ಪ್ರ : ಸಾಹಿತ್ಯ ಮತ್ತು ಸಂಗೀತ ಎರಡರಲ್ಲೂ ಆಸಕ್ತಿ ಮಾತ್ರವಲ್ಲದೇನೇ ಪ್ರಭುತ್ವವನ್ನೂ ಪಡೆದಿದ್ದೀರಿ. ಇವರೆರಡರಲ್ಲಿ ಯಾವುದು ನಿಮಗೆ ಹೆಚ್ಚು ಹತ್ತಿರ? 

ಉ : ಸಂಗೀತ.

ಪ್ರ : ಯಾಕೆ?

ಉ : ಯಾಕಂದ್ರೆ ಹ್ಯಾಗೆ ಹೇಳೋಣ? ಸಾಹಿತ್ಯಕ್ಕಿಂತ ಸಂಗೀತದಲ್ಲಿ ಪರಿಶ್ರಮ ಹೆಚ್ಚಿದೆ. ಸಣ್ಣ ವಯಸ್ಸಿನಲ್ಲೆ ನಾನಾ ತರಹದ ಸಂಗೀತದ ಅನುಭವ ಪಡೆದೆ. ನಾನೇ ಹಾಡುವುದು, ಬೇಕಾದಷ್ಟು ಇತರ ಸಂಗೀತಗಾರರನ್ನು ಕೇಳುವುದು, ನಮ್ಮ ತಂದೆಯವರ ಸಂಗೀತ ಕೇಳುವುದು ಇಂಥ ಅನುಭವಗಳು ಆದವು. ಆದ್ರಿಂದ ಸಂಗೀತ ನನ್ನ ಮನಸ್ಸಿನಲ್ಲಿ ಕುದುರಿರಬಹುದು.

ಪ್ರ : ಅದಿಷ್ಟೇ ಕಾರಣಾಂತ ನನಗೆ ಅನಿಸಲ್ಲ. ಯಾಕಂದ್ರೆ ಪರಿಶ್ರಮದ ಮಾತಿಗೆ ಬಂದ್ರೆ ನೀವು ಸಾಹಿತ್ಯದಲ್ಲೂ ನನ್ನ ದೃಷ್ಟಿಯಲ್ಲಿ ಅಷ್ಟೇ ನಿಷ್ಣಾತರು. ಆದರೆ ಸಾಹಿತ್ಯಕ್ಕೆ ಬಂದಾಗ ನೀವು ವಿಮರ್ಶೆಯನ್ನು ಬರೀತೀರಿ. ಅದನ್ನು ವಿಶ್ಲೇಷಣೆ ಮಾಡೋದಕ್ಕೆ ಇಷ್ಟಪಡ್ತೀರಿ. ಆದರೆ, ಸಂಗೀತದಲ್ಲಿ ಸ್ವತಃ ಕಲಾವಿದರಿದ್ದೀರಿ. ಇದಕ್ಕೇನು ಕಾರಣ ಇರಬಹುದು? ನಿಮ್ಮ ಮನಸ್ಸನ್ನ ಎರಡು ಬೇರೆ ಬೇರೆ ಕಡೆಗಳಲ್ಲಿ ತೊಡಗಿಸಿದ್ದೀರಲ್ಲ ಏನು ಕಾರಣ?

ಉ : ಕಾರಣ ಹೇಳೋದು ಕಷ್ಟ. ಸಾಹಿತ್ಯಕ್ಕೆ ಬಂದಾಗ ನಾನು ಸ್ವಲ್ಪ ಬೆಳೆದಿದ್ದೆ. ಆ ವೇಳೆಗಾಗಲೇ ಸಂಗೀತದಲ್ಲಿ ಸಾಕಷ್ಟು ಪರಿಶ್ರಮವೂ ಇತ್ತು. ಬಹುಶಃ ಸಾಹಿತ್ಯದಲ್ಲಿ ಕ್ರಿಯಾತ್ಮಕತೆಯನ್ನು ಯಾವಾಗ ಕಾಣಬೇಕಿತ್ತೊ ಆಗ ಕಾಣಲಿಲ್ಲ.

ಪ್ರ : ನೀವು ಹೀಗೆ ಮಾತಾಡುವಾಗ ಎರಡು ವಿಷಯದಲ್ಲೂ ನೀವು ನಿಮ್ಮ ಬಾಲ್ಯದ ನೆನಪಿಗೆ, ಅನುಭವಕ್ಕೆ ಹೆಚ್ಚು ಒತ್ತು ಹಾಕುತ್ತಿದ್ದೀರಿ, ಅಲ್ಲವೆ?

ಉ : ಅದು ಒತ್ತು ಅಂತ ಹೇಳಲಿಕ್ಕಾಗೋಲ್ಲ. ಯಾಕಂದ್ರೆ, ನೋಡ್ರೀ, ಯಾವದೋ? ಒಂದನ್ನ ಕ್ರಿಯಾತ್ಮಕವಾಗಿ ಮಾಡ್ತೀವಿ. ಇನ್ನೊಂದರಲ್ಲಿ ಮಾಡೋದಿಲ್ಲ ಅನ್ನೋದಕ್ಕೆ ಕಾರಣ ನೀವೇ ಕೊಡಲಾರಿರಿ. ನೀವು ಒಬ್ಬ ಕ್ರಿಯಾತ್ಮಕ ಬರಹಗಾರರು. ನೀವ್ಯಾಕೆ ಇಂಗ್ಲಿಷ್‌ ಸಾಹಿತ್ಯದಲ್ಲಿ ವಿಮರ್ಶೆ ಮಾಡಿದಿರಿ. ಕನ್ನಡದಲ್ಲಿ ಕಥೆ ಬರೆದಿರಿ ಅಂತ ಕೇಳಿದರೆ ನಿಮಗೂ ಯುಕ್ತವಾದ ಜವಾಬು ಕೊಡಲಿಕ್ಕೆ ಆಗೋಲ್ಲ. ಹೀಗೆ ಕೆಲವು ಕಾರಣಗಳನ್ನು ಹುಡುಕಬಹುದು. ಬಾಲ್ಯದ ಅನುಭವ ಕೂಡ ಅಂಥ ಕಾರಣಗಳಲ್ಲಿ ಒಂದಾಗಿರಬಹುದು ಅನಿಸ್ತದೆ.

ಪ್ರ : ಆದರೆ, ಅದು ಇಂಗ್ಲಿಷ್‌ ಮತ್ತು ಕನ್ನಡದ ಪ್ರಶ್ನೆಗಳಿಗಿಂತ ಹೆಚ್ಚಾಗಿ ಎರಡೂ ಮಾಧ್ಯಮಗಳೇ ಬೇರಾದ್ದರಿಂದ ಈ ಪ್ರಶ್ನೆಯನ್ನ ನಾನು ಕೇಳ್ತಾ ಇದ್ದೀನಿ. ಯಾಕಂದ್ರೆ, ಸಾಹಿತ್ಯದಲ್ಲಿ ನಿಮ್ಮ ಪ್ರತಿಭೆ ಎಷ್ಟು ಅಂತಂದ್ರೆ ಅದು ಸಾಹಿತ್ಯದ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಂಡ ವಿಶ್ಲೇಷಣೆಯಾಗಿರುತ್ತದೆ. ಬರೀ ಪಾಂಡಿತ್ಯದ ವಿಶ್ಲೇಷಣೆ ಅಲ್ಲ, ಅಂಥ ಒಂದು ಪ್ರಕ್ರಿಯೆಯನ್ನೇ ನೀವು ಭಾಷೆಯಲ್ಲಿ ತೊಡಗಿಸದೆ ಸಂಗೀತದ ಮಾಧ್ಯಮದಲ್ಲಿ ತೊಡಗಿಸಿದ್ದು ನನಗೆ ಅರ್ಥಮಾಡಿಕೊಳ್ಳಬೇಕಾದ ವಿಚಾರ ಅನಿಸ್ತದೆ. ಈ ಬಗ್ಗೆ ಏನು ಹೇಳ್ತೀರಿ?

