ಡಾ. ರಾಮಮನೋಹರ ಲೋಹಿಯಾ ಅವರು ಯೂರೋಪು ಮೂಲದ ರಾಜಕೀಯ ಪರಿಕಲ್ಪನೆಯಾಗಿದ್ದ ಸಮಾಜವಾದವನ್ನು ಭಾರತದ ಸಾಂಸ್ಕೃತಿಕ ಚರಿತ್ರೆ ಮತ್ತು ಸಮಾಜೋ ಆರ್ಥಿಕ ವಾಸ್ತವಗಳ ಹಿನ್ನೆಲೆಯಲ್ಲಿ ಮರುರೂಪಿಸಿದ ಅನನ್ಯ ರಾಜಕೀಯ ಚಿಂತಕ. ಭಾರತದ ಸಂದರ್ಭದಲ್ಲಿ ಸಮಾಜವಾದ ಎಂದರೆ ಲೋಹಿಯಾ ಅವರ ಚಿಂತನೆಗಳೇ ಆಗಿವೆ. ಕಳೆದ ಶತಮಾನದ ಉತ್ತರಾರ್ಧದ ರಾಜಕೀಯ ಸಂದರ್ಭಗಳೇ ಲೋಹಿಯಾರ ಚಿಂತನೆಗಳನ್ನು ಲೋಹಿಯಾವಾದವನ್ನಾಗಿಸಿದವು. ಆಧುನಿಕ ಭಾರತದ ಚರಿತ್ರೆಯಲ್ಲಿ ಲೋಹಿಯಾವಾದ ರಾಜಕೀಯ ಸಿದ್ಧಾಂತವಾಗಿ ಖಚಿತ ಸ್ವರೂಪವನ್ನು ಪಡೆಯದಾದರೂ ಸಾಂಸ್ಕೃತಿ ಪರಂಪರೆ ಹಾಗೂ ಸಮಕಾಲೀನ ರಾಜಕೀಯ ಸಂದರ್ಭಗಳೊಂದಿಗೆ ಮುಖಾಮುಖಿಯಾಗುವ ಮೂಲಕ ಸೃಷ್ಟಿಗೊಂಡ ಲೋಹಿಯಾವಾದಿ ‘ತಾತ್ವಿಕತೆ’ ನಿರ್ವಹಿಸಿದ ಪಾತ್ರ ಚಾರಿತ್ರಿಕವಾದುದು. ಭಾರತದ ಅನುಭವಗಳಿಂದ ಭಿನ್ನವಾಗದ ಕರ್ನಾಟಕದ ಸಂದರ್ಭದಲ್ಲಿಯೂ ಲೋಹಿಯಾ ಸಮಾಜವಾದಿ ಚಳವಳಿ ಇಲ್ಲಿನ ಸಾಂಸ್ಕೃತಿಕ ಹಾಗೂ ರಾಜಕೀಯ ಸ್ವರೂಪವನ್ನು ನಿರೂಪಿಸಿತು. ಆರಂಭದ ಕಾಲಘಟ್ಟದ ಮೊದಲ ತಲೆಮಾರಿನ ಸಮಾಜವಾದಿಗಳ ಸಂದರ್ಶನದ ಮೂಲಕ ಸಮಾಜವಾದಿ ಚಳವಳಿಯ ಸ್ವರೂಪ, ಹೋರಾಟಗಳ ಕಾರಣ – ಪರಿಣಾಮಗಳು ಎದುರಿಸಿದ ಸವಾಲು ಹಾಗೂ ಆತಂಕ ಇತ್ಯಾದಿಗಳ ಮೇಲೆ ಬೆಳಕು ಬೀರಲು ಈ ಕೃತಿಯ ಮೂಲಕ ಪ್ರಯತ್ನಿಸಲಾಗಿದೆ. ಸಪ್ತಕ್ರಾಂತಿ ಮತ್ತು ಚತುಷ್ತಂಭ ರಾಷ್ಟ್ರದ ಪರಿಕಲ್ಪನೆಗಳ ಮೂಲಕ ಭಾರತದಲ್ಲಿ ಸಮಾಜವಾದವನ್ನು ಸಾಧಿಸಲು ಮೂರು ದಾರಿಗಳನ್ನು ಲೋಹಿಯಾ ಸೂಚಿಸಿದರು. ಅವುಗಳಲ್ಲಿ ಮೊದಲನೆಯದು ರಚನಾತ್ಮಕ ಕಾರ್ಯಗಳನ್ನು ಸಾಂಕೇತಿಸುವ ‘ಸಲಿಕೆ.’ ಎರಡನೆಯದು ಸಂಸದೀಯ ರಾಜಕಾರಣವನ್ನು ಸೂಚಿಸುವ ಮತದಾನ ಹಾಗೂ ಮೂರನೆಯದು ವ್ಯವಸ್ಥೆ ವಿರೋಧಿ ಹೋರಾಟಗಳನ್ನು ಪ್ರತಿಪಾದಿಸುವ ಜೈಲು. ಈ ಮೂರು ದಾರಿಗಳ ಮೂಲಕ ಲೋಹಿಯ ತಮ್ಮ ರಾಜಕೀಯ ಸಿದ್ಧಾಂತವನ್ನು ಕಾರ್ಯಗತ ಮಾಡಬಯಸಿದರು. ಹಾಗಾಗಿ ಸಮಾಜವಾದಿ ಚಳವಳಿಯ ಕರ್ನಾಟಕದ ಅನುಭವವನ್ನು ಈ ಮೂರು ವಿಭಾಗಗಳ ಮೂಲಕ ಅಧ್ಯಯನ ಮಾಡಲು ಪ್ರಯತ್ನಿಸಲಾಗಿದೆ. ಈ ಪ್ರಸ್ತಾವನೆಯಲ್ಲಿ ಸಮಾಜವಾದಿ ಚಳುವಳಿಯು ರೂಪುಗೊಂಡ ಬಗೆ, ಹೋರಾಟಗಳು ಹಾಗೂ ಚುನಾವಣಾ ರಾಜಕಾರಣದ ಸ್ವರೂಪ ಇತ್ಯಾದಿಗಳನ್ನು ಕ್ರಮವಾಗಿ ಸಲಕೆ, ಜೈಲು ಹಾಗೂ ಓಟು ಈ ಮೂರು ವಿಭಾಗಗಳಲ್ಲಿ ಇಲ್ಲಿ ಚರ್ಚಿಸಲಾಗಿದೆ.

ಭಾಗ : ಸಲಕೆ

ಮಾರ್ಕ್ಸ್ಗಾಂಧಿ ಕೂಡುಕಟ್ಟು

“ರಾಷ್ಟ್ರೀಯತಾವಾದ ಮತ್ತು ಮಾರ್ಕ್ಸ್‌ವಾದಗಳು ಆಧುನಿಕ ಭಾರತದ ಎರಡು ಪ್ರಮುಖ ಚಿಂತನೆಗಳಾಗಿ ಇತಿಹಾಸದಲ್ಲಿ ಕಾಣಿಸಿಕೊಂಡವು. ಅವೆರಡೂ ಯುರೋಪನಲ್ಲಿ ಜನ್ಮ ತಳೆದು ೨೦ನೇ ಶತಮಾನದಲ್ಲಿ ಏಷಿಯಾದ ಕಡೆ ಸಂಚರಿಸಿದವು.” ಭಾರತವನ್ನಾಳುತ್ತಿದ್ದ ವಸಾಹತುಶಾಹಿ, ರಾಷ್ಟ್ರೀಯತಾವಾದ ಎಂಬ ಸ್ವಯಂ ಪ್ರತಿರೋಧವನ್ನು ನಿರ್ಮಿಸಿಕೊಂಡರೆ, ವಸಾಹತುಶಾಹಿಯ ಅಸ್ತಿತ್ವನಾಶಕ ಸಿದ್ಧಾಂತವಾಗಿ ಮಾರ್ಕ್ಸ್‌ವಾದ ಪ್ರವೇಶ ಪಡೆಯಿತು. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಹೆಸರಿನಲ್ಲಿ ರಾಷ್ಟ್ರೀಯತಾವಾದವು ವಸಾಹತುಶಾಹಿಯ ಜೊತೆ ಸಖ್ಯ ಬೆಳೆಸಿಯೇ ಸಾತ್ವಿಕ ಪ್ರತಿರೋಧವನ್ನು ತೋರಿದರೆ ಕಮ್ಯುನಿಸ್ಟ್ ಚಳವಳಿಯ ಮೂಲಕ ಮಾರ್ಕ್ಸ್‌ವಾದ ವಸಾಹತುಶಾಹಿಯೊಂದಿಗೆ ಸಂಘರ್ಷಕ್ಕಿಳಿಯಿತು. ಈ ಸಖ್ಯದ ಮತ್ತು ಸಂಘರ್ಷದ ಭಿನ್ನ ತಾತ್ವಿಕತೆಗಳೇ ಸಾಮಾಜಿಕ ಸುಧಾರಣೆಯ ಮತ್ತು ಸಾಮಾಜಿಕ ಕ್ರಾಂತಿಯ ಮಾರ್ಗಗಳು ಎನಿಸಿಕೊಂಡವು.

“ರಾಷ್ಟ್ರೀಯ ವಿಮೋಚನೆ ಮತ್ತು ಸಾಮಾಜಿಕ ಕ್ರಾಂತಿಗಳ ನಡುವೆ ಯಾವ ವಿರೋಧಭಾಸವನ್ನು ಕಾಣದ, ಅವೆರಡೂ ಒಂದಕ್ಕೊಂದು ಪೂರಕ”ವೆಂದು ಪರಿಗಣಿಸಿದ ಮೂರನೆಯ ಧೋರಣೆಯೊಂದು ಕಾಣಿಸಿಕೊಂಡಿತು. ಸಂಕುಚಿತ ರಾಷ್ಟ್ರೀಯತೆ ಮತ್ತು ಹಿಂಸೆಯ ಅನಿವಾರ್ಯತೆ ಎರಡನ್ನೂ ನಿರಾಕರಿಸಿದ ಈ ಧೋರಣೆ ರಾಜಕೀಯ ಅಧಿಕಾರವನ್ನು ವಶಪಡಿಸಿಕೊಂಡು ಸಮಾಜವಾದಿ ಸಮಾಜ ನಿರ್ಮಾಣವನ್ನು ಪ್ರತಿಪಾದಿಸಿತು. ಈ ಧೋರಣೆಯೇ ಮುಂದುವರಿದ ಚರ್ಚೆಗಳಲ್ಲಿ ಭಾರತೀಯ ಸಂದರ್ಭದಲ್ಲಿ ಸಮಾಜವಾದ ಎಂದು ಕರೆಸಿಕೊಂಡಿತು. ಆಚಾರ್ಯ ನರೇಂದ್ರದೇವ ಈ ಭಾರತೀಯ ಸಮಾಜವಾದ ಪ್ರತಿಪಾದಿಸಿದವರಲ್ಲಿ ಮೊದಲಿಗರಾಗಿದ್ದರು.

ಭಾರತದ ಸಮಾಜವಾದದ ಸ್ವರೂಪವನ್ನು ಆಚಾರ್ಯ ನರೇಂದ್ರದೇವ, ಗಾಂಧೀಜಿ ಹಾಗೂ ರಾಮಮನೋಹರ ಲೋಹಿಯಾ ಅವರ ತಾತ್ವಿಕ ಸಂವಾದಗಳ ಮೂಲಕ ಗ್ರಹಿಸಬಹುದು. ಆಚಾರ್ಯ ನರೇಂದ್ರದೇವ ಗಾಂಧೀಜಿಯ ಸತ್ಯಾಗ್ರಹ ಮತ್ತು ಅಹಿಂಸೆಯ ವಿಧಾನವನ್ನು ಒಪ್ಪಿಕೊಂಡರೂ ಮಾರ್ಕ್ಸ್‌ವಾದಿ ನಿಷ್ಠೆಯನ್ನು ಬಿಡಲಿಲ್ಲ. ಗಾಂಧೀಜಿ ಸಹ ಕೊನೆಕೊನೆಗೆ ‘ಹಿಂಸೆ’ಯನ್ನು ಹೊರತುಪಡಿಸಿ ಆಚಾರ್ಯರ ಮಾರ್ಕ್ಸ್‌ವಾದಿ ನಿರ್ವಚನವನ್ನು ಒಪ್ಪಿಕೊಂಡರು. ಆದರೆ ಆಚಾರ್ಯರು ಗಾಂಧೀ ವಿಚಾರಗಳನ್ನು ಒಪ್ಪಕೊಂಡರಾದರೂ ತಮ್ಮ ಮಾರ್ಕ್ಸ್‌ವಾದಿ ಚಿಂತನೆಯನ್ನು ಗಾಂಧಿ ಚಿಂತನೆಗೆ ಅನುಗುಣವಾಗಿ ಮಾರ್ಪಡಿಸಲು ನಿರಾಕರಿಸಿದರು.

