ತಮ್ಮ ನಲವತ್ತನಾಲ್ಕನೆಯ ವಯಸ್ಸಿನಲ್ಲಿಯೇ ಸ್ನೇಹಾ ಸತ್ತರೆಂದು ನಂಬುವುದು ಕಷ್ಟ. ತನ್ನನ್ನು ಮೆಚ್ಚದವರಿಗೆ ಸ್ನೇಹಾ ಸದಾ ಹೊಳೆಯುವ ನೆನಪು. ಸ್ನೇಹ ಜೀವಿಯಾಗಿದ್ದ ಆಕೆಗೆ ಇದ್ದ ಬಳಗ ಅಪಾರ! ಈ ಬಳಗದಲ್ಲಿ ಸಮಾಜವಾದಿ ನಾಯಕರು, ಬುದ್ಧಿಜೀವಿಗಳು; ಭಾರತ ಹಾಗೂ ಹೊರದೇಶದ ರಂಗ ಕಲಾವಿದರು, ಬರಹಗಾರರು;ಜೊತೆಗೇ ಬದುಕಿನಲ್ಲಿ ಒಂದು ಅರ್ಥ ಹುಡುಕುತ್ತಿರುವ ಯುವಜನ – ಇದ್ದಾರೆ. ಸಾಮಾನ್ಯವಾಗಿ ಸ್ನೇಹಾರ ಮನೆಯ ಸರಳ ಸುಂದರವಾದ ಡ್ರಾಯಿಂಗ್ ರೂಮಿನಲ್ಲಿ ಇವರನ್ನೆಲ್ಲ ಕಾಣಬಹುದಿತ್ತು. ಸ್ವಭಾವತಃ ಮೃದು ಸ್ವಭಾವದವರಾದ ಸ್ನೇಹಾ ಅನ್ಯಾಯ, ಕೊಳಕನ್ನು ಕಂಡಾಗ ಕೆರಳುತ್ತಿದ್ದರು. ಸತ್ಯ, ನ್ಯಾಯಕ್ಕಾಗಿ ಶ್ರಮಿಸುತ್ತಿದ್ದರು. ಇಲ್ಲವಾದಲ್ಲಿ ಯಾವ ಆಪಾದನೆಯೂ ಇಲ್ಲದೆ ಸ್ನೇಹಾ ಜೈಲಿಗೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲವೇನೋ? ಜೈಲಿನಲ್ಲಿ ಎಂಟು ತಿಂಗಳ ಕಾಲ ಏಕಾಂಗಿಯಾಗಿ ಆಕೆ ಎಷ್ಟು ನೋವು ಉಂಡಿರಬೇಕು? ಮೊದಲೇ ಸೂಕ್ಷ್ಮವಾಗಿದ್ದ ಆಕೆಯ ಆರೋಗ್ಯ ಎಷ್ಟು ಹಾಳಾಗಿರಬೇಕು? – ಇದನ್ನು ಚೆನ್ನಾಗಿ ಬಲ್ಲ ನಮಗೆಲ್ಲಾ, ಸ್ನೇಹಾ ನಮ್ಮ ಕಾಲದ ಹುತಾತ್ಮೆ. ರಾಜಕೀಯ ರಂಗದ ಕ್ರೂರ ಹಾಗೂ ದುಷ್ಟಶಕ್ತಿಯ ಎದುರು ಬಾಯ್ಮುಚ್ಚಿಕೊಂಡಿದ್ದ ನಮ್ಮಗಳ ಪಾಪವನ್ನೂ ತಾವು ಬದುಕಿದ ಮತ್ತು ಸತ್ತ ಕ್ರಮದಿಂದ ಸ್ನೇಹಾ ತೊಳೆದಿದ್ದಾರೆ.

