ಕಾವ್ಯದಲ್ಲಿ ಆಳ

ಕವಿಯ ನಿಜವಾದ ಸತ್ವಪರೀಕ್ಷೆ ನಡೆಯುವುದು ಅವನು ಆತ್ಮೀಯವಾಗಿ ಬರೆಯಲು ಪ್ರಯತ್ನಿಸಿದಾಗ. ಮನರಂಜನೆಯ ಸಾಧನಗಳೂ ಆಗಬಹುದಾದ ಕಾವ್ಯರಚನಾ ಕೌಶಲಗಳೆಲ್ಲ ಕಿಂಚಿತ್ತು ತೋರಿಕೆಯಿಲ್ಲದಂತೆ ಗುಪ್ತವಾಗಿ ಜೀವಾನಾನುಭವವನ್ನು ಶೋಧಿಸಲು ದುಡಿಯುವಾಗ ಮಾತ್ರ ಕಾವ್ಯ ನೈತಿಕ ಆಯಾಮ ಪಡೆದು ಜೀವನ ಸಾರ್ಥಕತೆಯ ಹುಡುಕಾಟವಾಗುತ್ತದೆ.

‘ಇದು ನಿಜವಾಗಿಯೂ ಕನ್ನಡ ಕಾವ್ಯ ಪರಿಸರದಲ್ಲಿ ಹೊಸ ಮಾತು’ ಎನ್ನಿಸಿಕೊಳ್ಳುವಂಥ ಪದ್ಯಗಳನ್ನು ಸೃಷ್ಟಿಸಲು ಈಚಿನ ಕವಿಗಳೆಲ್ಲರೂ ಅತ್ಯಂತ ಏಕಾಗ್ರತೆಯಿಂದ ಪ್ರಯತ್ನಿಸುತ್ತಿದ್ದಾರೆ. ನಮ್ಮದೇ ಆದ ವಿಶಿಷ್ಟ ಪ್ರಜ್ಞೆಯೊಳಗೆ ನಾವು ಬದುಕುವುದು, ನೋಡುವುದು ಇದಕ್ಕೆ ಮಾತು ಕೊಡುವುದು ಎಂಥ ಕ್ರಿಯೆ ಎನ್ನುವ ಈ ಅರಿವಿನಿಂದ ಹುಟ್ಟುವ ಗೀಳುಗಳು; ನಮ್ಮದೇ ಆದ ಈ ಗೀತಗಳನ್ನು ನಮ್ಮದೇ ಆದ ರೀತಿಯಲ್ಲಿ ಬೆನ್ನು ಹತ್ತಿ ಅರ್ಥಪೂರ್ಣವಾಗಿಸುವ ಏಕಾಗ್ರತೆ; ಹೀಗೆ ಒಂದು ವಿಶಿಷ್ಟ ಪ್ರಜ್ಞೆಯಲ್ಲಿ ಊರಿದ್ದೂ ಅನುಭವ ಎಲ್ಲರಿಗೂ ಫಲಿಸುವಂತೆ ಮಾಡುವ ಮಾಂತ್ರಿಕತೆ; ಯಾವುದು ಮುಖ ಯಾವುದು ಭಾವ ಎಂದು ವಿಂಗಡಿಸಲಾರದಷ್ಟು ಅನ್ಯೋನ್ಯವಾಗಿ ಮಾತು ಅರ್ಥವೂ ಒಟ್ಟೊಟ್ಟಿಗೆ ಹೊಳೆಯುವ ಧ್ವನಿಸಿದ್ದಿ – ಇವುಗಳಿಗಾಗಿ ನಿಜವಾದ ಕವಿ ಯಾವತ್ತೂ ಪ್ರಯತ್ನಿಸುತ್ತಲೇ ಇರುತ್ತಾನೆ. ಅತ್ಯಂತ ಶ್ರೇಷ್ಟವಾದದ್ದನ್ನು ಸಾಹಿತ್ಯದಿಂದ ಅಪೇಕ್ಷಿಸುವ, ಅಲ್ಪ ಯಶಸ್ಸಿನಿಂದ ಕಿಂಚಿತ್ತೂ ತೃಪ್ತಿಪಡದ ಸಾಹಿತ್ಯ ಪರಿಸರದಲ್ಲಿ ನಾವೆಲ್ಲರೂ ಈಗ ಬರೆಯುತ್ತಿದ್ದೇವೆಂಬುದು, ಇಂಥ ಸವಾಲು ಸೃಷ್ಟಾತಕ ಬರಹಗಾರನಿಗೆ ಅತ್ಯವಶ್ಯವೆಂಬುದು ಗಮನಿಸಬೇಕಾದದ್ದು.

ಸುಳಿ: ಎನ್. ಎಸ್. ಲಕ್ಷೀನಾರಾಯಣಭಟ್ಟ
ಮುನ್ನುಡಿಯಿಂದ
೧೯೭೧

ಕಾದಂಬರಿಯಲ್ಲಿ ವಸ್ತು ಮತ್ತು ವೈಚಾರಿಕತೆ

ನಮ್ಮ ಲೇಖಕರು ನಿರಕ್ಷಕರೂ ದಲಿತರೂ ಆದವರ ಬಗ್ಗೆ ಬರೆಯುವಾಗ ಅವರನ್ನು ಅವಶ್ಯಕಿಂತ ಹೆಚ್ಚಾದ ವಿವರಗಳಲ್ಲಿ ವರ್ಣಿಸುವುದುಂಟು. ವಿದ್ಯಾವಂತರಾದ ಓದುಗ ವರ್ಗಕ್ಕೆ ಇಂಥ ಜನ ದೂರದವರೂ ಅಪರಿಚಿತರೂ ಆದ್ದರಿಂದ ವಸ್ತುವಿನ ನಾವೀನ್ಯದಿಂದಾಗಿ ಈ ಅತಿ ವಿವರಗಳು ಅಗತ್ಯ ಎಂದು ವಾದಿಸಬಹುದು. ಆದರೆ ನನಗನ್ನಿಸುವುದು ಹೀಗೆ: ವಿವರಗಳು ಹೆಚ್ಚಾದಂತೆ ಈ ದಲಿತಜನ ವಿವರಿಸಲ್ಪಡುವ ಕೇವಲ ವಸ್ತುಗಳೇ ಆಗಿಬಿಡುವ ಸಂಭವ ಹೆಚ್ಚು. ಅವರು ಕಾದಂಬರಿಯಲ್ಲಿ ನಮ್ಮಂಥವರ ಗ್ರಹಣಕ್ಕೆ ಮಾತ್ರ ಒಡ್ಡಿಕೊಂಡಿರುವ ವಸ್ತುಗಳಲ್ಲದೆ ಆ ಕಾದಂಬರಿಯನ್ನು ಓದಬಲ್ಲಂಥವರೂ ಆಗಿದ್ದ ಪಕ್ಷದಲ್ಲಿ ಈ ವಿವರಗಳು ಅವಹೇಳನವೆಂದೇ ಕಾಣಬಹುದಾದ ಸಂಭವವಿದೆ. ಓದುಬಲ್ಲ ಜನಾಂಗದವರೇ ಕಾದಂಬರಿ ಪಾತ್ರಗಳಾದಾಗ ಇಷ್ಟು ವಿವರಗಳಲ್ಲಿ ಅವರು ವರ್ಣಿತರಾಗುವುದಿಲ್ಲ ಎಂಬುದನ್ನು ನಾನು ಒತ್ತಿ ಹೇಳಬೇಕಾಗಿಲ್ಲ.

