ಸ್ವಾತಂತ್ರ್ಯ ಹೋರಾಟಗಾರೆಂಬ ಕಾರಣಕ್ಕೆ ಸರಕಾರದಿಂದ ಪಡೆದ ಫಲವತ್ತಾದ ಜಮೀನು ಬಿತ್ತುವವರಿಲ್ಲದೆ, ಬೆಳೆಯುವವರಿಲ್ಲದೆ ಬೀಳುಬಿದ್ದಿದೆ. ಎತ್ತರಕ್ಕೆ ಬೆಳೆದ ಹುಲ್ಲಿನ ಹೊಲ. ಅಲ್ಲಲ್ಲಿ ಬೆಳೆದ ತೆಂಗಿನ ಮರಗಳ ನಡುವೆ ಕೋಲಿನಾಸರೆಯಿಂದ ಅಷ್ಟರಲ್ಲೇ ಸುತ್ತಾಡುತ್ತ ಅದೇನನ್ನೋ ಕನಸುತ್ತಿರುವಂತೆ ಕಾಣುತ್ತಾರೆ ಅವರು. ಮತ್ತೆ ಬಂದು ಮಲೆನಾಡಿನ ಆ ಮರಗಳ ನಡುವಿನ ಒಂಟಿಮನೆಯ ಹೊಸ್ತಿಲ ಮುಂದೆ ಕುಳಿತು ಸುತ್ತಲೂ ಕಣ್ಣು ಹಾಯಿಸುತ್ತಾರೆ. ಅವರ ದೃಷ್ಟಿ ಆಕಾಶದಲ್ಲಿ ಒಂದು ಕ್ಷಣ ಸ್ಥಿರವಾಗುತ್ತದೆ.

ಡಾ. ಅಮ್ಮೆಂಬಳ ಬಾಳಪ್ಪ ಬ್ರಿಟೀಶ್‌ ಕೋರ್ಟಿಗೆ ಬೆಂಹಿ ಹಚ್ಚಿ ಸೇತುವೆ ಸ್ಫೋಟಿಸುವ ಪ್ರಯತ್ನ ಸ್ವಲ್ಪದರಲ್ಲೇ ವಿಫಲವಾಗಿ ಬಂಧಿತರಾಗಿ, ಎರಡು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸಿ ಆರೋಪ ಸಾಬೀತಾಗದೇ ಬಿಡುಗಡೆಗೊಂಡವರು. ಮಂಗಳೂರು ಜಿಲ್ಲೆಯಲ್ಲಿ ಸಮಾಜವಾದಿ ಚಳವಳಿಗೆ ತಳಪಾಯ ಹಾಕಿದವರು ಡಾ. ಬಾಳಪ್ಪ.

