ಪ್ರ : ಶ್ರೋತೃವಿಗೂ ಗಾಯಕನಿಗೂ ಭಾರತೀಯ ಸಂಗೀತದಲ್ಲಿ ಅತ್ಯಂತ ನಿಕಟವಾದ ಸಂಬಂಧ ಇದೇಂತ ಹೇಳಿದ ಹಾಗೂ ಆಯಿತು ನೀವು. ಏಕೆಂದರೆ ಅದು ಶ್ರೋತೃವಿನ ಜೊತೆಗೇ ಹುಟ್ಟಿಕೊಂಡು ಮತ್ತೆ ಶ್ರೋತೃವನ್ನು ತಲುಪಿ ಆಗತ್ತೆ. ಈಗ ಸದ್ಯದ ಸ್ಥಿತಿಯಲ್ಲಿ, (ಹಿಂದೆ ಸಂಗೀತಕ್ಕೆ ರಾಜಾಶ್ರಯ ಇವುಗಳಿದ್ದ ಕಾಲ) ಸಿನಿಮಾಸಂಗೀತ ಇವು ಹೆಚ್ಚೆಚ್ಚು ಜನಪ್ರಿಯವಾಗ್ತಾ ಇರೋವಾಗ ನಿಮ್ಮ ಸಂಗೀತದ ಒಂದು ಆದರ್ಶ ಇದೆಯಲ್ಲ ಅದನ್ನು ಉಳಿಸಿಕೊಳ್ಳುವ ಕ್ರಮ ಹೇಗೆ? ಇದಕ್ಕೆ ನಿಮ್ಮ ಅನೇಕ ಉತ್ತರಗಳನ್ನು ನಾನು ಬಯಸ್ತೀನಿ. ಒಂದು ಶಾಸ್ತ್ರೀಯ ಸಂಗೀತ ನಮ್ಮ ಜಾನಪದದ ಜೊತೆ ಯಾವ ರೀತಿ ಸಂಬಂಧ ಹೊಂದಿರಬೇಕು? ಎರಡು: ಸಿನಿಮಾ ಸಂಗೀತದ ಜೊತೆ ಯಾವ ರೀತಿ ಸಂಪರ್ಕ ಉಳಿಸಿಕೊಳ್ಳಬಹುದು? ನಿಮ್ಮದೊಂದು pure ಆದ music ಅನ್ನು ಇಟ್ಟುಕೊಂಡು ನೀವು ದೂರ ಇರೋದು ಸಾಧ್ಯವೇ ಇಲ್ಲ. ಸಾಹಿತ್ಯವಾದರೊ ನಾನು ಪುಸ್ತಕ ಬರೆದು ಇಟ್ಟುಬಿಡಬಹುದೇನೋ. ಆದರೆ ಸಂಗೀತಗಾರ ಮಾತ್ರ ಶ್ರೋತೃವಿನ ಎದುರೇ ಫಲಿಸಬೇಕು. ಅಲ್ಲವೆ?

