ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬರುತ್ತಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ಧಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ – ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕನ್ನಡ ವಿಶ್ವವಿದ್ಯಾಲಯದ ಡಾ. ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಮಹತ್ವದ ಯೋಜನೆಯಾದ ಸಮಾಜವಾದಿ ಹೋರಾಟಗಾರರ ಸಂದರ್ಶನವು ಅಪೂರ್ವ ಮಾಹಿತಿ ಮತ್ತು ಚಿಂತನೆಗಳ ಶರೀರವಾದ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿರುವುದು ತುಂಬಾ ಧನ್ಯತೆಯ ಸಂಗತಿ. ಕರ್ನಾಟಕದ ಸಮಾಜವಾದಿ ಚಿಂತನಗೆ ನೆಲೆಬೆಲೆಗಳನ್ನು ತಂದುಕೊಟ್ಟ ಡಾ. ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ಚಿಂತನೆಯ ಪ್ರಭಾವ ಅನೇಕ ಕ್ಷೇತ್ರಗಳಲ್ಲಿ ಆಳವಾಗಿ ಬೇರೂರಿದೆ. ಕನ್ನಡ ಸಾಹಿತ್ಯಕ್ಕೆ ಸಾಮಾಜಿಕ ಹೋರಾಟದ ಶಕ್ತ ಆಯಾಮವನ್ನು ದೊರಕಿಸಿಕೊಟ್ಟದ್ದು ಲೋಹಿಯಾ ಚಿಂತನೆ. ಹಣ, ಅಧಿಕಾರ ಮತ್ತು ಭೋಗ ಇವು ಕರ್ನಾಟಕದ ಆಧುನಿಕ ಸಮಾಜದ ಪ್ರಭುತ್ವಾತ್ಮಕ ಧೋರಣೆಯಾಗಿರುವ ಇಂದಿನ ಸಂದರ್ಭದಲ್ಲಿ ಭೂಗತವಾಗಿರುವ ಲೋಹಿಯಾ ಚಿಂತನೆಯ ಹೋರಾಟದ ನೆನಪುಗಳನ್ನು ಉತ್ಖನನ ಮಾಡಿ ಮತ್ತೆ ಕಟ್ಟುವ ಸಾಹಸವನ್ನು ನಮ್ಮ ಲೋಹಿಯಾ ಪೀಠ ಕೈಗೆತ್ತಿಕೊಂಡಿದೆ. ಸಮಾಜವಾದಿ ಹೋರಾಟಗಾರರ ಸಂದರ್ಶನ ಎನ್ನುವ ಈ ಗ್ರಂಥ ಅಂಥ ಸಾಹಸಮಯ ಉತ್ಖನನದ ಫಲ. ಲೋಹಿಯಾ ಅಧ್ಯಯನ ಪೀಠದ ಸಂಚಾಲಕರಾದ ಡಾ. ರಹಮತ್ ತರೀಕೆರೆ ಅವರು ತಮ್ಮ ಸಮಾಜವಾದಿ ಚಿಂತನೆ ಮತ್ತು ಕಾರ್ಯಕ್ಷಮತೆಯ ಫಲವಾಗಿ ಈ ಯೋಜನೆಯ ಕನಸನ್ನು ನನಸಾಗಿಸಿದ್ದಾರೆ. ತುಂಬಾ ಮಹತ್ವದ ಹೋರಾಟವೊಂದರ ಸಮಗ್ರ ಚಿತ್ರಣ ಮೌಖಿಕ ಪರಂಪರೆಯಿಂದ ಲಿಖಿತ ಪರಂಪರೆಗೆ ರೂಪಾಂತರಗೊಂಡಿದೆ. ದಾಖಲಾಗದ ನೂರಾರು ಸಂಗತಿಗಳು ಈ ಯೋಜನೆಯ ಫಲವಾಗಿ ಮೊದಲ ಬಾರಿಗೆ ಬೆಳಕು ಕಾಣುತ್ತಿದೆ. ಇದು ತುಂಬಾ ಜವಾಬ್ದಾರಿಯ ಹಾಗೂ ಅಪಾಯಕಾರಿಯಾದ ಕೆಲಸವೂ ಹೌದು. ಸತ್ಯದ ಅನೇಕ ಕಠೋರ ಸಂಗತಿಗಳು ದಾಖಲೆಗೆ ಒಳಗಾಗಲು ಹಿಂಜರಿಯುತ್ತವೆ. ಆದರೆ ಈ ಎಲ್ಲ ಭಯ ಆತಂಕಗಳನ್ನು ನಿವಾರಿಸಿಕೊಂಡು ಈ ಯೋಜನೆ ಪೂರ್ಣಗೊಂಡಿದೆ ಮತ್ತು ಅದರ ಫಲವಾಗಿ ಈ ಗ್ರಂಥ ಪ್ರಕಟವಾಗುತ್ತಿದೆ.