ಬಾಳಪ್ಪ ಹಳ್ಳಿಯ ಬಡಕುಲಾಲ ಕುಂಬಾರ ಕುಟುಂಬದಲ್ಲಿ ಹುಟ್ಟಿ ಬೆಳೆದು, ಹೋಟೆಲ್‌ನಲ್ಲಿ ಬಾಲ ಕಾರ್ಮಿಕನಾಗಿ ದುಡಿಯುವ ಮೂಲಕ ಮಂಗಳೂರಿನಲ್ಲಿ ಪರಿಚಯ ಮಾಡಿಕೊಂಡರು. ನಂತರ ವೃದ್ಧ ಶ್ರೀಮಂತರೊಬ್ಬರ ಪರಿಚಾರಕನಾಗಿ ಕೆಲಸ ಮಾಡಲಾರಂಭಿಸಿ ಅವರಿಗೆ ಪತ್ರಿಕೆ ಓದಿ ಹೇಳಲೆಂದೇ ಕನ್ನಡ ಇಂಗ್ಲಿಷ್ ಅಕ್ಷರಾಭ್ಯಾಸ ಕಲಿತು ದೇಶದ ವಿದ್ಯಮಾನಗಳನ್ನು ಅರ್ಥಮಾಡಿಕೊಂಡರು. ಮಂಗಳೂರಿನ ಪುರಸಭೆಯಲ್ಲಿ ಮೇಸ್ತ್ರಿಯಾಗಿ ಸೇರುತ್ತಲೇ ಸ್ವಾತಂತ್ರ್ಯ ಹೋರಾಟದ ಕರೆಗೆ ಓಗೊಟ್ಟು ವಿದ್ವಂಸಕ ಕೃತ್ಯಗಳಲ್ಲಿ ತೊಡಗಿಸಿಕೊಂಡರು. ವಸಾಹತುಶಾಹಿ ವಿರೋಧಿ ಹೋರಾಟದ ಕೊನೆಯ ಹಂತದಲ್ಲಿ ಸಮಾಜವಾದಿ ಸಿದ್ಧಾಂತವಾಗಿ ಆಕರ್ಷಿತರಾಗಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಪ್ರಯತ್ನಗಳೊಂದಿಗೆ ಕೈ ಜೋಡಿಸಿದರು. ಕಾಂಗ್ರೆಸ್‌ ಸೋಷಲಿಸ್ಟ್‌ ಪಾರ್ಟಿಯನ್ನು ಆರಂಭದಿಂದಲೇ ಕಟ್ಟಿ ಬೆಳೆಸಿ ಕಾರ್ಮಿಕ ಹೋರಾಟಗಳನ್ನು ಬಲಗೊಳಿಸಿದರು. ಈ ಸಂದರ್ಭದಲ್ಲಿಯೇ ಬೀದಿ ಪಾಲಾಗಿದ್ದ ಯುವಕ ಜಾರ್ಜ್‌ ಫರ್ನಾಂಡೀಸ್‌ರನ್ನು ಪಕ್ಷಕ್ಕೆ ಕರೆತಂದು ಸೈದ್ಧಾಂತಿಕ ಹೋರಾಟಗಳಲ್ಲಿ ತೊಡಗಿಸುವ ಮೂಲಕ ಮುಂದೆ ಅವರು ಸಮಾಜವಾದಿ ನಾಯಕರಾಗಿ ಬೆಳೆಯುವಲ್ಲಿ ಕಾರಣರಾದರು.

ಕಾರ್ಮಿಕರೊಂದಿಗೆ ರೈತರನ್ನೂ ಸಂಘಟಿಸುವ ಅಗತ್ಯ ಮನಗಂಡ ಬಾಳಪ್ಪ ಗೇಣಿ ಒಕ್ಕಲುಗಳನ್ನೂ ಸಂಘಟಿಸಿ ಹೋರಾಟ ನಡೆಸಿದರು. ಮುಂದಿನ ದಿನಗಳಲ್ಲಿ ದಲಿತ ಮತ್ತು ಹಿಂದುಳಿದ ಜಾತಿ ಜನಾಂಗಗಳ ಸಂಘಟನೆಗೂ ತಳದಿ ಹಾಕಿಕೊಟ್ಟರು. ಹಿಂದುಳಿದ ವರ್ಗಗಳ ವೆಂಕಟಸ್ವಾಮಿ ಆಯೋಗದ ಸದಸ್ಯರಾಗಿಯೂ ಬಾಳಪ್ಪ ಗಮನಾರ್ಹ ಪಾತ್ರ ನಿರ್ವಹಿಸಿದರು. ಮಂಡಲ ವರದಿಯ ಜಾರಿಗೆ ಒತ್ತಾಯಿಸಿ ೧೯೮೩ರಲ್ಲಿ ನಡೆದ ಜಿಲ್ಲಾ ಮಟ್ಟದ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಗೋವಾ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡು ಥಳಿಸಲ್ಪಟ್ಟರು. ೧೯೫೬ರಲ್ಲಿ ಭೂ ಸುಧಾರಣಾ ಕಾನೂನು ಮತ್ತು ಕನ್ನಡ ಭಾಷೆಗೆ ಸಂಬಂಧಿಸಿ ೧೨ ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು.