ಉ : ಇದನ್ನು ಹೀಗೆ ನೋಡೋಣ. ಜೋನ್‌ ಕ್ರೊ ರಾನ್ಸಮ್‌ ಸಾಹಿತ್ಯದಲ್ಲಿ ನಾನು ಮಾಡತಕ್ಕಂಥ ವಿಶ್ಲೇಷಣೆ ನನಗೆ ತಿಳಿದ ಮಟ್ಟಿಗೆ ಹೆಚ್ಚು ಟೆಕ್ಸ್‌ಚರ ಕಡೆ ವಾಲಿದೆ. ಅಂದ್ರೆ ನನ್ನ ಗಮನ ಹೆಚ್ಚು ಒಂದು ಕವನದ formal elements. ಅದರ System of recurrence ಕಡೆಗೆ ತಿರುಗಿರುತ್ತದೆ ಅಂತ ಹೇಳೋಣವೆ? ಒಂದು ಕವನ ಹೇಗೆ ಸಾಬೀತಾಗುತ್ತದೆ? ಅದು ಕವಿ ನಮಗೆ ಹೇಳ್ತಾ ಇರೋ ಮಾತುಗಳಿಂದಲೇ ಅಲ್ಲ. ಅದರ ಹಿಂದೆ ಇರುವ ರೂಪ, ಆಕಾರ, ಆ ಆಕಾರಗಳಲ್ಲಿ ಎಷ್ಟೋ ಅಂಗಗಳು, ಒಂದು ಅಂಗಕ್ಕೂ ಇನ್ನೊಂದು ಅಂಗಕ್ಕೂ ಏನು ಸಂಬಂಧ, ಅವುಗಳ ಹಂಚಿಕೆಯೆ ಅರ್ಥವಂತಿಕೆ ಇತ್ಯಾದಿಗಳಲ್ಲಿ ನನ್ನ ವಿಶ್ಲೇಷಣೆಗಳು ಹೆಚ್ಚು ತೊಡಗಿರುತ್ತವೆ. ಇದು ಬಹಳ ಮಟ್ಟಿಗೆ ಸಂಗೀತದಲ್ಲಿರುವ ನನ್ನ ಆಸಕ್ತಿಯನ್ನು ತೋರಿಸುತ್ತದೆ. ಯಾಕಂದ್ರೆ ನಮ್ಮ ಶಾಸ್ತ್ರೀಯ ಸಂಗೀತದಲ್ಲಿ, ಅದರಲ್ಲೂ ಹೆಚ್ಚಿಗೆ ಹಿಂದುಸ್ತಾನೀ ವಾದ್ಯ ಸಂಗೀತದಲ್ಲಿ message ಏನೂ ಇರೋದಿಲ್ಲ. ಸ್ವರಗಳ ಜೋಡಣೆ ಅನ್ನೋಣವೆ? ಅದೂ ಸುಮ್ಮನೆ arbitary ಜೋಡಣೆ ಅಲ್ಲ. ಅದರಲ್ಲಿ ಕ್ರಿಯಾತ್ಮಕತೆಯ ಖುಷಿ ಇದೆ. ಹೇಗೋ ಜೀವನಾನುಭವಗಳಿಗೂ ಸ್ವರಗಳ ಜೋಡಣೆಯಿಂದ ಬರುವ ಆಕಾರಗಳಿಗೂ ಒಂದು ಸಂಬಂಧ ಯಾವಾಗಲೂ ಅರಿವಾಗ್ತಾ ಇರುತ್ತದೆ. ಸಂಕ್ಷೇಪದಲ್ಲಿ ಹೇಳುವುದಾದರೆ ನಮ್ಮ ಸಂಗೀತ ಏನು? ಒಂದು ಆರೋಹಣ, ಒಂದು ಅವರೋಹಣ, ಒಂದು melodic scale. ಇದು ಸಂಗೀತ ಗೊತ್ತಿಲ್ಲದೇ ಇರುವವರಿಗೆ ಅಥವಾ ಅದರ ಸಂಸ್ಕಾರ ಇಲ್ಲದೆ ಇರುವವರಿಗೆ ಕೇಳಿದ್ರೆ ಅವರಿಗೆ ಇದು ಹಾಸ್ಯ ಅಂತ ತೋರಬಹುದು. ರಾಗ ಅಂದರೆ ಒಂದು Scale ಅಂತಂದ್ರೆ ಏನೂ ಅರ್ಥ ಮಾಡಿದ ಹಾಗೆ ಆಗಲಿಲ್ಲ. ಆ ಸ್ಕೇಲಿನೊಳಗೆ ನಾವು ಜೋಡಣೆಗಳನ್ನು ಮಾಡ್ತ ಒಂದು ಕಟ್ಟಡವನ್ನೇ ಕಟ್ಟುತ್ತೀವಿ. ಕಟ್ಟಬೇಕಾದರೆ ನಮಗೊಂದು ಖುಷಿ. ಆ ಕಟ್ಟಡ ಹೀಗೆ ಇಂತಿಂಥ ರೀತಿಯಲ್ಲೇ ಕಟ್ಟುತ್ತಾ ಇದ್ದಾನೇಂತ ಇನ್ನೊಬ್ಬ ಗುರುತಿಸಬೇಕಾದರೆ ಅವನಿಗೊಂದು ಖುಷಿ. ಈ processದಲ್ಲಿ ಗಾಢವಾದ ಅನುಭವಗಳು ಆಗುತ್ತಾ ಇರುತ್ತವೆ. The sophisticated and mature satisfaction of participating in what apparently is valuable creation. ಇಲ್ಲಿ ನನ್ನ ಸಂಗೀತಕ್ಕೂ ನನ್ನ ವಿಮರ್ಶೆಯ Slantಗೂ ಇರುವ ಸಂಬಂಧ ಕಲ್ಪಿಸಬಹುದೂಂತ ಕಾಣ್ತದೆ.

ಪ್ರ : ಅಂದ್ರೆ ಸಂಗೀತದ ಶಿಸ್ತನ್ನು ನೀವು ಸಾಹಿತ್ಯಕ್ಕೂ ಅನ್ವಯಿಸುವುದ್ರಿಂದ ಸಾಹಿತ್ಯದಲ್ಲಿರುವ ಟೆಕ್ಸ್‌ಚರಿನ ಕಡೆಗೆ ನಿಮ್ಮ ಗಮನ ಹೆಚ್ಚು ಹೋಗುತ್ತೆ. ನೀವು ಸಂಗೀತಗಾರರಾಗಿರುವುದರಿಂದ ಇದು ಬಹಳ ಕುತೂಹಲಕಾರಿಯಾದ ಸಂಗತಿ. ಇದರಿಂದಲೇನೇ ಒಂದು ಪ್ರಶ್ನೆಯನ್ನ ಕೇಳಬೇಕಾಗಿ ಬರುತ್ತೆ. ಸಾಹಿತ್ಯವನ್ನೂ ಸಂಗೀತವನ್ನೂ ಎರಡನ್ನೂ ಆಸ್ವಾದಿಸುತ್ತೀರಿ. ಈ ಎರಡೂ ನಿಮ್ಮ ವ್ಯಕ್ತಿತ್ವದ ಅಂಶಗಳನ್ನ ಬೇರೆಬೇರೆಯಾಗಿ ಇಡೋಕ್ಕೆ ನಿಮಗೆ ಸಾಧ್ಯವಿಲ್ಲ – ಅಂಥ ಮನುಷ್ಯರೂ ಅಲ್ಲ ನೀವು. ಒಂದು ಇನ್ನೊಂದರ ಮೇಲೆ ಪರಿಣಾಮ ಮಾಡಿಯೇ ಮಾಡಬಹುದು. ನನಗಿರೋ ಪ್ರಶ್ನೆಯೇನೆಂದ್ರೆ ಭಾರತೀಯ ಸಂಗೀತದ ಮಾಧ್ಯಮದಲ್ಲೂ ನೀವು ಮೆಚ್ಚುವ ಸಾಹಿತ್ಯದ ಕೆಲವು ಅಂಶಗಳಿದ್ದಾವೆಯೋ ಅಂತ? ಈಗ Donne. Eliot, Yeatsನ್ನ ನೀವು ಇಷ್ಟಪಡುತ್ತೀರಿ. ಹಾಗೇನೇ ಭಾರತೀಯ ಸಾಹಿತ್ಯದಲ್ಲೂ ಸ್ವಲ್ಪ ಬಿಗಿಯಾದದ್ದನ್ನು ಸುಲಭವಾಗಿ ದ್ರವೀಕರಿಸದೆ ಇರುವಂಥದ್ದನ್ನೇ ನೀವು ಇಷ್ಟಪಡುತ್ತೀರಿ.

ಉ : ಹೌದು. ಉದಾಹರಣೆಗಾಗಿ ಅಡಿಗರ ಹಾಗೂ ನಿಮ್ಮ ಕೃತಿಗಳನ್ನು ಇಷ್ಟಪಡುತ್ತೇನೆ.

ಪ್ರ : ಅದರಿಂದ ಏಳುವ ಪ್ರಶ್ನೆ ಏನೂಂದ್ರೆ (ನನ್ನ ಯೋಚನೆ ತಪ್ಪಿದರೂ ಇರಬಹುದು. ನೀವು ಹೇಳಿ) ಭಾರತೀಯ ಸಂಗೀತ ಸುಲಭವಾಗಿ ದ್ರವೀಕರಿಸುವಂಥದ್ದು – ಏಕೆಂದರೆ ಅದು essentially melodic ಅಂತ. ಇದರಲ್ಲಿ ಏನಾದ್ರೂ ವಿರೋಧವಿದೆಯೇ? ನಿಮ್ಮ ಭಾರತೀಯ ಸಂಗೀತದಲ್ಲಿ ನೀವು ತೊಡಗಿರುವ ಕ್ರಮಕ್ಕೂ ಮತ್ತು ಸಾಹಿತ್ಯದಲ್ಲಿ ನಿಮ್ಮ tasteಗೂ ಎರಡೂ ಬೇರೆ ಬೇರೆ ರೀತಿಯ ರುಚಿ ಅಂತ ಯಾರಾದ್ರೂ ಅಂದ್ರೆ ಏನು ಉತ್ತರ ಕೊಡ್ತೀರಿ? ಭಾರತೀಯ ಸಂಗೀತ ಮುಖ್ಯವಾಗಿ ದ್ರವೀಕರಿಸುವಂಥದ್ದು ಮತ್ತು ಆ ರೀತಿ ಆಪೇಕ್ಷೆಯನ್ನು ಕೇಳುವವರಲ್ಲಿ ಕುದುರಿಸುವಂಥದ್ದು. ನೀವೇನಂತೀರಿ?

