ಮಾಸ್ತಿಯವರ ಸಣ್ಣ ಕಥೆಗಳನ್ನು ಎಂ.ಜಿ.ಕೆ. ಯವರ ಲೇಖನದ ಮುಖೇನ ಮತ್ತೆ ಓದುವಾಗ ನನಗೆ ಎಂ.ಜಿ.ಕೆ.ಯ ಆಳವೂ ಸೂಕ್ಷ್ಮವೂ ಆದ ದೃಷ್ಟಿಕೋನ, ನಿಷ್ಠುರ ತರ್ಕದಲ್ಲಿ ಕೆಲವು ಕೊರತೆಗಳು ಕಂಡಿವೆ. ಎಂ.ಜಿ.ಕೆ. ಯ ಕೊನೆಯ ಮಾತು ಹೀಗಿದೆ;

ನಮ್ಮ ಚರಿತ್ರೆಯ ಒಂದು ಘಟ್ಟದಲ್ಲಿ ಅಸ್ತಿತ್ವದಲ್ಲಿದ್ದ ಸಾಮಾಜಿಕ ಚೌಕಟ್ಟಿಗೂ ಕತೆಗಳಲ್ಲಿ ಸೃಷ್ಟಿಯಾಗುವ ಚೌಕಟ್ಟಿಗೂ ಮಾಸ್ತಿಯವರ ಸಂವೇದಾನಶೀಲತೆಗೂ ಇರುವ ಅತಿ ನಿಕಟ ಸಂಬಂಧದಿಂದಾಗಿ ನಮ್ಮ ಸಂವೇದನಾಶೀಲತೆ ಬದಲಾದಂತೆ ಈ ಪ್ರಭಾವ ಕಡಿಮೆಯಾಗುವುದಲ್ಲದೆ ಹೆಚ್ಚಾಗುವುದು ಸಾಧ್ಯವಿಲ್ಲ.

(‘ಶ್ರೀನಿವಾಸ’ : ಸಂ. ರಂಗನಾಥನ್, ಪು: ೧೪೦)

ಎಂ.ಜಿ.ಕೆ.ಯ ದೃಷ್ಟಿಕೋನದಿಂದ ಮಾಸ್ತಿಯ ಹೆಚ್ಚಳ ನಿಮಗೆ ತಿಳಿಯುತ್ತದೆ; ಜೊತೆಗೇ ಈ ದೃಷ್ಟಿಕೋನದ ಒಳ್ಳೆಯ ಅಂಶವೆನ್ನಿಸುವ ಅದರ ನಿಷ್ಠುರ ತರ್ಕದಿಂದಾಗಿಯೇ ಈ ಕೊನೆಯ ನಿರ್ಣಯ ಎಂ.ಜಿ.ಕೆ. ಗೆ ಸುಲಭವಾಯಿತು ಎಂದೂ ಅನ್ನಿಸುತ್ತದೆ. ಎಂ.ಜಿ.ಕೆ. ಯವರಿಗೇ ಮಾಸ್ತಿಯಿಂದಾದ ಗಾಢ ಅನುಭವವನ್ನು ಕೊಂಚ ಮರೆಯುವುದರಿಂದ ಮಾತ್ರ ಈ ನಿರ್ಣಯಕ್ಕೆ ಬರುವುದು ಸಾಧ್ಯವಾಗಿರಬಹುದು. ಮಾಸ್ತಿಗೂ ಅವರ ಕಾಲಕ್ಕೂ ಸಂಬಂಧವಿದೆ ನಿಜ. ಆದರೆ ಏನು ಎಷ್ಟು ನಿಕಟ? ಅದು ಅತಿ ನಿಕಟವಾಗಿತ್ತು ಎಂದರೆ ಮಾಸ್ತಿಗೆ ವೈಯಕ್ತಿಕವಾದ, ತನ್ನ ಕಾಲದಿಂದ ಹೊರತಾಗಿ ನಿಲ್ಲಬೇಕಾದ ಸಂವೇದನಾಶೀಲತೆ ಮತ್ತು ಪ್ರತಿಭೆಗಳು ಅಗತ್ಯವೇ ಇರಲಿಲ್ಲವೆ?

