ಪೀಠಿಕೆ

ವಿಶ್ವದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಪ್ರಮುಖವಾಗಿ ಕೃಷಿ ಆಧಾರಿತ ಸಮುದಾಯಗಳಾಗಿದ್ದು, ಈ ರಾಷ್ಟ್ರಗಳಲ್ಲಿ ಆದಾಯದ ಪ್ರಮುಖ ಮೂಲ ಒಕ್ಕಲುತನವೇ ಆಗಿದೆ. ಈ ರಾಷ್ಟ್ರಗಳಲ್ಲಿ ಕೃಷಿಯು ಆದಾಯದ ಮೂಲದ ಹೊರತಾಗಿ ವಿವಿಧ ಉತ್ಪನ್ನಗಳು, ವಿದೇಶಿ ವಿನಿಮಯ ಹಾಗೂ ಉದ್ಯೋಗದ ಮೂಲವೂ ಆಗಿದೆ. ಅಭಿವೃದ್ಧಿಪರ ರಾಷ್ಟ್ರಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯು ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ದೇಶದ ಸಮುದಾಯಕ್ಕೆ ಆಹಾರ ಉತ್ಪಾದನೆ, ಜಾನುವಾರುಗಳಿಗೆ ಮೇವು, ಕೈಗಾರಿಕೆಗಳಿಗೆ ಕಚ್ಚಾವಸ್ತುಗಳ ಉತ್ಪಾದನೆ ಮಾಡುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಸಮುದಾಯಗಳಿಗೆ ವಿವಿಧ ರೀತಿಯ ಜೀವನಕ್ರಮಗಳನ್ನು ಹೊಂದಲು ಸಹಕಾರಿಯಾಗಿದೆ. ಇಂತಹ ರಾಷ್ಟ್ರಗಳಲ್ಲಿ ದೇಶದ ಅಭಿವೃದ್ಧಿ, ಬಡಜನರ ಕಲ್ಯಾಣ, ಸಂಪನ್ಮೂಲ ಬಡ ರೈತರ ಉದ್ಧಾರದ ವಿಷಯಗಳು ನೇರವಾಗಿ ಕೃಷಿಯ ಮೇಲೆ ಅವಲಂಬಿತವಾಗಿವೆ. ಕೃಷಿ ಅಭಿವೃದ್ಧಿಯು ಮೇಲೆ ನಮೂದಿಸಿದ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕಾಗಿದೆ. ಕೃಷಿ ಆಧಾರಿತ ದೇಶಗಳ ಅಭಿವೃದ್ಧಿಯ ಕೃಷಿಯ ಮೇಲೆ ಆಧಾರವಾಗಿರುವ ಕೃಷಿಕ ಸಮಾಜವನ್ನು ಅವಲಂಬಿಸಿದ್ದು, ಗ್ರಾಮೀಣ ಮಟ್ಟದಲ್ಲಿ ರೈತರಿಗೆ ದೊರೆಯಬಹುದಾದ ಜಮೀನು, ಆಧುನಿಕ ತಂತ್ರಜ್ಞಾನ, ಗುಣಮಟ್ಟದ ಕೃಷಿ ಸಾಮಗ್ರಿಗಳು, ಸಾಂಸ್ಥಿಕ ಹಣಕಾಸು ಸೌಲಭ್ಯ ಹಾಗೂ ಮಾನವ ಸಂಪನ್ಮೂಲಗಳನ್ನು ಆಧರಿಸಿದ್ದು ಮಾರುಕಟ್ಟೆ ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆಯಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಡತನದ ಸಮರ್ಪಕ ವಿಶ್ಲೇಷಣೆ ಮಾಡಿದಾಗ ಕಂಡುಬರುವ ಅಂಶವೆಂದರೆ, ಬಡತನ ಪ್ರಮುಖವಾಗಿ ಗ್ರಾಮೀಣ ಮೂಲವನ್ನು ಹೊಂದಿದ್ದು ಈ ದೇಶಗಳ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿಯ ಮೇಲ ಅವಲಂಬಿತವಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ಲೇಷಿಸಿದರೆ ಗ್ರಾಮೀಣ ಅಭಿವೃದ್ಧಿ ನೇರವಾಗಿ ಕೃಷಿಯ ಮೇಲೆ ಅವಲಂಬಿತ (ಎನ್ನುವುದು ಸ್ಪಷ್ಟವಾದ ವಿಚಾರ. ಹಿಂದುಳಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ನಗರ ಮಟ್ಟದಲ್ಲಿಯೂ ಬಡತನ ಹೆಚ್ಚುತ್ತಲಿದೆ. ವಿಶ್ವಮಟ್ಟದಲ್ಲಿ ಬಡತನವನ್ನು ವಿಶ್ಲೇಷಿಸಿದರೆ ವಿಶ್ವದ ಮೂರು ಭಾಗದಷ್ಟು ಬಡವರು ಗ್ರಾಮೀಣ ಪ್ರದೇಶದಲ್ಲಿ ಇರುವುದು ಸರ್ವವಿದಿತ. ಗ್ರಾಮೀಣ ಪ್ರದೇಶದಲ್ಲಿರುವ ಬಡ ಕುಟುಂಬಗಳಲ್ಲಿ ಪ್ರಮುಖವಾಗಿ ಕಂಡುಬರುವವರೆಂದರೆ ಸಂಪನ್ಮೂಲ ಕೊರತೆಯಿರುವ ಸಣ್ಣ ಹಾಗೂ ಅತಿಸಣ್ಣ ಬಡ ರೈತರು ಹಾಗೂ ಕೃಷಿ ಕಾರ್ಮಿಕರು. ಈ ಕುಟುಂಬಗಳು ಹಲವಾರು ರೀತಿಯ ಸಮಸ್ಯೆಗಳನ್ನು ಹೊಂದಿದ್ದು ಅದರಲ್ಲಿಯೂ ಶಿಕ್ಷಣ ಸೂಕ್ತ ರೀತಿಯಲ್ಲಿ ದೊರೆಯದೇ ಇರುವುದು ಪ್ರಮುಖವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಿರುವ ಈ ಸೌಲಭ್ಯಗಳನ್ನು ವಿಶ್ಲೇಷಿಸಿದರೆ ಕಡು ಬಡವರೆಂದರೆ ಅಸಮರ್ಪಕ ರಸ್ತೆ ಜಾಲ, ಮಾರುಕಟ್ಟೆ ಸಮಸ್ಯೆ, ನೀರಿನ ಸಮಸ್ಯೆ, ಆರೋಗ್ಯ ಸೇವೆಗಳು ದೊರೆಯದಿರುವುದು. ಇದಲ್ಲದೇ ಅಸ್ತವ್ಯಸ್ತವಾದ ಸಂಪರ್ಕ ಸೌಲಭ್ಯಗಳು ಹಾಗೂ ಕೃಷಿ ಉತ್ಪಾದನೆಗೆ ಬೇಕಾಗುವ ಸೇವೆಗಳು ಸಮಯಕ್ಕೆ ಸರಿಯಾಗಿ ದೊರೆಯದೇ ಇರುವುದು ಇತರ ಪ್ರಮುಖ ಸಮಸ್ಯೆಗಳಾಗಿವೆ. ಸರಕಾರದ ಹಲವಾರು ಯೋಜನೆಗಳು ಗ್ರಾಮೀಣ ಅಭಿವೃದ್ಧಿ ಹಾಗೂ ಕೃಷಿ ಆಧಾರಿತ ವ್ಯವಸ್ಥೆಗಳ ಸುಧಾರಣೆಗೆ ಶ್ರಮಿಸುತ್ತಿದ್ದರೂ ಸೂಕ್ತವಾದ ರೀತಿಯಲ್ಲಿ ಈ ಕ್ಷೇತ್ರಗಳಲ್ಲಿ ಸೇವೆ ದೊರೆಯದೇ ಇರುವುದು ವಿಪರ್ಯಾಸದ ಸಂಗತಿ.

ಸಮಸ್ಯೆಗಳು ಹೀಗಿರುವಾಗ, ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬಹುದಾದ ಸಂಘಟನೆಗಳು ಇದ್ದಾಗ ಮಾತ್ರ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯ. ಗ್ರಾಮೀಣ ಸಮುದಾಯಗಳ ಹೊರಗಿನಿಂದ ಬಂದ ಸಂಘಟನೆಗು ಪ್ರಭಾವಶಾಲಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಹಲವಾರು ಸಮಸ್ಯೆಗಳಿವೆ. ಎಲ್ಲಿಯವರೆಗೆ ಗ್ರಾಮೀಣ ಪ್ರದೇಶದ ಸಮುದಾಯವು ಎಚ್ಚೆತ್ತು ತಮ್ಮದೇ ಆದ ಸಂಘಟನೆಗಳನ್ನು ಕಟ್ಟಿಕೊಂಡು ಬಲಶಾಲಿಯಾಗುವುದಿಲ್ಲವೋ ಅಲ್ಲಿಯವರೆಗೆ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯ ಕನಸುಗಳು ಸಂಪೂರ್ಣವಾಗಿ ನನಸಾಗುವುದು ಕಷ್ಟಸಾಧ್ಯದ ಕೆಲಸ.

