ಇಲ್ಲಿನ ಹಲವು ಲೇಖನಗಳು ನಾನು ಆಡಿದ ಮಾತುಗಳನ್ನು ರೆಕಾರ್ಡ್‌ ಮಾಡಿಕೊಂಡು ಬರಹಕ್ಕೆ ಇಳಿಸಿದ್ದರ ಫಲ. ಇನ್ನು ಕೆಲವು ವಿಶಿಷ್ಟ ರಾಜಕೀಯ ಸಂದರ್ಭಗಳಲ್ಲಿ ನನ್ನ ಪ್ರತಿಕ್ರಿಯೆಯಾಗಿ ಹುಟ್ಟಿಬಂದವು. ಮತ್ತೆ ಶ್ರೀಮತಿ ಇಂದಿರಾ ಗಾಂಧಿಯವರ ಏಕಾಧಿಪತ್ಯವನ್ನು ನಮ್ಮ ದೇಶ ಒಪ್ಪಿಕೊಂಡ ಎಂಬತ್ತರ ದಶಕದ ಈ ಪ್ರಾರಂಭದಲ್ಲಿ ಕಳೆದ ದಶಕದ, ಈಗ ವಿಫಲವೆನ್ನಿಸಬಹುದಾದ ಹೋರಾಟಗಳಲ್ಲಿ ಪ್ರಜಾತಂತ್ರವನ್ನೂ ಸಮಾನತೆಯನ್ನೂ ಸ್ವಾತಂತ್ರ್ಯವನ್ನೂ ಒಟ್ಟಾಗಿ ಬಯಸುವ ಒಬ್ಬ ಲೇಖಕ ವ್ಯಕ್ತಪಡಿಸಿದ ಈ ಪ್ರತಿಕ್ರಿಯೆಗಳಿಗೆ ಅಷ್ಟಿಷ್ಟು ಉಪಯೋಗವಿದ್ದೀತೆಂದು ನನಗೆ ಅನ್ನಿಸಿದೆ. ಆದ್ದರಿಂದ ಈ ಲೇಖನಗಳಲ್ಲಿರಬಹುದಾದ ಪುನರುಕ್ತಿಗಳನ್ನು ಕ್ಷಮ್ಯವೆಂದು ಓದುಗರು ಭಾವಿಸಿರಬಹುದೆಂಬ ನಂಬಿಕೆ ನನಗೆ.ಮಾತಿನ ಸದ್ಯತನ ಉಳಿಯಲೆಂದು ನಾನು ಲೇಖನಗಳನ್ನು ತೀರಾ ತಿದ್ದಲು ಹೋಗಿಲ್ಲ. ಎಪ್ಪತ್ತರ ದಶಕದ ಆಂದೋಳನಗಳು ಸದ್ಯ ಕಾಣಿಸಬಹುದಾದಂತೆ ವಿಫಲವಲ್ಲವೆಂಬ ನನ್ನ ಒಳಗಿನ ನಂಬಿಕೆಯೂ ಈ ಪುಸ್ತಕವನ್ನು ಪ್ರಕಟಿಸುವಲ್ಲಿ ನನಗೆ ಧೈರ್ಯ ಕೊಟ್ಟಿದೆ.

ನಮ್ಮ ನಿತ್ಯದ ರಾಜಕೀಯ ಜೀವನವನ್ನು ವೈಚಾರಿಕತೆಯಲ್ಲಿ ತೊಯ್ಯಿಸಿ ಅರ್ಥ ಮಾಡಿಕೊಳ್ಳಬೇಕೆಂಬ ಹಂಬಲ ನನ್ನದು. ಹಾಗೆ ಮಾಡದಿದ್ದಲ್ಲಿ ನಮ್ಮ ಸಾಂಸ್ಕೃತಿಕ ಜೀವನ ಅರ್ಥಹೀನವಾಗುತ್ತದೆಂದು ನಾನು ತಿಳಿದಿರುವೆ. ಇವು ಕೇವಲ ಆಕಸ್ಮಿಕಗಳೆಂದೋ ಅಥವಾ ಕೆಲವು ವ್ಯಕ್ತಿಗಳ ಕುಹಕವೆಂದೋ ನಮ್ಮ ನಿತ್ಯ ಜೀವನದಲ್ಲಿ ನಾನು ಅನುಭವಿಸುವುದನ್ನು ತಳ್ಳಿಹಾಕುವುದು ಸುಲಭ. ಬದಲಾಗಿ, ಈ ಘಟನೆಗಳ ಹಿಂದೆ ಯಾವ ರೀತಿಯ ಐತಿಹಾಸಿಕ ಶಕ್ತಿಗಳೂ ವಿಚಾರಗಳೂ ಕಾಣುವಂತೆಯೋ ಕಾಣದಂತೆಯೋ ಕೆಲಸ ಮಾಡುತ್ತಿವೆ ಎಂದು ತಿಳಿಯುವ ಕಷ್ಟದ ಕೆಲಸದಲ್ಲಿ ನಾವೆಲ್ಲ ಭಾಗಿಗಳಾಗಬೇಕು. ವಿವಿಧ ವರ್ಗಗಳ ಆಸಕ್ತಿಗಳ ಸಂಘರ್ಷಗಳು ಹೀಗೆ ಬೌದ್ಧಿಕ ತಿಕ್ಕಾಟಗಳಾಗಿಯೂ ಪರಿವರ್ತಿತವಾದಾಗ ಮಾತ್ರ ಹೊಸ ವಿಚಾರಗಳ ಅಲೆಗಳೆದು ನಮ್ಮ ಸಾಹಿತ್ಯ ಸಂದರ್ಭವನ್ನು ಸೃಜನಶೀಲವಾಗುವಂತೆ ಮಾಡಿಯಾವು. ಎದುರಾಳಿಯ ಧೋರಣೆ ಬಗ್ಗೆ ಅಸಹನೆ ತಾಳದಂತೆ ನಡೆಸಬೇಕಾದ ಬೌದ್ಧಿಕ ಚರ್ಚೆಯ ದಿಕ್ಕಲ್ಲಿ ನನ್ನ ಈ ಕೆಲವು ಲೇಖನಗಳು ಕೆಲಸ ಮಾಡಿದೆ ಎಂಬ ನಂಬಿಕೆಯಿಂದ ಈ ಪುಸ್ತಕವನ್ನು ಓದುಗರ ಎದುರು ಇಡುತ್ತಿದ್ದೇನೆ. ವ್ಯಕ್ತಿಚಿತ್ರ, ಸಂದರ್ಶನ, ಸಾಹಿತ್ಯ ವಿಮರ್ಶೆ, ರಾಜಕೀಯ ವಿಚಾರಧಾರೆ, ಸಿನಿಮಾ – ಹೀಗೆ ಒಡೆದುಕೊಂಡಂತೆ ಕಾಣಬಹುದಾದ ಈ ಪುಸ್ತಕದ ಲೇಖನಗಳಲ್ಲಿ ಸಾಹಿತ್ಯ ಸೃಷ್ಟಿಯ ಶ್ರೇಷ್ಠತೆಯನ್ನೂ ಸಮುದಾಯ ಜೀವನದ ಆರೋಗ್ಯವನ್ನೂ ಅನ್ಯೋನ್ಯವೆಂದು ಕಾಣುವ ಪ್ರಯತ್ನವಿದೆಯೆಂದು ನಾನು ತಿಳಿದಿದ್ದೇನೆ.

ನನ್ನ ಉಳಿದ ಪುಸ್ತಕಗಳಂತೆ ಇದೂ ಕೂಡ ಚರ್ಚೆಗೆ ಅವಕಾಶ ಮಾಡಿಕೊಟ್ಟಲ್ಲಿ ನಾನು ಕೃತಾರ್ಥನಾದಂತೆ. ಯಾಕೆಂದರೆ ಅಂಥ ಚರ್ಚೆಯ ಮೂಲಕ ನಾನೂ ಕೂಡ ಇಲ್ಲಿ ಕಾಣುವುದಕ್ಕಿಂತ ಹೆಚ್ಚು ಸಮಗ್ರವಾಗಿ ನನ್ನ ವಿಚಾರವನ್ನು ಸ್ಪಷ್ಟಗೊಳಿಸಿಕೊಳ್ಳುವುದೂ ಮಂಡಿಸುವುದೂ ಸಾಧ್ಯವಾದೀತು.

ಯು.ಆರ್. ಅನಂತಮೂರ್ತಿ
೧೯೮೦