ಮಾಸ್ತಿಯನ್ನು ಗಂಭೀರವಾಗಿ ಓದುವವನಿಗೆ ಎಂ.ಜಿ.ಕೆ. ಗಿಂತ ಹೆಚ್ಚು ಆಳವಾದ ವಿಮರ್ಶೆ ಈವರೆಗೆ ಪ್ರಕಟವಾದದ್ದರಲ್ಲಿ ಸಿಗಲಾರದು ಎಂದು ತಿಳಿದೂ ನನಗೆ ಈ ನಿರ್ಣಯ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಮಾಸ್ತಿಯವರು ತನ್ನ ಕಾಲದ ಸದಭಿರುಚಿಯುಳ್ಳ ಓದುಗರಿಗೆ ಒಪ್ಪಿಗೆಯಾಗುವಂತೆ ಬರೆಯುತ್ತಾರೆ – ನಿಜ. ಇದು ಅವರ ಕಥೆಗಳ ಧಾಟಿಗೆ ಮತ್ತು ‘ಉಪಾಯ’ಗಳಿಗೆ ಸಂಬಂಧಿಸಿದ್ದು. ಒಬ್ಬ ಸದ್ಗೃಹಸ್ಥನಿಗೆ ಒಪ್ಪಿಗೆಯಾಗುವಂತೆ ಮಾಸ್ತಿ ಬರೆಯುತ್ತಾರೆ ಎಂದ ಮಾತ್ರಕ್ಕೆ ಮಾಸ್ತಿಯ ನಿಲುವು, ದೃಷ್ಟಿಕೋನಗಳು ಅಥವಾ ಸಂವೇದನಾಶೀಲತೆ ಅವರ ಕಾಲಕ್ಕೂ ಸುಲಭವಾಗಿ ಸಾಧ್ಯವಾದದ್ದು ಎಂದು ನನಗೆ ಅನ್ನಿಸುವುದಿಲ್ಲ.

ಉದಾಹರಣೆಗೆ ‘ವೆಂಕಟಿಗನ ಹೆಂಡತಿ’ ನೋಡುವ. ಎಂ.ಜಿ.ಕೆ. ಪ್ರಕಾರ ಈ ಕಥೆಯ ಸಫಲತೆಗೆ ಕಾರಣ: ‘ಒಂದು ಸಮಾಜಕ್ಕೂ ವೆಂಕಟಿಗ ಮತ್ತು ಅವನ ಹೆಂಡತಿಗೂ ಇರುವ ನಿಕಟ ಸಂಬಂಧ’; ಮತ್ತು ‘ಗಂಡನನ್ನು ಬಿಟ್ಟ ಅಥವಾ ನೀತಿ ಕಟ್ಟಳೆಗಳನ್ನು ಮುರಿದ ಹೆಣ್ಣು, ಆಕೆಯನ್ನು ಪುನಃ ಒಪ್ಪಿ ಹಿಂತೆಗೆದುಕೊಳ್ಳುವ ಗಂಡು – ಕಥೆ ಹೇಳುವವನು ಸೇರಿದ ಬ್ರಾಹ್ಮಣ ಸಮಾಜಕ್ಕಿಂತ ಕಮ್ಮಿ ನಿಷ್ಠುರವಾದ ಸಮಾಜಕ್ಕೆ ಸೇರಿರುವುದು’ (ಅದೇ ೧೩೭,೧೩೮). ಇಲ್ಲಿ ಎಂ.ಜಿ.ಕೆ. ಹೇಳುವ ಮಾತುಗಳು ತಪ್ಪಲ್ಲ; ಆದರೆ ವೆಂಕಟಿಗನಿಗೆ ಸಾಧ್ಯವಾದ್ದು ಅವನು ಕಮ್ಮಿ ನಿಷ್ಠುರವಾದ ಸಮಾಜಕ್ಕೆ ಸೇರಿದವನಾದ ಕಾರಣದಿಂದ ಎಂಬುದಷ್ಟೇ ಅವರ ಮಾತಿನ ಅರ್ಥವಾದರೆ ಕಥೆಗೆ ಅಪಚಾರವಾದಂತೆ. ಈ ಔದಾರ್ಯ, ಈ ಉದಾತ್ತತೆ ವೆಂಕಟಿಗನಿಗೆ ಮಾತ್ರ ಸಾಧ್ಯವಾದ್ದು ಎಂಬ ಧ್ವನಿಯೂ ಕಥೆಯಲ್ಲಿದೆ. ಅವನ ಹೆಂಡತಿಯ ಮಗು ಅವನಿಗೆ ಹುಟ್ಟಿದ್ದಲ್ಲದಿರಬಹುದು. ಆ ಬಗ್ಗೆ ವೆಂಕಟಿಗ ಉದಾತ್ತತೆಯಿಂದ ನಡೆದುಕೊಂಡಿದ್ದಾನೆ. ಕಥೆಯ ನಿರೂಪಕನಿಗೂ ‘ಮೊದಲ ಕ್ಷಣ ಮಗು ವೆಂಕಟಿಗನಂತೆ ಇದೆಯೇ ನೋಡೋಣವೇ ಎನ್ನಿಸಿತು. ಒಡನೆಯೇ, ಕೈ ಹಿಡಿದ ಗಂಡ ಮಾಡದಿರುವ ಪರೀಕ್ಷೆಯನ್ನು ನಾನ ಮಾಡಲಿಯೇಕೆ ಎಂದುಕೊಂಡು ಸುಮ್ಮನಾದೆನು.’ ಎಂದು ಮಾಸ್ತಿ ಬರೆಯುತ್ತಾರೆ. (ಸಣ್ಣ ಕಥೆಗಳು, ೭) ಅಂದರೆ ವೆಂಕಟಿಗನ ಉದಾತ್ತತೆ ಪ್ರತಿನಿತ್ಯದ ಜೀವನದ ಸವಾಲಿನಲ್ಲಿ ಉಳಿಯಬೇಕಾದ್ದು. ಬರಿಯ ಸಾಮಾಜಿಕ ಕಾರಣಗಳಷ್ಟರಿಂದಲೇ ಈ ಉದಾತ್ತತೆ ನೈಜವಾಗಿ ಉಳಿಯಲಾರದು.

