ಸಿದ್ಧರಾಮಯ್ಯನವರುಅಹಿಂದಚಳವಳಿಗೆ ಒಂದು ತೀವ್ರತೆಯನ್ನು ಕೊಟ್ಟು ವರ್ಗಗಳಲ್ಲಿ ಒಂದು ಆಶಾಭಾವನೆಯನ್ನು ಮೂಡಿಸಿದ ವ್ಯಕ್ತಿ. ಅಂತಹವರು ಈಗ ಕಾಂಗ್ರೆಸ್ಸಿಗೆ ಹೋಗಿರೋದನ್ನ ನೋಡಿದ್ರೆ ತಮ್ಮ ಬಲ ಪ್ರದರ್ಶನಕ್ಕೆ ಚಳವಳಿಯನ್ನು ಬಳಸಿಕೊಂಡ್ರಾ ಅಂತ?

ಅದರಲ್ಲಿ ನನಗೆ ಒಂದ್ಸೊಲ್ಪ ಗೊಂದಲ ಇದೆ. ನಾವು ಜಾತ್ಯಾತೀತ ಜನತಾದಳದಲ್ಲಿದ್ದು, ಅಲ್ಲಿ ದೇವೇಗೌಡರ ಕುಟುಂಬ ವಾತ್ಸಲ್ಯವನ್ನು ವಿರೋಧಿಸಿ ಹೊರಗೆ ಬಂದವರು. ಸಿದ್ಧರಾಮಯ್ಯನವರ ಮೇಲೆ ನಾವ್ಯಾಕೆ ವಿಶ್ವಾಸವಿಟ್ಟಿದ್ವಿ. ಅಂದ್ರೆ ಅವ್ರು ಎಂದೂ ಕಾಂಗ್ರೆಸ್ಸಿಗೆ ಹೋದವರಲ್ಲ. ನಾನು ಪಾರ್ಟಿಗೆ ಅಧ್ಯಕ್ಷನಾಗಿದ್ದಾಗ ಅವನನ್ನ ಸೋಷಲಿಸ್ಟ್ ಪಾರ್ಟಿಗೆ ಸೇರ್ಸಿದೆ. ಗೋಪಾಲಗೌಡ್ರು ಇದ್ರು. ರಾಮನಗರಕ್ಕ ಕರ್ಕೊಂಡ್ಹೋಗಿ ಹಿ ಫಸ್ಟ್ ಜಾಯಿನ್ಡ್ ಅವರ್ ಪಾರ್ಟಿ. ಅವತ್ತಿನಿಂದಲೂ ನನಗೆ ಅವನಂದ್ರೆ ಏನೋ ಆತ್ಮೀಯತೆ…

ತುರ್ತು ಪರಿಸ್ಥಿತಿಯಲ್ಲಿ ನೀವು ಹೆಂಗ ಅದನ್ನ ವಿರೋಧಿಸಿದ್ರೀ….. ಏನೇನ್ ಮಾಡಿದ್ರೀ?

ಜಾರ್ಜ್ ಫರ್ನಾಂಡೀಸ್ ಗೂ ನನಗೂ ಭಾಳಾ ಕ್ಲೋಜು. ಅವ್ರು ಎಮರ್ಜೆನ್ಸಿಯಲ್ಲಿ ಹೋರಾಟ ಮಾಡ್ತಿರೋವಾಗ ಅಂಡರ್ ಗ್ರೌಂಡ್ ನಲ್ಲಿ ನಾನು ಕೆಲಸ ಮಾಡ್ತಿದ್ದೆ. ಇಡೀ ಭಾರತಕ್ಕೆ ಡೈನಮೇಟ್ ಸಪ್ಲೆ ಮಾಡೀನಿ ನಾನು. ಅದೂ ಕರೆಕೋಟು ಹಾಕ್ಕೊಂಡು. ದಿವ್ಸಾ ಕೋರ್ಟಿಗೆ ಹೋಗ್ತಿದ್ದೆ. ನೋಡಿದವರೆಲ್ಲ ದಿವ್ಸಾ ಕೋರ್ಟಿಗೆ ಹೋಕ್ತಾನ, ಅನ್ನಂಗ. ರಾತ್ರಿಯಾದ ಕೂಡ್ಲೆ ನಾನೂ, ಜಾರ್ಜ್, ವೆಂಕಟರಾಮ್, ಕಬ್ಬನ್ ಪಾರ್ಕ್‌ದಾಗ ಸೇರಿ ಯಾವ್ಯಾವ ಊರಿಗೆ ಎಷ್ಟೆಷ್ಟು ಕಳಿಸ್ಬೇಕು ಎಲ್ಲಾ ತೀರ್ಮಾನ ಮಾಡ್ತಿದ್ವಿ. ಎಲ್ಲೆಲ್ಲಿ ಹೋರಾಟ ಹೆಂಗೆಂಗ ನಡಿಯಾಕ ಹತ್ತೇತಿ ಚರ್ಚೆ ಮಾಡ್ತಿದ್ವಿ. ಜಾರ್ಜ್ ಗಡ್ಡ ಬಿಟ್ಕೊಂಡು, ಉದ್ದನ ಕಾವಿ ನಿಲುವಂಗಿ ಹಾಕಿ ವೇಷ ಮರೆಸಿದ್ರು. ಅವ್ರು ದೇಶ ತುಂಬ ಹಿಂಗ ವೇಷ ಮರೆಸಿ ತಿರುಗ್ತಿದ್ರು. ಅವರದೇನು, ದೇಶದ ತುಂಬ ಡೆಮಾಕ್ರಸಿ ಅಪಾಯದಲ್ಲಿದೆ. ಜರ್ಮನಿಯಲ್ಲಿ ಹಿಟ್ಲರ್ ನ ವಿರುದ್ಧ ಫೈಟ್ ಮಾಡೋಕೆ ಯಾವ್ಯಾವ ವಿಧಾನಗಳಿದ್ವು ಅದನ್ನ ತಗಂಡು, ಎನಿಮೆಥೆಡ್ ಈಸ್ ಗುಡ್ ಟು ಡಿಸ್ಟ್ರಾಯ್ ಡೆಕ್ಟೇಟರ್ ಶಿಪ್ ಅಂತಾ. ಇಲ್ಲಂದ್ರ ಒಂದ್ಸಲ ದೇಶದಾಗ ಡಿಕ್ಟೇಟರ್ ಶಿಪ್ ಎಸ್ಟಾಬ್ಲಿಷ್ ಆಯ್ತು ಅಂದ್ರೆ ಅದನ್ನ ಕಿತ್ತೊಗಿಯಾದು ಭಾಳಾ ಕಷ್ಟ. ಅದನ್ನು ಮನದಟ್ಟು ಮಾಡೋಹಂಗ ಪ್ರಚಾರ ನಡೆಸಿದ ಜಾರ್ಜ್. ಎನಿ ಮೆಥೆಡ್ ಈಸ್ ಗುಡ್ ಅಂದ. ಆದ್ರೆ ವಾಯಲೆನ್ಸ್ ಎಂದೂ ಮಾಡ್ಲಿಲ್ಲ. ಅದು ಬ್ರಿಡ್ಜ್ ಒಡೀಬೌದು, ಡೈನಮೇಟ್ ಹಾರಿಸ್ಬಹ್ದು. ಡೈನಮೇಟ್ ಸ್ಟಾಕಿಸ್ಸ್ ನಾನು. ಒಂದ್ಸಲ ಬೆಂಗಳೂರಿನ್ಯಾಗ ಅಮರ್ ಹೋಟೆಲ್ ಅಂತಾ ಇತ್ತು. ಅಲ್ಲಿ ಒಂದು ರೂಮು ಬಾಡಿಗಿ ತಗಂಡು ಅಲ್ಲಿ ಡೈನಮೇಟನ್ನು ಸ್ಟಾಕ್ ಮಾಡ್ಕಂಡು ಜಾರ್ಜ್ ಯಾರ್ಯಾರಿಗೆ ಎಷ್ಟು ಕೊಡ್ಬೇಕು ಅಂತಾನ ಅದನ್ನೆಲ್ಲ ಮಾಡ್ತಿದ್ದೆ. ಬಾಂಬೆ, ಕಲ್ಕತ್ತಾಕ್ಕೆ ದೇಶದ ತುಂಬ ಅಮರ ಹೋಟೆಲ್ ನಿಂದ ಕಳಿಸ್ತಿದ್ದೆ. ಅವಾಗ ನಾನು ಬ್ಯುಸಿ ಅಡ್ವಕೇಟ್. ಅದನ್ನ ಮಾಡ್ಕಂತಾನ ನಾನು ಇದನ್ನೂ ಮಾಡ್ತಿದ್ದೆ.

ಯಾಕ ನಾವು ರಬಿರಾಯ್, ಮಧುಲಿಮಯೆ, ಕಿಶನ್ ಪಟ್ನಾಯಿಕ್, ಲೋಹಿಯಾ ಇವರ ಜೊತೆಗೆ ಇರ್ತಿದ್ದೆ ಅಂದ್ರೆ, ಅವ್ರು ಯಾವ ವೈಯಕ್ತಿಕ ಆಶೋತ್ತರಗಳು ಇಲ್ದಂಗೆ ಹೋರಾಟ ಮಾಡಿದ್ರಲ್ಲ. ಇವ್ರಂಗ ಅವ್ರು ವೈಭವದ ಜೀವನ ನಡೆಸಿದವರಲ್ಲ. ಜಾರ್ಜ್ ಕ್ರಿಶ್ಚಿಯನ್ ಅಲ್ದೇ ಹೋಗಿದ್ರೆ ಭಾರೀ ದೊಡ್ಡ ಇನ್ನೇನು ಮಾಡ್ತಿದ್ರೋ ಏನೋ. ಸರ್ವಾಧಿಕಾರದ ವಿರುದ್ಧ ಏನಾದ್ರೂ ಮಾಡ್ರಿ ಅಂತಿದ್ದ. ಕಡೀಗೆ ಪೋಸ್ಟ್ ಬಾಕ್ಸ್ ನ್ಯಾಗ ಬೆಂಕಿ ಹಾಕಿದ್ರೂ ಅದು ಸರ್ವಾಧಿಕಾರದ ವಿರುದ್ಧ ಪ್ರತಿಭಟಿಸಿದಂಗ ಅನ್ನೋ ಹಿಟ್ಲರನ ವಿರುದ್ಧದ ಹೋರಾಟದ ಮಾದರಿ ಪರಿಚಯಿಸಿದ್ದ.

ಡೈನಮೇಟ್ ಗಳನ್ನು ನೀವು ಹೇಗೆ, ಎಲ್ಲಿಂದ ಸಂಗ್ರಹಿಸ್ತಿದ್ರೀ?

ಮೈನರ್ಸ್ ಇರ್ತಿದ್ರಲ್ಲ, ಕ್ವಾರಿಯವ್ರು ಅವ್ರಿಂದ ಕಲೆಕ್ಟ್ ಮಾಡ್ತಿದ್ದೆ. ಥ್ರೋ ಔಟ್ ಇಂಡಿಯಾ ಎಲ್ಲ ಕಡೆಗೂ ಸಪ್ಲೈ ಮಾಡ್ತಿದ್ದೆ ನಾನು. ಅವಾಗ ಎಲ್ಲರ್ನೂ ಅರೆಸ್ಟ್ ಮಾಡಿದ್ರೂ ನನ್ನನ್ನು ಅರೆಸ್ಟ್ ಮಾಡ್ಲಿಲ್ಲ.

ಹೀಗೆ ನೀವು ಕಾಂಗ್ರೆಸ್ ವಿರುದ್ಧಾ ತೀವ್ರವಾದ ಹೋರಾಟ ಮಾಡಿದವ್ರು. ಈಗ ನೀವೇ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳೋ ಅನಿವಾರ್ಯತೆ ಏನಿದೆ?

ಸಿದ್ರಾಮಯ್ಯನ ಗುಂಪು ಹೋಗಿ ಕಾಂಗ್ರೆಸ್ ನ್ಯಾಗ ಮರ್ಜ್ ಆತು. ಹೋಗ್ಬಾರದಿತ್ತು ಅಂತಾ ನನಗೇನೋ ಅನ್ನಿಸೈತಿ. ಆದ್ರೆ ಎಲ್ಲರೂ ಒಂದು ತೀರ್ಮಾನಕ್ಕೆ ಬಂದ್ಮೇಲೆ ನಾನೂ ಅದನ್ನು ಒಪ್ಕೊಂಡ್ಬಿಟ್ರಾಯ್ತು ಅಂತಾ ಒಪ್ಪೀನಿ. ಆದ್ರ ನಾನೇನು ಅವರ ಜೊತೆ ಯ್ಯಾಕ್ಟಿವ್ ಆಗಿ ಇಲ್ಲ. ಕಾಂಗ್ರೆಸ್ ನ್ಯಾಗ ಈಗ ಹೊಸ ಹೊಸ ಕಾರ್ಯಕರ್ತರು, ಲೀಡರ್ಸು ಬಂದಾರ. ಅವರಿಗ್ಯಾರಿಗೂ ನಾವು ಹಿಂದೆ ಹೆಂಗ ಹೋರಾಟ ಮಾಡೀವಿ, ಏನು ಅನ್ನೋ ಗುರ್ತಾ ಇಲ್ಲ. ಅವರು ನಮ್ಮನ್ನು ಸರಿಯಾಗಿ ರೆಕಗ್ನೈಸ್ ಮಾಡಾದಿಲ್ಲ. ಪೊಲಿಟಿಕಲೀ ಅವ್ರಿಗೆ ವಿಶನ್ನೇ ಇಲ್ಲ. ಅದ್ರಿಂದ ಈ ಪಾರ್ಟಿಯೊಳಾಗ ನಮಗ ಭವಿಷ್ಯಾನೇ ಇಲ್ಲೇನೋ ಅಂತಾ ಒಂದೊಂದ್ಸಲ ಅನಿಸ್ತೈತಿ. ಇರಬಹ್ದು ಭಾಳಾ ಜನ ಇರಬಹ್ದು, ದೊಡ್ಡ ದೊಡ್ಡ ಮೀಟಿಂಗ್ ಮಾಡ್ಬಹ್ದು. ಆದ್ರ ಇವರ ತಪ್ಪಿನಿಂದಾನ ಕುಮಾರಸ್ವಾಮಿಯಂಥವ್ರು ಮೇಲಕ್ಕ ಬರಾಕ್ಹತ್ತಿರಾದು. ದೇವೇಗೌಡ್ರು, ಅವರ ಮಕ್ಳು ಮಾಡ್ತಿರಾ ರಾಜಕೀಯಾನ್ನ ಯಾರೂ ಕ್ಷಮಿಸಾಕ್ಕ ಆಗಿಲ್ಲ.

ಕುಮಾರಸ್ವಾಮಿ ಇನ್ನೂ ಹುಟ್ಟಿದ್ನಾ ಇಲ್ಲೋ ನಾವು ರಾಜಕೀಯ ಮಾಡ್ತಿರಬೇಕಾದ್ರೆ. ಅವನ ಹಿನ್ನೆಲೆ ಏನು? ಒಬ್ಬ ಫಿಲಂ ಡಿಸ್ಟ್ರಿಬ್ಯೂಟರ್ ಆದೋನು ಒಂದಾಸಲಕ್ಕ ಚೀಪ್ ಮಿನಿಸ್ಟ್ರು ಆಗಿಬಿಡಾದ. ಅದರ ಜತೀಗೆ ಅವರಣ್ಣ ಮಂತ್ರಿ. ಅವರಪ್ಪ ಆಲ್ ಇನ್ ಆಲ್. ಈ ಬಿ.ಜೆ.ಪಿ.ಯವ್ರಿಗೆ ಯಾವತ್ತೂ ಅಧಿಕಾರ ಸಿಕ್ಕಿದ್ದಿಲ್ಲ ಅವ್ರೂ ಇವರ ಜತೀಗೆ ಹೊಕ್ಕಂಡಾರ. ಇಂಥಾ ಒಂದು ವಿಷಮಯ ಪರಿಸ್ಥಿತಿ ನಮ್ಮ ಕರ್ನಾಟಕದಲ್ಲಿ ಇವತ್ತು. ಇವತ್ತು ಯುವಕರೂ ಅಧಿಕಾರ ಇರೋ ಪಕ್ಷದ ಹಿಂದನ ಹೋಗ್ತಾರ. ಏನಾರ ಸಿಗ್ತೈತೇನೋ ಅಂತಾ. ಒಂದು ಮೂವ್ ಮೆಂಟ್ ಕಟ್ಬೇಕು, ಸ್ಯಾಕ್ರಿಫೈಸ್ ಮಾಡ್ಬೇಕು, ಅನ್ನಾದಾ ಇಲ್ಲ. ಇದೇನು ದುರದೃಷ್ಟವೋ ಏನೋ.

ಇಂಥಾ ವಿಷಮಯ ಪರಿಸ್ಥಿತಿಯಲ್ಲಿಸಮಾಜವಾದಿ ಪರ್ಯಾಯವನ್ನು ಕಟ್ಟೋದು ಹೆಂಗ ಅಂತಾ?

ನಾವೆಲ್ಲ ವಯಸ್ ನ್ಯಾಗ ಸಂಘಟನೆ ಬಲವಾಗಿರ್ಲಿ. ಇಲ್ಲದಿರ‍್ಲೀ, ಯಾರರ ಬರ‍್ಲೀ ಬಿಡ್ಲೀ ಹೋರಾಟಕ್ಕ ಇಳಿಯಾದು ಇಂಕ್ಕಿಲಾಬ್ ಜಿಂದಾಬಾದ್ ಅನ್ನೋದು ಹಂಗೆಲ್ಲ ಮಾಡಿದ್ವಿ. ಬೆಂಗಳೂರಿನ್ಯಾಗ ನಾನವಾಗ ಎಲ್ಲದ್ರಾಗೂ ಮುಂದೆ ಇರ್ತಿದ್ದೆ. ಈಗ ಹಂಗ ತತ್ವ ಸಿದ್ಧಾಂತ ಇಟ್ಕೊಂಡಿರೋ ಒಂದು ಮೂವ್ ಮೆಂಟ್ ಸ್ಟಾರ್ಟ್ ಆಗ್ತಾ ಇಲ್ಲ. ಇದಾ ಖರ್ಗೆ, ಧರ್ಮಸಿಂಗ್ ಅವರಿಗೆ ಅಧಿಕಾರ ಅನುಭವಿಸಿ ಮೈ ಜಡ್ಡು ಗಟ್ಟಿ ಹೋಗೇತಿ. ಅವ್ರು ತಿಳ್ಕಾಬೇಕು. ಅನ್ಯಾಯ ಮಾಡಕ್ಕತ್ತೀವಿ ಯುವಕರಿಗೆ ಅಂತಾ. ಅವ್ರು ಹಿನ್ನೆಲೆಯಲ್ಲಿದ್ದು ಯುವಕರಿಗೆ ಪ್ರೋತ್ಸಾಹ ಕೊಡಬೇಕು. ಎಲ್ಲದ್ರಾಗೂ ಅವರ‍್ದೇ. ಇವತ್ತು ಯುವಕರಿಗೆ ಸಮಾಜವಾದದ ಬಗ್ಗೆ ಆಗ್ಲೀ, ಪ್ರಗತಿಪರ ಚಿಂತನೆ ಬಗ್ಗೆ ಆಗ್ಲೀ ಟ್ರೈನಿಂಗೇ ಇಲ್ಲ. ಅದ್ರಿಂದ ಈಗ ಬಿ.ಜೆ.ಪಿ.ಯಂಥಾ ಕಮ್ಯುನಲ್ ಆರ್ಗನೈಜೇಶನ್ಸ್ ಬೆಳಿಯಾಕ ಅವಕಾಶ ಮಾಡಿಕೊಟ್ಟಂಗ ಆಗೇತಿ.

ಈ ಬಿ. ಜೆ. ಪಿ. ಯವ್ರು ಪ್ರಬಲರಾದಷ್ಟು ಈ ದೇಶಕ್ಕೆ ಭವಿಷ್ಯ ಇಲ್ಲ. ಅವರ ಐಡಿಯಾಲಜಿ, ಅವರ ತತ್ವ, ಅವರ ಕಾರ್ಯಕರ್ತರ ಮಾನಸಿಕ ಸ್ಥಿತಿ ಸುಧಾರಣೆ ಮಾಡ್ಲಿಕ್ಕೇ ಆಗದಷ್ಟು ಪರಿಸ್ಥಿತಿಗೆ ರೀಚ್ ಆಗಿಬಿಟ್ಟಿದೆ. ಆದ್ರೆ ಜನ ಜಾಸ್ತಿ ಅದಾರ ಅವರಿಗೆ. ಹಿಂದೂಗಳದಾರ, ಫೆನಟಿಕ್ಸ್ ಅದಾರ, ಜಾತಿವಾದಿಗಳದಾರ, ಮಠಾಧಿಪತಿಗಳದಾರ ಅವ್ರಿಗೆ. ಇಂಥದ್ರಾಗ ಪ್ರೊಗ್ರೆಸ್ಸಿವ್ ಮೂಮೆಂಟ್ ಕಟ್ಟಾಕ ಯಾರು ಬರ್ಬೇಕು ಹೇಳ್ರಿ, ಹೂ ಈಸ್ ಟು ಲೀಡ್?