“ನಾವು ಬದುಕುತ್ತಿರುವ ಸಮಾಜವು ವರ್ಗಗಳಿಂದ ಕೂಡಿದೆ. ಈ ವರ್ಗೀಕೃತ ಸಮಾಜವು ಆಸಕ್ತಿಗಳ ಸಂಘರ್ಷವನ್ನು ಹುಟ್ಟುಹಾಕಿದೆ ಮತ್ತು ವರ್ಗ ಸಂಘರ್ಷ ಹಾಗೂ ವರ್ಗ ಪ್ರಜ್ಞೆಯನ್ನು ನಿರ್ಮಿಸಿದೆ” ಎಂದು ಆಚಾರ್ಯ ನರೇಂದ್ರದೇವ ದೃಢವಾಗಿ ನಂಬಿದ್ದರು. “ಈ ವರ್ಗ ಹೋರಾಟದಲ್ಲಿ ಸಮಾಜವಾದವು ಖಂಡಿತವಾಗಿಯ ತುಳಿತಕ್ಕೊಳಗಾದ ವರ್ಗಗಳ ಪರವಾಗಿದೆ” ಎಂಬ ಖಚಿತತೆಯನ್ನು ಹೊಂದಿದ್ದರು. ಯಾವ ಒತ್ತಡಕ್ಕೂ ಮಣಿಯದ ನೈತಿಕ ಕರೆಗಳಿಗೆ ಓಗೊಟ್ಟು ತಮ್ಮ ವರ್ಗಗಳ ಪ್ರಾಬಲ್ಯ ಮತ್ತು ಹಕ್ಕುಗಳನ್ನು ಬಿಟ್ಟುಕೊಡಲು ತಮ್ಮ ಮನೋಭಾವ ಮತ್ತು ದೃಷ್ಟಿಕೋನಗಳನ್ನು ಬದಲಿಸಿಕೊಂಡ ಶ್ರೀಮಂತವರ್ಗದ ನಿದರ್ಶನವು ಇತಿಹಾಸದಲ್ಲಿ ದಾಖಲಾಗಿಯೇ ಇಲ್ಲ ಎಂಬುದು ಅವರ ಮಾರ್ಕ್ಸ್‌ವಾದಿ ಸಮರ್ಥನೆಯಾಗಿತ್ತು. ಆದರೆ ಭಾರತದ ಸಂದರ್ಭದಲ್ಲಿ ವರ್ಗ ಹೋರಾಟವನ್ನು ಗಾಂಧಿಯ ಅಹಿಂಸಾತ್ಮಕ ಹೋರಾಟ ಹಾಗೂ ಸತ್ಯಾಗ್ರಹಗಳ ಮೂಲಕ ಸಾಧಿಸಬಹುದೆಂದು ಭಾವಿಸಿದರು.

ವರ್ಗ ಹೋರಾಟದಲ್ಲಿ ಹಿಂಸೆಯನ್ನು ಬಳಸುವುದಕ್ಕೆ ನೈತಿಕ ತಕರಾರು ಇಲ್ಲದ ಆಚಾರ್ಯ ನರೇಂದ್ರದೇವರು, ಹಿಂಸೆಯು ಅನಿವಾರ್ಯ ಎಂಬ ಧೋರಣೆಯನ್ನು ತಳ್ಳಿಹಾಕಿದರು. ಅವರು ವರ್ಗಹೋರಾಟ ಮತ್ತು ವರ್ಗರಹಿತ ಸಮಾಜ ನಿರ್ಮಾಣ ಸಿದ್ಧಾಂತವನ್ನು ಪರಿಶುದ್ಧ ಗುರಿಗೆ ಪರಿಶುದ್ಧ ಮಾರ್ಗ ಎಂಬ ವಾದದೊಂದಿಗೆ ಅನ್ವಯಿಸಿದರು. ವರ್ಗರಹಿತ ಸಮಾಜದ ಪರಿಕಲ್ಪನೆ ಒಪ್ಪಿಕೊಂಡರು. ಹಿಂಸೆಯು ಅನಿವಾರ್ಯವಲ್ಲವಾದರೂ ವರ್ಗಸಂಘರ್ಷದ ಕಾಲಕ್ಕೆ ಅದು ‘ಅಗತ್ಯ’ ಎಂಬ ಆಚಾರ್ಯರ ನಿಲುವಿಗೆ ಗಾಂಧಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಮುಂದುವರಿದು ಕಾಂಗ್ರೆಸ್ ಸಮಾಜವಾದಿ ಪಕ್ಷ ಹಿಂಸೆಯ ವಿಧಾನವನ್ನು ತ್ಯಜಿಸಿದರೆ ಅದರ ಸದಸ್ಯನಾಗಲು ಗಾಂಧೀಜಿ ಒಪ್ಪಿಕೊಂಡಿದ್ದರು.

ಗಾಂಧೀಜಿಯವರ ಟ್ರಸ್ಟೀಶಿಪ್ ಪರಿಕಲ್ಪನೆಯನ್ನು ಒಪ್ಪಿಕೊಳ್ಳದ ನರೇಂದ್ರದೇವರು, ಬಲತ್ಕಾರವಿಲ್ಲದೇ ಶ್ರೀಮಂತವರ್ಗವು ತನ್ನ ಆಸ್ತಿಯನ್ನು ಬಿಟ್ಟುಕೊಡಲಾರದು ಎಂದೇ ನಂಬಿದ್ದರು. ಅಂತೆಯೇ ಭಾರತದ ಸಾಂಸ್ಕೃತಿಕ ಸಂಬಂಧಗಳನ್ನು ‘ವರ್ಗಸಂಬಂಧ’ಗಳ ಮೂಲಕ ವಿಶ್ಲೇಷಿಸಿದ್ದರು. ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ಭಾರತದ ಜಾತಿ ವ್ಯವಸ್ಥೆಯ ಹಿಂದಿನ ವರ್ಗವಾಸ್ತವಗಳನ್ನು ಅರಿತಿದ್ದರು.

ಈ ತಾತ್ವಿಕ ಸಂವಾದದಲ್ಲಿ ನಂತರ ಪ್ರವೇಶಿಸಿದ ರಾಮಮನೋಹರ ಲೋಹಿಯಾ ತಾವು ಮಾರ್ಕ್ಸ್‌ವಾದಿಯೂ ಅಲ್ಲ ಮಾರ್ಕ್ಸ್ ವಿರೋಧಿಯೂ ಅಲ್ಲ, ಆದರೆ ಸಮಾಜವಾದಿ ಎಂಬ ಧೋರಣೆ ತಳೆಯುವುದರ ಮೂಲಕ, ಸಮಾಜವಾದದ ತಳಹದಿಯಾಗಿದ್ದ ವರ್ಗಸಿದ್ಧಾಂತವನ್ನು ಪುನರ್‌ರೂಪಿಸಿ ಪರ್ಯಾಯ ಸಿದ್ಧಾಂತವಾಗಿಸುವ ನಿಟ್ಟಿನಲ್ಲಿ ಆಲೋಚಿಸಲಾರಂಭಿಸಿದರು. ಮಾರ್ಕ್ಸ್‌ವಾದದ ಪರ್ಯಾಯ ನೆಲೆಗಳನ್ನು ಗಾಂಧಿಯಲ್ಲಿ ಕಂಡುಕೊಂಡರು. ಗಾಂಧೀಜಿಯವರ ‘ಉಪ್ಪಿನ ಸತ್ಯಾಗ್ರಹದ ಆರ್ಥಿಕತೆ’ ಅವರನ್ನು ಪ್ರಭಾವಿಸಿತ್ತು.

“ಗಾಂಧಿವಾದಿಯಾಗುವುದು ಮತ್ತು ಮಾರ್ಕ್ಸ್‌ವಾದಿಯಾಗುವುದು ಎರಡನ್ನೂ ಬಾಲಿಶತನ ಎಂದೇ ಕರೆದರೂ ಮಾರ್ಕ್ಸ್ ಕುರಿತು ತಾಳಿದ ವಸ್ತುನಿಷ್ಠ ಅಂತರ ಗಾಂಧಿಯವರ ವಿಷಯದಲ್ಲಿ ಅವರಿಗೆ ಸಾಧ್ಯವಾಗಿರಲಿಲ್ಲ.” ಲೋಹಿಯಾ ತಾವು ಗಾಂಧಿವಾದಿ ಎಂದು ಪ್ರಜ್ಞಾಪೂರ್ವಕವಾಗಿ ಹೇಳಿಕೊಳ್ಳಲು ನಿರಾಕರಿಸಿದರಾದರೂ ಗಾಂಧಿ ಚಿಂತನೆಗಳು ಅವರ ಪ್ರಜ್ಞೆಯ ಭಾಗವೇ ಆಗಿದ್ದವು. ಆದರೆ ಗಾಂಧಿ ವಿಚಾರಗಳಿಗೆ ಮಾರುಹೋಗದ ಲೋಹಿಯಾರಿಗೆ ಗಾಂಧೀಜಿಯನ್ನು ಗೌರವಿಸುತ್ತಲೇ ಅವರ ಚಿಂತನೆಗಳನ್ನು ವಿಮರ್ಶಿಸಿ, ಅವುಗಳ ಮಿತಿಯನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಮಿತಿಗಳನ್ನು ಗುರುತಿಸಿ, ತಮ್ಮ ಚಿಂತನೆಗಳ ಮೂಲಕ ಗಾಂಧಿವಾದವನ್ನು ಸಮಕಾಲೀನಗೊಳಿಸುವ ಪ್ರಯತ್ನ ಮಾಡಿದರು, ವಿಸ್ತ್ರತಗೊಳಿಸಿದರು.

ಕಾರ್ಲಮಾರ್ಕ್ಸ್‌ನ ವೈಜ್ಞಾನಿಕ ಸಮಾಜವಾದದ ಅಂಗಭಾಗಗಳಾದ ‘ದುಡಿಮೆ ಮತ್ತು ಬಂಡವಾಳ’ ಹಾಗೂ ‘ರಾಜಕೀಯ ಅರ್ಥಶಾಸ್ತ್ರ’ಗಳ ನೆಲೆಯಿಂದ ಗಾಂಧಿ ಚಿಂತನೆಗಳನ್ನು ಮರು ವಿಶ್ಞೇಷಿಸಿ, ಭಾರತೀಯ ಸಂದರ್ಭದ ಸಮಾಜವಾದವನ್ನು ರೂಪಿಸಿದರು. ಹೀಗೆ ಮರುರೂಪಿಸಲ್ಪಟ್ಟ ಲೋಹಿಯಾರ ಸಮಾಜವಾದ ಸಾಂಸ್ಕೃತಿಕ ವಾಸ್ತವಗಳ ಗ್ರಹಿಕೆಯಲ್ಲಿ ವಹಿಸಿದ ಎಚ್ಚರ ವರ್ಗಸ್ವರೂಪವನ್ನು ವಿಶ್ಞೇಷಿಸುವಾಗ ತಿಳಿಯಾಯಿತು. ಇದು ಆಚಾರ್ಯ ನರೇಂದ್ರ ದೇವರ ಗ್ರಹಿಕೆಗಿಂತ ಭಿನ್ನವಾದುದೇ ಆಗಿತ್ತು. ಲೋಹಿಯಾರ ಚಿಂತನಾ ವಿಶಿಷ್ಟತೆ, ಆತನಕ ಇದ್ದ ಸಮಾಜವಾದದ ನೆಲೆಯನ್ನು ಮಾರ್ಕ್ಸವಾದದಿಂದ ಗಾಂಧಿವಾದಕ್ಕೆ ಬದಲಿಸಿತು. ಹೀಗೆ ಮರುನಿರೂಪಿಸಲ್ಪಟ್ಟ ಗಾಂಧಿವಾದವೇ ಭವಿಷ್ಯದಲ್ಲಿ ಲೋಹಿಯಾ ಸಮಾಜವಾದ, ಲೋಹಿಯಾವಾದವಾಗಿ ಮಾನ್ಯತೆ ಪಡೆಯಿತು.

ಲೋಹಿಯಾ ಅವರು ಗಾಂಧೀಜಿಯವರ ನಾಗರಿಕ ಅವಿಧೇಯತೆಯ ಪರಿಕಲ್ಪನೆಯನ್ನು ಬಂದ್ ಮತ್ತು ಘೇರಾವಗಳ ಮೂಲಕ ಮರುರೂಪಿಸಿದರು. ಗಾಂಧೀಜಿಯವರ ಚರಕಾ ಪರಿಕಲ್ಪನೆಯನ್ನಾಧರಿಸಿ ಸಣ್ಣ ಘಟಕ ಯಂತ್ರದ ಅಗತ್ಯ ಬಿಂಬಿಸಿದರು. ಗಾಂಧೀಜಿಯವರ ಗ್ರಾಮಸ್ವರಾಜ್ಯ ಲೋಹಿಯಾರಲ್ಲಿ ಚತುಷ್ ಸ್ಥಂಭ ರಾಷ್ಟ್ರದ ಪರಿಕಲ್ಪನೆಯಾಧರಿಸಿ ಗ್ರಾಮಸ್ವರಾಜ್ಯ ಸ್ವರೂಪ ಪಡೆಯಿತು. ಸಪ್ತಕ್ರಾಂತಿಯ ಕಲ್ಪನೆಯೂ ಗಾಂಧಿ ಕಲ್ಪನೆಗಿಂತ ಭಿನ್ನವಾಗಿರಲಿಲ್ಲ. ಹೀಗೆ ಜಾಗತಿಕ ಬಂಡವಾಳ ವ್ಯವಸ್ಥೆ ಮತ್ತು ಆಧುನಿಕ ಸಂದರ್ಭದಲ್ಲಿ ಅಪ್ರಸ್ತುತ ಅಥವಾ ‘ಶುದ್ಧ ಆದರ್ಶ’ದ ಸಿದ್ಧಾಂತವಾಗಲಿದ್ದ ಗಾಂಧಿವಾದಕ್ಕೆ ಲೋಹಿಯಾ ಸಮಾಜವಾದಿ ಮಧ್ಯಪ್ರವೇಶದ ಮೂಲಕ ಮರುಜೀವ ನೀಡಿದರು. “ಗಾಂಧಿವಾದ ನಿರಂತರವಾಗಿ ಮರುಹುಟ್ಟು ಪಡೆಯಬೇಕಾದ ಹಾಗೂ ಮರುರೂಪ ಪಡೆಯಬಲ್ಲ ಸಿದ್ಧಾಂತವೆಂಬುದನ್ನು ಸಮಾಜವಾದದ ಮೂಲಕ ಪ್ರಸ್ತುತ ಪಡಿಸಿದರು. ಈ ಸೈದ್ಧಾಂತಿಕ ಪರಿಕ್ರಮದಲ್ಲಿ ಮಾರ್ಕ್ಸವಾದವನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಪ್ರತಿಕ್ರಿಯಾತ್ಮಕವಾಗಿ ಹುಟ್ಟಿದ ವಾದಗಳು, ಗಾಂಧೀವಾದದ ಮೂಲಕ ಸಮರ್ಥಿಸಲ್ಪಟ್ಟವು. ಹೀಗೆ ಮಾರ್ಕ್ಸವಾದ ಮತ್ತು ಗಾಂಧಿವಾದಗಳೆರಡರ ನಡುವಿನ ಲೋಹಿಯಾರ ಗುದ್ದಾಟ ಸಮಾಜವಾದವನ್ನು ರೂಪಿಸಿತು. ಮುಂದೆ ‘ಲೋಹಿಯಾವಾದ’ ಎನಿಸಿಕೊಂಡಿತು.