ಉ : ಇಲ್ಲಿ ಒಂದು ತಪ್ಪಿದೆ. ಬಹುಶಃ ನಾನು ಹೇಳಿದ್ದು ನೀವು ತಪ್ಪು ಅರ್ಥ ಮಾಡಿಕೊಂಡಿದ್ದೀರಿ. ನಮ್ಮ ಸಂಗೀತ ಶ್ರೋತೃ ಇದ್ದರೇ ಫಲಿಸ್ತದೆ. ಇಲ್ಲದೇ ಇದ್ದರೆ ಇಲ್ಲಾಂತಲ್ಲ. ನಾನು ಹೇಳಿದ್ರಲ್ಲಿ ಬೇರೆ ಅಂಶಗಳಿವೆ. ಸಂಗೀತ ಒಂದು meditation. ಸಂಗೀತವೇ ಒಂದು ತಪಶ್ಚರ್ಯ ಅಂತ ನಾನು ಇಟ್ಕೊಂಡಿದ್ದಾಗ ಒಬ್ಬನೇ ಮಾಡಲು ಸಾಕು. ಅದು ಬಿಡಿ. ಶ್ರೋತೃಗಳೂ ಇರಬೇಕಾದರೆ, ಅವರೂ ಸಂಗೀತವನ್ನ ತಿಳಕೊಂಡರೆ ಆಗ ಅವರಿಗೂ ನಮ್ಗೂ ಮಧ್ಯೆ ಇರುವಂಥ ಒಂದು creation ಆಗ್ತದೆ. ಅಂದರೆ ಅದು ಸಂಗೀತದ ಒಂದು ‘ಪಕಳೆ’ ಅಷ್ಟೇ. ಒಬ್ಬನೇ ಸಂಗೀತಗಾರನು ತಾನೇ ಸಂಗೀತವನ್ನ ಅಭ್ಯಾಸ ಮಾಡಿ, ಅದರಲ್ಲೇ ಅವನು ಬಹಳ ಸಾಫಲ್ಯ ಕಾಣುವುದು, spiritual ಆಗೋದು ಸಾಧ್ಯ. ಅದೊಂದು ಕಡೆ ಇರಲಿ. ಭಾರತೀಯ ಶಾಸ್ತ್ರೀಯ ಸಂಗೀತ ಜಾನಪದದಿಂದಲೇ ಹುಟ್ಟಿದ್ದು. ಈಗ ನಾನು ಹೇಳೋ ಎಲ್ಲ ಮೂಲ (backgrounds) ಜಾನಪದ ಸಂಗೀತದಲ್ಲಿ ಸಿಗ್ತಾವೆ. ಸ್ವಲ್ಪ mutations ಇರ್ತಾವೆ. ಅಂದರೆ ಬಹಳ ಮುದ್ದಾದ folksongs ಇರ್ತಾವೆ. ಅದು ಅದರಿಂದಲೇ ಹುಟ್ಟಿರ್ತದೆ. ನಾನೀಗ film music ನಲ್ಲಿ ಹೇಳ್ತೀನಿ. ಇದರಲ್ಲೂ ಬಹಳ ಮಟ್ಟಿಗೆ ನಮ್ಮ ಸಂಗೀತದ ಅಂಶಗಳೇ ಇರ್ತವೆ. ಈಗ ನೀವೇನು jazzy film ಬಗ್ಗೆ ಹೇಳಿದಿರಿ. ಅದರಲ್ಲೂ ಸುಮಾರು ಶೇ. ೭೫ರಷ್ಟು ನಮ್ಮ ಸಂಗೀತದ base ಇರ್ತದೆ. ಅಂದ್ರೆ, surface structures ಬಹಳಷ್ಟು ಬೇರೆ ಇದ್ದರೂ base structures ಇವೇ ಇರ್ತಾವೆ. ಇದರ ಮುಂದೆ… ನೀವು ಕೇಳಿದಿರಲ್ಲಾ  ಜನಗಳು ಈಗ ಈ ಸಂಗೀತದಿಂದ ಓಡಿ ಹೋಗ್ತಿದಾರೆ, ಇದಕ್ಕೇನು ಮಾಡಬೇಕೂಂತ. ಇದಕ್ಕೆ ಒಂದು ಸೀದಾ ಜವಾಬಿಲ್ಲ. ಒಂದು ರೀತಿಯಿಂದ ಕೇಳಿದರೆ ಅವರು ದೂರ ಹೋಗ್ತಾ ಇಲ್ಲ. ನಿಜವಾಗಿಯೂ serious ಆಗಿ ಕೇಳೋ public ಈಗ ಹೆಚ್ಚಿಗೆ ಇದೆ. ಮೊದಲು ರಾಜಾಶ್ರಯ ಇತ್ತು. ರಾಜರು, ಅಲ್ಲಿಯ ಕೆಲವರು ಮಾತ್ರ ಕೇಳುತ್ತಿದ್ದರು. ಈಗ concerts ಆಗ್ತಿದೆ. ಸಾವಿರಾರು ಮಂದಿ ಬಂದು ಸಂಗೀತ ಕೇಳ್ತಾರೆ. ಅದರಿಂದ ಆ ದೃಷ್ಟಿಯಲ್ಲಿ ನಾನು ನಿರಾಶನಲ್ಲ. ಎಷ್ಟೋ ತರಹದ Music. ಬೇರೆ ರೀತಿಯವು. ಬಂದರೂ ರಾಜಾಸ್ಥಾನದಲ್ಲಿದ್ದವನು, ಯಾವುದೋ factory ಒಳಗೆ ಕೆಲಸವನ್ನು ಮಾಡೋನಿಗೂ ಎಷ್ಟರವರೆಗೂ ಗುನುಗುನುಸ್ತಿರ್ತಾನೆ. ಅದೇ ಸುಖ ಅವನು ಪಡೀತಾನೆ. We are a very music loving people. ಇವತ್ತು filmನ ಮಟ್ಟುಗಳನ್ನು ನಾವು ಹಾಕ್ತೀವಿ. ಅದರಿಂದ ನಾವು ಪಡೆಯೋ ಸುಖ ನಮ್ಮಪ್ಪ ಬೇರೆ ಯಾವುದೇ ಮಟ್ಟು ಹಾಡಿದ್ದ ಸುಖವೋ ಅದನ್ನು ನಾವು ಪಡೀತೀವಿ. ಅದರಿಂದ ಸಂಗೀತಕ್ಕೆ response ಇದೆ. ನಮ್ಮ ಸಂಸ್ಕೃತಿ ಒಡೆದುಹೋಗಿದೆ. Organic ಆಗಿ ಉಳೀಲಿಲ್ಲ ಅನ್ನೋದು ನಿಮ್ಮ ಪ್ರಶ್ನೆಯಾದರೆ ಆ ಪ್ರಶ್ನೆಯ ತರಲ – ಸಾರ ಇಷ್ಟು. ಯಾವುದೋ ಒಂದು ಕಾಲದಲ್ಲಿ ಕಲೆಗಾರನಿಗೂ ಸಂಗೀತಗಾರನಿಗೂ ಸಾಹಿತಿಗೂ public ಮತ್ತೆ ಒಂದು organic ಸಂಬಂಧ ಇತ್ತು. ಈಗ ಅದು ಇಲ್ಲ ಅಂತ. ಅದಕ್ಕೆ ಎಷ್ಟೋ ಕಾರಣ ಇದೆ. ಒಪ್ಪಬೇಕಾದದ್ದೆ. ಆದರೆ ಇದರ ಮೇಲೂ ಅವರಿಗೆ ಸಂಗೀತ ಮುಟ್ಟವೆ ಅನ್ನೋದು ನಾನು ಹೇಳ್ತಾ ಇದೀನಿ. ಹಳೇ ಕಾಲದಲ್ಲಿ ಸಂಗೀತ ದೊಡ್ಡ ದೊಡ್ಡ ಉಸ್ತಾದರು ಬಾರಸ್ತಿದ್ದರು. ಈಗಲೂ ಬಾರಸ್ತಾರೆ. ನಾನು ಬಾರಸ್ತೀನಿ. ಇದಕ್ಕೂ ಅದಕ್ಕೂ ಏನಪ್ಪ ಭೇದ ಆಗ್ತಿದೆ? ನಾವು ಬಾರಿಸೋ ರಾಗ ಕ್ರಮ ಅದೇ. ಅದೇ ವಿಸ್ತಾರಗಳೇ. ಆದರೆ ಸ್ವಲ್ಪ ಮಟ್ಟಿಗೆ ನಾವು ಅದನ್ನ ಇಲ್ಲಿ ಅಲ್ಲಿ ನುಣುಪುಗೊಳಿಸಿದ್ದೀವಿ ಅನ್ಸತ್ತೆ. ಅದರಲ್ಲಿರೋ ಖಾರವಾದ ಅಂಶಗಳು ಯಾವ ಅಂಶಗಳನ್ನು ಕೇಳಿ ಸುಖಿಸಲಿಕ್ಕೆ ಹೆಚ್ಚು ಸಹನೆ, ಸಾಂಸ್ಕೃತಿ patience ಬೇಕಾಗ್ತದೆ ಆ ಅಂಶಗಳನ್ನು ಸ್ವಲ್ಪ ಮಟ್ಟಿಗೆ ಕೆಲವು ಸನ್ನಿವೇಶಗಳಲ್ಲಿ ನಾವು ಇಳಿಸ್ತೀವೀಂತ ಅನ್ನಿಸ್ತದೆ. ಅವು ನಮಗೆ ಗೊತ್ತು – ಕೆಲವು ಕಡೆ ನಾವು. ಅದನ್ನ ಬಾರಿಸ್ತೀವಿ. ಕೇಳೋರು ಇರ್ತಾರೆ. ಈ ಮಟ್ಟುಗಳನ್ನು ಹ್ಯಾಗೆ ಕೇಳ್ತಾರಂತಲೂ ಗೊತ್ತು. ಆ ಮಟ್ಟುಗಳನ್ನು ಎಷ್ಟೋ ಸಲ ಬಾರಿಸಲಿಕ್ಕೆ ಶುರು ಮಾಡಿದಾಗ ಸ್ವಲ್ಪ ಸಾಧಾರಣ ಮಟ್ಟದಲ್ಲಿ ಶುರು ಮಾಡ್ತೀವಿ. ಶ್ರೋತೃಗಳ reactions ನೋಡಿ ಪುನಃ pristine ರೂಪ ತರ್ತೀವಿ – ಇವತ್ತು ಕೂಡ ೧೯೭೪ರಲ್ಲಿ – ಅವರೆದುರಿಗೆ ಒಡ್ಡುತ್ತೀವಿ. ಅವರು ಕೇಳ್ತಾರೆ. ಅದರಿಂದ ಅದರ ಬಗ್ಗೆ ನನಗೆ ಸಮಸ್ಯೆ ಇಲ್ಲ.

ಪ್ರ : ಈಗ ನೀವು Australiaಕ್ಕೆ ಹೋಗ್ತಾ ಇದೀರಿ. ಅಲ್ಲಿ ಇರುವ ಜನರಿಗೆ ನೀವು ಸರೋದ್‌ನ ಬಾರಿಸ್ತೀರಿ. ಯಾವ ರೀತಿ ಸಂಗೀತವನ್ನ ನೀವು ಅಲ್ಲಿ ಬಾರಿಸಬಹುದು? ಆ ಜನ ಹೇಗೆ ಕೇಳ್ತಾರೆ? ಆ ಬಗ್ಗೆ ನೀವು ಯೋಚನೆ ಮಾಡಿದೀರಾ? ಬಾರಿಸುವ ಕ್ರಮದಲ್ಲಿ ಏನಾದರೂ ಬದಲಾವಣೆ ಆಗುತ್ತವೆಯೆ? ರವಿಶಂಕರ್ ಭಾರತದಲ್ಲಿ ಬಾರಿಸಿದಾಗ ಮತ್ತು ಬೇರೆ ದೇಶದಲ್ಲಿ ಬಾರಿಸಿದಾಗ. ಏನಾದರೂ ಅವರಲ್ಲಿ ಬದಲಾವಣೆ ಆಗುತ್ತದೆಯೆ? ಇದನ್ನ ನೀವು ಗಮನಿಸಿದೀರಾ?