ಇಡೀ ಇಂಡಿಯಾದಲ್ಲಿ ಪರಿಸ್ಥಿತಿ ಇವತ್ತು ನಿರ್ಮಾಣ ಆಗೋಕೆ ಕಾರಣಗಳನ್ನು ಹೇಗೆ ಕಂಡುಕೊಳ್ತೀರಿ ನೀವು?

ಜೆ.ಪಿ.ಯಂಥಾ, ಲೋಹಿಯಾರಂಥ ಲೀಡರ್ಸು ಇಲ್ಲ ಈಗ. ಜೆ.ಪಿ.ಯಾಕ ಆ ವಯಸ್ಸಿನಲ್ಲಿ ಒಂದು ‘ನವನಿರ್ಮಾಣ ಕ್ರಾಂತಿ’ಯ ಕರೆ ಕೊಟ್ಟು ದೇಶದ ‘ಯುವಕರನ್ನೆಲ್ಲ ಹುರಿದುಂಬಿಸಿ ತಯಾರುಮಾಡ್ದ. ಜೆ.ಪಿ.ನ್ನ ನೆನಪಿಸ್ಕೊಳ್ಳಾಕ ಯುವಕರಿಗೆ ಪುರಸೊತ್ತಿಲ್ಲ.

ಅದೇ ಪ್ರಶ್ನೆ. ಹೀಗಾಗೋದಕ್ಕೆ ಇತಿಹಾಸದಲ್ಲಿರೋ ಕಾರಣಗಳಾವುವು ಅಂತಾ.?

ಹೇಳಿದ್ನೆಲ್ಲಾ ಮಧುಲಿಮಯೆ, ಜೆ.ಪಿ. ಲೋಹಿಯಾ ಅಂಥ ಲೀಡರ್ಸ್ ಇಲ್ದಂಗಾತು. ಜಾರ್ಜ್‌ಗೆ ವಯಸ್ಸಾಗ್ತಾ ಬಂತು. ಸಂಘಟನೆ ಇಲ್ದಂಗಾತು. ಸಮಾಜವಾದಿ ಶಿಬಿರಗಳು, ಮೊದ್ಲು ನಡೀತಿದ್ದು. ಈಗ ಅದೂ ಇಲ್ದಂಗಾತು.

ಇಂಥಾ ಸಂದರ್ಭದಲ್ಲಿ ರಾಜಕೀಯವಾಗಿ ಸಮಾಜವಾದಿವಾದಿಗಳಿಗೆ ಕಾಂಗ್ರೆಸ್ಸೇ ಅನಿವಾರ್ಯನಾ, ಅಥವಾ ಮೂರನೇ ಒಂದು ಶಕ್ತಿಯನ್ನು ಕಟ್ಟಿಕೋ ಬೇಕೋ?

ಕಾಂಗ್ರೆಸ್ ನಲ್ಲಿ ರ್ಯಾಡಿಕಲ್ ರಿಫಾರ್ಮ್ ಏನರ ಆದ್ರೆ ಇಟ್ ಈಸ್ ಆಲ್ ರೈಟ್. ಹಿಂದಿನದೆಲ್ಲ ಮರ‍್ತು ಬಿಡಬಹ್ದು. ಇಂದಿರಾಗಾಂಧಿ ಸರ್ವಾಧಿಕಾರ, ಎಮರ್ಜೆನ್ಸಿ, ವಂಶಾಡಳಿತ ಇವನ್ನೆಲ್ಲ ನೆನಪಿಸಿಕೊಂಡ್ರೆ ಕಾಂಗ್ರೆಸ್ ಪ್ರಗತಿಪರ ಶಕ್ತಿಯಾಗಿ ಹೊರ ಹೊಮ್ಮೋದು ನನಗೇನು ಅನುಮಾನ.

ಆದ್ರೂನೂ ಈಗ ಕಾಂಗ್ರೆಸ್ ನಲ್ಲಿ ಪ್ರೊಗ್ರೆಸ್ಸಿವ್ ಆಗಿ ಚಿಂತನೆ ಮಾಡೋರ ಕೊರತೆ ಎದ್ದು ಕಾಣಿಸ್ತಾ ಇದೆ. ಈಗ ‘ಸೋಷಲಿಸ್ಟ್ ಮೂಮೆಂಟ್ ಕೂಡ ಆಲ್ ಮೋಸ್ಟ್ ಸತ್ತು ಹೋದಂಗಾಗಿದೆ. ಕಮ್ಯುನಿಸ್ಟರನ್ನೂ ನಾವೂ ನಂಬಂಗಿಲ್ಲ. ಯಾಕಂದ್ರೆ ದೇಶವ್ಯಾಪಿ ಸಂಘಟನೆ ಮಾಡೋಕೆ ಅವರ ಕೈಲಿ ಆಗಾದಿಲ್ಲ. ಹೀಗಿದ್ದಾಗ ಏನು ಮಾಡೋದು. ಈಗ ಯಾವ್ದರ ಮಠಾ, ಸ್ವಾಮಿಗಳು ಇದ್ರೆ ಗುಂಪು ಬೇಗ ಕಲೀತದೆ. ಅಥವಾ ಜಾತಿ ಆಧಾರದಲ್ಲಿ ಸಂಘಟನೆ ಕಟ್ಟಿದ್ರೂ ಬೇಗ ಆಗ್ತದೆ. ಆದ್ರೆ ಪ್ರೊಗ್ರೆಸ್ಟಿವ್ ಆಗಿ ಜೆ. ಪಿ. ಲೋಹಿಯಾ, ಗಾಂಧಿಯಂಥವರು ಯಾರಾದಾರ ಹೇಳ್ರೀ, ಸೋನಿಯಾಗಾಂಧೀ ಪಾಪ ಆಕ್ಯಾರ ಏನ್ಮಾಡ್ತಾಳ. ಕಾಂಗ್ರೆಸ್ ನ್ಯಾಗ ಎಲ್ಲಾ ಅಧಿಕಾರ ಅನುಭವಿಸಿ ಇರೋ ಜನ. ಕಾಂಗ್ರೆಸ್ ಆದ್ರೂ ಈಗ ಒಂದು ಯೂಥ್ ಬೆಟಾಲಿಯನ್ ತಯಾರು ಮಾಡ್ಬೇಕು.

ಸಮಾಜವಾದಿಗಳ ಶಕ್ತಿ ಕುಸಿದು, ಕಾಂಗ್ರೆಸ್ಸು ಬಲಿಷ್ಠಾ ಆಗೋದಕ್ಕೆಬಡತನ ನಿರ್ಮೂಲನ, ಮತ್ತು ಭೂಸುಧಾರಣೆಯಂತಹ ಸಮಾಜವಾದಿ ಪರಿಕಲ್ಪನೆಗಳನ್ನು ಕಾಂಗ್ರೆಸ್ಸು ತನ್ನ ಯೋಜನೆಗಳನ್ನಾಗಿಸಿಕೊಂಡದ್ದೂ ಮುಖ್ಯ ಕಾರಣವಾಗಿರಬಹುದಲ್ವಾ?

ಅರಸು ಅಂಥಾ ಜನರಿಂದ ಕಾಂಗ್ರೆಸ್ಸಗೆ ಶಕ್ತಿ ಬಂತು ಆ ಕಾಲ್ದಲ್ಲಿ. ಅವ್ರು ಹಳೇ ಕಾಂಗ್ರೆಸ್ಸಿಗರ ಥರಾ ಇರ್ಲಿಲ್ಲ. ಅವರು ಒಂದಿಷ್ಟು ಕ್ರಾಂತಿಕಾರಕ ಕಾಂಗ್ರೆಸ್ಸಿಗರಾಗಿದ್ದರು. ಆವಾಗ ನಾನು ಅರಸು ಜೊತೆಗೆ ಟೂರ್ ಮಾಡ್ದೆ. ಅವಾಗ ಹೇಳೋರು. “ಕೆ.ಜಿ., ಆವಾಗ ಅಧಿಕಾರ ಇದ್ದಾಗ ಎಷ್ಟು ಜನ ನನ್ನ ಹಿಂದೆ ಬರ್ತಿದ್ರು. ಈಗ ಅಧಿಕಾರ ಹೋದಕೂಡ್ಲೆ ಎಲ್ಲರೂ ನನ್ನನ್ನು ಬಿಟ್ಟು ಹೋದ್ರು. ಆದ್ರೆ ಅಧಿಕಾರ ಹೋದ ಮ್ಯಾಲೂ ನನ್ನ ಜೊತೆ ಇದೀಯಲ್ಲಪ್ಪ ಯಾಕೆ” ಅಂತಾ. ನಾವಿಬ್ರೂ ಹಾವೇರಿಯೊಳಗ ಒಂದು ಪಬ್ಲಿಕ್ ಮೀಟಿಂಗ್ ಮುಗಿಸಿ ವಾಪಾಸ್ ಬರ್ತಿದ್ದಾಗ ಹೇಳಿದ್ರು. ಅರಸು ಈ ಖರ್ಗೆ, ಧರ್ಮಸಿಂಗ್ ಮಾಡ್ಕೆಂಡಂಗ ಆಸ್ತಿ ಮಾಡ್ಕೋಳ್ಲಿಲ್ಲ.

ಅರಸು ಅವರ ಜನಪ್ರಿಯತೆ ಕೂಡ ಕರ್ನಾಟಕದಲ್ಲಿ ಸಮಾಜವಾದಿ ಚಳವಳಿಗೆ ಹಿನ್ನಡೆಯನ್ನುಂಟು ಮಾಡಿರಬಹುದಲ್ಲವೇ?