ಮನುಷ್ಯನ ಪ್ರವೃತ್ತಿಗಳನ್ನೂ, ನೈಸರ್ಗಿಕವಾದ್ದನ್ನೂ ಮನುಷ್ಯನ ಸಂಸ್ಕೃತಿಯ ಜೊತೆ (ಫ್ರಾಯ್ಡ್ ಭಾಷೆಯಲ್ಲಿ ಹೇಳುವುದಾದರೆ ಲಿಬಿಡೋವನ್ನು ಸೂಪರ್‌ಇಗೊ ಜೊತೆ) ಮಾಸ್ತಿ ಎದುರುಬದುರಾಗಿಸುತ್ತಾರೆ – ನಿರ್ಭಿಡೆಯಿಂದ. ಆದರೆ ಮಾಸ್ತಿಯ ಒಲವಿರುವುದು, (ಆಶ್ಚರ್ಯವೆನಿಸಿದರೂ ಪ್ರಾಯ್ಡ್‌ಗಿರುವಂತೆಯೇ) ಸಂಸ್ಕೃತಿಯ ಕಡೆ. ಆದರೆ ಈ ತಿಕ್ಕಾಟದಲ್ಲಿ ಸಂಸ್ಕೃತಿ ಸುಲಭವಾಗಿ ಗೆದ್ದಿತು ಎಂದು ಮಾಸ್ತಿ ಎಲ್ಲ ಕಡೆಯೂ ನಮಗೆ ಅನ್ನಿಸುವಂತೆ ಬರೆಯುವುದಿಲ್ಲ. ‘ವೆಂಕಟಶಾಮಿಯ ಪ್ರಣಯ’, ‘ವೆಂಕಟಿಗನ ಹೆಂಡತಿ’, ‘ಆಚಾರ್ಯರ ಪತ್ನಿ’, ‘ಗೌತಮಿ ಹೇಳಿದ ಕಥೆ’ – ಇಂಥ ಕಥೆಗಳಲ್ಲಿ ನಮ್ಮ ಜಾಗೃತ ಮನಸ್ಸು ಮತ್ತು ನಾಗರಿಕತೆ ಒಪ್ಪಿಕೊಂಡ ಸಾಂಸ್ಕೃತಿಕ ಮೌಲ್ಯಗಳು ಮನುಷ್ಯನ ಮೂಲಭೂತ ಪ್ರವೃತ್ತಿಗಳಿಗೆ ಅನುವು ಮಾಡಿಕೊಡಬಲ್ಲವೆ? ಎಷ್ಟರ ಮಟ್ಟಿಗೆ? ಗಾಯದ ಗುರುತಗಳು ಉಳಿಯುತ್ತವಲ್ಲವೆ? ಎಂಬ ಒಳನೋಟಗಳು ಮಾಸ್ತಿಯವರಿಗೆ ಯಥೇಚ್ಛ ಇವೆ. ಅವರ ಕಥೆಗಳ ಧಾಟಿಯಿಂದ ಸಾಧ್ಯವಾಗುವ ಮೌನಗಳಲ್ಲೂ ಮಾಸ್ತಿಗೆ ಜೀವನದ ಮೂಲದಲ್ಲಿರುವ ಈ ದುರಂತಗಳ ಪ್ರಜ್ಞೆಯಿಂದ ಎನ್ನಿಸುತ್ತದೆ. ವೆಂಕಟಿಗನ ಹೆಂಡತಿಗೆ ಉದಾತ್ತವಾದ ಗಂಡ ಯಾಕೆ ಸಾಲದಾದ? ನಾವು ಈ ಪ್ರಶ್ನೆ ಕೇಳದಂತೆ ಮಾಸ್ತಿ ಅವನ ಹೆಂಡತಿಯನ್ನು ಕ್ರೂರಿಯೆಂದೋ ಲೋಭಿಯೆಂದೋ ಅಸಹಜ ಕಾಮುಕಿಯೆಂದೋ ಚಿತ್ರಿಸಬಹುದಿತ್ತು. ಆ ಹೆಣ್ಣಿಗೆ ಶ್ರೀಮಂತ ಬೇಕೆನ್ನಿಸಿದ; ಆದರೆ ಅವನು ಬರೀ ಧನವಂತನೆಂಬ ಕಾರಣಕ್ಕೋ? ಈ ಅನುಮಾನಗಳಿಗೆ (ಅಂದರೆ ವೆಂಕಟಿಗನ ಕೊರತೆಯ ಬಗ್ಗೆಯೂ ಚಿಂತಿಸುವುದಕ್ಕೆ) ಈ ಕಥೆಯಲ್ಲಿ ಎಡೆಯಿದೆ. ‘ವೆಂಕಟಶಾಮಿಯ ಪ್ರಣಯ’ದಲ್ಲಿ ಡೊಂಬರ ಹುಡುಗಿಯ ಬಗ್ಗೆ ಆಸೆಯಾಗಿರುವುದು ನಾಯಿಂದನಿಗೆ ಮಾತ್ರವಲ್ಲ; ಊರ ಹಿರಿಯರಿಗೂ. ‘ಗೌತಮಿ ಹೇಳಿದ ಕಥೆ’ಯಲ್ಲಿ ನಮ್ಮನ್ನು ಆಳವಾಗಿ ಕಲಕುವುದು ಕುಲಪತಿಗಳ ನಿಗ್ರಹ ಮಾತ್ರವಲ್ಲ, ಗೌತಮಿಯ ಅದಮ್ಯವಾದ ಕಾಮ. ಇದು ‘ಅದಮ್ಯ’ ಯಾಕೆಂದರೆ ಈ ಕಾಮವೇ ಅವಳನ್ನು ಶಕುಂತಲೆಯ ಕೊಂಚಮಟ್ಟಿನ ಬಂಡಾಯದ ಪ್ರೇಮ ಪ್ರಕರಣಕ್ಕೆ ಸಹಾನುಭೂತಿಯುಳ್ಳವಳೂ ಸಹಾಯಕಳೂ ಆಗುವಂತೆ ಮಾಡಿದ್ದು.