ಉ : ನಾನು Australia ಕ್ಕೆ ಹೋಗ್ತೀನೀಂತ ನಾನೂ ಕೇಳಿದೀನಿ. ಹೋದರೆ… ನನ್ನ ಮಟ್ಟಿಗೆ ಹೇಳೋದಾದರೆ ನಾನು ಯಾವಾಗಲೂ ಬಾರಿಸೋ ಸಂಗೀತಾನೇ ಅಲ್ಲೂ ಬಾರಿಸ್ತೀನಿ. Programme ಸಣ್ಣದಾದರೆ, ರಾಗ ವಿಸ್ತಾರದ ಕ್ರಮವನ್ನು ಸಣ್ಣದರಲ್ಲೇ ಮುಗಿಸಬಹುದು. ಇಷ್ಟೇ ನಾನು ಅಂದುಕೊಂಡಿರೋದು. ಯಾಕೆಂದರೆ ನಾನು ಕೇಳಿ ತಿಳಿದ ಹಾಗೆ ಪಾಶ್ಚಾತ್ಯ ದೇಶದಲ್ಲಿ ನಾಲ್ಕೈದು ತಾಸು ಕುಳಿತು ಒಂದು ರಾಗದ ವಿಸ್ತಾರಾನ ಕೇಳೋ ಸಹನೆ ಅವರಿಗಿಲ್ಲ – ಆ ಸಂಸ್ಕಾರ ಇಲ್ಲಾಂತ. ಈಗ ನಮ್ಮಲ್ಲಿ ಬಾರಿಸಬೇಕಾದರೆ ಒಂದು Programmeನ ಆರಂಭದಲ್ಲಿ ದೊಡ್ಡ ವಿಸ್ತಾರ ಆಲಾಪನೆ ಶುರುಮಾಡ್ತೀವಿ. ಅದು ಅಲ್ಲಿ ಆಗಲ್ಲ. ಏಕೆಂದರೆ ಮೊದಲೇ ಹೇಳಿದ ಹಾಗೆ ಅವರಿಗೆ ಅಷ್ಟು ಸಮಯ ಇರಲ್ಲ. ಮೊದಲು ಆ ಮಂದಿಯ ಮನಸ್ಸನ್ನು ಹಿಡಿಯೋ ಪ್ರಯತ್ನ ಮಾಡ್ತೀನಿ.

ಪ್ರ : ಹ್ಯಾಗೆ?

ಉ : ದ್ರುತ ಗತಿಗಳನ್ನು ಬಾರಿಸ್ತೀವಿ. ವೇಗವಾಗಿ ಹೋಗುವ ಚಮತ್ಕಾರ ಗತ್ತು (ಕೀರ್ತನೆ ಹಾಗೆ) ಸರೋದ್‌, ಸಿತಾರ್ ದಲ್ಲಿ ಬಾರಿಸ್ತೀವಿ ಅಷ್ಟೆ. ಅದನ್ನು ಬಿಟ್ಟರೆ ಸಂಗೀತ ಹ್ಯಾಗೆ? ಬಹಳ ಮಟ್ಟಿಗೆ ರವಿಂಶಕರ್ ಹೀಗೆ ಮಾಡಿದ್ದರಿಂದ ಜನರ ಅಭಿರುಚಿಯನ್ನ ಕೆಡಿಸಿದಾರೆ ಅಂತ ಕೆಲವರು ಹೇಳಿದ್ದನ್ನ ಕೇಳಿದೀನಿ. ಅದು ತಪ್ಪು ಅನ್ನಿಸುತ್ತೆ.

ಪ್ರ : ನಿಮಗೆ ಉಸ್ತಾದ್‌ ಅಲಿ ಅಕ್ಬರ್ ಖಾನ್‌ ಅವರ ಮೇಲಿನ ಆಕರ್ಷಣೆ ಇದೆಯೆಲ್ಲ ಅದಕ್ಕೆ ಸಂಗೀತ ಒಂದೇ ಅಲ್ಲದೇ ಬೇರೆ ಯಾವ ಕಾರಣಗಳಿದಾವೆ? ಅವರಿಂದ ನೀವು ಕಲಿತ ಕ್ರಮ ಇತ್ಯಾದಿಗಳ ಬಗ್ಗೆ ಒಂದೆರಡು ಮಾತು ಹೇಳಿ.

ಉ : ಕಲಿತ ಕ್ರಮದ ಬಗ್ಗೆ ೧೯೭೨ರಲ್ಲಿ ಬಿ.ವಿ.ಕೆ. ಶಾಸ್ತ್ರಿ ಸುಧಾದಲ್ಲಿ ಸಾಕಷ್ಟು ಬರೆದಿದ್ದಾರೆ. ಅದನ್ನ ನೋಡ್ರಿ. ಸಂಕ್ಷಿಪ್ತದಲ್ಲಿ ಹೇಳೋದಾದ್ರೆ ಅವರಿಂದ ಕಲಿತಿದ್ದು ಹಳೆಯ ಗುರುಶಿಷ್ಯ ಸಂಪ್ರದಾಯದಂತೆಯೇ. ಅದರಿಂದ ನನಗೆ ಈಗ ಏನು ಅನ್ನಿಸ್ತದೆ ಅಂದರೆ ಅದರಲ್ಲಿ ಒಂದು ಕ್ರಮ ಇತ್ತು. ಆಗ ಕ್ರಮ ಇದೆಯೋ ಇಲ್ಲೋ ಅನ್ನಿಸಿತ್ತು. ಬಹಳ ಬೇಜಾರು ಆಗಿತ್ತು. ನಾನು ಕಾಲೇಜ್‌ education ತಗೊಂಡು ಸ್ವಲ್ಪ ಮಟ್ಟಿಗೆ ಜಂಭದ ದೊಡ್ಡ ಮನುಷ್ಯನಾಗಿಯೇ ಹೋಗಿದ್ದೆ. ಓದಿದವ ಅನ್ನೋ ಅಹಂಕಾರ ಇತ್ತು. ಅದನ್ನು ಎಲ್ಲಾ ರೀತಿಯಿಂದ ಹೊಡೆದು ನಾಶ ಮಾಡಿದ್ರು. ಅಂದ್ರೆ ಒಟ್ಟು ಈಗ ಏನು ಅನ್ನಿಸ್ತದೆ ಅಂದ್ರೆ ಸಂಗೀತ ಒಬ್ರಿಗೆ ಕಲಿಸಬೇಕು ಅನ್ನಿಸ್ತದೆ. ಆ ಮನುಷ್ಯನಲ್ಲಿ ತನ್ನ conscious ಸಂಸ್ಕಾರ ಏನು ಇರ್ತದೆ ಅವನ್ನೆಲ್ಲ ಮುರೀಬೇಕು, ಅವನ egotism  ತೆಗೆಯಬೇಕು. ಅವ ಒಂದು ಪಾತ್ರೆಯಾಗಿ ಇರಬೇಕು. ಆಗಲೇ ಅವನಿಗೂ ನಮಗೂ ಒಂದು communication ಸಾಧ್ಯ.

ಪ್ರ : ಅದನ್ನೇ ನಾನು ಸಾಹಿತ್ಯದ ಮೇಲಿನ ಪ್ರಶ್ನೆಯಿಂದ ಆರಂಭ ಮಾಡಿದೆ. ಅಂದರೆ ಸಾಹಿತ್ಯಕ್ಕೂ ಸಂಗೀತಕ್ಕೂ ಇರುವ ಸಂಬಂಧದಿಂದ. ಈ – ಗುರು ಶಿಷ್ಯ ಸಂಬಂಧ ಸಂಗೀತದಲ್ಲಿ ಸಾಧ್ಯ ಇರುವ ಹಾಗೆ, ಒಂದು ಗುರುಪರಂಪರೆ ಸಾಹಿತ್ಯದಲ್ಲಿ ಸಾಧ್ಯವೆ? ಅದನ್ನ ಅಪೇಕ್ಷಿಸೋಕೆ ಸಾಧ್ಯವೆ? ಸಾಧ್ಯವೇ ಇಲ್ಲದಿದ್ದರೆ ಯಾಕೆ?