ವಸಾಹತುಶಾಹಿ ವಿರೋಧಿ ಚಳವಳಿಯನ್ನು ರಾಷ್ಟ್ರೀಯ ವಿಮೋಚನಾ ಚಳವಳಿ ಎಂದೇ ಪರಿಗಣಿಸಿ ರಾಷ್ಟ್ರೀಯವಾದಿಯಾಗಿದ್ದ ಕಾಂಗ್ರೆಸ್ ತನ್ನ ಲಕ್ಷಣಗಳಲ್ಲಿಯೇ ಒಳ ವೈರುಧ್ಯಗಳನ್ನು ಪ್ರಕಟಿಸಿತ್ತು. ನೆಹರೂ ಮೊದಲಾದವರು ಸಮಾಜವಾದಿ ಒಲವನ್ನು ಹೊಂದಿದವರಾಗಿದ್ದರು. ಇನ್ನೊಂದೆಡೆ ಪುನರುತ್ಥಾನವಾದಿ ಒಲವಿನ ವಲ್ಲಭಬಾಯಿಪಟೇಲ್ ಹಾಗೂ ರಾಜಾಜಿ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದರು. ಕಾಂಗ್ರೆಸನ ಒಳಗಿದ್ದ ಎಡಪಂಥೀಯ ಸಮಾಜವಾದಿಗಳನ್ನು ಅದರ ಬಲಪಂಥೀಯ ಪುನರುತ್ಥಾನವಾದಿಗಳು ವಿರೋಧಿಸುವುದರೊಂದಿಗೆ ಸಮಾಜವಾದಿಗಳು ಕಾಂಗ್ರೆಸನಿಂದ ಕಳಚಿಕೊಂಡು ಸಮಾಜವಾದಿ ಪಕ್ಷವಾಗಿ ಸ್ವತಂತ್ರ ಅಸ್ತತ್ವವನ್ನು ಪಡೆದುಕೊಂಡರು. ವಸಾಹತುಶಾಹಿಯಿಂದ ಮುಕ್ತಗೊಂಡು ರಾಜಕೀಯ ಸ್ವಾತಂತ್ರ್ಯ ಪಡೆದ ಭಾರತದ ರಾಜಕಾರಣ ಆ ಮೂಲಕ ಕಾಂಗ್ರೆಸ್ – ಕಮ್ಯುನಿಸ್ಟ್ ನಂತರದ ಮೂರನೆಯ ಪಾತ್ರವನ್ನು ಕಂಡುಕೊಂಡಿತು. ಸಮಾಜವಾದಿ ಪಕ್ಷದ ಸ್ಥಾಪನೆಯಲ್ಲಿ ಪ್ರಧಾನ ಆಸಕ್ತಿ ವಹಿಸಿದ್ದ ಆಚಾರ್ಯ ನರೇಂದ್ರದೇವ, ಜನತಾಂತ್ರಿಕ ಸಮಾಜವಾದವನ್ನು ಪ್ರತಿಪಾದಿಸಿದರು. ಕ್ರಮೇಣ ಸಮಾಜವಾದಿ ಪಕ್ಷದಲ್ಲಿ ಮಾರ್ಕ್ಸ್‌ವಾದಿಗಳಾಗಿದ್ದ ನರೇಂದ್ರದೇವ ಮತ್ತು ಜಯಪ್ರಕಾಶರಿಗಿಂತ, ಮಾರ್ಕ್ಸ್‌ವಾದಿಯೂ ಅಲ್ಲದ ಮಾರ್ಕ್ಸ್‌ವಾದದ ವಿರೋಧಿಯೂ ಅಲ್ಲದ ರಾಮಮನೋಹರ ಲೋಹಿಯಾ ಪ್ರಾಧ್ಯಾನತೆ ಪಡೆಯುವುದರೊಂದಿಗೆ ಎಡಪಕ್ಷವಾಗಿದ್ದ ಸಮಾಜವಾದಿ ಪಕ್ಷ ಕ್ರಮೇಣ ಮಧ್ಯಮಪಕ್ಷವಾಗಿ ಪಥ ಬದಲಿಸಿತು. ಸ್ವತಃ ಲೋಹಿಯಾ ಅವರೇ “ಎಡಕ್ಕಿದ್ದರೇನು, ಬಲಕ್ಕಿದ್ದರೇನು, ಹೃದಯ ಇದ್ದರೆ ಸಾಕು” ಎನ್ನುವಂತಾಯಿತು. ವರ್ಗ ಸಂಘರ್ಷದ ನಿಲುವಿನಿಂದ ಹೊರಬಂದ ಹೋರಾಟದ ಮಾದರಿ ಮತ್ತು ಆರ್ಥಿಕ ಪರ್ಯಾಯವನ್ನು ಗಾಂಧಿ ನೆಲೆಯಲ್ಲಿ ಕಂಡುಕೊಂಡ ಸಮಾಜವಾದಿ ಪಕ್ಷ ತನ್ನ ಮಧ್ಯಮ ಮಾರ್ಗದ ಮೂಲಕ ಭವಿಷ್ಯದ ರಾಜಕೀಯ ಬೆಳವಣಿಗೆಗಳನ್ನು ನಿರೂಪಿಸಲಾರಂಭಿಸಿತು.

ಕರ್ನಾಟಕದಲ್ಲಿ, ಆರಂಭದಿಂದಲೂ ರಾಷ್ಟ್ರೀಯ ಚಳವಳಿಯು ಹೆಚ್ಚು ತೀವ್ರವಾಗಿದ್ದುದು ಮುಂಬೈ ಕರ್ನಾಟಕ ಪ್ರಾಂತದಲ್ಲಿ. ಇದಕ್ಕೆ ಕಾರಣಗಳೂ ಇದ್ದವು. ಉತ್ತರ ಕರ್ನಾಟಕವು ಹೈದ್ರಾಬಾದ್ ನಿಜಾಮಶಾಹಿ ಆಡಳಿತಕ್ಕೊಳಪಟ್ಟಿದ್ದರೆ, ಇತ್ತ ಮೈಸೂರು ಕರ್ನಾಟಕವೂ ಮಹಾರಾಜರ ಅಧೀನದಲ್ಲಿತ್ತು. ರಾಜ್ಯದ ಒಳಭಾಗದಲ್ಲೂ ಜಮಖಂಡಿ ಸಂಸ್ಥಾನ ಹಾಗೂ ಸಂಡೂರು ಸಂಸ್ಥಾನಗಳಿದ್ದವು. ಈಗ ಕನಾಟಕವೆಂದು ಕರೆಯಲ್ಪಡುವ ಬಹುತೇಕ ಭಾಗ ವಸಾಹತುಶಾಹಿಯ ನೇರ ಆಡಳಿತಕ್ಕೆ ಒಳಪಡದೇ ಅದರ ಮಧ್ಯವರ್ತಿ – ಏಜೆಂಟರಾಗಿದ್ದ ಸಂಸ್ಥಾನಿಕ ದೊರೆಗಳ ಅಧೀನದಲ್ಲಿತ್ತು. ವಸಾಹತು ಆಡಳಿತದ ಅನುಭವವಿಲ್ಲದ ಪ್ರದೇಶಗಳು ಊಳಿಗಮಾನ್ಯ ಸಾಮಾಜಿಕ ಸಂಬಂಧಗಳನ್ನು ಹೊಂದಿದ್ದ ಪರಿಣಾಮವಾಗಿ ರಾಷ್ಟ್ರೀಯತಾವಾದದ ಗ್ರಹಿಕೆಗೆ ಅಡ್ಡಿಯಾಗಿದ್ದವು. ವಸಾಹತುಶಾಹಿ ನೀಡಿದ ‘ಆಧುನಿಕತೆ’ಯ ಅನುಭವವನ್ನು ಕೆಲಕಾಲ ತಡೆಯಲು ಇವು ಯಶಸ್ವಿಯಾದವು. ರಾಷ್ಟ್ರೀಯವಾದದ ಜೊತೆಯಲ್ಲಿಯೇ ಸಮಾಜವಾದ ಪ್ರವೇಶ ಪಡೆಯಬೇಕಿದ್ದ ಅನಿವಾರ್ಯತೆಯನ್ನು ಸಮಾಜವಾದಿಗಳು ಗ್ರಹಿಸಿದರು. ಪರಿಣಾಮವಾಗಿ ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಜಯಪ್ರಕಾಶ ನಾರಾಯಣ ಮೈಸೂರು ಸಂಸ್ಥಾನದಲ್ಲಿ ‘ರಾಜಶಾಹಿ’ಯ ವಿರುದ್ಧ ರಾಷ್ಟ್ರೀಯತಾವಾದದ ನೆಲೆಯಲ್ಲಿ ಹೋರಾಟ ಸಂಘಟಿಸಿದರು.

ಜಮೀನ್ದಾರ ಮತ್ತು ಸಾಮಂತರ ಒಕ್ಕೂಟವಾಗಿದ್ದ ‘ರಾಷ್ಟ್ರೀಯ ಕಾಂಗ್ರೆಸ್’ ಸಮಾಜವಾದಿಗಳ ಸಂಸ್ಥಾನ ವಿರೋಧಿ ಹೋರಾಟಕ್ಕೆ ಮುಕ್ತ ಸಹಮತ ವ್ಯಕ್ತಪಡಿಸಲಿಲ್ಲ. ರಾಷ್ಟ್ರೀಯ ಕಾಂಗ್ರೆಸ್ಸಿನ ಅಗ್ರ ನಾಯಕರಾಗಿದ್ದ ಗಾಂಧೀಜಿ, ಮೈಸೂರು ಸಂಸ್ಥಾನ ವಿರೋಧಿಸುವ ಸಮಾಜವಾದಿಗಳ ಹೋರಾಟದ ಪ್ರಸ್ತಾಪವನ್ನು ವಿರೋಧಿಸಿದ್ದರು. ಈ ಕುರಿತು ೧೯೩೦ರಿಂದಲೇ ಗಾಂಧೀಜಿಯವರೊಂದಿಗೆ ಚರ್ಚಿಸುತ್ತಿದ್ದ ಕಮಲಾದೇವಿ, ಅವರ ಧೋರಣೆಯನ್ನು ಅನುಮೋದಿಸಲೇ ಬೇಕಿದ್ದ ಅನಿವಾರ್ಯತೆಯು ಸಮಾಜವಾದಿಗಳನ್ನು ‘ರಾಜಶಾಹಿ ವಿರೋಧಿ ಹೋರಾಟ’ಕ್ಕೆ ಕೆಲಕಾಲ ತಡೆಯುಂಟು ಮಾಡಿತು. ಮುಂದೆ ಕಾಂಗ್ರೆಸನಿಂದ ಕಳಚಿ ಸಮಾಜವಾದಿ ಪಕ್ಷವಾಗಿ ಸ್ವತಂತ್ರಗೊಂಡ ನಂತರದಲ್ಲಿ ಅದು ಮೈಸೂರು ಹೋರಾಟವನ್ನು ಮುಕ್ತವಾಗಿ ಸಂಘಟಿಸಿತು.

ರಾಜಶಾಹಿಯ ಅನುಭವದಿಂದ ಎಂದೋ ಕಳಚಿಕೊಂಡಿದ್ದ ಮುಂಬೈ ಕರ್ನಾಟಕ ಪ್ರಾಂತವು ಆರಂಭದಿಂದಲೇ ನೇರ ವಸಾಹತು ಆಳ್ವಿಕೆಗೆ ಒಳಪಟ್ಟಿತ್ತು. ಸಹಜವಾಗಿಯೇ ವಸಾಹತುಶಾಹಿ ವಿರೋಧಿ ಪ್ರಜ್ಞೆಯೂ ರಾಷ್ಟ್ರೀಯತಾ ಚಳವಳಿಯೂ ಈ ಪ್ರಾಂತದಲ್ಲಿ ಕರ್ನಾಟಕದ ಉಳಿದ ಪ್ರಾಂತಗಳಿಗಿಂತ ಮೊದಲೇ ಕಾಣಿಸಿಕೊಂಡಿತು. ೧೯೦೭ರಲ್ಲಿ ಸೂರತನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಬೆಳಗಾವಿಯ ಗಂಗಾಧರರಾವ್ ದೇಶಪಾಂಡೆ, ಗೋವಿಂದರಾವ್ ಯಾಳಗಿ, ಧಾರವಾಡದ ಆಲೂರು ವೆಂಕಟರಾಯ, ಅಣ್ಣಾಚಾರ್ಯ ಹೊನಕೇರಿ, ಬಿಜಾಪುರದ ಶ್ರೀನಿವಾಸ ಕೌಜಲಗಿ ಅವರುಗಳು ಭಾಗವಹಿಸಿದ್ದರು. ಮಹಾರಾಷ್ಟ್ರದ ಬಾಲಗಂಗಾಧರ ತಿಲಕರ ಬಲಪಂಥೀಯ ತೀವ್ರಗಾಮಿತನ ಮತ್ತು ಗೋಪಾಲಕೃಷ್ಣ ಗೋಖಲೆಯವರ ಅಸಹಕಾರ ತತ್ವಗಳಿಂದ ಬೆಳಗಾವಿ, ಧಾರವಾಡ ಜಿಲ್ಲೆಗಳ ಯುವಕರು ಆಕರ್ಷಿತರಾಗಿದ್ದರು. ೧೯೨೦ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಮಹಾ ಅಧಿವೇಶನಕ್ಕೆ ಕರ್ನಾಟಕದಿಂದ ೮೦೦ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಅಧಿವೇಶನದ ನಂತರವಷ್ಟೇ ‘ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ’ ಅಸ್ತಿತ್ವಕ್ಕೆ ಬಂದಿತು.

