ತುಡುಕು, ತುಡುಕಾಯುಧವ ; ಮನೆಯ ಸುತ್ತಲು ಮೃತ್ಯು
ನಿಂತು ರಣಭೇರಿಯನು ಹೊಡೆಯುತ್ತಿದೆ.
ಜ್ಞಾನತೂಣೀರವನು ಹೆಗಲಿಗೇರಿಸು ; ಹತ್ತು
ಭಕ್ತಿಯ ರಥವ ; ಸಮರ ಕರೆಯುತ್ತಿದೆ !

ಪ್ರೇಮ ಗುಣವನು ಬಿಗಿದು ನಿನ್ನ ರಸನೆಯ ಧನುವಿ-
ನಿಂದ ಬಿಡು ಶ್ರೀಕಾಳಿ ನಾಮಾಸ್ತ್ರವ !
ರಥ ರಥಿಕರಲ್ಲಿರಲಿ : ಭಾಗೀರಥೀ ತೀರ-
ದಲಿ ನಿಂತು ಗೆದ್ದು ಬಾ ಈ ಸಮರವ !