ಸ್ವಲ್ಪಮಟ್ಟಿಗೆ ಆಗಿರಬಹ್ದು. ಸಮಾಜವಾದಿ ಸಿದ್ಧಾಂತವನ್ನು ನಂಬಿದವರೂ ಕರ್ನಾಟಕದಲ್ಲಿ ಭಾಳಾ ಮಂದಿ ಇರ್ಲಿಲ್ಲ. ಗೋಪಾಲಗೌಡ್ರು, ಸದಾಶಿವರಾವು, ಇಂಥವ್ರೆಲ್ಲ ಹೋದ್ಮೇಲೆ… ವೈ.ಆರ್. ಪರಮೇಶ್ವರಪ್ಪ ಅಂತಾ ಇದ್ರ ಶಿವಮೊಗ್ಗದಲ್ಲಿ ಕಟ್ಟಾ ಸಮಾಜವಾದಿಗಳು. ಅವ್ರು ಕೊನೀಗೆ ಜೀವನ ಮಾಡೋದೆ ಕಷ್ಟ ಆಗಿ ಸತ್ರು. ದೊಡ್ಡ ಮನೆತನದಿಂದ ಬಂದೋರು. ಅವರಿಗೆ ಹೆಣ್ಣು ಕೊಟ್ಟ ಮಾವನೂ ದೊಡ್ಡ ಮನೆತನದವ್ರು. ಅವ್ರು ಎಂ.ಎಲ್.ಸಿ. ಆದಾಗ ಲುಂಗಿಗಳು, ಖಾದಿ ಬಟ್ಟೆಗಳನ್ನು ನಾನು ಕೊಡಿಸ್ಬೇಕಿತ್ತು. ಗೋಲಾಗೌಡ್ರೂ ಏನು ಆಸ್ತಿ ಮಾಡಿದ್ರು. ಅವರು ಸೋತಾಗ ಪೂರ್ತಿ ಐದು ವರ್ಷ ಅವರ್ದು ನಾನು ನೋಡ್ಕಂತಿದ್ದೆ ಬೆಂಗಳೂರಿನ್ಯಾಗ. ಹೇಳ್ಕಬೇಕು ಅನ್ನಾದೇನಲ್ಲ. ಪಟೇಲ್ರು ಒಂಥರಾ ಭೋಗ ಜೀವನಕ ಹೋದವ್ರು. ಅದೇನೋ ನಮಗೂ ಅವರಿಗೂ ರಿಲೇಶನ್ಸ್ ಚೆನ್ನಾಗಿತ್ತು. ಅವ್ರು ಬೆಂಗಳೂರಿಗೆ ಬಂದ್ರೆ ರಾಯಲ್ ಲಾಡ್ಜ್ ನ್ಯಾಗ ಉಳಿಸ್ತಿದ್ದೆ. ಅವರಪ್ಪಾನೂ ಹಿಂದೆ ಎಂ. ಆರ್. ಎ. ಆಗಿದ್ರು, ನಮ್ಮಪ್ಪಾನೂ ಎಂ. ಆರ್. ಎ. ಆಗಿದ್ರು.

ರಾಷ್ಟ್ರಮಟ್ಟದಲ್ಲಿಭಯೋತ್ಪಾದನೆಅನ್ನೋದು ಹೆಚ್ಚು ಚರ್ಚೆಯಾಗ್ತಿದೆ. ಅದ್ರಲ್ಲೂ ವಿಶೇಷವಾಗಿ ಒಂದು ಧರ್ಮದ ಜನ ಹೆಚ್ಚು ಭಯೋತ್ಪಾದಕರಾಗ್ತಿದ್ದಾರೆ ಅಂತಾ ಮಾತುಗಳು ಬರ್ತಿದ್ದಾವೆ. ನೀವೇನಂತೀರಿ?

ಅಂಥದೇನು ಭಾರೀ ಅಪಾಯಕಾರಿಯಾಗಿ ‘ಭಯೋತ್ಪಾದನೆ’ ಬೆಳೀತಿದೆ ಅಂತೇನೂ ನನಗನ್ನಿಸ್ತಿಲ್ಲ. ಕೆಲವು ಪಾಕೆಟ್ಸ್ ಗಳಲ್ಲಿ ಅವರು ಇದ್ದಾರ ಹೋರ್ತು ದೇಶವ್ಯಾಪೀ ಅಪಾಯಕಾರಿ ಯಾಗ್ತಾರೆ ಅಂತಾ ಅನಿಸಾದಿಲ್ಲ. ಡೆಸ್ಟರೇಟ್ಸ್ ಎಲಿಮೆಂಟ್ಸ್ ಇರ್ತಾವಲ್ಲ ಅವ್ರು ಟೆರರಿಸ್ಟ್ ಆಗ್ತಾರ. ಗಂಡು ಹೆಣ್ಣು ಎಲ್ಲ. ಈಗ ಕಾಡಿನ್ಯಾಗ ಇದ್ದು ಟೆರ್ರರಿಸಂ ಮಾಡೋರು ಕಾಡಿನ್ಯಾಗ ಇದ್ದು ಏನು ಟೆರರಿಸಂ ಮಾಡ್ತಾರೆ. ಯಾರ‍್ದರ ನಾಕು ತೆಲೀತಗ್ದು, ಸಾಹಿಸಿದ್ರೆ ಈ ದೇಶದಾಗ ಕ್ರಾಂತಿ ಆಗ್ತೈತಾ. ಇದು ಭಾಳಾ ಅಪಾಯಕಾರಿ ಟೆರರಿಸಂ ಅನ್ನೋದು. ಏನಿದ್ರೂ ನಾವೂ ಡೆಮಾಕ್ರಟಿಕ್ ಸೆಟ್ ಆಪ್ ನೊಳಗಾ ಕ್ರಾಂತಿಯನ್ನ ಮಾಡ್ಬೇಕು.

ನೀವು ನಕ್ಸಲೈಟರನ್ನಟೆರ್ರರಿಸ್ಟ್ಅಂತಾ ಪರಿಗಣಿಸ್ತೀದ್ದೀರಿ ಅಂತಾ ಕಾಣಿಸ್ತಿದೆ. ನಾನು ಹೇಳ್ತಿರೋದುಧರ್ಮ ಹೆಸರಲ್ಲಿ ಅದೂಇಸ್ಲಾಂಧರ್ಮದ ಹೆಸರಲ್ಲಿ ಭಯೋತ್ಪಾದನೆ ಬೆಳೇತದೆ ಅನ್ನೋಮಾತಿದೆ. ಅದನ್ನು ನಾನು ಕೇಳಿದ್ದು?

ಅದೂ ಇದೆ. ಆದ್ರೆ ಅಷ್ಟೊಂದು ಅಪಾಯಕಾರಿಯಾಗಿ ಬೆಳೀತಿದೇನಾ? ಹಾಗಂತ ನನಗನ್ನಿಸ್ತಿಲ್ಲ. ಬೇಸಿಕಲಿ ಈ ಮುಸ್ಲೀಂರು ಈಗ ಸ್ವಲ್ಪ ಇಂಪ್ರೂ ಆಗಿದಾರೆ. ಅವರಿಗೆ ರಿಲೀಜಿಯಸ್ ಸೆಂಟಿಮೆಂಟ್ಸ್ ಬಹಳ. ಅವರಲ್ಲಿ ಸೆಕ್ಯುಲರ್ ಮುಸ್ಲೀಂಸು ಏನು ಕಮ್ಮೀ ಇಲ್ಲ, ದೇಶದಲ್ಲಿ. ಅವರು ನಮ್ಮ ಫ್ರೀಡಂ ಮೂಮೆಂಟ್ ನ ಪಾರ್ಟ್ ಆಗಿ ಇದ್ದೋರು. ಆದ್ರೆ ಇತ್ತೀಚೆಗೆ, ಎಲ್ಲ ಜಾತಿಯ ಕಮ್ಯುನಲ್ ಎಲಿಮೆಂಟ್ಸು ಇಂಟಿಗ್ರೇಟೆಡ್ ಇನ್ ಪೊಲಿಟಿಕಲ್ ಯ್ಯಾಕ್ಟಿವಿಟೀಸ್,. ಬರೇ ಮುಸ್ಲೀಂಸ್ ಅಂತಾ ಬ್ಯಾಡ. ಈ ಲಿಂಗಾಯಿತ್ರನ್ನ ತಗಳ್ರೀ. ದ ಪೊಲರೈಸೇಷನ್ ಅರೌಂಡ್ ದಿ ಮಠ್ಸ್, ಆಂಡ್ ದ ಕಂಟ್ರೋಲ್ ಆಫ್ ಮಠಾಧೀಶ್ವರ ಓವರ್ ದಿ ಫಾಲೋಯರ್ಸ್. ಅದೂ ರಾಜಕೀಯ ತತ್ವ ಸಿದ್ಧಾಂತಕ್ಕಿಂತ ಅವ್ರು ಹೇಳಿದ್ದಕ್ಕೇನೆ ಹೆಚ್ಚು ಪ್ರಾಶಸ್ತ್ಯ ಸಿಗ್ತಾ ಇದೆ. ಇವತ್ತು ನಾನು ಸ್ವಾಮಿಗೋಳ ಹತ್ರ, ಮಠಕ್ಕೆ ಹೋಗ್ಲಿಲ್ಲಂದ್ರ ನನ್ನನ್ನು ಕಡೆಗಣಿಸ್ತಾರ. ಅಲ್ಟಿಮೇಟ್ ವರ್ಡ್ ಈಸ್ ಅವರ ಸ್ವಾಮೀಜಿ. ನಾನು ಸಾಧು ಲಿಂಗಾಯಿತ್ರೋನು ಅಂತಾ ತಿಳ್ಕಳ್ರೀ…. ಅಲ್ಲೀ ಮಠದ ಸ್ವಾಮಿಗಳ ಆದೇಶಗಳಿಗೆ ಹೆಚ್ಚು ಪ್ರಾಶಸ್ತ್ಯನೋ ಹೊರ್ತು ನಿಮ್ಮ ಪಾರ್ಟಿ ತತ್ವ, ಸಿದ್ಧಾಂತಗಳಿಗೇನು ಹೆಚ್ಚು ಬೆಲೆಯಿಲ್ಲ. ಹಿಂಗಾ ಮುಸ್ಲೀಂಸೂ ಅವರವರ ಇಂಟ್ರೆಸ್ಟು ನೋಡ್ಬೇಕ್ಕಾಗ್ತದೆ. ದೆ ಹ್ಯಾವ್ ಟು ಸರ್ವ್ಯೆವ್ ಇನ್ ದಿಸ್ ಕಂಟ್ರೀ. ಅವ್ರು ಸಂಘಟನೆಯಾಗದೇ ಇದ್ರೆ. ಅವರು ಕಷ್ಟದಲ್ಲಿದ್ದಾಗ ಯಾವ ಹಿಂದೂನೂ ಹೋಗಿ ಅವರಿಗೆ ಸಹಾಯ ಮಾಡಾದಿಲ್ಲ. ಈವನ್ ಹಿಂದೂಸ್ ಗೆ ಮಾನಸಿಕವಾಗಿ, ಧಾರ್ಮಿಕವಾಗಿ ಆಯ್ಯಂಟೀ ಮುಸ್ಲೀಂ ಮನೋಭಾವ ಬೇರೂರಿಬಿಟ್ಟಿದೆ. ಮತ್ತೆ ಅವರ‍್ಗೆ ಫೈಟ್ ಮಾಡ್ಬೇಕಂದ್ರೆ ಅವರಿಗೆ ಸಂಘಟನೆ ಬೇಕೇ ಬೇಕಾಗ್ತದೆ. ಆದ್ರೆ ಅವರಿಗೆ ಮಾರ್ಗದರ್ಶನ ಮಾಡೋಕೆ ಮೌಲಾನ ಅಜಾದ್ ನಂತಹ ಮುಸ್ಲೀಂ ಲೀಡರ್ಸ್ ಯಾರದಾರ ಈಗ. ಆಲ್ ಇಂಡಿಯಾದಾಗ ನಮ್ಮ ಸೋಷಲಿಸ್ಟ್ ಪಾರ್ಟ್ಯಾಗ ಎಂಥೆಂಥಾ ಮುಸ್ಲೀಂಸ್ ಇದ್ರು.

