ಕರ್ನಾಟಕದ ಸಮಾಜವಾದಕ್ಕೆ ಸಂಬಂಧಪಟ್ಟ ಅಧ್ಯಯನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲೆಂದು ಡಾ. ರಾಮಮನೋಹರ ಲೋಹಿಯಾ ಅಧ್ಯಯನ ಪೀಠವು ಕನ್ನಡ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗಿದೆ. ರಾಮಮನೋಹರ ಲೋಹಿಯಾ ಅವರು ಧೀಮಂತ ರಾಜಕಾರಣಿಗಳಲ್ಲಿ ಒಬ್ಬರು. ಮಾತ್ರವಲ್ಲ, ೨೦ನೇ ಶತಮಾನದ ಭಾರತದ ಪ್ರಮುಖ ಚಿಂತಕರಲ್ಲಿ ಒಬ್ಬರು ಕೂಡ. ಅವರ ಸಂಪರ್ಕವು ಕರ್ನಾಟಕಕ್ಕೆ ೧೯೫೦ರ ದಶಕದಲ್ಲಿ ಹಲವು ಚಾರಿತ್ರಿಕ ಕಾರಣಗಳಿಂದ ಒದಗಿ ಬಂದಿತು. ಮುಂದೆ ಅದೊಂದು ದೊಡ್ಡ ಪ್ರಭಾವವಾಗಿ ಕರ್ನಾಟಕದ ರಾಜಕಾರಣ, ಚಳುವಳಿ, ತಾತ್ವಿಕ ಚಿಂತನೆ ಹಾಗೂ ಸಾಹಿತ್ಯವನ್ನು ವ್ಯಾಪಿಸಿತು. ಈ ಪ್ರಭಾವವು ೨೦ನೇ ಶತಮಾನದ ಕೊನೆಯ ಅರ್ಧಭಾಗದ ಕರ್ನಾಟಕದ ರಾಜಕಾರಣ, ಚಿಂತನೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಜಗತ್ತನ್ನು ಲೋಹಿಯಾ ಅವರನ್ನು ಕೈಬಿಟ್ಟು ಚರ್ಚಿಸಲು ಸಾಧ್ಯವಿಲ್ಲ ಎಂಬಂತೆ ಆವರಿಸಿಕೊಂಡಿದೆ. ಲೋಹಿಯಾ ಪೀಠವು ಲೋಹಿಯಾವಾದಿ ಪ್ರಭಾವವನ್ನು ಒಳಗೊಂಡಂತೆ ಎಲ್ಲ ಬಗೆಯ ಸಮಾಜವಾದಿ ಚಿಂತನೆಗಳಿಗೆ ಒಂದು ವಿಶಾಲ ನೆಲೆಯ ವೇದಿಕೆ ಆಗಬೇಕೆಂಬುದು ವಿಶ್ವವಿದ್ಯಾಲಯದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅದು ಕಳೆದ ಕೆಲವು ವರ್ಷಗಳಿಂದ ಹಲವಾರು ಉಪಯುಕ್ತವಾದ ಕಮ್ಮಟಗಳನ್ನೂ ವಿಚಾರ ಸಂಕಿರಣಗಳನ್ನೂ ಹಮ್ಮಿಕೊಂಡು ಬಂದಿದೆ. ಹಲವು ಪ್ರಕಟಣೆಗಳನ್ನೂ ಮಾಡಿಕೊಂಡು ಬಂದಿದೆ. ಈ ಪರಂಪರೆಯನ್ನು ಮುಂದುವರೆಸಿ, ೨೦೦೫ – ೦೭ನೇ ಸಾಲಿನಲ್ಲಿ ಎರಡು ಬಗೆಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಯಿತು. ಅವುಗಳಲ್ಲಿ ಮೊದಲನೆಯದು ಉಪನ್ಯಾಸ ಯೋಜನೆ. ಎರಡನೆಯದು ಸಂಶೋಧನ ಯೋಜನೆ. ಈ ಯೋಜನೆಗಳನ್ನು ಕೈಗೆತ್ತಿಕೊಳ್ಳುವಲ್ಲಿ, ಪೀಠಕ್ಕೆ ಎರಡು ಮುಖ್ಯ ಆಶಯಗಳಿದ್ದವು. ೧. ಈ ಯೋಜನೆಗಳು ಕರ್ನಾಟಕ ಸಮಾಜವಾದಿ ಚಿಂತನೆ ಚಳುವಳಿ ಸಾಹಿತ್ಯ ಹಾಗೂ ರಾಜಕಾರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಚರ್ಚೆಗೆ ಬಾರದ, ಆದರೆ ತಾತ್ವಿಕವಾಗಿ ಮಹತ್ವದ ಸಂಗತಿಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು. ೨ ಈ ಯೋಜನೆಗಳು ಕರ್ನಾಟಕದ ಸಮಕಾಲೀನ ರಾಜಕೀಯ ಸಾಮಾಜಿಕ ಬದುಕಿಗೆ ಲಗತ್ತನ್ನು ಪಡೆದುಕೊಂಡು ಒಂದು ಬಗೆಯ ಚಲನಶೀಲತೆಯನ್ನು ಪ್ರೇರಿಸುವಂತಿರಬೇಕು.

ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ‘ಕರ್ನಾಟಕದಲ್ಲಿ ಹಿಂದುಳಿದ ಸಮುದಾಯಗಳ ಹೊಸ ರಾಜಕೀಯ ಸಮೀಕರಣಗಳು’ ಎಂಬ ವಿಷಯ ಕುರಿತು ೧೯.೧೦.೨೦೦೬ರಂದು ವಿಶ್ವವಿದ್ಯಾಲದ ಆವರಣದಲ್ಲಿ ಈ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಲೋಹಿಯಾ ಚಿಂತನೆಗಳನ್ನು ಅನುವಾದ ಮಾಡಿಸಿ ಸಂಪಾದಿಸಿ ಕೊಟ್ಟಿರುವ ಹಾಗೂ ಲೋಹಿಯಾ ಸಮಾಜವಾದದ ಹಿನ್ನೆಲೆಯಲ್ಲಿ ಕರ್ನಾಟಕದ ಸಾಹಿತ್ಯ ರಾಜಕಾರಣ ಸಮಾಜಗಳನ್ನು ಸೂಕ್ಷ್ಮವಾಗಿ ಸೈದ್ಧಾಂತಿಕ ಪ್ರಬುದ್ಧತೆಯಲ್ಲಿ ವಿಶ್ಞೇಷಿಸುವ ಡಾ. ನಟರಾಜ ಹುಳಿಯಾರ್ ಅವರು ಈ ಉಪನ್ಯಾಸ ನಡೆಸಿಕೊಟ್ಟರು. ಎರಡನೆಯ ಹಂತದಲ್ಲಿ ಮೂರು ಸಂಶೋಧನ ಯೋಜನೆಗಳನ್ನು ಹಂಪಿ ಪರಿಸರದ ಪ್ರತಿಭಾವಂತರೂ ಹೊಸ ತಲೆಮಾರಿನ ಲೇಖಕರೂ ಆದ ಮೂರು ಯುವಕರಿಗೆ ನೀಡಲಾಯಿತು. ಆ ಯೋಜನೆಗಳೆಂದರೆ ೧. ಸಮಾಜವಾದಿ ಚಳುವಳಿಗಾರರ ಸಂದರ್ಶನ ಸಂಪುಟ ೧ – ಬಿ. ಪೀರಬಾಷ, ೨. ಸೊಂಡೂರು ಭೂಹೋರಾಟ ಅರುಣ್ ಜೋಳದಕೂಡ್ಲಿಗಿ, ೩. ಹೆಬ್ಬಳ್ಳಿ ಭೂಹೋರಾಟ – ಡಾ ಸತೀಶ ಪಾಟೀಲ್ ಈ ಮೂರು ಯೋಜನೆಗಳು ಪೂರ್ಣಗೊಂಡು ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿವೆ.

