ವೃತ್ತಿ ಅಥವಾ ಬದುಕಿನ ಧೋರಣೆ – ಸಿದ್ಧಾಂತದಿಂದ ಆಚೆಗಿನದೇ ಅಥವಾ ಸಿದ್ಧಾಂತಕ್ಕೆ ಸಂಬಂಧಿಸಿದ್ದೋ? ಬದುಕಿಗೂ – ಸಿದ್ಧಾಂತಕ್ಕೂ ಇರುವ ಸಂಬಂಧ ಕುರಿತ ಪ್ರಶ್ನೆ ಬಹಳ ಮುಖ್ಯವಾದದ್ದು. ಸಮಾಜವಾದಿ ಚಳವಳಿ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿತ್ತೇ? ಪರಿಗಣಿಸಿದ್ದಾದರೆ ಚಳವಳಿಯ ಭಾಗವಾಗಿದ್ದ ವ್ಯಕ್ತಿತ್ವಗಳ ಖಾಸಗೀ ಬದುಕಿನ ವಿವರಗಳು…. ಏನನ್ನು ಹೇಳುತ್ತವೆ? ಸಮಾಜವಾದ ‘ವ್ಯಕ್ತಿ ಸ್ವಾತಂತ್ರ್ಯ’ವನ್ನು ಎತ್ತಿ ಹೇಳಿತ್ತು ಎಂಬುದೇನೋ ಸರಿ. ಆದರೆ ವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿ ಅನಿರ್ಬಂಧಿತವೇ?

ಕರ್ನಾಟಕದ ಮಟ್ಟಿಗೆ ಸಮಾಜವಾದಿಗಳು ಅತಿಯಾದ ವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರು ಮತ್ತು ಹಾಗೆ ಬದುಕಿದವರು ಕೂಡ. ಸಮಾಜವಾದಿಗಳಿಗೆ ಆಧುನಿಕ ವಿಚಾರಗಳು ವ್ಯಕ್ತಿ ಸ್ವಾತಂತ್ರ್ಯವನ್ನು ‘ಮುಕ್ತ’ ಸ್ವಾತಂತ್ರ್ಯವನ್ನಾಗಿಸಿದವು. ಇದು ೧೯೬೦ರ ದಶಕದ ನಂತರ ಗೋಚರವಾಯ್ತು. ಪಿ.ಲಂಕೇಶ್ ತಮ್ಮ ಆತ್ಮಚರಿತ್ರೆ ‘ಹುಳಿಮಾವಿನ ಮರ’ದಲ್ಲಿ “ಹೊರನೋಟಕ್ಕೆ ಎಲ್ಲವೂ ಸರಿಯಾಗಿದ್ದಂತೆ ಕಾಣುತ್ತಿದ್ದರೂ ಶಿವಮೊಗ್ಗೆಯ ಸೋಷಲಿಸ್ಟರು ಸಂಜೆಯಾಯಿತೆಂದರೆ ಬ್ಯಾಗ್ ಗಟ್ಟಲೆ ವಿಸ್ಕಿ ತಂದು ಪಾರ್ಟಿ ನಡೆಸಿ ಒಂದು ಬಗೆಯ ಆತ್ಮಹತ್ಯೆಯ ಕ್ರಿಯೆಯಲ್ಲಿ ನಿರತರಾಗಿರುತ್ತಿದ್ದರು” ಎಂದು ಬರೆಯುತ್ತಾರೆ. ಜಾತಿ, ಭಾಷೆ, ಹಣ, ವೈಭವ ಎಲ್ಲವನ್ನೂ ಮೀರಿದ ಸುಖೀರಾಜ್ಯವೊಂದು ಸೃಷ್ಟಿಯಾಗುತ್ತಿತ್ತು. ಆಗ ನಮ್ಮ ಸಮಾಜವಾದಿ ಪಕ್ಷದಲ್ಲಿದ್ದ ಕಮ್ಮಾರರು, ಕ್ಷೌರಿಕರು, ಮೋಚಿಗಳು, ರೈತರು, ಕಾರ್ಮಿಕರು ಎಲ್ಲರೂ ಒಂದಾಗಿ ಅದ್ಭುತ ಜಗತ್ತೊಂದು ಸೃಷ್ಟಿಯಾಗುತ್ತಿತ್ತು (ಪುಟ ೨೧೧).

ಎಲ್ಲರೂ ಒಂದಾಗುವ ಅದ್ಭುತ ಜಗತ್ತು ನಿಜಕ್ಕೂ ಸೃಷ್ಟಿಯಾಗಿರಬೇಕಿದ್ದುದು ‘ಸಂಜೆಯ ಪಾರ್ಟಿ’ಗಳಲ್ಲಿಯೇ? ಈ ಭೋಗ – ವಿಲಾಸಗಳು ಬಸವರಾಜ ಕಟ್ಟೀಮನಿಯವರು ರಚಿಸಿದ ‘ಜರತಾರಿ ಜಗದ್ಗುರು’ ಕಾದಂಬರಿಯ ನಾಯಕನೆಂದು ಹೇಳಲಾಗುವ ‘ಉರವಕೊಂಡ ಜಗದ್ಗುರು’ಗಳ ಜೊತೆ ಸಮಾಜವಾದಿಗಳನ್ನು ‘ಐಕ್ಯ’ ಮಾಡಿದ ಪ್ರಮಾದದ ಮೂಲ ಎಲ್ಲಿದೆ? ಸಮಾಜವಾದದ ಆಶಯಗಳು ಕಂಡ ಕೊನೆ ಇದಾಗಿತ್ತು ಎನಿಸುವುದಿಲ್ಲವೇ? ಈ ವಿಷಯದಲ್ಲಿ ಗೋಪಾಲಗೌಡರೂ ಹೊರತಲ್ಲ. ಇಂತಹ ಬೆಳವಣಿಗೆಗೆಳು ‘ಸಮಾಜವಾದ’ದಂತಹ ಜನಪರ ಸಿದ್ಧಾಂತ ರೊಕ್ಕಸ್ಥ (ಬೂರ್ಜ್ವಾ) ಭೋಗವಾದೀ ತಿಳಿವಳಿಕೆಯಾಗಿ ಗ್ರಹಿಸಲ್ಪಟ್ಟಿತು. ಇದನ್ನು ಕಂಡ ಶ್ರಮಿಕ ಜನಸಮುದಾಯ, ಸಮಾಜವಾದವೂ ಶ್ರೀಮಂತ ಮತ್ತು ಪಾಳೇಗಾರಿ ಮೌಲ್ಯಕ್ಕಿಂತ, ಅಂತಹ ಪಕ್ಷಗಳಿಗಿಂತ, ‘ಭಿನ್ನ’ ಎಂದು ಗ್ರಹಿಸಬೇಕೆಂದು ಹೇಗೆ ಕಲ್ಪಿಸಿಕೊಳ್ಳಲು ಸಾಧ್ಯ?

ಹೀಗಾಗಲು ಎರಡು ಕಾರಣಗಳಿವೆ. ಒಂದು, ಸಮಾಜವಾದವನ್ನು ಒಂದು ‘ರಾಜಕೀಯ ಪಕ್ಷ’ ಮಾತ್ರ ಎಂದು ಪರಿಗಣಿಸಿ, ಅಧಿಕಾರ ರಾಜಕಾರಣದ ನೆಲೆಯಲ್ಲಿ ಕ್ರಿಯಾಶೀಲರಾಗುವುದು. ಇಂತಹ ಕ್ರಿಯಾಶೀಲತೆ ಹೋರಾಟ, ಪ್ರತಿಭಟನೆ ಎಲ್ಲವನ್ನು ಒಳಗೊಂಡಿರುತ್ತದಾದರೂ ಅದರ ಹಿಂದಿನ ಉದ್ದೇಶ ಸೈದ್ಧಾಂತಿಕವಾಗಿರುವುದಿಲ್ಲ ಹಾಗೂ ಚಳವಳಿಯನ್ನು ಕಟ್ಟಿ ಬೆಳೆಸುವ ಉದ್ದೇಶದ ಭಾಗವಾಗಿ ಅಂತಹ ಹೋರಾಟಗಳಿರುವುದಿಲ್ಲ. ಹಾಗಾಗಿ ತಕ್ಷಣದ ಉದ್ದೇಶ ಈಡೇರಿಸಿಕೊಂಡು ಅವು ನಂದಿ ಬಿಡುತ್ತವೆ. ಹೋರಾಟದ ನಂತರದ ಯಶಸ್ಸು ವ್ಯಕ್ತಿಪ್ರತಿಷ್ಠೆ ಅಥವಾ ಚುನಾವಣಾ ಗೆಲುವಿನಲ್ಲಿ ಪರ್ಯಾವಸಾನವಾಗುತ್ತದೆ. ಇನ್ನೊಂದು, ಸಮಾಜವಾದವನ್ನು ಸೈದ್ಧಾಂತಿಕವಾಗಿ ಗ್ರಹಿಸಿದವರು ಅದನ್ನೊಂದು ‘ಆದರ್ಶ’ವನ್ನಾಗಿ ಸ್ವೀಕರಿಸಿ ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಂಡು ನೈತಿಕ ಶುದ್ಧತೆಯಿಂದ ಬಾಳುವುದು. ಇಂತಹವರಿಗೆ ಸಮಾಜವಾದ ಒಂದು ನೈತಿಕಾದರ್ಶವಾದ. ಇವೆರಡೂ ಲಕ್ಷಣಗಳ ವ್ಯಕ್ತಿತ್ವಗಳನ್ನು ಸಮಾಜ ವಾದಿ ಚಳವಳಿ ಸೃಷ್ಟಿಸಿದೆ.

ತಮ್ಮ ಮಿತಿ ಗುರುತಿಸಿಕೊಂಡು ಅಷ್ಟರಲ್ಲಿಯೇ ಸಾಧ್ಯವಾದದ್ದನ್ನು ಮಾಡುವವರು. ಸವಾಲುಗಳಿಂದ ಅಂತರದಲ್ಲಿರುವವರು ಬಹುತೇಕ ಈ ಎರಡನೇ ಗುಂಪಿನವರು. ಹುಬ್ಬಳ್ಳಿ ಧಾರವಾಡಗಳ ಕಾರ್ಯಕ್ಷೇತ್ರ ಗುರುತು ಮಾಡಿಕೊಂಡ ನೀಲಗಂಗಯ್ಯ ಪೂಜಾರರು ಸರಿಸುಮಾರು ಮುಕ್ಕಾಲು ಶತಮಾನ ಒಬ್ಬ ಕ್ರಿಯಾಶೀಲ ಸಮಾಜವಾದಿಯೇ ಹೌದು. ಆದರೆ ಅವರು ಸಮಾಜವಾದವನ್ನು ‘ಸಮಾಜ ಸುಧಾರಣಾ ಚಳವಳಿ’ಗಿಂತ ಮೇಲ್ಮಟ್ಟಕ್ಕೆ ಏರಿಸುವುದಿಲ್ಲ. ಅವರ ಹೋರಾಟಗಳು ನಿಜಕ್ಕೂ ಜನಪರವಾದವುಗಳು. ಹನ್ನೊಂದು ಸಾವಿರ ಎಕರೆ ಭೂಮಿ ಹಂಚಿದ್ದು, ಏಳೆಂಟು ಸಾವಿರ ಜನರಿಗಾಗಿ ಹೋರಾಟದ ಮೂಲಕ ನಿವೇಶನ ಪಡೆದಿದ್ದು, ಇದರ ಸಾಧನೆಗಾಗಿ ನಿರಂತರ ಜನರನ್ನು ಸಂಘಟಿಸಿದ್ದು ಪ್ರತಿವಾದದ ಸಭೆ, ಕೊಡಲಿ ಮೆರವಣಿಗೆ, ಬ್ರಹತ್ ಗಾತ್ರದ ಸುರುಳಿ ಮನವಿಪತ್ರ, ರಸ್ತೆ ಪಕ್ಕ ಅಡಿಗೆ ಮಾಡಿ ಪ್ರತಿಭಟಿಸುವುದು, ಕಲ್ಲಿನಿಂದ ಹಣೆ ಜಜ್ಜಿಕೊಂಡು ಪ್ರತಿಭಟಿಸುವುದು ಇವೆಲ್ಲವುಗಳ ಮೂಲಕ ಸ್ಥಳೀಯ ರಾಜಕಾರಣಿಗಳನ್ನು ಎದುರಿಸುತ್ತಾರಾದರೂ, ಪರ್ಯಾಯವಾಗಿ ಸಮಾಜವಾದಿ ರಾಜಕೀಯ ಶಕ್ತಿಯಾಗಿ ಜನಾಭಿಪ್ರಾಯವನ್ನು ಕ್ರೂಢೀಕರಿಸುವುದಿಲ್ಲ. ಇದಕ್ಕೆ ಕಾರಣಗಳೂ ಇವೆ. ಅದೆಂದರೆ, ಅಷ್ಟು ಹೊತ್ತಿಗೆ ಸಮಾಜವಾದಿ ಪಕ್ಷದ ರಾಜ್ಯ ನಾಯಕತ್ವದ ಮೇಲೆ ವಿಶ್ವಾಸ ಕಳೆದುಕೊಂಡಿದ್ದು ರಾಜ್ಯ ನಾಯಕತ್ವ ‘ವೈಟ್ ಕಾಲರ‍್ಡ ಆತು’ ಎನ್ನುತ್ತಾರೆ. ಆದರೆ ಪಕ್ಷದ ಬೆಳವಣಿಗೆಯಲ್ಲಿ ತಮ್ಮ ಪಾತ್ರ ಕುರಿತು ಹೇಳುವಾಗ “ಶಿವಮೊಗ್ಗೆಗೆ ಹೋಗಿ ಸೋಲುವುದಕ್ಕಿಂತ ಕಲಘಟಗಿಯಲ್ಲಿ ಗೆದ್ದರೆ ಹೇಗೆ ಎಂಬುದನ್ನು ನೆನಪಿಸಿಕೊಂಡೇ ನಾನು ಹೆದರಿದ್ದೆ. ೫ ಮಕ್ಕಳ ತಂದೆಯಾಗಿದ್ದ ನಾನು ನನ್ನ ಸಂಸಾರವನ್ನು ಪ್ರೀತಿಸುತ್ತಿದ್ದೆ” ಎನ್ನುತ್ತಾರೆ.