ಅಂತಾ ಸೆಕ್ಯುಲರ್ ಮುಸ್ಲೀಂಸು ಕಮ್ಯುನಲ್ಸ್ ನ್ನ ಕಂಟ್ರೋಲ್ ಮಾಡ್ಬೇಕು. ಎಜುಕೇಟ್ ಮಾಡ್ಬೇಕು. ಅಟ್ ಲಾಸ್ಟ್ ಸೆಕ್ಟ್ರೆರೀಯನ್ ಆಗಿ ತೀರಾ ಕಮ್ಯುನಲ್ಸ್ ಆಗಿಬಿಟ್ರಿ ನಾಳೆ ಈ ದೇಶಕ್ಕೆ ಭವಿಷ್ಯವಿಲ್ಲ. ಇವರೂ ಕಮ್ಯುನಲ್ಸ್ ಆಗಿಬಿಟ್ಟು ಹಿಂದೂಗಳೂ ಕಮ್ಯುನಲ್ಸ್ ಆಗಿ ಹಿಂದುತ್ವ ಆಗಿ ಪ್ರೊಗ್ರೆಸ್ಸಿವ್ ರಾಜಕೀಯಾನಾ ಬರದೇ ಹೋದ್ರೆ… ಅಪಾಯ ಅದು. ಹಂಗಾಗಿ ಯೂಥ್ಸಗೆ ಮಾರ್ಗದರ್ಶನ ಮಾಡ್ಬೇಕು ಈಗ.

ಸಾರ್, ಹೊತ್ತುಜಾಗತೀಕರಣಎಂಬ ಸಂದರ್ಭದಲ್ಲಿ ನಾವಿದ್ದೀವಿ. ಬಂಡವಾಳಿಗ ರಾಷ್ಟ್ರಗಳು ಭಾರತದ ಆರ್ಥಿಕತೆಯನ್ನು ನಿಯಂತ್ರಿಸ್ತಿವೆ, ನೀತಿ ನಿರೂಪಿಸ್ತಿವೆ. ಇದರ ಪ್ರಭಾವದಿಂದಾಗಿ ಇಂಡಿಯಾದಲ್ಲಿ ಬಗೆಯ ರಾಜಕೀಯ ಅಸ್ಥಿರತೆ ಮತ್ತು ಜನಾಂಗಿಯವಾದ ಆರ್ಥಿಕ ದುಷ್ಪರಿಣಾಮಗಳು ಆಗಿದೆ ಅಂತಾರಲ್ಲ?

ನನಗೇನು ಹಂಗನ್ನಿಸಾದಿಲ್ಲ. ಅಷ್ಟೊಂದು ಸುಲಭವಾಗಿ ಭಾರತದ ಜನ ಬಂಡವಾಳಿಗ ರಾಷ್ಟ್ರಗಳ ಪ್ರಭಾವಕ್ಕೆ ಸಿಲುಕೋದಿಲ್ಲ. ಇದು ತಾತ್ಕಾಲಿಕ ಸ್ಥಿತಿ. ಮಾಧ್ಯಮಗಳು ಜಾಗತೀಕರಣದ ಅಪಾಯ ಅಂತಾ ಬಹಳ ಹೈಲೇಟ್ ಮಾಡ್ತಿವೆ. ಅವರಷ್ಟಕ್ಕೆ ಅವರು ಅವರ ಆರ್ಥಿಕ ಹಿತಾಸಕ್ತಿ ಕಾಪಾಡಿಕೊಳ್ತಾರೆ, ವಾಣಿಜ್ಯ ನೀತಿಗಳನ್ನ ರೂಪಿಸ್ತಾರೆ. ಇಂಟರ್ ನ್ಯಾಷನಲ್ ಹೆಜಿಮನಿ ಕಾಪಾಡಿಕೊಳ್ತಾರೆ. ಅದರ ಪ್ರಭಾವ ಇಂಡಿಯಾದ ಮೇಲೆ ಏನಾಗಿದೆ? ನನಗೇನು ಅಂತಹದ್ದು ಆಗಿದೆ ಅಂತನ್ನಿಸೋದಿಲ್ಲ.

ಬಹುರಾಷ್ಟ್ರೀಯ ಬಂಡವಾಳ ಅತೀ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯಾಗ್ತಿದೆ. ವ್ಯಾಪಾರ ಮತ್ತು ಉದ್ಯಮದ ಭರಾಟೆಯಲ್ಲಿ ಕೃಷಿಕ್ಷೇತ್ರ ನಾಶವಾಗ್ತಿದೆ. ಭೂಮಿ ಸಗಟಾಗಿ ಅವರ ಕೈಗೆ ಹೋಗ್ತಿದೆ. ಇದೆಲ್ಲಾ ಮತ್ತೇನನ್ನ ಸೂಚಿಸ್ತವೆ?

ಇದೆಲ್ಲದರ ಬಗ್ಗೆ ಮಾತನಾಡಬೇಕು ಅಂದ್ರೆ ನಾನು ಆರ್ಥಿಕ ತಜ್ಞನಲ್ಲ. ಆದ್ರೂ ಇದೆಲ್ಲ ‘ಮಾಡ್ರನ್ ಎಕಾನಮಿ’, ಇದೆಲ್ಲ ಅನಿವಾರ್ಯ ಪ್ರಕ್ರಿಯೆ. ಅನಿವಾರ್ಯ ಅಭಿವೃದ್ಧಿ. ಯೂ ಕಾಂಟ್ ಸ್ಟಾಪ್ ಇಟ್. ಇವತ್ತು ಅಂತರ ರಾಷ್ಟ್ರೀಯ ಪರಿಸ್ಥಿತಿ ಹಾಗಿದೆ. ಅದರ ಜೊತೆಗೇ ಹೋಗ್ಬೇಕು. ಅದಕ್ಕೆ ಹೊರತಾಗಿ ನಿಮ್ಮದೇ ಒಂದು ಏನನ್ನೋ ಮಾಡೋಕೆ ಸಾಧ್ಯವಾಗಲ್ಲ. ಇದರಿಂದ ಭಾರೀ ಅಪಾಯ ಅಂತಾ ನನಗನ್ನಿಸೋದಿಲ್ಲ. ಆಗಲಿ, ಪ್ರೋ. ಅಮೇರಿಕನ್ ಎಕಾನಮಿಕ್ ಪ್ರೋಗ್ರೇಸ್ ಆದ್ರೆ ಆಗ್ಲಿ. ಒಟ್ಟಾರೆ ಭಾರತದ ಬಡತನ ನಿರ್ಮೂಲನ ಆದ್ರೆ ಸಾಕು. ಬಂಡವಾಳ ಯಾರ‍್ದರ ಆಗ್ಲಿ, ಅಭಿವೃದ್ಧಿ ಅವರ‍್ದೇ ಆದ್ರೂ ನಮ್ಮ ಬಡತನ ಹೋದ್ರೆ ಸಾಕು. ಇಂಡಿಯಾ ಉದ್ಧಾರ ಆದ್ರೆ ಸಾಕು.

ಜಾಗತೀಕರಣದಿಂದ ಇಂಡಿಯಾದ ಬಡತನ ಹೆಚ್ಚಾಗ್ತಿದೆ. ಆರ್ಥಿಕ ಅಂತರ ಹೆಚ್ತಿದೆ, ನಿರುದ್ಯೋಗದ ಪ್ರಮಾಣ ಹೆಚ್ಚಿದೆ. ಇಂಥದ್ದರಲ್ಲಿ ಇಂಡಿಯಾದ ಉದ್ಧಾರ ಹೇಗಾಗಕೆ ಸಾಧ್ಯ?

ಬಡತನ ನಿವಾರಣೆ ಒಮ್ಮಿಂದೊಮ್ಮಿಗೆ ಆ ಪ್ರಮಾಣದಲ್ಲಿ ಆಗಲ್ಲ. ಆದರೆ ಯುವಕರಲ್ಲಿ ಸಾಹಸ ಪ್ರವೃತ್ತಿ ಹೆಚ್ಚಿದೆ. ದುಡಿಯುವ ಮನೋಭಾವ ಹೆಚ್ಚಿದೆ. ನನಗಂತೂ ಇವತ್ತಿನ ಯಂಗ್ ಸ್ಟರ್ಸ್ ಮೋರ್ ಅಡ್ವಂಚರಿಸ್ಟ್ಸ್ ದ್ಯಾನ ಎನಿ ಅದರ್ ಟೈಮ್. ನೋಡ್ರಿ ಬೆಂಗಳೂರಾಗ ಎಲ್ಲೆಲ್ಲಿಂದ್ಲೋ, ಏನೇನೋ ಓದಿದೋರು ಏನೇನೋ ದುಡೀತಾರೆ, ಗಳಿಸ್ತಾರೆ. ಹಳ್ಳಿ ಬಿಟ್ಟು ಬಂದು ದುಡೀತಿದ್ದಾರೆ. ಒಂದೊಂದು ದೊಡ್ಡ ಉದ್ಯಮದಲ್ಲಿ ಸಾವಿರಾರು ಯುವಕರು ಕೆಲಸ ಮಾಡ್ತಿದ್ದಾರೆ.

ಆದ್ರೆ ಇವತ್ತಿನ ಹಳ್ಳಿಗಳ ಸ್ಥಿತಿ ಏನಾಗಿದೆ?

ಅದಕ್ಕಾ ಬೆಂಗಳೂರಿಗೆ ಹೋಗ್ತಾರ…. ಹೋಗ್ಲೀ. ನೋಡ್ರೀ ಟೆಕ್ನಿಕಲ್ ಎಜುಕೇಷನ್ ತಗೊಂಡವ್ರು ನಿರುದ್ಯೋಗಿಗಳಾಗಗೋದು ಕಡಿಮೆ. ಎಲ್ಲಾದ್ರೂ ಉದ್ಯೋಗ ಕಂಡುಕೊಳ್ತಾರೆ. ಅಂತಹ ಶಿಕ್ಷಣ ಯುವಕರಿಗೆ ಸಿಕ್ರೆ ಉದ್ಯೋಗ ಸಿಗ್ತದೆ. ನಾನು ಎಕನಾಮಿಸ್ಟ್ ಅಲ್ಲ. ಅದ್ರೂ ಜಾಗತೀಕರಣದಿಂದ, ತಾಂತ್ರಿಕ ಶಿಕ್ಷಣದಿಂದ ಉದ್ಯೋಗಗಳು ಸಿಗ್ತವೆ, ಹಳ್ಳಿಗಳೂ ಅಭಿವೃದ್ಧಿಯಾಗ್ತಿವೆ ಅಂತಾ ಅನ್ನಿಸ್ತದೆ ನನಗೆ.