ಪ್ರಸ್ತುತ ಸಮಾಜವಾದಿ ಹೋರಾಟಗಾರರ ಸಂದರ್ಶನ ಸಂಪುಟ ಕೃತಿಯನ್ನು ಸಿದ್ಧಪಡಿಸಿಕೊಟ್ಟಿರುವ ಬಿ.ಪೀರ್ ಬಾಷ ಅವರು ಕನ್ನಡದ ಹೊಸ ತಲೆಮಾರಿನ ಕವಿ ಹಾಗೂ ಪತ್ರಕರ್ತರು. ನಾಡಿನ ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಅನೇಕ ಲೇಖಕರನ್ನು ಹಾಗೂ ಚಳುವಳಿಗಾರರನ್ನು ಸಂದರ್ಶನ ಮಾಡಿದ ಅನುಭವವುಳ್ಳವರು. ಶ್ರೀಯುತರು ತಮಗೆ ವಹಿಸಲಾದ ಕೆಲಸವನ್ನು ಬಹಳ ಕಷ್ಟಪಟ್ಟು ಹಾಗೂ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಅವರು ಈ ಸಂಪುಟದಲ್ಲಿ ಎಂಟು ಜನ ಹೋರಾಟಗಾರರನ್ನು ಸಂದರ್ಶನ ಮಾಡಿ, ಸಂಪಾದಿಸಿ ಕೊಟ್ಟಿದ್ದಾರೆ. ಅವರು ಸಂದರ್ಶನ ಮಾಡಿರುವ ಹಿರಿಯ ತಲೆಮಾರಿನ ಹೋರಾಟಗಾರರು ಎಂಬತ್ತು ವರ್ಷದ ಆಸುಪಾಸಿನಲ್ಲಿರುವವರು. ನೇರವಾಗಿ ಲೋಹಿಯಾ ಅವರ ಜತೆ ಸಂಬಂಧವಿದ್ದವರು. ಲೋಹಿಯಾ ಅವರ ವ್ಯಕ್ತಿತ್ವದಿಂದಲೂ ವಿಚಾರಧಾರೆಯಿಂದಲೂ ಆಕರ್ಷಿತರಾಗಿ ತಮ್ಮ ಬದುಕಿನ ದೊಡ್ಡ ಭಾಗವನ್ನು ಜನಪರವಾದ ಚಳುವಳಿಗಳಲ್ಲಿ ಸವೆಸಿದವರು. ಈಗ ದೇಶದ ನಾನಾ ಭಾಗದಲ್ಲಿ ಅಜ್ಞಾತರಾಗಿ ವಾಸ ಮಾಡುತ್ತಿರುವ ಈ ಮಹನೀಯರನ್ನು ಪತ್ತೆಹಚ್ಚಿ, ಅವರಿರುವ ಕಡೆ ಹೋಗಿ ಇವರು ಭೇಟಿಯಾಗಿದ್ದಾರೆ. ಇದಕ್ಕಾಗಿ ಅವರು ದೂರದ ಮುಂಬೈನಿಂದ ಹಿಡಿದು ಯಲಬುರ್ಗ ತಾಲೂಕಿನ ಪುಟ್ಟ ಗ್ರಾಮವಾದ ಸೂಡಿಯ ತನಕ ತಿರುಗಾಡಿದ್ದಾರೆ. ಸಮಾಜವಾದಿ ಹೋರಾಟಗಾರರು ತಮ್ಮ ನೆನಪನ್ನು ಮರುಕೊಳಿಸಿಕೊಳ್ಳುವಂತೆ ಮಾಡಿ ಅವರ ಅನುಭವ ಮತ್ತು ಚಿಂತನೆಗಳನ್ನು ಸಂದರ್ಶನಗಳಲ್ಲಿ ಸಂಗ್ರಹ ಮಾಡಿದ್ದಾರೆ. ತೀವ್ರ ಆದರ್ಶವಾದಿಗಳಾದ ಈ ಹೋರಾಟಗಾರರನ್ನು ರಾಜಕೀಯ ಪ್ರಜ್ಞೆಯ ಕೆಣಕು ಪ್ರಶ್ನೆಗಳ ಮೂಲಕ ಚರ್ಚೆಗೆ ಎಳೆದು ಅವರ ಚಿಂತನೆಯನ್ನು ಪಡೆದಿದ್ದಾರೆ. ತಮ್ಮ ಸಂದರ್ಶನಗಳಿಗೆ ವಿಸ್ತಾರವಾದ ಪ್ರಾಸ್ತಾವನೆಯನ್ನು ಬರೆದು