ಜೀವಂತವಾದ್ದು ಸಾಮಾಜಿಕ ಕಟ್ಟು ಕಟ್ಟಳೆಗಳನ್ನು, ಸಾಂಪ್ರದಾಯಿಕ ನೀತಿ ನಿಯಮಗಳನ್ನು ಬಿರಿಯುವಂತೆ ಇರುತ್ತದೆ. ಇದೇ ಪ್ರಕೃತಿ ಎಂದು ಒಳನೋಟವನ್ನು ಸಾಂಪ್ರದಾಯಿಕರಿಗೆ ಒಪ್ಪಿಗೆಯಾಗುವಂತೆ ಬರೆಯುವ ಮಾಸ್ತಿಯ ಧಾಟಿಯಿಂದಲೇ ತಂತ್ರಗಳಿಂದಲೇ ಅಂದರೆ ಅವರು ಬಳಸುವ ‘ಉಪಾಯ’ಗಳಿಂದಲೇ ಕಥೆಗಳಲ್ಲೊಂದು ಟೆನ್‌ಶನ್‌ ಹುಟ್ಟಿಕೊಳ್ಳುತ್ತದೆ. ಮಾಸ್ತಿಯ ಸಾಂಪ್ರದಾಯಿಕ ಓದುಗನೂ ‘ಇವೆಲ್ಲ ಸಹಜವಾಗಿ ಇವೆ’ ಎಂಬುದನ್ನು ಕಷ್ಟವಿಲ್ಲದೆ ಒಪ್ಪಿಕೊಳ್ಳುವಂಥವನು ಎನ್ನಿಸುವಷ್ಟು ನಿಕಟ ಸಂಬಂಧ ಮಾಸ್ತಿಯ ಸಂವೇದನಾಶೀಲತೆಗೂ ಆಗಿನ ಸಾಮಾಜಿಕ ಚೌಕಟ್ಟಿಗೂ ಇತ್ತು ಎಂದು ನನಗನ್ನಿಸುವುದಿಲ್ಲ. ಕಥೆಯ ತಂತ್ರದಲ್ಲಿ ಮಾಸ್ತಿ ಬಳಸುವ ದೂರುಗಳು, ವೆಂಕಟಿಗನ ಹೆಂಡತಿಯಂಥ ಕಥೆಯಲ್ಲಿ ಕಥೆಗೆ ಅವರು ಕಟ್ಟುವ ಫ್ರೇಮುಗಳು, ಉಪಾಯಗಳು ಅವಶ್ಯವಾಗುವುದು ಓದುಗನಿಗೆ ಪ್ರಾಯಶಃ ಇಲ್ಲದಿರುವ ಸಹಾನುಭೂತಿಯನ್ನು ಕುದುರಿಸಲೆಂದೇ ಹಿಗ್ಗಿಸಲೆಂದೇ ಎಂದು ನಾನು ತಿಳಿದಿದ್ದೇನೆ.