ಉ : ಒಂದು ದೊಡ್ಡ ಅಂತರ ಇದೆ. ಸಂಗೀತದಲ್ಲಿ ಕಸುಬು ಕಲಿಸಬೇಕಾಗುತ್ತದೆ. (skill) ಆ ಕಸುಬು non – verbal. ಅದು ಬರೆದರೆ manual ಆಗುತ್ತೆ. ಆದ್ದರಿಂದ ಆ ಸಂಗೀತಾನ ನಾವು ಬಾರಿಸೋದು. ಕೆಲವೆಲ್ಲ ಇದು ಹ್ಯಾಗೆ ಬಾರಿಸ್ತೀರಿ ಅಂದ್ರೆ ಅದನ್ನ ಹೇಳಿದರೆ ಆಗಲ್ಲ. ಗುರುಗಳ ಜೊತೆಗೆ ಬಾಳಿ ಅವರು ಬಾರಿಸೋ ಕ್ರಮ, ಯೋಚಿಸುವ ಕ್ರಮ ಇದನ್ನು ನಾವು ಸುಮ್ಮನೆ ಹಾಗೆ ತಿಳ್ಕೋಬೇಕು. ಆ ಒಂದು ವಾತಾವರಣದಿಂದ ತಿಳೀತದೆ. ಸ್ಥೂಲವಾಗಿ ಬಹಳ ಸಂಗೀತ ನಮ್ಮ ಕಿವಿಗೆ ಯಾವಾಗಲೂ ಬೀಳ್ತಿರ್ತದೆ. ಅದು ಆಗಲೇ ನಮ್ಮ ಕೈಗೆ ಬರೋದಿಲ್ಲ. ಅವರು conscious ಆಗಿ ಏನು ಹೇಳಿಕೊಡ್ತಾರೆ, ಅದು ತಾವು ಬಾರಿಸೋದೇ ಹೇಳ್ಕೊಡೋದಿಲ್ಲ. ಇನ್ನೇನೊ ಹೇಳಿಕೊಡ್ತಾರೆ. ಇದೇನಪ್ಪ ಇವರು ನಮ್ಮಿಂದ ಮುಚ್ಚಿಡ್ತಿದಾರೆ ಅಂತ ಒಮ್ಮೊಮ್ಮೆ ಬೇಜಾರಾಗಿತ್ತು. ಈಗ ನನಗೆ ತಿಳೀತದೆ ಅವರು ಒಂದೊಂದು ಹೇಳಿಕೊಟ್ಟಿದ್ದು ಟೆಕ್ನಿಕ್ಸ್‌ ಅಷ್ಟೆ. ಅವನ್ನ ನಾನೇ ನನ್ನಲ್ಲೇ ಕರಗಿಸಿಕೊಂಡು ಬೆಳೆದು ಪಕ್ವವಾಗಿ ಅದು ಯಾವುದೋ ಕಾಲದಲ್ಲಿ ನನ್ನ ಅನುಭವ ಸರಿಯಾದಾಗ ಅವರು ಬಾರಿಸಿದ ಹಾಗೆ ಬರಬಹುದೇನೋಂತ ಕಲ್ಪನೆ ಇತ್ತು. ಅದು ಈಗ ಒಂದೊಂದಾಗಿ ಬರ್ತಿದೆ. ಇದು ನಾನು ಬದುಕಿರೋವರೆಗೂ ಬರ್ತದೆ. ಅದರಿಂದ ನಾನು ತಿಳ್ಕೊಂಡಿರೋ ವಿಷಯ ನೂರರಲ್ಲಿ ಒಂದು ಭಾಗ ಕೂಡ ಇಲ್ಲ. ಸಾಧಿಸಲಿಕ್ಕಾಗಲಿಲ್ಲ ಅಂದ್ರೆ ಸಾಧಿಸೋದರ ಮಟ್ಟಿಗೆ ನನಗೆ ಬೇಕಾದಷ್ಟು ಅನುಭವ ಆಗಿದೆ. ಒಟ್ಟು ಒಬ್ಬ ಗುರು ಏನ್ಮಾಡ್ತಾನೆ ಅಂದ್ರೆ ತನ್ನ ಅನುಭವಗಳನ್ನು ಒಡ್ಡುತ್ತಾನೆ, ಶಿಷ್ಯನೆದುರು ಬದುಕಿಬಿಡ್ತಾನೆ. ಯಾಕೆಂದರೆ ಗುರುವಿಗೆ ಬದುಕೇ ಒಂದು ಸಂಗೀತ, ಅವನ ಬದುಕು ಸಂಗೀತದಲ್ಲಿ ಹೇಗೆ ಹೋಗುತ್ತೇಂತ ನಾವು ಸುಮ್ಮನೆ ಅವನ ಜೊತೆಗೆ ಬದುಕಿ ತಿಳಕೋಬೇಕು ಅಷ್ಟೆ. ಅದನ್ನ ಹೇಳಲಿಕ್ಕಾಗಲ್ಲ. ಸಾಹಿತ್ಯದ ಪ್ರಶ್ನೆ ಬೇರೆ ಆಗುತ್ತೆ. Skills ನಾವು ಹೇಳಿಕೊಡೋದಿಲ್ಲ. ಸಾಹಿತ್ಯದಲ್ಲೂ ಯಾವುದೇ ಒಂದು Indirect ರೀತಿಯಲ್ಲಿ ಇವರು ನಮ್ಮ ಗುರುಗಳೂಂತ ನಾವು ಭಾವಿಸಬೇಕಾಗುತ್ತೆ. ಸ್ವಲ್ಪ ಮಟ್ಟಿಗೆ ಅಡಿಗರೂ ಆ ಸ್ಥಾನದಲ್ಲಿದ್ದಾರೆ. ನೀವು ಈ ಮಾತು ಒಪ್ತೀರೋ ಬಿಡ್ತೀರೋ ಅಡಿಗರು ಬರೆದ ಹಾಗೆ ಬರೀಬೇಕಾದ್ದಿಲ್ಲ. ಆದರೆ ಅವರ ಬರವಣಿಗೆಯಿಂದ ನಮ್ಮ ಮೇಲೆ ಏನೇನು ಗಾಢವಾದ ಪರಿಣಾಮಗಳಾದವು, ಅದರಿಂದ ನಾವೂ ಬರಿದಿವಿ.

ಪ್ರ : ಅಂದರೆ.. ಪರಂಪರೆ ಮತ್ತು ವ್ಯಕ್ತಿಪ್ರತಿಭೆ ಇವೆರಡೂ ಸೇರಿಯೇ ಎಲ್ಲ ಕಲೆಯೂ ಹುಟ್ಟುತ್ತೆ ಅಂತ ಅನ್ನೋದಾದ್ರೆ ಸಂಗೀತದಲ್ಲಿ ವ್ಯಕ್ತಿಪ್ರತಿಭೆಗಿಂತ ಪರಂಪರೆ ಹೆಚ್ಚು ಸಾಹಿತ್ಯದಲ್ಲಿ ವ್ಯಕ್ತಿ ಪ್ರತಿಭೆ ಅಂಶ ಪರಂಪರೆಗಿಂತ ಹೆಚ್ಚಿಗೆ ಇರುತ್ತೆ, ಒಪ್ತೀರಾ ಇದನ್ನ? ಆದ್ದರಿಂದ ಇಲ್ಲಿ ಗುರು ಪರಂಪರೆ ಸಾಹಿತ್ಯದಲ್ಲಿ ಆ ದೃಷ್ಟೀಲಿ ಕೆಲಸ ಮಾಡೋಕೆ ಆಗೋದಿಲ್ಲ.