ಉ : ಈಗ… ಭಾರತೀಯ ಸಂಗೀತ ಸುಲಭವಾಗಿ ದ್ರವೀಕರಿಸುವಂಥದ್ದು ಅನ್ನೋದು – ಸಾಹಿತ್ಯ ಸುಲಭವಾಗಿ ದ್ರವೀಕರಿಸೋದು ಅನ್ನೋ ಮಾತು ಎಷ್ಟು ತಪ್ಪಾಗ್ತದೋ ಅಷ್ಟೇ ತಪ್ಪಾಗ್ತದೆ. ಏಕೆಂದರೆ ಸಾಹಿತ್ಯದಲ್ಲೂ ಬಹಳ ಮಟ್ಟಿಗೆ ಇಂಥ ದ್ರವೀಕರಿಸುವ ಸಾಹಿತ್ಯವೇ ಹೆಚ್ಚಿಗಿರುತ್ತದೆ. ಹಾಗೇ ಭಾರತೀಯ ಸಂಗೀತ, ಶಿಲ್ಪದಲ್ಲಿ painting. ದಲ್ಲಿ ಸಹ ಈ ದ್ರವೀಕರಿಸುವ ಅಂಶಗಳು ಇರುತ್ತವೆ. ಸಂಗೀತ, ಅಂದರೆ ದ್ರವೀಕರಿಸೋದು ಅನ್ನೋದು ಒಂದು simplification ಅಷ್ಟೇ. ಈಗ ನೀವು ಹೇಳಿದ ಹಾಗೆ ಸಾಹಿತ್ಯದಲ್ಲಿ ನನಗೆ ಸ್ವಲ್ಪ ಮಟ್ಟಿಗೆ astringent ಆದ ಅಂದರೆ – ಔಷಧ ಗುಣವಿರುವ ಸಾಹಿತ್ಯ ಹೆಚ್ಚು ಹಿಡಿಸುತ್ತದೆ. ಇದಕ್ಕೂ ನನ್ನ ಸಂಗೀತಕ್ಕೂ ವಿರೋಧವಿಲ್ಲ ಅಂತ ಅನ್ನಿಸ್ತದೆ ನನಗೆ. ಏಕೆಂದರೆ ಕೆಲವರ ಅಭಿಪ್ರಾಯದಂತೆ ನನ್ನ ಸಂಗೀತವೂ ಒಮ್ಮೊಮ್ಮೆ ಔಷಧಪ್ರಾಯವಾಗಿರ್ತದೆ. ಅದರಲ್ಲಿ ಆ ದ್ರವೀಕರಿಸುವ ಸುಖ ಕೆಲವು ಮಂದಿಗೆ ಕಾಣದೆ, ‘ಏನಪ್ಪಾ ನೀನು ಬಹಳ ಜಿಗುಟಾಗಿ ಬಾರಿಸ್ತೀ? ನೀನು ಸಂಗೀತಗಾರನೋ? ವೈಯಾಕರಣಿಯೋ?’ ಅಂತ ಕೇಳಿದ್ದೂ ಉಂಟು. ಒಟ್ಟಿನಲ್ಲಿ ನಮ್ಮ ಸಂಗೀತ ನಮ್ಮ ಸಂಸ್ಕೃತಿ ಜತೆ ಬಹಳ ಸಂಬಂಧಪಡ್ತದೆ. ಈಗ ನೀವು ನಾನು ಸಂಗೀತ ಬಾರಿಸಿದ್ದನ್ನು ಬಹಳಷ್ಟು ಸಲ ಕೇಳಿರ್ತೀರಿ. ಅದನ್ನ ಕೇಳ್ತಿರಬೇಕಾದ್ರೆ ನಿಮಗೆ ಏನೇನೋ ಗೋಚರವಾಗಬಹುದು. ಈ ದ್ರವೀಕರಿಸೋದು ಗೋಚರವಾಗಬಹುದು ಒಮ್ಮೊಮ್ಮೆ. ಅಂದ್ರೆ ಆಗದೇ ಇರೋದು ಬಹಳಷ್ಟು ಅಂಶ ಇರ್ತದೆ. ಯಾವುದೋ ಏನೋ ಅನ್ವೇಷಣೆ ಮಾಡ್ತಿದ್ದಾನೆ – ವಿಸ್ತಾರದ ಮೇಲೆ ವಿಸ್ತಾರ Desolations – ಇಂಥ ಭಾವನೆಗಳು ಕೆಲವು ಕೇಳೋರಿಗೆ ಬಂದಿರಬಹುದು….

ಪ್ರ : ಅಂದರೆ ಇಲ್ಲಿ ನಿಮ್ಮನ್ನ ನಿಲ್ಲಿಸಿ ಒಂದು ಪ್ರಶ್ನೆ ಕೇಳಬೇಕಾಗಿದೆ. ನೀವು ಸರೋದನ್ನ ಮತ್ತು ಉತ್ತರಾದಿಯನ್ನ ಆರಿಸಿಕೊಂಡಿದ್ದು – ಈ ನಿಮ್ಮ ಸೆನ್ಸಿಬಿಲಿಟಿಗೆ ಎಷ್ಟರ ಮಟ್ಟಿಗೆ ಸಮರ್ಪಕ?

ಉ : ಉತ್ತರಾದಿಯನ್ನು ಆರಿಸಿಕೊಂಡಿದ್ದು ಒಂದು accident. ಏಕೆಂದರೆ ದಕ್ಷಿಣ ಹಿಂದೂಸ್ಥಾನದಲ್ಲಿ ನನಗೆ ತಿಳಿದ ಮಟ್ಟಿಗೆ ಕೊಂಕಣಿ ಮಾತಾಡುವ ಜನ ಕಡಿಮೆ. (ನಮ್ಮ ತಂದೆಯವರು ಕೊಂಕಣಿ ಮಾತಾಡ್ತಿದ್ರು.) ಈ ಕೊಂಕಣಿ ಜನ ಯಾವುದೋ ಕೆಲವು historical ಕಾರಣಗಳಿಂದ ದಾಕ್ಷಿಣಾತ್ಯ Music ಕಡೆಗೆ ಆಕರ್ಷಿತರಾಗಿಲ್ಲ. ಅವರು ಹೆಚ್ಚು North Indian Musicಗೆ ಆ ಕಡೇನೇ ಹೋದರು. ಇದಕ್ಕೂ ಮೇಲೆ ನಮ್ಮ ತಂದೆಯವರು ಉತ್ತರ ಹಿಂದೂಸ್ಥಾನದ ಸಂಗೀತದಲ್ಲಿ ನಿಷ್ಠಾತರು. ಬಹಳ ಪಾಂಡಿತ್ಯ ಪಡೆದಿದ್ರು ಅದರಲ್ಲಿ. ಅದು accident. ಈಗ ‘ಸರೋದ್‌’ಗೆ ಯಾಕೆ ಬಂದೇಂತ ಯೋಚಿಸಿದರೆ – ನನ್ನ ಸಣ್ಣ ವಯಸ್ಸಿನಲ್ಲೂ ನಾನು ಹಾಡುತ್ತಿದ್ದೆ. ಸುಮಾರು ಚೆನ್ನಾಗಿ ಹಾಡುತ್ತಿದ್ದೇಂತ ಮಂದಿ ಹೇಳ್ತಾರೆ. ದೊಡ್ಡೋನಾದ ಮೇಲೆ ಗಂಟಲು ಒಡೆದುಹೋಯಿತು. ಆಮೇಲೆ ಹಾಡೋದಾಗಲಿಲ್ಲ – ಕೆಲವು ಕಾಲ. ಅಂದರೆ ಆ ಸಂಗೀತದ ಒಂದು ಲವಲವಿಕೆ ಇತ್ತು. ಆಗಿನ ಕಾಲದಲ್ಲಿ ನಾನು ಬೆಂಗಳೂರಿನಲ್ಲಿದ್ದೆ. ಒಮ್ಮೆ ನನ್ನ ಗುರುಗಳು ಅಲಿ ಅಕ್ಬರ್ ಸಾಹೇಬರು ರವಿಶಂಕರ್ ಜೊತೆಗೆ ಬಂದಿದ್ದರು. ಸರೋದ್ ಕೇಳಿದ್ದೆ. ಆವಾಗ ಯಾವುದೋ ಒಂದು ಮಾಯೆ ಕುದುರಿಬಿಡ್ತು ನನ್ನಲ್ಲಿ. ಒಟ್ಟು ಎಲ್ಲ ಮರ್ತು ಇದನ್ನೇ ಒಂದು ಪರಿಶ್ರಮ, ತಪಶ್ಚರ್ಯ ಮಾಡಬೇಕೂಂತ ಹೊರಟೆ ಸರೋದನ್ನೇ ಯಾಕೆ ಆರಿಸಿಕೊಂಡೇಂತೆ ಈಗೊಂದು ಕಾರಣ ಹೇಳಬಹುದು. ಇದಕ್ಕೆ hindsight ಅನ್ನಬಹುದು. ಅಥವಾ ಯಾವುದೋ ಒಂದು ಮಾಡಿದ್ದಕ್ಕೊಂದು ಕುಂಟು ಕಾರಣ. ಸರೋದ್‌ನಲ್ಲಿ ಒಂದು – ವಾದ್ಯ ಬಹಳ ಕಷ್ಟವಾದ್ದು. ಹೆಚ್ಚು ಮಂದಿ ಇವತ್ತಿಗೂ ಅದನ್ನ ಬಾರಿಸೋದಿಲ್ಲ. ಎರಡನೇದು, ಅದರಲ್ಲಿ ಈ ಒಂದು ಕಟುವಾದ ಮಟ್ಟು – ಆ ಔಷಧ ಅಂತೀರಲ್ಲ – ಆ ಅಂಶ ಹೆಚ್ಚಿದೆ. ಇದನ್ನ ನಮ್ಮ ಅನುಭವಗಳಿಗೆ ಒಗ್ಗಿಸುವುದು ಕಷ್ಟವಾದ ಕೆಲಸ. ಅದರಿಂದ ಬಹಳ ಸಲ ಹೆಚ್ಚು ಮಟ್ಟಿಗೆ ಸೋಲುತ್ತದೆ. ಆದರೆ ಗೆಲ್ಲುವ ಯತ್ನ – ಗೆಲ್ಲುವಾಗ ಒಂದು ಸಂದರ್ಭದಲ್ಲಿ ಅದರಿಂದ ಬರೋ ಸುಖ ಮಾಮೂಲಿ ಸುಖವಲ್ಲ – ಸಂಪನ್ನವಾದ ಸುಖ. ಅದರಲ್ಲಿ ಕೆಲವೆಲ್ಲ ನಾನಾಗಲೇ ಹೇಳಿದ ಹಾಗೆ ದ್ರವೀಕರಿಸುವ ಗುಣ ಬಿಟ್ಟು ಬೇರೆ ಅಂಶಗಳಿವೆ. ಅದನ್ನು ಹೆಚ್ಚಾಗಿ ಸರೋದ್‌ನಲ್ಲಿ ತರಬಹುದೂಂತ ನನಗೆ ಅನ್ಸಿದೆ. ಅದ್ರಿಂದ ನಾನು ಸರೋದ್ ಬಾರಿಸ್ತಿದ್ದೀನಿಂತ ಒಂದು explanation ಹೇಳಬಹುದು.