ಬಂಟ್ವಾಳದ ತಾಲೂಕು ಬೋರ್ಡ್‌, ಭೂನ್ಯಾಯ ಮಂಡಳಿಗಳ ಸದಸ್ಯರಾಗಿ, ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಸ್ಥಾಪನಾ ಅಧ್ಯಕ್ಷರಾಗಿ ತಾಲೂಕು ಭೂ ಅಭಿವೃದ್ಧಿ ಬ್ಯಾಂಕ್‌ ಸದಸ್ಯರಾಗಿ, ಜಿಲ್ಲಾ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ ಮಂಗಳೂರು ವಿ.ವಿ. ಅಕಡೆಮಿಕ್‌ ಕೌನ್ಸಿಲ್‌ನ ಸದಸ್ಯರಾಗಿ ಮಂಗಳೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸರಕಾರ ನೀಡಿದ ಜಮೀನಿಲ್ಲಿ ತಮ್ಮ ೮೬ನೇ ವಯಸ್ಸಿನಲ್ಲಿ ಮಕ್ಕಳಿಲ್ಲದ ವೃದ್ಧ ಸಹೋದರನ ಕುಟುಂಬದಲ್ಲಿ ಒಬ್ಬರಾಗಿ ಅವಿವಾಹಿತ ಬಾಳಪ್ಪ ಬಾಳುತ್ತಿದ್ದಾರೆ.

*

ಬಾಳಪ್ಪನವರೇ ನಿಮ್ಮ ಬಾಲ್ಯದ ಬಗ್ಗೆ ಹೇಳಿ?

ನನ್ನ ಬಾಲ್ಯ ಅಂದರೆ ರೈತರ ಮಧ್ಯೆ. ರೈತರು ಅಂದರೆ ಗೇಣಿದಾರರು. ಗೇಣಿದಾರರು ಅಂದರೆ ಊಟಕ್ಕೆ ಇಲ್ಲ ಗೇಣಿ ನೀಡುತ್ತಿದ್ದರು.

ನಿಮ್ಮ ಕುಟುಂಬಕ್ಕೆ ಸ್ವಂತ ಜಮೀನು ಇತ್ತಾ?

ಅಳಿಯಕಟ್ಟು ಕುಟುಂಬ ನಮ್ಮದು. ಜಮೀನು ಎಲ್ಲರದು. ಟ್ರಸ್ಟ್‌ ಇದ್ದ ಹಾಗೆ. ಆಗ ಫ್ಯೂಡಲ್‌ ಸಿಸ್ಟಂ ಇತ್ತು.

ನಿಮಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಹವಹಿಸುವ ಪ್ರೇರಣೆ ಸಿಕ್ಕಿದ್ದು ಹೇಗೆ?

ಪ್ರೇರಣೆ ಎಂದರೆ ಅದು ಹೀಗೇ ಎಂದು ಹೇಳಲಿಕ್ಕಾಗುವುದಿಲ್ಲ. ಪ್ರೇರಣೆ..ಉಳುವವನೇ ಹೊಲದೊಡೆಯ ಠರಾವು. ಸ್ವಾತಂತ್ರ್ಯ ಎಂದರೆ ಉಳುವವನೇ ಹೊಲದೊಡೆಯ ಎಂದು ಹೋರಾಟಕ್ಕೆ ಹೋದದ್ದು.

ನಿಮ್ಮ ವಿದ್ಯಾಭ್ಯಾಸ ಎಷ್ಟನೇ ತರಗತಿಯವರೆಗೆ ಆಯ್ತು?

ಶಾಲೆಗೇ ಹೋಗಲಿಲ್ಲ

ಯಾಕೆ?

ಯಾಕೆ ಹೋಗಲಿಲ್ಲ ಅಂದರೆ ಸಾಧ್ಯವಿರಲಿಲ್ಲ. ಯಾಕೆ ಸಾಧ್ಯವಿಲ್ಲ ಎಂದರೆ ನಾವು ಶೂದ್ರರು. (ನಗು) ಕೆಲಸ ಮಾಡುವುದಷ್ಟೇ. ಶಾಲೆ ಇಲ್ಲ.

ಕ್ವಿಟ್ಇಂಡಿಯಾದಲ್ಲಿಆಂದೋಲನದಲ್ಲಿ ನಿಮ್ಮ ಅನುಭವ ಹೇಳಿ?

ಕ್ವಿಟ್‌ ಇಂಡಿಯಾದಲ್ಲಿ ನಮ್ಮ ಅನುಭವ ಅಂದರೆ ಜೈಲಿಗೆ ಹೋದದ್ದು.

