ರೈತ ಸಂಘಟನೆಯ ಸ್ಥಾಪನೆಯ ವಿವಿಧ ಮೆಟ್ಟಿಲುಗಳು

ರೈತ ಸಂಘಟನೆಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿ ಕೆಲವೊಂದು ತತ್ವಗಳನ್ನು ಹಾಗೂ ಮೆಟ್ಟಿಲುಗಳನ್ನು ಅರ್ಥೈಸಿಕೊಂಡು ಪಾಲಿಸುವುದರ ಮುಖಾಂತರ ಸೂಕ್ತವಾದ ರೀತಿಯಲ್ಲಿ ಸಂಘಟನೆಗಳ ಸ್ಥಾಪನೆ ಮಾಡಬಹುದಲ್ಲದೇ ಅವು ಮುಂದೆ ಬೆಳೆದು ಸಾಮಾಜಿಕ ಕ್ರಿಯಾ ಮಾದರಿಗಳಾಗಿ ಕಾರ್ಯನಿರ್ವಹಿಸುವಲ್ಲಿ ಸಹಕಾರಿಯಾಗುತ್ತವೆ (ಚಾಮಲಾ, ೧೯೯೦). ಈ ಪ್ರಕ್ರಿಯೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರೈತ ಸಂಘಟನೆಗಳನ್ನು ಕಟ್ಟಿ, ಬೆಳೆಸಿ ಮುಂದುವರೆಸಿಕೊಂಡು ಹೋಗುವ ಸಾಮರ್ಥ್ಯವಿರುವ, ಸಮುದಾಯದ ಅಭಿವೃದ್ಧಿಪರ ಯೋಜಿಸಬಲ್ಲ ಪ್ರಭಾವಶಾಲೀ ರೈತ ನಾಯಕರನ್ನು ಗುರುತಿಸಿ ಅವರ ಸಾಮರ್ಥ್ಯವನ್ನು ಇನ್ನೂ ಹೆಚ್ಚಿಸಲು ಸೂಕ್ತವಾದ ತರಬೇತಿ ಹಾಗೂ ಬೆಂಬಲ ನೀಡುವುದು ಅಗತ್ಯ. ರೈತ ಸಂಘಟನೆಗಳನ್ನು ಕಟ್ಟಿ ಬೆಳೆಸುವ ಸಾಮರ್ಥ್ಯವಿರುವ ಸಂಚಾಲಕರ ಸೇವೆಯು ಅಷ್ಟೇ ಮುಖ್ಯ. ಗ್ರಾಮ ಮಟ್ಟದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ವಿಸ್ತರಣಾ ಕಾರ್ಯಕರ್ತರು, ಸಮುದಾಯದ ಸಂಪೂರ್ಣ ತಿಳುವಳಿಕೆ ಹಾಗೂ ನಂಬಿಕೆ ಹೊಂದಿದ ಕೆಲಸಗಾರರು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲರು.

ಈ ಗ್ರಾಮ ಮಟ್ಟದ ವಿಸ್ತರಣಾ ಕಾರ್ಯಕರ್ತರು ತಾಂತ್ರಿಕವಾಗಿಯೂ ಸಮರ್ಥರಾಗಿರುವುದು ಇನ್ನೊಂದು ಪ್ರಮುಖ ಅವಶ್ಯಕತೆ. ಏಕೆಂದರೆ, ರೈತ ಸಂಘಟನೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಸದಸ್ಯ ರೈತರು ಸಂಘಟನೆಯ ಮುಖಾಂತರ ಹೊಸ ಹೊಸ ತಾಂತ್ರಿಕತೆಗಳನ್ನು ಕಲಿಯುವ ಪ್ರಮುಖ ಉದ್ದೇಶದಿಂದ ಬಂದಿರುತ್ತಾರೆ.

ರೈತ ಸಂಘಟನೆಗಳನ್ನು ರಚಿಸುವಲ್ಲಿ ಅನುಸರಿಸಬೇಕಾದ ತತ್ವಗಳು

ಬಲಶಾಲಿ ರೈತ ಸಂಘಟನೆಗಳ ಸ್ಥಾಪನೆ ಹಾಗೂ ಅವುಗಳ ಸುಸ್ಥಿರತೆ ಅಷ್ಟೊಂದು ಸರಳವಾದ ವಿಚಾರವೇನಲ್ಲ. ರೈತರನ್ನು ಸಂಘಟಿಸುವ ಪ್ರಕ್ರಿಯೆ ತುಂಬಾ ಕಠಿಣವಾದ ಕೆಲಸವಾಗಿದ್ದು, ಇದಕ್ಕೆ ಅಪಾರ ಅನುಭವದ ಅವಶ್ಯಕತೆ ಇದೆ. ರೈತರನ್ನು ಸಂಘಟಿಸುವುದರಿಂದ ಹಿಡಿದು ಆ ಸಂಘಟನೆಗಳನ್ನು ಕಾನೂನಾತ್ಮಕವಾಗಿ ನೋಂದಣಿ ಮಾಡುವ ಮಾರ್ಗದಲ್ಲಿ ನೂರಾರು ಅಡೆತಡೆಗಳು ಬರುವುದು ಸಹಜ. ಈ ಕೆಳಗೆ ನೀಡಿದ ಕೆಲವು ತತ್ವಗಳನ್ನು ಅನುಸರಿಸಿದಲ್ಲಿ ಸಂಘಟನಾ ಪ್ರಕ್ರಿಯೆಯನ್ನು ಸ್ವಲ್ಪ ಮಟ್ಟಿಗೆ ಸರಳೀಕರಣಗೊಳಿಸಬಹುದಾಗಿದೆ.

 • ಪ್ರಾರಂಭದಲ್ಲಿ ಸಮಾನಮನಸ್ಕ, ವಿಶಾಲ ಮನೋಭಾವ ಹೊಂದಿದ ರೈತ ಸದಸ್ಯರನ್ನು ಗುರುತಿಸುವುದು.
 • ಗುರುತಿಸಿದ ರೈತರೊಂದಿಗೆ ಚರ್ಚೆ ನಡೆಸಿ ರೈತ ಸಂಘಟನೆಗಳ ಅವಶ್ಯಕತೆ ಹಾಗೂ ಉಪಯುಕ್ತತೆಯ ಬಗ್ಗೆ ಚರ್ಚೆ ಮಾಡುವುದು. ಈ ಚರ್ಚೆಗಳಲ್ಲಿ ಕೆಲವು ಗ್ರಾಮಗಳಲ್ಲಿ ಫಲಪ್ರದವಾಗಿ ಕಾರ್ಯ ಮಾಡುತ್ತಿರುವ ರೈತ ಸಂಘಟನೆಗಳ ಉದಾಹರಣೆ ನೀಡುವುದು.
 • ಗ್ರಾಮೀಣ ಪ್ರದೇಶದಲ್ಲಿರುವ ಕೃಷಿ ಸಮಾಜದ ಪ್ರತಿ ಸ್ತರಗಳಿಂದ ರೈತರು ಈ ಸಂಘಟನೆಗಳಲ್ಲಿ ಸದಸ್ಯರಾಗುವಂತೆ ಪ್ರೇರೇಪಿಸುವುದು.
 • ಸಂಘಟನೆಗೆ ಸೇರಲು ಮುಂದೆ ಬಂದ ಸದಸ್ಯರ ಸಾಮರ್ಥ್ಯ, ಅವರ ಶಕ್ತಿ, ಅವರಲ್ಲಿಯ ಅಶಕ್ತತೆಗಳು ಹಾಗೂ ನ್ಯೂನತೆಗಳ ವಿಚಾರವಾಗಿ ಸೂಕ್ಷ್ಮವಾದ ರೀತಿಯಲ್ಲಿ ಅವಲೋಕನ ಮಾಡುವುದು.
 • ಸದಸ್ಯರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಕೃಷಿಗೆ ಸಂಬಂಧಿಸಿದಂತೆ ಇರಬಹುದಾದ ಸಮಸ್ಯೆಗಳನ್ನು ಗುರುತಿಸುವುದು ಹಾಗೂ ಪರಿಹಾರಗಳ ಬಗ್ಗೆ ಯೋಜಿಸುವುದು.
 • ಫಲಪ್ರದವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾದರಿ ರೈತ ಸಂಘಟನೆಗಳಿಗೆ ಶೈಕ್ಷಣಿಕ ಭೇಟಿ ನೀಡುವುದರ ಮುಖಾಂತರ ರೈತರಲ್ಲಿ ತಿಳುವಳಿಕೆ ಮೂಡಿಸುವುದು.
 • ಇನ್ನು ಕೆಲವೊಂದು ಯೋಜನೆಗಳ ಅಡಿಯಲ್ಲಿ ರೈತರ ಸ್ವ – ಸಹಾಯ ಗುಂಪುಗಳು, ಕೃಷಿ ಉತ್ಪನ್ನ ಆಧಾರಿತ ಇಲ್ಲವೇ ಬೆಳೆ ಆಧಾರಿತ ಗುಂಪುಗಳನ್ನು ರಚಿಸುವುದರ ಮೂಲಕ ಗ್ರಾಮ ಮಟ್ಟದಲ್ಲಿ ರೈತ ಸಂಘಟನೆಗಳ ರಚನೆ ಸರಳವಾಗುವುದು.
 • ರೈತರ ಗುಂಪುಗಳನ್ನು ರಚಿಸಿದ ನಂತರ ಅವರ ಅವಶ್ಯಕತೆಗಳು, ಸಮಸ್ಯೆಗಳು, ಬೇಡಿಕೆಗಳ ಪಟ್ಟಿ ಮಾಡುವುದು ಹಾಗೂ ತೀವ್ರ ಅವಶ್ಯಕತೆಗಳ ಆಧಾರದ ಮೇಲೆ ಅವುಗಳಿಗೆ ಸ್ಪಂದಿಸಲು ಕಾರ್ಯಸೂಚಿ ರೂಪಿಸುವುದು.
 • ಬೇಡಿಕೆಗೆ ಅನುಗುಣವಾಗಿ ವಿವಿಧ ಸಾಮರ್ಥ್ಯವರ್ಧನಾ ಚಟುವಟಿಕೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು.
 • ರೈತರ ಸಂಘಟನೆಗೆ ಅವಶ್ಯಕವಿರುವ ವಿವಿಧ ವಿಚಾರಗಳನ್ನು ಕೃಷಿಗೆ ಸಂಬಂಧಿಸಿದ ಸಂಘ – ಸಂಸ್ಥೆಗಳೊಂದಿಗೆ ಚರ್ಚೆ ಮಾಡಿ ಅವುಗಳೊಂದಿಗೆ ಸಂಬಂಧ ಕಲ್ಪಿಸಲು ಅವಶ್ಯಕವಿರುವ ಎಲ್ಲಾ ವ್ಯವಸ್ಥೆಯನ್ನು ಮಾಡುವುದು.
 • ಗ್ರಾಮದಲ್ಲಿರುವ ಅತಿ ಕಡುಬಡವ ರೈತರೊಂದಿಗೆ ಸಂಪರ್ಕ ಹೊಂದಿ ಅವರ ಪ್ರಾತಿನಿಧಿತ್ವವನ್ನು ಸಂಘಟನೆಯಲ್ಲಿ ಪಡೆಯುವ ಮೂಲಕ ಸಂಪನ್ಮೂಲ ಬಡ ರೈತರ ಧ್ವನಿ ಕೇಳುವಂತೆ ಮಾಡುವುದು.
 • ಗುಂಪುಗಳನ್ನು ವಿವಿಧ ಫಲಪ್ರದ ಗುಂಪುಗಳೊಂದಿಗೆ ಸಂಬಂಧ ಕಲ್ಪಿಸಿ ಪರಸ್ಪರ ಕಲಿಕೆಗೆ ಅವಕಾಶ ಮಾಡಿಕೊಡುವುದು.
 • ಸಂಘಟನಾ ಶಕ್ತಿ ವೃದ್ಧಿಸಿದ ನಂತರ ರೈತ ಸಂಘಟನಯನ್ನು ಕಾನೂನಾತ್ಮಕವಾಗಿ ನೋಂದಣಿ ಮಾಡಲು ಕ್ರಮ ಕೈಗೊಳ್ಳುವುದು.