ಶತಮಾನದ ಆರಂಭದಲ್ಲಿ ವ್ಯವಸ್ಥೆಯ ಪ್ರತಿರೋಧಗಳು, ಮುಂಬೈ ಕರ್ನಾಟಕ ಪ್ರಾಂತದಲ್ಲಿ ವಸಾಹತುಶಾಹಿ ವಿರುದ್ಧವಾಗಿದ್ದರೆ ಮೈಸೂರು ಪ್ರಾಂತದಲ್ಲಿ ಊಳಿಗಮಾನ್ಯ ರಾಜಶಾಹಿ ವಿರುದ್ಧವಾಗಿದ್ದವು. ಊಳಿಗಮಾನ್ಯ ವ್ಯವಸ್ಥೆಯ ಗಟ್ಟಿ ನಿರ್ಮಿತಿಯಾಗಿದ್ದ ಜಾತಿ ವ್ಯವಸ್ಥೆಯನ್ನು ದಮನಿತ ಸಮುದಾಯಗಳು ಪ್ರಶ್ನಿಸಲಾರಂಭಿಸಿದ್ದವು. ಸಂಸ್ಥಾನದ ಹುದ್ದೆಗಳ ಮೂಲಕ ಬ್ರಾಹ್ಮಣಶಾಹಿ ಆಳುವ ವರ್ಗವಾಗಿತ್ತು. ಸಾಮಾಜಿಕ ನ್ಯಾಯದ ಪ್ರಶ್ನೆಯನ್ನಿಟ್ಟುಕೊಂಡು ಹಿಂದುಳಿದ ವರ್ಗಗಳು ಚಳವಳಿಯನ್ನೇ ರೂಪಿಸಿದ್ದವು. ಈ ಚಳವಳಿಯ ಆಶಯಗಳು ಸಮಾಜವಾದದ ಆಶಯಗಳೇ ಆಗಿದ್ದವು. ಈ ಅಂಶವೂ ಭವಿಷ್ಯದಲ್ಲಿ ಮೈಸೂರು ಪ್ರಾಂತದಲ್ಲಿ ಸಮಾಜವಾದೀ ಚಳವಳಿ ಮೂಡಿ ಬರಲು ಕಾರಣವಾಯಿತು.

ಹಿಂದುಳಿದ ವರ್ಗಗಳ ಚಳವಳಿ ತನ್ನ ಹೋರಾಟದ ಮೂಲಕ ಸಂಸ್ಥಾನದ ಹುದ್ದೆಗಳಲ್ಲಿ ಶೇಕಡ ೨೫ರಷ್ಟು ಮೀಸಲಾತಿ ಪಡೆದು ಫಲಪ್ರದವಾಗಿತ್ತು. ಆದರೆ ಶೇಕಡ ೨೫ರಷ್ಟು ಪಾಲು ತೀರಾ ಕಡಮೆ ಎಂಬ ಸಾಮಾಜಿಕ ಪ್ರಜ್ಞೆ, ರಾಜಕೀಯ ಪ್ರಜ್ಞೆಯಾಗಿ ಪಕ್ವಗೊಂಡು ೧೯೧೭ರಲ್ಲಾದ ‘ಪ್ರಜಾಮಿತ್ರ ಮಂಡಲಿ’ ಪಕ್ಷದ ಉಗಮ, ರಾಜಶಾಹಿ ಆಡಳಿತಕ್ಕೆ ಪ್ರಜಾ ಸತ್ತಾತ್ಮಕ ಪರ್ಯಾಯವಾಗಿ ವ್ಯಕ್ತಗೊಂಡಿತ್ತು. ಬ್ರಾಹ್ಮಣ ಜಾತಿಯ ರೂಪದಲ್ಲಿದ್ದ ಮಧ್ಯಮ ವರ್ಗಗಳು ‘ಪ್ರಜಾಮಿತ್ರ ಮಂಡಲಿ’ಯ ಮೂಲಕ ರಾಜಕೀಯ ಸಾಮರ್ಥ್ಯವನ್ನು ಧಾರಣ ಮಾಡಿದವು. ಆದರೆ ಪ್ರಜಾಮಿತ್ರ ಮಂಡಲಿಯು ಹೊಂದಿದ್ದ ಹಿಂದುಳಿದ – ಮಧ್ಯಮ ವರ್ಗದ ಹಿತಾಸಕ್ತಿ ಕೆಳವರ್ಗವಾಗಿದ್ದ ಶೂದ್ರ ಜಾತಿ ಸಮುದಾಯಗಳನ್ನು ಕಡೆಗಣಿಸಿದ ಅರಿವು, ಕೆಳಜಾತಿಗಳಲ್ಲಿ ಜಾಗೃತಗೊಂಡಿತು. ಈ ಪ್ರಕ್ರಿಯೆಯ ಭಾಗವಾಗಿ ೧೯೩೦ರಲ್ಲಿ ರಾಜಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರದ ಹೋರಾಟಕ್ಕೆ ಚಾಲನೆ ಸಿಕ್ಕು ‘ಪ್ರಜಾಪಕ್ಷ’ದ ಉದಯವಾಯಿತು.

ರಾಜಶಾಹಿಯ ಬಗ್ಗೆ ಮೆದುಧೋರಣೆ ತಾಳಿದ್ದ ಕಾಂಗ್ರೆಸ್ಸಿನ ವರ್ಗ ಹಿತಾಸಕ್ತಿಯನ್ನೂ ಮೈಸೂರು ಪ್ರಾಂತದ ಹಿಂದುಳಿದ ಮಧ್ಯಮ ವರ್ಗಗಳ ಚಳಿವಳಿ ಗಮನಿಸಿತಲ್ಲದೆ, ಕಾಂಗ್ರೆಸ್ಸನ್ನು ಬ್ರಾಹ್ಮಣ ಪಕ್ಷ ಎಂದು ಗುರುತಿಸಿತು. ರಾಜಶಾಹಿ, ಬ್ರಾಹ್ಮಣವರ್ಗ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಒಂದಾಗಿ ಗ್ರಹಿಸಿದ ಈ ಹೋರಾಟ, ಭವಿಷ್ಯದಲ್ಲಿ ಕಾಂಗ್ರೆಸ್ಸಿನ ವಿರೋಧಿ ರಾಜಕೀಯ ನೆಲೆಯಾಗಿದ್ದ ‘ಪ್ರಜಾ ಸಂಯುಕ್ತ ಪಕ್ಷ’ದಲ್ಲಿ ತನ್ನ ಮೂರ್ತರೂಪ ಕಂಡುಕೊಂಡು ರೈತ ವರ್ಗವನ್ನು ಸಂಘಟಿಸಲಾರಂಭಿಸಿತು.

ಸಾಂಸ್ಕೃತಿಕವಾಗಿ ಯಜಮಾನ್ಯ ಸಾಧಿಸಿದ್ದ ಬ್ರಾಹ್ಮಣವರ್ಗವೇ ರಾಜಕೀಯವಾಗಿಯೂ ಆಳುವ ವರ್ಗವಾಗಿದ್ದ ಹಿನ್ನೆಲೆಯಲ್ಲಿ ರೈತರನ್ನು ಸಂಘಟಿಸುವ ಅಗತ್ಯ ಮನಗಂಡ ಈ ಚಳವಳಿ ಸಮಾಜವಾದಿ ಧೋರಣೆಗಳನ್ನು ಅಂತರ್ಗತಗೊಳಿಸಿಕೊಂಡಿತ್ತು. ಈ ಧೋರಣೆಯೇ ಭೂಮಾಲಿಕರ ಒಕ್ಕೂಟ ಮತ್ತು ರಾಜಶಾಹಿಯ ಮಿತ್ರನಂತಿದ್ದ ರಾಷ್ಟ್ರೀಯ ಕಾಂಗ್ರೆಸ್ಸನ್ನು ವಿರೋಧಿಸಿತು. ರಾಷ್ಟ್ರೀಯ ಕಾಂಗ್ರೆಸ್ ಮತ್ತು ಬ್ರಾಹ್ಮಣ್ಯವನ್ನು ಸಮೀಕರಿಸಿ ಅವುಗಳ ವಿರೋಧಕ್ಕೆ ಕಾರಣವಾದ ಅಂಶಗಳೇ ಮುಂದೆ ಮೈಸೂರಿನಲ್ಲಿ ಸಮಾಜವಾದಿ ಚಳವಳಿ ರೂಪುಗೊಳ್ಳಲು ಕಾರಣವಾದವು.

ರಾಷ್ಟ್ರೀಯ ಕಾಂಗ್ರೆಸ್ ನೇತ್ರತ್ವದ ಬ್ರಿಟೀಶ್ ಆಡಳಿತ ವಿರೋಧಿ ಹೋರಾಟ ನಿರ್ಣಾಯಕ ಘಟ್ಟ ತಲುಪುವ ಹಂತದಲ್ಲಿ ಆತಂಕಗೊಂಡ ಮೈಸೂರು ರಾಜಶಾಹಿ ಕಾಂಗ್ರೆಸ್ಸನ್ನು ತನ್ನ ಪ್ರಾಂತದಲ್ಲಿ ದಮನಿಸುವ ಪ್ರಯತ್ನ ಆರಂಭಿಸಿತು. ಬದಲಾದ ಈ ಬೆಳವಣಿಗೆಗಳಲ್ಲಿ ರಾಜಶಾಹಿಯನ್ನು ಕಿತ್ತೊಗೆಯಲು ಕಾಂಗ್ರೆಸ್ಸನ್ನು ಬೆಂಬಲಿಸುವ ಸಾಂದರ್ಭಿಕ ಅಗತ್ಯವನ್ನು ಮನಗಂಡ ಕಾಂಗ್ರೆಸ್ಸೇತರ ಪಕ್ಷಗಳು ಕಾಂಗ್ರೆಸ್ಸಿನಲ್ಲಿ ವಿಲೀನಗೊಂಡವು. ಇದು ದೇಶಮಟ್ಟದಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷದ ಆಲೋಚನೆಯ ಕರ್ನಾಟಕದ ಮಾದರಿ ಎಂಬಂತಿತ್ತು. ಈ ಮೂಲಕ ವಸಾಹತು ರಾಜಶಾಹಿ ಒಕ್ಕೂಟ ಮತ್ತು ‘ಕಾಂಗ್ರೆಸ್ ಒಕ್ಕೂಟ’ಗಳೆಂಬ ಸಂಘರ್ಷದ ನೆಲೆಗಳು ನಿರ್ಮಾಣಗೊಂಡವು. ಮೈಸೂರು ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯ ವಿಧಾಯಕ ಸಭೆ ಚುನಾವಣೆಗಳಲ್ಲಿ ರಾಷ್ಟ್ರೀಯ ಕಾಂಗ್ರೆಸನ ಪರವಾಗಿ, ಕಾಂಗ್ರೆಸ್ ಸಮಾಜವಾದಿ ಪಕ್ಷದ ಕಮಲಾದೇವಿ ಪ್ರಚಾರ ಕೈಗೊಂಡರು.

ಕಮಲಾದೇವಿಯವರ ಪ್ರಚಾರದಿಂದಾಗಿ ಭಯಗ್ರಸ್ತಗೊಂಡ ರಾಜಶಾಹಿ, ಅವರ ಪ್ರಚಾರಕ್ಕೆ ನಿರ್ಬಂಧಗಳನ್ನು ಹೇರಿತು. ಇದರ ಪರಿಣಾಮವಾಗಿ ಉಂಟಾದ ಸಂಘರ್ಷದಲ್ಲಿ ಯುವವರ್ಗ, ಕಮಲಾದೇವಿಯ ಬೆಂಬಲಕ್ಕಿಳಿಯಿತಲ್ಲದೇ, ಪ್ರಾಂತದಲ್ಲಿ ‘ಕಾಂಗ್ರೆಸ್ ಸಮಾಜವಾದಿ ಪಕ್ಷ’ ಸ್ಥಾಪಿಸುವ ಒತ್ತಡ ಸೃಷ್ಟಿಯಾಯಿತು. ವಿದ್ಯಾರ್ಥಿಗಳಾದ ಎಂ.ಪಿ. ಈಶ್ವರಪ್ಪ, ವೇದಾಂತ ಹೆಮ್ಮಿಗೆ, ಎಂ.ಎಸ್.ಗುರುಪಾದಸ್ವಾಮಿ, ಶ್ರೀಕಂಠಪ್ಪ ಮೊದಲಾದವರನ್ನು ಒಳಗೊಂಡು ಕಮಲಾದೇವಿ ಮೈಸೂರು ಪ್ರಾಂತದ ನಂಜನಗೂಡಿನಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಸಮ್ಮೇಳನವನ್ನು ಸಂಘಟಿಸಿದರು. ಈ ಸಮ್ಮೇಳನ ಕರ್ನಾಟಕದಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷ ಸ್ಥಾಪನೆಯ ಮೊದಲ ಸಂಘಟಿತ ರೂಪವಾಗಿತ್ತು

ಈ ಮೊದಲು ದೇಶಮಟ್ಟದ ಸಮಾಜವಾದಿ ಧುರೀಣರಾಗಿದ್ದ ಜಯಪ್ರಕಾಶ ನಾರಾಯಣ ಅವರನ್ನು ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಗೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಮೈಸೂರು ರಾಜಶಾಹಿ ಬಂಧಿಸಿತ್ತು. ಜೆ.ಪಿ. ಸಂಸ್ಥಾನ ವಿರೋಧಿ ಹೋರಾಟದಿಂದಾರಂಭಿಸಿ ಕರ್ನಾಟಕದ ಹಲವು ಕಡೆ ಪ್ರವಾಸ ಮಾಡಿ, ೧೯೪೬ರಲ್ಲಿ ‘ಕಾಂಗ್ರೆಸ್ ಸಮಾಜವಾದಿ ಪಕ್ಷ’ ಕಟ್ಟಲು ಬಹುವಾಗಿ ಪ್ರಭಾವಿಸಿದ್ದರು. ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಮೈಸೂರು, ಶಿವಮೊಗ್ಗಗಳಲ್ಲಿನ ಕಾರ್ಯಕ್ರಮಗಳು ಸಂಚಲನವನ್ನು ಸೃಷ್ಟಿಸಿದವು. ಬಹಿರಂಗ ಸಭೆಗಳಷ್ಟೇ ಅಲ್ಲದೆ ಆಂತರಿಕ ಸಭೆಗಳನ್ನು ನಡೆಸಿ ಜೆ.ಪಿ. ವಸಾಹತು – ಸಾಮ್ರಾಜ್ಯ ಶಾಹಿಯ ಗ್ರಹಿಕೆಗಳು ಸಮಾಜವಾದದ ಚಿಂತನೆಗಳು ಹಾಗೂ ಕಾಂಗ್ರೆಸನ ಒಳಗಿದ್ದೇ ಸಮಾಜವಾದಿಗಳು ನಡೆಸಬೇಕಿರುವ ಕಾರ್ಯತಂತ್ರಗಳನ್ನು ಚರ್ಚಿಸಲಾರಂಭಿಸಿದ್ದರು. ಈ ಕಾರ್ಯತಂತ್ರದ ಭಾಗವಾಗಿ ವಿದ್ಯಾರ್ಥಿ ಕಾಂಗ್ರೆಸ್ ಸಮಾವೇಶಗಳ ಮೂಲಕ ‘ಕಾಂಗ್ರೆಸ್ ಸಮಾಜವಾದಿ ಪಕ್ಷ’ವನ್ನು ಸಂಘಟಿಸುವ ಪ್ರಯತ್ನ ಆರಂಭವಾಯಿತು.

ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ಜೆ.ಪಿ. ವಸಾಹತುಶಾಹಿಯನ್ನು – ಸಾಮ್ರಾಜ್ಯಶಾಹಿ ಎಂದು ವಿಶ್ಲೇಷಿಸಿದರು. ಸಮಾಜವಾದಿಗಳ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಸ್ವರೂಪವು, ಕಾಂಗ್ರೆಸ್ಸಿನ ಹೋರಾಟದ ಸ್ವರೂಪಕ್ಕಿಂತ ಭಿನ್ನವಾಗಿತ್ತು. ಜೆ.ಪಿ. ವಿಧ್ವಂಸಕಾರಿ ಚಟುವಟಿಕೆಗಳಿಗೆ ಕರೆಕೊಟ್ಟರು. ಲೋಹಿಯಾ ಕೂಡ ಅಗತ್ಯಬಿದ್ದರೆ ಕೈಬಾಂಬುಗಳ ಬಳಕೆ ಹಾಗೂ ರಹಸ್ಯ ರೇಡಿಯೋ ಕೇಂದ್ರಗಳ ಸಂಪರ್ಕಗಳ ಮೂಲಕ ಹೋರಾಟಗಳನ್ನು ಸಂಘಟಿಸಿ ಸಾಮ್ರಾಜ್ಯಶಾಹಿಯನ್ನು ಹಿಮ್ಮೆಟ್ಟಿಸಬೇಕೆಂದು ಕರೆ ನೀಡಿದರು. ಜೆ.ಪಿ. ಪ್ರಕಟಿಸಿದ ‘ಮೈಪಿಕ್ಚರ್ಸ್ ಆಫ್ ಸೋಷಲಿಸಂ’, ಕಿರುಪುಸ್ತಕಗಳು ಕನ್ನಡಕ್ಕೆ ಆನುವಾದಗೊಂಡು ಕರ್ನಾಟಕದ ಯುವಕರನ್ನು ಪ್ರೇರೇಪಿಸಿದವು. ಡಾ. ಕೆ.ಸದಾಶಿವ ಕಾರಂತರು ಜೆ.ಪಿ.ಯವರ ಅಂತಹದ್ದೊಂದು ನಿಷೇಧಿತ (ಕರ)ಪತ್ರವನ್ನು ಬೆಳಗಾವಿಯ ರಹಸ್ಯ ಕೋಣೆಯೊಂದರಲ್ಲಿ ಓದಿ ತಾವು ಸ್ಫೂರ್ತಿಗೊಂಡಿದ್ದಾಗಿ ಹೇಳುತ್ತಾರೆ.

ಎರಡನೇ ಜಾಗತಿಕ ಯುದ್ದದ ಸಂದರ್ಭದಲ್ಲಿ ಜಪಾನ್, ಜರ್ಮನಿ ಮೈತ್ರಿಕೂಟದ ಫ್ಯಾಸಿಸ್ಟ್ ಪಡೆ ಸಮಾಜವಾದಿ ದೇಶವಾಗಿದ್ದ ರಷ್ಯಾವನ್ನು ಆಕ್ರಮಿಸಿದ್ದರಿಂದ ಭಾರತ ಕಮ್ಯುನಿಷ್ಟ್ ಪಕ್ಷವು, ಜಾಗತಿಕ ಸಮಾಜವಾದದ ಹಿತಾಸಕ್ತಿಯಿಂದ, ರಷ್ಯದ ಅಸ್ತಿತ್ವ ಮುಖ್ಯವೆಂದು ಮನಗಂಡಿತು ಮತ್ತು ಫ್ಯಾಸಿಸ್ಟ್ ಜರ್ಮನಿಯನ್ನು ಸೋಲಿಸಲು, ರಷ್ಯಾವನ್ನು ಬೆಂಬಲಿಸಿತು. ಬ್ರಿಟನ್, ರಷ್ಯಾದ ಮೈತ್ರಿಕೂಟದಲ್ಲಿದ್ದ ದೇಶವಾದ್ದರಿಂದ ಜಾಗತಿಕ ಯುದ್ಧ ಕಾಲದಲ್ಲಿ ಭಾರತದಲ್ಲಿ ‘ಬ್ರಿಟೀಶ್ ವಿರೋಧಿ’ ಹೋರಾಟ ಸರಿಯಲ್ಲವೆಂದು ಭಾವಿಸಿತು. ಈ ವಿಷಯದಲ್ಲಿ ಭಾರತದ ಎಡಪಂಥೀಯರಲ್ಲಿ ಎರಡನೇ ಬಾರಿಗೆ ಭಿನ್ನಾಭಿಪ್ರಾಯ ಬಲಗೊಂಡಿತು. ‘ಮಾರ್ಕ್ಸವಾದವೇ ಮೂಲ ಸಿದ್ಧಾಂತ’ವೆಂದು ಎರಡೂ ಪಕ್ಷಗಳು ವಿಶ್ವಾಸಪಟ್ಟಿದ್ದರೂ ಜಾಗತಿಕ ರಾಜಕಾರಣದ ಗ್ರಹಿಕೆಗಳಲ್ಲಾದ ಭಿನ್ನತೆಗಳು ಎಡವಾದ ಒಕ್ಕೂಟವಾಗದಂತೆ ತಡೆದವು. ಎರಡನೇ ಕಮ್ಯುನಿಸ್ಟ್ ಅಂತಾರಾಷ್ಟ್ರೀಯ ಸಮ್ಮೇಳನದ ನಿರ್ಣಯದ ಹಿನ್ನೆಲೆಯಲ್ಲಿ ಭಾರತದ ಕಮ್ಯುನಿಸ್ಟರಿಂದ ಬೇರೆಯಾಗಿದ್ದ ಸೋಷಲಿಸ್ಟರು ಎರಡನೇ ಜಾಗತಿಕ ಮಹಾಯುದ್ಧದ ವಿಶ್ಲೇಷಣೆಗಳಲ್ಲಿ ಇನ್ನಷ್ಟು ದೂರಾದರು. ಮಾರ್ಕ್ಸ್‌ವಾದವು ಕಮ್ಯುನಿಸ್ಟ್ ಮತ್ತು ಸೋಷಲಿಸ್ಟಗಳಾಗಿ ವಿಭಜನೆಗೊಂಡಿದ್ದು ಕಾಂಗ್ರೆಸ್ ಹಿತಾಸಕ್ತಿಗೆ ಪೂರಕವಾಗಿದ್ದಿತು. ಈ ಸೈದಾಂತಿಕ ವಿಭಜನೆಗಳು ಕರ್ನಾಟಕದ ಯುವಕರ ಮೇಲೆಯೂ ಪರಿಣಾಮ ಬೀರಿದವು.

ಕಾಂಗ್ರೆಸ್ ಸಮಾಜವಾದಿ ಪಕ್ಷದ ಪ್ರಾಂತೀಯ ಕಾರ್ಯದರ್ಶಿಯಾಗಿದ್ದ ಕೆ.ಎಸ್.ಕಾರಂತರು “ಆಗ ನಾವು ಮಾರ್ಕ್ಸ್‌ವಾದಿಗಳೆಂದು ಹೇಳಿಕೊಳ್ಳಲು ಸಂತಸಪಡುತ್ತಿದ್ದೆವು. ಆಗಿನ ಸಿ.ಪಿ.ಐ. ಪಕ್ಷವನ್ನು ಟೀಕಿಸುತ್ತದ್ದೆವಲ್ಲದೆ ನಮ್ಮದೇ ನಿಜವಾದ ಮಾರ್ಕ್ಸವಾದವೆಂದೂ ಸಿ.ಪಿ.ಸಿ. ಮಾರ್ಕ್ಸ್‌ವಾದವನ್ನು ತಪ್ಪಾಗಿ ಅಥೈಸಿಕೊಂಡಿದೆ ಎಂದೂ ಆ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆಗಿಳಿಯುತ್ತಿದ್ದೆವು. ಜೆ.ಪಿ.ಯವರ ಲೇಖನ ‘ಮೈಪಿಕ್ಚರ್ಸ್ ಆಫ್ ಸೋಷಲಿಸಂ’ ಸಿ.ಪಿ.ಐ. ಪಕ್ಷದ ವಿರುದ್ಧ ಸಿಡಿಸಲು ಹೊಸಮದ್ದನ್ನು ನಮಗೆ ನೀಡಿತು. ಮಾರ್ಕ್ಸ್‌ವಾದ ನಿಜವಾಗಿಯೂ ವಿಜ್ಞಾನವೇ ಆಗಿದ್ದರೆ, ಮಾರ್ಕ್ಸ್ ಅಂತಿಮ ಸತ್ಯದ ಪ್ರತಿಪಾದಕನಾಗಲಾರ, ಮುಂತಾದ ಲೇಖನದ ಮಾತುಗಳು ನಮಗೆ ಅಸ್ತ್ರವಾಗಿದ್ದವು” ಎಂದು ತಮ್ಮ ‘ಆಸ್ಪೆಕ್ಟ್ಸ ಆರ್ಫ ಸೋಷಲಿಸ್ಟ್ ಮೈಂಡ್’ ಪುಸ್ತಕದಲ್ಲಿ ನೆನಪಿಸಿಕೊಳ್ಳುತ್ತಾರೆ.

ಹೀಗೆ ಆರಂಭವಾದ ಕಮ್ಯುನಿಸ್ಟರು ಹಾಗೂ ಸಮಾಜವಾದಿಗಳ ಭಿನ್ನಾಭಿಪ್ರಾಯಗಳ ನಡುವಿನ ಅಂತರ ಭವಿಷ್ಯದಲ್ಲಿ ಬೆಳೆಯುತ್ತಲೇ ಹೋಯಿತು. ಎರಡೂ ಪಕ್ಷಗಳು ವರ್ಗ ಹೋರಾಟದ ಅಗತ್ಯವನ್ನು ಮನಗಂಡಿದ್ದರಿಂದ ಹುಬ್ಬಳ್ಳಿ, ಮಂಗಳೂರು ಮೊದಲಾದ ಕಡೆ ‘ವರ್ಗ ಸಂಘಟನೆ’ಯ ಕಾಲಕ್ಕೆ ಸ್ಪರ್ಧಾತ್ಮಕ ಮನೋಭಾವ ಕಾಣಿಸಿಕೊಂಡಿತು. ಈ ಸ್ಪರ್ಧೆ ಒಮ್ಮೊಮ್ಮೆ ಎರಡೂ ಪಕ್ಷಗಳ ಸಂಘಟನೆಗಳು ದುರ್ಬಲಗೊಂಡು ಮಾಲಕ ವರ್ಗವು ಸಮಾಧಾನ ಪಟ್ಟುಕೊಳ್ಳುವಂತಾಯಿತು. ಬಳ್ಳಾರಿಯಲ್ಲಿ ದಾಸನ್ ಸಾಲೋಮನ್, ಬೆಂಗಳೂರಿನಲ್ಲಿ ಪಿ. ಕಣ್ಣನ್, ವೆಂಕಟರಾಮ್, ಮಂಗಳೂರಿನಲ್ಲಿ ಅಮ್ಮೆಂಬಳ ಬಾಳಪ್ಪ, ಜಾರ್ಜ್‌ ಫರ್ನಾಂಡೀಸ್, ಕಾರ್ಮಿಕವರ್ಗ ಸಂಘಟನೆಗಳನ್ನು ಕಟ್ಟಿ ಬೆಳೆಸಿದರು. ಹುಬ್ಬಳ್ಳಿಯಲ್ಲಿಯೂ ಚಳಗೇರಿಯವರಿಂದ ಆರಂಭಗೊಂಡ ಕಾರ್ಮಿಕ ಸಂಘಟನೆ ಸಮಾಜವಾದಿಗಳಿಗೆ ಹಸ್ತಾಂತರಗೊಂಡಿತು. ಈ ಎಲ್ಲ ಕಡೆ ಸಮಾಜವಾದಿಗಳ ಕಾರ್ಮಿಕ ಸಂಘಟನೆಗಳಿಗೆ ಕಮ್ಯುನಿಸ್ಟರ ಕಾರ್ಮಿಕ ಸಂಘಟನೆಗಳು ಸ್ಪರ್ಧೆಯೊಡ್ಡಿದವು.

ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿಯ ಸ್ಥಾಪಕರಲ್ಲಿ ಒಬ್ಬರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯರು ಕರ್ನಾಟದವರೇ ಆಗಿದ್ದರು. ಕೇಂದ್ರ ಕಾರ್ಯಕಾರಿ ಸಮಿತಿಯು ಅವರಿಗೆ ದಕ್ಷಿಣ ಭಾರತದಲ್ಲಿ ಪಕ್ಷವನ್ನು ಸಂಘಟಿಸುವ ಜವಾಬ್ದಾರಿಯನ್ನು ವಹಿಸಿತ್ತು. ೧೯೧೭ರಲ್ಲಿ ಗಾಂಧೀಜಿ ಮಂಗಳೂರಿಗೆ ಬಂದಾಗ ಅವರ ಭೇಟಿಯಿಂದಾಗಿ ಪ್ರಭಾವಿತರಾಗಿದ್ದ ಕಮಲಾದೇವಿ ೧೯೨೬ರಲ್ಲಿ ಅಖಿಲ ಭಾರತ ಮಹಿಳಾ ಪರಿಷತ್ ಆಂದೋಲನ ಸ್ಥಾಪಿಸಿದ್ದರು. ದಂಡಿಯಾತ್ರೆಯಲ್ಲಿ ಭಾಗವಹಿಸಿ ನಂತರದಲ್ಲಿ ಡಾ. ಹರ್ಡೇಕರ್ ಅವರೊಂದಿಗೆ ರಾಷ್ಟ್ರೀಯ ಸೇವಾದಳ ಸ್ಥಾಪಿಸಿ ಅದರ ಆದೇಶಾಧ್ಯಕ್ಷರೂ ಆಗಿದ್ದರು. ಆನಂತರದಲ್ಲಿ ‘ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿ’ ಸ್ಥಾಪನೆಯಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕದಲ್ಲಿ ಪಕ್ಷದ ಸಂಘಟನೆಗೆ ರೈತ ವರ್ಗವನ್ನು ಸಂಘಟಿಸುವ ಅಗತ್ಯವನ್ನು ಕಮಲಾದೇವಿ ಮನಗಂಡಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಉತ್ಸಾಹಿ ಯುವಕರನ್ನು ‘ವಿದ್ಯಾರ್ಥಿ ಕಾಂಗ್ರೆಸ್’ ಹೆಸರಿನಲ್ಲಿ ಸಮಾವೇಶಗಳಲ್ಲಿ ಸಂಘಟಿಸಿ ೧೯೪೬ರಲ್ಲಿ ರೈತ ಸಂಘಟನೆಗೆ ತೊಡಗಿಸಿದರು. ಈ ಪ್ರಯತ್ನದಿಂದಾಗಿ ಗದಗ ಹಾಗೂ ತೀರ್ಥಹಳ್ಳಿಗಳಲ್ಲಿ ರೈತ ಸಮಾವೇಶಗಳಾದವು. ಗದಗದಲ್ಲಿ ‘ಎಡಪಂಥೀಯ ಸಮಾವೇಶ’ವೂ ಜರುಗಿತು. ಅಶೋಕ ಮೆಹ್ತಾ, ರಮಾನಂದ ಮಿಶ್ರ, ಜಿ.ಪಿ ಹಾಗೂ ಲೋಹಿಯಾರ ಸಂಪರ್ಕಗಳಿಂದಾಗಿ ಕರ್ನಾಟಕದಲ್ಲಿ ಸಮಾಜವಾದಿ ಪರಿಸರ ನಿರ್ಮಾಣಗೊಂಡಿತು. ಗೋವಾ ವಿಮೋಚನಾ ಚಳವಳಿಯನ್ನು ಕಟ್ಟಿದ ಲೋಹಿಯಾ ಆ ಮೂಲಕ ಕರ್ನಾಟಕದಲ್ಲಿ ಪ್ರಭಾವ ಬೀರಿದರು. ೧೯೪೮ರಲ್ಲಿ ಆರಂಭವಾದ ‘ಹಿಂದ್ ಕಿಸಾನ್ ಪಂಚಾಯತ್’ ಕರ್ನಾಟಕದಲ್ಲಿ ರೈತವರ್ಗವನ್ನು ಸಂಘಟಿಸುವ ಅಗತ್ಯವನ್ನು ಮನಗಾಣಿಸಿತು.

ಭಾಗ : ಜೈಲು

೧೯೪೭ನೇ ವರ್ಷ, ಆಗಸ್ಟ್ ೧೫ನೇ ತಾರೀಕು, ‘ಬ್ರಿಟಿಷ್ ಚಕ್ರಾಧಿಪತ್ಯದ ಬಾವುಟ’ವನ್ನು ಕೆಳಗಿಳಿಸಿ ಧರ್ಮಚಕ್ರವನ್ನೊಳಗೊಂಡ ಮೂರು ಬಣ್ಣದ ಬಾವುಟವನ್ನು ಮೇಲೇರಿಸಿದ ಅವತ್ತು ‘ರಾಜಕೀಯ ಸ್ವಾತಂತ್ರ್ಯದ ಅಸ್ಥಿಪಂಜರ ಬಂತು. ಆದರೆ ಆರ್ಥಿಕ ಸ್ವಾತಂತ್ರ್ಯದ ರಕ್ತಮಾಂಸ ತುಂಬಿ ಬರಲಿಲ್ಲ’ ಎನ್ನುವ ಲೋಹಿಯಾ ಆ ದಿನದ ಒಂದು ವಾರ ಮುಂಚೆ ಸರ್ಕಾರಕ್ಕೆ “ಭೂ ಒಡೆತನವನ್ನು ತೆಗೆದುಹಾಕುವ ಘೋಷಣೆಯನ್ನು ಹೊರಡಿಸಿ” ಎಂದು ಹೇಳಿದ್ದರಂತೆ. ಆ ಮಾತಿಗೆ ಸರ್ಕಾರ ಕಿವಗೊಡಲಿಲ್ಲವೆಂದೂ, ಹೀಗೆ ಕಳೆದುಕೊಂಡ ಸದಾವಕಾಶವನ್ನು ವಿಪತ್ಕಾರಕ ವಿಶ್ವಾಸಘಾತವೆಂದೂ ಅವರು ವಿಷಾದದಿಂದ ಸ್ಮರಿಸಿಕೊಳ್ಳುತ್ತಾರೆ. ಆರ್ಥಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯ ರಕ್ತಮಾಂಸಗಳಿಲ್ಲಿದ ಅಸ್ಥಿಪಂಜರ ಎನ್ನುವ ಲೋಹಿಯಾ ಈ ಮೇಲಿನ ಮಾತುಗಳ ಮೂಲಕ ಆರ್ಥಿಕ ಸ್ವಾತಂತ್ರ‍್ದ ರಕ್ತಮಾಂಸ ತುಂಬಿದ ಸ್ವಾತಂತ್ರ್ಯ ಭೂಒಡೆತನವನ್ನು ತೆಗೆದು ಹಾಕುವ, ಅಥವಾ ‘ಭೂಮಿಯಲ್ಲಿ ಬೆವರು ಸುರಿಸುವವನಿಗೆ ಬೆಳೆಯ ಒಡೆತನ’ ನೀಡುವ ಮೂಲಕ ಮಾತ್ರ ಸಾಧ್ಯ ಎಂಬ ತೀರ್ಮಾನಕ್ಕೆ ಬರುತ್ತಾರೆ. ಸಾಗುವಳಿಯಾಗದ ಭೂಮಿಗೆ ಕೃಷಿಸೇನೆ, ಸಣ್ಣ ಯಂತ್ರ ಘಟಕಗಳ ಮೂಲಕ ತಂತ್ರಜ್ಞಾನ, ಒಂದು ಸಂಸಾರಕ್ಕೆ ಒಂದು ಹಸು ಹಾಗೂ ಕನಿಷ್ಟ ಮೂವತ್ತು ಎಕರೆ ಭೂಮಿ, ಹಾಗೂ ಕೈಗಾರಿಕೆ ಮತ್ತು ಕೃಷಿಬೆಲೆಗಳಲ್ಲಿ ಸಮಾನತೆ, ಇವುಗಳನ್ನು ಈ ದೇಶದ ರೈತರ ಹೆಬ್ಬಯಕೆಗಳು ಎಂದು ಗುರುತಿಸುತ್ತಾರೆ. ಈ ಹೆಬ್ಬೆಯಕೆಗಳ ಪೈಕಿ ಚತುಷಸ್ಥಂಭ ರಾಷ್ಟ್ರದ ಪರಿಕಲ್ಪನೆಯನ್ನು ಕೊನೆಯ ಸ್ಥಾನದಲ್ಲಿ ನಮೂದಿಸುತ್ತಾರೆ.

ಲೋಹಿಯಾ ಮಂಡಿಸುವ ಸಮಾಜವಾದದಲ್ಲಿ ಭೂಮಿ ಅಥವಾ ರೈತನ ಪ್ರಶ್ನೆ ಪ್ರಧಾನವಾಗಿ ಚರ್ಚೆಯಾಗುತ್ತದೆ. ಭೂಮಾಲಕ ಅಥವಾ ಜಮೀನ್ದಾರಿ ಪದ್ಧತಿಯನ್ನು ನಾಶಮಾಡಬೇಕೆನ್ನುವ ಲೋಹಿಯಾ ಈ ಉದ್ದೇಶವನ್ನು ಜೈಲು ಮತ್ತು ಮತಪೆಟ್ಟಿಗೆ ಮೂಲಕ ಸಾಧಿಸಬೇಕು ಎನ್ನುತ್ತಾರೆ. ಸಮಾಜವಾದವು ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ನಡೆಸಿದ ‘ಭೂ ಹೋರಾಟಗಳು’ ಲೋಹಿಯಾರ ಈ ‘ಗುರಿ’ಯನ್ನು ಖಚಿತಪಡಿಸುವ ಪ್ರಯತ್ನಗಳು ಹಾಗೂ ‘ದಾರಿ’ಯನ್ನು ಪ್ರಮಾಣೀಕರಿಸುವ ಪ್ರಯೋಗಗಳೇ ಆಗಿವೆ.

ಅರ್ಧಸೇರಿನ ನ್ಯಾಯ

ಕರ್ನಾಟಕದಲ್ಲಿ ಸಮಾಜವಾದಿ ಚಳವಳಿ ಎಂದರೆ ಕಾಗೋಡು ಸತ್ಯಾಗ್ರಹ ಎಂಬಂತಾಗಿದೆ. ಕಾಗೋಡು ಸತ್ಯಾಗ್ರಹವನ್ನೇ ಕಾಗೋಡು ಚಳವಳಿ ಎಂದಿದ್ದೂ ಇದೆ. ಕರ್ನಾಟಕದಲ್ಲಿ ಸಮಾಜವಾದ, ಚಳವಳಿಯಾಗಿ ರೂಪುಗೊಳ್ಳಲು ಕಾಗೋಡು ಸತ್ಯಾಗ್ರಹದ ಪಾತ್ರವನ್ನು ಪ್ರಮುಖವಾಗಿ ಪರಿಗಣಿಸಬಹುದಲ್ಲದೆ ಅದನ್ನು ಸಮಾಜವಾದಿ ಸತ್ಯಾಗ್ರಹ ಎನ್ನಲಾಗದು. ಸಮಾಜವಾದಿ ದೃಷ್ಟಿಕೋನಗಳಿಲ್ಲದ, ಅನ್ಯ ಹಿತಾಸಕ್ತಿಗಳಿಂದ ಶುರುವಾದ ಕಾಗೋಡು ಸತ್ಯಾಗ್ರಹದ ಒಂದು ನಿರ್ಣಾಯಕ ಹಂತದಲ್ಲಿ ಸಮಾಜವಾದಿಗಳು ಅದನ್ನು ತಮ್ಮ ಕೈಗೆತ್ತಿಕೊಳ್ಳುವುದರೊಂದಿಗೆ ಅದರ ಗತಿಯೇ ಬದಲಾಯಿತು. ಲೋಹಿಯಾರ ಪ್ರವೇಶ ಅದಕ್ಕೆ ವಿಶೇಷ ಮಹತ್ವವನ್ನು ತಂದುಕೊಟ್ಟಿತು. ರಾಜ್ಯದಲ್ಲಿ ಒಂದು ವಿಶಿಷ್ಟ ಸಂಚಲನ ಸೃಷ್ಟಿಸಿ ದೇಶದಲ್ಲಿ ಒಂದು ವಿಶೇಷ ಸುದ್ದಿಯಾಗಿ ಹೊಮ್ಮಿದ ಕಾಗೋಡು ಯಾವೊಂದು ಗಟ್ಟಿ ಫಲವನ್ನು ಕೊಡದೇ ಕ್ರಮೇಣ ತಣ್ಣಗಾಯಿತು. ಸಮಾಜವಾದಿಗಳು ಅಧಿಕಾರ ರಾಜಕಾರಣದಲ್ಲಿ ಪ್ರಾಧ್ಯಾನ್ಯತೆ ಪಡೆಯುವಂತೆ ರಾಜಕೀಯ ಪರಿಣಾಮ ಸೃಷ್ಟಿಸುವಲ್ಲಿ ಕಾಗೋಡು ಯಶಸ್ವಿಯಾಯಿತೆಂದು ಖಂಡಿತವಾಗಿ ಹೇಳಬಹುದು.ಆದರೆ ಆರ್ಥಿಕ ಪರಿಣಾಮಗಳ ದೃಷ್ಟಿಯಿಂದ ಅಷ್ಟೊಂದು ಯಶಸ್ವಿ ಎನ್ನಲಾಗದು. ಜಮೀನ್ದಾರಿಕೆಯನ್ನು ನಾಶಮಾಡಿ, ಭೂಮಿಯ ಒಡೆತನವನ್ನು ರೈತರಿಗೆ ಹಂಚುವ ಕ್ರಾಂತಿಕಾರಕ ಆಲೋಚನೆ ಹೊಂದಿದ್ದ ‘ಸಮಾಜವಾದ’ ಕಾಗೋಡಿನಲ್ಲಿ ಸಾಧಿಸಿದ್ದು ಗೇಣಿಯನ್ನು ಕೊಡದಿರುವುದೂ ಅಲ್ಲ, ಕೊಡುವ ಗೇಣಿಗೆ ನ್ಯಾಯಯುತ ‘ಮಾಪನ’ ಒದಗಿಸುವುದಷ್ಟೇ. ಮೂರೂವರೆ ಸೇರಿನ ಕೊಳಗದ ಬದಲಿಗೆ, ಮೂರು ಸೇರಿನ ಕೊಳಗದಲ್ಲಿ, ಜಮೀನುದಾರನಿಗೆ ಕೊಡುವ, ಗೇಣಿಯ ಅರ್ಧಸೇರಿನ ಅನ್ಯಾಯವನ್ನು ಸರಿಪಡಿಸುವಲ್ಲಿ ಮಾತ್ರ ಅದು ಯಶಸ್ವಿಯಾಯಿತು. ನಂತರದಲ್ಲಾದ ಭೂಸುಧಾರಣಾ ಕಾನೂನು ರಚನೆ ಮತ್ತು ಭೂಸುಧಾರಣೆ ಜಾರಿಗೊಳಿಸುವ ‘ಒತ್ತಡ’ವನ್ನು ಸೃಷ್ಟಿಸಲು ಕಾಗೋಡು ಪರಿಣಾಮಕಾರಿ ಕಾರಣವಾಯ್ತು.