ಉ : ನಿಜಾಂತ ಕಾಣುತ್ತೆ. ಮತ್ತೆ ತಿರುಗ ಹೇಳೋದೇನೂಂದ್ರೆ ಆ ಕಸುಬು ಒಬ್ರಿಂದ ಒಬ್ರಿಗೆ ಹೋಗುತ್ತೆ. ಸಂಗೀತ ಒಂದೇ ಅಲ್ಲ – ನಗಬೇಡ್ರಿ – ಕುಸ್ತಿ, Paintings, ಶಿಲ್ಪಕಲೆ, ಇದರಲ್ಲಿ ಆಗತಕ್ಕಂಥ ಒಂದು communication ಇರ್ತದೆ. ಇದು ಬಹಳ ನಿಕಟವಾದ ಒಂದು ಸಂಬಂಧವನ್ನ ಯಾವಾಗಲೂ ಗುರುಶಿಷ್ಯರಲ್ಲಿ ಬೆಳಸ್ತದೆ. ಆ ಗುರುವಿನಿಂದ ತಪ್ಪಿಸಿಕೊಳ್ಳೋಕೆ ಶಿಷ್ಯ ಬಹಳಷ್ಟು ತ್ರಾಸ ಪಡಬೇಕಾಗ್ತದೆ. ಸಾಹಿತ್ಯ ಇಂಥದ್ರಿಂದ ಸ್ವಲ್ಪ ಮುಕ್ತ. ಅಂದರೆ ಸಾಹಿತ್ಯದಲ್ಲೂ ಹೀಗಾಗಕ್ಕೆ ಸಾಧ್ಯ.

ಪ್ರ : ಸಾಧ್ಯ ನಿಜ. ಆದರೆ ನೀವು ಅಲಿ ಅಕ್ಬರ್ಗಿಂತ ಬೇರೆ ರೀತಿಯ ವ್ಯಕ್ತಿಯೇ? ಅವರಿಗೆ ಬಂಗಾಲದ ಸಂಸ್ಕಾರ ಇದೆ. ಆ ಜಾನಪದದ ಸಂಸ್ಕಾರ ಇದೆ ಇತ್ಯಾದಿ. ಆದರೆ ನೀವು ದಕ್ಷಿಣದವರು. ಇಲ್ಲಿಯ ಹಾಡುಗಳನ್ನು ಕೇಳಿದೀರಿ. ಇಲ್ಲಿಯ ಜೀವನದಲ್ಲಿ ಬದುಕಿದ್ದೀರಿ. ನೀವು ಅವರಿಂದ ಸರೋದ್ ಕಲಿತರೂನೂ ನೀವು ಬಾರಿಸುವ ಕ್ರಮದಲ್ಲಿ ನೀವು ವೈಯಕ್ತಿಕವಾದ ಹಿನ್ನೆಲೆ ಇಟ್ಟುಕೊಂಡಿದ್ದು, ಅದರಿಂದಾಗಿ ನೀವು ಸ್ವಲ್ಪಮಟ್ಟಿಗೆ ಬೇರೆ ರೀತಿಯಲ್ಲಿ ಬಾರಿಸ್ತೀರೀಂತ ಅನ್ನಬಹುದೆ?

ಉ : ಈ ಮಾತು ಬೆಂಗಳೂರಲ್ಲಿ ಇರುವ ಒಬ್ಬ music critic ಅಂದ್ರು. ನನ್ನ ಬಗ್ಗೆ ಒಂದು ಕಡೆ ಬರೀತಾ, ಇವರು ಸರೋದ್ ಬಾರಿಸಬೇಕಾದರೆ ದಕ್ಷಿಣದವರು ಅಂತ ಗೊತ್ತಾಗುತ್ತೇಂತ ಬರೆದಿದ್ರು. ಎಲ್ಲಿ ನನ್ನ ಆ ಅಂಶ ಬರುತ್ತೇಂತ ನನಗೆ ಗೊತ್ತಿಲ್ಲ.

ಪ್ರ : ನಿಮ್ಮ ಲಯಜ್ಞಾನದಲ್ಲೀಂತ ಅನ್ನಬಹುದೆ?

ಉ : ನನ್ನ ಲಯಜ್ಞಾನ ಅಲಿ ಅಕ್ಬರ್ ಲಯಜ್ಞಾನ. ಅದನ್ನ ಹೊಂದಿಕೊಂಡು ಹೋಗ್ತದೆ. ಸುಮಾರು ಆ ಲಯಜ್ಞಾನದ ಬಗ್ಗೆ ಹೇಳಕ್ಕೆ ಹೋದರೆ ದಾಕ್ಷಿಣಾತ್ಯ ಲಯವಿನ್ಯಾಸ ಉತ್ತರ ಹಿಂದೂಸ್ಥಾನಕ್ಕೆ ಉಪಯೋಗಿಸಿರೋರು ಸ್ವಲ್ಪ ಮಟ್ಟಿಗೆ ಅಂತಂದ್ರೆ ರವಿಶಂಕರ್ ಒಬ್ಬರೇ. ಅದರ ಪ್ರಭಾವ ನನಗಿಲ್ಲ. ಅದು ಖಡಾ ಖಂಡಿತ ಹೇಳ್ತೀನಿ. ನನಗೆ ಈಗಿನ ಇಲ್ಲಿಯ ಸಂಸ್ಕಾರ ನನಗೆ ಸಂಗೀತದಲ್ಲಿ ಹೇಗೆ ರೂಪುಗೊಳ್ಳುತ್ತದೇಂತ ನಾನು ಹೇಳೋದು ಕಷ್ಟ. ಹೇಳಿದರೂ ತಪ್ಪಾಗುತ್ತೆ. ಇನ್ನೂ ಬಾರಿಸಬೇಕು – ಬಹಳ ಬಾರಿಸಿ ಮತ್ತೆ ಮುಂದೆ ಯಾವಾಗಲಾದ್ರೂ ಆ ವಿಚಾರ ಸ್ವಲ್ಪ ಮಟ್ಟಿಗೆ ಗೊತ್ತಾಗಬಹುದು.

ಪ್ರ : ನೀವು ಹೆಚ್ಚೆಚ್ಚು ಇನ್ನು ಮುಂದೆ ಸಿನಿಮಾ ಸಂಗೀತವನ್ನು ಕೊಡೋ ಸಾಧ್ಯತೆ ಇದೆಯೋ? ಇದ್ದರೆ ಯಾಕೆ? ಇದು ನಿಮ್ಮನ್ನು ಆಕರ್ಷಿಸಿದೆಯಾ?

ಉ : ಸಿನಿಮಾ ಸಂಗೀತ, ನಾನು ಇದುವರೆಗೂ ಒಂದು ಚಿತ್ರ ‘ಸಂಸ್ಕಾರ’ಕ್ಕೆ ಕೊಟ್ಟೆ.

ಪ್ರ : ಅದು ನಿಮಗೆ ಛಾಲೆಂಜಿಂಗ್ ಆಗಿತ್ತಾ?

ಉ : ಹೌದು.

ಪ್ರ : ಒಬ್ಬರೇ ಕೂತು ನುಡಿಸಿದಾಗ ಹೇಗೆ ಅದು ಸವಾಲಾಗಿತ್ತೋ ಹಾಗೇ ಈ ಸಂಗೀತ ಕಲೆ ಒಂದು ಸಿನಿಮಾಕ್ಕೆ ಅಂಥದೇ ಸವಾಲಾಗುತ್ತದೆಯಾ?