ಎರಡನೇಯದಾಗಿ, ಕಾದಂಬರಿಯಲ್ಲಿ ವೈಚಾರಿಕತೆಯ ಸ್ಥಾನದ ಬಗೆಗಿನ ಪ್ರಶ್ನೆ : ಒಂದೋ, ನಮಗೆ ಪರಿಚಿತವಾದ ಅನುಭವವನ್ನೆ ಕಾದಂಬರಿಯಲ್ಲಿನ ವೈಚಾರಿಕತೆ ಹೊಸದಾಗಿ ನೋಡುವಂತೆ ಮಾಡಬಹುದು. ಅಂದರೆ ನಾವು ನೋಡದಿದ್ದ ಅದರಲ್ಲಿನ ಹೊಸ ಮಗ್ಗಲುಗಳನ್ನು ಕಾಣಿಸಬಹುದು. ಅಂಥಲ್ಲಿ ವಸ್ತುವಿನ ನಾವಿನ್ಯದ ಲಾಭ ಪಡೆಯದೇನೇ ಲೇಖಕ ತನ್ನ ಸೂಕ್ಷ್ಮತೆಯಿಂದಲೇ ಓದುಗನ ಅರಿವನ್ನು ಹಿಗ್ಗಿಸಬೇಕಾಗುತ್ತದೆ. ಇದು ನನಗೆ ಪ್ರಿಯವಾದ್ದು; ಕಾದಂಬರಿಯ ಬೆಳವಣಿಗೆಯ ಭವಿಷ್ಯ, ಕಾದಂಬರಿ ಮಾಧ್ಯಮದ ಸಾಧ್ಯತೆಗಳನ್ನು ದುಡಿಸಿಕೊಳ್ಳಲೇಬೇಕಾದ ಒತ್ತಾಯ ಬರುವುದು ಹೀಗೆ ಲೇಖಕನ ಸೂಕ್ಷ್ಮತೆಗೇ ಹೆಚ್ಚು ಒತ್ತು ಬಿದ್ದಾಗ ಎಂದು ನಾನು ತಿಳಿದ್ದಿದ್ದೇನೆ. ಆದರೆ, ಇನ್ನೊಂದು ರೀತಿಯೂ ಸದ್ಯದ ಕನ್ನಡ ಸಾಹಿತ್ಯದಲ್ಲಿ ತುಂಬ ಮುಖ್ಯ. ಅದು, ನಮ್ಮ ಸದ್ಯದ ವೈಚಾರಿಕತೆಗೇ ಸವಾಲಾಗುವಂಥ ವಸ್ತುವನ್ನು – ಶಿಕ್ಷಿತ ಜನಾಂಗ ತನ್ನ ವರ್ಗದ ಮಿತಿಯಲ್ಲಿ ಕಾಣದೇ ಇರುವಂಥ ವಸ್ತುವನ್ನು – ಓದುಗರ ಎದುರು ಮಂಡಿಸುವುದು. ಆಗ ಅಂಥ ವಸ್ತುವೇ ನಾವು ನಮ್ಮ ವರ್ಗದ ಮಿತಿಯಲ್ಲಿ ತಿಳಿದುಕೊಂಡಿದ್ದ ಲೋಕದೃಷ್ಟಗೇ ಶಾಕ್ ಕೊಡುವ ಸಾಮರ್ಥ್ಯದ್ದಾಗಿರುತ್ತದೆ. ಇದನ್ನು ಪೂರ್ಣಚಂದ್ರ ತೇಜಸ್ವಿ, ದೇವನೂರು ಮಹಾದೇವರಂಥವರ ಬರವಣಿಗೆ ಕನ್ನಡದಲ್ಲಿ ಮೂಡಿಸುತ್ತಿದೆ.

ಕಾದಂಬರಿ ಮಾಧ್ಯಮದ ಬಗ್ಗೆ ಕುತೂಹಲವಿಲ್ಲದವನಿಗೆ ಸ್ವಲ್ಪದರಲ್ಲೆ ಹೆಚ್ಚನ್ನು ಹೇಳಬಲ್ಲ ಶಕ್ತಿ ಬೆಳೆಯಲಾರದು. ಯಾವನೇ ಆಗಲಿ ತಾನು ಕಂಡುಂಡ ಜೀವನವನ್ನು ಒಂದು ಪದ್ಯದಲ್ಲೋ ನಾಟಕದಲ್ಲೋ ಸಮರ್ಥವಾಗಿ ಮೂಡಿಸಲಾಗದಿದ್ದರೂ ಸಹ,ದಟ್ಟವಾಗಿ ಬರೆದುಕೊಂಡಲ್ಲಿ ಒಂದು ಕಾದಂಬರಿಯನ್ನಾಗಿಯಾದರೂ ಮಾಡಬಲ್ಲನೆಂಬುದರಲ್ಲಿ ಸತ್ಯವಿದೆ. ಆದರೆ ಅದು ಒಂದೇ ಕಾದಂಬರಿ ಅಷ್ಟೆ. ಹಲವನ್ನು ಅವನು ಬರೆಯಬೇಕಾದಲ್ಲಿ ಮಾಧ್ಯಮದ ಬಗ್ಗೆ ಆಸಕ್ತಿ, ಸೂಕ್ಷ್ಮಜ್ಞತೆ ಅತ್ಯಗತ್ಯ.

ನಿರ್ಗತಿಕರುಅಶೋಕ ಕುಲಕರ್ಣಿ
ಮುನ್ನುಡಿಯಿಂದ
: ೧೯೭೮

ಸಾಹಿತ್ಯದಲ್ಲಿ ಫ್ಯಾಂಟಸಿ

ಹೊರಗಿನ ರಾಜಕೀಯ ಸಾಂಸ್ಕ್ರತಿಕ ಜಗತ್ತಿನಲ್ಲಿ ಸ್ವಾತಂತ್ರ್ಯಗಳು ನಷ್ಟವಾಗುತ್ತ ಹೋದಂತೆ ಲೇಖಕನ ಸೃಜನಶೀಲತೆ ವಾಸ್ತವವನ್ನು ವರದಿಯಂತೆ ಪ್ರತಿಬಿಂಬಿಸುವುದಷ್ಟಕ್ಕೇ ಬದ್ಧವಾಗಬೇಕೆಂಬ ವಾದ ಈಚೀಚೆಗೆ ಹುಟ್ಟಿಕೊಂಡಿರುವುದನ್ನು ನಾವು ಕಾಣುತ್ತೇವೆ. ಮನಸ್ಸಿನ ಕ್ರಿಯೆಯಲ್ಲಾದರೂ ನಾವು ಲೇಖಕರು ಸ್ವತಂತ್ರರಾಗಿರುತ್ತೇವೆಂಬ ಧೈರ್ಯವಿಲ್ಲದಿದ್ದಲ್ಲಿ ನಮ್ಮ ನಾಗರೀಕತೆ ಸೊರಗುತ್ತದೆಯೆಂದು ತಿಳಿದವ ನಾನಾದ್ದರಿಂದ ಸಾಹಿತ್ಯದಲ್ಲಿ ಕಲ್ಪನೆಯ ಲಹರಿಗೆ ತಾತ್ವಿಕವಾದ ವಿರೋಧಗಳನ್ನು ಹುಟ್ಟಿಸುವ ಐಡಿಯಾಲಜಿಗಳನ್ನು ನಾನು ವಿರೋಧಿಸುತ್ತೇನೆ.

ಹೊರಗಿನ ಲೋಕದ ಸತ್ಯಗಳು ಗಾಢವಾಗಿ ತಟ್ಟುವುದು ಕೂಡ ಒಳಬಾಳಿನಲ್ಲಿ ಸೂಕ್ಷ್ಮವಾಗಿ ಇರುವವನಿಗೆ ತಾನೇ? ಪ್ರತಿಮಾ ಮಾರ್ಗದಲ್ಲಿ ಬರೆಯುವ ನವ್ಯ ಸಾಹಿತಿಗೆ ಒಳಗು – ಹೊರಗುಗಳು ಬೇರೆಯಲ್ಲ. ವಸ್ತು ಭಾವನೆಯನ್ನು ಪ್ರತಿನಿಧಿಸುವುದಿಲ್ಲ; ವಸ್ತುವಿನಲ್ಲೆ ಭಾವನೆ ಅಂತರ್ಗತವಾಗಿದ್ದು ಹೊಮ್ಮುತ್ತದೆ. ಅಂದರೆ, ನಾನು ಬರೆದ ಈ ಕಥೆ, ಈ ಘಟನೆ ಇಂಥದಕ್ಕೆ ರೂಪಕ ಎಂದು ಲೇಖಕನಿಗೆ ತಿಳಿದಾಗ ಹೂವಿನ ಭ್ರಮೆ ಹುಟ್ಟಿಸುವ ಕಾಗದದ ಹೂವಾಗುತ್ತೆ ಸಾಹಿತ್ಯ; ಬದಲಾಗಿ ಬರೆದಿದ್ದು ಮುಳ್ಳು ಎಲೆಗಂಧಗಳನ್ನು ಪಡೆದದ್ದು ಎಂದು ಅನ್ನಿಸಲು ಭಾವವನ್ನು ಪ್ರಕಾಶಿಸುವ, ನೈಜವೆನ್ನುವಂತೆ ನಮಗೆ ಜರುಗುವ ಸನ್ನಿವೇಶ, ಘಟನೆಗಳು ಕೃತಿಯಲ್ಲಿರಬೇಕಾಗುತ್ತದೆ.

ಫ್ಯಾಂಟಸಿ ಎನ್ನುವ ವಿಧಾನದ ಹಿಂದೆ ಈ ಕಾಲದ ಮುಖ್ಯ ಲೇಖಕರಾದ ಕಾಫ್ಕಾ, ಬೋರ್ಹೆಸ್‌ನಂಥವರಿದ್ದಾರೆ.ಬೋರ್ಹೆಸ್ ಹಿಂದೆ ಪೋ, ವ್ಯಾಲೆರಿ, ವೆಲ್ಯ್, ಚೆಸ್ಟರ‍್ಟನ್ ಇದ್ದಾರೆ. ಅಷ್ಟು ದೂರ ನಾವು ಹೋಗಬೇಕಿಲ್ಲ – ನಮ್ಮ ಪುರಾಣಗಳೇ ಇವೆಯಲ್ಲ!