ಪ್ರ : ನನಗೂ ಹಾಗೆ ಅನ್ಸಿದೆ. ನೀವು ಸಾಹಿತ್ಯದಲ್ಲಿ ಕ್ಲಿಷ್ಟವಾದ್ದನ್ನ – ಸಂಕೀರ್ಣವಾದ್ದನ್ನ ಆರಿಸಿಕೊಂಡ ಹಾಗೇ ಸಂಗೀತದಲ್ಲೂ ಸಂಕೀರ್ಣವಾದ್ದನ್ನ – ಕ್ಲಿಷ್ಟವಾದನ್ನ ಆರಿಸಿಕೊಂಡಿರಬಹುದು. ಸಂಗೀತ ಅನ್ನುವುದು ಪ್ರಾಯಶಃ non – verbal ಆಗಿರುವಂಥ experience ಅನ್ನೇ ಹೇಳುತ್ತೆ – ಅಂದರೆ ವಾಚ್ಯಾತೀತವಾದದ್ದು ಸಂಗೀತ. ಆದರೆ ನಿಮ್ಮ ವೈಚಾರಿಕತೆ ಇತ್ಯಾದಿಗಳೆಲ್ಲ ಹೇಗೆ ತೊಡಗಿರುತ್ತವೆ ಈ ಸಂಗೀತದಲ್ಲಿ? ಮೊದಲು ನೀವು ಆರೋಹಣ – ಅವರೋಹಣದ ಬಗ್ಗೆ ಹೇಳಿದಿರಿ. ಈ ಮೂಲ ದ್ರವ್ಯಗಳನ್ನ ಜೋಡಿಸುವ ಕ್ರಮದಲ್ಲೇನೇ ಸಂಗೀತ ಇದೇಂತ. ನಾನು ಯಾಕೆ ಈ ಪ್ರಶ್ನೆ ಕೇಳ್ತಿದೀನೀಂತಂದ್ರೆ ದೊಡ್ಡ ಸಂಗೀತಗಾರರಾಗಿರೋಂಥವರು ಅಂಥ ಒಳ್ಳೇ ಚಿಂತಕರೂ ಆಗಿರಬೇಕಾದ ಅವಶ್ಯಕತೆ ಇಲ್ಲ. ಆದರೆ ಸಾಹಿತ್ಯದಲ್ಲಿ ಮಾತ್ರ ಹಾಗಲ್ಲ. ದೊಡ್ಡ ಸಾಹಿತಿಯಾಗಿರೋನು ಅತ್ಯುತ್ತಮವಾದ ಮಟ್ಟದಲ್ಲಿ ಯೋಚನೆ ಮಾಡುವವನೂ ಆಗಿರಬೇಕಾಗುತ್ತೇಂತ ನಾನು ತಿಳಿದಿದ್ದೀನಿ. ಸಂಗೀತದಲ್ಲಿ ಇಂಥ ಕೆಲವು ಬುದ್ಧಿಶಕ್ತಿಗೆ ಸಂಬಂಧಿಸಿದ ಬೆಳವಣಿಗೆಗಳು ಆಗದೇನೇ ಅಸಾಧಾರಣವಾದ ಪ್ರತಿಭೆ ಇರೋದು ಸಾಧ್ಯವಿದೆ ಅಲ್ಲವೆ?

ಉ : ಸಂಗೀತದಲ್ಲಿ ಬುದ್ದಿಶಕ್ತಿ ಇರಬೇಕಾಗಿಲ್ಲ. ಅದಿಲ್ಲದೇ ಇದ್ರೂ ದೊಡ್ಡ ಸಂಗೀತಗಾರನಾಬಹುದು ಅನ್ನೋ ಮಾತನ್ನ ನಾನು ಒಪ್ಪೋದಿಲ್ಲ. ರವಿಶಂಕರ್, ನಮ್ಮ ಗುರುಗಳು. ತಗೊಳ್ರಿ, ಅವರು ಬಾರಿಸಬೇಕಾದರೆ, ನಮಗೂ ಸ್ವಲ್ಪ ಸಂಗೀತದ ಅನುಭವ, ಇತ್ತಂತಂದ್ರೆ – ಅಲ್ಲಿ ಎಂಥ ಅಸಾಧಾರಣವಾದ ಬುದ್ಧಿವಂತಿಕೆ ಕೆಲಸ ಮಾಡ್ತಾ ಇದೇಂತ ನಮಗೆ ಗೊತ್ತಾಗ್ತದೆ. ಏಕೆಂದರೆ ಒಂದು ರೀತಿಯಲ್ಲಿ ಯಾವುದೇ ಮಾಧ್ಯಮದಲ್ಲಿ ಅದರ abstract ನಾವು ತಿಳಿದಿರಬೇಕು. ಈಗ ನೀವು ‘ಸಂಸ್ಕಾರ’ ಬರೆದಿರಿ. ಅದರ ಕಥೆ ಎಲ್ಲರೂ ತಿಳ್ಕೋತಾರೆ. ಅದರ ಹಿಂದಕ್ಕೆ – ಅದರ ರೂಪ – ಆಕಾರ ಅದು ತಿಳೀಬೇಕಾದರೆ ಸಾಕಷ್ಟು ಅದರಲ್ಲಿ ಪರಿಶ್ರಮ ಇರಬೇಕಾಗುತ್ತೆ. ನಾನು ಹೇಳೋದೇನೂಂದ್ರೆ ಒಂದು ಕಲೆಯಲ್ಲಿ intelligence function ಆಗ್ತದೋ ಇಲ್ವೋಂತ ಹೇಳಲಿಕ್ಕೆ ಅದರಲ್ಲಿ ಓದುಗನಿಗೆ ಅಥವಾ ಕೇಳೋನಿಗೆ ಪರಿಶ್ರಮ ಇರಬೇಕು. ಇನ್ನೊಂದು ರೀತೀಲಿ ಹೇಳೋದಾದ್ರೆ ಅವನಿಗೆ ಆಗ full communications ಇರ್ತಾವೆ. ಸಂಸ್ಕಾರ ಕಥೆ ಓದಿದವ, ಹೊಗಳಿದವನಿಗೆ ಸಂಸ್ಕಾರ ಗೊತ್ತೂಂತ ಅಂದ್ರೆ ನಾನು ಒಪ್ಪೋದಿಲ್ಲ. ಹಾಗೇ ಸಂಗೀತಕ್ಕೆ ಸಹ ಸ್ವಲ್ಪ ಪರಿಶ್ರಮ ಇರಬೇಕು. ಹೀಗಂದ್ರೆ ಅವ ಸಂಗೀತ ಬಾರಿಸಬೇಕು – ಹಾಡಬೇಕೂಂತಲ್ಲ, ಕೇಳಿ: ಅದರಲ್ಲಿ ಒಟ್ಟು ಸ್ವರದ ಶ್ರುತಿಯ ಸುಖ ಒಂದೇ ಅಲ್ಲ, ಎಷ್ಟೋ ರೀತಿಯ ಆಕಾರ, ಜೋಡಣೆ, ವಿಸ್ತಾರಗಳಿವೆ ಅನ್ನೋ ಅರಿವಿರೋ ಒಬ್ಬ ಮನುಷ್ಯ ಈ ರವಿಶಂಕರ್, ಅಲಿ ಅಕ್ಬರ್ ಅವರ ಎಂಥ ಒಂದು ಆಸಾಧರಣ ಇಂಟಲಿಜನ್ಸ್ ಅಲ್ಲಿ ವರ್ಕ್ಸ್‌ ಆಗ್ತದೆ ಅನ್ನೋದನ್ನ ತಿಳೀತಾನೆ.

ಪ್ರ : ಹೌದು. ಈ ಪ್ರಶ್ನೆ ಕೇಳೋದಕ್ಕೆ ಇನ್ನೊಂದು ಕಾರಣ ಅಂದ್ರೆ – ಸಂಗೀತದಲ್ಲಿ ಕೆಲವು ಸಲ child prodigyಗಳನ್ನು ನಾವು ನೋಡ್ತೇವೆ. ಆದರೆ ಒಂದು ರೀತಿಯ ಮನಸ್ಸಿನ ಪಕ್ವತೆ ಇಲ್ಲದೇ ಇರುವ, ಚಿಕ್ಕ ಚಿಕ್ಕ ಬಾಲಕರೂ ಅಸಾಧಾರಣವಾದ ಸಂಗೀತ ಪ್ರತಿಭೆ ಉಳ್ಳವರೂಂತ ಕೆಲವರು ಹೇಳುತ್ತಾರಲ್ಲ. ಇದು ನಿಜವಿದ್ದರೆ ನೀವೇನಂತೀರಿ? ಈ ಸಂಗೀತದಲ್ಲಿ ಈ ಸೃಷ್ಟ್ಯಾತ್ಮಕ ಪ್ರಕ್ರಿಯೆ ಇದೆಯಲ್ಲ. ಅದರ ಸ್ವರೂಪ ಏನೂಂತ ತಿಳಿದುಕೊಳ್ಳಕ್ಕೆ ನನಗೆ ಆಸಕ್ತಿ ಇದೆ.

ಉ : ಇದಕ್ಕೆ ಜವಾಬು ಕೋಡೋದು ಸ್ವಲ್ಪ ಕಷ್ಟ ಆಗ್ತದೆ. ಯಾವುದೇ ದೇಶದ ಸಂಗೀತ ಮತ್ತು ಸಾಹಿತ್ಯ ತಗೊಂಡರೆ – ಸಂಗೀತ ಹೆಚ್ಚು culture bound. ಅಂದರೆ ನಾವು ಮಾಡುವ ಪ್ರತಿಕ್ಷಣದ ವರ್ತನೆ, ಬದುಕಿನಲ್ಲಿ ಕೂಡ ಈ ಸಂಗೀತ ಧ್ವನಿತಗೊಳ್ಳುತ್ತದೆ. ಅಥವಾ ಈ ಬದುಕು, ಸಂಗೀತದಲ್ಲಿರುತ್ತದೆ. ಸಾಹಿತ್ಯದ ಮೀಡಿಯಂ ಅಂದರೆ ಸ್ವಲ್ಪ ಮಟ್ಟಿಗೆ ಅದರಲ್ಲಿ conscious effort ಹೆಚ್ಚಿರುತ್ತದೆ. ಮೊದಲು ಓದುಬರಹ ಕಲೀಬೇಕು. ಮೊದಲು ಓದಬೇಕು. ಮತ್ತೆ ಬರೀಬೇಕು. ಇದು ಒಂದು ಕಾರಣ. ಮತ್ತೆ ಇಲ್ಲಿ ನನ್ನ ಮಾತು ತಪ್ಪಿರಬಹುದಾದರೂ ಹೀಗನ್ನಿಸಿದೆ. ಈ ಸಂಗೀತದ ‘ತಂತ್ರದ ಅಂಶ’ವನ್ನು ಸಾಕಷ್ಟು ಲಗೂ ತಗೊಂಡಿರ್ತದೆ. ಈ ಅಂಶಗಳನ್ನು ಸಣ್ಣ ಮಕ್ಕಳು ಹಾಡಿ, ಅಥವಾ ಬಾರಿಸಿ ತೋರಿಸಿದರೆ, ಅದು ನಿಜವಾಗಿಯೂ ಶ್ಲಾಘ್ಯವೇ. ಪಕ್ವವಾದ ಸಂಗೀತವನ್ನು child prodigy ಬಾರಿಸಿದ್ದು ನಾನು ಇದುವರೆಗೆ ಕಂಡಿಲ್ಲ. ಪಕ್ವತೆ ಬೇರೆ.

ಪ್ರ : ಅಂದರೆ ಜೀವನಾನುಭವದ ಪಕ್ವತೆ ಸಂಗೀತದಲ್ಲೂ ಪಕ್ವವಾಗಲು ಸಾಹಿತ್ಯ ಮತ್ತು ಜೀವಕ್ಕಿರುವ ಸಂಬಂಧದ ರೀತಿಯಲ್ಲಿ ಸಂಗೀತ ಮತ್ತು ಜೀವನಕ್ಕೂ ಇದೆ ಅಂತ ಹೇಳ್ತಿದೀರೋ?

ಉ : ಹೌದು. ಸಾಹಿತ್ಯಕ್ಕೂ ಜೀವನಕ್ಕೂ ಇರುವ ಸಂಬಂಧ ಪಕ್ವತೆಯಲ್ಲಿ ನಾವು ಇಂತಿಂಥ ಕಡೆಯಲ್ಲಿ ಆಯಿತೂಂತ ಗುರುತಿಸಬಹುದು. ಅಥವಾ ಗುರುತಿಸೋದಕ್ಕಿಂತ ಹೀಗಾಯಿತೂಂತ ಇನ್ನೊಬ್ಬನಿಗೆ ಹೇಳಬಹುದು. ಯಾಕೆಂದರೆ ಮಾತಾಡುವ, ಹಾಗೂ ಸಾಹಿತ್ಯದಲ್ಲಿ ಉಪಯೋಗಿಸುವ ಮಾಧ್ಯಮಗಳು ಒಂದೇ. ಸಂಗೀತದಲ್ಲೂ ನಾವು ಗುರುತಿಸಬಹುದು. ನಮ್ಮ ಬದುಕಿನಲ್ಲಿ ಏನೇನೋ ಆಗಿರ್ತದೆ. ರಾಡಿಗಳು ಎಷ್ಟೆಷ್ಟೋ ಇರ್ತವೆ. ಅದರ ಪ್ರಭಾವ ಇಲ್ಲಿ ಆಯ್ತಪ್ಪಾಂತ ಭಾವಿಸೋನಿಗೆ ನಾವು ಹಾಡು ಹೇಳಬಹುದು. ಅದು ಹ್ಯಾಗಾಯ್ತಪ್ಪಾಂತ ಅವನು ಹೇಳೋದು ಹ್ಯಾಗೆ? ಯಾಕೆಂದ್ರೆ ಕೇಳುವವನಿಗೆ ಅದು ಗೊತ್ತಿಲ್ಲ. ಈಗ ನೋಡ್ರಿ, ನೀವು ಸಾಹಿತಿಗಳು, ನೀವು ನಿಮ್ಮ ಸಾಹಿತ್ಯದ ಬಗ್ಗೆ ನನ್ನ ಹತ್ತಿರ ಮಾತಾಡ್ತೀರಿ. ಯಾಕೆಂದ್ರೆ ಮಾತಾಡೋದು, ಬರೆಯೋದು ಒಂದೇ ಮಾಧ್ಯಮ. ನಾನು ಸಂಗೀತಗಾರ. ನಿಮಗೆ ಹ್ಯಾಗೆ ತಿಳಿಸಲಿ? ನನಗೆ ಹೀಗಾಯ್ತು. ಏನೇನೋ ಕಷ್ಟಗಳು ಒದಗಿದವು – ಅಂತ? ಆದರೆ ನೀವು ನನ್ನನ್ನು ತಿಳುಕೊಂಡಿದೀರಿ. ನೀವು ನನ್ನ ಸಂಗೀತದ ಮೇಲೆ ಆಗಿರುವ ಪ್ರಭಾವ ನೀವು ಸ್ವಲ್ಪಮಟ್ಟಿಗೆ, ಸ್ವಲ್ಪ ಪರಿಶ್ರಮ ಮಾಡಿದರೆ ತಿಳೀಬಹುದೇನೋ. ಸುಮಾರು ಹೀಗಾಗಿರಬೇಕೂಂತ ತಿಳೀಬಹುದು. ಹೊಸಬರಿಗೆ ಹ್ಯಾಗೆ ತಿಳಿಯೋಕೆ ಸಾಧ್ಯ? ಇಷ್ಟೇ ಇಲ್ಲಿ ವ್ಯತ್ಯಾಸ.