ಉ : ಅದು ಹೇಗಾಗುತ್ತೆ ನೋಡ್ರಿ – ಆಗಿದ್ದು ಹೇಳ್ತೀನಿ. ನಿಮಗೆ interesting ಆಗಬಹುದು. ಸಂಸ್ಕಾರ ಚಿತ್ರ ತೆಗೆದರು. ಆಮೇಲೆ ಸಂಗೀತ ಕೊಡೋ ಮುಂಚೆ ಒಮ್ಮೆ ಅದನ್ನ ನನ್ನೆದುರು ಪ್ರದರ್ಶಿಸಿದರು. ನೀವೂ ಇದ್ದಿರಲ್ಲ ಅಲ್ಲಿ. ‘ಸಂಸ್ಕಾರ’ ಚಿತ್ರ ಚೆನ್ನಾಗಿದೆ. ಆದರೆ ದೃಶ್ಯಗಳೆಲ್ಲ ಬಿಡಿ – ಬಿಡಿ ಆಗಿವೆ. ಸಂಬಂಧವಿಲ್ಲದೇ ಬರ್ತಾ ಇದೆ. ಏನೋ ಅದರ ಒಕ್ಕಣೆ ಇಲ್ಲಾಂತನ್ಸತ್ತೆ ನಮಗೆ, ಅಂತ ಅಲ್ಲಿದ್ದೋರು ನನಗೆ ಹೇಳಿದರು. ನೋಡ್ರಿ, ಈ ಬಿಡಿ ಬಿಡಿಯಾಗಿರೋ ಚಿತ್ರಾನ್ನ ಒಂದಾಗಿಸೋ ಕೆಲ್ಸಾ ನಿಮ್ದು ಅಂತ ಹೇಳಿದರು. ಇದೊಂದು ಛಾಲೆಂಜ್ ನನಗೆ. ಹಾಡಿಲ್ಲದ ಚಿತ್ರಕ್ಕೆ ಹಿನ್ನೆಲೆ ಸಂಗೀತ ನಾನು ಕೊಡಬೇಕಾಗಿತ್ತು. ಆಮೇಲೆ ನಾನೂ ಸಂಗೀತ ನೀಡಿದೆ. ಈಗ ಚಿತ್ರ ಬಿಡಿಬಿಡಿಯಾಗೇ ಇದೆಯೋ ಒಂದಾಗಿದೆಯೋ ನಾನು ಹೇಳಲಾರೆ. ನೀವು ಹೇಳಬೇಕು. ಆದರೆ ನನ್ನ ಕೇಳೋದಾದರೆ ಸ್ವಲ್ಪಮಟ್ಟಿಗೆ ಕೆಲವೆಲ್ಲ ಬೇರೆ ಬೇರೆಯಾದ ಅಂಶಗಳು ಸಂಗೀತವಿಲ್ಲದೆ ಸಿಕ್ಕಾಗ ಈಗ ಅದಕ್ಕೂ ಎಲ್ಲೋ ನಾದದಲ್ಲಿ ಯಾವುದೋ ಒಂದು toneನಲ್ಲಿ ಜೋಡಣೆ ಇದೆ. ಇದರ ಮೇಲೆ filmಗೆ ಸಂಗೀತ ನೀಡೋದು ಛಾಲೆಂಜ್ ಇದೆ. ಏಕೆಂದರೆ ನಾನೂ ಶಾಸ್ತ್ರೀಯ ಸಂಗೀತ ಬಾರಿಸ್ತೀನಿ. ಪಾಶ್ಚಾತ್ಯ ಸಂಗೀತಕ್ಕೆ ನೋಡಿದರೆ ಅದರಲ್ಲಿ ಬೇರೆ senses ನಿಂದ ಏನಿರ್ತದೆ, ಏನೇನು impression ಬರ್ತದೆ. ಅದರ objective correlative ಆಗಿ ಬರ್ತದೆ ಹೇಳ್ತಾರೆ – ಪಾಶ್ಚಾತ್ಯ ಸಂಗೀತ ಕೇಳಿದಾಗ ಯಾವುದೋ ಮನೆ ಬಿದ್ದಾಗೆ, ಕಾಡು ನೋಡಿದ ಹಾಗೆ ಇವೆಲ್ಲ ಭಾಸವಾಗ್ತದೆ ಅಂತ. ನಿಮ್ಮ ಸಂಗೀತದಲ್ಲಿ ಅದಿಲ್ಲ. ಇಲ್ಲಿ ಸಿಗೋ ಸೌಖ್ಯ ಯಾವ ಸ್ವರಗಳಾಗಲಿ ಅವುಗಳದೇ ಕೌಶಲದಲ್ಲಿ ‘ಯೋಗಃ ಕರ್ಮಸು ಕೌಶಲಂ’ ಅಂತ ಕೃಷ್ಣ ಹೇಳಿದ ಹಾಗೆ ಆ ಕೌಶಲದಿಂದ ಬರುವಂಥ ಸುಖವೇ ನಮ್ಮ ಸಂಗೀತದ ಸುಖ. It doesn’t appeal to any other sense of satisfaction. ಈಗ picture visual ಇರ್ತದೆ. ಈ autonomous ಆದಂಥ ಸಂಗೀತ ಇದಕ್ಕೆ ಜೋಡಿಸೋದು. ಇದರಲ್ಲಿ ಸ್ವಲ್ಪಮಟ್ಟಿಗೆ ನನಗೆ ಅನುಭವ ಇದೆ. ಯಾಕೆಂದರೆ ನನ್ನ ಗುರುಗಳು direct ಮಾಡಿದ್ದ ಬೆಂಗಾಲಿ ಚಿತ್ರಕ್ಕೆ ಸಂಗೀತ ನುಡಿಸಿದ್ದೇನೆ. ಆಗ ಆ problems ಕಂಡಿದ್ದೇನೆ. ಅದರಿಂದ ಸ್ವಲ್ಪ ಸಹಾಯ ಆಗಿದೆ. ಇನ್ನೊಂದೇನಪ್ಪ ಅಂತಂದ್ರೆ ಈಗ ನಾನು ಬಾರಿಸೋ ಸಂಗೀತ, ಸಂಸ್ಕಾರದ ಕಥೆ, ಇವೆರಡು ವಾತಾವರಣಗಳು ಬೇರೆ. ಸಂಸ್ಕಾರ ದಾಕ್ಷಿಣಾತ್ಮ ಒಂದೇ ಅಲ್ಲ. ದಕ್ಷಿಣದಲ್ಲಿ ಒಂದು ಊರು. ಒಂದು ಕಾಡು. ಅಂದರೆ ಅಷ್ಟು localised ಕಥೆ. ಬೇರೆ ಯಾವುದೋ ದೇಶದ ಸಂಗೀತ ಅದಕ್ಕೆ ಜೋಡಿಸಬೇಕಾದರೆ ಇದು ಬೇರೆ ದೇಶದ ಸಂಗೀತ ಅಂತ ತಿಳೀಬಾರದು. ಅದು ಒಟ್ಟು ಹಿಂದೂಸ್ಥಾನಿ classical ಸಂಗೀತವಾಗೇ ನಿಂತರೆ ಹೊರಗೇ ಉಳಿದುಬಿಡ್ತದೆ. ಕಥೆ ಮೇಲೆ ಏನೂ ಪ್ರಭಾವ ಬೀಳಲ್ಲ. ಏಕೆಂದರೆ ಅದಕ್ಕೆ ಒಂದು ಹೆಸರಿರುತ್ತೆ. ತನ್ನ ಹೆಸರು ಕಳಕೊಂಡು ಇಲ್ಲಿ ಕೆಲಸ ಮಾಡಬೇಕು. ಅದನ್ನ ಪ್ರಯತ್ನ ಮಾಡಿದೆ. ಕೆಲವರಿಗೆಲ್ಲ ತೃಪ್ತಿ ಆಯಿತು. ಆದರೆ ಗಿರಿಜಾ ರಾಜೇಂದ್ರನ್ ಅನ್ನುವ critic ರಾಜೀವ್ ತಾರಾನಾಥ್ ಸಂಗೀತ ಬಹಳ ಸುಶ್ರಾವ್ಯವಾಗಿದೆ. ಆದರೆ ಅದು ದಕ್ಷಿಣ ಭಾರತೀಯ ಸಂಗೀತ ಆಗಿದ್ರೆ ಚೆನ್ನಾಗಿರ್ತಿತ್ತು ಅಂತ ಬರೆದಿದ್ರು.