ಅದ್ಭುತ ರಮ್ಯದ ಬರಹಗಾರ ಏಕಕಾಲದಲ್ಲಿ ಅತ್ಯಂತ ಗಾಢವಾದ ಕಾಲ್ಪನಿಕ ತಾತ್ವಿಕ ವಿಚಾರಗಳನ್ನು ಹುಟ್ಟಿಸಬಲ್ಲವನೂ ಹೀಗೆ ಹುಟ್ಟಿಸಿದ್ದನ್ನು ತಾನೇ ಮಗುವಿನ ಹಾಗೆ ನಂಬಬಲ್ಲವನೂ ಆಗಿರಬೇಕಾಗುತ್ತದೆ. ಅದ್ಭುತ ರಮ್ಯ ವಿಧಾನ ಯಶಸ್ವಿಯಾಗುವುದು ಓದುಗನ ಊಹೆಗೂ ಮೀರಿ ಅವು ಬೆಳೆಯುತ್ತ, ಹೊಸ ತಿರುವುಗಳನ್ನು ಹಠಾತ್ತನೆ ಪಡೆಯುತ್ತ ಹೋದಾಗ.

ಯಶಸ್ವಿಯಾದ ಫ್ಯಾಂಟಸಿ ವ್ಯಾಖ್ಯಾನಕಾರನಿಗೆ ಎಲ್ಲೆಲ್ಲೂ ಟಾಂಗು ಕೊಡುವಂತೆ ಜೊತೆಗೇ ತನ್ನ ತರ್ಕಸರಣಿಗೆ ಬದ್ಧವೆಂಬಂತೆ ಇರುತ್ತದೆ; ಮೊಂಡು ಹಠದ ಮಕ್ಕಳ ಆಟದಂತಿರುತ್ತದೆ.

ವಿಶಿಷ್ಟವಾದ ಜ್ಞಾನಭಂಡಾರ, ಎಲ್ಲೆಲ್ಲೋ ಓದಿಕೊಂಡು ಕುತೂಹಲದ ವಿಚಾರಪೂರ್ಣ ಮನಸ್ಸು, ಸ್ವಚ್ಛಂಧ ಲಹರಿಗೆ ತರ್ಕದ ಬಿಗಿಯಿದೆ ಎಂಬ ಭ್ರಮೆ ಹುಟ್ಟಿಸುವ ಕಲ್ಪಕ ಶಕ್ತಿ, ಅಮೂರ್ತಕ್ಕೆ ಘಾಟು ಬಣ್ಣಗಳನ್ನು ನೀಡಬಲ್ಲ ಕಾವ್ಯಶಕ್ತಿ, ವೈಜ್ಞಾನಿಕ ಚಿಂತನೆಯನ್ನುದಕ್ಕಿಸಿಕೊಂಡಮೇಲೆ ಅದರ ವಿಶ್ಲೇಷಕರ ಸಾಮರ್ಥ್ಯ ಸಾಲದೆಂಬ ಪ್ರಬುದ್ಧ ಅರಿವಿನಿಂದ ಹುಟ್ಟಿದ ಅತೃಪ್ತಿ ಎಲ್ಲವೂ ಕೂಡಿದಾಗ ಫ್ಯಾಂಟಸಿ, ನನಗೆ ಅದಕ್ಕಿಂತ ಹೆಚ್ಚು ಪ್ರಿಯವಾದ ರಾಜಮಾರ್ಗದ ವಾಸ್ತವದ ಬರವಣಿಗೆಯ ಅ‌ತ್ಯುತ್ತಮ ಕೃತಿಗಳಿಗೆ ಸರಿಸಾಟಿಯಾದೀತು. ಆದರೂ ಕೂಡ ಕಾಫ್ಕಾನಲ್ಲಿ ಟಾಲ್‌ಸ್ಟಾಯ್ ಇಲ್ಲ; ಆದರೆ ಟಾಲ್‌ಸ್ಟಾಯ್‌ನಲ್ಲಿ ಕಾಫ್ಕಾನೂ ಒಂದಂಶವಾಗಿ ಇದ್ದಾನೆ.

ಊರಿನಲ್ಲಿಪ್ರಸನ್ನ
ಮುನ್ನುಡಿ:೧೯೭೮ 

ಸಾಹಿತ್ಯ ಮತ್ತು ಸಮಾಜ

ನಾನು ತೀರ್ಥಹಳ್ಳಿಯ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನನ್ನ ಮನಸ್ಸಿಗೆ ಬೆಳವಣಿಗೆಗೆ ಅಗತ್ಯವಾದ ಪೋಷಣೆಗಳಲ್ಲ ನನ್ನ ಪರಿಸರದಲ್ಲೇ ನನಗೆ ಸಿಗುತ್ತಿದ್ದವು. ಇದು ಕುವೆಂಪು ಓದಿ ಬೆಳೆದ, ಅಂಥವರನ್ನು ಸೃಷ್ಟಿಸಬಲ್ಲ ಊರೆಂಬ ಅಭಿಮಾನ ನಮಗಿತ್ತು. ನಮ್ಮ ಶಾಲೆಗೆ ಬಂದು ತಮ್ಮ ಕವನಗಳನ್ನು ಓದಿ ಬೇಂದ್ರೆ ನಮ್ಮನ್ನು ಬೆರಗುಗೊಳಿಸಿದ್ದರು. ಗತಿಸಿದ ಗೆಳೆಯ ಕೃಷ್ಣಮೂರ್ತಿ ಭಟ್ಟ ಆಗಿನ ಕಾಲದ ತರುಣ ಕವಿಗಳಾದ ಗೋಪಾಲಕೃಷ್ಣ ಅಡಿಗರ ಕವನಗಳನ್ನೂ ಬೇಂದ್ರೆಯವರ ಕವನಗಳನ್ನೂ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಓದುವ ಶಾಲೆಯಲ್ಲೇ ನಮಗೆ ಸಾಹಿತ್ಯದಲ್ಲಿ ಗಂಭೀರವಾದ ಆಸಕ್ತಿ ಬೆಳೆಸಬಲ್ಲವರಾಗಿದ್ದ ಪಂಡಿತ ನರಸಿಂಹ ಶಾಸ್ತ್ರಿಗಳಿದ್ದರು. ಈಗಲೂ ಸಾಹಿತ್ಯ ಸಂಸ್ಕೃತಿ ರಾಜಕೀಯ ಕ್ಷೇತ್ರಗಳಲ್ಲಿ ವಿಶಿಷ್ಟ ವ್ಯಕ್ತಿಗಳಾಗಿರುವ ಗಂಗಾಧರ, ಶಂಕರನಾರಾಯಣ ಭಟ್ಟ, ಹಾ. ಮಾ. ನಾಯಕರಂಥವರು ನಮ್ಮ ಜೊತೆಯಲ್ಲಿ ಓದುತ್ತಿದ್ದರು. ಶಾಲೆಯ ಹೊರಗೆ ಕ್ರಾಂತಿಯ ಹೊಸ ವಿಚಾರಗಳನ್ನು ಮಾತಾಡುತ್ತಿದ್ದ ಶಾಂತವೇರಿ ಗೋಪಾಲಗೌಡರು ಮತ್ತು ಅದರ ಸಂಗಡಿಗರಾದ ಪುರುಷೋತ್ತಮರಿದ್ದರು. ಸ್ವಾತಂತ್ರ್ಯಹೋರಾಟದಲ್ಲಿ ಲೆಜೆಂಡಾಗಿದ್ದ ಕಾಳಿಂಗೈನ ರಾಘವೇಂದ್ರರಾಯರು, ಸದಾಶಿವರಾಯರು, ಶ್ಯಾಮ ಐತಾಳರಂಥವರು ಬದುಕುತ್ತಿದ್ದ ನಿಷ್ಠುರ ನಿಲುವಿನ ಜೀವನ ಕ್ರಮ ಕಣ್ಣೆದುರೇ ಇತ್ತು. ನನ್ನ ಪಾಲಿಗೆ ಹೇಳುವುದಾದರೆ ನಾನು ಬದುಕುತ್ತಿದ್ದ ಮಠದ ಆವರಣದಲ್ಲಿ ಮೂರು ಮತಗಳ ಆಚಾರ್ಯರ ವಾದಗಳು ನನ್ನ ಕಿವಿಯ ಮೇಲೆ ಬಿದ್ದರೆ, ಚಾರ್ಲಿ ಡಾಕ್ಟರರ ಶಾಪಿನಲ್ಲಿ ಜಾರ್ಜ್ ಬರ್ನಾರ್ಡ್‌ಶಾರ ನಾಟಕಗಳ ಬಗ್ಗೆ ನನ್ನಲ್ಲಿ ಕುತೂಹಲ ಹುಟ್ಟಿಸಿದ ಸಿನ್ಹಾ ಕೂತಿರುತ್ತಿದ್ದರು. ಹೀಗೆ ಒಂದು ಸಣ್ಣ ಊರಿನಲ್ಲಿ ಇವತ್ತಿಗೂ ನನ್ನ ಕಾಳಜಿಗಳಾಗಿ ಉಳಿದಿರುವ ವಿಚಾರಗಳೆಲ್ಲ ನನಗೆ ದಕ್ಕಿದವು.