ಜೈಲಿಗೆ ಹೋಗಬೇಕಾದ ಸಂದರ್ಭವೇನು ಬಂತು?

ಯಾಕೆ ಅಂದರೆ ನಾವು ಬೆಂಕಿ ಹಚ್ಚಿದ್ದೆವು. (ನಗು) ಕೋರ್ಟಿಗೆ ಅದಕ್ಕೆ.

ಅವರ ಬಗ್ಗೆ ಹೇಳಿ?ಹೇಗೆ ಹಚ್ಚಿದ್ದಿರಿ? ನಿಮ್ಮ ಜೊತೆ ಯಾರ್ಯಾರಿದ್ದರು?

ಹೇಗೆ ಎಂದರೆ ಅದು ಹೀಗೇ ಎಂದು ಹೇಳಲಿಕ್ಕಾಗುವುದಿಲ್ಲ.

ನೀವು ಆಗ ನೌಕರಿ ಮಾಡುತ್ತಿದ್ದೀರಾ?

ನೌಕರಿ ಮಾಡುತ್ತಿದ್ದೆ. ಜೈಲಿಗೆ ಹೋದೆ. ನೌಕರಿ ಹೋಯ್ತು.

ನೀವು ಯಾವ ಜೈಲಿನಲ್ಲಿದ್ದೀರಿ?

ಆದೆಲ್ಲ ಈಗ ನೆನಪಿನಲ್ಲಿ ಇಲ್ಲ. (ವೆಲ್ಲೂರು ಮತ್ತು ತಿರುಚನಾಪಳ್ಳಿ ಜೈಲುಗಳಲ್ಲಿ ಒಟ್ಟು ೧೮ ತಿಂಗಳು ಶಿಕ್ಷೆ ಸ್ಥಾನಬದ್ಧ ಖೈದಿಯಾಗಿದ್ದೆ).

ನೀವು ಸೇತುವೆ ಸ್ಫೋಟಿಸಲು ಸಂಚು ಮಾಡಿದ್ದಿರಂತಲ್ಲ ಹೌದಾ?

ಹೌದು (ನಗು) ಅದು ನಿಮಗೆ ಹ್ಯಾಗೆ ಗೊತ್ತು?

ನಿಮ್ಮ ಬಗ್ಗೆ ಓದಿದಾಗ ತಿಳಿಯಿತು. ನೀವು ಸಮಜವಾದಿ ಪಕ್ಷ ಕಟ್ಟಿದ್ದಿರಲ್ಲ, ಆಗ ನಿಮ್ಮ ಜೊತೆ ಯಾರಿದ್ದರು?

ಕಟ್ಟಿದೆವು. ಅದು ಹೀಗೆ ಎಂದು ಹೇಳಲಿಕ್ಕಾಗುವುದಿಲ್ಲ. ಸಮಾಜವಾದ ಎಂರೆ ಹೋರಾಟ ಮಾಡಬೇಕು. ಹೋರಾಟ ಮಾಡದಿದ್ದರೆ ಯಾವುದೂ ಬರುವುದಿಲ್ಲ. ಅದಕ್ಕೆ ಹೋರಾಟ ಮಾಡಿದೆವು.

ಯಾವ ಯಾವ ಹೋರಾಟಗಳನ್ನು ಮಾಡಿದಿರಿ?

ಬಹಳಷ್ಟು ಹೋರಾಟ ಮಾಡಿದೆವು. ಅದು ಹೀಗೇ ಎಂದು ಹೇಳಲು ಬರುವುದಿಲ್ಲ.

ಸಾರಿಗೆ ನೌಕರರ ಹೋರಾಟ…?

ಹೌದು. ನಿಮಗೆ ಎಲ್ಲ ಗೊತ್ತುಂಟು!

ಜಾರ್ಜ್ಫರ್ನಾಂಡೀಸ್ನಿಮ್ಮ ಶಿಷ್ಯರಂತಲ್ಲ, ಹೌದಾ?

ಅವರನ್ನ ಚಳವಳಿಗೆ ಕರೆತಂದವರು ನೀವೇ ಎಂದು ಕೇಳಿದ್ದೇನೆ?

