ಸರದಾರರ ಸಿರಿಯೆದಿರು

ಕರ್ನಾಟಕದಲ್ಲಿ ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿ ಆರಂಭವಾಗುತ್ತಲೇ ಗದಗ ಹಾಗೂ ತೀರ್ಥಹಳ್ಳಿಗಳಲ್ಲಿ ನಡೆದ ರೈತ ಸಮಾವೇಶಗಳು ಸಮಾಜವಾದಿಗಳು ಕರ್ನಾಟಕದಲ್ಲಿ ಸಂಘಟಿಸಿದ ಮೊದಲ ವರ್ಗ ಸಮಾವೇಶಗಳಾಗಿದ್ದವು. ಗರಗ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತೀವ್ರವಾಗಿ ಪಾಲ್ಗೊಂಡು ಪೋಲೀಸ್ ಕಾರ್ಯಚರಣೆಯನ್ನು ಎದುರಿಸಿದ ಇತಿಹಾಸವನ್ನು ಹೊಂದಿತ್ತು. ಗರಗ ಹಾಗೂ ಸುತ್ತಲಿನ ಗ್ರಾಮಗಳಾದ ಮುಮ್ಮಿಗಟ್ಟಿ, ತಡಕೋಡ, ಉಪ್ಪಿನಬೆಟಗೇರಿ, ಹಂಗರಕಿ ಗ್ರಾಮಗಳ ರೈತರು ಗರಗದಲ್ಲಿ ಸಮಾವೇಶಗೊಂಡಿದ್ದರು. ಈ ಸಮಾವೇಶ ಜಮೀನ್ದಾರ – ಕಾಂಗ್ರೆಸ್ಸಿಗರನ್ನು ಸಹಜವಾಗಿಯೇ ಬೆಚ್ಚಿ ಬೀಳಿಸಿತ್ತು.

ಜಮೀನ್ದಾರರಾಗಿದ್ದ ‘ಸರ್ದಾರ ವೀರನಗೌಡ’ ಆ ಹೊತ್ತಿಗೆ ಕಾಂಗ್ರೆಸ್ಸಿನ ಕಿಸಾನ್ ಸೆಲನ ಮುಖಂಡರಾಗಿದ್ದರು. ಹೇಗಾದರೂ ಮಾಡಿ ಸಮಾಜವಾದಿಗಳ – ರೈತ ಸಮಾವೇಶವನ್ನು ಕೆಡಿಸಬೇಕೆಂಬ ಉದ್ದೇಶದಿಂದ ವೇದಿಕೆಗೆ ನುಗ್ಗಿ “ಕಾಂಗ್ರೆಸ್ ಕಿಸಾನ್ ಸೆಲನ ತಮ್ಮನ್ನು ಉಪೇಕ್ಷಿಸಿ ಈ ಸಮಾವೇಶ ನಡೆಸಲಾಗುತ್ತಿದೆ ಎಂಬ ನೆಪದಿಂದ ಸಮಾವೇಶ ತಡೆಯುವ ಪ್ರಯತ್ನ ಮಾಡಿದ್ದರು. ಅಂತೆಯೇ ಕಲಹವೇರ್ಪಟ್ಟು ತಳ್ಳಿಸಿಕೊಂಡು ನಿರ್ಗಮಿಸಿದ್ದರು.

ಈ ಘಟನೆ, ವರ್ಗ ಸಂಘಟನೆಯು ಸೃಷ್ಟಿಸುವ ‘ಸಂಘರ್ಷ’ದ ಆರಂಭಿಕ ಸ್ವರೂಪವನ್ನು ಸ್ಪಷ್ಟವಾಗಿ ವ್ಯಕ್ತಗೊಳಿಸುತ್ತದೆ. ಸಮಾಜವಾದಿ ಪಕ್ಷವು ಹುಬ್ಬಳ್ಳಿ ಪ್ರಾಂತದಲ್ಲಿ ಮೊದಲ ಮೂರು ವರ್ಷಗಳಲ್ಲಿ ಗಮನಾರ್ಹವಾಗಿ ರೈತ ಕಾರ್ಮಿಕ ವರ್ಗಗಳನ್ನು ಸಂಘಟಿಸಿ, ಚಳವಳಿ ನಿರ್ಮಾಣದ ಗಟ್ಟಿ ಲಕ್ಷಣಗಳನ್ನು ಮೂಡಿಸಿದ್ದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ನೀಲಗಂಗಯ್ಯ ಪೂಜಾರ, ಕೆ.ಎಸ್. ಕಾರಂತ, ಅಮ್ಮೆಂಬಳ ಆನಂದ ಮತ್ತು ಅವರ ಸಂಗಾತಿಗಳು ರೂಪಿಸಿದ್ದ ಚಳವಳಿ ಸ್ಪಷ್ಟವಾಗಿ ಕಾಂಗ್ರೆಸ್ ಮತ್ತು ಸಮಾಜವಾದಿಗಳು ಪ್ರತಿನಿಧಿಸಿದ್ದ ಭಿನ್ನವರ್ಗ ನೆಲೆಗಳನ್ನೂ, ಅವುಗಳ ಮುಖಾಮುಖಿಯ ಸ್ವರೂಪವನ್ನೂ ಕಾಣಿಸುತ್ತದೆ. ಜಮೀನ್ದಾರಿಕೆ ವಿರುದ್ಧ ರೈತರನ್ನು, ಮಾಲಕರ ವಿರುದ್ಧ ಬೀಡಿ ಕಾರ್ಮಿಕರನ್ನು, ಹೊಟೇಲ್ ಕಾರ್ಮಿಕ, ಸಾರಿಗೆ ಕಾರ್ಮಿಕ ಮತ್ತು ಪೌರ ಕಾರ್ಮಿಕರನ್ನು ಸಂಘಟಿಸುವ ಸಮಾಜವಾದಿಗಳು ಎದುರಿಸುವುದು ಮಾಲಕರ ಸ್ಥಾನದಲ್ಲಿದ್ದ ಕಾಂಗ್ರೆಸ್ಸಿಗರನ್ನು, ಬೀಡಿ ಕಾರ್ಮಿಕರ ಪ್ರಕರಣದಲ್ಲಿ ಬೀಡಿ ಮಾಲಕರ ಪರವಾಗಿ ವಾದಿಸುವ ‘ತಂಬಾಕದ ವಕೀಲ್ರು’ ಕಾಂಗ್ರೆಸ್ಸಿಗರು, ನಂತರ ಇವರು ಶಾಸಕರೂ ಆಗುತ್ತಾರೆ. ರೈತ ಸಮಾವೇಶ ವಿರೋಧಿಸಿ ಕಾರಂತರನ್ನು ಕಾಂಗ್ರೆಸಗೆ ಸೆಳೆಯಲು ಆಮಿಷ ಒಡ್ಡೆದ ಜಮೀನ್ದಾರ ಸರ್ದಾರ ವೀರನಗೌಡರು ಕಾಂಗ್ರೆಸ್ ಪ್ರಮುಖರು. ಪೌರ ಕಾರ್ಮಿಕರ ಹೋರಾಟವನ್ನು ಸಂಘಟಿಸಿದವರು ಸಮಾಜವಾದಿಗಳಾದರೆ, ಇವರ ಹೋರಾಟ ಮುರಿಯಕಬೇಕೆಂದು ಮುಷ್ಕರದ ಕಾಲಕ್ಕೆ, ಕಕ್ಕಸ್ಸುಗಳನ್ನು ಬಳಿಯಲಿಕ್ಕೂ ಮುಂದಾದ ನರಸಿಂಹ ದಾಬಡೆ ಕಾಂಗ್ರೆಸ್ಸಿಗರು ಕೆ.ಸಿ.ಸಿ.ಬ್ಯಾಂಕ್ ಮೂಲಕ ಪ್ರತಿ ಗ್ರಾಮದ ಸಹಕಾರಿ ಸಂಘಗಳ ಮೇಲೆ ಹಿಡಿತವಿಟ್ಟುಕೊಂಡಿದ್ದ ಶ್ರೀಮಂತ – ಜಮೀನ್ದಾರರಾದ ಇನಾಮತಿಯವರು ಕಾಂಗ್ರೆಸ್ಸಿಗರು ಇವರ ವಿರುದ್ಧ ಸ್ಪರ್ಧಿಸಿ ಗೆದ್ದ ನೀಲಗಂಗಯ್ಯ ಪೂಜಾರ ಸಮಾಜವಾದಿಗಳು.

ನೀಲಗಂಗಯ್ಯ ಪೂಜಾರರ ಗಮನ ನಿರಂತರವಾಗಿ ಜಮೀನ್ದಾರಿ ಪದ್ಧತಿಯ ವಿರುದ್ಧವಿದ್ದುದು ಅವರ ಸಂದರ್ಶನದಲ್ಲಿ ಕಂಡುಬರುತ್ತದೆ. ಮಮ್ಮಿಗಟ್ಟಿ ದೇಸಾಯಿ, ಸರ್ದಾರ ವೀರನಗೌಡ, ಸರ್ದಾರ್ ವಿಂಚೂರಕರ, ನಾಡಗೀರರು, ಇನಾಮತಿಯವರು, ಹೆಬ್ಬಳ್ಳಿ ಜಾಗೀರದಾರರು… ಮೊದಲಾದ ಭೂಮಾಲಕರೊಟ್ಟಿಗಿನ ಸಂಘರ್ಷದ ಅನುಭವ ಇವರನ್ನು ಕೊನೆವರೆಗೂ ಭೂರಹಿತ ಪರ ಹೋರಾಟಗಾರನನ್ನಾಗಿಸಿತು. ಈ ಎಲ್ಲ ಜಮೀನುದಾರರೂ ಕಾಂಗ್ರೆಸ್ಸಿಗರೇ ಆಗಿದ್ದನ್ನು ಗಮನಿಸಬೇಕು. ಸಮಾಜವಾದಿ ಪೂಜಾರರ ರಾಜಕೀಯ ಸಂಘರ್ಷದ ಹಿಂದಿನ ವರ್ಗ ಸ್ವರೂಪಗಳನ್ನು ಗಮನಿಸಿದಾಗ ‘ಭೂರಹಿತ – ವಸತಿ ರಹಿತರ’ ಕುರಿತಾದ ಅವರ ನೈಜ ಕಾಳಜಿ ಎದ್ದು ಕಾಣುತ್ತದೆ. ಜಮೀನ್ದಾರಿಕೆ ವಿರುದ್ಧದ ಪೂಜಾರರಿಗೆ ತಳಹದಿ ಹಾಕಿಕೊಟ್ಟಿದ್ದೇ ಗರಗದ ರೈತ ಸಮಾವೇಶ. ಆ ಮೂಲಕ ಸರ್ದಾರ್ ವೀರನಗೌಡರನ್ನು ಗರಬಡಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಸರ್ದಾರ್ ವಿಂಚೂರಕರ್ ಅವರಿಂದ ಹಜಾಮನೆಂದು ನಿಂದನೆಗೆ ಒಳಗಾಗಿದ್ದ ಭಾವುಸಾಹೆಬ್ ಹೀರೆಯವರ ಸಾಂಗತ್ಯ ಬೆಳೆಸುತ್ತದೆ. ಪೂಜಾರ್ ಹಾಗೂ ಹೀರೆ ಇಬ್ಬರೂ ಎದುರಿಸಿದ್ದು ಸರ್ದಾರರನ್ನೇ. ಮುಂಬೈ ಕುರಿತಾದ ವಿವಾದದಲ್ಲಿ ಪೂಜಾರರು ಹೀರೆಯವರ ನಿಲುವನ್ನು ಬೆಂಬಲಿಸಿದ್ದು, ಅವರ ಆತ್ಮೀಯತೆಗೆ ಇಂಬು ನೀಡಿರುವುದಾದರೂ, ಮುಂಬೈ ಸರಕಾರದಲ್ಲಿ ಮಂತ್ರಿಗಳಾಗಿ, ಕಾನೂನು ರಚಿಸಿ ಆ ಮೂಲಕ ಜಮೀನ್ದಾರಿಕೆಯ ನಾಶಕ್ಕೆ ಮುಂದಾದ ಹೀರೆಯವರ ಧೋರಣೆಯೂ ಪೂಜಾರರ ನಿಲುವಿಗೆ ಪೂರಕವಾಗೇ ಇತ್ತು. ಈ ಸಮಾನ ಆಶಯಗಳಿಂದಾಗಿಯೇ ಮುಂಬೈ ಸರಕಾರದಲ್ಲಿ ಕಂದಾಯ ಮಂತ್ರಿಗಳಾಗಿದ್ದ ಹೀರೆಯವರು ಕೊಟ್ಟ ಸುಳಿವಿನ ಮೂಲಕ ಹೆಬ್ಬಳ್ಳಿ ಜಾಗೀರುದಾರಿಕೆ ವಿರುದ್ಧ ಪೂಜಾರರು ಹೋರಾಟ ನಡೆಸಿ ಭೂರಹಿತ ಗೇಣಿದಾರರು ಭೂಮಿ ಪಡೆಯುವಂತಾಯಿತು. ಈ ‘ಭೂವಿಕಾರಣ’ವೇ ಪೂಜಾರರನ್ನು ೮೦ರ ದಶಕದಲ್ಲಿ ನಿವೇಶನರಹಿತ ಆಂದೋಲನ ಸಂಘಟಿಸಲು ಪ್ರೇರೇಪಿಸುತ್ತದೆ.