ಚಳವಳಿಗಾಗಿ ಕೌಟುಂಬಿಕ ಹಿತಾಸಕ್ತಿಯನ್ನು ಕಡೆಗಣಿಸಬೇಕಿಲ್ಲವಾದರೂ ಕನಿಷ್ಠ ಹೊರೆ ಮತ್ತು ತ್ಯಾಗಗಳಿಲ್ಲದೇ ಒಂದು ಚಳವಳಿ ಬೆಳೆಯಲು ಸಾಧ್ಯವೇ? ರಾಜ್ಯದಲ್ಲಿ ಗೋಪಾಲಗೌಡರಂತಹ ಕೆಲವರನ್ನು ಬಿಟ್ಟರೆ ಈ ಪರಿಯ ತ್ಯಾಗ ಭಾವನೆಯ ಕೊರತೆ ಚಳವಳಿಯ ಉದ್ದಕ್ಕೂ ನಾಯಕರಲ್ಲಿ ಕಾಣಿಸಿಕೊಂಡಿದೆ. ಸ್ವರಕ್ಷಣಾತ್ಮಕ ಸಾಮಾಜಿಕ ಕಾಳಜಿಯಿಂದ ಎಷ್ಟನ್ನು ನಿರೀಕ್ಷಿಸಲು ಸಾಧ್ಯ? ಹಾಗೆ ನೋಡಿದರೆ ಸಮಾಜವಾದವನ್ನು ‘ಶುದ್ಧ’ವಾಗಿ ಗ್ರಹಿಸಿದ ಈ ಮೊದಲ ತಲೆಮಾರು ಚಳವಳಿಯಿಂದ ‘ಮಿಸ್ಸಾಗಿ’ ಹೋಯಿತೆಂದೇ ತೋರುತ್ತದೆ. ಅಮ್ಮೆಂಬಳ ಆನಂದ, ಸದಾಶಿವ ಕಾರಂತ, ಹಾಗೂ ಪೂಜಾರರು ೧೯೪೯ರಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಕೊನೆವರೆಗೂ ಬದ್ಧರಾದಂತೆ ಕಾಣಿಸುತ್ತದೆ. ಕಾರಂತರು ನಂತರದಲ್ಲಿ ಮುಂಬೈಗೆ ಹಾಗೂ ದೆಹಲಿಗೆ ಹೋದರಾದರೂ ಬೌದ್ಧಿಕ ಜಗತ್ತಿನಲ್ಲೇ ಉಳಿದರು. ಅಮ್ಮೆಂಬಳ ಆನಂದ ಉತ್ತರ ಕನ್ನಡದ ಜಿಲ್ಲೆಯಲ್ಲಿ ರೈತ ಹೋರಾಟಗಳು ಹಾಗೂ ‘ಜನಸೇವಕ’ ಪತ್ರಿಕೆಗಳಲ್ಲಿ ತೊಡಗಿಸಿ ಕೊಂಡರಾದರೂ ‘ದಿನಕರ ದೇಸಾಯಿ’ಯವರ ‘ಕೈಯ ಬುಗರಿ’ಯಾಗಿಯೇ ಉಳಿದರು. ರೈತ ಹೋರಾಟಗಳನ್ನು ಸಮಾಜವಾದಿ ಹೋರಾಟಗಳೆಂದು ಬಿಂಬಿಸುತ್ತಿದ್ದರು. ಹಾಗೆಂದೇ ಕರೆಯುತ್ತಿದ್ದರಾದರೂ ರಾಜ್ಯದ ಪಕ್ಷದ ನಾಯಕತ್ವಕ್ಕೆ ರೈತ ಹೋರಾಟಗಳ ಸಂಪರ್ಕ ಕೊಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರಿಗೆ ‘ಸಮಾಜವಾದ’ ಸಿದ್ಧಾಂತವಾಗಿಯೂ, ದಿನಕರ ದೇಸಾಯಿ ‘ವ್ಯಕ್ತಿ’ಯಾಗಿಯೂ ಮುಖ್ಯವಾಗಿದ್ದರು. ಅಬ್ಬಿಗೇರಿ ವಿರೂಪಾಕ್ಷಪ್ಪನವರಂತೂ ತಮ್ಮ ‘ಮಾಸ್ತರಿಕೆ’ ಮಿತಿಯನ್ನು ದಾಟಲಾರದೆ ಹೋದರು. ಆ ಮಿತಿಯಲ್ಲಿಯೇ ಸಮಾಜವಾದಿ ಅಧ್ಯಯನ ಮಾಡಿದರು. ಲೇಖನಗಳನ್ನು ಬರೆದರು, ರೇಡಿಯೋ ಭಾಷಣ ಮಾಡಿದರು ಆದರೆ ಚಳವಳಿಯ ಜೊತೆ ಸಂಬಂಧ ಸ್ಥಾಪಿಸಿಕೊಳ್ಳಲು ಅವರಿಗಾಗಲೇ ಇಲ್ಲ. ೧೯೫೦ರಲ್ಲಿ ಅವರು ಲೋಹಿಯಾರನ್ನು ಸೂಡಿಗೆ ಕರೆದುಕೊಂಡು ಭಾಷಣ ಮಾಡಿಸಿದ್ದು ಬಿಟ್ಟರೆ ನಂತರದಲ್ಲಿ ಅವರು ಯಾವೊಂದು ಹೋರಾಟಗಳನ್ನು ಸಂಘಟಿಸಲಿಲ್ಲ, ಭಾಗವಹಿಸಲಿಲ್ಲ. ಆದರೆ ಅಂತಹ ಸಂಪರ್ಕವಿಲ್ಲದೇ ಹೋದರೂ ಅಧ್ಯಯನದ ಮೂಲಕ ವರ್ತಮಾನದವರೆಗೂ ಸಮಾಜವಾದೀ ವಿದ್ಯಮಾನ – ಚರ್ಚೆಗಳನ್ನು ಗಮನಿಸುವ ಬೌದ್ಧಿಕ ಸೂಕ್ಷ್ಮತೆ ಉಳಿಸಿಕೊಂಡರು.

ಕಾಶಿನಾಥ ಬೇಲೂರೆಯವರಿಗೆ ರಾಜಧಾನಿ ಬೆಂಗಳೂರು ಮತ್ತು ಸಮಾಜವಾದಿಗಳ ರಾಜಧಾನಿ – ಶಿವಮೊಗ್ಗಗಳಿಂದ ತಾವಿದ್ದ ಬೀದರ್ ಗೆ ಇದ್ದ ಭೌಗೋಳಿಕ ಅಂತರ ಅವರನ್ನು ‘ದ್ವೀಪ’ವನ್ನಾಗಿಸಿತು. ಆದರೂ ಬೀದರ್ ನಿಂದ ಸಂಡೂರು ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಭೂಗ್ರಹಣ ಚಳವಳಿ ನಡೆಸಿದರು. ಬೀದರ್ ನಿಂದ ಬೆಂಗಳೂರಿಗೆ ಜಾಥಾ ಮಾಡಿದರು. ಆದರೆ ಸ್ಥಳೀಯ ರಾಜಕಾರಣವನ್ನು ಎದುರಿಸುವಷ್ಟು ಬಲ ಇಲ್ಲದಿದ್ದರಿಂದ ಎರಡು ಬಾರಿ ವಿಧಾನಸಭಾ ಚುನಾವಣೆಗಳಿಗೆ ಸ್ಪರ್ಧಿಸಿ ಸೋತರು.

ಒಟ್ಟಾರೆ ಕರ್ನಾಟಕದಲ್ಲಿ ಸಮಾಜವಾದಿ ಚಳವಳಿ ೧೯೬೦ರ ದಶಕದವರೆಗೂ ಕ್ರಿಯಾಶೀಲವಾಗಿದ್ದು, ೭೦ರ ಭೂಸುಧಾರಣೆಗಳ ಪರಿಣಾಮವಾಗಿ ಹೊಸದಾರಿ ಕಾಣದೇ ನಿಂತು, ತುರ್ತು ಪರಿಸ್ಥಿತಿಯ ನಂತರ ಅಧಿಕಾರ ರಾಜಕಾರಣಕ್ಕೆ ನುಗ್ಗಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವ್ಯಾಪಕ ಸ್ವರೂಪ ಪಡೆಯಿತು. ಸಮಾಜವಾದಿ ಯುವ ಜನ ಸಭಾದ ಮೂಲಕ ಚಳವಳಿಯು ಎರಡನೆ ಆಯಾಮ ಶುರು ಮಾಡಿಕೊಂಡಿತು. ಅದು ಚರಿತ್ರೆಯ ಹೊಸ ಅಧ್ಯಾಯವೇ ಎಂದೆನ್ನಬೇಕು.

ತುರ್ತುಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದವರು, ಅನುಭವಿಸಿದವರು, ಕರ್ನಾಟಕದಲ್ಲಿ ಸಮಾಜವಾದಿಗಳು. ಹಾಗೆ ನೋಡಿದರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಕರ್ನಾಟಕದ ಪಾತ್ರ ದೇಶಮಟ್ಟದಲ್ಲಿ ಮಹತ್ವ ಪಡೆಯುವಂಥಾದ್ದು. ಹಾಗೆ ದೇಶಮಟ್ಟದಲ್ಲಿ ವಿರೋಧಿಸಲು ಸಾಧ್ಯವಾದದ್ದೂ ಸಮಾಜವಾದಿಗಳ ಅಪರಿಮಿತ ಕ್ರಿಯಾಶೀಲತೆಯಿಂದಾಗಿ ಎನ್ನಬೇಕು. ಈ ತೀವ್ರತೆಯನ್ನು ತಂದುಕೊಟ್ಟವರೆಂದರೆ ಜಾರ್ಜ್ ಫರ್ನಾಂಡೀಸ್. ಭೂಗತರಾಗಿ ವೇಷ ಮರೆಸಿಕೊಂಡು ಕರ್ನಾಟಕದಲ್ಲಿದ್ದು ರಹಸ್ಯ ಸಭೆಗಳ ಮೂಲಕ ಪ್ರತಿರೋಧ ವರ್ಧಕವಾಗಿ ಕೆಲಸ ಮಾಡಿದ ಜಾರ್ಜ್ ದೇಶದ ಎಲ್ಲ ಸಮಾಜವಾದಿಗಳೊಂದಿಗೆ ಸಂಪರ್ಕದಲ್ಲಿದ್ದು, ನಿರ್ದೇಶಿಸುತ್ತಿದ್ದರು. ಸೂಚನೆಗಳನ್ನು ರವಾನಿಸುತ್ತಿದ್ದರು. ಹೊರರಾಜ್ಯಗಳ ಅನೇಕ ಸಂಗಾತಿಗಳಿಗೆ ವಿಧ್ವಂಸಕ ಚಟುವಟಿಕೆ ನಡೆಸಲು ಡೈನಮೇಟ್ ಪೂರೈಸುತ್ತಿದ್ದವರು ಕೆ. ಜಿ. ಮಹೇಶ್ವರಪ್ಪ. ಜೆ. ಹೆಚ್. ಪಟೇಲರೂ ರೈಲ್ವೆ ಹಳಿ ಸ್ಫೋಟಿಸಲು ಬಾಂಬ್ ಇಟ್ಟಿದ್ದರು.