ಸಮಾಜವಾದಿ ರಾಜಕಾರಣ ಹಾಗೂ ಚಳುವಳಿಗಳ ಬಗ್ಗೆ ಒಂದು ಚಾರಿತ್ರಿಕ ನೋಟವನ್ನು ಒದಗಿಸಿದ್ದಾರೆ. ಅಪರೂಪದ ಫೋಟೊಗಳನ್ನು ಒದಗಿಸಿದ್ದಾರೆ. ಪರಿಚಯಾತ್ಮಕ ಟಿಪ್ಪಣಿಗಳನ್ನು ಒದಗಿಸಿದ್ದಾರೆ. ಒಟ್ಟಿನಲ್ಲಿ ಈ ಕೃತಿಯು ಕರ್ನಾಟಕದ ಆಧುನಿಕ ರಾಜಕೀಯ ಚರಿತ್ರೆಯ ಒಂದು ಮರೆಯಾದ ಮುಖವನ್ನು ಅನಾವರಣ ಮಾಡುತ್ತದೆ ಎನ್ನಬಹುದು. ಇಂತಹದೊಂದು ಉಪಯುಕ್ತವಾದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟಿದ್ದಕ್ಕಾಗಿ ಪೀರಬಾಷ ಅವರನ್ನು ಪೀಠದ ಪರವಾಗಿ ಅಭಿನಂದಿಸುತ್ತೇನೆ. ಈ ಕೃತಿಯು ಕರ್ನಾಟಕದ ಚರಿತ್ರೆ, ರಾಜಕಾರಣ ಹಾಗೂ ಚಳವಳಿಗಳ ಅಧ್ಯಯನದಲ್ಲಿ ಒಂದು ಆಕರಗ್ರಂಥವಾಗಿ ಬಳಕೆಯಾಗುವುದು ಎಂದು ಭಾವಿಸುತ್ತೇನೆ.

ಇಲ್ಲಿನ ಸಂದರ್ಶನಗಳ ವಿಶಿಷ್ಟತೆಯೆಂದರೆ, ಇಲ್ಲಿ ಬರುವ ನಿರ್ದಿಷ್ಟ ವ್ಯಕ್ತಿಯ ಅಥವಾ ಪಕ್ಷದ ಕಥೆಯು ಹಲವು ವ್ಯಕ್ತಿಗಳ ಹಲವು ಪಕ್ಷಗಳ ಕಥೆಯಾಗಿ ಸಂಕೀರ್ಣವಾಗಿ ಹೆಣೆದುಕೊಳ್ಳುವುದು. ಈ ಅರ್ಥದಲ್ಲಿ ಇದು ಭಾರತದ ರಾಜಕಾರಣ, ಚಳುವಳಿ ಹೋರಾಟಗಳ ಪರಿಮಿತಿ ಹಾಗೂ ಸಾಧನೆಗಳನ್ನು ಸಾದರಪಡಿಸುವ ಕೃತಿಯಾಗಿದೆ. ಇಲ್ಲಿ ಬರುವ ಏಕೈಕ ಮಹಿಳೆಯೆಂದರೆ ಪೊನ್ನಮ್ಮಾಳ್ ಅವರು. ಲೋಹಿಯಾ ಯಾವಾಗಲೂ ಭಾರತದ ಅರ್ಧದಷ್ಟು ಜನಸಂಖ್ಯೆ ಇರುವ ಮಹಿಳೆಯ ಚೈತನ್ಯವು ಹೇಗೆ ಭಾರತದ ಜಾತಿ ಮತ್ತು ಪುರುಷ ಪ್ರಧಾನ ವ್ಯವಸ್ಥೆಯು ನಾಶ ಮಾಡಿದೆ ಎಂದು ಚಿಂತನೆ ಮಾಡಿದವರು. ವ್ಯಂಗ್ಯವೆಂದರೆ ಕರ್ನಾಟಕದ ಸಮಾಜವಾದಿ ಚಳುವಳಿಯಲ್ಲಿ ಮಹಿಳೆಯರ ಸಂಖ್ಯೆಯೇ ಕಡಿಮೆ. ಸಿನಿಮಾ ನಟಿಯಾಗಿದ್ದ ಸ್ನೇಹಲತಾ ರೆಡ್ಡಿ, ಅಂತಹವರಲ್ಲಿ ಒಬ್ಬರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲುವಾಸ ಅನುಭವಿಸಿ ಅವರು ನಂತರ ಆರೋಗ್ಯ ಬಿಗಡಾಯಿಸಿ ಬೇಗನೆ ತೀರಿಕೊಂಡರು. ಪೊನ್ನಮ್ಮಾಳ್ ಈಗಲೂ ಗಟ್ಟಿಮುಟ್ಟಾಗಿದ್ದಾರೆ ಹಾಗೂ ತಮ್ಮ ಚಿಂತನೆಯನ್ನು ಪ್ರಖರವಾಗಿ ಇರಿಸಿಕೊಂಡಿದ್ದಾರೆ. ಈಗಲೂ ರಾಜಕೀಯ ಕ್ರಿಯಾಶೀಲತೆಯನ್ನು ಇಟ್ಟುಕೊಂಡವರಲ್ಲಿ ಒಬ್ಬರಾಗಿದ್ದಾರೆ. ಒಬ್ಬ ಹೋರಾಟಗಾರ್ತಿಯು ಹೆಣ್ಣದ ಕಾರಣದಿಂದಲೇ ಪ್ರಕಟಿಸುವ ಸಂವೇದನೆಗಳು ಎಂತಹವು, ಅವು ನಮ್ಮ ಗಂಡಸರೇ ಪ್ರಧಾನವಾಗಿರುವ ರಾಜಕೀಯ ಸಂಸ್ಕೃತಿಯಲ್ಲಿ ಹೇಗೆ ವಿಶಿಷ್ಟವಾಗಿರಬಲ್ಲವು ಎಂಬುದನ್ನು ಅವರ ಸಂದರ್ಶನ ಸೂಚಿಸುತ್ತದೆ. ಇಲ್ಲಿನ ಸಂದರ್ಶನಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಕ್ಕೆ ಬರುವ ಮುಖ್ಯ ವಿಷಯಗಳೆಂದರೆ ತುರ್ತು ಪರಿಸ್ಥಿತಿ, ಸಮಾವಾದಿ ಚಳುವಳಿಯ ಅಧಃಪತನ, ದೇವರಾಜ ಅರಸರ ಭೂಸುಧಾರಣೆ, ನಕ್ಸಲೈಟ್ ಚಳುವಳಿ, ಕೋಮುವಾದ ಹಾಗೂ ಜಾಗತೀಕರಣ. ಇವು ಕಳೆದ ಐವತ್ತು ವರುಷಗಳಲ್ಲಿ ಕರ್ನಾಟಕದ ರಾಜಕೀಯ ಆರ್ಥಿಕ ಬದುಕಿನಲ್ಲಿ ಅನೇಕ ಬಗೆಯ ಚಲನಶೀಲತೆ, ಪ್ರತಿರೋಧ, ಆತಂಕಗಳನ್ನು ಸೃಷ್ಟಿಸಿರುವ ವಿದ್ಯಮಾನಗಳಾಗಿವೆ. ಈ ವಿದ್ಯಮಾನಗಳ ಬಗೆಗಿನ ಚಿಂತನೆಯ ಕೃತಿಯಾಗಿದೆ. ೩. ಇಲ್ಲಿನ ಚಳುವಳಿಗಾರರು ಸಕ್ರಿಯ ರಾಜಕಾರಣಕ್ಕಿಂತಲೂ ಚಳುವಳಿಗಳಲ್ಲಿ ಇದ್ದವರು. ಲೋಹಿಯಾ ಅವರ ಚಿಂತನೆ ಹಾಗೂ ಪ್ರಭಾವಶಾಲಿಯಾದ ಅವರ ವ್ಯಕ್ತಿತ್ವದಿಂದ ಪ್ರಭಾವಿತರಾದವರು. ಗಾಂಧಿವಾದಿಗಳು ಕೂಡ. ಹೀಗಾಗಿ ಒಂದು ಬಗೆಯ ಆದರ್ಶವೂ ನೈತಿಕವೂ ಆದ ವ್ಯಕ್ತಿತ್ವವನ್ನು ಉಳಿಸಿಕೊಂಡವರು. ಇದರಿಂದ ಗತಕಾಲದ ಹಾಗೂ ಸಮಕಾಲೀನವಾದ ರಾಜಕಾರಣದ ಮೇಲೆ, ಕೆಲವು ಸಂಘಟನೆ, ಪಕ್ಷ ಹಾಗೂ ವ್ಯಕ್ತಿಗಳ ಮೇಲೆ ನೈತಿಕ ಆಕ್ರೋಶದಿಂದಲೂ ಮುಕ್ತವಾಗಿಯೂ ದಿಟ್ಟವಾಗಿಯೂ ಮಾತನಾಡಿದ್ದಾರೆ. ಅವರ ಚಿಂತನೆ ಹಾಗೂ ಅಭಿಪ್ರಾಯಗಳು ಅವರ ಸ್ವಂತದವು. ವಿಶ್ವವಿದ್ಯಾಲಯದವಲ್ಲ. ಅವನ್ನು ಓದುಗರು ಒಂದು ಚಾರಿತ್ರಿಕ ಸಂದರ್ಭದಲ್ಲಿ ಇಟ್ಟುಕೊಂಡು ಓದಬೇಕೆಂದು ಕೋರಿದೆ.