೧೯೪೬ರಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷ ಸ್ಥಾಪನೆಯಾದ ಮರು ವರ್ಷವೇ ನಡೆದ ‘ಗರಗ’ದ ಸಮಾವೇಶದಲ್ಲಿ ಭಾಗವಹಿಸಿದ್ದು ನೂರಿನ್ನೂರು ಜನ. ಆ ಸಮಾವೇಶ ನಂತರ ಏನನ್ನು ಸಾಧಿಸಿತು ಎಂಬುದಕ್ಕೆ ೫೮ರಲ್ಲಿ ಹೆಬ್ಬಳ್ಳಿ ಹೋರಾಟ ಬಿಟ್ಟರೆ ಆ ನಡುವಿನ ಯಾವ ಬೆಳವಣಿಗೆಗಳು ಕಂಡುಬರುವುದಿಲ್ಲ. ಹಿಂದ್ ಕಿಸಾನ್ ಪಂಚಾಯತ್ ಬಹುತೇಕ ಮಿಂಚಿಮರೆಯಾಯಿತೆನ್ನಬೇಕು. ಗರಗದ ಸಮಾವೇಶದಲ್ಲಾದ ಚರ್ಚೆಗಳಾಗಲಿ, ಅದು ತೆಗೆದುಕೊಂಡ ತೀರ್ಮಾನಗಳಾಗಲಿ ಮುಂದಿನ ದಿನಗಳಲ್ಲಿ ರೈತ ಹೋರಾಟಗಳನ್ನು ಹುಟ್ಟು ಹಾಕುವುದಿಲ್ಲ. ಹಾಗಾಗಿ ಗರಗದ ಸಮಾವೇಶ ಆಗಿಹೋದ ಘಟನೆಯಾಗುತ್ತದೆ ಹೊರತು ಸಮಾಜವಾದೀ ರೈತ ಹೋರಾಟಗಳಿಗೆ ಪ್ರೇರಕ ಶಕ್ತಿಯಾಗುವುದಿಲ್ಲ. ಈ ಸಮಾವೇಶ ಸಂಘಟನೆಗೆ ಕರ್ನಾಟಕದ ಸಮಾಜವಾದಿ ನೇತಾರರಲ್ಲಿ ಒಬ್ಬರಾದ ಗರುಡ ಶರ್ಮರು ಬೆಂಗಾವಲಾಗಿದ್ದರು. ೧೯೫೮ರಲ್ಲಿ ನೀಲಗಂಗಯ್ಯ ಪೂಜಾರರು ‘ಹೆಬ್ಬಳ್ಳಿ’ಯಲ್ಲಿ ಜಾಗೀರು ಜಮೀನನ್ನು ಹೋರಾಟದ ಮೂಲಕ ಉಳುವವರಿಗೆ ಕೊಡಿಸುತ್ತಾರಾದರೂ ಬಹುತೇಕ ಅದು ಅವರ ವೈಯಕ್ತಿಕ ಆಸಕ್ತಿಯಾಗಿಯೋ, ಹೋರಾಟವಾಗಿಯೋ ಕಾಣಿಸುತ್ತದೆ ಮತ್ತು ಸಮಾಜವಾದಿ ಪಕ್ಷ ದೂರವೇ ಉಳಿಯುತ್ತದೆ. ಕನಿಷ್ಟ ಪಕ್ಷ ರಾಜ್ಯಮಟ್ಟದ, ಪಕ್ಷದ ಒಬ್ಬ ನಾಯಕರೂ ಬರುವುದಿಲ್ಲ. ಅಷ್ಟೇ ಅಲ್ಲ ಈ ಹೋರಾಟವನ್ನು ಬೆಂಬಲಿಸಿ ನೀಡಿದ ಒಂದು ಹೇಳಿಕೆಯೂ ಇಲ್ಲ.

ಹೆಬ್ಬಳ್ಳಿಯಲ್ಲಿ ಹನ್ನೊಂದು ಸಾವಿರ ಎಕರೆ ಜಹಗೀರು ಜಮೀನು ಉಂಟೆಂದು ಪೂಜಾರರಿಗೆ ತಿಳಿಯುವುದೂ ಮುಂಬೈ ಸರಕಾರದಲ್ಲಿ ಮಂತ್ರಿಗಳಾಗಿದ್ದ ಭಾವುಸಾಹೇಬ್ ಹೀರೆಯವರಿಂದ. ಹೀರೆಯವರು ತಮ್ಮ ಕ್ಷೇತ್ರದ ಜಾಗೀರದಾರರಾಗಿದ್ದ ಸರ್ದಾರ ವಿಂಚೂರಕರ್ ಅವರ ಜಾಗೀರು ಜಮೀನನ್ನು ಕೇವಲ ಒಂದು ‘ಅಡ್ಮಿನಿಸ್ಟ್ರೇಶನ್ ರೂಲ್ಸ್’ ಮೂಲಕ ಸರಕರದ ವಶ ಮಾಡಿಕೊಂಡಿದ್ದರು. ತಮ್ಮ ಅನುಭವವನ್ನೇ ಪೂಜಾರರಿಗೆ ಹೇಳಿ, ಹೆಬ್ಬಳ್ಳಿ ಮತ್ತು ಗಜೇಂದ್ರಗಡಗಳಲ್ಲಿಯೂ ಇಂತಹ ಜಹಗೀರುದಾರರ ಜಮೀನುಗಳಿವೆ ಎಂದೂ ಅದರ ಬಗ್ಗೆ ಹೋರಾಟ ಕೈಗೆತ್ತಿಕೊಳ್ಳಬೇಕೆಂದೂ ಹೇಳಿದ್ದರು. ಮುಂಬೈ ಸರ್ಕಾರ ಹೊರಡಿಸಿದ್ದ ಅಡ್ಮಿನಿಸ್ಟ್ರೇಟಿವ್ ಆರ್ಡರ್ ಪ್ರಕಾರ ಹೆಬ್ಬಳ್ಳಿ ಜಾಗೀರು ಜಮೀನು, ಪೂಜಾರರು ಹೋರಾಟ ಕೈಗೆತ್ತಿಕೊಳ್ಳುವ ಹೊತ್ತಿಗಾಗಿಲೇ ಸರಕಾರದ ವಶವಾಗಿತ್ತು. ಆದರೆ ಜಾಗೀರುದಾರರೇ ಅದನ್ನು ಉಳುಮೆ ಮಾಡಿಸಿ ರೈತರಿಂದ ಗೇಣಿ ಪಡೆಯುತ್ತಿದ್ದರು. ಈ ಹಂತದಲ್ಲಿ ಪೂಜಾರರು ವಿಷಯ ಕೈಗೆತ್ತಿಕೊಂಡು ಕಾನೂನಿನ ಪ್ರಕಾರ ಸರಕಾರದಾಗಿದ್ದ ಭೂಮಿಯ ಒಡೆತನವನ್ನು ಜಾಗೀರುದಾರರಿಂದ ಕಸಿದು, ಅದನ್ನು ಉಳುಮೆ ಮಾಡುತ್ತಿದ್ದ ರೈತರಿಗೆ ಕೊಡಿಸಲು ಸ್ಥಳೀಯ ರೈತ ಕೂಲಿಕಾರರನ್ನು ಸಂಘಟಿಸಿದ್ದರು. ಆ ಹೊತ್ತಿಗಾಗಲೇ ಕಾನೂನಿನ ಪ್ರಕಾರ ಭೂಮಿ ತಮ್ಮ ಕೈಬಿಟ್ಟಿದ್ದರಿಂದ”ಹೆಬ್ಬಳ್ಳಿ ಜಾಗೀರುದಾರ’ರೂ ಸಂಘರ್ಷಕ್ಕೆ ಸಿದ್ಧರಿರಲಿಲ್ಲವಷ್ಟೇ ಅಲ್ಲ ಭೂಮಿಯ ಆಸೆಯನ್ನೇ ಕೈಬಿಟ್ಟಿದ್ದರು. ಆ ಭಾಗದ ರೈತರ ದೃಷ್ಟಿಯಲ್ಲಿಯೇ ‘ಸಂಪನ್ನ ಜನ’ರೆಂಬ ಅಭಿಪ್ರಾಯ ಜಾಗೀರುದಾರರ ಬಗ್ಗೆಯಿತ್ತು. ಸರಕಾರ ಒಂದು ಕಾನೂನು ಮಾಡಿದ್ದರೆ ಸಾಕಾಗುವ ಹಂತದಲ್ಲಿದ್ದ ಈ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರದೊಟ್ಟಿಗೂ ಸಂಘರ್ಷಕ್ಕಿಳಿಯಬೇಕಾದ ಪರಿಸ್ಥಿತಿ ಇರಲಿಲ್ಲ. ಬಹುತೇಕ ಸ್ನೇಹಮಯ ಸಂಬಂಧವೇ ಇತ್ತು.

ಹೀಗೆ ಸ್ಥಳೀಯ ಭೂಮಾಲಿಕ ಶಕ್ತಿಯ ಜೊತೆಗಾಗಲಿ, ಆಳುವ ‘ಪ್ರಭುತ್ವ’ದ ಜೊತೆಗಾಗಲಿ ‘ಸಂಘರ್ಷ’ವಿಲ್ಲದ ಹೋರಾಟದ ಉದ್ದೇಶ ಸರಕಾರದ ಗಮನವನ್ನು ಸೆಳೆಯುವ ಮೂಲಕ ಗುರಿ ಸಾಧಿಸುವುದು ಎಂದೇ ತೋರುತ್ತದೆ. ಈ ವಿಷಯದಲ್ಲಿ ಯಶಸ್ವಿಯಾದ ನೀಲಗಂಗಯ್ಯ ಪೂಜಾರರು ಮುಖ್ಯಮಂತ್ರಿಗಳಾಗಿದ್ದ ಬಿ.ಡಿ. ಜತ್ತಿಯವರೊಂದಿಗೆ ಒಂದು ಫೋನ್ ಕಾಲನಲ್ಲಿ ಮಾತಾಡಿ ಆಶ್ವಾಸನೆ ಪಡೆದು ಹತ್ತು ದಿನಗಳ ಪ್ರತಿ ದಿನದ ‘ಶಾಂತಿಯುತ’ ಪಿಕೆಟಿಂಗಗಳನ್ನು ಹನ್ನೊಂದನೇ ದಿನ ಹಿಂತೆದುಕೊಂಡಿದ್ದರು. ಆನಂತರದಲ್ಲಿ ಬಿ.ಡಿ.ಜತ್ತಿಯವರ ಸರಕಾರ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿ, ಆಡಳಿತ ವಿಧಿ – ವಿಧಾನಗಳ ಮೂಲಕ ರೈತರಿಗೆ ಭೂಮಿ ಹಂಚಿತ್ತು.