ಡಿಸೆಂಬರ್ ೨೫, ೧೯೭೬ರಂದು ನಾನು ಭೇಟಿಯಾದಾಗ ಆಕೆ ಪೆರೋಲ್ ಮೇಲೆ ಬಿಡುಗಡೆಯಾಗಿ ಮನೆಯಲ್ಲಿದ್ದರು. ಜೈಲಿನಲ್ಲಿದ್ದಾಗ, ಮೇಲಿಂದ ಮೇಲೆ ಬರುತ್ತಿದ್ದ ತೀವ್ರವಾದ ಅಸ್ತಮಾಗೆ ತುತ್ತಾಗಿ ಸ್ನೇಹಾನ ದೇಹಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತ್ತು. ಈ ದೇಹಸ್ಥಿತಿಯಲ್ಲಿ ಆಕೆ ಎದುರಿಸುತ್ತಿದ್ದ ಒಂಟಿ ಹಗಲು, ದೀರ್ಘ ರಾತ್ರಿಗಳ ಭಯ, ಆತಂಕ ಸ್ನೇಹಾರ ಮನಸ್ಸಿನ ಸ್ಥಿತಿಯನ್ನೂ ಕೆಡಿಸಿತ್ತು. ಇದನ್ನು ತಿಳಿದ ನಮ್ಮಲ್ಲಿ ಅನೇಕರು ಪೆರೋಲ್ ಮೇಲಾದರೂ ಆಕೆಯನ್ನು ಬಿಡಿಸಬೇಕೆಂದು ಬಹಳ ಶ್ರಮಪಟ್ಟರು. ಆರೋಗ್ಯದ ದೃಷ್ಟಿಯಿಂದ ಆಕೆ ಪೆರೋಲ್ ಪಡೆಯುವುದು ಅನಿವಾರ್ಯವಾಗಿತ್ತು. ಆದರೆ ಜೈಲಿನಲ್ಲಿ ಇನ್ನೂ ಬಂಧಿತಳಾಗಿ, ಅನಿಶ್ಚಿತವಾಗಿ ಉಳಿದಿದ್ದ ತನ್ನ ಆತ್ಮೀಯ ಸ್ನೇಹಿತರ ನೆನಪಿನಿಂದಾಗಿ, ಮನೆಗೆ ಬಂದಿದ್ದರೂ ಸ್ನೇಹಾ ಪಾಪಪ್ರಜ್ಞೆಯಿಂದ ನರಳುತ್ತಿದ್ದರು: ಒಳಗೊಳಗೆ ನವೆಯುತ್ತಿದ್ದರು. ಇದರೊಂದಿಗೆ ಸ್ನೇಹಾನ್ನ ತುಂಬಾ ಬಾಧಿಸುತ್ತಿದ್ದುದು – ಜೈಲಿನಲ್ಲಿದ್ದ ಸ್ತ್ರೀ ಖೈದಿಗಳ ಪಾಡು. ಅವರಲ್ಲಿ ಹೆಚ್ಚಿನವರು ವೇಶ್ಯಯರು. ಅವರಿಗೆಲ್ಲಾ ಸ್ನೇಹಾ ಹಾಡುಗಳನ್ನು, ಆಟಗಳನ್ನು ಜೈಲಿನಲ್ಲಿ ಕಲಿಸಿಕೊಟ್ಟಿದ್ದರು: ಅವರ ಪರಿಸ್ಥಿತಿಯ ಸುಧಾರಣೆಗಾಗಿ ಜೈಲಿನ ಅಧಿಕಾರಿಗಳೊಂದಿಗೆ ಹೋರಾಡಿದ್ದರು. ತನ್ನ ಯೋಗಕ್ಷೇಮದ ಬಗ್ಗೆ ಮಾತನಾಡಲು ನನ್ನನ್ನು ಬಿಡದೆ ಸ್ನೇಹಾ, ಈ ನತದೃಷ್ಟ ಹೆಂಗಸರಿಗಾಗಿ ನಾವೆಲ್ಲ ಏನು ಮಾಡಬಹುದು, ಯಾವುದು ಸಾಧ್ಯ ಎಂದು ನನ್ನೊಂದಿಗೆ ಚಿಂತಿಸಿದರು, ಚರ್ಚಿಸಿದರು. ಆದರೆ ನನಗೆ ಮಾತ್ರ ಜೈಲಿನ ಅಮಾನುಷ ಯಾತನೆಯಿಂದಾಗಿ ಕಳಾಹೀನವಾಗಿದ್ದ ಸ್ನೇಹಾಳ ಸುಂದರ ಆರ್ತ ಮುಖದಿಂದ ನನ್ನ ಕಣ್ಣುಗಳನ್ನು ಕೀಳಲಾಗಲಿಲ್ಲ.