ಈ ಸಂಪುಟದ ಮುಂದುವರಿಕೆಯಾಗಿ ಎರಡನೆಯ ಸಂಪುಟವನ್ನು ತರುವ ಉದ್ದೇಶವೂ ಪೀಠಕ್ಕೆ ಇದೆ. ಇದರಲ್ಲಿ ಕರ್ನಾಟಕದ ಸಮಾಜವಾದಿ ಚಳುವಳಿಯ ಎರಡು ಮತ್ತು ಮೂರನೆಯ ತಲೆಮಾರಿಗೆ ಸೇರಿದ, ಜಾರ್ಜ್ ಫರ್ನಾಂಡಿಸ್, ಯು. ಆರ್. ಅನಂತಮೂರ್ತಿ, ಕೆ. ರಾಮದಾಸ್, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ, ದೇವನೂರ ಮಹಾದೇವ, ಚಂಪಾ, ರಾಜಶೇಖರ ಕೋಟಿ, ಕಾಳೇಗೌಡ ನಾಗವಾರ, ಎಂ. ಪಿ. ಪ್ರಕಾಶ್, ಬಾಬುರೆಡ್ಡಿ ತುಂಗಳ್, ರವಿವರ್ಮ ಕುಮಾರ್, ಡಿ.ಎಸ್. ನಾಗಭೂಷಣ ಮುಂತಾದವರ ಸಂದರ್ಶನಗಳನ್ನು ಅಳವಡಿಸಬಹುದು. ಈಗ ನಮ್ಮ ಜತೆಯಿಲ್ಲದ ಕೆ.ವಿ.ಸುಬ್ಬಣ್ಣ, ಪಿ. ಲಂಕೇಶ, ಪೂರ್ಣಚಂದ್ರ ತೇಜಸ್ವಿ, ಎಂ. ನಂಜುಂಡಸ್ವಾಮಿ, ಕೆ.ಎಂ.ಶಂಕರಪ್ಪ, ಸುಂದರೇಶ್, ಸದಾಶಿವರಾವ್, ಜೆ.ಎಚ್. ಪಟೇಲ್, ಎಸ್.ಎಸ್. ಕುಮುಟ, ಎಲಿಗಾರ ತಿಮ್ಮಪ್ಪ, ಯಜಮಾನ್ ಶಾಂತರುದ್ರಪ್ಪ, ಖಾದ್ರಿಶಾಮಣ್ಣ, ಗರುಡಶರ್ಮ, ಎಸ್. ವೆಂಕಟರಾಂ, ಶ್ರೀ ಪದಕಿ ಮುಂತಾದವರ ಜೀವನ, ಹೋರಾಟ, ಚಿಂತನೆಗಳನ್ನು ಕುರಿತ ಲೇಖನಗಳನ್ನು ಒಳಗೊಂಡ ಸಂಪುಟವನ್ನು ತರಬಹುದು. ಈ ಸಂಪುಟಗಳು ಪೀಠದ ವತಿಯಿಂದ ಈಗಾಗಲೇ ಶಾಂತವೇರಿ ಗೋಪಾಲಗೌಡರನ್ನು ಕುರಿತು ತಂದಿರುವ ಕೃತಿಯ ಮುಂದುವರಿಕೆ ಆಗಿರುತ್ತದೆ.

