ಕನ್ನಡ ವಿಶ್ವವಿದ್ಯಾಲಯದ ಆರಂಭದ ದಿನಗಳಿಂದಲೂ ಇದರ ಜೊತೆಗೇ ಇದ್ದು ನನ್ನ ತಿಳವಳಿಕೆಯನ್ನು ರೂಪಿಸಿಕೊಂಡವನು ನಾನು. ವಿದ್ಯಾರಣ್ಯಕ್ಕಿನ್ನೂ ಬುನಾದಿ ಹಾಕುತ್ತಿದ್ದ ಹೊತ್ತಿನಲ್ಲಿ ಕಮಲಾಪುರದಲ್ಲಿ ಕಣ್ಣುಬಿಟ್ಟಿದ್ದ ವಿ.ವಿ.ವಲಯದಲ್ಲಿ ಆಗ ಇದ್ದ ಎಸ್.ಎಸ್. ಹಿರೇಮಠ, ಪುರಷೋತ್ತಮ ಬಿಳಿಮಲೆ, ಟಿ.ಎಸ್. ಸತ್ಯನಾಥ್, ಎಚ್. ಎಸ್. ರಾಘವೇಂದ್ರರಾವ್ ಹಾಗೂ ರಹಮತ್ ತರೀಕೆರೆಯವರ ನಡುವೆ ನಡೆಯತ್ತಿದ್ದ ಚರ್ಚೆ ಸಂವಾದ ಸೃಜನಶೀಲ ಹರಟೆಗಳ ನಡುವೆ ನನ್ನ ಬೌದ್ಧಿಕ ಬೇರುಗಳಿಗೆ ಹಸಿ ತಾಗಿಸಿಕೊಂಡವನು. ಅಲ್ಲಿಂದ ಈವರೆಗೆ ಕನ್ನಡ ವಿಶ್ವವಿದ್ಯಾಲಯದ ಚಿಂತನಾಕ್ರಮದ ಭಾಗವಾಗಿಯೇ ಇರುವ, ನಾನು ಇದರ ನಿರಂತರ ಸಂಪರ್ಕದಲ್ಲಿರುವ ಒಬ್ಬ ನಿರಪೇಕ್ಷಿತ ವಾರಸುದಾರ. ಈ ವಿಶ್ವವಿದ್ಯಾಲಯದ ಹಲವು ಪ್ರಾಧ್ಯಾಪಕ ಸಿಬ್ಬಂದಿ ಮಿತ್ರರ ಪ್ರೀತಿ ವಿಶ್ವಾಸಗಳು ನನ್ನನ್ನು ಬೆಳೆಸಿವೆ. ಒಂದಲ್ಲ ಒಂದು ರೀತಿಯಲ್ಲಿ ಅನುವಾದ ಎಲ್ಲರನ್ನೂ ಈ ಹೊತ್ತು ನಾನು ಸ್ಮರಿಸುತ್ತೇನೆ.

ಈ ವಿಶ್ವವಿದ್ಯಾಲಯ ವಿದ್ಯೆ ಕಲಿಸುವ ವಿಶ್ವವಿದ್ಯಾಲಯವಲ್ಲ, ವಿದ್ಯೆ ಕಲಿಯಲು ಅವಕಾಶ ಮಾಡಿಕೊಡುವ ಸಂಸ್ಥೆ ಎಂಬುದನ್ನು ನಾನು ನನ್ನ ಅನುಭವದಿಂದ ಅರಿತಿದ್ದೇನೆ. ವಿಶ್ವವಿದ್ಯಾಲಯ ನನಗೆ ಈ ಯೋಜನಾಕಾರ್ಯವನ್ನು ವಹಿಸಿಕೊಡುವ ಮೂಲಕ ನಾನು ಕಲಿಯಲು ಅವಕಾಶ ಮಾಡಿಕೊಟ್ಟಿದೆ. ಇಲ್ಲಿ ನನಗೆ ಸಂದರ್ಶನ ನೀಡಿದ ಹಿರಿಯ ಸಮಾಜವಾದಿ ಚಿಂತಕರು, ಹೋರಾಟಗಾರರು, ಈ ಕಾರ್ಯಕ್ಕೆ ಮಾರ್ಗದರ್ಶನ ನೀಡಿದ ಲೋಹಿಯಾ ಪೀಠದ ಸಂಚಾಲಕರು, ಜೊತೆಗೂಡಿ ಕೆಲಸ ಮಾಡಿದ ಗೆಳೆಯರು ನನ್ನ ಜ್ಞಾನದ ಮಿತಿಯನ್ನು ಕಾಣಿಸಿದ್ದಾರೆ. ಹೀಗೆ ನಮ್ಮ ಮಿತಿಯನ್ನು ಕಾಣಿಸುವ ಜ್ಞಾನ, ಕಲಿಕೆಯ ಪ್ರಕ್ರಿಯೆಯಲ್ಲಿ ಪ್ರಾಥಮಿಕ ಅಗತ್ಯ ಎಂದು ಭಾವಿಸಿ ಅಂತಹ ಕಾಣ್ಕೆ ನೀಡಿದ ಎಲ್ಲರಿಗೆ ವಿನೀತನಾಗಿ ವಂದಿಸುತ್ತೇನೆ.

