೊತ್ತಾಗಬೇಕಾದರೆ ಅವರು ಬೇರೆ ದೇಶಕ್ಕೆ ಬರಬೇಕು.

ಬಾಂಗ್ಲಾ ದೇಶದಲ್ಲೂ ಇದೇ ಪರಿಸ್ಥಿತಿ. ನಾವು ಎಲ್ಲಿ ನೋಡಿದರೂ ಹೀಗೆ ಮನುಷ್ಯನ ಸ್ವಾತಂತ್ರ್ಯಕ್ಕೆ ಸಂಚಕಾರ ಬರುತ್ತಿದೆ. ಇತ್ತೀಚೆಗೆ ಇಂಡಿಯಾಕ್ಕೆ ಬಂದ ಜೆ. ಕೃಷ್ಣಮೂರ್ತಿ ಕೂಡ –ಅವರು ರಾಜಕೀಯದವರಲ್ಲ, ಆದರೆ ದೊಡ್ಡ ಅನುಭಾವಿಗಳು – ಈ ಬಗ್ಗೆ ಎಚ್ಚರಿಕೆ ನೀಡಿದ್ದನ್ನು ಪತ್ರಿಕೇಲಿ ಕೆಲವು ದಿನಗಳ ಹಿಂದೆ ನೋಡಿದೆ: ಪ್ರಪಂಚದಲ್ಲೆಲ್ಲ ಸ್ವಾತಂತ್ರ್ಯ ಕಳೆದು ಹೋಗ್ತಾ ಇದೆ ಮನುಷ್ಯನಿಗೆ. ಇದು ನಿಜ. ಎಲ್ಲ ಕಡೆಯೂ ಮನುಷ್ಯ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ತಾ ಇದ್ದಾನೆ. ಹೀಗೆ ಸ್ವಾತಂತ್ರ್ಯವನ್ನು ಕಸಿಯುವಾಗ ಪ್ರತಿ ಸರಕಾರವೂ ಉಪಯೋಗಿಸೋದು ಎರಡು ರೀತಿಯ ಪ್ರಚಾರಗಳನ್ನ: ಒಂದು ಅನ್ನ, ಬಟ್ಟೆ ಒದಗಿಸುವುದಕ್ಕೋಸ್ಕರ ಈ ಸ್ವಾತಂತ್ರ್ಯಗಳನ್ನು ಅಲ್ಪಾವಧಿಯಲ್ಲಿ ಕಸಿದುಕೊಳ್ಳಬೇಕಾಗುತ್ತದೆ ಅಂತ. ಇನ್ನೊಂದು – ಈಗ ದೇಶ ಗಂಡಾಂತರ ಸ್ಥಿತಿಯಲ್ಲಿದೆ, ಯಾರು ಬೇಕಾದರೂ ನಮ್ಮ ಮೇಲೆ ದಾಳಿ ಇಟ್ಟು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಹುದು ಅಂತ. ಎರಡನೆಯದು ನಿಜವಾಗಿದ್ದಲ್ಲಿ – ಹಿಂದೆ, ಯುದ್ಧಕಾಲದಲ್ಲಿ ಬ್ರಿಟಿಷ್ ಜನ ಸಿದ್ಧವಾಗಿದ್ದಂತೆ ತಾವಾಗಿಯೇ ಸ್ವಯಂ ಪ್ರೇರಣೆಯಿಂದ ಕೆಲವು ಸ್ವಾತಂತ್ರ್ಯಗಳನ್ನು ಕಳೆದುಕೊಳ್ಳೋದಕ್ಕೆ ಜನ ತಯಾರಾಗಿದ್ದಾರೆ. ಯಾರೂ ಎಲ್ಲ ಸ್ವಾತಂತ್ರ್ಯಗಳನ್ನೂ ಎಲ್ಲ ಕಾಲದಲ್ಲೂ ಚಲಾಯಿಸಬೇಕು ಅಂತ ಕೇಳೋದಿಲ್ಲ. ಆದರೆ ಮೂಲಭೂತವಾಗಿ ಸ್ವಾತಂತ್ರ್ಯ ಬೇಕು ಅನ್ನೋದು ಎಲ್ಲ ನಾಗರಿಕ ದೇಶಗಳ ಹಕ್ಕಾಗಿದೆ.

ಇದನ್ನು ಯಾಕೆ ಹೇಳ್ತಾ ಇದ್ದೀನಿ ಎಂದರೆ – ಹೀಗೆ ನಮಗೆ ಪತ್ತೆಯಾಗದಂತೆ ನಮ್ಮ ಸ್ವಾತಂತ್ರ್ಯ ಕಳೆದುಹೋದ್ರೆ, ಪ್ರಾಯಶಃ ನಾವು ಇದಕ್ಕೆ ಹೊಂದಿಕೊಂಡು ಬಿಡಬಹುದು. ಜೊತೆಗೆ ನಾನು ಹಿಂದೆ ಹೇಳಿದ ಮಾಧ್ಯಮಗಳು – ಸಾಹಿತ್ಯ, ಸಿನಿಮಾ, ಸಂಗೀತ ಇತ್ಯಾದಿಗಳು – ನಮಗೆ ಗೊತ್ತಿಲ್ಲದಂತೆಯೇ ತಮ್ಮ ಸೃಜನಶೀಲತೆಯನ್ನು ಕಳೆದುಕೊಳ್ಳಬಹುದು. ಯಾಕೆಂದ್ರೆ ಈ ನಮ್ಮ ಕಾಲದಲ್ಲಿ ಜಗತ್ತಿನ ಎಲ್ಲ ಕಡೆಯಲ್ಲೂ ಮನುಷ್ಯ ಒಂದು ದೊಡ್ಡ ದುರಾಸೆಗೆ ಒಳಗಾಗಿರುವುದನ್ನು ಕಾಣಬಹುದು.

ಮಾವೋತ್ಸ ತುಂಗ್ ಅಧಿಕಾರದಲ್ಲಿದ್ದಾಗ, ಒಂದು ಮಾತು ಹೇಳ್ತಾ ಇದ್ದ. ಗಾಂಧೀಜಿಯವರು ಹೇಳ್ತಾ ಇದ್ದ ಮಾತಿಗೆ ಬಹಳ ಹತ್ತಿರದ ಮಾತು ಅದು. ಗಾಂಧೀಜಿ ಹೇಳಿದ್ದು ನಮಗೆ ಗೊತ್ತಿದೆ. “Not mass production, but production by the massess” ಅಧಿಕ ಉತ್ಪಾದನೆ ಅಲ್ಲ; ಎಲ್ಲ ಜನರಿಂದಲೂ ಉತ್ಪಾದನೆ. ಗಾಂಧೀಜಿ ಚರಕದ ಮೂಲಕ ಏನನ್ನು ಹೇಳಿದರೊ, ಅದನ್ನೇ ಮಾವೋತ್ಸೆ ತುಂಗ್ – ‘ಪ್ರತಿಯೊಬ್ಬ ರೈತನೂ ತನ್ನ ಮನೆಯ ಹಿಂಭಾಗದಲ್ಲಿ ತಾನೇ ಕಬ್ಬಿಣವನ್ನು ತಯಾರು ಮಾಡಬೇಕು’ – ಅಂದರೆ ಟೆಕ್ನಾಲಜಿ ಅನ್ನೋದು ಪ್ರತಿ ಮನೆಗೂ ಹೋಗಬೇಕು – ಎನ್ನುತ್ತಿದ್ದ. ಅನಂತರ ಬಂದ ಈಗಿನ ಅಧಿಕಾರ, ಚೈನಾವನ್ನು ಆದಷ್ಟು ಬೇಗ ಶೀಘ್ರವಾಗಿ ಪಾಶ್ಚಾತ್ಯ ದೇಶಗಳ ಹಾಗೆ ಆಧುನಿಕವಾಗಿ ಮಾಡಬೇಕು ಅನ್ನುವ ಒಂದು ಆಸೆಯನ್ನು ಇಟ್ಟುಕೊಂಡಂತಿದೆ. ನೀವು ಯಾವಾಗ ಒಂದು ದೇಶವನ್ನು ಇದ್ದಕ್ಕಿದ್ದಂತೆ ಆಧುನಿಕ ಮಾಡಬೇಕು; ಯಂತ್ರ ನಾಗರಿಕತೆಗೆ ತರಬೇಕು ಅಂತೀರೋ ಅಂಥ ಒಂದು ಆಸೆಯನ್ನು ಸಫಲಗೊಳಿಸಬೇಕಾದರೆ ಬಹಳ ಜನಗಳ ಸ್ವಾತಂತ್ರ್ಯವನ್ನು ಮೊಟಕು ಮಾಡಲೇಬೇಕಾಗುತ್ತೆ.

ಅಂದರೆ ಕೆಲವು ರೀತಿಯ ಆರ್ಥಿಕವಾದ ಮೌಲ್ಯಗಳು ಬದಲಾದಾಗ ನಮ್ಮ ರಾಜಕೀಯ ಮೌಲ್ಯಗಳು ಬದಲಾಗುತ್ತವೆ. ಇವತ್ತು ಪ್ರಾಯಶಃ ಚೈನಾದಲ್ಲಿ – ಕ್ರಾಂತಿಗೆ ಹಿಂದೆ ಬಹಳ ಸ್ವಾತಂತ್ರ್ಯ ಇತ್ತು ಅಂತಲ್ಲ – ಅಲ್ಪಸ್ವಲ್ಪ ಇದ್ದ ಸ್ವಾತಂತ್ರ್ಯವೂ ಕೂಡ ಈ ಆಧುನೀಕರಣಗೊಳಿಸುವ ಮಸಲತ್ತಿನಲ್ಲಿ ಕಳೆದುಹೋಗ್ತಾ ಇದೆ. ಅಮೆರಿಕ – ಇಂಗ್ಲೆಂಡ್‌ ಕೂಡ ತಮ್ಮ ಕೈಗಾರೀಕರಣದ ಕಾಲದಲ್ಲಿ ಅನೇಕ ಸ್ವಾತಂತ್ರ್ಯಗಳನ್ನು ಕಳೆದುಕೊಂಡಿದ್ದುವು. ಇಂಗ್ಲೆಂಡ್‌ ಬಹಳ ವರ್ಷ ಹೋರಾಡಬೇಕಾಗಿ ಬಂತು. ತನ್ನ ದೇಶದ ಎಲ್ಲರಿಗೂ ವೋಟಿನ ಹಕ್ಕನ್ನು ಪಡೆದುಕೊಳ್ಳೋಕ್ಕೋಸ್ಕರವಾಗಿ. ಆದ್ದರಿಂದ ನಾನು ಏನು ಹೇಳ್ತಾ ಇರೋದು ಅಂದ್ರೆ, ನಮ್ಮ ಕಣ್ಣೆದುರು ಕೆಲವು ಆರ್ಥಿಕ ಮೌಲ್ಯಗಳನ್ನು ಇಟ್ಟು, ಈ ಆರ್ಥಿಕ ಮೌಲ್ಯಗಳನ್ನು ನಾವು ಸಾಧಿಸುವುದಕ್ಕೋಸ್ಕರ ನಿಮ್ಮ ಕೆಲವು ಸ್ವಾತಂತ್ರ್ಯಗಳನ್ನು ಕಿತ್ತುಕೊಳ್ತೀವಿ ಅಂತ ಜಗತ್ತಿನಲ್ಲಿ ಯಾರೇ ಹೇಳಲಿ, ಆಗ ಜನ ಅದನ್ನು ಪ್ರತಿಭಟಿಸಲೇಬೇಕು. ಯಾಕಂದ್ರೆ ಮನುಷ್ಯನಿಗೆ ಯಾರೇ ಹೇಳಲಿ, ಆಗ ಜನ ಅದನ್ನು ಪ್ರತಿಭಟಿಸಲೇಬೇಕು. ಯಾಕಂದ್ರೆ ಮನುಷ್ಯನಿಗೆ ಬರೀ ಅನ್ನ – ಬಟ್ಟೆ ಮಾತ್ರ ಅಲ್ಲ, ಉಳಿದದ್ದೂ ಮೌಲ್ಯ ಆದ್ದರಿಂದ.

ಆದ್ದರಿಂದ ಈ ಮೌಲ್ಯದ ಪ್ರಶ್ನೆಯನ್ನು ಎತ್ತಿದಾಗ ಸಾಹಿತಿಯಾಗಿ ನಾನು ಹೇಳಬೇಕಾದ ಇನ್ನೊಂದು ಮಾತು ಈ ಮೌಲ್ಯಗಳೆಲ್ಲ ನಿಜವಾಗಿ ಫಲಿಸೋದು ಯಾವಾಗ ಅಂದ್ರೆ ಅವನಿಗೆ ಒಳಗನ್ನು ನೋಡಿಕೊಂಡು ಬರೆಯುವ, ಯೋಚಿಸುವ ಶಕ್ತಿ ಇದ್ದಾಗ. ಪ್ರತಿಯೊಂದು ಸರ್ವಾಧಿಕಾರವೂ ಹೀಗೆ ಯೋಚಿಸುವವರನ್ನು, ಚಿಂತಕರನ್ನು, ಸತ್ಯಾನ್ವೇಷಕರನ್ನು ಅನುಮಾನದಿಂದ ನೋಡುತ್ತೆ; ಪ್ರಚಾರಕರನ್ನು, ಆರಾಧಕರನ್ನು ಮಾತ್ರ ಪೋಷಿಸುತ್ತೆ. ಈ ದೇಶದಲ್ಲಿ ಇದು ಇನ್ನೂ ಅಪಾಯಕಾರಿ; ಎಲ್ಲ ಕಾಲದಲ್ಲೂ ಆಸ್ಥಾನಕವಿಗಳಾಗಿ ಬಂದವರು, ರಾಜ ಹೇಳುವುದಕ್ಕಿಂತ ಮುಂಚೇನೇ ಅವನನ್ನು ಹೊಗಳ್ತ ಇದ್ದವರು, ಇನ್ನು ಅವನೇ ಬಾಯ್ಬಿಟ್ಟು ಹೊಗಳಲು ಕೇಳಿದಾಗ ಅವರ ಗತಿ ಏನು ಹೇಳಿ? ಅವರ ಜೊತೆಗೆ ಇದ್ದವರು ಹಾಗೆ ಬರೆಯದೆ ಇದ್ದರೆ ನಿನ್ನನ್ನು ಬಂದೀಖಾನೆಗೆ ಹಾಕ್ತಾರೆ ಅಂತ ಭಯ ಬೇರೆ ಇದ್ದಾಗ, ಏನ್ತಾನೆ ಅವರು ಮಾಡೋದಿಲ್ಲ, ಹೇಳಿ? ನಮಗೆ ಬರೆಯುವವರಿಗೆ – ಸದಾ ಎಚ್ಚರಿಕೆಯಿಂದ ನಮ್ಮ ಸ್ವಾತಂತ್ರ್ಯಗಳನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಕಾಲ ಈಗ ಈ ದೇಶದಲ್ಲಿ ಬಂದಿದೆ. ಏಕೆಂದರೆ ಎಲ್ಲ ಕಡೆಯೂ ನಮಗೆ ಗೊತ್ತಾಗದೇ ಇರುವಂಥ ಹಿಡನ್ ಪರ್ ಸ್ಯುಯೇಡರ್ಸ್ ಇರುತ್ತಾರೆ. ಅದು ನಮಗೆ ಗೊತ್ತಾಗೋದಿಲ್ಲ.

