ನಾನು ಇವತ್ತು ಇಲ್ಲಿ ಬರೇ ಕೃತಿಕಾರನಾಗಿ ಸಾಮಾಜಿಕ ಕ್ರಾಂತಿ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟ ಹಾಗೆ ಚಿತ್ರಿಸಲು ಆಶಿಸುತ್ತೇನೆ. ನಾನು ಹೇಳುವ ಮಾತುಗಳೆಲ್ಲ ಒಬ್ಬ ಬರಹಗಾರ ತನ್ನ ಬರವಣಿಗೆಯ ಸಂದರ್ಭದಲ್ಲಿ ಎದುರಿಸುತ್ತಿರವ ಪ್ರಶ್ನೆಗಳು ಮತ್ತು ಬರವಣಿಗೆಗೆ ಸಂಬಂಧಪಟ್ಟ ಸಮಸ್ಯೆಗಳು. ಹೀಗೆ ನಾನು ಸ್ಪಷ್ಪಪಡಿಸದೇ ಹೋದಲ್ಲಿ ಸಾಹಿತಿಗಳಾದ ನಾವು ಕ್ರಾಂತಿ ಆಗಬೇಕೆಂದು ಅಭಿಪ್ರಾಯಪಟ್ಟು ಮಾಡುವ ಭಾಷಣಗಳಿಗೂ ರಾಜಕಾರಣಿಗಳು ಮಾಡುವ ಭಾಷಣಗಳಿಗೂ ನಿಜವಾದ ಅರ್ಥದಲ್ಲಿ ಕ್ರಾಂತಿಗಾಗಿ ಕೆಲಸ ಮಾಡುವವರು ಆಡುವ ಸಾಮಾಜಿಕ ಕ್ರಾಂತಿ ಅನ್ನುವ ವಿಷಯದಲ್ಲಿ ಕ್ರಾಂತಿಕಾರಕವಾಗಿ ಮಾತಾಡುವುದಕ್ಕೆ ಇಂಥ ಒಂದು ವಿಚಾರ ಸಂಕಿರಣದ ವೇದಿಕೆಯನ್ನು ಉಪಯೋಗಿಸುವುದೂ ಕೂಡ ಅಸಂಬದ್ಧ ಎನಿಸುತ್ತದೆ. ಯಾಕೆಂದರೆ ಇಂಥ ಒಂದು ವಾತಾವರಣದಲ್ಲಿ ಶ್ರೋತೃಗಳನ್ನು ಉದ್ರೇಕಗೊಳಿಸಿ, ನಾವೂ ಉದ್ರೇಕಕ್ಕೆ ಒಳಗಾಗಿ ಮಾಡುವಂಥಾದ್ದು ಏನೂ ಇಲ್ಲ. ಆದ್ದರಿಂದ ಕಸುಬುದಾರರು ಮಾತಾಡುವಂತೆ ಈ ವೇದಿಕೆಯಲ್ಲಿ ಮಾತಾಡುವುದು ಒಳ್ಳೆಯದು ಅಂತ ಅನ್ನಿಸುತ್ತದೆ.

ನಿನ್ನೆ ರಾತ್ರಿ ನನಗೊಂದು ಅನುಭವವಾಯಿತು. ಮೈಸೂರಿನಲ್ಲಿ ನ್ಯಾಯ ಹೋರಾಟ ವೇದಿಕೆ ಎಂಬ ಸಮಿತಿಯ ಆಶ್ರಯದಲ್ಲಿ ಒಂದು ದೊಡ್ಡ ಸಭೆ ಏರ್ಪಟ್ಟಿತ್ತು. ಅಲ್ಲಿಗೆ ಮಂತ್ರಿಪದವಿ ಕಳೆದುಕೊಂಡ ಬಸವಲಿಂಗಪ್ಪನವರಿಗೋಸ್ಕರ ಜನ ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದರು. ಬಹುಶಃ ಇದು ಮೈಸೂರಿನಲ್ಲಿ ಅಭೂತಪೂರ್ವ ಘಟನೆಯಾಗಿತ್ತು. ಬಹಳ ಜನ ಕುತೂಹಲಕ್ಕಾಗಿ ಬಂದಿದ್ದರು. ಅಶೋಕಪುರಂನಲ್ಲಿರುವ ನಿಮ್ನ ವರ್ಗದ ಜನರೂ ಅಲ್ಲಿದ್ದರು. ಅಲ್ಲಿ ನಾನು ಸಮಾಜವಾದ ಮತ್ತು ಹಿಂದುಳಿದ ವರ್ಗಗಳು ಎನ್ನುವ ವಿಷಯದಲ್ಲಿ ಭಾಷಣ ಮಾಡಬೇಕಿತ್ತು. ನನ್ನನ್ನು ಮೊದಲು ಮಾತಾಡುವಂತೆ ಕೇಳಿದರು. ನಾನು ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯದ ಬಗ್ಗೆ ಚಿಂತನೆ ಮಾಡಿದ್ದೇನೆ. ಜೊತೆಗೆ ಬರಹಗಾರನೂ ಆಗಿದ್ದೇನೆ. ಅಷ್ಟೇ ಅಲ್ಲ, ನಾನು ಹೆಚ್ಚು ಕಾಲವನ್ನು ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡಿ ಕಳೆದಿದ್ದೇನೆ – ಮಾತನಾಡುವುದಕ್ಕೆ ಎದ್ದುನಿಂತೆ. ನನ್ನೆದುರು ಚಿಂದಿಬಟ್ಟೆಯನ್ನುಟ್ಟುಕೊಂಡವರು, ಮೆರವಣಿಗೆಯಲ್ಲಿ ಭಾಗವಹಿಸಿದವರು, ಕುಡಿದು ಖುಷಿಯಲ್ಲಿ ಕುಣಿಯುತ್ತ ಬಂದವರು ಇದ್ದರು. ಅವರೆಲ್ಲರ ಮುಖದಲ್ಲಿ ಹರ್ಷ ಇತ್ತು, ಉತ್ಸಾಹ ಇತ್ತು. ಬಸವಲಿಂಗಪ್ಪನವರು ಮಂತ್ರಿಪದವಿ ಕಳೆಕೊಂಡರೂ ಕೂಡ, ಮತ್ತೆ ಅವರನ್ನು ‘ಹೀರೋ’ ಆಗಿ ಸ್ಥಾಪಿಸಬೇಕೆಂಬ ಉದ್ದೇಶವೂ ಇತ್ತು. ಆ ಸಭೆಯಲ್ಲಿ ನಾನು ಮಾತನಾಡಲು ನಿಂತಾಗ ನನ್ನ ಉದ್ದೇಶವೇ ಬೇರೆ ಅಂತ ನನಗನ್ನಿಸಿತ್ತು. ಈ ನನ್ನ ಉದ್ದೇಶ ಸ್ವಲ್ಪ ವೈಜ್ಞಾನಿಕವಾದದ್ದಾಗಿತ್ತು. ಈ ಅಸ್ಪೃಶ್ಯತೆ ಅನ್ನೋದು ಬರೀ ಹರಿಜನರ ಮಟ್ಟಿಗೆ ಮಾತ್ರ ಸೇರಿದ್ದಲ್ಲ, ಎಲ್ಲಿಯವರೆಗೆ ಜಾತಿಯ ಪ್ರಶ್ನೆ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೆ ಅಸ್ಪೃಶ್ಯ ಎಲ್ಲ ಹಂತಗಳಲ್ಲೂ ಉಳಿಯುತ್ತಾನೆ; ಯಾವ ಮೇಲ್ಜಾತಿಯವನಿಗೂ ಅವನ ಕೆಳಜಾತಿಯವನು ಅಸ್ಪೃಶ್ಯನೇ ಆಗಿರುತ್ತಾನೆ; ಕೆಳಕೆಳಗಿನ ಹಂತದಲ್ಲಿ ಅಸ್ಪೃಶ್ಯರೂ ಕೂಡ ಅಸ್ಪೃಶ್ಯರನ್ನು ಸೃಷ್ಟಿಸಿಕೊಂಡಿರುತ್ತಾರೆ; ಆದರೆ ಜಾತಿ ಸಂಘರ್ಷ ಉಂಟಾದಾಗ ಸವರ್ಣೀಯರೆಲ್ಲ ಒಟ್ಟಾಗುತ್ತಾರೆ; ಒಕ್ಕಲಿಗರು, ಲಿಂಗಾಯತರು, ಸಣ್ಣಪುಟ್ಟ ಜಾತಿಗಳು – ಎಲ್ಲರೂ ಇಂತಹ ಸಂದರ್ಭದಲ್ಲಿ ಬ್ರಾಹ್ಮಣರ ಹಾಗೆ ವರ್ತಿಸುತ್ತಾರೆ – ಹೀಗೆಂದು ವಿಶ್ಲೇಷಿಸಿ ಮಾತನಾಡಬೇಕು ಅಂತ ನಾನು ಯೋಚನೆ ಮಾಡಿದ್ದೆ. ಮಾತಾಡಲು ಎದ್ದು ನಿಂತು ಆ ಜನರನ್ನು ಕಂಡಾಗ ಯಾವ ಭಾಷೆಯಲ್ಲಿ ಮಾತನಾಡಬೇಕು ಎಂಬ ಸಮಸ್ಯೆ ಎದುರಾಯ್ತು. ನಾನು ಉಪಯೋಗಿಸುವ ಭಾಷೆ ಅಮೂರ್ತವಾದ ವೈಚಾರಿಕವಾದ ಭಾಷೆ. ಈ ಭಾಷೆಯಲ್ಲಿ ಏನು ಹೇಳಿದರೂ ಸಿಟ್ಟಾಗಲಿ ಸಂತೋಷವಾಗಲಿ ಆಗುವುದಿಲ್ಲ. ವಿಚಾರವನ್ನು ಕೆದುಕುವಂತಹ ಭಾಷೆಯನ್ನು ಬಿಟ್ಟು ಜನರಲ್ಲಿ ಉದ್ರೇಕವನ್ನು ಕೆರಳಿಸಬಲ್ಲ ಭಾಷೆಯನ್ನು ಉಪಯೋಗಿಸಲು ನನಗೆ ಧೈರ್ಯವೇ ಬರಲಿಲ್ಲ. ಅವರ ಮುಖಗಳ ಅಪೇಕ್ಷೆಯನ್ನು ನೋಡಿದಾಗ ಬೇರೆ ಭಾಷೆಯಲ್ಲಿ ಪೂರೈಸಬೇಕು. ಆದರೆ ಪಾತ್ರವೆನ್ನಿಸುವುದಿಲ್ಲ. ‘ಚೋಮನ ದುಡಿ’ಯನ್ನು ಓದುವವರು ಸುಶಿಕ್ಷಿತ ಜಾತಿಗಳು ಎಂಬ ವಾಸ್ತವದ ಪ್ರಜ್ಞೆ ಕೃತಿಯ ಧಾಟಿ ಧೋರಣೆಗಳನ್ನು ನಿರ್ಧರಿಸಿದೆ.

