ಪೊನ್ನಮ್ಮ, ಸಿಟ್ಟಿಗೆದ್ದರೆ ಯಾರೂ ಉಳಿಯುವುದಿಲ್ಲ! ತುಟಿಗಳ ನಡುವಿಂದ ಕಿಡಿ ಸಿಡಿಯುತ್ತಿರುವಂತೆ ಭಾಸವಾಗುತ್ತದೆ. ಶಾಂತವಾದರೆ, ಮನೆ ಮುಂದಿನ ಹೂಗಿಡದ ಮೇಲೆ ಕುಳಿತ ಪುಟ್ಟ ಹಕ್ಕಿಯೊಂದನ್ನು ಕಿಟಕಿಯಿಂದಲೇ ತೋರಿಸಿ… ಹೇಳುತ್ತಾರೆ: “ಈ ಹಕ್ಕಿಯನ್ನು ನೋಡಿ, ಪ್ರತಿ ದಿನ ಇದೇ ಟೈಮಿಗೆ ಸರಿಯಾಗಿ ಇಲ್ಲಿ ಕೂಡಲು ಬರುತ್ತದೆ. ಅದೆಷ್ಟು ಮುದ್ದಾಗಿ ಕೂಗ್ತದೆ ಗೊತ್ತಾ?”

ಅಪಾರ ಮಾನವತೆ ಮತ್ತು ಉಗ್ರ ನೈತಿಕತೆಯ ಸಂಗಮದಂತಿರುವ ಸಮಾಜವಾದಿ ಪೊನ್ನಮ್ಮಾಳ್ ಅವರ ಸೈದ್ಧಾಂತಿಕ ಪರಿಕ್ರಮ ಗಾಂಧಿ, ಲೋಹಿಯಾರನ್ನು ಹಾದು ‘ನಕ್ಸಲ್ ವಾದ’ದವರೆಗೆ ಚಲನಶೀಲವಾದುದು. ಹಿಂಸೆಯನ್ನು ವಿರೋಧಿಸುವ ಇವರು ನಕ್ಸಲೈಟರನ್ನು ಕೊಲ್ಲುವ ಹಿಂಸೆಯನ್ನು ಪ್ರಶ್ನಿಸುತ್ತಾರೆ. ನಕ್ಸಲೈಟರು ಬಂದೂಕು ಹಿಡಿಯಬೇಕಾದ ಅಗತ್ಯವನ್ನೂ ಕಾರಣಗಳನ್ನೂ ವಿಶ್ಲೇಷಿಸುತ್ತಾರೆ.

ಗಾಂಧೀಜಿ ಬೆಂಗಳೂರಿಗೆ ಭೇಟಿಕೊಟ್ಟಾಗ ಅವರ ತೊಡೆ ಮೇಲೆ ಕುಳಿತು, ಅವರ ಸೇವೆ ಮಾಡಿ, ಅವರಿಂದ ಚರಕಾವನ್ನು ಕೊಡುಗೆಯಾಗಿ ಪಡೆದವರು ಪೊನ್ನಮ್ಮ, ಸಾವರ್ಕರ್ ಶಿವಮೊಗ್ಗಾಕ್ಕೆ ಬಂದಾಗ ಸ್ವಯಂ ಸೇವಕಿಯಾಗಿ ಕಾರ್ಯಕ್ರಮದಲ್ಲಿ ಕೆಲಸ ಮಾಡಿ, ವೇದಿಕೆ ಮೇಲಿದ್ದ ಸಾವರ್ಕರ್ಗೆ ಕೆಂಪು ಟೊಪ್ಪಿಗೆ’ ಹಾಕಿದ್ದರಂತೆ. ನೀವೇಕೆ ಎಲೆಕ್ಷನ್ನಿಗೆ ನಿಲ್ಲಬಾರದು, ಎಂದು ಒಮ್ಮೆ ಲೋಹಿಯಾ ಕೇಳಿದರೆ, “ಏನು ಹಣ ಬಹಳ ಗಳಿಸಿದ ಹಾಗಿದೆ ನೀವು” ಎಂದು ಮರು ಪ್ರಶ್ನಿಸಿ ಬಾಯಿ ಕಟ್ಟಿದ್ದರಂತೆ.

೧೯೨೩ರಲ್ಲಿ ಹುಟ್ಟಿದ ಪೊನ್ನಮ್ಮಾಳ್ ಅವರ ತಂದೆ ಮೊದಲಿಗೆ ಶಿವಮೊಗ್ಗದಲ್ಲಿ ಖಾದಿ ಭಂಡಾರ ಆರಂಭಿಸಿದವರು. ರಾಷ್ಟ್ರೀಯ ಚಳವಳಿಯ ಹೋರಾಟಗಾರರೆಲ್ಲ ಇವರ ತಂದೆಯ ಸ್ನೇಹಿತರು. ಹಾಗಾಗಿ ಬಾಲ್ಯದಿಂದಲೇ ಹೋರಾಟಗಾರರ ಪರಿಸರದಲ್ಲಿ ಬೆಳೆದು, ವಿದ್ಯಾರ್ಥಿ ದೆಸೆಯಲ್ಲಿ ರಾಷ್ಟ್ರೀಯ ಸೇವಾದಳ ಸೇರಿದರು. ಕಾಲೇಜು ದಿನಗಳಲ್ಲಿ ಬೆಂಗಳೂರಿನಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದರು. ಚಳವಳಿಯ ಸಂಘಟನೆಗಾಗಿಯೂ ಶ್ರಮಿಸಿದರು.

ಕೌಟುಂಬಿಕ ಅನಿವಾರ್ಯತೆಗಾಗಿ ೧೯೪೪ರಲ್ಲಿ ‘ರಿನ್’ ಸೇನೆ ಸೇರಿ ಪೂನಾ, ಅಹಮದಾಬಾದ್, ಬಾಂಬೆ ಮತ್ತು ಆಗ್ರಾಗಳಲ್ಲಿ ಸೇವೆ ಸಲ್ಲಿಸಿದರು. ಸ್ವಾತಂತ್ರ ನಂತರ ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ಸೇರಿ ಕೆಲಕಾಲ ಸೇವೆ ಸಲ್ಲಿಸಿ ಹೆಚ್ಚು ದಿನ ಇರಲಾಗದೇ ಮತ್ತೆ ಶಿವಮೊಗ್ಗಾಕ್ಕೆ ಮರಳಿದರು. ಸಮಾಜವಾದಿ ಪಕ್ಷದ ಮಹಿಳಾ ವಿಭಾಗಕ್ಕೆ ದಕ್ಷಿಣ ಭಾರತದ ಸಂಚಾಲಕರಾಗಿದ್ದರು.

ಕಾಗೋಡು ಸತ್ಯಾಗ್ರಹದ ಸಂದರ್ಭದಲ್ಲಿ ಶಿವಮೊಗ್ಗಾದಲ್ಲಿದ್ದೇ ಅದರ ಭಾಗವಾಗಿ ಕೆಲಸ ಮಾಡಿದ ಇವರು, ಕರ್ನಾಟಕದ ಸಮಾಜವಾದಿ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಮೈಸೂರು ಪ್ರಾಂತದ ಪ್ರಜಾ ಸರ್ಕಾರದ ರಚನೆಗೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಭಾಗವಹಿಸಿ ಬಂಧಿತರಾಗಿದ್ದರು. ರೈತರ ಹಕ್ಕುದಾರಿಕೆಗಾಗಿ ನಡೆದ ಹೋರಾಟದಲ್ಲಿಯೂ ಬಂಧಿತರಾಗಿ ಎರಡು ತಿಂಗಳು ಜೈಲಿನಲ್ಲಿದ್ದರು. ಸಮಾಜವಾದ ಪಕ್ಷವು ಮಾಡಿಕೊಂಡ ಮೈತ್ರಿಗಳ ಬಗ್ಗೆ ಅಸಮಾಧಾನಗೊಂಡು ತುರ್ತುಪರಿಸ್ಥಿತಿಯ ನಂತರ ಸಮಾಜವಾದಿ ಸಂಘಟನೆಯಿಂದ ದೂರ ಸರಿದರು.

ಅನಂತರವೂ ಪೊನ್ನಮ್ಮಾಳ್ ಹಲವಾರು ಸಮಿತಿ, ವೇದಿಕೆ, ಸಂಘಟನೆಗಳ ಸದಸ್ಯರಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ೧೯೫೩ರಿಂದಲೇ ಮಹಿಳಾ ಸಮಾಜಗಳನ್ನು ರಚಿಸಿ, ಮಹಿಳೆಯರ ಸ್ವಾವಲಂಬನೆಗಾಗಿ ತರಬೇತಿ ನೀಡಿದ್ದಾರೆ. ಶಿಕ್ಷಣ ಸಂಸ್ಥೆಯ ಜವಾಬ್ದಾರಿ, ಗ್ರಾಹಕ ಹಿತರಕ್ಷಣೆಯ ಕೆಲಸ, ಪೋಲೀಸ್ ಹಿತ ಚಿಂತನೆ, ವಿದ್ಯಾರ್ಥಿ ವೇತನ ಪರಿಷ್ಕರಣೆ. ಹೀಗೆ ಯಾವುದರಲ್ಲೂ ಹಿಂದೆ ಬೀಳದ ಇವರು ಒಂದು ಅವಧಿಗೆ ತಾಲೂಕು ಬೋರ್ಡ ಸದಸ್ಯರೂ ಆಗಿದ್ದರು. ಬಹಳಷ್ಟು ಕಾಲ ‘ಮಹಿಳಾ ಜಾಗೃತಿ’ ಚಟುವಟಿಕೆಗಳೊಂದಿಗಿದ್ದ ಪೊನ್ನಮ್ಮ, ಸ್ವಾತಂತ್ರ ಹೋರಾಟಗಾರರ ಪಿಂಚಣಿಯನ್ನು ನಿರಾಕರಿಸಿರುವವರು. ಅವಿವಾಹಿತರಾಗಿಯೇ ಉಳಿದ ಪೊನ್ನಮ್ಮ ನಮ್ಮ ಸಹೋದರಿಯೊಂದಿಗೆ ಶಿವಮೊಗ್ಗದಲ್ಲಿ ವಾಸಿಸುತ್ತಿದ್ದಾರೆ. ಮ. ಮ. ಪಾಟೀಲ್ ಪ್ರತಿಷ್ಠಾನದಿಂದ ೨೦೦೭ರ ಜನಸೇವಕ ಪ್ರಶಸ್ತಿಯನ್ನು ಪಡೆದಿದ್ದಾರೆ. ರಾಜ್ಯ ಸರ್ಕಾರವು ಇವರಿಗೆ ಸುವರ್ಣ ಕರ್ನಾಟಕ ಏಕೀಕರಣ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ.