ಈಗಲೂ ತೀರ್ಥಹಳ್ಳಿಯ ಸಾಂಸ್ಕ್ರತಿಕ ರಾಜಕೀಯ ಜೀವನ ಬರಡಾಗಿಲ್ಲವೆಂದು ನನಗೆ ಅನ್ನಿಸುತ್ತದೆ. ಎಂ. ಎನ್. ಜೈಪ್ರಕಾಶರ ಸುತ್ತಮುತ್ತ ನನಗೆ ಪರಿಚಿತರಾಗಿದ್ದ ಕೆಲವು ಹಳಬರ ಜೊತೆ ಚುರುಕಾಗಿ ಯೋಚಿಸಬಲ್ಲ, ಹೊಸದಕ್ಕೆ ಸ್ಪಂದಿಸಬಲ್ಲ ಹಲವು ಹೊಸಬರಿದ್ದಾರೆ. ರಾಘವ ಜವಳಿ, ಸೀತಾರಾಮಾಚಾರ್ಯರಂಥ ತರುಣರು ಸಾಹಿತ್ಯದ ಬೆಳವಣಿಗೆಗೆ ಅಗತ್ಯವಾದ ಪರಿಸರವನ್ನು ತೀರ್ಥಹಳ್ಳಿಯಲ್ಲಿ ಜೀವಂತವಾಗಿ ಇಟ್ಟಿದ್ದಾರೆ.

ಗುಡ್ಡಕಾಡುಗಳಿಂದ ಆವೃತವಾದ ಮಲೆನಾಡಿನ ಈ ಸಣ್ಣ ಊರು ಅಂತರ್ಮುಖಿಯ ಒಳನೋಟವನ್ನು ಸದ್ದಿಲ್ಲದಂತೆ ಗುಪ್ತವಾಗಿ ಮೊಳೆಸಬಲ್ಲದು. ಜೊತೆಗೇ ರಾಜಕೀಯದಲ್ಲಿ ಕಡಿದಾಳ ಮಂಜಪ್ಪಗೌಡ, ಗತಿಸಿದ ಶಾಂತವೇರಿ ಗೋಪಾಲಗೌಡ, ಕೋಣಂದೂರು ಲಿಂಗಪ್ಪನಂಥರನ್ನು ಆಯ್ಕೆ ಮಾಡಬಲ್ಲ ಅನನ್ಯವಾದ ಪ್ರಗತಿಶೀಲತೆಯನ್ನೂ ಈ ಊರಿನ ರೈತ ಜನ ಈಚೀಚಿನ ತನಕವೂ ಉಳಿಸಿಕೊಂಡಿದ್ದರು. ಊರಿನ ಸಹಜಗುಣವೇ ಹೀಗಿರುವಾಗ ಜೈಪ್ರಕಾಶರಂಥ ತರುಣ ಕವಿಗಳಲ್ಲೂ ಒಳನೋಟದ ಚಿಂತನಪರತೆ ಮತ್ತು ಸಾಮಾಜಿಕ ಕಳಕಳಿಗಳು ಅನ್ಯೋನ್ಯವಾಗಿ ಬೆಸೆಯುವ ಹವಣಿಕೆಯಲ್ಲಿದ್ದರೆ ಆಶ್ಚರ್ಯಪಡಬೇಕಿಲ್ಲ.

ಈ ಎರಡು ಒಂದಕ್ಕೊಂದು ಹೊರತಾದವು ಎಂದು ನಮ್ಮ ಮೈಸೂರು ಬೆಂಗಳೂರಿನ ಕೆಲವು ವಿಮರ್ಶಕರು ತಿಳಿದಿರುವುದು ಕೂಡಾ ಹಾಸ್ಯಾಸ್ಪದವಲ್ಲವೆ? ನಾವು ಅತ್ಯಂತ ಖಾಸಗಿ ಎಂದು ತಿಳಿಯುವುದರಲ್ಲೂ ಸಾಮಾಜಿಕ ಸತ್ಯಗಳು ಅಡಗಿರುತ್ತವೆ. ಅಂತಯೇ ಸಾಮಾಜಿಕ ಇತ್ಯಾದಿಗಳಾಗಿ ಮಾತ್ರ ಹೊರನೋಟಕ್ಕೆ ಕಾಣುವಂತವೂ ನಮ್ಮ ಪ್ರೇಮ ಕಾಮಗಳ ಜೀವನದಲ್ಲಿ ನಮ್ಮ ದೈವಿಕ ಕನಸುಗಳಲ್ಲಿ ಕಾಣ್ಯೆಗಳಲ್ಲಿ ಅಡಚಣೆಗಳಾಗಿಯೋ ಪೋಷಕವಾಗಿಯೋ ಕೆಲಸ ಮಾಡುತ್ತವೆ. ಬಿಳಲುಗಳಂತೆ ಈಗ ಕಾಣುವಂಥವು ನಾಳಿನ ಬೇರುಗಳಾಗಿ ನೆಲಕ್ಕೆ ಊರುತ್ತವೆ.

ನಾವು ಅರಿಯದೇ ಇದ್ದ ಇಂಥ ಸಂಬಂಧಗಳನ್ನು ಗುರುತಿಸಿ ನಮಗೆ ಕಾಣಿಸುವ ಶಕ್ತಿಯುಳ್ಳದ್ದೇ ಉತ್ತಮ ಸಾಹಿತ್ಯವಾಗುತ್ತದೆ. ಈ ಸಂಬಂಧಗಳನ್ನು ನಮ್ಮ ಅರಿವಿಗೆ ದಕ್ಕಿಸುವುದೇ ರೂಪಕಗಳ ಮುಖ್ಯ ಗುರಿಯಲ್ಲವೇ?ಚೂರು ಹೊರವಿವರದಲ್ಲಿ ಕೆಲವೇ ಮಾತುಗಳಲ್ಲಿ ತಿರುಳಾದ ಪತ್ಯಗಳನ್ನು ಧ್ವನಿಸಿ ಕಾಣಿಸಬಲ್ಲ ಕಾವ್ಯಪ್ರಕಾರ ಈ ಕಾರಣಕ್ಕಾಗಿಯೇ ಕಥೆ ಕಾದಂಬರಿಕಾರರಿಗೆ ಮಾದರಿಗಳಾಗುವುದು.

ಸಾಮಾಜಿಕ ಅನ್ಯಾಯಗಳಲ್ಲಿ ಓದುಗನಲ್ಲಿ ಆಕ್ರೋಶ ಹುಟ್ಟಿಸಬಲ್ಲ ವಸ್ತುಗಳಾದರೂ ಸಾಲದು ಅಥವಾ ಆಕರ್ಷಕ ವಸ್ತುಗಳಾದರು ಸಾಲದು. ಈ ಅನ್ಯಾಯಗಳ ಮೂಲ ತಿಳಿಯುವ, ಅವುಗಳನ್ನು ತೊಡೆದುಹಾಕುವ ಹವಣಿಕೆಯಲ್ಲಿರುವ ಕ್ರಾಂತಿಕಾರಿ ರಾಜಕಾರಣಿ ಹೇಗೆ ಅಸಾಮಾನ್ಯ ಉಪಾಯಗಾರನೂ ಕಾಣ್ಕೆಯವನೂ ಕ್ರಿಯೆ ಮತ್ತು ವಿಚಾರಗಳ ಅನ್ಯೋನ್ಯತೆಯಲ್ಲಿ ಸ್ಪಷ್ಟವಾಗುತ್ತ ಗೆಲ್ಲುತ್ತ ಹೋಗುವವನೂ ಆಗಬೇಕಾಗುತ್ತದೋ ಹಾಗಯೇ ಅವುಗಳ ಬಗ್ಗೆ ಬರೆಯುವ ಸಾಹಿತಿ ಬರೀ ಆಕ್ರೋಶ ಹುಟ್ಟಿಸುವುದರಲ್ಲಿ ಮಾತ್ರ ತೃಪ್ತನಾಗದೆ, ಓದುಗನ ಬುದ್ಧಿ ಹೃದಯಗಳನ್ನು ಏಕ ಕಾಲದಲ್ಲಿ ತೊಡಗಿಸಬಲ್ಲ – ಅಂದರೆ ಅವನಿಗೆ ಸುಲಭವಾದ ತಣಿವು ಸಿಗದಂತೆ ತೊಡಗಿಸಬಲ್ಲ ಕಲಾಕಾರನಾಗಬೇಕಾಗುತ್ತದೆ. ಆಕ್ರೋಶ ಹುಟ್ಟಿಸಿ ಓದುಗನನ್ನು ತಣಿಸುವ ಕ್ರಮಗಳು ತೀವ್ರವಾಗಿ ಈ ಬಗ್ಗೆ ತಲೆ ಕೆಡಿಸಿಕೊಂಡ ಕವಿಗೆ ಸುಲಭವೆನ್ನಿಸಿ ಅವನು ಅತೃಪ್ತನಾಗುತ್ತಾನೆ. ನಮ್ಮ ಅರಿವನ್ನು ಇನ್ನೂ ಎತ್ತರಕ್ಕೆ ಒಯ್ಯಬೇಕೆಂಬುದು  ತಾನೇ ಎಲ್ಲ ರೀತಿಯ ಸಾಹಿತ್ಯದ ಹಂಚಿಕೆ? ಇಂಥ ಅರಿವು ಇಲ್ಲದ್ದರಿಂದ ತಾನೆ ನಮ್ಮ ದೀನ ದಲಿತ ಜನ ಇಂದಿರಾಗಾಂಧಿ, ಡಾಂಗೆಯಂಥವರ ಕಪಟನಾಟಕಕ್ಕೆ ಬಲಿಯಾದ್ದು? ಬ್ರೆಕ್ಟ್‌ಈ ಕಾರಣಕ್ಕಾಗಿಯೇ ಪ್ರೇಕ್ಷಕರಿಗೆ ಸಮಾಧಾನ ಕೊಡದಂತೆ ಬರೆಯುವುದು.