ಬರಿ ಅನ್ನ – ಬಟ್ಟೆ ಎರಡೇ ನಮ್ಮ ಮೌಲ್ಯಗಳಾಗೋದಾದ್ರೆ ನಮಗಷ್ಟು ಶಬ್ದಗಳ ಅಗತ್ಯವಿಲ್ಲ. ಸಿನಿಮಾದ ಅಗತ್ಯವಿಲ್ಲ – ಯಾವುದರ ಅಗತ್ಯವೂ ಇಲ್ಲ. ಬೇರೆ ಮೌಲ್ಯಗಳೂ ಬೇಕಾಗಿರೋದ್ರಿಂದ್ಲೇನೆ ನಮಗೆ ಈ ಎಲ್ಲ ಅಗತ್ಯಗಳೂ ಇವೆ, ಬೇರೆ ಮೌಲ್ಯಗಳು ಸಾಧ್ಯವಾಗೋದು ಸ್ವಾತಂತ್ರ್ಯದ ಸ್ಥಿತಿಯಲ್ಲಿ; ಅವು ಚಲಾವಣೆಯಾಗೋದು ಪ್ರಜಾತಂತ್ರದಲ್ಲಿ ಆದ್ದರಿಂದ ಇವತ್ತು ಸಾಹಿತಿಯಾದವನಿಗೆ ರಾಜಕೀಯ ಬೇಡ, ಸಾಹಿತ್ಯಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ ಅಂದರೆ ನಾನು ಒಪ್ಪೋದಿಲ್ಲ. ರಾಜಕೀಯ ಬೇಕು, ಯಾಕಂದ್ರೆ ಈ ಎಲ್ಲ ಸ್ವಾತಂತ್ರ್ಯಗಳನ್ನೂ ಕಳೆದುಕೊಳ್ಳುವಂಥ ಸ್ಥಿತಿಯಲ್ಲಿಯೂ ನಾವು ರಾಜಕೀಯದಲ್ಲಿ ಆಸಕ್ತಿ ತೋರಿಸದೆ ಹೋದ್ರೆ ಈ ಸ್ವಾತಂತ್ರ್ಯಗಳನ್ನು ಉಳಿಸಿಕೊಳ್ಳುವ ಮಾರ್ಗವನ್ನೂ ನಾವು ಕಂಡುಕೊಳ್ಳಲಾರದೆ ಹೋದೇವು. ಒಂದು ಮನೆಗೆ ಬೆಂಕಿ ಬಿದ್ದಾಗ ನಾವು ಇದು ಸರಿಯೇ ತಪ್ಪೇ ಅಂತ ಯೋಚನೆ ಮಾಡ್ತಾ ಕೂಡೋಕಾಗೋಲ್ಲ ಆದ್ದರಿಂದ ಈ ಮಾತುಗಳನ್ನು ನಾವು ಗಟ್ಟಿಯಾಗಿ ತಿಳಿಕೋಬೇಕು – ‘ಸತ್ಯ ಅಂತ ನಮಗೆ ಅನ್ನಿಸಿದ್ದನ್ನು ಅಲ್ಲದೆ ಬೇರೇನನ್ನೂ ನಾವು ಬರೆಯವುದಿಲ್ಲ, ನಾವು ಯಾವ ಹಿತಾಸಕ್ತಿಗಳ ಪ್ರಚಾರಕರೂ ಆಗೋದಿಲ್ಲ. ಮತ್ತು ಆ ಸತ್ಯಾಕ್ಕಾಗಿ ನಿಂತು ಬರೆದವರಿಗೆ ಏನಾದರೆ ನೋವಾದರೆ, ತೊಂದರೆಯಾದರೆ ಅವರಿಗಾಗಿ ನಾವು ಹೋರಾಡ್ತೀವಿ.’

ಮ್ಯಾಥ್ಯೂ ಆರ್ನಾಲ್ಡ್‌ ಒಂದು ಮಾತನ್ನು ಹೇಳ್ತಾನೆ – ಇಂಗ್ಲೆಂಡ್ ಮತ್ತು ಫ್ರಾನ್ಸ್ ಇವೆರಡನ್ನು ಹೋಲಿಸ್ತಾ. ಇಂಗ್ಲೆಂಡಿನಲ್ಲಿ ಒಂದು ಕ್ರಾಂತಿ ನಡೆಯಿತು. ಅದು ಒಂದು ಪ್ರಶ್ನೆಯನ್ನು ಕೇಳಿತು Is it legal? ಇದು ನ್ಯಾಯಬದ್ಧವಾದ್ದೆ? ಅಂತ. ಫ್ರಾನ್ಸಿನಲ್ಲಿ ಇನ್ನೊಂದು ಕ್ರಾಂತಿ ನಡೆಯಿತು. ಅದು ಇನ್ನೊಂದು ಪ್ರಶ್ನೆಯನ್ನು ಕೇಳಿತು: Is it rational? ಇದು ಮೂಲಭೂತವಾದ ನಮ್ಮ ವಿಚಾರಕ್ಕೆ ಒಪ್ಪುವಂಥಾದ್ದೆ? ಅಂತ. ಇವೆರಡು ಕ್ರಾಂತಿಗಳಲ್ಲಿ ಹೆಚ್ಚು ಮೂಲಭೂತವಾದ ಕ್ರಾಂತಿ ಫ್ರಾನ್ಸಿನದು. ಆದ್ದರಿಂದ ಫ್ರಾನ್ಸ್ ಇವತ್ತಿಗೂ ಜೀವಂತವಾದ ದೇಶವಾಗಿ ಉಳದಿದೆ ಅಂತ ಮ್ಯಾಥ್ಯೂ ಆರ್ನಾಲ್ಡ್ ಹೇಳುತ್ತಾನೆ. ನಾವು ಕೂಡ ಅಂಥ ಮೂಲಭೂತ ಪ್ರಶ್ನೆಗಳನ್ನು ಸದಾ ಕೇಳೋ ಅವಕಾಶ ಇಟ್ಟುಕೊಂಡಿದ್ರೆ ಪ್ರಾಯಶಃ ಈ ದೇಶ ಜೀವಂತವಾಗಿ ಉಳಿಯುತ್ತೆ. ಇಲ್ಲದೇ ಹೋದರೆ ಸುಮಾರು ಸಾವಿರ ವರ್ಷಗಳಿಂದ ನಿಂತ ನೀರಾಗಿದ್ದ ಈ ದೇಶ ಕೊಳೆಯಲು ಶುರುವಾಗುತ್ತೆ.

ಈ ಸಾಹಿತ್ಯ ಸಮ್ಮೇಳನ ಇತ್ಯಾದಿಗಳನ್ನು ಮಾಡೋವಾಗ, ಸಾಹಿತ್ಯವನ್ನು ರಸದೌತಣ ಅಂತ ನಾವು ಭಾವಿಸುವಾಗ ಈ ಸತ್ಯಗಳು ನಮಗೆ ಕಾಣದೆ ಹೋಗುತ್ತವೆ. ಸಾಹಿತ್ಯ ರಸದೌತಣ ಮಾತ್ರ ಅಲ್ಲ, ಇಂಥ ನಿಷ್ಠುರವಾದ ಸತ್ಯಗಳನ್ನು ಅನ್ವೇಷಣೆ ಮಾಡುವ ಅದನ್ನು ಜನರ ಮನಸ್ಸಿನಲ್ಲಿ ಜಾಗೃತಗೊಳಿಸುವ ಮಾಧ್ಯಮ ಅನ್ನೋದನ್ನ ನಾವು ಮರೀಬಾರದು. ಈ ದೇಶದಲ್ಲಿ ಮತ್ತೊಂದು ಅಪಾಯ ಇದೆ. ಶೇಕಡಾ ಮೂವತ್ತು ಜನ ಮಾತ್ರ ಇಲ್ಲಿ ಓದು ಬಲ್ಲವರು. ಅದರಲ್ಲೂ ಸರಿಯಾದದ್ದನ್ನ ಓದುವ, ಅರ್ಥಮಾಡಿಕೊಳ್ಳುವ ಶಕ್ತಿ ಇರುವವರಂತೂ ಇನ್ನೂ ಕಡಿಮೆ. ಉಳಿದ ಶೇಕಡಾ ಎಪ್ಪತ್ತು ಜನ ಓದು ಬಾರದವರು. ಈ ಜನರ ಮನಸ್ಸನ್ನು ರೇಡಿಯೋದ ಮುಖಾಂತರ, ಟೆಲಿವಿಷನ್ ಮುಖಾಂತರ, ಸಿನಿಮಾದ ಮುಖಾಂತರ ಬಹು ಸುಲಭವಾಗಿ ಸೆರೆ ಹಿಡಿಯಬಹುದು.

