ರಾತ್ರಿಯ ಪ್ರಶಾಂತ ಸಮಯ. ದೇವಾಲಯದಲ್ಲಿ ಜನರು ಕಕ್ಕಿರಿದು ಸೇರಿದ್ರು. ತುಕಾರಾಮರ ಹರಿಕಥೆ ಎಂದರೆ ಕೇಳಬೇಕೆ? ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಜನರು ಬಂಜಿ ಹೂಡಿಕೊಂಡು ಬಂದಿದ್ದರು. ಅಷ್ಟೇ ಏಕೆ, ಶಿವಾಜಿ ಕೂಡ ತುಕಾರಾಮರ ಅಮೃತವಾಣಿಯನ್ನು ಸವಿಯಲೆಂದು ಬಂದಿದ್ದರು. ತುಕಾರಾಮರು ನಿರರ್ಗಳ ವಾಣಿಯಲ್ಲಿ ಹರಿಕಥಾ ಕಾಲಕ್ಷೇಪ ನಡೆಸುತ್ತಿದ್ದರೆ ನೆರೆದ ಜನಸಮೂಹ ತದೇಕಚಿತ್ತದಿಂದ ನಾಮ ಸಂಕೀರ್ತನೆಯನ್ನು ಅಲಿಸುತ್ತಿತ್ತು.

ಕೊನೆಗೊಮ್ಮೆ ತುಕಾರಾಮರು ಮಂಗಳ ಹಾಡಿದರು. ಶಿವಾಜಿ ಮಹಾರಾಜರು ತಮ್ಮ ಆಸನ ಬಿಟ್ಟು ಮುಂದೆ ಬಂದರು. ತುಕಾರಾಮರ ಆಡಿದಾವರೆಗಳಿಗೆ ವಂದಿಸುತ್ತ ಭಾವಾವೇಶದಿಂದ, “ಮಹಾರಾಜ್, ತಮ್ಮ ಅಮೃತ ವಾಣಿಯನ್ನು ಕೇಳಿ ನನ್ನ ಜೀವನ ಸಾರ್ಥಕವಾಯಿತು. ಪಾವನ ಮೂರ್ತಿ ವಿಠ್ಠಲನ ನಾಮ ಸಂಕೀರ್ತನದ ಸೌಭಾಗ್ಯದ ಮುಂದೆ ರಾಜ್ಯ, ರಾಜ್ಯಕಾರಭಾರ ಇವೆಲ್ಲ ತುಚ್ಛ ಎಂಬುವುದು ನನಗೆ ಮನದಟ್ಟಾಯಿತು. ಮಹಾರಾಜ್, ನನಗೆ ಗುರೂಪದೇಶ ನೀಡಿ. ಕತ್ತಿ ಗುರಾಣಿಗಳ ಈ ಬರಡು ಜಂಜಡದಿಂದ ನನ್ನನ್ನುಮುಕ್ತಗೊಳಿಸಿ. ನಾನೂ ಭಕ್ತಿ ಪಂಥದ ಅನನ್ಯ ಸೇವಕನಾಗಿ ಹರಿನಾಮ ಸಂಕೀರ್ತನದಲ್ಲಿ ನನ್ನ ಇಹ  ಜೀವನವನ್ನು ಕಳೆಯಬೇಕೆಂದಿದ್ದೇನೆ. ನನಗೆ ಉಪದೇಶ ನೀಡಿ” ಎಂದರು.

ಶಿವಾಜಿ ಮಹಾರಾಜರ ಬಾಯಿಂದ ಬಂದ ಈ ಮಾತುಗಳನ್ನು ಕೇಳಿ ಸಂತಶ್ರೇಷ್ಠ ತುಕಾರಾಮರಿಗೆ ಆನಂದವೂ ಅಗಲಿಲ್ಲ. ಅಚ್ಚರಿಯೂ ಆಗಲಿಲ್ಲ. ಅವರಿಗೆ ತೀವ್ರ ಆಘಾತವಾಯಿತು. “ನಾಡನ್ನು ಆಳಬೇಕಾದ ಶಿವಾಜಿಯು ಕತ್ತಿಯನ್ನು ತೊರೆದು ತಂಬೂರಿಯನ್ನು ಹಿಡಿಸಿದರೆ ಹೇಗೆ ?” ಎಂದು ತುಕಾರಾಮರು ಚಿಂತಿಸಿದರು.  ಶಿವಾಜಿಯ ಬೆನ್ನು ತಟ್ಟಿ ಅವರು ಹೇಳಿದರು : ಶಿವಬಾ ಏಳು: ನಿನಗೆ ಗುರೂಪದೇಶವನ್ನು ನೀಡಲು ಸಮರ್ಥರಾದವರೆಂದರೆ ಸಮರ್ಥ ರಾಮದಾಶರು ಮಾತ್ರ.ನೀನು ಅವರನ್ನು ಕಾಣು: ಅವರು ಹೇಳಿದಂತೆ ನಡೆ. ಅವರೇ ನಿನಗೆ ನಿಜವಾದ ಮಾರ್ಗದಶಕರು”.

ಯಾರೀ ಸಮರ್ಥರು ?

ಸಮರ್ಥ ರಾಮದಾಸ ಎಂದು ಪ್ರಸಿದ್ಧಿ ಪಡೆದ ಮಹಾನುಭಾವರು ಹುಟ್ಟಿದ್ದರು ಈಗಿನ ಔರಂಗಾಬಾದ್ ಜಿಲ್ಲೆಯಲ್ಲಿ; ಗೋದಾವರಿ ನದಿಯ ದಂಡೆಯಲ್ಲಿದ್ದ ಜಾಂಬ್ ಎಂಬ ಪುಟ್ಟ ಹಳ್ಳಿಯಲ್ಲಿ. ಈ ಹಳ್ಳಿಯ ಶಾನುಭೋಗರು ಸೂರ್ಯಾಜಿಪಂತ ಠೋಸರ ಎಂಬುವರು.  ಸೂರ್ಯಾಜಿ ಪಂತರ ಹೆಂಡತಿ ರಾಣೀಬಾಯಿ. ಸೂರ್ಯಾಜಿಪಂತರು ಸೂರ್ಯೋಪಾಸಕರು. ಸೂರ್ಯಾಜಿಪಂತರ ಮೊದಲ ಮಗನ ಹೆಸರು ಗಂಗಾಧರಪಂತ. ಅವನ ತರುವಾಯ ಹುಟ್ಟಿದವನು ನಾರಾಯಣ.ನಾರಾಯಣನು ಹುಟ್ಟಿದ್ದು, ಶಾಲಿವಾಹನ ಶಕ ೧೫೩೦ (ಕ್ರಿ.ಶ.೧೬೦೮) ರ ಚೈತ್ರ ಶುದ್ಧ ನವಮಿಯ ದಿನದಂದೇ! ಇದೇ ನಾರಾಯಣನು ಮುಂದೆ ಮಹಾನ್ ಸಾಧನೆ ಮಾಢಿದ. ಸಮರ್ಥ ರಾಮದಾಸರೆಂದು ನಾಡಿನಲ್ಲೆಲ್ಲ ಕೀರ್ತಿ ಹಬ್ಬಿತು.

“ಯೋಚನೆ ಮಾಡ್ತೇನಮ್ಮ”:

ಗೋದಾವರಿ ತೀರದಲ್ಲಿ ಜಾಂಬ್ ಗ್ರಾಮದ ಪರಿಸರದಲ್ಲಿ, ತಂದೆ ತಾಯಿಗಳ ನೆಚ್ಚಿನ ಮಗನಾಗಿ ನಾರಾಯಣ ಬೆಳೆಯುತ್ತಿದ್ದ. ಅಣ್ಣ ಗಂಗಾಧರ ಗಂಭೀರ ಸ್ವಭಾವದವ, ಆದರೆ ತಮ್ಮ ನಾರಾಯಣ ತದ್ವಿರುದ್ಧ. ಆತನ ತುಂಟಾಟ, ಮತ್ತು ಕಿಡಿಗೇಡಿತನಕ್ಕೆ ಇತಿಮಿತಿ ಇರಲಿಲ್ಲ.

ನಾರಾಯಣನ ತುಂಟಾಟಗಳಿಂದ ಬೇಸರಿಸಿದ ತಾಯಿ ಒಂದು ಸಲ ಆತನನ್ನು ಕೇಳಿದಳು : “ನಾರಾಯಣ” ನೀನು ಹೀಗೆ ಕಿಡಿಗೇಡಿತನದಲ್ಲಿ ಸಮಯ ಕಳೆದರೆ ಹೇಗೆ ?”

“ಮತ್ತೇನು ಮಾಡಬೇಕಮ್ಮ ನಾನು?” ನಾರಾಯಣ ಮರು ಪ್ರಶ್ನೆ ಕೇಳಿದ.

“ಅಲ್ಲವೋ ನಾರಾಯಣ, ನಿನಗೆ ಹಿಂದಿನ ಮುಂದಿನ ಯೋಚನೆ ಬೇಡವೇ? ಮುಂದೆ ಹೇಗೆ ಆದೀತು ಎಂಬುವುದರ ಆಲೋಚನೆಯನ್ನು ಎಂದಾದರೂ ಮಾಡಿರುವಿಯೇನೋ?”

“ಸರಿ ಬಿಡಮ್ಮ, ಇನ್ಮೇಲೆ ಮಾಡ್ತೀರಿ”.
“ಏನು ಮಾಡ್ತೀಯೋ ಇನ್ಮೇಲೆ?”
“ಯೋಚನೆ ಮಾಡ್ತೇನಮ್ಮ: ಅಲೋಚನೆ ಮಾಡ್ತೇಮೆ”.
“ಯಾವುದರ ಆಲೋಚನೆ ಮಾಡ್ತೀಯೋ?” ರಾಣುಬಾಯಿ ಮತ್ತೇ ಪ್ರಶ್ನಿಸಿದಳು.

“ಪ್ರಪಂಚದ ಚಿಂತೆ ಮಾಡ್ತೀನಮ್ಮ: ಜಗತ್ತಿನ ಬಗ್ಗೆ  ಯೋಚನೆ ಮಾಡ್ತೀನಿ”

ರಾಣೂಬಾಯಿ ಮಗನ ಮಾತು ಕೇಳಿ ನಕ್ಕಳು. ” ಈ ಹುಡುಗ ಯಾವತ್ತಿಗೂ ಚೇಷ್ಟೇಯ ಸ್ವಭಾವದವನೇ” ಅಂದುಕೊಂಡು ಸುಮ್ಮನಾದಳೂ.

ಆದರ್ಶದ ದರ್ಶನ:

ನಾರಾಯಣ ಹುಡುಗಾಟಿಕೆಯ ಸ್ವಭಾವ ಹೋಗಬೇಕು ಎಂದರೆ ಮದುವೆಯೇ ಮದ್ದು ಎಂದರು ಹಲವರು. ಆ ದಿನಗಳಲ್ಲಿ ೮-೧೦ ವರ್ಷಗಳ ವಯಸ್ಸಿಗೇ ಹುಡುಗರ ಮದುವೆ ಮಾಡುವುದು ರೂಢಿಯಲ್ಲಿತ್ತು. ಈ ಉಪಾಯವನ್ನಾದರೂ ಏಕೆ ಮಾಡಿ ನೋಡಬಾರದು ಎಂದು ನಾರಾಯಣನ ತಂದೆ-ತಾಯಿಗಳು ಯೋಚಿಸಿದರು. ಆದರೆ ನಾರಾಯಣ “ನಾ ಮದುವೆ ಆಗುವುದಿಲ್ಲ” ಎಂದು ಸಾರಿದ. ಮದುವೆ ಪ್ರಸ್ತಾಪ ಎತ್ತಿದರೆ ಸಾಕು, ನಾರಾಯಣ ಎಲ್ಲಿಯಾದರೂ ಹೋಗಿ ಅವಿತುಕೊಳ್ಳುತ್ತಿದ್ದ.