ಒಟ್ಟಿನಲ್ಲಿ ನಾವು ಯಾರೂ ಕ್ರಾಂತಿಕಾರಿ ಸಾಹಿತಿಗಳು ಅಂತ ಅಂದುಕೊಳ್ಳಲಾರೆವು. ಮುಂಬಯಿಯಲ್ಲಿ ‘ದಲಿತ್ ಪ್ಯಾಂಥರ್ಸ್’ ಅಂತ ಒಂದು ಸಂಘ ಇದೆ. ಬಹಳ ಒಳ್ಳೆಯ ಸಾಹಿತ್ಯವನ್ನು ಬರೆದಿದ್ದಾರೆ. ಅವರ ಕೃತಿಗಳ ಇಂಗ್ಲಿಷ್ ಭಾಷಾಂತರವನ್ನು ನಾನು ಓದಿದ್ದೇನೆ. ತೆಲುಗಿನಲ್ಲೂ ದಿಗಂಬರ ಕವಿಗಳು ಅಂತ ಬರೆಯುವ ಕ್ರಾಂತಿಕಾರಕ ಕವಿಗಳ ಒಂದು ಗುಂಪಿದೆ. ಇವರದೆಲ್ಲ ಬರೀ ಘೋಷ ಸಾಹಿತ್ಯ. ಉಚ್ಛ ಜನಾಂಗಕ್ಕೆ ಸೇರಿದ ಲೇಖಕರೇ ಇಲ್ಲಿ ಹೆಚ್ಚಾಗಿದ್ದಾರೆ. ಆದರೆ ‘ದಲಿತ್ ಪ್ಯಾಂಥಸ್ಸ್’ನಲ್ಲಿ ಸೇರಿದವರೆಲ್ಲ ಅಂಬೇಡ್ಕರ್ ರವರ ಮಹರ್ ಜನಾಂಗಕ್ಕೆ ಸೇರಿದವರು. ಇವರಲ್ಲಿ ಅನೇಕ ಜನರಿಗೆ ವಿದ್ಯಾಭ್ಯಾಸ ಇದೆ – ಆದರೆ ಇವರು ‘ಘೋಷ’ ಸಾಹಿತ್ಯವನ್ನು ಬರೆಯುತ್ತಿಲ್ಲ. ಇವರು ನಿಜವಾಗಿ ಒಳ್ಳೆಯ ಸಾಹಿತ್ಯವನ್ನು ಸೃಷ್ಟಿಸುತ್ತಾರೆ. ಇದರ ಇಂಗ್ಲಿಷ್ ಭಾಷಾಂತರ ಟೈಮ್ಸ್ ವೀಕ್ಲಿಯಲ್ಲಿ ಬಂತು. ಅದರಲ್ಲಿ ಒಂದು ಅಂಶ ನನ್ನ ಗಮನವನ್ನು ವಿಶೇಷವಾಗಿ ಸೆಳೆಯಿತು. ದಲಿತ್ ಪ್ಯಾಂಥರ್ಸ್ ಸಾಹಿತ್ಯ ಅಚ್ಚಾದ ಟೈಮ್ಸ್ ಪತ್ರಿಕೆಯ ಆ ಪುಟದ ತುಂಬ ಜಾಹೀರಾತುಗಳು ಇದ್ದವು. ಮೇಲು ವರ್ಗದ ಜನ ಉಪಯೋಗಿಸುವ ಭೋಗ ಸಾಮಗ್ರಿಗಳ ಜಾಹೀರಾತುಗಳು ಅವು. (ಇಂಗ್ಲಿಷಿನಲ್ಲಿ ಬರುವ ಜಾಹೀರಾತುಗಳೆಲ್ಲ ಭೋಗ ಸಾಮಗ್ರಿಗಳದ್ದು: ಶೇಕಡಾ ಒಂದು ಜನರು ಮಾತ್ರ ಉಪಭೋಗಿಸುವಂಥಾದ್ದು) ದಲಿತ ಸಾಹಿತ್ಯ ಈ ಜಾಹೀರಾತನ್ನು