ನಮಿಸುವುದಾದರೆ ನಾನು ಮೊದಲಿಗೆ, ನನಗೆ ಈ ಲೋಕಮಾನ್ಯ ಸಮಾಜವಾದಿಗಳ ದರ್ಶನಾವಕಾಶ ಮಾಡಿಕೊಟ್ಟ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಬಿ.ಎ. ವಿವೇಕರೈ ಅವರನ್ನು, ಅವರು ಈ ಯೋಜನಾಕಾರ್ಯವನ್ನು ನನ್ನಂತಹ ಒಬ್ಬ ಕಾರ್ಯಕರ್ತನಿಗೆ ನೀಡಿದ್ದಾರೆ. ಅವರ ಔದಾರ್ಯಕ್ಕೆ ನಾನು ಕೃತಜ್ಞನಾಗಿದ್ದೇನೆ. ಅಂತೆಯೇ ರಾಮಮನೋಹರ ಲೋಹಿಯಾ ಪೀಠದ ಸಂಚಾಲಕರಾದ ಡಾ. ರಹಮತ್ ತರೀಕೆರೆಯವರ ವಿಶ್ವಾಸ ಬಹಳ ಧೈರ್ಯದ್ದು. ಅವರು ನನ್ನಂತಹ ಓಡಾಟಗಾರನ ಕೊರಳಿಗೆ ಜವಾಬ್ದಾರಿ ತೂಗುಹಾಕಿ ಕೆಲಸ ಮಾಡಿಸಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೇನೆ. ಪೀಠದ ಸದಸ್ಯರಾದ ಕಾಳೇಗೌಡ ನಾಗವಾರ, ನಟರಾಜ್ ಹುಳಿಯಾರ್ ಹಾಗೂ ಮಾರ್ಗದರ್ಶನ ನೀಡಿ ಹಸ್ತಪ್ರತಿ ಪರಿಶೀಲಿಸಿದ ಕೆ. ಫಣಿರಾಜ ಅವರುಗಳನ್ನು ಗೌರವಯುತವಾಗಿ ಸ್ಮರಿಸುತ್ತೇನೆ. ಕಿರಿಯ ಮಿತ್ರ ಅರುಣ್ ಜೋಳದಕುಡ್ಲಿಗೆ ಈ ಕೃತಿ ಬರೆಹದ ಪೂರ್ಣಾವಧಿ ತನ್ನ ಗೂಡಿನಲ್ಲಿ ಜಾಗ ಕೊಟ್ಟು ಆಸರೆಯಾಗಿದ್ದಾನೆ. ಭಾವೈಕ್ಯತಾ ವೇದಿಕೆಯ ಸದಸ್ಯರು ಹಾಗೂ ಪಿ. ಅಬ್ದುಲ್ಲಾ ಅವರುಗಳೂ ಈ ಕಾರ್ಯದ ನಡುವೆ ಉಪಚರಿಸಿದ್ದಾರೆ. ಇಲ್ಲಿನ ಸಾಲುಗಳ ಹಿಂದೆ ಇವರೆಲ್ಲರ ತಾಳ್ಮೆ ಪ್ರೀತಿಗಳಿವೆ. ವಿಶ್ವವಿದ್ಯಾಲಯದ ನನ್ನ ಸಂಪರ್ಕದ ನಿರಂತರತೆಗೆ ಸೇತುವೆಯಂತಿರುವ ಆತ್ಮೀಯ ಮಿತ್ರ ಎ.ಎಸ್. ಪ್ರಭಾಕರ ಹಲವು ರೀತಿಯಿಂದ ನೆರವಾಗಿದ್ದಾರೆ. ಬಿ.ಎಂ. ಪುಟ್ಟಯ್ಯ ಕರಡು ಓದಿ ಚರ್ಚಿಸಿದ್ದಾರೆ. ಮೊಗಳ್ಳಿ ಗಣೇಶ್, ಹಿ.ಚಿ. ಬೋರಲಿಂಗಯ್ಯ ಹಿತೈಷಿಗಳಾಗಿದ್ದಾರೆ. ಪ್ರಿಯ ಮಿತ್ರ ಶ್ರೀಕಾಂತ ಸತತ ಫೋನಾಯಿಸಿ ಬರೆಹದ ಪ್ರಗತಿ ವಿಚಾರಿಸಿಕೊಂಡಿದ್ದಾನೆ. ಚಳವಳಿಯ ಸಂಗಾತಿ ಬಸವರಾಜ ಸೂಳಿಭಾವಿ ಈ ಕಾರ್ಯನಿಮಿತ್ತ ಭೂಮಿ ಬೇಕು ಆಂದೋಲನದ ಹೋರಾಟಗಳಲ್ಲಿನ ನನ್ನ ಗೈರು ಹಾಜರಾತಿಯನ್ನು ಮನ್ನಿಸಿದ್ದಾರೆ. ಗೆಳೆಯ ಹು.ಬಾ. ವಡ್ಡಟ್ಟಿ ಸಂದರ್ಶನದ ವೀಡಿಯೋಕರಣ ಮಾಡಿ ಕೊಟ್ಟಿದ್ದಾರೆ. ಸತೀಶ್ ಪಾಟೀಲ ಜೊತೆಗೂಡಿ ಹುರುಪಿನಿಂದ ಕೆಲಸ ಮಾಡಿದ್ದಾರೆ. ಕ್ಷೇತ್ರಕಾರ್ಯದ ಕಾಲಕ್ಕೆ ಮಂಜುಳಾ, ಇರ್ಫಾನ್ ಮುದಗಲ್, ನಾಗರಾಜ ಗುರಿಕಾರ, ಎಂ.ಡಿ. ಒಕ್ಕುಂದ, ಎಂ.ಡಿ. ಕುಲಾಲ್, ದಸ್ತಗಿರ್ ಸಾಬ್ ದಿನ್ನಿ, ಭೀಮನಗೌಡ, ಆನಂದ ಋಗ್ವೇದಿ, ಇಸ್ಮಾಯಿಲ್ ಜಬೀರ್, ಶಿವಕುಮಾರ ನಾಗವಾರ…. ಏಸೊಂದು ಮಂದಿ! ಎಲ್ಲರನ್ನೂ ಈ ಹೊತ್ತು ಮನಸಾರೆ ಸ್ಮರಿಸುತ್ತೇನೆ.

ಅತಿಮುಖ್ಯವಾಗಿ ಈ ಕೃತಿಗಾಗಿ ಸಂದರ್ಶನ ನೀಡಿದ ಈ ಎಂಟು ಮಂದಿ ಸಮಾಜವಾದಿಗಳು ಸಂದರ್ಶಿಸುವ ನನ್ನ ಪ್ರಸ್ತಾಪಕ್ಕೆ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನನ್ನ ಭೇಟಿಗೆ ಅವಕಾಶ ಹಾಗೂ ತುಂಬು ಪ್ರೀತಿಯ ಆದರಾತೀಥ್ಯ ಸಹಿತ ಸಂದರ್ಶನ ನೀಡಿದ ಈ ಮಹನೀಯರನ್ನು ನಾನು ಕೃತಜ್ಞತಾಪೂರ್ವಕವಾಗಿ ನಮಿಸುತ್ತೇನೆ. ಈ ಹಿರಿಯರ ಕುಟುಂಬದ ಸದಸ್ಯರುಗಳೂ ಸಂದರ್ಶನಕ್ಕೆ ಹಲವು ಬಗೆಯಲ್ಲಿ ನೆರವಾಗಿ ಸ್ಪಂದಿಸಿ ಸಂದರ್ಶನದ ಯಶಸ್ಸಿಗೆ ಕಾರಣರಾಗಿದ್ದಾರೆ. ಅದರಲ್ಲೂ ಶ್ರೀಮತಿ ಅಮ್ಮೆಂಬಳ ಆನಂದ ಹಾಗೂ ಶ್ರೀಮತಿ ನಿರ್ಮಲಾ ಕಾರಂತ ಅವರುಗಳು ತುಂಬು ಪ್ರೀತಿಯನ್ನು ಉಣಬಡಿಸಿದ್ದಾರೆ. ಈ ಹಿರಿಯ ಜೀವಗಳು, ಮತ್ತವರ ಪರಿವಾರಗಳ ಸ್ಪಂದನೆ ಇರದೇ ಹೋಗಿದ್ದರೆ ಇಷ್ಟು ಕಾರ್ಯ ಮಾಡಲು ಖಂಡಿತ ಸಾಧ್ಯವಾಗುತ್ತಿರಲಿಲ್ಲ. ಅವರೆಲ್ಲರನ್ನೂ ಗೌರವದಿಂದ ಸ್ಮರಿಸುತ್ತೇನೆ.