ವಿದೇಶೀ ಉತ್ಪನ್ನದ ಎದಿರು ಸ್ಪರ್ಧಿಸಲಾರದ ದೇಶೀ ಉತ್ಪನ್ನಗಳ ಬೆಲೆ ಕುಸಿತದ ಪರಿಣಾಮವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹದ್ದು ಏನನ್ನು ಸೂಚಿಸ್ತದೆ?

ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಮೊದಲಿನಿಂದಲೂ ಇದೆ. ಈಗ ಸ್ವಲ್ಪ ಜಾಸ್ತಿ ಆಗಿರ‍್ಬಹ್ದು ಅಂತಾ ನನಗನ್ನಿಸ್ತದೆ. ಅದೊಂದು ದೊಡ್ಡ ಪ್ರಾಬ್ಲಂ ಅಂತಾ ನನಗನ್ನಿಸೋದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಬರೀ ಆರ್ಥಿಕ ಕಾರಣ ಅಂತಾ ನಾನು ಹೇಳೋದಿಲ್ಲ. ಆತ್ಮಹತ್ಯೆ ಮಾಡಿಕೊಂಡೋನು ಹೋಗ್ತಾನ. ಲೈಫ್ ಫೇಸ್ ಮಾಡಿಕೊಳ್ಳದ ಹೇಡಿಗಳು ಆತ್ಮಹತ್ಯೆ ಮಾಡಿಕೊಳ್ತಾರೆ. ಅವರ ಬಗ್ಗೆ ಚಿಂತನೆ ಮಾಡೋದಕ್ಕಿಂತ ಯುವಕರ ಬಗ್ಗೆ ಯೋಚಿಸ್ಬೇಕು. ಪ್ರಗತಿ ಆಗ್ತಾ ಇದೆ. ನಿಧಾನಕ್ಕಾ ಆಗ್ತಾ ಇದೆ. ಹಳ್ಳಿಗಳನ್ನು ನೋಡ್ರೀ. ಈಗ ಹತ್ತು – ಹದಿನೈದು ವರ್ಷಗಳ ಹಿಂದೆ ಇದ್ದಂಗ ಅದಾವೇನು? ಸುಧಾರಣೆ ಆಗಿಲ್ಲೇನು? ಊರಲ್ಲಿ ಲೈಟ್ ಗಳು, ರೋಡ್ ಗಳು ಎಷ್ಟು ಚೆನ್ನಾಗಿ ಆಗ್ಯಾವು.

ಆದ್ರೆ ಲೋಹಿಯಾ ಅವರು ಹೇಳ್ತಾ ಇದ್ದದ್ದು ಸಣ್ಣ ಕೈಗಾರಿಕೆ ಮತ್ತು ಗುಡಿ ಕೈಗಾರಿಕೆಗಳ ಬಗ್ಗೆ. ಬಗೆಯ ಬೃಹತ್ ಯಂತ್ರಗಳು ಮತ್ತು ಉದ್ಯಮವನ್ನು ವಿರೋಧಿಸಿರ್ಲಿಲ್ವಾ. ಮೂಲತಃ ಲೋಹಿಯಾ ಕೂಡಕೃಷಿಕ ಭಾರತ ಬಗ್ಗೆ ಚಿಂತಿಸಿದವರು?

ಈಗ ಆ ವಿಚಾರ ಎತ್ಕೊಂಡು ರಾಜಕೀಯ ಕಾರ್ಯಕ್ರಮದಲ್ಲಿ ಸೇರಿಸಿ, ಸರಕಾರದಲ್ಲಿ ಪರಿಣಾಮಕಾರಿಯಾಗಿ ಕಾರ್ಯಗತ ಮಾಡೋ ಲೀಡರ್ ಶಿಪ್ ಹೋಯ್ತು. ಅದು ಹೋಗೇ ಬಿಟ್ಟಿದೆ. ಲೋಹಿಯಾರವರು ಹೇಳಿದ್ದು. ಅದೆಲ್ಲಾ…

ಹಾಗನ್ನೋದಾದ್ರೇ ಲೋಹಿಯಾರ ಚಿಂತನೆಗಳು ಈಗ ಅಪ್ರಸ್ತುತವಾ?

ಅಪ್ರಸ್ತುತ ಅಂದ್ರೆ ಅದರಿಂದ ಈಗ ಇಮ್ಮಿಡಿಯಟ್ ಬೆನಿಫಿಟ್ ಸಿಗಲ್ಲ. ಈಗ ಅದನ್ನ ಚಿಂತಿಸಿ, ಕೆಲಸ ಮಾಡಕ್ಕ ಹೋದ್ರೆ ಹುಚ್ಚರು ಅಂತಾರ. ಅದನ್ನೆಲ್ಲ ತರಾಕ ಲೀಡರ್ ಶಿಪ್ ಬೇಕು. ಸ್ಯಾಕ್ರಿಫೈಸ್ ಮಾಡ್ಬೇಕು. ಇವತ್ತಿನ ಪರಿಸ್ಥಿತಿ ನೋಡಿದ್ರೆ ಅದೆಲ್ಲ ಅರಣ್ಯರೋದನ ಅನ್ನಿಸಿದೆ.

ಜಾರ್ಜನಂತವರು ಮಾಡ್ಬಹ್ದು. ಅವನಿಗೂ ವಯಸ್ಸಾಯ್ತು ಈಗ ಏನು ಮಾಡ್ತಾನ. ಹಿಂಗಾಗಿ ಈಗ ಅಂತರರಾಷ್ಟ್ರೀಯ ಮಟ್ಟದಾಗ ಏನು ಚಾಲ್ತೀ ನಡೀತದೆ ಅದಕ್ಕ ಹೊಂದ್ಕೊಂಡೋದ್ರೆ ನಮ್ಮ ಆರ್ಥಿಕ ಪರಿಸ್ಥಿತಿ ಸಾಮಾಜಿಕ ಪರಿಸ್ಥಿತಿ ಸುಧಾರಿಸುತ್ತದೆ.

ಅಂತರರಾಷ್ಟ್ರೀಯ ಪರಿಸ್ಥಿತಿಗೆ ಹೊಂದಿಕೊಂಡ್ರೆ ಅಭಿವೃದ್ಧಿನಾ?

ಅಭಿವೃದ್ಧಿ ಆಗ್ಲೀಬಿಡ್ಲಿ ಅನಿವಾರ್ಯ ಅಂತನ್ನಿಸ್ತದೆ. ಬೇರೆ ದಾರಿ ಹಿಡ್ಕಂಡು ಹೋದ್ರೆ ಗುಡ್ಡಕ ಕಲ್ಲು ಹೊರಾ ಕೆಲಸ. ಪ್ರ್ಯಾಕ್ಟಿಕಲ್ ಆಗಿ ಯೋಚ್ನೆ ಮಾಡ್ಬೇಕು. ಇದಕ್ಕೆ ತದ್ವಿರುದ್ಧವಾಗಿ ಒಂದು ಐಡಿಯಾಲಜಿ ಬೆಳೆಸಬೇಕು ಅಂದ್ರೆ ಎಷ್ಟು ಸಂಘಟನೆ ಬೇಕು, ಎಷ್ಟು ಪ್ರಚಾರಬೇಕು, ಎಷ್ಟು ಮ್ಯಾನ್ ಪವರ್ ಬೇಕು? ಇವತ್ತು ಒಂದು ಐಡಿಯಾಲಜಿ ಇಟ್ಕಂಡು ಒಂದು ಮೂವ್ ಮೆಂಟ್ ಗೆ ಹೋರಾಟ ಮಾಡ್ಬೇಕು ಅನ್ನೋ ಜನಾ ಎಲ್ಲಿ ಸಿಗ್ತಾರ. ಹುಚ್ಚ ಅಂತಾರ ನಮಗೆ… (ನಗು).

ಐಡಿಯಾಲಜಿ ಇಟ್ಕಂಡು ಇವತ್ತು ಕಮ್ಯುನಿಸ್ಟ್ ಪಕ್ಷಗಳು ಇಂಡಿಯಾದಲ್ಲಿ ಇನ್ನೂ ಹೋರಾಟ ಮಾಡ್ತಿವೆ. ನಕ್ಸ್ ಲೈಟರು ಜಾಗತೀಕರಣದ ವಿರುದ್ಧ ತೀವ್ರವಾಗಿ ಸಂಘರ್ಷಕ್ಕಿಳಿದಿದ್ದಾರೆ?

