ಭಾಗ : ಓಟು

ಭಾರತದ ಸಮಾಜವಾದದ ಇತಿಹಾಸ ತಾತ್ವಿಕವಾಗಿ ಮಾರ್ಕ್ಸ್‌ವಾದ ಇಲ್ಲವೇ ಕಮ್ಯುನಿಸ್ಟ್ ನೀತಿಗಳೊಂದಿಗಿನ ಮುಖಾಮುಖಿಯ ಇತಿಹಾಸವಾದರೆ, ಸಮಾಜವಾದಿ ‘ಪಕ್ಷದ’ ಇತಿಹಾಸ ಕಾಂಗ್ರೆಸ್ ಧೋರಣೆಗಳು ಹಾಗೂ ಬಲಪಂಥೀಯ ರಾಜಕೀಯ ತಂತ್ರಗಾರಿಕೆಗಳೊಂದಿಗಿನ ಮುಖಾಮುಖಿಯ ಇತಿಹಾಸವೆ ಆಗಿದೆ. ಭಿನ್ನ ವಿರೋಧಿಗಳೊಂದಿಗೆ ಸಮಾನ ಅಂತರದಲ್ಲಿ ನಿಲ್ಲುವ ರಾಜಕೀಯ ನಿಲುವು ಸಮಾಜವಾದಿ ಪಕ್ಷವನ್ನು ಏಕಕಾಲಕ್ಕೆ ಇಬ್ಬರು ಶತ್ರುಗಳನ್ನು ಎದುರಿಸುವ ಅನುಭವವನ್ನು ನೀಡಿತು. ಸಮಾನಾಂತರ ಶತ್ರುಗಳಲ್ಲಿ ಬಲಿಷ್ಠ ಶತ್ರುವಿನ ದಮನಕ್ಕೆ ಎರಡನೆಯ ಶತ್ರುವಿನ ಜೊತೆ ಮೈತ್ರಿಯಂತಹ ತಂತ್ರಗಾರಿಕೆಯನ್ನು ಖಾಯಂಗೊಳಿಸಿತು. ಸಂಸದೀಯ ರಾಜಕಾರಣದ ಈ ನಿರಂತರ ಪ್ರಕ್ರಿಯೆಯಲ್ಲಿ ಸಮಾಜವಾದ ತಾತ್ವಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಮಾರ್ಗ ಮತ್ತು ಗುರಿಗಳೆರಡರಲ್ಲೂ ತನ್ನ ಮೂಲ ಪರಿಕಲ್ಪನೆಯನ್ನು ಸ್ವಯಂ ಭಂಜಿಸಿತು.

ಚಳವಳಿ ಮತ್ತು ಸಂಸದೀಯ ರಾಜಕಾರಣಗಳೆರಡನ್ನೂ ಜೊತೆ ಜೊತೆಯಾಗಿ ಮುನ್ನಡೆಸುವ ಸಾಮರ್ಥ್ಯ ಸಮಾಜವಾದಿ ಪಕ್ಷಕ್ಕೆ ಸೈದ್ಧಾಂತಿಕವಾಗಿ ಲಭಿಸಿದ್ದರೆ, ಸಮಾಜವಾದವು ವಿರೋಧ ರಾಜಕಾರಣದಾಚೆ ಆಡಳಿತ ರಾಜಕಾರಣವನ್ನು ಪ್ರವೇಶಿಸಬಹುದಿತ್ತು. ಆದರೆ ಸಮಾಜವಾದ ತಾನು ಹೊಂದಿದ್ದ ಸಿದ್ಧಾಂತವನ್ನು ಜಾರಿಗೆ ತರುವ, ಚಳವಳಿಯನ್ನು ರೂಪಿಸುವ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹೊಂದಿರದ ಕಾರಣ ರಾಜತಾಂತ್ರಿಕ ವಿಧಾನವನ್ನೇ ಅನಿವಾರ್ಯವಾಗಿಸಿ ಕೊಂಡಿತು. ಆಗಾಗ ನಡೆಯುತ್ತಿದ್ದ ಸಮ್ಮೇಳನಗಳಲ್ಲಿ ಮಂಡಿಸಲ್ಪಡುತ್ತಿದ್ದ ಥೀಸಿಸ್ ಗಳು ಸಾಂದರ್ಭಿಕ ರಾಜಕಾರಣವನ್ನು ಚರ್ಚಿಸಿದವಲ್ಲದೇ, ಸಮಾಜವಾದಿ ಸಮಾಜ ರಚನೆಯ ದೂರಗಾಮಿ ಪಥವನ್ನು ವಿವರಿಸಿಕೊಳ್ಳದಾದವು. ಸಿದ್ಧಾಂತ ಆಧಾರಿತ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವ ಪ್ರಜಾಸತ್ತಾತ್ಮಕ ವ್ಯವಧಾನದ ಕೊರತೆ, ನಾಯಕತ್ವವನ್ನು ವ್ಯಕ್ತಿ ಸ್ವಾತಂತ್ರ್ಯದ ಅತಿಗೆ ತಲುಪಿಸಿದವು. ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳ ಸಾಪೇಕ್ಷ ಸಂಬಂಧ, ಸಂಘಟನೆಯ ಒಳಪ್ರಕ್ರಿಯೆಗಳಲ್ಲಿ ‘ವೈರುಧ್ಯತೆ’ಯಾಗಿ ಮಾರ್ಪಟ್ಟು ಇವುಗಳಿಗೆ ಉತ್ತರ ಕಂಡುಕೊಳ್ಳದ ಹಾಗೂ ಹೊರಬರದ ಪಕ್ಷ ಆಶಯದ ಹಂತದಲ್ಲೇ ನಿರಶನಗೊಂಡಿತು. ‘ಸಮಾಜವಾದ’ ವೈಜ್ಞಾನಿಕ ಸಿದ್ಧಾಂತವಾಗುವುದಕ್ಕಿಂತ ವೈಯಕ್ತಿಕ ಆದರ್ಶವಾಗುಳಿಯಿತು. ಸಂಘಟನೆ ಅರಾಜಕತೆಯನ ಅಂಚನ್ನು ತಲುಪಿತು.

ಜಮೀನ್ದಾರರು, ಮಾಜಿ ಸಂಸ್ಥಾನಿಕರು ಹಾಗೂ ಅರೆಬಂಡವಾಳಿಗ ವರ್ಗಗಳ ಒಕ್ಕೂಟವಾಗಿದ್ದ ಕಾಂಗ್ರೆಸ್, ರೂಪಾಂತರಗೊಂಡಿದ್ದ ರಾಜಕೀಯ ವ್ಯವಸ್ಥೆಯಲ್ಲಿ ತಾನು ಆಳುವ ಪಕ್ಷವಾಗಿ ಪ್ರತಿಪಕ್ಷವನ್ನು ಎದುರಿಸಬೇಕಿತ್ತು. ಕಮ್ಯುನಿಸ್ಟ್ ಹಾಗೂ ಸಮಾಜವಾದಿ ಪಕ್ಷಗಳು ಅಂತಹ ಪ್ರತಿಸಾಮರ್ಥ್ಯವನ್ನು ಹೊಂದಿದ್ದವು. ಸಮಾಜವಾದಿ ಪಕ್ಷವನ್ನು ‘ಸ್ವಾಹ’ ಮಾಡುವ ಪ್ರಯತ್ನವನ್ನೂ ನೆಹರೂ ಆರಂಭಿಸಿದ್ದರು. ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿಯಾಗಿದ್ದಾಗ, ಸಮಾಜವಾದಿಗಳು ಕಾಂಗ್ರೆಸ್ಸಿನೊಳಗಿದ್ದೆ ಪ್ರತ್ಯೇಕ ಅನನ್ಯತೆಯನ್ನು ಪಡೆಯುತ್ತಿದ್ದದ್ದನ್ನು ಕಾಂಗ್ರೆಸ್ಸಿನಲ್ಲಿದ್ದ ಪುನರುತ್ಥಾನವಾದಿ ಬಣ ಗುರುತಿಸಿ ಅದನ್ನು ಕಾಂಗ್ರೆಸ್ಸಿನಿಂದ ಹೊರಹಾಕಿ ದುರ್ಬಲವಾಗಿಸುವಲ್ಲಿ ಯಶಸ್ವಿಯಾಗಿತ್ತು. ಈ ಕ್ರಿಯೆ ಕಾಂಗ್ರೆಸ್ ಒಳಗಿನ ‘ಎಡವಾದಿ ಮತ್ತು ಬಲವಾದಿ’ ಧೋರಣೆಗಳ ಸಂಘರ್ಷವೇ ಆಗಿತ್ತು. ನೆಹರೂ ಮಧ್ಯಮ ಧೋರಣೆ ಅಥವಾ ತಟಸ್ಥ ಧೋರಣೆ ತಾಳುವುದರೊಂದಿಗೆ ಬಲಪಂಥೀಯರಾದ ರಾಜಾಜಿ ಹಾಗೂ ಪಟೇಲರು ಮೇಲುಗೈ ಸಾಧಿಸಿದ್ದರು. ಸ್ವಾತಂತ್ರ್ಯಾನಂತರ ವರ್ಗ ಸಂಘಟನೆಯ ಶಕ್ತಿಯ ಮೂಲಕ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಪ್ರಬಲ ವಿರೋಧಿ ಶಕ್ತಿಯಾಗುತ್ತಿದ್ದದನ್ನು ಗಮನಿಸಿದ ಕಾಂಗ್ರೆಸ್, ಎಡ ಪ್ರತಿರೋಧವನ್ನು ದುರ್ಬಲಗೊಳಿಸಲು ಸಮಾಜವಾದಿಗಳನ್ನು ತನ್ನೊಳಗೆ ಲೀನಮಾಡಿಕೊಳ್ಳುವ ಪ್ರಸ್ತಾಪ ಸಲ್ಲಿಸಿತು.

