ನೀವು ಐಡಿಯಾಲಜಿಕಲ್ ಆಗಿ ಬೇಳೀತಾ ಇದ್ದ ಹಾಗೆಲ್ಲ ಚಂದ್ರಶೇಖರಯ್ಯನವರಿಗೂ ನಿಮಗೂ ಭಿನ್ನಾಭಿಪ್ರಾಯಗಳು ಬರ್ತಿದ್ವಾ?

ಇತ್ತು. ಆದ್ರೆ ಇವತ್ತು ಏನು ಇವ್ರು, ಅವರನ್ನ ಕ್ರಿಮಿನಲ್ ಟೈಪ್ ಅಂತಾ ಏನ್ಮಾತಾಡ್ತರೆ ನಮಗದು ಗೊತ್ತಿಲ್ಲ. ನಮಗದು ಗೊತ್ತೇ ಇಲ್ಲ. ನಂಬಬೇಕು ನೀವದನ್ನ. ಗೊತ್ತಿಲ್ಲ ನಮಗೆ. ಯಾಕಂದ್ರೆ ಅವ್ರೆಲ್ಲಾ ನಮಗೆ ಎಲ್ಡರ್ಸ್, ಆಲ್ ಮೋಸ್ಟ್ ಮೈ ಫಾದರ್ಸ್ ಕಲೀಗ್ಸ್ ಅವ್ರು. ದೊಡ್ಡವರಿಗೆ ಮರ್ಯಾದೆ ಕೊಡಬೇಕು ಅಂತಾ ಕಲಿಸಿದ್ರೇ ಹೊರ್ತು ನಮಗೆ ದೊಡ್ಡವರ ಜೊತೆ ಹೊಡೆದಾಡಿ ಅಂತಲ್ಲ. ಹೋರಾಡಿ ಅಂದ್ರ, ಹೊಡದಾಡಿ ಅನ್ಲಿಲ್ಲ ನಮಗೆ ಗೊತ್ತಿಲ್ಲ ಅದು. ಚಂದ್ರಶೇಖರಯ್ಯನವರು ಬಂದ್ರ ಎದ್ದು ನಿತ್ಕೋತಿದ್ವಿ. ಅಂಡ್ ಯು ವಿಲ್ ಬಿ ಸರಪ್ರೈಸ್, ದಟ್ ಐ ಮೇಡ್ ಸಾವರ್ಕರ್ ವೇರ್ ಎ ರೆಡ್ ಕ್ಯಾಪ್ (ನಗು) ಅಟ್ ದಟ್ ಟೈಂ.

ಹೌದಾ?

ಹಾಂ. ಸಾವರ್ಕರ್ ತಲೆಗೆ ರೆಡ್ ಕ್ಯಾಪ್ ಹಾಕಿದ್ದೆ.

ಸಾವರ್ಕಕರರ ತಕ್ಷಣದ ಪ್ರತಿಕ್ರಿಯೆ ಹೇಗಿತ್ತು?

ಗೊತ್ತಿಲ್ಲಪ್ಪ. ವಿ ಎನ್ಜಾಯ್ಡ್ ಇಟ್. ನಾವಿನ್ನೂ ಸಣ್ಣವ್ರು ಆವಾಗ, ಅದೆಲ್ಲ ಆಬ್ಸರ್ವ್ ಮಾಡ್ಲಿಕ್ಕೆ ಆಗ್ಲಿಲ್ಲ. ಇನ್ ಫ್ಯಾಕ್ಟ್ ರೀಸೆಂಟ್ ಆಗಿ ಚಂದ್ರಶೇಖರಯ್ಯನವರ ಕಡೆಯವರೇ ನನಗಿದನ್ನ ರಿಮೈಂಡ್ ಮಾಡಿದ್ರು. ನಾನು ಟೋಪಿ ಹಾಕಿದ ತಕ್ಷಣ, ಇಟ್ ವಾಸ್ ಎ ಶಾಕ್ ಟು ಹಿಮ್ ಅಷ್ಟಂತೂ ನೆನಪಿದೆ. ಕೆಲವು ಸಮಯ ನನಗನಿಸೋದು ಏನಂದ್ರೆ ಆ ಟ್ರಂಡ್ ಇದೆಯಲ್ಲ, ದಟ್ ಫ್ರೆಂಡ್ ಶಿಪ್ ಆಂಡ್ ಟಾಲರೈಟಿಂಗ್ ಈಚ್ ಅದರ್ಸ್ ಅದು ಕಂಟಿನ್ಯೂ ಆಗಬೇಕಾಗಿತ್ತು ನಮ್ಮ ದೇಶಕ್ಕೆ. ಇಲ್ಲಿ ಒಬ್ರು ಲಾಠಿ ಹಿಡೀತಾರೆ, ಆ ಲಾಠಿ ಹಿಡಿಯೋದು ಇವರಿಗೇ ಬರುತ್ತೆ ನಮಗೇನೂ ಬರಲ್ಲ ಅಂತ ಅವರು ತಿಳ್ಕೊಂಡಿದ್ದಾರೆ. ಲಾಠಿ ತಿರುಗಿಸೋಕೆ ಶುರು ಮಾಡಿದ್ರೆ ನಮ್ಮೆದುರಿಗೆ ಯಾರೂ ನಿಲ್ಲಲ್ಲ… ರಿಯಲಿ, ಲಾಠಿ, ಲೇಜಿಂ, ಕತ್ತಿವರಸೆ ಎಲ್ಲಾ ಕಲ್ತೋಳು ನಾನು.

ಕಾಗೋಡು ಸತ್ಯಾಗ್ರಹದಲ್ಲಿ ಲೋಹಿಯಾ ಅಲ್ಲಿಂದ ಇಲ್ಲಿಗೆ ಬಂದಿದ್ರು. ನೀವವಾಗ ಇಲ್ಲೇ ಇದ್ರಲ್ಲ ಶಿವಮೊಗ್ಗಾದಲ್ಲಿ?

ಹೌದು……

ನೀವು ಕಾಗೋಡಿಗೆ ಹೋಗೋಕೆ ಆಗ್ಲಿಲ್ಲ. ಯಾಕೆ?

ನಾವೂ ಕಾಗೋಡಿಗೆ ಹೋಗ್ಬಿಟ್ಟಿದ್ರೆ ಕಮ್ಯುನಿಕೇಷನ್ ಗ್ಯಾಪ್ ಬಂದ್ಬಿಟ್ಟಿರೋದು, ಹಂಗಾಗಿ ನಾವು ಸುಮಾರು ಜನ ಕ್ಯಾರಿಯರ್ಸ್ ಆಫ್ ಮೆಸೇಜೆಸ್ ಅಂಡ್ ಅದರ್ ಥಿಂಗ್ಸ್ ಹಂಗೆ ಹೊರಗಡೆ ಇದ್ಕೊಂಡು ನಾವು ಕೆಲಸ ಮಾಡೋದು ಇತ್ತು. ಇಲ್ಲಂದ್ರೆ ಒಬ್ಬರಿಂದೊಬ್ರಿಗೆ ಕಮ್ಯುನಿಕೇಷನ್ ಮಾಡೋದು ಭಾಳಾ ಕಷ್ಟ ಇತ್ತು. ಅವತ್ತಿನ ದಿವಸದಲ್ಲಿ. ಕಾಡು ದಟ್ಟವಾದ ಕಾಡು ಅಲ್ವ, ಆಮೇಲೆ ಇದು ಇರ್ಲಿಲ್ಲ. ನಮಗೆ ವಾಹನಗಳ ಸೌಕರ್ಯ, ದುಡ್ಡಿಲ್ಲ ಅಥರಾ. ನಮ್ಮ ಇವ್ರು ಇದ್ದಾರಲ್ಲ ವಿಶ್ವಭಾರತಿ…. ಡಾಕ್ಟರ್ ಅವರ ತಂದೆ ತನ್ನ ಯಾವತ್ತೂ ಕ್ರಾಂತಿ ಅಂತಾನೇ ಕರಿಯೋರು. ಹಿವಾಸ್ ಒನ್ ಆಫ್ ಅಸ್. ಆ ಟೈಮ್ನಲ್ಲಿ ಪೇಪರ್ ಕಮ್ಯುನಿಕೇಶನ್ಸ್ ಎಲ್ಲಾ ಅವ್ರು ಮಾಡೋವ್ರು.

ಯಾರು ಮೇಡಂ ಅವ್ರು….. ಹೆಸರು?

ಸೀತಾರಾಂ….. ಲೆಕ್ಟರರ್… ಆಮೇಲೆ ಎಸ್. ಕೆ. ಸೀತಾರಾಮ್ ಅಯ್ಯಂಗಾರ್. ಹಿ ವಾಸ್ ನೋ ಮೋರ್. ಇವ್ರೆಲ್ಲ ಕಮ್ಯುನಿಕೇಶನ್ ಕ್ಯಾರಿಯರ್ಸ್, ಎಂಟೈರ್ ತಿಲಕ್ ನಗರ ಏನಿದೆಯಲ್ಲ. ಇದು ಕಾಡಿದು. ದೊಡ್ಡ ತೋಪು. ಹೆಮ್ಮರಗಳಿದ್ದು. ಜೈಲಿಂದ ಸೀದಾ ಹೀಗೆ ಬಂದ್ರು ಅವ್ರು ನಡ್ಕೊಂಡೇ ಬಂದ್ರು (ಲೋಹಿಯಾ) ರೈಲ್ವೇ ಸ್ಟೇಷನ್ನಿಗೆ. ದಟ್ ವಾಸ್ ಎ ನೈಸ್ ಸಿಚುವೇಶನ್. ಆಮೇಲೆ ಆಫ್ ಕೋರ್ಸ್ ಸೋಷಲಿಸ್ಟ್ ಪಾರ್ಟಿ ಬೇರೆ ಆದಾಗ ಭಾಳಾ ಕ್ಲೋಸ್ ರಿಲೇಶನ್ಸ್ ಇತ್ತು ನಮಗೆಲ್ಲ….. ಆಥರಾ. ಆ ಥರಾದ ಮನುಷ್ಯ ಸಿಗಲ್ರೀ ಆ ಗೈಡೆನ್ಸು ಆ ಧೈರ್ಯ ತುಂಬೋ ಇದು, ನಮ್ಮನ್ನು ಧಡ್ರು ಅಂತಾ ಯಾವತ್ತೂ ತಿಳ್ಕೊಳ್ಲಿಲ್ಲ. ಈಕ್ವಲ್ ಮೆಂಟಲ್…. ಇದು ಆದ್ರೆ ಅದೇ ಅಶೋಕ್ ಮೆಹ್ತಾ ಹತ್ರ ಇರ್ಲಿಲ್ಲ. ಅದಿತ್ತು ಸೊಕ್ಕು ಸ್ವಲ್ಪ.