ಗ್ರಾಮೀಣ ಅಭಿವೃದ್ಧಿಯ ಕನಸುಗಳನ್ನು ಇಟ್ಟುಕೊಂಡು, ಗ್ರಾಮೀಣ ಜನರನ್ನೇ ಕೇಂದ್ರವಾಗಿಸಿ ತಲೆ ಎತ್ತಿರುವ ಸಂಘ ಸಂಸ್ಥೆಗಳು, ಸ್ವ – ಸಹಾಯ ಗುಂಪುಗಳು, ಗ್ರಾಮೀಣ ಮಹಿಳಾ ಒಕ್ಕೂಟಗಳು, ಈ ದಿಸೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಲಿವೆ. ಕೃಷಿ ಅಭಿವೃದ್ಧಿಗೆ ಪೂರಕವಾಗಿ ಗ್ರಾಮ ಮಟ್ಟದಲ್ಲಿ ಕೆಲಸ ಮಾಡಲು ಕೃಷಿ ಸಹಕಾರ ಸಂಘಗಳನ್ನು ಸರಕಾರ ಹುಟ್ಟುಹಾಕಿದೆಯಾದರೂ ಈ ಸಂಘಗಳು ಕೆಲವು ಸದಸ್ಯರಿಗೆ ಸಾಲ ಹಂಚುವ ಕಾರ್ಯ ಬಿಟ್ಟರೆ ಉಳಿದ ಕೆಲಸಗಳನ್ನು ಕೃಷಿ ಅಭಿವೃದ್ಧಿಯ ದೃಷ್ಟಿಯಿಂದ ಮಾಡುತ್ತಿಲ್ಲ. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳ ಹಲವಾರು ಯೋಜನೆಯ ಅಡಿಯಲ್ಲಿ ಪ್ರಾರಂಭಗೊಂಡ ರೈತಪರ ಕಾರ್ಯ ಮಾಡುವ ಸಂಘಗಳು ಕೆಲವೊಂದು ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅವುಗಳಿಗೆ ದೊರೆಯಬೇಕಾದ ಸಹಾಯ – ಸೌಲಭ್ಯ ಯೋಜನೆ ಮುಗಿದ ನಂತರ ನಿಂತುಹೋಗುವುದರಿಂದ ಅವುಗಳ ಸುಸ್ಥಿರತೆಯೂ ಒಂದು ದೊಡ್ಡ ಸಮಸ್ಯೆಯಾಗಬಹುದು. ಎಲ್ಲಿಯವರೆಗೆ ಗ್ರಾಮ ಮಟ್ಟದಲ್ಲಿ ಬಲಶಾಲಿಯಾದ ರೈತ ಸಂಘಟನೆಗಳು ತಲೆ ಎತ್ತುವುದಿಲ್ಲವೋ ಅಲ್ಲಿಯವರೆಗೆ ಗ್ರಾಮೀಣ ಹಾಗೂ ಕೃಷಿ ಅಭಿವೃದ್ಧಿಯ ಮಂತ್ರ ಕೇವಲ ಜಪಿಸುವುದಕ್ಕಾಗಿಯೇ ಎಂದರೆ ತಪ್ಪಾಗಲಿಕ್ಕಿಲ್ಲ.

ಗ್ರಾಮ ಮಟ್ಟದಲ್ಲಿ ರೈತಪರ, ರೈತರೇ ಸದಸ್ಯತ್ವ ಪಡೆದು ರೈತರಿಂದಲೇ ನಿರ್ವಹಿಸಲ್ಪಡುವ ಸಂಘಟನೆಗಳು ಸ್ಥಾಪನೆಯಾದರೆ ಅನ್ನದಾತನ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯ. ನಮ್ಮ ದೇಶದಲ್ಲಿ ಹಲವಾರು ಮಾದರಿ ರೈತ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿರುವ ಉದಾಹರಣೆಗಳು ಗುಜರಾತ್‌, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಇದ್ದು, ಇವುಗಳು ಉಳಿದ ರಾಜ್ಯದ ರೈತ ಸಮುದಾಯಕ್ಕೆ ಸ್ಫೂರ್ತಿಯ ಸೆಲೆಯಾಗುವಲ್ಲಿ ಯಾವುದೇ ಸಂದೇಹವಿಲ್ಲ. ಈ ಸಂಘಟನೆಗಳು ರೈತರಿಂದಲೇ ಪ್ರಾರಂಭವಾಗಿದ್ದು ಇಂದಿಗೂ ರೈತರಿಂದಲೇ ನಿರ್ವಹಿಸಿಸಲ್ಪಡುತ್ತಲಿವೆ. ಈ ಸಂಘಟನೆಗಳ ಫಲಪ್ರದ ಕಾರ್ಯನಿರ್ವಹಣೆಯನ್ನು ವಿಶ್ಲೇಷಿಸಿ ನೋಡಿದಾಗ ಕಂಡುಬರುವ ಪ್ರಮುಖ ಅಂಶಗಳೇನೆಂದರೆ:

 • ರೈತಪರ ಸೇವೆ ಮಾಡುವ ಸ್ಪಷ್ಟತೆ
 • ಸಂಘದ ರೈತರಲ್ಲಿ ಒಗ್ಗಟ್ಟು ಹಾಗೂ ಸಮಾನತೆಯ ಭಾವನೆ
 • ಸಂಘದಲ್ಲಿ ರಾಜಕೀಯ ಹಾಗೂ ಜಾತಿ ತತ್ವಗಳಿಗೆ ಅವಕಾಶ ಇಲ್ಲದಿರುವುದು
 • ಪರಸ್ಪರ ಸಹಕಾರ
 • ಪ್ರಜಾಪ್ರಭುತ್ವದ ತತ್ವಗಳ ಪ್ರತಿಪಾದನೆ ಹಾಗೂ ಪರಿಪಾಲನೆ
 • ಸೂಕ್ತವಾದ ನಾಯಕತ್ವ
 • ಸರಕಾರದ ಸಹಕಾರ

ಈ ಸಂಘಟನೆಗಳು ಇಷ್ಟೊಂದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಲಿವೆ ಎಂದರೆ, ಈ ಸಂಘಗಳ ಸದಸ್ಯರಾಗಿರುವ ರೈತರಿಗೆ ಬೇಕಾಗುವ ಪ್ರತಿಯೊಂದೂ ಸೌಲಭ್ಯವನ್ನು ಸಂಘ ನೀಡುವುದು (ಸಾಮಗ್ರಿ, ಹಣಕಾಸು, ಉತ್ಪನ್ನದ ಸಂಸ್ಕರಣೆ ಹಾಗೂ ಮಾರುಕಟ್ಟೆ, ವಿದ್ಯಾಭ್ಯಾಸ ಹಾಗೂ ವಿವಾಹಗಳಿಗೆ ಸಾಲ, ಗೃಹ ಉಪಯೋಗಿ ಸಾಮಗ್ರಿಗಳ ಪೂರೈಕೆ, ಕೃಷಿ ಯಂತ್ರಗಳ ಪೂರೈಕೆ ಇತ್ಯಾದಿ). ಆಂಧ್ರಪ್ರದೇಶದ ರೈತ ಸಂಘಟನೆಯೊಂದು ರೈತನ ಮೃತ್ಯುವಿನ ನಂತರ ಅಂತ್ಯಸಂಸ್ಕಾರದ ಜವಾಬ್ದಾರಿಯನ್ನು ನಿರ್ವಹಿಸುವ ವರೆಗೆ ಸೇವೆ ನೀಡುತ್ತಲಿದೆ. ಇದೆಲ್ಲವನ್ನೂ ನೋಡಿದಾಗ ರೈತರು ಒಂದಾದರೆ ಏನನ್ನಾದರೂ ಸಾಧಿಸಬಹುದೆಂಬುದು ಕನಸೇನಲ್ಲ. ಈ ದೆಸೆಯಲ್ಲಿ ಕೃಷಿ ಅಭಿವೃದ್ಧಿಗೆ ಬಲಶಾಲಿ ರೈತ ಸಂಘಟನೆಗಳ ಅವಶ್ಯಕತೆ, ಅವುಗಳ ನಿರ್ಮಾಣ ಹಾಗೂ ನಿರ್ವಹಣೆಯ ವಿಚಾರವಾಗಿ ಈ ಕಿರುಪುಸ್ತಕವನ್ನು ಅನುಭವಗಳ ಆಧಾರದ ಮೇಲೆ ರಚಿಸಲಾಗಿದೆ.