ಅವರು ಹಿಂಸೆಯನ್ನು ನಂಬ್ತಾರ. ಗಾಂಧೀ ಇದ್ದ ಈ ನಾಡಿನಲ್ಲಿ ಹಿಂಸೆಯಿಂದ ಗುರಿ ಸಾಧಿಸೋ ಕೆಲಸ ಆಗಾದಿಲ್ಲ. ನಕ್ಸ್ ಲೈಟ್ರು ಡಿಸಾರ್ಟೆಡ್ ಯಂಗ್ ಸ್ಟರ್ಸ್. ಅವ್ರು ನಾಲ್ಕು ಜನರನ್ನು ಕೊಲ್ಲಬಹುದು. ಒಂದಿಷ್ಟು ಸಂಘಟನೆ ಮಾಡಬಹುದು. ಆದರೆ ಭಾರತದಲ್ಲಿ ನಕ್ಸಲಿಸಂ ಸಮಾನತೆ ಸಮಾಜ ತರ್ತದೆ ಅಂತಾ ಹೇಳೋದಕ್ಕೆ ಸಾಧ್ಯವೇ ಇಲ್ಲ. ಅಲ್ಲಿ ಡೆಸ್ಟರೇಟ್ ಆಗಿ ಹೋಗಿರೋರೆ ಜಾಸ್ತಿ. ಅಲ್ಲಿ ಆ ಹೆಣ್ಮಕ್ಳೆಲ್ಲ ಹೋಗಿದ್ದಾರೆ. ಅವರೆಲ್ಲ ಡೆಸ್ಟರೇಟ್ ಆಗೇ ಹೋಗಿರಾದು. ನನಗೆ ಅವರ ಬಗ್ಗೆ ಜಾಸ್ತಿ ಏನೂ ಗೊತ್ತಿಲ್ಲ. ಆದ್ರೂ ಒಂದೊಂದ್ಸಲ ಅವರನ್ನ ವೆಲ್ ಕಮ್ ಮಾಡಾನ ಅನ್ನಿಸ್ತೈತಿ. ಅದೇ ಸರಿ ಏನೋ ಈ ದೇಶಕ್ಕೆ ಅಂತಾ. ಆದ್ರೆ ಆ ಸಂಘಟನೆ ಬಲ ಆಗಾದು ಕಷ್ಟ. ಧರ್ಮ, ಜಾತಿ ಇರೋ ದೇಶದಾಗ ಅದು ಸರ್ವವ್ಯಾಪಿ ಆಗಿ ಬೆಳಿಯಾದು ಕಷ್ಟ. ಆದ್ರೆ ನಾವು ಬುದ್ಧ, ಗಾಂಧಿಯಿಂದ ಪ್ರಭಾವಿತ ರಾಗಿರೋರು. ಮಾನಸಿಕವಾಗಿ ಅವರನ್ನು ಒಪ್ಪೋಕೆ ಆಗಾಲ್ಲ. ಅಹಿಂದ ಮೂವ್ ಮೆಂಟೂ ನನಗೇನು ಅಷ್ಟು ಅಟ್ರಾಕ್ಟಿವ್ ಆಗಿ ಕಾಣಿಸ್ಲಿಲ್ಲ. ನಾನೂ ಅದರಲ್ಲಿ ಭಾಗವಹಿಸೇ ಹೇಳ್ತಿದೀನಿ. ಅದನ್ನು ರಾಜಕೀಯ ಪಕ್ಷದೊಳಗಿದ್ದೇ ಮಾಡಕ್ಕೆ ಆಗಾದಿಲ್ಲಾ. ಅದೊಂದು ಹೊಸ ಕ್ಲಾಸ್ ಸ್ಟ್ರಗಲ್ ಮಾಡೋವಂಗಾದ್ರೆ ಅದಕ್ಕೆ ಡೆಡಿಕೇಟೆಡ್ ಆಗಿ ಈ ತುಳಿತಕ್ಕೊಳಗಾದ ಜನ, ಹಿಂದುಳಿದವರನ್ನ ಸಂಘಟಿಸಿ, ಅವರ ಜೊತೆಗಿದ್ದು ಸಾಯಾಕ ತಯಾರಿರವ್ರು ಮಾಡ್ಬೇಕು. ಅದನ್ನು ಜಸ್ಟ್ ಪೆರಿಫೆರಿಯಲ್ ಆಗಿ ಉಪಯೋಗಿಸಿ ರಾಜಕೀಯವಾಗಿ ಅಲ್ಲಿ ಇಲ್ಲಿ ಬೆನಿಫಿಟ್ ತಗೊಂಡು, ಅದು ಬದಕ್ತೋ ಇಲ್ಲೋ ಅಂತಾ ನೋಡ್ದಂಗಿರೋ ಮೂವ್ ಮೆಂಟ್ ಯಾತಕ್ಕ? ಹಂಗಾ ಆಗಿದೆ ಈಗ.

ಅಂದ್ರೆ ಸಿದ್ಧರಾಮಯ್ಯರಂಥವರು ಮಾಡೋವಂತಹ ಮೂವ್ ಮೆಂಟ್ ಅಲ್ಲ ಅದು, ಹೋರಾಟಗಾರರು ಮಾಡ್ಬೇಕು?

ಹೌದು ಈಗ ಅದನ್ನ ಅವರಕೈಲಿ ಮಾಡಾಕಾಗಾದಿಲ್ಲ. ಮಾತಾಡಾದು ಬಿಡಾದಿಲ್ಲ. (ನಗು) ಅಲ್ಲ, ನಾನು ಕ್ಲೋಸ್ ಟು ಹಿಮ್. ಅದಕ್ಕ ಹೇಳಾಕ್ಹತ್ತೀನಿ. ಇದನ್ನು ಮಾಡೋವಷ್ಟು ಶಕ್ತಿ, ಐಡಿಯಾಲಜಿಕಲ್ ಕಮಿಟ್ ಮೆಂಟ್ ಅದೆಲ್ಲ ಇಲ್ಲ ಇವ್ರಿಗೆ. ಕಾಂಗ್ರೆಸ್ ಗೆ ಹೋಗ್ಬೇಕು, ಅಧಿಕಾರಾನೂ ಬೇಕು, ಅಹಿಂದ ಅಂತ್ಹೇಳಿ ಹೋರಾಟಾನೂ ಮಾಡ್ಬೇಕು ಅಂದ್ರೆ ಭಾಳಾ ಕಷ್ಟ. ಇಂಥಾ ಮೂಮೆಂಟ್ ರಾಜಕೀಯ ಪಕ್ಷದಾಗ ಇದ್ಕಂಡು ಮಾಡಾಕ ಆಗಲ್ಲ. ನಮ್ಮಂಥವ್ರು ಸೋಷಲಿಸ್ಟ್ ಹಿನ್ನೆಲೆಯಿಂದ ಬಂದವರು ಹೋಗ್ಬಹ್ದು. ಆದ್ರೆ ಬೇರೆಯವರಿಗೆ ಅದು ಹಿಡಿಸಾದಿಲ್ಲ. ಈವನ್ ಬ್ಯಾಕ್ ವರ್ಡ್‌ನವರೂ ಅವರಾಗ್ಲೆ ಅಪರ್ಚುನಿಟೀಸ್ ಹುಡುಕ್ಕೆಂಡು ಬೇರೆ ಕ್ಯಾಸ್ಟ್ ನವರಿಗೆ ಸರಂಡರ್ ಆಗ್ತಾರ. ಸುಮ್ನೆ ನಾಮಕಾವಾಸ್ತೆ ಜಯಕಾರ ಹಾಕಾಕ ಹೋಗ್ತಾರ. ಮೂವ್ ಮೆಂಟ್ ನ್ಯಾಗ ಬ್ಯಾಕ್ ವರ್ಡ್ ಕಮ್ಯುನಿಟಿ ಒಳಗಾ ಸ್ಯಾಕ್ರಿಫೈಸ್ ಮಾಡಿ ಹೋರಾಟ ಮಾಡೋವಂಥ ಜನಾ ಬರ್ಲಿಲ್ಲ. ಕೆಲವರಾದ್ರೂ ತಮ್ಮ ಜೀವನವನ್ನ ಅರ್ಪಣೆ ಮಾಡಿ ಮಾಡಬೇಕದನ್ನ. ಲೋಹಿಯಾ ಹೇಳ್ತಿದ್ರು ನಮಗೆ, ನೀವು ಗೊಬ್ಬರ ಆಗಬೇಕು, ಅವ್ರು (ದಲಿತರು) ಬೀಜ ಆಗ್ಬೇಕು ಅಂತ. ಮೊದ್ಲು ‘ನೀವು ಸಾರಿನಲ್ಲಿ ಉಪ್ಪು ಆಗಿ ಇರ್ಬೇಕು’ ಅಂತಾ ಹೇಳಿದ್ರು. ಆಮ್ಯಾಲೆ ತಿದ್ದಿಕೊಂಡ್ರು. ಸಾರಿನಲ್ಲಿ ಉಪ್ಪು ಆಗಿ ಇರ್ಬೇಕು. ಅಂತಾ ಹೇಳಿದ್ರೆ, ಉಪ್ಪು ಇಲ್ಲಿದ್ರೆ ಸಾರಿಗೆ ರುಚಿನೇ ಇರಾದಿಲ್ಲ ಎನ್ನೋ ಅಹಮಿನ ಅರ್ಥ ಬರ್ತದೆ, ಅದಕ್ಕೆ ಆ ಹೋಲಿಕೆ ಸರಿಯಲ್ಲ ಅಂತ ಲೋಹಿಯಾ ಅವರು ‘ಮೇಲ್ಜಾತಿಯವ್ರು ಗೊಬ್ಬರ ಆಗಿರಬೇಕು, ಕೆಳ ಜಾತಿಯವರು ಬೀಜಾಗಿರ್ಬೇಕು’ ಅಂತಾ ಅಂದ್ರು. ಇವೆಲ್ಲಾ ಈಗ ಯಾವನ್ ಮಾಡ್ತಾನ? ಈಗ ಇವರೆಲ್ಲ ಬ್ಯಾಕ್ ವರ್ಡ್ಸ್ ಸಪೋರ್ಟ್ ತಗೊಳ್ಳೋಕ್ಕೋಸ್ಕರ ಸಾಮಾಜಿ ನ್ಯಾಯ ಸಮಾಜವಾದ ಅಂತಾ ಮಾತಾಡ್ತಾರ ಇವ್ರು. ಯಾರಂಥ ಪರ್ಸನಾಲಿಟಿ ಅದಾರ ಹೇಳ್ರಿ. ಈಗ ಇಡೀ ಇಂಡಿಯಾದಲ್ಲೇ. ನಮ್ಮ ಪಕ್ಷದ ಮ್ಯಾನಿಫೆಸ್ಟೋ ಕಾರ್ಯಕ್ರಮದಲ್ಲಿನೇ ಸಾಮಾಜಿಕ ನ್ಯಾಯದ ಅಂಶಗಳಿದ್ದವು. ಪ್ರತ್ಯೇಕವಾಗಿ ಇನ್ನೊಂದು ಚಳವಳಿ ಮಾಡೋ ಅಗತ್ಯ ಇರ್ಲಿಲ್ಲ. ಸೋಷಲಿಸ್ಟ್ ಪಾರ್ಟಿ ಇಟ್ ಸೆಲ್ಫ್ ಈಸ್ ಎ ಛಾಂಪಿಯನ್ ಆಫ್ ದಲಿತ್ಸ್ ಆಂಡ್ ಬ್ಯಾಕ್ ವರ್ಡ್ಸ್.

ಹಾಗೆ ಹೇಳಿದ ಲೋಹಿಯಾ ಅವರು ಕಟ್ಟಿದ ಪಕ್ಷವನ್ನು ಗಮನಿಸೋದಾದ್ರೆ ಕರ್ನಾಟಕದಲ್ಲಿ ಕೆಳಜಾತಿಗಳು ಬಹುತೇಕ ಸೋಷಲಿಸ್ಟ್ ಪಾರ್ಟಿಯಿಂದ ದೂರ ಉಳಿದು, ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡವು. ಸೋಷಲಿಸ್ಟ್ ಪಕ್ಷ, ಮೇಲ್ಜಾತಿ ಹಿನ್ನೆಲೆಯ ವ್ಯಕ್ತಿಗಳ ಕೈಗೆ ಹೋಯ್ತು. ನೀವು, ಪಟೇಲ್ರು, ಹೀಗೆ ಬಹಳಷ್ಟು ಉದಾಹರಣೆಗಳು. ಕೆಳಜಾತಿಯ ಪ್ರಾತಿನಿಧ್ಯ ಸೋಷಲಿಸ್ಟ್ ಚಳವಳಿಯಲ್ಲಿ ಯಾಕೆ ತೀರಾ ಕಡಿಮೆಯಾಯ್ತು?