ಪ್ರ : ನೀವು ಒಂದು ಬಹಳ ಮುಖ್ಯವಾದ ವಿಚಾರವನ್ನ ಹೇಳಿದಿರಿ. ಸಂಗೀತಕ್ಕೂ ಒಂದು ದೇಶದ ಸಂಸ್ಕೃತಿಗೂ ಬಹಳ ಹತ್ತಿರದ ಸಂಬಂಧ ಇದೇಂತ. ಭಾರತದ ಬಗ್ಗೆ ಯೋಚನೆ ಮಾಡುವಾಗಲಂತೂ ನಮ್ಮ ಸಾಹಿತ್ಯ, ನಾವು ಈ ಬರೀತಾ ಇರೋ ಸಾಹಿತ್ಯ ಉಳಿದಿದೆಯೋ ಅಷ್ಟು ಭಾರತೀಯ, ಅನ್ನಲ್ಲ. ಈಗಂತೂ ಪಾಶ್ಚಾತ್ಯ ದೇಶದ influence ಇತ್ಯಾದಿಗಳೆಲ್ಲ ಆಗಿವೆ. ಅದು ಸಂಪೂರ್ಣ ನಮ್ಮ ನಾಡಿಂದೇ ಆಗಿ ಉಳಿದಿದೇಂತ ನನಗೆ ಅನ್ನಿಸ್ತಾ ಇಲ್ಲ. ಜಾಪನೀಸ್‌ ಸಾಹಿತ್ಯವನ್ನ ಓದಿದಾಗಲೂ ನನಗೆ ಹಾಗೇ ಅನ್ನಿಸಿದೆ. It is also a product of western influence. ಆದರೆ ಇಂಡಿಯಾದ ಸಂಗೀತ ಮಟ್ಟಿಗೆ ಅಚ್ಚ ಭಾರತೀಯವಾಗಿ, ನಮ್ಮದೇ ಆಗಿ, ಅನನ್ಯವಾಗಿ ಉಳಿದಿದೆ. ನೃತ್ಯ ಮತ್ತು ಸಂಗೀತ ಇವೆರಡೇ ಹಾಗೆ ಉಳಿದಿರೋದೂಂತ ಕಾಣ್ಸುತ್ತೆ. ಆದ್ದರಿಂದ ಭಾರತೀಯ ಸಂಸ್ಕೃತಿ ಸಮಾಜ ಜೀವನದಲ್ಲಿ ಯಾವ ಅಂಶಗಳು ಭಾರತೀಯ ಸಂಗೀತದ ಈ ಸ್ವರೂಪಕ್ಕೆ ಕಾರಣವಾಗಿದಾವೆ?

ಉ : ಇನ್ನೊಮ್ಮೆ ಹೇಳಿರಿ?

ಪ್ರ : ಪಾಶ್ಚಾತ್ಯ ಸಂಗೀತಕ್ಕೂ ಪಾಶ್ಚಾತ್ಯ ಸಮಾಜಕ್ಕೂ ಏನಾದರೂ ಒಂದು ಸಂಬಂಧ ಇರಬಹುದು. ಹಾಗೇನೇ ಭಾರತೀಯ ಸಮಾಜದ ಯಾವ ಅಂಶಗಳು, ನಮ್ಮ ಸಂಸ್ಕೃತಿಯ ಯಾವ ಅಂಶಗಳು ಭಾರತೀಯ ಸಂಗೀತದ ಈ ಅನನ್ಯತೆಗೆ ಕಾರಣವಾಗಿವೆ? ಅಂದರೆ ನಮ್ಮ ವೇದಾಂತ, ನಮ್ಮ ದೇಶದ ‘ಮಿಸ್ಟಿಸಿಸಂ’ದಲ್ಲಿ ಇರುವ ಅನುಭವ, ಜನಜೀವನಕ್ರಮ ಯಾವುದಾದರೂ ಒಂದು ಭಾರತೀಯ ಸಂಸ್ಕೃತಿಗೂ ಜನಜೀವನಕ್ಕೂ ಸಂಬಂಧ – ಸಂಸ್ಕೃತಿ ಯಿಂದಲೇ ಸಂಗೀತ ಹುಟ್ಟಿದ್ದು ಅಂತೀರಲ್ಲ – ಅದನ್ನ ಯಾವ ರೀತಿ ಅಂತ ವಿವರಿಸಲು ಸಾಧ್ಯವೇ?

ಉ : ಇದಕ್ಕೆ ಸೀದಾ ಜವಾಬು ನಾನು ಕೊಡುತ್ತಾ ಇಲ್ಲ. ಫಿಲಿಪ್‌ ಬ್ರಾಂಟ್ ಅನ್ನೋರು ಒಂದು ಪುಸ್ತಕ ಬರೆದಿದ್ದಾರೆ. ‘The Hindu Personality’ ಅಂತ. ಅದರಲ್ಲಿ ಅವರು Freudian ಚೌಕಟ್ಟಿನಲ್ಲಿ, ಈ ಭಾರತೀಯ ವ್ಯಕ್ತಿತ್ವದ ವಿಶ್ಲೇಷಣೆ ಮಾಡಿದಾರೆ. ಒಳ್ಳೆ ಪುಸ್ತಕ. ಅದರಲ್ಲಿ ಒಂದು concept ತಗೊಂಡಿದ್ದಾರೆ. ಕೆಫೆಕ್ಸ್‌ಸಿಸ್‌ ಅಂತ ಒಂದು concept. ಕೆಫೆಕ್ಸ್‌ಸಿಸ್‌ ಅಂದ್ರೆ ಕೆಥಾರಸಿಸ್‌ನ ವಿರುದ್ಧ. ಒಳಗೆ ಎಳೆದುಕೊಳ್ಳೋದು – ಅಂದರೆ ವೀರ್ಯ ಸಂಬಂಧವಾಗಿ ಆ ಮಾತಾಡಿದ್ದಾರೆ. ಊರ್ಧ್ವರೇತಸ್ಯ ಅನ್ನುವ concept. ಒಂದು ಇದೆ ನೋಡ್ರಿ ರೇತಸ್ಖಲನದ್ದು ಒಂದು ಕೆಥಾರ್ಸಿಸ್‌ concept. ಊರ್ಧ್ವರೇತಸ್ಯನಾದವನು ಯೋಗ್ಯನಾಗ್ತಾನೆ. ಅವನು ಒಟ್ಟು ಅಂತರ್ಮುಖಿಯಾಗ್ತಾನೆ; Meditation: ಈ ದೃಷ್ಟಿಯಿಂದ ಇಡೀ ಭಾರತೀಯ ಸಂಸ್ಕೃತಿಯನ್ನು ಅವರು ವಿಶ್ಲೇಷಣೆ ಮಾಡಿದ್ದಾರೆ. ಅವರು ಹೇಳೋದರಲ್ಲಿ ಕೆಲವು ನೋಡಿದರೆ ನಿಜವಾಗಿಯೂ ಸಂಪನ್ನನಾದ ಯೋಗಿ – ಅವ ಒಬ್ಬ ‘phallus’ ಇರ್ತಾನೆ. ಈಡಿಪಸ್‌ Complex ನವ ಇಲ್ಲ. ನಮಗೆ. ರಾಮನಿಗೂ ದಶರಥನಿಗೂ ಬಹಳ ಸುಲಭವಾಗಿ ಈಡಿಪಸ್ Complex ಇರಬಹುದಾಗಿತ್ತು. ಕೈಕೇಯಿ ಚಿಕ್ಕವಳು. ಆದರೆ ಅದು ಇಲ್ಲ. ಯಾಕೇಂದ್ರೆ ಮಗನಿಗೂ ತಂದೆಗೂ ಇರತಕ್ಕಂಥ ಸಂಬಂಧ ideal ಸಂಬಂಧ ಏನಿರ್ತದೆ – ಅದು ಗುರು ಶಿಷ್ಯ ಸಂಬಂಧ. ಇದಕ್ಕೆ ಫಿಲಿಪ್ಸ್‌ ಬ್ರಾಂಟ್‌ ಏನಂತಾರೆ ಅಂದರೆ “It’s a passive homosexualನ relationship” ಅಂತ. ಅದರ ಜೊತೆಗೆ ಇನ್ನೂ ಒಂದು ಮಾತು ಹೇಳ್ತಾರೆ. “One of the primary emotions of Hindus is aspiration”: ಇದು ಬಹಳ ದೊಡ್ಡ ಮಾತು ಅನ್ನಿಸುತ್ತೆ. ಈ ರೀತಿಯಿಂದ ನೋಡಿದರೆ ನಮ್ಮ ಸಂಗೀತದಲ್ಲಿ, ಸಮಾಜದಲ್ಲಿ ಆಗುತ್ತಾ ಇರುವಂಥ ಬದಲಾವಣೆಗಳು ಅಷ್ಟರಮಟ್ಟಿಗೆ ಪ್ರತಿಬಂಧಿತವಾಗೋದಿಲ್ಲ. ಏಕೆಂದರೆ ಆ ಸಂಗೀತ classical ಆಗಿರೋದ್ರಿಂದ. ಮತ್ತೆ ತಿರುಗಿ ನಮ್ಮ ಹಳೇ classical ideals introspection. ತನ್ನಲ್ಲಿ ತಾನು ತಲ್ಲೀನವಾಗೋದು, to attain the great silence, ಮೌನ – ಶಾಂತಿ, ಕೆಲವರು ನಿರ್ವಾಣ ಅಂದ್ರು, ಕೆಲವರು ಬಯಲು ಅಂದ್ರು, ಇದು ಒಂದು great anonymity ಅಂತಾ ನಾನು ಕರೀತೀನಿ. ಷಡ್ಜದಿಂದ ಹೊರಟು ಷಡ್ಜಕ್ಕೆ ಬರೋದು. ಅನಾನಿಮಿಟಿಯಿಂದ ಹೊರಟು ವ್ಯಕ್ತಿಯಾಗಿ ಮತ್ತೆ ತಿರುಗಿ ಆ ವ್ಯಕ್ತಿತ್ವವನ್ನು ಕಳೆದುಕೊಂಡು ಪುನಃ universal. ಯಾವುದೋ spirit. Soul. ಒಂದು ನಿರ್ವಾಣ, a process. ನಮ್ಮ ಸಂಗೀತದ ಆಲಾಪದ ಕ್ರಮ ‘ಷಡ್ಜ’ದ concept ಅದು. ಈ ರೀತಿಯಿಂದ ಸಂಗೀತ fundamentally culture bound ಅನ್ನಿಸ್ತದೆ.