ಹಂತ ಗ್ರಾಮೀಣ ರೈತಸಮುದಾಯಗಳ ಬಗ್ಗೆ ಸಂಪೂರ್ಣ ತಿಳುವಳಿಕೆ ಹೊಂದುವುದು

ರೈತ ಸಂಘಟನೆಗಳನ್ನು ಸ್ಥಾಪಿಸುವ ಪ್ರಥಮ ಹಂತವಾದ ಇದು ಸಂಘಟನೆಯ ಒಟ್ಟಾರೆ ಸಫಲತೆಯನ್ನು ನಿರ್ಧರಿಸುವ ಹಂತವಾಗಿದೆ. ರೈತ ಸಮುದಾಯದ ಬೆಳವಣಿಗೆಯ ದೃಷ್ಟಿಯಿಂದ ಸ್ಥಾಪಿಸಲು ಉದ್ದೇಶಿಸಿದ ನಂತರ, ಆ ಸಮುದಾಯಗಳ ಬಗ್ಗೆ ಸ್ಪಷ್ಟವಾದ ಹಾಗೂ ಸಂಪೂರ್ಣವಾದ ತಿಳುವಳಿಕೆ ಹೊಂದಿರುವುದು ತುಂಬಾ ಅಗತ್ಯ. ಈ ಪ್ರಕ್ರಿಯೆಯನ್ನು ಸಂಚಾಲಿಸುತ್ತಿರುವ ವಿಸ್ತರಣಾ ಕಾರ್ಯಕರ್ತರು ಯಾವುದೇ ರೀತಿಯ ಪೂರ್ವಭಾವನೆ ಅಥವಾ ಅಭಿಪ್ರಾಯಗಳೊಂದಿಗೆ ಗ್ರಾಮಸಮುದಾಯದಲ್ಲಿ ಪ್ರವೇಶಿಸಬಾರದು. ತೆರೆದ ಮನಸ್ಸಿನಿಂದ ಸಮುದಾಯವನ್ನು ಸಂಪರ್ಕಿಸಿದಾಗ ಮಾತ್ರ ಸಮುದಾಯ ಸ್ಪಷ್ಟ ತಿಳುವಳಿಕೆ ದೊರೆಯುವುದು ಸಾಧ್ಯ.

ಪ್ರತಿ ಗ್ರಾಮದಲ್ಲಿ ಅಥವಾ ಸಮುದಾಯದಲ್ಲಿ ತನ್ನದೇ ಆದ ಅಧಿಕಾರದ ರಚನೆ ಇರುತ್ತದೆ. ಈ ಅಧಿಕಾರದ ಕೇಂದ್ರೀಕರಣ, ವಿಕೇಂದ್ರೀಕರಣ, ಅಧಿಕಾರದ ಚೌಕಟ್ಟು, ಸಮುದಾಯದ ಸಮಸ್ಯೆಗಳು, ಸಮುದಾಯ ಹೊಂದಿರುವ ಅಭಿವೃದ್ಧಿಪರ ಅವಕಾಶಗಳ ಕೂಲಂಕುಷವಾದ ತಿಳುವಳಿಕೆ ಪಡೆಯಬೇಕು. ಸಮುದಾಯದೊಂದಿಗೆ ಸಂಪರ್ಕ ಬೆಳೆಸಲು ಹಲವಾರು ಭೇಟಿಗಳು ಅವಶ್ಯಕವಾಗಬಹುದು. ಸಮುದಾಯ ಉತ್ತಮ ಅಭಿಪ್ರಾಯ ಹೊಂದಿದ ಸೂಕ್ತ ನಾಯಕತ್ವ ಗುಣಗಳನ್ನು ಹೊಂದಿದ ಸಂಪರ್ಕ ವ್ಯಕ್ತಿಗಳೊಡನೆ ಸಂಬಂಧ ಬೆಳೆಸುವುದು ಇನ್ನೊಂದು ಪ್ರಮುಖ ಅಂಶ. ಇದರ ಜೊತೆಗೆ ಸಮಾಜದ ವಿವಿಧ ಸ್ತರಗಳಲ್ಲಿರುವ ಸಣ್ಣ, ಅತಿ ಸಣ್ಣ, ಮಧ್ಯಮ ಹಾಗೂ ದೊಡ್ಡ ರೈತರ ಪ್ರಮಾಣಗಳು, ಅವರು ಕ್ರಮವಾಗಿ ಎದುರಿಸುತ್ತಿರುವ ಸಮಸ್ಯೆಗಳು, ಗ್ರಾಮದಲ್ಲಿ ರೈತರು ಅನುಸರಿಸುತ್ತಿರುವ ಕೃಷಿ ಪದ್ಧತಿಗಳು, ಉತ್ಪಾದನಾ ತಂತ್ರಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಪಡೆಯಬೇಕು. ಸಮುದಾಯದ ವಿವಿಧ ವಿವರಗಳನ್ನು ಸೂಕ್ತವಾಗಿ ಪಡೆಯಲು ವಿಸ್ತರಣಾ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರು ಕೆಲವೊಂದು ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ಪ್ರತಿ ಸಮುದಾಯದಲ್ಲಿ ಆ ಸಮುದಾಯದ ಬಗ್ಗೆ ಸೂಕ್ತವಾದ ಮಾಹಿತಿಯನ್ನು ಹೊಂದಿದ ಸದಸ್ಯರಿರುತ್ತಾರೆ. ಅಂತಹ ಸದಸ್ಯರನ್ನು ಗುರುತಿಸಿ ಅವರಿಂದ ಮಾಹಿತಿ ಪಡೆಯುವುದು. ಸಮುದಾಯದ ವಿವಿಧ ಕಾರ್ಯ ಕ್ರಮಗಳಲ್ಲಿ, ಸಭೆ – ಸಮಾರಂಭಗಳಲ್ಲಿ ಭಾಗವಹಿಸುವುದು, ಗ್ರಾಮದಲ್ಲಿರುವ ವಿವಿಧ ಚಹಾ ಅಂಗಡಿಗಳಲ್ಲಿ ಜನರೊಂದಿಗೆ ಬೆರೆಯುವುದು, ಗ್ರಾಮದ ಚುನಾಯಿತ ಸದಸ್ಯರೊಂದಿಗೆ ಚರ್ಚಿಸುವುದು, ಗ್ರಾಮದಲ್ಲಿ ಕೆಲಸ ಮಾಡುವ ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸುವುದು ಇತ್ಯಾದಿಗಳ ಮೂಲಕ ಸಮಾಜದ ಬಗ್ಗೆ ಪ್ರಥಮ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರೊಂದಿಗೆ ಗ್ರಾಮದಲ್ಲಿರುವ ವಿವಿಧ ಪ್ರಕಾರದ ಸಮುದಾಯ ಸಂಪನ್ಮೂಲಗಳ ಬಗ್ಗೆ ತಿಳುವಳಿಕೆ ಪಡೆದು ಅವುಗಳನ್ನು ಸಮುದಾಯ ಯಾವ ರೀತಿಯಲ್ಲಿ ಪ್ರಸ್ತುತವಾಗಿ ನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕು. ಗ್ರಾಮದಲ್ಲಿರುವ ರೈತರಲ್ಲಿ ಕೃಷಿಗೆ ಸಂಬಂಧಿಸಿದಂತೆ ಇರುವ ಜ್ಞಾನ, ಕೌಶಲ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು ಅಗತ್ಯವಾದ ವಿಚಾರ. ಇದರ ಜೊತೆಗೆ ರೈತರು ಸಂಪರ್ಕ ಹೊಂದಿದ ವಿವಿಧ ಸಂಘಟನೆಗಳ ವಿವರ, ಕೃಷಿಗಾಗಿ ರೈತರಲ್ಲಿರುವ ಅಭಿರುಚಿ, ಪ್ರಮುಖ ಬೆಳೆಗಳ ಉತ್ಪಾದನಾ ವೆಚ್ಚ, ಬೆಳೆ ಕೊಯ್ಲಿನ ನಂತರ ಆಗುವ ಉತ್ಪನ್ನ ಹಾನಿಯ ಪ್ರಮಾಣ, ಮಾರುಕಟ್ಟೆಗೆ ಸಂಬಂಧಿಸಿದ ವಿವರಗಳು ಪ್ರಮುಖವಾದವು. ಆದುದರಿಂದ ಈ ಹಂತವು ತುಂಬಾ ಪ್ರಮುಖವಾದದ್ದಾಗಿದ್ದು ಇದನ್ನು ಅವಸರದಲ್ಲಿ ಮಾಡದೇ ಸೂಕ್ತವಾದ ಸಮಯ ತೆಗೆದುಕೊಂಡು ಮಾಡುವುದು ಉತ್ತಮ.

