ಖಳ ನಾಯಕರು ಸೋಲುವುದು
ಕಾವ್ಯ ಅಥವಾ ನಾಟಕಗಳಲ್ಲಿ ಮಾತ್ರ ;
ವಾಸ್ತವದಲ್ಲಿ ಅವರದೇ ವಿಜೃಂಭಣೆ
ಮತ್ತೆ ಪ್ರಧಾನ ಪಾತ್ರ.

ಮಾತಾಡುವುದು ವ್ಯರ್ಥ
ಮೌಲ್ಯಗಳನ್ನು ಕುರಿತು
ತತ್ವಗಳನ್ನು ಕುರಿತು
ಅವರೇ ಹಿಡಿದಿರುವಾಗ ಸಮಸ್ತ ಸೂತ್ರ.

ಎಲ್ಲಿ, ಪರಿಸರವೆಲ್ಲ ಭ್ರಷ್ಟವೋ ಅಲ್ಲಿ
ಮುಗ್ಧತೆಗೆ, ನೈಜತೆಗೆ, ಸಾಚಾತನಕ್ಕೆ ಬೆಲೆ ಎಲ್ಲಿ?
ಇದ್ದರೂ ಅಪರೂಪಕ್ಕೆ ಒಬ್ಬ ಶಿಷ್ಟ,
ಅವನನ್ನು ಹಿಡಿದು, ಬಡಿದು,
ಮುಖಕ್ಕೆ ಮಸಿ ಬಳಿದು
ತುತ್ತೂರಿಯೂದಿ ಮೆರವಣಿಗೆ ಮಾಡಿ
ರೊಪ್ಪಕ್ಕೆ ತಳ್ಳುವ ವ್ಯವಸ್ಥೆ
ಸದಾ ಸನ್ನದ್ಧ.
ಹೀಗಿದೆ ಸಮತಾವಾದವನ್ನು
ಸಮರ್ಥವಾಗಿ ನೆಲೆಗೊಳಿಸುವ ಯುದ್ಧ.