ಇಂಗ್ಲಿಷಿನಲ್ಲಿ cool media ಮತ್ತು hot media ಅಂತ ಮಾಧ್ಯಮಗಳನ್ನು ವಿಂಗಡಿಸುತ್ತಾರೆ. ಓದೋದು cool media – ತಂಪಗಿರೋ media. ಓದ್ತಾ ಇರೋದನ್ನ ಬರೀ ಉದ್ವೇಗಗೊಳಿಸೋದು ಕಷ್ಟ. ಯಾಕೆಂದರೆ ವಿಮರ್ಶಾ ಶಕ್ತಿ ಓದುವ ಕ್ರಿಯೆಯಲ್ಲಿ  ಸ್ವಲ್ಪವಾದರೂ ಕೆಲಸ ಮಾಡುತ್ತೆ. ಆದರೆ ಸಿನಿಮಾ, ರೇಡಿಯೋ ಮುಖಾಂತರ ಏನಾದರೂ ಪ್ರಚಾರವಾದಾಗ, ಅದು ಯೋಚನಾಕ್ರಮವನ್ನು ವಿಮರ್ಶೆ ಪ್ರಜ್ಞೆಯನ್ನು ಕಡಿಮೆ ಮಾಡಿ ಪೂರ್ಣವಾಗಿ ನಮ್ಮ ಮನಸ್ಸನ್ನು ಆಕ್ರಮಿಸೋದು ಸಾಧ್ಯ. ಆದ್ದರಿಂದ ಇವು hot media. ಶೇಕಡಾ ೩೦ ಜನ ಈ ದೇಶದಲ್ಲಿ ಅನಕ್ಷರಸ್ಥರಾಗಿರುವುದರಿಂದ ಈ cool media ಮುಖಾಂತರ ಏನನ್ನೂ ಸ್ವೀಕರಿಸುವ ಸ್ಥಿತಿಯಲ್ಲಿ ಅವರು ಇಲ್ಲದೇ ಇರುವುದರಿಂದ, ಅವರನ್ನು ಏಕಾಏಕಿ ಈ ಹಾಟ್ ಮೀಡಿಯಾಗಳ ಮುಖಾಂತರ ವಶಪಡಿಸಿಕೊಳ್ಳುವುದು ಸಾಧ್ಯವಿರುವುದರಿಂದ ಇಂಥ ಮೀಡಿಯಾಗಳೆಲ್ಲ ಸರ್ಕಾರದ ಕೈಯಲ್ಲಿದೆಯಾದ್ದರಿಂದ – ಈ ದೇಶದಲ್ಲಿ ಅಪಾಯ ಇನ್ನೂ ಹೆಚ್ಚು ಅಂತ ನನಗನ್ನಿಸುತ್ತದೆ. ಈ ರೇಡಿಯೋ, ಟೆಲಿವಿಷನ್ ಮತ್ತು ಸಿನಿಮಾ – ಇಂಥದರ ಮುಖಾಂತರ ಅನಕ್ಷರತೆಯನ್ನೇ ಒಂದು ಬಂಡವಾಳ ಮಾಡಿಕೊಂಡು, ಈ ದೇಶದ ಜನ ಹೇಗೆ ಬೇಕಾದರೂ ಹಾಗೆ ಯೋಚಿಸುವ ಹಾಗೆ ಮಾಡಿಬಿಡಬಹುದು. ಈ ಮೀಡಿಯಾಗಳು ನಮ್ಮ ಕೈಯಲ್ಲಿ ಇಲ್ಲದೆ ಇರುವುದರಿಂದ ನಮಗೆ ಏನು ಮಾಡಲೂ ಸಾಧ್ಯವಿಲ್ಲ. ಏಕೆಂದರೆ ನಮಗೆ ಜನರನ್ನು ಸೇರುವುದು ಬರವಣಿಗೆ ಮುಖಾಂತರ ಮಾತ್ರ ಸಾಧ್ಯ. ಆದ್ದರಿಂದ ವಿಮರ್ಶಾಪ್ರಜ್ಞೆ ಇಡೀ ದೇಶದಲ್ಲಿ ಬೆಳೆಯದೇ ಇದ್ದಾಗ, ಈ ಮಾಧ್ಯಮಗಳು ಯಾರ ಕೈಯಲ್ಲಿ ಇರ್ತಾವೋ ಅಂಥವರ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳುತ್ತದೆ. ಆದ್ದರಿಂದಲೇ ಈ ಮಾಧ್ಯಮಗಳನ್ನ ಕಲುಷಿತಗೊಳಿಸದಿರುವಂಥ ಒಂದು ಪ್ರಜಾಸತ್ತತೆಯನ್ನು ಈ ದೇಶದಲ್ಲಿ ಉಳಿಸಿಕೊಳ್ಳುವುದು ಈ ಇಡೀ ದೇಶ ಜೀವಂತವಾಗುವ ದೃಷ್ಟಿಯಿಂದ, ಸೃಜನಶೀಲವಾಗುವ ದೃಷ್ಟಿಯಿಂದ ಅತ್ಯಂತ ಅಗತ್ಯ. ಅಷ್ಟನ್ನಾದರೂ ನಾವು ಸದ್ಯ ನೆನಪಿಟ್ಟುಕೊಂಡರೆ ಸಾಕು ಅಂತ ನನಗನ್ನಿಸುತ್ತದೆ. ಏಕಾಏಕಿ ಒಂದು ದೊಡ್ಡ ಕ್ರಾಂತಿಯನ್ನು ಮಾಡುವ ಮಾತನ್ನಲ್ಲ ನಾನು ಹೇಳ್ತಿರೋದು; ಈ ಮಾಧ್ಯಮಗಳ ದುರುಪಯೋಗವಾಗಿ ನಮ್ಮ ದೇಶದ ಜನರ ಮನಸ್ಸು ಸಂಪೂರ್ಣ ಒಂದೇ ಕಡೆಗೆ ಹೋಗುವಂತಾಗದೇ ಇರಲಿ, ಅವರ ಮನಸ್ಸಿನಲ್ಲಿ ಎಲ್ಲ ರೀತಿಯ ಮೌಲ್ಯಗಳೂ ಬೇರೂರಿ ಆ ಮೂಲಕ ನಮ್ಮ ಭಾಷೆ ಮತ್ತಷ್ಟು ಶ್ರೀಮಂತವಾಗಿ ಒಬ್ಬ ಸೃಜನಶೀಲ ಬರಹಗಾರನಿಗೆ ಒಂದು ಶ್ರೀಮಂತವಾದ ಭಾಷೆ ಒದಗುವಂತಾಗಲಿ ಎಂದಷ್ಟೇ ನಾನು ಹೇಳುತ್ತ ಇರೋದು.

ಇದು ಇವತ್ತು ಮಾಡಿದ ಭಾಷಣದ ಸಾರಾಂಶ ಅಂತ ಅನ್ನಿಸುತ್ತೆ. ಇದಕ್ಕಿಂತ ಹೆಚ್ಚು ಹೇಳಬೇಕಾದ ಅಗತ್ಯವಿಲ್ಲ. ಆದರೆ ಇದು ಈ ಕಾಲದಲ್ಲಿ ಅಷ್ಟೇನೂ ಪ್ರಿಯವಾದ ಮಾತಲ್ಲ; ಪ್ರಿಯವಾಗಿ ಕೇಳಿಸುವಂಥದೂ ಅಲ್ಲ. ಎಲ್ಲರಿಗೂ ತಿಳಿಯುವಂತೆ ಇದನ್ನು ಹೇಳಿದ್ದೇನೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದಲ್ಲ ಒಂದು ದಿನ ಇದು ಎಲ್ಲರಿಗೂ ತಿಳಿದೇ ತಿಳಿಯುತ್ತೆ. ಏಕೆಂದರೆ ಇವತ್ತು ಸೌಮ್ಯವಾಗಿದ್ದ ಶಬ್ದ ನಾಳೆ ರುದ್ರವಾದ ಶಬ್ದವಾಗಬಹುದು. ಆದ್ದರಿಂದ ಈ ಶಬ್ದಗಳು ಇನ್ನೂ ಸೌಮ್ಯವಾಗಿದ್ದಾಗಲೇ ಅವುಗಳನ್ನು ನಾವು ಬಳಸಿ, ಅವುಗಳ ಪ್ರಕಾರ ಬದುಕಿ ‘ಬದುಕುತ್ತೇವೆ’ ಅನ್ನೋದನ್ನ ತೋರಿಸುವುದರ ಮುಖಾಂತರ ನಾವು ನಮ್ಮ ಸ್ವಾತಂತ್ರ್ಯಗಳನ್ನು ಉಳಿಸಿಕೊಳ್ಳಬಹುದು. ಯಾಕಂದ್ರೆ ನಮಗೆ ನೆನಪಿರಲಿ: ಅಮೆರಿಕಂಥ ದೇಶದಲ್ಲೇ ಅವರ ಸ್ವಾತಂತ್ರ್ಯಗಳು ಮುಟ್ಟುಗೋಲಾಗುವ ಸ್ಥಿತಿಯಿತ್ತು, ಅಷ್ಟು ವರ್ಷ ಸ್ವಾತಂತ್ರ್ಯ, ಪ್ರಜಾಸತ್ತೆ ಇದ್ದಂಥ ದೇಶದಲ್ಲೂ. ಆದ್ದರಿಂದ eternalvigilance ಯಾವಾಗಲೂ ಎಚ್ಚರವಾಗಿರೋದು – ಈಗಂತೂ ನಮ್ಮ ನಡುವೆ ಅತ್ಯಂತ ಅಗತ್ಯ ಅನ್ನುವ ಮಾತನ್ನು ಮತ್ತೆ ಮತ್ತೆ ಹೇಳಬೇಕೂಂತ ನನಗನ್ನಿಸುತ್ತೆ. ಆದ್ದರಿಂದ ಇವತ್ತು ಈ ಮಾತಲ್ಲದೆ ಯಾವ ಸಾಹಿತ್ಯ ಸಭೆಗೆ ಹೋದರೂ ಇನ್ನು ಬೇರೆ ಯಾವ ಮಾತನ್ನೂ ಆಡಬೇಕು ಅಂತ ಅನ್ನಿಸೋದಿಲ್ಲ. ಯಾಕಂದ್ರೆ, ಉಳಿದಿದ್ದೆಲ್ಲ – ಸ್ವಾತಂತ್ರ್ಯವಿಲ್ಲದಿದ್ದರೆ irrelevant. ಯಾಕಂದ್ರೆ ನಮ್ಮ ದೇಶದ ಭವಿಷ್ಯ – ನಾವು ಯಾವ ತರಹದ ಜನ ಆಗ್ತೀವಿ, ನಾವು ಪ್ರಜಾತಂತ್ರಾನಾ ಉಳಿಸಿಕೊಳ್ಳುತ್ತೇವೋ ಕಳೆದುಕೊಳ್ಳುತ್ತೇವೋ ಅನ್ನುವುದರ ಮೇಲೆ ನಿಂತಿದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಒಂದು ವೇಳೆ ಪ್ರಜಾತಂತ್ರದಂಥ ಒಂದು ವ್ಯವಸ್ಥೆ ಕಳೆದುಹೋದ್ರೆ, ಆಗ ಕಳೆದುಹೋದ ಸ್ಥಿತಿಯಲ್ಲಿ ಬರಬಹುದಾದ ಸಾಹಿತ್ಯದ ಸ್ವರೂಪ ಬಹಳ ಬೇರೆಯಾದದ್ದು. ಆಗಲೂ ಸಾಹಿತಿ ತನ್ನ ಮೌಲ್ಯಗಳನ್ನು ಎತ್ತಿಹಿಡಿಯಬಲ್ಲ ಅಂತ ನಾನು ಹೇಳಲ್ಲ. ಯಾಕಂದ್ರೆ ರಷ್ಯಾದಲ್ಲಿ ಜಾರ್ ದೊರೆಗಳ ಆಡಳಿತ ಇದ್ದಾಗ ಕೂಡ, ಅವನು ರೂಪಕಗಳ ಮುಖಾಂತರ ತನ್ನ ಮೌಲ್ಯಗಳನ್ನು ಮುಚ್ಚಿಟ್ಟುಕೊಂಡ ಸಾಹಿತಿಗೆ ಹೀಗೆ ಅನೇಕ ಉಪಾಯಗಳಿವೆ. ಅವನು ರೂಪಕಗಳ ಮುಖಾಂತರ ಮುಚ್ಚಿಟ್ಟು ಹೇಳುತ್ತಾನೆ. ಐಸೆನ್ ಸ್ಪೇನ್ ಅಂಥ ಒಬ್ಬ ಸಿನಿಮಾ ಮಾಡುವವನು ಮುಖಾಂತರ ಕಾಲದ ಚರಿತ್ರೆಯ ಒಬ್ಬ ರಾಜನ ಕಥೆಯನ್ನು ಸಿನಿಮಾ ಯಾವುದೋ ಸ್ಟಾಲಿನ್ನನ ದೌರ್ಜನ್ಯವನ್ನೆಲ್ಲ ಬಯಲಿಗೆಳೆದ. ಅದು ಸ್ಟಾಲಿನ್‌ನಿಗೂ ಗೊತ್ತಾಗಬೇಕಾದರೆ ಸ್ವಲ್ಪ ಕಾಲವೇ ಬೇಕಾಯ್ತಂತೆ.

ಅದರಲ್ಲೇನೂ ಅನುಮಾನ ಬೇಡ. ಸಾಹಿತಿಗಳಿಗೆ ಕಳ್ಳತನ ಗೊತ್ತು. ಈ ಕಳ್ಳತನವೂ ಗೊತ್ತಿಲ್ಲದೆ ಇದ್ರೆ, ಅವರು ಬರಿ ಬಡಪಾಯಿಗಳಾದರೆ, ಆಗ ಮುಂದಿನ ಜನಾಂಗ ಇವರನ್ನ ಅಂದರೆ ನಮ್ಮನ್ನ – ಓದಬೇಕಾಗಿಲ್ಲ. ರಷ್ಯಾದಲ್ಲಿ ಸ್ಟಾಲಿನ್ ಕಾಲದಲ್ಲಿ ಬಂದ ಎಷ್ಟೋ ಸಾಹಿತ್ಯವನ್ನು ರಷ್ಯನ್ ಜನ ಈಗ ಓದಬೇಕಾಗಿಲ್ಲ. ಆದರೆ ಅವತ್ತು ಬಚ್ಚಿಟ್ಟುಕೊಂಡು ಬರೆದವರನ್ನು ಮಾತ್ರ ಇವತ್ತಿಗೂ ಓದಬೇಕೆನ್ನಿಸುತ್ತೆ. ಆದ್ದರಿಂದ ಈ ಬಚ್ಚಿಟ್ಟುಕೊಳ್ಳುವ ಉಪಾಯಗಳನ್ನಾದರೂ ನಾವು ಕಾದುಕೊಳ್ಳಬೇಕಾಗುತ್ತದೆ. ರೂಪಕಗಳಲ್ಲಿ ಅಡಿಗರು ಇವತ್ತು ಪದ್ಯ ಓದಿದರು. ಆ ಪದ್ಯ ಬರಿಯೋದು ಯಾಕೆ ಸಾಧ್ಯವಾಯಿತು ಅಂದರೆ ಅಡಿಗರ ಕಾವ್ಯದಲ್ಲಿ ರೂಪಕ ಇರುವುದರಿಂದ. ಇದು ಕಾದಂಬರಿಕಾರರ ಮಟ್ಟಿಗೆ ಸ್ವಲ್ಪ ಕಷ್ಟ. ಯಾಕೆಂದರೆ ಹಾವು ಹೆಚ್ಚು ವಾಸ್ತವದ ಜೊತೆಗೆ ಒಡನಾಡೋದಾದ್ದರಿಂದ ಅಂಥದನ್ನ ಬರಿಯೋದು ಕಷ್ಟ. ಕವಿಗಳು ಆ ದೃಷ್ಟಿಯಿಂದ ಪುಣ್ಯವಂತರು. ಯಾಕಂದ್ರೆ ಅವರಿಗೆ ರೂಪಕ ಇದೆ. ಪ್ರಾಯಶಃ ನಮ್ಮ ಸಾಹಿತ್ಯ – ನನಗೊಂದೊಂದು ಸಾರಿ ಅನ್ಸುತ್ತೆ – ಇನ್ನು ಮುಂದೆ ಹೆಚ್ಚು ಹೆಚ್ಚು ರೂಪಕಕ್ಕೆ ಮೊರೆ ಹೋಗಬೇಕಾಗುತ್ತೋ ಏನೋ ಅಂತ – ಒಂದೂವರೆ ವರ್ಷದ ಕೆಳಗೆ – ಎಮರ್ಜೆನ್ಸಿ ಬಂದಾಗ –ಥಟ್ಟನೆ ನನಗನ್ನಿಸಿದ್ದು, ಮತ್ತೆ ರೂಪಕದ ಯುಗ ಪ್ರಾರಂಭವಾಯಿತು ಸಾಹಿತ್ಯದಲ್ಲಿ ಅಂತ. ಆದರೆ ಒಂದು ರೀತಿಯ ಅಪಾಯ ಇದ್ದೇ ಇದೆ ಈಗಿನ ಕಾಲದ ಈ ಬ್ಯೂರಾಕ್ರಸಿ ಮತ್ತು ಈಗ ಆಳುವವರಿಗೂ ಸಾಹಿತ್ಯ ಗೊತ್ತಾಗೋದಕ್ಕೆ ಶುರುವಾಗಿದೆ. ಇಂಥವರಲ್ಲಿ ಬಹಳ ಆಸಕ್ತರು