ಸ್ಟೀಫನ್ ವಿಲಿಯಂ ಹಾಕಿಂಗ್

ಸ್ಟೀಫನ್ ವಿಲಿಯಂ ಹಾಕಿಂಗರದು ಬಹಳ ಮಂದಿ ವಿಜ್ಞಾನಿಗಳ ದೃಷ್ಟಿಯಲ್ಲಿ ಐನ್‌ಸ್ಟೈನ್ ನಂತರದ ಅತ್ಯಂತ ಪ್ರಖರ ಮಿದುಳು.ಇಂದು ಜೀವಂತವಿರುವ ಸೈದ್ಧಾಂತಿಕ ಭೌತವಿಜ್ಞಾನಿಗಳಲ್ಲಿ ಅವರು ಅಗ್ರಗಣ್ಯರು.

ಹಾಕಿಂಗರು ಬರೆದಿರುವ ಬ್ರೀಫ್ ಹಿಸ್ಟರಿ ಆಫ್ ಟೈಮ್ಕಥೆಯಲ್ಲ, ಕಾದಂಬರಿಯಲ್ಲ, ಕಡೆಗೆ ವೈಜ್ಞಾನಿಕ ಫ್ಯಾಂಟಸಿಯೂ ಅಲ್ಲ. ಅದೊಂದು ಶುದ್ಧ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕ. ಆದರೂ ಅದು ದೀರ್ಘ ಕಾಲದಿಂದ ಬೆಸ್ಟ್ ಸೆಲ್ಲರ್ಪಟ್ಟಿಯಲ್ಲಿದ್ದು ಈವರೆಗೆ ಹಲವು ದಶಲಕ್ಷ ಪ್ರತಿಗಳು ಖರ್ಚಾಗಿವೆ. ಇದೊಂದು ದಾಖಲೆ.

ಇದೊಂದು ಅಪೂರ್ವ ಸಾಧನೆ ಕೂಡ: ವಿಜ್ಞಾನಿಯೇ ತನ್ನ ಮೌಲಿಕ ಚಿಂತನೆಗಳ ಸಾರವನ್ನು, ವಿಜ್ಞಾನದ ಶಿಕ್ಷಣವಿಲ್ಲದ ಸಾಮಾನ್ಯರಿಗೂ ಅರ್ಥವಾಗುವಂತಹ ರೀತಿಯಲ್ಲಿ ಬರೆದು ಯಶಸ್ವಿಯಾಗಿರುವ ಉದಾಹರಣೆಗಳು ತೀರ ವಿರಳ.

ಹಾಕಿಂಗರ ಬದುಕೇ ಒಂದು ಅದ್ಭುತ ಸಾಹಸಗಾಥೆ. ಅವರು ನಮ್ಮ ನಿಮ್ಮಂತೆ ನಡೆದಾಡಲಾರರು, ಮಾತನಾಡಲಾರರು, ಬರೆಯಲಾರರು. ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಗಾಲಿ ಕುರ್ಚಿಯಲ್ಲೆ ಚಲನೆ; ಚಿಂತನೆ. ಗಾಲಿ ಕುರ್ಚಿಗೆ ಅಳವಡಿಸಿರುವ ಸ್ವೀಚ್ ಸಿಂಥೆಸೈಸರ್ ನಿಂದಷ್ಟೆ ಸಂವಹನ.

ಮಿದುಳೆ ಅವರ ಶಕ್ತಿ; ಎಲ್ಲ ಶೋಧನೆಗಳಿಗೆ ಸಾಧನ. ಮಿದುಳಿನ ಸಾಧನವನ್ನು ಬಳಸಿಕೊಂಡು ಹಾಕಿಂಗರು ವಿಜ್ಞಾನ ಪ್ರಪಂಚಕ್ಕೆ, ಅದರಲ್ಲೂ ವಿಶ್ವವಿಜ್ಞಾನ (Cosmology) ಅರಿವಿಗೆ ಸಲ್ಲಿಸಿರುವ ಮೂಲಭೂತ ಕೊಡುಗೆಗಳು ಅವರನ್ನು ಗೆಲಿಲಿಯೋ, ನೂಟನ್ ಮತ್ತು ಐನ್‌ಸ್ಟೈನರ ಸಾಲಿನಲ್ಲಿ ನಿಲ್ಲಿಸಿವೆ.

ಪ್ರಸ್ತುತ ಬ್ರೀಫ್ ಹಿಸ್ಟರಿ ಆಫ್ ಟೈಮ್ನಲ್ಲಿರುವ Arrow of Times ಎಂಬ ಅಧ್ಯಾಯದ ಸಾರ ಸಂಗ್ರಹವನ್ನಿಲ್ಲಿ ಕೊಟ್ಟಿದೆ.

ಭೂತ ಮತ್ತು ಭವಿಷ್ಯತ್ತುಗಳ ನಡುವಿನ ವ್ಯತ್ಯಾಸ ಬಂದದ್ದು ಎಲ್ಲಿಂದ? ನಾವು ಭೂತವನ್ನಷ್ಟೆ ಜ್ಞಾಪಿಸಿಕೊಳ್ಳುತ್ತೇವೆ, ಭವಿಷ್ಯವನ್ನಲ್ಲ. ಏಕೆ?

ವಿಜ್ಞಾನದ ನಿಯಮಗಳು ಭೂತ ಮತ್ತು ಭವಿಷ್ಯತ್ತುಗಳ ನಡುವೆ ತಾರತಮ್ಯ ಎಣಿಸುವುದಿಲ್ಲ. ಆದರೆ ನಮ್ಮ ವಾಸ್ತವ ಕಾಲದ ಮುನ್ನಡೆ ಮತ್ತು ಹಿನ್ನೆಡೆಗಳ ನಡುವೆ ಅಗಾಧ ವ್ಯತ್ಯಾಸವಿದೆ. ನೀರಿನ ಬಟ್ಟಲೊಂದು ಮೇಜಿನ ಮೇಲಿಂದ ನೆಲಕ್ಕೆ ಬಿದ್ದು ಚೂರು ಚೂರಾಗುವ ದೃಶ್ಯವನ್ನು ತೆಗೆದುಕೊಳ್ಳಿ. ನೀವು ಇದನ್ನು ಚಿತ್ರೀಕರಿಸಿಕೊಂಡು ತೆರೆಯ ಮೇಲೆ ಓಡಿಸಿದರೆ ಅದು ಮುಂದೋಡುತ್ತಿದೆಯೇ ಅಥವಾ ಹಿಂದೋಡಿತ್ತಿದೆಯೇ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಚಿತ್ರವನ್ನು ಹಿನ್ನೆಡೆಸಿದರೆ, ನೆಲದ ಮೇಲಿನ ಚೂರುಗಳು ತಾವಾಗಿಯೆ ಒಟ್ಟುಗೂಡಿ ಅಖಂಡ ಬಟ್ಟಲಾಗಿ ಮೇಜಿನ ಮೇಲೆ ಹಾರಿ ಕುಳಿತುಕೊಳ್ಳುವುದನ್ನು ನೋಡುತ್ತೀರಿ. ಕಾಲ ಹಿನ್ನೆಡೆದರೆ ಎಲ್ಲ ಘಟನೆಗಳೂ ಹೀಗೆಯೇ ಆಗುತ್ತವೆ. ಹಾಗಿದ್ದಿದ್ದರೆ ಬಟ್ಟಲು ತಯಾರಕರು ವ್ಯಾಪಾರವಿಲ್ಲದೆ ಪಾಪರಾಗುತ್ತಿದ್ದರು!