ನೆಹರೂ ಅವರ ಪ್ರಸ್ತಾಸಕ್ಕೆ ಸ್ಪಂದಿಸುವ ಜೆ.ಪಿ. ಕಾಂಗ್ರೆಸ್‌ನೊಂದಿಗೆ ಮಾತುಕತೆಗೆ ಮುಂದಾದರು. ‘ಸರಕಾರದ ಮೂಲಕ ಸಮಾಜವಾದವನ್ನು ಜಾರಿಗೆ ತರುವ’ ದೃಷ್ಟಿಕೋನದಲ್ಲಿ ದುರ್ಬಲರಿಗೆ ಭೂಒಡೆತನ ಹಾಗೂ ಬ್ಯಾಂಕು ರಾಷ್ಟ್ರೀಕರಣಗಳನ್ನು ಒಳಗೊಂಡಂತೆ ೧೪ ಅಂಶಗಳನ್ನು ನೆಹರೂ ಅವರಿಗೆ ಸಲ್ಲಿಸಿದರು. ‘ಭೂಮಿ’ಯ ಪ್ರಶ್ನೆ ಸಹಜವಾಗಿಯೇ ಕಾಂಗ್ರೆಸ್ ನ ವರ್ಗಹಿತಾಸಕ್ತಿಗೆ ಪೆಟ್ಟು ಕೊಡಲಿದ್ದರಿಂದ ಅದನ್ನು ಕೈಬಿಟ್ಟ ನೆಹರು ‘ಬ್ಯಾಂಕು’ಗಳ ರಾಷ್ಟ್ರೀಕರಣ ಕುರಿತಂತೆ ಸಕಾರಾತ್ಮಕವಾಗಿ ಸ್ಪಂದಿಸಿದರು. ನೆಹರೂ ಅವರ ಸ್ಪಂದನದಿಂದ ಅಶೋಕ ಮೆಹ್ತಾ ಮಾರು ಹೋದರು. ಆದರೆ ಕಾಂಗ್ರೆಸ್ಸನ್ನು ಸಂಸದೀಯವಾಗಿ ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿದ್ದ ಲೋಹಿಯಾ, ಕಾಂಗ್ರೆಸ್ ವಿರುದ್ಧ ಬಲಿಷ್ಠ ವಿರೋಧಿ ಶಕ್ತಿ ರೂಪಿಸುವ ಆಶಯ ಹೊಂದಿದ್ದರು. ತಾನು ಹುಟ್ಟಿದ ವರ್ಷವೇ ಆಂತರಿಕ ಭಿನ್ನಾಭಿಪ್ರಾಯಗಳನ್ನು ತಾಳಿದ ಸಮಾಜವಾದಿ ಪಕ್ಷ, ಕಾಂಗ್ರೆಸ್‌ನೊಳಗೆ ಲೀನವಾಗಿ ಸಮಾಜವಾದಿತತ್ವ ಅನುಷ್ಠಾನ ಮಾಡಬೇಕೆಂಬ ವಾದದೊಂದಿಗೆ ಪ್ರಭುತ್ವದೊಂದಿಗೆ ಸೇರಿದ ಅಶೋಕ ಮೆಹ್ತಾ ಅವರಿಂದಾಗಿ ಭಾಗಶಃ ದುರ್ಬಲಗೊಂಡಿತು. ಮೆಹ್ತಾ ಅವರ ನಿಲುವಿಗೆ ಜೆ.ಪಿ.ಯವರ ಸಹಾನುಭೂತಿ ಇತ್ತು. ಹಾಗಾಗಿ ಪ್ರಬಲ ವಿರೋಧವಾಗಬೇಕಿದ್ದ ಸಮಾಜವಾದ ತಾನು ಖಚಿತಪಡಿಸಿಕೊಂಡಿರದ ಸೈದ್ಧಾಂತಿಕ ಕಾರಣಗಳಿಂದಾಗಿ ರೂಪುಗೊಳ್ಳುತ್ತಲೇ ಬಿರುಕು ಬಿಟ್ಟಿತು. ಜೆ.ಪಿ.ಯವರ ಇಂತಹ ‘ಡೋಲಾಯಮಾನ’ ನಿಲುವುಗಳೇ ಮುಂದೆ ಅವರು ‘ಭೂದಾನ’ವನ್ನು ಬೆಂಬಲಿಸಲು ಕಾರಣವಾದವು. ಸಮಾಜವಾದಿ ಪಕ್ಷ ಲೋಹಿಯಾ ಚಿಂತನೆಗಳಲ್ಲಿ ತನ್ನ ಕೇಂದ್ರವನ್ನು ಕಂಡುಕೊಂಡಿತು. ಲೋಹಿಯಾ ಸಮಾಜವಾದಿ ಪಕ್ಷದ ಕೇಂದ್ರಬಿಂದುವಾದರು.

ದೇಶಮಟ್ಟದ ಈ ತಾಕಲಾಟಗಳು ಕರ್ನಾಟಕದ ಮೇಲೆ ವಿಶೇಷ ಪರಿಣಾಮಗಳನ್ನು ಬೀರಿದವು. ‘ಅಶೋಕ ಮೆಹ್ತಾ, ಜೆ.ಪಿ., ಲೋಹಿಯಾ’ರ ಭಿನ್ನವಾದಗಳ ಪಕ್ಷದ ಆಂತರಿಕ ಸಂಘರ್ಷ, ದಕ್ಷಿಣ ಭಾರತದಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿ ಪಡೆದಿದ್ದ ಕಮಲಾದೇವಿಯವರನ್ನು ವಿಚಲಿತರನ್ನಾಗಿಸಿತು. ಇಂತಹ ತಾತ್ವಿಕ ಸಂಘರ್ಷವನ್ನು ಎದುರಿಸದ ಕಮಲಾದೇವಿಯವರ ರಾಜಕೀಯ ಸಂಘರ್ಷದಿಂದ ಹಿಂದಕ್ಕೆ ಸರಿಯುವ ತೀರ್ಮಾನದ ಪ್ರಭಾವ ಕರ್ನಾಟಕದಲ್ಲಿ ಆಗಷ್ಟೇ ಸಂಘಟನೆಗೊಳ್ಳುತ್ತಿದ್ದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಇದೇ ಹೊತ್ತಿಗೆ ಹುಬ್ಬಳ್ಳಿ ಪ್ರಾಂತದಲ್ಲಿ ‘ಜಾಗೃತಿ’ ಪತ್ರಿಕೆ ಕುರಿತಾಗಿ ಆಂತರಿಕ ಭಿನ್ನಾಭಿಪ್ರಾಯಗಳು ಉಲ್ಬಣಿಸಿದ್ದವು. ಖಾದ್ರಿಶಾಮಣ್ಣ, ಪತ್ರಿಕೆಯ ಹಣ ಬಳಕೆಯಲ್ಲಿ ಲೋಪವೆಸಗಿದ್ದಾರೆ ಎಂದು ಆರಂಭಗೊಂಡ ಚರ್ಚೆ, ಸೂಕ್ತ ಪರಿಹಾರ ಕಂಡುಕೊಳ್ಳದೆ ಹೊಸಪೇಟೆಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಸ್ಫೋಟಗೊಂಡಿತು. ಕ್ರಿಯಾಶೀಲವಾಗಿದ್ದ ಬಣ ತಟಸ್ಥವಾಗುವ ತೀರ್ಮಾನ ಕೈಗೊಳ್ಳುವುದರೊಂದಿಗೆ ಹುಬ್ಬಳ್ಳಿ ಪ್ರಾಂತದಲ್ಲಿ ೧೯೪೯ರಲ್ಲಿಯೇ ಸಮಾಜವಾದಿ ಚಟುವಟಿಕೆಗಳು ಹಿನ್ನಡೆ ಅನುಭವಿಸಿದವು. ಈ ಬಗ್ಗೆ ಹುಬ್ಬಳ್ಳಿ ಪ್ರಾಂತೀಯ ಕಾರ್ಯದರ್ಶಿಯಾಗಿದ್ದ ಕಾರಂತರು “ನನ್ನ ಬೆಂಬಲಿಗ ಗೆಳೆಯರೆಲ್ಲಾ ಆಗ ಪಕ್ಷದ ಸಂಘಟನೆಗೆ ಕೆಲವೊಂದು ರಾಜಸೂತ್ರವನ್ನು ಸಭೆಯ ಮುಂದಿಟ್ಟರು. ಅದರಲ್ಲಿ ಮುಖ್ಯವಾಗಿದ್ದ ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣ ಅದು ಕಾರ್ಯಸಾಧು ಅಲ್ಲ ಎಂದು ಕಮಲಾದೇವಿ ತಿರಸ್ಕರಿಸಿದರು. ಆಗ ನಾವೆಲ್ಲ ಪಕ್ಷದ ನಿಷ್ಠೆಯನ್ನು ಅಬಾಧಿತವಾಗಿಟ್ಟು ನಮ್ಮ ನಮ್ಮ ಕ್ಷೇತ್ರದಲ್ಲಿ ಕೆಲಕಾಲ ನಿಷ್ಕ್ರಿಯರಾಗುವುದೆಂದು ತೀರ್ಮಾನಿಸಿದೆವು” ಎನ್ನುತ್ತಾರೆ. ನಿಷ್ಕ್ರಿಯರಾಗುವ ತೀರ್ಮಾನ ತಳೆದ ಕಾರಂತರು ಮುಂಬೈಗೆ, ನೀಲಗಂಗಯ್ಯ ಪೂಜಾರ್ ಬೆಳಗಾವಿಗೆ ವಿದ್ಯಾಭ್ಯಾಸಕ್ಕೆಂದು ಹೋದರು. ಅಮ್ಮೆಂಬಳ ಆನಂದ ಅಸಹಾಯಕ ಸ್ಥಿತಿಯಲ್ಲಿ ಕೆಲಕಾಲ ಹುಬ್ಬಳ್ಳಿಯಲ್ಲಿ ಉಳಿದು ನಂತರ ಅಂಕೋಲಕ್ಕೆ ತೆರಳಿದರು. ಜಮೀನ್ದಾರರ ವಿರುದ್ಧ ಭೂ ಹೋರಾಟಗಳನ್ನೂ, ಕಾರ್ಮಿಕ ಸಂಘಟನೆಗಳನ್ನೂ ಸಂಘಟಿಸುತ್ತಿದ್ದ ಸಮಾಜವಾದಿ ಪಕ್ಷ ಕುಸಿಯುವುದರೊಂದಿಗೆ ಯಜಮಾನ್ಯ ಶಕ್ತಿಗಳು ನಿಟ್ಟುಸಿರು ಬಿಟ್ಟವು. ಕಾಂಗ್ರೆಸ್ ನಿರಾತಂಕವಾಗಿ ಅವಿರೋಧ ರಾಜಕೀಯ ಚಲನೆ ಕಂಡುಕೊಂಡಿತು.

ಮೈಸೂರು ಸಂಸ್ಥಾನದಲ್ಲಿ ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯ ವಿಧಾಯಕ ಸಭೆಗಳಿಗೆ ನಡೆದ ಹೋರಾಟದಲ್ಲಿ ಉತ್ಸಾಹ ತಳೆದಿದ್ದ ಎಂ.ಪಿ. ಈಶ್ವರಪ್ಪ, ವೇದಾಂತ ಹೆಮ್ಮಿಗೆ, ಎಂ.ಎಸ್. ಗುರುಪಾದಸ್ವಾಮಿ, ಶ್ರೀಕಂಠಪ್ಪ ಮೈಸೂರು ಪ್ರಾಂತದಲ್ಲೂ, ಗೋಪಾಲಗೌಡ ಶಿವಮೊಗ್ಗದಲ್ಲೂ ಪಕ್ಷವನ್ನು ಸಂಘಟಿಸಿದ್ದರು. ಶಿವಮೊಗ್ಗದಲ್ಲಿ ನಡೆದ, ಸಮಾಜವಾದಿ ಪಕ್ಷದ ಪ್ರಥಮ ಸಮ್ಮೇಳನವನ್ನು ಅಶೋಕ ಮೆಹ್ತಾ ಉದ್ಘಾಟಿಸಿದ್ದರು. ಗರಗ – ಗದಗಗಳಲ್ಲಿ ನಡೆದ ರೈತ ಸಮಾವೇಶ, ಎಡಪಂಥೀಯ ಸಮಾವೇಶಗಳನ್ನು ಅಶೋಕ ಮೆಹ್ತಾ ಉದ್ಘಾಟಿಸಿದ್ದರು. ಪಕ್ಷದ ಆರಂಭದ ಎಲ್ಲ ಬೆಳವಣಿಗೆಗಳಿಗೆ ಕಮಲಾದೇವಿ ಕಾರಣಕರ್ತ ರಾಗಿದ್ದರು. ಆದರೆ ಅದರ ಬೆನ್ನಿನಲ್ಲೇ ಅಶೋಕ ಮೆಹ್ತಾ ಕಾಂಗ್ರೆಸ್ಸಿಗೆ ಹೋಗಿ, ಕಮಲಾದೇವಿ ನಿವೃತ್ತಿಯೂ ಆದದ್ದು ಕರ್ನಾಟಕದಲ್ಲೂ ತಳಮಳಗಳನ್ನು ಉಂಟುಮಾಡಿತ್ತು.