ಈ ಹೋರಾಟ ಮತ್ತು ಸಮಾಜವಾದಕ್ಕೆ ಸಂಬಂಧವಿರುವುದಾದರೆ ಈ ಹೋರಾಟದ ಆಶಯದಲ್ಲಿ ಮಾತ್ರ ಸಮಾಜವಾದಿಯಾಗಿದ್ದ ನೀಲಗಂಗಯ್ಯ ಪೂಜಾರರು ಈ ಹೋರಾಟದ ನಾಯಕತ್ವ ವಹಿಸಿದ್ದರು ಎಂಬುದನ್ನು ಗಮನಿಸಬಹುದಷ್ಟೇ ಹೊರತು ಈ ಹೋರಾಟ ಸಮಾಜವಾದಿ ಚಳವಳಿಯ ಭಾಗವಾಗಿಯಾಗಲಿ, ಅಥವಾ ಸಮಾಜವಾದಿ ಚಳವಳಿಗೆ ಕೊಡುಗೆ ನೀಡುವ ಬಗೆಯಲ್ಲಾಗಲಿ ನಡೆದಿಲ್ಲ ಎಂಬುದು ಸ್ಪಷ್ಟ. ಈ ಹೋರಾಟ ೧೯೫೦ರ ದಶಕದ ಸಮಾಜವಾದಿ ಪಕ್ಷದ ಸ್ವರೂಪ ಮತ್ತು ಸ್ಥಿತಿಯ ಬಗ್ಗೆಯೂ ಬೆಳಕು ಬೀರುತ್ತದೆ.

ರಾಜ್ಯದಲ್ಲಿ ಸಮಾಜವಾದಿ ಅಲೆಯನ್ನೇ ಎಬ್ಬಿಸಿದ್ದ ಕಾಗೋಡು ಸತ್ಯಾಗ್ರಹವಾದ ನಾಲ್ಕೈದು ವರ್ಷಗಳಲ್ಲೇ ನಡೆದ ಹೆಬ್ಬಳ್ಳಿ ಭೂಹೋರಾಟದಿಂದ ಸಮಾಜವಾದಿ ಪಕ್ಷ ಏಕೆ ದೂರ ಉಳಿಯಿತು? ಗೇಣಿ ಅನ್ಯಾಯ ಸರಿಪಡಿಸಲು ನಡೆದ ಹೋರಾಟ ಚಾರಿತ್ರಿಕವಾಗಿ ಅಷ್ಟೊಂದು ಮಹತ್ವ ಪಡೆಯಿತಾದರೆ ಹನ್ನೊಂದು ಸಾವಿರ ಎಕರೆಯ ಭೂಮಿ ಒಡೆತನವನ್ನು ರೈತರಿಗೆ ನೀಡಿದ ಈ ಹೋರಾಟ ಯಾಕೆ ಉಪೇಕ್ಷೆಗೊಳಗಾಯಿತು? ಸಮಾಜವಾದಿಗಳೊಬ್ಬರು ನಾಯಕತ್ವ ವಹಿಸಿಯೂ, ಸಮಾಜವಾದಿ ಪಕ್ಷ ಇದರಲ್ಲಿ ಪ್ರವೇಶಿಸದೇ ಇರಲು ಕಾರಣಗಳೇನು? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗುತ್ತದೆ.

ರಾಜಕೀಯಾರ್ಥಿಕ ಚಿಂತನೆಯಾದ ಸಮಾಜವಾದವನ್ನು ಬರೀ ಆಶಯದ ಮಟ್ಟಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಒಂದು ಪರಿಪೂರ್ಣ ರಾಜಕೀಯ ಸಿದ್ಧಾಂತವು ತನ್ನೊಳಗೇ, ತಾನು ಸಾಧಿಸಬೇಕಾದ ಗುರಿಯ ಮಾರ್ಗವನ್ನೂ ಖಚಿತಪಡಿಸಿಕೊಂಡಿರುತ್ತದೆ ಹಾಗೂ ಆ ಮಾರ್ಗದಲ್ಲಿ ಕ್ರಮಿಸಬೇಕಾದ ಕಾರ್ಯಕ್ರಮಗಳನ್ನೂ ಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿ ಲೋಹಿಯಾರ ಸಮಾಜವಾದವನ್ನೂ ನೋಡಬೇಕಾಗುತ್ತದೆ. ಕಾಗೋಡು ಹೆಬ್ಬಳ್ಳಿ, ಸಂಡೂರು, ಹೋರಾಟಗಳನ್ನು ಒಳಗೊಂಡ ಸಮಾಜವಾದೀ ಚರಿತ್ರೆ ಹಾಗೆ ಯೋಚಿಸಲು ಪ್ರೇರಣೆಗಳನ್ನು ನೀಡುತ್ತದೆ.

ಹೆಬ್ಬಳ್ಳಿ ಹೋರಾಟವನ್ನು ‘ಸಮಾಜವಾದೀ ಹೋರಾಟ’ ಎನ್ನಬಹುದೇ? ಈ ಹೋರಾಟದ ಚಾಲಕ ಶಕ್ತಿ ಸಮಾಜವಾದಿ ಪೂಜಾರರೇ ಹೊರತು ಸಮಾಜವಾದಿ ವಿಚಾರಗಳಾಗಲಿ, ಸಂಘಟನೆಯಾಗಲಿ ಅಲ್ಲ. ‘ಉಳುವ ರೈತನಿಗೆ ಭೂಮಿಯ ಒಡೆತನ’ ನೀಡುವ ಉದ್ದೇಶ ಈ ಹೋರಾಟಕ್ಕಿತ್ತಾದರೂ ಅದೊಂದು ರಾಜಕೀಯ ವಿಚಾರವಾಗಿ ಹೋರಾಟದಲ್ಲಿ ಪಾತ್ರವಹಿಸಿತು ಎಂದು ಹೇಳಲಾಗದು.ಹೀಗೆ ಉದ್ದೇಶ ಸಾಧನೆಗೆ ಅಣಿಗೊಂಡ ಜನವರ್ಗದಲ್ಲಿ ಸಮಾಜವಾದಿ ವಿಚಾರ ಪ್ರವೇಶಿಸದೇ, ಅದು ನಾಯಕತ್ವದ ಆಶಯ ಮಾತ್ರವಾಗಿದ್ದ ಹಿನ್ನೆಲೆಯಲ್ಲಿ, ಹೋರಾಟದ ಯಶಸ್ಸು ಭೂಮಿ ಪಡೆಯುವುದರಲ್ಲಿ ಪರ್ಯಾವಸಾನವಾಯಿತೆ ಹೊರತು ಆ ಜನವರ್ಗದಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸಲಿಲ್ಲ.

ಸಮಾಜವಾದ, ಆಶಯ ಮಾತ್ರವಲ್ಲ, ಅದು ರಾಜಕೀಯಾರ್ಥಿಕ ಪ್ರಜ್ಞೆಯೂ ಹೌದು. ಸಮಾಜವಾದ ಆಶಯವಾಗಿ ನಾಯಕತ್ವದಲ್ಲಿ ಕಾಣಿಸಿಕೊಂಡು ಆರ್ಥಿಕ ಫಲಿತಗಳನ್ನು ಕಂಡುಕೊಂಡರೂ ರಾಜಕೀಯ ಪ್ರಜ್ಞೆಯಾಗಿ ಜನವರ್ಗದಲ್ಲಿ ಗೈರುಹಾಜರಾದರೆ ಅಂತಹ ಹೋರಾಟ, ಯಶಸ್ವಿ ಹೋರಾಟ ಆಗಬಹುದಾದರೂ ಸಮಾಜವಾದೀ ಹೋರಾಟ ಎನ್ನಲು ಸಾಧ್ಯವೇ ?

ಯಜಮಾನರ ಕದನ

೧೯೭೩ರಲ್ಲಿ ಸಂಡೂರು ಭೂ ಹೋರಾಟ ನಡೆವ ಹೊತ್ತಿಗೆ ಕರ್ನಾಟಕದಲ್ಲಿ ಸಮಾಜವಾದಿ ಚಳವಳಿ ಆರಂಭವಾಗಿ ಕಾಲು ಶತಮಾನ ಗತಿಸಿತ್ತು. ಕಾಗೋಡು ಸತ್ಯಾಗ್ರಹವಾಗಿಯೂ ಎರಡು ದಶಕಗಳಾಗಿದ್ದವು. ಸಮಾಜವಾದದ ‘ಕ್ರಾಂತಿಕಾರಕ’ ಸ್ವರೂಪ ಅಧಿಕಾರ ರಾಜಕಾರಣದ ಸ್ವರೂಪಕ್ಕೆ ಬದಲಾಗಿತ್ತು. ದೇಶಮಟ್ಟದ ನಾಯಕ ಲೋಹಿಯಾ ಮತ್ತು ರಾಜ್ಯದಲ್ಲಿ ಗೋಪಾಲಗೌಡರು ನಿಧನರಾಗಿ ಕರ್ನಾಟಕದ ಜಾರ್ಜ್‌ಫರ್ನಾಂಡಿಸ್ ದೇಶಮಟ್ಟದ ಸಮಾಜವಾದೀ ಧುರೀಣರಾಗಿ ಹೊರಹೊಮ್ಮಿದ್ದರು. ಸಂಡೂರು ಹೋರಾಟದ ಮೂಲಕ ರಾಜ್ಯದಲ್ಲಿ ಸಮಾಜವಾದಿ ಪಕ್ಷವನ್ನು ಬಲಪಡಿಸುವ ಆಶಯಗಳಿದ್ದವು.

ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳಲೂ ಒಂದು ವರ್ಷ ಭಾರತ ಸರ್ಕಾರದೊಂದಿಗೆ ಚೌಕಾಸಿ ಮಾಡಿದ ಸಂಡೂರಿನ ದೊರೆ ರಾಜತ್ವ ಕಳಕೊಂಡು ಆಳುವ ಪಕ್ಷವಾಗಿದ್ದ ಕಾಂಗ್ರೆಸ್ ಸೇರಿದ್ದರು. ರಾಜಶಾಹಿಯ ಬಗ್ಗೆ ಉದಾರ ಧೋರಣೆ ತಾಳಿದ್ದ ಮಾಜಿ ರಾಜ – ಜಮೀನ್ದಾರರ ಒಕ್ಕೂಟವಾಗಿದ್ದ ಕಾಂಗ್ರೆಸ್ ತನ್ನೊಳಗೆ ವಿಲೀನವಾಗಿದ್ದ ವರ್ಗದ ಹಿತಾಸಕ್ತಿ ರಕ್ಷಿಸಲು ಧಾರಾಳ ರಾಜಧನ, ಬೇಟೆಹಕ್ಕು, ಇನ್ನಿತರೆ ಐಷಾರಾಮಿ ಸೌಲಭ್ಯಗಳನ್ನು ನೀಡಿ ಪೋಷಿಸಿತ್ತು. ವಸಾಹತುಶಾಹಿ ಪ್ರಭುತ್ವ ಪ್ರಜಾಪ್ರಭುತ್ವವಾಗಿ ಬದಲಾದಾಗಲೂ ಘೋರ್ಪಡೆಯರು ರಾಜರಾಗಿಯೇ ಮಾನ್ಯತೆ ಪಡೆದಿದ್ದರು. ಕಾರ್ತೀಕಸ್ವಾಮಿ ದೇವಸ್ಥಾನದ ಹೆಸರಲ್ಲಿ ಎಂಟು ಸಾವಿರ ಎಕರೆ ಭೂಮಿಗೆ ಒಡೆಯರಾಗಿದ್ದರು.