ಅವರು. ಸಾಹಿತ್ಯ ಸಮ್ಮೇಳನಗಳಿಗೆ ಬರ್ತಾರೆ ಕೂರ್ತಾರೆ; ನಾವು ಹೇಳಿದ್ದನ್ನೆಲ್ಲ ಕೇಳಿಕೊಳ್ತಾರೆ. ಆದ್ದರಿಂದ ಬ್ಯೂರಾಕ್ರಸಿಗೆ ಗೊತ್ತಾಗದೇ ಇರೋ ಹಾಗೆ ನಾವು ಸತ್ಯಗಳನ್ನು ಬಚ್ಚಿಟ್ಟುಕೊಳ್ಳೋದು ಇನ್ನೂ ಕಷ್ಟವಾಗುತ್ತದೆ. ಆದ್ದರಿಂದಲೇ ನಾವು ಇನ್ನೂ ಬಚ್ಚಿಟ್ಟು ಹೇಳುವಂಥ ರೂಪಕಗಳನ್ನು ಹುಡುಕಬೇಕು ಅಂತ ಕಾಣುತ್ತೆ. ಆದರೂ ಇದು ವಿಷಾದದ ಸಂಗತಿ. ನಮ್ಮ ಈ ಪ್ರಜಾತಂತ್ರ ವ್ಯವಸ್ಥೆಯಲ್ಲಿ ವೈಚಾರಿಕತೆಯ ಮೂಲಕ ರೂಪಕ ಪ್ರಧಾನವಲ್ಲದೆ ಬೇರೆ ರೀತಿಯ ಸಾಹಿತ್ಯವನ್ನೇ ಸೃಷ್ಟಿಸಲು ಪ್ರಾರಂಭಿಸಿದ್ದೆವು. ೧೯ನೇ ಶತಮಾನದ ನಂತರ ಬಂದ ಸಾಹಿತ್ಯ ಈ ರೀತಿಯದು. ಇಂಡಿಯಾದಲ್ಲಿ ಆ ರೀತಿಯ ಸಾಹಿತ್ಯದ ಸಂಪ್ರದಾಯ ಬೇರೂರುತ್ತಾ ಇತ್ತು. ನನಗೆ ಗೊತ್ತಿರುವ ಅನೇಕ ಭಾಷೆಗಳಲ್ಲಿ ಹೊಸ ರೀತಿ ಯೋಚನೆ ಮಾಡುವವರು, ಹೊಸ ರೀತಿ ಸಿನಿಮಾ ಮಾಡುವವರು ಹುಟ್ಟಿದರು. ಅವರಿಗೆಲ್ಲ ಅಪಾಯ ಬಂದಿದೆ ಅಂತ ನಾನು ಹೇಳುತ್ತಾ ಇಲ್ಲ; ಬಂದಿಲ್ಲ ಅಂತ ಯಾರೋ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೇಳಿದರಂತೆ, ಇವತ್ತು. ಅದು ನಿಜ. ಈಗೇನೂ ಅಪಾಯ ಬಂದಿಲ್ಲ. ಆದರೆ ಇದೆ ಹೇಗೆ, ಅಂತಂದ್ರೆ – ಅಡೆನ್ನಿನ ಒಂದು ಪದ್ಯ ಈ ಸ್ಥಿತೀನ ಚೆನ್ನಾಗಿ ತೋರಿಸುತ್ತೆ – ‘ದೂರದಲ್ಲಿ ಬೂಟಿನ ಸಪ್ಪಳ ಕೇಳ್ಸುತ್ತೆ. ದೂರದಲ್ಲಿ ದೊಂದಿಗಳೂ ಕಾಣಿಸ್ತಾವೆ. ಹಾಗೇ ಬೂಟಿನ ಸಪ್ಪಳ ಹತ್ತಿರವಾಗುತ್ತೆ. ನಮ್ಮ ಮನೆಯಲ್ಲಿ ಕುತ್ಕೊಂಡು ನಾವು ಏನು ತಿಳಿಕೊಂಡಿರ್ತೀವಿ ಅಂದರೆ, ಅವು ಇನ್ನೂ ನಮ್ಮ ಮನೆಗೆ ಬಂದಿಲ್ಲ ಅಂತ. ಊರಿಗೆ ಬಂತಂತೆ; ಇನ್ನೂ ಮನೆಗೆ ಬಂದಿಲ್ಲ; ಪಕ್ಕದ ಬೀದಿಗೆ ಬಂತಂತೆ; ಬೇರೆ ಯಾವನೋ ಜಾತಿಯವರ ಮನೆಗೆ ಬಂತಂತೆ; ಆಮೇಲೆ ನೆರೆಮನೆಗೆ ಬಂತಂತೆ; ನಮ್ಮ ಮನೆಗೆ ಬಂದಿಲ್ಲ ಪರವಾಗಿಲ್ಲ.’ ಆದರೆ ಅದು ನಮ್ಮ ಮನೆಗೂ ಬರುತ್ತೆ ಅನ್ನೋದನ್ನ ನಾವು ಮರೀಬಾರದು. ಯಾಕಂದ್ರೆ ನಾವು ಕಳಕೊಳ್ಳೋದನ್ನ ಕಲಿತನಂತರ ಒಂದೊದನ್ನೇ ಕಳಕೊಳ್ತಾ ಹೋಗ್ತೀದ್ದೀವಿ ಅನ್ನೋದನ್ನ ಮರೆತುಬಿಡಬಹುದು. ಅಲ್ಲದೆ ನಮ್ಮ ದೇಶದ ದೌರ್ಭಾಗ್ಯ ಏನು ಅಂದ್ರೆ – ಈ ದೇಶದ ಜನ ಹಸಿದ ಜನ, ಎಷ್ಟು ಪಶುಸಮಾನವಾಗಿ ಈ ಇತಿಹಾಸದಲ್ಲಿ ಬದುಕಿದವರು ಅಂದ್ರೆ – ಒಂದು ಹೊತ್ತು ಅನ್ನ ಕೊಟ್ಟರೆ, ಅವರು ಅತ್ಯಂತ ಕೃತಜ್ಞರಾಗಿಬಿಡುತ್ತಾರೆ. ಆದರೆ ಅಮೆರಿಕಾದವನು ಬ್ರೆಡ್ ಕೊಟ್ಟರೆ ಬೆಣ್ಣೆ ಕೊಡು ಅಂತಾನೆ; ಬೆಣ್ಣೆ ಕೊಟ್ಟರೆ ಜಾಮ್ ಕೊಡು ಅಂತಾನೆ. ಯಾಕೆಂದರೆ ಅವನ ಜೀವನದ ಅಪೇಕ್ಷೆಯ ಮಟ್ಟ ಅಷ್ಟು ಮೇಲಕ್ಕಿದೆ. ಆದ್ದರಿಂದ ನಾವು ನಿಮಗೆ ಪ್ರತಿನಿತ್ಯ ತಿನ್ನಲು ಚಿಕನ್ ಕೊಡ್ತೀವಿ; ಆದ್ರಿಂದ ನಿಮ್ಮ ಸ್ವಾತಂತ್ರ್ಯ ಕಸಿದುಕೊಳ್ತೀವಿ ಅಂದ್ರೆ ಅದೆಲ್ಲ ಆಗೋದಿಲ್ಲ, ಪ್ರತಿ ಮನೆಗೆ ಒಂದೊಂದು ಹೆಲಿಕಾಪ್ಟರ್ ಕೊಡು ನೋಡೋಣ ಅಂತ ಅನ್ನಬಹುದು ಅಮೆರಿಕಾದವನು. ಆದರೆ ನಮ್ಮಲ್ಲಿ ಹಾಗಲ್ಲ. ರೂಪಾಯಿಗೆ ಒಂದು ಸೇರು ಅಕ್ಕಿ ಆಯ್ತು ಅಂದರೆ ನಾವು ಏನನ್ನ ಬೇಕಾದರೂ ಒಪ್ಪಿಕೊಂಡು ಬಿಡ್ತೀವಿ. ಈ ದೇಶ ಅಷ್ಟು ಕ್ಷುಧ್ರವಾದ ಸ್ಥಿತಿಯಲ್ಲಿ ಶತಮಾನಗಳಿಂದ ಇರುವುದರಿಂದ ಈ ದೇಶದಲ್ಲಿ ಅನೇಕ ಜನ ವಿದ್ಯಾವಂತರು ಅಧಿಕಾರದಲ್ಲಿದ್ದಾರೆ. ನಮಗೆ ಚೆನ್ನಾಗಿ ಸಂಬಳಗಳು ಸಿಗುತ್ತಿವೆ. ನಮಗೇನೂ ತೊಂದರೆ ಆಗಿಲ್ಲ. ಖಂಡಿತವಾಗಿ ಏನೂ ತೊಂದರೆ ಆಗಿಲ್ಲ. ಆದ್ದರಿಂದ ನಾವು ಇದರ ಬಗ್ಗೆ ಕಂಪ್ಲೇನ್ ಮಾಡಬೇಕಾಗಿಯೇ ಇಲ್ಲ. ಇದು ಬಹಳ ಭಯವನ್ನು ಹುಟ್ಟಿಸುವಂಥ ವಿಷಯ. ನನಗೆ ಬಹಳ ಸಂತೋಷವನ್ನುಂಟುಮಾಡಿದ್ದು ಒಂದು ವಿಷಯ ಈಗ ಹೇಳ್ತೇನೆ. ಮಹಾರಾಷ್ಟ್ರದಲ್ಲಿ ನೀವು ಕೇಳಿರಬಹುದು – ವಿಜಯ ತೆಂಡೊಲ್ಕರ್ ಅನ್ನೋ ನಾಟಕಕಾರ ಇದ್ದಾರೆ. ಅವರಿಂದ ನನಗೊಂದು ಕಾಗದ ಬಂತು. ಮಹಾರಾಷ್ಟ್ರದ ದುರ್ಗಾ ಭಾಗವತ್ ಅನ್ನುವವರು – ಅಲ್ಲಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ಬಂಧಿತರಾದಾಗ ನನಗೆ ಆ ಕಾಗದ ಬಂತು ಅವರನ್ನು ಬಂಧನದಿಂದ ಬಿಡುಗಡೆ ಮಾಡಲು ಸರ್ಕಾರಕ್ಕೆ ಬರೆದ ಪತ್ರಕ್ಕೆ ನನ್ನ ಸಹಿ ಕೇಳಿ. ಇದನ್ನೇ ನಾನು ಎಚ್ಚರ ಅಂತೀನಿ. ಯಾಕಂದ್ರೆ ನಮ್ಮ ನಡುವೆ ಇರುವ ಸ್ವಾತಂತ್ರ್ಯಗಳನ್ನು ಉಳಿಸಿಕೊಳ್ಳವುದಕ್ಕೋಸ್ಕರ ಈ ಎಚ್ಚರವನ್ನು ನಾವು ಇಟ್ಟುಕೊಂಡಿರಬೇಕು. ಇನ್ನೇನನ್ನೂ ನಾವು ಕೇಳ್ತಾ ಇಲ್ಲವಲ್ಲ? ನನ್ನ ಕೈಗೆ ಪೆನ್ನು ಕೊಡು, ಕಾಗದ ಕೊಡು, ನಾನು ಬರೀತೀನಿ. ಇದನ್ನು ಅಚ್ಚುಮಾಡು – ಇಷ್ಟೇ ತಾನೇ ನಾವು ಕೇಳೋದು? ನಮ್ಮ ದೇಶ ಇದರ ಮುಖಾಂತರ ಸೃಜನಶೀಲ ಆಗಬೇಕು ಅಂತ ತಾನೇ ನಾವು ಕೇಳೋದು? ನಾಳೆ ಒಂದು ಲಿಟರರಿ ಕಾನ್ಫೆರೆನ್ಸ್ ಜಗತ್ತಿನ ಬೇರೆ ಕಡೆ ನಡೆದಾಗ ಭಾರತದ ಪ್ರತಿನಿಧಿ ಅಂತ ಹೋದವನು ಒಂದೇ ಒಂದು ಪದ್ಯವನ್ನು ಬರೆಯುವಂಥವನಾಗಿದ್ರೆ ಯಾಕಂದ್ರೆ ಎಲ್ಲಾ ಭಾಷೆಗಳಲ್ಲೂ ಇನ್ನು ಮುಂದೆ ಒಂದೇ ಒಂದು ಪದ್ಯ ಮತ್ತೆ ಮತ್ತೆ ಬರ್ತಾ ಇರುತ್ತೆ – ನಾವು ಕೊಡೋದು ಏನಿದೆ? ಆದ್ದರಿಂದ ಇಂಥ ಸ್ವಾತಂತ್ರ್ಯಗಳಿಗಾಗಿ ಹೋರಾಡಿದಾಗ ಅದು ದೇಶಕ್ಕಾಗಿ ನಡೆದ ಹೋರಾಟ ಅನ್ನೋದನ್ನ ನಾವು ಗಮನದಲ್ಲಿಡಬೇಕು. ಆದ್ದರಿಂದಲೇ ನನ್ನ ಭಾಷಣದ ಪ್ರಾರಂಭದಲ್ಲಿ ಜತ್ತಿಯವರು ಆಡಿದ ಮಾತನ್ನು ಹನುಮಂತಯ್ಯನವರು ಆಡಿದ ಮಾತನ್ನು ಹೇಳಿದೆ. ಇನ್ನೂ ಈ ಮಾತುಗಳು ಉಳಿದಿದ್ದಾವೆ ನಮ್ಮ ದೇಶದಲ್ಲಿ – ಅದೇ ನಮ್ಮ ಪುಣ್ಯ. ಯಾಕೆಂದರೆ ಇಪ್ಪತ್ತೈದು ವರ್ಷಗಳಿಂದ ಇವುಗಳನ್ನು ಮಾತಾಡಿಕೊಂಡು ಬಂದಿದ್ದೇವೆ ನೋಡಿ – ಇದ್ದಕ್ಕಿದ್ದಂತೆ ಮರೆಯೋದು ಹೇಗೆ ಹೇಳಿ? ಮರೀಬೇಕಾದ್ರೂ ಪ್ರಾಯಶಃ ಇನ್ನೂ ಹತ್ತು ವರ್ಷ ಬೇಕಾಗುತ್ತೆ. ಪತ್ರಿಕೆಗಳನ್ನು ಓದಿ, ಓದಿ, ಓದಿ, ಅದೇ ಮಾತನ್ನು ಮತ್ತೆ ಮತ್ತೆ ಓದಿ, ಓದಿ ನಾವು ಮರೀಬೇಕು. ಆರ್ವೆಲ್ಲಿನ ‘೧೯೪೮’ರಲ್ಲಿ ಒಂದು ಘಟನೆ ಬರುತ್ತೆ. ಚರ್ಚಿನ ಬೆಲ್ ಹೊಡೆದಾಗ ಯಾವುದೋ ಒಂದು ಹಾಡನ್ನು ಹಿಂದೆಂದೋ ಕೇಳಿದ ನೆನಪು ನಾಯಕನಿಗೆ ಆಗಿರುತ್ತೆ. ಸರ್ಕಾರ ಬ್ರೈನ್‌ವಾಶ್ ಮಾಡಿ ೧೯೮೪ರ ವೇಳೆಗೆ ಅದನ್ನು ಪೂರ್ಣ ಮರೆಸಿಬಿಟ್ಟಿರುತ್ತೆ. ಕೊನೆಗೆ ಆ ಹಾಡಿನ ಒಂದೆರಡು ಸಾಲುಗಳನ್ನು – ಮರೆತದ್ದು – ನೆನಪು ಮಾಡಿಕೊಳ್ಳೋದಕ್ಕೆ ಶತಪ್ರಯತ್ನ ಮಾಡುತ್ತಾನೆ. ಕೊನೆಗೆ ನೆನಪಾಗುತ್ತೆ. ಆ ಎರಡು ಸಾಲು ನೆನಪಾದಾಗ ಅವನಿಗೆ ತನ್ನ ಮಾನವೀಯತೆಯೇ ಹಿಂದಕ್ಕೆ ಬಂದಂತೆ ಅನ್ನಿಸುತ್ತೆ. ಯಾಕಂದ್ರೆ ಯಾವ ದೇಶದಲ್ಲಿಯೇ ಆಗಲಿ, ಅಜ್ಞಾನ ಬಡತನ ಇವೆಲ್ಲ ಹೆಚ್ಚಿಗೆ ಇರೋವಾಗ ಅಂತಹ ದೇಶಗಳಲ್ಲಿ ನಾವು ಕಳೆದುಕೊಳ್ಳಬಹುದಾದದ್ದು ಬಹಳ ಅಧಿಕವಾದದ್ದು. ಮತ್ತು ಈ ದೇಶದ ಅನ್ನ ಬಟ್ಟೆಯ ಸಮಸ್ಯೆಯನ್ನು ಸಾಲ್ವ್ ಮಾಡ್ತೀವಂತ ಹೊರಡುವವರು ಆಡುವ ಮಾತುಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬಹುದು, ಆದ್ದರಿಂದ ಎಷ್ಟು ಸಾರಿ ಹೇಳಿದರೂ ಸಾಲದು. ನಾನಿದನ್ನು ರಿಪೀಟು ಮಾಡ್ತಾ ಇದ್ದೀನಿ. ನೀವಿದನ್ನ ಕ್ಷಮಿಸಬೇಕು. ಯಾಕಂದ್ರೆ ನಿತ್ಯಪತ್ರಿಕೆಯಲ್ಲಿ ಅವರು ಅದನ್ನೇ ರಿಪೀಟು ಮಾಡೋವಾಗ, ಸಿಕ್ಕಿದ ಈ ಒಂದು ಸಂದರ್ಭದಲ್ಲಿ ನಾನಿದನ್ನು