ಓಡೆದ ಬಟ್ಟಲು ಒಂದುಗೂಡಿ ಮೇಜಿನ ಮೇಲೇರುವ ಪ್ರಕ್ರಿಯೆ ವಾಸ್ತವದಲ್ಲಿ ಆಗುವುದಿಲ್ಲ ಏಕೆ? ಎಂಬ ಪ್ರಶ್ನೆಗೆ ಸಿಗುವ ಸಾಮಾನ್ಯ ಉತ್ತರ: ಉಷ್ಣಬಲವಿಜ್ಞಾನದ ಎರಡನೆ ನಿಯಮ (Second law of Thermodynamics) ಇದನ್ನು ನಿಷೇಧಿಸುತ್ತದೆ ಎಂಬುದಾಗಿದೆ.

ಉಷ್ಣಬಲವಿಜ್ಞಾನದ ಎರಡನೇ ನಿಯಮದ ಪ್ರಕಾರ ಯವುದೇ ಮುಚ್ಚಿದ ವ್ಯವಸ್ಥೆಯಲ್ಲಿ ಕ್ರಮಭಂಗ (disorder) ಅಥವಾ ಎಂಟ್ರಪಿ (entropy)ಯು ಸಮಯದೊಂದಿಗೆ ಯಾವಾಗಲೂ ಹೆಚ್ಚುತ್ತದೆ. ಇದು ಮರ್ಫಿಯ ನಿಯಮದ ಮತ್ತೊಂದು ರೂಪದಂತಿದೆ: ಎಲ್ಲವೂ ಯಾವಾಗಲೂ ತಪ್ಪಾಗುವುದರ ಮಾರ್ಗದಲ್ಲೆ ಇರುತ್ತದೆ (Things always tend to go wrong).

ಮೇಜಿನ ಮೇಲಿರುವ ಅಖಂಡ ಬಟ್ಟಲಿನದು ಅತ್ಯಂತ ಕ್ರಮಬದ್ಧ (order) ಸ್ಥಿತಿ. ನೆಲದ ಮೇಲೆ ಬಿದ್ದಿರುವ ಒಡೆದ ಬಟ್ಟಲಿನ ಚೂರುಗಳದು ಕ್ರಮಗೆಟ್ಟ (disorder) ಸ್ಥಿತಿ. ಭೂತದ ಅಖಂಡ ಬಟ್ಟಲಿನ ಸ್ಥಿತಿಯಿಂದ ಭವಿಷ್ಯದ ಒಡೆದ ಚೂರುಗಳ ಸ್ಥಿತಿಗೆ ನಾವು ಸುಲಭವಾಗಿ ಹೋಗಬಹುದು, ಆದರೆ ತದ್ವಿರುದ್ಧವಾಗಿಯಲ್ಲ.

ಕ್ರಮಭಂಗದ ಹೆಚ್ಚಳ ಕಾಲಬಾಣ (arrow of time)ಕ್ಕೆ ಒಂದು ಉದಾಹರಣೆ. ಇದು ಭೂತ ಮತ್ತು ಭವಿಷ್ಯತ್ತುಗಳ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ; ಕಾಲಕ್ಕೆ ಒಂದು ದಿಕ್ಕನ್ನು ಒದಗಿಸುತ್ತದೆ.

ಮೂರು ಕಾಲ ಬಾಣಗಳು:

ಕನಿಷ್ಠ ಮೂರು ಕಾಲ ಬಾಣಗಳಿವೆ. (೧) ಉಷ್ಣಬಲಾತ್ಮಕ ಕಾಲಬಾಣ (thermodynamic arrow of times). ಕಾಲದೊಂದಿಗೆ ಕ್ರಮಭಂಗವು ಹೆಚ್ಚುತ್ತದೆ: ಕ್ರಭಂಗವು ಹೆಚ್ಚುವ ಕಡೆಗಿರುವ ಕಾಲದ ದಿಕ್ಕು.

(೨) ಮಾನಸಿಕ ಕಾಲಬಾಣ (psychological arrow of time). ಕಾಲ ಹೇಗೆ ಜಾರುತ್ತದೆ ಎಂಬುದರ ನಮ್ಮ ಗ್ರಹಿಕೆ: ನಾವು ಭವಿಷ್ಯವನ್ನಲ್ಲದೆ ಭೂತವನಷ್ಟೇ ಜ್ಞಾಪಿಸಿಕೊಳ್ಳುವ ದಿಕ್ಕು.

(೩) ವಿಶ್ವ ವೈಜ್ಞಾನಿಕ ಕಾಲಬಾಣ (cosmological arrow of time). ಕಾಲದೊಂದಿಗೆ ವಿಶ್ವವು ಹಿಗ್ಗುತ್ತ್ತದೆ: ವಿಶ್ವವು ಹಿಗ್ಗುತ್ತಿರುವ ಕಡೆಗಿರುವ ಕಾಲದ ದಿಕ್ಕು.

ಈ ಮೂರು ಕಾಲಬಾಣಗಳ ದಿಕ್ಕು ಒಂದೇ ಆಗಿದ್ದಾಗ ಮಾತ್ರ ಬುದ್ಧಿವಂತ ಜೀವಿಗಳ ವಿಕಾಸಕ್ಕೆ ಅನುಕೂಲವಾದ ವಾತಾವರಣವಿರುತ್ತದೆ ಎಂದು ನಾನು ವಾದಿಸುತ್ತೇನೆ.