ಐತಿಹಾಸಿಕ ಹಿನ್ನೆಲೆ

ಐತಿಹಾಸಿಕವಾಗಿ ನೋಡುವುದಾದರೆ, ಗ್ರಾಮ ಮಟ್ಟದಲ್ಲಿ ಕೃಷಿಗೆ ಸಂಬಂಧಿಸಿದಂತೆ, ಸೂಚನೆಗೆ ರೈತರ ಸಂಪೂರ್ಣ ಅವಲಂಬನೆಯು ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಗ್ರಾಮಸೇವಕರ ಮೇಲೆ ಇರುತ್ತಿದ್ದುದು ಇಂದು ಇತಿಹಾಸ. ಈ ಗ್ರಾಮಸೇವಕರು ಕೃಷಿಗೆ ಸಂಬಂಧಿಸಿದಂತೆ ಲಭ್ಯವಿ೮ರುವ ವಿವಿಧ ವಿನೂತನ ತಂತ್ರಜ್ಞಾನಗಳನ್ನು ಅರಿತುಕೊಂಡು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನೀಡುವುದರಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುವುದರಲ್ಲಿ ಸಂಪೂರ್ಣ ಫಲಪ್ರದ ಆಗದಿದ್ದುದಕ್ಕೆ ಹಲವಾರು ಕಾರಣಗಳು ಉಂಟು. ರೈತಪರ ಸಂಘಟನೆಗಳು ಸದೃಢವಾಗಿ ಬೆಳೆಯಬೇಕೆಂದರೆ ಅವುಗಳನ್ನು ಸಮರ್ಪಕವಾಗಿ ಸಂಘಟಿಸಿ ಬಲಪಡಿಸಬೇಕಾದುದು ಅವಶ್ಯಕ. ೨೧ನೇ ಶತಮಾನದಲ್ಲಿ ಕೃಷಿ ಅನೇಕ ಆಹ್ವಾನಗಳು ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿರುವುದು ಗಂಭೀರವಾದ ವಿಷಯವಾಗಿದ್ದು ರೈತ ಸಂಘಟನೆಗಳು ಸಮರ್ಥವಾಗಿ ಬೆಳೆದು ಕಾರ್ಯ ನಿರ್ವಹಿಸದೇ ಹೋದರೆ ಈ ಆಹ್ವಾನಗಳನ್ನು ಸಮರ್ಪಕವಾಗಿ ಎದುರಿಸುವುದು ಸಾಧ್ಯವಾಗಲಿಕ್ಕಿಲ್ಲ. ಸಾಂಪ್ರದಾಯಿಕ ರೀತಿಯಲ್ಲಿ ಕಾರ್ಯ ನಿರ್ವಹಣೆ ಮುಂದುವರಿದದ್ದೇ ಆದಲ್ಲಿ ಕೃಷಿ ಎದುರಿಸುತ್ತಿರುವ ಈ ಕೆಳಗಿನ ಅಭಿವೃದ್ಧಿಪರ ಆಹ್ವಾನಗಳನ್ನು ಮೆಟ್ಟಿ ನಿಲ್ಲುವುದು ಕಷ್ಟಸಾಧ್ಯ.

೧. ರಾಷ್ಟ್ರದಲ್ಲಿ ಮುಂದುವರಿಯುತ್ತಿರುವ ಗ್ರಾಮೀಣ ಪ್ರದೇಶದ ಬಡತನ.

೨. ನೈಸರ್ಗಿಕ ಸಂಪನ್ಮೂಲಗಳ ಅಸಮರ್ಪಕ ಬಳಕೆಯಿಂದ ಆಗುತ್ತಿರುವ ಸಂಪನ್ಮೂಲಗಳ ಕೊರತೆ.

೩. ವಾತಾವರಣದಲ್ಲಿ ಕಂಡುಬರುತ್ತಿರುವ ವೈಪರೀತ್ಯಗಳು.

೪. ಗ್ರಾಮೀಣ ಪ್ರದೇಶದಲ್ಲಿ ಕಂಡುಬರುತ್ತಿರುವ ಸಾಮಾಜಿಕ ಹಾಗೂ ರಾಜಕೀಯ ಪ್ರೇರಿತ ಸಮಸ್ಯೆಗಳು.

೫. ಕೃಷಿಗೆ ಅದರಲ್ಲೂ ಒಣಬೇಸಾಯ ಕೃಷಿಗೆ ಪೂರಕವಲ್ಲದ ಕೃಷಿ ಬೆಂಬಲ ನೀತಿಗಳು ಇತ್ಯಾದಿ.

ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸರಕಾರ ರೈತ ಸಂಘಟನೆಗಳನ್ನು ಬಲಪಡಿಸುವುದರ ಜೊತೆಗೆ ಕೃಷಿ ವಿಸ್ತರಣಾ ನೀತಿಯನ್ನು ಈ ಕೆಳಗೆ ನೀಡಿದ ಅಂಶಗಳ ಆಧಾರದ ಮೇಲೆ ಮಾರ್ಪಡಿಸಿ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ.

೧. ಸಮುದಾಯಗಳನ್ನು ಸಮರ್ಥವಾಗಿ ಬೆಳೆಸುವುದು ಹಾಗೂ ಅದಕ್ಕೆ ಅವಶ್ಯಕವಾದ ಅಧಿಕಾರ ನೀಡುವುದು(ಸಮುದಾಯಗಳ ಸಬಲೀಕರಣ).

೨. ಸಮುದಾಯಗಳನ್ನು ಸಂಘಟಿಸುವುದು.

೩. ಸಮುದಾಯದ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದು.

೪. ಸಮಸ್ಯೆಗಳ ನಿರ್ವಹಣಾ ಸಾಮರ್ಥ್ಯ ಬೆಳೆಯಲು ಶಿಕ್ಷಣ ನೀಡುವುದು. – ಈ ನಾಲ್ಕು ಅಂಶಗಳನ್ನು ಈ ಕೆಳಗೆ ಕೂಲಂಕುಷವಾಗಿ ವಿವರಿಸಲಾಗಿದೆ.

. ಸಮುದಾಯಗಳನ್ನು ಸಮರ್ಥವಾಗಿ ಸಬಲೀಕರಣಗೊಳಿಸುವುದು ಹಾಗೂ ಅವಶ್ಯಕವಾದ ಅಧಿಕಾರ ನೀಡುವುದು:

ಸದೃಢವಾದ ರೈತ ಸಂಘಟನೆಗಳನ್ನು ಕಟ್ಟಿ ಬೆಳೆಸಲು ಅವುಗಳ ಮೂಲವಾದ ಸಮುದಾಯಗಳನ್ನು ಅರ್ಥೈಸಿಕೊಂಡು ಆ ಸಮುದಾಯದ ಜನರ ಸಾಮರ್ಥ್ಯವನ್ನು ವೃದ್ಧಿಗೊಳಿಸಿ, ಆ ಸಂಘಟನೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅವಶ್ಯಕವಾದ ಅಧಿಕಾರ ನೀಡಬೇಕಾಗುತ್ತದೆ. ಹೀಗಿರುವುದರಿಂದ ನಮ್ಮ ವಿಸ್ತರಣಾ ನೀತಿಯು ಮುಖ್ಯವಾಗಿ ರೈತರ ಸಬಲೀಕರಣದತ್ತ ಗಮನಹರಿಸಬೇಕಾಗಿದೆ. ಸಮುದಾಯವು ಬಲಶಾಲಿಯಾದಾಗ ಮಾತ್ರ ಸಂಘಟನೆಗಳು ಶಕ್ತಿಯುತವಾಗಿ ಬೆಳೆಯುವುದು ಸಾಧ್ಯ. ಈ ದೆಸೆಯಲ್ಲಿ ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳು ರೈತರ ಸಾಮರ್ಥ್ಯವರ್ಧನೆಗೆ ಸೂಕ್ತವಾದ ಪದ್ಧತಿಯನ್ನು ಅನುಸರಿಸುವುದರ ಮೂಲಕ ರೈತ ಸಮುದಾಯಗಳು ತಮ್ಮನ್ನು ಸಂಘಟನೆಗಳ ರೂಪದಲ್ಲಿ ರಚಿಸಿಕೊಂಡು ತಮ್ಮ ಬೆಳವಣಿಗೆ ಹಾಗೂ ಅಭಿವೃದ್ಧಿಯನ್ನು ತಾವೇ ರೂಪಿಸಿ, ನಿರ್ವಹಿಸುವಲ್ಲಿ ಸಮರ್ಥರಾಗುವಂತೆ ಸಹಕರಿಸಬೇಕಾಗಿದೆ. ರೈತ ಸಮುದಾಯದಲ್ಲಿ ಕ್ರಿಯಾತ್ಮಕವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ ಯುವಕರನ್ನು ಹುರಿದುಂಬಿಸಿ, ಅವರ ವಿಚಾರಧಾರೆಗಳನ್ನು ಹೊಡಿದೆಬ್ಬಿಸಿ, ಸಮಾಜಕ್ಕಾಗಿ, ರೈತ ಸಮುದಾಯಕ್ಕಾಗಿ ಅವರೇನು ಮಾಡಬಲ್ಲರು ಎಂಬುದನ್ನು ಅವರು ಯೋಚಿಸಿ ಕಾರ್ಯೋನ್ಮುಖರಾಗುವಂತೆ ಮಾರ್ಗದರ್ಶನ ನೀಡುವುದರ ಮೂಲಕ ಸಮುದಾಯಗಳ ಸಾಮರ್ಥ್ಯವರ್ಧನೆಯನ್ನು ಕಾರ್ಯಗತಗೊಳಿಸಬೇಕಾಗಿದೆ (ಚಾಮಲಾ, ೧೯೯೦).

ಸಮುದಾಯದ ಅಧಿಕಾರೀಕರಣ ಹಾಗೂ ಬಲವರ್ಧನೆಯು ಪ್ರಮುಖವಾಗಿ ಸಮುದಾಯದ ಸದಸ್ಯರನ್ನು ಅದರಲ್ಲಿಯೂ ಮುಖ್ಯವಾಗಿ ಯುವ ರೈತರನ್ನು ಈ ಪ್ರಕ್ರಿಯೆಯು ಮುಂಚೂಣಿಯಲ್ಲಿ ಇರುವಂತೆ ಮಾರ್ಗದಶ್ನ ನೀಡಬೇಕಾಗಿದೆ. ಈ ಅಧಿಕಾರೀಕರಣದ ಪ್ರಕ್ರಿಯೆ ಅವರ ಕಲ್ಯಾಣಕ್ಕೆ ಪೂರಕವಾಗಿ ಕೆಲಸ ಮಾಡುವಂತೆ ಸೆಳೆಯಬೇಕಾಗಿದೆ.