ಪ್ರ : ನಿಮ್ಮ ತಂದೆಯವರ ಪರಿಚಯ ಮಾಡಿಕೊಡ್ತೀರಾ?

ಉ : ನಮ್ಮ ತಂದೆಯವರ ಪರಿಚಯ ಹೇಗೆ ಮಾಡಿಕೊಡಲಿ? ಅವರು ಪಂಡಿತ ತಾರಾನಾಥರು. ಅವರದ್ದು ಬಹುಮುಖ ವ್ಯಕ್ತಿತ್ವ ಅಂತ ನಾನೂ ಕೇಳಿದ್ದೀನಿ. ಸ್ವಲ್ಪಮಟ್ಟಿಗೆ ನನಗೂ ಅನುಭವ. ಏಕೆಂದರೆ ಅವರು ನಾನು ಬಹಳ ಸಣ್ಣವನಾಗಿದ್ದಾಗಲೇ ತೀರಿಕೊಂಡರು. ಒಟ್ಟು ಕರ್ನಾಟಕದ ಅಥವಾ ದಕ್ಷಿಣ ಹಿಂದೂಸ್ಥಾನದ ಸಾಂಸ್ಕೃತಿಕ ಚರಿತ್ರೆಯಲ್ಲಿ ಬಹಳ ಮುಖ್ಯವಾದ ವ್ಯಕ್ತಿ. ಅವರು ದಾರ್ಶನಿಕರೂ, ಸಂಗೀತಗಾರರೂ, ನಾಟಕಕಾರರೂ, ‘ಭಾಷಾ ವಿಜ್ಞಾನಿಗಳೂ’ ಮೇಲೆ ಬಹಳ ದೊಡ್ಡ ವೈದ್ಯರೂ, ವಾಗ್ಮಿಗಳೂ ಆಗಿದ್ದರು. ಪವಾಡಪುರುಷ ಅನ್ನಲಿಕ್ಕೆ ಏನೇನು ಸಲಕರಣೆಗಳು ಬೇಕೋ ಅವೆಲ್ಲ ಅವರಲ್ಲಿದ್ದುವು. ನನ್ನನ್ನು ಕೇಳಿದರೆ ಸ್ವಲ್ಪಮಟ್ಟಿಗೆ ಅವರ ಪ್ರಭಾವ ಈಗಿನ ಕಾಲದಲ್ಲಿ ಯಾಕಿಲ್ಲ ಅಂತ ನೋಡಿದರೆ ಅವರು ‘ಪವಾಡ’ ಆಗಿರೋದೇ ಕಾರಣ. ಯಾಕೆಂದರೆ ನಾವು ಪವಾಡಗಳನ್ನು ಬಹಳ ಬೇಗ ಅರಗಿಸಿಕೊಂಡು ಬಿಡುತ್ತೀವಿ. ಎರಡು ಹೂಮಾಲೆ ಹಾಕಿ ಅಲ್ಲೊಂದು ಇಲ್ಲೊಂದು ವಿಗ್ರಹ ಕಟ್ಟಿ ನಾವು ಹಳೇಕರ ನಾಯಿಬಾಲದ ದಾರಿ ಹಿಡಿದಿರುತ್ತೀವಿ. ಅವು ಬದುಕಿರೋ ಸಮಯದಲ್ಲಿ ಬಹಳ ಕ್ರಾಂತಿಕಾರಿ ವ್ಯಕ್ತಿಯಾಗಿದ್ದರು. ಸಾಮಾಜಿಕ ದೃಷ್ಟಿಯಿಂದ ಈಗ ನೀವು ಬರ್ಟ್ರಂಡ್ ರಸಲ್, ಕಾರ್ಲ್‌ಮಾರ್ಕ್ಸ್ ಇಂಥ ವ್ಯಕ್ತಿಗಳ ಸಂಬಂಧ, ವಿಷಯದಲ್ಲಿ ಏನು ನೆನೆಸಿಕೊಂಡಿರ್ತೀರಿ ಇಂಥವೆಷ್ಟೋ ಅವರು ಕಾರ್ಯತಃ ಮಾಡಿ ತೋರಿಸಿದ್ದರು. ಕೆಲವೆಲ್ಲಾ ಅವರ ಬರಹ, ಅಭಿಪ್ರಾಯಗಳು ಬಹಳ ಕಟುವಾಗಿಯೂ radical ಆಗಿಯೂ ಇದ್ದವು. Untouchability. ನಮ್ಮ ವಿವಾಹ ಸಂಪ್ರದಾಯ, ವಿಧವಾವಿವಾಹ, ವಿವಾಹದ ಹೊರಗೆ ಗರ್ಭ ನಿಲ್ಲೋಣ ಇದರ ಬಗ್ಗೆಲ್ಲ ಅವರು ಬಹಳ radical ಆಗಿದ್ದರು. ನನ್ನ ತಂದೆಯವರು ನನ್ನನ್ನು ಬಹಳ ಹತ್ತಿರದಲ್ಲೇ ಇಟ್ಟುಕೊಂಡಿದ್ದರು. ನಾನು ಸಣ್ಣವನಿದ್ದಾಗ ನನ್ನ ತಲೆ ದೊಡ್ಡದಿದ್ದು ಕೈಕಾಲು ಸಣ್ಣವಿದ್ದವು. ಹೀಗಾಗಿ ನನಗೆ ಬೇರೆ ಮಕ್ಕಳ ಜೊತೆ ಆಟ ಇತ್ಯಾದಿಗಳು ಸಂಭವ ಆಗ್ತಿರಲಿಲ್ಲ. ಆದ್ರಿಂದ ಅವರ ಜೊತೆಗೇ ಬೆಳೆದ ನಾನು, ಅದು ಒಂದು ರೀತಿಯಿಂದ ಒಳ್ಳೆಯದೇ ಆಯ್ತು ಅಂತ ಕಾಣುಸ್ತದೆ. ಏಕೆಂದರೆ ೪ನೇ ೫ನೇ ವಯಸ್ಸಿನಿಂದಲೇ ನನಗೆ ಸಂಗೀತ ಕಲಿಯುವ ಪ್ರಸಂಗ ಬಂತು. ಸಂಗೀತ, ಸಂಸ್ಕೃತ, ಉರ್ದು, ಕನ್ನಡ ಇಂಗ್ಲೀಷ್ – ಅವರು ಮತ್ತು ತಾಯಿ ಕಲೀತಿದ್ರು – ಕಲಿಸಿದರು. ಸ್ವಲ್ಪಮಟ್ಟಿಗೆ ಚಿತ್ರಕಲೆ ಎ.ಎನ್. ಸುಬ್ಬರಾಯರ ಕಲಾಮಂದಿರದಲ್ಲಿ ಕೂಡ ಕೆಲವು ದಿವಸ ಕಲಿತಿದ್ದಾಯಿತು. ಇದೆಲ್ಲಾ ಕಲಿಯುವ ಪ್ರಸಂಗ ತಂದೆಯವರಿಂದ ಒದಗಿತ್ತು. ಒಟ್ಟು ಪಂಡಿತ ತಾರಾನಾಥ್‌ರವರು ಕೊಂಕಣಿ ಮಾತಾಡುವ ಮಂಗಳೂರಿನವರಾದರೂ ಈಗಿನ ಹೈದರಾಬಾದಿನಲ್ಲಿ ಬೆಳೆದರು. ಆದರೂ ಅವರ ಹೆಚ್ಚು contribution ಕನ್ನಡ ಸಂಸ್ಕೃತಿಗೆ ಆಯಿತೂಂತ ನಾನು ತಿಳಿದಿದೀನಿ. ಕನ್ನಡ ಬರಹದಲ್ಲಿಯೂ ಅವರು ಬೇಕಾದಷ್ಟು ಬದಲಾವಣೆ ಮಾಡಿದ್ದರು. ಅದರಿಂದ ಆಗಿನ ಕಾಲಕ್ಕೆ ಯುವಕ ಸಾಹಿತಿಗಳಾದ ಅ.