ಹೀಗೆ ಒಂದು ಸಲ ಆತ ಊರ ಹೊರಗಿನ ಅಂಜನೆಯ ದೇವಸ್ಥಾನದಲ್ಲಿ ಅವಿತುಕೊಂಡು ಕುಳಿತಿದ್ದ. ಎಷ್ಟು ಹೊತ್ತು ಅವಿತುಕೊಂಡು ಕುಳಿತ್ತಿದ್ದನೋ ಆತನಿಗೆ ಅರಿವಿರಲಿಲ್ಲ. ಆತನ ಮನಸ್ಸು ಆಂಜನೆಯನಲ್ಲಿ ನೆಟ್ಟಿತ್‌ಉತ. ಆಖಂಡ ಬ್ರಹ್ಮಚಾರಿ ಹನುಮಂತ, ರಾಮದಾಸ ಹನುಮಂತ! ಬುದ್ಧಿಯಲ್ಲಿ ಮಹಾಮೇರು ಹನುಮಂತ, ಸೀತೆಯ ಶೋಧಗೈದ ಹನುಮಂತ, ಎಂಥ ಬಲವಂತ! ಇಂಥ ಪರಮಭಕ್ತ ಮಾರುತಿಯ ಮೂರುತಿ ನೋಡುತ್ತಿದ್ದಂತೇ ನಾರಾಯಣನ ಮನದಲ್ಲಿ ಪ್ರೇರಣೆ ಸ್ಫುರಿಸಿತು. “ನಾನೂ ಬ್ರಹ್ಮಚಾರಿಯಾಗಿ ಉಳಿದು ಬುದ್ಧಿವಂತನಾಗಬೇಕು, ಬಲವಂತನಾಗಬೇಕು” ಎನ್ನಿಸಿತು. ರಾಮನವಮಿಯ ದಿನದಂದು ಹುಟ್ಟಿದ ಬಾಲಕ ನಾರಾಯಣನಿಗೆ ರಾಮ ದಾಸನಾದ ಮಾರುತಿಯ ದರ್ಶನದಿಂದ ಬಾಳಿನ ಆದರ್ಶವೇ ಮುಂದೆ ನಿಂತಂತಾಯಿತು.

ಬದಲಾದ ಚರ್ಯೆ:

ಅಂದಿನಿಂದ ನಾರಾಯಣನ ನಡತೆಯಲ್ಲಿ ಬದಲಾವಣೆ ತೋರಿತು. ಇಷ್ಟು ದಿನ “ಎಷ್ಟು ಮಾತನಾಡುತ್ತಾನೆ!” ಎನಿಸಿದ್ದವ ಈಗ ಮಾತನಾಡುವುದೇ ಕಡಿಮೆ. ಆತ ಯಾವುದೋ ಚಿಂತನದಲ್ಲಿ ಮುಳುಗಿದವನಂತೆ ಕಾಣುತ್ತಿದ್ದ.

ಅಣ್ಣ ಗಂಗಾಧರನಿಗೆ ಮದುವೆ ಆಯಿತು. ತಂದೆ ಸೂರ್ಯಾಜಿಪಂತ ತೀರಿಕೊಂಡರು. ತಾಯಿ ರಾಣುಬಾಯಿಗೆ ನಾರಾಯಣನದೇ ಚಿಂತೆ. “ಹುಡುಗ ಮಾತನ್ನೇ ಮರೆತು ಮೌನಿಯಾಗಿದ್ದಾನೆ:” ಮೂಕನಾಗಿದ್ದಾನೆ. ಏನು ಮಾಡುವುದು?”

“ಹುಡುಗನ ಮದುವೆ ಮಾಢಿ, ಎಲ್ಲಾ ಸರಿ ಹೋಗುತ್ತೆ” ಹಿತಚಿಂತಕರು ಸಲಹೆ ನೀಡಿದರು. ಹಿಂದೆಯೂ ನಾರಾಯಣನ ಹುಟುಗಾಟಕ್ಕೆ ಪರಿಹಾರವೆಂದು “ಮದುವೆ ಮಾಡಿ” ಎಂದು ಉಪದೇಶಿಸಿದ್ದರು ಹಿತಚಿಂತಕರು. ಈಗ ಆತನ ಹುಟುಗಾಟ ಮಾಯವಾಗಿ ಆತ ಗಂಭೀರನಾಗಿದ್ದ. ಈಗಲೂ ಮದುವೆ ಮಾಡಿ, ಸರಿಹೋಗುತ್ತದೆ” ಎಂಬ ಸಲಹೆಯನ್ನೇ ಕೊಟ್ಟರು!.

ರಾಣುಬಾಯಿಗೆ ಈ ಸೂಚನೆ ಒಪ್ಪಿಗೆಯಾಯಿತು. ಆದರೆ ಆತ, ಮದುವೆಯ ಮಾತೆತ್ತಿದ್ದರೆ ಸಾಕು ಮೂರು ಮಾರು ಹಾರುತ್ತಿದ್ದ.

ಒಂದು ದಿನ ರಾಣುಬಾಯಿ ನಾರಾಯಣನನ್ನು ನಿಲ್ಲಿಸಿ ಕೇಳಿದರು: “ಏನು ಮಗು, ನೀನು ನನ್ನ ಮಾತು ಕೇಳುವೆಯೋ ಇಲ್ಲವೋ?” ನಾರಾಯಣ ಮೌನ ಮುರಿಯಲಿಲ್ಲ.

ತಾಯಿಯಾಗಿ ಕೇಳ್ತಾ ಇದ್ದೇನೆ. ನನ್ನ ಒಂದೇ ಒಂದು ಮಾತು ನಡೆಸಿಕೊಡು”.

“ಏನದು ? ಎಂಬಂತೆ ನಾರಾಯಣ ಕಣ್ಣೆತ್ತಿದ”.

“ನೀಣು ಮದುವೆಯಾಗು. ತಾಯಿಯ ಈ ಒಂದು ಅಪೇಕ್ಷೆಯನ್ನಾಧರೂ ನಡೆಸಿಕೊಡು” ರಾಣುಬಾಯಿ ಕಕ್ಕುಲತೆಯಿಂದ  ಕೇಳಿದಳೂ.

ತಾಯಿ ಎದುರುನಿಂತು ಹೀಗೆ ಕೇಳಿದಾಗ, ” ಇಲ್ಲ ಸಾಧ್ಯವೇ ಇಲ್ಲ” ಎಂದು ಹೇಳುವುದು ನಾರಾಯಣನಿಗೆ ಕಷ್ಟವಾಯಿತು. ಮನಸ್ಸು “ಬೇಡ” ಎನ್ನುತ್ತಿದ್ದರೂ ಮಮತೆಯ ಮೂರ್ತಿಯಾದ ತಾಯಿಗೆ ಹಾಗೆ ಹೇಳಲು ನಾಲಿಗೆ ಹಿಂಜರಿಯಿತು.

“ಸರಿ” ಎಂದ ನಾರಾಯಣ.

ರಾಣೂಬಾಯಿಗೆ ಸ್ವರ್ಗವೇ ಸಿಕ್ಕಷ್ಟು ಆನಂದವಾಯ್ತು. ಕೂಡಲೇ ಅವಳು ಪಕ್ಕದ ಊರಾದ ಅಸನಗಾಂವದಲ್ಲಿ ವಾಸಿಸುತ್ತಿದ್ದ ತನ್ನ ಅಣ್ಣ ಭಾನಾಜಿಯನ್ನು ಕರೆಸಿದಳೂ.

“ನನ್ನ ನಾರಾಯಣನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡುವೆಯಾ?” ಎಂಧು ಕೇಳಿದಳು. ಭಾನಾಜಿ ಈ ಸಂಬಂಧಕ್ಕೆ ಒಪ್ಪಿದ. ಮದುವೆಯ ಏರ್ಪಾಡು ತೀವ್ರಗತಿಯಲ್ಲಿ ನಡೆದವು.

“ಸುಮುಹೂರ್ತೇ ಸಾವಧಾನ:

ಮದುವೆಯ ಮೂಹೂರ್ತ ಸಮೀಪಿಸಿತು. ಅಂತಃಪಟದ ಇಬ್ಬದಿಗೆ ಎದುರುಬದುರಾಗಿ ಮದುಮಗ ನಾರಾಯಣ ಮತ್ತು ಮದುಮಗಳು ನಿಂತಿದ್ದರು. ಪುರೋಹಿತರು ತಾರಕಸ್ವರದಲ್ಲಿ ಮಂಗಳಾಷ್ಟಕಗಳನ್ನು ಘೋಷಿಸುತ್ತಿದ್ದರು. ಮಂಗಳಾಷ್ಟಕದ ಕೊನೆಗೆ “ಸುಮೂಹೂರ್ತೇ ಸಾವಧಾನ” ಎಂಬ ಘೋಷಣೆ ಮೊಳಗುತ್ತಲೇ ನಾರಾಯಣನ ಕಿವುಗಳು ಚುರುಕಾದವು.

“ಸಾವಧಾನ” ಎಂಬ ಎಚ್ಚರಿಕೆಯ ಪದ ಕಿವಿಗೆ ಬೀಳುತ್ತಲೇ ನಾರಾಯಣ ಎಚ್ಚರಗೊಂಡ. “ನಾನು ಸಂಸಾರದ ಸಂಕೊಲೆಯಲ್ಲಿ ಸಿಲುಕಿಕೊಳ್ಳಕೂಡದು. ಈ ಬಂಧನದಲ್ಲಿ ಸಿಲುಕಿಕೊಂಡರೆ ನನ್ನ ಜೀವಿತಕ್ಕೆ ಅರ್ಥಬಾರದು. ಇನ್ನೂ ಕಾಲ ಮಿಂಚಿಲ್ಲ. ಅಂತರ‍್ಪಟ ಸರಿಯುವ  ಮೊದಲೇ ನಾನು ಇಲ್ಲಿಂದ ಕಾಲುಕಿತ್ತಬೇಕು” ಎಂದು ಆತ ಯೋಚಿಸಿದ. ಮಂಗಳಾಕಷ್ಟಗಳನ್ನು ಹೇಳುತ್ತಿದ್ದವು ಹೇಳುತ್ತಲೇಇದ್ದರು: ಮಂಗಳಾಕ್ಷತೆಗಳನ್ನು ಎರಚಲು ನಿಂತವರು ಮುಹೂರ್ತದ ದಾರಿ ಕಾಯುತ್ತಲೇ ಇದ್ದರು. ಅಷ್ಟರಲ್ಲಿ ಮದುಮಗ ನಾರಾಯಣ ಮಾಯವಾಗಿಬಿಟ್ಟ. “ನಾರಾಯಣ ಎಲ್ಲಿ, ಏನಾದ ನಾರಾಯಣ?” ಎಂಬ ಒಂದೇ ಕೂಗು ಮದುವೆ ಚಪ್ಪರದಲ್ಲಿ ಎದ್ದಿತು.

ನಾನು ಬ್ರಹ್ಮಚಾರಿಯಾಗಿ ಉಳಿದು ಬಲವಂತನಾಗಬೇಕು ಬುದ್ಧಿವಂತನಾಗಬೇಕು.

ಎಲ್ಲಿ ನಾರಾಯಣ, ಏನಾದ ನಾರಾಯಣ?

ಪಂಚವಟಿ ಎಂದರೆ ತ್ರೇತಾಯುಗದಲ್ಲಿ ಪ್ರಭು ರಾಮಚಂದ್ರ ಮತ್ತು ಸೀತಾಮಾತೆಯ ಪಾದಸ್ಪರ್ಶದಿಂದ ಪುನೀತವಾದ ಮಹಿಮಾಸ್ಥಾನ. ರಾಮಚಂದ್ರನು ವನವಾಸ ಕಾಲದಲ್ಲಿ ಇಲ್ಲಿಯೇ ವಾಸ ಮಾಡಿದ್ದ. ಹಸೆಮಣೆಯಿಂದ ಹೊರಟ ನಾರಾಯಣ ನೇರವಾಗಿ ಗೋದಾವರಿ ನದಿಯ ದಡದಲ್ಲಿಯೇ ಇದ್ದ ಪಂಚವಟಿಗೆ ಬಂದ. ನಾಸಿಕದ ಈ ಪುಣ್ಯ ಕ್ಷೇತ್ರದಲ್ಲಿ, ಪಂಚವಟಿಯ ಪರಿಸರದಲ್ಲಿ ನಾರಾಯಣನಿಗೆ ತನ್ನ ಬದುಕಿನ ನೆಲೆ, ಜೀವನ ರೀತಿ ಸ್ಪಷ್ಟವಾಯಿತು.

ಹನ್ನೆರಡು ವರ್ಷಗಳ ಕಾಲ ಆತ ಪಂಚವಟಿಯ ಮಂಗಳಧಾಮದಲ್ಲಿ ಧ್ಯಾನ, ತಪಶ್ಚರ್ಯೆ ಕೈಗೊಂಡ.