ಮನುಷ್ಯ ಸಮಾಜಜೀವಿಯೂ ಆದ್ದರಿಂದ ಈ ಪ್ರವೃತ್ತಿ – ಸಂಸ್ಕೃತಿಗಳ ಘರ್ಷಣೆಯಲ್ಲಿ ಸಂಸ್ಕೃತಿ ಗೆಲ್ಲದೆ ವಿಧಿಯಲ್ಲ ಎಂಬ ದೃಷ್ಟಿ ತಾಳುವ ಲೇಖಕರು ಮಾಸ್ತಿಯೆ? ಅಥವಾ ಗೆಲ್ಲಬೇಕು ಎಂಬುವವರೆ? ಅಥವಾ ಗೆಲ್ಲುವಷ್ಟು ನಮ್ಮ ಸಂಸ್ಕೃತಿ ದೊಡ್ಡದು ಎನ್ನುವವರೆ? ಹಾಗಿದ್ದಲ್ಲಿ ಅವರು ತಿಳಿದಷ್ಟು ನಿಜವಾಗಿಯೂ ನಮ್ಮ ಸಂಸ್ಕೃತಿ ಆರೋಗ್ಯಕರವಾದದ್ದಾಗಿತ್ತೆ? ಆ ಸಂಸ್ಕೃತಿಯ ಕೊರತೆಗಳನ್ನು ಬಹಿರಂಗಗೊಳಿಸುವಂಥ ಪ್ರಶ್ನೆಗಳನ್ನು ಎತ್ತಕೂಡದೆಂದು ನೆಮ್ಮದಿ ಬಯಸುವ ಲೇಖರ ಮಾಸ್ತಿಯವರೆ?