ಹಂತ ರೈತ ಸಮುದಾಯದಿಂದ ಯೋಗ್ಯ ನಾಯಕರ ಗುರುತಿಸುವಿಕೆ

ರೈತ ಸಂಘಟನೆಗಳ ರಚನೆಯ ಉದ್ದೇಶದಿಂದ ಕಾರ್ಯನಿರ್ವಹಿಸುವಾಗ ವಿಸ್ತರಣಾ ಅಥವಾ ಅಭಿವೃದ್ಧಿ ಕಾರ್ಯಕರ್ತರು ಗ್ರಾಮದಲ್ಲಿ ಬಂದ ನಂತರ ಗ್ರಾಮದ ಸಾಂಪ್ರದಾಯಿಕ ನಾಯಕರು ಅಥವಾ ಮುಖ್ಯಸ್ಥರನ್ನು ಸಂಪರ್ಕಿಸುವುದು ಸಾಮಾನ್ಯ ರೂಢಿ. .ಆದರೆ ರೈತ ಸಂಘಟನೆಯ ರಚನಾ ಕಾರ್ಯದಲ್ಲಿ ಈ ಸಾಂಪ್ರದಾಯಿಕ ನಾಯಕರು ಅಥವಾ ಆರ್ಥಿಕವಾಗಿ ಬಲಶಾಲಿಯಾದ ರೈತರು ಪ್ರಮುಖ ಗುರಿಯಾಗಿರಬಾರದು. ಈ ಕೆಲಸವನ್ನು ಮಾಡುವಾಗ ಗ್ರಾಮದಲ್ಲಿ ಪ್ರಸ್ತುತವಾಗಿ ಕಾರ್ಯ ನಿರ್ವಹಿಸುತ್ತಿರುವ ನಾಯಕತ್ವದ ರಚನೆಯನ್ನು ಸೂಕ್ತವಾಗಿ ಅರ್ಥೈಸಿಕೊಂಡು ಮುಂದೆ ಸಂಘಟನೆಗೆ ಬರಬಹುದಾದ ನೂತನ ನಾಯಕರು, ಸಾಂಪ್ರದಾಯಿಕ ನಾಯಕತ್ವದ ಸಹಕಾರ ಪಡೆಯುವ ಸಾಮರ್ಥ್ಯ ಹೊಂದಿರಬೇಕು ಹಾಗೂ ಇದಕ್ಕೆ ಸೂಕ್ತವಾದ ತಂತ್ರಗಳನ್ನು ರೂಪಿಸಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಅನುಭವಗಳ ಆಧಾರದ ಮೇಲೆ ಹೇಳುವುದಾದರೆ ಅತಿ ಕಿರಿಯ ಹಾಗೂ ಅತಿ ಹಿರಿಯ ವಯಸ್ಸಿನ ನಾಯಕರನ್ನು ಗುರುತಿಸದೇ ಮಧ್ಯ ವಯಸ್ಸಿನ ನಾಯಕರನ್ನು ಗುರುತಿಸುವುದು ಸೂಕ್ತವಾದುದು. ಈ ರೀತಿಯಾಗಿ ಗುರುತಿಸಲ್ಪಡುವ ಸದಸ್ಯರು ಸಮಾಜದಲ್ಲಿ ಮುಖ್ಯ ಗೌರವ ಹೊಂದಿದವರಾಗಿರಬೇಕು ಹಾಗೂ ಸಮಾಜದ ಸದಸ್ಯರನ್ನು ಒಟ್ಟಾಗಿ ಕರೆದೊಯ್ಯುವ ಶಕ್ತಿ ಹೊಂದಿದ ರೈತರಾಗಿರಬೇಕು. ಏಕೆಂದರೆ, ಪ್ರಾರಂಭಿಕ ಹಂತದಲ್ಲಿ ಈ ನಾಯಕರು ತಮ್ಮ ವೈಯಕ್ತಿಕ ಸಮಯ ಹಾಗೂ ಕೆಲವೊಂದು ಸಲ ಸಂಪನ್ಮೂಲಗಳನ್ನು ಸಂಘಟನೆಯು ಅಭಿವೃದ್ಧಿಗೆ ನೀಡಬೇಕಾಗಿರುವುದರಿಂದ ಅವರ ಕುಟುಂಬಗಳಲ್ಲಿ ಸೂಕ್ತವಾದ ಸಹಕಾರ ದೊರೆಯುವಂತಿರಬೇಕು. ಈ ನಾಯಕರು ಕೃಷಿಗೆ ಸಂಬಂಧಿಸಿದಂತೆ ಹಲವಾರು ಸಂಘ – ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸಬೇಕಾಗಿ ಬರುವುದರಿಂದ ಅವರು ಉತ್ತಮವಾದ ಸಂಪರ್ಕ ಕಲೆಗಳನ್ನು ಹೊಂದಿರಬೇಕು. ಉತ್ತಮವಾದ ಕೃಷಿ ಕೌಟುಂಬಿಕ ಹಿನ್ನೆಲೆ ಹಾಗೂ ಸಂಘಟನೆಯ ರಚನೆಯಲ್ಲಿ ಸಹಕಾರ ನೀಡುವ ಕಾರ್ಯಕರ್ತರ ಸಹಾಯದಿಂದ ಈ ನಾಯಕರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಅನುಭವಗಳ ಆಧಾರದ ಮೇಲೆ ಹೇಳುವುದಾದರೆ, ರೈತ ಸಂಘಟನೆ ಸ್ಥಾಪನೆಯ ಪ್ರಾರಂಭಿಕ ಹಂತದಲ್ಲಿಯ ನಾಯಕತ್ವ ಸರಳ ಹಾಗೂ ಸಾದಾ ರೈತರಿಗೆ ಸಾಧ್ಯವಿರದ ವಿಚಾರ. ತುಂಬಾ ಕ್ರಿಯಾಶೀಲತೆ ಕಾರ್ಯತತ್ಪರತೆ ಇದಕ್ಕೆ ಅವಶ್ಯಕತೆ.