ಹೋರಾಟ ಆರಂಭಿಸುವ ಹೊತ್ತಿಗೆ ಮಾಜಿ ದೊರೆ ಎಂ.ವೈ. ಘೋರ್ಪಡೆ ಕಾಂಗ್ರೆಸ್ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದರು. ಆ ತನಕ ಕಾಂಗ್ರೆಸನಲ್ಲೇ ಇದ್ದು ನಂತರ ಸಂಸ್ಥಾ ಕಾಂಗ್ರೆಸಗೆ ಬಂದಿದ್ದ ಎಲಿಗಾರ ತಿಮ್ಮಪ್ಪ ಕಾರ್ತಿಕಸ್ವಾಮಿ ದೇವಸ್ಥಾನದ ‘ಟ್ರಸ್ಟೀಶಿಪ್’ನಿಂದ ಘೋರ್ಪಡೆಯವರನ್ನು ಕಿತ್ತು ಹಾಕುವ ಹಾಗೂ ದೌರ್ಜನ್ಯವನ್ನು ವಿರೋಧಿಸುವ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟವನ್ನ ಹಮ್ಮಿಕೊಂಡರು. ‘ಟ್ರಸ್ಟೀಶಿಪ್’ನ ಬದಲಾವಣೆಯ ಬೇಡಿಕೆಯು ಮೂಲದಲ್ಲಿ ೪೦ರ ದಶಕದಿಂದಲೇ ಇದ್ದ ‘ಸಂಡೂರು ವಿಮೋಚನಾ ಸಮರ ಸಮಿತಿ’ಯಿಂದ ಬಂದುದಾಗಿತ್ತು. ಈ ಸಮಿತಿಯ ಏಕೈಕ ಹೋರಾಟಗಾಗ ಯಜಮಾನ ಶಾಂತರುದ್ರಪ್ಪ, ದಶಕಗಳಿಂದ ಘೋರ್ಪಡೆ ಮನೆತನದ ವಿರುದ್ಧ ವ್ಯಕ್ತಿಗತ ನೆಲೆಯಲ್ಲಿ ಹೋರಾಟ ನಡೆಸಿದ್ದರು.

ಹೀಗೆ ‘ಘೋರ್ಪಡೆಗಳ ವಿರುದ್ಧವಾಗಿ ಮೂಡಿದ ಹೋರಾಟಕ್ಕೆ ಆರಂಭದಲ್ಲಿ ‘ಉಳುವವರಿಗೆ ಭೂಮಿ ಕೊಡಿಸುವ’ ಕಲ್ಪನೆಯೇ ಇರಲಿಲ್ಲ. ಬದಲಾಗಿ ಕಾರ್ತಿಕಸ್ವಾಮಿ ದೇವಸ್ಥಾನದ ಭೂಮಿಯನ್ನು ಘೋರ್ಪಡೆಗಳ ಹಿಡಿತದಿಂದ ತಪ್ಪಿಸಬೇಕು ಎಂಬುದಷ್ಟೇ ಆಗಿ ತತ್ಸಂಬಂಧೀ ಬೇಡಿಕೆಗಳ ಹೋರಾಟವನ್ನು ತೀವ್ರಗೊಳಿಸುವ ಬಯಕೆ ಹೊಂದಿತ್ತು. ಈ ಹೋರಾಟವನ್ನು ಗಮನಿಸಿದ ಸಮಾಜವಾದಿ ಪಕ್ಷ ರಾಜ್ಯ ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಭೆಗಳಲ್ಲಿ ಚರ್ಚಿಸಿ ಹೋರಾಟವನ್ನು ತಾನು ಕೈಗೆತ್ತಿಕೊಳ್ಳುವುದಾಗಿ ನಿರ್ಧರಿಸಿತು. ರಾಜ್ಯದಲ್ಲಿ ಪಕ್ಷದ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರಾಜ್ಯಾಧ್ಯಕ್ಷ ಕೆ.ಜಿ. ಮಹೇಶ್ವರಪ್ಪ ಅವರಿಗೆ ರಾಜ್ಯ ಕಾರ್ಯಕಾರಿ ಸಮಿತಿ ಹೋರಾಟದ ಜವಾಬ್ದಾರಿಯನ್ನು ವಹಿಸಿತು.

ಈ ಹೋರಾಟಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ, ಕೆ.ಜಿ. ಮಹೇಶ್ವರಪ್ಪ ‘ನಾನು ಈ ಹೋರಾಟದ ಸರ್ವಾಧಿಕಾರಿಯಾಗಿದ್ದೆ’ ಎಂದು ಧನ್ಯತೆಯ ಭಾವದಿಂದ ಹೇಳಿಕೊಳ್ಳುತ್ತಾರೆ ಹಾಗೂ ಜಾರ್ಜ್ ಫರ್ನಾಂಡೀಸರ ಭಾಷಣವನ್ನು ಕೊಂಡಾಡುತ್ತಾರೆ. ಚರ್ಚೆಯ ಕಾಲಕ್ಕೆ ಅವರಿಗೆ, ಈ ಹೋರಾಟದ ವಿವರಗಳೆಲ್ಲವೂ ಮರೆತು ಹೋಗಿರುವವಾದರೂ, ತಾವೆಂತಹ ದುಃಸ್ಥಿತಿಯ ಬಂಧನದಲ್ಲಿದ್ದೆವೆಂದು ವಿವರಿಸುವ ‘ಜೈಲಿನ ನೆನಪುಗಳು’ ಇನ್ನೂ ಮಾಸಿಲ್ಲ.

ಈ ಹೋರಾಟಕ್ಕೆ ಜಾರ್ಜ್‌ಫರ್ನಾಂಡೀಸ್‌ರ ಚಾಲನಾ ಭಾಷಣದ ಮೂಲಕ ಸಂಡೂರಿನಲ್ಲಿ ಸಂಚಲನ ಸೃಷ್ಟಿಯಾಯಿತು. ಮಾಜಿ ದೊರೆ ಘೋರ್ಪಡೆಯವರ ಕಾರು ರಸ್ತೆಯಲ್ಲಿ ಸಂಚರಿಸುವಾಗಲೂ ತಲೆತಗ್ಗಿಸಿ ನಿಲ್ಲಬೇಕಾಗಿದ್ದ ಕಾಲ ಪರಿಸರದಲ್ಲಿ, ಪಟ್ಟಣದ ಮಧ್ಯಭಾಗದಲ್ಲಿ ಜಾರ್ಜ್ ‘ಟೇಬಲ್ ಹತ್ತಿ’ ನಿಂತು ಮಾತಾಡಿದ್ದೇ ಧೀರೋದಾತ್ತ ಕಾರ್ಯ ಎನಿಸಿತ್ತು. ‘ಆತನಕ ಯಾರೂ ಸಂಡೂರಿನಲ್ಲಿ ಎತ್ತರದಲ್ಲಿ ನಿಂತು, ಬಹಿರಂಗ ಭಾಷಣ ಮಾಡಿರಲಿಲ್ಲ’ ಎಂಬ ವಿವರಗಳ ಹಿನ್ನೆಲೆಯಲ್ಲಿಯೂ ಜಾರ್ಜ್‌ರ ಭಾಷಣಕ್ಕೆ ಐತಿಹಾಸಿಕ ಪ್ರಾಪ್ತಿಯಾಗುತ್ತದೆ.

ಜಾರ್ಜ್ ಈ ಹೋರಾಟವನ್ನು ‘ರಾಷ್ಟ್ರೀಯವಾಗಿ’ ಬಿಂಬಿಸಿದರಾದರೂ ಭಾಷಣದ ಆ ದಿನ ಬಿಟ್ಟರೆ ಮತ್ತೆ ಈ ಹೋರಾಟದಲ್ಲಿ ಭಾಗವಹಿಸಲಿಲ್ಲ. ಮಹಾರಾಷ್ಟ್ರ, ಬಿಹಾರಗಳಿಂದ ಕರ್ನಾಟಕದ ಬೀದರಿನಿಂದ ಕಾಶಿನಾಥ ಬೇಲೂರೆಯವರು ಹಲವು ದಿನ ಭಾಗವಹಿಸಿದ್ದರು. ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದ ಎಂ.ಪಿ. ಪ್ರಕಾಶ ಈ ಹೋರಾಟದಲ್ಲಿ ಭಾಗವಹಿಸಿದ್ದು ಒಂದು ದಿನ ಮಾತ್ರ ಎಂದು, ಅಂದಿನ ರಾಜ್ಯಾಧ್ಯಕ್ಷರಾಗಿದ್ದ ಕೆ.ಜಿ. ಮಹೇಶ್ವರಪ್ಪ ಹೇಳುತ್ತಾರೆ. ಇಂತಹ ಸಂಗತಿಗಳೂ ಸಂಡೂರು ಹೋರಾಟ ಕಾಗೋಡಿನ ಮಾದರಿಯಲ್ಲಿ ಸಮಾಜವಾದಿ ರಾಜಕೀಯ ಸಂಚಲನ ಮೂಡಿಸಲು ಸಾಧ್ಯವಾಗದಿರಲು ಕಾರಣಗಳಾದವು.

೪೬ ದಿನಗಳ ಕಾಲ ಪ್ರತಿದಿನ ಹಲವು ಹಳ್ಳಿಗಳಿಂದ ಬಂದು ಬಂಧಿತರಾಗುತ್ತಿದ್ದ ಹೋರಾಟ ಸಮಾಜವಾದಿ ಚಳವಳಿಯ ಇತಿಹಾಸದಲ್ಲಿ ಬಹುಮಹತ್ವದ್ದಾಗಿತ್ತು. ಹಾಗೆ ನೋಡಿದರೆ ಕಾಗೋಡಿನ ನಂತರ ಇದೇ ಮೊದಲನೆಯದಾಗಿತ್ತು. ರಾಷ್ಟ್ರಮಟ್ಟದ ಧುರೀಣರೂ ಚಳವಳಿಯಲ್ಲಿ ಭಾಗವಹಿಸಿದ್ದರು. ಆದರೆ ಸ್ಥಳೀಯ ನಾಯಕತ್ವ ಈ ಹೋರಾಟವನ್ನು ಬೇಡಿಕೆಗಳ ಈಡೇರಿಕೆಯ ಮಟ್ಟಕ್ಕೆ ಇಳಿಸಿತೇ ಹೊರತು ಸಮಾಜವಾದಿ ಚಳವಳಿಯ ಮುಂಚಲನೆಗೆ ಅನುವಾಗುವಂತೆ ನಿರ್ವಹಿಸಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಕಾಗೋಡಿನ ಸತ್ಯಾಗ್ರಹದ ನಂತರ ಅಲ್ಲಿಂದ ರಾಜಕೀಯ ನಾಯಕತ್ವ ಹೊರಹೊಮ್ಮಿದಂತೆ ಸಂಡೂರು ಹೋರಾಟದ ನಂತರ ಯಾಕೆ ಮೂಡಿಬರಲಿಲ್ಲ? ಯಾವ ರಾಜಶಾಹಿ ಪಳಿಯುಳಿಕೆಗಳ ವಿರುದ್ಧ ಸಮಾಜವಾದಿ ಪಕ್ಷ ಪ್ರಖರ ಹೋರಾಟವನ್ನು ಜಾರಿಯಲ್ಲಿಟ್ಟಿತ್ತೋ, ಅಂತಹ ಶಕ್ತಿಗಳ ಜೊತೆ ಜಿಲ್ಲೆಯ ನಾಯಕತ್ವ ಆಂತರಿಕ ಸೌಹಾರ್ದ ಸಂಬಂಧವನ್ನು ಹೊಂದಿತ್ತು ಎಂಬ ಸಂದೇಹವನ್ನೂ ಸಮಾಜವಾದಿಗಳನೇಕರು ವ್ಯಕ್ತಪಡಿಸುತ್ತಾರೆ. ಹೋರಾಟದ ೪೫ನೇ ದಿನ ಲಾಠಿ ಚಾರ್ಜ್ ಆಗಿ, ಪೋಲೀಸ್ ಹಿಂಸಾಚಾರ ನಡೆದು, ರಮೇಶ್ ಬಂದಗದ್ದೆ ಮೊದಲಾದವರು ಗಾಯಗೊಂಡು, ತೀವ್ರ ಸಂಘರ್ಷವನ್ನು ಸಮಾಜವಾದಿ ಹೋರಾಟ ಸೃಷ್ಟಿಸಿತು. ಆದರೆ ‘ಪ್ರಭುತ್ವ ಮತ್ತು ಜನತೆ’ಯ ನಡುವಿನ ಈ ಸಂಘರ್ಷವನ್ನು ರಾಜಕೀಯವಾಗಿ ಪರಿವರ್ತಿಸುವಲ್ಲಿ ಸಾಧ್ಯವಾಗದಾಯಿತು. ಸಮಾಜವಾದಿ ಮನೋಭಾವ ಹಾಗೂ ಊಳುವವರಿಗೆ ಒಡೆತನ ಭೂಮಿ ನೀಡುವಲ್ಲಿ ಆಸಕ್ತರಾಗಿದ್ದ ಮುಖ್ಯಮಂತ್ರಿ ದೇವರಾಜ ಅರಸು, ಭೂಮಿಯ ಒಡೆತನ ಊಳುವವರಿಗೆ ನೀಡಲು ಭರವಸೆ ನೀಡುವುದರೊಂದಿಗೆ ಚಳವಳಿ ಯಶಸ್ಸನ್ನು ಕಂಡಿತು. ಹೋರಾಟವು ಹೊಂದಿದ್ದ ಹಲವು ಬೇಡಿಕೆಗಳಲ್ಲಿ ‘ಭೂಮಿ’ಯ ಬೇಡಿಕೆ ಈಡೇರಿತಾದರೂ ಇನ್ನುಳಿದವು ಹಾಗೇ ಉಳಿದವು. ಉಳಿದ ಬೇಡಿಕೆಗಳ ಆಧಾರದಲ್ಲಿ ಮತ್ತೆ ಹೋರಾಟವನ್ನು ನಿರಂತರವಾಗಿ ಚಾಲನೆಯಲ್ಲಿಡುವ ಸಂಘರ್ಷದ ಮನೋಭಾವದಿಂದ ಪಕ್ಷ ಹಿಂದಕ್ಕೆ ಸರಿದ ಪರಿಣಾಮವಾಗಿ ನಂತರದಲ್ಲಿ ನಡೆದ ಚುನಾವಣೆಗಳಲ್ಲಿ ಮತ್ತೆ ಅದೇ ಘೋರ್ಪಡೆ ವಿಧಾನಸಭೆಗೆ ಆಯ್ಕೆಯಾದುದನ್ನು ಗಮನಿಸಿದಾಗ ಸಮಾಜವಾದಿ ಹೋರಾಟಗಳು ಸಮಾಜವಾದಿ ರಾಜಕೀಯ ಪ್ರಜ್ಞೆ ಮೂಡಿಸುವಲ್ಲಿ ವಿಫಲವಾಗಿ, ಸಮಾಜವಾದ ಚಳವಳಿಯ ಸ್ವರೂಪ ಪಡೆಯದಾಯ್ತು.