ಸಾಂಪ್ರತಎಂ. ಎನ್. ಜೈಪ್ರಕಾಶ
ಮುನ್ನುಡಿ: ೧೯೭೮

ವಜ್ರಮಹೋತ್ಸವ  ಆಚರಿಸಿದಾಗ ಷರಷತ್ತನ್ನು ಕುರಿತು

ತಾನು ಒಳ್ಳೆಯ ಲೇಖಕನಾಗಬೇಕೆಂದು ಕಿರಿಯ ಬರಹಗಾರನೊಬ್ಬ ಕಾದಂಬರಿಕಾರನಾದ ಹೆನ್ರಿ ಜೇಮ್ಸ್‌ಗೆ ಹೇಳಿಕೊಂಡಾಗ ಆತನ ಉತ್ತರ ಹೀಗಿತ್ತು: ‘ನಾನು ಹೇಳುವ ಈ ಮಾತನ್ನು ಮನದಟ್ಟು ಮಾಡಿಕೊ. ನಿನ್ನ ಬಾವುಟದ ಮೇಲೆ ನೀನು ಬರೆದುಕೊಳ್ಳಬೇಕಾದ ಮುಖ್ಯ ಶಬ್ದ ಇದು: ‘ಏಕಾಂಗಿತನ’. ಸಂಘ – ಸಂಸ್ಥೆಗಳನ್ನು ಆಶ್ರಯಿಸಿ ಯಾರು ಉತ್ತಮ ಬರಹಗಾರ ಆಗಲಾರರು. ಈ ದೃಷ್ಟಿಯಿಂದ ಷರಿಷತ್ತಿನಂಥ ಸಂಸ್ಥೆಗಳ ಬಗ್ಗೆ – ಅವು ಎಷ್ಟೇ ಚೆನ್ನಾಗಿ ಕೆಲಸ ಮಾಡುತ್ತಿರಲಿ – ಸೃಜನಶೀಲ ಬರಹಗಾರ ಉದಾಶೀನನಾಗಿರುತ್ತಾನೆ.

ಏಕಾಂಗಿತನದಲ್ಲಿ ಸೃಷ್ಟಿಕಾರ್ಯ ನಡೆಯುತ್ತದೆ. ಆದರೆ ಸಮಾಜ ಒಳ್ಳೆಯ ಸಾಹಿತ್ಯವನ್ನು ಸ್ಷೀಕರಿಸಬೇಕು, ತಾರತಮ್ಯ ವಿವೇಚನೆ ಬೆಳೆಸಿಕೊಳ್ಳಬೇಕು ಎಂಬ ಪ್ರಜ್ಞೆ ಲೇಖಕನನ್ನೂ ಸಾಮಾಜಿಕನನ್ನಾಗಿ ಮಾಡುತ್ತದೆ. ಈ ವಿಮರ್ಶೆ ಹುಟ್ಟುವುದು ಭಿನ್ನಾಭಿಪ್ರಾಯಗಳ ಘರ್ಷಣೆಯಲ್ಲಿ, ಕಟ್ಟಡಗಳ ನಿರ್ಮಾಣ, ಧನ ಸಂಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳು ಸರ್ವರಿಗೂ ಸಮ್ಮತವಾದ ರೀತಿಯಲ್ಲಿ ನೆಡೆದುಕೊಳ್ಳಬೇಕಾಗಿದ್ದರಿಂದ ಇಂಥ ಕೆಲಸದಲ್ಲಿ ಅನಾಸಕ್ತವಾಗಿರುತ್ತದೆ. ಹೊಸ ಮಾತು, ಹೊಸ ಶೈಲಿ, ಹೊಸ ರೂಪ, ಹೊಸ ವಸ್ತುಗಳ ಮಂಥನದಲ್ಲಿ ತೊಡಗಿರುವ ವಿಮರ್ಶಕರಿಗೆ ಸಾಹಿತ್ಯ ಪರಿಷತ್ತು ಏನು ಸಹಾಯ ಮಾಡಲು ಸಾಧ್ಯ? ಪ್ರತಿ ಕಾಲದಲ್ಲೂ ಅಪ್ರಿಯವಾಗಿ ನಡೆದುಕೊಳ್ಳಬಲ್ಲ ಧೈರ್ಯವಿರುವ ಜನ ಮಾತ್ರ ಸಾಹಿತ್ಯವನ್ನು ಜೀವಂತವಾಗಿರಿಸಿ ಕೊಳ್ಳುತ್ತಾರೆ. ಜನಪ್ರೀಯತೆಯೇ ಮುಖ್ಯೋದ್ದೇಶವಾಗಿ ಉಳ್ಳ ಜನ ಇಂಥ ಕೆಲಸದ ಮೂಕ ಪ್ರೇಕ್ಷಕರು ಮಾತ್ರ ಆಗಿರುವುದು ಸಾಧ್ಯ.

ಏಕಾಂಗಿತನದಲ್ಲಿ ನಡೆಯಬೇಕಾದ ಸೃಷ್ಟಿಕಾರ್ಯಕ್ಕಾಗಲೀ ಸಾಮಾಜಿಕವಾಗಿ ನಡೆಯಬೇಕಾದ ವಿಮರ್ಶೆಗಾಗಲೀ ಷರಿಷತ್ತು ವೇದಿಕೆಯಾಗಲಾರದು ಎಂದ ಮೇಲೆ ಬೇರೆ ಇನ್ನೇನು ಅದು ಮಾಡಲು ಸಾಧ್ಯ? ಉತ್ಸಾಹಶೀಲರಾದ ಷರಿಷತ್ತಿನ ಅಧ್ಯಕ್ಷ ಶ್ರೀ ಜಿ. ನಾರಾಯಣರು ನಿಘಂಟು ಇತ್ಯಾದಿ ಕೆಲಸಗಳನ್ನು ಸಾಧ್ಯವಿದ್ದಷ್ಟು ದಕ್ಷತೆಯಿಂದ ಮಾಡುತ್ತಿಲ್ಲವೆಂದಲ್ಲ. ಆದರೆ ಅವರು ನಮ್ಮ ರಾಜಕಾರಣಿಗಳನ್ನು ಇದಕ್ಕಾಗಿ ಅನುಸರಿಸಬೇಕಾದ್ದನ್ನು ಗಮನಿಸಿದಾಗ ಬೇಸರವಾಗುತ್ತದೆ. ಆಗಬೇಕಾದ ಕೆಲಸಕ್ಕೆ ಇಷ್ಟೆಲ್ಲ ರಾಜಕಾರಣ ಪ್ರಜಾತಂತ್ರದಲ್ಲೂ ಅಗತ್ಯವೆ? ಶ್ರೀ ಜಿ. ನಾರಾಯಣರು ಹೆಚ್ಚು ಸ್ವತಂತ್ರರಾಗಬೇಕೆಂದು ಲೇಖಕರು ಈ ವಜ್ರಮಹೋತ್ಸವದ ಸಂದರ್ಭದಲ್ಲಿ ಒತ್ತಾಯಪಡಿಸಬೇಕು. ಅದು ಅವರಿಗೂ ಒಳ್ಳೆಯದು, ಷರಿಷತ್ತಿಗೂ ಒಳ್ಳೆಯದು.

ಮಹಾರಾಷ್ಟ್ರದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸರ್ವಾಧಿಕಾರದ ವಿರುದ್ಧ ಶ್ರೀಮತಿ ದುರ್ಗಾ ಭಾಗವತ ಅಧ್ಯಕ್ಷ ಸ್ಥಾನದಿಂದ ಆಡಿದ ಮಾತುಗಳನ್ನು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮ ಸಂಸ್ಥೆಗಳಿಂದ ಆಡುವುದು ಸಾಧ್ಯವಾಗುದಿದ್ದುದು ಶೋಚನೀಯ. ನನ್ನ ಮಾತುಗಳಿಗೆ ಈ ಹಿನ್ನಲೆ ಇದೆ.