ಸೂರ್ಯೊದಯಕ್ಕೆ ಇನ್ನೂ ಎರಡು ಗಂಟೆ ಇರುವಾಗಲೇ ನಾರಾಯಣ ಏಳುವನು. ಸಂಗಮದಲ್ಲಿ ಸ್ನಾನ ಮಾಡಿ ಸಂಧ್ಯಾವಂದನೆ, ಧ್ಯಾನಗಳನ್ನು ಮಾಡುವನು. ಸೂರ್ಯೊದಯದ ನಿಮಿಷದಿಂದ ಸೂರ್ಯ ನೆತ್ತಿಯ ಮೇಲೆ ಬರುವವರೆಗೆ ಐದಾರು ಗಂಟೆಗಳ ಕಾಲ ಮೊಳಕಾಲಿನವರೆಗೆ ನೀರು ಬರುವಂತೆ ನದಿಯಲ್ಲೇ ನಿಂತು ಧ್ಯಾನ ಮಾಡುವನು. ಮೀನುಗಳೂ ಕಾಲನ್ನು ಮುತ್ತಿಕೊಂಡು ಕಡಿಯುವುವು, ಆದರೆ ಲಕ್ಷ್ಯವಿಲ್ಲ ಅವನಿಗೆ. ಧ್ಯಾನ ಮುಗಿದ ನಂತರ ಕೆಲವು ಮನೆಗಳಿಗೆ ಭಿಕ್ಷೆ ಬೇಡುವನು. ಬಂದಿದ್ದರಲ್ಲಿ ಮೂರು ಸಮನಾದ ಪಾಲು- ಒಂದು ಗೋವುಗಳಿಗೆ, ಒಂದು ಮೀನುಗಳಿಗೆ, ಮತ್ತೊಂದು ತನಗೆ. ದಿನದ ಉಳಿದ ಭಾಗ ಧರ್ಮಗ್ರಂಥಗಳನ್ನು ಓದುವುದರಲ್ಲಿ, ಹರಿಕಥೆಗಳನ್ನು ಕೇಳುವುದರಲ್ಲಿ, ಭಜನೆಯಲ್ಲಿ ಕಳೆಯುವುದು.

ಹದಿಮೂರು ವರ್ಷದ ಹುಡುಗನ ಈ ಜೀವನ ರೀತಿಯಲ್ಲಿ ಕಂಡವರೆಲ್ಲ ಬೆರಗಾಗುವರು.

ಈ ಆಖಂಡ ತಪಃಶ್ಚರ್ಯೆಯಿಂದಾಗಿ ಆತನ ದೇಹ ಪುಟಕ್ಕಿಟ್ಟ ಚಿನ್ನದಂತೆ ಮೆರಗು ಪಡೆಯಿತು. ಈ ಸುದೀರ್ಘ ಧ್ಯಾನ ಮತ್ತು ಚಿಂತನದಿಂದ ಆತನ ಬುದ್ಧಿ ಹರಿತವಾಯಿತು.

ತನ್ನ ಆರಾಧ್ಯ ದೈವ ಪ್ರಭು ರಾಮಚಂದ್ರ  ಹೇಳಿದ್ದನಲ್ಲವೇ, “ತಾಯಿ ಮತ್ತು ತಾಯ್ನಾಡು ಇವು ಸ್ವರ್ಗಕ್ಕೂ ಮಿಗಿಲು” ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದು. ನಾರಾಯಣನಲ್ಲಿಯೂ ತನ್ನ ತಾಯಿ ಮತ್ತು ತಾಯ್ನಾಡಾದ ಭರತವರ್ಷದ ಬಗ್ಗೆ ಪ್ರೇಮಭಾವನೆ ಉಕ್ಕಿತು. ನಾರಾಯಣ, “ನಾನು ರಾಮನ ದಾಸ. ರಾಮ ನುಡಿದಂತೆ ನಾನು ನಡೆಯವವ. ರಾಮ ನಡೆದ ದಾರಿಯಲ್ಲಿ ಸಾಗುವವ” ಎಂದು ತನ್ನನ್ನು ಗುರುತಿಸಿಕೊಂಡ. ನಾರಾಯಣ ರಾಮದಾಸನದ.

ಪುಣ್ಯಕ್ಷೇತ್ರಗಳ ದರ್ಶನ:

ರಾಮದಾಸರು ಭರತವರ್ಷದ ದರ್ಶನ ಮಾಡಬೇಕೆಂದು ಬಯಸಿದರು. ಭರತಖಂಡದ ದರ್ಶನ ಎಂದರೆ ಏನು? ಪ್ರತಿಯೊಂದು ಹಳ್ಳಿ, ಊರು, ಕೇರಿಯನ್ನು ನೋಡುವುದೇ? ಅಲ್ಲ: ಭಾರತದ ಪ್ರತೀಕ ಸ್ವರೂಪವಾಗಿ ಸಕಲೆಡೆಗೂ ಹರಡಿದ ತೀರ್ಥಕ್ಷೇತ್ರಗಳನ್ನು ನೋಡಿದರೆ ಸಾಕು! ಭಾರತದ, ಭಾರತೀಯ ಜನತೆಯ ಸಮಗ್ರ ದರ್ಶನ ಪಡೆದಂತಾಗುತ್ತದೆ.

ಪೈಠಣದಲ್ಲಿ ಒಂದು ಸ್ವಾರಸ್ಯವಾಧ ಸಂಗತಿ ನಡೆಯಿತು. ರಾಮದಾಸರನ್ನು ಜನ “ಸಮರ್ಥ ರಾಮದಾಸರು” ಎಂದು ಕರೆಯಲು ಅದೇ ಕಾರಣ ಎಂದು ಹೇಳುತ್ತಾರೆ.

ತಮ್ಮ ಹರಿಕಥೆ, ಕೀರ್ತನೆಗಳಿಂದ ಪ್ರಸಿದ್ಧವಾಗಿದ್ದ ರಾಮದಾಸರು ಒಂದು ದಿನ ಗೋದಾವರಿ ತೀರದಲ್ಲಿ ಹೋಗುತಿದ್ದರು. ಕೈಯಲ್ಲಿ ಒಂದು ಬಿಲ್ಲಿತ್ತು. ಕೆಲವು ಬ್ರಾಹ್ನಣರು ಇದನ್ನು ಕಂಡರು.

“ನಿಮಗೆ ಇದನ್ನು ಉಪಯೋಗಿಸಲು ತಿಳದಿದೆಯೋ?” ಎಂದರು ಒಬ್ಬರು.

“ಹೂಂ”  ಎಂದರು ರಾಮದಾಸರು.

“ಅಗೋ, ಆ ಪಕ್ಷಿಯನ್ನು ಹೊಡೆಯಿರಿ ನೋಡೋಣ” ಎಂದರು ಬ್ರಾಹ್ಮಣರು ಎತ್ತರದಲ್ಲಿ ಹಾರುತ್ತಿದ್ದ ಪಕ್ಷಿಯೊಂದನ್ನು ತೋರಿಸಿ.

ಒಂದೇ ಏಟಿಗೆ ರಾಮದಾಸರು ಅದನ್ನು ಉರುಳಿಸಿದರು.
“ನೀವು ಸಾಧುಗಳು, ಪಕ್ಷಿಯನ್ನು ಕೊಲ್ಲಬಹುದೇ? ಎಂತಹ ಪಾಪ ಕೆಲಸ! ” ಎಂದರು ಬ್ರಾಹ್ಮಣರು.

“ನೀವೇ ಹೊಡೆಯಲು ಹೇಳಿದಿರಲ್ಲ!”

“ಹೌದು, ಆದರೆ ಇನ್ನೊಬ್ಬರು ಹೇಳಿದರೆಂದು ಪಾಪದ ಕೆಲಸ ಮಾಡಬಹುದೆ?”

“ಸರಿಯೇ, ನಿಜ” ಎಂದರು ರಾಮದಾಸರು.

“ಪಕ್ಷಿಯನ್ನು ಕೊಂದುದ್ದಕ್ಕೆ ನೀವು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು, ಇಲ್ಲವಾಧರೆ ಆ ಪಾಪ ನಿಮ್ಮನ್ನು ಕಾಡುತ್ತದೆ” ಬ್ರಾಹ್ಮಣರು ಹೇಳಿದರು.

ರಾಮದಾಸರು ಒಪ್ಪಿದರಂತೆ. ಬ್ರಾಹ್ಮಣರು ಹೇಳಿದಂತೆ ಪ್ರಾಯಶ್ಚಿತ ಮಾಡಿಕೊಂಡರಂತೆ. ಅನಂತರ ಕೇಳಿದರಂತೆ:” ಪಕ್ಷಿಯನ್ನು ಕೊಂದ ಪಾಪ ಹೋಯಿತೇ?”

ಬ್ರಾಹ್ಮಣರು “ಹೋಯಿತು” ಎಂದರು.

“ಹಾಗಾದರೆ ಸತ್ತ ಪಕ್ಷಿ ಬದುಕುವುದೆ?”

“ಸತ್ತ ಪಕ್ಷಿ ಬದುಕದೇ ಇದ್ದರೆ ಪಾಪ ಹೋಯಿತು ಎಂದು ಹೇಗೆ ಹೇಳುವುದು?” ರಾಮದಾಸರು ಕೇಳಿದರು.

ರಾಮದಾಸ ಸತ್ತ ಪಕ್ಷಿಯನ್ನು ಕೈಯಲ್ಲಿ ಇಟ್ಟುಕೊಂಡು ಶ್ರೀರಾಮನಿಗೆ ಪ್ರಾರ್ಥನೆ ಮಾಡಿದಂತೆ. ಪಕ್ಷಿ ಬದುಕಿತಂತೆ. ಅಂದಿನಿಂದ ಅವರನ್ನು ಜನರು ಸಮರ್ಥ ರಾಮದಾಸರು ಎಂದು ಕರೆಯಲು ಪ್ರಾರಂಭಿಸಿದರಂತೆ. ಹೀಗೆ ಕಥೆಯುಂಟು.

ಉತ್ತರದ ಕಾಶಿಗೆ ಸಾಗಿತು ರಾಮದಾಸರ ಪ್ರಯಾಣ. ಆಯಾಸವಾದಾಗ ದಾರಿಯಲ್ಲಿ ಸಿಕ್ಕ ಹಳ್ಳಿಯಲ್ಲಿ ನಿಲ್ಲುವುದು. ಭಿಕ್ಷಾಟನೆಯಿಂದ ಹಸಿವನ್ನು ಇಂಗಿಸುವುದು. ಸುದೀರ್ಘವಾದ ಈ ಪ್ರವಾಸದಲ್ಲಿ ದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರು ರಾಮದಾಸರು. ತಾವು ಪ್ರವಾಸದಲ್ಲಿ ಕಂಡ ದೇಶದ ಪರಿಸ್ಥಿತಿಯ ವರ್ಣನೆಯನ್ನು ತಮ್ಮ ಪದ್ಯದಲ್ಲಿ ರಾಮದಾಸರು ಹೀಗೆ ಬರೆದಿದ್ದಾರೆ.

ಪರಕೀಯರ ದಾಳಿಗಳಿಂದಾಗಿ ಕೊಳ್ಳೆಹೊಡೆಯಲ್ಪಟ್ಟ ಹಳ್ಳಿಗಳು ನಿರ್ಜನವಾಗಿವೆ, ಭೂಮಿಗಳು ಉಳುವವರಿಲ್ಲದೆ ಬೀಳು ಬಿದ್ದಿವೆ.  ಎಲ್ಲಿ ಜನವಸತಿ ಇದೆಯೋ ಅಲ್ಲಿಯೂ ಸಹ ಜನರು ಪ್ರಳಯವೇ ಸಮೀಪಿಸಿದಂತೆ ಭಯಗೊಂಡಿದ್ದಾರೆ. ದುಬಾರಿ ಬೆಲೆಗಳಿಂದ ಅವರ ಜೀವನ ಕಷ್ಟಮಯ ವಾಗಿದೆ. ಎಷ್ಟೋ ಜನರು ವಿಷಪಾನ ಮಾಡಿ ಅಸುನೀಗಿದ್ದಾರೆ. ಜನರಿಗೆ ಈ ಬದುಕೇ ಬೇಡವಾಗಿದೆ”.

ಅವರ ಹೃದಯ ಮೊರೆ ಇಟ್ಟಿತು:. “ಇದರಿಂದ ಜನರಿಗೆ ಬಿಡುಗಡೆ ಎಂದು? ಈ ವನವಾಸಕ್ಕೆ ಕೊನೆ ಎಲ್ಲಿ, ಪ್ರಭೋ ರಾಮಚಂದ್ರ?”

ಇದೇ ಕೊರಗಿನಲ್ಲಿ ರಾಮದಾಸರು ಕಾಶಿ ವಿಶ್ವನಾಥನ ಮಂದಿರವನ್ನು ಪ್ರವೇಶಿಸಿದರು. ಕಾಶಿಯು ಪರಮ ಪವಿತ್ರ ಕ್ಷೇತ್ರ. ಅಲ್ಲಿ ಭರತವರ್ಷದ ಎಲ್ಲಾ ಭಾಗಗಳ ಜನರೂ ನಿತ್ಯ ಸೇರಿರುತ್ತಾರೆ.

ರಾಮದಾಸರು ಒಂದು ದಿನ ವಿಶ್ವನಾನ ದರ್ಶನ ಪಡೆದು ದೇವಸ್ಥಾನದ ಹೊರಗೆ ವಿಶ್ರಾಂತಿ ಪಡೆಯುತ್ತಿದ್ದರು. ರಾಮದಾಶರ ತೇಜಃಪುಂಜ ವ್ಯಕ್ತಿತ್ವವು ಅಲ್ಲಿ ಸೇರಿದ್ದ ಭಕ್ತಗಣವನ್ನು ಆಕರ್ಷಿಸಿತು. ರಾಮದಾಸರು ಅಲ್ಲಿ ನೆರೆದ ಜನರೊಡನೆ ಕುಶಲ ಸಂಭಾಷಣೆಯಲ್ಲಿ ತೊಡಗಿದರು. ಈ ಮಾತುಕತೆಗಳ ನಡುವೆ ಅವರಿಗೆ ಒಂದು ಸಂಗತಿ ತಿಳಿಯಿತು.

ಹನುಮಾನ್ ಘಾಟಿನಲ್ಲಿ ಹನುಮಂತ:

ಕಾಶಿಯ ವಿಶ್ವನಾಥನ ದೇವಸ್ಥಾನ ಗಂಗಾ  ದಡದಲ್ಲಿ ಇದೆಯೆಷ್ಟೆ. ಭಕ್ತರಿಗೆ ಹತ್ತಿ ಇಳಿಯಲು ಅನುಕೂಲವಾಗಲೆಂದು ನದಿಗೆ ಮೆಟ್ಟಿಲು ಕಟ್ಟಿದರು. ಅದಕ್ಕೆ ಹನುಮಾನ ಘಾಟ್ ಎಂಬ ಹೆಸರು ಬಳಕೆಯಲ್ಲಿತ್ತು. ಆದರೆ ಹನುಮಂತನ ಮೂರ್ತಿ ಮಾತ್ರ ಎಲ್ಲಿಯೂ ಇರಲಿಲ್ಲ. ಭಕ್ತರು ರಾಮದಾಸರನ್ನು ಪ್ರಾರ್ಥಿಸಿದರು:

“ಮಹಾರಾಜ್, ಹನುಮಾನ ಘಾಟಿನಲ್ಲಿ ಮಾರೂತಿಯ ಪ್ರತಿಷ್ಠಾಪನೆ ಆಗಲಿ”.

ರಾಮದಾಸರು ಚಿಂತಿಸಿದರು. :”ಹೌದು , ಹನುಮಂತನ ಪ್ರತಿಷ್ಠಾಪನೆ ಆಗದೇ ಈ ಸ್ಥಳ ಹನುಮಾನ ಘಾಟ್ ಆಗಲಾರದು”. ಅವರು ಅಲ್ಲಿಯ ಆಂಜನೇಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು.

ರಾಮದಾಸರ ಮನದಲ್ಲಿ ಅಲೋಚನೆಯ ಲಹರಿಗಳೂ ಎದ್ದರು. ಏನಿದು ಭಗವಂತನ ಲೀಲೆ? ನಾನು ಎಲ್ಲಿಯವನು ? ಇಷ್ಟು ದೂರ ನನ್ನನ್ನು ಬರಮಾಡಿ ನನ್ನಿಂದ ಹನುಮಂತನ ಮೂರ್ತಿ ಪ್ರತಿಷ್ಠಾಪನೆ ಆಗಬೇಕೆಂದರೇನು? ಭಗವಂತ ಈ ಘಟನೆಯ ಮೂಲಕ ಏನೋ ಆದೇಶ ನೀಡುತ್ತಿರಬೇಕು. ಏನದು ಆತನ ಆದೇಶ? ಎಂದು ರಾಮದಾಸರು ಧ್ಯಾನ ಮಗ್ನರಾದರು. ಆಗ ಅವರಿಗೆ ಭಗವಂತನ ಆದೇಶವೆನೆಂಬುವುದು ನಿಚ್ಚಳವಾಯಿತು.

“ಜನ್ಮ ಭೂಮಿಯಾದ ಭರವರ್ಷವು ಸ್ವರ್ಗಕ್ಕಿಂತಲೂ ಮೇಲೇನೂ ಹೌದು: ಆದರೆ ಅದು ಸ್ವಾತಂತ್ಯ್ರವಿಲ್ಲದೆ ಎಲ್ಲೆಲ್ಲೂ ಹಾಳೂ ಸುರಿಯುತ್ತಿದೆ. ಹನುಮಾನ ಘಾಟಿನಲ್ಲಿ ಹನುಮಾನನಿಲ್ಲದೆ ಹಾಳು ಸುರಿದಂತೆ. ಹನುಮಂತನ “ಬುದ್ಧಿಮತಾರಂ ವರಿಷ್ಠ”-ಬುದ್ಧಿವಂತರಲ್ಲಿಯೇ ಶ್ರೇಷ್ಠನೆಂದು ಎನಿಸಿದ್ದ, ಅಲ್ಲದೇ ಮಹಾಬಲವಂತನೂ ಪರಾಕ್ರಮಿಯೂ ಆಗಿದ್ದ. ಆತನ ಪ್ರಯತ್ನದಿಂದಲ್ಲವೇ ಪ್ರಭು ರಾಮಚಂದ್ರನಿಗೆ ಮರಳಿ ಸೀತೆ ದೊರಕಿದ್ದು? ಹನುಮಂತನ ಉಪಾಸನೆ ಎಂದರೆ ಶಕ್ತಿಯ ಉಪಾಸನೆ. ಈ ಉಪಾಸನೆ ಭಾರತೀಯರ ಮನದಲ್ಲಿ ದೃಢವಾಗಿ ಪ್ರತಿಷ್ಠಾಪನೆಯಾಗಬೇಕು. ಅಂದರೇನೇ ಸ್ವರಾಜ್ಯ ಸೀತೆ, ಸುರಾಜ್ಯ ಸೀತೆ ಮರಳಿ ದೊರಕಿಯಾಳು. ಭಾರ‍ತೀಯರು ಹನುಮಂತನಂತೆ ಬುದ್ಧವಂತರೇನೋ ಹೌದು. ಅವರು ಯತ್ನ ಮಾಡಿದರೆ ಅವನಂತೆ ಬಲಶಾಲಿಗಳೂ ಆಗಬಹುದು. ಮನಸ್ಸು ಮಾಢಿದರೆ ಸಾಗರವನ್ನು ಹಾರಬಲ್ಲರು: ಪರ್ವತವನ್ನೂ ಹೊತ್ತು ತರಬಲ್ಲರು. ಈ ಜನರಲ್ಲಿ ಹನುಮಂತನ ಆದರ್ಶವನ್ನು ಬಿಂಬಿಸಬೇಕು. ಹಾಳೂ ಸುರಿಯುವ “ಹನುಮಾನ್ ಘಾಟ್ನಲ್ಲಿ ಹನುಮಂತನನ್ನು ನೆಲೆನಿಲ್ಲಿಸಬೇಕು.

"ನಿನ್ನ ಶಪಥ ಪೂರೈಸುವುದೇ ಭಗವಂತನ ಆರಾಧನೆ".

ಮಾತೃಭೂಮಿಯ ರಕ್ಷಣೆಗೆ ಎಲ್ಲರೂ ಮುಡಿಪು

 

ವಿಶ್ವನಾರ್ಥನ ಪವಿತ್ರ ಕ್ಷೇತ್ರವಾದ ಕಾಶಿಯಲ್ಲಿ ರಾಮದಾಸರು ತಮ್ಮ ಜೀವನದ ಉದ್ದೇಶಗಳನ್ನು ಮತ್ತೇ ಸ್ಪಷ್ಟಮಾಡಿಕೊಂಡರು.

ರಾಮದಾಸರು ಉತ್ತರ ಭಾರತದ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿದರು. ಆನಂತರ ದಕ್ಷಿಣ ಭಾರತದ ಕಡೆಗೆ ಪ್ರಯಣ ಬೆಳೆಸಿದರು.  ರಾಮೇಶ್ವರ, ತಿರುಪತಿಗಳ ಯಾತ್ರ ಮುಗಿಸಿ ಪಂಪಾಕ್ಷೇತ್ರಕ್ಕೆ ಬಂದರು. ತುಂಗಾನದಿಯ ತೀರದಲ್ಲಿಯ ವೀರೂಪಾಕ್ಷೇಶ್ವರನ ದರ್ಶನ ಪಡೆದರು. ವಿಜಯನಗರ ಸಾಮ್ರಾಜ್ಯ ಹಾಳಾಗಿ ಕೆಲವೇ ದಶಕಗಳು ಸಂದಿದ್ದವು. ವಿದ್ಯಾರಣ್ಯ ಮಹಾಸ್ವಾಮಿಯವರು ತಮ್ಮ ಅಧ್ಯಾತ್ಮಿಕ  ಸಾಧನೆಯ ಮಧ್ಯದಲ್ಲಿಯೂ ಧರ್ಮದ ಸಂರಕ್ಷೆಯ ಅಗತ್ಯವನ್ನು ಕಂಡುಕೊಂಡಿದ್ದರು. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗಾಗಿ ದುಡಿದಿದ್ದರು. ಹಾಗೆಯೇಮಠಾಧೀಶರಾದ ವ್ಯಾಸರಾಯರು ಕೃಷ್ಣದೇವರಾಯನಿಗೆ ರಾಜಕಾರಣದಲ್ಲಿ ಸೂಖ್ತ ಸೂಚನೆ ಸಲಹೆಗಳನ್ನು ಕೊಡುತ್ತಿದ್ದರು. ಇವೆಲ್ಲ ಚಿತ್ರಗಳು ರಾಮದಾಸರ ಮನಃಪಟದಲ್ಲಿ ಮರುಕಳಿಸಿದವು. ದೇಶ ಮತ್ತು ಧರ್ಮ ಗಂಡಾಂತರದಲ್ಲಿದ್ದಾಗ ಅಧ್ಯಾತ್ಮಿಕ ಸಾಧನೆಯನ್ನೂ ವೈಯುಕ್ತಿಕ ಮುಕ್ತಿ ಸಾಧನೆಯನ್ನೂ ಬದಿಗೊತ್ತಿ, ದೇಶ ಮತ್ತು ಧರ್ಮದ ಕಾರ್ಯಕ್ಕೆ ಮುನ್ನುಗ್ಗಬೇಕು: ಅದೇ ನಿಜವಾದ ಅಪದ್ದರ್ಮ ಎಂಬುವುದನ್ನು ಸಾರಿದ ಉದಾಹರಣೆ ಗಳು ಇದೇ  ಪರಿಸರದಲ್ಲಿ ಘಟಿಸಿದ್ದವು. ವಿಜಯನಗರಕ್ಕೆ ಶತ್ರು ರಾಜ್ಯಗಳಿಂದ ಅಪತ್ತು ಒದಗಿದಾಗ ಅದನ್ನು ರಕ್ಷಿಸಲು ಭಕ್ತಿಯೊಂದೇ ಸಾಲದಾಯಿತು : ಶಕ್ತಿ ಬೇಕಾಯಿತು. ಮಾತೃಭೂಮಿಯಲ್ಲಿ ಭಕ್ತಿಯೆಷ್ಟೆ ಇದ್ದರೆ ಸಾಲದು, ಅದರ ರಕ್ಷಣೆಗೆ ಶಕ್ತಿಯನ್ನೂ ಬೆಳೆಸಬೇಕು. ಮಾತೃಭೂಮಿಯ ರಕ್ಷಣೆಯಲ್ಲಿ ಗೃಹಸ್ಥ-ಸಂನ್ಯಾಸಿ ಎಂದಿಲ್ಲ. ಸೈನಿಕ- ಸೈನಿಕ ನಲ್ಲದವನು ಎಂದಿಲ್ಲ. ಎಲ್ಲರೂ ಅದಕ್ಕೆ ಮುಡಿಪಾಗಬೇಕು . ರಾಮದಾಸರು ಇದನ್ನು ಕಂಡುಕೊಂಡರು.

ರಾಮದಾಸರು ಪಂಢರಪುರಕ್ಕೆ ಬಂದರು. ಪಂಢರಪುರ ವಿಠ್ಠಲನ ಪವಿತ್ರ ಕ್ಷೇತ್ರ. ಪರಮ ಭಕ್ತ ಪುಂಡಲೀಕ ತಾಯಿ ತಂದೆಗಳ ಸೇವೆಯಲ್ಲಿ ನಿರತನಾಗಿದ್ದಾಗ ಭಗವಂತನಾದ ವಿಠ್ಠಲನ ದರ್ಶನವನ್ನೀಯಲು ಬಂದ. ಪುಂಡಲೀಕ ಭಗವಂತನೆಡೆಗೆ ಇಟ್ಟಿಗೆ ಎಸೆದು, “ತಾಯಿ ತಂದೆಗಳ ಸೇವೆಯನ್ನು ಮುಗಿಸದೇ ನಿನ್ನನ್ನು ಬರಮಾಡಿಕೊಳ್ಳಲು ನನಗೆ ಸಮಯವಿಲ್ಲ. ಅಲ್ಲಿಯವರೆಗೆ ನೀನು ಇಟ್ಟಿಗೆಯ ಮೇಲೆ ನಿಂತಿರು” ಎಂದು ವಿಠ್ಠಲನಿಗೆ ಹೇಳಿದ. ಪಂಢರಪುರ ವಿಠ್ಠಲ ಮೂರ್ತಿ ಇಟ್ಟಿಗೆಯ ಮೇಲೆ ನೆಲೆನಿಂತ ಕಥೆ ಇದು.

ರಾಮದಾಸರಿಗೆ ಈ ಐತಿಹ್ಯದಲ್ಲಿಯೂ ಒಂದು ವಿಶೇಷ ಅರ್ಥ ಹೊಳೆಯಿತು. ಭಗವಂತನ ಸಾಕ್ಷಾತ್ಕಾರದ ಸಾಧನೆಗಿಂತಲೂ ತಾಯಿ-ತಂದೆಗಳ ಸೇವೆಗೆ ಆದ್ಯತೆ ನೀಡಬೇಕಾದುದು ನಿಜ ಕರ್ತವ್ಯ. ಸ್ವದೇಶವೇ ತಾಯಿ, ಸ್ವಧರ್ಮವೇ ತಂದೆ, ಸ್ವದೇಶ, ಸ್ವಧರ್ಮಗಳ ಸವೆಗೈಯುವುದೇ ಪರಮ ಕತೃವ್ಯ. ಈ ಕರ್ತವ್ಯವನ್ನು ಮರೆತು ಭಗವಂತನ ಸಾಕ್ಷತ್ಕಾರವನ್ನು ಹಿಂಬಾಲಿಸಿ ಹಿಮಾಲಯ ಸೇರುವುದು, ತಪಸ್ಸು ಗೈಯುವುದು ಇದೆಲ್ಲ ಸಲ್ಲ. ಮೊದಲು ಐಹಿಕ ಕರ್ತವ್ಯ ಪೂರೈಸಬೇಕು. ಆಮೇಲೆ ಪರಮಾರ್ಥದ ಸಾಧನೆ. ರಾಮದಾಸರ ಮನದಲ್ಲಿ  ನಡೆದ ಚಿಂತನಮಂಥನದಿಂದ ಹೊಳೆದ ವಿಚಾರಗಳಿವು.

ಭರತ ವರ್ಷದ ಪರ್ಯಟನೆಯಿಂದ ರಾಮದಾಸರಿಗೆ ಸಂಕಟಗ್ರಸ್ತ ದೇಶದ ದರ್ಶನವಾಯಿತು.

ಶಿಷ್ಯನಿಗೆ ತಕ್ಕ ಗುರು:

ಅವರು ಮರಳಿ ಮಹಾರಾಷ್ಟ್ರಕ್ಕೆ ಬಂದ ಹೊಸತರಲ್ಲಿಯೇ ಶಿವಾಜಿ ಮಹಾರಾಜರು ಅವರ ದರ್ಶನಕ್ಕೆ ಬಂದರು. ತುಕಾರಾಮರೇ ಶಿವಾಜಿಯನ್ನು ರಾಮದಾಸರ ಭೇಟಿಗೆ ಕಳುಹಿಸಿದ್ದರು.

ಶಿವಾಜಿ ಮಹಾರಾಜರು ರಾಮದಾಸನ ಪಾದಗಳಿಗೆರಗಿದರು. “ತಮ್ಮನ್ನೆ ನೆಚ್ಚಿ ಬಂದಿದ್ದೇನೆ. ತಾವೇ ಗುರುಗಳು ಉಪದೇಶ ಮಾಡಬೇಕು. ಮುಕ್ತಿ ಸಾಧನೆಯ ಮಂತ್ರವನ್ನು ಹೇಳಿಕೊಟ್ಟು ಉದ್ಧರಿಸಬೇಕು” ಎಂದು ಬೇಡಿದರು.

ಶಿವಾಜಿಯನ್ನು ನೋಡುತ್ತಲೇ ರಾಮದಾಸರಿಗೆ ಅತ್ಯಾನಂದವಾಯಿತು. ತಾವು ತಮ್ಮ ಮನದಲ್ಲಿ ಗುರುತಿಸಿಕೊಂಡ ಧ್ಯೇಯೋದ್ದೇಶಗಳನ್ನು ಈಡೇರಿಸಿಕೊಳ್ಳುವಲ್ಲಿ ಈ ಶಿವಾಜಿಯು ಕಾರಣಪುರುಷನಾಗಬಲ್ಲ ಎಂಬ ಸಲ್ಲಕ್ಷಣ ಅವರಿಗೆ ಗೋಚರಿಸಿತು. ಶಿವಾಜಿ ಮಹಾರಾಜನು ಸಾಮಾನ್ಯನಲ್ಲ, ಯುಗಪುರುಷನಾಗಿ ಹೊಮ್ಮುವ ವ್ಯಕ್ತಿತ್ವ ಉಳ್ಳವನು ಎಂಬುವುದನ್ನು ರಾಮದಾಸರ ಒಳಗಣ್ಣು ಕಂಡುಕೊಂಡಿತು.

“ಶಿವಬಾ, ನೀನು ಸ್ವರಾಜ್ಯದ ಸಂಕಲ್ಪವನ್ನು ರೋಹಿಡೇಶ್ವರನ ಸಮಕ್ಷಮದಲ್ಲಿ ಕೈಗೊಂಡಿರುವುದಾಗಿ ಕೇಳಿದ್ದೇನೆ. ಈಗಷ್ಟೇ ನಾನು ಮುಗಿಸಿಕೊಂಡು ಬಂದ ಭಾರತಯಾತ್ರೆಯಿಂದ ಈ ದೇಶ, ಧರ್ಮ ಎಷ್ಟೊಂದು ಘಾಸಿಕೊಂಡಿವೆ ಎಂಬುವುದನ್ನು ಕಂಡಿದ್ದೇನೆ. ಜನರ ಸ್ವಾತಂತ್ಯ್ರಕ್ಕೆ ಅಪಾಯವಿಲ್ಲದಂತೆ ಆಗಬೇಕು. ತಮ್ಮ ತಮ್ಮ ಧರ್ಮವನ್ನು ನಿರಾತಂಕವಾಗಿ ಅನುಸರಿಸಿಕೊಂಡು ಬಾಳಲು ಸಾಧ್ಯವಾಗಬೇಕು.ಹೀಗೆ ನಿರಾತಂಕವಾಗಿ, ಸ್ವತಂತ್ರವಾಗಿ ಬಾಳುವುದು ಸಾಧ್ಯವಾದಾಗಲೇ ಈ ಹಾಳೂ ಸುರಿಯುವ ಪ್ರದೇಶದಲ್ಲಿ ಆನಂದವನಭುವನ ನಲಿದೀತು. ಶಿವಾಜಿ ಮಹಾರಾಜ, ನಿನಗೆ ಪಾರಮಾರ್ಥದ ಯೋಚನೆ ಈಗೇಕೆ? ವಿಠ್ಠಲನ ಸಾಕ್ಷಾತ್ಕಾರದ ಹಂಬಲವೇಕೆ? ನೀನು ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ತನ್ನ ಜನ ನಿರ್ಭಯವಾಗಿ , ನಿರಾತಂಕವಾಗಿ ಬಾಳುವುದು ಸಾಧ್ಯವಾಗುವಂತೆ ಮಾಡುವ ಸಂಕಲ್ಪ ತೊಟ್ಟು ಅದಕ್ಕಾಗಿ ಹೆಣಗುವವನು ಸಲವಾಗಿ ಭಗವಂತ ಕಾಯ್ದು ಕುಳಿತಿದ್ದಾನೆ. ಅಂಥವರ ಹಿಂದೆ ಭಗವಂತ ತಾನೇ ಓಡಿ ಬರುತ್ತಾನೆ. ಆದ್ದರಿಂದ ನೀನು ರೋಹಿಡೇಶ್ವರನ ಎದುರು ಕೈಗೊಂಡ ಶಪಥ ಮರೆಯಬೇಡ. ಅದರ ಪೂರೈಕೆಯೆ ಭಗವಂತನ ಆರಾಧನೆ”.

ಪರ್ವತಶ್ರೇಣಿಯಿಂದ ಜುಳುಜುಳನೆ ಹರಿದುಬರುವ ನೀರನ್ನು ಭೂಮಿ ಸಂತೋಷದಿಂದ ಸ್ವೀಕರಿಸುವಂತೆ ರಾಮದಾಸರ ಈ ಉಪದೇಶವಾಣಿಯನ್ನು ಶಿವಾಜಿ ಮಹಾರಾಜರು ಅಲಿಸಿದರು.

ಭದ್ರಕೋಟೆಯಾಗು :

ಶಿವಾಜಿ ಮಹಾರಾಜರು ರಾಮದಾಸರ ಪಾದಪೂಜೆ ಮಾಡಿದರು. ರಾಮದಾಸರು ಶಿವಾಜಿಯ ಉಡಿಯಲ್ಲಿ ತೆಂಗಿನಕಾಯಿ, ಒಂದು ಮುಷ್ಟಿ ಮಣ್ಣು ಮತ್ತು ಎರಡು ಮುಷ್ಟಿ ಹರಳುಕಲ್ಲು ಹಾಕಿದರು.

ತೆಂಗಿನ ಕಾಯಿ ಎಂದರೆ ಶುಭ ಕೋರಿಕೆಯ ಶ್ರೀಫಲ. ಮಣ್ಣು ಸ್ವದೇಶದ ಸಂಕೇತ. ಹರಳುಕಲ್ಲು ಎಂದರೆ ಕೋಟೆ ಕೊತ್ತಳಗಳ ಅಂದರೆ ಸಂರಕ್ಷಣೆಯ ಸಾಧನಗಳ ಪ್ರತೀಕ. ಒಂದು ಮುಷ್ಟಿ ಮಣ್ಣು, ಎರಡು ಮುಷ್ಟಿ ಹರಳುಕಲ್ಲು! ಸ್ವದೇಶದ ಸಂರಕ್ಷಣೆಗೆ ಇಮ್ಮಡಿ ಜಾಗ್ರತೆಯಾಗಿರಬೇಕೆಂಬುವದೇ ಇದರ ಸಾಂಕೇತಿಕ ಆದೇಶ!

“ಮಹಾರಾಜಾ, ನೀನು ನಿನ್ನ ಜನತೆಗೆ ಭದ್ರ ಕೋಟೆಯಾಗು. ನಿನಗೆ ಶುಭವಾಗಲಿ” ಎಂದು ರಾಮದಾಸರು ಶಿವಾಜಿ ಮಹಾರಾಜರಿಗೆ ಹಾರೈಸಿದರು.

ಶಿವಾಜಿ ಮಹಾರಾಜರಿಗೆ ಸ್ವರಾಜ್ಯ ಸಂಸ್ಥಾಪನೆಯ ಕಾರ್ಯದಲ್ಲಿ ತಾವು ಯಾವ ರೀತಿಯಿಂದ ಸಹಕಾರ, ಸಹಾಯ ನೀಡಬಹುದು ಎಂಬುವುದರ ಕುರಿತು ರಾಮದಾಸರು, ವಿಚಾರ ವಿನಿಮಯ ಮಾಡಿದರು. ಶಿವಾಜಿ ಮಹಾರಾಜರನ್ನು ಬೀಳ್ಕೊಡುವಾಗ ಸೂತ್ರರೂಪದಲ್ಲಿ ಕೆಲವು ಉಪದೆಶದ ನುಡಿಗಳನ್ನು ಹೇಳಿದರು.  ಸಮರ್ಥ ರಾಮದಾಸರು ವಿರಚಿಸಿದ “ದಾಸಬೋಧೆ”ಯಲ್ಲಿ ಆ ನುಡಿಗಳು ಸೇರಿಕೊಂಡಿವೆ.

ಶಿವಾಜಿಯ ಮಹಾರಾಜರಿಗೆ, ಅವರು ನೀಡಿದ ಉಪದೇಶವಿದು:

‘ಚಾಡಿಕೋರರನ್ನು, ಬಂಡಾಯಗಾರರನ್ನು ಕೊಲ್ಲತಕ್ಕದ್ದು. ಕಾರ್ಯವನ್ನು ವಹಿಸಿಕೊಂಡ ಬಳಿಕ ಅರ್ಧಕ್ಕೆ ನಿಲ್ಲಿಸತಕ್ಕದ್ದಲ್ಲ. ಅದರ ಬಗ್ಗೆ ಉದಾಸೀನತೆ ತೋರುವವನು ಭಾಗ್ಯಹೀನನೆಂದು ಅನಿಸುವನು. ಗಂಡಾಂತರಕ್ಕೆ ಬೆದರಿ ಎದೆಗುಂದುವವನಿಂದೇನು ಪ್ರಯೋಜನ? ಜೀವಗಳ್ಳನು ಯೋಧನಲ್ಲ. ಧೈರ್ಯವೇ ಯಶಕ್ಕೆ ಸೋಪಾನ. ಭಗವಂತನ ಹೆಸರಿನಲ್ಲಿ ನಿನ್ನ ಕೆಲಸವನ್ನು ಮುನ್ನೆಡೆಸತಕ್ಕದ್ದು”. ಶಿವಾಜಿ ಮಹಾರಾಜರು ಈ ಉಪದೆಶದೊಂದಿಗೆ ಮರಳಿದರು.

“ನಾನು ನಿನ್ನ ನಾರಾಯಣನೇ”:

ಇತ್ತ ರಾಮದಾಸರು ತಮ್ಮ ಮುಂದಿನ ಕಾರ್ಯಗಳ ಬಗ್ಗೆ ಯೋಚನೆ ಮಾಡುತ್ತಿದ್ದರು. ಗೋದಾವರಿ ತೀರದ ತಮ್ಮ ವಾಸವನ್ನು ಬಿಟ್ಟು ಕೃಷ್ಣಾತೀರಕ್ಕೆ ಬರಬೇಕು ಎಂದು ನಿರ್ಣಯಯಿಸಿದರು. ಶಿವಾಜಿಯ ಯೋಜಿತ ಸ್ವರಾಜಕ್ಕೆ ಆದಿಲಶಾಹಿಯಿಂದಲೇ ಹೆಚ್ಚು ಗಂಡಾಂತರವಿದೆ. ಆದ್ದರಿಂದ ಆದಿಲಶಾಹಿಯಿ ಪ್ರದೇಶದಲ್ಲಿಯೇ ನೆಲೆನಿಂತು ಕಾಲಕಾಲಕ್ಕೆ ಶಿವಾಜಿಗೆ ಸಲಹೆ, ಸೂಚನೆ, ಸಮಾಚಾರ ನೀಡಲು ಕೃಷ್ಣಾತೀರದಲ್ಲಿ ವಾಸಿಸಿದರೇ ಅನುಕೂಲವಾಗುವುದು ಎಂದು ಅವರು ಭಾವಿಸಿದರು.

ಈ ಯೋಜನೆಯನ್ನು ಕಾರ್ಯಗತ ಮಾಡುವ ಮೊದಲು ಜಾಂಬದಲ್ಲಿಯ ತಮ್ಮಮನೆಗೆ ಹೋಗಿ ತಾಯಿಯ ದರ್ಶನವನ್ನು ಪಡೆಯಬೇಕೆಂದು ಅವರಿಗೆ ಇಚ್ಛೆಯಾಯಿತು. ಅವರು ಜಾಂಬ್ ಗ್ರಾಮಕ್ಕೆ ಬಂದರು. ತಮ್ಮ ಮನೆಯ ಮುಂದೆ ನಿಂತು, “ಜಯ ಜಯ ರಘುವೀರ ಸಮರ್ಥ” ಎಂದು ಕೂಗು ಹಾಕಿದರು. ಅಣ್ಣ ಗಂಗಾಧರನ ಪತ್ನಿ ಭಿಕ್ಷೆ ನೀಡಲೆಂದು ಹೊರಬಂದಳೂ. ಅವಳಿಗೆ ಮೈದುನನ ಗುರುತು ಸಿಕ್ಕಲಿಲ್ಲ.

ರಾಮದಾಸರು ನಕ್ಕು ನುಡಿದರು. “ಅತ್ತಿಗೆಯಮ್ಮ ನಾನು ಭಿಕ್ಷೆ ಬೇಡಲು ಬಂದ ಭೈರಾಗಿಯಲ್ಲ. ನಾನು ನಿಮ್ಮ ನಾರಾಯಣ

ರಾಮದಾಸರ ಅತ್ತಿಗೆ ಕಣ್ಣೆತ್ತಿ ನೋಡಿದಳು. ಮೈದುನನ ಗುರುತು ಹತ್ತಿತ್ತು. ಓಡೋಡುತ್ತ ಒಳಗೆ ನಡೆದು ತನ್ನ ಅತ್ತೆಗೆ ಸಮಾಚಾರ ತಿಳಿಸಿದರು. ಮದುವೆಯ ಹಸೆಮಣೆಯಿಂದ ಪರಾರಿಯಾಗಿದ್ದ ತಮ್ಮ ಮಗ ನಾರಾಯಣ ಬಂದಿದ್ದಾನೆ ಎಂಬುವುದನ್ನು  ಕೇಳೀ ರಾಣುಬಾಯಿಗೆ ಅತ್ಯಾನಂದವಾಯಿತು. ರಾಮದಾಸರು ಒಳಗೆ ಬಂದರು. ಮಗನ ಈಗಿನ ರೂಪ ಲಕ್ಷಣಗಳನ್ನು ಕಂಡು ತಾಯಿ ಮೂಕವಿಸ್ಮಿತಳಾದಳು.

“ನಾರಾಯಣ , ನನ್ನ ನಾರಾಯಣ” ಎಂದಲ್ಲದೇ ಅವಳ ಬಾಯಿಂದ ಬೇರೆ ನುಡಿ ಬರಲಿಲ್ಲ.

“ಹೌದಮ್ಮ, ನಾನು ನಿನ್ನ ನಾರಾಯಣನೇ”.

“ಹೌದು , ನೀನು ನನ್ನ ನಾರಾಯಣನೇ ನಿಜ. ಆದರೆ ಏನಿದು ನಿನ್ನ ವೇಷ? ನಿನಗಾವ ಭೂತ ಬಡಿದುಕೊಂಡಿದೆ?”

ರಾಮದಾಸರು ತಾಯಿಯ ಪ್ರಶ್ನೆಗೆ ಗಹಿಗಹಿಸಿ ನಕ್ಕರು. ಆಮೇಲೆ, “ಆಮ್ಮಾ, ನನಗೆ ಭೂತ ಬಡಿದುಕೊಂಡದ್ದು ನಿಜ. ಎಂಥಾ ಭೂತ ಎಂದು ನೀನು ಅರಿಯೆ” ಎಂದರು. “ವೈಕುಂಠದಲ್ಲಿದ್ದ ಶಕ್ತಿ ಅಯೋಧ್ಯೆಗೆ ಬಂದಿತು. ಕೌಸಲ್ಯೆಯ ಗರ್ಭದಿ ಜನಿಸಿದ ಅದು ತಾಟಕೆಯನ್ನು ಕೊಂದಿತು” ಎಂದು ವಿಸ್ತ್ರತವಾದ ಪಧ್ಯದಲ್ಲಿ ತಮಗೆ ಪ್ರಭು ರಾಮಚಂದ್ರನೆಂಬ ಶಕ್ತಿ ಹಿಡಿದುಕೊಂಡಿದೆ ಎಂದು ತಮಾಶೆಯಾಗಿ ಹಾಡಿದರು.

ರಾಮದಾಸರ ತಾಯಿಗೆ ಮಗನ ಮಾತು ಕೇಳಿ ಆನಂದಾಶ್ರುಗಳು ಉಮ್ಮಳಿಸಿದವು. ರಾಮದಾಸರು ತಮ್ಮ ತೀರ್ಥಪರ್ಯಟನೆಯನ್ನುತಾಯಿಗೆ ವಿವರವಾಗಿ ವರ್ಣಿಸಿದರು. ಕೊನೆಗೆ,

“ಸಕಲ ಭೂಮಿಯನ್ನು ಸುತ್ತಿ ಬಂದೆ: ಧರ್ಮಗ್ಲಾನಿ ಯಾಗಿರುವುದನ್ನು ಕಂಡೆ” ಎಂದರು ರಾಮದಾಸರು.

“ಏನು ಧರ್ಮವು ಮುಳಿಗಿತೆ? ಬಹಳ ಕೆಟ್ಟದಾಯಿತು, ಬಹಳ ಕೆಟ್ಟದಾಯಿತು ” ಎಂದು ತಾಯಿ ಹಲುಬಿದಳು.

“ಈ ಕೆಟ್ಟದರಲ್ಲಿಯೇ ಒಳ್ಳೆಯದು ಹೊರ ಹೊಮ್ಮಲಿದೆ ತಾಯಿ: ಬೇಗನೇ ಹೊರಹೊಮ್ಮಲಿದೆ:”- ಸಮರ್ಥ ರಾಮದಾಸರು ಕನಸು ಕಾಣುವವರಂತೆ ನುಡಿದರು.

ಶ್ರೀರಾಮನ ದೇವಾಲಯ :

ಕೆಲವು ದಿನ ತಮ್ಮ ಮನೆಯಲ್ಲಿ ಕಳೆದ ನಂತರ ರಾಮದಾಸರು ತಮ್ಮ ಕಾರ್ಯಕ್ಷೇತ್ರವನ್ನು ಆರಿಸಿಕೊಳ್ಳಲು ದಕ್ಷಿಣಕ್ಕೆ ಸಾಗಿದರು. ಮಾರ್ಗದಲ್ಲಿ ಟಾಕಳಿ, ಮಾಹುಲಿ, ಮಹಾಬಲೇಶ್ವರ, ವಾಯಿ ಕರಾಡ್, ಮುಂತಾದ ಕಡೆಗೆ ಅಂಜನೆಯನ ಗುಡಿಗಳನ್ನು ಸ್ಥಾಪಿಸಿದರು.  ಗುಡಿಯ ಸಮ್ಮುಖದಲ್ಲಿಯೇ ಗರಡಿಮನೆಗಳೂ, ಬುದ್ಧಿವಂತನೂ ಶಕ್ತಿವಂತನೂ ಗುಣವಂತನೂ ಛಲವಂತನೂ ಆದ ಹನುಮನ ಆದರ್ಶ ಜನರೆದುರಿಗೆ ನಿತ್ಯ ಇರಲಿ ಎಂದು ರಾಮದಾಸರು ಈ ಗುಡಿಗಳನ್ನು ನೆಲೆಗೊಳಿಸಿದರು. ಸುಲಭದ ಮರಾಠಿಯಲ್ಲಿ ಮಾರುತಿರಾಯನ ಸ್ತ್ರೋತ್ರವನ್ನು ರಚಿಸಿ ಹಾಡಿದರು. ಮನೆ ಮನೆಗಳಲ್ಲಿ ಆ ಸ್ತ್ರೋತ್ರ ನಿತ್ಯ ಪಾಠದ ಮಂತ್ರವಾಯಿತು.

ಭೀಮರೂಪಿ ಮಹಾರುದ್ರಾ ವಜ್ರ ಹನುಮಾನ್ ಮಾರುತಿ!
ವನಾರಿ ಅಂಜನೀಸುತಾ ರಾಮದೂತಾ ಪ್ರಭಂಜನಾ||

ಎಂಬ ಶ್ಲೋಕದಿಂದ ಆರಂಭವಾಗುವ ಹದಿನೈದು ಶ್ಲೋಕಗಳ ಈ ಸ್ತೋತ್ರದಿಂದ ಆರಂಭವಾಗುವ ಹದಿನೈದು ಸಾತ್ವಿಕ ತೇಜವು ಬೃಹದಾಕಾರವಾಗಿ ಬೆಳೆದು ಎಸಗಿದ ಸಾಹಸದ ಕಥೆ ಮಾತ್ರವಲ್ಲ, ದೈತ್ಯ ಬುದ್ಧಿಯನ್ನು ದಮನ ಮಾಡಲು ಪ್ರಚೋದಿಸುವ ಮಹಾಮಂತ್ರವೂ ಆಗಿದೆ.

ಗುಡ್ಡ ಗಾಡಿನ ಮಡಿಲಲ್ಲಿ ಮಾಂಡ್ ನದಿ ತೀರದ ಚಾಫಳ್ ಗ್ರಾಮದಲ್ಲಿ ರಾಮದಾಸರು ನೆಲೆನಿಲ್ಲಬೇಕೆಂದು ಯೋಚಿಸಿದರು. ಗ್ರಾಮಸ್ಥರಿಗೆ, ಪ್ರಭು ರಾಮಚಂದ್ರನ ದೇವಾಲಯ ಕಟ್ಟಲೆಂದು ಸ್ಥಳವನ್ನು ಕೇಳಿದರು. ಗ್ರಾಮಸ್ಥರು ಒರಟಾಗಿ, “ಊರ ಹೊರಗಿನ ಸ್ಮಶಾನದಲ್ಲಿ ಕಟ್ಟೀರಿ ” ಎಂದರು.

ರಾಮದಾಸರು “ಸರಿ”ಎಂದರು. ಸ್ಮಶಾನದಲ್ಲಿಯೇ ಸುಂದರ ಮಂದಿರ ಕಟ್ಟುವ ಸಂಕಲ್ಪ ತೊಟ್ಟರು. ಸ್ಮಶಾನದಂತೆ ಹಾಳು ಸುರಿಯುತ್ತಲ್ಲಿದ್ದ ಪ್ರದೇಶದಲ್ಲಿ ಆನಂದವನ ಭುವನದ ಸ್ಥಾಪನೆಯ ಕನಸು ಕಂಡವನಿಗೆ,ಸುಡಗಾಡಿನಲ್ಲಿ ದೇಗುಲ ನಿರ್ಮಿಸುವುದು ಆಗದ ಮಾತೆ? ಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟಾದರು. ಕೆಲಸ ಆರಂಭವಾಯಿತು. ನೋಡು ನೋಡುವಷ್ಟರಲ್ಲಿ ದೇಗುಲ ಸಿದ್ಧವಾಯಿತು. ಅಂಗಾಪೂರದ ಹತ್ತಿರ ಕೃಷ್ಣಾ ನದಿಯ ಮಡುವಿನಲ್ಲಿ ಪ್ರಭು ರಾಮಚಂಧ್ರ ಶಿಲಾಪ್ರತಿಮೆಯನ್ನು ಶೋಧಿಸಿ ಅದನ್ನು  ಈ ದೇವಾಲಯದಲ್ಲಿ ಸ್ಥಾಪಿಸಿದರು.

ಹತ್ತಿರದಲ್ಲಿಯೇ ಪ್ರತಾಪಗಡದಲ್ಲಿ ಶಿವಾಜಿ ಮಹಾರಾಜರು ಇದ್ದರು. ಅವರ ಕಿವಿಗೆ ಈ ಸುದ್ಧಿ ತಲುಪಿತು. ಅವರು ತಾವಾಗಿಯೇ ಚಾಫಳಕ್ಕೆ ಬಂದು ರಾಮದಾಸರನ್ನು ಭೇಟಿಯಾದರು. ಈ ದೇವಾಲಯಕ್ಕೆ ಬೇಕಾದ ಸಹಾಯ ನೀಡಿದರು.

“ಶಿವಾಜಿಯನ್ನು ಉಳಿಸು :”

ಶಿವಾಜಿ ಮಹಾರಾಜರು ದಿನೇ ದಿನೇ ಪ್ರಬಲರಾಗುತ್ತ ನಡೆದಂತೆ ಸ್ವರಾಜ್ಯದ ಕಕ್ಷೆ ವಿಸ್ತೀರ್ಣವಾಗುತ್ತಿದುದನ್ನು ಕಂಡು ರಾಮದಾಸರಿಗೆ  ಹೇಳತೀರದ ಆನಂದವಾಗುತ್ತಿತ್ತು.  ಶಿವಾಜಿ ಪ್ರತಾಪಗಡದಲ್ಲಿರುವಾಗಲೇ ಆದಿಲಶಹನ ಸರದಾರ ಅಫಜಲ ಖಾನನು ಶಿವಾಜಿಯನ್ನು  ಜೀವ ಸಹಿತವಾಗಲಿ, ಕೊಂದೇ ಆಗಲಿ, ತರುವ ವೀಳ್ಯೆ ಹೊತ್ತು ಇತ್ತಕಡೆಗೆ ಸಾಗಿಬರುತ್ತಿರುವ ಸಮಾಚಾರ ರಾಮದಾಸರಿಗೆ ತಿಳಿಯಿತು. ಅಫಜಲ ಖಾನನು ದಾರಿಯಲ್ಲಿ ತುಳಜಾಪೂರ, ಪಂಢರಪೂರ, ಮುಂತಾದ ಪುಣ್ಯಕ್ಷೇತ್ರಗಳನ್ನು ಘಾಸಿಗೊಳಿಸಿದ್ದೂ ಕಿವಿಗೆ ಬಿತ್ತು. ಅಫಜಲ್ ಖಾನನ್ನು ಪ್ರಬಲ ಸೈನ್ಯದೊಂದಿಗೆ ಶಿವಾಜಿಯ ಮೇಲೆ ಎರಗಲಿದ್ದ. ಶಿವಾಜಿಯ ಪ್ರಾಣಕ್ಕೆ ಹೊಂಚು ಹಾಕಿದ ಕಾಲಯಮನಂತ ಹೊಸ್ತಿಲಲ್ಲಿ ಬಂದು ನಿಂತ ಅಫಜಲ ಖಾನ್.

ರಾಮದಾಸರಿಗೆ ಹಗಲು ರಾತ್ರಿ ಇದೇ ಚಿಂತೆ. “ಈ ಗಂಡಾಂತರದಿಂದ ಶಿವಬಾ ಹೇಗೆ ಪಾರಾದಾನು? ತುಳಜಾಭವಾನಿಯನ್ನು ಅವರು ಪ್ರಾರ್ಥಿಸಿದರು.

“ಈ ನಿನ್ನ ಶಿವಾಜಿ ರಾಜನನ್ನು ನೀನೇ ಉಳಿಸಿ, ಬೆಳೆಸಬೇಕು. ಅದನ್ನು ನೋಡುವ ಭಾಗ್ಯ ನನ್ನದಾಗಬೇಕುಕ” ಎಂದು ತಮ್ಮ ಭಕ್ತಿ-ಹಂಬಲಗಳನ್ನೆಲ್ಲ ಪ್ರಾರ್ಥನೆಯಲ್ಲಿ ಹರಸಿದರು.

ಶಿವಾಜಿಯನ್ನು ಕೊಲ್ಲಲೆಂದು ಬಂದ ಅಫಜಲ ಖಾನ್ ಶಿವಾಜಿಯಿಂದ ಹತನಾದ. ಅಫಜಲ್ ಖಾನನ ವಧೆಯೊಂದಿಗೆ  ಆದಿಲ್ ಶಾಹಿಯ ಸಿಂಹಾಸನ ಕಂಪಿಸಿತು. ಶಿವಾಜಿ ಮಹಾರಾಜರ ಶಕ್ತಿ- ಕೀರ್ತಿಗಳು ಬೆಳೆದವು.

ರಾಮದಾಸರು ಆನಂದಪರವಶವಾದರು. ಶಿವಾಜಿಯನ್ನು ಮನಃಪೂರ್ವಕ ಹರಿಸಿದರು.

ಶಿವಾಜಿ ಮಹಾರಾಜರು ವಿನೀತಭಾವದಿಂದ, “ತಮ್ಮಂಥ ಸತ್ಪುರುಷರ ಹರಕೆ, ಬೆಂಬಲ ಮತ್ತು ಸಲಹೆಯಿಂದ ಈ ವಿಜು ಪ್ರಾಪ್ತಿಯಾಯಿತು. ನಾನು ಗಳಿಸಿದ ಈ ರಾಜ್ಯ ತಮಗೆ ಸೇರಬೇಕು. ಈ ಸ್ವಾಜ್ಯವನ್ನು ತಮ್ಮ ಉಡಿಯಲ್ಲಿ ಸಮರ್ಪಿಸುತ್ತೇನೆ” ಎಂದು ಹೇಳಿದರು.

ಈ ನಿನ್ನ ಶಿವಾಜಿರಾಜನನ್ನು ನೀನೇ ಉಳಿಸಿ ಬೆಳೆಸಬೇಕು"

ಆ ಮಾತುಗಳನ್ನು ಕೇಳಿ ರಾಮದಾಸರ ಅಂತಃಕರಣ ತುಂಬಿ ಬಂತು.  ಆವರೆಂದರು: ಶಿವರಾಯ ನನಗೇನು ಮಾಡುವುದು ರಾಜ್ಯ?  ಇಷ್ಟಕ್ಕೆ ನಿನ್ನ ಕೆಲಸ ಮುಗಿಯಲಿಲ್ಲ. ಸ್ವರಾಜ್ಯದ ವಿಸ್ತಾರವಾಗಬೇಕು. ಆನಂದವನ ಭುವನ ನೆಲೆಗೊಳ್ಳಬೇಕು.  ಅದಕ್ಕಾಗಿ ನೀನು ಹೋರಾಡು. ಭಗವವಂತನ ಅನುಷ್ಠಾನವಿದ್ ಹೋರಾಟಕ್ಕೆ ವಿಜಯಶ್ರೀ ಶತಸ್ಸಿದ್ದ:.

ಶಿವಾಜಿ ಮಹಾರಾಜರು ಸಮರ್ಥ ರಾಮದಾಸರಿಗೆ ನಮಸ್ಕಾರ ಮಾಡಿದರು.

ಆನಂದವನಭುವನ:

ಅಫಜಲ್ ಖಾನನ ವಧೆ ಶಿವಾಜಿ ಮಹಾರಾಜರ ಜೀವನ ಚರಿತ್ರೆಯಲ್ಲಿ ಒಂದು ನಿರ್ಣಾಯಕ ತಿರುವು. ಇಷ್ಟು ದಿನ ಶಿವಜಿ ಎಂದರೆ ಕಿರುಕುಳವನ್ನುಂಟು ಮಾಡುವ ಬಂಡಾಯಗಾರ ಎಂದು ಮಾತ್ರ ಶತ್ರುಗಳು ಭಾವಿಸಿದ್ದರು. ಈಗ ಸ್ವಕೀಯರ ಮತ್ತು ಪರಕೀಯರ ಕಣ್ಣೂ ತೆರೆದವು. ಶಿವಾಜಿ ಮಹಾರಾಜರ ಪರಾಕ್ರಮದಿಂದಾಗಿ ಸ್ವರಾಜ್ಯದ ಸೀಮೆ ವಿಸ್ತರಿಸತೊಡಗಿತು.  ೧೬೭೪ರಲ್ಲಿ ಶಿವಪ್ರಭು ಸಿಂಹಾಸನರೋಹಣ ಮಾಡಿದರು.  ಈ ಸಮಾರಂಭ ರಾಯಗಡದಲ್ಲಿ ನೆರವೇರಿತು.  ರಾಮದಾಸರು ಸ್ವತಃ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.  ಶಿವಜಿ ಮಹಾರಾಜರು ರಾಯಗಡದಲ್ಲಿ ರಾಮದಾಸರಿಗಾಗಿ ಒಂದು ಪ್ರತ್ಯೇಕ ಕೋಣೆಯನ್ನು ಕಟ್ಟಿಸಿದರು.  ಅದನ್ನು ಈಗಲೂ ಸಹ ಅಲ್ಲಿ ನೋಡಬಹುದು.

ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ಯಾರ ವೈಯುಕ್ತಿಕ ಸಿದ್ಧಿಯೂ ಅಲ್ಲ. ಅದು ಸಮಸ್ತ ಭಾರತೀಯರ  ಆತ್ಮಾಭಿಮಾಮನದ ಸಂಕೇತ! ಅಂದು ಸಮಸ್ತ ಪ್ರಜಾಕುಲ ಆನಂದಸಾಗರದಲ್ಲಿ ಮುಳುಗಿತು.  ಸಮರ್ಥ ರಾಮದಾಸರ ಆನಂದಕ್ಕೂ ಮೇರೆಯೇ ಇರಲಿಲ್ಲ.

ಛತ್ರಪತಿ ಶಿವಾಜಿ ಮಹಾರಾಜರು ಈ ರಾಜ್ಯವನ್ನು ಅವರು ತಮ್ಮ ಕನಸಿನ ಆನಂದವನಭುವನವನ್ನಾಗಿ ಕರೆದರು.

ದಾಸಭೋಧದ ರಚನೆ:

ಚಾಫಳ ಗ್ರಾಮದಲ್ಲಿ ವಾಸಿಸುತ್ತಿದ್ದ ರಾಮದಾಸರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಸಜ್ಜನಗಡದಲ್ಲಿ ಹೋಗಿ ನೆಲೆಸುವಂತೆ ಬಿನ್ನವಿಸಿದರು. ಸಜ್ಜನಗಡವು ಸಹ್ಯಾದ್ರಿ ಪರ್ವತ ಪ್ರದೇಶದಲ್ಲಿ ಒಂದು ಸುಂದರ ತಾಣವಾಗಿದೆ. “ಗಡ” ಎಂದರೆ ಗುಡಡದ ಮೇಲೆ ಕೋಟೆ.

“ಕೋಟೆಗೆ ಹೋಗಿ ನಾನು ಮಾಡುವುದೇನು?” ರಾಮದಾಸರು ಕೇಳಿದರು.

“ಈ ಪ್ರದೇಶ ನಿಸರ್ಗ ಸುಂದರವಾಗಿದ್ದು, ತಮಗೆ ಧ್ಯಾನ ಚಿಂತನೆಗಳಿಗೆ ಪ್ರಶಸ್ತವಾಗಿದೆ. ಚಾಫಳದ ದೇವಾಲಯದಲ್ಲಿ ಯಾವ ಕುಂದು ಆಗದಂತೆ ನಾನು ವ್ಯವಸ್ಥೆ ಮಾಡುತ್ತೇನೆ. ತಾವು ಸಜ್ಜನಗಡದಲ್ಲಿ ನೆಲೆಸಬೇಕೆಂದು ನನ್ನ ಬೇಡಿಕೆ” ಶಿವಾಜಿ ಹೇಳಿದ:”

“ಸರಿ , ನಿನ್ನ ಇಷ್ಟ ದಂತೆ ಆಗಲಿ”.

ರಾಮದಾಸರು ಶಿಷ್ಯನ ಆಪೇಕ್ಷೆಯ ಮೇರೆಗೆ ಸಜ್ಜನಗಡಕ್ಕೆ ಬಂದರು.

ಸಜ್ಜನಗಡದಲ್ಲಿಯೇ ಅವರ ದಾಸಬೋಧ ಗ್ರಂಥ ಪೂರ್ತಿಯಾಯಿತು.

“ದಾಸಬೋಧ”ದಲ್ಲಿ ಸಮರ್ಥ ರಾಮದಾಸರು ಲೌಕಿಕ ಜೀವನ ಮೊದಲಗೊಂಡು  ಆದ್ಯಾತ್ಮಿಕ ಸಾಧನೆಯ ತನಕ  ವಿಷಯಗಳ ಬಗೆಗೆ ಚಿಂತನೆ ಮಾಡಿ ಖಚಿತ ಮತ್ತು ಮಾರ್ಗದರ್ಶಕ ಉಪದೇಶಗಳನ್ನು ನೀಡಿದ್ದಾರೆ. ೧)ಹರಿಕಥ ನಿರೂಪಣೆ, ೨) ರಾಜಕಾರಣ, ೩) ಅಖಂಡ ಜಾಗರೂಕತೆ ಮತ್ತು ೪) ಜೀವನ ಕೌಶಲ ಎಂಬ ನಾಲ್ಕು  ವಿಭಾಗಗಳಲ್ಲಿ ಅವರ ಉಪದೇಶಾಮೃತ ಲಭ್ಯವಾಗಿದೆ.  ಮೊದಲು ಇಲ್ಲಿಯ ಬಾಳನ್ನು ನೆಟ್ಟಗೆ ನಡೆಸಿ, ಕರ್ತವ್ಯ ಮಾಡಿ,  ಆಮೇಲೆ ವಿವೇಕಯುತರಾಗಿ ಪರದೆ ಚಿಂತನೆ ಮಾಡಿ, ಸೋಮಾರಿತನಕ್ಕೆ ಇಲ್ಲಿ ಎಡೆ ಇಲ್ಲ. ಧರ್ಮ ಸ್ಥಾಪನೆಗಾಗಿ ಹೆಣಗುವ ನರನು ಈಶ್ವರನ ಅಂಶ” ಎಂದು ಅವರು ದಾಸಬೋಧೆಯಲ್ಲಿ ಬೋಧಿಸಿದರು.

ಜ್ಯೋತಿ ನಂದಿತು :

ಕ್ರಿಸ್ತಶಕ ೧೬೮೦ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕಾಲವಾದರು. ರಾಮದಾಸರಿಗೆ ತಡೆಯಲಾಗದ ಅಘಾತವಾಯಿತು. ಸಜ್ಜನಗಡದಲ್ಲಿ ಗಾಢವಾದ ದುಃಖದ ಛಾಯೆ ಪಸರಿಸಿತು. ಶಿವಾಜಿಯ ಮರಣವನ್ನು ಸಹಿಸುವ ಶಕ್ತಿ ರಾಮದಾಸರಿಗೆ ಉಳಿಯಲಿಲ್ಲ. ಅವರ ಮನಸ್ಸು ವ್ಯಾಕುಲಗೊಂಡಿತು.

ಶಿವಾಜಿ ಮಹಾರಾಜರ ಸಾವಿನಿಂದಲೇ ದುಃಖದ ಭಾರದಿಂದ ಬಳಲಿದ ರಾಮದಾಸರಿಗೆ ಇನ್ನೂ ಚಿಂತೆ-ದುಃಖ ಗಳು ಕಾದಿದ್ದವು.

ಛತ್ರಪತಿ ಶಿವಾಜಿ ಮಹಾರಾಜರ ತರುವಾಯ ಸಿಂಹಾಸನವನ್ನು ಸಂಭಾಜಿರಾಜೆ ಭೋಸಲೆ ಏರಿದನು. ಸಂಭಾಜಿಯು ತಂದೆ ಶಿವಾಜಿಯಂತೆ ಶೂರನೇನೋ ಅಹುದು: ಆದರೆ ದುರಾಗ್ರಹಿ ಮತ್ತು ಸುಖ ಬಯಸುವವನು. ತಂದೆ ಶಿವಾಜಿ ಮಹಾರಾಜರ ಕಾಲಕ್ಕಿದ್ದ ನಂಬುಗೆಯ ಅಧಿಕಾರಿಗಳನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಸ್ವರಾಜ್ಯ ಸಂಸ್ಥಾಪನೆಗೆಂದು ತಮ್ಮ ಜೀವನವನ್ನೇ ಮುಡಿಪಿಟ್ಟ ದೇಶಪ್ರೇಮಿ ಅಧಿಕಾರಿಗಳನ್ನು ಆತ ಮನಬಂದಂತೆ ಶಿಕ್ಷಿಸಿದ.

ರಾಮದಾಸರಿಗೆ ಸಂಭಾಜಿಯ ಈ ಕಾರ್ಯಭಾರ ನೋಡಿ ಸಹಿಸುವುದಾಗಲಿಲ್ಲ. ಅವರು ಆತನಿಗೆ ಸುದೀರ್ಘವಾದ ಪತ್ರ ಬರೆದರು. ರಾಮದಾಸರ ಪತ್ರದ ಸಂಕ್ಷಿಪ್ತ ಅನುವಾದವಿದು:

“ಐಹಿಕ ಜೀವನ ಸುಖವನ್ನು ಹುಲ್ಲಿನಂತೆ ಬಗೆದು ಇಹ ಮತ್ತು ಪರದಲ್ಲಿ ಕೀರ್ತಿ ರೂಪದಿಂದ ಶಾಶ್ವತವಾಗಿ ಉಳಿಯುವಂತೆ ಬಾಳಬೇಕು. ಅಖಂಡ ಜಾಗರೂಕತೆ ಇರಬೇಕು. ಕೀಳು ಯೋಚನೆ ಕೂಡದು. ಏಕಾಂತದಲ್ಲಿ ಆಲೋಚನೆ ನಡೆಬೇಕು. ಕಠೋರತೆಯನ್ನು ಸ್ವಲ್ಪ ಕಡಿಮೆ ಮಾಡಬೇಕು. ಅಧಿಕಾರಿಗಳನ್ನು ವಿಶ್ವಾಸದಲ್ಲಿ ತೆಗೆದುಕೊಳ್ಳಬೇಕು. ಶಿವಾಜಿಯ ಸ್ಮರಣೆ ಇರಲಿ. ಶಿವಾಜಿಯ ರೂಪವನ್ನು ನೆನೆಯಿರಿ.ಶಿವಾಜಿಯ ಪ್ರತಾಪವನ್ನು ನೆನೆಯಿರಿ. ಶಿವಾಜಿಯ ಕೌಶಲವನ್ನು ನೆನೆಯಿರಿ. ಶಿವರಾಯನ ನುಡಿ  ಎಂಥದು? ಶಿವಪ್ರಭುವಿನ ನಡೆ ಎಂಥದು? ಶಿವರಾಜನ ಆತ್ಮೀಯತೆ ಎಂಥದು? ಅದಕ್ಕೂ ಮಿಗಿಲಾಗಿ ವರ್ತಿಸಿದರೆ ಹೌದೆನ್ನಬಹುದು. ಹೆಚ್ಚಿಗೇನು ಬರೆಯಲಿ?

ರಾಮದಾಸರ ಈ ಪತ್ರ ಸಂಭಾಜಿಯ ಕಣ್ಣು ತೆರೆಸಿತು. ಆತ ತನ್ನ ನಡತೆಯನ್ನು ತಿದ್ದಿಕೊಳ್ಳಳು ಯತ್ನಿಸಿದ.

ರಾಮದಾಸರ ಆರೋಗ್ಯ ಬಹಳ ಕೆಟ್ಟಿತು. ಸಜ್ಜನಗಡ ದಲ್ಲಿ ಪ್ರಭು ರಾಮಚಂದ್ರನ ಪ್ರತಿಮೆಯ ಪ್ರತಿಷ್ಠಾಪನೆಯ ಅವರ ಬಯಕೆ ಈಡೇರುವುದಿತ್ತು.  ತಂಜಾವೂರಿನಿಂದ ಶ್ರೀರಾಮನ ಸುಂದರ ಮೂರ್ತಿಯನ್ನು ತರಿಸಿದರು.  ಸಜ್ಜನಗಡದಲ್ಲಿ ಆ ಮೂರ್ತಿಯ ಪ್ರತಿಷ್ಠಾಪನೆಯಾಯಿತು. ಅವರ ಇಷ್ಟಾರ್ಥಗಳೆಲ್ಲ ಪೂರೈಸಿದ್ದವು.  ಅವರ ಚಿತ್ತವೆಲ್ಲ ಪ್ರಭು ರಾಮಚಂಧ್ರರ ಮೇಲೆ ಕೇಂದ್ರೀಕೃತವಾಗಿತ್ತು.

‘ಸದಾಸರ್ವಕಾಲ ದೇವ ತಾ ಸಮೀಪದಲಿಹನು’
ಕಾಯಕವ ಗೈಯುವವರನು ಗಮನಿಸುತಿಹನು |

ಸುಖ, ಸೌಭಾಗ್ಯ ಕೈವಲ್ಲಗಳ ದಯಪಾಲಿಸುವನವನು
ಉಪೇಕ್ಷಿಸನು ಶ್ರೀರಾಮ ಭಕ್ತರ ಅಭಿಮಾನಿ ತಾನು ||

ಎಂದು ಹಾಡುತ್ತಿದ್ದಂತೆಯೇ ರಾಮದಾಸರ ಪ್ರಾಣ ಪಕ್ಷಿ ಹಾರಿ ಹೋಯಿತು.

ರಾಮದಾಸರು ಶಾಲಿವಾಹನ ಶಕದ ೧೬೯೪ (ಕ್ರಿ.ಶ.೧೬೮೨)ನೇ ವರ್ಷದ ಮಾಘ ಬಹುಳ ನವಮಿಯಂದು ತೀರಿಹೋದರು. ಸಜ್ಜನಗಢದಲ್ಲಿ ಸಂಭಾಜಿ ಮಹಾರಾಜನು ಅವರಿಗಾಗಿ ಕಟ್ಟಿಸಿದ ಸಮಾಧಿ ಇದೆ. ಅವರು ತೀರಿದ ದಿನವನ್ನು ದಾಸನವಮಿ ಎಂದು ಆಚರಿಸಲಾಗುತ್ತಿದೆ.

ರಾಮದಾಸರ ಕಾಲಕ್ಷೇಪಗಳು, ಕೀರ್ತನೆಗಳು ಸಾವಿರಾರು, ಜನರನ್ನು ರೋಮಾಂಚನಗೊಳಿಸಿದವು. ದೇವರ ಧ್ಯಾನದ ದಿವ್ಯ ಗಂಗೆಯಲ್ಲಿ ಅವರು ಮಿಂದು ಪರಿಶುದ್ಧ ರಾದರು. ಅಷ್ಟೇ ಅಲ್ಲ, ರಾಮದಾಸರು ಅವರ ಹೃದಯದಲ್ಲಿ ಈ ಪಾಠವನ್ನು ಕೆತ್ತಿಬಿಟ್ಟರು:

“ನಿಮ್ಮ ದೇಶ, ನಿಮ್ಮ ಜನ ಮರೆತು ಮುಕ್ತಿ ಹುಡುಕಬೇಡಿ, ಪರಿಶುದ್ಧರಾಗಿ ಬಾಳಿ. ನಿಮ್ಮ ಸಂಸಾರ ದಲ್ಲಿ ನಾಡಿನಲ್ಲಿ ನಿಮ್ಮ ಕರ್ತವ್ಯ ಮಾಡಿ. ಅನಂತರ ಮುಕ್ತಿಯ ದಾರಿ ಯೋಚಿಸಿ”.