ಸಮಾಜವಾದಿ ಹೋರಾಟಗಳನ್ನು ‘ಫಾಲೋ ಅಪ್’ ಮಾಡಿ, ಚಳವಳಿ ರೂಪಿಸುವ ಅವಕಾಶ ಕಳೆದುಹೋದದ್ದಕ್ಕೆ ಸಂಡೂರು, ಹೆಬ್ಬಳ್ಳಿ, ಹೋರಾಟಗಳು ಉದಾಹರಣೆಯಾಗಿ ನಿಲ್ಲುತ್ತವೆ. ಹೆಬ್ಬಳ್ಳಿಯ ಬಗ್ಗೆ ಮಾತಾಡುವ ಪೂಜಾರರು ‘ನಾನೂ ಒಪ್ಕೊಳ್ತೇನೆ. ನಮಗೆ ನಂತರ ಫಾಲೋ ಅಪ್ ಮಾಡ್ಲಿಕ್ಕೆ ಆಗ್ಲಿಲ್ಲ, ಸಮಸ್ಯೆ ಬಗೆಹರಿದ ನಂತರ ಆ ವಿಷಯದಿಂದಲೇ ದೂರ ಸರಿದ್ವಿ ನಾವು. ಯಾರಿಗೆ ಭೂಮಿ ಸಿಕ್ಕಿದೆ? ಅವರು ಉಳುತ್ತಿದ್ದಾರೋ ಇಲ್ಲವೋ? ಅದಕ್ಕೆ ಸಂಬಂಧಿಸಿ ಮತ್ತೇನು ಸಮಸ್ಯೆಗಳಿವೆ? ಅವುಗಳ ಬಗ್ಗೆ ನಾವು ಯೋಚಿಸೋಕ್ಕಾಗ್ಲಿಲ್ಲ’ ಎನ್ನುತ್ತಾರೆ. ಅಷ್ಟೇ ಅಲ್ಲ ಮುಂದುವರಿದು ‘ಕೇಸ್ ವಿತ್ ಡ್ರಾ ಮಾಡ್ರಿ’ ಅಂತಾ ಕೂಡ ನಮ್ಮ ಕಡೆಯಿಂದ ಎಜಿಟೇಶನ್ ಆಗ್ಲಿಲ್ಲ. ಸರಕಾರವೇ ಸ್ವಯಂ ಆಸಕ್ತಿಯಿಂದ ಹಿಂದಕ್ಕೆ ತಗೊಳ್ತು ಎಂಬ ಮಾತುಗಳಿಂದ ಹೋರಾಟದ ನಂತರ ಉಂಟಾದ ‘ಮೌನ’ದ ಅರಿವಾಗುತ್ತದೆ. ಇಂತಹ ‘ಮೌನ’ವನ್ನು ವಿಶ್ಲೇಷಿಸಿ ಅರ್ಥ ಕಂಡುಕೊಳ್ಳುವಲ್ಲಿ ‘ಹೋರಾಟ ಮಾಡಿ ದಣಿದ’ ಸಮಾಜವಾದಿ ಚಳವಳಿಗೆ ಕೊನೆಗೂ ಸಾಧ್ಯವಾಗಲಿಲ್ಲ ಎಂದೇ ತೋರುತ್ತದೆ. ಹಳೆಯ ಅನುಭವಗಳಿಂದ ಅರ್ಥ ಕಂಡುಕೊಳ್ಳದ ಹೊಸ ಪ್ರಯತ್ನಗಳು ಹೊಸ ಅನುಭವಗಳನ್ನೇನೂ ಸೃಷ್ಟಿಸಲಾರವು. ಅನುಭವಕ್ಕೆ ಹೊಸತನ ದಕ್ಕದೇ ಅರಿವು ಅಭಿನವ ಜ್ಞಾನಕ್ಕೆ ಜನ್ಮ ನೀಡದು.

ಸಂಡೂರು ಹೋರಾಟ ತಾನು ಹೊಂದಿದ್ದ ಉದ್ದೇಶದ ಹಿನ್ನೆಲೆಯಲ್ಲಿ ಹೋರಾಟವು ಒಳಗೊಂಡಿದ್ದ ಭಿನ್ನ ಗ್ರಹಿಕೆಗಳ ಒಟ್ಟು ಸಾರ ಅದು ‘ಊಳಿಗಮಾನ್ಯ ವ್ಯವಸ್ಥೆ’ಯ ವಿರೋಧವೇ ಆಗಿತ್ತು. ಸಮಾಜವಾದಿ ಪಕ್ಷ ಅದನ್ನು ಭೂಮಿ ಹೋರಾಟವಾಗಿ ರೂಪಿಸಿತು. ಸಮಾಜವಾದಿಗಳು ಈ ಹೋರಾಟವನ್ನು ಸಂಘರ್ಷದ ಅಂಚಿಗೆ ಒಯ್ದರಾದರೂ, ಈ ಸಂಘರ್ಷದ ಆಳದ ನೆಲೆಗಳು ಜೀವಂತವಿದ್ದ ಊಳಿಗಮಾನ್ಯ ವ್ಯವಸ್ಥೆಯಲ್ಲಿಯೇ ಬೇರು ಬಿಟ್ಟಿದ್ದವು. ಆ ಬೇರುಗಳಲ್ಲಿಯೇ ಕಾಂಡ ಕತ್ತರಿಸಲು ಬಂದ ಸಮಾಜವಾದವೂ ಸಿಕ್ಕಿ ಕೊಂಡಿತು.

ಕರ್ನಾಟಕದ ಸಮಾಜವಾದಿ ಚರಿತ್ರೆಯಲ್ಲಿ ಮೂಡಿ ಬಂದ ಮೂರು ಮುಖ್ಯ ಹೋರಾಟಗಳೆಂದರೆ ಕಾಗೋಡು, ಹೆಬ್ಬಳ್ಳಿ ಮತ್ತು ಸಂಡೂರುಗಳಲ್ಲಿ ನಡೆದ ಭೂ ಹೋರಾಟಗಳು. ಸಂಡೂರು ಹೋರಾಟದ ನಂತರದಲ್ಲಿ ಸಮಾಜವಾದಿ ಪಕ್ಷವು ಕರೆಕೊಟ್ಟ, ‘ಭೂಗ್ರಹಣ ಚಳವಳಿ’ ಅಂತಹ ಇನ್ನೊಂದು ಮಹತ್ವದ ಚಳವಳಿ. ಹಾಗೆ ನೋಡಿದರೆ ರಾಜ್ಯಮಟ್ಟದ ವ್ಯಾಪಕತೆಯನ್ನು ಪಡೆದ ಮೊದಲ ಚಳವಳಿ ಇದು ಎಂದೆನಿಸುತ್ತದೆ. ಸಮಾಜವಾದಿ ಪಕ್ಷ ಕ್ರಿಯಾಶೀಲವಾಗಿದ್ದ ಬಹುತೇಕ ಜಿಲ್ಲೆಗಳಲ್ಲಿ ಭೂಗ್ರಹಣ ಚಳವಳಿ ನಡೆಯಿತು. ಚಿತ್ರದುರ್ಗ ಜಿಲ್ಲೆಯಲ್ಲಿ ಕೆ. ಜಿ. ಮಹೇಶ್ವರಪ್ಪ, ರಾಯಚೂರು ಜಿಲ್ಲೆಯಲ್ಲಿ ಕೆ. ನಾಗಪ್ಪ, ಬೀದರನ ಕಾಶಿನಾಥ ಬೇಲೂರೆ, ಭೂಗ್ರಹಣ ಚಳವಳಿಯನ್ನು ಯಶಸ್ವಿಯಾಗಿ ಸಂಘಟಿಸಿದರು. ಸಾವಿರಾರು ಎಕರೆ ಸರಕಾರಿ ಜಮೀನನ್ನು ಆಕ್ರಮಿಸಿದರು. ಶಿವಮೊಗ್ಗದಲ್ಲಿ ಪೊನ್ನಮ್ಮಾಳ್ ರೈತರ ಹಕ್ಕುದಾರಿಕೆಗಾಗಿ ಹೋರಾಟ ಮಾಡಿ ಬಂಧಿತರಾಗಿದ್ದರು. ಈ ಚಳವಳಿಯಲ್ಲಿ ಸಾವಿರಾರು ರೈತರು ಭೂಮಿ ಆಕ್ರಮಿಸಿಕೊಂಡರಾದರೂ ನಂತರದಲ್ಲಿ ಅಧಿಕೃತವಾಗಿ ಅದರ ಒಡೆತನ ಪಡೆಯುವಲ್ಲಿ ತೊಂದರೆಗಳನ್ನು ಅನುಭವಿಸಿದರು. ಅಧಿಕಾರಶಾಹಿ ಕಿರುಕುಳ ನೀಡಿದ ಕಡೆ ರೈತರಿಗೆ ಕಷ್ಟವಾಯಿತು. ಚಿತ್ರದುರ್ಗದಲ್ಲಿ ‘ಭೂಗ್ರಹಣ ಕಾಲಕ್ಕೆ’ ಪಡೆದ ಭೂಮಿಯನ್ನು ಸರಕಾರ ನಂತರದಲ್ಲಿ ಬೇರಾವುದೋ ಅಗತ್ಯಕ್ಕೆಂದು ಕಸಿದುಕೊಂಡಿತು. ಭೂ ಗ್ರಹಣ ಚಳವಳಿ ಯಶಸ್ವಿಯಾಯಿಯಾದರೂ, ಸಮಾಜವಾದಿ ಪಕ್ಷ ನಂತರದಲ್ಲಿ ರೈತರು ಅಧಿಕಾರಶಾಹಿಯಿಂದ ಎದುರಿಸುತ್ತಿದ್ದ ಸಮಸ್ಯೆಗಳನ್ನು ನಿವಾರಿಸಲು, ಸಿಕ್ಕಿದ್ದ ಭೂಮಿಯನ್ನು ದಕ್ಕಿಸಿಕೊಳ್ಳಲು ‘ಫಾಲೋಆಪ್’ ಮಾಡದಾಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ ಬಗ್ಗೆ ಸಹಮತವಿದ್ದು, ತಾತ್ವಿಕವಾಗಿ ಸಮಾಜವಾದಿಯಾಗಿದ್ದ ಆದರೆ ಸಮಾಜವಾದೀ ಪಕ್ಷದ ಜೊತೆ ಗುರುತಿಸಿಕೊಳ್ಳದ ದಿನಕರ ದೇಸಾಯಿಯವರೊಂದು ವಿಶಿಷ್ಟ ಮಾದರಿ. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸದಸ್ಯರಾಗಿದ್ದರಿಂದ ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಬಾರದೆಂಬ ಸೊಸೈಟಿಯ ನಿಯಮಕ್ಕೆ ಬದ್ಧರಾಗಿದ್ದರು. ಆದರೆ ಚುನಾವಣೆಗಳಿಗೆ ಸ್ಪರ್ಧಿಸುತ್ತಿದ್ದರು. ಅವರು ಸಮಾಜವಾದೀ ಧೋರಣೆಗಳನ್ನೇ ಹೊಂದಿದ್ದರಾದ್ದರಿಂದ ಹಾಗೂ ಸಮಾಜವಾದಿಗಳು ಮಾಡಬೇಕಿದ್ದ ಹೋರಾಟಗಳನ್ನೇ ಮಾಡುತ್ತಿದ್ದರಿಂದ ಉತ್ತರ ಕನ್ನಡದಲ್ಲಿ ಸಮಾಜವಾದಿ ಪಕ್ಷ ರಾಜಕೀಯವಾಗಿ ಪ್ರವೇಶ ಪಡೆಯಲಿಲ್ಲ. ೧೯೫೦ರ ದಶಕದ ಮಧ್ಯ ಭಾಗದಲ್ಲಿ ಹುಬ್ಬಳ್ಳಿ ಧಾರವಾಡದ ಸಮಾಜವಾದಿ ಪಕ್ಷದ ಚಟುವಟಿಕೆಗಳಿಗೆ ವಿದಾಯ ಹೇಳಿ ದಿನಕರ ದೇಸಾಯಿಯವರ ಕರೆಯಮೇರೆಗೆ ‘ಜನಸೇವಕ ಪತ್ರಿಕೆ’ಯ ಸಂಪಾದಕರಾಗಿ ಕೆಲಸ ಶುರುಮಾಡಿದ ಅಮ್ಮೆಂಬಳ ಆನಂದರು ಉತ್ತರ ಕನ್ನಡ ಜಿಲ್ಲೆಯ ಹೋರಾಟಗಳೊಂದಿಗೆ ಗುರುತಿಸಿಕೊಂಡರು, ಸಂಘಟಿಸಿದರು. ಆದರೆ ಸಮಾಜವಾದಿ ಪಕ್ಷ ರಾಜಕಾರಣದಿಂದ ದೂರ ಉಳಿದರು. ರೈತರ ಹಿತಾಸಕ್ತಿಗಾಗಿ ರಾಜೀರಹಿತ ಹೋರಾಟಗಳನ್ನು ಮಾಡಿದ ‘ದಿನಕರದೇಸಾಯಿ ಕೇಂದ್ರಿತ’ ಉತತರ ಕನ್ನಡ ಜಿಲ್ಲೆಯ ಚಳವಳಿ ನೇರ ಸಮಾಜವಾದಿ ರಾಜಕಾರಣ ನಿರ್ಮಿಸದೇ ಹೋಯಿತು. ಆಶಯದಲ್ಲಿ ಶುದ್ಧತೆ ಮತ್ತು ಹೋರಾಟಕ್ಕೆ ಬದ್ಧತೆಯನ್ನು ಹೊಂದಿದಾಗ್ಯೂ ವಿಶಾಲ ಕಣ್ಣೋಟದಲ್ಲಿ ರಾಜಕೀಯ ಚಳವಳಿಯ ಭಾಗವಾಗದೇ ಸ್ಪಷ್ಟ ಸುಧಾರಣಾವಾದಿ ಲಕ್ಷಣಗಳನ್ನು ಹೊಂದಿತ್ತು. ಆದರ್ಶದ ಚೌಕಟ್ಟನ್ನು ಸೃಷ್ಟಿಸಿಕೊಂಡಿತ್ತು.

ಭೂಮಿ ರೈತರಿಗೆ ವೋಟು ಅರಸರಿಗೆ

ಕರ್ನಾಟಕದಲ್ಲಿ ಸಮಾಜವಾದಿ ಚಳವಳಿಗೆ ಬಹುತೇಕ ಅಂತ್ಯ ಹಾಡಿದ್ದು ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಸರಕಾರ. ಈ ಸರಕಾರ ಜಾರಿಗೆ ತಂದ ಭೂಸುಧಾರಣೆಗಳು ಸಮಾಜವಾದಿಗಳ ಅಜೆಂಡಾವನ್ನೇ ಈಡೇರಿಸಿದ್ದರಿಂದ ಸಮಾಜವಾದಿಗಳಿಗೆ ಇನ್ನು ತಮಗೆ ಮಾಡಲು ಕೆಲಸವಿಲ್ಲವೆಂದೂ, ತಾವಂದುಕೊಂಡಿದ್ದೆಲ್ಲಾ ಸಾಕಾರವಾಯಿತೆಂದು ಬಹುತೇಕ ಭಾವಿಸಿದರು. ಭೂಸುಧಾರಣೆ ಜಾರಿಯಿಂದ ರಾಜ್ಯದ ರೈತವರ್ಗವನ್ನು ಕಾಂಗ್ರೆಸ್ ಪಕ್ಷ ತನ್ನೆಡೆ ಸೆಳೆದುಕೊಂಡಿತು. ಭೂಸುಧಾರಣಾ ನೀತಿಯ ಮಿತಿಗಳನ್ನು ಸಮಾಜವಾದಿ ಪಕ್ಷ ಸರಿಯಾಗಿ ಗುರುತಿಸದಾಯಿತು. ಅದರ ‘ಮಿತಿ’ಗಳನ್ನು ಗುರುತಿಸಿ ಚಳವಳಿಯನ್ನು ಮುನ್ನಡೆಸುವ ಅನಂತ ಸಾಧ್ಯತೆಗಳಿದ್ದವು. ಆದರೆ ಅಂತಹ ಪ್ರಯತ್ನಗಳಿಗೆ ಕೈಹಾಕದೇ ಅನಂತರದ ‘ಆರ್ಥಿಕ ಹೋರಾಟ’ಗಳನ್ನು ಸಂಘಟಿಸದೇ ಸಮಾಜವಾದಿ ಚಳವಳಿ ಸ್ಥಗಿತಗೊಂಡಿತು.

ಇಲ್ಲಿ ಸಂದರ್ಶಿಸಲಾದ ಸಮಾಜವಾದಿಗಳೆಲ್ಲರೂ ದೇವರಾಜ ಅರಸರ ಭೂಸುಧಾರಣೆಗಳನ್ನು ಶ್ಲಾಘಿಸಿದ್ದಾರೆ. ಕೆಲವರು ಅರಸು ‘ನೈಜ ಸಮಾಜವಾದಿ’ ಎಂದಿದ್ದಾರೆ. ಭೂಸುಧಾರಣೆಗಳ ನಂತರದ ದಿನಗಳಲ್ಲಿ ಚಳವಳಿ ಕಟ್ಟುವ ಒತ್ತಡವೇ ಇರಲಿಲ್ಲವೆಂದು, ಭೂಸಮಸ್ಯೆಗಳು ಬಹುತೇಕ ಬಗೆಹರಿದವು ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜಮೀನುದಾರರಿಗೆ ಜೀವದಾನ

ವಿನೋಬಾ ಭಾವೆ ಆರಂಭಿಸಿದ ‘ಭೂದಾನ ಚಳವಳಿ’ ಸಮಾಜವಾದಿಗಳ ಭೂ ಹೋರಾಟಕ್ಕೆ ಹಿನ್ನಡೆಯನ್ನುಂಟು ಮಾಡಿದ ದೇಶಮಟ್ಟದ ಕಾರಣವಾಗಿತ್ತು. ವಸಾಹತೋತ್ತರ ಭಾರತದಲ್ಲಿ ಊಳಿಗಮಾನ್ಯ ವ್ಯವಸ್ಥೆ ನಾಶಕ್ಕೆ ಭಾರತದ ಮಾರ್ಕ್ಸವಾದಿಗಳು ಹಾಗೂ ಸಮಾಜವಾದಿಗಳ ತೀವ್ರ ತರಹದ ಹೋರಾಟಗಳನ್ನು ದಮನಿಸುವ ಉದ್ದೇಶವನ್ನು ಭೂದಾನ ಚಳವಳಿಯ ಸಾಂದರ್ಭಿಕ ಲಕ್ಷಣಗಳೇ ಸಾಬೀತು ಪಡಿಸಿದ್ದವು. ಜಮೀನ್ದಾರ ವರ್ಗವು, ಎಡವಾದಿಗಳ ಹೋರಾಟಕ್ಕೆ ಸಿಕ್ಕು ತನ್ನ ಆಸ್ತಿ ನಾಶವಾಗುವ ಭಯದಲ್ಲಿ ದಾನರೂಪದಲ್ಲಿ ಒಂದಿಷ್ಟನ್ನು ಕೊಟ್ಟು, ತನ್ನ ಆಸ್ತಿ ಅಸ್ತಿತ್ವ ಉಳಿಸಿಕೊಳ್ಳುವ ತಂತ್ರವಾಗಿ ಭೂದಾನ ಚಳವಳಿಯನ್ನು ಬೆಂಬಲಿಸಿತು. ವಿನೋಬಾರ ಧೋರಣೆಯು ರೈತವರ್ಗದ ಹೋರಾಟದ ಮನೋಭಾವವನ್ನು ಕುಂದಿಸಿ, ದಾನ ಪಡೆವ ಮೂಲಕ ಮತ್ತೆ ಯಜಮಾನ ವರ್ಗದ ಕೃಪಾಕಟಾಕ್ಷದಲ್ಲಿ ಉಳಿಯುವ ಋಣ ಪ್ರಜ್ಞೆಯನ್ನು ಜಾಗೃತಗೊಳಿಸಿತು. ‘ಭೂಮಿ’ ಉಳುವ ರೈತನ ‘ಹಕ್ಕು’ ಎಂಬ ಸಮಾಜವಾದಿ ತತ್ವಕ್ಕೆ ಪ್ರತಿಯಾಗಿ ಭೂಮಿ, ಒಡೆಯ ನೀಡಿದ ‘ದಾನ’ ಎಂಬ ಊಳಿಗಮಾನ್ಯ ಮೌಲ್ಯವನ್ನು ಮರುಸ್ಥಾಪಿಸಲಾಯಿತು. ಆಳುವ ಪಕ್ಷವಾಗಿದ್ದ ಕಾಂಗ್ರೆಸ್ಸನ್ನೂ, ಮತ್ತು ಆಳುವ ವರ್ಗವಾಗಿದ್ದ ‘ಜಮೀನ್ದಾರ ಅರೆಬಂಡವಾಳಿಗ’ರನ್ನೂ ಏಕಕಾಲಕ್ಕೆ ರಕ್ಷಿಸುವ ಈ ‘ರಾಜತಂತ್ರ’ಕ್ಕೆ ಸಮಾಜವಾದಿಯಾಗಿದ್ದ ಜಯಪ್ರಕಾಶ ನಾರಾಯಣ ಅವರೂ ಅನುಮೋದನೆ ನೀಡಿದರು. ಜೆ.ಪಿ. ಭೂದಾನ ಚಳವಳಿಯ ಪ್ರವೇಶದ ನಂತರ ದೇಶಮಟ್ಟದಲ್ಲಿ ಭೂಹೋರಾಟ ನಿರತ ಸಮಾಜವಾದಿಗಳು ಉತ್ಸಾಹಗುಂದಿದರು, ಇಲ್ಲವೇ ವಿಚಲಿತರಾದರು.