ಹಂತ ರೈತಸಮುದಾಯ ನಾಯಕರೊಂದಿಗೆ ಚರ್ಚೆ ಹಾಗೂ ಇತರ ಸಂಘಟನೆಗಳ ಸಹಕಾರ ಪಡೆಯುವುದು

ವಿಸ್ತರಣಾ ಕಾರ್ಯಕರ್ತರು ಗ್ರಾಮದಲ್ಲಿ ಗುರುತಿಸಲ್ಪಟ್ಟ ನಾಯಕರೊಂದಿಗೆ ಕೃಷಿ ಪರಿಸ್ಥಿತಿ, ಸಮಸ್ಯೆಗಳು ಹಾಗೂ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂಥ ವಿವಿಧ ವಿಷಯಗಳನ್ನು ಚರ್ಚಿಸಿ ರೈತ ಸಂಘಟನೆಗಳಿಗೆ ಅವಶ್ಯಕವಾದ ಅಂಶಗಳನ್ನು ದಾಖಲಿಸಬೇಕು. ರೈತ ಸಂಘಟನೆಗಳನ್ನು ಗ್ರಾಮ ಮಟ್ಟದಲ್ಲಿ ಸ್ಥಾಪಿಸುವ ಸಮಯದಲ್ಲಿ ಆ ಭಾಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಸರಕಾರೇತರ ಸ್ವಯಂಸೇವಾ ಸಂಘಟನೆಗಳು ಇದ್ದರೆ, ಅಂತಹ ಸಂಘಟನೆಗಳ ಸಹಕಾರವನ್ನು ಸಂಘಟನೆಗೆ ಬಳಸಿಕೊಳ್ಳಬಹುದಾಗಿದೆ. ಇದಲ್ಲದೇ ಉದ್ದೇಶಿತ ಗ್ರಾಮದಲ್ಲಿ ಈ ಮೊದಲೇನಾದರೂ ರೈತ ಸಂಘಟನೆಯನ್ನು ಸ್ಥಾಪಿಸಲಾಗಿತ್ತೇ? ಹೌದಾದರೆ ಅದು ಇಂದು ಏಕೆ ಕಾರ್ಯ ನಿರ್ವಹಿಸುವುದಿಲ್ಲ ಮತ್ತು ಈ ಗ್ರಾಮದಲ್ಲಿ ರೈತ ಸಂಘಟನೆಯ ಅವಶ್ಯಕತೆಯ ವಿಚಾರವಾಗಿಯೂ ಚರ್ಚೆ ನಡೆಸುವುದು ಅವಶ್ಯಕ. ಇನ್ನು ಕೆಲ ಸಂದರ್ಭದಲ್ಲಿ ಗ್ರಾಮದಲ್ಲಿ ರೈತ ಸಹಕಾರಿ ಹಿಂದೊಮ್ಮೆ ಸ್ಥಾಪಿಸಲಾಗಿತ್ತು. ಆದರೆ ಅದು ಇಂದು ನಿಷ್ಕ್ರಿಯವಾಗಿದ್ದರೆ ಅದರ ನಿಷ್ಕ್ರಿಯತೆಗೆ ಕಾರಣವಾಗಿರುವ ಅಂಶಗಳ ಸೂಕ್ತ ಹಾಗೂ ವಿವರವಾದ ಮಾಹಿತಿ ಪಡೆಯುವುದು ಅವಶ್ಯಕ. ಆ ರೈತ ಸಂಘಟನೆಯು ಫಲಪ್ರದವಾಗಿ ಏಕೆ ಕಾರ್ಯ ನಿರ್ವಹಿಸಲಿಲ್ಲ ಎಂಬ ವಿಚಾರದ ಬಗ್ಗೆಯೂ ಐತಿಹಾಸಿಕ ಮಾಹಿತಿ ಪಡೆಯುವುದರ ಮೂಲಕ ಮುಂದೆ ಅಂತಹುದೇ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಲ್ಲಿ ಅದು ಸಹಾಯಕವಾಗುವುದು. ರೈತಪರ ಸಂಘಟನೆಯ ಸ್ಥಾಪನೆಯಂಥ ಪ್ರಕ್ರಿಯೆಗಳನ್ನು ನಡೆಸಿಕೊಡುವ ಅಭಿವೃದ್ಧಿ ಅಥವಾ ವಿಸ್ತರಣಾ ಕಾರ್ಯಕರ್ತರು ಈ ಸಮುದಾಯದ ನಾಯಕರೊಂದಿಗೆ ಚರ್ಚಿಸುವಾಗ ಯಾವ ರೀತಿಯಲ್ಲಿ ಈ ಸಂಘಟನೆಗಳ ರೈತ ಕಲ್ಯಾಣಕ್ಕಾಗಿ ಸಹಕಾರಿಯಾಗಬಲ್ಲವು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಉದಾಹರಣೆ ಸಹಿತ ಮಾಹಿತಿ ನೀಡಬೇಕು. ಹೀಗೆ ಮಾಡುವುದರಿಂದ ರೈತ ಮುಂದಾಳುಗಳಲ್ಲಿ ಸಂಘಟನೆಗೆ ಪೂರಕವಾದ ವಿಚಾರಗಳನ್ನು ಹುಟ್ಟುಹಾಕಲು ಸಹಕಾರಿಯಾಗುತ್ತವೆ. ಇದರೊಂದಿಗೆ ಈ ಸಂಘಟನೆಗಳ ರಚನೆ ಹಾಗೂ ಕಾರ್ಯ ವೈಖರಿಗೆ ಸಂಬಂಧಿಸಿದಂತೆ ಅವರಲ್ಲಿ ಇರುವ ವಿಚಾರಗಳನ್ನು ಹೊರತರುವಲ್ಲಿ ಸಹಾಯಕಾರಿಯಾಗುವುದು. ಇದರೊಂದಿಗೆ ಈ ಸಂಘಟನೆಗಳ ಸ್ಥಾಪನೆಯಿಂದ ಗ್ರಾಮದ ರೈತ ಸಮುದಾಯಕ್ಕೆ ಆಗಬಹುದಾದ ವಿವಿಧ ಪ್ರಕಾರದ ಉಪಯುಕ್ತತೆಗಳು, ಮಾರುಕಟ್ಟೆ ಲಾಭಗಳು ಇತ್ಯಾದಿಗಳ ಬಗ್ಗೆ ಸೂಕ್ತ ಪರಿಜ್ಞಾನ ನೀಡುವುದರ ಮುಖಾಂತರ ಸಂಘಟನಾ ಸ್ಥಾಪನೆಗೆ ರಚನಾತ್ಮಕ ರೀತಿಯಲ್ಲಿ ವ್ಯವಹರಿಸುವಲ್ಲಿ ಅವರನ್ನು ಮಾರ್ಗದರ್ಶಿಸಿದಂತಾಗುವುದು. ಈ ಸಂಘಟನೆಗಳು ಮುಂದೆ ಬೆಳೆದಾಗ ರೈತರು ಒಟ್ಟಾಗಿ ರಾಜಕೀಯದ ವತಿಯಿಂದಲೂ ಲಾಭ ಪಡೆಯಬಹುದಾಗಿದ್ದುದು ಪ್ರಾಯೋಗಿಕ ಲೆಕ್ಕಾಚಾರ. ಒಟ್ಟಾರೆ ರೈತ ಸಂಘಟನೆಯ ಸ್ಥಾಪನೆಗೆ ಸಂಬಂಧಿಸಿದಂತೆ ವಿವಿಧ ಗುಂಪುಗಳ ಜೊತೆಗೆ ವಿಸ್ತೃತವಾದ ಅರ್ಥಪೂರ್ಣ ಚರ್ಚೆ ಮಾಡುವುದು ತುಂಬಾ ಅವಶ್ಯಕ ಮೆಟ್ಟಿಲು.

ಹಂತ ಸ್ಥಾನಿಕ ರೈತ ಸಮುದಾಯದ ನಾಯಕರು ಸಮುದಾಯಗಳ ಸಭೆ ಕರೆಯಲು ಸಹಕಾರ ನೀಡುವುದು

ರೈತ ಸಂಘಟನೆಯ ಸ್ಥಾಪನೆಗೆ ಪೂರಕವಾಗಿ ಕೆಲಸ ಮಾಡುವ ಕಾರ್ಯಕರ್ತರು ಸ್ಥಳೀಯ ನಾಯಕರು ಈ ವಿಷಯಕ್ಕಾಗಿ ಕರೆಯಬಹುದಾದ ಸಭೆಗಳನ್ನು ಯೋಜಿಸಲು ಸಹಕಾರ, ಸಹಾಯ ಹಾಗೂ ಮಾರ್ಗದರ್ಶನ ನೀಡಬೇಕು. ಕೃಷಿ ಸಂಘಟನೆಗಳ ಸ್ಥಾಪನೆ ಹಾಗೂ ಕೃಷಿ ಅಭಿವೃದ್ಧಿಯಲ್ಲಿ ಅವುಗಳ ಪಾತ್ರಗಳನ್ನು ವಿವರವಾಗಿ ಚರ್ಚಿಸಲು ಒಂದಕ್ಕಿಂತ ಹೆಚ್ಚು ಸಭೆಗಳ ಅವಶ್ಯಕತೆ ಕಂಡುಬರಬಹುದು. ಅಂತಹ ಪ್ರಸಂಗಗಳಲ್ಲಿ ಅವಶ್ಯಕತೆಗೆ ಅನುಸಾರವಾಗಿ ದ್ವಿತೀಯ ಅಥವಾ ತೃತೀಯ ಸಭೆಗಳನ್ನು ಕರೆಯುವುದು ಸೂಕ್ತ. ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪಕ್ಕದ ಗ್ರಾಮದ ರೈತ ಸಂಘಟನೆಯ ನಾಯಕರನ್ನು ಇಂತಹ ಸಭೆಗಳಿಗೆ ಆಹ್ವಾನಿಸಿ ಅವರ ಅನುಭವಗಳನ್ನು ಸದಸ್ಯರಿಗೆ ವಿವರಿಸುವಂತೆ ಮಾಡುವುದು ಇನ್ನೂ ಸೂಕ್ತವಾದ ವಿಚಾರ. ಈ ರೀತಿಯಾಗಿ ರೈತರಿಂದ ರೈತರಿಗೆ ಮಾಹಿತಿ ಹಂಚುವ ಪ್ರಕ್ರಿಯೆ ಪರಿಣಾಮಕಾರಿಯಾಗಿ ಅಭಿಪ್ರಾಯ ಮಂಡನೆಗೆ ಸಹಕಾರಿಯಾಗುವುದು. ಕೆಲವೊಂದು ವಿಶಿಷ್ಟ ಪರಿಸ್ಥಿತಿಗಳಲ್ಲಿ ಸಣ್ಣ, ಅತಿ ಸಣ್ಣ, ಹಿಂದುಳಿದ ರೈತರ ವಿಶೇಷ ಸಭೆ ನಡೆಸಿ ಅವರ ಅನಿಸಿಕೆಗಳನ್ನು ಅಭಿಪ್ರಾಯಗಳನ್ನು ಪಡೆಯುವುದು ಸೂಕ್ತ. ಕೆಲವೊಂದು ಪ್ರಸಂಗಗಳಲ್ಲಿ ಗ್ರಾಮದಲ್ಲಿ ಈ ವರ್ಗಗಳಿಗೆ ಸೇರಿದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಅವರು ತಮ್ಮದೇ ಆದ ರೈತ ಸಂಘಟನೆಯನ್ನು ಸ್ಥಾಪಿಸಲು ಬಯಸಲೂಬಹುದು. ಗ್ರಾಮದಲ್ಲಿ ಒಂದು ಸಂಘಟನೆಯೂ ಸೂಕ್ತವಾದ ವಿಚಾರವಾದರೂ ಕೆಲವೊಂದು ವಿಶೇಷ ಪರಿಸ್ಥಿತಿಗಳಲ್ಲಿ (ಗ್ರಾಮಗಳು ತುಂಬಾ ದೊಡ್ಡದಾಗಿದ್ದರೆ, ಕೆಲವು ರೈತರು ಬೆಳೆ ಆಧಾರಿತ ಸಂಘಟನೆಯನ್ನು ಸ್ಥಾಪಿಸಲು ಬಯಸುತ್ತಿದ್ದರೆ) ಗ್ರಾಮದಲ್ಲಿ ಒಂದಕ್ಕಿಂತ ಹೆಚ್ಚು ರೈತ ಸಂಘಟನೆಗಳನ್ನು ಸ್ಥಾಪನೆ ಮಾಡುವಲ್ಲಿ ತಪ್ಪೇನಿಲ್ಲ.