ಮೇಲಿನ ಅನುಮಾನಗಳು ಏಳುವಂತೆ ಮಾಸ್ತಿ ಬರೆಯುತ್ತಾರೆಂದು ನನಗೂ ಅನ್ನಿಸಿಲ್ಲವೆಂದಲ್ಲ. ಆದರೆ ಮತ್ತೆ ಮಾಸ್ತಿಯನ್ನು ಓದುತ್ತಿರುವ ನನಗೆ ಇನ್ನಷ್ಟು ತಾಳ್ಮೆಯಿಂದ ಅವರನ್ನು ಓದಬೇಕೆನ್ನಿಸಿದೆ. ಮಾಸ್ತಿಯ ಸಂವೇದನಾಶೀಲತೆ ಒಂದು ಕಾಲದಲ್ಲಿ ಮಾತ್ರ ಆ ಕಾಲದಿಂದ ಸಾಧ್ಯವಾದದ್ದು ಎಂಬ ನಿರ್ಣಯವನ್ನು ಅನುಮಾನಿಸುವುದರ ಮೂಲಕ ಈ ಪ್ರಶ್ನೆಗಳಿಗೆ ಮತ್ತೆ ಬರುವುದು ಅಗತ್ಯವೆನ್ನಿಸಿದೆ.

ಬರಿಯ ಒಂದು ಅನಿಸಿಕೆಯನ್ನು ಮಂಡಿಸಿ ಈ ಪುಟ್ಟ ಲೇಖನ ಮುಗಿಸಲು ಓದುಗನ ಅನುಮತಿ ಬೇಡುತ್ತೇನೆ. ಪ್ರಾಯಕ್ಕೆ ಬರುತ್ತಿರುವ ಮಕ್ಕಳಿಗೆ ಯಾವನಾದರೂ ಒಬ್ಬ ಕನ್ನಡ ಲೇಖಕನನ್ನು ಓದಲು ಕೊಡಬೇಕೆಂದು ಅನ್ನಿಸುವುದಾದರೆ ಅದು ಮಾಸ್ತಿ ಎಂದು ನನ್ನ ಭಾವನೆ. ಜೀವನದ ನಿಜಗಳೇನು, ನೋವುಗಳೇನು, ತಾಳುವುದೆಂದರೇನು, ಗೆಲ್ಲುವುದೆಂದರೇನು ಎಂಬ ಕಷ್ಟಗಳನ್ನು ಭಾವಾತಿರೇಕವಿಲ್ಲದೆ, ಸೋಗಿಲ್ಲದೆ ಎದುರಿಸಲು ಖಂಡಿತ ಮಾಸ್ತಿ ಕಲಿಸುತ್ತಾರೆ. ನಮ್ಮ ಭಾವನಾ ಪ್ರಪಂಚವನ್ನು ಪಕ್ವಾಗಿಸಬಲ್ಲ ಶಿಕ್ಷಣ ಅವರ ಕಥೆಗಳಿಂದ ಖಂಡಿತ ಸಿಗುತ್ತದೆ. ನಯವಾದ ಮಾತನ್ನು ಆಡುವಂಥವರನ್ನೆಲ್ಲ ಅನುಮಾನದಿಂದ ನೋಡುವುದು ಸರಿಯೆನ್ನಿಸುವ ಈ ಕಾಲದ ಅಂಥ ಮಾತುಗಳನ್ನೇ ಆಡಿಯೂ ಪ್ರಾಮಾಣಿಕವಾಗಿರುವ ಮಾಸ್ತಿಯವರಂಥ ಅಪ್ಪಟ ಸಾಹಿತಿಗಳು ಕನ್ನಡದಲ್ಲಾಗಲೀ ಇಂಗ್ಲಿಷನಲ್ಲಾಗಲೀ ತೀರ ಅಪರೂಪ.

ಇದು ಪುಸ್ತಕ ಪುರವಣಿ: ವಿಶೇಷಾಂಕ೧೯೭೯ ರಲ್ಲಿ ಪ್ರಕಟಿತ ಲೇಖನ.