*

ಮೇಡಂ, ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸ್ಕೊಂಡು ಹೇಳ್ತೀರಾ? ನಿಮ್ಮ ಬಾಲ್ಯ, ಶಿಕ್ಷಣ, ಸ್ವಾತಂತ್ರ ಹೋರಾಟಗಾರರ ಪ್ರಭಾವ ಇವುಗಳ ಬಗ್ಗೆ?

ಎಷ್ಟು ವರ್ಷ ಹಿಂದಕ್ಕೆ ಹೋಗ್ಬೇಕು ಗೊತ್ತಾ, ೮೦ ಇಯರ್ಸ್ ಬ್ಯಾಕ್. ಈಗ ಓದಿದ್ದು ಈಗ್ಲೇ ಜ್ಞಾಪಕ ಇರಲ್ಲ ಈಗಿನ ಜನಕ್ಕೆ… (ನಗು)

ನೆನಪಿಗೆ ಸಿಕ್ಕಷ್ಟು ಹೇಳಿಸಾಕು?

ಪರವಾಗಿಲ್ಲ, ನೆನಪಿನ ಶಕ್ತಿ ಚೆನ್ನಾಗೇ ಇದೆ, ಹೇಳ್ತೀನಿ… ಹಳೇ ಮೈಸೂರು ಸಂಸ್ಥಾನದ ತುಮಕೂರು ಜಿಲ್ಲೆ ಮಧುಗಿರೀಲಿ ನಾನು ಹುಟ್ಟಿದ್ದು. ನನ್ನ ತಾಯಿಯವರ ತವರು ಮನೇಲಿ. ೧೯೨೩ ಅಕ್ಟೋಬರ್ ಹದಿನೇಳನೇ ದಿನ ನನ್ನ ಜನ್ಮದಿನ. ನನ್ನ ಸೋದರ ಮಾವಂದ್ರು ಜಸ್ಟೀಸ್ ನಾಗೇಶ್ವರಯ್ಯ ಅವರು ಮೈಸೂರು ಸಂಸ್ಥಾನದ ಹೈಕೋರ್ಟನಲ್ಲಿ ಜಸ್ಟೀಸ್ ಆಗಿದ್ದರು. ತಮ್ಮ, ಜಸ್ಟೀಸ್ ಸೋಮನಾಥ ಅಯ್ಯರ್ ಸ್ವಲ್ಪ ದಿವಸ ಯ್ಯಾಕ್ಟಿಂಗ್ ಗವರ್ನರ್ ಆಫ್ ಕರ್ನಾಟಕ ಗವರ್ನಮೆಂಟ್ ಎ ಪರ್ಸನ್ ಹೂ ಲೇಡ್ ದ ಫೌಂಡೇಶನ್ ಫಾರ್ ಅವರ್ ಕೋರ್ಟ. ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ತಾತ ಅವರು ಆಗಿನ ಕಾಲದಲ್ಲಿ ಬರೀ ಎಸ್. ಎಸ್. ಎಲ್. ಸಿ. ಪಾಸಾಗಿದ್ರು. ಅವರಿಗೆ ಅವಕಾಶ ಇತ್ತು, ಪ್ಲೀಡರ್ ಶಿಪ್ ಅಂತಾ ಆಗಿದ್ರು. ಹನ್ನೊಂದು ಗ್ರಾಮ ಜಹಗೀರು ತಗೊಂಡಿದ್ರು. ಇನ್ನೊಬ್ಬ ಸೋದರ ಮಾವ ಮದ್ರಾಸ್ ಪಾಲಿಟೆಕ್ನಿಕ್ ಇನ್ ಸ್ಟಿಟ್ಯೂಟ್ ಓಪನ್ ಮಾಡಿದ್ರು. ಇಂತಹ ಪರಿಸರದಲ್ಲಿ ನಮ್ಮ ತಾಯಿಯವರು ಆವಾಗ ಮಧುಗಿರಿನಲ್ಲಿ ಅವ್ರ ಸೋದರ ಮಾವನ ಮಗಳ ಜೊತೆ ಓದ್ತಿದ್ರು. ಮಧುಗಿರೀಲಿ ಸ್ಕೂಲಿರ್ಲಿಲ್ಲ. ಮಿಡ್ಲ ಸ್ಕೂಲಿತ್ತು. ಲೋಯರ್ ಸೆಕೆಂಡರಿ ಪರೀಕ್ಷೆಗೆ ಎತ್ತಿನಗಾಡೀಲಿ ಕುರಿತು ತುಮಕೂರಿಗೆ ಹೋಗ್ಬೇಕಿತ್ತು. ಹಾಗೆ ಎತ್ತಿನ ಗಾಡೀಲಿ ತುಮಕೂರಿಗೆ ಬಂದು ಲೋಯರ್ ಸೆಕೆಂಡರಿ ಪರೀಕ್ಷೆ ಪಾಸ್ ಮಾಡಿದ್ರು. ಆಮೇಲೆ… ಎರಡನೇ ದೊಡ್ಡಮ್ಮ ಅವ್ರ ಮದುವೆಯಾಗಿ ಮೂರು ತಿಂಗಳಿಗೆ ಅವರ ಗಂಡ ಹೋಗ್ಬಿಟ್ರು. ವಿಡೋ ಅವರು. ಅವರ ಸೋದರ ಮಾವ ಒಬ್ರು ರಿಜಿಸ್ಟ್ರಾರ್ ಆಫ್ ಸೊಸೈಟೀಸ್ ಏನೋ ಆಗಿದ್ರು. ಆತ ತುಂಬಾ ಎನ್ ಕರೇಜ್ ಮಾಡಿದ್ರು. ಸುಂದರಮ್ಮ ಅತ್ತೆ ಅಂತಾ, ಬಂಗಾಳಿ ಸ್ಟೋರೀಸ್, ಡ್ರಾಮಾಸ್ ಎಲ್ಲ ಟ್ರಾನ್ಸ್ ಲೇಟ್ ಮಾಡಿದ್ರು ಕನ್ನಡಕ್ಕೆ. ಅವಾಗ ನಮ್ಮ ತಾಯಿಯವರು ಮದುವೆ ಆಗಲ್ಲ ಅಂತಾ ಹಠಹಿಡಿದು ಕೂತಿದ್ರಂತೆ. ಇಬ್ರೂ ಅಕ್ಕಂದ್ರು ಪಾಪ ವಿಡೋಸ್ ಆಗಿದ್ರಲ್ಲ ಆವಾಗ ಯಾವ್ದೋ ಒಂದು ವರ ಬಂದಾಗ ಅವರು ಅಟ್ಟದ ಮೇಲೆ ಸೂರು ಹತ್ತಿ ಕುಳಿತ್ಬಿಟ್ರು. ಯಾರಾದ್ರೂ ಬಂದ್ರೆ ಮೇಲಿಂದ ಬಿದ್ದು ಸತ್ತೋಕ್ತೀನಿ ಅಂತಾ. ಅಷ್ಟು ಮುಂದುವರೆದಿದ್ರು ಅವ್ರು ಆವಾಗ (ನಗು) ಇಮ್ಯಾಜಿನ್, ಆ ಟೈಮು ಮಧುಗಿರಿ ವಾಸ್ ನಾಟ್ ಎ ಬಿಗ್ ಸಿಟಿ ಆರ್ ಎನಿಥಿಂಗ್, ಹಳ್ಳಿ. ಅಂಥಾ ವಾತಾವರಣದಲ್ಲಿ ಅದು. ಆ ಮೇಲೆ ಅವ್ರು ಬಂದವರು ಪರವಾಗಿಲ್ಲ ಇಳಿದು ಬಾರಮ್ಮ. ಮಾತಾಡಿ ಹೊರಟು ಹೋಗ್ತೀವಿ ಅಂತಾ, ವಾಪಾಸು ಹೋಗಿದ್ದಾರೆ.

ನಮ್ಮ ತಂದೆಯವರನ್ನ ಪ್ರಪೋಸ್ ಮಾಡಿದಾಗ ಅವರ ತಂದೆ ಹೋಗಿ ಬಿಟ್ಟಿದ್ರಂತೆ. ಒಬ್ರೇ ಮಗ ಅವರಿಗೆ. ನಮ್ಮಜ್ಜನ ಊರು ತಿರುಪತ್ತೂರು, ವೇಲೂರು ಡಿಸ್ಟ್ರಿಕ್ಟ್. ಅವರಿಗೂ ನಮ್ಮ ತಂದೆ ಒಬ್ರೇ ಮಗ. ನಮ್ಮಜ್ಜ ಪ್ರೆಸ್ ಇಟ್ಟಿದ್ರು. ಫಸ್ಟ್ ಪ್ರಿಂಟಿಂಗ್ ಪ್ರೆಸ್ ಇನ್ ಮದ್ರಾಸ್ ಪ್ರೆಸಿಡೆನ್ಸಿ. ಅದ್ರೊಳಗೆ ಸುಬ್ರಮಣ್ಯಂ ಭಾರತಿಯವರು ಬರೆದ ಸಾಂಗ್ಸ್ ಅನ್ನ ಪ್ರಿಂಟ್ ಹಾಕಿದ್ದರು. ಚಂದ್ರ ಅಯ್ಯರ್ ಅಂತಾ ಅವ್ರ ಹೆಸರು. ಎಲ್ಲರೂ ರೆಫ್ಯೂಸ್ ಮಾಡಿ ಬಿಟ್ರಂತೆ, ಹೆದರಿಕೆ ಇತ್ತು ಪ್ರಿಂಟ್ ಹಾಕೋಕು. ಏನು ಮಾಡಿ ಬಿಡ್ತಾರೋ ಏನೋ ಬ್ರಿಟೀಶರು ಅಂತಾ. ಆವಾಗ ಇವ್ರು ಇಸ್ಕೊಂಡು ಅಷ್ಟನ್ನೂ ಪ್ರಿಂಟ್ ಮಾಡಿ ಪಬ್ಲಿಷ್ ಮಾಡಿದಾರೆ. ಅದನ್ನ ನಾನು ಭಾಳ ದಿನದ ನಂತರ ಯೂನಿವರ್ಸಿಟಿಗೆ ಕೊಟ್ಟುಬಿಟ್ಟೆ. ಇಟ್ಕೊಂಡು ಏನು ಮಾಡೋದು ಹಾಳಾಗಿ ಬಿಡ್ತವೆ ಅಂತ. ಆ ಥರದ ಕನೆಕ್ಷನ್ ನನಗೆ. ನನ್ನ ತಂದೆಯವರ ತಂದೆಯಿಂದ. ಅವರಿಂದ ಈ ಬಳುವಳಿ ಬಂದಂಗೆ. ಅವ್ರು ಬೇಗ ಹೋಗಿಬಿಟ್ರು. ಹೋದಾಗ ನಮ್ಮ ಸೋದರಮಾವ, ತಂಗೀನ ಮತ್ತು ಸೋದರ ಅಳಿಯಾನ ಕರ್ಕೊಂಡು ಬಂದು ಬೆಂಗಳೂರಲ್ಲಿ ಇಟ್ಕಂಡು ಪ್ರೆಸ್ ಶುರು ಮಾಡಿದ್ರು. ‘ಬೆಂಗಳೂರು ಪ್ರಿಂಟಿಂಗ್ ಪ್ರೆಸ್’ ಮೊದ್ಲು ಶುರು ಮಾಡಿದ್ದು ಅವ್ರೇ. ನನ್ನ ತಂದೆಗೆ ಸೇಂಟ್ ಜೋಸೆಫ್ ಕಾಲೇಜಿಗೆ ಸೇರ್ಸಿ ಓದ್ಸಿದ್ದಾರೆ. ಅಷ್ಟೊತ್ತಿಗೆ ಆಲ್ ಇಂಡಿಯಾ ಸ್ಪಿನ್ನರ್ಸ್ ಅಸೋಷಿಯೇಷನ್ ಆಗಷ್ಟೇ ಸ್ಟಾರ್ಟಾಗಿತ್ತು. ಅವಾಗ ಕಾಂಗ್ರೆಸ್ ಅಂತಾ ಇರ್ಲಿಲ್ಲ. ಅಷ್ಟೊತ್ತಿಗೆ ಇವ್ರು ಇಂಟರ್ ಮೀಡಿಯೇಟ್ ಪಾಸ್ ಮಾಡಿದ್ರು. ಆಮೇಲ ಏನಾದ್ರೂ ಮಾಡ್ಬೇಕು ಅಂತಾ ಕರೆ ಬಂದಿತ್ತಂತೆ. ಅಲ್ಲಿಗೆ ಹೋಗಿ ೨ ವರ್ಷ ಕೆಲಸ ಮಾಡ್ಬಿಡು ಅಂತಾ. ಅಲ್ಲಿದ್ದಾಗ ಇವರಿಗೆ ಈ ಕನೆಕ್ಷನ್ ಅಲ್ಲಿ ಏನೋ ಏನೋ ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಂದ್ಬಿಟ್ರು. ಅಷ್ಟೊತ್ತಿಗೆ ನನ್ನ ಎಲ್ಡರ್ ಸಿಸ್ಟರ್ ಒಬ್ರು ಹುಟ್ಟಿ ಸತ್ತೋಗಿದ್ರು. ಅಲ್ಲಿಂದ ಬೆಂಗಳೂರಿಗೆ ಬಂದ್ವಿ. ಅಲ್ಲಿ ನಮ್ಮ ಸೋದರಮಾವನವರ ಪ್ರಿಂಟಿಂಗ್ ಪ್ರೆಸ್ ಇತ್ತು. ಆಗತಾನೆ ಹಿಂದುಸ್ತಾನಿ ಸೇವಾದಳ ತಲೆ ಎತ್ತುತ್ತಾ ಇತ್ತು. ಇವರಿಗೆ ಅವರದೆಲ್ಲಾ ಪರಿಚಯ ಸ್ಪಿನ್ನರ್ಸ್ ಅಸೋಷಿಯೇಷನ್ ನಿಂದ. ಕರಮರಕರ್, ಹರ್ಡೇಕರ್, ದಿವಾಕರ್, ಕೌಜಲಗಿ, ತಗಡೂರು ರಾಮಚಂದ್ರರಾಯರು ಅವರೆಲ್ಲಾ ಹಿಂದುಸ್ತಾನಿ ಸೇವಾದಳದಲ್ಲಿ ಸೇರ್ಕೊಂಡು, ಕಲ್ತ್ಕೊಂಡು, ಲಾಠಿ ಹಿಡ್ಕಂಡು ಸುಮಾರು ಎರಡು ವರ್ಷ ಮನೇನೇ ಸೇರಿದ್ದಿಲ್ಲಂತೆ. ಫುಲ್ ಟೈಮರ್ಸ್, ಅಷ್ಟೋತ್ತಿಗೆ ನಮ್ಮ ತಾಯಿಯವರ ತಂದೆ ಹೋಗ್ಬಿಟ್ರು. ಆವಾಗ ಈ ಖಾದಿ ಭಂಡಾರವನ್ನ ಫಸ್ಟ್ ನಂಜನಗೂಡಿನಲ್ಲಿ ೧೯೨೪ – ೨೫ರಲ್ಲಿ ಓಪನ್ ಮಾಡಿದ್ರು. ಅಲ್ಲಿ ೨ ವರ್ಷ ಕೆಲಸ ಮಾಡಿದ್ರು. ಅವಾಗ ನಾನು ನನ್ನ ತಮ್ಮ ಇಬ್ರೇ ಮಕ್ಳು. ಆವಾಗ ಇವ್ರು ಹೋಗೋರು ಓಡಾಟಕ್ಕೆ. ೧೯೨೮ಕ್ಕೆ ಇಲ್ಲಿ (ಶಿವಮೊಗ್ಗ) ಖಾದಿ ಭಂಡಾರ ಓಪನ್ ಆಯ್ತು. ಗುರುಮೂರ್ತಿಶಾಸ್ತ್ರಿಗಳು ಅಂತಾ, ಅವರ ಮನೆಯ ಒಂದು ಪೋರ್ಷನ್ ನಲ್ಲಿ ಬಾಡಿಗೆ. ತುಂಬಾ ಒಳ್ಳೇ ಜನಾರೀ ಆಗಿನ ಮಲೆನಾಡಿನ ಜನ. ಅವರ ಮನೇಲಿ ನಾನೇ ಮಗು. ಅಷ್ಟೊತ್ತಿಗೆ ‘ಮಾರ್ತಾಂಡ್’ ಅಂತ ಷಿಲ್ಲಾಂಗ್ ಕಡೆಯಿಂದ ಬಂದೋರು, ಅವರೇ ‘ಹಿಂದೂಸ್ತಾನಿ ಸೇವಾದಳ’ ಸ್ಟಾರ್ಟ್ ಮಾಡಿದ್ದು, ಎಸ್.ಪಿ.ಎಂ. ರೋಡ್ನಲ್ಲಿ. ಚಿಕ್ಕ ಬ್ರಾಹ್ಮಣರ ಬೀದಿ ಅಂತಾ, ಐದೇ ರೋಡ್ ಆವಾಗ.

೧೯೨೪ರಲ್ಲಿ ತುಂಗಾ, ನೆರೆ ಹಾವಳಿ ಬಂದು ಮುಗಿದಿತ್ತು. ಇಲ್ಲಿ ಸಿದ್ದೋಜಿರಾವ್ ಅಂತಾ ಕಾಂಟ್ರ‍್ಯಾಕ್ಟ್ರು ಇದ್ರು. ಆತನಿಗೆ ಮಕ್ಳು ಇರ್ಲಿಲ್ಲ. ಅಲ್ಲಿಗೆ ಶಿಫ್ಟ್ ಆದ್ವಿ. ಮಧ್ಯದಲ್ಲಿ ಒಂದು ವರ್ಷ ನಮ್ಮ ತಂದೆಯವರು ವಾಪಾಸು ಬೆಂಗಳೂರಿಗೆ ಹೋಗಿದ್ರು. ಆ ಟೈಮಿನಲ್ಲಿ ಒಂದು ವರ್ಷ ಬೆಂಗಳೂರಿನಲ್ಲಿ ಓದ್ತಿದ್ವಿ. ಅಲ್ಲಿಂದ ಮತ್ತೆ ಇಲ್ಲಿಗೆ ವಾಪಾಸ್ ಬಂದ್ವಿ. ನಮ್ಮ ತಾಯಿ ಭಾಳಾ ಶಿಸ್ತು. ಬೆಳಗಿನಜಾವ ಎಬ್ಬಿಸಿ ಮಗ್ಗೀ, ಬಾಯಿಪಾಠ ಹೇಳಿ ಕೊಡೋರು. ನಮ್ಮ ತಂದೆ ಸಂಜೆಗೆ, ಆವಾಗ ಪ್ರತಿನಿತ್ಯ ಐದುಪದ ಇಂಗ್ಲೀಷ್ ಕಲಿಸೋರು. ಆ ಪದಗಳ ಸ್ಟೆಲಿಂಗ್, ಅದರ ವರ್ಬ್‌ಫಾರ್ಮ್, ಅಡ್ ವರ್ಬ್‌ಫಾರ್ಮ್, ಅಡ್ಜೆಕ್ಟಿವ್ ಫಾರ್ಮ್ ಎಲ್ಲಾ ಹುಡುಕ್ಬೇಕು ನಾವು. ಡಿಕ್ಷನರಿ ಕೊಟ್ಟಿದ್ರು ನಮ್ಮಪ್ಪ ಇದೆಲ್ಲಾ ಸೆಕೆಂಡ್ ಸ್ಟ್ಯಾಂಡರ್ಡ್‌ನಲ್ಲೇ ಟ್ರೈನಿಂಗ್ ಥರಾ. ನಮ್ಮಪ್ಪ ಹೋಂವರ್ಕ್ ಮಾಡಿಸೋರು, ಶಾಲೆಯಲ್ಲಿ ಕಲಿತದ್ದನ್ನು ಚೆಕ್ ಮಾಡೋರು, ನಮ್ಮ ತಂದೆಯ ತಾಯೀನೂ ಇದ್ರು ಮನೇಲಿ.

ಸ್ವಾತಂತ್ರ್ಯ ಹೋರಾಟಾನು ಶುರು ಆಗಿತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮ್ ಪಾರ್ಟ್ ಆಫ್ ಇಟ್. ಉತ್ತರಕನ್ನಡ ಜಿಲ್ಲೆ ನಮ್ಮ ತಂದೆಗೆ ತುಂಬಾ ಪರಿಚಯ. ಅಲ್ಲಿ ಈ ಮೂವ್ ಮೆಂಟ್ ಸ್ವಲ್ಪ ಜೋರು. ಶಿರ್ಸಿ, ಸಿದ್ದಾಪುರ, ಅಂಕೋಲ, ಆ ಕಡೆ. ಅವರೆಲ್ಲಾ ನನ್ನ ತಂದೆಗೆ ಕ್ಲೋಸ್ ಫ್ರೆಂಡ್ಸ್ ಆಮೇಲೆ ಇವ್ರೆಲ್ಲ ಕದ್ದು ಮುಚ್ಚಿ ಓಡಾಡೋರಲ್ಲ ರಾತ್ರಿಹೊತ್ತು….

ನಮ್ಮಜ್ಜಿಗೆ ಪಾಪ! ಅವರ‍್ನೆಲ್ಲಾ ನೋಡ್ಬಿಟ್ಟು ಭಾಳಾ ವ್ಯಥೆ. ಊರೂರು ತಿರುಗ್ತಾರೆ, ಆರೋಗ್ಯ ಹೇಗೋ, ಪಾಪ ಅಂತೆಲ್ಲಾ ಬೆಳಗಿನ ಜಾವ ಎಬ್ಬಿಸಿ ನೀರು ಕಾಯ್ಸಿ, ಎಣ್ಣೆ ನೀರು ಹಾಕೋರು. ನಮಗೆಲ್ಲಾ ತಮಾಷೆಯಾಗಿರೋದು. ಇವ್ರಿಗೆ ಎಂಥಾ ನೀರು ಹಾಕೋದು ಅಂತಾ. ನಾವೆಲ್ಲಾ ಸಣ್ಣ ಹುಡುಗ್ರು ನೀರು ಹಾಕಿಸಿಕೊಳ್ತೀವಿ. ಅವ್ರೆಲ್ಲಾ ದೊಡ್ಡದೊಡ್ಡೋರು ಅಂತಾ. ಆಗ, ಹಾಗಲ್ಲಮ್ಮ, ಊರು ಊರು ತಿರುಗಾಡುತ್ತಾರೆ, ಕಷ್ಟಪಡ್ತಾರೆ, ಊಟ ಮಾಡ್ತಾರೋ ಇಲ್ವೋ, ತಲೆಗೆ ಎಣ್ಣೆ ಕಂಡಿರುತ್ತೋ ಇಲ್ವೋ ಇದೆಲ್ಲಾ ಸುಃಖ ದುಃಖ ವಿಚಾರಿಸೋರು. ಬೇಜಾರೇ ಇರ್ಲಿಲ್ಲ ಅವರಿಗೆ. ಅಡಿಗೆ ಮಾಡಿ ಬಡಿಸಿ, ಇವ್ರಿಗೆ ಎಣ್ಣೆ ನೀರು ಹಾಕೋದು… ಚೆನ್ನಾಗಿತ್ತು ಅದೆಲ್ಲಾ. ದಟ್ ಅಟ್ ಮಾಸ್ ಫಿಯರ್ ಇಟ್ ಹ್ಯಾಸ್ ಇಟ್ಸ್ ಓನ್ ಎಫೆಕ್ಟ್. ಆ ಒಂದು ಜೊತೆಗೆ ಆ ವಿಶ್ವಾಸ ಇತ್ತಲ್ಲ ಅದೆಲ್ಲಾ ಈಗ್ಲೂ ನನಗೆ ಪ್ರಭಾವಿಸ್ತದೆ.

ದಿವಾಕರ್, ಕರಮರಕರ್ ಅವರಿಗೆ ಮನೇಲಿ ಕೈತುತ್ತು ಹಾಕೋರು ಅಜ್ಜಿ. ಅಟ್ ಲೈಫ್ ವಾಸ್ ವೆರೀನೈಸ್. ಸಾಧಾರಣವಾಗಿ ನಮ್ಮ ತಂದೆ ಕಾಂಟ್ಯಾಕ್ಟಗೆ ಬಂದ ಎಲ್ಡರ್ಸ್ ಇದ್ದಾರಲ್ಲ ಅವರಲ್ಲಿ ಸುಮಾರು ಜನರಿಗೆ ಮಕ್ಕಳಿರ್ಲಿಲ್ಲ. ಕ್ಯಾನ್ ಯು ಬಿಲೀವ್ ಇಟ್? ಅವರೆಲ್ಲರ ಮನೆ ಮಗಳು ನಾನು. ಚನ್ನಗಿರಿ ಸೋಮಣ್ಣ ಶೆಟ್ರು ಅಂತಾ. ಅವರೆಲ್ಲಾ ನಮ್ಮ ತಂದೇನಾ ಬೈಯೋರು. ಸಂಘ ಅದೆಲ್ಲಾ ಅಂತಾ ಮಗಳ್ನ ಕೆಡಿಸ್ತಾನೆ ಅಂತಾ. ಅಷ್ಟೆಲ್ಲಾ ಪ್ರೀತಿ. ಎಸ್. ವಿ. ಕೃಷ್ಣಮೂರ್ತಿಯವರ ತಾಯಿಯವರಂತೂ ತುಂಬಾನೇ ಬೈಯೋರು… ಚೆನ್ನಾಗಿತ್ತು ಅದೆಲ್ಲಾ…

ಸೇವಾದಳದ ಬಗ್ಗೆ ಹೇಳಿ?

ಬರೀ ಗಂಡು ಹುಡುಗ್ರು. ನಾನು ಒಬ್ಳೇ.

ಎಷ್ಟು ವರ್ಷ ಆಗಿತ್ತು ಸೇರಿದಾಗ?

ಸೆವೆಂತ್ ಇಯರ್ ಏನೋ. ಇಲ್ಲಿ ಹಾರ್ಟಿಕಲ್ಚರ್ ಪಾರ್ಕ್ ಇದೆಯಲ್ಲ, ಅಲ್ಲಿ ಎರಡು ಬುಗರಿ ಮರ ಇದ್ದು. ಅದರ ಕೆಳಗೇ ನಮಗೆ ಟ್ರೈನಿಂಗ್. ಸ್ವಲ್ಪ ದಿವಸ ಮಾರ್ತಾಂಡ್ ಇದ್ರು. ಸರದಾರ್ ವೆಂಕಟರಾಮಯ್ಯ ಬರೋದಿಕ್ಕೂ ಮುಂಚೆ ಹರ್ಡೇಕರ್ ಇದ್ರು. ಅಪ್ಪ ಹೋದ್ಮೇಲೆ ಅವ್ರು ನಮ್ಮನ್ನು ಅಪ್ಪಿ ಅತ್ತೋರು.

ತಂದೆಯವರು ಹೋದಾಗ ನಿಮಗೆಷ್ಟು ವರ್ಷ?

೧೯೫೫ ಅವ್ರು ಹೋಗಿದ್ದು. ನಾನ್ ಹುಟ್ಟಿದ್ದು ೧೯೨೩.

ಸೇವಾದಳದ ಚಟುವಟಿಕೆ ಏನೇನ್ ನಡೀತಿದ್ದು, ಮೇಡಂ?

ಅವಾಗೆಲ್ಲ ಲೇಜಿಂ, ಲಾಠಿ ತಿರುಗಿಸೋದು, ಕತ್ತಿವರಸೆ, ಆಮೇಲೆ ಪ್ರಭಾತ್ ಪೇರಿ ಹೋಗ್ತಿದ್ವಿ.

ಲಾಠಿವರಸೆ ಮತ್ತು ಕತ್ತಿ ವರಸೆ ಇವನ್ನೆಲ್ಲಾ ಕಲಿಸೋ ಉದ್ದೇಶ ಏನಾಗಿತ್ತು?

ಸೇಫ್ ಗಾರ್ಡ್ ಯುವರ್ ಸೆಲ್ಪ್

ಗಾಂಧೀಜಿಯವರೇನು ಲಾಠಿಕತ್ತಿ ಬಗ್ಗೆ ಹೇಳಿರ್ಲಿಲ್ಲ ಅಲ್ವಾ?

ಹೇಳ್ದೇ ಇದ್ರೂನೂ, ನಾವು ಬರೀ ಮನುಷ್ಯರ ಜೊತೆಗಷ್ಟೇ ಮೂವ್ ಮಾಡ್ತಿರಲಿಲ್ಲ. ಅವಾಗೆಲ್ಲ ದಟ್ಟ ಕಾಡುಗಳಿರೋದು. ದರೋಡೆಕೋರರು ಅವ್ರೂ ಇವ್ರೂ ಓಡಾಡೋರು. ಆದ್ರೆ ಅದನ್ನ ಯಾವತ್ತೂ ಬಳಸ್ಲೇ ಇಲ್ಲ. ಇವತ್ತು ಈ ಅರೆಸ್ಸಿಸ್ಸಿನವರು ಬಳಸಿದ ಹಾಗೆ ಆವತ್ತು ಬಳಸ್ಲಿಲ್ಲ. ಕೈನಲ್ಲಿ ಇರೋದು ಬಿಸಾಕಿ ನಿಂತ್ಕೋಳ್ಕೋರು ಮಾತಾಡೋವಾಗ. ಆ ಸೆಲ್ಫ್ ಕಂಟ್ರೋಲ್ ಇದೆಯಲ್ಲ ಅದನ್ನ ಸಂತೋಷ ಪಡಬೇಕು. ಇವತ್ತು ನನಗೆ ಆ ಕಂಟ್ರೋಲ್ ಇಲ್ಲ. ಯಾವನಾದ್ರೂ ಏನಾದ್ರೂ ಅಂದ್ರೆ ಬೈತೀನಿ ನಾನು. ಆದ್ರೆ ಆ ಏಜ್ನಲ್ಲಿ ನಮಗದು ಇತ್ತು. ಕೈಯಲ್ಲಿ ಇರೋದನ್ನ ಬಿಟ್ಟು ಮಾತಾಡ್ತಿದ್ದವಿ.

ಸೇವಾದಳದ ಲಾಠಿಕತ್ತಿವರಸೆಗೆ ಗಾಂಧೀಜಿಯವರ ಸಹಮತ ಇತ್ತಾ?

ಹ್ಞಾಂ! ಇತ್ತಲ್ಲ ಅವರೇ ಒಂದು ಲಾಠಿ ಹಿಡ್ಕಂಡು ಓಡಾಡೋರು. (ನಗು)

ಅಂದ್ರೆ ಊರುಗೋಲಾಗಿ?

ಹೌದು… ಊರುಗೋಲಾಗೀನೇ. ಸೆಲ್ಪಡಿಫೆನ್ಸ್, ಅಗೆನಸ್ಟ್ ನೇಚರ್ ಇದು. ಅಷ್ಟೇನೇ. ಅಂದ್ರೆ ಹೆದರಿಕೆ ಇರೋದು ಜನಕ್ಕೆ, ದೇವಂಗಿ ಮಾನಪ್ಪ ಗೌಡ ಹೇಳೋರು ನನಗೆ ‘ಬಜಾರಿ ಬಂದ್ಲಪ್ಪಾ’ ಅಂತಾ. ಮಾನಪ್ಪ ಗೌಡ್ರು ಒಬ್ರೇ ಅಲ್ಲ, ಊರಿನ ಜನಾನೂ ಅಂದ್ರೆ ಅಭಿಮಾನದಿಂದ. ಆತ್ಮೀಯತೆ ಅಷ್ಟು. ನನಗಿವತ್ತು ಬುಕ್ಸ್ ಓದೋದು ಅದರ ಇಂಟ್ರೆಸ್ಟ್ ಕಲಿಸಿದ್ದೇ ಮಾನಪ್ಪಗೌಡ. ಕುವೆಂಪುಗೆ ಭಾವಮೈದ. ಅವರ ಲೈಬ್ರರಿ ನೋಡ್ಬೇಕಿತ್ತು. ವಿಪರೀತ ಬುಕ್ಸ್ ಕಲೆಕ್ಟ್ ಮಾಡಿಟ್ಟಿದ್ರು. ವಾರಕ್ಕೆ ಮೂರು ಸರ್ತಿ ಬುಕ್ಸ್ ತರ್ತಿದ್ದೆ ನಾನು.

ಕುವೆಂಪು ಅವರ ಜೊತೆಗೆ ನಿಮಗೆ ಬಾಲ್ಯದಲ್ಲಿ ಒಡನಾಟವಿತ್ತಾ?

ನನಗೆ ಮೇಷ್ಟ್ರು ಅವರು, ಸೆಂಟ್ರಲ್ ಕಾಲೇಜ್ ಗೆ ಬಂದ ನಂತರ. ಅಂದ್ರ ಕುವೆಂಪು ಮದುವೆ ಆದ್ಮೇಲ್ ನಮ್ಮ ಅವರ ಒಡನಾಟ. ಈ ಮಾನಪ್ಪಗೌಡ ಹೇಣ್ತೀನೂ, ಕುವೆಂಪು ಅವರ ಹೇಣ್ತೀನೂ…. ಮಾನಪ್ಪ ಗೌಡರ ತಂಗೀನೇ ಹೇಮ. ನಾವು ಹೋಗು ಬಾ ಅಂತೆಲ್ಲ ಮಾತಾಡೋರು. ಕಂಡೀಷನ್ ಕುವೆಂಪುದು ಏನಂತಂದ್ರೆ, ಹೇಮನ್ನ ನಾನು ಮದುವೆ ಮಾಡಿ ಕೊಳ್ಳೋದಾದ್ರೆ ಮಾನಪ್ಪ ಈ ಇವಳನ್ನ ಮಾಡ್ಕೋಬೇಕು ಅಂತ ಹಾಗೆ. ಮಾನಪ್ಪ ಗೌಡರ ಮದುವೇನೆ ಮುಂಚೆ ಆಗಿತ್ತು. ಆಮೇಲೆ ಹೇಮಂದು. ನಮಗೆ ದೇವಂಗಿ ರಾಮಣ್ಣನವರ ಬಳಕೆ ಬಹಳ ಚಿಕ್ಕಂದಿನಲ್ಲೇ ಇತ್ತು. ಮನೇಲೆಲ್ಲ ಓಡಾಡ್ಕಂಡು ತಿಂಡಿತಿಂದ್ಕೊಂಡು ಜಗಳಾಡ್ತಿದ್ವಿ. ಎಲ್ಲಾ ಮಾಡ್ತಿದ್ವಿ. ಅದೇ ಹೇಳ್ತೀನಿ… ಯಾರೂ ನಂಬೋದೇ ಇಲ್ಲ ಈಗ ಹೀಗಂದ್ರೆ (ನಗು) ಹೌದು ಅಂತಾರೆ.

ಪ್ರಾಥಮಿಕ ಶಾಲೆ ಅದೆಲ್ಲಾ ಹೇಗಿತ್ತು?

ತುಂಬಾ ಚೆನ್ನಾಗಿತ್ತು. ಈಗದು ಮಠ ಇದೆಯಲ್ಲ ಅಲ್ಲಿ.

ಶಿಕ್ಷಕರುಪಾಠ…. ಅದೆಲ್ಲಾ?

ಶಿಕ್ಷಕರು ನಮ್ಗೆ ಕುಕ್ಕೆ ಕೃಷ್ಣಶಾಸ್ತ್ರಿಗಳು ಅಂತಾ, ಸುಬ್ರಮಣ್ಯ ಶಾಸ್ತ್ರಿಗಳ ಬ್ರದರ್. ಆ ಮಮತೆ ಇದೆಯಲ್ಲ ಹೇಳಿಕೊಡುವಾಗ ನನಗೆ ಡಬಲ್ ಪ್ರಮೋಷನ್. ಅಂದ್ರೆ ಫಸ್ಟ್ ಸ್ಟ್ಯಾಂಡರ್ಡ್ ನಾನು ಓದ್ಲೇ ಇಲ್ಲ. ನೇರವಾಗಿ ಸೆಕೆಂಡ್ ಸ್ಟ್ಯಾಂಡರ್ಡ್. ಅಲ್ಲಿ ಮುಗಿಸ್ಕಂಡು ಅಷ್ಟೋತ್ತಿಗೆ ಗರ್ಲ್ಪ ಮಿಡ್ಲ್ ಸ್ಕೂಲ್ ಶುರುವಾಗಿತ್ತು. ಆಂಗ್ಲೋ ವರ್ನಾಕ್ಯುಲರ್ ಮಿಡ್ಲ್ ಸ್ಕೂಲ್. ಅಲ್ಲೂ ಅಷ್ಟೇ ನಾನು ಪೋರ್ತ್ ಸ್ಟ್ಯಾಂಡರ್ಡ್ ಓದ್ಲೇ ಇಲ್ಲ. ಅಲ್ಲೂ ಪ್ರಮೋಷನ್.

ಖಾದಿ ಮಾರಾಟ ಮಾಡ್ತಿದ್ದೆಲ್ಲ ಯಾವಾಗ್ಲಿಂದ?

ಆವಾಗ್ಲೇ. ಅಂದ್ರೆ ಸೇವಾದಳದಲ್ಲಿ ಬೆಳಿಗ್ಗೆ ಪ್ರಭಾತ್ ಪೇರಿ ಮಾಡ್ತಿದ್ದೆವಲ್ಲ. ಅವಾಗ ಹೆಗಲ ಮೇಲೆ ಕರ್ಚೀಫ್ ಗಳು. ಬಟ್ಟೆಗಳು ಹಾಕ್ಕೊಂಡು ಹೋಗೋದು. ದಾರೀಲಿ ಯಾರಾದ್ರೂ ಕೊಂಡುಕೊಂಡ್ರೆ ಅಲ್ಲೇ ಮಾರೋದು. ಅದು ಊರೊಳಗಿಂದು. ಆಮೇಲೆ ೧೦ನೇ ವರ್ಷ ಶುರುವಾದಾಗ ಹಳ್ಳಿಗಳ ಮೇಲೆ ಹೋಗಿ ಮಾರಾಟ ಮಾಡ್ತಿದ್ವಿ. ಏನ್ ಮಾಡೋರಂದ್ರೆ ಹಳ್ಳೀನಲ್ಲಿ… ಕೃಷ್ಣರಾಯರು ಗೊತ್ತಲ್ಲ…. ಕತೆ….

.. ಕೃಷ್ಣರಾಯರು?

ಹ್ಞಾಂ! ಅವರ ಅಕ್ಕ. ಇಕ್ಕೇರಿ ಇದೆಯಲ್ಲ, ಸಾಗರ ತಾಲ್ಲೂಕು ಅಲ್ಲಿ ಅವರ ಮನೆ. ಅವರಿಗೆ ಮಕ್ಕಳಿಲ್ಲ. ಅಲ್ಲೇನಾಗಿತ್ತಂದ್ರೆ… ಬದ್ರೀ ನಾರಾಯಣ ಅಯ್ಯಂಗಾರ್ ಅವರ ಮಾವನವರ ಮನೆ ಅದೂ ಅಲ್ಲೇ ಸಾಗರದಲ್ಲೇ. ನಮ್ಮ ತಂದೆಗೆ ಅವರೆಲ್ಲಾ ಪರಿಚಯ ಅಲ್ಲಿ. ಖಾದಿ ಬಟ್ಟೆಗಂಟು ಕಟ್ಟಿ ಡ್ರೈವರ್ ಗೆ ಹೇಳೋದು, ನೋಡಪ್ಪಾ ಇಲ್ಲಿ ಇಳಿಸ್ಪಿಡು ಅಂತಾ. ಆ ಹಳ್ಳಿಗಳ ಮೇಲೆ ನಾವು ಹೋದಾಗ ಕೊಂಡು ಕೊಳ್ಳೋರು ಬರೀ ಗಂಡು ಮಕ್ಳು. ಆಗಿನ ಕಾಲದಲ್ಲಿ ಗಂಡು ಮಕ್ಳೀಗೂ ಕೂದಲುಗಳು ಇರೋದು. ಎಷ್ಟು ಚೆನ್ನಾಗಿ ಇರೋದ್ರೀ ಕೂದ್ಲು ಅವ್ರಿಗೆ. ಪ್ರತೀ ಮನೆಯವರೂ ಕಾಂಪಿಟೀಶನ್ ಮೇಲೆ ಜಡೆ ಹಾಕೋರು ನಮಗೆ. ಜಡೆ ಹಾಕಿ, ಬೇಲಿನಲ್ಲಿ ಬಿಟ್ಟಿರ್ತಾವಲ್ಲ ಹೂವು ಅವನ್ನ ಮುಡಿಸಿ, ಆ ಮೇಲೆ ಚಕ್ಕೋತ್ನೆ ಕಾಯಿ ಬಿಡಿಸಿ ಕೊಟ್ಟು ಉಪ್ಪು ಖಾರ ಕೊಟ್ಟು ಪ್ಯಾಕ್ ಮಾಡಿ ಕೊಟ್ಟು ಗಂಟು ಕಟ್ಟಿ ಕಳಿಸಿ ಕೋಡೋರು.

ಖಾದಿ ಯಾರು ಹೆಚ್ಚಾಗಿ ಕೊಂಡು ಕೊಳ್ತಾ ಇದ್ರು?

ಅವ್ರು ಇವ್ರು ಅಂತಾ ಏನೂ ಇಲ್ಲ ಅದ್ರಲ್ಲಿ. ಏನೋ ಖಾದಿ ಕೊಳ್ಳೋದೇ ಒಂದು ಸಂಭ್ರಮ ಅವರಿಗೆ ಆವಾಗ.

ವಿದ್ಯಾವಂತರ ಮನೆಯವ್ರು ಹೆಚ್ಚು ಖಾದಿಕೊಳ್ಳುತ್ತಿದ್ದರೇನೋ?

ಎಲ್ಲಿ ಇದೆ ನಿಮಗೆ ಮಲೆನಾಡ ಹಳ್ಳಿಗಳಲ್ಲಿ ವಿದ್ಯೆ. ವೆರಿ ಫ್ಯೂ ಎಜುಕೇಟೆಡ್ ಫ್ಯಾಮಿಲೀಸ್. ಆದ್ರೆ ಆ ಭಾವನೆ ಇತ್ತು ಅವರಿಗೆ. ಗಾಂಧೀಜಿ ಬಗ್ಗೆ ಎಲ್ಲ ಕಡೆ ಗೊತ್ತಿತ್ತು. ಖಾದಿ ಅಂದ್ರೆ ಗಾಂಧೀ ಅಂತಾ. ಹುಡುಗ್ರು ಖಾದಿ ತರ್ತಾರೆ. ಅದನ್ನ ಕೊಂಡು ಕೊಳ್ಳಬೇಕು ಅಷ್ಟೇ.

ಅಂದ್ರೆ ಬಹುತೇಕ ಊರಿನ ಮುಖ್ಯಸ್ಥರ ಮನೆಯವ್ರಾ ಅಥವಾ ಸಾಮಾನ್ಯ ಜನಾನು ಕೊಂಡು ಕೊಳ್ತಾ ಇದ್ರಾ?

ಸಾಮಾನ್ಯ ಜನಾನೇ ಜಾಸ್ತಿ ತಗೊಳ್ತಾ ಇದ್ದದ್ದು. ಅವರು ಇಂಥಾ ಬಟ್ಟೆ ಅಂತಾ ತಗಂಡು, ಅವರೇ ಬಿಲ್ಲು ಬರ್ದು ದುಡ್ಡು ನಮ್ಮ ಜೇಬಿನಲ್ಲಿ ಹಾಕಿ ಬಟ್ಟೆಗಂಟು ಪ್ಯಾಕ್ ಮಾಡಿ ಬಿಟ್ಟು ಕಳಿಸಿಕೊಡೋರು.

ಇದೆಲ್ಲಾ ಎಷ್ಟು ದಿವ್ಸ ಮಾಡಿದ್ರೀ?

ಸುಮಾರು ಲೋಯರ್ ಸೆಕೆಂಡರಿ ಪಾಸಾದ ಮೇಲೂ ಒಂದು ಸ್ವಲ್ಪ ದಿವಸ ಮಾಡಿದ್ವಿ.

ಇದಾದ ಮೇಲೆ ಬೆಂಗಳೂರಿಗೆ ಹೋದ್ರಾ?

ಇಲ್ಲಪ್ಪಾ. ಇಲ್ಲೇ ಕಾನ್ವೆಂಟ್ ಶುರುವಾದ ದಿವಸ ಅದು. ಇಲ್ಲೀ ಪ್ರೈಮರಿ ನಡೀತಿತ್ತು. ಗರ್ಲ್ಸ್‌ಗೆ ಹೈಸ್ಕೂಲು ಇರ್ಲಿಲ್ಲ. ಈ ಗವರ್ನ್ ಮೆಂಟ್ ಬಾಯ್ಸ್ ಹೈಸ್ಕೂಲ್ ಇದೆಯಲ್ಲ ಅಲ್ಲಿ ಮೂರೇ ಜನ ಹೆಣ್ಮಕ್ಳು ಓದೋರು. ಆಗ ನಾವು ಅವರನ್ನ ಆಶ್ಚರ್ಯದಿಂದ ನೋಡ್ತಿದ್ವಿ. ಒಬ್ರು ಹೈಸ್ಕೂಲ್ ಹೆಡ್ ಮಿಸ್ಸೆಸ್ ಮಗಳು. ಇನ್ನೊಬ್ರು ಹನುಮಂತರಾವ್ ಅಂತಾ ಇದ್ರು ಸೂಪರಿಂಟೆಂಡೆಂಟ್ ಅವರ ಮಗಳು. ಇನ್ನೊಬ್ರು ಶಾರದಾದೇವಿ ಹೈಸ್ಕೂಲ್ ಇದೆಯಲ್ಲ ಅವ್ರ ಜನರ ಕಡೆಯವ್ರು. ಅಷ್ಟೋತ್ತಿಗೆ ಕಾನ್ವೆಂಟ್ ಹೈಸ್ಕೂಲ್ ಶುರು ಆಯ್ತು. ಫಸ್ಟ್ ಬ್ಯಾಚ್ ನಾವೇನೇ. ಐದೇ ಜನ. ಅದ್ರಲ್ಲಿ ಎಸ್. ಎಸ್. ಎಲ್. ಸಿ. ಬರೋ ಹೊತ್ತಿಗೆ ಇನ್ನಿಬ್ರು ಬಿಟ್ಟು ಹೋಗಿದ್ರು. ಮೂರೇ ಜನ ಉಳಿದದ್ದು. ನಮಗೆ ಪಾಠ ಮಾಡೋರು ಫಾರೆನರ್ಸ್. ಬೆಲ್ಜಿಯಂ, ಫ್ರಾನ್ಸ್, ಅಲ್ಲಿಂದ ಬಂದವ್ರು. ಅವರು ನಮ್ಮನ್ನು ಮೈಚೈಲ್ಡ್, ಮೈಚೈಲ್ಡ್ ಅಂತಾನೇ ಅಡ್ರಸ್ ಮಾಡೋರು ನೋಡಿ.

ನೀವು ಸೇವಾದಳದಲ್ಲಿದ್ದು ಬ್ರಿಟೀಷ್ ವಿರೋಧಿ ವಿಚಾರಗಳನ್ನು ಕಲೀತಿದ್ರೀ. ಇಲ್ಲಿ ಶಾಲೇಲಿ ವಿದೇಶಿ ಶಿಕ್ಷಕಿಯರಿರ್ತಿದ್ರು. ಇವೆರಡರ ನಡುವೆ ಕಾನ್ ಫ್ಲಿಕ್ಟ್?

ನೋ ಕಾನ್ ಫ್ಲಿಕ್ಟ್. ಏಕೆಂದ್ರೆ ಅದಕ್ಕೂ ಮುಂಚೆಯೇ ಗರ್ಲ್ಸ್‌ಗೈಡ್ ಟ್ರೇನಿಂಗ್ ಆಗಿತ್ತು. ರೆಡ್ ಕ್ರಾಸ್ ಟ್ರೈನಿಂಗ ಆಗಿತ್ತು. ನಾನು ಫಸ್ಟ್ ಏಡ್ ಕಲ್ತಿದ್ದೆ. ಅಷ್ಟಕ್ಕೂ ಅದು ಫಸ್ಟ್ ಬ್ಯಾಚ್ ರೀ. ಅದ್ಕೇ ಜನ ಹಂಗೆ. ಅಷ್ಟೊತ್ತಿಗಾಗ್ಲೆ ಹೆಣ್ಮಕ್ಳು ಹೊರಗೆ ಬರೋಕೆ ಶುರು ಮಾಡಿದ್ರು.

ಟೀಚರ್ಸ್ ನಿಮ್ಮ ಸೇವಾದಳದ ತರಬೇತಿ ಬಗ್ಗೆ ಸಣ್ಣ ಅಸಹನೆಯಾಗಲಿ, ಅಥವಾ ತಮ್ಮ ಇಂಗ್ಲೀಷ್ ಸಂಸ್ಕೃತೀನಾ ನಿಮ್ಮ ಮೇಲೆ ಪ್ರಭಾವ ಬೀರೋದಾಗಲಿ ಮಾಡ್ತಿದ್ರಾ?

ಇಲ್ಲ. ಯಾವ್ದೂ ಇಲ್ಲ. ಇಂಗ್ಲೀಷ್ ಮೀಡಿಯಂ ಶುರುವಾಗಿದ್ದೇ ಹೈಸ್ಕೂಲ್ ನಲ್ಲಿ. ಅಲ್ಲೀತನ ಇಂಗ್ಲೀಷ್ ಮೀಡಿಯಂ ಇರ್ಲಿಲ್ಲ. ಒಂದು ಬುಕ್ ಮಾತ್ರ ಓದಿದ್ವಿ ಅಷ್ಟೇ. ಅವ್ರು ಯಾವ ಬಗ್ಗೇನೂ ಡಿಸ್ಕರೇಜ್ ಮಾಡ್ಲಿಲ್ಲಪ್ಪ.

ಎಸ್. ಎಸ್. ಎಲ್. ಸಿ. ಪಾಸಾದ ನಂತರ?

ನಾನು ಹೋಗಿ ಇಂಟರ್ ಮೀಡಿಯೇಟ್ ಮಾಡಿದೆ ಮಹಾರಾಣಿಯಲ್ಲಿ. ಕಾಲೇಜ್ ಪೂರ್ತಿ ಬೆಂಗಳೂರಿನಲ್ಲಿ. ಸಿ. ಬಿ. ಜಡ್ ಮೆಡಿಕಲ್ ಗೆ ಹೋಗ್ಬೇಕು ಅಂತಾ ಭಾಳಾ ಆಸೆ ಇತ್ತು. ಮೈಸೂರಿನಲ್ಲಿ ಎಂ.ಬಿ.ಬಿ.ಎಸ್. ಕಾಲೇಜ್ ಇತ್ತು. ಅದ್ರಲ್ಲೂ ಹೆಣ್ಮಕ್ಳಿಗೆ ಮೂರೇ ಸೀಟು. ಆ ಮೂರರಲ್ಲಿ ಒಂದು ವಿಡೋ. ಒಂದು ಡೆಸರ್ಟೆಡ್ ವೈಫ್, ಇನ್ನೊಂದು ಇತರೆ ಜಾತಿ. ಆ ಮೂರಕ್ಕೂ ನಾವು ಅರ್ಹರಲ್ಲ. ಹಂಗಾಗಿ ಫಸ್ಟ್ ಇಯರ್ನಲ್ಲಿ ನನಗೆ ಅಡ್ಮಿಪನ್ ಸಿಗ್ಲಿಲ್ಲ. ಸೆಕೆಂಡ್ ಇಯರಲ್ಲಿ ಒನ್ ಇಯರ್ ಏಜ್ ಕಮ್ಮೀ ಆತು. ಥರ್ಡ್ ಟೈಮು ನಾನೇ ಅಪ್ಲೇ ಮಾಡ್ಲಿಲ್ಲ. ಡಾ. ರಾಬಿನ್ ಸನ್ ಅಂತಾ ನನ್ನ ತಂದೆಯ ಫ್ರೆಂಡು ಮೆಡಿಕಲ್ ಕಾಲೇಜ್ ಪ್ರಿನ್ಸಿಪಾಲ್ರು. ನಿನಗೆ ಈ ಸಾರಿ ಸೀಟು ಕೊಡ್ತೇವೆ ಬಾರಮ್ಮ ಅಂತಾ ಹೇಳಿ ಕಳ್ಸಿದ್ರು. ಆದ್ರೆ ನಾನು ಮೆಡಿಕಲ್ ಓದೀನೇ ಜನಸೇವೆ ಮಾಡೋ ಅಗತ್ಯ ಇಲ್ಲ ನನಗೆ, ನಾನು ಹಾಗೇ ಮಾಡ್ತೀನಿ ಅಂತಾ…. ಆ ಇದು ಬೆಳಿಯೋಕೆ ಅವಕಾಶ ಇತ್ತು ಆಗ. ಐ ಫೀಲ್ ರಿಯಲಿ ಹ್ಯಾಪಿ ದಟ್ ಐ ರೆಫ್ಯೂಜ್ ಟು… ಆಫ್ ದಟ್ ಟೈಮ್. ಯಾಕಂದ್ರೆ ಇಷ್ಟು ವೈಡ್ ಎಕ್ಸ್ ಪೋಜರ್ ಅವಾಗ ಸಿಗ್ತಾ ಇರ್ಲಿಲ್ಲ.

ಬಿ. ಎಸ್ಸಿ ಯಲ್ಲಿ?

ಚಂಪಾ ಬಾಯಿ ಅಂತಾ ಇದ್ರು ಕನ್ನಡಕ್ಕೆ, ವಿಡೋ. ವಂಡರ್ ಪುಲ್ ಟೀಚರ್. ದೇವಿ ಚೌಧುರಾಣಿ ನಮಗವಾಗ ಟೆಕ್ಸ್ಟ. ನಾವು ಪುಸ್ತಕಾನೇ ಓಪನ್ ಮಾಡ್ಲಿಲ್ಲ. ಅಷ್ಟು ಚೆನ್ನಾಗಿ ಪಾಠ ಮಾಡ್ತಿದ್ರು. ಸೆಂಟ್ರಲ್ ಕಾಲೇಜಿನಲ್ಲಿ ಮಿಸ್ ಸ್ಟಾಮ್ಯುಸ್ ಅಂತಾ ಇದ್ರು. ನಮ್ಮ ಎಕ್ಸಪ್ರೆಶನ್ ಗೆ ತುಂಬಾ ಅವಕಾಶ ಕೊಡ್ತಿದ್ರು ಮಹಾರಾಣಿನಲ್ಲಿ. ಅವ್ರು ಕೇಳಿದ ‘ಸೆಕ್ಸ್’ ಬಗೆಗಿನ ಒಂದು ಪ್ರಶ್ನೆಗೆ ಯಾರಿಂದ್ಲೂ ಉತ್ತರ ಕೊಡೋಕೆ ಆಗಿರ್ಲಿಲ್ಲ. ಈಗಿನವರಾ….

ಇವತ್ತಿನ ಆಧುನಿಕತೆಯ ಪ್ರಭಾವ?

ಆಧುನಿಕತೆ ಅಂತಾ ಅಂದ್ಕೋತೀವಿ. ಮೆನಿ ಮೆನಿ ಟೈಮ್ಸ್ ಇಟ್ ಮಿಸ್ ಲೀಡ್ಸ್ ಯು. ಟೂ ಮಚ್ ಆಫ್ ಎಕ್ಸ ಪೋಜರ್ . ಆವಾಗ ಏನೂ ಗೊತ್ತಿಲ್ಲ ನಮಗೆ.

ಕುವೆಂಪು ಹೇಗೆ ಪಾಠ ಮಾಡ್ತಿದ್ರು ಮೇಡಂ?

ಕುವೆಂಪುಗೆ ಪಾಠ ಮಾಡೋಕೇ ಬರ್ದು. ನಿಮಗೆ ಗೊತ್ತಿಲ್ವಾ ಅದು.

ಇಲ್ಲ ಮೇಡಂ?

ನಮಗೆ ಅವರೇ ಬರೆದ ರಾಮಕೃಷಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಎರಡೂ ನಮಗೆ ಟೆಕ್ಸ್ವು ಬಿಎಸ್ಸಿಗೆ. ನಮಗೆ ಅವರ ಪರಿಚಯ ಇತ್ತಲ್ಲ ಮೊದ್ಲೇ. ಈ ಕುವೆಂಪು ಹೆಂಗೆ ಪಾಠ ಮಾಡ್ತಾರೆ ಅಂತ ಕುತೂಹಲ. ಅವರು ಬಂದದ್ದೇ ಪುಸ್ತಕಾನ ಬಿಚ್ಚಿ ಮುಖಕ್ಕೆ ಅಡ್ಡಾ ಹಿಡ್ಕಂಡು ಹತ್ತು ಹದಿನೈದು ಪೇಜ್ ಓದ್ಬಿಟ್ಟು ಇದಿಷ್ಟನ್ನೂ ನಾಳೆ ನೀವು ಓದ್ಕಂಡ್ ಬನ್ನಿ ಅಂತ್ಹೇಳಿ ಹೊರಟು ಬಿಡೋರು. (ನಗು) ಅವತ್ತಿನ ದಿವಸ ಅವರಿಗೆ ಭಾಷಣ ಮಾಡೋಕೂ ಬರ್ದು. ಪಾಠ ಮಾಡೋಕೂ ಬರ್ದು. ಆದ್ರೆ ಅವರ ಬರವಣಿಗೆ ಇದೆಯಲ್ಲ …. ಅಬ್ಬಾ ಇನ್ನೆಂತ ಬರವಣಿಗೆ ಅದು! ಆಮೇಲೆ “ಮಾನಪ್ಪ, ಭಾವ ಭಾಳ ಚೆನ್ನಾಗಿ ಪಾಥ ಮಾಡಿದ್ರು” ಅಂತಾ ನಗೋದು ನಾವು. ಅವರಿಗೂ ಬರ್ದು, ಬಿ. ಎಂ, ಶ್ರೀಕಂಠಯ್ಯನವರಿಗೂ ಬರ್ದು ಚೆನ್ನಾಗಿ ಪಾಠ ಮಾಡೋಕೆ. ಆದ್ರೆ ಅವರು ಶೇಕ್ಸ್ ಪಿಯರ್ಸ್ ಟ್ರ್ಯಾಜಿಡೀಸ್ ಗೆ ಎಲ್ಲಾ ಮಾಸ್ಟರು. ನಮಗೆ ಅವರು ಒಥೆಲೋ ಒಂದನ್ನು ಬಿಟ್ಟು ಎಲ್ಲವನ್ನೂ ಮಾಡೋರು. ಅವರ ತಮ್ಮ ಶಿವರಾಮಯ್ಯನವರ ಮಗಳು ನಮ್ಮ ಕ್ಲಾಸಮೇಟು. ಎಷ್ಟು ಚೆನ್ನಾಗಿ ಎಲ್ಲಾ ಟ್ರಾಜಿಡಿಗಳನ್ನು ಡೀಲ್ ಮಾಡೋರು ಅಂದ್ರೆ ಆಶ್ಚರ್ಯ ಆಗೋದು. ಆ ಜ್ಞಾಪಕ ಶಕ್ತಿ, ಆ ಲಾಂಗ್ವೇಜ್ ವಂಡರ್ ಫುಲ್.

ಕಾಲೇಜ್ ದಿನಗಳು ಮುಗಿದ ಮೇಲೆ ಚಳವಳಿಯಲ್ಲಿ ಹೇಗೆ ತೊಡಗಿಸಿಕೊಂಡ್ರಿ?

ಮುಗಿದೇ ಇರ್ಲಿಲ್ಲ. ಫೈನಲ್ ಬಿ. ಎಸ್ಸಿನಲ್ಲಿ ಆಗಸ್ಟ್ ವರೆಗೂ ಅಷ್ಟೇ. ನಾನು ಕ್ಲಾಸ್ ಗೆ ಹೋಗಿದ್ದು. ನಂತರ ಸ್ಟೂಡೆಂಟ್ ಮೂವ್ ಮೆಂಟ್ ಬಂತಲ್ಲ. ಕ್ವಿಟ್ ಇಂಡಿಯಾ ೪೨ನಲ್ಲಿ. ಆವಾಗ ಕಾಲೇಜ್ ಬಿಟ್ಟಿಟ್ಟೆ ನಾನು. ಆಮೇಲೆ ಪರೀಕ್ಷೆಗೆ ಕುತ್ಕೋ ಅಂತ ಎಲ್ಲರೂ ಬಹಳ ಹೇಳಿದ್ರು. ಆದ್ರೆ ನಂತರ ಟೂ ಇಯರ್ಸ್ ಒಂಥರಾ ಭೂಗತರಾಗಿ ಓಡಾಡ್ದಂಗೆ.

ಭೂಗತವಾಗಿದ್ದಾಗ ತುಂಬಾ ಯ್ಯಾಕ್ಟಿವ್ ಆಗಿ ನಿಮಗೆ ಕೆಲ್ಸ ಮಾಡೋಕೆ ಆಗ್ತಿತ್ತಾ?

ಆಗ್ತಿತ್ತಪ್ಪಾ ಮಾಡೋಕೆ. ಆದ್ರೆ ಸರ್ದಾರ್ ವೆಂಕಟರಾಮಯ್ಯನವರೂ ಭೂಗತವೇ. ನಾವು ಫಂಡ್ಸ್ ಕಲೆಕ್ಟ್ ಮಾಡ್ತಿದ್ವಿ. ಮೂವ್ ಮೆಂಟ್ ಗೆ, ಅಲ್ಲಿ ಮಲ್ಲೇಶ್ವರಂನಲ್ಲಿ ರಸ್ತೆ ಪಕ್ಕದಲ್ಲಿ ತರಕಾರಿ ಮಾರಾಟ ಮಾಡ್ತಿದ್ದವರೆಲ್ಲ ಫಂಡ್ಸ್ ಕೊಡೋರು ಚಳವಳಿಗೆ. ಅದೇನೋ… ಆ ಮನೋಭಾವವನ್ನು ಮೆಚ್ಚಬೇಕು. ಆ ಜನ ಸ್ವಾತಂತ್ರ್ಯ ಹೋರಾಟ, ಅದಕ್ಕೆ ಗಾಂಧೀಜಿ ಉಪವಾಸ ಕುತ್ಕೊಂಡಿದ್ದು. ಇದನ್ನೆಲ್ಲ ಕೇಳಿಸ್ಕಂಡು ಕಣ್ಣಲ್ಲಿ ನೀರು ತುಂಬ್ಕೊಂಡು ಹಣ ಕೊಡೋರು. ಯು ನೋ ಒನ್ ಟೈಮ್ ಹತ್ತು ಸಾವಿರಕ್ಕೆ ಹತ್ತೊ ಹನ್ನೊಂದೋ ರೂಪಾಯಿ ಕಡಿಮೆ ಆಗಿತ್ತು ಅಷ್ಟೇ. ಅಷ್ಟು ಹಣ ಕೂಡಿಸಿದ್ವಿ. ಅಷ್ಟನ್ನೂ ತೆಗೆದುಕೊಂಡು ಹೋಗಿ ಸರ್ದಾರ್ ವೆಂಕಟರಾಮಯ್ಯ ಅವರ ಹತ್ರ ಕೊಟ್ಟಿದ್ವಿ. ಮಲ್ಲೇಶ್ವರನಿಂದ ಬಸವೇಶ್ವರಕ್ಕೆ ನಾವು ಸುರೋಟ್ ನಲ್ಲಿ ಹೋಗ್ತಿದ್ವಿ. ಪೋಲಿಸ್ನೋರಿಗೂ ನಮ್ಮ ಬಗ್ಗೆ ಗೊತ್ತಿತ್ತು. ಮುಸ್ಲಿಮ್ಸು ಮತ್ತೆ, ನಾವ್ ಸುಮ್ನೆ ಮುಸ್ಲೀಮ್ಸ್ ಮುಸ್ಲೀಮ್ಸ್ ಅಂತಾ ಇವರೆಲ್ಲಾ ಆಡ್ತಾರೆ. ಅವರೆಷ್ಟು ರೆಸ್ಪೆಕ್ಟು ಕೊಡೋರು ನಮಗೆ. ನಮಗೆ ಮೊದ್ಲೇ ಇನ್ ಫಾರ್ಮೇಶನ್ ಕೊಟ್ಬಿಟ್ಟು ಅವರು ಬೇರೆಲ್ಲೋ ಕಾಯೋರು.

ದೊಡ್ಡ ದೊಡ್ಡ ವ್ಯಾಪಾರಿಗಳೂ ಹಾಗೇನೆ ಧಾರಾಳ ಹಣ ಕೊಡ್ತಿರಲಿಲ್ವಾ?

ಕೊಡೋರು. ಆದರೆ ಒಂಥರಾ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಕೊಡ್ತಾರೇನೋ ಅನ್ನಿಸ್ತಿತ್ತು ನಮಗೆ. ಯಾಕಂದ್ರೆ ಎಲ್ಲರೂ ಎಲ್ಲರಿಗೂ ಪರಿಚಯ. ಕೊಡ್ಲಿಲ್ಲ ಅಂದ್ರೆ ಎಲ್ಲಿ ಅವಮಾನ ಆಗ್ತದೋ ಅಂತಾ ಕೊಡೋರು. ಚೆನ್ನಗಿರಿ ಫ್ಯಾಮಿಲಿ, ಭೂಪಾಲಂ ಫ್ಯಾಮಿಲಿ, ಅಶೋಕ ನಾರಾಯಣ ಶೆಟ್ರು ಅವರೆಲ್ಲಾ ಚೆನ್ನಾಗೇ ಕೊಡೋರು. ಭೂಪಾಳಂ ಬ್ರದರ್ ಕಪನೀಪತಿ ಅಂತಾ.

ಭೂಪಾಳಂನವರು ಹಿಂದೂ ಮಹಾಸಭಾದಲ್ಲಿದ್ರು ಅಲ್ವಾ?

ಮೊದ್ಲಿಂದ್ಲೇ ಅವರು ಹಿಂದೂ ಮಹಾಸಭಾ. ನಮಗೆ ಹಿಂದೂ ಮಹಾಸಭಾ ಅಂದ್ರೆ ಅಷ್ಟೇನು ಇದು ಕಾಣಿಸ್ತಿದ್ದಿಲ್ಲ. ಅವ್ರೂ ಖಾದಿ ಹಾಕೋರು, ಅವ್ರು ಬೇರೆ, ನಾವು ಬೇರೆ ಅಂತಾ ಅನ್ನಿಸ್ತಿದ್ದಿಲ್ಲ. ಅವರು ಒಂದು ಕಾನಫೆರನ್ಸ್ ಮಾಡಿದ್ರು, ಹಿಂದೂ ಮಹಾಸಭಾದ್ದು. ಪಂಜಾಬ್ ನಿಂದ… ಆ ಹೆಸರು ನೆನಪಾಗ್ತಿಲ್ಲ ಅವ್ರು ಬಂದಿದ್ರು. ನಾವು ಆ ಕಾನ್ಫರೆನ್ಸನಲ್ಲಿ ವಾಲಂಟಿಯರ್ಸ್ ಆಗಿ ಕೆಲ್ಸ ಮಾಡಿದ್ದಿ. ನಾವು ಹಾಗೆ ವಾಲಂಟಿಯರ್ಸ್ ಆಗಿ ಕೆಲ್ಸ ಮಾಡಿದ್ದು ನೋಡಿ ಆತ. “ನೀವೆಲ್ಲ ಬಂದ್ಬಿಡಿ ನಿಮಗೆ ಅಮೃತಸರದಲ್ಲಿ ಟ್ರೈನಿಂಗ್ ಕೊಡ್ತೀವಿ” ಅಂದ್ರು. ಅದೇನು ಉದ್ಧಟತನವೋ ಏನೋ ನಾನು ಎಲ್ಲರಿಗೂ ಹಾಗೇ ಮಾತಾಡ್ತಿದ್ದೆ. “ನಾವು ಕರ್ನಾಟಕಾನೇ ಸರಿಯಾಗಿ ನೋಡಿಲ್ಲ, ಇನ್ನು ಅಮೃತಸರಕ್ಕೆ ಬರೋದು ಯಾಕೆ ಹೋಗಿ ಸಾರ್” ಅಂದು ಬಿಟ್ಟಿದ್ದೆ. ಪಾಪ ಕಡೇವರೆಗೂ ತುಂಬಾ ಜ್ಞಾಪಿಸಿಕೊಳ್ಳೋರು ಅವ್ರು.

ಗಾಂಧಿ ವಿಚಾರಗಳಿಗೂ ಹಿಂದೂ ಮಹಾಸಭಾಕ್ಕೂ ತಾತ್ವಿಕವಾಗಿ ವ್ಯತ್ಯಾಸವಿದ್ದವಲ್ಲ?

ಜಾತಿ ವಿಚಾರದಲ್ಲಿ ಇತ್ತು. ಜಾತೀನೇ ಹೆಚ್ಚು ಪ್ರಮೋಟ್ ಮಾಡ್ತೀರಾ ಅಂತಾ. ಅಷ್ಟೋತ್ತಿಗಾಗ್ಲೇ ಅದೇ ಕಸಿವಿಸಿ ಶುರು ಆಗಿತ್ತು. ನಮಗೇನು ಅಂದ್ರೆ ವರ್ಕ್ ಮಾಡೋದು ಅಷ್ಟೇ. ಅಥವಾ ಹೋದ್ರೆ ಯಾವ್ದೇ ಕೆಲ್ಸ ಮಾಡೋಕೆ ಆಗ್ತಿರಲಿಲ್ಲ ಇಲ್ಲಿ. ಯಾವ್ದೇ ಸಮಾರಂಭ ನಡೀಲಿ ಪಬ್ಲಿಕ್ ದು, ಸತ್ಯನಾರಾಯಣ ಪೂಜೆ…. ಬೇಟಾ ನಾರಾಯಣ ಮಹಾರಾಜ್ರು ಅವ್ರೂ ಚರಕದಿಂದ ನೂಲು ತೆಗೀತಿದ್ರು. ಅವ್ರು ಒಂದುವಾರ ಸತ್ಯನಾರಾಯಣ ಪೂಜೆ ಮಾಡಿಸಿದ್ರು. ಅದ್ರಲ್ಲೂ ನಾವು ವಾಲಂಟಿಯರ್ಸ್, ರಾಮಕೃಷ್ಣರಾಯರು ಅದಕ್ಕೆ ಸಂಚಾಲಕರು. ಆನೆಕಿವಿ ರಾಮಕೃಷ್ಣರಾಯರು ಅಂತಾ ಹೆಸರಿಟ್ಟಿದ್ವಿ. ಕಿವಿ ಪಾಪ ದೊಡ್ಡದಿದ್ದುದಕ್ಕೆ. ಆಗ ಎಲ್ಲರಿಗೂ ಬೆಳ್ಳಿಲೋಟ ಕೊಟ್ರು. ನಾನು ಅದರ ಬದಲಿಗೆ ದುಡ್ಡು ಇಸ್ಕೊಂಡೆ. ಬೆಂಗಳೂರಿಗೆ ಹೋಗೋದಕ್ಕೆ ಒಂದು ರೂಪಾಯಿ ಎರಡಾಣೆ ಚಾರ್ಜ್. ನಮಗೆ ಆ ಚಾರ್ಜ್ ಕೊಡೋ ಶಕ್ತಿನೂ ಇರಲಿಲ್ಲ. ಇಂಟರ್ ಮೀಡಿಯೇಟ್ ಹೋಗಿ ಸೇರೋವಾಗ ಅದು.