ಇಂತಹ ಪರಿಣಾಮಗಳು ಕರ್ನಾಟಕದಲ್ಲಾದವು. ವಿನೋಬಾಭಾವೆ ಕರ್ನಾಟಕದಲ್ಲಿಯೂ ಸಂಚರಿಸಿದರು. ಅವರ ಸರ್ವೋದಯ ಕಲ್ಪನೆ, ಸಮಾಜವಾದಿ ಪರಿಕಲ್ಪನೆಯ ಮೇಲೆ ಮೌನ ಪ್ರಹಾರ ಮಾಡಿತು.

ಇಲ್ಲಿನ ಸಂದರ್ಶನದಲ್ಲಿ ಮಾತಾಡಿರುವ ಕೆ.ಸದಾಶಿವ ಕಾರಂತರು “ಜೆ.ಪಿ. ಸಮಾಜವಾದಿ ಚಳವಳಿಯನ್ನು ಬಿಟ್ಟು ಭೂದಾನ ಮತ್ತು ಸರ್ವೋದಯಕ್ಕೆ ಹೋದಾಗ ನಮ್ಮಲ್ಲಿ ಬಹುತೇಕರು ವಿಶೇಷವಾಗಿ ಯುವಕರು ಅನಾಥ ಪ್ರಜ್ಞೆಯಿಂದ ದುಃಖಿತರಾದೆವು. ವೈಯಕ್ತಿಕವಾಗಿ ಹೇಳುವುದಾದರೆ ಡಾಕ್ಟರ್ ಲೋಹಿಯಾ ಅವರ ಪ್ರೀತಿ – ಒಲವುಗಳಲ್ಲಿ ಬೆಳೆದ ನಾನು ಜೆ.ಪಿ.ಯವರೂ ಅತ್ತ ಹೋದಾಗ, ರಾಜಕೀಯವಾಗಿ ಏನಾಗ್ತಿದೆ, ಏನು ಮಾಡಬೇಕೆಂಬುದೇ ತಿಳಿಯದೇ ಹೋಯ್ತು. ಹಾಗಾಗಿ ಭಾಗಶಃ ರಾಜಕೀಯವಾಗಿ ನಾನು ಸಿನಿಕನಾಗಿ ಉಳಿದೆ” ಎನ್ನುತ್ತಾರೆ. ಈ ಅನುಭವ ಕೇವಲ ಕಾರಂತರದು ಮಾತ್ರ ಆಗಿರಲಿಲ್ಲ. ಲೋಹಿಯಾ ಅವರಿಗೂ ಮೊದಲು ಜೆ.ಪಿ. ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದರು. ಹೋರಾಟ ಮಾಡಿದ್ದರು. ಕರ್ನಾಟಕದ ಸಮಾಜವಾದಿಗಳನೇಕರು ಜೆ. ಪಿ. ಯವರ ಧೋರಣೆಗಳನ್ನು ಗಮನಿಸುತ್ತಿದ್ದರು. ಜೆ. ಪಿ. ಭೂದಾನಕ್ಕೆ ಹೋದದ್ದರಿಂದ ಕರ್ನಾಟಕದ ಸಮಾಜವಾದಿಗಳೂ ಭೂಚಳವಳಿಯಲ್ಲಿ ಭರವಸೆ ಕಳೆದುಕೊಂಡರು.

೧೯೧೬ರಿಂದಲೇ ಗಾಂಧೀಜಿಯ ಆಶ್ರಮ ವಾಸಿಗಳಾಗಿದ್ದ ವಿನೋಬಾಭಾವೆ ಸ್ವಾತಂತ್ರ್ಯ ಚಳವಳಿಯಿಂದ ಹೊರತಾದ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ವಿನೋಭಾವೆಯವರ ‘ಆಧ್ಯಾತ್ಮಿಕ’ ನೆಲೆ ಸಮಾಜವಾದದ ಚಳವಳಿಯ ತಳಹದಿಯ ಮೇಲೆ ಮಾರಕ ಪರಿಣಾಮ ಬೀರುವಂಥದ್ದೇ ಅಗಿತ್ತು. ಜಮೀನ್ದಾರಿ ಪದ್ಧತಿಯ ನಾಶಕ್ಕಾಗಿ ೧೯೫೦ರ ದಶಕದಲ್ಲಿ ಭಾರತಾದ್ಯಂತ ಭಿನ್ನ ಮಾರ್ಗಗಳಲ್ಲಿ ಚಳವಳಿ ಆರಂಭಗೊಂಡಿತ್ತು. ಭೂರಹಿತ ರೈತರು ಮತ್ತು ‘ಗೇಣಿ ರೈತರು’ ಜಮೀನ್ದಾರರ ವಿರುದ್ಧ ಭೂಮಿ ಪಡೆಯುವ ಮೂಲ ಉದ್ದೇಶದಿಂದ ಸಂಘಟಿತರಾಗಲಾರಂಭಿಸಿದ್ದರು. ಭೂಮಿಯ ಪ್ರಶ್ನೆ, ರಾಜಕೀಯ ಸ್ವಾತಂತ್ರ್ಯ ನಂತರದ ‘ಆರ್ಥಿಕ ಸ್ವಾತಂತ್ರ್ಯದ’ ಹೋರಾಟದ ಕೇಂದ್ರವೇ ಆಗಿತ್ತು. ರಾಷ್ಟ್ರೀಯತೆಯ ಆಧಾರದಲ್ಲಿ ‘ಆಳುವ ಅಧಿಕಾರ’ ಪಡೆದ ಕಾಂಗ್ರೆಸ್ ‘ಆರ್ಥಿಕ ಸ್ವಾತಂತ್ರ್ಯ’ಕ್ಕಾಗಿ ನಡೆದ ಚಳವಳಿಯನ್ನು ಮುಖಾಮುಖಿಯಾಗಬೇಕಿತ್ತು. ಸ್ವಾತಂತ್ರ‍್ಯಾ ನಂತರವೂ ಕಾಂಗ್ರೆಸ್ ಪಾಳೆಯಗಾರಿ ಭೂಮಾಲಕತ್ವದ ಬಗ್ಗೆ, ಕೃಷಿ ಕೂಲಿಗಳ ಕಡುಬಡತನದ ಬಗ್ಗೆ, ಹಳ್ಳಿಗಳಿಂದ ನಗರಗಳಿಗೆ ಅಟ್ಟುವ ನಿರುದ್ಯೋಗ, ಅರೆಉದ್ಯೋಗ ಕಡುಬಡತನಗಳ ಬಗ್ಗೆ ಯಾವ ಕ್ರಿಯಾಶೀಲವಾದ ಕಾರ್ಯಕ್ರಮವನ್ನೂ ರೂಢಿಸಿಕೊಳ್ಳಲಿಲ್ಲ. ಈ ಇಚ್ಛೆಯನ್ನೂ ತೋರಿಸಲಿಲ್ಲ.

ಕಾಂಗ್ರೆಸ್ಸಿನ ಈ ಜನ ವಿರೋಧಿ ಧೋರಣೆಯ ವಿರುದ್ಧ ಹೋರಾಡುವ ಸೈದ್ಧಾಂತಿಕ ನೆಲೆ ವಾಮಪಂಥೀಯ ಪಕ್ಷಗಳಿಗೆ ಮಾತ್ರ ಇದ್ದುದರಿಂದ ನಲವತ್ತು ಮತ್ತು ಐವತ್ತರ ದಶಕಗಳಲ್ಲಿ ದೇಶದಲ್ಲಿ ನಡೆದ ಅನೇಕ ರೈತ ಹೋರಾಟಗಳನ್ನು ಕಮ್ಯುನಿಸ್ಟ್ ಅಥವಾ ಸೋಷಲಿಸ್ಟ್ ಪಕ್ಷಗಳೇ ಪ್ರಚೋದಿಸಿದವು. ಸಂಸದೀಯ ವ್ಯವಸ್ಥೆಯಲ್ಲಿ ಆಳುವ ಸರಕಾರಕ್ಕೆ ಪ್ರತಿಯಾಗಿ ‘ವಿರೋಧ ಪಕ್ಷಗಳು’ ಭೂಮಿ ಪ್ರಶ್ನೆಯನ್ನಿಟ್ಟುಕೊಂಡೇ ವಸಾಹತ್ತೋತ್ತರ ಚಳವಳಿಯನ್ನು ಸಂಘಟಿಸಲಾರಂಭಿಸಿದ್ದವು. ಊಳಿಗಮಾನ್ಯ ಆರ್ಥಿಕ ಸಂಬಂಧಗಳನ್ನು ಹೊಂದಿದ್ದ ಭಾರತದ ‘ಆರ್ಥಿಕ ಸ್ವಾತಂತ್ರ್ಯ’ದ ಮೂಲನೆಲೆ ‘ಭೂಮಿ’ ಎಂದೇ ಗುರುತಿಸಿದ್ದ ಕಮ್ಯುನಿಸ್ಟರು ‘ಭೂಮಾಲಿಕ’ ವರ್ಗ ನಾಶವಾಗದೇ ಆರ್ಥಿಕ ಸಮಾನತೆ ಸಾಧ್ಯವಾಗದೆಂದು ಮನಗಂಡಿದ್ದರು. ಭಾರತದಲ್ಲಿ ‘ದುಡಿಯುವ ವರ್ಗ’ವಾಗಿದ್ದ ರೈತ ಸಮೂಹದ ಆರ್ಥಿಕ ಸ್ವಾತಂತ್ರ್ಯ ‘ಭೂಮಿಯ ಮೇಲೆ ಹಕ್ಕು’ ಸ್ಥಾಪಿಸಿಕೊಳ್ಳುವ ಮೂಲಕ ಮಾತ್ರ ಸಾಧ್ಯವೆಂದು ಅರಿತಿದ್ದರು. ಕೆಲವೇ ಜಮೀನ್ದಾರರ ಕೈಯಲ್ಲಿ ಕೇಂದ್ರೀಕೃತಗೊಂಡಿದ್ದ ಬಹುಪಾಲು ಭೂಮಿಯನ್ನು ಭೂರಹಿತ ರೈತವರ್ಗದ ಪಾಲಾಗಿಸಲು ಸಂಘರ್ಷಾತ್ಮಕ ಹೋರಾಟಗಳನ್ನು ಜಾರಿಯಲ್ಲಿಟ್ಟಿದ್ದರು. ಈ ಬಗೆಯ ‘ತೀವ್ರಗಾಮಿ ಸಂಘರ್ಷ’ದಿಂದ ತೆಲಂಗಾಣದ ಜಮೀನ್ದಾರ ವರ್ಗ ತತ್ತರಿಸಿತ್ತು. ಭೂಸಂಘರ್ಷ ಕ್ರಾಂತಿಯ ಸ್ವರೂಪ ತಾಳಿ ಭೂಮಿ ಹಕ್ಕಿನ ಗುರಿ ಹಿಂಸೆಯ ಮಾರ್ಗವನ್ನು ಕಾಣಿಸಿತ್ತು. ಇನ್ನೊಂದೆಡೆ ಸಮಾಜವಾದಿಗಳು ಅನೇಕ ರಾಜ್ಯಗಳಲ್ಲಿ ಹಿಂಸಾತ್ಮಕವಲ್ಲದ ‘ನಾಗರಿಕ ಅವಿಧೇಯತೆ’ ಮತ್ತು ‘ಕಾನೂನು ಭಂಗ’ದ ಮಾದರಿಯಲ್ಲಿ ಭೂಹೋರಾಟಗಳನ್ನು ಸಂಘಟಿಸಿದ್ದರು. ಕರ್ನಾಟಕದಲ್ಲಿ ಆಗಷ್ಟೇ ‘ಗೇಣಿ’ ಸಮಸ್ಯೆಯಿಂದ ಆರಂಭವಾದ ಹೋರಾಟ ‘ಉಳುವವನೇ ಭೂಮಿ ಒಡೆಯ’ ಎಂಬ ಚರ್ಚೆಗೆ ತೀವ್ರತೆಯನ್ನು ನೀಡಿತ್ತು. ಈ ಚಿಂತನೆಯಿಂದ ಭೂಮಾಲಿಕ ವರ್ಗ ಕರ್ನಾಟಕದಲ್ಲಿಯೂ ವಿಚಲಿತಗೊಂಡಿತ್ತು. ಮುಂಬೈ ಸರಕಾರ ‘ಇನಾಂ ಭೂಮಿ’ ಹಾಗೂ ‘ಜಹಗೀರು ಭೂಮಿ’ ಒಡೆತನವನ್ನು ಕಾನೂನುನ ಮೂಲಕವೆ ಕಸಿದುಕೊಂಡಿತ್ತು. ದೇಶದೆಲ್ಲೆಡೆ ಕಾಣಿಸಿಕೊಂಡ ಇಂತಹ ವ್ಯಾಪಕ ಕ್ರಿಯಾತ್ಮಕ ಕಾಲಘಟ್ಟದಲ್ಲಿ ವಿನೋಬಾ ಭಾವೆ ‘ಆಧ್ಯಾತ್ಮಿಕ ಮಾರ್ಗ’ದಲ್ಲಿ ಜಮೀನ್ದಾರರ ಮನ ಒಲಿಸಿ, ಅವರಿಂದ ದಾನದ ರೂಪದಲ್ಲಿ ಭೂಮಿ ಪಡೆದು ಭೂರಹಿತರಿಗೆ ವಿತರಿಸುವ ನಿಲುವು ಆರ್ಥಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾದುದೇ ಆಗಿತ್ತು. ಕಮ್ಯುನಿಸ್ಟರ ಕ್ರಾಂತಿ ಹಾಗೂ ಸಮಾಜವಾದಿಗಳ ಚಳವಳಿಗಳೆರಡನ್ನೂ ಏಕಕಾಲದಲ್ಲಿ ನಿಃಸತ್ವಗೊಳಿಸುವ, ಅಂತರ್ಗತ ಉದ್ದೇಶವನ್ನು ಹೊಂದಿತ್ತು. ಹಾಗೆಂದೇ ಲೋಹಿಯಾ ‘ಭೂದಾನ’ದ ವಿನೋಬಾ ಕರೆಯನ್ನು ನಿರಾಕರಿಸಿದರು ಮತ್ತು ಟೀಕಿಸಿದರು. ಆದರೆ ಜಯಪ್ರಕಾಶ್ ನಾರಾಯಣ ವಿನೋಬಾ ಕರೆಗೆ ಓಗೊಟ್ಟರು. ಈ ಮೂಲಕ ಸಮಾಜವಾದಿ ಚಳವಳಿಯ ಇಬ್ಬರು ಪ್ರಮುಖ ವ್ಯಕ್ತಿಗಳು ವಿರೋಧಿ ನಿಲುವುಗಳನ್ನು ತಾಳುವ ಮೂಲಕ ಚಳವಳಿಯ ಶಕ್ತಿಯೂ ವಿಭಜನೆಗೊಳ್ಳುವಲ್ಲಿ ಭೂದಾನದ ಸುಪ್ತ ಉದ್ದೇಶ ಫಲ ನೀಡಿತ್ತು.