ಸಮಾಜವಾದವು ಆಳುವ ಕಾಂಗ್ರೆಸ್ಸನ್ನು ಏಕಾಂಗಿಯಾಗಿ ಎದುರಿಸಲು ಅಸಾಧ್ಯವೆಂದು ಭಾವಿಸಿ ಬಲಪಂಥೀಯ ಶಕ್ತಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ರೂ, ಚುನಾವಣಾ ರಾಜಕಾರಣವನ್ನು ಗಮನಿಸಿಯೇ ಎನಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಪಕ್ಷಕ್ಕೆ ಪ್ರಬಲ ವಿರೋಧ ಪಕ್ಷವಿರಬೇಕೆನ್ನುವ ಜವಾಬ್ದಾರಿಯ ಭಾವನೆ ಲೋಹಿಯಾರನ್ನು ‘ಮಹಾಮೈತ್ರಿಕೂಟ’ ರಚಿಸಲು ಪ್ರೇರೇಪಿಸಿತು. ಆದರೆ ಮಹಾಮೈತ್ರಿಕೂಟವನ್ನು ಕರ್ನಾಟಕದ ಹಲವು ಸಮಾಜವಾದಿಗಳು ವಿರೋಧಿಸಿದ್ದರು. ಪೊನ್ನಮ್ಮ, ನೀಲಗಂಗಯ್ಯ, ಆನಂದ, ಕಾರಂತ ಮೊದಲಾದವರು ‘ಅದು ಸಮಾಜವಾದಿ ಚರಿತ್ರೆಯಲ್ಲಾದ ಒಂದು ತಪ್ಪು’ ಎಂದೇ ಗುರುತಿಸುತ್ತಾರೆ. ಆ ಕ್ರಮದ ಬಗ್ಗೆ ತಮ್ಮ ಅಸಮಾಧಾನವನ್ನೂ ವ್ಯಕ್ತಪಡಿಸುತ್ತಾರೆ. ಇಂತಹ ಮೈತ್ರಿಕೂಟಗಳ ಮೂಲಕ, ಮತೀಯ, ರಾಜಕೀಯ ಶಕ್ತಿಗಳಿಗೆ ನೆಲೆಸಿಕ್ಕಿತೆಂದು, ಅವರ ಬೆಳವಣಿಗೆಗಳಿಗೆ ಸಮಾಜವಾದಿ ಪಕ್ಷ ಬಳಕೆಯಾಯಿತೆಂದೇ ಗುರುತಿಸುತ್ತಾರೆ. ಪೊನ್ನಮ್ಮಾಳ್ ಅವರಂತೂ ಆ ವಿಷಯದ ಬಗ್ಗೆ ಕಿಡಿಕಾರುತ್ತಾರೆ. ಹಾಗೆಂದು ಅಭಿಪ್ರಾಯ ವ್ಯಕ್ತಪಡಿಸುವ ಸಮಾಜವಾದಿಗಳು ಜನತಾಪಕ್ಷದ ಹುಟ್ಟಿನ ಕಾಲವನ್ನು ಅದು ಸಮಾಜವಾದಿ ಚಳವಳಿಯ ಅಂತ್ಯಕಾಲ ಎಂದೇ ಗುರುತಿಸುತ್ತಾರೆ.

ಕಾಂಗ್ರೆಸ್ಸಿನ ವಿರೋಧಕ್ಕೆಂದು ಹೊರಟ ಸಮಾಜವಾದ ಮತೀಯ ರಾಜಕಾರಣಕ್ಕೆ ತನ್ನನ್ನೇ ಅರ್ಪಿಸಿಕೊಳ್ಳಬೇಕಾಗಿ ಬಂದುದನ್ನೂ ಅದರ ಚಿಂತನೆಗಳ ಭಾಗವಾಗಿಯೇ ಗ್ರಹಿಸಬೇಕು. ವರ್ಗ ಹೋರಾಟಗಳಿಂದ ಮುಕ್ತವಾದ ಸಾಂಸ್ಕೃತಿಕ ಸ್ಪಂದನೆ, ಭಾರತದ ಜಾತೀ ವ್ಯವಸ್ಥೆಯಲ್ಲಿ ಮತೀಯ ಸಂರಚನೆಗೆ ಪ್ರೇರಣೆ ನೀಡುತ್ತದೆ. ಭಾರತದಲ್ಲಿ ರಾಜಕೀಯ ಚಳವಳಿಯ ನಿರ್ಮಾಣಕ್ಕೆ ಸಾಂಸ್ಕೃತಿಕ ಪ್ರಜ್ಞೆಯ ಅಗತ್ಯವಿರುವುದಾದರೆ, ವರ್ಗ, ಸಂಘಟನೆ ಅಂತಹ ಪ್ರಜ್ಞೆಗೆ ಅವಶ್ಯಕ ಕಾರ್ಯಕ್ರಮವಾಗಬೇಕು. ಹಾಗಾದಾಗ ಮಾತ್ರ ‘ದಮನಿತ ಸಮುದಾಯ’ಗಳ ಮೂಲಕ ಶ್ರಮಿಕ ವರ್ಗವನ್ನು ಸಂಘಟಿಸಿ ಆರ್ಥಿಕ ಸಮಾನತೆಯ ಹೋರಾಟಗಳನ್ನೂ ಸಂಘಟಿಸಲು ಸಾಧ್ಯ. ಸಾಂಸ್ಕೃತಿಕ ಕಣ್ಣೋಟವಿಲ್ಲದ ವರ್ಗ ಚಳವಳಿ ಅವಾಸ್ತವಿಕ ಮತ್ತು ಅಸಂಗತವಾದುದಾದರೆ, ವರ್ಗಪ್ರಜ್ಞೆ ಮತ್ತು ಸೈದ್ಧಾಂತಿಕ ಕಾರ್ಯಕ್ರಮವಿಲ್ಲದ ಸಾಂಸ್ಕೃತಿಕ ಚಿಂತನೆ ಮತ್ತು ಸಂಘಟನೆ ಪ್ರತಿಗಾಮಿಯೂ ಅಮಾನವೀಯವೂ ಆಗುತ್ತದೆ. ಅಥವಾ ಹಾಗಾಗಲು ತಾನು ಕಾರಣವಾಗುತ್ತದೆ. ಲೋಹಿಯಾವಾದ ಭಾರತದ ಸಂದರ್ಭದಲ್ಲಿ ಮತೀಯವಾದಿ ರಾಜಕಾರಣಕ್ಕೆ ಅಂತಹ ಕಾರಣವಾಯಿತು ಎಂಬುದನ್ನು ಮಹಾಮೈತ್ರಿ ಕೂಟ ಮತ್ತು ಜನತಾ ಪಕ್ಷಗಳ ಮೂಲಕ ಸಾಬೀತಾಗುತ್ತದೆ.

೧೯೪೦ – ೫೦ರ ದಶಕದ ಸಮಾಜವಾದಿ ಸಿದ್ಧಾಂತವನ್ನು ೧೯೮೦ – ೯೦ರಲ್ಲಿ ಸಮಾಜವಾದಿ ಹಿನ್ನೆಲೆಯ ರಾಜಕಾರಣ ಪ್ರಹಾರಗೈದಿರುವುದಕ್ಕೆ ಚರಿತ್ರೆ ಸಾಕ್ಷಿಯಾಗುತ್ತದೆ. ಹಿರಿಯ ಸಮಾಜವಾದಿ ಕಿಶನ್ ಪಟ್ನಾಯಕ್ ೧೯೯೭ರಂದು ಸೋಷಲಿಸ್ಟ್ ಇಂಟರ್ ನ್ಯಾಷನಲ್ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಮಾತಾಡುತ್ತಾ “೧೯೭೭ರಲ್ಲಿ ಭಾರತ ಸಮಾಜವಾದಿ ಪಕ್ಷವು ಜನತಾ ಪಕ್ಷದಲ್ಲಿ ವಿಲೀನವಾದದ್ದು ಜಾಗತಿಕಮಟ್ಟದ ಆರ್ಥಿಕ ಅಸಮಾನತೆಯನ್ನು ತೊಡೆದು ಹಾಕುವಲ್ಲಿ ಸಮಾಜವಾದಿಗಳಿದ್ದ ತೀವ್ರ ನಿಷ್ಠೆ ಹಾಗೂ ಹೋರಾಟಗಳ ಚರಮಗೀತೆಯಾಗಿತ್ತು” ಎನ್ನುವ ಅವರು “೧೯೬೭ರವರೆಗೆ ಸಮಾಜವಾದಿ ಚಳವಳಿ ಚೆನ್ನಾಗಿ ಬೆಳೆದರೂ ಸಮಾಜವಾದಿಗಳ ಅಧಿಕಾರ ಲಾಲಸೆಯಿಂದ ೧೯೭೭ರ ವೇಳೆಗೆ ಚಳವಳಿಯನ್ನು ಬಲಿಕೊಡಲಾಯಿತು. ಸಮಾಜವಾದದ ದೌರ್ಬಲ್ಯದಿಂದಲ್ಲ. ಸಮಾಜವಾದಿಗಳ ತತ್ವ ದ್ರೋಹದಿಂದ ಚಳವಳಿ ಬೆಳೆದಿಲ್ಲ” ಎನ್ನುವ ಅಭಿಪ್ರಾಯಕ್ಕೆ ಬರುತ್ತಾರೆ.

ಸಮಾಜವಾದಿ ಚಿಂತಕರಾದ ಕೆ.ಎಸ್. ಕಾರಂತ ತಮ್ಮ ‘ಆಸ್ಟೆಕ್ಟ್ಸ್ ಆಫ್ ಸೋಷಲಿಸ್ಟ್ ಮೈಂಡ್’ ಎಂಬ ಪುಸ್ತಕದಲ್ಲಿ “ಅಸ್ತಿತ್ವದಲ್ಲಿರುವ ಸಮಾಜವಾದ ಶಕ್ತಿ ಉಡುಗಿ ಹೋದ ಸಿದ್ಧಾಂತ, ಲೋಹಿಯಾ ಒಂದು ಸಿದ್ಧಾಂತ ಕಟ್ಟುವುದಕ್ಕಾಗಿ ಮಾಡಬಹುದಾದಷ್ಟನ್ನು ಮಾಡಿದ್ದಾರೆ. ಆದರೆ ಮಾಡಬೇಕಾದ್ದು ಇನ್ನೂ ಇದೆ. ದುರಂತವೆಂದರೆ ಲೋಹಿಯಾ ಅವರ ನಂಬುಗೆಯ ಹಿಂಬಾಲಕರೇ ಅವರಿಗೆ ದ್ರೋಹವೆಸಗಿದ್ದಾರೆ. ವಾಸ್ತವದಲ್ಲಿ ಅವರ ಬೆಂಬಲಿಗರಿಂದ ಲೋಹಿಯಾರನ್ನು ಬಚಾವ್ ಮಾಡಬೇಕಿದೆ. ಅವರ ಬೆಂಬಲಿಗರಲ್ಲದವರಿಂದ ಅವರು ಉಳಿಯುತ್ತಾರೆ ಎಂದು ಭರವಸೆಯನ್ನಿಟ್ಟುಕೊಳ್ಳಬಹುದು” ಎಂದು ಬರೆಯುತ್ತಾರೆ. “ಭಾರತದ ಚರಿತ್ರೆಯ ಸಂಧಿಕಾಲದಲ್ಲಿ ಸಮಾಜವಾದಿ ಚಳವಳಿ ಅಸ್ತವ್ಯಸ್ತಗೊಂಡಿದೆ. ವ್ಯವಸ್ಥೆಯ ಕ್ರಾಂತಿಕಾರಕ ಪರಿವರ್ತನೆಯನ್ನು ಪ್ರತಿಪಾದಿಸುವ ರಾಜಕೀಯ ಪಕ್ಷಗಳೂ ಪಾರ್ಶ್ವವಾಯು ಗ್ರಸ್ತವಾಗಿದೆ. ಕ್ರಾಂತಿ ಬಂದು ಬಾಗಿಲು ಬಡಿಯುತ್ತಿರುವ ಸಂದರ್ಭದಲ್ಲಿ ಯಾಕೆ ಹೀಗಾಗಿದೆ. ಇಂತಹ ಸಂದರ್ಭಕ್ಕಾಗಿಯೇ ಹಂಬಲಿಸುವ ಸಮಾಜವಾದಿ ಚಳವಳಿ ಯಾಕೆ ದಿಕ್ಕೆಟ್ಟು ಹೋಗಿದೆ. ಈ ಪ್ರಶ್ನೆಗಳಿಗೆ ಉತ್ತರಿಸಬೇಕೆಂದರೆ ಕ್ರಾಂತಿಕಾರಕ ಚಳವಳಿಗೆ ಅಗತ್ಯವಿರುವ ಸೈದ್ಧಾಂತಿಕತೆಯ ಬಗ್ಗೆ, ಸಂಘಟನೆ ಮತ್ತು ನಾಯಕತ್ವದ ಬಗ್ಗೆ ಉತ್ತರಗಳನ್ನು ಕಂಡುಕೊಳ್ಳಬೇಕಾಗುತ್ತದೆ” ಎನ್ನುವ ಸದಾಶಿವ ಕಾರಂತರ ಮಾತು ಪ್ರತಿಯೊಬ್ಬ ನೈಜ ಸಮಾಜವಾದಿಯ ಮಾತುಗಳಾಗಿವೆ. ಕಂಡುಕೊಳ್ಳಬೇಕಾದ ಉತ್ತರಕ್ಕಾಗಿ ಕಾತರಿಸುತ್ತವೆ.