ನ.ಕೃ., ಸಿದ್ಧವನಹಳ್ಳಿ ಕೃಷ್ಣಶರ್ಮ, ಸ್ವಲ್ಪಮಟ್ಟಿಗೆ ತ.ರಾ.ಸು., – ಭಾರಧ್ವಾಜ್‌ರವರು ಡಿಕ್ಷನರಿ ಕಡೆಗೆ ಹೊರಟುಬಿಟ್ಟರು – ಗೋವರ್ಧನರಾಯರು, ಗೋಪಾಲಕೃಷ್ಣರಾಯರು, ಶ್ರೀರಂಗ ಇವರೆಲ್ಲ ಪ್ರಭಾವಿತರಾದರು. ಮ್ಯಾಲಿನ್ನೂ ಎಷ್ಟೋ ಜನ ಇದಾರೆ ನೆನಪಿಲ್ಲ. ಕೈಲಾಸಂ ಸಹ ನನ್ನ ತಂದೆಯಿಂದ ಪ್ರಭಾವಿತರಾದರು. ಶೈಲಿಯಲ್ಲಲ್ಲ. ಆದರೆ ಎಷ್ಟೋ ಮಟ್ಟಿಗೆ ಅವರ ವಿಚಾರಧಾರೆ ಅಭಿಪ್ರಾಯಗಳು ಕೈಲಾಸಂರಲ್ಲೂ ಮೂಡಿದೆ. ನಾಟಕ ರಂಗದಲ್ಲೂ ತಂದೆಯವರ contribution ಇತ್ತು, ಇಡೀ ದಕ್ಷಿಣ ಹಿಂದುಸ್ಥಾನದಲ್ಲಿ ಅವರೇ ಮೊದಲು ಹಿಂದಿಯಲ್ಲಿ ಒಂದು ನಾಟಕ ಬರೆದರು. ಅದನ್ನ ನಾನು ಓದಿದ್ದೀನಿ. ನನಗೆ ಅಷ್ಟಾಗಿ ಹಿಡಿಸೋದಿಲ್ಲ ನಾಟಕ ‘ದೀನಬಂಧು ಕಬೀರ್’ ಅಂತ. ಅಂದರೆ ಅದು ಗಾಂಧೀಜಿಯವರಿಗೆ ಬಹಳ ಹಿಡಿಸಿತ್ತಂತೆ. ನನ್ನ ಮಟ್ಟಿಗೆ ಕೇಳೋದಾದರೆ ಪಂಡಿತ ತಾರಾನಾಥರು ಏನು ಇವತ್ತೂಂತ ಅಂದರೆ, ಎಂಥಾ ದೊಡ್ಡ ವ್ಯಕ್ತಿ ಕರ್ನಾಟಕದಲ್ಲಿ ನಮ್ಮೆದುರು ಸುಮ್ಮನೆ ಹಾಗೆ ಬದುಕಿ ಹೋಗಿಬಿಟ್ಟರು ಅನ್ನಿಸ್ತದೆ. ಅವರ ಎಷ್ಟೋ ವಿಚಾರಧಾರೆಗಳು ಇನ್ನೂ ಇವೆ. ಅವರ ಡೈರಿ, ಪತ್ರಗಳು, ಧರ್ಮಸಂಭವ ಪುಸ್ತಕಗಳಲ್ಲಿ ಸಿಗ್ತವೆ. ಅದನ್ನು ನಾವು ಸಾಕಷ್ಟು ಉಪಯೋಗಿಸಿಲ್ಲ. ಏಕೆಂದರೆ ನಾವಿನ್ನೂ ಆ ಮಟ್ಟಕ್ಕೆ ಬೆಳೆದೇ ಇಲ್ಲ. ನಾನು ಮೊದಲೇ ಹೇಳಿದ ಹಾಗೆ ಅವರು ಬಹಳ radical ಇದ್ದರು. ಒಟ್ಟಿನಲ್ಲಿ ಅವರಿಗೆ ಸಮಾಜದ ಜೊತೆ ಏನು ಸಂಬಂಧ ಅಂದರೆ ಒಂದೇ ಒಂದು ಸಂಬಂಧ ಅದು ಸಹಾನುಭೂತಿಯ ಪ್ರೇಮದ ಸಂಬಂಧ. ಹೀಗೆಯೇ ಅವರು ಒಂದು school ಸ್ಥಾಪಿಸಿದ್ರು ರಾಯಚೂರಿನಲ್ಲಿ, ‘ಮದ್ರಸಾ ಏ ಹಮದರ್ದ್‌’ ಅಂತ ಅದಕ್ಕೆ ಹೆಸರಿಟ್ಟಿದ್ದು. ಹಮ್‌ದರ್ದ್‌ ಅಂತಂದ್ರೆ sympathy ಮುಂದೆ ಇನ್ನೂ ಒಂದು institution ತುಂಗಭದ್ರಾದಲ್ಲಿ ಸ್ಥಾಪಿಸಿದ್ರು. ‘ಪ್ರೇಮಾಯತನ’ ಅಂತ ಅದಕ್ಕೆ ಹೆಸರಿಟ್ಟಿದ್ರು. ಆಗಿನ ಕಾಲದಲ್ಲಿ ಅವರು ದೊಡ್ಡ ಜರ್ನಲಿಸ್ಟ್ ಆಗಿದ್ರು. ಅವರೊಂದು ‘ಪ್ರೇಮ’ ಅನ್ನೋ ಪತ್ರಿಕೆ ಹೊರಡಿಸುತ್ತಿದ್ದು. ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಅದರಲ್ಲಿ ಸಾಹಿತ್ಯ – ಚಿತ್ರಕಲೆ – ದರ್ಶನ ಇವೆಲ್ಲದರ ಬಗ್ಗೆ ಉತ್ತಮ ಬರಹಗಳು ಬರ್ತಿದ್ವು. ನನ್ನ ಕೇಳಿದರೆ ಅಂಥ ಒಂದು ಜರ್ನಲ್ ಈಗಿನವರೆಗೆ ಕರ್ನಾಟಕದಲ್ಲಿ ಬಂದಿಲ್ಲ. ಅದು ನಡೀತಿರಬೇಕಾದರೆ ಎಷ್ಟೋ ಮಂದಿ ಅದರಿಂದ ಪ್ರಭಾವಿತರಾದರು – ಆಗಿನ ಹಿರಿಯರಲ್ಲಿ ಆಗ ಪ್ರಭಾವಿತರಾದವರು ಕೆಲವರು ಇದ್ದಾರೆ. ಅವರ ಜೀವನದಲ್ಲಿ ಮುಖ್ಯವಾದ ಅಂಶ ‘ಸಹಾನುಭೂತಿ’.

* * *