ಗ್ರಾಮ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಸ್ತರಣಾ ಕಾರ್ಯಕರ್ತರು ಈ ಪ್ರಕ್ರಿಯೆಯ ಒಡೆತನವನ್ನು ಸಮರ್ಪಕವಾಗಿ ಸಮುದಾಯವೇ ಹೊಂದುವಂತೆ ಸಂಚಾಲನೆ ನೀಡಬೇಕಾಗಿದೆ. ಹೀಗೆ ಮಾಡುವ ಮುಖಾಂತರ ಸಮುದಾಯದ ಸದಸ್ಯರು ಈ ಸಾಮರ್ಥ್ಯ ಹಾಗೂ ಅಧಿಕಾರವನ್ನು ಪರಸ್ಪರ ಸಹಕಾರದೊಂದಿಗೆ ಸಮುದಾಯ ಸಂಘಟನೆಯ ಕಡೆಗೆ ಎಳೆದೊಯ್ದು ಪರಸ್ಪರ ಒಂದುಗೂಡಿ ಕಾರ್ಯ ನಿರ್ವಹಿಸುವಲ್ಲಿ ಸಹಾಯವಾಗುವುದು. ಈ ಸಾಮರ್ಥ್ಯವರ್ಧನಾ ಪ್ರಕ್ರಿಯೆಯಲ್ಲಿ ಸಮುದಾಯದಲ್ಲಿ ಹುದುಗಿದ್ದ ಅಸಾಧಾರಣವಾದ ಶಕ್ತಿಯನ್ನು ಅವರ ಕಲ್ಯಾಣಕ್ಕಾಗಿ ಹೊರತರುವುದಲ್ಲದೇ ರೈತಪರ ಸಂಘಟನೆಗಳ ಜನನಕ್ಕೆ ಕಾರಣವಾಗಬಲ್ಲದು. ಈ ಸಬಲೀಕರಣ ಪ್ರಕ್ರಿಯೆಯು ಅಧಿಕಾರ ಹೊಂದಿರದ ಹಾಗೂ ಅಧಿಕಾರ ಹೊಂದಿದವರ ಮಧ್ಯೆ ಅಧಿಕಾರ ಹಾಗೂ ಸಾಮರ್ಥ್ಯಗಳ ವಿನಿಮಯಕ್ಕೆ ಸಹಕಾರಿಯಾಗುವುದಲ್ಲದೇ ಅವರು ಒಂದಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬಲ್ಲರು. ರೈತ ಸಂಘಟನೆಗಳು ತಮ್ಲಮ ಸದಸ್ಯ ರೈತರ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಕಾರ್ಯೋನ್ಮುಖರಾಗುವಲ್ಲಿ ಸಹಯೋಗ ನೀಡುವವು. ಈ ರೀತಿಯಲ್ಲಿ ಕಾಲಾಂತರದಲ್ಲಿ ಸಂಪೂರ್ಣವಾಗಿ ಸಬಲೀಕರಣ ಹೊಂಧಿದ ರೈತ ಸಂಘಟನೆಗಳು ಗ್ರಾಮ ಮಟ್ಟದಲ್ಲಿ ಇರಬಹುದಾದ ಹಲವಾರು ಕೃಷಿಯೇತರ ಸಮಸ್ಯೆಗಳಿಗೂ ಸಮಾಧಾನ ಕಂಡುಕೊಳ್ಳುವಲ್ಲಿ ಹಾಗೂ ಒಟ್ಟಾರೆ ಗ್ರಾಮೀಣ ಅಭಿವೃದ್ಧಿಯಲ್ಲಿ ಪ್ರಮುಖವಾದ ಪಾತ್ರವಹಿಸಲು ಸಹಕಾರಿಯಾಗುತ್ತವೆ.

. ಸಮುದಾಯಗಳನ್ನು ಸಂಘಟಿಸುವುದು

ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ವಿಸ್ತರಣಾ ಕಾರ್ಯಕರ್ತರು ಸಮುದಾಯ ಸಂಘಟನೆಯಲ್ಲಿ ಸೂಕ್ತ ಅನುಭವ ಹೊಂದಿರಬೇಕು. ಅಥವಾ ಸಮುದಾಯ ಸಂಘಟನೆಗೆ ಅವಶ್ಯಕವಿರುವ ತತ್ವಗಳನ್ನು ಅರಿತು ರೈತರ ಗುಂಪುಗಳನ್ನು ನಿರ್ವಹಿಸಲು ಕಲಿಯಬೇಕು (ಚಾಮಲಾ ಮತ್ತು ಮಾರ್ಟಿಸ್‌, ೧೯೯೦). ಹೀಗೆ ಮಾಡುವುದರಿಂದ ಗ್ರಾಮೀಣ ಸಮುದಾಯದಲ್ಲಿರುವ ಬಡವ ಹಾಗೂ ಸಂಪನ್ಮೂಲರಹಿತ ಕುಟುಂಬಗಳು ತಮ್ಮ ಅಭಿವೃದ್ಧಿಗೆ ಶ್ರಮಿಸಲು ಸಹಕಾರ ನೀಡುತ್ತಿರುವ ಕಾರ್ಯಕರ್ತರೊಂದಿಗೆ ಕೈ ಜೋಡಿಸಿ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ರೈತ ಸಮುದಾಯ ಸಂಘಟನೆಯಲ್ಲಿ ಭಾಗವಹಿಸುವ ಸದಸ್ಯರು ಅಲ್ಲಿಯ ರಚನಾವ್ಯವಸ್ಥೆ, ಅಭಿವೃದ್ಧಿಪರ ನೀತಿ, ನಿಯಮಗಳು, ಕಾಯಿದೆಗಳು ಹಾಗೂ ಪಾತ್ರಗಳನ್ನು ಸಮರ್ಪಕರವಾಗಿ ಅರಿಯಲು ಸಹಾಯವಾಗುವುದಲ್ಲದೇ ಸಮಾಜದಿಂದ ಗುರುತಿಸಲ್ಪಟ್ಟ ನಾಯಕರು ಸಂಘಟನೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಯೋಜಿಸಿ ಅನುಷ್ಠಾನಗೊಳಿಸಲು ಹಾಗೂ ಪರಿಣಾಮಕಾರಿ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಪ್ರಾಯೋಗಿಕವಾಗಿ ಕಲಿಯಲು ಸಾಧ್ಯವಾಗುವುದು. ಇದರ ಜೊತೆ ಜೊತೆಗೆ ಸಂಘಟನೆಯಲ್ಲಿ ಬರಬಹುದಾದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವುದು, ವಿವಿಧ ಸಂಘ – ಸಂಸ್ಥೆಗಳೊಂದಿಗೆ ವ್ಯಾವಹಾರಿಕ ವಿಚಾರಗಳನ್ನು ಚರ್ಚಿಸುವುದು ಹಾಗೂ ಸಂಘಟನೆಯ ಬೆಳವಣಿಗೆಗೆ ಸೂಕ್ತವಾದ ತಂತ್ರಗಳನ್ನು ನಿರೂಪಿಸುವುದರ ಮೂಲಕ ಸಮುದಾಯಗಳನ್ನು ಸಂಘಟಿಸುವಲ್ಲಿ ತುಂಬಾ ಸಹಕಾರಿಯಾಗುವುದು.

. ಸಮುದಾಯದ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದು

ಯಾವುದೇ ಸಂಘಟನೆಗಳು ಬೆಳೆದು ಹೆಮ್ಮರವಾಗಬೇಕಾದರೆ ಸಂಘಟನೆಯಲ್ಲಿರುವ ಜನರ ಸಾಮರ್ಥ್ಯ ಬೆಳೆಸುವುದು ತುಂಬಾ ಅವಶ್ಯಕ. ಮಾನವ ಸಂಪನ್ಮೂಲಗಳ ಸಮರ್ಪಕ ಅಭಿವೃದ್ಧಿಯು ಆ ಸಂಘಟನೆಯಲ್ಲಿರುವ ಜನರನ್ನು ತಾಂತ್ರಿಕವಾಗಿ, ನಿರ್ವಹಣೆ ವಿಷಯವಾಗಿ ಹಾಗೂ ವ್ಯಾವಹಾರಿಕವಾಗಿ ಸಬಲೀಕರಣಗೊಳಿಸುವ ಮುಖಾಂತರ, ಅವರು ತಮ್ಮ ಕುಟುಂಬದಲ್ಲಿ, ಸಮುದಾಯದಲ್ಲಿ ಹಾಗೂ ಸಂಘಟನೆಯಲ್ಲಿ ವಹಿಸುವ ಪಾತ್ರಗಳನ್ನು ಸೂಕ್ತವಾಗಿ ಅರ್ಥೈಸಿಕೊಂಡು ಕಾರ್ಯ ನಿರ್ವಹಿಸಲು ಸಹಕಾರಿಯಾಗುವುದು.