೧೯೪೦ರ ದಶಕದಲ್ಲಿ ಆರ್ಥಿಕ ಹೋರಾಟಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನು ಸಾಧಿಸಿ, ಸಾಮಾಜಿಕ ಸಮಾನತೆ ಸ್ಥಾಪಿಸಬೇಕೆಂಬ ಧ್ಯೇಯ ಹೊಂದಿದ್ದ ಸಮಾಜವಾದ ೧೯೭೦ರ ದಶಕದ ಹೊತ್ತಿಗೆ ಚುನಾವಣಾ ರಾಜಕಾರಣ ಹಾಗೂ ಆಳುವ ವರ್ಗಹಿತಾಸಕ್ತಿಗಳಿಗೆ ಬಲಿಯಾಗಿ ಯಥಾಸ್ಥಿತವಾದಿ ಕೊನೆಯನ್ನು ತಲುಪಿತು. ಪ್ರಜಾಸತ್ತಾತ್ಮಕ ಹಿತಾಸಕ್ತಿಗೆ ಪೂರಕವಾಗಿರದ ವ್ಯಕ್ತಿ ಸ್ವಾತಂತ್ರ್ಯ ಅರಾಜಕ ನೆಲೆಯನ್ನು ತಲುಪಿ ಸೈದ್ಧಾಂತಿಕ ರಾಜಕಾರಣಕ್ಕೆ ಪ್ರಹಾರ ನೀಡಿತು.

ಈ ಮೇಲಿನ ಚರ್ಚೆಯ ಮೂಲಕ ಸಮಾಜವಾದಿ ರಾಜಕೀಯ ಚರಿತ್ರೆಯನ್ನು ನಕಾರಾತ್ಮಕವಾಗಿ ಗ್ರಹಿಸಬೇಕಿಲ್ಲ. ೧೯೫೨ರ ಮೊದಲ ಸಾರ್ವತ್ರಿಕ ಚುನಾವಣೆಗಳಲ್ಲಿ ತಾನು ಪಡೆದ ಬರೀ ಇಬ್ಬರು ವಿಧಾನಸಭಾ ಸದಸ್ಯರ ಮೂಲಕ ತನ್ನ ಸಂಸದೀಯ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಗೋಪಾಲಗೌಡ ಮತ್ತು ಮುಲ್ಕಾ ಗೋವಿಂದರೆಡ್ಡಿಯವರು ‘ಗೇಣಿ ಶಾಸನ’ ಜಾರಿಯಾಗಲು ಕಾರಣರಾಗಿದ್ದಾರೆ. ಈ ಗೇಣಿ ಶಾಸನದ ಜಾರಿಯ ಹಿಂದೆ ಈ ಇಬ್ಬರು ಶಾಸಕರ ಪ್ರಯತ್ನ ಇರುವುದನ್ನು ನಿರಾಕರಿಸುವಂತಿಲ್ಲ. ಈ ಮೊದಲ ಮಹಾ ಚುನಾವಣೆಗಳಲ್ಲಿ ತಾನು ಪಡೆದ ಶಾಸಕರ ಸಂಖ್ಯೆ ಕಡಿಮೆ ಇದ್ದರೂ ಅದು ಜನತಾಂತ್ರಿಕ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸಿತು. ಮೊದಲ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ೯೦ಕ್ಕೂ ಹೆಚ್ಚು ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಪರವಾದ ಚುನಾವಣಾ ಪ್ರಚಾರದ ಮೂಲಕ ಸಮಾಜವಾದಿ ಆಶಯಗಳನ್ನು ತಕ್ಕಮಟ್ಟಿಗೆ ಬಿಂಬಿಸಲು ಸಾಧ್ಯವಾಯಿತು.

೧೯೫೭ರ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಶಾಸನಕರ ಸಂಖ್ಯೆ ೧೯ಕ್ಕೆ ಏರಿತು. ಒಬ್ಬರು ಲೋಕಸಭೆಗೂ ಆಯ್ಕೆಯಾದರು. ೧೯೬೨ರಲ್ಲಿ ಈ ಸಂಖ್ಯೆ ೨೨ಕ್ಕೆ ಏರಿತು. ಪ್ರಜಾಸಮಾಜವಾದಿ ಪಕ್ಷದ ಅಭ್ಯರ್ಥಿ ಟಿ. ಜಿ. ರಂಗಪ್ಪ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ಅವರನ್ನು ಹೊಸದುರ್ಗದಲ್ಲಿ ಸೋಲಿಸಿದ್ದರು. ೧೯೬೭ರ ಚುನಾವಣೆಗಳಲ್ಲಿ ಕರ್ನಾಟಕ ಪ್ರಜಾಸಮಾಜವಾದಿ ಪಕ್ಷದಿಂದ ಎಸ್. ಎಂ. ಕೃಷ್ಣ ಹಾಗೂ ಜೆ. ಹೆಚ್. ಪಟೇಲ್ ಇಬ್ಬರೂ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ೨೫ ಜನ ಪ್ರಜಾಸಮಾಜವಾದಿ ಪಕ್ಷದಿಂದಲೂ, ೩ ಸಮಾಜವಾದಿ ಪಕ್ಷದಿಂದಲೂ ಒಟ್ಟು ೨೪ ಜನ ಸಮಾಜವಾದಿ ಸದಸ್ಯರು ವಿಧಾನ ಸಭೆಯಲ್ಲಿದ್ದರು. ೧೯೭೨ರಲ್ಲಿ ಪ್ರಜಾ ಸಮಾಜವಾದಿ ಪಕ್ಷದ ಬಹುತೇಕ ಸದಸ್ಯರು ಆಡಳಿತ ಕಾಂಗ್ರೆಸ್ ಗೆ ಹೋದರು. ಆದರೆ ಸೊರಬದಿಂದ ಬಂಗಾರಪ್ಪ, ಸಾಗರದಿಂದ ಕಾಗೋಡು ತಿಮ್ಮಪ್ಪ, ತೀರ್ಥಹಳ್ಳಿಯಿಂದ ಕೋಣಂದೂರು ಲಿಂಗಪ್ಪ ಹೀಗೆ ಈ ಮೂವರು ಮಾತ್ರ ಆಯ್ಕೆಯಾಗಲು ಸಾಧ್ಯವಾಯಿತು. ಈ ಸದಸ್ಯರು ಸಮಾಜವಾದಿ ಚಳವಳಿಯ ಎರಡನೆಯ ತಲೆಮಾರನ್ನು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ ನಡೆದ ಸಂಡೂರು ಭೂಹೋರಾಟದ ಪರವಾಗಿ ವಿಧಾನಸಭೆಯಲ್ಲಿ ಸಮಾಜವಾದಿ ಶಾಸಕರು ಚರ್ಚಿಸಿದರು. ಸಂಡೂರು ಹೋರಾಟ ಯಶಸ್ವಿಯಾಗಲು ವಿಧಾನಸಭೆಯ ಒಳಗಿನಿಂದ ಪ್ರಯತ್ನಿಸಿದ ಸದಸ್ಯರ ಪ್ರಯತ್ನವೂ ಮುಖ್ಯವಾಗಿತ್ತು.

ದೇವರಾಜ ಅರಸರ ಸರಕಾರ ಜಾರಿಗೆ ತಂದ ಭೂಸುಧಾರಣಾ ಕಾನೂನು ಜಾರಿಯ ಹಿಂದೆ ಸಮಾಜವಾದಿ ಚಳವಳಿ ಭೂಹೋರಾಟಗಳ ಮೂಲಕ ಒತ್ತಡವನ್ನು ಸೃಷ್ಟಿಸಿತ್ತು. ಭೂಸುಧಾರಣಾ ಕಾನೂನು ಕರಡು ರೂಪಿಸುವಲ್ಲಿಯೂ ಸಮಾಜವಾದಿ ದೃಷ್ಟಿಕೋನ ಪ್ರಭಾವಿಸಿತ್ತು. ಕಂದಾಯ ಸಚಿವರಾಗಿದ್ದ ಹುಚ್ಚ ಮಾಸ್ತಿಗೌಡ ಅವರ ಕಾರ್ಯದರ್ಶಿಯಾಗಿದ್ದ ಪಿ. ವಾಸುದೇವ ಅವರು ಅಮ್ಮೆಂಬಳ ಬಾಳಪ್ಪ ಅವರ ಅಳಿಯರಾಗಿದ್ದರು. ಬಾಳಪ್ಪ ಅವರ ಹೋರಾಟಗಳ ಹಾಗೂ ಚಿಂತನೆಗಳ ಪ್ರಭಾವದಿಂದ ಬಂದವರಾಗಿದ್ದರು.

ಸಮಾಜವಾದಿ ಹಿನ್ನೆಲೆಯಿಂದಲೇ ಮೂಡಿದ ಜನತಾ ಪಕ್ಷ ಮೊದಲ ಕಾಂಗ್ರೆಸ್ಸೇತರ ಸರಕಾರ ರಚಿಸಲು ಸಾಧ್ಯವಾಯಿತು. ಆ ಮೂಲಕ ಆಡಳಿತ ಮತ್ತು ಅಭಿವೃದ್ಧಿಯ ರಂಗಗಳಲ್ಲಿ ಗಮನಾರ್ಹ ಬದಲಾವಣೆಗಳು ಗೋಚರಿಸಿದವು. ಜನಪರವಾದ ಅನೇಕ ಹೊಸ ನೀತಿಗಳನ್ನು ಜಾರಿಗೊಳಿಸಲಾಯಿತು.

ಹೀಗೆ ಸಮಾಜವಾದಿ ಪಕ್ಷ ತನ್ನ ಸಂಸದೀಯ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿ ಆ ಮೂಲಕ ಕಾಂಗ್ರೆಸ್ಸೇತರ ರಾಜಕಾರಣಕ್ಕೆ ಒಂದು ತಾತ್ವಿಕ ನೆಲೆಯನ್ನು ಒದಗಿಸಿ ಜನತೆಯ ನೆಲೆಯಿಂದ ಅಭಿವೃದ್ಧಿಯನ್ನು ರೂಪಿಸುವ ಕಣ್ಣೋಣವನ್ನು ನೀಡಿತು.

“ದಾರಿ ಮತ್ತು ಗುರಿಗಳು ಪರಸ್ಪರ ಬದಲಿಸಬಹುದಾದಂಥವು. ಕ್ಷಿಪ್ರವಾದುದಾದರೆ ದಾರಿಯೇ ಗುರಿಯೂ ಆಗಿರುತ್ತದೆ. ವಿಸ್ತಾರವಾದುದಾದರೆ ಗುರಿಯೇ ದಾರಿಯೂ ಆಗಿರುತ್ತದೆ” ಎನ್ನುತ್ತಾನೆ ತತ್ವಜ್ಞಾನಿ ಜಾನ್ ಡೇವಿ. ಈತನ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಇನ್ನಷ್ಟು ಸ್ಪಷ್ಟಪಡಿಸುತ್ತ “ತತ್ಫಲಗಳನ್ನು ಅಥವಾ ಶೀಘ್ರ ಫಲಗಳನ್ನು ಮಾತ್ರವೇ ಲಕ್ಷಿಸುವವರು ತಮ್ಮ ಮುಂದಿರುವ ಗುರಿಯನ್ನು ಮರೆತೇ ಬಿಡುವ ಅಪಾಯವಿದೆ. ಇದು ಸದ್ಯದ ಕಾರ್ಯಕ್ರಮಗಳನ್ನು ಅಲಕ್ಷಿಸಿ ಗುರಿಯನ್ನು ಮಾತ್ರ ಲಕ್ಷಿಸುವಷ್ಟೇ ಕೆಟ್ಟದಾದುದು” ಎಂದು ಡಾ. ಲೋಹಿಯಾ ಎಚ್ಚರಿಸುತ್ತಾರೆ.