ರಿಪೀಟ್ ಮಾಡದೆ ಬೇರೇನು ಮಾಡಬೇಕು? ನಮಗೆ ಇಂಥ ಸಂದರ್ಭ ಮತ್ತೆ ಸಿಗೋದಿಲ್ಲ; ಇವತ್ತು ನನಗೆ ಸಿಕ್ಕಿದೆ; ನಾಳೆ ಸಿಗುತ್ತೆ ಅಂತ ಗ್ಯಾರಂಟಿ ಇಲ್ಲ. ಆದ್ದರಿಂದ ಸಿಕ್ಕಿದಾಗ ಇದನ್ನ ಹೇಳಿಬಿಡಬೇಕು. ಹೇಳಬೇಕು, ಯಾಕೆಂದರೆ ನಾನೂ ಇನ್‌ಕಮ್ ಟ್ಯಾಕ್ಸ್ ಕೊಡ್ತೀನಿ ಆದ್ದರಿಂದ. ಮತ್ತು ನಾನು ಸಾಹಿತಿ ಆದ್ದರಿಂದ, ಪ್ರತಿಯೊಬ್ಬನಿಗೂ ಅವನವನ ಕೆಲಸ ಮಾಡುವ ಹಕ್ಕಿದೆ ತಾನೆ? ಇದೆ ಅಂತಾರೆ ಪುಸ್ತಕದಲ್ಲಿ. ಆದ್ದರಿಂದ ನನ್ನ ಕೆಲಸವನ್ನು ನಾನು ಮಾಡ್ತಾ ಇದ್ದೀನಿ. ಇದನ್ನು ನಾನು ಚಲಾವಣೆ ಮಾಡದೆ ಇನ್ಯಾರು ಮಾಡಬೇಕು? ನಾನು ನಿಮ್ಮ ಬರಹಗಾರ. ನಿಮ್ಮ ಪರವಾಗಿ ನಾನು ಬರೀತೀನಿ. ಆದ್ದರಿಂದ ನಾನು ನಿಮ್ಮ ಪರವಾಗಿ ಈ ಮಾತನ್ನು ಹೇಳಬೇಕು. ಯಾಕಂದ್ರೆ ನನಗೆ ಬರಹಗಾರನಾಗಿ ಒಳಗಿನಿಂದ ಏನು ಅನ್ನಿಸುತ್ತದೆ, ಏನು ಗೊತ್ತಿದೆ – ಅದನ್ನು ನಾನು ಹೇಳದಿದ್ರೆ ನನ್ನ ಉದ್ಯೋಗಕ್ಕೆ ಮೋಸ ಮಾಡಿಕೊಂಡ ಹಾಗೆ. ಆತ್ಮವಂಚನೆ ಮಾಡಿಕೊಂಡ ಹಾಗೆ. ಅದನ್ನು ನಾನು ಮಾಡಿಕೊಳ್ಳಬಾರದು. ಇನ್ನು ಯರೋ ಬೇರೆಯವರು ಮಾಡಿಕೊಂಡರೆ – ಆಗಲೂ ಗೊತ್ತಿದೆ; ಅವರು ಮಾಡಿಕೊಳ್ಳುವಾಗ ತಮ್ಮನ್ನು ತಾವೇ ದ್ವೇಷಿಸಿಕೊಳ್ತಾರೆ – ಅಂತ. ಪ್ರಾಯಶಃ ಈ ದೇಶದಲ್ಲಿ ಬಹಳ ಜನಕ್ಕೆ ಇವತ್ತು ತಮ್ಮ ಬಗ್ಗೆ ತಮಗೇ ಬಹಳ ನಾಚಿಕೆಯಾಗುತ್ತದೆ ಅಂತ ಕಾಣುತ್ತೆ. ಆಗುತ್ತ ಇದೆ ನನಗೆ ಗೊತ್ತು. ಅವರೆಲ್ಲ ಒಂದಲ್ಲ ಒಂದು ದಿನ ತಮಗಾದ ನೋವನ್ನು, ನಾಚಿಕೆಯನ್ನು ಅಭಿವ್ಯಕ್ತಪಡಿಸಿಯೇ ಪಡಿಸ್ತಾರೆ. ಯಾಕಂದ್ರೆ ಯಾವ ಮನುಷ್ಯನೂ ತನ್ನ ಸ್ವಾತಂತ್ರ್ಯವನ್ನು ಬರೀ ಅನ್ನ ಬಟ್ಟೆಗಾಗಿ ಅಥವಾ ಮಂತ್ರಿ ಪದವಿಗಾಗಿಯೂ ಕೂಡ ಕಳಕೊಳ್ಳಲಾರ ಅಂತ ನಾನು ನಂಬಿದ್ದೀನಿ. ನಾನು ಕೇಳಿದ್ದೇನೆ: ಆ ಜೇನುಕುರುಬರಿಗೆ ಜಮೀನು ಕೊಟ್ಟುಬಿಟ್ಟು – ‘ನೀವು ಇದನ್ನು ಉಳ್ಕೊಂಡು ಇರ್ರಯ್ಯಾ, ನಿಮಗೆ ಸಾಲಗೀಲ ಕೊಡಿಸ್ತೀನಿ’ ಅಂದರೆ – ಇರ್ತೀನಿ ಅಂದು ಐದು ರೂಪಾಯಿಗೋ ಆರು ರೂಪಾಯಿಗೋ ಅದನ್ನು ಮಾರಿಬಿಟ್ಟು ಹೆಂಡ ಕುಡಿದು ಹೋಗಿ ಬಿಡ್ತಾರಂತೆ. ನನಗೆ ವಂಡರ್ ಫುಲ್ ಪೀಪಲ್ ಅಂತ ಅನ್ನಿಸ್ತ ಆ ಜೇನುಕುರುಬರ ಬಗ್ಗೆ ಕೇಳಿದಾಗ, ನೀವು ಇನ್ನೂ ಚೆನ್ನಾಗಿ ಬಟ್ಟೆಗಿಟ್ಟೆ ಹಾಕಿಕೊಳ್ಳಬಹುದು, ಟ್ರಾನ್ಸಿಸ್ಟರು ಇಟ್ಟುಕೊಳ್ಳಬಹುದು ಅಂದರೆ – ಬ್ಯಾಡ, ನಮಗದರಿಂದ ಮೈಲಿಗೆಯಾಗ್ತದೆ ಅಂತ ಕಾಡಿಗೆ ಓಡಿಹೋಗ್ತಾರಂತೆ. ಅಲ್ಲಿ ಹೋಗಿ ಇವತ್ತಿಗೂ ಅರ್ಧ ಗೆಣಸನ್ನು ತಿಂದು ಇನ್ನರ್ಧ ಗೆಣಸನ್ನು ಅಲ್ಲೇ ಬಿಟ್ಟು ಬರ್ತಾರಂತೆ. ಪ್ರಾಯಶಃ ನಾವು ಎಷ್ಟು ಮುಂದೆ ಹೋದ ನಂತರವೂ ಈ ಜನಗಳಿಂದ ಕಲೀಬೇಕಾದ್ದು ಇನ್ನು ಉಳಿದಿರುತ್ತೆ ಅಂತ ಕಾಣತ್ತೆ. ನಾವು ಒಂದು ಬಂಗಲೆಗೋಸ್ಕರ, ಭಡತಿಗೋಸ್ಕರ ಈ ಸ್ವಾತಂತ್ರ್ಯಗಳನ್ನು ಕಳೆದುಕೊಂಡು ಬಿಟ್ಟಿರ್ತೀವಿ. ಜೇನುಕುರುಬರು ಕಳಕೊಳ್ಳೋದಿಲ್ಲ ನೋಡಿ. ಆದ್ದರಿಂದ ಇವತ್ತು ನನಗೆ ಜೇನುಕುರುಬರಿಗೆ ‘ಜೈ’ ಅಂತ ಹೇಳಬೇಕು ಅನ್ನಿಸುತ್ತೆ. ಅಷ್ಟು ಸ್ಪಿರಿಟ್ ನಮ್ಮಲ್ಲೂ ಇದ್ದುಬಿಟ್ರೆ ನಾವು ಪ್ರಾಯಶಃ ನಮ್ಮ ಮಾನ ಕಳಕೊಳ್ಳೋದಿಲ್ಲ. ಆಗ ಹನುಮಂತಯ್ಯನವರು ಹೇಳಿದ ಮಾತು ನಿಜವಾಗುತ್ತೆ – ಯಾವ ಒಂದು ಮಗುವಾದರೂ ಈ ದೇಶದ ಪ್ರಧಾನಿಯಾಗೋದು ಸಾಧ್ಯ. ಅದು ಅನುವಂಶಿಕವಾಗಿ ಉಳಿಯೋದಿಲ್ಲ, ಹರಿದು ಬರೋದಿಲ್ಲ.

ಡಿಸೆಂಬರ್ ೧೨ ೧೯೭೬ರಂದು ತುರ್ತು ಪರಿಸ್ಥಿತಿಯ ಸಮಯದಲ್ಲಿ ಶಿವಮೊಗ್ಗೆಯಲ್ಲಿ ಏರ್ಪಡಿಸಿದ್ದಸಾಹಿತ್ಯ ಸಂಜೆಯಲ್ಲಿ ಮಾಡಿದ ಭಾಷಣದ ಬರಹ ರೂಪ.