ಸಂಯುಕ್ತ ಕರ್ನಾಟಕ
ವಿಶೇಷ ಪುರವಣಿ: ೨೪..೧೯೭೭

ಸ್ವಾತಂತ್ರ್ಯಮತ್ತು ಸಾಹಿತ್ಯ

ಸಾಹಿತ್ಯದ ಅಂತರಂಗ‌ಲ್ಲೇ ಬಂಡಾಯವಿದೆ. ಬಂಡಾಯದ ಮೂಲಕ ಸಾಹಿತ್ಯ ಜೀವನದ ಚುರುಕನ್ನು ವರ್ತಮಾನದಲ್ಲಿ ಕಾಯುತ್ತದೆ; ಸಾಯುತ್ತಿರುವ ಭೂತದಲ್ಲಿಂದ ಜೀವಂತವಾದ್ದನ್ನು ರಕ್ಷಿಸಿ ವರ್ತಮಾನದಲ್ಲಿ ದುಡಿಸಿಕೊಳ್ಳುತ್ತದೆ; ಈ ಪ್ರಸ್ತುತವಾದ್ದು ಭವಿಷ್ಯದಲ್ಲಿ ಚಿಗುರೊಡೆಯುತ್ತದೆ. ಹೀಗೆ ಮನುಷ್ಯನ ಸ್ಮೃತಿಯ ಸಾತತ್ಯವನ್ನು ಕಾದು ಮನುಷ್ಯನನ್ನು ಮಾನವೀಯವಾಗಿ ಉಳಿಸುತ್ತದೆ. ಸಾಹಿತ್ಯದ ಜೀವಾಳವಾಗಿರುವ ನಂಬಿಕೆಯಿದು; ಮನಸ್ಸು ಸ್ವತಂತ್ರವಾದದ್ದು. ಯಾವ ಬಲಾತ್ಕಾರದಿಂದಲೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಹೊಸ ವಿಚಾರಗಳಿಗೆ, ಆದರ್ಶಗಳಿಗೆ ಅಪ್ರಿಯವಾದರೂ ಶ್ರೇಯಸ್ಸಿನ ಮಾರ್ಗಕ್ಕೆ ಮನಸ್ಸನ್ನು ಒಲಿಸಲಿರುವ, ಆಳವಾದ ಬದಲಾವಣೆಗಳನ್ನು ಮಾಡಲಿರುವ ಏಕೈಕ ಮಾರ್ಗವೆಂದರೆ ಸಾಹಿತ್ಯದ್ದು. ಆದ್ದರಿಂದ ಸಾಹಿತಿ ಮೂಲಭೂತವಾಗಿ ಸ್ವಾತಂತ್ರ್ಯಕ್ಕೆ ಬದ್ಧನಾದವನು; ಪ್ರಜಾತಂತ್ರವಾದಿಯಾದವನು, ತಾನು ಸ್ವತಂತ್ರನಾಗಿ ರಚಿಸಿದ್ದನ್ನು ತನ್ನ ಓದುಗನ ಸ್ವತಂತ್ರ ಒಪ್ಪಿಗೆಗೆ ನಿವೇದಿಸಿಕೊಳ್ಳುವವನು. ಆದ್ದರಿಂದ ನಿಜವಾದ ಬರವಣಿಗೆ ಸ್ವಾತಂತ್ರ್ಯ ಸ್ಥಿತಿಯಲ್ಲಿ ನಡೆಯುವಂಥದ್ದು. ಓದುವ ಪ್ರಕ್ರಿಯೆ ಕೂಡ ಸ್ವಾತಂತ್ರ್ಯ ಸ್ಥಿತಿಯಲ್ಲಿ ನೆರವೇರುವಂಥದ್ದು.

‘ಇದನ್ನು ಮಾತ್ರ ಓದು, ಇದನ್ನು ಮಾತ್ರ ಬರಿ, ಇದನ್ನು ಮಾತ್ರ ಯೋಚಿಸು’ ಎನ್ನುವ ಕಾಲ ಬಂದಾಗ ಸಾಹಿತ್ಯ ಸಾಯುತ್ತದೆ. ಅಥವಾ ಭೂಗತವಾಗಿ ಮೆಲ್ಲಗೆ ಉಸಿರಾಡುತ್ತಾ ಸಮಯ ಕಾದು, ಈಗ ರಷ್ಯಾದಲ್ಲಿ ಆಗುತ್ತಿರುವಂತೆಯೇ ಸೋಲ್‌‌‌‌ಜಿ ನಿಟ್ಸಿನ್‌ರಂಥವರ ಮುಖಾಂತರ ಬಂಡಾಯದಲ್ಲಿ ಬುಸುಗುಟ್ಟುತ್ತದೆ. ಅಥವಾ ಐಸೆನ್‌‌‌‌‌‌‌‌ಸ್ಟ್ಯೆನ ಚಿತ್ರಗಳಲ್ಲಿರುವಂತೆ ಸ್ಟಾಲಿನ್ ಯುಗದಲ್ಲೂ ರೂಪಕಗಳಾಗಿ ನಿಜ ಹೇಳುತ್ತವೆ.

ಜಾಯ್ಸ್‌ಹೇಳಿ: ಎಕ್ಸೈಲ್, ಸೈಲೆನ್ಸ್, ಕನ್ನಿಂಗ್ – ಈ ಮೂರು ಲೇಖಕ ತನ್ನ ಪ್ರಾಮಾಣಿಕತೆ ಕಾದುಕೊಳ್ಳಲು ಇರುವ ಸೂತ್ರಗಳು. ಸುಳ್ಳು ಹೇಳುವುದರ ಬದಲು ಮೌನ ವಾಸಿ: ಯಾಕೆಂದರೆ ಮೌನವು ಒಂದು ಬಗೆಯ ಸಬೋಟಾಜ್‌. ನಿಜವಾದ ಸಾಹಿತ್ಯದಲ್ಲಿ ಮಾತಿಗೂ ಮಿತಿಲಾಗಿ ಮೌನವಿರುತ್ತದೆ. ನೇರವಾಗಿ ಬರೆಯಲಾಗದಿದ್ದರೆ ರೂಪಕಗಳಲ್ಲಿ ಮುಚ್ಚಿ ಹೇಳಬಲ್ಲ ಉಪಾಯವೇ ಜಾಯ್ಸ್ ಹೇಳುವ ಕನ್ನಿಂಗ್. ಸಾಹಿತಿ ಎಲ್ಲ ಕಾಲದಲ್ಲೂ ಎಲ್ಲ ಸಮಾಜಕ್ಕೂ ಅವಶ್ಯವಾದ ಗೆರಿಲ್ಲಾ. ಅಪ್ರಿಯವಾದ್ದನ್ನು ಕಾಣಿಸಬಲ್ಲವನು ಸಾಹಿತಿ. ಸಾಹಿತ್ಯವೆಂದರೆ ಸಬ್‌ವರ್‌ಶನ್.

ಭಾಷೆಯ ಮೂಲಕ ನಾವು ನಗಬಹುದು, ಟೀಕಿಸಬಹುದು, ವಕ್ರವಾಗಿ ನಿಜ ಹೇಳಬಹುದು. ಸತ್ಯವನ್ನು ಪೋಷಿಸಲು ನಮಗಿರುವ ಮಾರ್ಗಗಳು ಹಲವಾರು. ರಾಜಕಾರಣಿಗಳು ತಮ್ಮ ಜೀವಿತ ಕಾಲದಲ್ಲಿ ಎಷ್ಟೇ ಬೀಗಲಿ ಅವರನ್ನು ಮುಂದಿನ ಜನಾಂಗಕ್ಕೆ ಮೆರೆಯುತ್ತದೆ; ಆದರೆ ನಮ್ಮನ್ನು ಓದುತ್ತದೆ. ಯಾಕೆಂದರೆ ನಾವು ಹೇಳುವುದು ಎಷ್ಟು ಸಾರ್ವಜನಿಕವೋ ಅಷ್ಟೇ ವೈಯಕ್ತಕ. ಅಂತರಂಗದಲ್ಲಿ ಮೌನವಾಗಿ ಉರಿಯುವ ಸತ್ಯ, ಒಂದು ಅಂತರಂಗದಿಂದ ಇನ್ನೊಂದಕ್ಕೆ ದಾಟುವ ನಿಜ.

ತುರ್ತುಪರಿಸ್ಥಿತಿಯಿದ್ದಾಗ ಭೂಗತ ಪತ್ರಿಕೆಗೆ ಬರೆದದ್ದು: ೧೯೭೬

ಪ್ರಶ್ನೋತ್ತರ

೧. ಪ್ರತಿ ಸಾಹಿತಿಯೂ ಇನ್ನು ಮುಂದೆ ಸೋಷಿಯಲ್ ರೆಲವೆನ್ಸ್‌ ಇರುವುದನ್ನು ಮಾತ್ರ ಬರೆಯಬೇಕು ಎನ್ನುವ ಮಾತು ಕೇಳಿಬರುತ್ತಿದೆ. ನಿಮ್ಮ ಅಭಿಪ್ರಾಯ?