ಗುರಿ ಮತ್ತು ದಾರಿಗೆ ಸಂಬಂಧಿಸಿದಂತೆ ಡಾ. ಲೋಹಿಯಾ ಗಾಂಧೀಜಿಯವರನ್ನು ಬಹುವಾಗಿ ಸ್ಮರಿಸುತ್ತಾರೆ. ಗಾಂಧೀಜಿಯವರನ್ನು ಕುರಿತು ಅವರು ಕಲ್ಪಿಸಿಕೊಂಡ ಒಂದು ಚಿತ್ರ ಹೀಗಿದೆ. “ಎತ್ತರೆತ್ತರಕ್ಕೆ ಹೊರಟ ಹೆಜ್ಜೆಗಳ ಮಾಲೆ, ಎಲ್ಲವೂ ಒಂದೇ ಗುರಿಯತ್ತ ಇಟ್ಟವು. ಆದರೆ ಅದರ ಅಂತ್ಯವು ಎಂದೂ ರೂಪುಗೊಂಡಿಲ್ಲ. ಹಾಗೂ ಅದು ಅನಂತವಾಗಿ ಊರ್ಧ್ವಗಾಮಿಯಾದುದು. ಆತ ಬಹುಜಾಗರೂಕತೆಯಿಂದ ದೃಢ ಹೆಜ್ಜೆ ಹಾಕುವಂಥವನು. ತನ್ನ ಕೋಟ್ಯಾನುಗಟ್ಟಲೆ ದೇಶಬಾಂಧವರನ್ನು ಕರೆದೊಯ್ಯುವಂಥವನು. ಆ ಒಂದು ದೃಢ ಹೆಜ್ಜೆ ಸಾಕು ನನಗೆ.”

ಗಾಂಧೀಜಿಯವರ ಈ ಮಾತು ಲೋಹಿಯಾರ ಬಾಯಲ್ಲಿ ಮತ್ತೆ ಧ್ವನಿ ತಾಳುತ್ತದೆ. ಕರ್ನಾಟಕದ ಸಮಾಜವಾದಿ ಚಳವಳಿ ಕುರಿತ ಪ್ರಸ್ತಾಪ ಮತ್ತು ಸಂದರ್ಶನ ಕೃತಿಯು ಹೊರಡಿಸುವ ಒಟ್ಟು ಅರ್ಥಕೂಡ ‘ಬೇಕಾದ’ ಅಂತಹ ಹೆಜ್ಜೆಯನ್ನೇ ಧ್ವನಿಸುತ್ತದೆ.

ಈ ಸಂಪುಟದಲ್ಲಿ ಸಂದರ್ಶಿಸಲಾಗಿರುವ ಎಂಟು ಜನ ಸಮಾಜವಾದಿಗಳು ಕರ್ನಾಟಕದಲ್ಲಿ ಸಮಾಜವಾದಿ ಚಳವಳಿಯ ಆರಂಬದ ದಿನಗಳಲ್ಲಿ ದುಡಿದವರು. ಆಹೊತ್ತಿನ ಚಳವಳಿಯನ್ನು ಸೈದ್ಧಾಂತಿಕವಾಗಿ ಕಟ್ಟಿಬೆಳೆಸುವಲ್ಲಿ ಅಪಾರವಾಗಿ ಶ್ರಮಿಸಿದವರು. ತಮ್ಮ ಬದ್ಧತೆ ಮತ್ತು ಪ್ರಾಮಾಣಿಕತೆಯ ಮೂಲಕ ಭವಿಷ್ಯದ ಕರ್ನಾಟಕದಲ್ಲಿ ಸಮಾಜವಾದಿ ಚಳವಳಿಯ ಬೆಳವಣಿಗೆಗೆ ಕಾರಣರಾದವರು.

ಸಮಾಜವಾದದ ಪ್ರಧಾನ ಚರ್ಚೆಗಳಲ್ಲಿ ಅಪರೂಪವಾಗಿ ಪ್ರಸ್ತಾಪಿಸಲ್ಪಟ್ಟಿರುವ ಈ ಸಮಾಜವಾದಿಗಳು ತಮ್ಮ ಸೈದ್ಧಾಂತಿಕ ಪ್ರಖರತೆಯ ಕಾರಣಕ್ಕೆ ರಾಜಿರಹಿತವಾಗಿ ನಿಷ್ಠುರ ಮತಿಗಳಾಗಿ ವರ್ತಿಸಿದ್ದು, ಹಾಗೂ ಅಧಿಕಾರ ರಾಜಕಾರಣದೊಂದಿಗೆ ಗುರುತಿಸಿಕೊಳ್ಳದೇ ಹೋದದ್ದು ಇವರ ಮರೆವಿಗೆ ಪ್ರಮುಖ ಕಾರಣ ಎನಿಸುತ್ತದೆ. ಕರ್ನಾಟಕದ ಸಮಾಜವಾದಿ ಚಳವಳಿಯ ಚರಿತ್ರೆಯನ್ನು ಅದರ ಆರಂಭದ ಅನುಭವಗಳ ಸಹಿತ ಈ ತನಕ ಒಂದೆಡೆ ದಾಖಲಿಸುವ ಪ್ರಯತ್ನಗಳಾಗಿರುವುದು ಕಂಡು ಬರುವುದಿಲ್ಲ. ಇಲ್ಲಿ ಅಂತಹದ್ದೊಂದು ಪ್ರಯತ್ನವಾಗಿರುವುದಾದರೂ ಇದನ್ನೂ ಪೂರ್ಣ ಪ್ರಮಾಣದ್ದೆಂದು ಹೇಳಲಾರೆ. ಸಮಾಜವಾದಿ ಚಳವಳಿಯ ಆರಂಭದ ಕಾಲಘಟ್ಟದ ವಿವರಗಳ ಮೇಲೆ ಈ ಸಂದರ್ಶನಗಳು ಬೆಳೆಕು ಚೆಲ್ಲುತ್ತವೆ. ಮತ್ತು ಸಂದರ್ಶನದಲ್ಲಿ ವ್ಯಕ್ತವಾದ ಮಾಹಿತಿಯನ್ನು ಆಧರಿಸಿ ಪ್ರಸ್ತಾವನೆಯನ್ನು ಇಲ್ಲಿ ಬರೆಯಲಾಗಿದೆ. ಈ ಪ್ರಸ್ತಾವನೆ ಸಮಾಜವಾದದ ಚರಿತ್ರೆಯನ್ನು ಅರ್ಥೈಸಿಕೊಳ್ಳಬೇಕಾದ ಹಾಗೂ ಚಳವಳಿಗೆ ಹಿನ್ನಡೆಯುಂಟಾದ ಅಂಶಗಳನ್ನು ಚರ್ಚಿಸುತ್ತದೆ ಹೊರತು ಚರಿತ್ರೆಯನ್ನು ಕಟ್ಟಿಕೊಡುವುದಿಲ್ಲ. ಕಟ್ಟಿಕೊಳ್ಳಬೇಕಾದ ಚರಿತ್ರೆಯ ತಳಮೂಲಗಳನ್ನು ಶೋಧಿಸುತ್ತದಷ್ಟೇ.

ಕಥನಗಳ ಕತೆ

“ವಾಸ್ತವವಾಗಿ ಇತಿಹಾಸವನ್ನು ಅದರ ಎಲ್ಲ ವಸ್ತು ಸ್ಥಿತಿಯೊಂದಿಗೆ ಯಾವತ್ತೂ ಪುನರ್ ಕಟ್ಟಲು ಸಾಧ್ಯವಿಲ್ಲ. ಎಲ್ಲ ಪುನಾರ್ರಚನೆಗಳೂ ಒಂದಲ್ಲ ಒಂದು ರೀತಿ ಬಹು ನೆಲೆಯ ವ್ಯಾಖ್ಯಾನಗಳೊಂದಿಗೆ ಸಾಪೇಕ್ಷವಾಗಿರುತ್ತವೆ ಮತ್ತು ತಾತ್ಕಾಲಿಕವಾಗಿರುತ್ತವೆ” ಎನ್ನುವ ಎಡ್ವರ್ಡ್ ಸೈದ್ ಅವರ ಮಾತಿನಂತೆ ಇಲ್ಲಿಯ ಭಿನ್ನ ನೆಲೆಯ ವ್ಯಾಖ್ಯಾನಗಳು ಸಾಪೇಕ್ಷವಾಗಿವೆ. ತಾತ್ಕಾಲಿಕವೂ ಆಗಿರಬಹುದು. “ಐತಿಹಾಸಿಕ ಸತ್ಯವು ನಿಜವಾಗಿಯೂ ನಡೆದ ಘಟನೆಗಳ ದಾಖಲೆಗಳಲ್ಲಿ ಅಡಗಿರುವುದಿಲ್ಲ ಮತ್ತು ಅಂತಹ ಇತಿಹಾಸವು ಯಾವಾಗಲೂ ಕಟ್ಟಲ್ಪಟ್ಟ ಕಥನವಾಗಿರುತ್ತವೆ” ಎನ್ನುತ್ತಾರೆ ಸೈದ್. ಸಂದರ್ಶನ ಅಥವಾ ಸಂವಾದಗಳಿಗೆ ಅಂತಹ ಕಥನ ಗುಣವಿದೆ. ಮಾತೆಂಬುದು ಯಾವತ್ತೂ ಆ ಕ್ಷಣ ಹಾಗೆ ಕಟ್ಟಲ್ಪಟ್ಟ ಅಭಿವ್ಯಕ್ತಿಯಾಗಿರುತ್ತದೆ ಮತ್ತು ಅದು ತನ್ನ ಅನುಭವವನ್ನು ಅಂತರ್ಗತವಾಗಿಟ್ಟುಕೊಂಡು, ಆ ಕ್ಷಣ ತಾನು ಜನ್ಮತಳಿದ ಸಂದರ್ಭಕ್ಕೆ ನಿಷ್ಠವಾಗಿರುತ್ತದೆ. ಚರಿತ್ರೆಯನ್ನು ಗ್ರಹಿಸುವ ಭವಿಷ್ಯವನ್ನು ಕನಸುವ ಯಾವ ಮಾತುಗಳಾದರೂ ಅವು ವರ್ತಮಾನದಲ್ಲಿ ರೂಪುಪಡೆಯುತ್ತವೆ, ಎಂಬ ಸತ್ಯವೇ ಮಾತಿನ ಮಿತಿಯನ್ನೂ ಸಾಧ್ಯತೆಗಳನ್ನೂ ಸೂಚಿಸುತ್ತದೆ.

ಮೌಖಿಕ ಕಥನಗಳ ಮೂಲಕ ಕಟ್ಟಿಕೊಂಡ ಚರಿತ್ರೆ ಅದು ಆ ಮಟ್ಟಿಗೆ ಅನುಭವನಿಷ್ಠ ಹಾಗೂ ಕಾಲನಿಷ್ಠ ಚರಿತ್ರೆಯಾಗಿರುತ್ತದೆ. ಇಂತಹ ಕಾಲದ ಒತ್ತಡದ ಮೂಲಕ ಸೃಷ್ಟಿಸಿಕೊಂಡ ಚರಿತ್ರೆಗೆ ತನ್ನ ಕಾಲದ ಜರೂರತ್ತು ಪೂರೈಸುವ ಜವಾಬ್ದಾರಿಯಿರುತ್ತದೆ ಹೊರತು, ಅದಕ್ಕೆ ಸಾರ್ವಕಾಲಿಕವಾಗಬೇಕೆಂಬ ವ್ಯಸನವಿರುವುದಿಲ್ಲ. ಹೇಳುವ ಮತ್ತು ಕೇಳುವ ಇಮ್ಮಡಿ ಒತ್ತಡಗಳ ನಡುವೆ ಮಾತೆಂಬ ಶಿಶು ಮೈದಾಳುತ್ತದೆ. ಅದು ಹುಟ್ಟಿದ ಹೊತ್ತಿನಲ್ಲೇ ತಾಯ ಕರುಳ ಬಳ್ಳಿ ಕತ್ತರಿಸಿಕೊಂಡು ಸ್ವತಂತ್ರವಾಗುತ್ತದೆ. ಆ ಮೂಲಕ ತನ್ನದೇ ಬಾಳನ್ನು ಬಾಳುತ್ತದೆ.

ಇಲ್ಲಿನ ಸಂದರ್ಶನಗಳಲ್ಲಿನ ಮಾತುಗಳು ಹಾಗೆ ಹೇಳುವ ಮತ್ತು ಕೇಳುವ ಒತ್ತಡಗಳ ನಡುವೆ ಸೃಷ್ಟಿಗೊಂಡ ವರ್ತಮಾನದ ಶಿಶುಗಳು. ಈ ಮಾತುಗಳೇ ಚರಿತ್ರೆಯಲ್ಲ, ಈ ಮಾತುಗಳ ನೆತ್ತರಲ್ಲಿ….. ಜನ್ಮಜನ್ಮಾಂತರದ ಅನುಭವಕ್ಕೆ ಚರಿತ್ರೆಯಾಗುವ ಶಕ್ತಿ ಇದೆ.