ಲೋಹಿಯಾ ಪೀಠದ ಯೋಜನೆಗಳ ಹಿಂದೆ ಆಡಳಿತಾತ್ಮಕವಾಗಿಯೂ ಸೈದ್ಧಾಂತಿಕವಾಗಿಯೂ ಬೆಂಬಲವಾಗಿ ನಿಂತವರು. ಮಾನ್ಯ ಕುಲಪತಿಯವರಾದ ಡಾ. ಬಿ.ಎ.ವಿವೇಕ ರೈ ಅವರು. ಸಮಾಜವಾದಿ ಹಿನ್ನೆಲೆಯ ಅವರು ಪೀಠದ ಯೋಜನೆಗಳನ್ನು ರೂಪಿಸಲು ಬೇಕಾದ ಎಲ್ಲ ಮಾರ್ಗದರ್ಶನವನ್ನು ನೀಡಿದರು. ಅವರ ವಿಶ್ವಾಸ ಹಾಗೂ ಬೌದ್ಧಿಕ ನೆರವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಪ್ರಸ್ತುತ ಸಂದರ್ಶನ ಸಂಪುಟವು ಹೀಗೆ ಉಪಯುಕ್ತವಾಗಿ ರೂಪುಗೊಳ್ಳಲು ಕಾರಣಕರ್ತರಾದವರು ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ. ಕಾಳೇಗೌಡ ನಾಗವಾರ ಹಾಗೂ ಪ್ರೊ. ಕೆ. ಫಣಿರಾಜ ಅವರ. ಅದರಲ್ಲೂ ಫಣಿರಾಜ್ ಅವರು ಮೂರು ದಿನಗಳ ಕಾಲ ಸಂದರ್ಶಕರಾದ ಪೀರಬಾಷ ಅವರನ್ನು ಜತೆಗೆ ಕುಳ್ಳಿರಿಸಿಕೊಂಡು, ಇಡೀ ಹಸ್ತಪ್ರತಿಯನ್ನು ಓದಿ ಚರ್ಚಿಸಿ ಸೂಕ್ತ ಸೂಚನೆಗಳನ್ನು ನೀಡಿದರು. ಈ ಇಬ್ಬರು ಚಿಂತಕರ ನೆರವನ್ನು ಇಲ್ಲಿ ನೆನೆಯುತ್ತೇನೆ. ಈ ಪುಸ್ತಕದ ಅಕ್ಷರಜೋಡಣೆ ಮಾಡದವರು ಹೊಸಪೇಟೆಯ ಯಾಜಿ ಗ್ರಾಫಿಕ್ಸನ ಸವಿತಾ ಯಾಜಿ ಅವರು. ಪುಟವಿನ್ಯಾಸವನ್ನೂ ಮುಖಪುಟವನ್ನೂ ನಮ್ಮ ಪ್ರಸಾರಾಂದದ ಶ್ರೀ ಸುಜ್ಞಾನಮೂರ್ತಿ ಹಾಗೂ ಮಕಾಲಿ ಅವರು ಮಾಡಿದ್ದಾರೆ. ಈ ಪುಸ್ತಕವನ್ನು ಪ್ರೀತಿಯಿಂದಲೂ ವಿಶ್ವಾಸದಿಂದಲೂ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಸುಂದರವಾಗಿ ಪ್ರಕಟಿಸುತ್ತಿದ್ದಾರೆ. ಇವರೆಲ್ಲರನ್ನು ಗೌರವದಿಂದ ನೆನೆಯುತ್ತೇನೆ. ಈ ಪುಸ್ತಕವನ್ನು ಪ್ರೀತಿಯಿಂದ ಬರಮಾಡಿಕೊಳ್ಳಬೇಕು ಎಂದು ಓದುಗರಲ್ಲಿ ವಿನಂತಿಸುತ್ತೇನೆ.

ರಹಮತ್ ತರೀಕೆರೆ