ಒಳ್ಳೆಯ ಸಾಹಿತ್ಯ ಸಾಮಾಜಿಕವಾಗಿ ಕೂಡ ಅರ್ಥಪೂರ್ಣವಾಗಿ ಎನ್ನಿಸುವಂಥ ಸಂಸ್ಕ್ರತಿ ನಮ್ಮದಾಗಬೇಕೆಂದು ನಾನು ಅಭಿಪ್ರಾಯ ಪಡುತ್ತೇನೆ. ಸಾಹಿತ್ಯ ಮುಖ್ಯವಾಗಿ ಮಾನಸಿಕ ಅಗತ್ಯ ಎಂಬುದನ್ನು ಮರೆಯಕೂಡದು. ಪ್ರತಿ ಸಾಹಿತಿಯೂ ಏನು ಮಾತ್ರ ಬರೆಯಬೇಕೆಂದು ಕಡ್ಡಾಯ ಮಾಡುವ ಧೋರಣೆ ಫಾಸಿಸ್ಟರದು.(ಮೂರನೆ ಪ್ರಶ್ನೆಗೆ ನನ್ನ ಉತ್ತರದ ಜೊತೆ ಈ ಉತ್ತವನ್ನು ಓದಿ.)

೨. ಜನಕ್ಕೆ ಮುಟ್ಟುವ ಸಾಹಿತ್ಯ ನಿರ್ಮಾಣ ಎಂದರೆ ನಿಮ್ಮ ದೃಷ್ಟಿಯಲ್ಲಿ ಯಾವುದು? ಏಕೆ?

ಲೇಖಕ, ಓದುಗ, ಸಾಹಿತ್ಯ ಒಂದು ತ್ರಿಕೋಣದ ಮೂರು ಬಿಂದುಗಳೆಂದಿಟ್ಟುಕೊಳ್ಳಿ. ಓದುಗನಿಗೆ ಹಿತವೆನ್ನಿಸುವಂತೆ ಪೂಸಿ ಹೊಡೆಯುವ ಲೇಖಕ ಓದುಗನಿಗೆ ಹತ್ತರವಾಗಿ ಸಾಹಿತ್ಯಕ್ಕೆ ದೂರವಾಗುತ್ತಾನೆ. ತನ್ನ ಅಂತರಂಗದ ಸತ್ಯಕ್ಕೆ ಬದ್ಧನಾಗಿ ಬರೆಯುವ ಲೇಖಕ ಸಾಹಿತ್ಯಕ್ಕೆ ಹತ್ತಿರವಾಗಿ ಓದುಗನಿಗೆ ದೂರವಾಗಬಹುದು. ಮೊದಲನೆಯದು ಸಾಹಿತ್ಯವೇ ಅಲ್ಲ, ಎರಡನೆಯದು, ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾದದ್ದು. ಆದರೆ ತನ್ನ ಅಂತರಂಗದ ಸತ್ಯಕ್ಕೆ ದೂರವಾಗದಂತೆ ಲೇಖಕ ಓದುಗನಿಗೆ ಹತ್ತಿರವಾಗುವುದು ಅತ್ಯಂತ ಆರೋಗ್ಯಕರ. ಓದುಗನ ಅಪೇಕ್ಷೆಯ ಮಟ್ಟವನ್ನು ಹೆಚ್ಚಿಸಲು, ಗಾಢವಾಗಿಸಲು ಶ್ರಮಿಸುವುದರ ಮೂಲಕ ಆರೋಗ್ಯ ದಕ್ಕಬೇಕು – ಲೇಖಕ ತನ್ನ ಅನುಭವದ ನಿಷ್ಟೆಯನ್ನು ಬಿಟ್ಟುಕೊಟ್ಟು ಓದುಗನಿಗೆ ಹತ್ತಿರವಾಗುವ ಮೂಲಕವಲ್ಲ.

ಅಂದರೆ, ನನ್ನನ್ನು ತಪ್ಪುತಿಳಿಯಬೇಡಿ. ಸಮಕಾಲೀನ ಸಮಾಜದ ಬಿಕ್ಕಟ್ಟುಗಳನ್ನು, ಆತಂಕಗಳನ್ನು, ಬದುಕಿನ ಪರೀಕ್ಷೆಗಳನ್ನು ನಾನು ತಿಳಿದ ಒಳ್ಳೆಯ ಸಾಹಿತ್ಯ ಎದುರಿಸುತ್ತದೆ ಎಂದು ನನ್ನ ಮತ.

೩. ಇತ್ತೀಚಿಗೆ ಎಲ್ಲ ಕ್ಷೇತ್ರಗಳಲ್ಲೂ ‘ಕಮಿಂಟ್‌ಮೆಂಟ್’ ಇರಬೇಕು. ಎಂದು ಹೇಳಲಾಗುತ್ತಿದೆ. ಕಮಿಂಟ್‌ಮೆಂಟ್ ಎಂದರೆ ಏನು? ಉತ್ತಮ ಕೃತಿ ರಚನೆಗೆ ಕಮಿಂಟ್‌ಮೆಂಟ್‌ಇರಲೇಬೇಕೆ?
ನಾವು ರಚಿಸುವ ಸಾಹಿತ್ಯದ ಹಿಂದೆ ಪರೋಕ್ಷವಾಗಿಯಾದರೂ ಒಂದಲ್ಲ ಒಂದು ರಾಜಕೀಯ ಧೋರಣೆಯಿರುತ್ತದೆ; ಯಾವ ರೀತಿಯ ಸಮಾಜ ವ್ಯವಸ್ಥೆಬೇಕೆಂಬ ಆಯ್ಕೆ ಇರುತ್ತದೆ. ಅಂದರೆ ರಾಜಕೀಯ ಆಯಾಮ ಇಲ್ಲದಿರುವ ಸಾಹಿತ್ಯ ಕೃತಿಯಿಲ್ಲ. ಕಲೆಗಾಗಿ ಕಲೆ ಎನ್ನುವ ವಾದದ ಹಿಂದೆಯೂ ರಾಜಕೀಯ ಅಪ್ರಸ್ತುತ ಎನ್ನುವ ರಾಜಕೀಯ ಇದೆ. ಈ ಸತ್ಯವನ್ನು ಪ್ರಜ್ಞಾಪೂರ್ವಕವಾಗಿ ಗ್ರಹಿಸಿದ ಬರಹಗಾರ ತನ್ನ ಕೃತಿಯ ಹಿಂದೆ ಅಡಗಿರುವ ರಾಜಕೀಯ ಧೋರಣೆಗೆ ಜವಾಬ್ದಾರನಾಗಬೇಕಾಗುತ್ತದೆ. ಸ್ವಾತಂತ್ರ್ಯದಲ್ಲಿ ಪ್ರತಿ ವ್ಯಕ್ತಿಯೂ ತನ್ನ ಸಾಧ್ಯತೆಗಳನ್ನು ದಕ್ಕಿಸಿಕೊಂಡಾಗ ಇಡೀ ಸಮಾಜವೇ ಸೃಷ್ಟಿಶೀಲವಾಗುತ್ತದೆಂದು ತಿಳಿಯುವ ಲೇಖಕ ಅಂತಹ ಸ್ವಾತಂತ್ರ್ಯವನ್ನು ಸಾಧ್ಯವಾಗಿಸುವ ಶೋಷಣೆಯಿಲ್ಲದ ವ್ಯವಸ್ಥೆಯನ್ನು ತನ್ನ ಕೃತಿಗಳ ಮೂಲಕ ಓದುಗರ ಮನಸ್ಸಿಗೆ ಒಪ್ಪಿಗೆಯಾಗುವಂತೆ ಮಾಡುತ್ತಾನೆ. ಇದನ್ನೇ ‘ಕಮಿಟ್‌ಮೆಂಟ್’ ಎಂದು ನಾನು ತಿಳಿದಿರುವುದು.

ಯಾವುದಾದರೊಂದು ರಾಜಕೀಯ ಪಕ್ಷದ ಧೋರಣೆಗಳಿಗೆ ಬದ್ಧವಾಗುವುದು ಕಮಿಟ್‌ಮೆಂಟ್ ಅಲ್ಲ. ಶೋಷಣೆಗಳಿಂದ ಮುಕ್ತವಾದ ,ಮನಸ್ಸಿನ ಸ್ವಾತಂತ್ರ್ಯವನ್ನು ಅರಳಿಸುವ ಸಮಾಜ ವ್ಯವಸ್ಥೆಯನ್ನು ಬಯಸುವ ಲೇಖಕ ಅಂತಃಸಾಕ್ಷಿಗೆ ವಿರುದ್ಧವಾಗಿ ಬರೆಯುವುದಿಲ್ಲ. ನಮ್ಮ ಕಾಲದ ಒತ್ತಡಗಳನ್ನು ಸೂಕ್ಷ್ಮವಾಗಿ ಗ್ರಹಿಸಿದ ಲೇಖಕನಿಗೆ ನಾನು ಮೇಲೆ ಹೇಳಿದ ಅರಿವು ಇರುತ್ತದೆ. ಆದರೆ ‘ಇರಲೇಬೇಕು’ ಎನ್ನುವ ಒತ್ತಾಯದ ಮಾತನಾಡುವುದು ಅಪಾಯವೆಂದು ನಾನು ತಿಳಿದಿದ್ದೇನೆ.