ಕರ್ನಾಟಕದ ಸಮಾಜವಾದಿ, ಹಿರಿಯ ಜೀವಗಳು ಇಲ್ಲಿ ಮಾತಾಡಿದೆ. ಅವರುಗಳಲ್ಲಿ ಅಮ್ಮೆಂಬಳ ಬಾಳಪ್ಪ, ಅವರ ಮಾತುಗಳನ್ನು ಮರೆವು ಕಸಿದುಕೊಂಡಿದೆ. ಇದು ಕಾಲನ ಕ್ರಿಯೆ. ಬಹುಶಃ ಒಂದೆರಡು ವರ್ಷ ಮೊದಲೇ ಆಗಿದ್ದರೆ ಅವರೊಂದಿಗೆ ಬಹಳವಾಗಿ ಚರ್ಚಿಸಲು ಸಾಧ್ಯವಿತ್ತು. ಬಾಳಪ್ಪ ಅತ್ಯಂತ ಕ್ರಿಯಾಶೀಲ ಸಮಾಜವಾದಿಗಳು. ಬೌದ್ಧಿಕತೆ ಮತ್ತು ಕ್ರಿಯಾಶೀಲತೆಗಳ ಸಮನ್ವಯ ಅವರ ವೈಶಿಷ್ಟ್ಯ. ತಮ್ಮ ಮುಪ್ಪಿನ ದಿನಗಳವರೆಗೂ ಜನರ ನಡುವಿದ್ದು, ಸಂಘಟಿಸಿದ ಬಾಳಪ್ಪ ಈಗ ನಿತ್ರಾಣ ಸ್ಥಿತಿಯಲ್ಲಿದ್ದಾರೆ. ವಿಸ್ಮೃತಿ ಅವರನ್ನು ಬಹುತೇಕ ತನ್ನ ವಶಕ್ಕೆ ತೆಗೆದುಕೊಂಡಿದೆ. ಪೊನ್ನಮ್ಮಾಳ್ ಸ್ಫುಟವಾಗಿ, ಬರಹದ ಭಾಷೆಯಲ್ಲಿ ಮಾತಾಡಿದ್ದಾರೆ. ಅವರ ಮಾತುಗಳೆಂದರೆ ಎಡಿಟ್ ಮಾಡುವ ಕಷ್ಟವಿಲ್ಲದ ವಾಕ್ಯಗಳು. ಸಂಕಲಿಸಲೂ ಕಷ್ಟಕೊಡದ ಕ್ರಮಾಗತ ನಿರೂಪಣೆಗಳು. ಅವರ ನೆನಪಿಗಿನ್ನೂ ತ್ರಾಣವಿದೆ. ಆದರೆ ದೇಹ? ಆದರೂ ಎರಡೂ ಬಾರಿ ಮೂರು ಮೂರು ತಾಸು ಕುಳಿತು ಮಾತಾಡಿದ್ದಾರೆ. ಮೂರನೇ ಬಾರಿಗೆ ಹೋಗಬೇಕೆನಿಸಿತಾದರೂ ಎಷ್ಟೆಂದು ಕಷ್ಟಕೊಡುವುದು? ಅಬ್ಬಿಗೆರೆ ವಿರೂಪಾಕ್ಷಪ್ಪ ಮಾತಾಡುವುದರಲ್ಲಿ ನಿಸ್ಸೀಮರು. ಮೊದಲೇ ರಿಟೈರ್ಡ್ ಮಾಸ್ತರರು. ಸಾಕಷ್ಟು ಓದಿಕೊಂಡಿದ್ದಾರೆ ಬೇರೆ. ಏರುದನಿ, ವೇಗ, ಆವೇಗಗಳ ಸಂಗಮ. ಅವರ ಮಾತನ್ನು ನಿಲ್ಲಿಸಲೂ ನನಗಾಗಲಿಲ್ಲ. ನನ್ನ ಮುಂದಿನ ಪ್ರಶ್ನೆಗೆ ಬಿಡುವೇ ಕೊಡದೇ ಸಾಗುತ್ತಿದ್ದ ಅವರ ಉತ್ತರಗಳು ಎಲ್ಲೋ ನಿಲ್ಲಿಸಿಬಿಡುತ್ತಿದ್ದವು. ಹಾಗೆ ಉತ್ತರ ನಿಂತ ಜಾಗಕ್ಕೆ ನನ್ನ ಪ್ರಶ್ನೆ ಹುಡುಕಾಡಿಕೊಂಡು ಬಂದು ಮತ್ತೆ ಮುಂದಿನ ಮಾತುಗಳಿಗೆ ಸಾಥ್ ಕೊಡಬೇಕಿತ್ತು. ಆದರೆ ಬಳಲಿದ ದೇಹ ಇನ್ನೂ ಸಾಧ್ಯವೇ ಇಲ್ಲ ಎಂಬ ಕೊನೆಯಲ್ಲಿ ಅವರ ಮಾತುಗಳಿಗೆ ಕಡಿವಾಣ ಹಾಕಿತು. ನೀಲಗಂಗಯ್ಯ ಪೂಜಾರರದಂತೂ ಒರತೆ ನೀರು. ಉಕ್ಕದು, ಬತ್ತದು, ಅನುಭವದ ಅಂತರ್ಜಲವದು. ಒಂದೇ ಅಳತೆಯಲ್ಲಿ ಎರಡು ಸಿಟ್ಟಿಂಗ್ ಗಳಲ್ಲಿ ಕೇಳಿದ್ದಕ್ಕೆಲ್ಲ ಉತ್ತರಿಸಿದ್ದಾರೆ. ಕೆ.ಜಿ. ಮಹೇಶ್ವರಪ್ಪ ಅವರಂತೂ ನನಗೇನು ನೆನಪಿಲ್ಲ ಎಂದು ಬಿಟ್ಟರು. ಆಗ ನೆರವಿಗೆ ಬಂದದ್ದು ಕಾಮನ್ ಸೆನ್ಸ್, ನಾನು ಅವರ ಒಂದೊಂದೇ ನೆನಪುಗಳನ್ನು ಮೀಟುತ್ತಲೇ ಚಂಗನೆ ನೆಗೆದು ಕಾಮನ್ ಸೆಸ್ಸ್ ನಾನು ಅವರ ಒಂದೊಂದೇ ನೆನಪುಗಳನ್ನು ಮೀಟುತ್ತಲೇ ಚಂಗನೆ ನೆಗೆದು ದೂರದಲ್ಲಿ ನಿಲ್ಲುವ ಜಿಂಕೆಯಂತೆ ಮಾತುಗಳನ್ನು ಹರಿಬಿಟ್ಟರು. ಮಾತಿಗೆ ಮಾತು ಕೂಡಿ ಬೆಳೆಯುತ್ತಲೇ ಹೋದ ಮಾತಿನಬಳ್ಳಿ ಅವರ ಸಂದರ್ಶನ. ಎಷ್ಟೋ ಬಾರಿ ಸಿದ್ಧಪಡಿಸಿಟ್ಟುಕೊಂಡ ಪ್ರಶ್ನೆಗಳು ಉತ್ತರ ಹೊರಗೆಡಹುವಲ್ಲಿ ಸೋತುಬಿಡುತ್ತವೆ. ಅಂತಹ ಸಂದರ್ಭದಲ್ಲಿ ಹರಟೆ ಎನ್ನಬಹುದಾದ ನಿರುದ್ದಿಶ್ಯ ಮಾತುಗಾರಿಕೆಯ ಶೈಲಿ ಮಾತ್ರ ವರ್ಕ್ ಔಟ್ ಆಗುತ್ತದೆ. ಅದಿಲ್ಲದಿದ್ದರೆ ಕೆ.ಜಿ.ಯವರ ಸಂದರ್ಶನ ಹೀಗಾಗುತ್ತಿರಲಿಲ್ಲ.

ಕೆ. ಸದಾಶಿವ ಕಾರಂತ, ೫೮ ವರುಷಗಳ ಹಿಂದೆಯೇ ಕರ್ನಾಟಕ ಬಿಟ್ಟವರು. ಅಲ್ಲಿಂದ ನಂತರ ಅವರಿಗೆ ಕರ್ನಾಟಕದ ಸಂಪರ್ಕವೇ ಇಲ್ಲ. ಹಾಗಾಗಿ ಕನ್ನಡ ಭಾಷಿಕ ಪರಿಸರವಿಲ್ಲದ ಅವರ ನಾಲಗೆ ಯಲ್ಲೀಗ ಕನ್ನಡ ಹೊರಳದು. ಕಾರಂತರ ಚಿಂತನೆಗಳು ಮೈದಾಳುವುದೇ ಇಂಗ್ಲೀಷ್ ಭಾಷೆಯಲ್ಲಿ. ಇನ್ನು ಅವರ ದೀರ್ಘಕಾಲಿಕ ಅನಾರೋಗ್ಯದಿಂದಾಗಿ ಉಚ್ಛಾರದಲ್ಲಿ ಬಹುತೇಕ ಚಿಕ್ಕಚಿಕ್ಕ ವಾಕ್ಯಗಳ, ಕೇಳದ ಪ್ರಶ್ನೆಗೆ ತಕ್ಕಷ್ಟು ನಿರ್ದಿಷ್ಟ ಉತ್ತರ. ಕಾರಂತರು ವಾಚಾಳಿಯಲ್ಲ. ಕೆಲವೊಮ್ಮೆ ಯಂತೂ ಕಟ್ ಸೆಂಟೆನ್ಸ್ ಗಳೇ ಉತ್ತರವಾದಾಗ ಮತ್ತೆ ಪ್ರಶ್ನಿಸಿ ವಿವರ ಪಡೆಯಬೇಕಾಯಿತು. ಕಾಶಿನಾಥ ಬೇಲೂರೆಯವರದೂ ಇದೇ ಸಮಸ್ಯೆ. ಅವರದು ಅಪ್ಪಟ ಬೀದರ್ ಭಾಷೆ. ಅದೂ ವಾಕ್ಯಗಳ ಕೊನೆಯಾಗುವುದು ಬಹುತೇಕ ಅಸ್ಪಷ್ಟ ಉಚ್ಚಾರದಲ್ಲಿ ಅಥವಾ ನಾನು ಮೊದಲ ಬಾರಿಗೆ ಕೇಳುತ್ತಿದ್ದೆನಾದ್ದರಿಂದ ಹಾಗೆನಿಸಿತೋ?

ಈ ಎಂಟು ಜನರಲ್ಲಿ ಯಾರನ್ನು ಸಂದರ್ಶಿಸುವುದೂ ಸರಳವೇನಿರಲಿಲ್ಲ. ವಯೋಸಹಜ ಅನಾರೋಗ್ಯ, ಜ್ವರ, ಸುಸ್ತುಗಳ ಕಾರಣಕ್ಕೆ ಭೇಟಿಗಳು ಅನೇಕ ಸಲ ಅಥವಾ ಆಗಷ್ಟೇ ಜ್ವರದಿಂದ ಚೇತರಿಸಿಕೊಳ್ಳುತ್ತಾ ಮಾತಾಡಿದ್ದಾರೆ. ಕೆ.ಜಿ. ಮಹೇಶ್ವರಪ್ಪನವರಂತೂ ಸಾರ್ವತ್ರಿಕವಾಗಿದ್ದ ಚಿಕನ್ ಗುನ್ಯಾ ಕಾಯಿಲೆಯಿಂದ ಆಗಷ್ಟೇ ಎದ್ದಿದ್ದರು. ಆರೋಗ್ಯ ಕಾಪಾಡಿಕೊಂಡು ಇನ್ನೂ ಮಧ್ಯ ವಯಸ್ಕ ಚೈತನ್ಯ ಹೊಂದಿರುವ ಏಕೈಕ ವ್ಯಕ್ತಿಯೆಂದರೆ ಆಮ್ಮೆಂಬಳ ಆನಂದರವರು. ಎರಡು ಬಾತಿ ಸಂದರ್ಶಿಸಿದಾಗಲೂ ತುಂಬ ಆತ್ಮೀಯವಾಗಿ ಮಾತಾಡಿದ್ದಾರೆ.

ಸದಾಶಿವ ಕಾರಂತರಿಗೆ ಕಳೆದ ೩೦ ವರ್ಷಗಳಿಂದ ಗಂಟುಬಿದ್ದ ಸಕ್ಕರೆ ಕಾಯಿಲೆ ಮೇಲಾಗಿ ಬೆನ್ನುಮೂಳೆಯ ಸಮಸ್ಯೆ. ಸದಾ ಬೆಲ್ಟು ಕಟ್ಟಿಕೊಂಡೇ ನೆಟ್ಟಗೆ ಕುಳಿತುಕೊಳ್ಳಬೇಕಿದ್ದ ಅವರೊಂದಿಗೆ ೨೦ – ೨೫ ನಿಮಿಷಕ್ಕಿಂತ ಹೆಚ್ಚು ಮಾತಾಡುವುದೆಂದರೆ ಅವರಿಗೆ ಹಿಂಸಿಸಿದಂತೆ. ಹಾಗಾಗಿ ಎರಡು ದಿನವಿಡೀ ಜೊತೆ ಇದ್ದು, ಅರ್ಧ ಮುಕ್ಕಾಲು ಗಂಟೆಯ ಏಳೆಂಟು ಕಂತುಗಳಲ್ಲಿ ತುಂಡುಗಡಿ ಸಂದರ್ಶನ ಮಾಡಬೇಕಾಯ್ತು.