ಯಾಕಂದ್ರೆ, ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಭಾಳಾ ಕಷ್ಟದಲ್ಲಿರೋರು. ಅವರಿಗೆ ಎಜುಕೇಷನ್ ಇರ್ಲಿಲ್ಲ. ಅವರೇ ಮಾಡ್ಬೇಕಂತಾ ಏನಿಲ್ಲ. ಅವರ ಪರವಾಗಿ ಉಳಿದವ್ರು ಮಾಡಬಹುದು. ಪ್ರಯತ್ನಗಳು ನಡೀತಿದ್ವು. ಅವರಿಗೇ ಅಧ್ಯಕ್ಷರನ್ನ ಮಾಡ್ಬೇಕು ಅಂತ ಹಾಗೆಲ್ಲಾ ಇತ್ತು. ನಲ್ಲಶಿವನ್ ಅಂತಾ ಮದ್ರಾಸಿನಲ್ಲಿ ಲೀಡರ್ ಶಿಪ್ ಕೊಟ್ಟಿತ್ತು. ಕರ್ಪೂರಿ ಠಾಕೂರ್ ಇದ್ರು….

ಬಿಹಾರ್, ಉತ್ತರ ಪ್ರದೇಶ ಅದೆಲ್ಲ ಸರಿ. ಆದ್ರೆ ಕರ್ನಾಟಕದಲ್ಲಿ ಬಹುತೇಕ ಸಮಾಜವಾದಿ ಪಕ್ಷಲಿಂಗಾಯತರುಬ್ರಾಹ್ಮಣ ಮೇಲುಗೈಯಲ್ಲಿತ್ತು. ಆದ್ರೆ ಹಿಂದುಳಿದವರು, ದಲಿತರ ಕೈಗೆ ಯಾಕೆ ಹೋಗ್ಲಿಲ್ಲ? ಏನಂತ ಅಡ್ಡಿಯಿತ್ತು?

ಅಡ್ಡಿ ಏನಂದ್ರೆ, ಮೇಲ್ಜಾತಿಗಳ ಲೀಡರ್ ಶಿಪ್ ಇರೋವಲ್ಲಿ ಬೇರೆಯವ್ರಿಗೆ ಅಷ್ಟು ಸುಲಭವಾಗಿ ಬಿಟ್ಟು ಕೊಡಾದಿಲ್ಲ…. (ನಗು) ಈ ಮಠಮಾನ್ಯಗಳು ಇರೋ ವ್ಯವಸ್ಥೆಯಲ್ಲಿ ಸರ್ವೈವಲ್ ಗೋಸ್ಕರನಾದ್ರೂ ಬ್ಯಾಲೆನ್ಸ್ ಮಾಡಬೇಕು. ಟೈಂ ಬಂದಾಗ ಮಠಾನೂ ಆಗಬಹ್ದು, ಭಾಷಣಕ್ಕೆ ಹಿಂದುಳಿದವರೂ ಆಗಬಹ್ದು.

ಹಂಗಾಗಿ ಕರ್ನಾಟಕದಲ್ಲಿ ಆಳದಲ್ಲಿ ಬೇರೂರಿದ ಲಿಂಗಾಯತ ಅಸ್ತಿತ್ವ ಪ್ರಜ್ಞೆ, ಸಮಾಜವಾದಿ ಸಂಘಟನೆಯ ಮುಂಚೂಣಿಯಲ್ಲಿ ನಿಲ್ತಾ?

ಅದು ಅಪಾಯಕಾರಿಯಾಗಿ ನಿಲ್ತು ಅಷ್ಟೇನೆ. ಆದ್ರೆ ಅದು ಅಪಾಯಕಾರಿ ಅಂತಾ ಯಾರಿಗೂ ಗೊತ್ತಾಗಾದಿಲ್ಲ. ಈ ಕಾವಿಪೋಷಾಕಿನಲ್ಲಿ ಬಂದವರು ದೇವ್ರೇ ಆವ್ರು ಅಂತಾ ಪೂಜೆ ಮಾಡೋ ಸಮಾಜ ನಮ್ಮದು. ಮಠಗಳು ರಾಜಕೀಯದಲ್ಲಿ ಪ್ರವೇಶ ಮಾಡ್ತದಾವು. ಕಂಟ್ರೋಲ್ ಮಾಡ್ತದಾವು.

ಅಂದ್ರೆ…. ಕರ್ನಾಟಕದಲ್ಲಿ ಸಮಾಜವಾದಿ ಮೂಮೆಂಟ್ ನಲ್ಲಿ ದಲಿತರ ಭಾಗಿದಾರಿಕೆ ಕಡಿಮೆ ಯಾಗೋಕೆ, ಇಲ್ಲಿನ ಮಠಗಳ ಪ್ರಭಾವವೇ ಕಾರಣ ಅನ್ನಬಹುದಾ?

ಅದೂ ಒಂದು ಕಾರಣ ಇರಬಹ್ದು. ಅಲ್ಲಿನೂ ಪ್ರಗತಿ ಪರವಾಗಿ ಚಿಂತನೆ ಮಾಡೋ ಸ್ವಾಮಿಗಳು ಅದಾರ. ಸ್ವಲ್ಪ ಮಟ್ಟಿಗೆ ಮುರುಘಾರಾಜೇಂದ್ರೆ ಸ್ವಾಮಿಗಳು ಎಲ್ಲಾ ಜಾತಿಯವರ್ನ ಪ್ರೀತಿಸ್ತಾರ. ಆದ್ರೆ ಅವರಿನ್ನೂ ನನಗೆ ಪೂರ್ತಿಯಾಗಿ ಅರ್ಥಾ ಆಗಿಲ್ಲ. ಅದೇನು ‘ಸ್ಟ್ರಾಟಿಜಿಕ್ಕೋ’ ಅಥವಾ ಕನ್ ವಿಕ್ಷನ್ ಮಾಡ್ತಾರೋ, ಆ ಸಮಾಜದಲ್ಲಿ ಅಷ್ಟೊಂದು ಪ್ರಗತಿಪರವಾಗಿ ಚಿಂತನೆ ಮಾಡೋರು ಕಮ್ಮಿ. ಸ್ವಾಮಿಗಳೊಬ್ರೇ ಹಂಗಿರೋದು. ಅವರಿಗೂ ಇನ್ನೂ ಪಕ್ವವಾದ ಚಿಂತನೆ, ಐಡಿಯಾಲಜಿ ಇಲ್ಲ ಅಂತಾ ಅನ್ನಿಸ್ತೈತಿ. ಏನೋ ಎಲ್ಲರನ್ನೂ ಪಕ್ಕದಾಗ ಇಟ್ಕೋಬೇಕು, ಬೆಳೆಸ್ಬೇಕು ಅಂತಾ ಹೊಂಟಾರ. ಆದ್ರೂ ಟು ದಟ್ ಎಕ್ಸ್ ಟೆಂಟ್ ಹಿ ಈಸ್ ಗ್ರೇಟ್. ಬೇರೆ ಯಾವ ಸ್ವಾಮಿಗಳು ಮಾಡ್ಯಾರ ಹೇಳ್ರೀ ಅವ್ರಥರಾ. ಭಾಷಣ ಮಾಡ್ತಾರ ಅಷ್ಟಾ.

ಈ ಮಠಗಳನ್ನ ಇಲ್ಲದಂಗ ಮಾಡಾದಂತೂ ಆಗಾದಿಲ್ಲ. ಅದರಲ್ಲಿ ಈ ಮುರುಘಾ ರಾಜೇಂದ್ರ ಸ್ವಾಮಿಗಳಂಥೋರು ಎಲ್ಲಾ ಕಡೆಗೂ ಬಂದ್ರೆ ಒಂದು ಸ್ವಲ್ಪ ಇಂಪ್ರೂ ಆಗಬಹ್ದು. ಈ ಮಠಗಳು ಪ್ರಬಲ ಆಗ್ತಾ ಆಗ್ತಾ ಹೋದ್ರೆ ನಿಮ್ಮ ರಾಜಕೀಯ ಪಕ್ಷಗಳದ್ದು ಏನೂ ನಡಿಯಾದಿಲ್ಲ. ಅಲ್ಟಿಮೇಟ್ ವರ್ಡ್ ಈಸ್ ಮಠ. ಅವರ ಸಪೋರ್ಟ್ ಇದ್ರೆ ಗೆಲ್ತೀವಿ, ಇಲ್ಲಂದ್ರೆ ಗೆಲ್ಲಾದಿಲ್ಲ ಅನ್ನೋ ವಾತಾವರಣ ನಿರ್ಮಾಣ ಮಾಡ್ಯಾರ. ನಾವು ಎಂ. ಎಲ್. ಎಗೆ ನಿಂತಾಗ ಹಿಂದಿನ ಸ್ವಾಮಿಗಳು ಇದ್ರು. ‘ನಮಗೆ ಸಪೋರ್ಟು ಮಾಡ್ಬೇಕು ಬುದ್ದೀ, ನಾನು ನಿಂತೀನಿ ಸೊಷಲಿಸ್ಟ್ ಪಾರ್ಟಿಯಿಂದ’ ಅಂದೆ. ನಾವ್ ನಿಮಗೆ ಮಾಡಾಕಾಗಾದಿಲ್ಲಪ್ಪ ಅಂದ್ರು. ನನ್ನ ವಿರುದ್ಧ ನಿಂತಿದ್ದ ಗಂಗಾಧರಯ್ಯ ಅನ್ನೋನು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಸ್ವಾಮಿಗಳ ಕಾಲಹತ್ರಾ ನಿಲ್ಲೋನು. ಅವ್ನಿಗೆ ಸಪೋರ್ಟು ಮಾಡಿದ್ರು. ನನಿಗೆ ಮಾಡ್ಲಿಲ್ಲ.

ಯಾರು?

ನಮ್ಮ ಸ್ವಾಮಿಗಳು, ಸಿರಿಗೆರೆ ಸ್ವಾಮಿಗಳು. ಹಿಂದಿನವ್ರು. ಈಗಿರೋ ಸ್ವಾಮಿಗಳು ಬುದ್ಧಿವಂತಿಕೆಯಿಂದ ಮಾಡ್ತಿದ್ರು. ಹಿಂದಿನವರು ಓಪನ್ ಆಗಿ ಹೇಳ್ತಿದ್ರು. ಗಂಗಾಧರಯ್ಯಂದು ಡಿಪಾಸಿಟ್ ಹೋಯ್ತು. ಕಾಂಗ್ರೆಸ್ ಕ್ಯಾಂಡಿಡೇಟ್ ಗೆದ್ದ.