೧೯೫೨ರ ಮೊದಲ ಸಾರ್ವತ್ರಿಕ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷವು ಆಚಾರ್ಯ ಕೃಪಲಾನಿಯವರ ಕಿಸಾನ್ ಮಜ್ದೂರ ಪ್ರಜಾಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಸಮಾಜವಾದಿ ಪಕ್ಷಗಳು ಒಂದಾಗಿ ದೇಶವನ್ನು ಸಂಪೂರ್ಣವಾಗಿ ಕ್ರಾಂತಿಯತ್ತ ಕೊಂಡೊಯ್ಯುವ ತೀರ್ಮಾನವನ್ನು ಪಂಚಮಡಿ ಸಮ್ಮೇಳನವು ಕೈಗೊಂಡಿತ್ತು.ಆ ವರ್ಷವಷ್ಟೇ ಆಚಾರ್ಯ ಕೃಪಲಾನಿಯವರ ನೇತೃತ್ವದಲ್ಲಿ ಕಿಸಾನ್ ಮಜ್ದೂರ್ ಪ್ರಜಾಪಾರ್ಟಿ (ಕೆ.ಎಂ.ಪಿ.ಪಿ.) ಅಸ್ತಿತ್ವಕ್ಕೆ ಬಂದಿತ್ತು. ಅದೇ ವರ್ಷ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಗಳಲ್ಲಿ ಕೆ.ಎಂ.ಪಿ.ಪಿ. ಕರ್ನಾಟಕದ ೧೫ ವಿಧಾನಸಭಾ ಕ್ಷೇತ್ರಗಳಲ್ಲಿ ತ್ನನ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿತು. ೬ ಜನ ಅಭ್ಯರ್ಥಿಗಳು ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ಸಮಾಜವಾದಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳೂ ಸೋತರು. ಕರ್ನಾಟಕದ ವಿಧಾನಸಭೆಗೆ ಹೊಸನಗರ ಕ್ಷೇತ್ರದಿಂದ ಶಾಂತವೇರಿ ಗೋಪಾಲಗೌಡರು, ಹಾಗೂ ಚಿತ್ರದುರ್ಗ ಕ್ಷೇತ್ರದಿಂದ ಮುಲ್ಕಾಗೋವಿಂದರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು.

೧೯೪೬ರಲ್ಲಿ ಕರ್ನಾಟಕದಲ್ಲಿ ಆರಂಭಗೊಂಡ ‘ಕಾಂಗ್ರೆಸ್ ಸಮಾಜವಾದಿ ಪಕ್ಷ’ ಚುನಾವಣಾ ರಾಜಕೀಯವಾಗಿ ಮೊದಲಿಗೆ ಎದುರಿಸಿದ್ದು ಮೈಸೂರಿನ ರಾಜಶಾಹಿಯನ್ನು, ಬ್ರಿಟೀಷ್ ಆಡಳಿತದ ಮಧ್ಯವರ್ತಿ ಸಂಸ್ಥೆಯಾಗಿ ಅಸ್ತಿತ್ವ ಉಳಿಸಿಕೊಂಡ ರಾಜಶಾಹಿಗೆ ಮೊದಲಿಗೆ ಕಾಂಗ್ರೆಸ್ ಗಿಂತಲೂ ಸಮಾಜವಾದಿಗಳು ಶತ್ರುಗಳಾಗಿದ್ದರು. ಇದಕ್ಕೆ ಕಾರಣವೂ ಇತ್ತು. ಕಮಲಾದೇವಿ ಚಟ್ಟೋಪಾಧ್ಯಾಯ ಹಾಗೂ ಜೆ.ಪಿ. ರಾಜಶಾಹಿ ವಿರೋಧಿ ನಿಲುವು ತಾಳಿದ್ದರು. ಆದರೆ ಸಂಸ್ಥಾನಿಕರ ಬಗ್ಗೆ ಗಾಂಧೀಜಿ ಮೆಚ್ಚುಗೆ ತೋರಿಸಿದ್ದರಾದ್ದರಿಂದ ‘ರಾಜ’ರಿಗೆ ಕಾಂಗ್ರೆಸ್ ಬಗ್ಗೆ ದ್ವೇಷವಿರಲಿಲ್ಲ. ಪ್ರೀತಿಯೂ ಇತ್ತು.

ಮೈಸೂರು ಪ್ರಾಂತದಲ್ಲಿ ‘ಪ್ರಜಾಸಂಯುಕ್ತ ಪಕ್ಷ’ ಸಂಸ್ಥಾನದಲ್ಲಿ ‘ಜವಾಬ್ದಾರಿ ಸರ್ಕಾರ ರಚನೆಗೆ’ ಒತ್ತಾಯಿಸಿ ಹೋರಾಟ ನಡೆಸಿತು. ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯವಿಧಾಯಕ ಸಭೆಗಳು ನಾಮಮಾತ್ರವಾಗಿದ್ದು ಸಂಸ್ಥಾನದ ಆಡಳಿತದಲ್ಲಿ ಜನಪ್ರತಿನಿಧಿಗಳ ಅಗತ್ಯವನ್ನು ಪ್ರಜಾಸಂಯುಕ್ತ ಪಕ್ಷ ಎತ್ತಿ ಹಿಡಿಯಿತು. ಜವಾಬ್ದಾರಿ ಸರ್ಕಾರ ರಚನೆಯ ಹೋರಾಟವನ್ನು ತೀವ್ರಗೊಳಿಸುವ ಕಾರ್ಯತಂತ್ರದ ಭಾಗವಾಗಿ ‘ಪ್ರಜಾಸಂಯುಕ್ತ ಪಕ್ಷ’ ಕಾಂಗ್ರೆಸ್ಸ್ ನಲ್ಲಿ ವಿಲೀನವಾಗಿ, ‘ಮೈಸೂರು ಕಾಂಗ್ರೆಸ್’ ಮೂಲಕ ರಾಜ – ಸಂಸ್ಥಾನವನ್ನು ವಿರೋಧಿಸಿತು. ಮೊದಲಿನಿಂದಲೂ ರಾಜಶಾಹಿಯನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ ನಲ್ಲಿದ್ದ ಸಮಾಜವಾದಿ ಕಮಲದಾದೇವಿ, ಮೈಸೂರು ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯವಿಧಾಯಕ ಸಭೆ ಚುನಾವಣೆಗಳನ್ನು ಕಾಂಗ್ರೆಸ್ ಪರವಾಗಿ ಪ್ರಚಾರ ಕೈಗೊಂಡರು. ರಾಜಸಂಸ್ಥಾನವು ಕಮಲಾದೇವಿಯವರ ಚುನಾವಣಾ ಭಾಷಣಗಳನ್ನು ನಿರ್ಬಂಧಿಸಿತ್ತಾದರೂ ಕಾಂಗ್ರೆಸ್ ಈ ಚುನಾವಣೆಗಳಲ್ಲಿ ವಿಜಯಿಯಾಯಿತು.

ಚುನಾವಣೆಯಂತಹ ಪ್ರಜಾಸತ್ತಾತ್ಮಕ ವಿಧಾನಗಳ ಅನುಷ್ಠಾನ ರಾಜಶಾಹಿಗೆ ಮಾರಣಾಂತಿಕ ಪೆಟ್ಟನ್ನು ನೀಡಿತು. ವಸಾಹತುಶಾಹಿಯಿಂದ ಭಾರತದ ವಿಮೋಚನೆಯ ನಂತರ ಭಾರತದ ಆಳುವ ಪಕ್ಷವಾಗಲಿದ್ದ ಕಾಂಗ್ರೆಸ್ ತಾನು ಎದುರಿಸಬೇಕಿದ್ದ ವಿರೋಧ ಎಡಪಂಥೀಯ ರಾಜಕಾರನದಲ್ಲಿರುವುದನ್ನು ಗಮನಿಸಿತು. ಭೂ ಹೋರಾಟಗಳು ಹಾಗೂ ವರ್ಗ ಸಂಘಟನೆಯ ಮೂಲಕ ಕ್ರಿಯಾಶೀಲರಾಗಿದ್ದ ಕಮ್ಯುನಿಸ್ಟ್ ರಿಗಿಂತ ಸಂಸದೀಯ ಪ್ರತಿಸ್ಪರ್ಧಿಯಾಗಲಿದ್ದ ಸಮಾಜವಾದಿ ಪಕ್ಷವನ್ನು ರಾಜತಾಂತ್ರಿಕವಾಗಿ ಮಣಿಸುವುದು ಅಗತ್ಯ ಎಂಬುದನ್ನು ಕಂಡುಕೊಂಡಿತು.

೧೯೫೦ – ೫೨ರಲ್ಲಿ ಕಾಗೋಡು ಸತ್ಯಾಗ್ರಹ ನಡೆದ ಮರು ವರ್ಷವೇ ನಡೆದ ಚುನಾವಣೆಗಳಲ್ಲಿ, ಕಾಗೋಡು ಹೋರಾಟದ ನಾಯಕತ್ವ ವಹಿಸಿದ್ದ ಗೋಪಾಲಗೌಡರು ಆಯ್ಕೆಯಾಗಿದ್ದು ಸಹಜವೇ ಆಗಿತ್ತು. ಒಟ್ಟಿನಲ್ಲಿ ಇಬ್ಬರು ಸದಸ್ಯರು ಮಾತ್ರ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕರ್ನಾಟಕದ ರಾಜಕೀಯ ಭವಿಷ್ಯಕ್ಕೆ ಇದು ಮಹತ್ವದ ಪರಿಣಾಮ ಬೀರಿತು. ಹುಬ್ಬಳ್ಳಿ ಪ್ರಾಂತದಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷ ಸ್ಪರ್ಧಿಸಲೂ ಸಾಧ್ಯವಾಗಲಿಲ್ಲ. ಹಳೇ ಮೈಸೂರು ಪ್ರಾಂತದಲ್ಲಿ ಮಾತ್ರ ‘ಸಮಾಜವಾದಿ ಪಕ್ಷ’ ಪ್ರಭಾವಲಯವನ್ನು ಸೃಷ್ಟಿಸಿಕೊಂಡಿತ್ತು.

ದೇಶಮಟ್ಟದಲ್ಲಂತೂ ಲೋಹಿಯಾ ನಾಯಕತ್ವದ ‘ಸಮಾಜವಾದಿ ಪಕ್ಷ’ ಮೊದಲ ಸಾರ್ವತ್ರಿಕ ಚುನಾವಣೆಗಳಲ್ಲಿ ನಿರೀಕ್ಷೆಗಿಂತ ತೀರಾ ಕಡಿಮೆ ಕ್ಷೇತ್ರಗಳಲ್ಲಿ ‘ಲೋಕಸಭೆ’ಗೆ ಪ್ರಾತಿನಿಧಿತ್ವ ಪಡೆಯಿತು. ಕೆ.ಎಂ.ಪಿ.ಪಿ.ಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನಿರಲಿಲ್ಲ. ಚುನಾವಣೆಗಳ ಮೂಲಕ ಮಹತ್ವದ್ದನ್ನು ಸಾಧಿಸಬಹುದೆಂಬ ನಿರೀಕ್ಷೆ ಹುಸಿಹೋದ ಹಿನ್ನೆಲೆಯಲ್ಲಿ ೧೮೫೩ರಲ್ಲಿ ಕೆ.ಎಂ.ಪಿ.ಪಿ. ಮತ್ತು ಸಮಾಜವಾದಿ ಪಕ್ಷಗಳು ವಿಲೀನಗೊಂಡು ‘ಪ್ರಜಾ ಸಮಾಜವಾದಿ ಪಕ್ಷ’ ರೂಪ ಪಡೆಯಿತು.