ರೈತ ಸಂಘಟನೆಯ ಸ್ಥಾಪನೆಯ ವಿಷಯವಾಗವಿ ಕರೆದ ಸಭೆಗಳಲ್ಲಿ ಗ್ರಾಮದ ಎಲ್ಲಾ ರೈತರು ಭಾಗವಹಿಸುವಂತೆ ಮಾಡಿದರೆ ಈ ಸಭೆಗಳನ್ನು ಕರೆದ ಉದ್ದೇಶ ಸಫಲವಾಗುವುದು. ಈ ಸಭೆಯಲ್ಲಿ ರೈತ ಸಂಘಟನೆಯ ಸ್ಥಾಪನೆ, ಅದರ ಉದ್ದೇಶ, ಸ್ಥಾಪನೆಯಿಂದ ರೈತರಿಗೆ ಆಗಬಹುದಾದ ಪ್ರಯೋಜನೆಗಳ ಬಗ್ಗೆ ಚರ್ಚಿಸುವುದರಿಂದ ಸದಸ್ಯರ ಮನದಲ್ಲಿ ಇರಬಹುದಾದ ಹಲವಾರು ಸಂದೇಹಗಳನ್ನು ನಿವಾರಿಸಲು ಈ ಸಭೆಗಳು ಸಹಾಯಕ. ಗ್ರಾಮದಲ್ಲಿರುವ ಪ್ರತಿ ಸಣ್ಣ ಹಾಗೂ ದೊಡ್ಡ ರೈತರು ಈ ಸಂಘಟನೆಗೆ ಯಾವ ರೀತಿಯಾಗಿ ಅವಶ್ಯಕ ಎನ್ನುವುದೂ ಈ ಸಭೆಯಲ್ಲಿ ಚರ್ಚೆಯಾಗುತ್ತದೆ. ಸಾಮಾನ್ಯವಾಗಿ ಇಂತಹ ಸಭೆಗಳಲ್ಲಿ ಸಣ್ಣ ರೈತರು ಪಾಲ್ಗೊಳ್ಳುವುದು ತುಂಬಾ ಕಡಿಮೆ. ಅವರಲ್ಲಿರುವ ಸಾಮಾನ್ಯ ತಿಳುವಳಿಕೆಯೆಂದರೆ ಈ ಸಂಘಟನೆಗಳು ಕೇವಲ ದೊಡ್ಡ ರೈತರಿಗೆ ಲಾಭದಾಯಕವೆಂಬುದು. ಈ ಪರಿಕಲ್ಪನೆಯನ್ನು ಬದಲಾಯಿಸಲು ಪ್ರಾಥಮಿಕ ಹಂತದಲ್ಲಿ ಸಂಘಟಿಸಲ್ಪಡುವ ಈ ಸಭೆಗಳು ಸಹಕಾರಿಯಾಗಬಲ್ಲವು. ಸಂಘ ಸ್ಥಾಪನೆಯಾದ ನಂತರ ಅದರಲ್ಲಿ ಸದಸ್ಯತ್ವ ಪಡೆಯಬಹುದಾದ ಪ್ರತಿಯೊಬ್ಬ ಸದಸ್ಯರು ಈ ವಿಚಾರವಾಗಿ ಸ್ಪಷ್ಟತೆ ಹೊಂದಿರುವುದು ಅವಶ್ಯಕ. ವಿಸ್ತರಣಾ ಕಾರ್ಯಕರ್ತರು ಈ ಮೇಲೆ ಚರ್ಚಿಸಿದ ಅಂಶಗಳ ಮೇಲೆ ಈ ಸಭೆಗಳಲ್ಲಿ ಸ್ಪಷ್ಟತೆ ನೀಡಿ ರೈತ ಸಂಘಟನೆಯು ವಿವರವಾದ ತಿಳುವಳಿಕೆಯನ್ನು ಉದಾಹರಣೆಗಳ ಮೂಲಕ ವಿವರಿಸುವುದು ಸೂಕ್ತ.

ಹಂತ ರೈತ ಸಂಘಟನೆಯ ಸ್ಥಾಪನೆಗೆ ಮೂಲ ಗುಂಪಿನ ಸದಸ್ಯರ ನಾಮಕರಣ ಹಾಗೂ ಸಂಘಟನೆಯ ಸ್ಥಾಪನೆ

ಪ್ರಾರಂಭದ ಹಂತದಲ್ಲಿ ಯೋಜಿಸಲಾದ ಸಮುದಾಯ ಸಭೆಗಳಿಂದ ಆಯ್ಕೆ ಅಥವಾ ನಾಮಕರಣಗೊಂಡ ರೈತ ನಾಯಕರನ್ನು ಮುಂದೆ ಸಂಘಟನೆಯ ಸ್ಥಾಪನೆಯ ವಿಚಾರವಾಗಿ ತಮ್ಮ ಸಮುದಾಯದ ಸದಸ್ಯರೊಂದಿಗೆ ವಿವರವಾಗಿ ಚರ್ಚಿಸಲು ಅವಕಾಶ ನೀಡಿ ಅವರಿಂದ ವಿವರವಾದ ವಿಚಾರಗಳನ್ನು ಪಡೆದ ಬಳಿಕ ಮುಂದಿನ ಕಾರ್ಯಸೂಚಿಯನ್ನು ರೂಪಿಸಬೇಕು. ಕೆಲವೊಂದು ಗ್ರಾಮೀಣ ಸಂಸ್ಕೃತಿಗಳಲ್ಲಿ ಈ ಪದ್ಧತಿಯು ಅಸಮರ್ಥ ನಾಯಕರನ್ನು ಆಯ್ಕೆ ಮಾಡುವ ಪ್ರಸಂಗ ತರಬಹುದು. ಹೀಗೆ ಆಯ್ಕೆಯಾದ ನಾಯಕರು ಸಂಘಟನೆಯ ಸ್ಥಾಪನೆಗೆ ಅವಶ್ಯಕವಾದಂತಹ ಸಾಮರ್ಥ್ಯಗಳನ್ನು ಹೊಂದಿರದೇ ಇರಬಹುದು. ಇಂತಹ ಪ್ರಸಂಗಗಳಲ್ಲಿ ಸಂಘಟನೆಯ ಸ್ಥಾಪನಾ ಪ್ರಕ್ರಿಯೆಯನ್ನು ಸಂಚಾಲನೆ ಮಾಡುವ ವಿಸ್ತರಣಾ ಕಾರ್ಯಕರ್ತರು ಆಯ್ಕೆ ಆಗಬಹುದಾದ ಸಂಭಾವ್ಯ ಅಭ್ಯರ್ಥಿಗಳ ಮಾಹಿತಿ ಪಡೆದು ಪರಿಶೀಲಿಸಿ, ವಿಶ್ಲೇಷಣೆ ಮಾಡಬೇಕು. ತದನಂತರ ಅಂತಹ ಸದಸ್ಯರ ನಾಮಕರಣ ಅಥವಾ ಆಯ್ಕೆಯನ್ನು ಸಮುದಾಯ ಒಪ್ಪುವಲ್ಲಿ ಸಹಾಯ ಮಾಡಬೇಕು. ಇನ್ನು ಕೆಲವು ಬೇರೆ ಪ್ರಸಂಗಗಳಲ್ಲಿ ಸಮುದಾಯದ ನಾಯಕರನ್ನು ನಾಮಕರಣ ಮಾಡುವ ಪ್ರಸಂಗವಿದ್ದರೆ ಅಲ್ಲಿ ತುಂಬಾ ಸಮಾಧಾನ ಹಾಗೂ ಸಂಯಮದಿಂದ ಸೂಕ್ತ ನಾಯಕರನ್ನು ಗುರುತಿಸುವ ಕಾರ್ಯ ಮಾಡಬೇಕು. ಈ ರೀತಿ ನಾಮಕರಣಗೊಳಿಸಬಹುದಾದ ನಾಯಕ ಮೂಲತಃ ಸಂಘಟನೆ ರಚನೆಗೆ ಪೂರಕವಾಗಿ ಕಾರ್ಯ ನಿರ್ವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತಿರಬೇಕು.

ಹಂತ ಸಂಘಟನೆಗೆ ಸೂಕ್ತವಾದ ರಚನೆ ತಯಾರಿಸುವುದು

ಪ್ರತಿ ಸಂಘಟನೆಯು ಫಲಪ್ರದವಾಗಿ ಕಾರ್ಯ ನಿರ್ವಹಿಸಬೇಕಾದರೆ ಅದಕ್ಕೊಂದು ಸೂಕ್ತವಾದ ರಚನೆ ಅವಶ್ಯಕವಾದುದು. ಗ್ರಾಮದಲ್ಲಿ ರೈತರೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವಿಸ್ತರಣಾ ಕಾರ್ಯಕರ್ತರು ರೈತ ಸಂಘಟನೆಯ ಮುಖಂಡರಿಗೆ ತಮ್ಮ ಸಂಸ್ಥೆಯ ಸೂಕ್ತವಾದ ರಚನೆ ಸಿದ್ಧಪಡಿಸುವಲ್ಲಿ ಸಹಾಯ, ಸಲಹೆ ಹಾಗೂ ಸಹಕಾರ ನೀಡಬೇಕು. ಈ ಹಿಂದೆ ಪ್ರತಿ ಸಂಘಟನೆಯನ್ನು ರಚಿಸಲು ಕೇಂದ್ರೀಕೃತವಾದ ಸ್ಥಿರ ರಚನೆಯನ್ನು ಅನುಸರಿಸಲಾಗುತ್ತಿತ್ತು. ಆದರೆ ಗ್ರಾಮದಿಂದ ಗ್ರಾಮಕ್ಕೆ ಇರುವ ವೈವಿಧ್ಯತೆ ಹಾಗೂ ವಿವಿಧ ಅವಶ್ಯಕತೆಗಳು ಇಂತಹ ರಚನೆಯೊಂದಿಗೆ ಹೊಂದಿಕೊಳ್ಳಲು ಸಹಕಾರಿಯಾಗಲಿಕ್ಕಿಲ್ಲ. ಹೀಗಿರುವುದರಿಂದ ರೈತ ಸಂಘಟನೆಯ ರಚನೆ ಯಾವ ಸ್ವರೂಪದ್ದಾಗಿರಬೇಕೆಂದು ರೈತರು, ರೈತರ ನಾಯಕರು, ವಿಸ್ತರಣಾ ಕಾರ್ಯಕರ್ತರೊಂದಿಗೆ ಚರ್ಚಿಸಿ ರೂಪರೇಷೆ ತಯಾರಿಸಬೇಕು.