ಕಾಗೋಡು ಸತ್ಯಾಗ್ರಹಕ್ಕೂ ಐದಾರು ವರ್ಷ ಮೊದಲಿನಿಂದಲೇ ಸಮಾಜವಾದಿಗಳು ರಾಜ್ಯದಲ್ಲಿ ರೈತರನ್ನು ಸಂಘಟಿಸುವ ಪ್ರಯತ್ನಗಳನ್ನು ನಡೆಸಿದ್ದರು. ೧೯೪೭ರಲ್ಲಿ ಕರ್ನಾಟಕದ ಅನೇಕ ಕಡೆಗಳಲ್ಲಿ ರೈತ ವಿದ್ಯಾರ್ಥಿ ಸಭೆ ಸಮಾವೇಶಗಳನ್ನು ಸಂಘಟಿಸುವ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಸಮಾಜವಾದಿ ಚಳವಳಿ ಕಟ್ಟುವ ಕನಸು ಕಂಡಿದ್ದರು. ಕಾಂಗ್ರೆಸ್ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿದ್ದ ಕಮಲಾದೇವಿ ಪಕ್ಷವನ್ನು ದಕ್ಷಿಣ ಭಾರತದಲ್ಲಿ ಕಟ್ಟುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ೧೯೪೬ರಲ್ಲಿ ನಂಜನಗೂಡಿನ ವಿದ್ಯಾರ್ಥಿ ಕಾಂಗ್ರೆಸ್ ಸಮ್ಮೇಳನದ ಉತ್ಸಾಹದಿಂದ ಮರಳಿದ ಗೋಪಾಲಗೌಡರು ತೀರ್ಥಹಳ್ಳಿಯಲ್ಲಿ ಮಲೆನಾಡು ಗೇಣಿದಾರರ ಸಂಘ ಕಟ್ಟಿದರು. ಕಾಂಗ್ರೆಸ್ಸಿನ ಜೊತೆಗೂಡಿಯೇ ಸಮಾಜವಾದಿಗಳು ಇದ್ದರಿಂದ ಭೂಮಾಲಕ ಕೆ. ಜೆ. ಒಡೆಯರ್ ರಂಥವರು ‘ಮಲೆನಾಡು ಸಂಘ’ದ ಭಾಗವಾಗಿಯೇ ಇದ್ದ ವೈರುಧ್ಯಗಳು ಆರಂಭದಲ್ಲಿಯೇ ಕಾಣಿಸಿಕೊಂಡವು. ಗೇಣೀರೈತ ಕುಟುಂಬದ ಕಡಿದಾಳ ಮಂಜಪ್ಪ ಮತ್ತು ಜಮೀನ್ದಾರ ಕೆ.ಜಿ. ಒಡೆಯರ್ ಇಬ್ಬರೂ ಕಾಂಗ್ರೆಸ್ಸಿಗರಾಗಿದ್ದರು. ಸಮಾಜವಾದಿಗಳು ಸಂಘಟಿಸಿದ ‘ಮಲೆನಾಡು ಗೇಣಿದಾರರ ಸಂಘ’ ಇವರನ್ನೂ ಒಳಗೊಂಡಿತ್ತು. ೧೯೪೮ರಲ್ಲಿ ‘ಹಿಂದ್ ಕಿಸಾನ್ ಪಂಚಾಯತ್’ ಆರಂಭವಾಯತಾದರೂ ತೀರ್ಥಹಳ್ಳಿಯ ‘ಮಲೆನಾಡು ಗೇಣಿದಾರರ ಸಂಘ’ ತನ್ನ ಸ್ವಂತ ಅಸ್ತತ್ವ ಉಳಿಸಿಕೊಂಡು ಕಾಂಗ್ರೆಸ್ಸಿಗರ ಕೈಯಲ್ಲಿ ಉಳಿಯಿತು. ಹೀರೇನಲ್ಲೂರು ವೀರಶೈವ ಮಂಡಳಿಗೆ ಪ್ರತಿಯಾಗಿ ಹುಟ್ಟಿಕೊಂಡಿದ್ದ ಹಿರೇನಲ್ಲೂರು ದೀವ ಮಂಡಳಿ, ದೀವರ ಸಂಘವಾಗಿ ಆ ಮೂಲಕ ‘ಸಾಗರ ತಾಲೂಕು ರೈತ ಸಂಘ’ವಾಗಿ ಒದಲಾಗಿತ್ತು. ಹೀಗೆ ಜಾತಿ ಭಿನ್ನಾಭಿಪ್ರಾಯದಿಂದ ಜನ್ಮತಳೆದ ಶೋಷಿತ ಜಾತಿ ಸಂಘ, ಶೋಷಿತ ವರ್ಗ ಸಂಘವಾಗಿ ರೂಪಾಂತರಗೊಳ್ಳುವ ಹಂತದಲ್ಲಿ ಖಾದ್ರಿ ಶಾಮಣ್ಣ, ಗೋಪಾಲಗೌಡ, ರಮಾನಂದನ ಮಿಶ್ರ, ಸದಾಶಿವರಾಯ ಮೊದಲಾದವರು ಅವರೊಂದಿಗಿದ್ದರು. ಆದರೆ ಸಮಾಜವಾದಿಗಳದ್ದೇ ಆದ ‘ಹಿಂದ್ ಕಿಸಾನ್ ಪಂಚಾಯತ್’ ಕಟ್ಟಲು ಸಾಧ್ಯವಾಗಿರಲಿಲ್ಲ. ಸಾಗರ ತಾಲೂಕು ರೈತ ಸಂಘಕ್ಕೆ ದೀವರ/ರೈತರ ಒಕ್ಕಲುಗಳ ಸ್ಥಿತಿ ಸುಧಾರಣೆಯ ಉದ್ದೇಶವಾಗಿತ್ತೇ ಹೊರತು ಮೂಲಭೂತ ಬದಲಾವಣೆಗಳ ಉದ್ದೇಶವಲ್ಲ. ಕೊನೆಗೆ ಕಾಂಗ್ರೆಸ್ಸಿಗರ ಹಿಡಿತಲ್ಲಿದ್ದ ಮಲೆನಾಡು ಗೇಣಿದಾರರ ಸಂಘ ಮತ್ತು ದೀವರದ್ದೇ ಆಗಿದ್ದ ಸಾಗರ ತಾಲೂಕು ರೈತ ಸಂಘಗಳು ವಿಲೀನಗೊಂಡು ‘ಮಲೆನಾಡು ರೈತ ಸಂಘ’ವಾಯಿತಾದರೂ ಸಮಾಜವಾದಿಗಳು ಇದರಿಂದ ಹೊರಗಿದ್ದೇ ಹಿತೈಷಿಗಳಾಗಿ ಉಳಿದರು.

ಕಾಗೋಡಿನ ಜಮೀನ್ದಾರರ ವಿರುದ್ಧವಾಗಿ ಮಲೆನಾಡು ರೈತಸಂಘ ಗೇಣಿ ಮಾಪನದಲ್ಲಾದ ಅನ್ಯಾಯ ಸರಿಪಡಿಸಲು ಹೋರಾಟ ಆರಂಭಿಸಿತು. ಕಾಂಗ್ರೆಸ್ ಆಡಳಿತದ ಸರಕಾರವಿದ್ದ ಸಂದರ್ಭದಲ್ಲಿ ಗೇಣಿದಾರರ ಪರವಾದ ಹೋರಾಟದ ನಾಯಕತ್ವವೂ ಕಾಂಗ್ರೆಸ್ಸಿಗರಾಗಿದ್ದ ಕಡಿದಾಳ ಮಂಜಪ್ಪನವರದ್ದಾದರೆ, ಜಮೀನ್ದಾರರೂ ಕಾಂಗ್ರೆಸ್ಸಿಗರೇ ಆಗಿದ್ದರು. ಗೇಣಿದಾರರ ಹೋರಾಟ ಜಮೀನ್ದಾರರು ಹಾಗೂ ಸರಕಾರದ ವಿರುದ್ಧ ನಿರ್ಣಾಯಕ ಸಂಘರ್ಷದ ಹಂತ ತಲುಪಿದಾಗ ಕಡಿದಾಳ ಮಂಜಪ್ಪನವರಿಗೆ ರೈತ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿಯೇ ಮುಖ್ಯವಾಗಿ ಹೋರಾಟದಿಂದ ಹಿಂದಕ್ಕೆ ಸರಿದರು. ಈ ಹಂತದಲ್ಲಿ ಸಮಾಜವಾದಿಗಳು ‘ಕಾಗೋಡಿನ ಸತ್ಯಾಗ್ರಹ’ವನ್ನು ಪ್ರವೇಶಿಸಿ ನಾಯಕತ್ವ ವಹಿಸಿಕೊಂಡರಾದರೂ ಅದು ಗೋಪಾಲಗೌಡರ ಅತೀವ ರೈತ ಕಾಲಜಿಯ ವೈಯಕ್ತಿಕ ತೀರ್ಮಾನವೇ ಆಗಿತ್ತು. ರೈತಹೋರಾಟಗಳಿಗಿಂತ ಕಾರ್ಮಿಕ ಹೋರಾಟಗಳ ಮೂಲಕ ಸಮಾಜವಾದಿ ಪಕ್ಷ ಕಟ್ಟಬೇಕೆಂಬ ಧೋರಣೆ ತಳೆದಿದ್ದ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಿ.ಜಿ.ಕೆ.ರೆಡ್ಡಿಯವರೂ ಮೊದಲಿಗೆ ಈ ಹೋರಾಟದ ಬಗ್ಗೆ ಒಲವು ತೋರಿಸಿರಲಿಲ್ಲ. ಆದರೆ ಗೋಪಾಲಗೌಡರು ಅವರೊಂದಿಗೆ ಸಾಕಷ್ಟು ಚರ್ಚಿಸಿ, ಮನವೊಲಿಸಿ ರಾಜ್ಯಾಧ್ಯಕ್ಷರಾಗಿದ್ದು ಅವರ ಒಪ್ಪಿಗೆ ಪಡೆದು ಕಾಗೋಡು ಸತ್ಯಾಗ್ರಹಕ್ಕೆ ನಾಯಕತ್ವ ನೀಡಿದರು. ಆದರೆ ಸಮಾಜವಾದಿ ಪಕ್ಷದ ದೃಷ್ಟಿಯಿಂದಲೂ ಇದು ಬಲಾಬಲ ಅಳೆದು ಪಕ್ಷದಲ್ಲಿ ಪ್ರಜಾಸತ್ತಾತ್ಮಕ ಚರ್ಚೆಯಾಗಿ ತೆಗೆದುಕೊಂಡ ತೀರ್ಮಾನವಾಗಿರದೆ ರಾಜ್ಯಾಧ್ಯಕ್ಷ ಸಿ.ಜಿ.ಕೆ.ರೆಡ್ಡಿ ಮತ್ತು ಗೋಪಾಲಗೌಡರ ವೈಯಕ್ತಿಕ ನಿರ್ಧಾರವಾಗಿತ್ತು.

ಸಣ್ಣದಾಗಲಿ, ದೊಡ್ಡದಾಗಲಿ ಎಲ್ಲ ರೀತಿಯ ಅನ್ಯಾಯ ಕೃತ್ಯಗಳನ್ನೂ ವಿರೋಧಿಸಬೇಕೆಂದು ಆಗಷ್ಟೇ ಜೂನ್ ೩ನೇ ತಾರೀಖು (೧೯೫೧) ರಾಜಘಾಟಿನಲ್ಲಿ ಜನಗಳಿಗೆ ಲೋಹಿಯಾ ಬೋಧಿಸಿದ್ದರು. ಆ ಮರುದಿನಗಳಲ್ಲಿಯೇ ಕಾಗೋಡಿನ ಅನ್ಯಾಯದ ವಿರುದ್ಧ ಕರೆ ಬಂದಾಗ ಓಗೊಟ್ಟಿದ್ದು ಅವರಾಡಿದ ಮಾತಿಗೆ ಅವರು ತೋರಿದ ಬದ್ಧತೆಯೇ ಆಗಿತ್ತು. ೩ನೇ ತಾರೀಖು ತಾವಾಡಿದ್ದನ್ನು ೧೧ ದಿನಗಳ ನಂತರ (ಜೂನ್ ೧೪) ಮಾಡಿ ತೋರಿಸಬೇಕಾಗುತ್ತದೆ ಎಂದು ಸ್ವತಃ ತಾವು ಯೋಚಿಸಿರಲಿಲ್ಲವೆಂದು ಲೋಹಿಯಾ ಅವರೇ (ಪ್ರಜಾವಾಣಿ ೨೭.೬.೫೧) ಹೇಳಿಕೊಂಡರು. ಲೋಹಿಯಾ ಕಾಗೋಡಿನ ಹೋರಾಟದಲ್ಲಿ ಭಾಗವಹಿಸಿದ ಕಾರಣವಾಗಿ ‘ಕಾಗೋಡು ಸತ್ಯಾಗ್ರಹ’ ಸಮಾಜವಾದಿ ಹೋರಾಟ ಎಂಬ ವ್ಯಾಪಕತೆಯನ್ನು ಪಡೆಯಿತು. ಲೋಹಿಯಾ ಬಂದು ಹೋದ ನಂತರ ಸೋಷಲಿಸ್ಟರ ಶಕ್ತಿ ತೀರಿತ್ತು ಎಂಬ ಅಭಿಪ್ರಾಯವೂ ಇದೆ. ಈ ಮೊದಲು ತಾವಾಡಿದ್ದ ಹಕ್ಕುಭಾದ್ಯತೆಗಳನ್ನು ಶಾಸನ ಸಭೆಯ ಹೊರಗೆ ಈಡೇರಿಸಿಕೊಳ್ಳಬೇಕು ಎಂದಿದ್ದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಮುಖಂಡರಾಗಿದ್ದ ಬಿಹಾರದ ‘ರಮಾನಂದನ ಮಿಶ್ರ’ ಸತ್ಯಾಗ್ರಹದ ನಿರ್ಣಾಯಕ ಹಂತದಲ್ಲಿ ಟ್ರಿಬ್ಯೂನಲ್ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಮಾತುಗಳನ್ನಾಡಿದ್ದರು.

ಕಾಗೋಡು ಸತ್ಯಾಗ್ರಹದ ನಂತರದಲ್ಲೂ ಹೋರಾಟ ಮಾಡಿದ್ದ ಎಲ್ಲ ರೈತರೂ ಜಮೀನ್ದಾರರ ಒಕ್ಕಲುಗಳೇ ಆದರು. ಹೋರಾಟದ ಮುಖ್ಯ ಬೇಡಿಕೆಯಾಗಿದ್ದ ಮೂರು – ಮೂರೂವರೆ ಸೇರಿನ ವಿವಾದ ನ್ಯಾಯಯುತವಾಗಿ ಬಗೆಹರಿದ ಬಗ್ಗೆಯೂ ಭಿನ್ನಾಭಿಪ್ರಾಯಗಳಿವೆ. ಹೋರಾಟ ಮಾಡಿ ಮುಗಿಸುವ ಹೊತ್ತಿಗೆ ರೈತರು ಉಳಲು ಭೂಮಿ ಸಿಕ್ಕರೆ ಸಾಕು ಎಂಬ ಅನಿವಾರ್ಯ ಸ್ಥಿತಿ ತಲುಪಿದ್ದರು. ಜಮೀನ್ದಾರರ ಭೂಮಿ ಬಿಟ್ಟರೆ ಜೀವನೋಪಾಯಕ್ಕೆ ಬೇರೆ ದಾರಿಯಿರದ ಕಾರಣ ಮೂಡಿದ ಅಸಹಾಯಕತೆ ‘ಸಂಧಾನ’ಕ್ಕೆ ಬದ್ಧರಾಗುವಂತೆ ಮಾಡಿತ್ತು. ಈ ಅಂಶಗಳು ಸಮಾಜವಾದೀ ನಾಯಕತ್ವಕ್ಕೂ ಬಿಡಿಸಲಾರದ ಒಗಟಾಗಿ ಅನಿವಾರ್ಯ ಕೊನೆ ತಲುಪಿತ್ತು.

ಸಮಾಜವಾದಿಗಳು ಅತ್ಯಂತ ಪ್ರಾಮಾಣಿಕವಾಗಿ ಸತ್ಯಾಗ್ರಹಕ್ಕೆ ನಾಯಕತ್ವ ನೀಡದ್ದರು. ಗೇಣಿ – ರೈತರ ಬಗೆಗಿನ ಕಾಳಜಿ ಮತ್ತು ‘ಬೇಸಾಯ ರಂಗ’ದ ಬಗೆಗಿನ ಗೋಪಾಲಗೌಡರ ಬದ್ಧತೆ’ ಸಾಮಾಜವಾದಿ ಪಕ್ಷ’ ಗೇಣಿರೈತರ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತ್ತು. ಕಾರ್ಮಿಕ ವರ್ಗವೇ ಸಾಮಾಜಿಕ ಬದಲಾವಣೆಗೆ ವಾಹಕ ಎಂದು ಮನಗಂಡಿದ್ದ ರಾಜ್ಯಾಧ್ಯಕ್ಷ ಸಿ.ಜಿ.ಕೆ. ರೆಡ್ಡಿಯವರೂ, ರೈತ ವರ್ಗದ ಹೋರಾಟದ ಅವಶ್ಯಕತೆಯನ್ನು ಮನಗಾಣುವಂತೆ ಮಾಡುವಲ್ಲಿಯೂ ಕಾಗೋಡು ಯಶಸ್ವಿಯಾಗಿತ್ತು. ಬಿಹಾರದ ಮುಖಂಡ ರಮಾನಂದನ ಮಿಶ್ರ ಕಾಗೋಡು ಸತ್ಯಾಗ್ರಹದೊಟ್ಟಿಗೇ ಇದ್ದರು. ದೇಶ ಮುಟ್ಟದ ನಾಯಕ, ಲೋಹಿಯಾ ಕಾಗೋಡಿನ ರೈತರ ಪರವಾಗಿ ಹೋರಾಟಕ್ಕಿಳಿದದ್ದು ಅವರ ಚಾರಿತ್ರಿಕ ಬದ್ಧತೆಯೇ ಆಗಿತ್ತು. ನಂತರದಲ್ಲಿ (ಸೆಪ್ಟೆಂಬರ್) ಜೆ.ಪಿ.ಯವರೂ ಸಾಗರದ ಜೈಲಿಗೆ ಭೇಟಿ ನೀಡಿ ಸತ್ಯಾಗ್ರಹಿಗಳೊಂದಿಗೆ ಮಾತಾಡಿದ್ದರು. ಈ ಎಲ್ಲ ಅಂಶಗಳೂ ಕಾಗೋಡನ್ನು, ಕರ್ನಾಟಕದ ಸಮಾಜವಾದಿ ಚಳವಳಿಯ ಪ್ರಧಾನ ಭಾಗವಾಗಿ ರೂಪಿಸಿದವು.

ಚಳವಳಿ ಕೊನೆಗೊಳ್ಳುತ್ತಲೇ ಆರಂಭವಾದ ಪ್ರಥಮ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಗೋಡಿನ ವಿದ್ಯಮಾನದ ಮೂಲಕ ರಾಜ್ಯದ ರಾಜಕಾರಣದಲ್ಲಿ ಆಡಳಿತ ಪಕ್ಷಕ್ಕೆ ಪ್ರತಿಯಾಗಿ ವಿರೋಧ ಪಕ್ಷ – ವಿರೋಧ ಬಣವನ್ನು ರೂಪಿಸುವಲ್ಲಿ ‘ಕಾಗೋಡು’ ಪ್ರಭಾವ ಬೀರಿತು. ಪ್ರಥಮ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಗಮನಾರ್ಹ ಸ್ಥಾನಗಳನ್ನು ಪಡೆಯಲಿಲ್ಲವಾದರೂ, ಕಾಗೋಡು ಚಳವಳಿಯ ಮೂಲಕ ವ್ಯಾಪಿಸಿದ ಚಿಂತನೆಗಳು ರಾಜ್ಯಾದ್ಯಂತ ಕಾಂಗ್ರೆಸ್ಸ್ ವಿರೋಧಿ ರಾಜಕೀಯ ಪ್ರಜ್ಞೆಯನ್ನು ಬೆಳೆಸಲು ಕಾರಣವಾದವು.

ಇಲ್ಲಿ ಸಂದರ್ಶಿಸಲ್ಪಟ್ಟಿರುವ ಸಮಾಜವಾದಿಗಳಲ್ಲಿ ಯಾರೊಬ್ಬರು ನೇರವಾಗಿ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿರಲಿಲ್ಲವಾದರೂ, ಎಲ್ಲರೂ ಆ ಕುರಿತು ಪ್ರತಿಕ್ರಿಯಿಸಿದ್ದಾರೆ, ವಿಶ್ಲೇಷಿಸಿದ್ದಾರೆ. ಕಾಗೋಡು ಸತ್ಯಾಗ್ರಹಕ್ಕೆ ಭೌತಿಕವಾಗಿ ಹೆಚ್ಚು ಹತ್ತಿರವಿದ್ದವರೆಂದರೆ ಪೊನ್ನಮ್ಮಾಳ್ ಅವರು. ಆದರೆ ಶಿವಮೊಗ್ಗದಲ್ಲಿಯೇ ಇದ್ದರೂ ಇವರು ಕಾಗೋಡಿಗೆ ಹೋಗಿರಲಿಲ್ಲ. ಕಾಗೋಡು ಸತ್ಯಾಗ್ರಹದಲ್ಲಿ ತಮ್ಮ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಅದಕ್ಕೆ ಸಂಬಂಧಿಸಿದ ಕೆಲಸ ಮಾಡುವುದು ಎಂಬರ್ಥದಲ್ಲಿ ಮಾತಾಡುತ್ತಾರೆ. ‘ಎಲ್ಲರೂ ಕಾಗೋಡಿಗೆ ಹೋಗಿದ್ದರೆ, ಶಿವಮೊಗ್ಗದಲ್ಲಿದ್ದು ಸಂಪರ್ಕ ಕಲ್ಪಿಸುವ ಕೆಲಸವಾಗುತ್ತಿರಲಿಲ್ಲ. ಆ ಕೆಲಸ’ ತಾವು ಮಾಡಿದ್ದುದಾಗಿ ಹೇಳುತ್ತಾರೆ. ಅಷ್ಷು ಬಿಟ್ಟರೆ ನಿರ್ದಿಷ್ಟ ಕಾರ್ಯಸ್ವರೂಪ, ಅಥವಾ ಜವಾಬ್ದಾರಿ ವಹಿಸಿದ್ದನ್ನಾಗಲಿ, ಅದರ ಬಗ್ಗೆ ಗಂಭೀರವಾಗಿ ಸ್ವಯಂಸ್ಫೂರ್ತಿಯಿಂದ ಮಾತಾಡದಿರುವ ಅಂತರ ಎದ್ದುಕಾಣುತ್ತದೆ.

ನೀಲಗಂಗಯ್ಯ ಪೂಜಾರ್ ಅವರಂತೂ, “ಗಣಪತಿಯಪ್ಪನವರ ಕೈಸೋತು ನಿಂತಾಗ ಇವ್ರು ಸೇರ್ಕೊಂಡು ಹೋರಾಟ ಮಾಡಿದ್ರು, ಅದರ ಸಾಧನೇನೂ ಭಾಳಾ ಏನ್ ಆಗಿಲ್ಲ. ಅದು ಹೋರಾಟ ಅಂಥಾ ಯಶಸ್ಸಿನಲ್ಲೇನೂ ಮುಕ್ತಾಯವಾಗಲಿಲ್ಲ ಎಂದು ಅಭಿಪ್ರಾಯಪಡುತ್ತಾರೆ. “ಸಾಗರದ ಬದರಿನಾರಾಯಣ ಅಯ್ಯಂಗಾರರು ಕಾಗೋಡಿನ ಜಮೀನ್ದಾರರಿಗಿಂತ ದೊಡ್ಡ ಜಮೀನ್ದಾರರು. ಆದ್ರೆ ಅಲ್ಲಿ ಸಂಘಟನೆ ಮಾಡ್ಡಿಲ್ಲ ಈ ಜನ” ಎಂದು ಸತ್ಯಾಗ್ರಹದ ಹಿಂದಿನ ತಮ್ಮ ಸಂಗಾತಿಗಳ ಇಂಟಿಗ್ರಿಟಿಯನ್ನು ಪ್ರಶ್ನಿಸುತ್ತಾರೆ. ಸಮಕಾಲೀನರೂ, ಕ್ರಿಯಾಶೀಲರೂ ಆಗಿದ್ದ ಸಮಾಜವಾದಿ ಪೂಜಾರರು ಕಾಗೋಡು ಸತ್ಯಾಗ್ರಹದ ಚರ್ಚೆ ಮತ್ತು ಹೋರಾಟಗಳಿಂದ ದೂರವೇ ಇದ್ದರು.ಇನ್ನುಳಿದವರಿಗಂತೂ ಕಾಗೋಡು ದೂರದ ಮಾತು, ಆಗದ ಅನುಭವ ಮಾತ್ರ.

ಈ ಹಿನ್ನೆಲೆಯಲ್ಲಿ ಕಾಗೋಡು ಸತ್ಯಾಗ್ರಹ ಕುರಿತಂತೆ ಈ ಸಂದರ್ಶನಗಳ ಸಂದರ್ಭದಲ್ಲಿ ಇಷ್ಟು ಚರ್ಚಿಸುವ ಅವಶ್ಯಕತೆ ಇತ್ತೆ ಎಂಬ ಪ್ರಶ್ನೆ ನನಗೂ ಕಾಡಿದೆ. ಆದರೆ ರಾಜ್ಯದ ಸಮಾಜವಾದಿ ಚರಿತ್ರೆಯಲ್ಲಿ ಪ್ರಮುಖವಾದ ಈ ಹೋರಾಟವನ್ನು ಹೊರತುಪಡಿಸಿ ಚಳವಳಿಯ ಆಯಾಮಗಳನ್ನು ಕಂಡುಕೊಳ್ಳಲಾಗುವುದಿಲ್ಲ. ಇಲ್ಲಿರುವ ಸಂದರ್ಶಿತರು ಆಡಿದ ಮಾತುಗಳ ಹಿಂದಿನ ಮೌನದಲ್ಲಿ ಕಾಗೋಡು ಜೀವಂತವಾಗಿದೆ. ಆ ಮೌನದ ಅರ್ಥಕ್ಕಾಗಿ ತಡಕಾಡಬೇಕಾಗುತ್ತದೆ. ಕಾಗೋಡು ಸತ್ಯಾಗ್ರಹ, ಸಮಾಜವಾದಿ ಚಳವಳಿಯನ್ನು ನಿರೂಪಿಸುವ ಬಹು ಆಯಾಮಗಳನ್ನು ಅಂತರ್ಗತವಾಗಿಟ್ಟುಕೊಂಡು ಚರಿತ್ರೆಯನ್ನು ಅರ್ಥೈಸಲು ಪ್ರೇರೇಪಿಸುತ್ತದೆ.