‘ಪ್ರಜಾ ಸಮಾಜವಾದಿ ಪಕ್ಷ’ ಭಾರತದ ರಾಜಕೀಯ ಚರಿತ್ರೆಯಲ್ಲಿ ಹಲವು ಕಾರಣಗಳಿಂದ ಮುಖ್ಯವಾಗುತ್ತದೆ. ಇದು ವಸಾಹತೋತ್ತರ ಭಾರತದ ‘ಧೃವೀಕರಣ ರಾಜಕಾರಣ’ದ ಮೊದಲ ಉದಾಹರಣೆ ಎನ್ನಬೇಕು. ಸಮಾನ ಧ್ಯೇಯ ರಾಜಕೀಯ ಹಿತಾಸಕ್ತಿಗಾಗಿ ಭಿನ್ನ ಸೈದ್ಧಾಂತಿಕ ನೆಲೆಗಳ ಸಮನ್ವಯವೆಂಬ ಹೊಸ ರಾಜನೀತಿ ಸೃಷ್ಟಿಯಾಗಿದ್ದು ಈ ರಾಜನೀತಿಯ ಮೂಲಕ. ವಾಸ್ತವದಲ್ಲಿ ಇದು ವಿರೋಧಾಭಾಸಗಳ ಸಂಗಮವೇ ಆಗಿತ್ತು. ಕೆ.ಎಂ.ಪಿ.ಪಿ.ಯ ಆಚಾರ್ಯ ಕೃಪಲಾನಿಯವರು ಗಾಂಧಿವಾದಿಯಾಗಿದ್ದರೆ, ಸಮಾಜವಾದಿ ಪಕ್ಷ ಇನ್ನೂ ಮಾರ್ಕ್ಸವಾದಿ ತಳಹದಿಯಿಂದ ಪೂರ್ಣ ಕಳಚಿರಲಿಲ್ಲ. ಆ ಹೊತ್ತಿಗೂ ಇದ್ದ ಸಮಾಜವಾದಿ ಪಕ್ಷ ಅದು ‘ಮಾರ್ಕ್ಸ್‌ವಾದಿ’ಯೇ ಆಗಿತ್ತು ಎಂದು ಹಲವರು ಗುರುತಿಸುತ್ತಾರೆ. ಹಾಗೆಂದೇ ಮಾರ್ಕ್ಸ್‌ವಾದದ ಸಂಕೇತವಾಗಿ ಕೆಂಪು ಬಣ್ಣದ ಧ್ವಜವನ್ನೂ ಗಾಂಧಿವಾದದ ಸಂಕೇತವಾಗಿ ಚರಕ ಹಾಗೂ ಚಕ್ರದ ಚಿತ್ರಗಳನ್ನೂ ಹೊಂದಿ ಪ್ರಜಾ ಸಮಾಜವಾದಿ ಪಕ್ಷದ ಧ್ವಜ ಆಕಾರ ಪಡೆಯಿತು.

೧೯೫೨ರಲ್ಲಿ ಪಂಚಮಡಿಯಲ್ಲಿ ನಡೆದ ಸಮಾಜವಾದಿ ಪಕ್ಷದ ಸಮ್ಮೇಳನದಲ್ಲಿ ಸಮಾಜವಾದಿ ಪಕ್ಷಗಳು ಜೊತೆಗೂಡಿ ದೇಶವನ್ನು ಸಂಪೂರ್ಣ ಕ್ರಾಂತಿಯತ್ತ ಕೊಂಡೊಯ್ಯಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತಾದರೂಈ ಕ್ರಾಂತಿಯ ಸ್ವರೂಪ ಮತ್ತು ಸಿದ್ಧತೆಗಳ ಬಗ್ಗೆ ಸಾಕಷ್ಟು, ಸ್ಪಷ್ಟನೆಗಳ ಕೊರತೆಯಿತ್ತು. ಇಲ್ಲದಿದ್ದರೆ ವರ್ಷದೊಳಗಾಗಿ ಗಾಂಧೀವಾದಿ ಕೆ.ಎಂ.ಪಿ.ಪಿ. ಜೊತೆ ಮೈತ್ರಿಯಾಗಬೇಕಿರಲಿಲ್ಲ. ಕೆ.ಎಂ.ಪಿ.ಪಿ.ಯನ್ನು ‘ಸಮಾಜವಾದಿ’ ಪಕ್ಷ ಎಂದು ವ್ಯಾಖ್ಯಾನಿಸಲೂ ಸಾಧ್ಯವಿರಲಿಲ್ಲ. ಬದಲಾಗಿ ಲೋಹಿಯಾ ಅವರು ‘ಮತಪೆಟ್ಟಿಗೆ’ ರಾಜಕಾರಣಕ್ಕೆ ನೀಡಿದ ಪ್ರಾಧಾನ್ಯತೆಯ ಪರಿಣಾಮವಾಗಿ ‘ಪ್ರಜಾ ಸಮಾಜವಾದಿ’ ಪಕ್ಷ ಪ್ರಕಟಗೊಂಡಿತ್ತು ಎನಿಸುತ್ತದೆ. ದೇಶವನ್ನು ಸಂಪೂರ್ಣ ಕ್ರಾಂತಿಯೆಡೆಗೆ ಕೊಂಡೊಯ್ಯುವ ಮಾರ್ಗ ಚುನಾವಣೆಗಳೆಂದೂ ಲೋಹಿಯಾ ಭಾವಿಸಿರಲಿಕ್ಕೂ ಸಾಕು. ರಾಜಕೀಯ ಚರಿತ್ರೆಯಲ್ಲಿ ಕ್ರಾಂತಿಯ ಪರಿಕಲ್ಪನೆಯೂ ಉದಾರವಾಗಿ ವ್ಯಾಖ್ಯಾನಿಸಲ್ಪಟ್ಟಿದ್ದಕ್ಕೂ ಪ್ರಜಾಸಮಾಜವಾದಿ ಪಕ್ಷದ ಸಂದರ್ಭ ಉಲ್ಲೇಖಾರ್ಹ. ನಂತರದಲ್ಲಿ ಜಯಪ್ರಕಾಶ ನಾರಾಯಣರ ಸಂಪೂರ್ಣ ಕ್ರಾಂತಿಯ ಪರಿಕಲ್ಪನೆ ಇಂತಹ ಸರಳ ತೀರ್ಮಾನದಿಂದಲೇ ಹೊರಹೊಮ್ಮಿತ್ತು ಎನಿಸುತ್ತದೆ. ರಷ್ಯಾದ ಸಮಾಜವಾದಿ ಕ್ರಾಂತಿಯ ಪ್ರೇರಣೆ ಪಡೆದಿದ್ದ ಭಾರತೀಯ ಸಮಾಜವಾದ ಕ್ರಮೇಣ ಸಂಸದೀಯ ಪ್ರಜಾಪ್ರಭುತ್ವಕ್ಕೆ ಜನತಾಂತ್ರಿಕ ಪ್ರಜಾಪ್ರಭುತ್ವವನ್ನು ಅನ್ವಯಿಸಿತು. ‘ಮತ ಪೆಟ್ಟಿಗೆ’ ಸೈದ್ಧಾಂತಿಕ ರಾಜಕಾರಣವನ್ನು ಹಿಂದಕ್ಕಟ್ಟಿ ರಾಜನೀತಿಯನ್ನು ‘ತಂತ್ರಗಾರಿಕೆ’ಯಾಗಿಸಿತು. ಸಾಮ್ರಾಜ್ಯಶಾಹಿ ಆರ್ಥಿಕತೆಯ ಜಾಗತೀಕರಣಕ್ಕೊಳಪಟ್ಟಿ ಭವಿಷ್ಯದ ಭಾರತದಲ್ಲಿ ಪ್ರಜಾಪ್ರಭುತ್ವ ರಾಜಕೀಯ ಮಾರುಕಟ್ಟೆಯಾಗಿ ಮಾರ್ಪಟ್ಟ ಹಿನ್ನೆಲೆಯಲ್ಲಿ ಚರಿತ್ರೆಯಲ್ಲಾದ ಪ್ರಜಾಪ್ರಭುತ್ವ ಮತ್ತು ಕ್ರಾಂತಿಯ ಪರಿಕಲ್ಪನೆಗಳ ಸರಳೀಕರಣಗಳು ನೀಡಿರಬಹುದಾದ ಕೊಡುಗೆಯನ್ನೂ ಕಂಡುಕೊಳ್ಳಬೇಕಾಗುತ್ತದೆ.

ಸಮಾಜವಾದಿ ಪಕ್ಷದ ಪ್ರಮುಖರಲ್ಲಿ ಒಬ್ಬರಾಗಿದ್ದ ಅಶೋಕ ಮೆಹ್ತಾ ೧೯೬೩ರ ನಂತರ ‘ಹಿಂದುಳಿದ ಆರ್ಥಿಕತೆಯ ಒತ್ತಡಗಳು’ ಎಂಬ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿದರು. ಅವರ ಪ್ರಕಾರ ಆಳುವ ಪಕ್ಷವಾಗಿದ್ದ ಕಾಂಗ್ರೆಸ್ಸಿನ ಜೊತೆಗಿದ್ದು ಸಮಾಜವಾದಿಗಳು ಆಡಳಿತಾತ್ಮಕವಾಗಿ ಸಹಕರಿಸಬೇಕಿತ್ತು. ಹಿಂದುಳಿದ ಆರ್ಥಿಕತೆಯಲ್ಲಿ ವಿರೋಧ ಪಕ್ಷದಿಂದಾಗಿ ಆರ್ಥಿಕಾಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಹೊಸ ‘ಸಿದ್ಧಾಂತ’ ಮಂಡಿಸಿದ ಅಶೋಕ ಮೆಹ್ತಾ ಆಳುವ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ‘ಸಂಧಾನ ವಲಯ’ದ ಕಲ್ಪನೆ ಪ್ರಸ್ತುತಪಡಿಸಿದರು. ದೇಶದ ಆರ್ಥಿಕಾಭಿವೃದ್ಧಿಗಾಗಿ ‘ಈ ಸಂಧಾನದ ವಲಯ’ದಲ್ಲಿ ಸಮಾಜವಾದಿಗಳು ಆಳುವ ಕಾಂಗ್ರೆಸ್ ಗೆ ಸಹಕರಿಸಬೇಕೆಂಬ ನೀತಿ ಸಮಾಜವಾದಿಗಳ ನಡುವೆ ವಿಪರೀತ ಗೊಂದಲವನ್ನು ಸೃಷ್ಟಿಸಿತು. ಕೊನೆಗೆ ಅಶೋಕ ಮೆಹ್ತಾ ತಮ್ಮ ಬೆಂಬಲಿಗ ಸಮಾಜವಾದಿಗಳೊಡನೆ ಕಾಂಗ್ರೆಸ್ ಗೆ ವಲಸೆ ಹೋಗುವುದರೊಂದಿಗೆ ಸಮಾಜವಾದಿಪಕ್ಷ ಗಮನಾರ್ಹವಾಗಿ ಶಕ್ತಿಗುಂದಿತು. ಅಶೋಕ ಮೆಹ್ತಾರ ಬೆಂಬಲಿಗರಲ್ಲಿ ಕರ್ನಾಟಕದ ವೈ. ಈಶ್ವರಪ್ಪ ಕೂಡ ಒಬ್ಬರಾಗಿದ್ದರು. ಅಶೋಕ ಮೆಹ್ತಾ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ವಲಸೆ ಹೋಗುವ ಅನೇಕ ಸಮಾಜವಾದಿಗಳಿಗೆ ‘ಉಲ್ಲೇಖ’ವಾದರು. ಮೆಹ್ತಾ ಪ್ರತಿಪಾದಿಸಿದ ‘ಸಂಧಾನ ವಲಯ’ ಪಕ್ಷಾಂತರಿ ಸಮಾಜವಾದಿಗಳ ಸಮರ್ಥನೆಯಾಗುವಂತಾಯಿತು.

ಅಶೋಕ ಮೆಹ್ತಾ ಕಾಂಗ್ರೆಸ್ಸಿಗೆ ಹೋದ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಕಾಗೋಡು ತಿಮ್ಮಪ್ಪ ಎಸ್. ಬಂಗಾರಪ್ಪ ಆದಿಯಾಗಿ ಹಲವರು ಸಮಾಜವಾದಿ ಪಕ್ಷಕ್ಕೆ ತಿಲಾಂಜಲಿ ಹೇಳಿ ಆಳುವ ಕಾಂಗ್ರೆಸ್ಸಿನ ಭಾಗವಾದರು. ಸಮಾಜವಾದಿ ಹಿನ್ನೆಲೆಯ ಮುಂಚೂಣಿಯ ಹೋರಾಟಗಾರರು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ಸಿಗೆ ಹೋಗುವ ಪ್ರಕ್ರಿಯೆ ರಾಜಮಾರ್ಗವನ್ನೇ ಸೃಷ್ಟಿಸಿತು. ಇಂತಹ ಪರಿಣಾಮಗಳಿಂದಾಗಿ ಸಮಾಜವಾದಿ ಚಳವಳಿ ೧೯೬೦ರ ದಶಕದಲ್ಲಿ ಸಮಾಜವಾದಿ ರಾಜಕಾರಣ ಮಾತ್ರವಾಗಿ ಮಾರ್ಪಟ್ಟಿತು.