ಕರೆದು ತಂದೆ. ಆದರೆ ಅವರು ಮುಂದೆ ಲೀಡರ್‌ ಆದರು. ಅದು ಹೇಗೆ ಅದು ಅವರಿಗೆ ಗೊತ್ತುಂಟ್ಟು.

ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳೂ ಆದರಲ್ಲ?

ಹೌದು

ಅದರಿಂದ ನಿಮಗೆ ಹೆಮ್ಮೆ ಅನಿಸಲಿಲ್ವಾ?

ಹೆಮ್ಮೆ ಆಯಿತು (ನಗು) ಅದರಿಂದ ಏನೂ ಪ್ರಯೋಜನವಿಲ್ಲ. ಮೂವ್‌ಮೆಂಟ್‌ ಕಟ್ಟಬೇಕು. ಹೋರಾಟ ಮಾಡಬೇಕು.

ಕಮಲಾದೇವಿ ಚಟ್ಟೋಪಾಧ್ಯಯ ನಿಮ್ಮ ಜೊತೆ ಮೂವ್ಮೆಂಟ್ಕೆಲಸ ಮಾಡ್ತಿದ್ದರಂತಲ್ಲ?

ಕಮಲಾದೇವಿ ಚಟ್ಟೋಪಾಧ್ಯಾಯ… ಅವರು ನಮ್ಮ ಮಂಗಳೂರಿನವರು ಇಲ್ಲಿ ಬರುತ್ತಿದ್ದರು.

ನೀವು ಸಮಾಜವಾದಿ ಚಳವಳಿ ಕಟ್ಟಿದ್ದು, ನಿಮಗೆ ಸಾರ್ಥಕ ಅನ್ನಿಸಿದೆಯಾ?

ಸಾರ್ಥಕ ಅಂದರೆ ಸಾಲದು. ಇನ್ನೂ ಹೋರಾಟ ಮಾಡ್ಬೇಕು.

ಇಷ್ಟು ವರ್ಷ ಹೋರಾಟ ಮಾಡಿದ್ದೀರಲ್ಲ?

ಮಾಡಿದ್ದೇವೆ.ಆದರೆ ಸಾಲದು, ಒಬ್ಬ ಹೋರಾಟಗಾರ ಕೊನೇವರೆಗೂ ಹೋರಾಟ ಮಾಡ್ಬೇಕು.

ಈಗ ಹೋರಾಟ ಏತಕ್ಕಾಗಿ ಮಾಡ್ಬೇಕು?

ಏಕೆ ಅಂದರೆ, ನಾವು ಶೂದ್ರರು. ನಾವು ಶೂದ್ರರು ಅನ್ನೋ ಭಾವನೆ ಉಂಟಲ್ಲ. ಅದನ್ನ ತೆಗೆಯೋದಕ್ಕೆ ಆಗಲ್ಲ. ಆ ಛಲ, ಹಟ, ಅದನ್ನ ಬೆಳೆಸಬೇಕು ಎಷ್ಟು ಸಾಧ್ಯವೋ ಅಷ್ಟು… ಬೆಳೆಸಬೇಕು

ಅದನ್ನ ಹೇಗೆ ಬೆಳೆಸಬೇಕು?

ಸಂಘಟನೆ ಆಗಬೇಕು.. ಏಕೇಂದ್ರೆ ಶೂದ್ರರಿಗೆ ಛಲವುಂಟಲ್ಲ, ದು ಬೆಳೀಬೇಕು.

ಇಲ್ಲದಿದ್ದರೆ ಪ್ರಯೋಜಜವಿಲ್ಲ.

ಶೂದ್ರರು ಸಂಘಟಿತರಾಗಿದ್ದಾರಲ್ಲ?

ಆಗಿರೋದು ಸಾಲದು. ಇನ್ನೂ ಬೆಳೀಬೇಕು.

ನೀವು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು.ಈಗ ಶೂದ್ರರ ಹೋರಾಟ ಆಗಬೇಕು ಎಂದು ಹೇಳ್ತಿರೋದು ಯಾಕೆ?

ಸ್ವಾತಂತ್ರ್ಯ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಅದು ಸಾಲದು. ಶೂದ್ರಿಗೆ ಆರ್ಥಿಕ ಸ್ವಾತಂತ್ರ್ಯ ಸಿಗಬೇಕು. ಇಲ್ಲದಿದ್ರೆ ಶೂದ್ರರಿಗೆ ಸ್ಥಾನವಿಲ್ಲ. ಹಾಗೆ ಆಗಬಾರ್ದು. ಅದಕ್ಕಾಗಿ ಇನ್ನೂ ಹೋರಾಟ ಆಗ್ಬೇಕು.

ಶೂದ್ರರ ಸಂಘಟನೆ ಅಂದ್ರೆಜಾತಿ ಸಂಘರ್ಷ ಸಾಧ್ಯತೆ ಇದೆಯಲ್ಲ?

ಸಂಘರ್ಷವಿಲ್ಲದೇ ಮಾನವತ್ವ ಬರೋದಿಲ್ಲ. ಸಂಘರ್ಷ ಆಗಬೇಕು. ಸಂಘರ್ಷ ಯಾವುದರ ವಿರುದ್ಧ ಅಲ್ಲ. ಮಾನವತ್ವ ಬೆಳೆಸೋದಿಕ್ಕೆ ಶೂದ್ರ ಶಕ್ತಿಯ ಬೆಳವಣಿಗೆಯಿಂದ ಮಾತ್ರ ಮಾನವತ್ವ ಬೆಳೆಸೋದಿಕ್ಕೆ ಸಾಧ್ಯ.

ಮಾನವತ್ವದ ಬೆಳವಣಿಗೆಗೆ ಈಗ ಏನು ಅಡ್ಡಿಯಾಗಿದೆ?

ಏನು ಅಡ್ಡಿಯಾಗಿದೆ ಅಂತಾ ನಾನು ಹೇಳುವುದಿಲ್ಲ. ಮಾನವತ್ವ ಬೆಳೀಬೇಕು ಅಂದ್ರೆ ಮಾನವತ್ವ ಇಲ್ಲ ಅಂತ ಅರ್ಥ ಅಲ್ಲ. ಈಗ ಇರೋದು ಸಾಲದು. ಇನ್ನೂ ಬೆಳೀಬೇಕು ಬರೀ ಹೇಳಿದರೆ ಸಾಲದು. ಮಾಡಬೇಕು.

ದುಡಿಯುವ ವರ್ಗಗಳ ಹೋರಾಟ ಆಗ್ಬೇಕು ಎಂದು ದುಡಿದವರು ನೀವು. ಈಗ ಜಾತಿಗಳ ಹೋರಾಟ ಆಗ್ಬೇಕು ಅಂತಿದ್ದೀರಲ್ಲ?

ವರ್ಗಗಳ ಹೋರಾಟ ಬೇಡ ಅಂತಲ್ಲ. ಶೂದ್ರ ಹೋರಾಟ ಆಗ್ಬೇಕು. ಎಲ್ಲ ಒಟ್ಟಿಗೆ ಕೂಡಿ ಬೆಳೀಬೇಕು.

ಸಮಾಜವಾದಿ ಚಳವಳಿಯಲ್ಲಿ ಶೂದ್ರರ ಪಾರ್ಟಿಸಿಪೇಷನ್ಇತ್ತಾ?

ಇತ್ತು. ಆದರೆ ಅವರು ಲೀಡರ್ಸ್ ಆಗಿರಲಿಲ್ಲ.

ಉಳುವವನಿಗೆ ಭೂಮಿ ಎಂದಿದ್ದಿರಲ್ಲ. ಅದನ್ನ ದೇವರಾಜ ಅರಸು ಸರಕಾರ ಜಾರಿಗೊಳಿಸ್ತಲ್ಲ?

ಅವರಿಗೆ ಅವಕಾಶ ಸಿಕ್ತು. ಆದರೆ ಎಲ್ಲಾ ಸರಿ ಅಂತಾ ಹೇಳೋಕ್ಕಾಗಲ್ಲ.

ಏನು ತಪ್ಪಾಗಿದೆ?

ಅದನ್ನ ಹೀಗೇ ಅಂತ ಹೇಳೋಕ್ಕಾಗಲ್ಲ.

ಉಳುವವನಿಗೆ ಭೂಮಿ ಕಾನೂನು ಜಾರಿಯಾದ್ದರಿಂದ ಸಮಾಜವಾದಿಗಳ ಆಶಯ ಈಡೇರಿದಂತಾಗಲಿಲ್ಲವೇ?

ಈಡೇರಿದ್ದು ಸಾಕು ಅಂತಾ, ಮುಗೀತು ಅಂತಾ ಹೇಳೋಕ್ಕಾಗಲ್ಲ.

ನೀವು ಚಳವಳಿ ಕಟ್ಟುವಾಗ ಕಮ್ಯುನಿಸ್ಟ್ರೊಂದಿಗೆ ನಿಮ್ಮ ಸಂಬಂಧ ಯಾವ ರೀತಿ ಇತ್ತು?

ಕಮ್ಯುನಿಸ್ಟ್‌… ಅವರದು ಪ್ರೊಲೆತಾರಿಯೇತ್‌ ಡಿಕ್ವೇಟರ್‌ಶಿಪ್‌. ನಾವು ಅದನ್ನು ಒಪ್ಪುವುದಿಲ್ಲ. ಡಿಕ್ವೇಟರ್‌ ಶಿಪ್‌ ಬರಬಾರದು.

ನಿಮಗೆ ಅವರೊಂದಿಗೆ ಚರ್ಚೆ ಸಾಧ್ಯವಾಗ್ತಿತ್ತಾ?

ಚರ್ಚೆ ಮಾಡುತ್ತಿದ್ದೆವು. ಆದರೆ ಒಪ್ಪುತ್ತಿದ್ದಿಲ್ಲ.

ಇಂಡಿಯಾದಲ್ಲಿ ಕೋಮುವದ, ಭಯೋತ್ಪಾದನೆ ಬೆಳೀತಾ ಇರೋದಕ್ಕೆ ಕಾರಣ ಏನು ಅಂತ ನಿಮ್ಮ ಅಭಿಪ್ರಾಯ?

ಅದೆಲ್ಲ ಹೀಗೇ ಅಂತಾ ಹೇಳೋಕ್ಕಾಗಲ್ಲ. ಮಂಡೆ ಸರಿ ಇದ್ದವರು ಕೂತು ಚರ್ಚಿಸಬೇಕು. ಎಲ್ಲ ಕಡೆ ಸಮಾಜ, ಮಾನವೀಯತೆ ಬರುವ ಹಾಗೆ ಶೂದ್ರ ಚಳವಳಿ ಬೆಳೆಯಬೇಕು. ಅದರಿಂದ ಮಾತ್ರ ಪ್ರಯೋಜನ. ಅದು ಎಷ್ಟು ದೊಡ್ಡದು ಬೆಳೆಸಿದರೂ ಬೆಳೀತಾ ಹೋಗ್ತದೆ. ನಾನಿದನ್ನ ನಿಮಗೆ ಯಾಕೆ ಹೇಳ್ತೀದ್ದೀನಿ ಅಂದ್ರೆ ನಿಮಗೆ ಗೊತ್ತಿರ್ಲಿ ಅಂತ

ಮತ್ತೆ ಸಂಘರ್ಷ ಯಾಕೆ ಬೇಕು?

ಸಂಘರ್ಷ ಯಾಕೆ ಬೇಕು. ಅಂದ್ರೆ ಮಾನವತ್ವ ಬೆಳೆಸೋಕೆ.

ಯಾವ ಶಕ್ತಿಗಳ ನಡುವೆ ಸಂಘರ್ಷ ನಡೀಬೇಕು?

ಮಾನವ ಶಕ್ತಿಯ ನಡೀಬೇಕು. ನಾನು ಹೇಳಿದ್ದೇ ಸರಿ ಅಂತ ನಾನು ಹೇಳುವುದಿಲ್ಲ. ಲೋಹಿಯಾಮ, ಗಾಂಧಿ. ಜೆ.ಪಿ.ಹೇಳಿದ್ದು ಏನಿದೆಯಲ್ಲ ಅದೆಲ್ಲ ಒಟ್ಟು ಮಾಡಿದ್ರೆ ಮಾನವತ್ವ ಬರುತ್ತೆ.