ಪ್ರ : ಹಾಗಾದರೆ ಭಾರತೀಯ ಸಂಗೀತ ನಮ್ಮ ಆಧ್ಯಾತ್ಮಿಕವಾದ ಆದರ್ಶನಕ್ಕೆ ಹತ್ತಿರದಲ್ಲಿದೆ ಅಂತ ನೀವು ಹೇಳಿದ ಹಾಗಾಯಿತು. ಆದರೆ ಭಾರತೀಯ ಸಂಗೀತದ ಚರಿತ್ರೆ ನನಗೆ ಗೊತ್ತಿಲ್ಲ. ಬಹಳ ಹಿಂದಿನ ಚರಿತ್ರೆಗೆ ಹೋಗೋದಾದರೆ ಈ ಸಂಗೀತಕ್ಕಿದ್ದ social base. ಸಾಮಾಜಿಕ ತಹಳದಿ ಯಾವುದು ಆಗಿರಬಹುದು? ನಮ್ಮ ಸ್ನೇಹಿತರೊಬ್ಬರು ಈ ವೈದಿಕ ಸಂಸ್ಕೃತಿ ಮತ್ತು ನಮ್ಮ ಷಡ್ದರ್ಶನಗಳು – ಇವುಗಳಲ್ಲಿ ಸೌಂದರ್ಯಶಾಸ್ತ್ರಕ್ಕೆ (ಈಸ್ತಟಿಕ್ಸ್‌) ಬಹಳ ಕಡಿಮೆ ಪ್ರಾಶಸ್ತ್ಯ, ಅದರಿಂದ ಇದು Non – Aryan ಇದ್ದರೂ ಇರಬಹುದು. ಅಂತಾರೆ. ನಾನು ಈ ಪ್ರಶ್ನೆಯನ್ನು ಬಹಳ tentative ಆಗಿ ಕೇಳ್ತಾ ಇದೀನಿ. ನಮ್ಮ ಅಧ್ಯಾತ್ಮಿಕ ಆದರ್ಶಕ್ಕೆ ಇಷ್ಟು ಹತ್ತಿರವಿದ್ದರೂನೂ ನಮ್ಮ ಷಡ್ದರ್ಶನಗಳಲ್ಲಿ, ಸೌಂದರ್ಯಶಾಸ್ತ್ರಕ್ಕೆ ಪ್ರಾಶಸ್ತ ಇಲ್ಲ ಅಂತಂದ್ರೆ ಇದರಲ್ಲಿ ನಿಮಗೆ ಏನಾದರೂ ವಿರೋಧಾಭಾಸ ಕಾಣುತ್ತದೆಯೇನು? ಹಿಂದಿನ social base ಏನಾಗಿತ್ತು? ಸಂಗೀತವನ್ನು ಮುಖ್ಯವಾಗಿ ಸೃಷ್ಟಿಸಿದವರು ಯಾವ ತರಹದ ಜನ?