೪. ಸಾಹಿತ್ಯ ಕೃತಿಗಳಲ್ಲಿ ಈಗೀಗ ಆಸಕ್ತಿ ಕಡಿಮೆಯಾಗಿ ‘‘ಪ್ರದರ್ಶನಕಲೆ’’ (ನಾಟಕ ಸಿನಿಮಾ) ಪ್ರಭಾವಶಾಲಿಯಾಗುತ್ತಿದೆ. ನಿಮಗೆ ಏನನ್ನಿಸುತ್ತದೆ.

ನನ್ನ ಮಟ್ಟಿಗೆ ಹೇಳುವುದಾದರೆ ಒಳ್ಳೆಯ ಸಿನಿಮಾ, ನಾಟಕ, ಕಾದಂಬರಿ, ಕಾವ್ಯ ಎಲ್ಲದರಲ್ಲೂ ನನಗೆ ಆಸಕ್ತಿ ಇದೆ. ಅಲ್ಲದೆ ಕನ್ನಡದಲ್ಲಿ ಬರುತ್ತಿರುವ ಒಳ್ಳೆಯ ಸಿನಿಮಾಗಳಂತೂ ಕನ್ನಡ ಕಾದಂಬರಿಗಳಿಂದ ಪ್ರೇರಣೆ ಪಡೆದವು. ಕನ್ನಡ ಕಾದಂಬರಿ ಮತ್ತು ಕಾವ್ಯ ಮುಟ್ಟಿದ ಎತ್ತರವನ್ನು ಇನ್ನೂ ನಮ್ಮ ಸಿನಿಮಾ ಮುಟ್ಟಿಲ್ಲವೆಂದೇ ನಾನು ತಿಳಿದಿದ್ದೇನೆ. ಹೀಗಿರುವಾಗ ಸಾಹಿತ್ಯ ಕೃತಿಗಳಲ್ಲಿ ಆಸಕ್ತಿ ಕಡಿಮೆಯಾದಲ್ಲಿ ನಮ್ಮ ಸಿನಿಮಾ ನಾಟಕಗಳಿಗಿರುವ ಸವಾಲು ಇಲ್ಲದೇ ಹೋಗಿ ಸಿನಿಮಾ ನಾಟಕಗಳು ಮತ್ತೇ ಅರ್ಥಹೀನ ರಂಜನೆಗಳಾದವು ಎಂದು ನನಗೆ ಭಯ. ಕ್ಷಮಿಸಿ, ಪ್ರಶ್ನೆಯ ಹಿಂದೆ ಏನೋ ಪಿತೂರಿ ಇರಬಹುದೆಂದು ನನಗೆ ಗುಮಾನಿ…….

ಪ್ರಜಾವಾಣಿ
ದೀಪಾವಳಿ
ವಿಶೇಷಾಂಕ:೧೯೭೫

ಮಾರ್ಕ್ಸ್ವಾದ ಮತ್ತು ಸಾಹಿತ್ಯ

ಚರಿತ್ರೆಯಲ್ಲಿ ಮಾನವನ ವಿಕಾಸವನ್ನು ಅತ್ಯಂತ ಸೂಕ್ಷ್ಮವಾಗಿ, ವೈಜ್ಞಾನಿಕವಾಗಿ ತಿಳಿಯುವ ಮಾರ್ಕ್ಸ್‌‌ವಾದವನ್ನು ಸಾಹಿತ್ಯಕ್ಕೆ ಅನ್ವಯಿಸುವುದು ಅತ್ಯಂತ ಅಗತ್ಯ ಹಾಗೆಯೇ ಕಷ್ಟ ಕೂಡ. ಸದ್ಯದ ರಾಜಕೀಯ ಆಸಕ್ತಿಗಳನ್ನು ಕಳೆದುಕೊಂಡು ಮಾರ್ಕ್ಸ್‌‌‌ವಾದಕ್ಕೆ ಹಲವು ಉಗುರುಗಳು ಇರುವುದಿಲ್ಲ. ಆದರೆ ಸದ್ಯಕ್ಕೆ ಮಾತ್ರ ಬದ್ಧವಾಗಿದ್ದರೆ ಪ್ರಚಾರವನ್ನು ಮಾತ್ರ ಸಾಹಿತ್ಯದಿಂದ ಬಯಸೀತು. ಈ ದ್ವಂದ್ವವನ್ನು ಸಾಹಿತಿಯೂ ವಿಮರ್ಶಕನೂ ಎದುರಿಸಬೇಕಾಗುತ್ತದೆ. ಮಾರ್ಕ್ಸ್‌‌ವಾದ ಕೇವಲ ಅಕೆಡೆಮಿಕ್ ಆಗಲಾರದು. ಹಾಗೆಯೇ ಪಾರ್ಲಿಮೆಂಟರಿ ರಾಜಕಾರಣಿಗಳಂತೆ ಸದ್ಯದ ಅಧಿಕಾರವನ್ನು ಕಬಳಿಸುವ ಹಂಚಿಕೆಯಲ್ಲೂ ಸಫಲವಾಗಲಾರದು. ಆದ್ದರಿಂದಲೇ – ಈ ದ್ವಂದ್ವವಿರುವುದರಿಂದಲೇ ಅದು ತುರ್ತುನ್ನೂ ದೂರದೃಷ್ಟಿಯನ್ನೂ ಪ್ರಾದೇಶಿಕತೆಯನ್ನೂ ಅಂತರ್‌ರಾಷ್ಟ್ರೀಯತೆಯನ್ನು ಒಟ್ಟಾಗಿ ಪಡೆಯಲು ಹವಣಿಸುತ್ತದೆ. ಈ ಹವಣಿಕೆಯಲ್ಲೇ ಮೌಲ್ಯಗಳನ್ನೂ ಚಲನಶೀಲ ಮನಸ್ಸನ್ನೂ ಸೃಷ್ಟಿಸುತ್ತದೆ. ಮಾರ್ಕ್ಸ್‌ನ ಚಿಂತನೆಯಲ್ಲೇ ಸದ್ಯದ ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಸಂದರ್ಭದಲ್ಲಿ ಮಾತ್ರ ಸಫಲವಾಗುವಷ್ಟು ಸೋಷಲಿಸಂ ನಿಜವಾದ್ದು ಎನ್ನುವ ಚಲನಶೀಲವಾದ ವಾಸ್ತವ ದೃಷ್ಟಿಯ ಜೊತೆಜೊತೆಯಲ್ಲೇ ಉಟೋಪಿಯಾದ ಆದರ್ಶದ ಹಂಬಲ, ಈ ಹಂಬಲ ಪ್ರಾಜೆಕ್ಟ್‌ನಲ್ಲಿ ಮುಂದಿನ ಬೆಳವಣಿಗೆಯ ಸಾಧ್ಯತೆಯನ್ನು ಬೀಜ ರೂಪದಲ್ಲಿ ಒಳಗೊಂಡ ಆದರ್ಶ ಮಾನವ ಸಮಗ್ರತೆಗೆ ಈಗಿಂದೀಗಲೇ ತುಯ್ಯುತಿರಬೇಕೆನ್ನುವ ಆದರ್ಶಪ್ರಿಯತೆ ಇವೆ. ಆದ್ದರಿಂದಲೇ ಈ ಡಯಲಿಕ್ಟ್‌ನ ದೃಷ್ಟಿಯಿಂದ ನೋಡಿದಾಗ ಕನ್ನಡದಲ್ಲಿ ಖುದ್ದು ಮಾರ್ಕ್ಸ್‌ವಾದಿಗಳು ತಾವೆಂದು ತಿಳಿದು ಬರೆದವರ ಕೃತಿಗಳಿಗಿಂತ ಕಾರಂತ, ಬೇಂದ್ರೆ, ಕುವೆಂಪುರವರ ಕೃತಿಗಳು ಮಾರ್ಕ್ಸ್‌ವಾದಿ ವಿಮರ್ಶಕನಿಗೆ ಹೆಚ್ಚು ಸ್ವಾರಸ್ಯದ್ದಾಗುತ್ತವೆ. ಎಲ್ಲಿ, ಯಾಕೆ ಮಾರ್ಕ್ಸ್‌ವಾದಿ ಚಳುವಳಿ ಹಾಗಿದ್ದಲ್ಲಿ ದಾರಿ ತಪ್ಪಿತು; ಇದಕ್ಕೆ ಕಮ್ಯುನಿಸ್ಟ್‌‌ಪಕ್ಷಗಳ ರಾಜಕೀಯ ಮಾರ್ಗ ಎಷ್ಟರ ಮಟ್ಟಿಗೆ ಕಾರಣ – ಯೋಚಿಸಬೇಕು.

ಅಂಕಣ
ಸ್ಪಂದನ ವಿಭಾಗ: ಜನವರಿ, ೧೯೮೦