ಕರ್ನಾಟಕದಲ್ಲಿಯೂ ಭೂದಾನ ಚಳವಳಿ ಸಮಾಜವಾದಿ ಚಳವಳಿಯನ್ನು ಒಡೆಯುವಲ್ಲಿ ಯಶಸ್ವಿಯಾಯ್ತು. ಖಾದ್ರಿ ಶಾಮಣ್ಣ, ಬಾ.ಸು.ಕೃಷ್ಣಮೂರ್ತಿ, ಗರುಡ ಶರ್ಮ, ಅವರನ್ನು ಒಳಗೊಂಡಂತೆ ಅನೇಕ ಸಮಾಜವಾದಿಗಳು ಭೂದಾನವನ್ನು ಒಪ್ಪಿಕೊಂಡು, ವಿನೋಬಾ ಅವರ ಹಿಂದೆ ಹೋದರು. ಹಾಗೆ ಹೋದ ಸಂಗಾತಿಗಳ ಬಗ್ಗೆ ಗೋಪಾಲಗೌಡರು, “ಭೂಮಾಲಿಕರ ಭೋಜನದ ರುಚಿಯನ್ನು ಬಲ್ಲವರಿಗೆ ಉಳುವವರ ಕಷ್ಟ ಗೊತ್ತಾಗುವುದಿಲ್ಲ” ಎಂದು ಕಟುವಾಗಿ ಟೀಕಿಸಿದರು.

೧೯೫೭ರ ಭೂದಾನ ಚಳವಳಿಯ ನಂತರದ ದಿನಗಳಿಂದಲೇ ಕರ್ನಾಟಕದಲ್ಲಿ ಸಮಾಜವಾದವು ಚಳವಳಿಯ ಓಘವನ್ನು ಕಡಿಮೆ ಮಾಡಿಕೊಂಡು, ಅಧಿಕಾರ ರಾಜಕಾರಣದಲ್ಲಿ ತನ್ನತನವನ್ನು ಗುರುತಿಸಿಕೊಂಡಿತು. ಸಮಾಜವಾದಕ್ಕೆ ಚಳವಳಿಯ ಸ್ವರೂಪ ನೀಡಿದ್ದೇ ಭೂ ರೈತ ಹೋರಾಟಗಳು. ಕಾರ್ಮಿಕ ವರ್ಗವನ್ನು ಸಮಾಜವಾದ ಸಂಘಟಿಸಿದ್ದು ತುಂಬಾ ಕಡಿಮೆಯೇ. ಬಳ್ಳಾರಿಯಲ್ಲಿ ದಾಸನ್ ಸಾಲೋಮನ್, ಬೆಂಗಳೂರಿನಲ್ಲಿ ವೆಂಕಟರಾಂ, ಹುಬ್ಬಳ್ಳಿಯಲ್ಲಿ ಒಂದಿಷ್ಟು ರೈಲ್ವೆ ನೌಕರರ ಸಂಘಟನೆ ಇದಿಷ್ಟು ಬಿಟ್ಟರೆ ಗಮನಾರ್ಹವಾಗಿ ‘ಕಾರ್ಮಿಕ ವರ್ಗ’ವನ್ನು ಸಮಾಜವಾದಿ ಚಳವಳಿ ಒಳಗೊಳ್ಳಲಿಲ್ಲ. ಹಾಗಾಗಿ ಸಮಾಜವಾದಿ ಚಳವಳಿಯ ‘ವರ್ಗ ಸಂಘಟನೆ’ಯ ಭಾಗವಾಗಿದ್ದ ಭೂ – ರೈತ ಹೋರಾಟಗಳು ದುರ್ಬಲಗೊಳ್ಳುತ್ತಲೇ ಸಮಾಜವಾದ, ಚಳವಳಿಯ ಲಕ್ಷಣದಿಂದ ‘ಮತಪೆಟ್ಟಿಗೆ’ಯ ಲಕ್ಷಣಕ್ಕೆ ಬದಲಾಯಿತು. ಮತಪೆಟ್ಟಿಗೆಗೆ ನಿಷ್ಠವಾಗುತ್ತಲೇ ಚಳವಳಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ‘ರಾಜತಾಂತ್ರಿಕ’ ಪ್ರಕ್ರಿಯೆಗಳೇ ಪ್ರಧಾನ ಭೂಮಿಕೆಯಾದವು. “ಲೋಹಿಯಾರ ನಿಧನದ ಬಳಿಕ ಸಮಾಜವಾದಿಗಳು ಜೈಲು – ಗುದ್ದಲಿಯನ್ನು ಮರೆತೇಬಿಟ್ಟರು. ಕೇವಲ ಚುನಾವಣೆಗಳನ್ನು ಬೆನ್ನಟ್ಟಿದ್ದರು” ಎಂದು ಸಮಾಜವಾದಿ ನಾಯಕರಲ್ಲೊಬ್ಬರಾದ ಕಿಶನ್ ಪಟ್ನಾಯಕ್ ಆತ್ಮ ವಿಮರ್ಶೆಯ ಮಾತುಗಳನ್ನಾಡುತ್ತಾರೆ. ಪಟ್ನಾಯಕರ ದೃಷ್ಟಿಯಲ್ಲಿ “ರೈತ ಸಂಘ, ದಲಿತಸಂಘಗಳೂ ರೈತ ದಲಿತರಿಗೆ ಮೀಸಲಾದ ಹೋರಾಟಗಳೇ ಹೊರತು ಚುನಾವಣಾ ರಾಜಕೀಯ ಚಳವಳಿಗಳಲ್ಲ. ಟ್ರೇಡ್ ಯೂನಿಯನ್ ಗಳಂತೆ ಕೆಲಸ ಮಾಡಿದ್ದರಿಂದ ಅವು ಸಮಾಜವಾದಿ ಚಳವಳಿಗಳಾಗಲಿಲ್ಲ.”

ಭೂದಾನ ಚಳವಳಿಯ ನಂತರದಿಂದ ತನ್ನ ಬಿರುಸಿನ ಹೆಜ್ಜೆಗಳನ್ನು ನಿಧಾನಗೊಳಿಸಿದ್ದ ಸಮಾಜವಾದಿ ಚಳವಳಿ, ಕರ್ನಾಟಕದಲ್ಲಿ ದೇವರಾಜು ಅರಸು ಅವರ ಭೂಸುಧಾರಣೆಗಳ ನಂತರದಲ್ಲಿ ನಿಂತೇ ಬಿಟ್ಟಿತು. ಲೋಹಿಯಾರ ನಿಧನಾ ನಂತರ ಸಮಾಜವಾದವೂ ಬಹುತೇಕ ಅಸ್ವಸ್ಥಗೊಂಡು ತುರ್ತುಪರಿಸ್ಥಿತಿಯ ಪರಿಣಾಮವಾಗಿ ಕಾಂಗ್ರೆಸ್ಸನ್ನು ಚುನಾವಣಾ ರಾಜಕಾರಣದ ಪ್ರತಿಸ್ಪರ್ಧಿ ಪಕ್ಷವಾಗಿ ಮಾತ್ರ ಗ್ರಹಿಸಿತು. ಕಾಂಗ್ರೆಸ್ಸಿನ ವರ್ಗ ಸ್ವರೂಪವನ್ನು ಅರಿತು ಚಳವಳಿಯ ಮೂಲಕ ಪರ್ಯಾಯ ಶಕ್ತಿಯಾಗಬಹುದಾಗಿದ್ದ ಅವಕಾಶಗಳನ್ನು ಕಳೆದುಕೊಂಡು ರಾಜಕಾರಣವನ್ನೇ ಪ್ರಧಾನವಾಗಿಸಿಕೊಂಡು ವಿರೋಧಾಭಾಸಗಳ ಒಕ್ಕೂಟವಾಗಿ ‘ಜನತಾ ಪಕ್ಷ’ದಲ್ಲಿ ಕರಗಿತು. ಹುಟ್ಟಿನ ಸಂದರ್ಭದಲ್ಲಿ ‘ಎಡಪಂಥೀಯ’ವಾಗಿದ್ದು ನಂತರದಲ್ಲಿ ‘ಮಧ್ಯಪಂಥೀಯ’ವಾಗಿದ್ದ ಸಮಾಜವಾದ ರಾಜಕೀಯ ಮೈತ್ರಿಗಳ ಮೂಲಕ ಬಲಕ್ಕೆ ವಾಲಿತು. ‘ಜನತಾ ಪಕ್ಷ’ದ ರಚನೆ, ಮತ್ತು ಆ ನಂತರದ ವಿಭಜನೆಗಳಲ್ಲಿ ಇದು ವ್ಯಕ್ತವಾಗಿ, ‘ಜನತಾ ಪಕ್ಷ’ದ ಭಾಗವಾಗಿದ್ದ ಬಲಪಂಥೀಯ ಬಣ, ಜನತಾ ಪಕ್ಷದಲ್ಲಿ ಶಕ್ತಿ ವೃದ್ಧಿಸಿಕೊಂಡು ಅದರಿಂದ ಸಿಡಿದು ‘ಭಾರತೀಯ ಜನತಾ ಪಕ್ಷ’ ಸೃಷ್ಟಿಯಾಗುವ ಪ್ರಕ್ರಿಯೆಯಲ್ಲಿ ಭಾರತದ ಸಮಾಜವಾದಿ ಚಳವಳಿ ಸಂಪೂರ್ಣವಾಗಿ ತಾನು ಬಲಿಯಾಯಿತು.