ಈಚೆಗೆ ಪ್ರಸಿದ್ಧವಾಗಿರುವ ಲೇಖಕರ ನಡುವೆ ಶ್ರೀಕೃಷ್ಣ ಅಲನಹಳ್ಳಿ ಭಾಷೆಯ ಉಪಯೋಗದಲ್ಲಿ ಖುಷಿಯನ್ನು ಪಡೆಯಬಲ್ಲ, ಕೊಡಬಲ್ಲ ಶಕ್ತಿಯುಳ್ಳವರು. ಯೌವನಕ್ಕೆ ಸಹಜವಾದ ಉತ್ಕರ್ಷ, ಸೊಕ್ಕುಗಳಿಂದ ಆಕರ್ಷಕವಾಗಿರುವ ಇವರ ಕಾವ್ಯದ ಸಮೃದ್ಧಿ ಯಾವ ಒತ್ತಡ ಹತೋಟಿಗಳಿಗೆ ಒಳಪಟ್ಟು ಅರ್ಥರ್ಪೂಣವಾದೀತು ಎನ್ನುವುದು ಕವಿಯ ಬೆಳವಣಿಗೆಯ ದೃಷ್ಟಿಯಿಂದ ಬಹುಮುಖ್ಯವಾದ ಪ್ರಶ್ನೆ. ಅನಾಯಾಸವಾದ ಉತ್ಕರ್ಷದಿಂದಲೇ ತಣಿಯುವಂಥವರ ಅಪೇಕ್ಷೆಯನ್ನು ಇವರ ಕಾವ್ಯ ಪೂರೈಸಬಲ್ಲದಾದ್ದರಿಂದ ಬಹುಬೇಗ ಪ್ರಸಿದ್ಧರಾದ ಇವರು ತಮ್ಮ ಮೋಹಕ ಶಕ್ತಿಯಲ್ಲೇ ತೃಪ್ತರಾಗಿ ನಿಂತುಬಿಡುತ್ತಾರೋ ಅಥವಾ ನೈತಿಕ ಒತ್ತಡದಲ್ಲಿ ತಮಗೆ ಸಮೃದ್ಧವಾಗಿರುವ ಕಾವ್ಯ ಕೌಶಲ್ಯವನ್ನು ದುಡಿಸಿಕೊಳ್ಳುತ್ತಾರೋ – ಇದು ವಿಮರ್ಶೆ ಅತ್ಯಗತ್ಯವಾಗಿ ಕೇಳಲೇಬೇಕಾದ ಪ್ರಶ್ನೆ. ವಿವೇಕವಿಲ್ಲದ ಯೌವನದಷ್ಟೇ ಯೌವನವಿಲ್ಲದ ವಿವೇಕವೂ ಅರ್ಥಹೀನವಾಗುತ್ತದೆ. ಸಾಹಿತ್ಯ ಜೀವಂತವಾಗಿರಲು ಅದರಲ್ಲಿ ಅನಾಯಾಸವಾದ ಲವಲವಿಕೆಯ ಯೌವನವಿರಬೇಕು; ಆದರೆ ಅದು ಅರ್ಥಪೂರ್ಣ ಶಿಲ್ಪವಾಗಲು ತಾತ್ತ್ವಿಕ ಒತ್ತಡದಲ್ಲಿ ನಡೆಸಿದ ಶೋಧನೆಯಾಗಿರಬೇಕು. ಆದರೆ ನಮ್ಮ ನಡುವಿನ ಹೆಚ್ಚು ಲೇಖಕರು ಎಂಥವರೆಂದರೆ: ಕಾವ್ಯಶಕ್ತಿಯಿರುವಾಗ ವೈಚಾರಿಕವಾಗಿ ಅಪ್ರಬುದ್ಧರಾದವರು, ವೈಚಾರಿಕತೆ ಬೆಳೆದಾಗ ಕಾವ್ಯ ಶಕ್ತಿ ಲವಲವಿಕೆಯನ್ನು ಕಳೆದುಕೊಂಡವರು. ಆದ್ದರಿಂದ ಶ್ರೀಕೃಷ್ಣ, ಕಂಬಾರರಂತಹ ಪ್ರತಿಭಾನ್ವಿತ ಬರಹಗಾರರ ವಿಷಯದಲ್ಲಿ ನಾವು  ‘ಯಾವ ಕಾಣ್ಕೆಯ ಒತ್ತಡಕ್ಕೆ ಒಳಗಾಗಿ ಈ ಪ್ರತಿಭೆ ರೂಪಗೊಳ್ಳುತ್ತಿದೆ, ಯಾವ ದಿಕ್ಕಿನಲ್ಲಿ ಈ ಕೌಶಲ ತುಯ್ಯುತ್ತಿದೆ’ ಎಂಬುದನ್ನು ಕೇಳಲೇಬೇಕಾಗುತ್ತದೆ.

ಇದನ್ನು ಗಮನದಲ್ಲಿಟ್ಟುಕೊಂಡು ತಪ್ತ ಸಂಕಲನದ ಎಂಟು ಕಥೆಗಳನ್ನು ಓದುತ್ತಿದ್ದಂತೆ ನನ್ನ ಪ್ರಿಯ ಸ್ನೇಹಿತರಾದ ಶ್ರೀಕೃಷ್ಣರ ಶಕ್ತಿಯ ಬಗ್ಗೆ ಮೊದಲಿಗಿಂತ ಹೆಚ್ಚು ಅಭಿಮಾನ, ಗೌರವಗಳು ಮೂಡಿವೆ. ಈ ಕಥೆಗಳನ್ನು ಓದುತ್ತಿರುವಾಗ ನನಗನ್ನಿಸಿದ ವಿಚಾರಗಳನ್ನು ಓದುಗರ ಎದುರು ಇಡುವುದರ ಮೂಲಕ, ಈ ಕಥೆಗಳು ಯಾಕೆ ನಮ್ಮ ತೀವ್ರವಾದ ಆಸಕ್ತಿಗೆ ಅರ್ಹವಾದವು ಎಂಬುದು ವೇದ್ಯವಾದೀತೆಂದು ತಾನು ಆಶಿಸುತ್ತೇನೆ. ಈ ಸಂಗ್ರಹಕ್ಕೆ ಹೆಸರು ಕೊಟ್ಟ ‘‘ತಪ್ತ’’ ಕಥೆ ಶ್ರೀಕೃಷ್ಣರಿಗೆ ಅತ್ಯಂತ ಆಪ್ತವಾದ, ಅವರ ಕಾವ್ಯ ಶಕ್ತಿಗೆ ನಿಜವಾದ ಸವಾಲಾಗಬಲ್ಲ ಥೀಮನ್ನು ಪಡೆದಿದೆ. ಈ ಕಥೆಯ ನಾಯಕ ಹಳ್ಳಿ ಬಿಟ್ಟು ಪೇಟೆ ಸೇರಿದವ; ಆದರೆ ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ಪರಕೀಯ ಪ್ರಜ್ಞೆಯುಳ್ಳವ. ಕನ್ನಡ ಸಾಹಿತ್ಯದಲ್ಲಿ ಈಗಾಗಲೇ ಸಾಕಷ್ಟು ಪರಿಚಿತವಾಗಿರುವ ಈ ಪರಕೀಯ ಜೀವನ ವಿವರಗಳಿಂದ ಶ್ರೀಕೃಷ್ಣರು ಎಷ್ಟೊಂದು ದಟ್ಟವಾದ ಸ್ವಂತ ಪರೀಕ್ಷೆಯ ಪ್ರಜ್ಞೆಯ ಅರಿವನ್ನು ಹಿಗ್ಗಿಸುತ್ತಾರೆ ಎಂಬುದು ಕಥೆಯಲ್ಲಿ ಬಹಳ ಮುಖ್ಯಪ್ರಶ್ನೆಯಾಗುತ್ತದೆ. ಒಂದು ಮಟ್ಟದಲ್ಲಿ ಕಥೆ ನಿಜವಾದ್ದು ಎಂದು ನಮಗೆ ಅನ್ನಿಸಿದರೂ ಈ ನಿಜ ನಮ್ಮನ್ನು ಕಾಡುವಷ್ಟು ನಿಷ್ಠುರವಾದ ಒಳನೋಟದಿಂದ ಬಂದದ್ದಲ್ಲ ಎನ್ನಿಸುತ್ತದೆ. ಪೇಟೆಗೆ ಬಂದು ಕಾಲೇಜಿನಲ್ಲಿ ಓದುವಾಗ ಹೊಸ ಕಾಲದ ಹುಡುಗಿಯೊಬ್ಬಳ ಜೊತೆ ಪ್ರಣಯ, ಅಂದರೆ ಹಿರಿಯರ  ಒತ್ತಾಯಕ್ಕೆ ಕಟ್ಟುಬಿದ್ದು ಸಾಂಪ್ರದಾಯಿಕವಾಗಿ ಮದುವೆಯಾಗಬೇಕಾದ ಅನಿವಾರ್ಯ, ಈ ಮಧ್ಯೆ ಮನಸ್ಸಿನ ತಳಮಳ – ಇಂದು ನಾವೆಲ್ಲ ಸುತ್ತಲೂ ಕಾಣುವ ಕಥೆ. ಆದರೆ ಇಂತಹ ಸಂದರ್ಭವನ್ನು ಹಳೆ ಹೊಸತರ ನಡುವೆ ನಡೆಯುತ್ತಿರುವ ಘರ್ಷಣೆಗೆ ಸಾಂಕೇತಿಕವಾಗಿ ಉಪಯೋಗಿಸಿಕೊಳ್ಳುವುದರಲ್ಲಿ ಶ್ರೀಕೃಷ್ಣರು ಸೋತಿದ್ದಾರೆ ಎಂದು ನನಗೆ ಅನ್ನಿಸುತ್ತದೆ. ಹಳ್ಳಿ ಹುಡುಗಿ ಗೌರಿಯಷ್ಟು ಪೇಟೆ ಹುಡುಗಿ ಪ್ರಭಾ ಕಥೆಯಲ್ಲಿ ನಿಜವಾಗದೆ ಹೋಗುವುದರಿಂದಾಗಿ ಕಥಾ ನಾಯಕನ ಇಕ್ಕಟ್ಟಿಗೆ ಸಿಕ್ಕ ತಪ್ತ ಸ್ಥಿತಿಯೂ ಗಾಡವಾಗದೆ ಹೋಗುತ್ತದೆ. ಇವನು ಎಷ್ಟೇ ಚಡಪಡಿಸಲಿ ಪ್ರಭಾಗಿಂತ ಗೌರಿಯೇ ಇವನಿಗೆ ಹೆಚ್ಚು ನಿಜವಾದವಳು ಎಂದು ನಮಗೆ ಅನ್ನಿಸುತ್ತದೆ. ಭೂತದಿಂದ ಪಾರಾಗಲು ಯತ್ನಿಸುವ ನಾಯಕನ ಭಾವುಕತನ ಒಂದನ್ನು ಮಾತ್ರ ಕಥೆಯ ಭಾಷೆ ವ್ಯಕ್ತಪಡಿಸುವುದರಿಂದಲೋ ಏನೋ ಅವನು ತನ್ನನ್ನು ಪರಿಗಣಿಸಿಕೊಂಡಷ್ಟು ಗಂಭೀರವಾಗಿ ನಾವು ಅವನನ್ನು ಕಾಣಬೇಕೆಂದು ನಮಗನ್ನಿಸದೆ ಹೋಗುತ್ತದೆ.

‘ತೊರೆ’ ಕಥೆಯಿಂದ ಹುಟ್ಟಿಬರುವ ವಿಷಾದದ ಧ್ವನಿ ನನಗೆ ಪ್ರಿಯವಾದುದು. ಲಿಬರಲ್ ಮನೋಧರ್ಮವಿರುವಾತ ಮಾರ ಬರೆಯಬಲ್ಲ ಕಥೆ ಇದು. ಲಕ್ಷ್ಮಿ – ಪ್ರಭುರವರ ನಡುವಿನ ಸಂಬಂಧವನ್ನು ಕುರಿತು ಹತೋಟಿಯಿಂದ ಬರೆಯುವಾತನಿಗೆ ಭಾವಪರವಶವಾಗದ ಎಚ್ಚರ, ಆದರೆ ಮೃದುವಾದ ಅಂತಃಕರಣ ಇರಬೇಕಾಗುತ್ತದೆ. ಕಥೆಗಾರ ಹೇಳಿದ್ದಕ್ಕಿಂತಲೂ ಹೆಚ್ಚಿನ ವ್ಯಾಕುಲವನ್ನು ಪ್ರಕಟಿಸುವ ಈ ಕಥೆ ಪಾತ್ರಗಳ ನಿಸ್ಸಹಾಯಕತೆಯನ್ನು ಉದ್ವೇಗವಿಲ್ಲದಂತೆ ನೈತಿಕ ಪ್ರಜ್ಞೆಯಿದ್ದೂ ಅದರ ಕಾಠಿಣ್ಯವಿಲ್ಲದಂತೆ ಕಾಣುವ ದೃಷ್ಟಿಯದ್ದಾಗಿದೆ. ನಮ್ಮ ಅನಿವಾರ್ಯ ಮಿತಿಗಳಲ್ಲಿರುವ ನಮ್ಮ ದುರಂತವನ್ನು ಸದ್ದಿಲ್ಲದೆ ವ್ಯಕ್ತಪಡಿಸುವ ಇದೇ ಬಗೆಯ ಇನ್ನೊಂದು ಬಗೆಯ ಕಥೆ ‘ಸಂಬಂಧ’. ಇಲ್ಲಿ ಶೂದ್ರ ಕಥಾನಾಯಕನಿಗೂ ಬ್ರಾಹ್ಮಣ ಹುಡುಗಿ ಲಲಿತಳಿಗೂ ಇರುವ ಸಂಬಂಧ ಸೂಕ್ಷ್ಮವಾಗಿ ಚಿತ್ರಿತವಾಗಿದೆ. ಆಕ್ರೋಶವಿಲ್ಲದೆ ಮಿತಿಗಳನ್ನು ಅರಿತುಕೊಳ್ಳುವ ಲಿಬರಲ್ ಮನೋಧರ್ಮ (ಲಂಕೇಶರ ‘ಕುರುಡು ಕಾಂಚಾಣ’, ‘ನಮ್ಮ ನಡುವಿನ ಹುಡುಗ’ ಕತೆಗಳಲ್ಲಿ ವ್ಯಕ್ತವಾಗುವ ಮನೋಧರ್ಮ)  ಒಂದು ಜೀವನದ ದುರಂತವನ್ನು ನಿಷ್ಠುರವಾಗಿ ಸೆಂಟಿಮೆಂಟಲ್‌ಆಗದಂತೆ ಹೇಗೆ ವ್ಯಕ್ತಪಡಿಸಬಹುದೆಂಬುದಕ್ಕೆ ಈ ಕಥೆ ಒಳ್ಳೆಯ ಉದಾಹರಣೆ. ಲಲಿತಳ ದುರಂತ, ಆದರೆ ಇದರಿಂದ ಉದ್ವಿಗ್ನವಾದ ಕಥೆ ಹೇಳುವವನ ನಿಸ್ಸಹಾಯಕತೆ ಒಂದು ವಿಷಾದ ಭಾವನೆಯನ್ನು ನಮ್ಮಲ್ಲಿ ಹುಟ್ಟಿಸುತ್ತವೆ. ಫ್ರೆಂಚ್‌ಕಾದಂಬರಿಗಳಿಂದ ಭಾವನೆ ಕಲ್ಲಾಗುತ್ತದೆಂದು ಬರ್ನ್ಸ್‌ಹೇಳುತ್ತಾನೆ. ಆದರೆ ಕ್ರೂರವಾದ ನಿರ್ದಯ ಸತ್ಯಗಳ ಪ್ರಪಂಚವನ್ನು ಸೃಷ್ಟಿಸಿಯೂ ಅಲ್ಲಿ ಮೃದುವಾದ ಅಂತಃಕರಣವನ್ನು ಅರಳಿಸಬಲ್ಲ ಇಂತಹ ಕಥೆಗಳಲ್ಲಿರುವ ಕಲೆ ನಿತ್ಯ ಜೀವನದ ಸತ್ಯಗಳನ್ನು ಒಳಗೊಳ್ಳಬಲ್ಲ, ವ್ಯಕ್ತಿತ್ವದ ಊನಗಳನ್ನು ಸಹಿಸುವ ಔದಾರ್ಯದ್ದು. ಆದರೆ ಇಡೀ ಸಂಕಲನದ ದೃಷ್ಟಿಯಿಂದ ಈ ಎರಡು ಕಥೆಗಳು ಹೊರಗೆ ನಿಲ್ಲುವದರಿಂದಲೋ ಏನೋ ಈ ಸಂವೇದನೆ ಶ್ರೀಕೃಷ್ಣರಿಗೆ ಕೇಂದ್ರವಾದದ್ದು ಎಂದು ನಮಗೆ ಅನ್ನಿಸುವುದಿಲ್ಲ (ಭಾವುಕತೆಯ ಸೋಂಕಿಲ್ಲದ ಲಂಕೇಶರ ಬರವಣಿಗೆಯ ಕ್ರಮದಲ್ಲಿ ಮಾತ್ರ ಈ ಲಿಬರಲ್ ಸಂವೇದನೆ ಅತ್ಯಂತ ಶಕ್ತಿಪೂರ್ಣವಾಗಿ ವ್ಯಕ್ತವಾಗುತ್ತದೆ.) ಆದ್ದರಿಂದ ಪ್ರಾಯಶಃ ನಮ್ಮ ತೀವ್ರ ಗಮನವನ್ನು ಇವು ಸೆಳೆಯುವುದಿಲ್ಲ. ಶ್ರೀಕೃಷ್ಣರ ಭಾವನಾ ಲೋಕದ ವಿಸ್ತಾರಕ್ಕೆ ಸಾಕ್ಷಿಯಾಗಿ ಮಾತ್ರ ಉಳಿಯುವ ಈ ಕಥೆಗಳ ಹಿಂದಿರುವ ಸಂವೇದನೆ, ಅವರ ಇನ್ನುಳಿದ ಆಸಕ್ತಿಗಳ ಜೊತೆಗೆ ಕೂಡಿಕೊಂಡಾಗ ಯಾವ ರೂಪ ತಾಳುತ್ತದೆಂಬುದು ಕುತೂಹಲದ ವಿಷಯ.

‘ಸೀಮಂತ’ ಮತ್ತು ‘ಹುತ್ತ’ ಅಷ್ಟಾಗಿ ನಾನು ಮೆಚ್ಚಿದ ಕಥೆಗಳು. ‘ಮುಂದೇನು’ ಎನ್ನುವ ಕುತೂಹಲವನ್ನು ಓದುಗರಲ್ಲಿ ಹುಟ್ಟಿಸುವ ಇಂತಹ ಕಥೆಗಳು ಆ ಪ್ರಶ್ನೆಯಲ್ಲಿ ‘ಇದರ ಅರ್ಥವೇನು’ ಎನ್ನುವ ಮೌಲಿಕ ಪ್ರಶ್ನೆಯನ್ನೂ ಹುದುಗಿಸಿಕೊಂಡಿರಬೇಕಾಗುತ್ತದೆ. ‘ತಪ್ತ’ದಂತಹ ಕಥೆಯಲ್ಲಿ ‘ಮುಂದೇನು’ ಎನ್ನುವ ಕಥೆಯ ಕುತೂಲಹದ ಪ್ರಶ್ನೆ ಏಳುವುದೇ ಇಲ್ಲ. ‘ಇದರ ಅರ್ಥವೇನು’ ಎಂದು ಮಾತ್ರ ನಾವು ಕೇಳುತ್ತೇವೆ. ಒಂದು ಚಿತ್ತ ಸ್ಥಿತಿಯನ್ನು ದಟ್ಟವಾಗಿ ಮೂಡಿಸುವುದರಲ್ಲೇ ಸಾರ್ಥಕತೆಯನ್ನು ಕಾಣುವ ಕಥೆಗಳ ಗುಣ ಇದು. ‘ಸೀಮಂತ’ ಮತ್ತು ‘ಹುತ್ತ’ ಕಥೆಗಳು ನಮ್ಮಿಂದ ‘ಮುಂದೇನು’ ಎನ್ನುವ ಕಥೆ ಕೇಳುವ ಕುತೂಹಲವನ್ನು ಹುಟ್ಟಿಸುವಂತೆ ಬರೆಯಲ್ಪಟ್ಟಿವೆ. ಆದರೆ ಈ ಕುತೂಹಲ ತಣಿದಾಗ ಕಥೆಗಳು ನಿರಾಶೆ ಹುಟ್ಟಿಸುತ್ತವೆ. ‘ಮುಂದೇನು’ ಎಂದು ಕೇಳುವಾಗಲೇ ‘ಇದರ ಅರ್ಥವೇನು’ ಎಂಬುದನ್ನು ಧ್ವನಿಸಬಲ್ಲ ಮಾಸ್ತಿಯವರ ಕಲೆಗಾರಿಕೆ, ಕಾಣ್ಕೆಗಳು ಇಲ್ಲದ ಕಥೆಗಳಲ್ಲಿ ಕುತೂಹಲ ಬರಿಯ ಚಪಲವಾಗಿ ಬಿಡುತ್ತದೆ. ‘ಸೀಮಂತ’ ಕಥೆಯಲ್ಲಿ ಪದ್ಮಳ ಪಾಪಪ್ರಜ್ಞೆ ಭಾವುಕವಾಗಿ ಬರೆಯಬೇಕೆಂಬ ಲೇಖಕರ ಚಟಕ್ಕೆ ನೆವವಾಗುತ್ತದೆ; ಆದ್ದರಿಂದ ಕ್ಲೀಶೆಯಾಗುತ್ತದೆ. ತನ್ನ ಹೆಂಡತಿಯಾದ ಪದ್ಮ ಮತ್ತು ಪ್ರೀತಿಯ ವಿದ್ಯಾರ್ಥಿಯಾದ ಶ್ರೀಧರರ ಸಂಬಂಧವೇನೆಂಬುದು ನರಹರಿಗೆ ಗೊತ್ತಿದೆಯೆಂಬುದು ಕಥೆಯ ಕೊನೆಯಲ್ಲಿ ನಿಮಗೆ ತಿಳಿಯುತ್ತದೆ. ಎಲ್ಲ ತಿಳಿದಿದ್ದೂ ಆ ಬಗ್ಗೆ ಸಹಾನುಭೂತಿಯುಳ್ಳ ನರಹರಿಯ ದೃಷ್ಟಿಕೋನದಿಂದಲೇ ಇಡೀ ಕಥೆಯನ್ನು ಬರೆದಿದ್ದರೆ ಪ್ರಾಯಶಃ ಇದೂ ಒಂದು ಲಿಬರಲ್ ಮನೋಧರ್ಮದ ಕಥೆಯಾಗುತ್ತಿತ್ತು; ಕೊನೆಯ ಪಕ್ಷ ಕಥೆಗಾರರ ಕಲ್ಪಕ ಶಕ್ತಿಗೆ ಅರ್ಥಪೂರ್ಣವಾದ ಸವಾಲಾಗುತ್ತಿತ್ತು.

‘ಹುತ್ತ’ ಕಥೆಯಲ್ಲೂ ಕಥೆಯನ್ನು ಸ್ವಾರಸ್ಯವಾಗಿ ಹೇಳುವ ಆಸೆ ಮತ್ತು ವಯಸ್ಸಾದ ಹೆಣ್ಣೊಬ್ಬಳ ಪ್ರೇಮದಿಂದ ತತ್ತರಿಸಿಬಿಡುವ ಯುವಕನೊಬ್ಬನ ಮನಃಸ್ಥಿತಿಯನ್ನು ಅರಿಯುವ ಪ್ರಯತ್ನಗಳಲ್ಲಿ ಶ್ರೀ ಕೃಷ್ಣರ ಶಕ್ತಿ ಕವಲಾಗಿ ಒಡೆದು ಕಥೆ ಅನಾವಶ್ಯಕವಾಗಿ ಬೆಳೆದಿದೆ, ದಟ್ಟವಾಗಿರಬೇಕಾದ ಜಾಗದಲ್ಲಿ ತೆಳ್ಳಗಾಗಿದೆ ಎನ್ನಿಸುತ್ತದೆ.

ನಿರಾಶೆಯಿಂದ ಮತ್ತೆ ಆಸೆಗೆ ಹೊರಳಿಕೊಳ್ಳುವ ‘ಶ್ರಾವಣ’ ಕಥೆ ಹೀಗೆ ಹೊರಳಿಕೊಳ್ಳಬೇಕಾದ ಸಂದರ್ಭದಲ್ಲಿ ಕಾವ್ಯಮಯತೆಯನ್ನು ಆಶ್ರಯಿಸಿ ಸೋಲುತ್ತದೆ. ಶಕುಂತಲೆಗೆ ‘ಭೂತ’ ವಾದದ್ದು ಇನ್ನೂ ಎಳೆಯಳಾದ ಸವಿತಾಳಿಗೆ ‘ವರ್ತಮಾನ’ವಾಗಿರುವುದು ಕಥೆಯಲ್ಲಿ ಅರ್ಥಪೂರ್ಣವಾದ ಸಂಯೋಜನೆಯಾಗಿದೆ. ಆದರೆ ಶಕುಂತಲೆಗೆ ಇದೊಂದು ಕ್ರೈಸಿಸ್ಸಿನ ದಿನವೆಂದು ಕಥೆಗಾರರು ಹೇಳು ಪ್ರಯತ್ನಪಡುವಾಗ ಅವಳ ಯೋಚನೆಯ ಧಾಟಿಯಲ್ಲಿ, ಬರವಣಿಗೆಯಲ್ಲಿ ಕಾಣುವ ಭಾವುಕತೆ (‘ತಪ್ತ’ ಕಥೆಯಿಂದ ಪ್ರಾಯಶಃ ಶ್ರೀಕೃಷ್ಣರಿಗೆ ಅಭ್ಯಾಸವಾದ ಭಾವುಕತೆ) ಅತಿ ಸಲೀಸಾದ್ದು ಎಂದು ನಮಗನ್ನಿಸುವುದರಿಂದ ಕಥೆಯ ಹಿಂದೆ ನಿಜವಾದ ತುರ್ತಿಲ್ಲ ಎನ್ನಿಸುತ್ತದೆ.

ಚಿತ್ತಾಲರ ಉತ್ತಮ ಕಥೆಗಳನ್ನು ನೆನಪಿಗೆ ತರುವ, ಕನ್ನಡದ ಅತ್ಯಂತ ಸಾರ್ಥಕ ಕಥೆಗಳ ಸಾಲಿನಲ್ಲಿ ನಿಲ್ಲಬಲ್ಲ ಈ ಸಂಕಲನದ ಕಥೆಯೆಂದರೆ ‘ಆಗುಂತಕ’. ಒಂದಕ್ಕೊಂದು ಹೊಂದಿಕೊಳ್ಳುತ್ತ ಹೋಗುವ ದಟ್ಟವಾದ ವಿವರಗಳ, ಧ್ವನಿಪೂರ್ಣವಾದ ಘಟನೆಗಳ ಈ ಕಥೆಯ ಶಿಲ್ಪ ಕವನದ್ದು. ಎಲ್ಲೂ ಒಟ್ಟು ಪರಿಣಾಮದ ಏಕಾಗ್ರತೆಗೆ ಭಂಗ ಬಾರದಂತೆ ಇಡೀ ಒಂದು ಹಳ್ಳಿಯ ಜೀವನ ಈ ಕಥೆಯಲ್ಲಿ ಸೂಚ್ಯವಾಗಿ ವ್ಯಕ್ತವಾಗುವ ಕ್ರಮ ಶ್ರೀಕೃಷ್ಣರ ಪ್ರತಿಭೆಗೆ ನಿರ್ದಶನವಾಗಿದೆ. ಒಬ್ಬ ಮುಗ್ಧ ಬಾಲಕನ ಸಾಕ್ಷಿ ಪ್ರಜ್ಞೆಯಲ್ಲಿ ಇಡೀ ಕಥೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಕಿಟ್ಟಿಯ ಮನಸ್ಸಿನಲ್ಲಿ ಹುಟ್ಟುವ ಸಾವಿನ ಮುನ್ನಳಕು ಗಾಢವಾಗಿ ಬೆಳೆದು ಮುಂದೆ ಮೃತ್ಯು ಪ್ರಜ್ಞೆಯಾಗಿ ಕಾಡಬಹುದಾದ ಸೂಚನೆಯೊಂದಿಗೆ ಕಥೆ ಮುಕ್ತಾಯವಾಗುತ್ತದೆ. ಕಥೆಯ ಕ್ಷುಬ್ಧ ವಾತಾವರಣದ ದಟ್ಟತೆಗೆ ನಿಸರ್ಗ ಎಷ್ಟು ಕಾರಣವೊ ಅಷ್ಟೇ ಮನುಷ್ಯ ಲೋಕದ ವ್ಯಗ್ರತೆಗಳೂ ಕಾರಣಗಳಾಗಿವೆ. ಕಟ್ಟಿ ಪ್ರೀತಿಸುವ ತಾಯಿ ಅಜ್ಜಿಯರು ಪರಸ್ಪರ ಬಡಿದಾಡುತ್ತಾರೆ; ತಂದೆ ತಾಯಿಯನ್ನು ಹೊಡೆಯುತ್ತಾನೆ. ತಾಯಿ ದುಗುಡದಲ್ಲಿ ಸಾವಿನ ಬಗ್ಗೆ ಮಾತಾಡುತ್ತಾಳೆ; ತುಂಬಿದ ಅನುಭವದ ಅಜ್ಜ ವಿಷಾದದಿಂದ ಸಾವಿನ ಅನಿವಾರ್ಯತೆಯನ್ನು ತಾಯಿ ಕುರಿತು ಹೇಳುತ್ತಾನೆ. ಕಿಟ್ಟಿಗೆ ಪ್ರಿಯರಾದ ಮಾವಯ್ಯ ಸಾಯುತ್ತ ಮಲಗಿದ್ದರೆ; ಅವರು ಒಳ್ಳೆಯವರಿದ್ದರೂ ಅವರ ಹೆಂಡತಿ ‘ಬೇವಿನ ಹಟ್ಟಿ ಕಾಳವ್ವ’ ನಂಥವರು; ಅವರು ಮುದ್ದಿನಿಂದ ಸಾಕಿದ ಒಬ್ಬಳೇ ಮಗಳು ದಾರ ತಪ್ಪಿದವಳು, ತಂದೆ ಸಾಯುತ್ತಿದ್ದಾಗಲೂ ಬಂದು ಅವರ ಮುಖ ನೋಡುವಳು. ಪ್ರೇಮ, ಕ್ರೌರ್ಯ, ಹಿಂಸೆ, ಭಯ, ರೋಗ, ಯಾತನೆ – ಹೀಗೆ ಎಲ್ಲವೂ ಈ ಕಥೆಯ ಲೋಕದ ಸಂಕೀರ್ಣ ಅಂಶಗಳು; ಮಗುವಿನ ಮುಗ್ಧ ಮನಸ್ಸಿನ ಮೇಲೆ ಮೌನವಾಗಿ ಪರಿಣಾಮ ಮಾಡುತ್ತಿರುವ ಸಂಗತಿಗಳು. ಕಿಟ್ಟಿ ಎಲ್ಲದಕ್ಕೂ ಸಾಕ್ಷಿಯಾಗಿ ಮಗುವಿಗೆ ಸಹಜವಾದ ನಿರ್ಲಿಪ್ತತೆ ಆಸಕ್ತಿಗಳಿಂದ ಇವುಗಳನ್ನೆಲ್ಲ ನೋಡುತ್ತಾನೆ. ಈ ಕಥೆಯ ತುಂಬ ದಟ್ಟವಾದ ವಿವರಗಳು ಬರುತ್ತವೆ. ಮೃತ್ಯು ಪ್ರಜ್ಞೆಯನ್ನು ಗಾಢವಾಗಿಸುತ್ತ ಹೋಗುವ ವಿವರಗಳ ಜೊತೆಗೇ ಕಿಟ್ಟಿ ಸ್ಕೂಲಿನಲ್ಲಿ ಕೂತು ಕಾಲುಗಳಿಗೆ ಅಂಟಿಕೊಂಡಿದ್ದ ಕೆಸರು ಚಕ್ಕೆಗಳನ್ನು ಬಿಡಿಸುವುದರಲ್ಲೆ ಮಗ್ನನಾದ ವಿವರಕ್ಕೂ ಈ ಕಥೆಯಲ್ಲಿ ಎಡೆಯಿದೆ. ಸಾಯುತ್ತ ಮಲಗಿರುವ ಮಾವಯ್ಯನ ಪಾದಗಳು ಮೀನಿನ ಹೊಟ್ಟೆಯಂತೆ ಬಿಳುಚಿಕೊಂಡಿರುವ ವಿವರ, ಸಂಜೆಗತ್ತಲಿನಲ್ಲಿ ಗುಳವನ್ನು ಕೆಂಪಗೆ ಕಾಯಿಸುತ್ತಿರುವ ಆಚಾರಿಯ ಕುಲುಮೆ, ಗೂಢವಾದ ರೀತಿಯಲ್ಲಿ ಸಾವಿನ ಅಳುಕನ್ನು ಬೆಳೆಸುವ ಮಳೆ; ಬೊಬ್ಬರಸಿ ಮಾಡುವ ಯಮನ ವರ್ಣನೆ, ಕಜ್ಜಿ ಕೆರೆಯುತ್ತ ಬೆಂಕಿಯ ಎದುರು ಕೂತ ಈ ಅನಾಥಪ್ರಜ್ಞೆಯ ಬೇವರ್ಸಿಯ ಚಿತ್ರ – ಈ ಎಲವೂ ಕೂಡಿ ಸಾಂಕೇತಿಕವೂ ಸ್ನಗ್ಧವೂ ಆದ ಒಂದು ಪ್ರಪಂಚವನ್ನು ಸೃಷ್ಟಿಸುತ್ತವೆ. ಗುಣವಾಚಕಗಳನ್ನು ಪೇರಿಸಿ ಬೆಳದಿಂಗಗಳನ್ನು ವರ್ಣಿಸುವುದರ ಬದಲು ಅದರ ಪ್ರತಿಫಲನವನ್ನು ಒಂದು ಒಡೆದ ಗಾಜಿನ ಚೂರಿನ ಮೇಲೆ ತೋರಿಸುವುದೇ ಹೆಚ್ಚು ಪರಿಣಾಮಕಾರಿಯಾದ ರೀತಿಯೆಂದು ಚೆಕೋವ್ ಹೇಳಿದ ಮಾತುಗಳು ಇಂಥಹ ಕಥೆಗಳಲ್ಲಿ ಬರುವ ಸಾರ್ಥಕ ವಿವರಗಳನ್ನು ನೋಡಿದಾಗ ನೆನಪಾಗುತ್ತದೆ. ಕಥೆಯ ಉದ್ದಕ್ಕೂ ಬೆಳೆಯುತ್ತ ಬರುವ ಸಾವಿನ ಮುನ್ಸೂಚನೆಗಳು ಕಿಟ್ಟಿಯ ಮನಸ್ಸಿನಲ್ಲಿ ಒಂದು ಪರ್ಯಾಪ್ತ ಸ್ಥಿತಿಯನ್ನು ಮುಟ್ಟಿದಾಗ ಮಳೆಯಲ್ಲಿ ಅಜ್ಜನ ಹೆಣವನ್ನು ಒಳಗೆ ತರುತ್ತಾರೆ. ಆಗ ಮನೆಯಲ್ಲೆಲ್ಲ ಏಳುವ ರೋದನ ಅತ್ಯಂತ ನಿರ್ಲಿಪ್ತವಾಗಿ ಪರಿಣಾಮಕಾರಿಯಾಗಿ ವರ್ಣಿತವಾಗಿದೆ. ಕಥೆಯ ಕೊನೆಯಲ್ಲಿ ಕಿಟ್ಟಿ ಪ್ರಜ್ಞೆ ತಪ್ಪಿ ಬೀಳುವುದು ಮಾತ್ರ ಅನಾವಶ್ಯಕವೆನಿಸುತ್ತದೆ; ಆದರೂ ಈ ಕಥೆ ಕನ್ನಡದ ಉತ್ತಮ ಕಥೆಗಳ ಜೊತೆ ನಿಲ್ಲಬಲ್ಲ ಸಾರ್ಥಕ ಕೃತಿ ಎಂದೆನಿಸುತ್ತದೆ.

‘ನೆಲಗುಮ್ಮ’ ‘ಆಗುಂತಕ’ಕ್ಕಿಂತ ಹೆಚ್ಚು ಮಹತ್ವಾಕಾಂಕ್ಷೆಯುಳ್ಳ ಕೃತಿ. ಆದರೆ ‘ಆಗುಂತಕ’ದಷ್ಟು ಈ ಕಥೆ ಯಶಸ್ವಿಯಾಗಿಲ್ಲವೆನ್ನಿಸುತ್ತದೆ. ಈ ಕಥೆಯ ನಾಯಕ ಪ್ರಬುದ್ಧನಾದವನು; ಇವನು ಬೆಳೆದು ದೊಡ್ಡವನಾದ ಕಿಟ್ಟಿ ಎಂಬುದಕ್ಕೂ ಕಥೆಯಲ್ಲಿ ಸಾಕಷ್ಟು ಆಧಾರಗಳಿವೆ. ಈ ಕಥೆಯ ವಸ್ತು ‘ತಪ್ತ’ ಕಥೆಯಲ್ಲಿ ಬರುವ ಇಬ್ಬಂದಿತನದ್ದೆ. ಆದರೆ ‘ತಪ್ತ’ ಕಥೆಗಿಂತ ಸೂಕ್ಷ್ಮ ಬರವಣಿಗೆ ಇಲ್ಲಿದೆ. ‘ಆಗುಂತಕ’ದಂತೆಯೇ ಇಲ್ಲಿಯ ಕಥೆಯನ್ನು ಕವನವಾಗಿಸಲು ಅಂದರೆ ಘಟನೆಗಳನ್ನು ಒಂದು ಸಾವಯವ ಶಿಲ್ಪದಲ್ಲಿ ನಿಯೋಜಿಸಿ ಪ್ರಬಂಧ ಧ್ವನಿ ತರಲು – ಮಾಡುವ ಪ್ರಯತ್ನವನ್ನು ಕಾಣುತ್ತೇವೆ. ಆದರೆ ಕಥಾನಾಯಕನ ಉದ್ವಿಗ್ನತೆಯ ನೇರವಾದ ವರ್ಣನೆಗಳು ಬರಿ ಮಾತುಗಳಾಗಿ ಉಳಿದುಬಿಡುತ್ತವೆ. ಅವನು ತನ್ನ ಅಜ್ಜಿಯ ಬಗ್ಗೆ ನಪುಂಸಕ ಲಿಂಗದಲ್ಲಿ ಹೇಳಿಕೊಳ್ಳುವ ಭಾಗಗಳಲ್ಲಿ ತನ್ನ ಪ್ರೀತಿ ದ್ವೇಷಗಳ ದ್ವಂದ್ವವನ್ನು ಸಮರ್ಥವಾಗಿ ವ್ಯಕ್ತಪಡಿಸುವಷ್ಟು ಅವನ ವೈಚಾರಿಕತೆಯಲ್ಲಿ ವ್ಯಕ್ತಪಡಿಸಲಾರದೆ ಹೋಗುತ್ತಾನೆ. ಕಥಾನಾಯಕ ಪ್ರಾರಂಭದಲ್ಲಿ ಅಜ್ಜಿಯ ಸಾವಿನ ಸುದ್ದಿ ತಂದವನ ಬಾಯಿಬಡುಕತನದಿಂದ ರೋಸಿ ನಡೆಯುವುದು, ಭಾಗ್ಯಕ್ಕನ ಮನೆಯಲ್ಲಿ ಕೂತು ಬಾಣಂತಿಯಾದ ಅವಳ ಮಗಳ ಚುಂಗುವಾಸನೆಗೆ ಹೇಸುವುದು, ಇತ್ಯಾದಿ ವರ್ಣನೆಗಳು – ‘ತಪ್ತ’ ಕಥೆಗಿಂತ ಹೆಚ್ಚು ಧ್ವನಿಪೂರ್ಣವಾಗಿ ‘ಭೂತ’ದಿಂದ ಬಿಡಿಸಿಕೊಳ್ಳುವ ನಾಯಕನ ಹೋರಾಟವನ್ನು ಚಿತ್ರಿಸುತ್ತದೆ. ಕೊನೆಯಲ್ಲಿ ಕಿಟ್ಟಿಯ ಲೋಕದ ನೆಲಗುಮ್ಮ ಆ ಕಥಾನಾಯಕನ ಪ್ರಬುದ್ಧ ಮನಸ್ಸನ್ನೂ ಅಕ್ರಮಿಸುವುದು ಅರ್ಥಪೂರ್ಣವಾಗಿದೆ. ‘ತಪ್ತ’ದ ನಾಯಕನಂತೆ ಪರಕೀಯ ಪ್ರಜ್ಞೆಯುಳ್ಳ ಇವನಿಗೂ ಗಾಢವಾದದ್ದು ಬಾಲ್ಯದ ದಟ್ಟ ನೆನಪುಗಳೆ. ಆದರೆ ಪ್ರಬುದ್ಧನಾದವನ ವೈಚಾರಿಕತೆ ಬಾಲ್ಯ ನೆನಪುಗಳಷ್ಟೆ ಗಟ್ಟಿಯಾಗಿ ಇವರ ಕಥೆಗಳಲ್ಲಿ ಮೂಡುವುದಿಲ್ಲ.ತನ್ನ ವೈಚಾರಿಕ ಪ್ರಬುದ್ಧಪ್ರಜ್ಞೆ ಇನ್ನೂ ಸಾಕಷ್ಟು ಆಳವಾದದ್ದಲ್ಲವೇನೋ ಎಂಬುದನ್ನು ಕೂಡ ಈ ಮೂಲಕ ಧ್ವನಿಸುವುದು ಶ್ರೀಕೃಷ್ಣರ ಉದ್ದೇಶವಿರಬಹುದು.

‘ಆಗುಂತಕ’ ಕಥೆಯ ಮುಗ್ಧ ದೃಷ್ಟಿಕೋನ, ‘ತಪ್ತ’ ಮತ್ತು ‘ನೆಲಗುಮ್ಮ’ಗಳ ಪ್ರಬುದ್ಧ ದೃಷ್ಟಿಕೋನಕ್ಕಿಂತ ಯಾಕೆ ಹೆಚ್ಚು ಯಶಸ್ವಿಯಾಗುತ್ತದೆ ಎಂಬುದು ಚಿಂತಿಸಬೇಕಾದ ವಿಷಯ. ಪ್ರಬುದ್ಧ ಪ್ರಜ್ಞೆಯನ್ನು ದೃಷ್ಟಿಕೋನವಾಗಿ ಆರಿಸಿಕೊಂಡ ಕೂಡಲೇ ಅನುಭವದ ಜೊತೆ ಅದನ್ನು ಬೆಲೆಕಟ್ಟುವ ವೈಚಾರಿಕತೆಯ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಶ್ರೀಕೃಷ್ಣರ ವೈಚಾರಿಕತೆ ಅವರ ಅನುಭವದ ಸಂಕೀರ್ಣತೆಯನ್ನು ಒಳಗಿನಿಂದ ನೋಡುವಷ್ಟು ಇನ್ನೂ ಹರಿತವಾಗಿಲ್ಲ ಎಂದು ಹೇಳಬಹುದೆ? ಇದು ಈ ಕಥೆಗಳನ್ನು ಓದುತ್ತಿದ್ದಂತೆ ನಮ್ಮನ್ನು ಕಾಡುವ ಪ್ರಶ್ನೆ. ಇಂತಹ ಮಹತ್ವದ ಪ್ರಶ್ನೆಯನ್ನು ಎತ್ತಬಲ್ಲ ಶ್ರೀಕೃಷ್ಣ ಆಲನಹಳ್ಳಿಯವರ ಪ್ರತಿಭೆಗೆ ನಾವು ಕೃತಜ್ಞರು. ನೆಲದ ದಟ್ಟ ವಾಸನೆಯಿರುವ ತನ್ನ ಬಾಲ್ಯದ ಸಂವೇದನೆಯನ್ನು, ತನ್ನ ಬಾಳನ್ನು ವಿವಿಧ ದಿಕ್ಕುಗಳಲ್ಲಿ ಹೊರಳಿಸುತ್ತಿರುವ ಪ್ರಬುದ್ಧ ಜೀವನದ ವೈಚಾರಿಕತೆಯನ್ನು ಒಟ್ಟಿಗೇ ಏಕಕಾಲದಲ್ಲಿ ದುಡಿಸಿಕೊಂಡ ತನ್ನ ನೈಜವಾದ ವ್ಯಕ್ತಿತ್ವಕ್ಕೆ ಅರ್ಥಪೂರ್ಣವಾದ ರೂಪವನ್ನು ಕೊಡುವುದು ಶ್ರೀಕೃಷ್ಣರ ಕಲೆಗಾರಿಕೆಯ ಮುಖ್ಯ ಹೋರಾಟವಾಗಿದೆ ಎನ್ನುವುದು ಈ ಕಥೆಗಳಿಂದ ಸ್ಪಷ್ಟವಾಗುತ್ತದೆ.

ಶ್ರೀಕೃಷ್ಣ ಆಲನಹಳ್ಳಿ ಅವರ ತಪ್ತ ಪುಸ್ತಕಕ್ಕೆ ಬರೆದ ಮುನ್ನುಡಿ, ೧೯೭೦