ರೈತ ಸಂಘಟನೆಗಳು ಪ್ರಮುಖವಾಗಿ ಒಕ್ಕಲುತನದ ಅಭಿವೃದ್ಧಿಗೆ ಕೆಲಸ ಮಾಡುವುದರಿಂದ, ಈ ಸಂಘಟನೆಯ ಸದಸ್ಯರು ಪ್ರಮುಖವಾಗಿ ಹಲವಾರು ತಾಂತ್ರಿಕ ವಿಷಯಗಳಲ್ಲಿ ತರಬೇತಿ ಪಡೆಯಬೇಕಾಗುವುದು. ಇದಕ್ಕೆ ಸಂಬಂಧಿಸಿದಂತೆ, ರೈತ ಸಂಘಟನೆಯ ಸದಸ್ಯರಲ್ಲಿ ತಾಂತ್ರಿಕ ವಿಷಯಗಳಲ್ಲಿ ತರಬೇತಿ ಪಡೆದು ಸಮುದಾಯದಲ್ಲಿ ವಿಷಯ ತಜ್ಞರಂತೆ ಕೆಲಸ ಮಾಡಲು ಸಹಕಾರಿಯಾಗುವಂತೆ ಯೋಜಿಸಿ ತರಬೇತಿ ನೀಡುವುದು ಸೂಕ್ತ. ತದನಂತರ ಈ ತಾಂತ್ರಿಕ ತರಬೇತಿ ಪಡೆದ ರೈತರು ಸಮುದಾಯದಲ್ಲಿ ರೈತ ವಿಜ್ಞಾನಿಗಳಾಗಿ ಕೆಲಸ ಮಾಡುವುದು ಹಾಗೂ ಇನ್ನುಳಿದ ರೈತರನ್ನು ಕ್ರಮೇಣವಾಗಿ ತರಬೇತಿ ಪಡೆಯಲು ವಿಷಯ ತಜ್ಞರಂತೆ ಕಾರ್ಯನಿರ್ವಹಿಸುವುದು ಅವಶ್ಯಕ. ಇನ್ನೂ ಸಂಘಟನೆಯ ನಿರ್ವಹಣೆಯಲ್ಲಿ ಪಾಲ್ಗೊಳ್ಳುವ ರೈತ ಪ್ರತಿನಿಧಿಗಳನ್ನು ಅವಶ್ಯಕತೆಗನುಗುಣವಾಗಿ ತರಬೇತಿ ನೀಡಿ ರೈತ ಸಂಘಟನೆಗಳನ್ನು ಸಬಲೀಕರಣ ಗೊಳಿಸುವಲ್ಲಿ ಸಹಕಾರಿಯಾಗುವಂತೆ ಮಾಡಬೇಕು.

. ಸಮಸ್ಯೆಗಳ ನಿರ್ವಹಣಾ ಸಾಮರ್ಥ್ಯ ಬೆಳೆಸಲು ಶಿಕ್ಷಣ ನೀಡುವುದು

ಸಮುದಾಯದ ಸಂಘಟನೆ, ಸಂಸ್ಥೆಗಳ ನಿರ್ಮಾಣ ಹಾಗೂ ನಿರ್ವಹಣೆಯ ಪ್ರತಿಯೊಂದು ಹಂತದಲ್ಲಿ ಸಮಸ್ಯೆಗಳು ಬರುವುದು ಸರ್ವೇಸಾಮಾನ್ಯ. ಇಂಥ ಸಮಸ್ಯೆಗಳನ್ನು ಸಂಘಟನೆಯ ಚೌಕಟ್ಟಿನ ಅಡಿಯಲ್ಲಿ ಸೂಕ್ತವಾಗಿ ಪರಿಹರಿಸಲು ಸಂಘಟನೆಯ ನಿರ್ವಾಹಕ ಸಮಿತಿಯ ಸದಸ್ಯರ ಸಾಮರ್ಥ್ಯಗಳನ್ನು ಬೆಳೆಸುವುದು ತುಂಬಾ ಅವಶ್ಯಕವಾದ ವಿಚಾರ. ಸಂಘಟನೆಯ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತವಾದ ಪರಿಹಾರ ಕಂಡು ಹಿಡಿಯುವುದು ಒಂದು ಪ್ರಮುಖ ಪಾತ್ರವೇ ಸರಿ. ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಹಿಡಿಯುವುದು, ಸಂಘಟನೆಯ ಸದಸ್ಯರಿಗೆ ಹಾಗೂ ಸದಸ್ಯ ರೈತರಿಗೆ ನ್ಯಾಯಯುತವಾಗಿ ಪರಿಹಾರ ದೊರೆಯುವಂತೆ ಕಾರ್ಯ ನಿರ್ವಹಿಸುವ ದಿಸೆಯಲ್ಲಿ ಪ್ರಾಯೋಗಿಕ ತರಬೇತಿ ನೀಡುವುದು ಮಹತ್ವದ ಸಂಗತಿ. ಸಮಸ್ಯೆಗಳ ಸಮರ್ಪಕ ಗುರುತಿಸುವಿಕೆ, ಸಮಸ್ಯೆ ಪರಿಹಾರದ ಪ್ರಥಮ ಹಂತ. ಹಲವಾರು ಪ್ರಸಂಗಗಳಲ್ಲಿ ಈ ಹಂತವನ್ನು ಸರಿಯಾಗಿ ಮಾಡದೇ ಹೋದರೆ ಸಮಸ್ಯೆ ಪರಹರಿಸುವವರ ಬದಲಾಗಿ ಸಮಸ್ಯೆ ಉಲ್ಬಣಿಸುವ ಸಾಧ್ಯತೆಗಳುಂಟು. ಸಮಸ್ಯೆಗಳ ಮೂಲವನ್ನು ಶೋಧಿಸಿದ ನಂತರ, ರೈತ ಪ್ರತಿನಿಧಿಗಳು ತಮ್ಮ ಸಾಂಪ್ರದಾಯಿಕ ಜ್ಞಾನದ ಜೊತೆಗೆ ತರಬೇತಿಗಳಿಂದ ಪಡೆದ ಜ್ಞಾನವನ್ನು ಅನುಭವದ ಆಧಾರದ ಮೇಲೆ ಸಮಸ್ಯೆಗಳಿಗೆ ಸೂಕ್ತ ಸಮಾಧಾನ ಪಡೆಯುವಲ್ಲಿ – ಬಳಸುವಲ್ಲಿ ಸಹಕಾರಿಯಾಗುವುದು. ತಾಂತ್ರಿಕ ಸಮಸ್ಯೆಗಳೇನಾದರೂ ಕಂಡುಬಂದಲ್ಲಿ ವೈಜ್ಞಾನಿಕವಾಗಿ, ತಮ್ಮ ಕ್ಷೇತ್ರಗಳಲ್ಲಿ ಪ್ರಯೋಗಗಳನ್ನು ಅನುಷ್ಠಾನ ಮಾಡುವ ಮೂಲಕ ಹಾಗೂ ಸೂಕ್ತವದ ವಿಷಯ ಪರಿಣಿತರೊಂದಿಗೆ ಚರ್ಚಿಸುವ ಮುಖಾಂತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

ರೈತ ಸಂಘಟನೆಗಳು ಉದ್ದೇಶ

ರೈತ ಸಂಘಟನೆಗಳನ್ನು ಸ್ಥಾಪಿಸುವುದು, ಅವುಗಳ ಸಾಮರ್ಥ್ಯವರ್ಧನೆ ಹಾಗೂ ಕಾನೂನಾತ್ಮಕವಾಗಿ ನೋಂದಣಿ ಮಾಡುವುದರ ಮೂಲಕ ಹಲವಾರು ಸಹಾಯ ಸೌಲಭ್ಯಗಳನ್ನು ಪಡೆಯುವುದು ಒಂದೆಡೆಗೆ ಸಾಧ್ಯವಾದರೆ ರೈತ ಸಮುದಾಯಗಳ ಒಟ್ಟಾರೆ ಅಭಿವೃದ್ಧಿಗೆ ಇದು ಪೂರಕವಾಗುವುದು. ರೈತ ಸಂಘಟನೆಗಳ ಸ್ಥಾಪನೆಯು ಈ ಕೆಳಗೆ ನೀಡಿದ ಉದ್ದೇಶಗಳನ್ನು ಹೊಂದಿರಬೇಕಾಗುವುದು.

 • ಸಮಾನಮನಸ್ಕ ರೈತರನ್ನು ಒಂದು ಸಂಸ್ಥೆಯ ಅಡಿಯಲ್ಲಿ ತರುವುದಷರ ಮೂಲಕ ಸಾಂಘಿಕ ಶಕ್ತಿ ಬೆಳೆಸುವುದು.
 • ರೈತರನ್ನು ಕೃಷಿ ಉತ್ಪಾದನೆ ಸಂಸ್ಕರಣೆ ಹಾಗೂ ಮಾರುಕಟ್ಟೆ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಂಪರ್ಕ ಕಲ್ಪಿಸುವುದು.
 • ಸೂಕ್ತ ಸಮಯದಲ್ಲಿ ಉತ್ತಮ ಗುಣಮಟ್ಟದ ಕೃಷಿ ಸಾಮಗ್ರಿಗಳು, ಕೃಷಿ ಹಣಕಾಸು ಹಾಗೂ ತಂತ್ರಜ್ಞಾನ ದೊರೆಯುವಂತೆ ಮಾಡುವುದು.
 • ಕೃಷಿ ಸಂಬಂಧಿಸಿದ ತಾಂತ್ರಿಕ ಹಾಗೂ ನಿರ್ವಹಣೆಯ ವಿಷಯಗಳ ಬಗ್ಗೆ ರೈತರಿಗೆ ತರಬೇತಿ ನೀಡುವುದು ಹಾಗೂ ಕ್ಷೇತ್ರ ಮಟ್ಟದಲ್ಲಿ ಬೆಂಬಲ ನೀಡುವುದು.
 • ಸರಕಾರಿ ಹಾಗೂ ಸರಕಾರೇತರ ಸಂಘ – ಸಂಸ್ಥೆಗಳೊಂದಿಗೆ ಚರ್ಚಿಸಿ ರೈತ ಸಮುದಾಯಕ್ಕೆ ದೊರಕಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಸಹಾಯ ಮಾಡುವುದು.
 • ವಿವಿಧ ಖಾಸಗಿ ವಲಯದ ಸಂಸ್ಥೆಗಳೊಂದಿಗೆ ಸಂಬಂಧ ಕಲ್ಪಿಸಿ ರೈತರು ಕೃಷಿಗೆ ಸಂಬಂಧಿಸಿದಂತೆ ಮಾಡಬಹುದಾದ ವೆಚ್ಚಗಳ ಕಡಿತ ಮಾಡುವಲ್ಲಿ ಸಹಾಯ ಮಾಡುವುದು.
 • ರೈತರ ಒಟ್ಟಾರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವಶ್ಯಕವಿರುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
 • ನಮ್ಮ ದೇಶದಲ್ಲಿ ಸಂವಿಧಾನಾತ್ಮಕವಾಗಿ ರೈತಪರ ಸಂಘಟನೆಗಳನ್ನು ರಚಿಸಿ ಅವುಗಳ ಸಾಮರ್ಥ್ಯವರ್ಧನೆಗೆ ಹಲವಾರು ರೀತಿಯಲ್ಲಿ ಸಹಕಾರ ನೀಡುವುದಕ್ಕೆ ವಿವಿಧ ಯೋಜನೆಗಳು ಉಂಟು.

ರೈತ ಸಂಘಟನೆಗಳ ಪ್ರಕಾರಗಳು

ರೈತ ಸಂಘಟನೆಗಳನ್ನು ಪ್ರಮುಖವಾಗಿ ಎರಡು ಪ್ರಕಾರವಾಗಿ ವಿಂಗಡಿಸಬಹುದು.

೧. ಸಮುದಾಯ ಹಾಗೂ ಸಂಪನ್ಮೂಲ ಆಧಾರಿತ ಸಂಘಟನೆಗಳು.

೨. ಸಮುದಾಯ ಹಾಗೂ ಮಾರುಕಟ್ಟೆ ಆಧಾರಿತ ಸಂಘಟನೆಗಳು.

ಸಮುದಾಯ ಆಧಾರಿತ ಹಾಗೂ ಸಂಪನ್ಮೂಲಗಳ ಮೇಲೆ ಹೆಚ್ಚು ಒತ್ತು ನೀಡುವ ರೈತ ಸಂಘಟನೆಗಳು ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿರುವ ರೈತಸಹಕಾರಿ ಸಂಘಟನೆಗಳಾಗಿರಬಹುದು. ಈ ಸಂಘಟನೆಗಳು ಸಾಮಾನ್ಯವಾಗಿ ರೈತ ಸದಸ್ಯರಿಗೆ ಅವಶ್ಯಕವಿರುವ ಕೃಷಿ ಸಾಮಗ್ರಿಗಳನ್ನು ಪೂರೈಸುವುದು, ರೈತರು ಹೊಂದಿದ ವಿವಿಧ ಸಂಪನ್ಮೂಲಗಳಿಂದ ಹೇಗೆ ಉತ್ಪಾದಕತೆಯನ್ನು ಹೆಚ್ಚಿಸಬೇಕೆಂಬ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತವೆ. ಸಾಮಾನ್ಯವಾಗಿ ಈ ಸಂಘಟನೆಗಳು ಗಾತ್ರದಲ್ಲಿ ಸಣ್ಣದಾಗಿದ್ದು, ತಮ್ಮದೇ ಆದ ಕ್ಷೇತ್ರ ಪರಿಧಿಯನ್ನು ಹೊಂದಿರುತ್ತವೆ. ಈ ಮೇಲೆ ಹೇಳಿದಂತೆ ಇವುಗಳ ಪ್ರಮುಖ ಕೆಲಸ ರೈತ ಸದಸ್ಯರಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಕೃಷಿ ಸಾಮಗ್ರಿಗಳನ್ನು ಪೂರೈಸುವುದಾಗಿರುತ್ತದೆ. ಇಂತಹ ಸಂಘಟನೆಗಳ ಸದಸ್ಯರು ವಿವಿಧ ಪ್ರಕಾರದ ಬೆಳೆ ಬೆಳೆಯುವ ರೈತರಾಗಿರುತ್ತಾರೆ.

ಇನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ನಮಗೆ ಹಲವಾರು ಪ್ರಾಥಮಿಕ ಮಟ್ಟದ ಕೃಷಿ ಸಹಕಾರಿ ಸಂಗಗಳು ಕಾರ್ಯ ನಿರ್ವಹಿಸುವುದು ಕಂಡುಬಂದರೂ ಈ ಸಂಘಟನೆಗಳು ಹಣಕಾಸಿನ ವಿಷಯದಲ್ಲಿ ತುಂಬಾ ಅಶಕ್ತವಾಗಿದ್ದು, ಅವುಗಳ ಕಾರ್ಯ ನಿರ್ವಹಿಸುವ ರೀತಿಯೂ ಅಂತಹ ಪರಿಣಾಮಕಾರಿಯಾಗಿಲ್ಲ. ಇಂತಹ ಸಂಘಟನೆಗಳನ್ನು ಸಬಲಗೊಳಿಸಲು ಹಲವಾರು ತಂತ್ರಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾಗುವುದು. ಈ ತರಹದ ರೈತ ಸಂಘಟನೆಗಳು ಪ್ರಮುಖವಾಗಿ ಸಂಘದ ಮುಖಾಂತರ ಕೃಷಿ ಸಾಮಗ್ರಿಗಳನ್ನು ಹಾಗೂ ಬೆಳೆ ಕೊಯ್ಲಿನ ನಂತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದರ ಮುಖಾಂತರ ಸ್ವಲ್ಪ ಆದಾಯವನ್ನು ಪಡೆಯ ಬಹುದಾಗಿದೆ. ಈ ರೀತಿಯಾಗಿ ಪಡೆದ ಆದಾಯವನ್ನು ರೈತಪರ ಕಾರ್ಯ ಕ್ರಮಗಳಿಗೆ ಬಳಸಬಹುದಾಗಿದೆ.

ಇನ್ನು ಎರಡನೆಯದಾಗಿ ಮಾರುಕಟ್ಟೆ ಆಧಾರಿತ ರೈತ ಸಮುದಾಯ ಸಂಘಟನೆಗಳು ಪ್ರಮುಖವಾಗಿ ಯಾವುದಾದರೊಂದು ಪ್ರಮುಖ ಬೆಳೆಯ ಮೇಲೆ ಒತ್ತು ನೀಡಿ ಕಾರ್ಯ ನಿರ್ವಹಿಸುತ್ತವೆ (ಉದಾ: ಕಬ್ಬು ಬೆಳೆಗಾರರ ಸಂಘ, ಮಾವು ಬೆಳೆಗಾರರ ಸಂಘ, ದಾಳಿಂಬೆ ಬೆಳೆಗಾರರ ಸಂಘ, ಜೋಳ ಬೆಳೆಗಾರರ ಸಂಘ ಇತ್ಯಾದಿ). ಈ ಸಂಘಟನೆಗಳು ತಾವು ಕಾರ್ಯ ನಿರ್ವಹಿಸಲು ಆಯ್ಕೆ ಮಾಡಿಕೊಂಡ ಬೆಳೆಗೆ ಸೂಕ್ತವಾಗುವಂತೆ ಅವುಗಳ ಗುಣಮಟ್ಟ ಸುಧಾರಣೆ, ವಿವಿಧ ಉತ್ಪನ್ನಗಳ ತಯಾರಿಕೆ, ಸಂಸ್ಕರಣೆ ಮಾಡುವುದು ಹಾಗೂ ಮೌಲ್ಯವರ್ಧನೆ ಮಾಡಿ ವಾಣಿಜ್ಯ ಮಟ್ಟದಲ್ಲಿ ಮಾರುಕಟ್ಟೆ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯುವಲ್ಲಿ ಫಲಪ್ರದವಾಗುತ್ತವೆ. ಈ ಸಂಘಟನೆಗಳು ಯಾವುದೇ ರೀತಿಯ ಸಮುದಾಯಗಳ ನಿರ್ಬಂಧನೆಯನ್ನು ಹೊಂದಿರದೇ ಯಾವುದೇ ಜಾತಿ – ಮತಗಳಿಂದ ಬಂದ ರೈತರನ್ನು ಸದಸ್ಯರನ್ನಾಗಿ ಸೇರಿಸಿಕೊಂಡು ಕಾರ್ಯ ನಿರ್ವಹಿಸುತ್ತವೆ. ಇದಲ್ಲದೇ ಬೆಳೆಯಿಂದ ವಿವಿಧ ಉತ್ಪನ್ನಗಳನ್ನು ಸಂಸ್ಕರಿಸಲು ಬೇಕಾಗಿರುವ ವಿವಿಧ ಸೌಲಭ್ಯಗಳನ್ನು ರೂಪಿಸುವ ಸಾಮರ್ಥ್ಯವಿರುವ ಇತರೇ ಸದಸ್ಯರನ್ನು ಹೆಚ್ಚಿನ ಲಾಭ ದೊರಿಸಿಕೊಡುವಲ್ಲಿ ಸಹಕರಿಸುತ್ತವೆ. ಈ ರೀತಿಯ ಸಂಘಟನೆಗಳು ಸಾಮಾನ್ಯವಾಗಿ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹಾಗೂ ಹೆಚ್ಚಿನ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತವೆ.

ಇಂತಹ ಸಂಘಟನೆಗಳು ಪ್ರಮುಖವಾಗಿ ಕಾರ್ಯ ನಿರ್ವಹಿಸುವ ಕ್ಷೇತ್ರಗಳೆಂದರೆ, ರೈತಪರ ಸಂಶೋಧನೆಗಳು, ಗುಣಮಟ್ಟದ ಕೃಷಿ ಸಾಮಗ್ರಿ ವಿತರಣೆ, ರೈತರಿಗೆ ಅವಶ್ಯಕವಿರುವ ತಂತ್ರಜ್ಞಾನದ ವಿಸ್ತರಣೆ, ರೈತರಿಗೆ ಬೆಳೆ ಬೆಳೆಯುವ ಹಂತದಲ್ಲಿ ಕ್ಷೇತ್ರ ನಿರ್ಧಾರಗಳನ್ನು ಮಾಡಲು ಸಹಕಾರಿಯಾಗುವಂತೆ ಕ್ಷೇತ್ರ ಬೆಂಬಲ, ತರಬೇತಿ, ಕೃಷಿ ಉತ್ಪನ್ನದ ಕ್ರೋಢೀಕರಣ, ಸಂಸ್ಕರಣೆ ಹಾಗೂ ಉತ್ಪನ್ನಗಳ ಮಾರುಕಟ್ಟೆಯನ್ನು ಸಮರ್ಪಕವಾಗಿ ಮಾಡುವುದರ ಮುಖಾಂತರ ರೈತರ ಹೂಡಿದ ಬಂಡವಾಳಕ್ಕೆ ಸೂಕ್ತವಾಗಿ ಲಾಭ ಬರುವ ದೆಸೆಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಭಾರತದಲ್ಲಿ ಈ ತತ್ವಗಳ ಮೇಲೆ ಕೆಲಸ ಮಾಡುವ ಹಲವಾರು ಸಂಘಟನೆಗಳು ಇವೆ.

ರೈತಪರ ಕಾರ್ಯ ನಿರ್ವಹಿಸುವ ವಿವಿಧ ಸಂಘಟನೆಗಳ ಫಲಪ್ರದವಾದ ಕಾರ್ಯ ನಿರ್ವಹಣೆಯು ಆ ಸಂಘಟನೆಗಳು ತಮ್ಮ ಸದಸ್ಯರಿಗೆ ಅವಶ್ಯಕತೆಯಿರುವ ಬಂಡವಾಳ, ಸಾಮಗ್ರಿಗಳು ಹಾಗೂ ಸಂಸ್ಕರಣೆಗೆ ಬೇಕಾಗಿರುವ ಸೌಲಭ್ಯಗಳನ್ನು ನಿರಂತರವಾಗಿ ಪೂರೈಸುವ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಈ ದಿಸೆಯಲ್ಲಿ ಚುರುಕಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ನಿರ್ವಹಣಾ ತಂಡದ ಅವಶ್ಯಕತೆಯಿದೆ. ಈ ರೀತಿಯ ಸೌಲಭ್ಯಗಳಿಂದ ಪಡೆದ ಹೆಚ್ಚಿನ ಲಾಭವನ್ನು ಸಂಘದ ಸದಸ್ಯರ ಮುಂದಿನ ಅನುಕೂಲಗಳ ಸೃಷ್ಟಿಗೆ ವಿನಿಯೋಗಿಸಬಹುದಾಗಿದಸೆ. ಈ ಎಲ್ಲಾ ಕಾರ್ಯಗಳನ್ನು ನಿರ್ವಹಿಸಬೇಕಾದರೆ ಸಂಘಟನೆಗಳ ನಾಯಕತ್ವವು ತುಂಬಾ ಬಲಶಾಲಿಯಾಗಿರಬೇಕು ಹಾಗೂ ಈ ಸದಸ್ಯರು ಪ್ರಾಯೋಗಿಕ ವಾದ ಅನುಭವ ಹೊಂದಿದ ರೈತ ಮುಂದಾಳುಗಳಾಗಿರಬೇಕು. ಆದ್ದರಿಂದ ಬಲಶಾಲಿ ಯಾದ ರೈತ ಸಂಘಟನೆಗಳನ್ನು ಕಟ್ಟಿ – ಬೆಳೆಸುವುದು ಸರಳವಾದ ಕಾರ್ಯವೇನಲ್ಲ.

ಸಂಘಟನೆಗಳಲ್ಲಿ ರೈತರ ಸಹಭಾಗಿತ್ವದ ಮೇಲೆ ಪ್ರಭಾವ ಬೀರುವ ಅಂಶಗಳು

ರೈತ ಸಂಘಟೆನಗಳಲ್ಲಿ ರೈತರ ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಅಂಶಗಳು ಪ್ರಭಾವವನ್ನು ಬೀರುತ್ತವೆ. ಇವುಗಳಲ್ಲಿ ಮುಖ್ಯವಾದವು ಎಂದರೆ:

೧. ಸಂಘಟನೆಯಲ್ಲಿ ರೈತರು ಭಾಗವಹಿಸುವಂಥೆ ಮಾಡಲು ಸಂಘಟನೆಯು ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳು ಹಾಗೂ ಸಂಘಟನೆಯ ಒಟ್ಟಾರೆ ಉದ್ದೇಶ.

೨. ಸಂಘವು ಪ್ರಮುಖವಾಗಿ ಕೈಗೆತ್ತಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಈ ಕಾರ್ಯ ಕ್ರಮಗಳ ಮೇಲೆ ಇರುವ ರೈತರ ಅವಲಂಭನೆ.

೩. ಸಂಘದಿಂದ ರೈತರಿಗೆ ದೊರೆಯಬಹುದಾದ ಪ್ರಯೋಜನೆಗಳು ಮತ್ತು ಲಾಭಗಳ ಬಗ್ಗೆ ಸ್ಪಷ್ಟತೆ.

೪. ಕೇವಲ ಸಂಘಟನೆಯ ಮುಖಾಂತರವೇ ಸಿಗಬಹುದಾದ ಸೌಲಭ್ಯಗಳು ಹಾಗೂ ಅವುಗಳ ಪ್ರಮಾಣ.

೫. ಸಂಘಟನೆಯ ವತಿಯಿಂದ ಪಡೆದ ಪ್ರಯೋಜನೆಗಳನ್ನು ಸದಸ್ಯರಿಗೆ ತಲುಪುವಂತೆ ಮಾಡುವ ಕಾರ್ಯಸೂಚಿ.

೬. ಸಮಯಕ್ಕೆ ಸರಿಯಾಗಿ ದೊರೆಯಬಹುದಾದ ಸೌಲಭ್ಯಗಳು ಹಾಗೂ ಸೇವೆಗಳು.

೭. ಸಹಭಾಗಿತ್ವಕ್ಕೆ ಸರಿಸಮನಾಗಿ ಈ ಲಾಭಗಳು ಮತ್ತು ಸೌಲಭ್ಯಗಳು ದೊರೆಯಬಹುದೆಂಬ ತುಲನಾತ್ಮಕ ವಿಶ್ಲೇಷಣೆ.

೮. ಸಂಘಟನೆಯ ಒಟ್ಟಾರೆ ನೀತಿ – ನಿಯಮಗಳು ಹಾಗೂ ಕಾರ್ಯನಿರ್ವಹಣೆಯ ಚೌಕಟ್ಟು.

ರೈತ ಸಂಘಟನೆಗಳ ಬೆಳವಣಿಗೆ ಹಾಗೂ ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವ ಅಂಶಗಳು

ರೈತ ಸಂಘಟನೆಗಳ ಪ್ರಾರಂಭ, ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ವಿವಿಧ ಅಂಶಗಳು ಪ್ರಭಾವ ಬೀರುತ್ತವೆ. ಇವುಗಳಲ್ಲಿ ಮುಖ್ಯವಾದ ಅಂಶಗಳೆಂದರೆ,

೧. ರೈತ ಸಂಘಟನೆಯ ಒಟ್ಟಾರೆ ಉದ್ದೇಶ.

೨. ಗ್ರಾಮ ಮಟ್ಟದಲ್ಲಿರುವ ಸಾಮಾಜಿಕ ಪರಿಸರ.

೩. ಸಮುದಾಯದ ರಚನೆ.

೪. ರಾಜಕೀಯ ಪ್ರಭಾವ.

೫. ಸಂಘಟನೆಯಿಂದ ದೊರೆಯಬಹುದಾದ ಲಾಭಗಳು.

೬. ಸಂಘಟನೆ ಸ್ಥಾಪಿಸಲು ಸ್ಥಳೀಯವಾಗಿ ಹಾಗೂ ಬಾಹ್ಯವಾಗಿ ದೊರೆಯುವ ಬೆಂಬಲ.

೭. ಸಂಘಟನೆ ಸ್ಥಾಪಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಂಚಾಲಕರ ಸಾಮರ್ಥ್ಯ.

೮. ಪ್ರಾರಂಭಿಕ ಹಂತದಲ್ಲಿ ಇಂತಹ ಘಟನೆಗಳನ್ನು ಸ್ಥಾಪಿಸುವ ಸಹಾಯ ಹಾಗೂ ಸಹಕಾರ.

೯. ರೈತರಲ್ಲಿ ಸಂಘಟನೆಯ ಬಗ್ಗೆ ಇರುವ ಸ್ಪಷ್ಟತೆ.

೧೦. ರೈತರಲ್ಲಿರುವ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸುವ ಛಲ.

ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳೆ ಆಧಾರಿತ ಗುಂಪುಗಳ ಮೂಲಕ ರೈತರನ್ನು ಒಂದುಗೂಡಿಸಿ ಸಣ್ಣ ಪ್ರಮಾಣದಲ್ಲಿ ಪರಸ್ಪರ ಸಹಕಾರದ ಅರಿವನ್ನು ಮೂಡಿಸಿ ತದನಂತರ ಈ ಗುಂಪುಗಳನ್ನು ಗ್ರಾಮ ಅಥವಾ ಹೋಬಳಿಯ ಮಟ್ಟದಲ್ಲಿ ರೈತ ಸಂಘಟನೆಯಾಗಿ ಪರಿವರ್ತಿಸುವುದು ಸೂಕ್ತವಾದ ವಿಚಾರ ಎಂಬುದು ನಮ್ಮ ಅನುಭವ. ಪ್ರಾರಂಭದ ಹಂತದಲ್ಲಿ ಸದಸ್ಯರೊಬ್ಬರು ಸದುದ್ದೇಶ ಹೊಂದಿರದೇ ಗುಂಪಿನಲ್ಲಿ ಸೇರಿದ್ದರೆ, ಪ್ರಥಮ ಅನುಭವದಲ್ಲಿಯೇ ಅಂತಹ ರೈತರನ್ನು ಬದಲಾಯಿಸುವಲ್ಲಿ ಸಹಕಾರಿಯಾಗುವುದು. ಒಮ್ಮೆ ಗುಂಪಿನ ಲಾಭದ ಅರಿವಾಯಿತೆಂದರೆ ಮುಂದೆ ಸಂಘಟನೆಯ ನಿರ್ಮಾಣದ ಕೆಲಸ ಸರಳವಾಗುವುದು. ಈ ಪ್ರಾರಂಭಿಕ ಹಂತದಲ್ಲಿ ಮುಂದೆ ಬಂದ ರೈತರು ಗುಂಪುಗಳಲ್ಲಿ ಒಂದಾಗಿ ಕೆಲಸ ಮಾಡುವುದರಿಂದ ಪರಸ್ಪರ ತಿಳುವಳಿಕೆ ಮೂಡುವುದಲ್ಲದೇ ಮಾನಸಿಕ ಅಂತರಗಳೇನಾದರೂ ಇದ್ದರೆ ಸರಿಪಡಿಸುವಲ್ಲಿ ಸಹಕಾರಿಯಾಗುವುದು. ಪ್ರಾರಂಭಿಕ ಹಂತದಿಂದ ಸಂಘಟನೆ ಸ್ಥಾಪಿಸಿ ಸೂಕ್ತವಾಗಿ ನಿರ್ವಹಿಸುವ ಸಾಮರ್ಥ್ಯ ಬರುವ ವರೆಗೆ ಸೂಕ್ತ ಮಾರ್ಗದರ್ಶನ ಹಾಗೂ ಬೆಂಬಲ ನೀಡುವಲ್ಲಿ ಉತ್ತಮ ಅನುಭವವಿರುವ ಮಾರ್ಗದರ್ಶಕರ ಅವಶ್ಯಕತೆಯಿದೆ.

ರೈತ ಸಂಘಟನೆಗಳ ಸ್ಥಾಪನೆಯ ಮೇಲೆ ಪ್ರಭಾವ ಬೀರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳು

ಗ್ರಾಮ ಮಟ್ಟದಲ್ಲಿ ಪ್ರಚಲಿತದಲ್ಲಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳು ಸಂಘಟನೆಯ ನಿರ್ಮಾಣದ ಮೇಲೆ ತನ್ನದೇ ಆದ ಪ್ರಭಾವ ಬೀರುತ್ತವೆ. ಉದಾಹರಣೆಗೆ – ನಾವು ಕೇವಲ ಸಣ್ಣ ರೈತರ ಅಭಿವೃದ್ಧಿ ಎಂದು ವಿಚಾರ ಮಂಡಿಸಿದರೆ ಗ್ರಾಮದಲ್ಲಿರುವ ದೊಡ್ಡ ರೈತರು ತಮ್ಮದೇ ಆದ ತಂತ್ರ ಹೆಣೆದು ಈ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಫಲಪ್ರದರಾಗಬಹುದು. ಒಂದು ವೇಳೆ ಕೇವಲ ಮಹಿಳಾ ರೈತರ ವಿಚಾರ ಮಂಡಿಸಿದರೆ ಪುರುಷ ರೈತರು ಇದಕ್ಕೆ ಸಹಕರಿಸಿದೇ ಇರಬಹುದು. ಇನ್ನೂ ಕೆಲವು ಸಮಾಜದಲ್ಲಿ ಮಹಿಳೆಯರು ಸಭೆ ಹಾಗೂ ತರಬೇತಿಗಳಲ್ಲಿ ಪಾಲ್ಗೊಳ್ಳಲು ಹಲವಾರು ತೊಂದರೆಗಳು ಇರುವುದು ಸರ್ವವಿಧಿತ. ಈ ರೀತಿಯ ರೈತಪರ ಸಂಘಟನೆಗಳು ಗ್ರಾಮ ಮಟ್ಟದಲ್ಲಿ ತಲೆ ಎತ್ತುವ ವಿಚಾರ ಹಲವಾರು ಗ್ರಾಮ ಮಟ್ಟದ ಬಂಡವಾಳಶಾಹಿಗಳ ನಿದ್ದೆ ಕೆಡಿಸುವ ಸಾಧ್ಯತೆಗಳೂ ಉಂಟು. ಇನ್ನು ರೈತರಿಗೆ ಕಾಲಾಂತರದಿಂದ ಹೆಚ್ಚಿನ ಬೆಲೆಯಲ್ಲಿ ಕಡಿಮೆ ಗುಣಮಟ್ಟದ ಕೃಷಿ ಸಾಮಗ್ರಿಗಳನ್ನು ಪೂರೈಸಿ ಹಣ ಸಂಪಾದನೆ ಮಾಡುತ್ತ ಬಂದ ಗುಂಪುಗಳಿಗೆ ಇದು ಸಹಿಸಲಾಗದ ವಿಚಾರವಾಗಬಹುದು. ಇದಲ್ಲದೇ ಗ್ರಾಮ ಮಟ್ಟದಲ್ಲಿ ಕೃಷಿಕರಿಗೆ ಸಂಬಂಧಿಸಿದ ಪ್ರತಿ ಸಮಸ್ಯೆಗಳನ್ನು ಬಗೆಹರಿಸುವ ಏಜೆಂಟರಂತೆ ಕೆಲಸ ಮಾಡುವ ಮಧ್ಯವರ್ತಿಗಳಿಗೆ ನುಂಗಲಾರದ ತುತ್ತಾಗಿಯೂ ಈ ಸಂಘಟನೆಗಳು ಕಾಣಿಸಬಹುದು. ಈ ಎಲ್ಲಾ ಅಂಶಗಳನ್ನು ತುಂಬಾ ಸೂಕ್ಷ್ಮವಾಗಿ ಅರಿತುಕೊಂಡು ಸಮರ್ಪಕವಾಗಿ ಯೋಜಿಸಿ ಕಾರ್ಯೋನ್ಮುಖರಾಗುವ ಅವಶ್ಯಕತೆಯನ್ನು ಮರೆಯಲಾಗದು.

ಕಾಲಾಂತರದಿಂದ ಬಂದ ಗ್ರಾಮ ಮಟ್ಟದ ಮುಖ್ಯಸ್ಥರು ಈ ಸಂಘಟನೆಗಳ ಸ್ಥಾಪನೆಯಿಂದ ಅವರ ಅಧಿಕಾರ ಹೊರಟುಹೋಗುವುದಲ್ಲ ಎಂದು ಹಲವಾರು ರೀತಿಯಲ್ಲಿ ತಂತ್ರ ರೂಪಿಸುವ ಸಾಧ್ಯತೆಗಳು ಪ್ರತಿ ಗ್ರಾಮದಲ್ಲಿ ಸಾಧ್ಯ. ಗ್ರಾಮದಲ್ಲಿ ಒಟ್ಟಾರೆ ಇರುವ ಶಿಕ್ಷಣ ಮಟ್ಟ, ಜಾತಿ ವೈವಿಧ್ಯತೆ, ಬಡತನ – ಶ್ರೀಮಂತಿಕೆಯ ನಡುವಿನ ಅಂತರಗಳು ತಮ್ಮದೇ ಆದ ಪ್ರಭಾವವನ್ನು ಈ ಸಂಘಟನೆಗಳ ಮೇಲೆ ಬೀರುವುವು.