ಸಂಘಟನೆಯ ರಚನೆಯನ್ನು ನಿರ್ಧರಿಸುವಾಗ, ಆ ರಚನೆಯು ಮುಂದೆ ಪ್ರಾಯೋಗಿಕವಾಗಿ ಯೋಗ್ಯವಾಗಿರಬೇಕು ಮತ್ತು ಸಂಘಟನೆಯು ಹಾಕಿಕೊಂಡ ಧ್ಯೇಯೋದ್ದೇಶಗಳನ್ನು ತಲುಪುವಲ್ಲಿ ಸಹಾಯವಾಗಬೇಕು. ಈ ದೆಸೆಯಲ್ಲಿ ಫಲಪ್ರದವಾಗಿ ಕಾರ್ಯನಿರ್ವಹಿಸುವ ಕೆಲವು ಸಂಘಟನೆಗಳಿಗೆ ಭೇಟಿ ನೀಡಿ ಆ ಸದಸ್ಯರೊಂದಿಗೆ ಚರ್ಚಿಸಿ, ಯಾವ ರೀಥಿಯ ಸಂಘಟನೆಗಳು ಸೂಕ್ತ ಎಂದು ನಿರ್ಧರಿಸಬೇಕಾಗುವುದು. ಈ ಸಂಘಟನೆಗಳು ಬೆಳೆ ಆಧಾರಿತವಾಗಿರಬೇಕೆ, ವಿವಿಧೋದ್ದೇಶ ಹೊಂದಿರಬೇಕೆ, ಸಹಕಾರ ಸಂಘಟನೆಗಳಾಗಿರಬೇಕೆ, ಕೇವಲ ಮಾರುಕಟ್ಟೆ ಮಾಡುವುದಕ್ಕಿರಬೇಕೆ, ಇದರಲ್ಲಿ ಉಪಗುಂಪು ಗಳಿರಬೇಕೆ ಎಂಬುದಾಗಿ ನಿರ್ಧರಿಸಬೇಕಾಗುವುದು. ಸಂಘದಲ್ಲಿ ಕಾರ್ಯ ನಿರ್ವಹಿಸುವ ಪ್ರತಿ ಸದಸ್ಯನ ಪಾತ್ರಗಳನ್ನು ವಿವರವಾಗಿ ಚರ್ಚೆ ಮಾಡಿ ರಚನೆಯ ರೂಪರೇಷೆಗಳನ್ನು ನಿರ್ಧರಿಸಬೇಕು.

ಹಂತ ಸಂಘಟನೆಯ ನಿರ್ವಹಣೆಯನ್ನು ಶಿಕ್ಷಣ ಹಾಗೂ ಕ್ರಿಯಾತ್ಮಕ ಕಲಿಕೆಯಿಂದ ಸುಧಾರಿಸುವುದು

ಸಂಘಟನೆಯ ಸೂಕ್ತವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಸಮುದಾಯದ ಸದಸ್ಯರ ಸಬಲೀಕರಣ ತುಂಬಾ ಅವಶ್ಯಕ. ಸದಸ್ಯರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಾಗ ಮಾತ್ರ ಸಂಘಟನೆಗಳನ್ನು ಸೂಕ್ತವಾಗಿ ಮುಂದುವರೆಸಿಕೊಂಡು ಹೋಗಲು ಸಹಕಾರಿಯಾಗುವುದು. ಸಂಘದ ನಾಯಕತ್ವಕ್ಕೆ ಆಯ್ಕೆಯಾದ ಸದಸ್ಯರನ್ನು ತರಬೇತಿಗಳಿಗೆ ಒಳಪಡಿಸುವುದರ ಮುಖಾಂತರ ಸಂಘದ ವಿವಿಧ ಕಾರ್ಯಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲು ಅವುಗಳ ಮೇಲ್ವಿಚಾರಣೆ ಮಾಡುವ ಶಕ್ತಿ ಪಡೆಯುವಂತೆ ಪುರಸ್ಕರಿಸಬೇಕಾಗುವುದು. ಈ ವಿಚಾರವಾಗಿ ರೈತರಿಗೆ ನೀಡಲಾಗುವ ಶಿಕ್ಷಣವು ಸಂಘಟಿತ ಹಾಗೂ ಅಸಂಘಟಿತ ರೂಪದಲ್ಲಿರಬಹುದು. ರೈತ ನಾಗರಿಕರು ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ತಿಳುವಳಿಕೆ ನೀಡಬೇಕಾಗುವುದು, ಸಂಘಟನೆಯ ಸಮರ್ಪಕ ಕಾರ್ಯಶ್ರಮತೆಗೆ ಪೂರಕವಾಗಿರುವಂತೆ ವಿವಿಧ ಸಂಘಟನೆಗಳ ಜೊತೆಗೆ ಸಂಪರ್ಕ ಕಲ್ಪಿಸುವಲ್ಲಿ ವಿವಿಧ ಸಂಘಟನೆಗಳ ಮುಖ್ಯಸ್ಥರೊಂದಿಗೆ ಸರಕಾರದ ಪ್ರತಿನಿಧಿಗಳೊಂದಿಗೆ ಸಂಯುಕ್ತವಾಗಿ ಕಲಿಕಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದರ ಮುಖಾಂತರ ಸದಸ್ಯರ ಕಲಿಕೆಯನ್ನು ಅರ್ಥಪೂರ್ಣಗೊಳಿಸುವುದಾಗಿದೆ. ಒಟ್ಟಾರೆ ಕಲಿಕೆ ಪ್ರಕ್ರಿಯೆಯು ರೈತ ಸದಸ್ಯರು ತಮ್ಮ ಸಂಘಟನೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಅರ್ಥೈಸುವಂತೆ ತರಬೇತಿ ನೀಡುವುದಾಗಿದೆ.

ಹಂತ ಸಂಘದ ಕಾರ್ಯ ನಿರ್ವಹಣೆಗೆ ಸಿದ್ಧತೆ ಮಾಡುವುದು

ಈ ಹಂತದಲ್ಲಿ ಸಂಘದ ಸಮರ್ಪಕ ಕಾರ್ಯನಿರ್ವಹಣೆಗೆ ಪೂರಕವಾಗಿರುವಂತೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದಾಗಿರುತ್ತದೆ. ರೈತ ಸಂಘಟನೆಗಳು ತಾವು ತಯಾರಿಸಿದ ಕ್ರಿಯಾಯೋಜನೆಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ ಈ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸಹಕಾರಿಯಾಗುವಂತೆ ಉಪಗುಂಪುಗಳನ್ನು ರಚಿಸಿ, ಪ್ರತಿ ಗುಂಪು ತೆಗೆದುಕೊಳ್ಳಬೇಕಾದ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುವುದು. ಇದಕ್ಕೂ ಪ್ರಮುಖವಾಗಿ ಯೋಜನೆಯು ಅನುಷ್ಠಾನಕ್ಕೆ ಅವಶ್ಯಕವಿರುವ ಹಣಕಾಸು ಹಾಗೂ ಇತರೆ ಸಂಪನ್ಮೂಲಗಳನ್ನು ಸಂಘಟಿಸಬೇಕಾಗುವುದು. ಸಹಭಾಗಿತ್ವದ ರೀತಿಯಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸುವುದರ ಮೂಲಕ ಪ್ರತಿಯೊಬ್ಬ ಸದಸ್ಯರು ತಮ್ಮ ಅನುಭವ ಹಾಗೂ ಸೂಕ್ತವಾದ ಅನಿಸಿಕೆಯನ್ನು ಸಂಘದ ಬೆಳವಣಿಗೆಗಾಗಿ ನೀಡಲು ಅವಕಾಶ ಕೊಟ್ಟಂತಾಗುವುದು. ಈ ಒಟ್ಟಾರೆ ಪ್ರಕ್ರಿಯೆಯು ಸಂಘಟನೆಯ ಫಲಪ್ರದವಾಗಿ ಕಾರ್ಯನಿರ್ವಹಿಸುವಲ್ಲಿ ಅವಶ್ಯಕವಿರುವ ಎಲ್ಲಾ ಬೇಡಿಕೆಗಳನ್ನು ಒಳಗೊಂಡ ಕ್ರಿಯಾ ಯೋಜನೆಯನ್ನು ರೂಪಿಸಬೇಕಾದುದು ಸೂಕ್ತವಾದ ವಿಚಾರ.

ಹಂತ ಆಯ್ದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು

ಈ ಹಂತದಲ್ಲಿ ರೈತ ಸಂಘಟನೆಯು ತನ್ನ ಕಾರ್ಯಸೂಚಿಯಲ್ಲಿ ನಿರ್ಧರಿಸಿದಂತೆ ತಮ್ಮ ಕ್ರಿಯಾಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ವಿಸ್ತರಣಾ ಕಾರ್ಯಕರ್ತರು ಸಹಾಯ ನೀಡಬೇಕಾಗುವುದು. ಇದಕ್ಕಾಗಿ ಈ ಕೆಳಗಿನ ಪ್ರಕ್ರಿಯೆ ಅನುಕೂಲವಾಗಬಹುದು.

೧. ಆಯ್ಕೆಗೊಂಡು ಯೋಜಿಸಿದ ಯೋಜನೆಗಳ ಅನುಷ್ಠಾನ ಪ್ರಾರಂಭಿಸುವುದು.

೨. ಕಾರ್ಯಯೋಜನೆಯ ಅನುಷ್ಠಾನಕ್ಕೆ ಬೇಕಾದ ಸಂಪನ್ಮೂಲ ಕೂಡಿಸುವುದು.

೩. ವಿವಿಧ ಕೆಲಸಗಳನ್ನು ಹಾಗೂ ವೈಯಕ್ತಿಕ ಪಾತ್ರಗಳನ್ನು ನಿರ್ಧರಿಸಿ ಹಂಚುವುದು.

೪. ಪ್ರತಿ ಚಟುವಟಿಕೆಯ ಅನುಷ್ಠಾನಕ್ಕೆ ವೇಳಾಪಟ್ಟಿ ತಯಾರಿಸುವುದು ಹಾಗೂ ಆ ವೇಳಾಪಟ್ಟಿಯ ಪ್ರಕಾರ ಕಾರ್ಯ ಅನುಷ್ಠಾನಗೊಳಿಸುವುದು.

೫. ಅನುಷ್ಠಾನ ಮಾಡುತ್ತಿರುವ ಚಟುವಟಿಕೆಗಳ ಮೇಲ್ವಿಚಾರಣೆ ಮಾಡುವುದು ಹಾಗೂ ಬದಲಾವಣೆಯ ಅವಶ್ಯಕತೆಯಿದ್ದಲ್ಲಿ ಸೂಕ್ತ ಸಲಹೆ ನೀಡುವುದು.

೬. ಉಪಸಮಿತಿಯ ಸದಸ್ಯರು ಸಭೆ ಸೇರಿ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಿ ಉಳಿದ ಸಾಮಾನ್ಯ ಸದಸ್ಯರ ಗಮನಕ್ಕೆ ತರುವದು.

ಹಂತ೧೦ ರೈತ ಸಂಘಟನೆಯ ಪ್ರಗತಿಯನ್ನು ಪರಿಶೀಲಿಸುವುದು ಹಾಗೂ ಮೌಲ್ಯ ಮಾಪನ ಮಾಡುವುದು

ಸಾಮಾನ್ಯವಾಗಿ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನೆಯನ್ನು ವಾರ್ಷಿಕವಾಗಿ ಮಾಡುವುದು ಪದ್ಧತಿ. ಆದರೆ ಪ್ರಾರಂಭಿಸುವ ಹಂತದಲ್ಲಿ ವಿಸ್ತರಣಾ ಕಾರ್ಯಕರ್ತರ ಸಹಾಯ ಹಾಗೂ ಸಹಕಾರದಿಂದ ಪ್ರತಿ ಮೂರು ತಿಂಗಳು ಅಥವಾ ಪ್ರತಿ ಆರು ತಿಂಗಳಿಗೊಮ್ಮೆ ಮಾಡುವುದು ಸೂಕ್ತ ಹಾಗೂ ಸಹಕಾರಿ. ಈ ಪ್ರಗತಿ ಪರಿಶೀಲನಾ ಸಭೆಗಳು ರೈತ ಸಂಘಟನೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಲ್ಲಿ ಸಲಹ – ಸೂಚನೆ ನೀಡುವುದರೊಂದಿಗೆ ಸುಧಾರಣಾ ಕ್ರಮಗಳ ಬಗ್ಗೆಯೂ ಮಾರ್ಗದರ್ಶನ ಮಾಡುವಲ್ಲಿ ಸಹಾಯಕವಾಗುತ್ತವೆ. ಕಾರ್ಯಕ್ರಮ ಅನುಷ್ಠಾನದಲ್ಲಿ ಏನಾದರೂ ಋಣಾತ್ಮಕ ವಿಚಾರಗಳಿದ್ದರೆ ಅವುಗಳನ್ನು ಸುಧಾರಿಸಲು ಈ ಸಭೆಗಳು ಸಹಕಾರಿಯಾಗುತ್ತವೆ. ಈ ಸಂಘಟನೆಗಳ ಪ್ರಗತಿಯನ್ನು ಸಂಘಟನೆಯ ಸದಸ್ಯರು ಯಾವ ರೀತಿಯಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಸಂಘಟನೆಯಲ್ಲಿ ಭಾಗವಹಿಸುವ ಮೂಲಕ ಸುಧಾರಿಸಿಕೊಂಡಿದ್ದಾರೆ ಎಂಬುದರ ಮುಖಾಂತರವೂ ಅಳತೆಗೋಲು ಮಾಡಬಹುದಾಗಿದೆ. ಇದಲ್ಲದೇ ಸಂಘಟನೆಯ ಕಾರ್ಯಕ್ರಮಗಳ ಮುಖಾಂತರ ಕೃಷಿ ಉತ್ಪಾದನೆಯಲ್ಲಿ ವೆಚ್ಚಗಳ ಕಡಿತ ಎಷ್ಟು ಪ್ರಮಾಣದಲ್ಲಿ ಆಗಿದೆ ಎನ್ನುವ ಮೂಲಕ ಪ್ರಗತಿಯ ಅಳತೆಗೋಲು ಮಾಡಬಹುದಾಗಿದೆ.

ರೈತ ಸಂಘಟನೆಗಳ ಸ್ಥಾಪನೆ ಹಾಗೂ ಬಲವರ್ಧನೆಗೆ ಸಂಬಂಧಿಸಿದ ನೀತಿ ನಿಯಮಗಳು

ರೈತ ಸಂಘಟನೆಗಳ ಸ್ಥಾಪನೆ ಬಲವರ್ಧನೆಗೆ ಸಂಬಂಧಿಸಿದಂತೆ ಹಲವಾರು ರೀತಿಯ ನೀತಿ – ನಿಯಮಗಳ ಬೆಂಬಲ ಅವಶ್ಯಕವಾಗಿದೆ. ಈ ರೀತಿ – ನಿಯಮಗಳು ರೈತ ಸಂಘಟನೆಗಳನ್ನು ಕಾನೂನಾತ್ಮಕವಾಗಿ ಸ್ಥಾಪಿಸಿ ಅವುಗಳನ್ನು ಸರಕಾರ ಹಾಗು ಸರಕಾರೇತರ ಸಂಘ – ಸಂಸ್ಥೆಗಳು ಗುರುತಿಸುವಂತೆ ಪೂರಕವಾಗಿರಬೇಕಾಗಿದೆ.

. ಬಲಶಾಲಿ ರೈತ ಸಂಘಟನೆಗಳಿಂದ ಹೆಚ್ಚಿನ ಸೇವೆಗೆ ಬೇಡಿಕೆ

ರೈತ ಸಂಘಟನೆಗಳನ್ನು ಸ್ಥಾಪಿಸಿ ಬಲಶಾಲಿಗೊಳಿಸುವುದರಿಂದ ಈ ರೈತ ಸಂಘಟನೆಗಳು ಹೆಚ್ಚಿನ ಪ್ರಮಾಣದಲ್ಲಿ ಸರಕಾರಿ ಹಾಗೂ ಸರಕಾರೇತರ ಸೇವಾ ಸಂಸ್ಥೆಗಳಿಂದ, ಇಲಾಖೆಗಳಿಂದ ಹೆಚ್ಚಿನ ಮಟ್ಟದಲ್ಲಿ ಸೇವೆಗೆ ಬೇಡಿಕೆ ಇಡಬಹುದಾಗಿದೆ. ಹೀಗೇನಾದರೂ ಆದಲ್ಲಿ ಅವರ ಬೇಡಿಕೆಯನ್ನು ಪೂರೈಸುವುದು ಒಂದು ಕಠಿಣ ಪ್ರಶ್ನೆಯಾಗಬಹುಜದು. ಬಲಶಾಲಿಯಾದ ರೈತ ಸಂಘಟನೆಗಳು ಸಂಶೋಧನೆ, ಶಿಕ್ಷಣ, ವಿಸ್ತರಣೆ, ಕೃಷಿ ಸೇವೆಯಲ್ಲಿ ನಿರತವಾದ ಸಂಸ್ಥೆಗಳಿಗೆ ಹೆಚ್ಚಿನ ಬೇಡಿಕೆ ಇಡುವುದು ಸುಲಭಸಾಧ್ಯ. ಸರಕಾರದ ನೀತಿ – ನಿಯಮಗಳು ರೈತರು ಸಂಘಟನೆಗಳ ಸ್ಥಾಪನೆಗೆ ಹಾಗೂ ಅವುಗಳ ಬಲವರ್ಧನೆಗೆ ನಿಜವಾಗಿಯೂ ಪೂರಕವಾಗಿ ಕೆಲಸ ಮಾಡುವ ಕಳಕಳಿ ಹೊಂದಿದ್ದೇ ಆದಲ್ಲಿ ಆ ಸಂಘಟನೆಗಳ ಸಾಮರ್ಥ್ಯವರ್ಧನೆ ಹಾಗೂ ಸ್ವ – ಸಹಾಯ ಪರಂಪರೆಯನ್ನು ಸಾಧಿಸುವಲ್ಲಿ ಹೆಚ್ಚಿನ ಗಮನ ನೀಡಬೇಕಾಗುವುದು. ಈ ರೀತಿಯ ನೀತಿ – ನಿಯಮಗಳು ಸ್ಥಾನಿಕವಾಗಿ ಸಂಪನ್ಮೂಲಗಳ ಸಮರ್ಪಕ ಬೆಳಕಿಗೆ ದಾರಿ ಮಾಡಿಕೊಡುವುದರ ಜೊತೆಗೆ ರೈತ ಸಮುದಾಯ ಸೂಕ್ತವಾದ ರೀತಿಯಲ್ಲಿ ಕೃಷಿ ಸೇವೆಗಳನ್ನು ಪಡೆಯಲು ಸಹಾಯವಾಗುವುದು.

ಈ ರೀತಿಯ ಪ್ರಕ್ರಿಯೆಯಿಂದ ಕೃಷಿಯಲ್ಲಿ ಭಾಗಿಯಾದ ಸಂಪನ್ಮೂಲ ಬಡವ ರೈತರು ವಿವಿಧ ಸೇವಾ ಸಂಘಟನೆಗಳೊಂದಿಗೆ (ಉದಾ: ಬ್ಯಾಂಕ್‌, ಕೃಷಿ ಸಾಮಾಗ್ರಿ ಸರಬರಾಜು ಸಂಸ್ಥೆಗಳು) ಸಂಬಂಧ ಹೊಂದಿ ಸಮರ್ಪಕವಾದ ಕೃಷಿ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುವುದರ ಜೊತೆಗೆ ಗ್ರಾಮೀಣ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಲು ಸಾಧ್ಯವಾಗುವುದು. ಸೇವೆಯಿಂದ ನಿವೃತ್ತಿ ಹೊಂದಿ ಕೃಷಿ ಚಟುವಟಿಯಲ್ಲಿ ಅಭಿರುಚಿ ಹೊಂದಿದ ಅನುಭವಿಗಳು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಯುವಕರನ್ನು ಹಾಗೂ ಮಹಿಳೆಯರನ್ನು ಸ್ಥಳೀಯವಾಗಿ ತರಬೇತಿ ನೀಡುವುದರ ಮುಖಾಂತರ ಕೃಷಿ ಅಭಿವೃದ್ಧಿಪರ ಚಿಂತನೆಯನ್ನು ಮಾಡಬಹುದಾಗಿದೆ.