ದೇಶಮಟ್ಟದಲ್ಲಿ ಸಮಾಜವಾದಿ ಪಕ್ಷಕ್ಕೆ ಚರಿತ್ರೆಯುದ್ದಕ್ಕೂ ದೀರ್ಘ ಕಾಲದ ಸ್ಥಿರತೆ ಸಾಧ್ಯವಾಗಲೇ ಇಲ್ಲ. ಪಕ್ಷದ ವಿಘಟನೆ ಮತ್ತು ಪುನರ್ರಚನೆಗಳಿಗೆ ಸೈದ್ಧಾಂತಿಕ ಸಮರ್ಥನೆಯ ಆಳದಲ್ಲಿ ವ್ಯಕ್ತಿಗತ ಧೋರಣೆಗಳು ಪ್ರಧಾನ ಪಾತ್ರ ನಿರ್ವಹಿಸಿದವು. ಬಹಮತದ ಪ್ರಜಾಸತ್ತಾತ್ಮಕ ತೀರ್ಮಾನಕ್ಕೆ ಬದ್ಧವಾಗ ಬೇಕಿರುವ ಕಡೆ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಜಾರಿಯಲ್ಲಿಡುವ ಮನೋಭಾವ ಅಧಿಕಾರ ರಾಜಕೀಯದ ಸೆಳೆತದಿಂದ ಸೃಷ್ಟಿಸಲ್ಪಟ್ಟಿತ್ತು. ಅಶೋಕ ಮೆಹ್ತಾರ ವಲಸೆ ಒಂದು ಉದಾಹರಣೆ ಮಾತ್ರ. ಲೋಹಿಯಾ ಪ್ರಜಾ ಸೋಷಲಿಸ್ಟ್ ಪಕ್ಷವನ್ನು ಬಿಟ್ಟು ಹೊರ ನಡೆದು ಮತ್ತೊಮ್ಮೆ ಸಮಾಜವಾದಿ ಪಕ್ಷ ಕಟ್ಟಿಕೊಂಡರು. ಮರಳಿ ಪ್ರಜಾ ಸೋಷಲಿಸ್ಟ್ ಪಕ್ಷದ ಜೊತೆ ವಿಲೀನಗೊಂಡು ಸಂಯುಕ್ತ ಸಮಾಜವಾದಿ ಪಕ್ಷ ರಚನೆಯಾಯಿತು. ಅದೇ ವರ್ಷ ಪ್ರಜಾ ಸಮಾಜವಾದಿ ಪಕ್ಷ ಮತ್ತೆ ತನ್ನ ಪ್ರತ್ಯೇಕತೆ ಉಳಿಸಿಕೊಳ್ಳಲು ಹೆಣಗಿತು. ೧೯೭೧ರಲ್ಲಿ ಮತ್ತೊಮ್ಮೆ ‘ಸಮಾಜವಾದಿ ಪಕ್ಷ’ ರಚನೆಯಾಯಿತು. ಪಕ್ಷ ರಾಜಕಾರಣದಿಂದ ದೂರವಿದ್ದ ಜೆ.ಪಿ. ಸಂಪೂರ್ಣಕ್ರಾಂತಿ ಆಂದೋಲನ ಶುರು ಮಾಡಿದರು. ಸಮಾಜವಾದಿ ಪಕ್ಷದ ನಾಯಕ ಕಾರ್ಯಕರ್ತರೆಲ್ಲ ಸಂಪೂರ್ಣ ಕ್ರಾಂತಿ ಆಂದೋಲನದಲ್ಲಿ ಮುಳುಗಿದರು. ತುರ್ತುಪರಿಸ್ಥಿತಿ ನಂತರ ಭಾರತೀಯ ಜನಸಂಘದ ಜೊತೆಗೂಡಿ ಜನತಾ ಪಕ್ಷ ಕಟ್ಟಿಕೊಂಡರು. ಜನತಾ ಪಕ್ಷ ಸಿಡಿದು ‘ಭಾರತೀಯ ಜನತಾ ಪಕ್ಷ’ ಕಟ್ಟಿಕೊಂಡ ನಂತರದಲ್ಲಿ ಸಮಾಜವಾದಿಗಳು ‘ಜನತಾ ದಳ’ದಲ್ಲಿ ಒಂದುಗೂಡಿದರು. ಮತ್ತೆ ಜನತಾ ದಳದಲ್ಲೂ ವಿಭಜನೆಗಳಾಗಿ ಜನತಾದಳ ಸಂಯುಕ್ತ ಜನತಾ ದಳ, ಜಾತ್ಯಾತೀತ ಜನತಾ ದಳ, ಸಮತಾ ಪಕ್ಷ ಹೀಗೆ ಮತ್ತೆ ತುಂಡುರಿಸಿತು. ಭಾರತದ ಸಮಾಜವಾದ ಚಳವಳಿಯ ಸ್ವರೂಪ ೬೦ರ ದಶಕದಲ್ಲಿ ಕೊನೆಗೊಂಡು, ರಾಜಕೀಯ ರಂಗದಲ್ಲಿ ಸೈದ್ಧಾಂತಿಕ ಸ್ವರೂಪ, ಸ್ಥಿರತೆಗಳು ಮಾಯವಾದವು.

ಸಮಾಜವಾದ ಈ ಎಲ್ಲ ಮಿತಿಗಳು ಮತ್ತು ದೋಷಗಳ ಸಹಿತ ಭಾರತದ ರಾಜಕಾರಣದಲ್ಲಿ ಮೂಡಿಸಿದ ಸಮಾಜ ನಿಷ್ಠೆ ಹಾಗೂ ಜನಸಾಮಾನ್ಯ ವರ್ಗದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ನಿರ್ವಹಿಸಿದ ರಾಜಕೀಯ ಪಾತ್ರವೂ ಮಹತ್ತರವಾದುದು. ಕಮ್ಯುನಿಷ್ಟ್ ಪಕ್ಷಗಳು ಶ್ರಮಿಕವರ್ಗ ಅಥವಾ ತಳಸಮುದಾಯಗಳ ಪರವಾಗಿ ವರ್ಗ ಸಂಘಟನೆಗಳ ಮೂಲಕ ಹೋರಾಟ ಮತ್ತು ಚುನಾವಣಾ ರಾಜಕೀಯ ಪ್ರಕ್ರಿಯೆಗಳಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಕ್ರಿಯಾಶೀಲವಾಗಿದ್ದ ಸಂದರ್ಭದಲ್ಲಿ, ಸಮಾಜವಾದಿ ಪಕ್ಷಗಳು ಬಹುಸಂಖ್ಯಾತ ಮಧ್ಯಮ ವರ್ಗದ ಹಿತಾಸಕ್ತಿಯ ವಿಷಯಾಧಾರಿತ ರಾಜಕೀಯ ಚಟುವಟಿಕೆಗಳನ್ನು ದೇಶವ್ಯಾಪಿಗೊಳಿಸಿದವು. ಭಾರತದ ಸಾಂಸ್ಕೃತಿಕ ಚರಿತ್ರೆಯ ನೆಲೆಯಲ್ಲಿ ಜನಸಮುದಾಯಗಳ ಬದುಕನ್ನು ನಿರ್ವಚಿಸಿದ ಲೋಹಿಯಾ ರಾಜಕೀಯವನ್ನೂ ಪರ್ಯಾಯ ಸಾಂಸ್ಕೃತಿಕ ದೃಷ್ಟಿಕೋನದ ಮೂಲಕವೇ ನಿರೂಪಿಸಿದರು. ಕೆಳ ಸಮುದಾಯಗಳಿಗೆ ಆದ್ಯತೆ ನೀಡುವ ಸಾಂಸ್ಕೃತಿಕ ಧೋರಣೆಯನ್ನು ರಾಜಕಾರಣಕ್ಕೂ ಅನ್ವಯಿಸಿದರು. ಆ ಮೂಲಕ ಕೆಳವರ್ಗವೇ ಆಗಿ ಹೋದ, ಕೆಳಜಾತಿಗಳ ಆರ್ಥಿಕ ಸ್ವಾತಂತ್ರ್ಯ ಸಾಧ್ಯವಾದೀತೆಂದು ಭಾವಿಸಿದ್ದರು. ಲೋಹಿಯಾರ ಈ ಬಗೆಯ ಸಾಂಸ್ಕೃತಿಕ ಪ್ರಜ್ಞೆಯಿಂದ ಹೊಮ್ಮಿದ ರಾಜಕೀಯ ಧೋರಣೆಗಳಿಂದಾಗಿ ಕೆಳವರ್ಗವನ್ನು ಪ್ರತಿನಿಧಿಸಿ ಪಕ್ಷದಲ್ಲಿ ನಾಯಕತ್ವ ಕಾನಿಸಿಕೊಂಡಿತು. ಎರಡನೆಯ ತಲೆಮಾರಿನ ‘ಕಾರ್ಯಕರ್ತರು ಭವಿಷ್ಯದ – ಭಾರತದ ರಾಜಕಾರಣದಲ್ಲಿ ನಿರ್ಣಾಯಕ ಸಾಮರ್ಥ್ಯ ಪಡೆದರು. ಕರ್ಪೂರಿ ಠಾಕೂರ್ ರಂತಹ ಕ್ಷೌರಿಕ ಸಮುದಾಯದ ಪ್ರಾತಿನಿಧಿಕ ವ್ಯಕ್ತಿತ್ವ ಸಮಾಜವಾದಿ ಪಕ್ಷದ ಸರಕಾರದಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಈ ಅಂಶಗಳು ಕರ್ನಾಟಕವನ್ನೂ ಪ್ರಭಾವಿಸಿದವು.

ಚಳವಳಿಯಲ್ಲಿ ಸಕ್ರಿಯವಾಗಿದ್ದ ಹುಬ್ಬಳ್ಳಿ ಭಾಗದ ಕಾರ್ಯಕರ್ತ “ಕ್ಷೌರಿಕರ ಯಲ್ಲಪ್ಪನನ್ನು ನಾನು ಲೋಹಿಯಾರಿಗೆ ಪರಿಚಯಿಸಬೇಕಿತ್ತು. ಪರಿಚಯಿಸದೇ ತಪ್ಪು ಮಾಡಿದೆ” ಎಂದು ಕೆ.ಎಸ್. ಕಾರಂತರು ಪಶ್ಚಾತ್ತಾಪ ಪಡುತ್ತಾರೆ. ಒಬ್ಬ ಯಲ್ಲಪ್ಪ ಮಾತ್ರವಲ್ಲ, ಕರ್ನಾಟಕದ ಸಮಾಜವಾದಿ ಚಳವಳಿ ಇಂತಹ ಅನೇಕರನ್ನು ಒಳಗೊಂಡಿತ್ತು. ರಾಜೇಸಾಬ್ ಜಾಲಿಹಾಳ್, ಬಾಬೂಸಾಬ ಎಲಿಗಾರ್, ವಜೀರೆಸಾಬ್ ನಾಲಬಂದ್ ಇಂತಹ ಅಲ್ಪಸಂಖ್ಯಾತ ಹಿನ್ನೆಲೆಯ ಕಾರ್ಯಕರ್ತರು ಚಳವಳಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದರು. ಶಿವಮೊಗ್ಗದಲ್ಲಿ ಅಗಸರ ಭರಮಪ್ಪ ಜನರ ನಡುವಿನ ನಾಯಕನಾಗಿ ಹೊರಹೊಮ್ಮಿದ್ದ. ಆತ ಮುನ್ಸಿಪಲ್ ಕೌನ್ಸಿಲರ್ ಕೂಡ ಆಗಿದ್ದ. ಆದರೆ ಕರ್ನಾಟಕದ ಸಾಂಸ್ಕೃತಿಕ ವಾಸ್ತವ ಮತರಾಜಕಾರಣದಲ್ಲಿ ಕೆಳವರ್ಗ ಮತ್ತು ಹಿಂದುವಳಿದ ವರ್ಗಗಳನ್ನು ಹಿಂದಕ್ಕೆ ತಳ್ಳಿತು. ಮಧ್ಯಮ ವರ್ಗ ಮತ್ತು ಪ್ರಧಾನ ಸಾಂಸ್ಕೃತಿಕ ಹಿನ್ನೆಲೆಯ ನಾಯಕತ್ವ ಸಮಾಜವಾದಿ ರಾಜಕಾರಣವನ್ನು ನಿರ್ದೇಶಿಸಿತು.