ಸಮಾಜವಾದಿ ಹೋರಾಟಗಾರರ ಸಂದರ್ಶನ ಎನ್ನುವ ಈ ಗ್ರಂಥವನ್ನು ಸಿದ್ಧಪಡಿಸಿದವರು ಕನ್ನಡದ ಒಳ್ಳೆಯ ಕವಿ, ಪತ್ರಕರ್ತ, ಹೋರಾಟಗಾರ ಮತ್ತು ಸಮಾಜವಾದಿ ಚಿಂತಕ ಶ್ರೀ ಬಿ. ಪೀರಬಾಷ ಅವರು. ರಾಮಮನೋಹರ ಲೋಹಿಯಾ ಅವರ ನೇರ ಸಂಪರ್ಕವಿದ್ದ, ಸಮಾಜವಾದಿ ಚಳವಳಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದ ಮತ್ತು ಈಗಲೂ ಲೋಹಿಯಾ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಜೀವಂತವಾಗಿ ಇಟ್ಟುಕೊಂಡಿರುವ, ಲೌಕಿಕ ಆಸೆಗಳಿಂದ ದೂರವಿರುವ ಎಂಟು ಮಂದಿ ಹಿರಿಯರನ್ನು ಸಂದರ್ಶಿಸಿ ಈ ಸಂಪುಟವನ್ನು ಸಿದ್ಧಪಡಿಸಿದ್ದಾರೆ. ಶ್ರೀಮತಿ ಟಿ.ಎಸ್. ಪೊನ್ನಮ್ಮಾಳ್, ಶ್ರೀ ಕೆ.ಜಿ. ಮಹೇಶ್ವರಪ್ಪ, ಶ್ರೀ ಅಮ್ಮೆಂಬಳ ಆನಂದ, ಶ್ರೀ ನೀಲಗಂಗಯ್ಯ ಪೂಜಾರ, ಶ್ರೀ ಕೆ. ಸದಾಶಿವ ಕಾರಂತ, ಶ್ರೀ ಕಾಶಿನಾಥ ಬೇಲೂರೆ, ಶ್ರೀ ಅಬ್ಬಿಗೆರೆ ವಿರೂಪಾಕ್ಷಪ್ಪ, ಶ್ರೀ ಅಮ್ಮೆಂಬಳ ಬಾಳಪ್ಪ ಇವರುಗಳ ಸಂದರ್ಶನದ ಮಾತುಗಳನ್ನು ಓದುತ್ತಾ ಇದ್ದರೆ, ಕರ್ನಾಟಕದ ಅದ್ಭುತ ಲೋಕವೊಂದು ಅನಾವರಣಗೊಳ್ಳುತ್ತದೆ. ಕರ್ನಾಟಕ ಇಂದು ಏನಾಗುತ್ತಿದೆ ಎನ್ನುವ ಭಯದ ಛಾಯೆ ಕಣ್ಣಮುಂದೆ ಕಾಣಿಸಿಕೊಳ್ಳುತ್ತದೆ. ತುಂಬಾ ಮುಕ್ತವಾಗಿ ಧೈರ್ಯವಾಗಿ, ಪ್ರಾಮಾಣಿಕವಾಗಿ ಎಲ್ಲ ಹಿರಿಯರು ತಮ್ಮ ಅನುಭವಗಳನ್ನು, ನೋವುಗಳನ್ನು ತೋಡಿಕೊಂಡಿದ್ದಾರೆ. ಇವು ಅವರದೇ ಮಾತುಗಳಾಗಿರುವುದರಿಂದ ಅವನ್ನು ಯಾರೂ ತಪ್ಪಾಗಿ ಭಾವಿಸಬಾರದೆಂದು ವಿನಂತಿಸುತ್ತೇನೆ. ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳು ತುಂಬಾ ಬದಲಾಗಿರುವ ಇಂದಿನ ಸಂದರ್ಭದಲ್ಲಿ ಇವರ ಮಾತುಗಳನ್ನು ಟೀಕೆ ಎಂದಾಗಲೀ ಆರೋಪವೆಂದಾಗಲೀ ಭಾವಿಸಬಾರದೆಂದು ಕೋರುತ್ತೇನೆ. ಲೋಹಿಯಾ ಪೀಠ ಯೋಜನೆಯ ಈ ಸಂದರ್ಶನ ಸಂಪುಟಕ್ಕೆ ತಮ್ಮ ಅಪೂರ್ವ ಅನುಭವಗಳನ್ನು ಅಂತರಂಗದಿಂದ ಹೊರಹೊಮ್ಮಿಸಿದ ಎಲ್ಲ ಹಿರಿಯರಿಗೂ ಗೌರವದ ನಮನಗಳನ್ನು ಸಲ್ಲಿಸುತ್ತೇನೆ. ಆಧುನಿಕ ಕರ್ನಾಟಕಕ್ಕೆ ಈ ಹಿರಿಯರ ಆಶಯ ಮತ್ತು ಕನಸುಗಳು ಹೊಸ ದಿಕ್ಕನ್ನು ತೋರಿಸಲಿ ಎಂದು ಹಾರೈಸುತ್ತೇನೆ.