ಪೊನ್ನಮ್ಮಾಳ್ ಅವರು ತಮ್ಮ ಸಂಸ್ಥೆಯ ಶಾಲೆಯ ಕೊಠಡಿಯೊಂದರಲ್ಲಿ ಮಧ್ಯಾಹ್ನ ೩ಕ್ಕೆ ಮಾತಿಗೆ ಕೂತರು. ಬೀಗ ಹಾಕುವ ಕೆಲಸಗಾರ ಕಾಯುವಿಕೆಯಿಂದಾಗಿ ಮರಳಬೇಕಾಯ್ತು. ಎರಡನೇ ಬಾರಿ ಮನೆಯಲ್ಲಿ ಸಂದರ್ಶಿಸಬೇಕಾಯ್ತು. ಕಾಶಿನಾಥ ಬೇಲೂರೆಯವರದೂ ಹಾಗೆಯೇ ಎರಡು ದಿನಪೂರ್ತಿ ಏಳೆಂಟು ಸಿಟ್ಟಿಂಗ್‌ಗಳು. ಬಾಳಪ್ಪನವರನ್ನು ಸಂದರ್ಶಿಸುವುದು ಇಲ್ಲಿರುವುದಕ್ಕಿಂತ ಹೆಚ್ಚು ಆಗದ ಮಾತು.

ತೋಟದ ಮನೆಯಲ್ಲಿ ಬಾಳಪ್ಪನವರನ್ನೂ, ಬಂಗಲೆಮನೆಯಲ್ಲಿ ಕೆ.ಜಿ. ಮಹೇಶ್ವರಪ್ಪನವರನ್ನೂ, ಬಾಡಿಗೆ ಮನೆಯಲ್ಲಿ ಪೂಜಾರ ಅವರನ್ನು, ಮಗಳ ಮನೆಯಲ್ಲಿ ಆನಂದ ಅವರನ್ನು ತಂಗಿ ಮನೆಯಲ್ಲಿ ಪೊನ್ನಮ್ಮಾಳ್ ಅವರನ್ನೂ, ಫ್ಲಾಟ್‌ ಮನೆಯಲ್ಲಿ ಕಾರಂತರನ್ನೂ, ತಮ್ಮ ಹಳೆಯಮನೆಯಲ್ಲಿ ವಿರೂಪಾಕ್ಷಪ್ಪ ಅವರನ್ನೂ ಹಾಗೂ ಬ್ಯಾಚುಲರ್ಸ್ ರೂಮಿನಲ್ಲಿ ಕಾಶಿನಾಥ ಬೇಲೂರೆಯವರನ್ನು ಸಂದರ್ಶಿಸಿದ್ದೇನೆ. ಈ ಮನೆಗಳೇ ಅವರ ಜೀವನಶೈಲಿಯನ್ನು ಆರ್ಥಿಕತೆಯನ್ನು ಸೂಚಿಸುತ್ತವೆ. ಸಂದರ್ಶಿತರ ಜೀವನಾನುಭವ, ಜೀವನಗತಿ ಹಾಗೂ ಮನೋದೈಹಿಕ ಸ್ಥಿತಿಗಳು ಸಂದರ್ಶನದ ಮೇಲೆ ನೇರ ಪರಿಣಾಮ ಬೀರುತ್ತವೆ. ಹಾಗಾಗಿ ಇಲ್ಲಿನ ಸಂದರ್ಶನಗಳಲ್ಲಿ ಕೆಲವೊಮ್ಮೆ ಅವುಗಳ ಉತ್ತರಗಳಿಂದಲೇ ಮಹತ್ವ ಬಂದಿದೆ. ಇನ್ನು ಕೆಲವು ಕಡೆ ಎಷ್ಟೋ ಪ್ರಶ್ನೆಗಳು ಹುಟ್ಟುತ್ತಲೇ ಅಸ್ತಂಗತವಾಗಿವೆ. ಎಷ್ಟೋ ಕಡೆ ಕೇಳದ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಈ ಸಂಪುಟದ ಎಲ್ಲ ಸಂದರ್ಶನಗಳೂ ‘ಅನ್ ಸ್ಟ್ರಕ್ಚರ್ಡ್ ವಿಧಾನ’ದ ಸಂದರ್ಶನಗಳಾಗಿವೆ. ಸಂದರ್ಶಿತರ ಬಗ್ಗೆ ಲಭ್ಯವಿದ್ದ ಮಾಹಿತಿಯನ್ನು, ಅವರ ಜೀವನ ವಿವರಗಳನ್ನು ಮೊದಲಿಗೆ ತಿಳಿದುಕೊಂಡು ಆ ಆಧಾರದಲ್ಲಿ ಅವರೊಂದಿಗೆ ಏನನ್ನು ಚರ್ಚಿಸಬೇಕು, ಯಾವ ಮಾಹಿತಿಯನ್ನು ಪಡೆಯಬೇಕು, ಎಂಬ ಸಿದ್ಧತೆಯೊಂದಿಗೆ ಬಹುತೇಕ ಮುಕ್ತ ಮಾತುಕತೆಯ ವಿಧಾನವನ್ನು ಅನುಸರಿಸಲಾಗಿದೆ. ಹಾಗೆ ಮಾತುಕತೆಗಿಳಿಯುವಾಗ ಪೂರ್ವಸಿದ್ಧತೆಯ ಮೂಲಕ ಕಟ್ಟಿಕೊಂಡಿದ್ದ ಪ್ರಶ್ನಾವಳಿ ಸಂದರ್ಶನ ಸಂದರ್ಭದಲ್ಲಿ, ಯಾವ ಅಂಶಗಳೂ ತಪ್ಪಿ ಹೋಗಬಾರದೆಂಬ ಎಚ್ಚರವಹಿಸಲು ನೆರವಾಗಿದೆ ಹೊರತು ಪ್ರಶ್ನೆಗಳ ಪಟ್ಟಿಯ ಪ್ರಕಾರ ಸಂದರ್ಶನ ನಡೆಸಲಾಗಿಲ್ಲ. ಇಲ್ಲಿ ಸಂದರ್ಶಿತರ ಆರೋಗ್ಯ, ವಯಸ್ಸು, ಮತ್ತು ಅನುಭವ ಕ್ಷೇತ್ರದ ಹಿನ್ನೆಲೆಯಲ್ಲಿ ಅಂತಹ ಸಿದ್ಧ ಪ್ರಶ್ನಾವಳಿಯನ್ನೇ ಅವಲಂಬಿಸಿದ, ಸಾಂಪ್ರದಾಯಿಕ, ಸ್ಟ್ರಕ್ಚರ‍್ಡ್ ವಿಧಾನ ನಾನು ಕೈಗೆತ್ತಿಕೊಂಡ ಯೋಜನೆಯ ಸ್ವರೂಪ ಮತ್ತು ಸಂದರ್ಶಿತರ ವಯಸ್ಸು, ಪರಿಸರ ಮತ್ತು ಜೀವನಶೈಲಿಗಳ ವ್ಯಕ್ತಿತ್ವಗಳ ಹಿನ್ನೆಲೆಯಲ್ಲಿ ಯೋಗ್ಯವೂ ಅನಿಸುತ್ತಿರಲಿಲ್ಲ.

ಸಂದರ್ಶನದ ಮೂಲಕ ವ್ಯಕ್ತಗೊಂಡ ಅಭಿಪ್ರಾಯ ಮತ್ತು ಮಾಹಿತಿಗಳನ್ನು ಅಧ್ಯಯನದ ಮೂಲಕ ದೊರೆತ ವಿವರಗಳ ಜೊತೆಯಿಟ್ಟು ಹಾಗೆ ಆಕೃತಿ ಪಡೆದ ಚರಿತ್ರೆಯನ್ನು ನನ್ನ ಪ್ರಸ್ತಾವನೆಯಲ್ಲಿ ತುಸುಮಟ್ಟಿಗೆ ವಿಶ್ಲೇಷಿಸಿದ್ದೇನೆ. ಮಾಹಿತಿಗಳನ್ನು ವಿಶ್ಲೇಷಿಸುವಾಗ ಅಧ್ಯಯನಕಾರನ ನಿಲುವು ತಕ್ಕಮಟ್ಟಿಗೆ ಚರಿತ್ರೆಯನ್ನು ನಿರೂಪಿಸುತ್ತದೆ. ಯಾವ ಅಧ್ಯಯನಕಾರನೂ ಇದಕ್ಕೆ ಹೊರತಲ್ಲ. ಆದರೆ ವಿಶ್ಲೇಷಣೆಯೇ ಇಲ್ಲದೆ ಮಾಹಿತಿಗಳ ನಿಟ್ಟು ಒಟ್ಟಿದರೆ ಅದರಿಂದ ಯಾವೊಂದು ಸತ್ಯದ ಮೇಲೂ ಬೆಳಕು ಚೆಲ್ಲಲು ಆಗುವುದಿಲ್ಲ ಅಥವಾ ಮುನ್ನಡೆಗೆ ದಾರಿಯೂ ತೋರುವುದಿಲ್ಲ. ಹಾದು ಬಂದ ಹಾದಿಯನ್ನು ಹಿಂತಿರುಗಿ ನೋಡಿದಾಗ ಕಂಡ ಚರಿತ್ರೆಗೆ, ಮುಂದೆ ಹಾದುಹೋಗಬೇಕಾದ ದಾರಿಯನ್ನು ತೋರಿಸುವ ಜವಾಬ್ದಾರಿಯೂ ಇರಬೇಕಾಗುತ್ತದೆ. ಹೀಗೆ ಮುಂದಿನ ದಾರಿಯ ಜವಾಬ್ದಾರಿಯಿಲ್ಲದ ಹೊರತು ಹಿಂದಿನ ದಾರಿಯ ದೋಷಗಳ ಕುತಿತು ನಿಷ್ಠುರದ ನಿಲುವು ತಳೆಯಲು ಸಾಧ್ಯವಾಗುವುದಿಲ್ಲ. ಚಾರಿತ್ರಿಕ ವಿಶ್ಲೇಷಣೆ ಎಂಬುದು ಇಂತಹ ನಿಷ್ಠುರದ ಕ್ರಿಯೆ. ತಮ್ಮ ಸಮಾಜ ಸಂಶೋಧನೆ ಕೃತಿಯಲ್ಲಿ ಎಂ. ಚಂದ್ರಪೂಜಾರಿಯವರು, ಯಾವ ಕಾರಣಗಳಿಗೆ ಚಾರಿತ್ರಿಕ ವಿಶ್ಲೇಷಣೆ ಮಹತ್ವ ಪಡೆದಿದೆ ಎಂಬುದನ್ನು ಹೀಗೆ ಹೇಳುತ್ತಾರೆ. “ಒಂದು, ವರ್ತಮಾನವನ್ನು ಗಟ್ಟಿಗೊಳಿಸಲು, ಎರಡು ಸತ್ಯವೆಂದು ನಂಬಿಕೊಂಡು ಬಂದಿರುವ ಸಂಗತಿಗಳ ನಿಜಸ್ವರೂಪ ತಿಳಿಯಲು, ಮೂರು, ಒಂದು ಸಾಮಾಜಿಕ ವಾಸ್ತವತೆಯ ಯೂನಿವರ್ಸಲ್ ಅನ್ವಯಿಕತೆಯ ಸಾಧ್ಯತೆಯನ್ನು ಒಡೆ ಹಚ್ಚಲು, ಹಾಗೂ ನಾಲ್ಕು ನಾವು ಎಲ್ಲಿಗೆ ಹೋಗಬೇಕೆನ್ನುವುದನ್ನೂ ನಿರ್ಧರಿಸಲು ನಾವು ಎಲ್ಲಿಂದ ಬಂದಿದ್ದೇವೆ ಎನ್ನುವುದರ ತಿಳಿವಳಿಕೆ ಅಗತ್ಯ. ಈ ಎಲ್ಲ ಉದ್ದೇಶಗಳನ್ನು ಚಾರಿತ್ರಿಕ ವಿಶ್ಲೇಷಣೆಯಿಂದ ಮಾತ್ರ ಪೂರೈಸಲು ಸಾಧ್ಯ.” ಈ ಕೃತಿಯ ಪ್ರಸ್ತಾವನೆಯು ನಾಲ್ಕನೆಯ ಕಾರಣವನ್ನು ಹೊಂದಿದೆ.