ಸೃಷ್ಟಿಸಿದ ಸಮಾಜವನ್ನೇ ತಾನು ಧಿಕ್ಕರಿಸುತ್ತೇನೆ ಅಂತ ಹೇಳುತ್ತಿದೆ. ಈ ಸಮಾಜಕ್ಕೂ ತನಗೂ ಏನೂ ಸಂಬಂಧ ಇಲ್ಲ ಅಂತ ಹೇಳುತ್ತಿದೆ. ಆದರೆ ಈ ಸಾಹಿತ್ಯ ಪ್ರಕಟಣೆ ಈ ಅಧಿಕ ಪ್ರಸಾರದ ಪತ್ರಿಕೆಯಲ್ಲಿ ಸಾಧ್ಯವಾದದ್ದು ಈ ಜಾಹೀರಾತು ಈ ಪತ್ರಿಕೆಗೆ ದೊರೆಯುತ್ತಿರುವುದರಿಂದ. ಜಾತಿಯ ದೃಷ್ಟಿಯಿಂದ ನೋಡಿದರೆ ಕ್ರಾಂತಿ ಆಗಲೇಬೇಕಾಗಿರುವುದು ಪಂಚಮರ ಮಟ್ಟಿಗೆ. ಅವರೂ ಈ ಸವಲತ್ತುಗಳನ್ನು ಹತ್ತು ವರ್ಷ ಪಡೆದ ಮೇಲೆ ಕ್ರಾಂತಿಕಾರರಾಗಿ ಉಳಿಯುತ್ತಾರೆನ್ನುವ ಭ್ರಾಂತಿ ನಮಗೆ ಬೇಡ. ಸದ್ಯಕ್ಕೆ ಅವರಲ್ಲಿ ಕ್ರಾಂತಿಯ ಅವಶ್ಯಕತೆ ಉಂಟು. ಆದರೆ ಈ ದಲಿತ್ ಪ್ಯಾಂಥರ್ಸ್ ಕೂಡ ಸಾಕಷ್ಟು ಪ್ರಚಾರ ಪಡೆದು ಕ್ರಮೇಣ ಗೌರವಾನ್ವಿತರಾಗಿ ಬಿಡುತ್ತಾರೋ ಅಂತ ನನಗೆ ಭಯ. ಯಾಕೆಂದರೆ ಅವರೂ ಟೈಮ್ಸ್ ಓದುಗರಿಗೆ ಆ ಪತ್ರಿಕೆಯ ಜಾಹೀರಾತುಗಳ ಚೌಕಟ್ಟಿನಲ್ಲಿ ದೊರೆಯುವಂಥವರಾದಾಗ ಅವರು ಜನರಿಗಾಗಿ ಬರೆಯದೆ ಕ್ರಮೇಣ – ನಮ್ಮನ್ನು ರೇಗಿಸಲೆಂದೇ ಆಗಲಿ – ಅವರು ನಮಗೆ ಬರೆಯಲು ತೊಡಗಿದಾಗ, ಸಾಹಿತಿಯಾದ ಒಬ್ಬ ಹೊಲೆಯನಿಂದ ಬಯ್ಯಿಸಿಕೊಳ್ಳುವುದೂ ನಮಗೆ ಸುಖಕರವಾದೀತು. ಅವರು ಕೂಡ ನಾವು ಉಪಯೋಗಿಸುವ ವಸ್ತುವಾದರು. ಆಮೇಲೆ ಅವರನ್ನು ಇಂಥ ವೇದಿಕೆಗೆ ಕರೆಸುತ್ತೀರಿ. ಆಗ ಅವರ ಮಾತು ಹೇಗಿರುತ್ತದೆ? ಈಗ ನಾನೇನಾದರೂ ಕ್ರಾಂತಿಗೆ ಸಿದ್ಧರಾಗೋಣ ಅಂತ ನಿಮ್ಮ ಎದುರು ಭಾಷಣ ಮಾಡಿದರೆ ನನಗೇ ನಾಚಿಕೆಯಾದೀತು.

ಆದ್ದರಿಂದ ಸಾಮಾಜಿಕ ಕ್ರಾಂತಿಯ ಉದ್ದೇಶದಿಂದ ನಾವು ಬರೆಯಬಹುದಾದ ಸಾಹಿತ್ಯ ಹೇಗಿರಬಹುದು? ಸಾಮಾಜಿಕ ಕ್ರಾಂತಿ ಬೇಕು ಎನ್ನುವ ಪ್ರಜ್ಞೆಯಿದ್ದೂ ಅದರಲ್ಲಿ ಭಾಗಿಯಾಗಲಾರದಂತಹ ತೊಂದರೆಗಳಿರುವ ಇಬ್ಬಂದಿತನದ ಅನುಭವವನ್ನು ನೀಡುವುದು ಮಾತ್ರ ನಮ್ಮಿಂದ ಶಕ್ಯವಾಗಬಹುದು. ನಮ್ಮ ಸದ್ಯದ ಓದುಗರು ಯಾರು, ಬರೆಯುವವರು ಯಾರು ಎಂಬ ವಾಸ್ತವದ ಅರಿವಿನ ಮಿತಿಯೊಳಗೆ ನಾನು ಆಡುವ ಮಾತು ಇದು. ಸದ್ಯದ ನಿಜವಾದ ಸಂದರ್ಭದಲ್ಲಿ ನಾವು ಯಾವ ನೋವನ್ನು ಪಡುತ್ತೇವೋ ಆ ನೋವನ್ನು ಮಾತ್ರ ವ್ಯಕ್ತಪಡಿಸುವುದು ಸಾಧ್ಯವಾಗುಬಹುದು. ಅಂದರೆ ಸಾಕ್ಷಿಪ್ರಜ್ಞೆಯಿಂದ ಬರೆಯುವ ಸಾಹಿತ್ಯ ಬಹುಶಃ ಸಾಚಾ ಆಗಿದ್ದೀತು. ಈ ರೀತಿ ಸಮಾಜ ಕ್ರಾಂತಿಯ ಅಗತ್ಯವನ್ನು ಕಂಡು ಅದನ್ನು ಬರೆಯುವ ಸಾಹಿತ್ಯದಲ್ಲಿ ಏಕ ದೃಷ್ಟಿ ಇರುವುದಿಲ್ಲ – ದ್ವಂದ್ವ ದೃಷ್ಟಿಯಿರುತ್ತದೆ. ಅದನ್ನು ನಾನು ಹೇಳಿದಾಗ ಕೆಲವರು ಇದನ್ನು ಹಿಪ್ರೊಕ್ರೆಸಿ ಎಂದರು. ಆದರೆ ಇದು ಹಿಪ್ರೊಕ್ರೆಸಿ ಅಲ್ಲ. ಈಗ ಬಸವಲಿಂಗಪ್ಪನವರು ಅಥವಾ ಆ ವರ್ಗದ ಜನ ಮಾತಾಡಿದಾಗ ಅವರಿಗೆ ಒಂದೇ ಕಾಣಲು ಸಾಧ್ಯ. ಬೇರೆ ವರ್ಗದವನಾದಾಗ ನನಗೆ ಆ ವಿಷಯದ ಜೊತೆಗೆ ಇನ್ನೊಂದು ವಿಷಯವೂ ಕಾಣುತ್ತದೆ. ಅವರು ಹೇಳುವುದು ಒಂದು ದೃಷ್ಟಿಯಿಂದ ನಿಜ ಅಂತಲೂ ಕಾಣುತ್ತದೆ – ಅದರ ಜೊತೆಗೆ ಈ ಸಂದರ್ಭದಲ್ಲಿ ಬೇರೊಂದು ಧ್ವನಿ ಇದೆ ಅಂತಲೂ ಕಾಣುತ್ತದೆ. ಆದ್ದರಿಂದ ನಾವೆಲ್ಲರೂ ಬರೆಯುವಂಥ ಸಾಹಿತ್ಯದಲ್ಲಿ ಈ ಏಕದೃಷ್ಟಿ ಬರಬೇಕಾದರೆ ಡಿ.ಎಂ.ಕೆ.ಯವರು ಬರೆಯುವ ಹಾಗೆ ಬರೆಯಬೇಕು – ಬರೀ ಘೋಷಣೆಗಳು; ಅದು ತಪ್ಪು ಅಂತ ನಾನು ಹೇಳುವುದಿಲ್ಲ – ಅದಕ್ಕೂ ಒಂದು ಉದ್ದೇಶ ಇದೆ ಅಂತಲೂ ನನಗನ್ನಿಸುತ್ತದೆ. ಆದರೆ ಅಂಥದನ್ನು ನನಗೆ ಬರೆಯುವುದಕ್ಕೆ ಸಾಧ್ಯವಿಲ್ಲ. ನಾವು ಏನು ಹೇಳುತ್ತೇವೋ ಅದಕ್ಕೆ ವಿರುದ್ಧವಾದುದೂ ಅದರ ಜೊತೆಗೇ ಕಾಣಿಸುತ್ತ ಇರುವಾಗ ಬರುವ ಸಾಹಿತ್ಯ ಈ ದ್ವಂದ್ವ ದೃಷ್ಟಿಯ ಸಾಹಿತ್ಯ. ಬಹುಶಃ ಇದೇ ನಮ್ಮ ವರ್ಗಕ್ಕೆ ಸದ್ಯದ ಸ್ಥಿತಿಯಲ್ಲಿ ಸಾಧ್ಯವಾದ್ದು. ನಾವು ಸಾಮಾಜಿಕ ಕ್ರಾಂತಿ ಎಂಬ ವಸ್ತುವನ್ನು ಆಯ್ದುಕೊಂಡಾಗಲೂ ಸಹ ನಾವು ಬರೆಯುವುದು ಈ ದ್ವಂದ್ವವನ್ನು ಬಿಟ್ಟುಕೊಡದೆ ಇರತಕ್ಕ ಸಾಹಿತ್ಯವನ್ನೇ.

ಈ ಭಾಷೆ ಸಮಸ್ಯೆಯ ಜೊತೆಗೇ ಇನ್ನೂ ಕೆಲವು ಕೃತಿಕಾರ ಸಮಸ್ಯೆಗಳೂ ಇರಬಹುದು. ಒಬ್ಬ ಕೃತಿಕಾರನಿಗಿರುವ ಪರಕಾಯ ಪ್ರವೇಶದ ಶಕ್ತಿ ಇನ್ನಾರಿಗೂ ಇರುವುದಿಲ್ಲ. ಅವನು ಒಳ್ಳೆ ಲೇಖಕನಾಗಿದ್ದರೆ ಹ್ಯಾಲುಸಿನೇಷನ್ ಅನ್ನಿಸುವಷ್ಟು ಸ್ಪಷ್ಟವಾಗಿ ಒಂದು ವಸ್ತುವಿನ ಅಥವಾ ಪಾತ್ರದ ನೈಜಗುಣಗಳ ಅರಿವು ಅವನಿಗುಂಟಾಗುತ್ತದೆ. ಹೀಗೆ ಪರಕಾಯ ಪ್ರವೇಶ ಮಾಡುವುದರಿಂದಲೇ ಕಾದಂಬರಿ ಬರೆಯುವುದು ಸಾಧ್ಯವಾಗುತ್ತದೆ. ಕ್ರಾಂತಿಗೆ ವಿರುದ್ಧವಾದ ವ್ಯಕ್ತಿಗಳನ್ನು ಚಿತ್ರಿಸುವಾಗಲೂ ಪರಾಕಾಯ ಪ್ರವೇಶ ಅಲ್ಲದೆ ಹೋದರೂ ಪರಮನಸ್ಸಿನ ಪ್ರವೇಶ ಮಾಡಬೇಕಾಗುತ್ತದೆ. ಆ ಶಕ್ತಿ ಇಲ್ಲದ ಒಬ್ಬ ಸೃಜನಶೀಲ ಲೇಖನಾಗುವುದಕ್ಕೆ ಸಾಧ್ಯವಿಲ್ಲ. ಅಂದರೆ ಕಲಾಕೃತಿ ನಿಜವಾಗಬೇಕಾದರೆ ಅದು ಕ್ರಾಂತಿಕಾರನಿಗೂ ಅವನ ವಿರೋಧಿಗೂ ನಿರ್ಲಿಪ್ತವಾಗಿ ತಮ್ಮ ಧೋರಣೆಗಳನ್ನು ಹೇಳಿಕೊಳ್ಳಲು ತೆರೆದಿರಬೇಕಾಗುತ್ತದೆ.

ಪಾತ್ರ ರಚನೆಯಲ್ಲೂ ಒಂದು ಸಮಸ್ಯೆ ಬರುತ್ತದೆ: ಒಂದು ಕಾದಂಬರಿಯಲ್ಲಿ ಪಡಪೋಶಿ ಜನರು ನಿಜ ಎನ್ನಿಸುವಷ್ಟು, ಉದಾತ್ತ ವ್ಯಕ್ತಿಗಳು, ಕ್ರಾಂತಿಕಾರರು, ಸಂತರು ನಿಜ ಎನ್ನಿಸುವುದಿಲ್ಲ. ಬಹಳ ಉದಾತ್ತನಾದವನನ್ನು, ಒಬ್ಬ ಸಂತನನ್ನು ಅಥವಾ ಏಕಾಗ್ರ ದೃಷ್ಟಿಯ ಪೂರ್ಣ ಕ್ರಾಂತಿಕಾರನನ್ನು ಸೃಷ್ಟಿಸುವುದು ಸಾಧ್ಯವೇ ಇಲ್ಲ. ವ್ಯಕ್ತಿ ಯಾವುದೇ ಕ್ರಿಯೆಗೆ ತೊಡಗಿದಾಗ ಅದರ ಎಲ್ಲ ಫಲಗಳನ್ನೂ ಉಣ್ಣಿಸಬೇಕಾಗುತ್ತದೆ. ಸಂತನೂ ಕ್ರಾಂತಿಕಾರನೂ ಕೂಡ ಕಾದಂಬರಿಯಲ್ಲಿ ಮನುಷ್ಯನೇ ಆಗಬೇಕು. ಇದರಿಂದ ಕಾದಂಬರಿ ಹೇಳುವಷ್ಟು ಸತ್ಯವನ್ನು ಬೇರಾವುದೂ ಹೇಳುವುದಿಲ್ಲ. ಅವನನ್ನು ಮನುಷ್ಯನನ್ನಾಗಿ ತೋರಿಸಿದ ಹೊರತು ಅದು ಕಾದಂಬರಿ ಪಾತ್ರವೇ ಆಗುವುದಿಲ್ಲ. ನಾಯಕನ ಅಗ್ರಪೂಜೆಗೆ ಸಲ್ಲುವಂತೆ ಕ್ರಾಂತಿಕಾರನನ್ನು ಸೃಷ್ಟಿಸಲು ಹೊರಟರೆ ಕೃತಿ ಸುಳ್ಳಾಗುತ್ತದೆ. ಸ್ವತಃ ಕ್ರಾಂತಿಕಾರನಿಗೆ ತನ್ನಲ್ಲಿ ಕ್ಷುಲ್ಲಕ ಮಾನವ ದೌರ್ಬಲ್ಯಗಳೆಂದು ಕಾಣುವ ಸಂಗತಿಗಳು ಸಾಹಿತಿಗೆ ಮುಖ್ಯವಾಗಿ ಕಾಣುವುದು ಸಾಧ್ಯ. ಆದ್ದರಿಂದ ಅಂಥವನನ್ನು ನಾವು ಅರಿಯಬಲ್ಲ ಸ್ಪಂದಿಸಬಲ್ಲ ಕ್ರಾಂತಿಕಾರಕ ಆಶಯಗಳನ್ನು, ಇತಿಹಾಸದಲ್ಲಿ ಅವು ವ್ಯಕ್ತವಾಗುವ ಪ್ರಮಾಣಕ್ಕಿಂತ ಕಡಿಮೆಯಾಗಿ ನೋಡಬೇಕಾದೀತು. ಅಂದರೆ ಸದ್ಯದ ವಾಸ್ತವಗಳನ್ನು ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಪಾತ್ರಗಳೇ ಕೃತಿಯಲ್ಲಿ ಹೆಚ್ಚು ನೈಜವಾಗಿಬಿಡುತ್ತವೆ. ಅಲ್ಲದೆ ಲೇಖಕನಾಗಿ ಒಬ್ಬ ಮನುಷ್ಯ ತನ್ನ ದೌರ್ಬಲ್ಯಗಳ ಅರಿವಿನ ಮೂಲಕ ತನ್ನ ಪಾತ್ರಗಳ ದೌರ್ಬಲ್ಯಗಳನ್ನು ತಿಳಿಯುವುದರಲ್ಲಿ ಹೆಚ್ಚು ಪಳಗಿರುತ್ತಾನೆ. ಅಲ್ಲದೆ ನಾವು ಗೌರವಿಸುವವರ ಪರಕಾಯ ಪ್ರವೇಶ ಮಾಡುವುದು ಕೂಡ ದುಸ್ತರ. ಆದ್ದರಿಂದ ನಮ್ಮ ಗೌರವಕ್ಕೆ ಬಾಧ್ಯರಾದಂಥವರು ಕಾದಂಬರಿಯಲ್ಲಿ ನಿಜವೆನ್ನಿಸುವ ಪಾತ್ರಗಳಾಗುವುದು ಬಹಳ ಕಮ್ಮಿ.

ನನ್ನ ಬದುಕಿನಲ್ಲಿ ಬದಲಾವಣೆ ಆಗದೆ ಏನೂ ಮಾಡಲು ನನಗೆ ಸಾಧ್ಯವಾಗದು ಎನ್ನಿಸುತ್ತದೆ. ಈ ಸಮಸ್ಯೆ ಆರ್ವೆಲ್‌ನಿಗೂ ಬಂತು. ಮೂವತ್ತರ ದಶಕದಲ್ಲಿ ಅವನು ತನ್ನ ವಿದ್ಯಾಭ್ಯಾಸದಿಂದ ತನ್ನ ವರ್ಗ ಚಿಂತಿಸುವ ಮನಸ್ಸಿನಿಂದ ತಪ್ಪಿಸಿಕೊಳ್ಳಬೇಕು ಎಂದು ಬರ್ಮಾದಲ್ಲಿ ಇನ್ಸ್ ಪೆಕ್ಟರು ಆಗಿದ್ದವನು ಕ್ರಾಂತಿ ಮಾಡಲು ಹೊರಟ. ಭಿಕ್ಷುಕನಾಗಿ ಅಲೆದು ಎಲ್ಲ ಅನುಭವವನ್ನೂ ನಮ್ಮಲ್ಲಿ ಮಾಡಿದವರು ಕಾರಂತರೊಬ್ಬರೇ. ಈಗ ನಮ್ಮಲ್ಲಿ ಕೆಲವರಿಗೆ ನನ್ನಂತೆ ನಲವತ್ತು ವರ್ಷಗಳಾಗುತ್ತ ಬಂದರೂ ನಮಗಿರುವುದು ಒಂದೇ ಒಂದು ವ್ಯಕ್ತಿತ್ವ; ಅದು ನಮ್ಮದು. ಬೇರಾವ ವ್ಯಕ್ತಿಗಳ ಪರಿಚಯವೂ ನಮಗಿದ್ದಂತೆ ಕಾಣಿಸುವುದಿಲ್ಲ. ಪರಮನಸ್ಸಿನ ಪ್ರವೇಶದ ಶಕ್ತಿಯನ್ನು ನಾವು ಕಳೆದುಕೊಳ್ಳುತ್ತ ಬರುತ್ತಿದ್ದೇವೆ. ತನ್ನ ವರ್ಗದ ಪ್ರಜ್ಞೆಯನ್ನೇ ಬದಲಾವಣೆ ಮಾಡಬೇಕು ಅಂತ ಪ್ರಯತ್ನ ಮಾಡಿದ ಆರ್ವೆಲ್, ಕ್ರಾಂತಿ ಸಾಧ್ಯವೇ ಎಂಬ ಪ್ರಶ್ನೆಗೆ ಕೊನೆಯಲ್ಲಿ ಬಂದವನೆಂಬುದು ಗಮನಾರ್ಹ. ಒಂದು ದೃಷ್ಟಿಯಿಂದ ಆತನಿಗೆ ಕ್ರಾಂತಿಕಾರಕತೆ ಸಾಧ್ಯವಾಯಿತು; ಇನ್ನೊಂದು ದೃಷ್ಟಿಯಲ್ಲಿ ಸಾಧ್ಯವಾಗಲೇ ಇಲ್ಲ. ಕೊನೆಗೂ ಆರ್ವೆಲ್‌ನಿಗೆ ತನ್ನ ವರ್ಗದ ಆಕರ್ಷಣೆಗಳನ್ನು ಕಳೆದುಕೊಳ್ಳಲಾಗಲಿಲ್ಲ. ಇದು ಈ ಶತಮಾನದ ಮಿತಿ ಅಂತ ಕಾಣುತ್ತದೆ. ಈ ಜಗತ್ತನ್ನು ಸಂಪೂರ್ಣವಾಗಿ ಏಕ್‌ ದಂ ಬದಲಾವಣೆ ಮಾಡುವುದು ಸಾಧ್ಯವೇ ಇಲ್ಲ ಅಂತ ತೊರುತ್ತದೆ. ಭಿಕ್ಷುಕನಾಗಿ ಅಲೆದ ಆರ್ವೆಲ್ ಮತ್ತೆ ಲಂಡನ್ನಿಗೆ ಬಂದು ತನ್ನ ಫ್ಲಾಟ್‌ನಲ್ಲಿ ತಾನು ಮದುವೆಯಾದ ಹುಡುಗಿಯೊಡನೆ ವಾಸಿಸಲು ತೊಡಗಿದಾಗ ಅವನ ನಿಜವಾದ ವಾಸ್ತವ ಯಾವುದಾಗಿತ್ತು? ಆದರೆ ಈ ಆರ್ವೆಲ್‌ನಂಥವರ ಪ್ರಯತ್ನವನ್ನು ನಮ್ಮ ಲೇಖಕರೂ ಮಾಡಬೇಕಾಗಿ ಬರಬಹುದು. ಆರ್ವೆಲ್ ಮಾಡಿದ ಪ್ರಯೋಗ ಅವಶ್ಯವಾದ ಪ್ರಯೋಗ. ಇಲ್ಲವಾದರೆ ಬರವಣಿಗೆಯಲ್ಲಿ ಹೇಳಿದ್ದನ್ನೇ ಹೇಳಬೇಕಾಗಿ ಬಂದು ಬರವಣಿಗೆಯೇ ಕಷ್ಟವಾಗಬಹುದು. ಆದರೆ ಈ ಪ್ರಯತ್ನ ಮಾಡಿದಾಗಲೂ ದಲಿತ ಪ್ಯಾಂಥರ್ಸ್‌ ಏನು ಬರೆಯುತ್ತಾರೋ ಅದನ್ನು ನಾನು ಬರೆಯುವುದಕ್ಕೆ ಸಾಧ್ಯವೆ? ಇಂಥ ಸಮಸ್ಯೆಗಳ ಚೌಕಟ್ಟಿನಲ್ಲಿ ನಾವು ಸಮಾಜ ಕ್ರಾಂತಿ ಮತ್ತು ಸಾಹಿತ್ಯದ ಬಗ್ಗೆ ವಿಚಾರ ಮಾಡಬೇಕು ಎಂದು ನನಗನ್ನಿಸುತ್ತದೆ.

೧೯೭೪ರಲ್ಲಿ ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನ ಬೆಳ್ಳಿಹಬ್ಬದ ಸಂದರ್ಭದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮಾಡಿದ ಭಾಷಣ.