. ಸೇವೆಗಾಗಿ ಸ್ಪರ್ಧೆ

ಬಲಶಾಲಿ ರೈತ ಸಂಘಟನೆಗಳು ಕೃಷಿಗೆ ಸಂಬಂಧಿಸಿದಂತೆ ವಿವಿಧ ಸೇವೆಗಳನ್ನು ಪಡೆಯುವಾಗ ಗುಣಮಟ್ಟದ ಸೇವೆ ನೀಡಬಹುದಾದ ಸಂಘ ಸಂಸ್ಥೆಗಳನ್ನು ಸಂಪರ್ಕಿಸುವುದು ಸಾಮಾನ್ಯವಾಗಿ ವಿಚಾರ ಪ್ರಸ್ತುತ ವಾಣಿಜ್ಯ ಗಾತ್ರದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡ ಕೃಷಿಕರಿಗೆ ಅಥವಾ ಕೃಷಿ ಸಂಘಟನೆಗಳಿಗೆ ಈ ರೈತ ಸಂಘಟನೆಗಳು ಕೃಷಿಸೇವೆಗಾಗಿ ಸ್ಪರ್ಧೆ ಒಡ್ಡಬಹುದು. ಇಂತಹ ಪರಿಸ್ಥಿತಿಗಳನ್ನು ಸೂಕ್ತವಾಗಿ ನಿರ್ವಹಿಸಲು ಗ್ರಾಮೀಣ ಮಟ್ಟದಲ್ಲಿ ರಯತರ ಸಂಘಟನೆಗಳನ್ನು ಸೂಕ್ತವಾಗಿ ಬಲಪಡಿಸುವುದರ ಮೂಲಕ ಸರಕಾರಿ ಹಾಗೂ ಸರಕಾರೇತರ ವಿಸ್ತರಣಾ ಸೇವೆಯ ಮೇಲೆ ಬರಬಹುದಾದ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ. ರೈತ ಸಂಘಟನೆಗಳು ತಾಂತ್ರಿಕವಾಗಿ ಹಾಗೂ ನಿರ್ವಹಣಾ ವಿಷಯವಾಗಿ ಶಕ್ತಿಯುತವಾಗಿ ಬೆಳೆಯುದರ ಮೂಲಕ ಪ್ರಸ್ತುತ ಸರಕಾರಿ ವಿಸ್ತರಣಾ ರಚನೆಯ ಮೇಲಿರುವ ಒತ್ತಡ ಕಡಿಮೆಯಾಗುವುದು ಹಾಗೂ ಗ್ರಾಮ ಮಟ್ಟದಲ್ಲಿ ಕೃಷಿ ಇಲಾಖೆಯನ್ನು ಪ್ರತಿನಿಧಿಸುವ ಅಧಿಕಾರಿಗಳ ಮೇಲಿನ ಜವಾಬ್ದಾರಿ ಸ್ವಲ್ಪ ಸರಳವಾಗಬಹುದು.

ಸಮುದಾಯ ಆಧಾರಿತ ರೈತ ಸಂಘಟನೆಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸುತ್ತವೆ ಹಾಗೂ ಇಂದಿನ ಮುಂದುವರೆದ ಯುಗದಲ್ಲಿ ಸಾಂಘಿಕ ಶಕ್ತಿಯ ಅವಶ್ಯಕತೆಯನ್ನು ಈ ಸಂಘಟನೆಗಳು ಗ್ರಾಮಮಟ್ಟದಲ್ಲಿ ನೀಡಲು ಸೂಕ್ತವಾಗಿವೆ. ಈ ಸಂಘಟನೆಗಳನ್ನು ರಚನೆ ಮಾಡುವಾಗ ಯಾವುದೇ ರೀತಿಯ ನಿರ್ದಿಷ್ಟ ರೂಪುರೇಷೆಯನ್ನು ಯೋಜಿಸಿಕೊಳ್ಳದೆ ಮತ್ತು ಒಂದು ಪೂರ್ವನಿಯೋಜಿತ ಚೌಕಟ್ಟಿಗೆ ಅಂತರಗೊಳ್ಳದೇ, ಒಂದು ಕಲಿಕಾ ಪ್ರಯೋಗವಾಗಿ ಈ ಸಂಘಟನೆಗಳನ್ನು ಅಲ್ಲಿಯ ಸ್ಥಾಕನಿಕ ಅವಶ್ಯಕತೆಗೆ ಅನುಗುಣವಾಗಿ ರೂಪಿಸಬೇಕಾಗಿದೆ.

ಗ್ರಂಥ ಋಣ

೧. ಆಲೂರ. ಎ.ಎಸ್‌., ರವೀಂದ್ರರ ರೆಡ್ಡಿ ಸಿ. ಎಚ್‌., ಗೌಡಾ ಸಿ.ಎಲ್‌.ಎಲ್‌, ರೆಡ್ಡಿ ಬಿ. ವ್ಹಿ.ಎಸ್‌., ರಾಯ್‌ ಕೆ.ಎನ್‌., ಪಾರ್ಥಸಾರಥಿ ರಾವ್‌ ಪಿ. ಹಾಗೂ ಸುನೀಲಕುಮಾರ ಎಸ್‌.(೨೦೦೮) ಬಿಲ್ಡಿಂಗ್‌ ಸ್ಟ್ರಾಂಗರ್ ಫಾರ್ಮರ್ಸ್ ಅಸೋಸಿಯೇಶನ್ಸ್‌. ಬೆಳೆ ಸುಧಾರಣೆ ಜಾಗತಿಕ ವಿಭಾಗ, ಅಂತರರಾಷ್ಟ್ರೀಯ ಅರೆಶುಷ್ಕ ಉಷ್ಣವಲಯಗಳ ಬೆಳೆ ಸಂಶೋಧನಾ ಸಂಸ್ಥೆ, ಪಟನ್‌ಚೆರು – ೫೦೨೩೨೪, ಆಂಧ್ರಪ್ರದೇಶ್‌; ೩೨ ಪುಟಗಳು.

೨. ಬರ್ಕಿ, ಎಸ್‌.(೧೯೯೩). ಪೀಪಲ್‌ ಫಸ್ಟ್‌: ಎ ಗೈಡ್‌ ಟು ಸೆಲ್ಫ್‌ ರಿಲೈಯಂಟ್‌ ಪಾರ್ಟಿಸಿ ಪೇಟರಿ ಡೆವಲಪ್‌ಮೆಂಟ್‌ ಲಂಡನ್‌; ಝೆಡ್‌ ಬುಕ್ಸ್‌.

೩. ಕಾರ್ಮನ್‌, ಕೆ. ಹಾಗೂ ಕೆಇಥ್‌ ಕೆ (೧೯೯೪). ಕಮ್ಯುನಿಟಿ ಕನಸಲ್ವೇಶನ್‌ ಟೆಕ್‌ನಿಕ್ಸ್‌: ಪರಪೋಸಿಸ್‌, ಫ್ರೊಸೆಸಿಸ್‌ ಆಯಂಡ್‌ ಫಿಟ್‌ಫಾಲ್ಸ್‌ – ಎ ಗೈಡ್‌ ಫಾರ್ ಪ್ಲಾನರ್ಸ್‌ ಆಯಂಡ್‌ ಫೆಸಿಲಿಟೇಟರ್ಸ್ ಬ್ರಿಸೆಬೇನ್‌, ಡಿಪಾರ್ಟಮೆಂಟ್‌ ಆಫ್‌ ಫ್ರೈಮರಿ ಇಂಡಸ್ಟ್ರೀಸ್‌, ಕ್ವಿನ್ಸ್‌ಲ್ಯಾಂಢ್‌.

೪. ಚಾಮಲಾ. ಎಸ್‌ (೧೯೯೦). ಎಸ್ಟ್ಯಾಬ್ಲಿಷಿಂಗ್‌ ಎ – ಗ್ರೂಪ್‌: ಎ ಪಾರ‍್ಟಿಸಿಪೇಟಿವ್ಹ್ ಆಯಕ್ಷನ್‌ ಮಾಡಲ್‌ ಇನ್‌ ಎಸ್‌. ಚಾಮಲಾ ಮತ್ತು ಪಿ.ಡಿ. ಮಾರ್ಟ್‌ಸ್‌, ವರ್ಕಿಂಗ್‌ ಟುಗೆದರ್ ಫಾರ್ ಲ್ಯಾಂಡ್‌ಕೇರ್: ಗ್ರೂಪ್‌ ಮ್ಯಾನೇಜ್‌ಮೆಂಟ್‌ ಸ್ಕಿಲ್ಸ್‌ ಆಯಂಡ್‌ ಸ್ಟ್ರೆಟಜೀಸ್‌, ಪುಟಸಂಖ್ಯೆ ೧೩ – ೩೮, ಬ್ರಿಸ್‌ಬೇನ್‌, ಆಸ್ಟ್ರೇಲಿಯನ್‌ ಆಕಾಡೆಮಿ ಪ್ರೆಸ್‌.

೫. ಚಾಮಲಾ ಎಸ್‌. (೧೯೯೧). ಎಸ್ಟ್ಯಾಬ್ಲಿಷಿಂಗ್‌ ಎ ಗ್ರೂಪ್‌: ಎ ಮಾಡೆಲ್‌ ಫಾರ್ ಪಾರ್ಟಿಸಿ ಪೇಟಿವ್ಹ್ ಆಯಕಷನ್‌ ಮ್ಯಾನೇಜಮೆಂಟ್‌ ಇನ್‌ ಪಿ.ಡಿ ಮಾರ್ಟಸ್‌ ಹಾಗೂ ಎಸ್‌. ಚಾಮಲಾ. ಗ್ರೂಪ್‌ ಮ್ಯಾನೇಜಮೆಂಟ್‌ ಸ್ಕಿಲ್ಸ್‌ ಫಾರ್ ಲ್ಯಾಂಡ್‌ಕೇರ್: ಎ ಟ್ರೇನರ್ಸ್ ಗೈಡ್‌. ಪುಟಗಳು ೩೩ – ೬೦, ಬ್ರಿಸ್‌ಬೇನ್‌; ಆಸ್ಟ್ರೇಲಿಯನ್‌ ಅಕಾಡೆಮಿ ಪ್ರೆಸ್‌.