ನಾನು ಸಂದರ್ಶಿಸಿದ ಸಮಾಜವಾದಿಗಳ ಬಗ್ಗೆ ಹಾಗೂ ಕರ್ನಾಟಕದ ಸಮಾಜವಾದಿ ಚಳವಳಿಯ ಬಗ್ಗೆ ಹಲವು ಹಿರಿಯ ಸಮಾಜವಾದಿ ಚಿಂತಕರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಮಾನ್ಯರಾದ ರಾಯಚೂರಿನ ಕೆ. ನಾಗಪ್ಪ, ಅಂಕೋಲೆಯ ವಿಷ್ಣು ನಾಯ್ಕ, ಶಂಕರಘಟ್ಟದ ಪ್ರೊ.ಸಣ್ಣರಾಮ, ಗಜೇಂದ್ರಗಢದ ಪ್ರೊ. ಕೆಂಚರೆಡ್ಡಿ, ರಾಯದುರ್ಗದ ಹಸನ್ ನಯೀಂ ಸುರಕೋಡ್, ಕತೆಗಾರರಾದ ಜಂಬಣ್ಣ ಅಮರಚಿಂತ, ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ, ಮಹಾಬಲೇಶ್ವರ ಕಾಟ್ರಹಳ್ಳಿ, ಬಾಬುರಾವ್ ಹೊನ್ನ ಇವರುಗಳು ಚರ್ಚಿಸಿ ಮಾಹಿತಿ ಹಾಗೂ ಸಲಹೆಗಳನ್ನು ನೀಡಿದ್ದಾರೆ. ಇವರೆಲ್ಲರನ್ನೂ ಗೌರವದಿಂದ ಸ್ಮರಿಸುತ್ತೇನೆ.

ಈ ಕೃತಿ ಪ್ರಕಟಿಣೆಯ ಔದಾರ್ಯ ತೋರಿದ ಪ್ರಸಾರಾಂಗದ ಮಾನ್ಯ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಸವಿತಾ ಯಾಜಿ, ಗಣೇಶ ಯಾಜಿ ಹಾಗೂ ಶ್ರೀಮತಿ ಭಾಗ್ಯ ಅವರು ಸುಂದರವಾಗಿ ಡಿ.ಟಿ.ಪಿ. ಮಾಡಿದ್ದಾರೆ. ಹೀಗೆ ಈ ಕೃತಿ ರೂಪು ತಳೆಯಲು ಕಾರಣವಾದ ಎಲ್ಲರನ್ನೂ ಮನಸಾರೆ ವಂದಿಸುತ್ತೇನೆ.

ಈ ಕೃತಿಯು ಕರ್ನಾಟಕದ ಜನಪದ ಚಳವಳಿಗಳ ಭಾಗವಾಗಿ ಕಿಂಚಿತ್ತಾದರೂ ಪ್ರಯೋಜನಕಾರಿಯಾದರೆ ನನ್ನ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ. ಚಳವಳಿಗಳ ಕಾರ್ಯಕರ್ತರಿಗೆ, ಹೋರಾಟಗಾರರು ಹಾಗೂ ಅಧ್ಯಯನಕರರಿಗೆ ಈ ಕೃತಿ ನೆರವಾಗಬಹುದೆಂದು ಆಶಿಸಿದ್ದೇನೆ.

ಬಿ. ಪೀರಬಾಷ
ಹೂವಿನಹಡಗಲಿ