ಉಷ್ಣಬಲಾತ್ಮಕ ಕಾಲ ಬಾಣ

ಉಷ್ಣಬಲವಿಜ್ಞಾನದ ಎರಡನೆಯ ನಿಯಮವು ಸುವ್ಯವಸ್ಥ ಸ್ಥಿತಿಗಳಿಗಿಂತ ಅವ್ಯವಸ್ಥ ಸ್ಥಿತಿಗಳೇ ಯಾವಾಗಲೂ ಅಧಿಕ ಸಂಖ್ಯೆಯಲ್ಲಿರುತ್ತವೆ ಎಂಬ ಸತ್ಯದಿಂದ ಬಂದದ್ದು. ಉದಾಹರಣೆಗೆ, ಒಂದು ಚಿತ್ರಪಟದ ತುಂಡುಗಳನ್ನು ತೆಗೆದುಕೊಳ್ಳ್ಳಿ. (ಯಾದೃಚ್ಛಿಕವಾಗಿ ಕತ್ತರಿಸಿದ ಆನೆಯ ಚಿತ್ರದ ಅನೇಕ ತುಂಡುಗಳು). ಇವುಗಳನ್ನು ಒಂದೇ ಒಂದು – ಕೇವಲ ಒಂದೇ ಒಂದು ಕ್ರಮದಲ್ಲಿ ಜೋಡಿಸಿದಾಗ ಮಾತ್ರ ಅರ್ಥಪೂರ್ಣ (ಆನೆಯ) ಚಿತ್ರವಾಗುತ್ತದೆ. ಆದರೆ, ಅದೇ ಈ ಚಿತ್ರಕ್ಕೆ ಅತಿಹೆಚ್ಚಿನ ಸಂಖ್ಯೆಯ, ಯಾವುದೇ ಚಿತ್ರವಾಗದಂತಹ, ಕ್ರಮಗೆಟ್ಟ ಸ್ಥಿತಿಗಳಿರುತ್ತವೆ.

ಯಾವುದೇ ವ್ಯವಸ್ಥೆಯ ಒಂದು ಕ್ರಮ ಬದ್ಧ ಸ್ಥಿತಿಯನ್ನು ತೆಗೆದುಕೊಳ್ಳಿ. ಕಾಲ ಸರಿದಂತೆ ವಿಜ್ಞಾನದ ನಿಯಮಗಳಿಗೆ ಅನುಸಾರವಾಗಿ ಅದು ವಿಕಾಸಗೊಳ್ಳುತ್ತದೆ. ಸ್ವಲ್ಪ ಸಮಯ ಕಳೆದ ನಂತರ ಆ ವ್ಯವಸ್ಥೆಯು ಕ್ರಮಬದ್ಧ ಸ್ಥಿತಿಯಲ್ಲಿರುವುದಕ್ಕಿಂತ ಇಲ್ಲದಿರುವ ಸಂಭವವೇ ಹೆಚ್ಚು.

ಹೇಗೆಂದರೆ, ಒಂದು ಪೆಟ್ಟಿಗೆಯಲ್ಲಿ ಚಿತ್ರದ ತುಂಡುಗಳು ಕ್ರಮಬದ್ಧ ಸ್ಥಿತಿಯಲ್ಲಿ (ಪೂರ್ಣ ಆನೆಯ ಚಿತ್ರ) ಇವೆ ಎಂದಿಟ್ಟುಕೊಳ್ಳಿ. ಈಗ ನೀವು ಪೆಟ್ಟಿಗೆಯನ್ನು ಅಲ್ಲಾಡಿಸಿದರೆ ತುಂಡುಗಳು ಬೇರೊಂದು ಸ್ಥಿತಿಯನ್ನು ತಲುಪುತ್ತವೆ. ಇದು ಯಾವುದೇ ಚಿತ್ರರೂಪವಿಲ್ಲದ ಕ್ರಮಗೆಟ್ಟ ಸ್ಥಿತಿಯಲ್ಲಿರುವುದೇ ಹೆಚ್ಚು ಸಂಭವ. ಏಕೆಂದರೆ ಕ್ರಮಗೆಟ್ಟ ಸ್ಥಿತಿಗಳ ಸಾಧ್ಯತೆ ಯಾವಾಗಲೂ ತುಂಬಾ ಜಾಸ್ತಿ. ಈ ಸ್ಥಿತಿಯಲ್ಲೂ ಚಿತ್ರದ ತುಂಡುಗಳ ಕೆಲವು ಗುಂಪುಗಳು ಇಡೀ ಚಿತ್ರದ ಒಂದು ಭಾಗ (ಉದಾ: ಆನೆಯ ಬಾಲ ಅಥವಾ ಸೊಂಡಿಲು)ವಾಗಿ ಉಳಿದಿರುವುದು ಸಾಧ್ಯ. ಆದರೆ ಪೆಟ್ಟಿಗೆಯನ್ನು ಹೆಚ್ಚು ಹೆಚ್ಚು ಅಲ್ಲಾಡಿಸಿದಂತೆ ಈ ಗುಂಪುಗಳೂ ಛಿದ್ರವಾಗಿ ಚಿತ್ರದ ತುಂಡುಗಳು ಇನ್ನೂ ಹೆಚ್ಚು ಕ್ರಮಗೆಟ್ಟು ಸಂಪೂರ್ಣವಾಗಿ ವಿರೂಪಗೊಳ್ಳುತ್ತವೆ. ಆದುದರಿಂದ ಚಿತ್ರದ ತುಂಡುಗಳು ಮೊದಲಿನ ಪೂರ್ಣ ಕ್ರಮಬದ್ಧ ಸ್ಥಿತಿಯಿಂದ ಪ್ರಾರಂಭವಾದರೆ ಅವುಗಳ ಕ್ರಮಭಂಗವು ಕಾಲದೊಂದಿಗೆ ಅಧಿಕವಾಗುತ್ತದೆ. ಇದನ್ನೇ ಉಷ್ಣಬಲಾತ್ಮಕ ಕಾಲ ಬಾಣ ಸೂಚಿಸುತ್ತದೆ.