ಅಧ್ಯಯನದ ಮಿತಿಗಳು

ಇಲ್ಲಿನ ಅಧ್ಯಯನಕ್ಕೆ ಹಲವು ಮಿತಿಗಳಿವೆ. ಸಂದರ್ಶನದಲ್ಲಿ ಮೇಲ್ ಸ್ತರದ ಸರಳ ಪ್ರಶ್ನೆಗಳನ್ನು ಕೇಳಲಾಗಿದೆ. ಇನ್ನಷ್ಟು ಗಂಭೀರ ಸಂವಾದ, ಪ್ರಶ್ನೆಗಳ ಮೂಲಕ ತೆರೆದುಕೊಂಡಿದ್ದರೆ ಕೃತಿಯ ಮೌಲಿಕತೆ ಇನ್ನಷ್ಟು ಹೆಚ್ಚುತ್ತಿತ್ತು ಎಂದು ಅನಿಸಿದಲ್ಲಿ ಅದು ಸಹಜವೇ. ಆದರೆ ಸಂದರ್ಶಕ ಎದುರಿಸಬೇಕಾದ ವಾಸ್ತವ ಪರಿಸ್ಥಿತಿಯೇ ಬೇರೆ. ದಶಕಗಳ ಕಾಲ, ಇಂತಹ ಮಾತುಕತೆ ಒಮ್ಮೊಮ್ಮೆ ಅದು ಸಂದರ್ಶನದ ಉದ್ದೇಶವನ್ನೇ ಈಡೇರಿಸದೇ ಹೋಗಿ ಬಿಡಬಹುದು. ಹಾಗಾಗಿ ಮೊದಲಿಗೆ ಅವರ ಬಾಲ್ಯ, ಸಮಾಜವಾದದ ಸಂಪರ್ಕ, ಸಂಘಟನೆ ಪಕ್ಷದಲ್ಲಿ ಅನುಭವ, ಎದುರಿಸಿದ ಸವಾಲುಗಳು, ಚಳವಳಿಯಿಂದ ಹಿಂದೆ ಸರಿಯಲು ಕಾರಣವಾದ ಅಂಶಗಳು ಇವುಗಳೊಂದಿಗೆ ಮಾತಿಗಿಳಿಯಲಾಗಿದೆ. ಈ ಅಂಶಗಳು ಚರಿತ್ರೆಯ ವಿವರಗಳನ್ನು ಗ್ರಹಿಸಲು ಹಾಗೂ ಚರಿತ್ರೆಯನ್ನು ಕಟ್ಟಿಕೊಳ್ಳಲು ತುಂಬ ಸಹಕಾರಿಯಾಗಿವೆ. ಮಾಮೂಲಿ ಎನ್ನಿಸಿರುವ ಎಷ್ಟೊಂದು ವಿಷಯಗಳಿಗೆ ಚಾರಿತ್ರಿಕ ಮಹತ್ವ ಲಭಿಸಿದೆ.

ಕೈಗೆತ್ತಿಕೊಂಡ ಯೋಜನೆಯ ಉದ್ದೇಶದ ಹಿನ್ನೆಲೆಯಲ್ಲಿ ಹೀಗೆ ಮಾತಿಗಿಳಿಯುವುದು ಅತ್ಯಗತ್ಯವಾದುದಾಗಿತ್ತು. ಮಾತಾಡುತ್ತ ಹೋಗಿ ಕೆಲವು ಕಡೆ ಮಾತು ನಿಂತಾಗ ಮತ್ತೆ ಹಿಂದಿನ ಮಾತಿನೊಂದಿಗೆ ಸಂಪರ್ಕ ಕಲ್ಪಿಸದ ಹೊಸ ಚರ್ಚೆ ಶುರುವಾಗಿದೆ. ಕೆಲವು ಕಡೆ ಸಂದರ್ಶಿತರ ಮಾತಿಗೆ ಹ್ಞೂಂಗುಟ್ಟುವ, ಮತ್ತು ಆಡುತ್ತಿದ್ದ ಮಾತು ಮಹತ್ವದ್ದೆಂದು ಕಂಡುಬಂದರೆ ಅದನ್ನು ಬೆಳೆಸುವ ದೃಷ್ಟಿಯಿಂದ ತುಂಡು ವಾಕ್ಯಗಳ ಮೂಲಕ, ಅಚ್ಚರಿ, ಉದ್ಗಾರ, ಕಿರುಪ್ರಶ್ನೆಗಳ ಮೂಲಕ ಚಾಲನೆ ನೀಡಲಾಗಿದೆ. ಇವೆಲ್ಲವೂ ಉದ್ದೇಶಿತ ಮತ್ತು ಮಾತಿಗೆ ಚಾಲನೆ ಕೊಡುವಂತಹ ಸಂದರ್ಶನದ ಸ್ಪಂದನ ಕ್ರಮವಾಗಿದೆ ಅಷ್ಟೇ.

ಮುಖ್ಯವಾಗಿ ಈ ಸಂದರ್ಶನ ರಾಜಕೀಯ ಚರ್ಚೆಯನ್ನು ಒಳಗೊಂಡಿದೆ. ಇದು ಈ ಕೃತಿಯ ಮಿತಿಯೂ ಹೌದೆಂದು ತೋರಬಹುದು. “ಸಮಾಜವಾದ ಮತ್ತು ಚಳುವಳಿ” ರಾಜಕೀಯ ಸಂಗತಿಗಳೇ ಆಗಿದ್ದರಿಂದ ಇವುಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಹಾಗೆ ನೋಡಿದರೆ ಖಾಸಗಿ ಕೌಟುಂಬಿಕ ವಿವರಗಳೂ ಅನುಷಂಗಿಕವಾದವುಗಳೇ. ಯೋಜನೆಯು ಪೂರ್ವ ನಿಶ್ಚಿತಗೊಳಿಸಿಗೊಂಡ ಪ್ರಕಾರ ಈ ಹಿರಿಯರಿಂದ ಸಮಕಾಲೀನ ಮತ್ತು ಈ ಶತಮಾನದ ಪ್ರಮುಖ ರಾಜಕೀಯಾರ್ಥಿಕ ವಿಷಯಗಳ ಬಗ್ಗೆ ಪ್ರತಿಕ್ರಿಯೆಯನ್ನು ದಾಖಲಿಸಲಾಗಿದೆ. ಹಿರಿಯ ತಲೆಮಾರಿನ ಸಮಾಜವಾದಿಗಳು ತಮ್ಮ ಅನುಭವ ಮತ್ತು ತಾತ್ವಿಕತೆಯ ಹಿನ್ನೆಲೆಯಲ್ಲಿ ಜಾಗತೀಕರಣ, ಕೋಮುವಾದ, ದಲಿತ ಪ್ರಶ್ನೆ, ಮಹಿಳೆಯರ ಪಾಲುಗಾರಿಕೆ, ವರ್ತಮಾನದ ವಿದ್ಯಮಾನಗಳು, ನಕ್ಸಲ್ ಚಳವಳಿ, ರೈತ ಹೋರಾಟಗಳ ಗ್ರಹಿಕೆ ಮತ್ತು ಅರ್ಥೈಸುವಿಕೆಗಳು ಪ್ರಸ್ತುತ ಸಂದರ್ಭಕ್ಕೆ ಅಗತ್ಯವೆಂದು ಭಾವಿಸಿ ಈ ಪ್ರಶ್ನೆಗಳನ್ನು ಎಲ್ಲರೊಂದಿಗೆ ಬೇರೆ ಬೇರೆ ರೀತಿಯಲ್ಲಿ ಚರ್ಚಿಸಲಾಗಿದೆ.

ವೈವಿಧ್ಯಮಯ ಪ್ರಶ್ನೆಗಳನ್ನು ಕೇಳಿ ಚರ್ಚಿಸಬಹುದಾಗಿತ್ತೆಂದು ಅನಿಸಿದರೂ, ಸಂದರ್ಶಿತರ ಆರೋಗ್ಯ, ವಯಸ್ಸು, ವಾಸ, ಪರಿಸ್ಥಿತಿಗಳನ್ನು ಗಮನಿಸಿದಲ್ಲಿ ಇದಕ್ಕಿಂತಲೂ ದೀರ್ಘ ರೀತಿಯಲ್ಲಿ ಚರ್ಚಿಸುವ ಸಾಧ್ಯತೆಗಳಿದ್ದುದು ತೀರಾ ಕಡಿಮೆ. ಈಗ ಬಳಸಲಾಗಿರುವ ಕಾಲಮಿತಿಯಲ್ಲೇ ವೈವಿಧ್ಯತೆಗೆ ಅವಕಾಶ ಕಲ್ಪಿಸಬಹುದಾಗಿತ್ತಾದರೂ, ಕೈಗೆತ್ತಿಕೊಂಡ ಪ್ರಶ್ನೆಗಳ ಬಹು ಮಗ್ಗಲುಗಳ ವಿಶ್ಲೇಷಣೆಗೆ ಸವಿವರ ಚರ್ಚೆಯ ಅಗತ್ಯವನ್ನು ಮನಗಾಣಲಾಗಿದೆ. ಮುಖ್ಯವಾಗಿ ಸಮಾಜವಾದಿ ಚಳವಳಿಯ ಸಂಪರ್ಕ, ತಾತ್ವಿಕತೆ ಮತ್ತು ಪ್ರಾಯೋಗಿಕ ಸ್ವರೂಪ, ಅವುಗಳ ನಡುವಿನ ಸಮತೋಲನ ಮತ್ತು ವೈರುಧ್ಯತೆಗಳು, ಚಳುವಳಿಯ ವಿಮರ್ಶೆ, ಸ್ವವಿಮರ್ಶೆ, ಯಶಸ್ಸಿನ ಭಾಗಗಳು ಮತ್ತು ಹಿನ್ನಡೆಗೆ ಕಾರಣವಾದ ಅಂಶಗಳು, ಗುರುತಿಸಬಹುದಾದ ದೋಷಗಳು, ಅನ್ಯರಾಜಕೀಯ ಚಿಂತನೆಗಳೊಂದಿಗಿನ ಮೈತ್ರಿ – ಸಂಘರ್ಷಗಳು ಇವುಗಳ ಬಗ್ಗೆ ಕೇಂದ್ರಿತ ಚರ್ಚೆ ಮಾಡಲಾಗಿರುವುದರಿಂದ ಸಾಹಿತ್ಯ, ಸಂಸ್ಕೃತಿ ಮೊದಲಾದ ಸೃಜನಶೀಲ ಕ್ಷೇತ್ರಗಳೆಡೆ ಚರ್ಚೆ ವಿಸ್ತರಿಸಲು ಸಾಧ್ಯವಾಗಿಲ್ಲ.

ಹಾಗೆ ನೋಡಿದರೆ ಖಾಸಗಿ ಬದುಕಿನ ವಿವರಗಳೂ ತುಂಬಾ ಕಡಿಮೆ ಇದೆ. ಸಂದರ್ಶಿತರು ಜೀವಿತದ ಅಂಚಿನ ಕಾಲಘಟ್ಟದಲ್ಲಿ ಬದುಕುತ್ತಿರುವವರೇ ಆದ್ದರಿಂದ ಖಾಸಗೀ ಬದುಕಿಗೆ ಸಂಬಂಧಿಸಿದ ಚರ್ಚೆ, ಸೃಷ್ಟಿಸುವ ಪ್ರಶ್ನೆಗಳು ಒಮ್ಮೊಮ್ಮೆ ಈ ಹಿರಿಯರಿಗೆ ಬೇಸರ. ಮುಜುಗರ ಹುಟ್ಟಿಸಬಹುದಾದ್ದರಿಂದ ವಯೋಸ್ಥಿತಿಯನ್ನು ಗಮನಿಸಿ ಕೈಬಿಡಲಾಗಿದೆ. ಈ ಎಂಟೂ ಜನರೂ ಸಂದರ್ಶನದ ಸಾಮಾನ್ಯ ಉದ್ದೇಶ ಹಾಗೂ ಸ್ವರೂಪಗಳನ್ನು ಒಳಗೊಂಡಿರುವುದರಿಂದ ಹಾಗೂ ಎಲ್ಲರೂ ಒಂದೇ ಅನುಭವದ ಬೇರೆ ಬೇರೆ ಭಾಗಗಳು ಮಾತ್ರವಾದ್ದರಿಂದ ಸಂದರ್ಶನ ಕೆಲವೊಮ್ಮೆ ಏಕತಾನತೆ ಸೃಷ್ಟಿಸಿದೆ. ಒಬ್ಬರಿಗೆ ಕೇಳಿದ ಪ್ರಶ್ನೆ ಇನ್ನೊಬ್ಬರಿಗೂ ಕೇಳುವುದು ಅನಿವಾರ್ಯವಾಗಿದೆ. ಈ ಕೃತಿಯ ಪ್ರಸ್ತಾವನೆಯಲ್ಲಿ ದೇಶ ಮಟ್ಟದ ಹಿನ್ನೆಲೆಯಲ್ಲಿ ಆರಂಭದಿಂದ ತುರ್ತು ಪರಿಸ್ಥಿತಿ ಕಾಲದವರೆಗಿನ ಸಮಾಜವಾದಿ ಚಳವಳಿಯನ್ನಷ್ಟು ಮಾತ್ರ ಚರ್ಚಿಸಲಾಗಿದೆ. ಈ ಚರ್ಚೆಗೆ ಪೂರಕವಾಗಿ ವಿಶ್ವವಿದ್ಯಾಲಯವು ನೀಡಿದ ಎಂಟು ಜನ ಸಮಾಜವಾದಿಗಳ ಅನುಭವಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ.