ಅಂದ್ರೆ ಗೋಪಾಲಗೌಡರ ವ್ಯಕ್ತಿತ್ವ ಮತ್ತು ವರ್ಚಸ್ಸು ಕಾರಣ ಅಂತೀರಾ?

ಹೌದು. ಶಿವಮೊಗ್ಗಾ ಜಿಲ್ಲೆಯಲ್ಲಿ ಸದಾಶಿವರಾವ್ ಅಂತಾ ಇದ್ರು. ಸಾಗರದಲ್ಲಿ ಅವರು ಗೋಪಾಲಗೌಡ್ರಿಗೆ ಭಾಳಾ ಎನ್ ಕರೇಜ್ ಮಾಡಿದ್ರು. ಆಮೇಲೆ ಇನ್ನೊಬ್ರು ಲೇಡಿ ಇದ್ರು ಅಲ್ಲಿ. ಯಾರಪ್ಪಾ ಅದು…..

ಪೊನ್ನಮ್ಮಾಳ್?

ಹಾಂ, ಹಾಂ…. ಪೊನ್ನಮ್ಮಾಳ್ ಅಂತಾ. ಅವರೆಲ್ಲ ಕಾಂಟೆಂಪರರೀಸ್, ಪೊನ್ನಮ್ಮಾಳ್, ಸದಾಶಿವರಾವ್, ಕುಪ್ಪಗಡ್ಡೆ ಮರಿಯಪ್ಪ, ಆಮೇಲೆ ಚಂದ್ರಶೇಖರ ಅಂತ ಸಾಗರದವರು, ಕಾಗೋಡು ತಿಮ್ಮಪ್ಪ, ಜೆ. ಹೆಚ್. ಪಟೇಲ್ರು ಆಮ್ಯಾಲೆ ನಾನು.

ಆದ್ರೆ ಗೋಪಾಲಗೌಡ್ರು ಸಿದ್ಧಾಂತಕ್ಕೆ ಮತ್ತು ಹೋರಾಟಗಳಿಗೆ ಕಮಿಟ್ ಆದಂಗೆ ಬೇರೆ ಯಾರೂ ಆಗ್ಲಿಲ್ಲ, ಯಾಕೆ?

ಅವರೂ ಅವರಿಗೆ ಆಸ್ತಿ ಇರಲಿಲ್ಲ. ಏನೂ ಇರಲಿಲ್ಲ. ಒಳ್ಳೇ ವಾಚಾಳಿತನ ಇತ್ತು. ಫಸ್ಟ್ ಟೈಮಿಗೇ ಎಂ.ಎಲ್.ಎ. ಆದ್ರು. ಅವರಿಗೆ ಆಲ್ ಇಂಡಿಯಾ ಸಂಪರ್ಕ ಇತ್ತು. ಆಲ್ ಇಂಡಿಯಾ ಲೀಡರ್ಸ್ ಕರ್ನಾಟಕಕ್ಕೆ ಬಂದ್ರೆ ಫಸ್ಟ್ ಗೋಪಾಲಗೌಡ್ರು ಅಂತಿದ್ರು. ಗೋಪಾಲಗೌಡ್ರು, ಜೆ. ಹೆಚ್. ಪಟೇಲರನ್ನು ಎನ್ ಕರೇಜ್ ಮಾಡಿದ್ರು.

ಆಮ್ಯಾಲೆ ನಾನು, ಈ ಪಕ್ಷದಲ್ಲಿ ಮಧುಲಿಮಯೆ, ಜೆ.ಪಿ., ಜಾರ್ಜ್, ಲೋಹಿಯಾ ಎಲ್ಲಾ ಇದ್ದಾರೆ. ನಾನ್ಯಾಕೆ ಕಾಂಗ್ರೆಸ್ ನ ಬಾಲ ಹಿಡ್ಕಂಡು ಹೋಗ್ಬೇಕು ಅಂತಾ ದೆನ್ ಐ ಜಾಯಿನ್ಡ್ ದಿ ಪಾರ್ಟಿ. ಇವ್ರೆಲ್ಲ ಬೇರೆ ಬೇರೆ ಏರಿಯಾದಲ್ಲಿದ್ದೋರು. ಬಟ್ ಐ ಬೇಸ್ಡ್ ಇನ್ ಬೆಂಗಳೂರು.

ಸರ್ ನನ್ನ ಪ್ರಶ್ನೆ ಅಲ್ಲೇ ಉಳೀತು, ಏನಂದ್ರೆ…. ಕಾಗೋಡು ಹೋರಾಟಕ್ಕಿಂತ ಸಂಡೂರು ಹೋರಾಟ ಮಹತ್ವದ್ದಾದ್ರೂ, ಕಾಗೋಡಿನ ಮುಖಾಂತರ ಬೆಳೆದಂಗೆ, ಸಂಡೂರು ಮುಖಾಂತರ ಪಾರ್ಟಿ ಯಾಕೆ ಬೆಳೀಲಿಲ್ಲ ಅಂತ?

ಅದೇನೋ…. ನನಗೆ ಚಿಕನ್ ಗುನ್ಯಾ ಆಗಿ ಎಲ್ಲಾ ಮರ್ತು ಹೋಗಿ ಬಿಟ್ಟಿದೆ.

(ಸಂದರ್ಶನ ನಡೆವ ಕಾಲಕ್ಕೆ ಶ್ರೀಯುತರು ಚಿಕನ್ ಗುನ್ಯಾ ಕಾಯಿಲೆಯಿಂದ ಆಗಷ್ಟೇ ಚೇತರಿಸಿಕೊಳ್ಳುತ್ತಿದ್ದರು)

ಅಂದಾಜು ಎಷ್ಟು ಭೂಮಿಸಾರ್ ಸಂಡೂರಿನ ಹೋರಾಟದಿಂದ ರೈತರಿಗೆ ಸಿಕ್ಕಿದ್ದು?

ಅದೇನೋ ಮರ್ತು ಹೋಗೇತಪ್ಪಾ (ಒಟ್ಟು ಮೂರು ಸಾವಿರ ಎಕ್ರೆ)

ಸಾರ್, ಅಷ್ಟೊಂದು ಭೂಮಿ ರೈತರಿಗೆ ಸಿಕ್ಕು ಸ್ವಲ್ಪ ಫಾಲೋಅಪ್ ಮಾಡಿದ್ರೆ ಇಲ್ಲಿ ಪಾರ್ಟಿ ಗಟ್ಟಿಯಾಗಿ ಬೆಳೆಸಬಹುದಿತ್ತಲ್ಲ?

ಅಲ್ಲಾ, ಅಲ್ಲಿ ಲೋಕಲ್ ಆಗಿ ಇಂಟ್ರೆಸ್ಟ್ ತಗೊಂಡಿದ್ರೆ ಇಫ್ ಹೀ ಫೀಲ್ಸ್ ಆಗ್ತಿತ್ತು, ಅವರು ಹೂವಿನ ಹಡಗಲಿಯವರು, ಅವ್ರಿಗೆ ಅದೇನ್ ಖಯಾಲ್ ಏನೋ. ನಾಟಕ ಮಾಡೋದು ಅದೂ ಇದೂ ಜಾಸ್ತಿ. ಮಾಡ್ತಿದ್ದರು. ಇದನ್ನ ಬಿಟ್ಟು ಹಿ ಈಸ್ ಫೇಲ್ ಟು ಫೀಲ್ ಹಿಸ್ ರೆಸ್ಪಾನ್ಸಿಬಿಲಿಟಿ. ಸಂಡೂರು ಹೋರಾಟ ಆದ್ಮೇಲೆ ಫಾಲೋ ಆಪ್ ಮಾಡಿದ್ರೆ ಅಲ್ಲಿ ಪಾರ್ಟಿ ಕಟ್ಟಬಹುದಿತ್ತು. ನಾವು ಬೆಂಗಳೂರಾಗ ಇದ್ದವರು. ಇಲ್ಲಿ ಪ್ರಕಾಶ ಇದ್ರಲ್ಲ. ಬಳ್ಳಾರಿಯಾಗ ದಾಸನ್ ಸಾಲೋಮನ್ ಇದ್ರು, ಲೇಬರ್ ಲೀಡ್ರು. ಅವ್ರೂ ಹಾರ್ಡೆಂಡ್ ಸೋಷಲಿಸ್ಟ್, ಹೋರಾಟದ ಹಿನ್ನೆಲೆಯಿಂದ ಬಂದವರು ಅವ್ರು.

ನೀವು ರಾಜ್ಯ ಅಧ್ಯಕ್ಷರಾಗಿದ್ರೀ. ನೀವು ಮನಸ್ಸು ಮಾಡಿದ್ರೆ ಅವ್ರೆಲ್ಲರನ್ನೂ ತಗಂಡು ಪಾರ್ಟೀ ಇನ್ನೂ ಬೆಳೆಸ್ಲಿಕ್ಕೆ ಸಾಧ್ಯ ಇತ್ತೇನೋ?

ನಾನು ಅಧ್ಯಕ್ಷನಾಗಿದ್ರೂ ಬಾಸಿಸಂ ಮಾಡ್ಲಿಲ್ಲ. ಎಸ್. ವೆಂಕಟರಾಮ್, ಗೋಪಾಲಗೌಡ್ರು, ಅವರೆಲ್ಲ ಸೀನಿಯರ್ಸ್ ಅಂತಾ ಭಾವಿಸಿದ್ದೆ. ಪಟೇಲ್ರು ಜತೀಗೂ ನನಗೆ ವೈಯಕ್ತಿಕ ಸ್ನೇಹ. ಅವ್ರು ವಕಾಲತ್ತು ಗಿಕಾಲತ್ತು ಏನೂ ಮಾಡ್ಲಿಲ್ಲ. ಪೂರ್ತಿ ರಾಜಕೀಯ ಮಾಡಿದ್ರು. ನಾನು ಹಂಗೆ ಮಾಡಿದ್ರೆ ಏನಾದ್ರೂ ಆಗ್ತಿದ್ದೆನೇನೋ, ನಾನು ವಕಾಲತ್ತು ಮಾಡಿ ಅರ್ನಿಂಗ್ ನ್ಯಾಗ ಸೋಷಲಿಸ್ಟ್ ಪಾರ್ಟಿ ಬಿಲ್ಡಪ್ ಮಾಡಿ, ಮೂಮೆಂಟ್ ಜೊತೀಗೂ ಇದ್ದ ನಾನು ಒನ್ ಆಫ್ ದಿ ಮೋಸ್ಟ್ ಯ್ಯಾಕ್ಟಿವ್ ಸೋಷಲಿಟ್ಟ್ಸ್, ದೊ ಐ ವಾಸ್ ಲೀಡಿಂಗ್ ಅಡ್ವಕೇಟ್. ನನ್ನ ಕೇಸುಗಳ ಭಾಳಾ ಇರಾವು ಹೈಕೋರ್ಟ್‌ನಲ್ಲಿ. ಎಷ್ಟೋ ಸಲ ನಾನು ಯಾರಿಗೂ ಹೇಳಲಾರದೇ ಗೈರು ಹಾಜರಾಗ್ತಿದ್ದೆ.

ನೀವು ಎಲ್ಲೆಲ್ಲಿ ಓಡಾಡ್ತಿದ್ರಿ, ಪಕ್ಷದ ಸಂಘಟನೆಗಂತ?

ಇಡೀ ಕರ್ನಾಟಕದಾಗ ಓಡಾಡಿದವ ನಾನು. ನನ್ನಷ್ಟು ಯಾರೂ ಓಡಾಡಿಲ್ಲ. ಗುಲ್ಬರ್ಗಾ, ಬೀದರ್, ಅಲ್ಲೆಲ್ಲ. ಈಶ್ವರಪ್ಪ ಚಕ್ಕೋತಿ, ಬೇಲೂರೆ, ಎಂ. ನಾಗಪ್ಪ ಅಂತ ಎಕ್ಸ್ ಎಂ.ಎಲ್.ಎ. ಅವ್ರು ನಮ್ಮ ಪಾರ್ಟಿಯಿಂದ ಗೆದ್ದಿದ್ರು. ಹೈದ್ರಾಬಾದ್ ಕರ್ನಾಟಕದಾಗ ನನಗಿರೋವಷ್ಟು ಕಾಂಟ್ಯಾಕ್ಟ್ ಯಾರಿಗೂ ಇರಲಿಲ್ಲ.

ಸಾರ್, ಮೂವ್ ಮೆಂಟ್ ನ್ಯಾಗ ಕಮಿಟೆಡ್ ಆಗಿ ಕೆಲಸ ಮಾಡಿದ ದೊಡ್ಡವರೆಲ್ಲ ಐಸೋಲೇಟ್ ಆದ್ರು. ಉದಾಹರಣೆಗೆ ಬೇಲೂರೆಯವ್ರು, ಅಮ್ಮೆಂಬಳ ಬಾಳಪ್ಪನವ್ರು…. ಅವ್ರೆಲ್ಲಾ ಅಷ್ಟೇನೂ ಒಳ್ಳೆ ಸ್ಥಿತಿಯಲ್ಲಿ ಇಲ್ಲ ಇವತ್ತು?

ಇಲ್ಲ ಅವರೀಗ. ಇದ್ದಾರ?

ನಾನು ನಿನ್ನೆ ಕಂಡು ಮಾತಾಡಿ ಬಂದೀನಿ ಸಾರ್?

ಅವರಿದ್ದಾರಾ ಇನ್ನೂ! ಕೇಳಬೇಕಿತ್ತು ನನ್ನ ಬಗ್ಗೆ. ನನಗೆ ಆ ಜನರೇಷನ್ ಮ್ಯಾಲೆ ಭಾಳಾ ಪ್ರೀತಿ. ನನ್ಹೆಸ್ರು ಕೇಳ್ಬೇಕಾಗಿತ್ತು ನೀವು ಅವರ್ಹತ್ರ. ಭಾಳಾ ದೊಡ್ಡ ಮನುಷ್ಯ.

ಅವರ ನೆನಪಿನ ಶಕ್ತಿ ಭಾಳಾ ಕಡಿಮೆ ಆಗೈತಿ ಈಗ?

ನನಗೂ ಹಂಗಾ ಆಗ್ತಿದೆ ಈಗ. ನಂದೇನಾದ್ರೂ ಪಬ್ಲಿಷ್ ಮಾಡಾನ ಅಂದ್ರೆ, ನನಗೂ ಆಗವಲ್ದು.

ವಿಶ್ವವಿದ್ಯಾಲಯ ಮಾಡ್ತೈತಲ್ಲಾ ಈಗ, ನಿಮ್ಮ ಬಗ್ಗೆ ಎಲ್ಲಾ ಹೇಳ್ರಿ?

ರಾಮಕೃಷ್ಣ ಹೆಗಡೆ ಸರಕಾರದಾಗ ನಾನು ವಂದನಾ ನಿರ್ಣಯ ಮಂಡಿಸಿದ್ದೀನಿ. ಅದು ನನ್ನ ಜೀವಿತಕಾಲದ ಒಳ್ಳೇ ಭಾಷಣ. ನೀವು ಕಲೆಕ್ಟ್ ಮಾಡ್ಕೊಳ್ರೀ. ನನ್ನ ದುರದೃಷ್ಟ ನೋಡ್ರೀ. ಹೆಗಡೆ ಸಿ. ಎಂ. ಆದ್ರು. ಪಟೇಲ್ರು ಸಿ. ಎಂ. ಆದ್ರು. ಹೆಗಡೆ ಕ್ಯಾಬಿನೆಟ್ ಗೆ ನನ್ನನ್ನು ತಗೋಬಹುದಿತ್ತು. ಬೇರೆ ಯಾರನ್ನೋ ತಗಂಡ್ರು. ಆಮೇಲೆ ಹೆಗಡೆ ನನಗೆ ಕರೆದ್ರು. ಚೀಫ್ ವಿಪ್ ಆಗಿ ನೀನು ವರ್ಕ್ ಮಾಡು ಅಂದ್ರು. ದುರದೃಷ್ಟಕ್ಕ ೫ ವರ್ಷ ಪೂರ್ತಿ ಆಗ್ಲೇ ಇಲ್ಲ. ಡಿಸಾಲ್ಟ್ ಆಗಿಬಿಡ್ತು. ಕೆಲವ್ರು ಎಲ್ಲೆಲ್ಲಿ ಅವಕಾಶಗಳಿವೆ ಅವನ್ನು ಪಡ್ಕೊಂಡ್ರು. ಬರ್ತೀಯಾ ಅಂದಕೂಡ್ಲೆ ಹೋದ್ರು. ಮಂತ್ರಿಯಾದ್ರು. ಅವಾಗ ಅಜೀಜ್ ಸೇರ್ ಸೋತಿದ್ರು. ಮೈಸೂರಿನಿಂದ ನಮಗೊಂದು ಕ್ಯಾಂಡೇಟ್ ಬೇಕಾಗಿತ್ತು. ಬರ್ತೀರಾ ಅಂದ್ವಿ. ಬಂದ್ರು. ಅವರ್ನ ದೊಡ್ಡ ಲೀಡರ್ ಮಾಡಿದ್ವಿ. (ನಗು) ಹಿಂಗಾ. ಕೆಲವರು ಪಕ್ಷಾಂತರ ಮಾಡಿ ದೊಡ್ಡ ಲೀಡರ್ ಆಗ್ಯಾರ. ನಾನು ಕಾಂಗ್ರೆಸ್ ಗೆ ಹೋಗಿದ್ರೆ ಬೇಕಾದಷ್ಟು ಹಣ ಮಾಡಬಹುದಿತ್ತು. ನಮ್ಮ ಭಾಗದಾಗ ಸಿದ್ಧವೀರಪ್ಪನಂಥೋರು, ಕೊಂಡಜ್ಜಿ ಬಸಪ್ಪನಂಥೋರು ಮಠಗಳ ಸಪೋರ್ಟ್ ತಗಂಡ್ರು. ನನ್ನ ಲೈಫ್ ನಲ್ಲಿ ಮಠ ನನಗೆ ಸಪೋರ್ಟ್ ಮಾಡ್ಲಿಲ್ಲ. ವಿರೋಧ ಮಾಡ್ತು. ನಾನು ಸಪೋಸ್ ಟು ಬಿ ಸಾಧು ಲಿಂಗಾಯತ. ಅಂತಾ ಪವರ್ ಫುಲ್ ಏರಿಯಾ. ಸ್ವಾಮಿ ಒಬ್ರೇ ಮನಸ್ಸು ಮಾಡಿದ್ರೂ ಈ ಏರಿಯಾದಾಗ ಶಾಶ್ವತ ಎಂ.ಎಲ್.ಎ. ಆಗಿರಬಹುದಿತ್ತು. ಆದ್ರೆ ಸ್ವಾಮಿ ನನಗೆ ವಿರುದ್ಧ, ಇವನಿಗೆ ಏನರಾ ಮಾಡಿ ಸೋಲಿಸಬೇಕು ಅಂತಾ. ಯಾಕಂದ್ರೆ ನಾನು ಮಠಕ್ಕೆಂದೂ ಹೋಗ್ಲಿಲ್ಲ. ಇವರ್ನ್ ಕಟ್ಕೊಂಡು ತಿರುಗಾಡ್ಲಿಲ್ಲ. “ಭಾರತೀಯ ಸಮಾಜ ನಂದು, ಸಾದು ಲಿಂಗಾಯತ ಸಮಾಜ ಕಟ್ಟೊಂಡು ಏನ್ಮಾಡ್ಲಿ” ಅಂತಾ ತಿರುಗಿದೆ. ಜೀವಮಾನದಾಗ ಕ್ಯಾಸ್ಟ್ ಪಾಲಿಟಿಕ್ಸ್ ಮಾಡ್ಲಿಲ್ಲ. ಈಗ ವಯಸ್ಸಾದ ಮೇಲೆ ಕ್ಯಾಸ್ಟ್ ಪಾಲಿಟಿಕ್ಸ್ ಮಾಡ್ತಿದ್ದೀನೇನೋ ಅಂತಾ ಗಿಲ್ಟಿ ಕಾನ್ಷಿಯಸ್ ಶುರು ಆಗೇತಿ. ಈಗೆಲ್ಲ ಯಾರಾದ್ರೂ ಈ ಹಿಂದೂ ಸ್ವಾಮಿಗಳು ಕರೆದ್ರೆ ಹೋಗಾಕತ್ತೀನಿ. ಮೊದ್ಲೆಲ್ಲ ಈ ಜೆ.ಹೆಚ್. ಪಟೇಲ್ರು. ಮಂತ್ರಿ ಆದ್ಮೇಲೆ ಮುಖ್ಯಮಂತ್ರಿ ಆದ್ಮೇಲೆ ನಾನೂ ಮಠಗಳಿಗೆ ಹೋದ್ರೆ ಜಾತಿವಾದ ಆಗ್ತೈತಿ ಅಂತಾ ಹೋಗ್ತಿದ್ದಿಲ್ಲ. ವಿರೋಧ ಮಾಡ್ತಿದ್ವಿ. ಆದ್ರೆ ಕೊನೆಕೊನೆಗೆ ಜೆ.ಹೆಚ್. ಪಟೇಲ್ರು ಮಂತ್ರಿ ಮುಖ್ಯಮಂತ್ರಿ ಆದ್ಮೇಲೆ ಸ್ವಾಮಿಗಳನ್ನ, ಮಠಗಳನ್ನ ಹಿಡಕಂಡ್ರು.

ಎಲ್ಲಿ ಯಾವ ಸ್ವಾಮಿಗಳನ್ನ ಹಿಡ್ಕಂಡ್ರು?

ಎಲ್ಲಿ, ಒಂದು ಕಡಿಯಾಕ, ಎಲ್ಲ ಕಡೀಗೂ. ಅವರ್ನ ಮಠಗಳು ಸಪೋರ್ಟ್ ಮಾಡಿದ್ವು. ಸಿರಿಗೆರೆ ಮಠ ಸಾಧು ವೀರಶೈವರದು. ಇವರ ತಂದೆಯವ್ರು ಚೆನ್ನಗಿರಿ ಪಾಲಿಟಿಕ್ಸ್ ನಲ್ಲಿ ತಮ್ಮ ಮಗನನ್ನು ಬೆಳೆಸಲು ಎಲ್ಲ ಪ್ರಯತ್ನ ಮಾಡಿದರು. ಎಲ್. ಸಿದ್ಧಪ್ಪನವರು ಅಂದ್ರೆ ಸಿರಿಗೆರೆ ಮಠ. ಅವ್ರು ಹೇಳಿದ್ದೇ ವೇದವಾಕ್ಯ. ಆ ಸಾಧು ವೀರಶೈವರ ಓಟುಗಳನ್ನೆಲ್ಲ ಹೇಳಿ, ಜೆ. ಹೆಚ್. ಪಟೇಲ್ರಿಗೆ ಹಾಕಿಸಿದ್ರು. ಅಂಥ ಒಂದು ಕಾಂಪ್ರಮೈಸ್ ನನ್ನ ಲೈಫ್ ನಲ್ಲಿ ಮಾಡಿದ್ರೆ, ಐ ಉಡ್ ಹ್ಯಾವ್ ಬೀನ್…. ಬಿಕಾಸ್ ಅವರ ಫಾಧರ್ ಈಸ್ ವೆರಿ ಪವರ್ ಫುಲ್ ಮ್ಯಾನ್. ಅವರ ಮಗನ್ನ ಏನಾದ್ರೂ ಮಾಡಿ ಎಂ.ಎಲ್.ಎ. ಮಾಡ್ಬೇಕು, ಮಂತ್ರಿ ಮಾಡ್ಬೇಕು ಅನ್ನೋ ಆಸೆ ಇತ್ತು. ಅಂಥಾ ಗಾಡ್ ಫಾದರ್ಸ್ ನನಗೆ ಯಾರೂ ಇರಲಿಲ್ಲ. ಅಷ್ಟೋತ್ತಿಗೆ ನಮ್ಮಪ್ಪ ಆಗ್ಲೆ ತೀರಿಕೊಂಡು ಹೋಗಿದ್ರು.

ಅಂದ್ರೆ ಸೋಷಲಿಸ್ಟ್ ಪಾರ್ಟಿ, ಜಾತಿ ರಾಜಕಾರಣ ಮೈಗೂಡಿಸಿಕೊಂಡ್ತೇನು?

ಇಲ್ಲ, ಹಂಗೆ ಮಾಡ್ಲಿಲ್ಲ. ಅದಕ್ಕಾಗೀನೇ ಅದು ಬೆಳೀಲಿಲ್ಲ. ಮಠಗಳು ಪವರ್ ಫುಲ್ ನಮ್ಮ ಕರ್ನಾಟಕದಲ್ಲಿ. ಸಿರಿಗೆರೆ ಸ್ವಾಮಿಯಾಗಬಹುದು, ಮುರುಘಾರಾಜೇಂದ್ರ ಸ್ವಾಮಿಯಾಗಬಹುದು. ಸುತ್ತೂರು ಸ್ವಾಮಿ ಅವರ ಆಶ್ರಯದಲ್ಲಿದ್ದ ಇವರೆಲ್ಲ ಸಮಾಜವಾದ, ಅದೂ ಇದೂ ಅಂತ ಹೇಳ್ಕಂಡು ತಿರುಗಿದ್ರು. ಇಲ್ಲಂದ್ರೆ ಭಾಳಾ ಕಷ್ಟ. ನಮ್ಮಂಥವರು ಮಠಗಳನ್ನು ವಿರುದ್ಧ ಹಾಕಿಕೊಂಡ್ವಿ….

ನೀವು ಯಾವ ಪಾರ್ಟಿ? ಪಿ.ಎಸ.ಪಿ.ನೋ, ಎಸ್. ಎಸ್. ಪೀ.ನೋ?

ನಾವು ಎಸ್. ಎಸ್. ಪಿ., ಪಿ.ಎಸ್.ಪಿ.ನ ವಿರೋಧ ಮಾಡ್ತಿದ್ವಿ. ಅವಾಗ ಮುಲ್ಕಾ ಗೋವಿಂದ ರೆಡ್ಡಿ ಇದ್ದರು. ನಮ್ದು ಲೋಹಿಯಾ ಪಾರ್ಟಿ.

ಅಷ್ಟೋತ್ತಿಗೆ ಜೆ. ಪಿ. ಯಾವ ಪಾರ್ಟಿಲಿದ್ರು?

ಜೆ.ಪಿ. ಅಷ್ಟೋತ್ತಿಗೆ ಎಲ್ಲಾ ಪಾರ್ಟಿಗಳಿಗೆ ಅಡ್ವೈಸ್ ಮಾಡ್ತಿದ್ರು. ಅಷ್ಟೋತ್ತಿಗಾಗ್ಲೇ ಅವರಿಗೆ ವಯಸ್ಸು ಆಗಿತ್ತು. ಲೋಹಿಯಾರೇ ಎಲ್ಲ ಪಕ್ಷಗಳ ಕೇಂದ್ರ.

ಜನತಾ ಪಕ್ಷ ಅಂತಾ ಆಯ್ತಲ್ಲ, ಜನಸಂಘದವರೂ ಸೇರಿಕೊಂಡು.?

ಅವಾಗೆಲ್ಲ ಸೋಷಲಿಸ್ಟ್ರು ಸೇರಿದ್ರು. ಅವಾಗ ಲೋಹಿಯಾನಂಥವ್ರು ಬಿ.ಜೆ.ಪಿ.ನಾ ಜನಸಂಘಾನ ದೂರಿಡಾಕ ಹೋಗ್ಲಿಲ್ಲ. ಅವತ್ತೇನಂದ್ರೆ ಕಾಂಗ್ರೆಸ್ ಗೆ ಆಲ್ಟರ್ ನೇಟ್ ಆಗಿ ಒಂದು ಪ್ರಬಲ ಶಕ್ತಿ ನಿರ್ಮಾಣ ಮಾಡ್ಬೇಕು ಅನ್ನೋ ಉದ್ದೇಶದಿಂದ. ವಿ ಕ್ಯಾನ್ ಜಾಯಿನ್ ಹ್ಯಾಂಡ್ಸ್ ಈವನ್ ವಿತ್ ದ ಡೆವಿಲ್ ಅನ್ನೋರು. ಇನ್ ಫ್ಯಾಕ್ಟ್ ಬಿ.ಜೆ.ಪಿ. ಸಪೋರ್ಟ್ ನಿಂದಾನೇ ಲೋಹಿಯಾ ಗೆದ್ದಿದ್ದು ಆವಾಗ, ಪಾರ್ಲಿಮೆಂಟ್ ಗೆ.

ಅಲೆಯನ್ಸ್ ನಿಂದ ಯಾರಿಗೆ ಹೆಚ್ಚು ಹೆಲ್ಪ್ ಆತು. ಬಿ.ಜೆ.ಪಿ.ಗೋ ಸೋಷಲಿಸ್ಟರಿಗೋ?

ಸೋಷಲಿಸ್ಟರಿಗೇನೂ ಹೆಲ್ಪ್ ಆಗ್ಲಿಲ್ಲ. ಆದ್ರೆ ಬಿ. ಜೆ. ಪಿ.ಯವರೇ ಲೋಹಿಯಾರ ಮುಖಾಂತರ ತಮ್ಮ ಪಾರ್ಟಿ ಬೇಸನ್ನ ವೈಡೆನ್ ಮಾಡ್ಕಂಡ್ರು. ಅವರವು ಹಿಂದುತ್ವ ಅದೂ ಇದೂ ಅವೆಲ್ಲ ಸಾಮಾನ್ಯ ಜನರಿಗೆ ಬೇಗ ಮುಟ್ತವೆ. ನಾವು ಅದನ್ನು ವಿರೋಧ ಹಾಕ್ಕೊಳ್ಳಬೇಕು, ಮಠಾಧೀಶರನ್ನು ವಿರೋಧ ಹಾಕ್ಕೊಳ್ಳಬೇಕು, ಆಮೇಲೆ ಹೋರಾಟ ಮಾಡ್ಬೇಕು. ಹಿಂಗೆಲ್ಲಾ ಇವ್ರೆಲ್ಲಾ ಲೋಹಿಯಾ ‘ಹುಚ್ಚ’ ಅನ್ನೋ ಟೈಮ್ ನ್ಯಾಗ ನಾವು ಲೋಹಿಯಾರ ಶಿಷ್ಯರಾದ್ವಿ.

ಬಿ.ಜೆ.ಪಿ. ಜೊತೀಗೆ ಹೊಂದಾಣಿಕೆ ಮಾಡ್ಕೊಳ್ಳೋ ವಿಚಾರದಾಗ ನಿಮ್ಮ ಪ್ರತಿಕ್ರಿಯಾ ಏನಿತ್ತು?

ಆವಾಗ ಆಯ್ಯಂಟಿ ಕಾಂಗ್ರೆಸ್ ಅನ್ನೋದೇ ಮುಖ್ಯವಾಗಿದ್ದು. ನಾವು ಯಾರ ಜೊತೆಗಾದ್ರೂ ಕೂಡಿಕೊಂಡು ಕಾಂಗ್ರೆಸ್ಸನ್ನ ಸೋಲಿಸಬೇಕು ಅನ್ನೋದಾಗಿತ್ತು. ಈವನ್ ಕತ್ತೇನ ನಿಲ್ಸಿದ್ರು ಕಾಂಗ್ರೆಸ್ ಗೆಲ್ಲೋದು ಅನ್ನಂಗಿತ್ತಲ್ಲ. ಅಂತಹ ಪರಿಸ್ಥಿತೀನಾ ಎದುರಿಸೋಕೆ ಒಂಟಿಯಾಗಿ ಗೆಲ್ಲೋಕೆ ಕಷ್ಟವಾಯ್ತು ನೋಡ್ರೀ ನಮ್ಮ ಸಂಘಟ           ನೆಗೆ ಆಲ್ ಇಂಡಿಯಾ ಲೆವಲ್ ನಲ್ಲೇ ಹಣ ಇರ್ಲಿಲ್ಲ. ಲೋಹಿಯಾ ಬರೀ ಕೈಯಲ್ಲಿರೋರು. ಮಧುಲಿಮಯೆ, ಜಾರ್ಜ್, ರಬಿರಾಯ್, ಇವ್ರೆಲ್ಲ ದೊಡ್ಡ ಪವರ್ ಫುಲ್ ಇದ್ರು. ಮೃಣಾಲ್ ಗೋರೆ ಆವ್ರಿನ್ನೂ ಇದ್ದಾರೆ. ಅವ್ರು ಸಂಡೂರಿಗೂ ಬಂದಿದ್ರು. ಕಾಂಗ್ರೆಸನ್ನು ಸೋಲಿಸೋದಕ್ಕ ನಾವು ಬಿ.ಜೆ.ಪಿ. ಜೊತೆ ಸೇರ್ಕೊಂಡಿದ್ದಕ್ಕೆ ‘ನೋಡಪ್ಪ ಇವ್ರು ಜಾತಿವಾದಿಗಳ ಜತೆ ಸೇರ್ಕೊಂಡ್ರು’ ಅನ್ನೋ ಪ್ರಚಾರ ಅವಾಗಿಂದ ಇದ್ದೇ ಇದೆ. ಸೋಷಲಿಸ್ಟರದೇ ಒಂದು ವಿಚಿತ್ರವಾದ ರೋಲ್ ಇಂಡಿಯನ್ ಪಾಲಿಟಿಕ್ಸ್ ನಲ್ಲಿ…..

ಜನತಾದಳ, ಎನ್.ಡಿ.. ದಾಗ ಸೇರ್ಕೋಬೇಕು, ಸೇರ್ಕೋಬಾರ್ದು ಅನ್ನೋ ವಿಚಾರ ಬಂದಾಗ್ಲೂ ಪಾರ್ಟಿ ಒಡೀತು. ಜೆ. ಹೆಚ್. ಪಟೇಲ್ರು ಸಪೋರ್ಟ್ ಅಂದ್ರು, ದೇವೇಗೌಡ್ರು ಬೇಡ ಅಂತ ಸೆಕ್ಯುಲರ್ ಪಾರ್ಟಿ ಕಟ್ಟಿದ್ರು. ಅವಾಗ ನಿಮ್ಮ ವಿಚಾರ ಏನಾಗಿತ್ತು?

ನಾನು ಯಾವಾಗ್ಲೂ ಜೆ. ಹೆಚ್. ಪಟೇಲರ ಹಿಂದೆ ಹೋಗೋ ಸಂಪ್ರದಾಯ ಬೆಳಸ್ಕೊಂಡು ಬಿಟ್ಟಿದ್ದೆ. ಐ ಅಕ್ಸಪ್ಟೆಡ್ ಹಿಮ್ ಹೀ ವಾಸ್ ಮೈ ಲೀಡರ್ ಅಂತಾ. ಅವ್ರು ಲೋಹಿಯಾಗೆ ಹತ್ತಿರ ಇದ್ರು.

ಅಷ್ಟೋತ್ತಿಗಾಗ್ಲೆ ಲೋಹಿಯಾ ತೀರ್ಕಂಡಿದ್ರು?

ತೀರ್ಕಂಡ್ರೂ, ಲೋಹಿಯಾರ ಲೈನು…. ಆ ಥಿಂಕಿಂಗು ಪಟೇಲ್ರುದು. ಅವ್ರು ಫುಲ್ ಟೈಂ ಪೊಲಿಟಿಶಿಯನ್. ನಾನು, ಜೆ.ಹೆಚ್. ಪಟೇಲ್ರು ಕೆಲವರ್ಷ ಇನ್ ಸೆಪರೇಬಲ್ ಇದ್ವಿ. ಆದ್ರೆ ಕೊನೆ ಕೊನೆಗೆ ಅವ್ರಿಗೆ ಅಧಿಕಾರ ಹೆಚ್‌ಉ ಬಂದಾಗ ಅವರು ಮೌಲ್ಯಗಳಿಗೆ ಕಡಿಮೆ ಬೆಲೆ ಕೊಟ್ರೇನೋ…, ಅದು ಅನಿವಾರ್ಯ ಆಗಿತ್ತೇನೋ ಒಂದು ಸರ್ಕಾರ ನಡೆಸೋ ಸಂದರ್ಭದಲ್ಲಿ. ಮುಖ್ಯಮಂತ್ರಿಯಾಗ್ಬೇಕು, ಸರ್ಕಾರ ನಡೆಸ್ಬೇಕು, ಜೊತೀಗೆ ಎಲ್ಲರ್ನೂ ಕಟ್ಕೊಂಡು ಹೋಗಬೇಕಾಗಿತ್ತಲ್ಲ.

ಹಂಗಂತ್ಹೇಳಿ, ಸಮಾಜವಾದಿಗಳು ಬರಬರ್ತಾ ಸಿದ್ಧಾಂತದ ಜೊತೆ ತೀರಾ ರಾಜೀ ಮಾಡ್ಕೊಂಡ್ರಾ ಅಂತಾ?

ಅದೇ (ನಗು) ಅಧಿಕಾರ. ಅಧಿಕಾರ ಹಿಡಿಬೇಕಿತ್ತು. ಅಧಿಕಾರಬಿಟ್ರೆ ಏನ್ ರಾಜಕೀಯ ಮಾಡೋದು, ಅನ್ನೋ ಸ್ಥಿತಿ. ಆ ಒಂದು ಜನರೇಷನ್ ಆಫ್ ಲೀಡರ್ಸ್ ಅಧಿಕಾ ಇದ್ರೇನು, ಇಲ್ಲಂದ್ರೇನು, ಜೆ.ಪಿ.ಯಂಥವ್ರು. ಜೀವಮಾನದಲ್ಲೇ ಎಲೆಕ್ಷನ್ನಿಗೆ ನಿಲ್ಲಲಿಲ್ಲ. ಪ್ರೈಂಮಿನಿಸ್ಟ್ರು ಮಾಡ್ತೀವಿ ಬರ‍್ರೀ ಅಂದ್ರೂ ಹೋಗ್ಲಿಲ್ಲ. ‘ಇವತ್ತು ಜೆ.ಪಿ.ನ್ನ ಯಾರು ನೆನಸ್ಕಂತಾರ. ಕುಮಾರಸ್ವಾಮಿನಾ ನೆನಸ್ಕಂತಾರ(ನಗು). ಏನಾರ ಸಿಕ್ಕೀತೇನೋ…. ಥೌಸಂಡ್ಸ್ ಆಫ್ ಕ್ರೋರ್ಸ್ ರೊಕ್ಕ ಇದೆ ಅವನ್ಹತ್ರ, ಅವರಪ್ಪನ್ಹತ್ರ ಏನಾರ ಸಿಕ್ಕೀತಾ ಅಂತಾ. ಅವ್ರೆದುರಿಗೆ ಜನ ನಮ್ಮನ್ನು ನೋಡಿ ನಗ್ತಾರ.

ಅಂದ್ರೆ ಅಧಿಕಾರ ರಾಜಕಾರಣದಲ್ಲಿ ಅಸ್ತಿತ್ವಾನೇ ಮುಖ್ಯ…. ಅಂದಂಗಾತಲ್ಲ?

ಹೌದು. ದೊಡ್ಡದೊಡ್ಡ ಲೀಡರ್ಸೆಲ್ಲಾ ಹೋಗ್ಯಾರ…..

ಅಂದ್ರೆ ಸೈದ್ಧಾಂತಿಕ ರಾಜಕಾರಣ ಹೋಯ್ತು ಅಂತಾನಾ ಅರ್ಥಾ?

ಆ ಸ್ಟೆಮಿನಾ ಇಲ್ದಂಗಾತು. ಬಹಳ ಮೊದ್ಲಿಂದಾನೂ ಅನುಕೂಲಸ್ಥರಲ್ಲದವ್ರು ಇದ್ದದ್ದು ಸೋಷಲಿಸ್ಟ್ ಪಾರ್ಟಿನಲ್ಲಿ. ಹಣಕಾಸಿನ ತೊಂದ್ರಿ ಇತ್ತು. ಯಾರೋ ಒಬ್ರು ನೋಡ್ಕಂತಿದ್ರು. ಅಷ್ಟೇನೇ. ಬದ್ರಿ ವಿಶಾಲಪತ್ತಿ ಅಂತಾ ಹೈದ್ರಾಬಾದ್ ನವರಿದ್ರು. ಅವರು ನಮ್ಮ ಸೋಷಲಿಸ್ಟ್ ಪಾರ್ಟಿಗೆ ದುಡ್ಡು ಕೊಡೋರು. ಅದೇನೋ ಲೋಹಿಯಾ ಹೋದ್ರೆ ಅವರ ಮನ್ಯಾಗಾ ಇರ್ತಿದ್ರು. ಹಿ ವಾಸ್ ಮಲ್ಟಿಮಿಲಿಯನರ್ ಅವಾಗ್ಲೇ. ಈಗ್ಲೂ ಅದಾರ. ಅವ್ರು ಭಾರೀ ರಿಚ್ಚು. ಸೋಷಲಿಸ್ಟ ಪಾರ್ಟಿಗೆ ಅವ್ನು ದುಡ್ಡು ಕೊಡೋನು. ಅವ್ನಿಗೇನೋ ಇತ್ತು ಕನೆಕ್ಷನ್ನು.

ಜೆ.ಡಿ.ಯು, ಜೆ.ಡಿ.ಎಸ್. ಆದವಲ್ಲ. ಆವಾಗೇನಾದ್ರೂ ದೇವೇಗೌಡ್ರು ಕರೆದ್ರಾ ನಿಮಗೆ?

ದೇವೇಗೌಡ್ರೇನು ನಮಗಿಂತ ರಾಜಕೀಯದಾಗ ಸೀನಿಯರ್ ಏನಲ್ಲಲ್ಲ. ಜೆ.ಡಿ.ಯು ದೊಡ್ಡ ಪಾರ್ಟಿ ಆಗ್ತೈತಿ ಅಂತಾ ಇದ್ವಿ ಎಲ್ಲಾರೂ. ದೇವೇಗೌಡ್ರು ಯಾರನ್ನ ಯಾವ ಟೈಮಿಗೆ ಕರೀತಾರ. ಯಾವ ಟೈಮಿಗೆ ತುಳೀತಾರ ಅಂತಾ ಹೇಳಾಕಾಗಲ್ಲ.

ಇವತ್ತಿಗೂ ಐ ಫೀಲ್ ರೆಸ್ಟೆಕ್ಟ್ ಫಾರ್ ಹೆಗಡೆ. ಆತನಿಗೆ ಪಾಪುಲಾರಿಟಿ ಇತ್ತು. ಈ ದೇವೇಗೌಡ್ರಾ. ಇವನ್ ಚೀಫ್ ಮಿನಿಸ್ಟ್ರು ಆದಾಗ್ಲೂ ಹೆಗಡೆ ಸೋಷಲಿಸ್ಟ್ ಅಲ್ದಿದ್ರೂ ಸೋಷಲಿಸ್ಟ್ ಪಾರ್ಟಿಗೆ ಹಾನೆಸ್ಟ್ ಆಗಿ ಹೋರಾಟ ಮಾಡಿದವ್ರನ್ನ ಕಡೆಗಣಿಸ್ತಿರ್ಲಿಲ್ಲ ಈ ದೇವೇಗೌಡರಂಗ. ಇವ್ರು ತಮ್ಮ ಹಿಂದೆ ಬಂದ್ರೆ ದೊಡ್ಡಾರು, ಇಲ್ಲಂದ್ರ ತುಳಿಯಾದು.

ಹೆಗಡೆ ಸಿ.ಎಂ. ಆಗೋವಾಗ ನಜೀರ್ ಸಾಬ್ ಆಗ್ಲೀ ಅಥವಾ ರಾಚಯ್ಯ ಆಗ್ಲಿ ಅಂತಾ ಒಂದು ಪ್ರಪೋಸಲ್ ಇತ್ತಂತಲ್ಲ?

ಮೊಬಲೈಜೇಷನ್ ನಲ್ಲಿ ಕಷ್ಟಾ ಆಗಾದು. ರಾಚಯ್ಯ ಕರ್ನಾಟಕದಾಗ ಅಷ್ಟು ಪಾಪ್ಯುಲರ್ ಇರ್ಲಿಲ್ಲ.

ಪಾಪ್ಯುಲರ್ಮಾನದಂಡದ ಮೂಲಕ ಹೋದ್ರೆ ಸಮಾಜವಾದೀ ಸಿದ್ಧಾಂತದ ಬುಡಕ್ಕೆ ಪೆಟ್ಟು ಬೀಳಾದಿಲ್ವಾ?

ಅರೆ! ಸರ್ವೈಲ್ ಆಗ್ಬೇಕು ಅನ್ನೋ ದೃಷ್ಟಿಯಿಂದ ಅನಿವಾರ್ಯ. ಈಗ ಎಷ್ಟಂತ ಗುಡ್ಡಕ್ಕ ಕಲ್ಲು ಹೋರ್ಬೇಕು.

ಹಂಗ್ಮಾಡಿಮಾಡಿ ಕಡೀಗೇನಾತು?

(ದೊಡ್ಡ ನಗು) ಈಗೇನಾಗೇತೋ ಅದು.

ಹಿಂದೆಸಮಾಜವಾದಅಂತಾ ಅಷ್ಟೆಲ್ಲಾ ಸಂಘಟನೆ, ಹೋರಾಟ ಮಾಡ್ದೋರು ನೀವು. ಇವತ್ತಿನ ಸ್ಥಿತಿ ನೋಡಿದ್ರೆ ಏನನ್ನಿಸ್ತದೆ?

ಡೆಫನೇಟ್ಲೀ ಫೇಲ್ಯೂರು. ನಾಟ್ ಓನ್ಲೀ ಸೋಷಲಿಸ್ಟ್ ಮೂವ್ ಮೆಂಟ್, ಎವೆರಿ ಪಾರ್ಟಿನಲ್ಲಿ.

ಆದ್ರೆ ಲೆಫ್ಟ್ ಪಾರ್ಟಿಗಳು ಮತ್ತು ಬಿ.ಜೆ.ಪಿ. ಅವ್ರು ತಮ್ಮ ಮೂಲ ಸಿದ್ಧಾಂತ ಉಳಿಸ್ಕಂಡೇ ಮಾಡ್ತಿದಾರೇ ಅನ್ನಿಸಲ್ವ?

ವೆದರ್ ಇಟ್ ಈಸ್ ಕ್ವಾಲಿಫಿಕೇಶನ್ ಆರ್ ಡಿಸ್ ಕ್ವಾಲಿಫಿಕೇಶನ್ ಐ ಕಾಂಟ್ ಸೇ. (ನಗು) ಬಟ್ ಎನಿವೇ ಹ್ಯಾಟ್ಸ್ ಆಫ್ ದೇರ್ ಕನ್ ಸಿಸ್ಟೆನ್ಸಿ.

ಹಂಗಿರಾದಕ್ಕ ಬಿ.ಜೆ.ಪಿ. ಕೇಂದ್ರ ಸರ್ಕಾರದಲ್ಲಿ ಅಧಿಕಾರ ನಡೆಸ್ತು. ಕಮ್ಯುನಿಸ್ಟ್ರು ಬಂಗಾಳದಲ್ಲಿ ೨೬ ವರ್ಷದಿಂದ್ಲೂ ಆಡಳಿತ ನಡೆಸ್ತಾದಾರಾ. ಹಂಗಾ ಯಾಕ ಸೋಷಲಿಸ್ಟ್ ಪಾರ್ಟಿ ಬೆಳಿಯಾಕ ಆಗ್ಲಿಲ್ಲ?

ಯಾಕಂದ್ರ ಅಲ್ಲಿ ಮಾಸ್ ಸಪೋರ್ಟು ಕಡಿಮೀ ಆಗ್ತಾ ಬಂತು. ಫೇಮಸ್ ಲೀಡರ್ಸು, ಜೆ.ಪಿ. ಮಧುಲಿಮಯೆ ಹೋದ್ರು.

ಸಿದ್ಧಾಂತದ ಬಗ್ಗೆ ಹೇಳ್ರೀಅಲ್ಲೇನಾದ್ರೂ ಪ್ರಾಬ್ಲಂ ಐತಾ?

ಸಿದ್ಧಾಂತದಾಗ ಏನೂ ಪ್ರಾಬ್ಲಂ ಇಲ್ಲ. ಸೋಷಲಿಸ್ಟ್ ಪಾರ್ಟಿಗೆ ಇರೋ ಸಿದ್ಧಾಂತ ಯಾವ ಪಾರ್ಟೀಗೂ ಇಲ್ಲ.

ಹಂಗಂದ್ರ ಪಕ್ಷ ಬೆಳೀಬೇಕಿತ್ತು?

ಬೆಳೀಬೇಕಂದ್ರೆ ಅದಕ್ಕ ಹಣದ ಕೊರತೆ ಇತ್ತು. ಸಂಘಟನೆ ಮಾಡೋ ಶಕ್ತಿ ಕಡಿಮೀ ಆತು. ಆಮ್ಯಾಲೆ ಲೋಹಿಯಾ ಹೋದ್ರು, ಜೆ.ಪಿ. ಹೋದ್ರು.

ಅವ್ರಗುಂಟ ಹೋರಾಟದ ಮನೋಭಾವಾನೂ ಹೋತು!

ಹೋತು. ಈವನ್ ಸೋಷಲಿಸ್ಟ್ ಮೂವ್ ಮೆಂಟ್ ನಿಂದ ಬಂದೋರು ಹೋರಾಟ ಅಂದ್ರೆ…. ಯಾಕ್ ಬೇಕು ಸಾರ್ ಅದೆಲ್ಲಾ, ಸುಲಭವಾಗಿ ಮಾಡೋ ಕೆಲ್ಸ ಮಾಡ್ಕೆಂಡು ಬಿಟ್ರಾತು (ನಗು) ಅಂತಾರ, ಹಂಗಾಗಿ ಹೋರಾಟಕ್ಕೆ ಬೆಲೀ ಇಲ್ದಂಗಾಗೇತಿ, ಏನ್ಮಾಡೋದು.

ರಾಜ್ಯದಾಗ ಸೋಷಲಿಸ್ಟ್ ವಿಚಾರ ಇಟ್ಕಂಡು ರೈತ ಹೋರಾಟ ನಡೆದ್ದು, ನರಗುಂದನವಲಗುಂದದಾಗ?

ನರಗುಂದ, ನವಲಗುಂದದಾಗ ನಾವು ಪಾರ್ಟಿಸಿಪೇಟ್ ಮಾಡೀವಿ. ಅವ್ರೂ ಬೆಂಗಳೂರಿಗೆ ಬರುವಾಗ ಅವರ ಜೋತೀಗೇ ಇದ್ದೆ. ಅಲ್ಲಿ ಲೋಕಲ್ ನ್ಯಾಗ ಹೋಗಿ ನಮಗೇನೂ ಮಾಡಾಕಾಗ್ತಿಲ್ಲ. ಐ ಥಿಂಕ್ ನಾನು ಅವಾಗ ಬ್ಯುಸಿ ಅಡ್ವಕೇಟ್ ಆಗಿದ್ದೆ. ನಾನು ಇಲ್ಲಿಂದ ಬಿಟ್ಟು ಹೋಗಿ ಮನಿಮಾಡ್ಕಂಡು, ಸಂಸಾರ, ನನ್ನ ಮಗನ ಎಜುಕೇಷನ್ ಮಾಡಿಸಬೇಕಿತ್ತು, ಆಮ್ಯಾಲೆ ಸಮ್ ಹೌ ಐ ಆರ್ನ್‌ರ್ಡ ಲೈಕ್ ಎವೆರಿಥಿಂಗ್. ಅದ್ರಲ್ಲಿ ಪಾರ್ಟಿಗೂ ಖರ್ಚು ಮಾಡ್ತಿದ್ದೆ. ಈಗ್ಲೂ ನಾನು ನನ್ನ ಹಳ್ಳಿಗೆ ಹೋಗ್ತೀನಿ. ಆ ಹಳ್ಳ್ಯಾಗ ಒಂದು ಸ್ಕೂಲ್ ನಡೆಸ್ತೀದ್ದೀನಿ. ಇಲ್ಲೊಂದು ಸ್ಕೂಲ್ ನಡೆಸ್ತಾ ಇದ್ದೆ. ೧೫ ವರ್ಷ. ಸಿಟಿನಲ್ಲಿ ಮಾಡಾದ್ಕಿಂತ ಅಲ್ಲಿ ಕೋ ಆಪರೇಟಿವ್ ಜಾಸ್ತಿ. ನಾನು ಈಗ ರಾಜಕೀಯದಾಗ ಇರಾಕ ಆಗಾದಿಲ್ಲ. ಜ್ಞಾಪಕ ಶಕ್ತಿ ಕಡಿಮೆ ಆಗಿದೆ. ಎಫಿಶಿಯನ್ಸಿ ಕಡಿಮೆ ಆಗಿದೆ. ಈಗ ಇನ್ ವಾಲ್ಟ್ ಮೆಂಟ್ ಏನು ಅಂದ್ರೆ, ಅಗ್ರಿಕಲ್ಚರ್, ನೌ ಐಯಾಮ್ ಯ್ಯಾನ್ ಯ್ಯಾಕ್ಟಿವ್ ಅಗ್ರಿಕಲ್ಚರಿಸ್ಟ್. ತೋಟ ಮಾಡಿದ್ದೀನಿ. ಅಲ್ಲಿ ದಿವ್ಸಾ ಹೋಗಿ ಬರ್ತೀನಿ. ಆಮ್ಯಾಲ ಏನರಾ ಸಾರ್ವಜನಿಕ ಕೆಲಸ ಇದ್ರೆ, ಅಲ್ಲೊಂದು ನೂರಾರು ವರ್ಷದ ದೇವಸ್ಥಾನ ಹಾಳು ಬಿದ್ದಿದೆ. ಅದನ್ನು ರಿನೋವೇಟ್ ಮಾಡಿಸ್ದೆ….

ನೀವು ಸಮಾಜವಾದಿಗಳು, ದೇವ್ರು, ದೇವಸ್ಥಾನ?

ಅಯ್ಯಾ….. ಮತ್ತೆ? ಅದು ಭಾಳಾ ದಿವ್ಸ ಬಿದ್ದು ಹೋಗಿ, ಕಟ್ಟೋರ್ಯಾರೂ ಇಲ್ಲ. ಐಡಿಯಾಲಜಿ ಅಂತಾ ಹೋದ್ರೆ….?

ಲೋಹಿಯಾ….?

ಲೋಹಿಯಾ ಕಟ್ರೀ ಅಂತಾನೂ ಹೇಳಿಲ್ಲ. ಕೆಡವ್ರೀ ಅಂತಾನೂ ಹೇಳಿಲ್ಲ (ನಗು). ಇವತ್ತು ಜಾರ್ಜ್ ಕುಂತ್ರೂ ಹಾಯ್ ರಾಮ್ ಅಂತಾನಾ, ನಿಂತ್ರೂ ಹಾಯ್ ರಾಮ್ ಅಂತಾನಾ…

ರಾಮ್ ಅಂದ್ರೆ ಅದೊಂದು ರೂಢಿ ಬಿಡ್ರೀ…. ಆದ್ರೆ ಎನ್. ಡಿ. . ದಾಗ ಸೇರ್ಕಳ್ಳಾದು ಅಂದ್ರೇನು?

ಆತ ಬೇಕಾದಾಗ ಪವರ್ ಗೆ ಹೋಗಬಲ್ಲ, ಪವರನ್ನೂ ಬಿಡರಲ್ಲ. ಹಿ ಈಸ್ ಯ್ಯಾನ್ ಎಕ್ಟ್ರಾರ್ಡಿನರಿ ಕ್ಯಾರೆಕ್ಟ್ರು.

ಆದ್ರೆ ಸಿದ್ಧಾಂತದ ಜೊತೆ ಸ್ವಲ್ಪ ಕಾಂಪ್ರಮೈಸ್ ಮಾಡಿಕೊಂಡ್ರು ಅನ್ಸುತ್ತೆ?

ಕಾಂಪ್ರಮೈಸ್ ಅಂತಲ್ಲ. ಅಡ್ಜಸ್ಟ್ ಮೆಂಟ್ ಅಂತಾರಲ್ಲ ಹಂಗ. ಅವ್ನ್ರು ಒಬ್ಬ ಕ್ರಿಶ್ಚಿಯನ್ನು. ಒಬ್ಬ ಮೈನಾರಿಟಿ. ಇಷ್ಟು ಪ್ರಾಮಿನೆಂಟ್ ಆಗಿ ಇಂಡಿಯನ್ ಪಾಲಿಟಿಕ್ಸ್ ನಲ್ಲಿ ಬಿಹಾರ ಪಾಲಿಟಿಕ್ಸ್ ನ್ಯಾಗ ಸರ್ವೈವಲ್ ಆಗ್ಬೇಕು, ಎಫೆಕ್ಟಿವ್ ಆಗಿರ್ಬೇಕು ಅಂದ್ರೆ, ಹಿಸ್ ಪಾಯಿಂಟ್ ಆಫ್ ವ್ಯೂವ್ ಮೆ ಬಿ ರೈಟ್.

ಅವರು ಕರ್ನಾಟಕದಾಗ ಪಾರ್ಟಿ ಕಟ್ಟೋದಕ್ಕ ಒಂದಿಷ್ಟು ಲಕ್ಷ್ ಕೊಟ್ಟಿದ್ರೆ?

ಕರ್ನಾಟಕದಾಗ ಎಂಥಾ ಜನ ಅದಾರಂದ್ರೆ, ಒಬ್ಬ ಕ್ರಿಶ್ಚಿಯನ್ ನ ತಲೆಮ್ಯಾಲ ಹೊತ್ಕಂಡು ಮೆರಿಸ್ತಾ ಇದ್ರು ಅಂತಾ ನನಗೇನು ಅನಸಲ್ಲ. ಬಿಹಾರದಾಗ ಪೊಲಿಟಿಕಲ್ ಕಾನ್ಷಿಯಸ್ ಕಡಿಮೆ ಇತ್ತು. ಜಾರ್ಜ್ ಹೋಗಿ ಲೀಡರ್ ಶಿಪ್ ಕೊಟ್ರು ಅಲ್ಲಿ. ಆದ್ರಿಲ್ಲಿ ಕರ್ನಾಟಕದಾಗ ಏ… ಇವ್ನು ಕ್ರಿಶ್ಚಿಯನ್ ಅದಾನಾ, ಇವನೇನು ಲಿಂಗಾಯತಾನಾ? ಲಿಂಗಾಯತ್ರಾಗೂ ಎರಡು ಆಗ್ಯಾವ. ಅದೆಲ್ಲಾನೂ ಮೀರಿ ಇಲ್ಲಿನೇ ಬೇಸ್ ಮಾಡಿ, ಒಂದ್ ಐಡಿಯಾಲಜಿ ಸ್ಟ್ರೆಡ್ ಮಾಡಿ ಸಂಘಟನೆ ಮಾಡಿ, ಹೋರಾಟ ಮಾಡಿ… ಅದೆಲ್ಲಾ ಮಾಡ್ಬೇಕಿತ್ತು. ಅಲ್ಲಿ ಬಿಹಾರದಾಗ ಮಾಡ್ದಾ ಅಂತ್ಹೇಳಿ ಇಲ್ಲಿ ತಲಿಮ್ಯಾಲೆ ಹೊತ್ಕೊಂಡು ಕುಣಿಯಾಕ ಜನ ಇರ್ಲಿಲ್ಲ. ಆದ್ರೂ ಹಿವಾಸ್ ಇಂಪಾರ್ಟೆಂಟ್ ಮ್ಯಾನ್. ಕರ್ನಾಟಕದಾಗ ಈ ಮಠಗಳು, ಈ ಜಾತಿಗಳು ಇವೆಲ್ಲವೂ ಸೇರ್ಕಂಡು ಅಷ್ಟು ಸುಲಭವಾಗಿ ಅವರನ್ನು ‘ಮುಖ್ಯಮಂತ್ರಿ’ ಮಾಡ್ತಿದ್ವ. ಹಿ ಮೆ ಬಿ ಬ್ರಿಲಿಯಂಟ್.

ಮಠಗಳು ಕರ್ನಾಟಕದಲ್ಲಿ ಪ್ರಗತಿಪರವಾಗಿ ಇಲ್ಲಾ ಅಂತೀರಾ?

ಅದಾವು ಅಂತಾ ಹೇಳೋದೂ ಕಷ್ಟ, ಇಲ್ಲ ಅಂತ ಹೇಳೋದೂ ಕಷ್ಟ. ಅವರ ಮಠದ್ದೇ ಒಂದು ಪಕ್ಷ. ಅವ್ರ ಮಠದ್ದೇ ಒಂದು ಪ್ರಪಂಚ. ಆ ಮಠದ ಆ ಎಮೋಷನ್ಸ್ ಆ ಭಕ್ತರಿಗೆ ಉಂಟು ಮಾಡಿದ್ರೆ ಆ ಮಠಕ್ಕೆ ಬೇಕಾದಷ್ಟು ಸಂಪತ್ ಬರ‍್ತೈತಿ. ಸಿರಿಗೆರೆ ಸ್ವಾಮಿಗಳು ಆಗ್ಲೀ, ಸುತ್ತೂರು ಸ್ವಾಮಿಗಳು ಆಗ್ಲೀ, ಮುರುಘಾರಾಜೇಂದ್ರ ಸ್ವಾಮಿಗಳು ಆಗ್ಲೀ, ತುಮಕೂರು ಸ್ವಾಮಿಗಳಾಗ್ಲೀ.

ಅವರು ಜಾತಿ ಭಾವನೆಯನ್ನು ಮಾಡಿಸೋದರ ಮೂಲಕ ಭಕ್ತರನ್ನ ಎಕ್ಸ್ ಪ್ಲಾಯ್ಟ್ ಮಾಡ್ತದಾರ ಅಂತಾನ?

ಹೌದು. ಟು ಸಮ್ ಎಕ್ಸ್ ಟೆಂಟ್. ಅವ್ರು ಒಂದೊಂದ್ಸಲ ತಮ್ಮಷ್ಟಕ್ಕೆ ತಾವೇ ಗ್ರೇಟ್ ಸೋಷಿಯಲ್ ರಿಫಾರ್ಮರ್ಸ್, ಗ್ರೇಟ್ ಥಿಂಕರ್ಸ್ ಅಂದ್ಕಳ್ತಾರಾ ಕೆಲವು ಮಠಗಳು ಒಳ್ಳೇ ಕೆಲಸ ಮಾಡ್ತದಾವ. ನನಿಗೆ ಎಲ್ಲಾ ಮಠಗಳು ದೂರ ಇಟ್ಟಾವ. ಅವಾಗೆಲ್ಲ ಹೇಳೋರು ಸಿರಿಗಿರೆ ಸ್ವಾಮಿಗಳು : “ಹತ್ರ ಬಂದ್ಬಿಡು ನಿನಗಾ ಸೀಟು ಗ್ಯಾರಂಟಿ. ಪ್ರತೀ ಎಲೆಕ್ಷನ್ನು ಮನ್ಯಾಗ ಕುತ್ಕಂಡು ಗೆಲ್ಬಹ್ದು” ಅಂತಾ. ಇಲ್ಲಾ ನನಿಗೆ ಮಠ ಅಂದ್ರೆ ಸೋಷಲಿಸ್ಟ್ ಪಾರ್ಟಿನೇ. ಈ ಮಠಕ್ಕೆ ನಾನು ಬರಾದಿಲ್ಲ. ಅಂತಾ ಅಂದ್ಬಿಟ್ಟೆ. ನಾನು ಸಪೋಸ್ ಟು ಬಿ ಎ ಸಾಧು ವೀರಶೈವ ಲಿಂಗಾಯ್ತು. ನಾ ಯಾವ್ದುಕ್ಕೂ ಹೋಗಿಲ್ಲ ಅವ್ರೂ ನನಗೆ ಯಾವುದರಲ್ಲೂ ಎನ್ ಕರೇಜ್ ಮಾಡಿಲ್ಲ.

ಇವತ್ತಿಗೂ ಕರ್ನಾಟಕದ ಬಹುಪಾಲು ರಾಜಕೀಯ ನಿರ್ಧಾರಗಳನ್ನ ಮಠಗಳು ನಿರ್ದೇಶಿಸ್ತವೆ ಅಂತಾರಲ್ಲಾ?

ಹೌದೌದು. ಮಠಗಳೇ, ಮಠಗಳು ಭಾಳಾ ಪವರ್ ಫುಲ್. ಬೇರೆ ಕಮ್ಯುನಿಟಿಗಳೂ ಮಠಕ್ಕೆ ಸರಂಡರ್ ಆಗಿದ್ದಾವ.

ಬಗೆಯ ಬೆಳವಣಿಗೆಗಳ ಪರಿಣಾಮ ಏನಾಗ್ಬಹ್ದು ಅಂತೀರಿ?

ನಾನು ರಾಜಕೀಯ ಪಂಡಿತ ಅಂತ ಅನಿಸಿಲ್ಲ ನನಗೆ. ಅದನ್ನ ಹೆಂಗ ಹೇಳಾದು. ಐ ಕಾಂಟ್ ಹ್ಯಾವ್ ಎ ಡೆಫಿನೆಟ್ ವ್ಯೂವ್ ಆನ್ ಢಿಫಿಕಲ್ಟ್ ಕ್ವಶ್ಚನ್ ಲೈಕ್ ಯು. ಅದ್ರಿಂದ್ ಏನೂ ಪ್ರಯೋಜನ ಇಲ್ಲ. ಅಂಥ ಹೋರಾಟ ಮಾಡಾ ಶಕ್ತಿನೂ ಇಲ್ಲ. ಅದು ಸರಿ ಅಂತಾ ಅದ್ರ ಹಿಂದೆ ಹೋಗೋಕೂ ಆಗಾದಿಲ್ಲ.

ಜಸ್ಟ್ ನಿಮ್ಮ ತಾತ್ವಿಕ ನಿಲುವು ಹೇಳ್ರೀ?

ಐಡಿಯಾಲಜಿಕಲಿ ಐಡೋಂಟ್ ಅಗ್ರೀ ದಟ್ ಮಠಾಸ್ ಅಂಡ್ ದೇರ್ ಗೋಯಿಂಗ್ ವೇ ಆಫ್… ಅದು ಧರ್ಮ ಅದೂ ಮಾಡ್ಕಂಡು ಇರ್ಬೇಕು. ಎಲ್ಲದ್ರಾಗೂ ಇಂಟರ್ ಫಿಯರ್ ಎಜುಕೇಷನ್ ನ್ಯಾಗೂ, ಕ್ಯಾಂಡಿಡೇಟ್ ಸೆಲೆಕ್ಷನ್ ಮಾಡಾಕ್ಕೂ ಇಂಟರ್ ಫಿಯರ್ ಆಕ್ಕಾರೇ, ಸಂಸ್ಥೆಗಳನ್ನು ಕಟ್ಟೋಕೂ ಅವರೇ, ಹೆಚ್ಚು ಪ್ರಭಾವಶಾಲಿಗಳು.

ನೀವು ಪವರ್ ಪಾಲಿಟಿಕ್ಸ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರೋರು; ಇವತ್ತಿನ ಕರ್ನಾಟಕದ ರಾಜಕಾರಣದ ಬಗ್ಗೆ ಏನೇಳ್ತೀರಿ?

ಕರ್ನಾಟಕದಲ್ಲಿ ಕಾಂಗ್ರೆಸ್ ಪಾರ್ಟಿ ಅಧಿಕಾರ ಕಳ್ಕೊಂಡ ಮ್ಯಾಲೆ ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಹಟ, ಛಲ, ಕಡಿಮೆ ಇದೆ. ಪುನಃ ಅವರು ಮತ್ತೆ ಹಿಂದಿನ ಕಾಂಗ್ರೆಸ್ ಆಗಿ ಎಮರ್ಜ್‌ಆಗೋದಕ್ಕೆ ಕಷ್ಟ ಇದೆ ಅಂತ ಅನ್ನಿಸ್ತದೆ. ಭಾಳಾ ವರ್ಷ ಅಧಿಕಾರದಲ್ಲಿದ್ದಂತವರೇ ಮುಂಚೂಣಿಯಲ್ಲಿದ್ದಾರೆ ಇವತ್ತೂ. ಜನರಲ್ಲಿ ಒಂದು ಪ್ರೇರಣೆ ಬರಬೇಕಾದ್ರೆ ಯುವಕರು ಬರ್ಬೇಕು. ಹೊಸ ಹೊಸ ವಿಚಾರಧಾರೆಗಳು, ಹೋರಾಟ ಪ್ರವೃತ್ತಿ ಇವೆಲ್ಲ ಇರ್ಬೇಕು. ಕಾಂಗ್ರೆಸ್ ವಿರೋಧ ಪಕ್ಷವಾಗಿದೆ. ವಿರೋಧ ಪಕ್ಷಕ್ಕೆ ಹೋರಾಟ ಭಾಳ ಮುಖ್ಯ. ಅದನ್ನು ಇವ್ರು ಮಾಡ್ತಾ ಇಲ್ಲ. ಬರೇ ಪತ್ರಿಕೆ ಹೇಳಿಕೆ ಕೋಡೋದು, ಬರೀ ಹಿಂದಿನ ವೈಭವ ನೆನಪಿಸ್ಕೊಂಡು ಮಾತಾಡೋದ್ರಿಂದ ಏನೂ ಆಗಲ್ಲ. ಈಗ ನಾವೆಲ್ಲರೂ ಸಿದ್ಧರಾಮಯ್ಯ, ನಾನು, ದೇವೇಗೌಡರ ಜೊತೆಯಲ್ಲಿದ್ದೋರು, ಅದನ್ನು ಬಿಟ್ಟು ಈಗ ಕಾಂಗ್ರೆಸ್ ನಲ್ಲಿ ಮರ್ಜ್ ಆಗಿ ಬಿಟ್ಟೀವಿ. ಸಿದ್ಧರಾಮಯ್ಯನವರೂ ‘ನೀರಿನಿಂದ ಹೊರಗೆತೆಗೆದ ಮೀನಿನಂತಾಗಿದ್ದಾರೇನೋ’ ಅಂತನ್ನಿಸ್ತದೆ ಒಂದೊಂದ್ಸಲ ನನಗೆ. ಒಂದು ಗುಂಪಿನಲ್ಲಿದ್ದವರೆಲ್ಲ ಕಾಂಗ್ರೆಸ್ಸಿಗೆ ಹೋದ್ಮ್ಯಾಲೆ ಅದರ, ಅಲ್ಲಿರ ನಾಯಕತ್ವ, ಅಲ್ಲಿರೋ ಕಾರ್ಯಕರ್ತರು ಒಟ್ಟಿಗೇ ಇರ್ಬೇಕು ಅಂದ್ರೆ ಹೊಸ ಮೂಮೆಂಟ್ ಮಾಡ್ಬೇಕು, ಹೊಸ ಪ್ರಚಾರ ನಡೆಸ್ಬೇಕು ಅನ್ನೋ ತಿಳಿವಳಿಕೆ ಕಮ್ಮಿ ಆಗಿಬಿಟ್ಟಿದೆ. ಪುನಃ ಅಧಿಕಾರಕ್ಕೆ ಬರೋಕೆ ಏನ್ಮಾಡ್ಬೇಕು ಅನ್ನೋದೆ ಚಿಂತೀನೋ ಹೊರ್ತು ಸಾಮಾನ್ಯವಾಗಿ ವಿರೋಧ ಪಕ್ಷಕ್ಕೆ ಇರ್ಬೇಕಾದ ಹೋರಾಟದ ಮನೋಭಾವವಾಗಲಿ, ತ್ಯಾಗ ಭಾವನೆಯಾಗಲಿ, ಸಾಮಾನ್ಯ ಜನರ ಭಾವನೆಗಳಿಗೆ ಸ್ಪಂದಿಸುವುದಾಗಲಿ ಇವೆಲ್ಲ ಇಲ್ಲವೇ ಇಲ್ಲ.