ಕಾಗೋಡು ಹೋರಾಟದ ಯಶಸ್ವೀ ಅಂತ ಯಾವ ಹಿನ್ನೆಲೆಯಲ್ಲಿ ನಿರ್ಧರಿಸ್ಬೇಕು?

ಯಾತಕ್ಕೆಂದ್ರೆ…. ಅವತ್ತು ಆ ಸತ್ಯಾಗ್ರಹ ನಡೀದೇ ಇದ್ದಿದ್ರೆ, ಜಮೀನ್ ದಾರರಿಗೂ, ಒಕ್ಕಲುಗಳಿಗೂ ಡಿಫರೆನ್ಸ್ ಏನಿದೆ ಅಂತಾ ನಮಗೆ ಅರ್ಥವೇ ಆಗ್ತಿರಲಿಲ್ಲ ಇವತ್ತಿಗೂ. ಅವತ್ತು ಸತ್ಯಾಗ್ರಹ ಶುರುವಾದದ್ದು ಒಡೆಯರ್ದು ಜಮೀನಿನಿಂದ. ಒಡೆಯರ್ರು ನಮ್ಮ ತಂದೆಗೆ ಭಾಳಾ ಕ್ಲೋಸ್ ಫ್ರೆಂಡು ಖಾದೀಧಾರಿ. ನಮಗೆಲ್ಲಾ ಹೋಗು, ಬಾಮ್ಮಾ ಅಂತಾ ಮಕ್ಕಳಂಗೆ ಟ್ರೀಟ್ ಮಾಡೋರು.

ಕಾಗೋಡು ಸತ್ಯಾಗ್ರಹದ ನಂತರ ರೈತರ ಹಕ್ಕುದಾರಿಕೆ ಬಗ್ಗೆ ಅಂತಾ ಒಂದು ಹೋರಾಟದಲ್ಲಿ ನೀವು ಎರಡು ತಿಂಗಳು ಜೈಲಿನಲ್ಲಿದ್ರಲ್ಲ ಹೋರಾಟದ ವಿವರ ಏನು?

ಹೊಸನಗರ… ನಗರ ಎಲ್ಲ ಸೇರಿತ್ತು ಅದ್ರಲ್ಲಿ. ಅದು ಆಮೇಲಿಂದು. ಎನ್ ಟೈರ‍್ಲೀ ಸೋಷಲಿಸ್ಟ್ ಪಾರ್ಟಿ ಮೂಮೆಂಟ್ ಅದು ಮಲೆನಾಡ್ ಕಡೀಂದ ಹೆಣ್ಮಕ್ಳೆಲ್ಲ ಬಂದಿದ್ರು ಕಾಣಿಸ್ತದೆ.

ಏನದು ಹಕ್ಕುದಾರಿಕೆ ಅಂದ್ರೆ?

ಓನರ್ ಶಿಪ್ ದಾಖಲೆ ಮಾಡೋಕೇ ಬಿಡ್ತಿರಲಿಲ್ಲ. ರೈತರನ್ನ ಕೂಲಿಯವರಂಗೆ ಟ್ರೀಟ್ ಮಾಡೋರು. ಆಮೇಲೆ ದಬ್ಬಾಳಿಕೆ ಇತ್ತು ಜಮೀನ್ದಾರಿಕೆ. ಆಗ ರೈತರಿಗೆ ಓನರ್ ಶಿಪ್ ಕೊಡ್ಬೇಕು ಅಂತಾ. ಆ ಬುಕ್ಕನ್ನ ಕೆ. ವಿ. ಸುಬ್ಬಣ್ಣಂಗೆ ಕೊಟ್ಟಿಟ್ಟೆ. ಅಕ್ಷರಂಗೆ ಕೇಳಿದ್ರೆ ಸಿಗ್ಬಹ್ದು ಕೇಳಿನೋಡಿ.

ಶಿವಮೊಗ್ಗ ಭದ್ರಾವತಿಯಿಂದ ಮೂಡಿ ಬಂದದಲಿತ ಚಳವಳಿಯಲ್ಲಿ ನೀವು ಗುರುತಿಸಿಕೊಳ್ಳಲೇ ಇಲ್ಲ ಯಾಕೆ? ಡಿ.ಎಸ್.ಎಸ್. ಆದಾಗ?

ಐ ಹ್ಯಾಡ್ ನೋ ಬಿಲೀಫ್ ಇನ್ ಇಟ್……

ದಲಿತರಿಗಾಗಿ ಒಂದು ಚಳವಳಿಯ ಅಗತ್ಯ ಇದೆ ಅಂತಾ ನಿಮಗೆ ಅನಿಸಲಿಲ್ವಾ ಯಾವತ್ತೂ?

ದಲಿತರಿಗಾಗಿನೇ ಅಂತಾ ಒಂದು ಮೂವ್ ಮೆಂಟ್ ಬೇಕಿರ್ಲಿಲ್ಲ. ಇವತ್ತು ನೀವು ದಲಿತರು, ದಲಿತರು ಅಂತಾ ಹೇಳಿ ಅವರನ್ನ ಇನ್ನೂ ದಲಿತರನ್ನಾಗಿ ಮಾಡಿಬಿಟ್ಟಿದ್ದೀರಿ. ಸೋಷಿಯಲ್ ಸೆಟ್ ಆಪ್ ನಲ್ಲಿ ತುಂಬ ಕನಿಷ್ಠವಾಗಿ ಯಾರನ್ನೂ ಕಾಣಬಾರ್ದು. ಯಾಕಂದ್ರೆ ಮನೆಯಲ್ಲೇ ಮಕ್ಕಳನ್ನು ಸದಾ ಕನಿಷ್ಠವಾಗಿ, ತಪ್ಪು ಅನ್ನೋ ರೀತೀಲೇ ನೋಡಿದ್ರೆ ಏನಾಗುತ್ತೆ…. ಅವ್ನು ಅದಕ್ಕೇ ಯೂಸ್ ಆಗಿಬಿಡ್ತಾನೆ. ಓ ನನ್ನ ಯೋಗ್ಯತೆ ಇಷ್ಟೇ ಅನ್ನೋ ಭಾವನೆ ಅವನ ಮನಸ್ಸಿನಲ್ಲಿ ಬೆಳಿತಾ ಬೆಳಿತಾ ಹಿ ಬಿಕಮ್ಸ್ ಅಯ್ಯಕ್ಚುವಲಿ ಎ ದಲಿತ. ದಲಿತರನ್ನ ನೀವೇನು ಮಾಡಿದ್ದೀರಾ? ಅವರನ್ನ ಒಡದು, ಒಡದೂ ತುಂಡು ತುಂಡು ಮಾಡಿ ಬಿಸಾಕಿದ್ದೀರಾ. ಆ ದಲಿತರು ದಲಿತರನ್ನೇ ಸಹಿಸಲ್ಲ ಇವತ್ತು. ಆ ಮಟ್ಟಕ್ಕೆ ನೀವು ಜಾತಿವಾದ ಬೆಳೆಸಿದ್ರೀ ಯಾಕೆ? ನೆಸೆಸಿಟಿ ಇತ್ತಾ ಅದು? ಬಿಲೋ ಪಾವರ್ಟಿ ಲೈನ್ ಏನಿದೆಯಲ್ಲ ಅದನ್ನ ನಾನು ಒಪ್ತೀನಿ.

ಅಂದ್ರೆ ಆರ್ಥಿಕ ಸಮಸ್ಯೆಗಳ ಆಧಾರದಲ್ಲಿ?

ನೀವು ಜಾತಿವಾದ ತರಬಾರದಿತ್ತು ಅದರೊಳಗೆ. ನೀವು ಜಾತೀವಾದ ತಂದ್ರೀ. ಹಿಂದೂಗಳಲ್ಲೇ. ಆ ದಲಿತರೂ ಹಿಂದೂಗಳೇ ತಾನೇ? ನಮ್ಮಲ್ಲಿ ಏನಿತ್ತು ನಾಲ್ಕು ಜಾತಿ ಅಂತಾ ಇತ್ತು. ನಾಲ್ಕನ್ನು ಹೋಗಿ ನಲವತ್ತು ಮಾಡಿ ಕೊಡಿಸಿದ್ರೀ ನೀವು. ಹೌದು. ಬ್ರಾಹ್ಮಣರಲ್ಲಿ ಹಾಗಾದ್ರೆ ಬಡವರು ಇಲ್ಲೇ ಇಲ್ವ? ಬೊಲೋ ಪಾವರ್ಟಿ ಲೈನ್, ಅವರಿಗೆಲ್ಲ ಏನ್ಮಾಡಿದ್ರೀ? ಇವತ್ತು ಬೇರೆಯವ್ರನ್ನ ದೂಷಿಸೋ ಮಟ್ಟಕ್ಕೆ ಅವ್ರನ್ನ ಕಳಪೆ ಮಾಡಿಬಿಟ್ರೀ. ಏನೋ ಇವ್ರು ಮುಚ್ಚಿಟ್ಕೊಂಡು ತಿಂತಾ ಇದಾರೇನೋ ಅನ್ನೋ ಹಂಗೆ ಭಾವನೆಯನ್ನ ಬೇರೆಯವರಲ್ಲಿ ಬೆಳೆಸಿದ್ರೀ, ಅಬೋಟ್ ಬ್ರಾಹ್ಮಿನ್ಸ್. ಇವತ್ತು ನೀವು ಯೋಚ್ನೆ ಮಾಡಿ. ಬ್ರಾಹ್ಮಣ ಅಂತಾ ನೀವು ನಿಮ್ಮ ಕಾಸ್ಟ್ ನ್ನು ನೀವು ನಿಜವಾಗಿ ಬರ್ಕೊಂಡು ಹೋದ್ರೆ ಅವನು ಏ…. ಅಂತಾ ನೋಡ್ತಾನೇ ಅದನ್ನ ದಬ್ಬಿ ಬಿಡ್ತಾನೆ. ಎಲ್ಲ ಆಫೀಸ್ ಗಳಲ್ಲೂ ಅಷ್ಟೇ. ಯಾಕೆ? ಅವರಲ್ಲಿ ಬಡವರು ಇದ್ಬಾರ‍್ದಾ?

ಸೋ…. ಹೀಗೂ ಯೋಚ್ನೆ ಮಾಡ್ಬೇಕು?

ಹೀಗೆ ಮಾಡ್ಬೇಕು! ಇವತ್ತು ಸಮಾಜ ಬದುಕಬೇಕಾದ್ರೆ ಎಂಟೈರಿಟಿ. ಇನ್ ಇಟ್ಸ್ ಎಂಟೈರಿಟಿ. ಸಮಾಜ ಇವತ್ತು ಉಳೀಬೇಕಾದ್ರೆ ನೀವಿವತ್ತು ಹಾಗೇ ಥಿಂಕ್ ಮಾಡ್ಬೇಕು, ಹಾಗೇ ಬೆಳೆಸ್ಬೇಕು. ಅದನ್ನ ಬಿಟ್ ಬಿಟ್ಟು ನೀವೇನ್ ಮಾಡಿದ್ರೀ…. ಒಬ್ಬರನ್ನೊಬ್ರು ನೋಡಿದ್ರೆ ಕೋಲು, ದಂಡ ಹಿಡ್ಕೊಂಡು ಹೊಡದಾಡೋ ಸ್ಥಿತೀಗೆ ತಂದ್ಬಿಟ್ರೀ. ಯಾಕೆ? ಅವ್ರು ಮನುಷ್ಯರಲ್ವಾ?

ದಲಿತರನ್ನ ಲೋಕಾಸ್ಟ್ ಅಂತಾ ಗುರುತಿಸಿದ್ದು…ಯಾತಕ್ಕೆ? ಬರೀ ಮದುವೆಗಳಿಗೆ, ಊಟಕ್ಕೆ, ಅಷ್ಟಕ್ಕೇ ಅವ್ರು ಮಾಡಿದ್ರು ಹಳಬರು. ಇವತ್ತೇನ್ಮಾಡಿದ್ರೀ ಮಕಾಮಕಾ ನೋಡದಂಗ ಮಾಡಿದ್ರೀ ಅವ್ರನ್ನ. ಹೋಗ್ಲಿ ಅದನ್ನ ಚೊಕ್ಕವಾಗಿ ಅದ್ರೂ ಮಾಡಿದ್ರಾ? ಎರಡೇ ಮಕ್ಳು ಅಂತಾ ಪಾಪುಲೇಶನ್ ಕಂಟ್ರೋಲ್ ತಂದ್ರೀ… ನೀವು ದಲಿತರು ಅಂತಾ ಏನಿದೆ ಆ ಲಾಭ ಅವನು ತೆಗೆದುಕೊಂಡ. ಅವನಿಗೆ ಇಬ್ರು ಮಕ್ಳು ಆಗ್ತಾರೆ. ಆ ಮಕ್ಕಳಿಗೆ ಬೆನಿಫಿಟ್ಸ್ ಕೊಡಿ. ಹಾಗೆ ಕೊಡೋ ಹೊತ್ತಿಗೆ ಇವ್ನು ಎಕನಾಮಿಕಲಿ ಚೆನ್ನಾಗಿದ್ರೆ ಒಬ್ಬನು ಡಿ.ಸಿ. ಆಗಿರ್ತಾನೆ. ಅವನ ಮಕ್ಳು, ಮರಿಮಕ್ಳು ಈಗ್ಲೂ ದಲಿತ್ರೇ, ಅವರಿಗೆ ಈಗ್ಲೂ ಎಲ್ಲ ಬೆನಿಫಿಟ್ಸು ಕೊಡ್ಬೇಕು ಅಂದ್ರೆ ಅರ್ಥ ಏನು? ಇಟ್ ಶುಡ್ ನಾಟ್ ಹ್ಯಾವ್ ಬೀನ್ ಡನ್.

ಆದ್ರೆ…. ಈವರೆಗೆ ಕಲ್ಚರಲ್ ಸ್ಟೇಟಸ್ ಅನ್ನ ಡಿ.ಸಿ. ಮಕ್ಕಳಿಗೂ ಕೋಡೋಕಾಗಿದೇನಾ?

ಪಾವರ್ಟಿ ಲೈನ್ ನಲ್ಲಿ ಇರೋರಿಗೆ, ಕಲ್ಚರಲ್ ಸ್ಟೇಟಸ್ ಕೊಡೋದ್ರಿಂದಾನೇ ಆಗಿದ್ದು ಇದು. ಪುಸ್ತಕ ಕೊಟ್ರೀ, ಬಟ್ಟೆ ಕೊಟ್ರೀ ಓಡಾಡೋದೂ ಫ್ರೀ ಐ ಆಗ್ರೀ. ಆ ಮಕ್ಳು ಇನ್ ಫೀರಿಯಾರಿಟಿ ಕಾಂಪ್ಲೆಕ್ಸ್ ಡೆವಲಪ್ ಮಾಡ್ಕೋಬಾರ್ದು ಅಂತಾ. ಆದ್ರೆ ಅವ್ನು ಒಳ್ಳೇ ಪೊಜಿಶನ್ನಿಗೆ ಬಂದ ನಂತರಾರನೂ ಅಂದ್ರೆ ಯಾಕೆ…? ಅದನ್ನ ಅರ್ಥಮಾಡ್ಕೊಂಡಿದ್ದು ಒಬ್ನೇ ಒಬ್ಬ ಡಿ.ಸಿ. ಭರಣಯ್ಯಾ ಅಂತ. ಡಿ.ಸಿ. ಆಗಿದ್ರು. ಅವರ ವೈಫ್ ಎಜುಕೇಟೆಡ್, ಕನ್ ವರ್ಟಡ್ ಕ್ರಿಶ್ಚಿಯನ್. ನೆಕ್ಸ್ಟ್ ಒಬ್ರು ಬಂದ್ರು ಸಿದ್ದಯ್ಯ ಅಂತಾ. ಅವ್ರು ಅವ್ರೇನೇ. ನಾನ್ಯಾಕೆ ಇದನ್ನ ಹೇಳ್ತಾ ಇದ್ದೀನಿ ಅಂದ್ರೆ ನಾನವರನ್ನ ತಯಾರು ಮಾಡೋದ್ರಲ್ಲಿ ದಾರಿ ಎಲ್ಲಿ ತಪ್ಪಿದ್ವೀ ಅಂತಾ. ಅವತ್ತಿನ ದಲಿತರು ತಿಳೀದೇ ಇದ್ದ ಮುಗ್ಧ ದಲಿತರು. ಇವತ್ತಿನವರಲ್ಲ.

ಈಗ ನಿಮ್ಮ ಈ ದಲಿತೋದ್ಧಾರ ಏನಾಗಿದೆ? ಮಾಡಿದ್ರಿ ಭಾಳಾ ಸಂತೋಷ. ಆದ್ರೆ ಅದಕ್ಕೊಂದು ಲಿಮಿಟ್ ಇರ್ಬೇಕಿತ್ತು. ಡಾ. ಲೋಹಿಯಾ ಅವರದ್ದು ಒಂದು ತತ್ವ ಇತ್ತು. ಸೆವೆನ್ ಇಯರ್ಸ್ ಇಚ್ ಅಂತ್ಹೇಳಿ. ಅದು ಸೆವೆನ್ ಇಯರ್ಸ್ ಮುಗಿದ ತಕ್ಷಣ ಮುಗಿದು ಹೋಗಿ ಬೀಡಬೇಕಾಗಿತ್ತು. ಅಷ್ಟೋತ್ತಿಗೆ ನೀವು ಇಚ್ ಅಂದ್ರೆ ಕಜ್ಜೀ ಅಂತಾ ಅದನ್ನ ನೀವು ವಾಸಿ ಮಾಡಬೇಕೋ ಹೊರ್ತು, ಕರೆದು ಕರೆದು ಹುಣ್ಣು ಮಾಡಬಾರ್ದು. ಇವತ್ತು ನಾವು ಪರ್ಮನೆಂಟ್ ದಲಿತ್ರಾಗಿ ಮಾಡಿದ್ದೀವಿ. ದಲಿತರಲ್ಲಿ ಇವತ್ತು ೧೨೮ ಜಾತಿಗಳಿವೆ ಗೊತ್ತಾ ನಿಮಗೆ? ಎನಿ ಸೈನ್ಸ್ ಇನ್ ಇಟ್? ನಾವು ಸಾಮಾಜಿಕವಾಗಿ ಯೋಚ್ನೆ ಮಾಡೋಣ, ಆಮೇಲೆ ನಮ್ಮ ಎಕನಾಮಿಕ್ ಕಂಡೀಷನ್ಸ್ ಏನಾಗುತ್ತೆ ಅಂತಾ ಯೋಚ್ನೆ ಮಾಡೋಣ.

ನನ್ನಂಥವರಿಗೆ ಇದೆಲ್ಲಾ ಎಷ್ಟು ಸಂಕಟ ಆಗ್ತದೆ. ನಾವು ಇನ್ಯಾವುದಕ್ಕೋ ಹೊಡೆದಾಡಿದೆವು…. (ಮೌನ) ಒಂದು ಹಿಡಿ ಅನ್ನಕ್ಕೆ ಗತಿ ಇಲ್ಲದ ಜನ ಇದ್ದಾರೆ.

ಇವತ್ತು ನೀವು ಹೊರಟಿದ್ದೀರಾ ಸುಂದರ ಶಿವಮೊಗ್ಗಾ ಮಾಡೋದಕ್ಕೆ. ಅದನ್ನ ನೋಡೋದಕ್ಕೆ ಯಾವನಿರ್ತಾನೆ. ಎಲ್ಲರನ್ನೂ ಬೀದಿ ಪಾಲು ಮಾಡಿ ಬೆಳೆಯೋದಕ್ಕೆ ಏನೂ ಇರಲ್ಲ. ಜಮೀನೇ ಇರಲ್ಲ. ನಿಮಗೆ ಎಲ್ಲದಕ್ಕೂ ಕರೆಂಟ್ ಬೇಕು. ನೀರೇ ಇಲ್ಲದಿದ್ರೆ ನೀವು ಕರೆಂಟ್ ಎಲ್ಲಿಂದ ಸಪ್ಲೆ ಮಾಡ್ತೀರಾ? ಪ್ರಯಾಕ್ಟಿಕಲ್ ಯೋಚ್ನೆ ಬೇಕು. ಇವತ್ತೋ, ನಿನ್ನೆದೋ ಪೇಪರ್ ನಲ್ಲಿದೆ ನೋಡಿ. ನಾನು ಮೊದಲ್ನಿಂದ್ಲೇ ಹೇಳ್ತಾ ಇದೀನಿ, ಶರಾವತಿ ಸಂತ್ರಸ್ತರು ಚೋರಡಿಯಲ್ಲಿ ಗುಡಿಸಲುಗಳಲ್ಲಿ ವಾಸ ಮಾಡ್ತಿದ್ದನ್ನ…. ನೋಡಿದ್ದೀನಿ. ನಾನು ತಾಲೂಕು ಬೋರ್ಡ್‌ಗೆ ಎಲೆಕ್ಟ್ ಆಗಿದ್ದಾಗ. ಸಿಕ್ಟ್ ಟೀಸ್ ನಲ್ಲಿ. ಯೋಚ್ನೆ ಮಾಡಿ. ಅವತ್ತಿನಿಂದ ಇವತ್ತಿನವರೆಗೂ ಅವರಿಗೆ ಮನೆ ಇಲ್ಲ. ಅಂದ್ರೆ ಅದಕ್ಕೆ ಅರ್ಥಾ ಏನು? ಅವತ್ತು ಹನ್ನೊಂದು ಮನೆಗಳನ್ನು ನಾವು ಕಟ್ಟಿಸಿದ್ವಿ. ಅವರಿಗೆ. ತಾಲೂಕು ಬೋರ್ಡಿಂದ. ಅವತ್ತು ಅವರ ಖುಚಿ ನೋಡ್ಬೇಕಿತ್ತು.

ದೇಶಕ್ಕೆ ನಾವು ಕರೆಂಟ್ ಕೊಡ್ತೀವಿ ಅಂತಾ ಒಪ್ಪಿಸಿ, ಅವರನ್ನ ಬೀದಿ ಪಾಲುಮಾಡಿದ್ರಲ್ಲಾ ಮಳೆ. ಬಂದ್ರೆ ಮರಗಳ ಕೆಳಗಿ ನಿಂತ್ಕೊಳ್ಳೋರು ಎಲ್ಲಾ ತೆಪ್ಪೋತ್ಸವ. ನಿಮಗೆ ಅಯ್ಯೋ ಪಾಪ ಅನಿಸೋದು ಬೇಡ್ವಾ? ನೀವು ತಿನ್ನೋ ಅನ್ನಾ ಬೇಯಿಸೋದಕ್ಕೆ ಅವರು ಕೊಟ್ಟಿರೋ ದಾನ ಅದು, ಕರೆಂಟು. ನೀವು ಕೊಟ್ಟಿದ್ದು ವಾಪಾಸು? ಥೂ… ನನಗೊಂದೊಂದು ಸರ್ತಿ ಇದನ್ನೆಲ್ಲ ಯೋಚ್ನೆ ಮಾಡಿದ್ದಾಗ ರಾತ್ರಿಯಲ್ಲ ನಿದ್ದೇನೇ ಬರೋಲ್ಲ. ಹಿಂಸೆ ಆಗೋಕೆ ಶುರು ಆಗುತ್ತೇ ಅವತ್ತಿನ ಸರ್ಕಾರ ಅವರಿಗೆ ಭೂಮಿಯನ್ನು ಅವರ ಹೆಸರಿಗೆ ದಾಖಲೆ ಮಾಡಿ ಕೊಟ್ಟಿದ್ದಾರೆ. ಅದನ್ನ ಕಿತ್ಕೊಳ್ಳೋ ಅಧಿಕಾರ ಯಾರು ಕೊಟ್ರು ನಿಮಗೆ? ನೀವು ಅವರಿಗೆ ಮನೆ ಕಟ್ಕೋಳ್ಳೋದಕ್ಕೆ ಸಹಾಯ ಮಾಡೋದು ಬಿಟ್ ಬಿಟ್ಟು ಇದ್ದದ್ದನ್ನೂ ಕಿತ್ಕೊಂಡ್ರೆ ಅವರು ಎಲ್ಲೊಗ್ಹೋಗಬೇಕು?

ನೀವು ತುಂಬಾ ಹಿಂದೇನೇ ಮಹಿಳಾ ಸಂಘಗಳನ್ನ ಕಟ್ಟಿದೋರು. ಈಗ ಸರಕಾರ ಸ್ತ್ರೀಶಕ್ತಿ ಸಂಘಗಳನ್ನ ಎಲ್ಲ ಕಡೆ ಮಾಡಿದೆ. ನಿಮ್ಮ ಸಂಘಗಳಿಗೂ, ಸಂಘಗಳಿಗೂ ಸಾಮ್ಯತೆಗಳು ಅಥವಾ ವ್ಯತ್ಯಾಸಗಳೇನು?

ನಾವು ಮಾಡಿದ್ರಲ್ಲಿ ಒಗ್ಗಟ್ಟಿತ್ತು. ಅದಕ್ಕಾಗಿ ಮಾಡಿದ್ವಿ. ನಾವು ಜಾತಿವಾದ ಮಾಡ್ಲಿಲ್ಲ ಅದ್ರಲ್ಲಿ. ಹೆಣ್ ಮಕ್ಳು ಎಕನಾಮಿಕಲಿ ಸ್ಟ್ರಾಂಗ್ ಆಗೋದು ಬೇಕಿತ್ತು ನಮಗೆ. ನೀವೇನ್ಮಾಡ್ತೀರಿ ಸಾಲ ಕೊಡ್ತೀರಿ. ಸಾಲ ತೀರೋದೇ ಇಲ್ಲ ಅದು, ಬಡ್ಡೀನೇ ತೀರೋದು. ನಾವು ಆವಾಗ್ಲೇ ಹೆಣ್ಮಕ್ಳಿಗೆ ಸಕ್ಕರೆ ಪಾಕದಿಂದ ಆರತಿ ಮಾಡಿಸೋದು ಬೇರೆ ಕೆಲಸ ಮಾಡೋದು ಕಲಿಸಿದ್ವಿ. ಅವ್ರು ಅದ್ರಿಂದ ದುಡ್ಕೊಂಡ್ರು. ಇವತ್ತು ನೀವು ಅವರನ್ನ ಏನ್ಮಾಡಿದ್ದೀರಿ? ಪರ್ಮನೆಂಟು ಸಾಲಗಾರ‍್ರು.

ರೈತರ್ನ ಸಾಲಗಾರರನ್ನಾಗಿ ಮಾಡಿದ್ದೀರಿ. ಇವತ್ತು ಆ ಹೆಣ್ ಮಕ್ಳು ಸಾಲಗಾರ‍್ರು. ನಿಮಗೆ ಮೆರವಣಿಗೆ ಮಾಡೋಕೆ, ಕೂಗೋಕೆ, ಆ ಹೆಣ್ ಮಕ್ಳು ಡ್ರೆಸ್ ಮಾಡ್ಕೊಂಡು ಬರ್ಬೇಕು. ಇವತ್ತು ನೀವು ಯಾವ ಮೆರವಣಿಗೇನೇ ನೋಡ್ರೀ ಸ್ತ್ರೀ ಶಕ್ತಿ ಸಂಘದವರು ಯಾಕೆ ಬರ್ಬೇಕು? ಇದನ್ನೆಲ್ಲ ನೋಡಿದ್ರೆ ಭಾಳಾ ಬೇಜಾರಾಗುತ್ತೆ. ಮೇಲೆ ಅವರಿಗೆ ಯೂನಿಫಾರಂ ಬೇರೆ.

ಇವತ್ತು ನಾವು ಸುಮ್ನೆ ಮೇಲಕ್ಕೆ ನೋಡ್ತಾ ಮಾತಾಡ್ತೇವೆ. ಆಳವಾಗಿ ಯೋಚ್ನೆ ಮಾಡಲ್ಲ. ಹಾಗೆ ಯೋಚ್ನೆ ಮಾಡಿದಾಗ ನಿಮಗೆ ಗೊತ್ತಾಗುತ್ತೆ. ನಾವು ಅದು ಕೊಡಿಸಿದ್ವೀ, ಇದು ಕೊಡಿಸಿದ್ವೀ ಅಂತಾ ನೀವು ಹೇಳ್ತಾ ಹೋದಾಗ, ಅವ್ರು ಮಾನಸಿಕವಾಗಿ ನಿಮ್ಮ ಸ್ಲೇವ್ಸ್. ನಮ್ಮ ಇಂಡಿಯಾ ದೇಶದವರ ಸ್ವಭಾವವೇನು ಅಂದ್ರೆ ಏನಾದ್ರೂ ಒಂದು ಇಸ್ಕೊಂಬಿಟ್ರೆ ಅದರ ಬಗ್ಗೆ ಕೃತಜ್ಞತೆ, ಅವನು ಏನಾದ್ರೂ ಮಾಡಿರ‍್ಲೀ. ಸಾಯೋತನ್ಕ ಕೃತಜ್ಞತೆ ಇಟ್ಕೋಬೇಕು. ಧರ್ಮಭೀರುಗಳು ಇವ್ರು. ಹಂಗೆ ಮಾಡಿ ಜನರನ್ನ ನಾವು ಪರ್ಮನೆಂಟ್ ಸ್ಲೇವ್ಸ್ ಮಾಡ್ತಿದ್ದೀವಿ. ಅವನು ಅದನ್ನ ಕೊಡಿಸಿದ್ದಾನೆ, ಓಟು ಅವನಿಗೇ ಹಾಕು ಅಷ್ಟಕ್ಕೇ ಇದು ಎಲ್ಲ ಮೀಸಲು. ಒಟ್ನಲ್ಲಿ ಎಲ್ಲ ಅಭಿಮಾನ ಕಳ್ಕೊಂಡು ಇವರಿಗೆ ದಾಸಾನು ದಾಸರಾಗಿರ್ಬೇಕು. ಇವತ್ತು ಅರ್ಧ ಶಿವಮೊಗ್ಗ ಕೊಂಡುಕೊಂಡಿದ್ದಾರೆ. ಕೇಳೋ ಧೈರ್ಯ ಬಾಯಿ ಯಾರಿಗಿದೆ ಹೋಗ್ಲೀ ತಿಳ್ಕೊಳ್ಳೋ ಪ್ರಯತ್ನಾನಾದ್ರೂ ಮಾಡಿದ್ದೀರಾ?

ಈ ರೀತಿ ಎಲ್ಲಾ ರಾಜ್ಯಗಳಲ್ಲೂ ಇಲ್ಲ. ಇಂಥಾ ಸ್ಥಿತಿ ಬರದ ಹಾಗೆ ಹೊಡೆದಾಡೋ ರಾಜ್ಯಗಳೂ ಇವೆ. ಇವತ್ತು ಕೇರಳಕ್ಕೆ ಹೋಗಿ ಅವರಿಗೆ ಸ್ವಾಭಿಮಾನ ಜಾಸ್ತಿ. ಯಾಕಂದ್ರೆ ಮೊದಲಿಂದ ಕಷ್ಟನಾ ಫೇಸ್ ಮಾಡಿದೋರು. ಮಲೆ ಅಂದ್ರೆ ಪರ್ವತ. ಅದನ್ನ ಆಳಿದ ಜನ ಅವ್ರು. ಈ ಕಡೆ ದಕ್ಷಿಣ ಕನ್ನಡದ ಜನಾನೂ ಧೈರ್ಯಸ್ಥರು. ಯಾಕೆ? ಈ ಕಡೆ ಬಾಂಬೆ ಕರ್ನಾಟಕದ ಜನ ದೇ ಫೇಸ್ ದ ಫಾರೆನ್ನರ್ಸ್ ಫಸ್ಟ್. ಈ ಬಂದರ್ ಗಳು. ಹಡಗುಗಳು ಬರೋ ಜಾಗ ಫಸ್ಟು ಡೇಂಜರ್ ಫೇಸ್ ಮಾಡೋರು ಆ ಜನ. ಹಾಗಾಗಿ ಅವ್ರು ಧೈರ್ಯಸ್ತರಾಗಿ ಬೆಳೀತಾರೆ. ನಾವು ಅವ್ನಿನ್ನೂ ಕೋಲ್ ತೋರಿಸ್ತಾನೆ ಓಡಿಹೋಗ್ತೀವಿ. ಯಾಕಂದ್ರೆ ನಮಗೆ ಮರೆಯಗೋದಕ್ಕೆ ಜಾಗ ಇತ್ತಲ್ಲ.

ಇವತ್ತು ಜಾಗತೀಕರಣದ ಬಗ್ಗೆ ಚರ್ಚೆಗಳಾಗ್ತಿವೆ. ಸಾಮ್ರಾಜ್ಯಶಾಹಿ ಅಪಾಯಗಳಿಗೆ ಪುಟ್ಟ ರಾಷ್ಟ್ರಗಳು ಬಲಿಯಾಗ್ತಿವೆ. ಜಗತ್ತಿನ ರಾಜಕೀಯ ಆರ್ಥಿಕ ವಿದ್ಯಮಾನಗಳು ಅಮೇರಿಕಾ ನೇತ್ರತ್ವದ ನಿಯಂತ್ರಣದಲ್ಲಿವೆ ಎಂದು ಗುರುತಿಸಲಾಗಿದೆ. ಥರದ ಜಾಗತೀಕ ವರ್ತಮಾನವನ್ನು ನೀವು ಹೇಗೆ ವಿವರಿಸ್ತೀರಿ?

ಇವತ್ತು ಏನು ಈ ಐಟಿ, ಬಿಟಿ ಇದ್ದಾವಲ್ಲ ಇದಕ್ಕೆ ನೀವು ನಿಮ್ಮವರನ್ನ ಸಪ್ಲೆ ಮಾಡದೇ ಇದ್ರೆ ಅವ್ನು ಏನೂ ಅಲ್ಲ ಅಮೇರಿಕಾದವನು. ಏನೂ ಅಲ್ಲ ಅವನು. ಅವನೇನು ಮಾಡ್ತಾನೆ ಎಲ್ಲ ದೇಶಗಳನ್ನು ಮೋಸಮಾಡಿ ಅವನು ಹಣ ಕೂಡಿಟ್ಟುಕೊಂಡ. ಅವನ್ಹತ್ರ ಇರೋದು ಅದೊಂದೆ, ಹಣ. ಇವತ್ತು ಅವನು ಒಂದು ಗುಂಡು, ಒಂದು ನಟ್ಟು ಬೋಲ್ಟು; ತಯಾರು ಮಾಡೋದಕ್ಕೂ ಬೇರೆಯವರನ್ನ ಕರೀತಾನೆ. ಇವತ್ತು ನೀವು ಆಬ್ಸರ್ವ್ ಮಾಡಿದೀರಾ? ಅಮೇರಿಕಾದ ವಸ್ತುಗಳೆಲ್ಲವೂ ತಯಾರು ಆಗೋದು ಚೀನಾ, ಜಪಾನ್, ಮಲೇಷಿಯಾ, ತೈವಾನ್, ಯಾಕೆ ಅವನ್ಹತ್ರ ಜನಾ ಇಲ್ವಾ ತಯಾರು ಮಾಡೋದಕ್ಕೆ? ಆದ್ರೆ ನಾವು ನಮ್ಮ ಪಕ್ಕದವರಿಂದ ಕೊಂಡುಕೊಳ್ಳೋದು ಬಿಟ್ಟು…. ಎಲ್ಲೋ ಇರೋ ಅಮೇರಿಕಾದಿಂಸ ಕೊಂಡು ಕೊಂಡು ಬರ್ಬೇಕಾ ಸಾಮಾನು? ಇಲ್ಲಿಂದ ಅಲ್ಲಿಗೆ ಹೋಗಿರುತ್ತದೆ ಅಷ್ಟೇ.

ಇವತ್ತು ಮಾಡಿದ್ದು ಅದನ್ನೇ ಅವನು ಸದ್ದಾಂಗ. ಸದ್ದಾಂಗೆ ತಯಾರು ಮಾಡಿದವನು ಬುಷ್. ಅವನು ಯಾವಾಗ ಇವನಿಗೆ ಬಗ್ಗಲಿಲ್ಲ. ಆಗ ಇವನು ಇಡೀ ಪೆಟ್ರೋಲ್ ಥ್ರೀ ಪೋರ್ಥ್ ಸಪ್ರೈಫ್ರಂ ಇರಾಕ್. ಅದನ್ನ ಅವರ ಕೈಗೆ ಕೊಟ್ರೆ ತಾನದನ್ನ ಮಜಾ ಮಾಡಕಾಗಲ್ಲ, ಅವರು ಮುಂದಕ್ಕೆ ಬರಬೇಕಾದ್ರೆ ಅದನ್ನ ಸರಿಯಾದ ಬೆಲೆಗೆ ಮಾರಿ ಉಪಯೋಗಿಸಿಕೊಳ್ಳೋ ಅವಕಾಶ ಅವರಿಗೆ ಬೇಕಿತ್ತು. ಸದ್ದಾಂ ಅದನ್ನ ಕಂಡುಕೊಂಡ. ನೀವೇ ಅವನಿಗೆ ಟೀಚ್ ಮಾಡಿದ್ದು. ಮಾಡೀ ನೀವೇ ಅವನನ್ನ ಗಲ್ಲಿಗೆ ಹಾಕಿಬಿಟ್ರಲ್ಲ ನೀವು. ಯಾರನ್ನ ಕೇಳಿ ಹಾಕಿದ್ರೀ? ಅವನು ತಪ್ಪು ಮಾಡಿದ್ದೇನು? ನೀವಲ್ಲಿ ಒಂದು ಸುಳ್ಳುನೆಪ ಇಟ್ರೀ, ಶಿಯಾಸುನ್ನಿ ಅಂತ. ನಮ್ಮಲ್ಲಿ ದಲಿತರನ್ನು ಮಾಡಿದ್ರಲ್ಲ. ಅದನ್ನೇ ಮಾಡಿದ್ದಲ್ಲಿ. ಅವರ ಭಾವನೆಗಳೇನೇ ಇರ‍್ಲೀ ಒಗ್ಗಟ್ಟಾಗೇ ಇದ್ದೋರ್ನ್ ಇವ್ನು ಕೆಡಿಸಿದ. ನಮ್ಮ ಪೆಟ್ರೋಲ್ ನ್ನ ನಾವು ಉಪಯೋಗಿಸಿ ಕೊಳ್ತೀವಿ ಅಂದಾ ಅವ್ನು ಸದ್ದಾಂ. ನೀವು ನಿಮ್ಮ ರಕ್ಷಣೆಗೆ ಅಣುವಿಜ್ಞಾನ ಉಪಯೋಗಿಸಬಹುದು. ನಾವು ಬಳಸಬಾರ‍್ದಾ. ನಿನ್ನದೇಶ ನಿನಗೆ ಹ್ಯಾಗೋ, ನನ್ನ ದೇಶ ನನಗೆ ಹಾಗೆ. ನಮ್ಮ ಅಣು ವಿವರಾನೆಲ್ಲ ಅವನಿಗೆ ವಹಿಸಿ ಕೊಟ್ಟಿಡಬೇಕು. ಅವನು ಕಳ್ಳ ಮಾಡ್ತೀರೋದು ಅದೇ ಕೆಲಸ. ಅವ್ನುಯಾವ ದೇಶಗಳನ್ನೂ ಟಾಲರೇಟ್ ಮಾಡಲ್ಲ. ಎಲ್ಲಿ ಅವರೆಲ್ಲ ತನಗಿಂತ ಮೇಲೆ ಹೋಕ್ತಾರೋ ಅಂತ.

ಅಮೇರಿಕಾ ಹುಟ್ಟಿದ್ದೇ ಹಿಂಗೆ. ಯುರೋಪಿಯನ್ ಕಂಟ್ರೀಸ್ ನಲ್ಲಿ ಗಡಿಪಾರು ಮಾಡಿದ ಕಳ್ಳರು ಕಾಕರು ಬಂದು ನೀವು ಅಮೇರಿಕಾನ್ನ ಹುಡುಕಿಕೊಂಡ್ರಿ. ನಿಜವಾದ ಅಮೇರಿಕಾದವರನ್ನ ನಿಗ್ರೋಸ್ ಅಂತಾ ನೀವು ದಬ್ಬಿದ್ರೀ. ಇವತ್ತು ಅಲ್ಲಿ ಸ್ಲಮ್ಸ್. ಓನ್ಲೀ ನೀಗ್ರೋಸ್. ಇವರು ಕರೆಯೋದು ಬ್ಲ್ಯಾಕ್ಸ್. ಇವನು ಬೆಳ್ಳಿಗಿದ್ದು ಮಾಡಿದ್ದೇನು ಇವನ ತಲೆ. ಈಗದನ್ನ ರಿಪೀಟ್ ಮಾಡೋದಕ್ಕೆ ನೋಡ್ತಿದ್ದಾರೆ. ಬೇರೆ ಕಡೆ. ದಟ್ಸ್ ಹಿಸ್ಟರೀ. ಹಳೆದನ್ನ ನೀವು ನೋಡಿದ್ರೆ ಅಲ್ಲಿ ಎಂಥೆಂಥ ಕಟುಕರು ಬಂದಿದ್ದಾರೆ ಅಂತಾ ಗೊತ್ತಾಗುತ್ತೆ. ಅಲ್ಲಿ ಏನಾಗುತ್ತೆ. ಜನಾಂಗದಿಂದ ಜನಾಂಗಕ್ಕೆ ವೈಷಮ್ಯ ಹುಟ್ತಾ ಹೋಗುತ್ತೆ. ಆ ಜನಾಂಗಕ್ಕೆ ಅಂಥಾ ಸಿಟ್ಟು ಬಂದಾಗ ಏನು ಮಾಡಿ ನಾವು ಇವನನ್ನ ಹೊಡೀಬಹ್ದು. ಸರೀ ಮಾಡಬಹ್ದು ಅಂತಾ ಇವೆಲ್ಲ ಶುರು ಆಗ್ತವೆ. ಟೆರ್ರರಿಸಂ.

ನೀವು ಯ್ಯಾಕ್ಟಿವ್ ಆಗಿದ್ದ ದಿನಗಳಲ್ಲಿ ಜಾತೀಯ ಭಾವನೆಗಳು ಕಾಣಿಸಿಕೊಳ್ತಿದ್ವಾ?

ಎಲ್ಲೂ ಇಲ್ಲ. ನಮಗೆ ಗೊತ್ತೂ ಇಲ್ಲ. ಹಾಗೆಲ್ಲ ಇರಬಹ್ದು ಅಂತಾ. ಕಾಗೋಡಿನಲ್ಲಿ ಒಂದೆರಡು ಮನೆ ಮಟ್ಟಿಗೆ ಆವಾಗ ಅರ್ಥವಾಗಿತ್ತು ನಮಗೆ. ನಮ್ಮಲ್ಲಿ ಸಾಧಾರಣವಾಗಿ ನಡೀತಿತ್ತಲ್ಲ ಒಳಗಿನವರು. ಹೊರಗಿನವರು ಅಂತಾ ಅಷ್ಟು ಗೊತ್ತಿತ್ತೇ ಹೊರ್ತು ಈ ಥರಾ ಜಾತಿ ದೈತ್ಯತನ ನಮಗೆ ಗೊತ್ತಿಲ್ಲ.

ಇಂಡಿಯಾದಲ್ಲಿ ಹೊತ್ತು ಸಮಾಜವಾದಿ ಚಳವಳಿಗೆ ಹಿನ್ನಡೆಯಾಗಿದೆ ಅನಿಸುತ್ತದಾ ನಿಮಗೆ?

ಹಿನ್ನಡೆಯಾಗಿದೆ, ಅದಕ್ಕೇ, ನೀವು ಯಾವಾಗ ಈ ಕ್ಯಾಸ್ಟನ್ನು ತಂದು ಒಳಗೆ ಕೂರಿಸಿದ್ರೀ, ಆ ಕಾಸ್ಟ್ನಲ್ಲೇ ಮುಂದಕ್ಕೆ ಬಂದವ್ರು ಅದನ್ನೇ ಅಬ್ಬಾರ್ವ್ ಮಾಡ್ತಾ ಹೋದಾಗ…. ಆಮೇಲೇನಾಯ್ತು ದಲಿತನಿಗೆ ಮನಸ್ಸಿನಲ್ಲಿ ಇನ್ ಫೀರಿಯಾರಿಟಿ ಕಾಂಪ್ಲೆಕ್ಸ್ ಡೆವಲಪ್ ಆಗ್ತಾ ಹೋದಾಗ ಅವನು ಒಂಥರಾ ಧೂರ್ತತನ ತೋರಿಸ್ತಾನೆ.

ಇಂಡಿಯಾದಲ್ಲಿಸಮಾಜವಾದಿ ಚಳವಳಿಈಗ ಎಲ್ಲಿ ಕ್ರಿಯಾಶೀಲವಾಗಿದೆ ಅಂತೀರಿ?

ಹೆಚ್ಚಿಗೆ ಅಂದ್ರೆ ನಾರ್ತ್ ಇಂಡಿಯಾ. ಅವರು ಮರೆಯೋದಿಲ್ಲ. ಬಿಡೋದೂ ಇಲ್ಲ. ಕರಪ್ಟ್ ಆಗಿರೋರು ಕರಪ್ಟ್ ಆಗಿ ಹೋಗಿಬಿಟ್ಟಿದ್ದಾರೆ. ಅದು ಆಗಿರೋದು ಸೌತ್ ನಲ್ಲಿ. ನಾರ್ತ್‌ನಲ್ಲಿ ಅಷ್ಟು ಆಗಿಲ್ಲ. ರಾಜಸ್ಥನದ ಕಡೆ ಅಲ್ಲಿ ಕರಪ್ಟ್ ಆಗಿದ್ದಾರೆ. ಬೆಂಗಾಲೀಸ್ ಮೊದಲಿನಿಂದಲೂ ರೆವಲ್ಯೂಷನರೀಸ್.

ಅಲ್ಲಿ ಬಲವಾಗಿರೋದು ಕಮ್ಯುನಿಸ್ಟರು ಅಲ್ವಾ?

ಅದು ಯಾತಕ್ಕಾತು. ಅವರಿಗೆ ಆ ಭಾವನೆ ಬರಬೇಕಾದ್ರೆ ಅದಕ್ಕೆ ನಾವೇ ಕಾರಣ. ಇವತ್ತು ನೀವು ನಕ್ಸಲ್ಸ್ ನಕ್ಸಲ್ಸ್ ಅಂತಾ ಏನಂತೀರಿ. ವಾಟ್ ಡು ಮೀನ್ ಬೈ ನಕ್ಸಲ್ಸ್. ಕಮ್ಯುನಿಸಂ ವಿತ್ ಆರ್ಮ್ ಅಂತ. ಅದು ಯಾತಕ್ಕೆ ಬರುತ್ತೆ. ಬೇರೆ ಹೆಂಗೆ ಮಾಡೋಕು ಅವನ್ಹತ್ರ ತಾಕತ್ ಇಲ್ಲ. ಆದ್ರೆ ಭಾವನೆಗಳಿವೆ. ಹಂಗಾದಾಗ ಅವನೇನು ಮಾಡ್ತಾನೆ?

ಹಿಂಸಾವಾದ ಅನಿಸೋದಿಲ್ವಾ?

ನಕ್ಸ್ ಲೈಟರು ಹಿಂಸಾವಾದಿಗಳಲ್ಲ. ಮೊನ್ನೆ ಅವನನ್ನು ಕೊಂದ್ರಲ್ಲ. ಪಾರ್ವತೀನ್ನೂ ಹಾಗೆ ಕೊಂದ್ರು ಅದು ಹಿಂಸಾವಾದ. ಮನೇಲಿ ಊಟ ಮಾಡ್ಕೊಂಡು ಹೊರಗೆ ಬರ್ತಾ ಇದ್ದವ್ನನ್ನು ಪೂರ್ತಿ ಕಾಲು ಹೊರಗೆ ಇಡೋ ಮೊದ್ಲು ಗುಂಡುಹಾಕಿ ಸುಟ್ಟಿಬಿಟ್ಟು ನೀವು ಸುಳ್ಳು ಹೇಳಿದ್ರೆ ಯಾರನ್ನ ನಂಬೋಣ ನಾವು. ಪಾರ್ವತೀಗೂ ಹಂಗೇ ಮಾಡಿದ್ದು ಅವಳ್ಹತ್ರ ಬಂದೂಕು ಇರ‍್ಲೇ ಇಲ್ಲ. ದೆ ಆರ್ ನಾಟ್ ಕ್ರಿಮಿನಲ್ಸ್. ಅವರು ಕ್ರಿಮಿನಲ್ ಮೈಂಡೆಡ್ ಅಲ್ಲ.

ಅದು ಸರಿ. ಆದ್ರೆ….. ಬಂದೂಕು ಹಿಡ್ಕೊಂಡೇ ಓಡಾಡ್ತಾರೆ?

ಹೌದು ಯಾಕೆ ಅಂದ್ರೆ, ಜನರನ್ನ ತಯಾರು ಹ್ಯಾಗೆ ಮಾಡ್ಬೇಕು. ಜನರಿಗೆ ರಿಯಲ್ ಫ್ಯಾಕ್ಟ್ ಯಾರು ಹೇಳಬೇಕು? ೨೪ ಗಂಟೆ ನೀವು ಜನ್ರನ್ನ ಕತ್ತಲಿನಲ್ಲಿ ಇಟ್ಟೀರಿ. ಅವರಿಗೇನೂ ತಿಳಿಸದೇ ನಾವು ಮಾಡೋದೆ ಸರಿ ಅಂತಾ ಬೋಧನೆ ಮಾಡ್ತಾ ಹೋದ್ರೆ. ಅಲ್ಲಿ ಜನರಿಗೆ ಔಟ್ ಸೈಡ್ ವರ್ಡ್ ಟಚ್ ಇಲ್ಲ. ತಿಳಿಯೋ ಅವಕಾಶಾನೂ ಅವರಿಗಿಲ್ಲ. ನೀವು ಅವರ ಮಕ್ಕಳಿಗೆ ವಿದ್ಯಾಭ್ಯಾಸನಾ ಅರ್ಧಂಬರ್ಧಕ್ಕೆ ನಿಲ್ಲಿಸಿ ಬಿಡ್ತೀರಾ. ಅವರು ತಮಗೆ ಆಗ್ತಾ ಇರೋ ನಷ್ಟಾನಾ ತಿಳ್ಕೋಳ್ಳೋದು ಹೇಗೆ? ಅದನ್ನ ತಿಳಿಹೇಳೋಕೆ ಇವ್ರು ಹೋಗ್ತಾರೆ. ಸೋಮೇನಕೊಪ್ಪ. ಅಲ್ಲಿ ವಾಸವಾಗಿರೋ ಮನೇಗಿನೇ ಕಿತ್ತಾಕ್ಬಿಟ್ಟು ನೀವು ಏರೋಪ್ಲೇನ್ ಬರೋಕೆ ಜಾಗ ಮಾಡ್ಕೋತೀನಿ ಅಂದ್ರೆ. ಯಾರಿಗೋಸ್ಕರ ಏರೋಪ್ಲೇನ್?

ಪ್ರಶ್ನೆ ಇರೋದು ಶಸ್ತ್ರಾಸ್ತ್ರಗಳ ಬಗ್ಗೆ. ನಕ್ಸಲೈಟರು ಹೇಳೋ ಹಾಗೆ ಅದು ಅನಿವಾರ್ಯನಾ?

ಅದೂ…. ನೀವು ಕಾಡ್ನಲ್ಲಿ ಹೋಗ್ತೀರಪ್ಪ. ಹಂಗೇ ಕೈ ಬೀಸ್ಕೊಂಡು ಓಡಾಡೋಕ್ಕೆ ಆಗುತ್ತಾ…. (ನಗು) ನಾವು ನಮಗೆ ಯಾವುದನ್ನಾದರೂ ಹ್ಯಾಗೆ ಬೇಕಾದ್ರೂ ಉಪಯೋಗಿಸ್ಕೋಬಹ್ದು. ಕರಡಿ, ಗಿರಡಿ ಎಲ್ಲಾ ಮನುಷ್ಯರು ಹೇಳ್ದಂಗೆ ಕೇಳುತ್ವಾ….?

ಅವ್ರು ಪಾರ್ಲಿಮೆಂಟರಿ ಸಿಸ್ಟಂ ನಿರಾಕರಿಸ್ತಾರೆ, ಅಲ್ವಾ?

ಹೌದು, ಪಾರ್ಲಿಮೆಂಟರಿ ಸಿಸ್ಟಂ ಅನ್ನ ನೀವಿಷ್ಟು ಹೊಲಸಾಗಿ ಮಾಡ್ಕೊಂಡಿದ್ದೀರಿ. ಅದೇ ಸಿಸ್ಟಂನ್ನ ಕಂಟಿನ್ಯೂ ಮಾಡು ಅಂದ್ರೆ? ಅದಕ್ಕವರು ಹೇಳ್ತಾರೆ. ವಾಟ್ ಅಬೋಟ್ ಯುವರ್ ಸಮ್ಮಿಶ್ರ ಸರ್ಕಾರ. ಇವತ್ತು ಒಂದು ಕಡೆಯಿಂದ ಈ ಗೌಡ್ರು ನಮ್ಮವರೇ ಇರ್ಬೇಕು ಅಂತಾ ಹೇಳಲ್ಲ ನಾನು. ನಿಮ್ಮ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸ್ಕೊಂಡ್ರೆ…. ಛೇಂಜ್ ಮಾಡಿ. ತಿದ್ದಿ, ನಿಮಗೆ ಅವಕಾಶ ಇದೆಯಲ್ಲ. ನೀವು ದೇವೇಗೌಡ್ರನ್ನೇ ತಗೊಳ್ರಿ. ಅವತ್ತು ದೇವೇಗೌಡ್ರಿಗೆ ಜಾತಿವಾದ ಬೇಡವಾಗಿತ್ತು. ಇವತ್ತು ನಮ್ಮೆದುರಿಗೆ ಹೇಳುವ ಇವರು ಹಾನಗಲ್ಲಿಗೆ ಹೋಗಿದ್ದೆ ನಾನು. ಎಲೆಕ್ಷನ್ ನಲ್ಲಿ ಕೆಲಸ ಮಾಡೋಕೆ. ಅಲ್ಲಿ ಅದ್ನೇಸಾಬ್ ಅಂತಾನೇ ಕರೆಯೋರು ಅವರ್ನ. ಮನೆ, ಅಚ್ಚುಕಟ್ಟಾಗಿ ಇಟ್ಕೊಂಡಿದ್ರು. ಹೊಳೆ ದಾಟಿ ಹೋಗ್ಬೇಕಾಗಿತ್ತು. ತೆಪ್ಪದಲ್ಲಿ ಕಾರು ಎತ್ತಿ ಹಾಕಿ, ದಾಟಿಸಿ ಹೋಗಿದ್ವಿ. ನಾವು ಹೋಗೋ ಹೊತ್ತಿಗೆ ಮಳೆ ಎಲ್ಲ ಕಡೆ ಕೊಚ್ಚೆ. ಅವರು ಮನೇನೆಲ್ಲ ಕ್ಲೀನ್ ಮಾಡಿಸಿ ಅಡಿಗೆ ಮಾಡಿಸಿ ಹಾಕಿದ್ರು. ಅವರು ಪಾಪ ಅಮ್ಮ, ನಾವು ಬ್ರಾಹ್ಮಣರನ್ನಾ ಕರೆಸಿ ಅಡಿಗೆ ಮಾಡಿಸಿದ್ದೀವಿ. ನೀವು ಖಂಡಿತ ಊಟ ಮಾಡಬೇಕು. ಅಂದ್ರು ಅದ್ನೇಸಾಬ್ ಹೇಣ್ತಿ ಯಾಕೇ ಅಂದ್ರೆ, ಹೆಂಗಮ್ಮ ನೀವು ಬ್ರಾಹ್ಮಣರು ಅಂದ್ರು. ಪಾಪ ಆ ಸೌಮ್ಯತೆ ಏನಿದೆಯಲ್ಲ ಏನದರ ಅಗತ್ಯ ಇತ್ತು. ಹೋಟೆಲ್ ನಿಂದ ತರಿಸಿ ಕೊಡಬಹುದಿತ್ತಲ್ಲ. ಇನ್ನೂ ಮುಂದೆ ಹೋಗಿ ನಾವು ಸ್ನಾನ ಮುಗಿಸಿ ಬರ್ತಿದ್ದ ಹಾಗೇ ನಮ್ಮ ಬಟ್ಟೇನೆಲ್ಲ ಒಗೆದು ಹಾಕಿ ಬಿಡೋರು.

ಯಾವಾಗ ಮೇಡಂ ಇದು?

ಹಾನಗಲ್ಲಿನಲ್ಲಿ ಒಂದು ಎಲೆಕ್ಷನ್ನಿಗೆ ಹೋಗಿದ್ವಿ. ಬೈ ಎಲೆಕ್ಷನ್. ಅಲ್ಲಿ ಅದ್ನೇಸಾಬ್ ಕಂಟೆಸ್ಟ್ ಮಾಡಿದ್ರು.

ಎಸ್. ಪಿ.ನೋ., ಪಿ.ಎಸ್.ಪಿ.ನೋ ಯಾವಾಗ?

ಪಿ.ಎಸ್.ಪಿ. ಆದಾಗ

ನಂತರದಲ್ಲಿ ಸಮಾಜವಾದಿ ನಾಯಕರು ಬೇರೆ ಬೇರೆ ಪಕ್ಷಗಳಲ್ಲಿ ಹಂಚಿಹೋದ್ರು. ಅಶೋಕ್ ಮೆಹ್ತಾರಿಂದ ಹಿಡಿದು ಜಾರ್ಜ್, ಶರದ್ ಯಾದವ್ ವರೆಗೂ ಸೈದ್ಧಾಂತಿಕ ಭ್ರಮನಿರಸನ ಅನ್ನಬೇಕಾ ಅಥವಾ….?

ಏನಾದ್ರೂ ಮಾಡಿ ಅಧಿಕಾರಕ್ಕೆ ಬಂದು ಛೇಂಜ್ ಮಾಡಬಹುದ್ಭು ಅನ್ನೋ ಭಾವನೆ ಇರಬಹುದು. ದೆ ಆರ್. ಆಲ್. ಡ್ಯೂಪಡ್. ಹಾಗೇನಾದ್ರೂ ಆಗಿದ್ರೆ ಜಾರ್ಜ್‌ನ್ನು ಯಾಕೆ ಅರೆಸ್ಟ್ ಮಾಡ್ಬೇಕಿತ್ತು ಇಂದಿರಾಗಾಂಧಿ. ಹಿ ಬಿ ಕೇಮ್ ಎ ಹೀರೋ ದೆನ್. ಲೇಟರ್ ಆನ್ ಆಫ್ ಕೋರ್ಸ್ ಅಷ್ಟೋತ್ತಿಗಾಗ್ಲೇ ಇವ್ರು ಸೇರಿದ್ರಲ್ಲ. ಅಶೋಕ್ ಮೆಹ್ತಾ ಅವರೆಲ್ಲ. ಒಳಗಡೆ ಇರುತ್ತೆ, ಪೈನಾನ್ಷಿಯಲಿ, ಅಲ್ಲಿ ಸ್ವಲ್ಪ ಒಂದ್ಸರ್ತಿ ಆ ವೀಕ್ ನೆಸ್ ಗೆ ಬಿದ್ರೆ ಯೂ ಆರದ ಫಿನಿಶ್ಡ್.

ಅದರ ಹಿಂದೆ ಫೈನಾನ್ಷಿಯಲ್ ಮ್ಯಾಟರ್ ಇದೆ ಅಂತಾ ಊಹಿಸ್ತೀರಾ?

ಅದೇ ಆಗಿರೋದು. ಇವತ್ತಿಗೂ ಅವನ ಹೇಳಿಕೆಗಳನ್ನು ಓದಿದಾಗ ಅವನ ಬಗ್ಗೆ ಅಯ್ಯೋ ಅನಿಸುತ್ತದೆ. ಫೈಟರ್ ಲೈಕ್ ದಟ್. ಸರಿಯಾಗಿ ಕೀಪ್ ಅಪ್ ಮಾಡಿರಾದು ಲಾಲೂ ಪ್ರಸಾದ್. ಯಾರು ಎನ್ ಬೇಕಾದ್ರೂ ಅಂದ್ಕೊಂಡ್ ಹೋಗ್ಲಿ ನಾನು ಮಾಡೋದು ಮಾಡೇ ಮಾಡ್ತೀನಿ ಅಂತಾರೆ. ಇವತ್ತು ಲಾಭ ತಂದುಕೊಟ್ಟಿದ್ದಾರಪ್ಪ. ಕೆನ್ ಯೂ ಡೆನೈಯ್ ದಟ್? ಕ್ವೈಟ್ ಆಗಿ ಮಾಡಿದ್ದಾರೆ. ರೈಲಿನಲ್ಲಿ ಚಹಾಕುಡಿಯೋದಕ್ಕೆ ಮಣ್ಣಿನ ಕಪ್ ಬಳಸೋದಕ್ಕೆ ಆರ್ಡ್‌ರ್ ಮಾಡಿದ್ರು ಅವರು. ಸೋ, ವ್ಯಾಲ್ಯೂ ಬೇಸ್ಟ್.

ಸಂಡೂರು ಭೂಮಿ ಹೋರಾಟ ಆದಾಗ ನೀವು ಪಾರ್ಟಿಯಲ್ಲಿ ಇದ್ದಿರಿ ಅಲ್ವಾ?

ದಾವಣಗೆರೆ ಕಾನ್ ಫರೆನ್ಸ್ ನಲ್ಲೇ ಅದು ಚರ್ಚೆಯಾಗಿ, ಅದಕ್ಕೂ ಮುಂಚೆ ಅಲ್ಲಿ ಕೆಲವರು ನಡೆಸ್ತಿದ್ರು, ನಂತರ ಪಾರ್ಟಿ ಎಂಟ್ರಿಯಾಯ್ತು. ಕೆ. ಜಿ. ಮಹೇಶ್ವರಪ್ಪ ಚೆನ್ನಾಗಿ ವರ್ಕ್ ಮಾಡಿದ್ರು.

ಸಮಾಜವಾದಿ ಆಶಯಗಳು, ಕರ್ನಾಟಕದಲ್ಲಿ ಯಾವ ಸರಕಾರದ ಅವಧಿಯಲ್ಲಿ ಹೆಚ್ಚು ಜಾರಿಯಾದವು ಅನಿಸುತ್ತವೆ. ಜೆ. ಹಚ್. ಪಟೀಲ್ರು ಇದ್ರು ಬಂಗಾರಪ್ಪ….?

ಪಟೇಲ್ ಗೆ ಮಾತಾಡುವಾಗ ಒಂದಿಷ್ಟು ಗತ್ತು ಇತ್ತು, ಆದ್ರೆ ಮೆಂಟಲಿ ತುಂಬಾ ಸಾಫ್ಟ್, ತಿಳಕೊಂಡಷ್ಟು ಕಟುಕ ಅಲ್ಲ. ಭಾಳಾ ಸ್ಟ್ರೈಟ್ ಫಾರ್ ವರ್ಡ್.

ದೇವರಾಜ ಅರಸು?

ಕಂಪ್ಲೀಟ್ ಲಿ ಸೋಷಲಿಸ್ಟ್ ಮೈಂಡೆಡ್. ಅದನ್ನ ಯಾರಾದ್ರೂ ಒಪ್ಪಬೇಕು. ಇಡೀ ಗೋಪಿ ಸರ್ಕಲ್ ನಲ್ಲಿ ಒಂದ್ಸಲ ಅವರು ಭಾಷಣ ಮಾಡ್ಬೇಕಾದ್ರೆ “ಇದನ್ನ ಅರ್ಥಮಾಡ್ಳೋಬೇಕಂದ್ರೆ ೧೭.೧೮ ವರ್ಷ ಬೇಕಾಯ್ತು ನಿಮ್ಗೆ” ಅಂದೆ. ಹಾಂ ಅಂದ್ರು. ಒಪ್ಕೊಂಡ್ರು ಪಾಪ ಭಾಳಾ ರಿಫಾರ್ಮ್ಸ್ ಆದವು ಅವರ ಕಾಲಕ್ಕೆ.

ಸಮಾಜವಾದಿ ಚಳವಳಿ ಮತ್ತೆ ಚೇತರಿಸಿಕೊಳ್ಳುತ್ತದೆ ಅಂತಾ ನಿರೀಕ್ಷಿಸಬಹುದಾ?

ಇನ್ನಷ್ಟು ಹೊಟ್ಟೆ ಬಿಗೀತಾ ಬಂದ್ರೆ ಎಲ್ಲ ಛೇಂಜ್ ಆಗ್ತಾರೆ. ಅಂದ್ರೆ ಆಹಾರವಿರಲ್ಲ, ಉದ್ಯೋಗವಿರಲ್ಲ, ಆಗ ಓಹೋ ಇದೆಲ್ಲೋ ಕೆಟ್ಟುಹೋಯ್ತು ಅಂತಾ ಆಳ ಹುಡುಕೋಕೆ ಹೋಗ್ತಾರೆ.

ಅಂತಹ ಪರಿಸ್ಥಿತಿ ಬಂದಾಗಲೋಹಿಯಾಮಾರ್ಗದಲ್ಲಿ ಚಳವಳಿ ಕಟ್ಟಬೇಕಾ, ನಕ್ಸಲೈಟರ ಮಾರ್ಗಹಿಡೀಬೇಕಾ?

ನಕ್ಸಲಿಸಂ ಅನ್ನೋದನ್ನ ನೀವು ತಪ್ಪಾಗಿ ಉಪಯೋಗಿಸ್ತೀರಿ. ಕಮ್ಯುನಿಸಂ ನಮಗೆ ಬೇಡ. ಆದ್ರೆ ನಕ್ಸಲೈಟ್ರು ಕಮ್ಯುನಿಸ್ಟರಲ್ಲ.

ನಕ್ಸಲೈಟರು ಅಂದರೆ ಮಾವೋವಾದಿಗಳಲ್ವಾ?

ನೋ, ಇಟ್ ಈಸ್ ನಾಟ್.

ನಿಮ್ಮನ್ನು ಬಿಟ್ರೆ ರಾಜ್ಯದಲ್ಲಿ ಸಮಾಜವಾದಿ ಚಳವಳಿಯಲ್ಲಿ ಬೇರೆ ಹೆಣ್ಣು ಮಕ್ಕಳೇ ಬರಲಿಲ್ಲ?

ಬೇಕಾದಷ್ಟು ಜನ ಬಂದ್ರು, ನೀವು ಗುರ್ತಿಸಲ್ಲ ನಾವೇನು ಮಾಡೋಕಾಗುತ್ತೆ. ತುಂಬಾ ಜನ ಬಂದ್ರು ಇದ್ರು ಏನಾಗಿತ್ತು ಅಂದ್ರೆ ಸೋಷಿಯಲ್ ಔಟ್ ಲುಕ್ ನಿಂದ ಹಿಂದಕ್ಕೆ ಸರಿದ್ರು….. ಕೆಲವರು ಕಾಂಗ್ರೆಸ್ ಗೆ ಹೋಗಿ ಸೇರಿದವ್ರು ಇದ್ದಾರೆ.

ಕಮಲಾದೇವಿ ಚಟ್ಟೋಪಾಧ್ಯಾಯರ ಜೊತೆ ನಿಮ್ಮ ಸಂಪರ್ಕ ವಿತ್ತಾ?

ಹಾಂ, ಬೆಂಗಳೂರಿನಲ್ಲಿ ಇದ್ರಲ್ಲ ಅವರು. ಇಲ್ಲಿಗೂ ಬಂದು ಹೋಗಿದ್ದಾರೆ. ನಾವೂ ಅಲ್ಲಿಗೆ ಹೋಗ್ತಾ ಇದ್ವಿ ಸೆಂಟ್ರಲ್ ಜೈಲಿಗೆ. ಅವರ ಒಪೀನಿಯನ್ ಕೇಳೋಕೆ.

ಕರ್ನಾಟಕದಲ್ಲಿ ಬಹುತೇಕರು, ಸಮಾಜವಾದಿಗಳು ಅನ್ನೋದಕ್ಕಿಂತ ಲೋಹಿಯಾವಾದಿಗಳು ಅಂತ್ಲೇ ಕರ್ಕೊಳ್ತಾರೆ. ಯಾವುದು ಸರಿ?

ಎರಡೂ ಒಂದೇ, ನೀವು ಗಾಂಧೀವಾದ ಅಂತಾ ಕರೀಬಹುದಾದ್ರೆ, ಲೋಹಿಯಾವಾದ ಅಂತಾ ಯಾಕನ್ನಬಾರ್ದು.

ಲೋಹಿಯಾರ ರಾಜಕೀಯ ಚಿಂತನೆಗಳು ರಾಜಕೀಯ ಸಿದ್ಧಾಂತದ ಸ್ವರೂಪ ಪಡೆದವಾ?

ಬಿಡ್ಲಿಲ್ಲವೇನೋ ನಾವುಗಳ…. (ನಗು). ಅದನ್ನ ಹಾಗೆ ಬಿಲ್ಡಪ್ ಆಗೋಕೆ ಬಿಡ್ಲಿಲ್ಲ. ದೇರ್ ಆರ್ ಲಾಟ್ ಆಫ್ ಡಿಫರೆನ್ಸ್ ಆಫ್ ಒಪೀನಿಯನ್ಸ್ ಅಮಾಂಗ್ ದ ಲೀಡರ್ಸ್ ದೆಮ್ ಸೆಲ್ಫ್ಸ್. ಅಶೋಕ ಮೆಹ್ತಾ ಲೋಹಿಯಾರಷ್ಟು ಸೋಷಲಿಸ್ಟ್ ಅಲ್ಲ. ಲಿಟಲ್ ಬಿಟ್ ಕ್ಯಾಪಿಟಲಿಸಂ ಸೆಳೆತ ಇತ್ತು. ಜಯಪ್ರಕಾಶ್ ಇನ್ ಬಿಟ್ ವೀನ್ ಟೂ. ಫಸ್ಟ್ ಮ್ಯಾನ್ ಇನ್ ದಿ ಸೋಷಲಿಸ್ಟ್ಸ್ ಗ್ರೂಪ್ ಹೂ ಜಾಯಿನ್ ದ ಕಾಂಗ್ರೆಸ್ ವಾಸ್ ಅಶೋಕ ಮೆಹ್ತಾ.

* * *