ಉ : ಸುನೀತಿಕುಮಾರ ಚಟರ್ಜಿ ಒಂದು ಲೇಖನ ಬರೆದಿದ್ದಾರೆ. ಅದರಲ್ಲಿ ಭಾರತೀಯ ಸಂಸ್ಕೃತಿ ಮೂಲ, ಅದರಲ್ಲಿ ಯಾವ್ಯಾವ ಅಂಶಗಳಿಗೆ ಎಂಬುದರ ಬಗ್ಗೆ ಬರೆದಿದ್ದಾರೆ. ಈ ತಲ್ಲೀನನಾಗುವ ಅಥವಾ ಯೌಗಿಕಾಂಶದ ಬಗ್ಗೆ, ಅಂದರೆ ಯೋಗಿಯೇ ಕಡೆಯಲ್ಲಿ ತನ್ನ ವ್ಯಕ್ತಿತ್ವವನ್ನು ತಲ್ಲೀನನಾಗುತ್ತಾನೆ. ಈ ಅಂಶ ದ್ರವಿಡಿಯನ್ ಅಂತ ಗುರುತಿಸಿದ್ದಾರೆ. ಒಟ್ಟಿನಲ್ಲಿ ಅವರು ಎರಡೂ compare ಮಾಡಿ ನೋಡಿದ್ದಾರೆ. The Homa Tradition of Aryans ಮತ್ತು Pooja Tradition of Dravidians. ಪರವಶನಾಗುವುದು, ತಲ್ಲೀನನಾಗುವುದು – ಇದು ಯೋಗೀ Tradition of South India. ಯೋಗೀ ಇದು ನೆನಪಿನಲ್ಲಿರಲಿ. ಮುಂದೆ ಹೇಳೋದಾದರೆ ಸಂಗೀತ ನಮಗೆ ಎಲ್ಲಿಂದ ಬಂತೂ ಅಂದರೆ ಸಂಗೀತದ Lore (ಅದು history ಅನ್ನಕ್ಕಾಗಲ್ಲ), ಅದು ಋಷಿಗಳಿಂದಲೇ ಬಂದಿದ್ದು ಅಂತ ಹೇಳಬೇಕಾಗುತ್ತದೆ. ನಾದಬ್ರಹ್ಮ ಅಂತ ಒಂದಿದೆ. ಬೇರೆ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ಒಂದು ಭೇದ ನಾವು ಕಾಣಬಹುದು. ಇದು ಸ್ವಲ್ಪ ಯೋಚನೆ ಮಾಡಿರಿ. ಬೇರೆ ಎಲ್ಲಾ ಸಂಸ್ಕೃತಿಗಳಲ್ಲಿ ಗ್ರೀಕ್‌, ancient classical. ಆಮೇಲೆ ಬಂದ ಕ್ರಿಶ್ಚಿಯನ್‌, ಮುಸ್ಲಿಂ ಸಂಸ್ಕೃತಿಗಳಲ್ಲಿ ದೇವರನ್ನು ಒಪ್ಪಿಸಲಿಕ್ಕೆ devotional music ಇದೆ. ಆದರೆ, ಸ್ವರವೇ ದೇವರು. ಒಂದು ಶುದ್ಧವಾದ ಸ್ವತ ಅದೇ ದೇವರು ಅನ್ನುವ ಒಂದು concept ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮಾತ್ರ ಇದೆ. ಶಬ್ದವೇ ದೇವರು ಅಂತ ಪರಿಗಣಿಸುವ concept ಬೇರೆ ಯಾವ ಸಂಸ್ಕೃತಿಯಲ್ಲೂ ಇಲ್ಲ. ಹಾಗಿದ್ದ ಮೇಲೆ ಇದನ್ನೂ ನಾವು ಸ್ವಲ್ಪ ನೆನಪಿನಲ್ಲಿಟ್ಟುಕೋಬೇಕು. ಮುಂದೆ – ವೈದಿಕ ಸಂಸ್ಕೃತಿಯ ಋಷಿಗಳು – ಋಷಿಪುತ್ರರಾದ ರಾವಣ ಇಂಥವರು ಸಂಗೀತವನ್ನು ಬೆಳೆಸಿದರು. ನೀವು ಕಥೆಯೊಳಗೆ ರಾವಣನನ್ನ ನೋಡ್ತೀರಿ. ರಾವಣ ವೇದ ಹಾಡಿದಾಗ ಅದು ಸಾಮವೇದ ಆಯಿತು. ಶಿವಪಾರ್ವತಿ ಲೀಲೆಯಾಡುತ್ತಿದ್ದಾಗ, ಒಂದು ಪರ್ವತದ ಮೇಲೆ, ಅದನ್ನೇ ಎತ್ತಕ್ಕೆ ಹೋದ. ಶಿವ ತನ್ನ ಬೆರಳು ಒತ್ತಿದ. ಪರ್ವತ ರಾವಣನ ಬೆರಳನ್ನು ಜಜ್ಜಿತು. ಅವನಿಗೆ ಕೈ ನೋವಾಯಿತು, ವೇದ ಹಾಡಿದ ರಾಗವಾಗಿ, ಅರ್ಥಾತ್‌ ನೊಂದ ದನಿಯಲ್ಲಿ – ಅದೇ ಸಾಮದೇವ ಆಯಿತೂಂತ ಹೇಳ್ತಾರೆ. ಅಂದರೆ ಅದಕ್ಕೂ ಮುಂದೆ ನೀವು ಸ್ವಲ್ಪ ಯೋಚನೆ ಮಾಡಿ ನೋಡಬೇಕು. ಸಾಮವೇದದವರೆಗೆ ನಿಮಗೆ ವೇದದಲ್ಲಿ ಮೂರೇ ಸ್ವರಗಳು ಕಾಣ್ತಾವೆ. ಇನ್ನು ಅಲ್ಲಿಂದ ಹಾಗೇ ಮುಂದೆ ಏಳು ಸ್ವರಗಳಿಗೆ ಬರ್ತಾವೆ. ಮತ್ತೆ ದಕ್ಷಿಣ ಹಿಂದುಸ್ಥಾನದಲ್ಲಿ ನಮ್ಮ ಹನುಮಂತನೂ ಕೂಡ ದೊಡ್ಡ ಸಂಗೀತಜ್ಞ ಅಂತ ಹೇಳ್ತಾರೆ. ಹೀಗೆ concept ನೋಡಕ್ಕೆ ಹೋದರೆ ಅದು ಅಷ್ಟೇನೂ ಕೀಳಲ್ಲಾಂತ ಅನ್ನಿಸ್ತದೆ. ಅಂದರೆ ನೀವು ಹೇಳೋದು ಎಷ್ಟರಮಟ್ಟಿಗೆ ಸರಿ ಇರಬಹುದು. ಆ ಕಾಲದ ನಂತರ ಸಂಗೀತಗಾರರು ವೇಶ್ಯಾವಾಟಿಕಾ, ವಿಟ ಇವರ ಜೊತೆಗೆ ಜೋಡಣೆಯಾದರು. ಅದು ಸಮಾಜದಲ್ಲಿ ಬದಲಾವಣೆಗಳಿಂದ ಆಗಿರಬಹುದು. ಮೇಲೆ ಸಂಗೀತದಲ್ಲಿ ಆ ಅಂಶವೂ ಇದೆ. ನೀವು ಮೊದಲೇ ಹೇಳಿದ ಹಾಗೆ ಈ ದ್ರವೀಕರಿಸುವ ಅಂಶ. ಕೆಲವುತರದ ಉತ್ತೇಜನಗಳನ್ನು ನೀಡುವಲ್ಲೊಂದು ಅಂಶ ಇರ್ತದೆ. ಅದು ಈ ಕಡೆಗೂ ಎಳೀಬಹುದು. ಎಲ್ಲದರಲ್ಲೂ ಸಾಧ್ಯ. ಸಾಹಿತ್ಯದಲ್ಲೂ ಸಾಧ್ಯ. ಮೇಲೆ ನಮ್ಮ caste system ಸಂಗೀತಗಾರರನ್ನು ಅಲ್ಲಿಗೆ ಮುಟ್ಟಿಸಿರಬಹುದು. ಸಂಗೀತ ಶಿವನೇ ಅಲ್ಲ, ಕಲೆಯಲ್ಲಿಯೂ ಹೀಗೆ. ನೃತ್ಯಕಲೇನೇ ತಗೊಳ್ಳಿ, ಸಾಕ್ಷಾತ್ ಶಿವನೇ ಕಲಾವಿದ, ನಟರಾಜ. ಆಮೇಲೆ ನೃತ್ಯ ಅಂತ ಅನ್ನೋದು ಸೂಳೇರ ಜೊತೆ associate ಆಯಿತು. (‘Spiritual’ ಅನ್ನೋದನ್ನ ನಾನು ಬಹಳ pure ಆದ inverted comma ದಲ್ಲಿ ಬಳಸ್ತಿದೀನಿ) ಒಟ್ಟು ಮೂಲತಃ ಒಂದೇ concept of the individual merging himself in an enriched union with an ultimate reality ಇದು ನಮ್ಮ special spiritual slant. ಬೇರೆ ಬೇರೆ ರೀತಿಯಿಂದ ನೋಡಬಹುದು. ನೀವುವೇದಾಂತ ನೋಡಬಹುದು. ಇದು ಸಂಗೀತದಲ್ಲಿ ಇದೆ. ಷಡ್ಜ concept ಅಂತ ಏನು ಹೇಳತೀವಿ. ‘ಷಟ್‌’ – ‘ಜ’ ಅಂತಂದ್ರೆ ಸಂಗೀತದಲ್ಲಿ ಏಳು ಸ್ವರಗಳಿವೆ. ಏಳು ಸ್ವರದಲ್ಲಿ ‘ಷಟ್‌’ – ‘ಸಾ’ಯಿಂದ ಆರಂಭಿಸತೀವಿ. ‘ಸಾ’ becomes the relative phonicfor all the other notes. ‘ಸಾ’ ಇದ್ದರೇನೇ ಬೇರೆ ಎಲ್ಲಾ notes. ಅವೆಲ್ಲಾ ಸ್ವರಗಳಿಂದ ಹುಟ್ಟಿದ ಸ್ವರ ‘ಸ’’. ಈಗ ‘ಸಾ ಏನಪಾ? ಈ western music ಈ ಏನದೆ ಒಂದು ‘ಸೀ’ ಅಂತ ‘ಡಿ’ ಅಂತ ಅದಕ್ಕೆ fix ಮಾಡಿರ್ತಾರೆ. ಇಲ್ಲಿ ನಾವು ಹಾಗಲ್ಲ. ಯಾವುದೋ ಒಂದು ಸ್ವರದಿಂದ ನಾವು ಶುರು ಮಾಡತೀವಿ. ಅದೇ ‘ಸ’ ಆಗ್ತದೆ. ಅಂದರೆ ‘ಸ’ ಸ್ತರದಲ್ಲಿ ಹಾಡುವವನು, ಕೇಳುವವನು, ಅವನ ಸುತ್ತಮುತ್ತಲೂ ಇತರಕ್ಕಂಥ ಒಂದು ಸನ್ನಿವೇಶ ಎಲ್ಲವೂ ಒಂದೇ ಅಲ್ಲಿಂದ ಮುಂದೆ ಸ, ರಿ, ಗ, ಮ ಜೋಡಣೆಯಾಗಿ ಬೆಳೆಸ್ತಾ ಹೋಗ್ತಾನೆ. ಅಲ್ಲಿ he becomes an individual. ಉಳಿದವರು ಬರಲ್ಲ. ಆದರೆ, ಮತ್ತೆ ಅವನು ‘ಸ’ ಗೇ ಬಂದು ಮುಟ್ಟಬೇಕಾದರೆ ಎಲ್ರೂ ಉತ್ಸುಕರಾಗಿ ಕೇಳ್ತಾ ಇರ್ತಾರೆ. ಆದ್ರಿಂದ ಸಂಗೀತದಲ್ಲಿ ‘ಪಲ್ಲವಿ’ ಹಾಡಬೇಕಾದರೆ, ನೀವು ನೋಡಿರಬಹುದು – ಸಂಗೀತದ ‍ಫರ್ ಫಾರ್ ಮೆನ್ಸನ್ನ, ಕೆಳಗಿನ ‘ಸ’ ಬಿಟ್ಟು ಆಮೇಲೆ ತಾನು ಬೇರೆಯಾಗಿ ಹೋಗ್ತಾನೆ. ಏನೇನೋ ಮಾಡ್ತಾನೆ. ತಾನಗಳಿರ್ತಾವೆ, ಸಂಗತಿಗಳಿರ್ತಾವೆ. ಆಗ… ನಾವು… ಕೇಳೋರೆಲ್ಲ ವಿಫಲರು. ಅವನ ಹಿಂದೆ ಹೋಗಲಿಕ್ಕಾಗೋಲ್ಲ. ಅಂದರೆ ಅವನು ‘ಸ’ ಯಾವಾಗ ಮುಟ್ತಾನೆ ನಮಗೆಲ್ಲರಿಗೂ ಹಾಯೆನಿಸ್ತದೆ. ಅಲ್ಲಿ ಅವನು ನಾವೂ ಒಂದೆ. ಹೀಗೆ ಈ process ಅನ್ನ ನೀವು ನೋಡ್ತಾ ಬಂತಂದ್ರೆ, ಒಂದು ಸೈಕ್ಲಿಕಲ್‌ ಏನಿದೆ…. ಜನ್ಮಾ ಥಿಯರಿ ತಗೊಳ್ರಿ, ಅಥವಾ ವೇದಾಂತ ತಗೊಳ್ರಿ ಎಲ್ಲಾ ದೃಷ್ಟಿಯಿಂದಲೂ ಇದೇ ಸೈಕ್ಲಿಕಲ್ pattern ಇರ್ತದೆ. ಈ ದೃಷ್ಟಿಯಿಂದ, It is a fundamentally. Uniquely spiritual in the Indian Sense of the word.