ಕೆಳಜಾತಿ ಸಮುದಾಯಗಳಿಗೆ ಅಧ್ಯತೆ ನೀಡುವ ಲೋಹಿಯಾರ ಚಿಂತನೆಗಳು ಕರ್ನಾಟಕದ ‘ಅಧಿಕಾರ ರಾಜಕಾರಣದಲ್ಲಿ’ ವಾಸ್ತವಕ್ಕಿಳಿಯದೇ ಹೋದವು. ಸ್ವಲ್ಪ ಮಟ್ಟಿಗೆ ಹಿಂದುಳಿದ ಹಾಗೂ ಮಧ್ಯಮ ಮತ್ತು ಬಹುಸಂಖ್ಯಾತ ಜಾತಿ ಸಮುದಾಯದಿಂದ ಬಂದ ನಾಯಕತ್ವ ಕಾಣಿಸಿಕೊಂಡ ಪರಿಣಾಮ ಕೆಳಜಾತಿ ಸಮುದಾಯಗಳು ಕಾಂಗ್ರೆಸ್ ಜೊತೆ ಶಾಶ್ವತವಾಗಿ ಗುರುತಿಸಿಕೊಂಡವು. ಬಹುಸಂಖ್ಯಾತ ಜಾತಿ ಸಮುದಾಯಗಳಿಗಿದ್ದ ‘ಸಾಂಸ್ಕೃತಿಕ ಯಜಮಾನ್ಯ’ ಚಳವಳಿಯಲ್ಲಿಯೂ ಪ್ರಭಾವ ಬೀರಿತು. ಪಾಳೇಗಾರಿ ಭೂಸಂಬಂಧಗಳಿದ್ದ ಗ್ರಾಮೀಣ ಪ್ರದೇಶಗಳಲ್ಲಿ ಈ ಮಧ್ಯಮ ಮತ್ತು ಮುಂದುವರಿದ ಜಾತಿಗಳೇ ಭೂಮಾಲಕ ವರ್ಗವಾಗಿದ್ದವು. ಭೂವಂತ ಜಾತಿಗಳಿಗೆ ಭೂರಹಿತ ಜಾತಿಗಳು ಅವಲಂಬಿತ ಆರ್ಥಿಕತೆಯನ್ನು ಹೊಂದಿದ್ದವು. ವರ್ಗಸ್ವರೂಪದಲ್ಲಿ ಕಾಂಗ್ರೆಸ್ಸು ಭಿನ್ನವಾಗಿರಲಿಲ್ಲವಾದರೂ ರಾಜಕಾರಣದಲ್ಲಿ ಈ ವರ್ಗಗಳನ್ನು ಹಿಡಿದಿಟ್ಟಿತು. ಅಲ್ಲದೇ ಕಾಂಗ್ರೆಸ್ ಹಲವು ಬಗೆಯಲ್ಲಿ ‘ತಳಸಮುದಾಯ’ಗಳಿಗೆ ಅವಕಾಶ ಕಲ್ಪಿಸಿತು.

ಚಳವಳಿಯ ಸಂದರ್ಭದಲ್ಲಿಯೂ ತಳಜಾತಿ ಸಮುದಾಯಗಳು ದೂರವೇ ಉಳಿದವು. ಇಲ್ಲವೇ ಸಾಂಕೇತಿಕವಾಗಿ ಬಿಂಬಿಸಲಾಯಿತು. ಕಾಗೋಡು ಸತ್ಯಾಗ್ರಹದ ತೀವ್ರತೆಯ ಸಂದರ್ಭದಲ್ಲಿಯೂ ಅಲ್ಲಿಯ ದಲಿತ ಸಮುದಾಯ ಸತ್ಯಾಗ್ರಹದಿಂದ ದೂರವೇ ಉಳಿದಿತ್ತು. ಅವರು ಗೇಣಿರೈತರೂ ಆಗಿರಲಿಲ್ಲ ಎಂಬುದು ಮುಖ್ಯ ಕಾರಣವಾದರೂ, ಜಾತಿ ಸಂಬಂಧಗಳೂ ಕಾರಣವಾದದ್ದನ್ನು ನಿರಾಕರಿಸುವಂತಿಲ್ಲ. ಸಂಡೂರು ಭೂಹೋರಾಟದ ನಾಯಕತ್ವ ಲಿಂಗಾಯತ ಸಮಾಜವಾದಿಗಳ ಕೈಯಲ್ಲಿತ್ತು. ಯಜಮಾನ ಶಾಂತರುದ್ರಪ್ಪ, ಎಲಿಗಾರ ತಿಮ್ಮಪ್ಪ, ಕೆ.ಜಿ. ಮಹೇಶ್ವರಪ್ಪ, ಎಲ್ಲರೂ ಲಿಂಗಾಯಿತರು. ಎಂ. ಪಿ. ಪ್ರಕಾಶ್ ಜಂಗಮರು. ಸಂಡೂರು ರಾಜ ಮರಾಠನೆಂಬುದೂ, ಹೋರಾಟ ಆರಂಭಗೊಂಡ ಕಾರಣಗಳಲ್ಲಿ ಒಂದಾಗಿತ್ತು. ಹೋರಾಟದ ನಂತರ ಹೆಚ್ಚು ಪಾಲು ಭೂಮಿ ಪಡೆದವರೂ ಲಿಂಗಾಯಿತರು. ಎರಡನೆಯ ಸ್ಥಾನ ಬೇಡ ಜನಾಂಗ. ಬೇಡ ಸಮುದಾಯ ನಂತರದಲ್ಲಿ ಭೂಮಿ ಪಡೆಯಿತಾದರೂ ಹೋರಾಟದಿಂದ ನಿಗದಿತ ಅಂತರದಲ್ಲಿತ್ತು. ಹೀಗಿದ್ದ ಸ್ವರೂಪಕ್ಕೆ ‘ಆದರ್ಶ’ದ ಚಹರೆ ನೀಡುವ ಪ್ರಯತ್ನವಾಗಿ ಹರಿಜನ ಬುಡ್ಡಮ್ಮ, ಹರಿಜನ ಮಾರಮ್ಮರನ್ನು ಕರೆತರಲಾಗಿತ್ತು. ಹೋರಾಟದ ಕೊನೆವರೆಗೂ ಇದ್ದ ಇವರಿಬ್ಬರೂ ಭೂರಹಿತರಾಗಿದ್ದರು. ಹೋರಾಟದ ನಂತರವೂ ಇವರಿಗೆ ಭೂಮಿ ಸಿಗಲಿಲ್ಲ. ಹೆಬ್ಬಳ್ಳಿ ಹೋರಾಟದಲ್ಲಿ ಅದರ ನಾಯಕರಾಗಿದ್ದ ಪೂಜಾರರು “ಎದ್ದು ಕಾಣುವಂತೆ ನಮ್ಮ ಎಲ್ಲ ಸತ್ಯಾಗ್ರಹಗಳ ಮುಂದುಗಡೆಯಲ್ಲಿ ಹರಿಜನ, ಹುಲಸೇರ, ಬೋವಿಗಳನ್ನು ನಿಲ್ಲಿಸಲು ನಾವು ಮರೆತಿರಲಿಲ್ಲ. ಮೊದಲು ಬಂಧಿತರಾಗುತ್ತಿದ್ದವರೂ ಅವರೇ” ಎನ್ನುತ್ತಾರೆ. ಆದರೆ ಇವರು ಕೃಷಿ ಕೂಲಿಕಾರರಾಗಿದ್ದರು. ಅವರಿಗೆ ಹೋರಾಟದ ನಂತರ ಭೂಮಿ ಸಿಕ್ಕಿತೋ ಇಲ್ಲವೋ ತಿಳಿಯದು. “ಸಮಾಜವಾದಿ ಚಳವಳಿಗೆ ಸ್ವಲ್ಪಮಟ್ಟಿಗೆ ಹಿಂದುಳಿದ ಜಾತಿಗಳ ಬೆಂಬಲವಿದ್ದರೂ ಮಧ್ಯಮ ಜಾತಿಗಳ ಬೆಂಬಲವೇ ಅದರ ಆಧಾರವಾಗಿತ್ತು. ಮುಖಂಡತ್ವ ಮಾತ್ರ ಮಧ್ಯಮ ವರ್ಗದ ಕೈಯಲ್ಲಿ ಇತ್ತು ಎಂಬ ಬಾಪು ಹೆದ್ದರೂರ ಶೆಟ್ಟಿಯವರ ಅವಲೋಕನವನ್ನು ಇಲ್ಲಿ ಗಮನಿಸಬಹುದು.

ಕರ್ನಾಟಕದ ಸಮಾಜವಾದಿ ಚಳವಳಿಯ ಸಾಂಸ್ಕೃತಿಕ – ರಾಜಕೀಯ ಸ್ವರೂಪವನ್ನು ತಳಮೂಲಕ್ಕಿಳಿದು ನೋಡಲು ಈಗ ಲಭ್ಯವಾದ ಚಿತ್ರಣ ಪ್ರೇರೇಪಿಸುತ್ತದೆ. ಈ ಚರ್ಚೆಯು ಅನೇಕ ಸೂಕ್ಷ್ಮ ವಿವರಗಳನ್ನೂ ಒಳಗೊಂಡಿದೆ. ಸಮಾಜವಾದವೆಂಬುದು ಲೋಹಿಯಾರ ದೃಷ್ಟಿಯಲ್ಲಿ ಆರ್ಥಿಕ ಸಿದ್ಧಾಂತ ಮಾತ್ರ ಆಗಿರಲಿಲ್ಲ. ಅದು ‘ಸಾಂಸ್ಕೃತಿಕ ವಿವೇಕ’ವೂ ಜವಾಬ್ದಾರಿಯೂ ಆಗಿತ್ತು. ಈ ‘ವಿವೇಕ – ಜವಾಬ್ದಾರಿ’ಗಳು ಕರ್ನಾಟಕದಲ್ಲಿ ಹೇಗೆ ತಮ್ಮ ಪಾತ್ರ ನಿರ್ವಹಿಸಿದವು? ಚಳವಳಿಯ ಯಶಸ್ಸು ಮತ್ತು ಹಿನ್ನಡೆಯ ಮೇಲೆ ಈ ‘ಸಾಂಸ್ಕೃತಿಕ ಸೂಕ್ಷ್ಮತೆ’ಗಳು ಬೀರಿದ ಪ್ರಭಾವಗಳೇನು? ಇವುಗಳು ಪ್ರತ್ಯೇಕ ಅಧ್ಯಯನವನ್ನೇ ಬಯಸುತ್ತವೆ. ಕರ್ನಾಟಕದ ಸಮಾಜವಾದಿ ಚರಿತ್ರೆಯು ಈ ಬಗೆಯ ಅಧ್ಯಯನವಿಲ್ಲದೆ ಪರಿಪೂರ್ಣವೆನಿಸುವುದಿಲ್ಲ.

ಕರ್ನಾಟಕ ‘ಚುನಾವಣಾ ರಾಜಕಾರಣ’ದ ಹಿನ್ನೆಲೆಯಲ್ಲಿ ಈ ಸಾಂಸ್ಕೃತಿಕ ವಾಸ್ತವಗಳೆಡೆ ಇಲ್ಲಿ ಗಮನ ಹರಿಸಲಾಗಿದೆ. ಚುನಾವಣಾ ರಾಜಕಾರಣದಲ್ಲಿ ೬೦ರ ದಶಕದಿಂದಲೇ ‘ಜಾತಿ ಮತ್ತು ಹಣ’ದ ಪ್ರಭಾವ ಕಾಣಿಸಿಕೊಂಡಿತ್ತು ಎಂಬ ಹೇಳಿಕೆಗಳಿವೆಯಾದರೂ, ಭಾರತದಂತಹ ಸಮಾಜದಲ್ಲಿ ಸಾಮಾನ್ಯವಾಗಿ ಇವೆರಡರ ನಡುವೆ ಹೆಚ್ಚು ಅಂತರ ಉಳಿದಿಲ್ಲ. ಜಾತಿಯ ಯಜಮಾನ್ಯಕ್ಕೆ ವರ್ಗದ ಲಕ್ಷಣಗಳೂ ಇರುವ ಹಿನ್ನೆಲೆಯಲ್ಲಿ, ಚುನಾವಣಾ ಮಾರ್ಗದ ಮೂಲಕ ‘ಆಳುವ ಅಧಿಕಾರ’ ಪಡೆಯುವಲ್ಲಿ ಈ ‘ಯಜಮಾನ’ ಶಕ್ತಿಗಳೇ ಮುಂಚೂಣಿಯಲ್ಲಿರುವುದೂ ಚಾರಿತ್ರಿಕ ವಾಸ್ತವ. ಆದರೆ ಪ್ರಶ್ನೆ ಇರುವುದು ಜಾತಿಯನ್ನು ಭಿನ್ನ ನೆಲೆಯಲ್ಲಿ ಗ್ರಹಿಸಿದ, ಮತ್ತು ದುರ್ಬಲ ಜಾತಿಗೆ ಆದ್ಯತೆ ನೀಡುವ ಹಾಗೂ ದುರ್ಬಲ ವರ್ಗಕ್ಕೆ ಆರ್ಥಿಕ ಸ್ವಾತಂತ್ರ್ಯದ ಸ್ವಾವಲಂಬನೆಯ ಭರವಸೆ ನೀಡುವ ಸಮಾಜವಾದ ತಾನು ಚುನಾವಣಾ ರಾಜಕಾರಣದ ಮೂಲಕ ಹೇಗೆ ಭಿನ್ನವಾಯಿತು ಎಂಬುದನ್ನು ಕಂಡುಕೊಳ್ಳಬೇಕಿದೆ. ಜೊತೆಗೆ ‘ತಾತ್ವಿಕ ಬದ್ಧತೆ ಮತ್ತು ನೈತಿಕತೆ’ಯಂತಹ ಅಂಶಗಳು ಚುನಾವಣಾ ರಾಜಕಾರಣದ ಹಿನ್ನೆಲೆಯಲ್ಲಿ ಎಷ್ಟರ ಮಟ್ಟಿಗೆ ಸ್ಫುಟಗೊಂಡವು ಎಂಬುದನ್ನೂ ಕಂಡುಕೊಳ್ಳಬೇಕಾಗುತ್ತದೆ.

ಚಳವಳಿಯ ಮೂಲಕ ಮೂಡಿ ಬಂದ ವ್ಯಕ್ತಿತ್ವವಾಗಿ ಗ್ರಹಿಸಲಾಗುತ್ತಿರುವ ಸೊರಬದ ಬಂಗಾರಪ್ಪನವರ ಪ್ರಸ್ತಾಪದಲ್ಲಿ ನೀಲಗಂಗಯ್ಯ ಪೂಜಾರರು ವಿವರಿಸಿದ ಸಂದರ್ಭ ೬೦ರ ದಶಕದಲ್ಲಿಯೇ ಸಮಾಜವಾದಿ ರಾಜಕಾರಣ ಪಡೆದಿದ್ದ ಸ್ವರೂಪದ ಮೇಲೆ ಬೆಳಕು ಚೆಲ್ಲುತ್ತದೆ. “ಬಂಗಾರಪ್ಪನವರನ್ನು ಪಕ್ಷದೊಳಗೆ ತಗೋಬೇಕೋ, ಬ್ಯಾಡವೋ ಅನ್ನೋ ವಿಚಾರ ಬಂದಾಗ ಗೋಪಾಲಗೌಡ್ರು, ಪಟೇಲ್ರು, ತಿಮ್ಮಪ್ಪ ವಿರೋಧಿಸಿದ್ರು. ಅಂವ ನಂಬಿಕಸ್ಥ ಅಲ್ಲ, ಅವನ ನಿಷ್ಠೆ ಭಾಳಾ ಪ್ರಶ್ನಾರ್ಹ ಅಂತ. ಬಂಗಾರಪ್ಪ, ನನ್ನ ಕಡೆ ಬಂದು, ಅವರೇನೇ ಮಾಡಿದ್ರೂ ನಾನು ಚುನಾವಣೆಗೆ ನಿಲ್ಲಾಂವ, ನಿಂತ್ರೆ ನಾನು ಗೆಲ್ತೀನಿ. ಒಂದು ಪಕ್ಷ ನಾನು ಗೆಲ್ಲದಿದ್ರೂ ಸೋಷಲಿಸ್ಟ್ ಕ್ಯಾಂಡಿಡೇಟ್, ಕುಪ್ಪಗಡ್ಡೆ ಮರಿಯಪ್ಪ ಅಂತೂ ಗೆಲ್ಲಾದಿಲ್ಲ. ಈ ಸ್ಥಿತಿ ಅದಾ. ನೀವು ಹೇಳಿ ನನ್ನನ್ನು ಪಕ್ಷಕ್ಕೆ ಸೇರಿಸ್ಕೊಂಡು ಟಿಕೇಟ್ ಕೊಡ್ರೀ ಅಂತ. ನಾನು ಪಕ್ಷದೊಳಗೆ ಪ್ರಸ್ತಾಪ ಮಾಡಿದೆ. ಭಾಳಷ್ಟು ವಾದ – ವಿವಾದ ಆಗಿ ತಗೊಳ್ಳದಕ್ಕೆ ಒಪ್ಪಿದ್ರು. ಕಾರಣ ಏನಂತಂದ್ರೆ ಹ್ಯಾಗಿದ್ರೂ ನಾವು ಸೋಲ್ತೀವಿ. ಈ ಒಂದು ಕಾನ್ ಸ್ಟುಯೆನ್ಸಿಯೊಳಾಗ, ಬಂಗಾರಪ್ಪ ಆರಿಸಿ ರ್ತಾಬರ್ತಾನ ಅಂದ್ರ ಪಕ್ಷಕ್ಕೆ ತಗೊಳ್ಳಾನ ಅಂತಾ….” ಈ ಮಾತುಗಳು ಏನೆಲ್ಲಾ ಅರ್ಥಗಳನ್ನು ಸೂಚಿಸುತ್ತಿವೆಯಲ್ಲವೇ?

ಸಮಾಜವಾದಿ ಚುನಾವಣಾ ರಾಜಕಾರಣವನ್ನು ಅಥೈಸಿಕೊಳ್ಳಲು ಈ ಘಟನೆಯನ್ನು ಉದಾಹರಣೆಯನ್ನಾಗಿಸಿಕೊಳ್ಳಬಹುದೇ? ಹೀಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿ ವಿಧಾನಸಭಾ ಸದಸ್ಯರಾದ ಬಂಗಾರಪ್ಪ, ಸಂಡೂರು ಭೂಹೋರಾಟದ ಚರ್ಚೆ ಮತ್ತು ಆ ಹೋರಾಟದ ನಾಯಕತ್ವ ವಹಿಸಿದ್ದ ಎಲಿಗಾರ ತಿಮ್ಮಪ್ಪನವರನ್ನು ಪೋಲೀಸರು ಅಪಹರಿಸಿ, ಹಿಂಸೆ ನೀಡಿದ್ದ ಬಗ್ಗೆ ವಿಧಾನಸಭೆಯಲ್ಲಿ ತೀವ್ರ ವಾಗ್ವಾದಗಳಾದ ಸದಸ್ಯರಾಗಿದ್ದರು. ಆಗ ವಿಧಾನ ಸಭೆಯಲ್ಲಿ ಇದ್ದ ಮೂವರು ಸದಸ್ಯರ ಪೈಕಿ ಕಾಗೋಡು ತಿಮ್ಮಪ್ಪ ಮತ್ತು ಕೋಣಂದೂರು ಲಿಂಗಪ್ಪನವರು ಮಾತ್ರ ಗಂಭೀರವಾಗಿ ಅಧಿವೇಶನದಲ್ಲಿ ಚರ್ಚಿಸಿದ್ದರು.

ಕಾಗೋಡು ಸತ್ಯಾಗ್ರಹದ ಹಿನ್ನೆಲೆಯಿಂದ ಬಂದು ಚಾರಿತ್ರಿಕ ಪಾತ್ರ ನಿರ್ವಹಿಸಿದ ತಿಮ್ಮಪ್ಪ ಲಿಂಗಪ್ಪನಂಥವರು ಮತ್ತು ಬಂಗಾರಪ್ಪ ಕೂಡ, ಇವರೆಲ್ಲ ಸಮಾಜವಾದಿ ಪಕ್ಷದ ರಾಜಕೀಯ ವೈರಿಯಾಗಿದ್ದ ‘ಕಾಂಗ್ರೆಸ್ ಪಕ್ಷ’ಕ್ಕೆ ವಲಸೆ ಹೋಗಲು ಕಾರಣವೇನು? ಯಾಕವರು ಸಮಾಜ ವಾದದ ಭವಿಷ್ಯದ ಮೇಲೆ ಭರವಸೆ ಕಳೆದುಕೊಂಡರು ಎಂಬುದನ್ನೂ ಗಮನಿಸಬೇಕಾಗುತ್ತದೆ.

ಬದ್ಧತೆ ಮತ್ತು ಪ್ರಾಮಾಣಿಕತೆಗಳ ವಿಷಯದಲ್ಲಿ ಎಷ್ಟೇ ಪ್ರಾಮಾಣಿಕರಿದ್ದರೂ ಕೂಡ ಗೋಪಾಲಗೌಡರು ಕೂಡ ಚುನಾವಣೆ ರಾಜಕಾರಣದ ಹಿನ್ನೆಲೆಯಲ್ಲಿ ಪ್ರಶ್ನಾತೀತವಾಗೇನೂ ಉಳಿಯುವುದಿಲ್ಲ. ಗೋಪಾಲಗೌಡರು ಕಟ್ಟಾ ಸಮಾಜವಾದಿಯಾಗಿದ್ದರೂ, ಅಷ್ಟೇ ಕಟ್ಟಾ ಕಾಂಗ್ರೆಸ್ಸಿಗರಾಗಿದ್ದ ಕಡಿದಾಳ ಮಂಜಪ್ಪನವರ ಜೊತೆ ಪಕ್ಷ ನಿಷ್ಠೆ ಮೀರಿದ ಸ್ನೇಹ ಸಂಬಂಧಗಳಿದ್ದವು. ಕಡಿದಾಳ ಮಂಜಪ್ಪ ಕಾಗೋಡು ಹೋರಾಟ ತೀವ್ರತೆ ಪಡೆಯುತ್ತಿದ್ದ ಹೊತ್ತಿನಲ್ಲಿ ಅದರಿಂದ ಹಿಂದೆ ಸರಿದವರು. ಆದರೆ ಗೌಡರಿಗೆ ಮಂಜಪ್ಪನವರ ಮೇಲೆ ಅತೀವ ಅಭಿಮಾನವಿತ್ತು. ಆ ಕಾರಣಕ್ಕಾಗಿ ಕಡಿದಾಳ ಮಂಜಪ್ಪನವರ ಪ್ರತಿಸ್ಪರ್ಧಿಯಾಗಿ ನಿಲ್ಲಲು ನಿರಾಕರಿಸಿ ಬೇರೊಂದು ಮತಕ್ಷೇತ್ರವನ್ನು ಆರಿಸಿಕೊಂಡು ಸೋತರು. ಇಂತಹ ಹೊಂದಾಣಿಕೆಗಳು ಚಳವಳಿಗೆ ಪೆಟ್ಟು ನೀಡಿಲ್ಲವೆಂದು ಹೇಳುವುದಾದರೂ ಹೇಗೆ? ಯಾವ ರಾಜಕೀಯ ಪಕ್ಷದ ವಿರುದ್ಧ ಸಮರಶೀಲವಾಗಿ ಹೋರಾಡಬೇಕಾಗಿರುತ್ತದೋ ಅಂತಹ ಪಕ್ಷವನ್ನು ಪ್ರತಿನಿಧಿಸಿದವರೊಂದಿಗೆ ವೈಯಕ್ತಿಕ ಸ್ನೇಹ ಉಳಿಸಿಕೊಳ್ಳುವುದು ತಪ್ಪಲ್ಲವಾದರೂ ಚಳವಳಿಯ ಮೇಲೆ ಅಡ್ಡ ಪರಿಣಾಮ ಉಂಟು ಮಾಡಿದರೂ ಸಮರ್ಥನೀಯವೇ? ಗುಡಿಬಂಡೆಯ ಜಮೀನ್ದಾರ ಬಿ. ನಾರಾಯಣ ರೆಡ್ಡಿಯವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಲು ಗೋಪಾಲಗೌಡರು ತೋರಿಸಿದ ಆಸಕ್ತಿ, ಪಟ್ಟ ಶ್ರಮ ಸಮಾಜವಾದದ ಜಮೀನ್ದಾರ ವಿರೋಧಿ ಹೋರಾಟವನ್ನೇ ಅಣಕಿಸುತ್ತದೆ. ಕಾಗೋಡಿನ ಕೆ. ಜಿ. ಒಡೆಯರ್ ವಿರುದ್ಧ ನಡೆದಂತೆ ಹತ್ತಿರವೇ ಇದ್ದ ಬದರಿನಾರಾಯಣರಂತಹ ಭೂಮಾಲಕರ ವಿರುದ್ಧ ಗೌಡರು ಧ್ವನಿ ಎತ್ತದೇ ಇರುವುದರ ಬಗ್ಗೆ ಪೂಜಾರ್ ಗಮನ ಸೆಳೆಯುತ್ತಾರೆ. ಯಾಕೆ ಸಮಾಜವಾದಿಗಳು ದೂರ ದೃಷ್ಟಿ ಹಾಯಿಸಲಿಲ್ಲ? ಕೈಕಾಲುಗಳನ್ನು ಹರಡಲಿಲ್ಲ? ಧಾರವಾಡಕ್ಕೆ ಬಂದಾಗ ಕಾಂಗ್ರೆಸ್ ಗೆಳೆಯರನ್ನು ಕಾಣಲು ಹೋಗುತ್ತಿದ್ದ ಗೌಡರು ಸಮಾಜವಾದಿ ಮಿತ್ರರ ಬಳಿ ಹೋಗುತ್ತಿರಲಿಲ್ಲ. ಇಂತಹ ‘ವಿರೋಧಿ ಬಾಂಧವ್ಯಗಳು’ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದವು ಎಂಬ ಪೂಜಾರರ ಮಾತಿನಲ್ಲಿ ಹುರುಳಿಲ್ಲವೇ? ಅಂತಿಮವಾಗಿ ಪಕ್ಷ ಮುಖ್ಯವೋ, ಸ್ನೇಹ ಮುಖ್ಯವೋ? ಇಂತಹ ಪ್ರಶ್ನೆಗಳಿಗೆ ‘ಸೈದ್ಧಾಂತಿಕ ರಾಜಕಾರಣ’ ಖಚಿತ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಸ್ನೇಹ ಮುಖ್ಯವೆಂಬ ವಿಶಾಲ ಭಾವನೆಯ ಆದರ್ಶ, ಚಳವಳಿಯನ್ನು ಕಬಳಿಸಿದ್ದಕ್ಕೆ ಗೋಪಾಲ ಗೌಡರಾದಿಯಾಗಿ ಅನೇಕರಲ್ಲಿ ಉದಾಹರಣೆಗಳೂ ಸಿಗುತ್ತವೆ. ನೀಲಗಂಗಯ್ಯ ಪೂಜಾರರು ಶಾಸಕರಾಗಲು ‘ಸಮಾಜವಾದ’ ಎಷ್ಟೂ ಕಾರಣವಾಗದೆ ಅಂದಾನಪ್ಪನವರ ಬೆಂಬಲ ಮತ್ತು ಕಾಂಗ್ರೆಸ್ಸಿಗರಿಗೆ ಇನಾಮತಿಯವರ ಮೇಲಿದ್ದ ಸಿಟ್ಟು ಇವಷ್ಟೇ ಕಾರಣವಾಗಿದ್ದವು.

ಕೆಲವೊಮ್ಮೆ ಸಮಾಜವಾದಿ ಪಕ್ಷ ‘ಧಾರಾಳತನ’ದಿಂದ ಬೇರೆ ಪಕ್ಷದವರನ್ನು ತಮ್ಮೊಳಗೆ ಕರೆಸಿಕೊಂಡು ಬೆಳೆಸಿದ್ದು, ತಮ್ಮೊಳಗೆ ಬೆಳೆದವರು ಹೊರಹೋಗಲು ಬಾಗಿಲು ತೆರೆದಿದ್ದೂ ಇದೆ. ಹಾಗೆ ತೆರೆದ ಬಾಗಿಲ ಮೂಲಕ ಬಂದವರಲ್ಲಿ ಅಜೀಜ್ ಸೇಠ್ ಕೂಡ ಒಬ್ಬರು. ಸಮಾಜವಾದಿ ಪಕ್ಷಕ್ಕೆ ಅಜೀಜ್ ಸೇಠ್ ಬರಲು ತಾತ್ವಿಕ ನೈತಿಕತೆ ಮತ್ತು ಅರ್ಹತೆಗಳೇ ಇರಲಿಲ್ಲ. “ಮೈಸೂರಿನಿಂದ ನಮಗೊಂದು ಕ್ಯಾಂಡಿಡೇಟ್ ಬೇಕಾಗಿತ್ತು. ರ್ತೀಬರ್ತೀರಾ ಅಂದ್ವಿ ಬಂದ್ರು. ಅವರ್ನ್ ದೊಡ್ಡ ಲೀಡರ್ ಮಾಡಿದ್ವಿ ಎಂದು ನಿರುಮ್ಮಳ ನಗೆ ನಗುತ್ತಾರೆ, ಆಗಿನ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಕೆ.ಜಿ. ಮಹೇಶ್ವರಪ್ಪ.

ಕೆ.ಜಿ. ಮಹೇಶ್ವರಪ್ಪ, ಪಕ್ಷದ ಆರ್ಥಿಕ ಸ್ವರೂಪಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಗೋಪಾಲಗೌಡರ ಪಕ್ಷದ ಓಡಾಟಕ್ಕೆ ಹಣದ ಆಸರೆ ನೀಡುತ್ತಿದ್ದವರು ಕೆ.ಜಿ. ಮಹೇಶ್ವರಪ್ಪ. ಅಷ್ಟೇ ಅಲ್ಲ ಪಕ್ಷದ ರಾಜ್ಯ ಕಛೇರಿಗೆ ಬಾಡಿಗೆ ಕೊಡಲು ಆಗದ್ದಕ್ಕಾಗಿ ತಾವೇ ಬಾಡಿಗೆ ನೀಡುತ್ತಿದ್ದೆನೆಂದೂ, ಪಕ್ಷದ ಕಾರ್ಯಕರ್ತರಿಗೂ ಹಣ ನೀಡುತ್ತಿದ್ದೆನೆಂದು, ಪಕ್ಷಕ್ಕೆ ಬರುವ ಹೋಗುವವರ ಎಲ್ಲ ಖರ್ಚುಗಳನ್ನೂ ತಾವು ನೋಡಿಕೊಳ್ಳುತ್ತಿದ್ದುದಾಗಿ ಅಭಿಮಾನದಿಂದ ಹೇಳಿಕೊಳ್ಳುವ ಕೆ. ಜಿ. ಮಹೇಶ್ವರಪ್ಪನವರು ಒಂದರ್ಥದಲ್ಲಿ ಆರ್ಥಿಕ ವ್ಯವಹಾರಗಳ ನಾಯಕರು. ಲೀಡಿಂಗ್ ಲಾಯರ್ ಆಗಿದ್ದ ಅವರು ಆಗ ಧಾರಾಳ ಹಣ ಗಳಿಸುತ್ತಿದ್ದರು. ಆ ಹಣದಲ್ಲಿ ಪಕ್ಷದ ವೆಚ್ಚವನ್ನೂ ನೋಡಿಕೊಳ್ಳುತ್ತಿದ್ದರು. ಹಾಗಾಗಿ ಕೆ.ಜಿ. ಯವರ ಹಣ ಗಳಿಕೆಯ ನೈತಿಕತೆ ಪಕ್ಷಕ್ಕೆ ಸಂಬಂಧಿಸಿದ್ದಾಗಿರಲಿಲ್ಲ, ಅದು ವೃತ್ತಿ ಧರ್ಮವಾಗಿತ್ತು. ಕೆ. ಜಿ. ಮಹೇಶ್ವರಪ್ಪ ಬಳ್ಳಾರಿ ಜಿಲ್ಲೆಯ ಸಾರಿಗೆ ರಾಷ್ಟ್ರೀಕರಣವನ್ನು ಛಾಲೆಂಜ್ ಮಾಡಿ, ಖಾಸಗೀ ಸಾರಿಗೆ ಕಂಪನಿಗಳ ವಕೀಲರಾಗಿ ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದರು. ರಾಷ್ಟ್ರೀಕರಣದಿಂದ ಜನರಿಗೆ ತೊಂದರೆಯಾಗ್ತದೆ, ಖಾಸಗೀಕರಣದಿಂದ ಉತ್ತಮಸೇವೆ ಲಭ್ಯವಾಗ್ತದೆ ಎಂಬುದು ಇವರ ವಾದವಾಗಿತ್ತು. ಈ ವಾದದಲ್ಲಿ ಗೆದ್ದಿದ್ದರೂ ಕೂಡ. ತತ್ಫಲವಾಗಿ ಸಾಕಷ್ಟು ಗಳಿಸಿದ್ದರು. ರಾಷ್ಟ್ರೀಕರಣ ವಿರೋಧಿಸಿ ಖಾಸಗೀ ವಾಹನ ಮಾಲಕರ ಪರವಾಗಿ ವಾದಿಸಿ ಮತ್ತೆ ಮಾಲಕತ್ವವನ್ನು ಖಾಸಗಿ ಧಣಿಗಳಿಗೆ ಒಪ್ಪಿಸುವಲ್ಲಿ ಸಮಾಜವಾದದ ತಾತ್ವಿಕತೆ ಅಡ್ಡಿಯಾಗಿರಲಿಲ್ಲ. ಏಕೆಂದರೆ ಅದು ವೃತ್ತಿಯಾಗಿತ್ತು! ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲವೇ?