ಯಹೂದ್ಯ ಲೇಖಕ ಥಾಮಸ್ ಮನ್ ಹಿಟ್ಲರನ ಜರ್ಮನಿಯಿಂದ ಓಡಿಹೋಗಬೇಕಾಯಿತು. ಹೀಗೆಯೇ ವಿಜ್ಞಾನಿ ಐನ್‌ಸ್ಟೈನ್. ಜರ್ಮನಿ ಬಲಿಷ್ಠ ರಾಷ್ಟ್ರವಾಗಬೇಕೆನ್ನುತ್ತಿದ್ದ ಹಿಟ್ಲರನಿಗೆ ಒಳಗೆ ನೋಡಿಕೊಂಡು ಬರೆಯುವ ಲೇಖಕರು ಮನುಷ್ಯನ ದುರ್ಬಲ ಪ್ರವೃತ್ತಿಗಳನ್ನು ಪ್ರಚೋದಿಸುವವರಂತೆ ಕಂಡರು. ಜರ್ಮನರನ್ನು ವೀರರನ್ನಾಗಿ ಹುರಿದುಂಬಿಸುವ ಸಾಹಿತ್ಯವನ್ನು ಹಿಟ್ಲರ್ ಅಪೇಕ್ಷಿಸಿದ. ಅಂತಹ ಸಾಹಿತ್ಯ ಸೃಷ್ಟಿಸುವ ಲೇಖಕರು ಸರ್ಕಾರದ ಬಾಲಬಡಕ ಯಂತ್ರಗಳಾಗಬೇಕಾಯಿತು. ಅಬ್ಬರದ ಘೋಷಣೆಗಳು, ವೀರಾವೇಶದ ಭಾಷಣಗಳು – ಇಷ್ಟಕ್ಕಾಗಿ ಮಾತ್ರ ಭಾಷೆಯನ್ನು ದುರುಪಯೋಗ ಮಾಡಿಕೊಳ್ಳುವ ವಂಚಕರಾಗಬೇಕಾಯಿತು.

ಅದೇ ಸಮಯದಲ್ಲಿ ರಷ್ಯಾದಲ್ಲಿ ಸ್ಟಾಲಿನ್ನನೂ ಒಳಗೆ ನೋಡಿಕೊಂಡು ಬರೆಯುವ ಲೇಖಕರನ್ನು ಹಿಂಸಿಸಿದ. ಅವನ ಭಂಟ ಜಾಡನೊವ್ ಸಾಹಿತ್ಯ ವಿಮರ್ಶೆಯನ್ನು ಸೆನ್ಸಾರ್ಶಿಪ್ ಪರೀಕ್ಷೆಯಾಗಿ ಪರಿವರ್ತಿಸಿದ. ಮಾಯಕೋವಸ್ಕಿಯಂಥ ಲೇಖಕ ಆತ್ಮಹತ್ಯೆ ಮಾಡಿಕೊಂಡ.

ಕೆಲವು ವರ್ಷಗಳ ನಂತರ ಯುದ್ಧ ಮುಗಿಸಿದ ಮೇಲೆ ಅಮೆರಿಕಾದಲ್ಲಿ ಮೆಕಾರ್ತಿ ಎಂಬ ರಾಕ್ಷಸ ಕಾಣಿಸಿಕೊಂಡ. ಅಮೆರಿಕಾ ರಾಷ್ಟ್ರಹಿತದ ವಿರೋಧಿಗಳನ್ನು ಹುಡುಕಿ ಬಡಿಯುವ ನೆವದಲ್ಲಿ ಸೂಕ್ಷ್ಮ ಮನಸ್ಸಿನ ಬುದ್ಧಿಜೀವಿಗಳನ್ನು, ವಿಜ್ಞಾನಿಗಳನ್ನು, ಲೇಖಕರನ್ನು ಅನೀತಿವಂತರೆಂದು ಜರಿದು ದೇಶಾದ್ಯಂತ ವಿಚ್‌ಹಂಚ್ ಪ್ರಾರಂಭಮಾಡಿದ. ಅಮೆರಿಕಾದ ಬುದ್ಧಿಜೀವಿಗಳೆಲ್ಲ ಇದರಿಂದ ತತ್ತರಿಸಿದರು. ಭಯಗ್ರಸ್ತರಾದ ಕೆಲವರು ಆತ್ಮಹತ್ಯೆ ಮಾಡಿಕೊಂಡರು.

ಈ ಸಂದರ್ಭದಲ್ಲಿ ಆಯಾ ರಾಷ್ಟ್ರಗಳ ಆರ್ಥಿಕ ಹಿತದ ಸಾಧನೆಯಾಯಿತೆ ನೋಡೋಣ, ಆಶ್ಚರ್ಯವೆಂದರೆ; ಆಯಿತು; ಹಿಟ್ಲರ್ ಹೈವೇಗಳನ್ನು ನಿರ್ಮಿಸಿದ; ಉದ್ಯೋಗ ಕಲ್ಪಿಸಿದ; ಬೆಲೆಗಳನ್ನು ಇಳಿಸಿದ. ಯುವಕರಲ್ಲಿ ಹುಮ್ಮಸ್ಸು ತಂದ. ಸ್ಟಾಲಿನ್ ಯುರೋಪಿನ ಬಡಕಲು ನೆಂಟನಾಗಿದ್ದ ರಷ್ಯವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿದ. ಮೆಕಾರ್ತಿಯಂಥವರನ್ನು ಹಿನ್ನೆಲೆಯಾಗಿ ಪಡೆದ ಅಮೆರಿಕಾ ಸಿ.ಐ.ಎ. ಮೂಲಕ ಇಡೀ ಜಗತ್ತನೇ ಅಳಲು ಹವಣಿಸಬಲ್ಲಂಥ ರಾಷ್ಟ್ರವಾಯಿತು.

ರಷ್ಯಾದ ಕ್ರಾಂತಿಯಾದ ತರುಣದಲ್ಲಿಯೇ ಇಂಗ್ಲೆಂಡಿನ ಲೇಖಕ ಡಿ.ಎಚ್. ಲಾರೆನ್ಸ್ ಬರೆದಿದ್ದ – ಅಮೆರಿಕಾ ಮತ್ತು ರಷ್ಯಾ ಪೂಜಿಸುವುದು ಒಂದೇ ಆದರ್ಶವನ್ನ. ಅದೆಂದರೆ ಯಂತ್ರ ನಾಗರಿಕತೆ ತರುವ ಸಮೃದ್ಧಿ; ಮನುಷ್ಯನ ಬಾಹ್ಯ ಅಗತ್ಯಗಳ ಪೂರೈಕೆ – ಒಂದಲ್ಲ ಒಂದು ದಿನ ರಷ್ಯಾ ಅಮೆರಿಕಾದಂತೆ ಆದೀತು.

ಈಗ ಚೈನಾ ಅದೇ ಮಾತು ಹೇಳುತ್ತಿದೆ: ರಷ್ಯಾ ಅಮೆರಿಕಾದ ಹಾಗೆ ಆಗುತ್ತಿದೆ. ಮುಂದೆ ಚೈನಾ?

ಫ್ಯಾಸಿಸ್ಟ್ ಧೋರಣೆಯ ಹಿಟ್ಲರ್, ಕಮ್ಯುನಿಷ್ಟನಾದ ಸ್ಟಾಲಿನ್, ಕ್ಯಾಪಿಟಲಿಸ್ಟ್ ಧೋರಣೆಯ ಮೆಕಾರ್ತಿ: ಈ ಮೂವರೂ ಪರಸ್ಪರ ವೈರಿಗಳು. ಆದರೆ ಅಂತರ್ಮುಖಿಗಳಾದ ಸಾಹಿತಿಗಳನ್ನು ದ್ವೇಷಿಸುವುದರಲ್ಲಿ ಮಾತ್ರ ಈ ಮೂವರ ಧೋರಣೆಯೂ ಒಂದೇ ಆಗಿತ್ತೆಂಬುದನ್ನು ನಮ್ಮ ಕಾಲದ ಭಾರತೀಯ ಲೇಖಕ ಮರೆಯಕೂಡದು.

೧೯೭೬ಆಂದೋಲನದಲ್ಲಿ ನಿರಂಜನರು ನವ್ಯಸಾಹಿತ್ಯದಲ್ಲಿ ಅಂತರ್ಮುಖತೆಯನ್ನು ಟೀಕಿಸಿ ಬರೆದದ್ದಕ್ಕೆ ವ್ಯಕ್ತಪಡಿಸಿದ ಪ್ರತಿಕ್ರಿಯೆ. ಆಂದೋಲನ, ೧೧..೧೯೭೬.

* * *