ಶ್ರೀ ಬಿ. ಪೀರಬಾಷ ಅವರ ಈ ಸಂದರ್ಶನದ ಕೆಲಸ ಎಷ್ಟು ಸವಾಲಿನದ್ದು, ಕಷ್ಟವಾದದ್ದು ಮತ್ತು ಅಮೂಲ್ಯವಾದುದು ಎನ್ನುವುದು ವಿವರಿಸಲು ಸಾಧ್ಯವಿಲ್ಲ. ಲೋಹಿಯಾ ಚಿಂತನೆಗಳನ್ನು ಮತ್ತು ಕರ್ನಾಟಕದ ರಾಜಕೀಯ ಹಾಗೂ ಸಾಮಾಜಿಕ ಇತಿಹಾಸವನ್ನು ತುಂಬಾ ಸೂಕ್ಷ್ಮವಾಗಿ ಗ್ರಹಿಸಿರುವ ಶ್ರೀ ಬಿ. ಪೀರಬಾಷ ಅವರು ಅವಕ್ಕನುಗುಣವಾಗಿ ಪ್ರಶ್ನೆಗಳನ್ನು ಸಿದ್ಧಪಡಿಸಿ ಕೇಳಿ ಅಪೂರ್ವ ಸಂಗತಿಗಳನ್ನು ಮೊತ್ತ ಮೊದಲ ಬಾರಿಗೆ ಹೊರಕ್ಕೆಳೆದಿದ್ದಾರೆ. ಅಧ್ಯಯನ ಮತ್ತು ಅನುಭವಗಳ ಪಕ್ವ ಫಲವಾಗಿ ಇದು ರೂಪುತಾಳಿದೆ. ಕನ್ನಡ ವಿಶ್ವವಿದ್ಯಾಲಯದ ಈ ಮಹತ್ವದ ಯೋಜನೆಯನ್ನು ಸಾಧ್ಯವಾಗಿಸಿದ ಮತ್ತು ತಮ್ಮ ಆತ್ಮೀಯ ಬರವಣಿಗೆಯ ಮೂಲಕ ಇದಕ್ಕೆ ಗ್ರಂಥ ರೂಪವನ್ನು ತಂದುಕೊಟ್ಟ ಶ್ರೀ ಬಿ. ಪೀರಬಾಷ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ವಿಶೇಷವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ.

ಈ ಯೋಜನೆಯ ಮಾರ್ಗದರ್ಶಕರಾಗಿ ಹೆಜ್ಜೆ ಹೆಜ್ಜೆಗೂ ಸಲಹೆ ಸೂಚನೆಗಳನ್ನು ಕೊಟ್ಟು ತುಂಬಾ ಅಪೂರ್ವವಾದ ಇಂತಹ ಸಂಪುಟವೊಂದು ನಿರ್ಮಾಣವಾಗಲು ಕಾರಣಕರ್ತರಾದ ಲೋಹಿಯಾ ಪೀಠದ ಸಂಚಾಲಕರಾದ ಡಾ. ರಹಮತ್ ತರೀಕೆರೆ ಅವರ ಪ್ರಯತ್ನ ಸಾಧನೆ ಮತ್ತು ಪರಿಶ್ರಮಕ್ಕಾಗಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಲೋಹಿಯಾ ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ. ಕಾಳೇಗೌಡ ನಾಗವಾರ ಮತ್ತು ಕೆ. ಫಣಿರಾಜ್ ಅವರು ಈ ಯೋಜನೆಯ ರೂಪುರೇಷೆಗಳಲ್ಲಿ ತಮ್ಮ ಅಮೂಲ್ಯವಾದ ಸಲಹೆ ಸಹಕಾರವನ್ನು ಕೊಟ್ಟಿದ್ದಾರೆ. ಅವರನ್ನು ಪ್ರೀತಿಯಿಂದ ನೆನೆಯುತ್ತೇನೆ. ಪ್ರಾದೇಶಿಕವಾಗಿ ಲೋಹಿಯಾ ಚಿಂತನೆಯೊಂದು ಉತ್ಖನನಗೊಂಡು ಸಾಕಾರಗೊಂಡ ಸಂಕಥನವೊಂದರ ಅಪೂರ್ವ ದಾಖಲೆಯಾದ ಸಮಾಜವಾದಿ ಹೋರಾಟಗಾರರ ಸಂದರ್ಶನ ಗ್ರಂಥವು ಜಾಗತೀಕರಣದಿಂದ ದಿಕ್ಕು ತಪ್ಪಿರುವ ಆಧುನಿಕ ಕರ್ನಾಟಕಕ್ಕೆ ಮಾರ್ಗದರ್ಶಿಯಾಗಲಿ ಎಂದು ಹಾರೈಸುತ್ತೇನೆ.

ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಬಿ. . ವಿವೇಕ ರೈ
ಕುಲಪತಿ