ಮೊದಲಿನ ಸ್ಥಿತಿ ಹೇಗೇ ಇರಲಿ, ವಿಶ್ವವು ಅತಿಹೆಚ್ಚು ಸುವ್ಯವಸ್ಥೆಯೊಂದಿಗೆ ಕೊನೆಗೊಳ್ಳಬೇಕೆಂದು ದೇವರು ನಿರ್ಧರಿಸಿದನೆಂದಿಟ್ಟು ಕೊಳ್ಳಿ. ಆಗ ಪ್ರಾರಂಭದ ಕಾಲದಲ್ಲಿ ವಿಶ್ವವು ಬಹುಶಃ ಕ್ರಮಗೆಟ್ಟ ಸ್ಥಿತಿಯಲ್ಲಿರುತ್ತದೆ. ಬದಲಾವಣೆ ಹೇಗಾಗಬೇಕು? ಕಾಲದೊಂದಿಗೆ ಕ್ರಮಭಂಗವು ಕಡಿಮೆಯಾಗಬೇಕು. ಅಂದರೆ ಕ್ರಮಬದ್ಧತೆ ಹೆಚ್ಚಬೇಕು. ಹೀಗಾಗುವುದೇ ನಿಜವಾದಲ್ಲಿ ನೀವು ಒಡೆದ ಬಟ್ಟಲಿನ ಚೂರುಗಳು ಒಂದುಗೂಡಿ ಅಖಂಡ ಬಟ್ಟಲಾಗಿ ಮೇಜಿನ ಮೇಲೇರುವುದನ್ನು ನೋಡುತ್ತೀರಿ. ಇಂಥದನ್ನು ಗಮನಿಸುತ್ತಿರುವ ಮನುಷ್ಯ ಕ್ರಮಭಂಗವು ಕಡಿಮೆಯಾಗುತ್ತಿರುವ ವಿಶ್ವದಲ್ಲಿ ಜೀವಿಸುತ್ತಿರುತ್ತಾನೆ. ಅಂಥ ಮನುಷ್ಯ ವಿರುದ್ಧ ದಿಕ್ಕಿನಲ್ಲಿರುವ ಮಾನಸಿಕ ಬಾಣವನ್ನು ಹೊಂದಿರುತ್ತಾನೆ. ಮತ್ತು ಅವನು ಭವಿಷ್ಯದ ಘಟನೆಗಳನ್ನು ಜ್ಞಾಪಿಸಿಕೊಳ್ಳಬಲ್ಲವನಾಗಿರುತ್ತಾನೆ, ಭೂತಕಾಲದ ಘಟನೆಗಳನ್ನಲ್ಲ! ನಮ್ಮ ಭೂತ ಅವನಿಗೆ ಭವಿಷ್ಯವಾಗಿರುತ್ತದೆ!

ಮಾನಸಿಕ ಕಾಲಬಾಣ

ಮಾನಸಿಕ ಕಾಲಬಾಣವು ನಾವು ಘಟನೆಗಳನ್ನು ಗ್ರಹಿಸುವ ದಿಕ್ಕನ್ನು ಸೂಚಿಸುತ್ತದೆ. ಇದು ನಮ್ಮ ಮಿದುಳಿನೊಳಗೆ ನಿರ್ಧರಿತವಾಗುವುದು ಉಷ್ಣಬಲಾತ್ಮಕ ಕಾಲ ಬಾಣದಿಂದ. ನಾವು ಘಟನೆಗಳನ್ನು ಕ್ರಮಭಂಗವು ಹೆಚ್ಚುವ ದಿಕ್ಕಿನಲ್ಲೆ ಜ್ಞಾಪಿಸಿಕೊಳ್ಳುತ್ತೇವೆ. ಕ್ರಮಭಂಗವು ಕಾಲ ಸರಿದಂತೆ ಹೆಚ್ಚುತ್ತದೆ. ಏಕೆಂದರೆ ನಾವು ಕಾಲವನ್ನು ಕ್ರಮಭಂಗವು ಹೆಚ್ಚುವ ದಿಕ್ಕಿನಲ್ಲೇ ಅಳೆಯುತ್ತೇವೆ. ಬೇರೆ ದಾರಿಯೆ ಇಲ್ಲ !

ಕ್ರಮಭಂಗ ಹೆಚ್ಚುವ ಪರಿ

ವಿಶ್ವವನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಮಾನವಕುಲ ಸಾಧಿಸಿರುವ ಪ್ರಗತಿಯು ಹೆಚ್ಚಾಗಿ ಕ್ರಮಗೆಡುತ್ತಿರುವ ವಿಶ್ವದ ಮೂಲೆಯೊಂದರಲ್ಲಿ ಕ್ರಮಬದ್ಧತೆಯ ಸಣ್ಣವಲಯವೊಂದನ್ನು ನಿರ್ಮಿಸಿದೆ. ನೀವು ಬರಹದ ಪ್ರತಿಯೊಂದು ಪದವನ್ನೂ ಜ್ಞಾಪಿಸಿಕೊಳ್ಳುವುದಾದರೆ ನಿಮ್ಮ ನೆನಪು ಸುಮಾರು ೨೫೦೦೦ ಮಾಹಿತಿಗಳನ್ನು ದಾಖಲಿಸಿಕೊಂಡಿರುತ್ತದೆ. ಇದರಿಂದ ನಿಮ್ಮ ಮಿದುಳಿನ ಕ್ರಮಬದ್ಧತೆ ಸುಮಾರು ೨೫೦೦೦ ಏಕಾಂಶಗಳಷ್ಟು ಹೆಚ್ಚಿರುತ್ತದೆ. ನೀವು ಬರಹವನ್ನು ಓದುವಾಗ ಕನಿಷ್ಟವೆಂದರೆ ಆಹಾರರೂಪದ ೨೦ ಕ್ಯಾಲೊರಿಯಷ್ಟು ಕ್ರಮಬದ್ಧ ಶಕ್ತಿಯನ್ನು ಉಷ್ಣರೂಪದ ಕ್ರಮಗೆಟ್ಟ ಶಕ್ತಿಯನ್ನಾಗಿ ಪರಿವರ್ತಿಸುತ್ತೀರಿ. ನೀವು ಕಳೆದುಕೊಳ್ಳುವ ಉಷ್ಣವು ಬೆವರು ಮತ್ತು ಸಂವಹನದ ಮೂಲಕ ಸುತ್ತಲಿನ ಗಾಳಿಯನ್ನು ಸೇರುತ್ತದೆ. ಇದು ,೫೦,೦೦೦ ದಶಲಕ್ಷ ದಶಲಕ್ಷ ದಶಲಕ್ಷ ಏಕಾಂಶಗಳಷ್ಟು ಅಥವಾ ನಿಮ್ಮ ಮಿದುಳಿನಲ್ಲಿ ಆಗುವ ಕ್ರಮಬದ್ಧತೆಯ ಹೆಚ್ಚಳದ ಒಂದು ಕೋಟಿ ದಶಲಕ್ಷ ದಶಲಕ್ಷ ಪಟ್ಟು ಜಾಸ್ತಿ ವಿಶ್ವದ ಕ್ರಮಭಂಗವನ್ನು ಹೆಚ್ಚಿಸುತ್ತದೆ.

ಇಲ್ಲಿ ಒಂದಿಷ್ಟು ಪ್ರಶ್ನೆಗಳೇಳುತ್ತವೆ: ಉಷ್ಣಬಲಾತ್ಮಕ ಕಾಲ ಬಾಣವು ಏಕೆ ಅಸ್ತಿತ್ವದಲ್ಲಿರಬೇಕು? ಇದೇ ಪ್ರಶ್ನೆಯನ್ನುಹೀಗೂ ಕೇಳಬಹುದು. ನಾವು ಭೂತವೆಂದು ಕರೆಯುವ ಕಾಲದ ಒಂದು ಕೊನೆಯಲ್ಲಿ ವಿಶ್ವವು ಅತ್ಯಂತ ಕ್ರಮಬದ್ಧ ಸ್ಥಿತಿಯಲ್ಲಿದ್ದು ಕಾಲ ಸರಿದಂತೆ ಕ್ರಮಗೆಡುತ್ತ ಹೋಗಬೇಕು ಏಕೆ? ಮತ್ತು ಏಕೆ ಕ್ರಮಭಂಗವು ಹೆಚ್ಚುವ ಕಾಲದ ದಿಕ್ಕು ವಿಶ್ವವು ಹಿಗ್ಗುವ ದಿಕ್ಕಿನಲ್ಲಿಯೆ ಇರಬೇಕು?

ಅಭಿಜಾತ ಸಿದ್ಧಾಂತ

ಅಭಿಜಾತ ಸಾಮಾನ್ಯ ಸಾಪೇಕ್ಷ ಸಿದ್ಧಾಂತ (Classical General Theory of Relativity) ದಲ್ಲಿ ಯಾರೂ ವಿಶ್ವವು ಹೇಗೆ ಪ್ರಾರಂಭವಾಯಿತು ಎಂಬುದನ್ನು ಹೇಳಲಾರರು. ಏಕೆಂದರೆ ಮಹಾಸ್ಫೋಟದ ವೈಚಿತ್ರ್ಯ (Singularity) ದಲ್ಲಿ ಗೊತ್ತಿರುವ ವಿಜ್ಞಾನದ ಎಲ್ಲ ನಿಯಮಗಳೂ ಬಿದ್ದು ಹೋಗುತ್ತವೆ.

ಇಲ್ಲಿ ನಾವು ವಿಶ್ವದ ಎರಡು ಚಿತ್ರಗಳ ಬಗ್ಗೆ ಚರ್ಚಿಸಬಹುದು. ಒಂದು, ವಿಶ್ವವು ತುಂಬಾ ನಯವಾದ ಮತ್ತು ಕ್ರಮಬದ್ಧವಾದ ಸ್ಥಿತಿಯಿಂದ ಪ್ರಾರಂಭವಾಗಿದ್ದಿರಬಹುದು. ಇದು ಉಷ್ಣಬಲಾತ್ಮಕ ಮತ್ತು ವಿಶ್ವವೈಜ್ಞಾನಿಕ ಕಾಲಬಾಣಗಳಿಗೆ ಎಡೆಮಾಡಿಕೊಡುತ್ತದೆ.

ಎರಡು, ವಿಶ್ವವು ತೀರ ಮುದ್ದೆಯಾದ ಮತ್ತು ಪೂರ್ಣ ಕ್ರಮಗೆಟ್ಟ ಸ್ಥಿತಿಯಿಂದ ಕೂಡ ಪ್ರಾರಂಭವಾಗಿದ್ದಿರಬಹುದು. ಅಂಥ ಸಂದರ್ಭಗಳಲ್ಲಿ ಕ್ರಮಭಂಗವು ಕಾಲದೊಂದಿಗೆ ಹೆಚ್ಚುವ ಪ್ರಶ್ನೆಯೇ ಏಳುವುದಿಲ್ಲ. ಪೂರ್ಣ ಕೆಟ್ಟಮೇಲೆ ಕೆಡಲು ಇನ್ನೂ ಏನು ಉಳಿದಿರುತ್ತದೆ? ಆದ್ದರಿಂದ ಅದರ ಸ್ಥಿತಿ ಸ್ಥಿರವಾಗಿರುತ್ತದೆ. ಹಾಗಾದಾಗ ನಿಷ್ಕೃಷ್ಟವಾದ ಉಷ್ಣಬಲಾತ್ಮಕ ಕಾಲಬಾಣವೇ ಇರುವುದಿಲ್ಲ. ಇದು ಒಂದು ಸಾಧ್ಯತೆ. ಮತ್ತೊಂದು ಸಾಧ್ಯತೆ, ಕ್ರಮಭಂಗವು ಕಾಲದೊಂದಿಗೆ ಕಡಿಮೆಯಾಗುತ್ತದೆ. ಹಾಗಾಗುವಾಗ ಕಾಲಬಾಣವು ವಿಶ್ವವೈಜ್ಞಾನಿಕ ಬಾಣದ ದಿಕ್ಕಿಗೆ ವಿರುದ್ಧವಾಗಿರುತ್ತದೆ. ಈ ಎರಡೂ ಸಾಧ್ಯತೆಗಳು ನಾವು ಈಗ ಏನನ್ನು ನೋಡುತ್ತಿದ್ದೇವೆಯೋ ಅದರೊಂದಿಗೆ ಹೊಂದಿಕೊಳ್ಳುವುದಿಲ್ಲ.

ದೇಶ-ಕಾಲದ ವಕ್ರತೆ ದೊಡ್ಡದಾದಾಗ ಕ್ವಾಂಟಂ ಗುರುತ್ವಾಕರ್ಷಣ ಪರಿಣಾಮಗಳು ಮುಖ್ಯವಾಗುತ್ತವೆ. ಅಲ್ಲಿಂದಾಚೆಗೆ ಅಭಿಜಾತ ಸಿದ್ಧಾಂತವು ವಿಶ್ವದ ಸಮರ್ಪಕ ವಿವರಣೆಯನ್ನು ಕೊಡಲು ಅಸಮರ್ಥವಾಗುತ್ತದೆ. ವಿಶ್ವವು ಹೇಗೆ ಪ್ರಾರಂಭವಾಯಿತೆನ್ನುವುದನ್ನು ತಿಳಿದುಕೊಳ್ಳಲು ಗುರುತ್ವಾಕರ್ಷಣೆಯ ಕ್ವಾಂಟಂ ಸಿದ್ಧಾಂತ ಬೇಕಾಗುತ್ತದೆ.

ಕ್ವಾಂಟಂ ಸಿದ್ಧಾಂತ

ಗುರುತ್ವಾಕರ್ಷಣೆಯ ಕ್ವಾಂಟಂ ಸಿದ್ಧಾಂತದಲ್ಲೂ ವಿಶ್ವದ ಸ್ಥಿತಿಯನ್ನು ನಿರ್ದಿಷ್ಟವಾಗಿ ಹೇಳಲು ಹಿಂದೆ ದೇಶ-ಕಾಲದ ಎಲ್ಲೆಯಲ್ಲಿ ವಿಶ್ವವು ಹೇಗೆ ನಡೆದುಕೊಂಡಿದ್ದಿರಬಹುದು ಎಂಬುದರ ಬಗ್ಗೆ ಸಾಧ್ಯವಿರುವ ಇತಿಹಾಸವನ್ನೆಲ್ಲ ವಿವರಿಸಬೇಕಾಗುತ್ತದೆ. ಇದು ಕಷ್ಟ ಸಾಧ್ಯ. ನಮಗೆ ಏನು ಗೊತ್ತಿಲ್ಲವೋ ಮತ್ತು ಏನನ್ನು ನಾವು ತಿಳಿದುಕೊಳ್ಳಲು ಸಾಧ್ಯವಿಲ್ಲವೋ ಅವುಗಳನ್ನು ವಿವರಿಸಬೇಕಾದ ತೊಂದರೆಯಿಂದ ತಪ್ಪಿಸಿಕೊಳ್ಳಲು ಒಂದು ಮಾರ್ಗವಿದೆ. ವಿಶ್ವದ ಇತಿಹಾಸಗಳು ಎಲ್ಲೆ ಇಲ್ಲ ಎನ್ನುವ ನಿಯಮವನ್ನು ಪಾಲಿಸುತ್ತವೆ ಎಂದಾದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಅಂದರೆ ವಿಶ್ವವು ವಿಸ್ತಾರದಲ್ಲಿ ಸಿಶ್ಚಿತವಾಗಿದೆ. ಆದರೆ ಅದಕ್ಕೆ ಎಲ್ಲೆ, ಅಂಚು ಅಥವಾ ವೈಚಿತ್ರ್ಯ (boundaries, edges or singularities)ಗಳಿಲ್ಲ. ಆಗ ಕಾಲದ ಪ್ರಾರಂಭವು ನಿಯತವಾಗಿಯೂ, ದೇಶ-ಕಾಲವು ನಯವಾಗಿಯೂ ಇರುತ್ತದೆ. ವಿಶ್ವದ ಹಿಗ್ಗುವಿಕೆಯು ನಯವಾದ ಮತ್ತು ಕ್ರಮಬದ್ಧವಾದ ಸ್ಥಿತಿಯಿಂದ ಪ್ರಾರಂಭವಾಗಿರುತ್ತದೆ. ಆದರೆ ಅದು ಪೂರ್ಣವಾಗಿ ಏಕ ರೂಪದಲ್ಲಿ ಇರುವುದಿಲ್ಲ. ಏಕರೂಪದಲ್ಲಿ ಇದ್ದದ್ದೇ ಆದರೆ ಅದು ಕ್ವಾಂಟಂ ಸಿದ್ಧಾಂತದ ಅನಿಶ್ಚಿತತೆಯ ತತ್ವವನ್ನು ಉಲ್ಲಂಘಿಸಿದಂತಾಗುತ್ತದೆ. ಕಣಗಳ ಸಾಂದ್ರತೆ ಮತ್ತು ವೇಗದಲ್ಲಿ ಸ್ವಲ್ಪವಾದರೂ ಏರಿಳಿತವಿರುತ್ತದೆ.

ವಿಶ್ವವು ಘಾತೀಯ ಅಥವಾ ‘ಮಿತಿಮೀರಿ’ದ ಹಿಗ್ಗುವಿಕೆಯ ಅವಧಿಯೊಂದರಿಂದ ಪ್ರಾರಂಭವಾಗಿರಬೇಕು. ಈ ಅವಧಿಯ ಹಿಗ್ಗುವಿಕೆಯಲ್ಲಿ ಸಾಂದ್ರತೆಯು ಸರಾಸರಿಗಿಂತ ಹೆಚ್ಚಿರುವ ವಲಯಗಳ ಹಿಗ್ಗುವಿಕೆಯು ಅಧಿಕ ದ್ರವ್ಯರಾಶಿಯ ಗುರುತ್ವಾಕರ್ಷಣೆಯಿಂದ ನಿಧಾನವಾಗಿದೆ. ಕೊನೆಗೆ ವಿಸ್ತೃತಗೊಳ್ಳುವುದು ನಿಂತು, ಕುಸಿತ ಪ್ರಾರಂಭವಾಗಿ ಕ್ರಮೇಣ ಗೆಲಾಕ್ಸಿ, ನಕ್ಷತ್ರ ಮತ್ತು ನಮ್ಮಂತಹ ಜೀವಿಗಳಿಗೆ ಕಾರಣವಾಗಿದೆ. ವಿಶ್ವವು ನಯವಾದ ಮತ್ತು ಕ್ರಮಬದ್ಧವಾದ ಸ್ಥಿತಿಯಿಂದ ಪ್ರಾರಂಭವಾಗಿ ಕಾಲಕಳೆದಂತೆ ಕ್ರಮಗೆಡುತ್ತ ಹೋಗುತ್ತಿದೆ. ಇದು ಉಷ್ಣಬಲಾತ್ಮಕ ಕಾಲ ಬಾಣದ ಅಸ್ತಿತ್ವವನ್ನು ವಿವರಿಸುತ್ತದೆ.

ಹಿಗ್ಗುವ ಅವಸ್ಥೆಯಲ್ಲಿ ಮಾತ್ರ ಬದುಕು ಸಾಧ್ಯ

ಕಾಲ ಬಾಣಕ್ಕೆ ಹಿಂದಿರುಗಿದರೆ ಒಂದು ಪ್ರಶ್ನೆ ಉಳಿಯುತ್ತದೆ. ಉಷ್ಣಬಲಾತ್ಮಕ ಮತ್ತು ವಿಶ್ವ ವೈಜ್ಞಾನಿಕ ಬಾಣಗಳು ಒಂದೇ ದಿಕ್ಕನ್ನು ತೋರಿಸುತ್ತವೆ ಏಕೆ? ಅಥವಾ, ಕ್ರಮಭಂಗವು ವಿಶ್ವವು ಹಿಗ್ಗುವ ಕಾಲದ ದಿಕ್ಕಿನಲ್ಲೆ ಹೆಚ್ಚುತ್ತದೆ ಏಕೆ? ಎಲ್ಲೆ ಇಲ್ಲ ಎನ್ನುವ ನಿಯಮವು ಧ್ವನಿಸುವಂತೆ ತೋರುವ, ವಿಶ್ವವು ಹಿಗ್ಗುತ್ತದೆ ನಂತರ ಕುಗ್ಗುತ್ತದೆ ಎಂಬುದನ್ನು ಒಪ್ಪಿಕೊಂಡರೆ, ಆಗ ಮೇಲಿನ ಪ್ರಶ್ನೆಯು ನಾವು ಏಕೆ ವಿಶ್ವದ ಹಿಗ್ಗುವ ಅವಸ್ಥೆಯಲ್ಲಿ ಮಾತ್ರ ಬದುಕಿರುತ್ತೇವೆ? ಎಂದಾಗುತ್ತದೆ.

ವಿಶ್ವವು ಕುಗ್ಗುವಾಗ….

ವಿಶ್ವವು ಹಿಗ್ಗುವುದನ್ನು ನಿಲ್ಲಿಸಿ ಕುಗ್ಗುವುದಕ್ಕೆ ಪ್ರಾರಂಭಿಸಿದರೆ ಏನಾಗುತ್ತದೆ? ಉಷ್ಣಬಲಾತ್ಮಕ ಬಾಣದ ದಿಕ್ಕು ಹಿಂದುಮುಂದಾಗಿ ಕ್ರಮಭಂಗವು ಕಾಲದೊಂದಿಗೆ ಕಡಿಮೆಯಾಗುತ್ತದೆಯೆ? ವಿಶ್ವವು ಹಿಗ್ಗುವಿಕೆಯಿಂದ ಕುಗ್ಗುವಿಕೆಗೆ ಬದಲಾದಾಗ ಉಳಿಯುವ ಜನ ಒಡೆದ ಬಟ್ಟಲುಗಳು ಅಖಂಡವಾಗಿ ಮೇಜಿನ ಮೇಲೇರುವುದನ್ನು ಕಾಣುತ್ತಾರೆಯೆ? ನಾಳಿನ ಬೆಲೆಗಳನ್ನು ಜ್ಞಾಪಿಸಿಕೊಂಡು ಅಪಾರ ಹಣ ಮಾಡುತ್ತಾರೆಯೆ?

ಮೊದಲಿಗೆ, ವಿಶ್ವವು ಕುಸಿಯುವಾಗ ಕ್ರಮಭಂಗವು ಕಡಿಮೆಯಾಗುತ್ತದೆ ಎಂದೇ ನಂಬಿದ್ದೆ. ವಿಶ್ವವು ಚಿಕ್ಕದಾದಾಗ ನಯವಾದ ಮತ್ತು ಕ್ರಮಬದ್ಧವಾದ ಸ್ಥಿತಿಗೆ ಬರುತ್ತದೆಂದು ಯೋಚಿಸಿದ್ದೆ. ಇದು ಕುಗ್ಗುವ ಅವಸ್ಥೆಯು ಹಿಗ್ಗುವ ಅವಸ್ಥೆಯ ಕಾಲ ಹಿಮ್ಮುಖವಾದಂತೆ ಎಂಬ ಅರ್ಥವನ್ನು ಉಂಟುಮಾಡುತ್ತದೆ. ಕುಗ್ಗುವ ಅವಸ್ಥೆಯಲ್ಲಿ ಬದುಕುವ ಜನ ಹಿಮ್ಮುಖವಾಗಿ ಬದುಕುತ್ತಾರೆ. ಅವರು ಹುಟ್ಟುವುದಕ್ಕೆ ಮೊದಲೇ ಸಾಯುತ್ತಾರೆ. ವಿಶ್ವವು ಕುಗ್ಗಿದಂತೆಲ್ಲಾ ಚಿಕ್ಕವರಾಗುತ್ತಾರೆ!

ಕಲ್ಪನೆ ತುಂಬಾ ಆಕರ್ಷಕವಾಗಿದೆ. ಏಕೆಂದರೆ ಇದು ಹಿಗ್ಗುವ ಮತ್ತು ಕುಗ್ಗುವ ಅವಸ್ಥೆಗಳ ನಡುವೆ ಸುಂದರವಾದ ಸಮಮಿತಿಯನ್ನು ಸೂಚಿಸುತ್ತದೆ. ಇಲ್ಲಿ ಮುಖ್ಯ ಪ್ರಶ್ನೆ ಏನೆಂದರೆ, ಇದು ಎಲ್ಲೆ ಇಲ್ಲ ಎನ್ನುವ ನಿಯಮದಿಂದ ಧ್ವನಿತವಾಗಿದೆಯೆ? ಅಥವಾ, ನಿಯಮದೊಂದಿಗೆ ಒಪ್ಪಿಗೆಯಾಗುವುದಿಲ್ಲವೆ?

ಪೆನ್‌ಸ್ಟೇಟ್ ವಿಶ್ವವಿದ್ಯಾಲಯದ ನನ್ನ ಸಹೋದ್ಯೋಗಿ ಡಾನ್ ಪೇಜ್ ಕುಗ್ಗುವ ಅವಸ್ಥೆಯು ಕಾಲ ಹಿಮ್ಮುಖವಾದ ಹಿಗ್ಗುವ ಅವಸ್ಥೆಯಂತೆ ಇರಬೇಕಾದ ಅಗತ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟ. ಮುಂದೆ ನನ್ನ ವಿದ್ಯಾರ್ಥಿ ರೇಮಂಡ್ ಲಾಫ್ಲೆಮ್, ಹೆಚ್ಚು ಸಂಕೀರ್ಣವಾದ ವಿಶ್ವದ ಮಾದರಿಯನ್ನು ಉಪಯೋಗಿಸಿ ವಿಶ್ವದ ಕುಸಿತವು ಹಿಗ್ಗುವಿಕೆಗಿಂತ ತೀರ ಭಿನ್ನವಾಗಿರುತ್ತದೆ ಎಂಬುದನ್ನು ಕಂಡು ಹಿಡಿದ. ಇದರಿಂದ ಮೊದಲಿನ ನನ್ನ ನಂಬಿಕೆ ತಪ್ಪು ಎಂಬುದರ ಅರಿವಾಯಿತು. ವಿಶ್ವವು ಕುಸಿಯುವಾಗ ಕ್ರಮಭಂಗವು ನಿಜದಲ್ಲಿ ಹೆಚ್ಚುತ್ತಲೇ ಹೋಗುತ್ತದೆಯಲ್ಲದೆ ಉಷ್ಣಬಲಾತ್ಮಕ ಮತ್ತು ಮಾನಸಿಕ ಕಾಲ ಬಾಣಗಳು ತದ್ವಿರುದ್ಧವಾಗಿರುವುದಿಲ್ಲ ಎಂಬುದು ಸ್ಪಷ್ಟವಾಯಿತು.

ವಿಶ್ವವು ಪುನಃ ಕುಸಿತವನ್ನು ತಡೆಯಲು ಅಗತ್ಯವಾದ ಸಂಧಿಸ್ಥ ವೇಗದಲ್ಲಿ ಹಿಗ್ಗುತ್ತಿದೆ ಮತ್ತು ಅದು ತುಂಬಾ ಕಾಲದವರೆಗೆ ಕುಸಿಯುವುದಿಲ್ಲ. ಆ ಹೊತ್ತಿಗೆ ಎಲ್ಲ ನಕ್ಷತ್ರಗಳೂ ಉರಿದು ಹೋಗಿರುತ್ತವೆ. ಅವುಗಳಲ್ಲಿನ ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳು ಬಹುಶಃ ಕ್ಷಯಿಸಿ ಬೆಳಕಿನ ಕಿರಣಗಳು ಮತ್ತು ವಿಕಿರಣಗಳಾಗಿರುತ್ತವೆ. ವಿಶ್ವವು ಬಹುಮಟ್ಟಿಗೆ ಪೂರ್ಣ ಕ್ರಮಗೆಟ್ಟ ಸ್ಥಿತಿಯನ್ನು ತಲುಪಿರುತ್ತದೆ. ಆಗ ಬಲವಾದ ಉಷ್ಣಬಲಾತ್ಮಕ ಕಾಲಬಾಣವೇ ಇರುವುದಿಲ್ಲ.

ಆದರೆ ಬುದ್ಧಿವಂತ ಜೀವಿಗಳ ಚಟುವಟಿಕೆಗೆ ಬಲವಾದ ಉಷ್ಣಬಲಾತ್ಮಕ ಬಾಣವು ತೀರ ಅಗತ್ಯ. ಉಳಿವಿಗೋಸ್ಕರ ಮನುಷ್ಯರು ಆಹಾರವನ್ನು ಸೇವಿಸಬೇಕು. ಆಹಾರವು ಶಕ್ತಿಯ ಕ್ರಮಬದ್ಧರೂಪ. ಅದನ್ನು ಉಷ್ಣವಾಗಿ ಪರಿವರ್ತಿಸಬೇಕು. ಉಷ್ಣವು ಶಕ್ತಿಯ ಕ್ರಮಗೆಟ್ಟ ಸ್ಥಿತಿ. ಆದ್ದರಿಂದ ವಿಶ್ವದ ಕುಗ್ಗುವ ಅವಸ್ಥೆಯಲ್ಲಿ ಬುದ್ಧಿವಂತಜೀವಿ ಅಸ್ತಿತ್ವದಲ್ಲಿರಲಾರ. ಇದು ಉಷ್ಣಬಲಾತ್ಮಕ ಮತ್ತು ವಿಶ್ವವೈಜ್ಞಾನಿಕ ಕಾಲ ಬಾಣಗಳು ಏಕೆ ಒಂದೇ ದಿಕ್ಕಿನಲ್ಲಿರಬೇಕು ಎಂಬುದಕ್ಕೆ ವಿವರಣೆ.

ಒಟ್ಟಾರೆ, ವಿಜ್ಞಾನದ ನಿಯಮಗಳು ಕಾಲದ ಮುನ್ನಡೆ ಮತ್ತು ಹಿನ್ನೆಡೆಗಳ ನಡುವೆ ಭೇದ ಎಣಿಸುವುದಿಲ್ಲ. ಆದಾಗ್ಯೂ, ಭೂತ ಮತ್ತು ಭವಿಷ್ಯತ್ತುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಕನಿಷ್ಠ ಮೂರು ಬಾಣಗಳಿವೆ. ಅವು ಉಷ್ಣಬಲಾತ್ಮಕ ಕಾಲ ಬಾಣ, ಮಾನಸಿಕ ಕಾಲ ಬಾಣ ಮತ್ತು ವಿಶ್ವವೈಜ್ಞಾನಿಕ ಕಾಲಬಾಣ.

ಮಾನಸಿಕ ಮತ್ತು ಉಷ್ಣಬಲಾತ್ಮಕ ಬಾಣಗಳು ಯಾವಾಗಲೂ ಒಂದೇ ದಿಕ್ಕಿನೆಡೆಗೆ ಇರುತ್ತವೆ. ವಿಶ್ವಕ್ಕೆ ಎಲ್ಲೆ ಇಲ್ಲ ಎನ್ನುವ ನಿಯಮವು ನಿಷ್ಕೃಷ್ಟ ಉಷ್ಣಬಲಾತ್ಮಕ ಬಾಣದ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಏಕೆಂದರೆ ವಿಶ್ವವು ನಯವಾದ ಮತ್ತು ಕ್ರಮಬದ್ಧವಾದ ಸ್ಥಿತಿಯಿಂದಲೇ ಪ್ರಾರಂಭವಾಗಿರಬೇಕು. ಮತ್ತು ಉಷ್ಣಬಲಾತ್ಮಕ ಬಾಣವು ವಿಶ್ವ ವೈಜ್ಜಾನಿಕ ಬಾಣದೊಂದಿಗೆ ಒಪ್ಪಿಗೆ ಯಾಗುವಂತಿರುವುದಕ್ಕೆ ಕಾರಣ ಬುದ್ಧಿವಂತ ಜೀವಿಗಳು ವಿಶ್ವದ ಹಿಗ್ಗುವ ಅವಸ್ಥೆಯಲ್ಲಿ ಮಾತ್ರ ಅಸ್ತಿತ್ವರಬಲ್ಲವು. ಕುಗ್ಗುವ ಅವಸ್ಥೆಯು ಜೀವಿಗಳಿಗೆ ಯುಕ್ತವಲ್ಲ. ಏಕೆಂದರೆ ಅದರಲ್ಲಿ ಬಲವಾದ ಉಷ್ಣಬಲಾತ್ಮಕ ಬಾಣವಿರುವುದಿಲ್ಲ.

ಕಸ್ತೂರಿ
ಏಪ್ರಿಲ್ ೧೯೯೩