ಸ್ನೇಹಾರನ್ನು ಕೊಂದಿದ್ದು ಯಾವುದು? ಸ್ತ್ರೀ ಖೈದಿಗಳು, ಗಂಡಸು ಖೈದಿಗಳನ್ನು ಭೇಟಿಯಾಗಲೇಕೂಡದೆಂಬ ಮೂರ್ಖ ಶಾಸನವೇ? ಯಾಕೆಂದರೆ ಸ್ನೇಹಾ ಪ್ರೀತಿಸಿ ಗೌರವಿಸುತ್ತಿದ್ದ ಬುದ್ಧಿಜೀವಿಗಳು, ರಾಜಕಾರಣಿಗಳು ಆಕೆಯಂತೆಯೇ ಯಾವ ಆಪಾದನೆಯೂ ಇಲ್ಲದೆ ಬಂಧನಕ್ಕೊಳಗಾಗಿ ಕೇವಲ ಒಂದು ಗೋಡೆಯಾಚೆ, ಅದೇ ಜೈಲಿನಲ್ಲಿದ್ದರು. ದಿನಕ್ಕೊಮ್ಮೆ, ಕೊನೆಗೆ ವಾರಕ್ಕೊಮ್ಮೆಯಾದರೂ ಅವರನ್ನು ಸಂಧಿಸಿ ಮಾತಾಡುವ ಅವಕಾಶ ಜೈಲಿನ ಅಧಿಕಾರಿಗಳು ಕೊಟ್ಟಿದ್ದರೆ ಸಾಕಿತ್ತು, ಸ್ನೇಹಾ ತುಂಬಾ ಸಮಾಧಾನಿಯಾಗುತ್ತಿದ್ದರು. ಅನಿರೀಕ್ಷಿತವಾಗಿ ಬಂದು ಆಕೆಯನ್ನು ತಲ್ಲಣಗೊಳಿಸಿಬಿಡುತ್ತಿದ್ದ ಅಸ್ತಮಾ ಭಯ ಸ್ನೇಹಾರ ಸಾವಿಗೆ ಕಾರಣವೇ? ಯಾಕೆಂದರೆ ಅಸ್ತಮಾದ ತೀವ್ರ ಆಘಾತಕ್ಕೆ ಆಕೆ ಈಡಾಗಿದ್ದರೂ ಕೂಡಲೇ ಯಾವ ವೈದ್ಯಕೀಯ ನೆರವೂ ಸ್ನೇಹಾಗೆ ಸಿಗುತ್ತಿರಲಿಲ್ಲ. ವೈದ್ಯಕೀಯ ನೆರವು ಹೋಗಲಿ, ಸ್ಚಚ್ಛವಾದ ಗಾಳಿ ಬೆಳಕಿಗಾಗಿ ಸ್ನೇಹಾ ಹಾತೊರೆಯುತ್ತಿದ್ದರು. ದಿನಕ್ಕೊಮ್ಮೆ ಅಥವಾ ಎರಡು ದಿನಕ್ಕೊಮ್ಮೆಯಾದರೂ ಜೈಲಿನ ಒಳಗೇ ಇದ್ದ ಹೂದೋಟದೊಳಗೆ ಅಡ್ಡಾಡಿ ಬರಲು ಅವಕಾಶ ಕೊಟ್ಟಿದ್ದರೂ ಸಾಕಿತ್ತು. ಸ್ನೇಹಾರ ಆರೋಗ್ಯ ಅಷ್ಟು ಹದಗೆಡುತ್ತಿರಲಿಲ್ಲ. ಜೈಲಿನಲ್ಲಿ ಸ್ತ್ರೀ ಖೈದಿಗಳು ಅನುಭವಿಸುತ್ತಿದ್ದ ಪಾಡನ್ನು ಕಣ್ಣಾರೆ ಕಂಡ ಸ್ನೇಹಾರ ಮೃದು ಹೃದಯಕ್ಕೆ ಅದನ್ನು ಸಹಿಸುವ ಎದೆಯಿರಲಿಲ್ಲವೇನೊ? ಯಾಕೆಂದರೆ ಸ್ನೇಹಾ ಯಾವಾಗಲೂ ನಿಸ್ಸಾಹಕ ಸ್ತ್ರೀಯರ, ಅದರಲ್ಲೂ ವೇಶ್ಯೆಯರ ಅವಸ್ಥೆಗಾಗಿ ಮರುಗುತ್ತಿದ್ದರು. ಅಂಥವರ ಸುಧಾರಣೆಗಾಗಿ ಸದಾ ಶ್ರಮಿಸುತ್ತಿದ್ದರು. ದಿಟ್ಟೆದೆಯ ಸ್ನೇಹಾ, ತನ್ನ ಎದುರೇ ನಡೆಯುತ್ತಿದ್ದ ಹೆಂಗಸರ ಮೇಲಿನ ದಬ್ಬಾಳಿಕೆಯನ್ನು ನಿಸ್ಸಹಾಯಕವಾಗಿ ನೋಡಬೇಕಿತ್ತು. ಮೊದಲಿನಿಂದಲೂ ಶಾಂತ ಸ್ವಭಾವದ ಸ್ನೇಹಾ ಅವರನ್ನು ರೊಚ್ಚಿಗೆಬ್ಬಿಸುತ್ತಿದ್ದುದು – ಭಾರತೀಯ ಗಂಡಿನ ಕ್ರೌರ್ಯ ಹಾಗೂ ಒರಟುತನ. ಈ ಬಗ್ಗೆ ಸ್ನೇಹಾ ‘ಸೀತಾ’ ಎಂಬ ನಾಟಕವನ್ನು ಬರೆದಿದ್ದಾರೆ. ಒಟ್ಟಿನಲ್ಲಿ ಸ್ವಾತಂತ್ರ್ಯ ಪ್ರೇಮಿಯಾಗಿದ್ದ ಸ್ನೇಹಾರನ್ನು ಆಕೆಯ ಸ್ವಭಾವ, ಧೋರಣೆಗಳಿಗೆ ಎಂದಿಗೂ ಒಗ್ಗದ ಕೂಪದಲ್ಲಿ ತಳ್ಳಿ, ಸಾವಿನಲ್ಲೇ ಪೂರ್ಣ ಬಿಡುಗಡೆ ಕಂಡುಕೊಳ್ಳುವಂತೆ ಮಾಡಲಾಯಿತು.

ಮತ್ತೆ ನಾನು ಸ್ನೇಹಾರನ್ನು ನೋಡಿದಾಗ ಬಹಳ ಆಶ್ಚರ್ಯವಾಯಿತು. ಆಕೆಯ ಮುಖದಲ್ಲಿ ಹಿಂದಿನ ಸೌಂದರ್ಯ, ಶಾಂತಿ ಪುನಃ ನೆಲೆಸಿತ್ತು. ಸಾವು ಆಕೆಯ ಸಂಕಟ ಯಾತನೆಯನ್ನು ಕೊನೆಗಾಣಿಸಿತ್ತು. ಅಂದೂ ಆಕೆಯ ಸ್ನೇಹಬಳಗ ಅಲ್ಲಿತ್ತು; ಸಮಾಜವಾದಿಗಳು, ಕಲಾವಿದರು, ಯುವಜನರು, ಕಾರ್ಮಿಕರು – ಅವರ ನಾಯಕರು ಮತ್ತು ಇಷ್ಟಮಿತ್ತರು, ಸ್ನೇಹಾಳ ಬಹು ದಿನದ ಬಯಕೆ ಕೂಡ ಆಕೆಯ ಸಾವಿನ ದಿನ ಪೂರ್ಣವಾಗಿ ಈಡೇರಿತ್ತು. ಸಮಾಜವಾದಿಗಳೂ ಹಾಗೂ ಸೃಜನಶೀಲ ಕಲಾವಿದರು ಆಗಾಗ ಬೆರೆಯುತ್ತಿರಬೇಕು, ತಮ್ಮ ತಮ್ಮ ಕಾರ್ಯರಂಗದ ಬಗ್ಗೆ ಸಮಾಲೋಚನೆ ನಡೆಸುತ್ತಿರಬೇಕು ಎಂದು ಸ್ನೇಹಾ ಬಯಸುತ್ತಿದ್ದರು. ಸ್ನೇಹಾಳ ಸಾವಿನಲ್ಲಿ ಅವರೆಲ್ಲ ಒಂದಾಗಿದ್ದರು. ಪ್ರಜಾಪ್ರಭುತ್ವದಲ್ಲೇ ವಿಶ್ವಾಸವನ್ನಿಟ್ಟುಕೊಂಡಿದ್ದ ಸ್ನೇಹಾರ ಮನೆ ನಿಸ್ಸಂಕೋಚವಾದ, ಮುಚ್ಚುಮರೆಯಿಲ್ಲದ ಸ್ನೇಹಮಯ ವಾತಾವರಣದಿಂದ ಕೂಡಿದ್ದಾಗಿತ್ತು. ಆ ಮನೆಯ ಬಾಗಿಲು ಎಲ್ಲರಿಗೂ ಮುಕ್ತವಾಗಿ ತೆರೆದದ್ದು. ಊಟ ಮಾಡದೆ, ಕೊನೇ ಪಕ್ಷ ಚಹಾ ಕೂಡ ಕುಡಿಯದೆ ಯಾರೂ ಅವರ ಮನೆಯಿಂದ ಹೊರಬರುತ್ತಿರಲಿಲ್ಲ. ಸ್ನೇಹಾ ಸತ್ತದಿನ ಕೂಡ ನಾವೆಲ್ಲ ಅಲ್ಲಿಯೇ ಊಟ ಮಾಡಿದೆವು – ಸ್ನೇಹಾ ಇದ್ದಿದ್ದರೆ ಹಾಗೆಯೇ ಹೋಗಲು ಖಂಡಿತ ಬಿಡುತ್ತಿರಲಿಲ್ಲವೆಂದು ಅವರ ಪತಿ ಪಟ್ಟಾಭಿ ನಮ್ಮನ್ನೆಲ್ಲ ಒತ್ತಾಯಿಸಿದ್ದರಿಂದ.

ಸ್ನೇಹಾರ ಪ್ರತಿಭೆ ಬಹುಮುಖ್ಯವಾದದ್ದು. ಭಾರತ ಮತ್ತು ಸ್ಪೇನ್‌ನಲ್ಲಿ ನೃತ್ಯಾಭ್ಯಾಸ ಮಾಡಿದ ಕಲಾವಿದೆ ಆಕೆ. ‘ಸಂಸ್ಕಾರ’ದ ಕಥೆಗಾರನಾದ ನನಗೆ ಅದರಲ್ಲಿ ಅಭಿನಯಿಸಿದ ಸ್ನೇಹಾರ ನಟನಾಪ್ರತಿಭೆ ಎಂದಿಗೂ ಮರೆಯಲಾರದ್ದು. ಸ್ನೇಹಾ ಮತ್ತು ಪಟ್ಟಾಭಿ – ಇವರೂ ಕೂಡ ತೆಲುಗು ಭಾಷೆಯ ಬಹುಮುಖ್ಯ ಕವಿ – ಇಬ್ಬರೂ ಕೂಡಿ ‘ಸಂಸ್ಕಾರ’ ಚಿತ್ರವನ್ನು ಯೋಜಿಸಿ ನಿರ್ದೇಶಿಸಿದ್ದರು. ಅದು ಬಹುಷ್ಕೃತವಾದಾಗ ಅದಕ್ಕಾಗಿ ಹಾರಾಡಿದ್ದರು. ಕೊನೆಗೆ ರಾಷ್ಟ್ರಪತಿಯ ಚಿನ್ನದ ಪದಕವನ್ನು, ಇನ್ನೂ ಅನೇಕ ಅಂತರರಾಷ್ಟ್ರೀಯ ಬಹುಮಾನಗಳನ್ನು ಗೆದ್ದುಕೊಂಡರು. ಕನ್ನಡ ಚಿತ್ರರಂಗದಲ್ಲಿ ‘ಸಂಸ್ಕಾರ’ ಹೊಸ ಅಲೆಯೆಬ್ಬಿಸುವಂತೆ ಮಾಡಿದ ಖ್ಯಾತಿ ಸ್ನೇಹಾ ಹಾಗೂ ಪಟ್ಟಾಭಿ ಅವರಿಗೆ ಸಲ್ಲುತ್ತದೆ. ಮದರಾಸಿನಲ್ಲಿ ನೆಲೆಸಿದಾಗ, ಅಲ್ಲಿನ ರಂಗಚಟುವಟಿಕೆಗಳ ಕೇಂದ್ರಬಿಂದುವಾಗಿದ್ದ ಸ್ನೇಹಾ, ಬೆಂಗಳೂರಿಗೆ ಬಂದು ನೆಲೆಸಿದಾಗ, ಇಲ್ಲಿನ ಕಲಾತ್ಮಕ ಚಟುವಟಿಕೆಗಳು ಮಾತ್ರವಲ್ಲದೆ, ಸಾಮಾಜಿಕ ರಾಜಕೀಯ ಆಸಕ್ತಿಗಳ ಕೇಂದ್ರವೂ ಆಗಿದ್ದರು. ಸ್ನೇಹಾರ ಆಸಕ್ತಿ ಕೂಡ – ವೈವಿಧ್ಯಮಯ. ನಿರ್ದೇಶನವೇ ಆಗಲಿ, ಚಿಕ್ಕ ಅಥವಾ ದೊಡ್ಡ ಪಾತ್ರದ ನಟನೆಯೇ ಆಗಲಿ, ಒಂದು ಕೊಠಡಿಯನ್ನು ಸಜ್ಜುಗೊಳಿಸುವುದೇ ಆಗಲಿ ಅಥವಾ ಮನೆಗೆ ಬಂದವರನ್ನು ಉಪಚರಿಸುವುದೇ ನಾವು ನಿರ್ಲಕ್ಷಿಸಬಹುದಾದದ್ದನ್ನೂ ಸ್ನೇಹಾ ತುಂಬಾ ಪ್ರೀತಿಯಿಂದ ನೋಡುತ್ತಿದ್ದರು. ಸ್ನೇಹಾರ ಜೀವನವನ್ನು ಸದಾ ತುಂಬಿರುತ್ತಿದ್ದುದು, ವರ್ಡ್ಸ್‌ವರ್ತ್‌ ಹೇಳುವಂತೆ – ‘ನೆನಪಲ್ಲಿ ನಿಲ್ಲದ ಕರುಣೆ ಮತ್ತು ಪ್ರೀತಿಯ ಸಣ್ಣಪುಟ್ಟ ಘಟನೆಗಳಿಂದ’ ತನ್ನ ಅಭಿಪ್ರಾಯಗಳನ್ನು ನೇರವಾಗಿ, ನಿಷ್ಠುರವಾಗಿ ಪ್ರತಿಪಾದಿಸುವಾಗಲೂ ಸ್ನೇಹಾ ತನ್ನ ಎದುರಾಳಿಯ ಮನಸ್ಸನ್ನು ನೋಯಿಸುತ್ತಿರಲಿಲ್ಲ. ಕಲೆ, ರಾಜಕೀಯದ ಬಗ್ಗೆ ಕಾಳಜಿಯಿದ್ದಷ್ಟೇ ಸ್ನೇಹಾಗೆ ಯುವಕರ ವೈಯಕ್ತಿಕ ಸಮಸ್ಯೆಗಳ ಬಗ್ಗೆಯೂ ಕಳಕಳಿಯಿತ್ತು.

ಸ್ನೇಹಾ, ನಮ್ಮ ಕಾಲದ ಅತ್ಯಂತ ಮುಖ್ಯ ಸೃಜನಶೀಲ ಚಿಂತಕರಾದ ಲೋಹಿಯಾರ ಕಟ್ಟಾಭಿಮಾನಿ. ರಾಜಕೀಯ ಉದ್ದೇಶಕ್ಕಾಗಿ ಹಾಗೂ ತಮಗಾಗಿ ಪ್ರಾಣವನ್ನೇ ಅರ್ಪಿಸಲು ಸಿದ್ಧವಿರುವ ಹಿಂಬಾಲಕರನ್ನು ಪಡೆದಿದ್ದ ಅಪರೂಪದ ರಾಜಕಾರಣಿ ಡಾ. ಲೋಹಿಯಾ. ಹೌದು, ಸ್ನೇಹಾ ಕೂಡ ಲೋಹಿಯಾರ ಪ್ರಿಯವಾದ ಆದರ್ಶಕ್ಕಾಗಿಯೇ ಪ್ರಾಣ ತೆತ್ತರು.

ಸುಂದರ ಹಾಗೂ ಉತ್ಸಾಹಭರಿತ ವ್ಯಕ್ತಿತ್ವದ ಮಗಳು ನಂದನಾ, ಪ್ರತಿಭಾಶಾಲಿ ಸಂಗೀತಕಾರನಾದ ಮಗ ಕೋನಾರಕ್, ಅತ್ಯಂತ ಶಾಂತ ಸ್ವಭಾವದ ಕಲಾವಿದನಾದ ಪತಿ ಪಟ್ಟಾಭಿ – ಇವರನ್ನು ಬಿಟ್ಟು ಸ್ನೇಹಾ ಹೋಗಿದ್ದಾರೆ.

ಅಷ್ಟೇ ಅಲ್ಲ, ಇನ್ನೂ ಅನಿಶ್ಚಿತವಾಗಿಯೇ ಜೈಲಿನಲ್ಲಿರುವ ಹಾಗೂ ಹೊರಗಿರುವ ಆಕೆಯ ಅಸಂಖ್ಯಾತ ಸ್ನೇಹಿತರನ್ನು ಈಗಲೂ ಬಾಧಿಸುತ್ತಿರುವ ರಾಜಕೀಯ ಆದರ್ಶವನ್ನು ಹಿಂದೆ ಬಿಟ್ಟು ಸ್ನೇಹಾ ಹೋಗಿದ್ದಾರೆ.

ಇಂಡಿಯನ್ ಎಕ್ಸ್ಪ್ರೆಸ್: ಜನವರಿ, ೧೯೭೭ರಲ್ಲಿ ಪ್ರಕಟವಾದ ಇಂಗ್ಲಿಷ್ ಲೇಖನದ ಅನುವಾದ.

* * *